– ಕೃಷ್ಣದಾಸ
ಪ್ರತಿಯೊಬ್ಬ ಜೀವಿಯೂ ಪರಮ ಪುರುಷನೊಡನೆ ಆಪ್ತ ಸಂಬಂಧವನ್ನು ಹೊಂದಿದ್ದಾನೆ. ಆ ಸಂಬಂಧವೇ ಜೀವಿಯ ಮೂಲ ಸ್ವರೂಪ. ಈಗ ಅದನ್ನು ಮರೆತು ದೇಹ, ಕುಟು೦ಬ, ಜಾತಿ ಮೊದಲಾದ ಉಪಾಧಿಗಳೊಡನೆ ಗುರುತಿಸಿಕೊಂಡು ನರಳುತ್ತಿದ್ದಾನೆ. ಕನ್ನಡಿಯ ಮೇಲೆ ಕಲ್ಮಶವಿದ್ದಾಗ ಹೇಗೆ ಪ್ರತಿಬಿಂಬವು ಕಾಣುವುದಿಲ್ಲವೋ ಹಾಗೆಯೇ ಈ ಉಪಾಧಿಗಳು ನಮ್ಮ ಮೂಲ ಸ್ವರೂಪವನ್ನು ಮರೆಯುವಂತೆ ಮಾಡುತ್ತವೆ. ಕಲ್ಮಶವನ್ನು ಅನಾವರಣ ಮಾಡಿ ಐಹಿಕ ವರ್ತುಲದಿಂದ ಮುಕ್ತಗೊಳಿಸಿ ನಮ್ಮ ಮೂಲ ಸ್ವರೂಪ – ಧರ್ಮದಲ್ಲಿ ನೆಲೆಗೊಳಿಸುವುದೇ ವೇದ ಪುರಾಣಗಳ ಉದ್ದೇಶ. ಆ ಮೂಲ ಧರ್ಮದ ಪುನರುಜ್ಜಿವನವನ್ನು ಸಾಧಿಸಲು ಪ್ರತಿಯೊ೦ದು ಯುಗಕ್ಕೆ ಅನುಗುಣವಾದ ಯುಗಧರ್ಮವನ್ನು ನೀಡಲಾಗಿದೆ. ಕಲಿಯುಗಕ್ಕೆ ಹರಿನಾಮ ಸಂಕೀರ್ತನೆಯೇ ಯುಗಧರ್ಮ.

ಹರಿನಾಮ ಕೀರ್ತನೆಯೇ ಮಾರ್ಗ
ಕೃತೇ ಯದ್ಧ್ಯಾಯತೋ ವಿಷ್ಣುಮ್ ತ್ರೇತಾಯಂ ಯಜತೋ ಮಖೈಃ |
ದ್ವಾಪರೇ ಪರಿಚರ್ಯಾಯಂ ಕಲೌ ತದ್ಧರಿ ಕೀರ್ತನಾತ್ ||
”ಸತ್ಯಯುಗದಲ್ಲಿ ವಿಷ್ಣುಧ್ಯಾನವು ಯುಗಧರ್ಮವಾದರೆ, ತ್ರೇತಾಯುಗದಲ್ಲಿ ಯಜ್ಞಾಚರಣೆ, ದ್ವಾಪರದಲ್ಲಿ ದೇವತಾ ವಿಗ್ರಹಾರಾಧನೆ ಮತ್ತು ಕಲಿಯುಗದಲ್ಲಿ ಹರಿನಾಮ ಕೀರ್ತನೆಯೇ ಯುಗಧರ್ಮ” (ಭಾಗವತ) ಧ್ಯಾನ ಯೋಗಕ್ಕಾದರೂ ಒಬ್ಬನು ಕಾಡಿಗೆ ಹೋಗಿ ಅಲ್ಲಿ ಶುಚಿಯಾದ ಸ್ಥಳದಲ್ಲಿದ್ದು ಕ್ಲಿಷ್ಟ ಆಸನಗಳನ್ನು ಸಾವಿರಾರು ವರ್ಷಗಳ ಕಾಲ ಅಭ್ಯಾಸ ಮಾಡಬೇಕಾಗುತ್ತದೆ. ಇದು ಪ್ರಸ್ತುತ ಯುಗದಲ್ಲಿ ಅಸಾಧ್ಯವೇ ಸರಿ. ಯಜ್ಞಾಚರಣೆಗಾದರೆ ಶುದ್ಧ ಪರಿಕರಗಳು ಮತ್ತು ಸ್ಪಷ್ಟ ಮಂತ್ರೋಚ್ಛಾರ ಮಾಡುವ ಅರ್ಹ ಬ್ರಾಹ್ಮಣರ ಅಗತ್ಯವಿದೆ. ಅವುಗಳೆರಡರ ಅಭಾವದಿ೦ದ ಕಲಿಯುಗದಲ್ಲಿ ಈ ಮಾರ್ಗವೂ ಸಹ ಕಾರ್ಯ ಸಾಧುವಲ್ಲ.
ವಿಗ್ರಹಾರಾಧನೆಗೆ ಕಟ್ಟುನಿಟ್ಟಾದ ಅಭ್ಯಾಸ, ಶುಚಿತ್ವ ಇತ್ಯಾದಿಗಳು ಅತ್ಯವಶ್ಯ. ಅದೂ ಕೂಡ ಈಗ ಸಾಧುವಲ್ಲ. ಅಷ್ಟಲ್ಲದೆ ಕಲಿಯುಗದ ಜನರು ಮ೦ದರು, ಅಲ್ಪಾಯುಷಿಗಳು, ನಿರ್ಭಾಗ್ಯರು, ಅವರಿಗೆ ಶಕ್ತಿಶಾಲಿಯಾದ ಮತ್ತು ಅತಿ ಸುಲಭವಾದ ಮಾರ್ಗ ಅತ್ಯಗತ್ಯ. ಇದನ್ನು ಮನಗಂಡು ವೇದಗಳು ಹರೇ ಕೃಷ್ಣ ಮಂತ್ರ ಜಪ ಕೀರ್ತನೆಯ ಮಾರ್ಗವನ್ನು ಅವರಿಗಾಗಿ ನೀಡಿವೆ. ಈ ವಿಧಾನ ಬಹು ಶಕ್ತಿಶಾಲಿ. ಏಕೆಂದರೆ ಕೀರ್ತನೆಯಿಂದ ನಮಗೆ ಭಗವಂತನ ನೇರ ಸಂಪರ್ಕವಾಗುತ್ತದೆ. ಭಗವಂತನ ನಾಮ ಹಾಗೂ ಅವನು ಬೇರಲ್ಲ. ಭೌತಿಕ ವಸ್ತುಗಳಾದರೆ, ವಸ್ತು ಹಾಗೂ ಅವುಗಳನ್ನು ಪ್ರತಿನಿಧಿಸುವ ಶಬ್ದ ಎರಡೂ ಬೇರೆ.
ಉದಾಹರಣೆಗೆ ನಮಗೆ ಬಾಯಾರಿಕೆಯಾದಾಗ ನೀರು, ನೀರು ಎಂದು ಕೂಗಿದರೆ ಬಾಯರಿಕೆ ತಣಿಸುವುದಿಲ್ಲ. ವಸ್ತುಶಃ ಜಲ ನಮ್ಮ ನಾಲಿಗೆಯನ್ನು ತಟ್ಟಿದಾಗಲೇ ಬಾಯಾರಿಕೆ ತಣಿಸುವುದು. ಏಕೆಂದರೆ ‘ಶಬ್ದ’ ಮತ್ತು ‘ನೀರು’ ಎರಡೂ ಒಂದೇ ಅಲ್ಲ, ಆದರೆ ಆಧ್ಯಾತ್ಮಿಕದಲ್ಲಿ ವಸ್ತು ಹಾಗೂ ಶಬ್ದಕ್ಕೆ ಯಾವ ವ್ಯತ್ಯಾಸವಿಲ್ಲ. ಆದ್ದರಿಂದಲೇ ಕೃಷ್ಣನ ನಾಮ ಜಪಿಸಿದಾಗ ಕೃಷ್ಣನ ಸಾನ್ನಿಧ್ಯ ದೊರಕುತ್ತದೆ. ಹೇಗೆ ಕೃಷ್ಣನು ಲೌಕಿಕ ಗುಣಗಳಿಗೆ ಅತೀತನೂ, ಚಿನ್ಮಯನೂ, ಸರ್ವಶಕ್ತನೂ ಆಗಿದ್ದಾನೋ, ಹಾಗೆಯೇ ಅವನ ನಾಮವೂ ಕೂಡ ಗುಣಾತೀತವೂ, ಚಿನ್ಮಯವೂ, ಸರ್ವಶಕ್ತವೂ ಆಗಿದೆ. ಭಗವಂತನ ಸಾನ್ನಿಧ್ಯವನ್ನು ಒದಗಿಸುವ ಹರಿನಾಮ ಕೀರ್ತನೆಯು ಸಾಧಾರಣ ಮಾರ್ಗವಲ್ಲ ಈ ಬಗ್ಗೆ ಬೃಹನ್ನಾರದೀಯ ಪುರಾಣದಲ್ಲಿ ಸ್ಪಷ್ಟ ಹೇಳಿಕೆ ಇದೆ –
ಹರೇರ್ನಾಮ ಹರೇರ್ನಾಮ
ಹರೇರ್ನಾಮೈವ ಕೇವಲಮ್|
ಕಲೌ ನಾಸ್ತೈವ ನಾಸ್ತೈವ
ನಾಸ್ತೈವ ಗತಿರ್ ಅನ್ಯತಾ||
‘ಕಲಿಯುಗದಲ್ಲಿ ಹರಿನಾಮ ಹರಿನಾಮ ಹರಿನಾಮ ಒಂದೇ ಮಾರ್ಗ, ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಬೇರೆ ಮಾರ್ಗವಿಲ್ಲ ಬೇರೆ ಮಾರ್ಗವೇ ಇಲ್ಲ.”
ಈ ಯುಗಧರ್ಮದ ವ್ಯಾಪಕ ಪ್ರಚಾರ ಮಾಡಿದವರು ಯುಗಾವತಾರಿ ಶ್ರೀ ಚೈತನ್ಯ ಮಹಾಪ್ರಭುಗಳು. ಅವರು 15ನೇ ಶತಮಾನದಲ್ಲಿ ಭಾರತಾದ್ಯಂತ ಪ್ರವಾಸ ಮಾಡಿ ಇಡೀ ದೇಶವನ್ನೇ ಕೀರ್ತನೆ ಜಪಗಳಲ್ಲಿ ಮುಳುಗಿಸಿದರು. 19ನೇ ಶತಮಾನದಲ್ಲಿ ಶ್ರೀ ಶ್ರೀಮದ್ ಭಕ್ತಿವೇದಾಂತಸ್ವಾಮಿ ಪ್ರಭುಪಾದರು ಸಾಗರದ ಸೀಮೋಲ್ಲಂಘನ ಮಾಡಿ ಹರಿನಾಮ ಪ್ರಚಾರವನ್ನು ಪಾಶ್ಚಾತ್ಯ ದೇಶಗಳಲ್ಲೂ ಮಾಡಿದರು.

ಹರಿನಾಮ ಜಪದ ಅಭ್ಯಾಸ
ಹರಿನಾಮ ಜಪ ಬಹು ಸುಲಭ, ಗುಂಪಿನಲ್ಲಿ ಸೇರಿ ಅಥವಾ ಏಕಾಂಗಿಯಾಗಿ ಇದನ್ನು ಮಾಡಬಹುದು. ಗು೦ಪಿನಲ್ಲಿ ಮಾಡುವ ಸಾಮೂಹಿಕ ಕೀರ್ತನೆಯನ್ನು ‘ಸ೦ಕೀರ್ತನೆ’ ಎನ್ನುವುದು ವಾಡಿಕೆ. ಇಂತಹ ಕೀರ್ತನೆಯಲ್ಲಿ ಸಾಮಾನ್ಯವಾಗಿ ತಾಳ ಮತ್ತು ಮೃದಂಗಗಳನ್ನು ಬಳಸಲಾಗುವುದಾದರೂ ಅದನ್ನು ಬರಿಯ ಕರತಾಡನದೊ೦ದಿಗೂ ಮಾಡಬಹುದು. ವೈಯಕ್ತಿಕವಾಗಿ ನಾವು ಕೀರ್ತನೆಯನ್ನು ನಮಗೆ ಕೇಳುವಷ್ಟು ಜೋರಾಗಿ ಮತ್ತು ಜಪಮಾಲೆ ಎಣಿಸುತ್ತ ಮಾಡಲಾಗುವುದು. ಇದು ‘ನಾಮಜಪ’. ಈ ಎರಡೂ ವಿಧಾನಗಳನ್ನು ಅಭ್ಯಸಿಸಿ ಎಂದು ಚೈತನ್ಯ ಮಹಾಪ್ರಭುಗಳು ಹೇಳಿದ್ದರು. ಸಂಕೀರ್ತನೆಯನ್ನು ಮಾಡುವಾಗ ಹಿಂದಿನ ಆಚಾರ್ಯರು (ಪುರಂದರದಾಸ, ಕನಕದಾಸ, ವ್ಯಾಸತೀರ್ಥರು, ನರೋತ್ತಮ ದಾಸರು, ಇತ್ಯಾದಿ) ಹಾಡಿದ ಕೀರ್ತನೆಗಳನ್ನು ವಾದ್ಯಗಳೊಂದಿಗೆ ಹಾಡುವುದು ವಾಡಿಕೆ. ವೇದಗಳಲ್ಲಿ ನೀಡಿರುವ, ಜೋರಾಗಿ ಪಠಿಸಬಹುದಾದ ಮಂತ್ರಗಳನ್ನು ಅಥವಾ ಯಾವುದೇ ಭಗವನ್ನಾಮವನ್ನು ಹಾಡಬಹುದು.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಇತಿ ಷೋಡಷಕಂ ನಾಮ್ನಮ್ ಕಲಿ ಕಲ್ಮಶ ನಾಶನಂ।
ನಾತಃ ಪರತರೋಪಾಯ ಸರ್ವ ವೇದೇಷು ದೃಶ್ಯತೇ ||
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ – ಎಂಬ 16 ನಾಮಗಳ ಕೀರ್ತನೆಯೊಂದೇ ಕಲಿಯುಗದ ಕಲ್ಮಶಗಳನ್ನು ನಾಶಮಾಡುತ್ತದೆ. ಕಲಿಯುಗದ ಜನರಿಗೆ ಅನ್ಯಮಾರ್ಗವಿಲ್ಲ ಎಂಬುದು ಎಲ್ಲ ವೇದಶಾಸ್ತ್ರಗಳನ್ನು ಅವಲೋಕಿಸಿದಾಗ ವೇದ್ಯವಾಗುತ್ತದೆ (ಕಲಿಸಂತರಣೋಷನಿಷತ್ತು).
ಸಾಮಾನ್ಯವಾಗಿ ಈ ಹೇಳಿಕೆಯನ್ನೇ ಆಧರಿಸಿ ಹರೇ ಕೃಷ್ಣ ಮಹಾಮಂತ್ರವನ್ನು ಹಾಡುವುದು ವಾಡಿಕೆ. ಶ್ರೀ ಚೈತನ್ಯರೂ ಕೂಡ ಈ ಮಂತ್ರಕ್ಕೆ ಒತ್ತುಕೊಟ್ಟಿದ್ದರು ಮತ್ತು ಅವರು ಇದನ್ನು ಎಲ್ಲೆಲ್ಲಿಯೂ ಕೀರ್ತಿಸುತ್ತಿದ್ದರು. ಶ್ರೀಲ ಪ್ರಭುವಾದರು ದೀಕ್ಷೆಯನ್ನು ನೀಡುವಾಗ ಈ ಮಂತ್ರವನ್ನೇ ಜಪಿಸಿ ಎಂದು ಸೂಚಿಸುತ್ತಿದ್ದರು. ಹರಿನಾಮ ಜಪದ ಬಗ್ಗೆ ಹೇಳುವುದಾದರೆ, ದಿನನಿತ್ಯ ನಿರ್ದಿಷ್ಟ ಬಾರಿ ಜಪಿಸಿ ಎಂದು ಚೈತನ್ಯ ಮಹಾಪ್ರಭುಗಳ ಪ್ರಮುಖ ಶಿಷ್ಯರಾದ ಬೃಂದಾವನದ ಆರ್ವರು ಗೋಸ್ವಾಮಿಗಳು ಮತ್ತು ನಾಮಾಚಾರ್ಯರೆಂದೇ ಖ್ಯಾತರಾದ ಹರಿದಾಸ ಠಾಕುರರು ತಮ್ಮ ಅಭ್ಯಾಸದ ಮೂಲಕವೇ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಹರಿದಾಸರು ದಿನನಿತ್ಯ 3 ಲಕ್ಷ ಬಾರಿ ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುತ್ತಿದ್ದರು. ಅವರಿಗೆ ಇದಕ್ಕೆ ದಿನನಿತ್ಯ 23 ಗಂಟೆ ಹಿಡಿಯುತ್ತಿತ್ತು. ಆದ್ದರಿಂದಲೇ ಹರಿನಾಮ ಜಪ ಮಾಡುವಾಗ ದಿನನಿತ್ಯ ನಿರ್ದಿಷ್ಟ ಸಂಖ್ಯೆಯಲ್ಲಿ ಮಾಡಬೇಕೆ೦ಬುದು ವೇದದ ಕಟ್ಟಳೆ. ಮಂತ್ರವನ್ನು ಮಹಾ ಭಾಗವತ, ಪರಿಪೂರ್ಣ ಭಕ್ತನಾದ ಗುರುವಿನಿಂದ ಸ್ವೀಕರಿಸಿ ಅವರು ನೀಡುವ ಶಿಸ್ತನ್ನು ಪರಿಪಾಲಿಸಿ ಮತ್ತು ಅವರು ಹೇಳುವಷ್ಟು ಬಾರಿ ಜಪಿಸಬೇಕು.

ಆಗ ಕೃಷ್ಣ ಪ್ರೇಮದ ಅ೦ತಿಮ ಹ೦ತವನ್ನು ಶೀಘ್ರವಾಗಿ ಪಡೆಯಬಹುದು. ನಾಮ ಜಪದ ಸಂಖ್ಯೆಯನ್ನು ಎಣಿಸಲು ಹಾಗೂ ಮನಸ್ಸನ್ನು ಕೇಂದ್ರೀಕರಿಸಲು ಸಹಾಯವಾಗುವಂತೆ 108 ಮಣಿಗಳ ಜಪಮಾಲೆಯನ್ನು ಬಳಸುವುದು೦ಟು (ಚಿತ್ರ ನೋಡಿ). ಜಪಮಾಲೆಯ ಮಣಿಗಳನ್ನು ತುಳಸಿಗಿಡದ ಅಥವಾ ಬೇವಿನ ಮರದ ರಂಬೆಗಳಿಂದ ಮಾಡುವುದು ಸರ್ವೆಸಾಮಾನ್ಯ. ಈ ಮಾಲೆಯನ್ನು ಒಯ್ಯಲು ಸುಲಭವಾಗುವಂತೆ ಚೀಲವನ್ನು ಬಳಸುವುದು ವಾಡಿಕೆ. ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತರು ದಿನನಿತ್ಯ 64 ಮಾಲೆ (1 ಮಾಲೆಯಲ್ಲಿ 108 ಮಣಿಗಳು) ಜಪ ಮಾಡಬೇಕು ಎಂದು ಶಿಷ್ಯರಿಗೆ ಹೇಳುತ್ತಿದ್ದರು. ಶ್ರೀಲ ಪ್ರಭುಪಾದರು ದೀಕ್ಷೆ ಕೊಟ್ಟತಮ್ಮ ಶಿಷ್ಯರಿಗೆ ಕನಿಷ್ಟಪಕ್ಷ 16 ಮಾಲೆಗಳ ಜಪ ಮಾಡಬೇಕೆ೦ದು ಹೇಳುತ್ತಿದ್ದರು.
ನಾಮ ಜಪವನ್ನು ಮಾಡುವುದಕ್ಕೆ ಬೇರೆ ಯಾವ ಪೂರ್ವಕರ್ಮಗಳು ಅಥವಾ ಪ್ರಾಯಶ್ಚಿತ್ತಗಳು ಅಗತ್ಯವಿಲ್ಲ.
ಅದನ್ನು ಅಭ್ಯಸಿಸಲು ಯಾವುದೇ ನಿಯಮ ನಿಬಂಧನೆಗಳಿಲ್ಲ – ತತ್ರಾರ್ಪಿತ ನಿಯಮೇನ ಸ್ಮರಣೇನ ಕಾಲಃ, ಗಾಯಿತ್ರಿ ಮಂತ್ರ ಜಪಕ್ಕೆ ಪೂರ್ವ ಅರ್ಹತೆಗಳು ಉ೦ಟು. ಆದರೆ ಭಗವನ್ನಾಮ ಜಪಕ್ಕೆ ಇದಾವುದೂ ಅನ್ವಯಿಸುವುದಿಲ್ಲ. ವ್ಯಕ್ತಿಯು ಯಾವುದೇ ಜಾತಿ, ಮತ, ಧರ್ಮ, ಲಿಂಗ ಭೇದಗಳಿಲ್ಲದೆ ಈ ಕೀರ್ತನೆ ಜಪಗಳಲ್ಲಿ ತೊಡಗಬಹುದು. ಈ ಕೀರ್ತನೆಯನ್ನು ಯಾವುದೇ ಸಮಯದಲ್ಲಿ ಮಾಡಬಹುದು. ನಾಮ ಜಪದಿಂದ ಎಲ್ಲ ಪಾಪ ಪ್ರಜ್ಞೆಯು ದೂರವಾಗುತ್ತದೆ. ಸದಾ ನಾಮ ಸಂಕೀರ್ತನೆಯಲ್ಲಿ ತೊಡಗಬೇಕಾದರೆ ವ್ಯಕ್ತಿಯು ಪಾಪ ಕಾರ್ಯಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವನ ನಾಮಜಪ ಫಲ ನೀಡುವುದಿಲ್ಲ. ಮಾಂಸಹಾರ, ಜೂಜಾಟ, ಪರಸ್ತ್ರೀ ಸಂಗ, ಮದ್ಯಪಾನ ಸೇವನೆಯಂತಹ ದುಶ್ಚಟಗಳನ್ನು ತ್ಯಜಿಸಲೇಬೇಕು. ಈ ನಿಯಮಗಳನ್ನು ಪಾಲಿಸುತ್ತ ಹರಿನಾಮ ಜಪಿಸಿದರೆ ಪ್ರಗತಿ ಶೀಘ್ರವಾಗಿ ಸಿದ್ಧಿಸುತ್ತದೆ.
ನಾಮ ಜಪವು ಒಂದು ಯಾ೦ತ್ರಿಕ ಕ್ರಿಯೆಯಲ್ಲ. ಅದು ಭಕ್ತಿಭಾವಪರವಶತೆಯಿಂದ ಮಾಡುವ ಪ್ರಾರ್ಥನೆ.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಮಂತ್ರದಲ್ಲಿ ಹರೇ ಎ೦ದರೆ ‘ಹರಾ’ ತಾಯಿ ರಾಧೆಯ ಸಂಭೋದನಾತ್ಮಕ ರೂಪ. ಕೃಷ್ಣ ಎಂದರೆ ‘ಸರ್ವಾಕರ್ಷಕ ಪರಮ ದೇವೋತ್ತಮ ಪುರುಷ’ ಮತ್ತು ರಾಮ ಎಂದರೆ ‘ಭಕ್ತರಿಗೆ ಆನಂದವನ್ನುಂಟುಮಾಡುವ ಪರಮ ಪ್ರಭು’ ಎಂದು ಅರ್ಥ. ಆದ್ದರಿಂದ ಹರೇ ಕೃಷ್ಣ ಮಹಾಮಂತ್ರದ ಅರ್ಥ “ಹೇ ರಾಧೆ ಪರಮ ಪ್ರಭುವಿನ ದೈವಶಕ್ತಿಯೇ.
ಹತ್ತು ಅಪರಾಧಗಳು
ಭಗವಂತನ ಪವಿತ್ರ ನಾಮಗಳನ್ನು ಜಪಿಸುವುದರ ವಿರುದ್ಧವಾಗಿ ಇರುವ ಹತ್ತು ಅಪರಾಧಗಳು ಹೀಗಿವೆ :
1. ಭಗವಂತನ ಪವಿತ್ರನಾಮವನ್ನು ಪ್ರಸಾರ ಮಾಡಲೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಭಕ್ತರನ್ನು ನಿಂದಿಸುವುದು.
2. ಶಿವ ಅಥವಾ ಬ್ರಹ್ಮ ಮೊದಲಾದ ದೇವತೆಗಳ ಹೆಸರನ್ನು ಭಗವಾನ್ ವಿಷ್ಣುವಿನ ನಾಮಕ್ಕೆ ಸಮನೆಂದು ಅಥವಾ ಅದರಿಂದ ಸ್ವತಂತ್ರವಾದವೆಂದು ಪರಿಗಣಿಸುವುದು. (ಕೆಲವು ಸಾರಿ ನಾಸ್ತಿಕರಾದವರು ಯಾವುದೇ ದೇವತೆಯು ದೇವೋತ್ತಮ ಪರಮ ಪುರುಷ ವಿಷ್ಣುವಿಗೆ ಸಮನೆಂದು ಪರಿಗಣಿಸುತ್ತಾರೆ. ಆದ್ದರಿಂದ “ಕಾಳಿ”, “ಕಾಳಿ” ಎಂದೋ “ದುರ್ಗಾ” “ದುರ್ಗಾ” ಎಂದೋ ಜಪಿಸಬಹುದು. ಅದು ಹರೇಕೃಷ್ಣ ಮಂತ್ರಕ್ಕೆ ಸಮನಾಗುತ್ತದೆ ಎಂದು ಯಾರಾದರೂ ಭಾವಿಸಿದರೆ ಅದು ಅತ್ಯಂತ ದೊಡ್ಡ ಅಪರಾಧವಾಗುತ್ತದೆ.)
3. ಗುರುವಿನ ಆದೇಶವನ್ನು ಪಾಲಿಸದಿರುವುದು.
4. ವೇದ ಸಾಹಿತ್ಯವನ್ನು, ಅದರ ಮುಂದುವರಿಕೆಯಾಗಿ ಬಂದ ಇತರ ಸಾಹಿತ್ಯವನ್ನು ನಿಂದಿಸುವುದು.
5. ಹರೇಕೃಷ್ಣ ಜಪದ ಮಹಿಮೆಯನ್ನು ಕೇವಲ ಕಲ್ಪನೆಯೆಂದು ಭಾವಿಸುವುದು.
6. ಭಗವಂತನ ಪವಿತ್ರ ನಾಮಕ್ಕೆ ಯಾವುದೋ ಒಂದು ವ್ಯಾಖ್ಯಾನವನ್ನು ನೀಡುವುದು.
7. ಭಗವಂತನ ಪವಿತ್ರ ನಾಮದ ಬಲದಿಂದ ಪಾಪಕಾರ್ಯಗಳನ್ನು ಮಾಡುವುದು. (ಭಗವಂತನ ನಾಮವನ್ನು ಉಚ್ಚರಿಸುತ್ತಿರುವುದರಿಂದ ವ್ಯಕ್ತಿಯು ಎಲ್ಲಾ ಬಗೆಯ ಪಾಪಗಳಿಂದಲೂ ಮುಕ್ತನಾಗಬಹುದು. ಆದ್ದರಿಂದ ಪಾಪಗಳನ್ನು ಮಾಡುತ್ತಲೇ ಇರಬಹುದು, ಮಾಡಿದನಂತರ ಹರೇಕೃಷ್ಣ ಮಹಾಮಂತ್ರವನ್ನುಚ್ಚರಿಸಿ ಅವುಗಳ ಫಲಗಳನ್ನು ನಿವಾರಿಸಿಕೊಳ್ಳಬಹುದು ಎಂದು ಎಂದಿಗೂ ಭಾವಿಸಕೂಡದು. ಇಂಥ ಅಪಾಯಕಾರೀ ಮನೋಭಾವವು ಬಹು ದೊಡ್ಡ ಅಪರಾಧ. ಅದನ್ನು ನಿಲ್ಲಿಸಬೇಕು.)
8. ಹರೇ ಕೃಷ್ಣ ಜಪವನ್ನು ವೇದಗಳಲ್ಲಿ ಕಾಮ್ಯಕರ್ಮಾಚರಣೆಗಳು (ಕರ್ಮಕಾಂಡ) ಎಂದು ಹೇಳಿದ ಮಂಗಳಕರವಾದ ಚಟುವಟಿಕೆಗಳಲ್ಲಿ ಒಂದೆಂದು ಪರಿಗಣಿಸುವುದು.
9. ನಂಬಿಕೆಯಿಲ್ಲದ ವ್ಯಕ್ತಿಗೆ ಪವಿತ್ರ ನಾಮದ ಮಹಿಮೆಯನ್ನು ಕುರಿತು ಬೋಧಿಸುವುದು (ಭಗವಂತನ ಪವಿತ್ರ ನಾಮೋಚ್ಚಾರಣೆಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಪ್ರಾರಂಭದಲ್ಲಿ ಭಗವಂತನ ಪಾರಲೌಕಿಕ ಶಕ್ತಿಯನ್ನು ಕುರಿತು ಬೋಧಿಸಲು ಹೋಗಬಾರದು. ತೀರಾ ಪಾಪಯುತರಾದವರು ಭಗವಂತನ ದಿವ್ಯ ಮಹಿಮೆಗಳನ್ನು ಮೆಚ್ಚಲಾರರು. ಆದ್ದರಿಂದ ಅವರಿಗೆ ಈ ವಿಷಯವಾಗಿ ಬೋಧಿಸದಿರುವುದೇ ಉತ್ತಮ).
10. ಪವಿತ್ರ ನಾಮಗಳನ್ನು ಜಪಿಸುವುದರಲ್ಲಿ ಸಂಪೂರ್ಣವಾಗಿ ಶ್ರದ್ಧೆಯನ್ನಿಟ್ಟುಕೊಳ್ಳದಿರುವುದು. ಎಷ್ಟೇ ಸಾರಿ ಬೋಧನೆಗಳನ್ನು ಕೇಳಿದ ಮೇಲೆಯೂ ಲೌಕಿಕ ಮೋಹಗಳನ್ನು ಉಳಿಸಿಕೊ೦ಡಿರುವುದು. ವೈಷ್ಣವನೆನಿಸಿಕೊಳ್ಳುವ ಪ್ರತಿಯೊಬ್ಬ ಭಕ್ತನೂ, ಅಪೇಕ್ಷಿತ ಯಶಸ್ಸನ್ನು ಕ್ಷಿಪ್ರವಾಗಿ ಸಾಧಿಸಬೇಕಾದರೆ ಈ ಅಪರಾಧಗಳು ತನ್ನಿಂದಾಗದಂತೆ ಕಾಪಾಡಿಕೊಳ್ಳಬೇಕು. (ಪದ್ಮ ಪುರಾಣ.)

ಹೇ ಸರ್ವಾಕರ್ಷಕ ಪ್ರಭು ಶ್ರೀಕೃಷ್ಣನೇ, ಆನಂದದಾಯಕ ರಾಮನೆ ನನ್ನನ್ನು ನಿನ್ನ ಸೇವೆಯಲ್ಲಿ ತೊಡಗಿಸು.” ಈ ಮಂತ್ರ ಪಠನೆಯು ವಿನೀತ ಭಾವನೆಯ ಪ್ರಾರ್ಥನೆಯ ಹೊರತು ಯಾ೦ತ್ರಿಕವಾಗಿ ಪಟಪಟನೆ ಮಾಡುವ ಮಂತ್ರೋಚ್ಛಾರಣೆಯಲ್ಲ. ಇದರಿಂದ ನಮ್ಮ ಸುಪ್ತ ಭಗವದ್ಭಕ್ತಿ ಜಾಗೃತವಾಗುತ್ತದೆ.
ನಾಮ ಜಪದ ಮೂರು ಹಂತಗಳು
ನಾಮ ಜಪದ ಮೂಲ ಉದ್ದೇಶ ಸಂಪೂರ್ಣವಾಗಿ ಹೃದ್ಗತ ಕಲ್ಮಶಗಳಿ೦ದ ಮುಕ್ತರಾಗಿ ಅಂತಿಮ ಹ೦ತವಾದ ಕೃಷ್ಣಪ್ರೇಮಕ್ಕೇರುವುದು. ನಾಮ ಜಪವನ್ನು ಪ್ರಾರಂಭಿಸಿದ ಭಕ್ತನು ಮೂರು ಹಂತಗಳನ್ನು ದಾಟಿಹೋಗುತ್ತಾನೆ. ಮೊದಲನೆ ಹ೦ತದಲ್ಲಿ ಭಕ್ತನ ಅನೇಕ ಅಪರಾಧಗಳನ್ನೆಸಗುತ್ತಾನೆ. ಆದ್ದರಿಂದ ಅವನಿಗೆ ಶ್ರೀ ಹರಿನಾಮದ ಪೂರ್ಣ ಆಶ್ರಯ ದೊರಕುವುದಿಲ್ಲ. ಈ ಹ೦ತವನ್ನು ನಾಮಾಪರಾಧ ಹ೦ತ ಎನ್ನುತ್ತಾರೆ. ಪದ್ಮಪುರಾಣವು ಆರಂಭಿಕ ಭಕ್ತನು ಮಾಡಬಾರದಂತಹ ಹತ್ತು ಅಪರಾಧಗಳ ಪಟ್ಟಿಯನ್ನು ನೀಡಿದೆ. ಎರಡನೆಯ ಹಂತದಲ್ಲಿ ಅವನ ಅಪರಾಧಗಳು ಕುಗ್ಗಿ ನಾಮಜಪದಲ್ಲಿ ಹೆಚ್ಚು ದೃಢನಾಗುತ್ತಾನೆ. ಇದನ್ನು ನಾಮಾಭಾಸ ಹಂತ ಎನ್ನುತ್ತಾರೆ. ಅಂತಿಮವಾಗಿ ನೇರ ಪರಿಶುದ್ಧ ಹಂತದಲ್ಲಿ ಭಕ್ತನು ಹರಿನಾಮ ಜಪಮಾಡುವಾಗ ಯಾವುದೇ ಅಪರಾಧಗಳನ್ನೆಸಗುವುದಿಲ್ಲ, ಈ ಹಂತವನ್ನು ತಲುಪಲು ಎಲ್ಲ ಭಕ್ತರು ಪ್ರಯತ್ನಿಸಬೇಕು.
ಅಪರಾಧಗಳಿಂದ ಮುಕ್ತರಾಗಲು ಹೆಚ್ಚು ಶಿಸ್ತಿನಿಂದ ನಾಮ ಜಪವನ್ನು ಮಾಡಬೇಕೆ ಹೊರತು ನಾಮಜಪವನ್ನು ನಿಲ್ಲಿಸಬಾರದು. ಶ್ರೀಲ ಪ್ರಭುಪಾದರು ನಾಮಜಪದ ಗುಣಮಟ್ಟದ ಬಗ್ಗೆ ಹೇಳುತ್ತ ಉದಾಹರಣೆಗಳನ್ನು ನೀಡುತ್ತಿದ್ದರು. ಅಸಹಾಯಕ ಮಗುವು ತನ್ನ ತಾಯಿಗಾಗಿ ಕೂಗುವಂತೆ ನಾವು ಪರಮ ಪ್ರಭುವಿಗೆ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಆಗಲೇ ನಮ್ಮ ನಾಮಜಪ ಪರಿಪೂರ್ಣವಾಗುವುದು. ಶ್ರೀ ಚೈತನ್ಯರು ಕೂಡ ನಾಮಜಪದ ಗುಣಮಟ್ಟದ ಬಗ್ಗೆ ಹೇಳುತ್ತ ಯಾರು ನಾಮಜಪವನ್ನು ಸದಾ ಮಾಡಬಲ್ಲರು ಎಂಬುದನ್ನು ವಿವರಿಸಿದ್ದಾರೆ.
ತೃಣಾದಪಿ ಸುನಿಚೇನ ತರೋರಿವ ಸಹಿಷ್ಣುನಾ |
ಅಮಾನಿನಾ ಮಾನದೇನ ಕೀರ್ತನೀಯ ಸದಾ ಹರಿ ||
‘ಯಾರು ತನಗಾಗಿ ಸ್ವಲ್ಪವೂ ಗೌರವವನ್ನು ಅಪೇಕ್ಷಿಸುವುದಿಲ್ಲವೋ, ಎಲ್ಲರಿಗೂ ಗೌರವವನ್ನು ನೀಡುವನೋ ಮತ್ತು ತೃಣದಂತೆ ವಿನೀತನೂ, ಮರದಂತೆ ಸಹಿಷ್ಣುವೂ ಆಗಿರುವನೋ ಅವನು ಮಾತ್ರ ಹರಿನಾಮವನ್ನು ಸದಾ ಜಪಿಸಬಲ್ಲನು.” (ಶಿಕ್ಷಾಷ್ಟಕ-3) ಈ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವವನು ಮಾತ್ರ ನಾಮಜಪದ ಅಮೃತವನ್ನು ಸವಿಯಬಲ್ಲನು. ತರ್ಕ, ವಾದ, ಪ್ರವಚನಾ ಶಕ್ತಿಯಿಂದ ಅದು ನಮಗೆ ದೊರಕುವುದಿಲ್ಲ. ಅಪರಾಧಗಳಿ೦ದ ಕೂಡಿದ ನಾಮಜಪದಿ೦ದ ಕೃಷ್ಣಪ್ರೇಮವನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅಪರಾಧಗಳಿಂದ ದೂರವಾಗಲು ಯತ್ನಿಸಿ ನಮ್ಮ ಹರೇಕೃಷ್ಣನಾಮ ಜಪದ ಗುಣಮಟ್ಟವನ್ನು ಹೆಚ್ಚಿಸಬೇಕು.

ಹರಿನಾಮ ಜಪದ ಪರಿಣಾಮ
ಹರಿನಾಮ ಜಪದಿಂದ ಮಹತ್ತರವಾದ ಬದಲಾವಣೆಗಳು ವ್ಯಕ್ತಿಯಲ್ಲುಂಟಾಗುತ್ತವೆ. ಜನ್ಮಜನ್ಮಾಂತರಗಳಿಂದ ಮಾಡಿದ ಪೂರ್ವಕೃತ ಪಾಪ ಕರ್ಮ ಫಲಗಳು ನಾಶವಾಗುತ್ತವೆ. ‘ಸಿಂಹದ ಘರ್ಜನೆಯಿಂದ ಎಲ್ಲ ಪ್ರಾಣಿಗಳು ಪರಾರಿಯಾಗುವ ಹಾಗೆ ಭಗವಂತನ ಪುಣ್ಯನಾಮ ಕೀರ್ತನೆಯಿಂದ (ಅದು ಕಾಟಾಚಾರಕ್ಕಾಗಲಿ ಅಥವಾ ಅಸಹಾಯಕತೆಯಿ೦ದಾಗಲಿ ಮಾಡಿದ್ದರೂ) ನಮ್ಮ ಎಲ್ಲ ಪಾಪ ಕರ್ಮಗಳು ನಾಶವಾಗುತ್ತವೆ” ಎಂದು ಗರುಡ ಪುರಾಣದಲ್ಲಿ ಉಲ್ಲೇಖವಿದೆ. ಅಷ್ಟೇ ಅಲ್ಲದೆ ಬೃಹತ್ ವಿಷ್ಣುಪುರಾಣದಲ್ಲೂ ಇಂತಹದೇ ಒ೦ದೇ ಉಲ್ಲೇಖವನ್ನು ಕಾಣಬಹುದು – ”ಹರಿನಾಮ ಜಪದಿಂದ ವ್ಯಕ್ತಿಯು ತಾನು ಮಾಡಬಹುದಾದ ಎಲ್ಲ ಪಾಪ ಕರ್ಮಗಳನ್ನೂ ನಾಶಮಾಡಬಲ್ಲನು. ಮುಕ್ತಿಯನ್ನೂ ನಾಮಜಪ ನೀಡಬಲ್ಲದು.” ಈ ಹೇಳಿಕೆಗಳೆಲ್ಲ ಉತ್ಪ್ರೇಕ್ಷೆಯಿಂದ ಕೂಡಿದವಲ್ಲ.
ಏಕೆ೦ದರೆ ಹರಿನಾಮ ಕೀರ್ತನೆ ಜೀವಿಯು ಪರಮ ಪುರುಷನಿಗೆ ಮಾಡುವ ಭಕ್ತಿಪರವಶವಾದ ಮೊರೆ. ಅದಕ್ಕೆ ಒಗೊಟ್ಟು ಅವನು ಎಲ್ಲ ಪಾಪ ಕರ್ಮಗಳನ್ನು ನಾಶ ಮಾಡುತ್ತಾನೆ. ಅವಿರತ ನಾಮ ಜಪದಿಂದ ನಾನು, ಈ ದೇಹ ನನ್ನ ದೇಹದ ಉಪ-ಉತ್ಪತ್ತಿಗಳು, ನನ್ನ ಸಂಬಂಧಿಕರು, ಎಂಬ ಮೋಹವು ದೂರವಾಗಿ ನಾನು ಭಗವದಂಶ ಎ೦ದು ಜ್ಞಾನೋದಯವಾಗುತ್ತದೆ. ಅಷ್ಟೇ ಅಲ್ಲದೆ ಪರಮ ಪುರುಷನೊ೦ದಿಗೆ ನಮ್ಮ ಸ೦ಬ೦ಧ ನೆಲೆಗೊಳ್ಳುತ್ತದೆ. ಸ್ಕಂಧ ಪುರಾಣದಲ್ಲಿ ಹೇಳಿರುವ ಹಾಗೆ ”ಹರಿ ಎಂಬ ಪುಣ್ಯನಾಮವನ್ನು ಒಮ್ಮೆ ಜಪಿಸಿದರೂ ವ್ಯಕ್ತಿಯು ಮುಕ್ತಿ ಪಡೆಯುವುದರಲ್ಲಿ ಸಂಶಯವಿಲ್ಲ.” ಒಟ್ಟಿನಲ್ಲಿ ಮಾಯಾ ಪ್ರಭಾವವು ಕುಗ್ಗಿ ವ್ಯಕ್ತಿಯು ವಸ್ತುಸ್ಥಿತಿಯಲ್ಲಿ ನೆಲೆ ನಿಲ್ಲುತ್ತಾನೆ. ಅ೦ತಿಮವಾಗಿ ಹರಿನಾಮ ಜಪವು ಶ್ರೀಕೃಷ್ಣನೆಡೆಗೆ ಭಾವಪರವಶ ಪ್ರೇಮವನ್ನು ನಮಗೆ ನೀಡುತ್ತದೆ. ಅಂತಹ ಹಂತ ತಲುಪಿದ ರೂಪ ಗೋಸ್ವಾಮಿಯವರ ಹೇಳಿಕೆಯನ್ನು ಇಲ್ಲಿ ಸ್ಮರಿಸಬಹುದು : “ಕೃಷ್ಣ ಎನ್ನುವ ಎರಡು ಅಕ್ಷರಗಳು ಎಷ್ಟು ಅಮೃತಧಾರೆಯನ್ನು ಸುರಿದಿದೆಯೋ ನಾನರಿಯೆ. ಕೃಷ್ಣ ಎನ್ನುವ ನಾಮಜಪವನ್ನು ಕೀರ್ತಿಸಿದಾಗ ಅದು ನನ್ನ ನಾಲಿಗೆಯ ಮೇಲೆ ನರ್ತಿಸುತ್ತದೆ. ಅದಕ್ಕಾಗಿಯೇ ನನಗೆ ಲಕ್ಷಾಂತರ ಬಾಯಿಗಳು ಬೇಕು ಎನಿಸುತ್ತದೆ. ಆ ನಾಮವು ನನ್ನ ಕಿವಿಯೊಳಗೆ ಒಕ್ಕಾಗ ನನಗೆ ಲಕ್ಷಾಂತರ ಕಿವಿಗಳು ಬೇಕೆನಿಸುತ್ತದೆ. ಅದು ಹೃದಯಾಂತರಾಳದಲ್ಲಿ ನರ್ತಿಸಿದಾಗ ನನ್ನ ಮನಸ್ಸನ್ನು ಅದು ಗೆಲ್ಲುತ್ತದೆ. ಮತ್ತು ನನ್ನ ಇ೦ದ್ರಿಯಗಳು ಆ ನಾಮವೊ೦ದನ್ನು ಬಿಟ್ಟು ಬೇರೆಲ್ಲ ಪ್ರಜ್ಞೆಯನ್ನು ಮರೆಯುತ್ತವೆ.” ಬನ್ನಿ ಹರೇ ಕೃಷ್ಣ ಮಹಾಮಂತ್ರ ಜಪಿಸೋಣ.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ






Leave a Reply