ಪುರಿ ಬಂಗಾಳ ಕೊಲ್ಲಿಯ ಮೇಲಿನ ಒಂದು ಪಟ್ಟಣ. ನೀವು ಆ ಪಟ್ಟಣಕ್ಕೆ ಭೇಟಿ ಕೊಟ್ಟರೆ ಹಲವಾರು ಪುಟ್ಟ ಪುಟ್ಟ ಮನೆಗಳು ಹಾಗೂ ಈಚಲು ಮರಗಳ ನಡುವೆ ಇರುವ ಒಂದು ಕಲ್ಲುಮಂಟಪವನ್ನು ನೋಡಬಹುದು. ಈ ಮಂಟಪದಲ್ಲಿ ಮಹಾ ಸಂತ ಹರಿದಾಸ ಠಾಕುರರು ಒಬ್ಬರೇ ಅಥವಾ ಒಬ್ಬ ಭಕ್ತ ಸಂಗಾತಿಯ ಜೊತೆ ಕೂತು ಕೃಷ್ಣನನ್ನು ಪೂಜಿಸಿದರು.

ಆ ಸ್ಥಳದಲ್ಲಿ ಅವರು ಇಡೀ ಹಗಲು ಮತ್ತು ರಾತ್ರಿಯನ್ನು ಹರೇಕೃಷ್ಣ ಮಹಾಮಂತ್ರ ಜಪಿಸುತ್ತ ಕಳೆದರು. ಜಪಮಾಲೆಯಲ್ಲಿನ ಮಣಿಗಳನ್ನು ಎಣಿಸುತ್ತ ಹರಿದಾಸರು ಗಂಟೆಗಟ್ಟಲೆ ಪವಿತ್ರಾಕ್ಷರಗಳನ್ನು ನಾಲಗೆಯ ಮೇಲೆ ಉಚ್ಚರಿಸುತ್ತ ಹೊತ್ತು ಮುಳುಗಿದ ಮೇಲೂ ಕುಳಿತಿರುತ್ತಿದ್ದರು. ಅಷ್ಟು ಹೊತ್ತಿಗೆ ಅವರು ಮಾಡಿದ ಜಪಸಂಖ್ಯೆ ಮೂರು ಲಕ್ಷವನ್ನು ಮುಟ್ಟಿರುತ್ತಿತ್ತು.
ಹರಿದಾಸ ಠಾಕುರರ ಏಕಾಂತ ಪರ್ಣಕುಟಿಗೆ ಬಹು ಸಮೀಪದಲ್ಲೇ ಭಗವಾನ್ ಚೈತನ್ಯರು ಹಾಗೂ ಅವರ ಅನುಯಾಯಿಗಳು ಕೃಷ್ಣನ ಮಹಿಮೆಗಳನ್ನು ಘೋಷಿಸುತ್ತ ಗಟ್ಟಿಯಾಗಿ (ಹರೇಕೃಷ್ಣ) ಮಹಾಮಂತ್ರವನ್ನು ಸಂಕೀರ್ತಿಸುತ್ತಿರುತ್ತಿದ್ದರು. ಚೈತನ್ಯರು ಒಬ್ಬ ಅಸಾಧಾರಣ ದೈವಭಕ್ತರೆಂದು ಜನ ಅವರನ್ನು ಗೌರವಿಸುತ್ತಿದ್ದರು.
ಚೈತನ್ಯರು ದೇವೋತ್ತಮ ಪರಮ ಪುರುಷ ಕೃಷ್ಣ ಎನ್ನುವುದು ಹಾಗೆಯೇ ಅವರು ಈ ಲೋಕದಲ್ಲಿ ಅವತರಿಸಿದ್ದುದು ಹರೇಕೃಷ್ಣ ಮಹಾಮಂತ್ರ ಸಂಕೀರ್ತನೆಯನ್ನು ಹರಡಲು ಅವತರಿಸಿದ್ದರೆಂಬುದು ಆಯ್ದ ಕೆಲವರಿಗೆ ತಿಳಿದಿತ್ತು.
ಹರಿದಾಸರು ಮಹಾಮಂತ್ರ ಸಂಕೀರ್ತನೆಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿದ್ದುದರಿಂದ ಪ್ರಭು ಚೈತನ್ಯರು ಅವರ ಬಗೆಗೆ ವಿಶೇಷ ಪ್ರೀತಿ ತೋರುತ್ತಿದ್ದರು ಮತ್ತು ಹರಿದಾಸರನ್ನು ತಮ್ಮ ಅಂತರಂಗದ ಶಿಷ್ಯರಲ್ಲಿ ಒಬ್ಬರಾಗಿ ಕಾಣುತ್ತಿದ್ದರು. ಭಗವಾನ್ ಚೈತನ್ಯರು ಹಾಗೂ ಅವರ ಅನುಯಾಯಿಗಳು ಆಗಾಗ ಹರಿದಾಸರಿದ್ದ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು.
ಒಂದು ದಿನ ಪ್ರಭು ಚೈತನ್ಯರ ಆಪ್ತ ಸಹಾಯಕ ಗೋವಿಂದನು ಕೃಷ್ಣನಿಗೆ ಮೊದಲು ಅರ್ಪಿಸಲಾಗಿದ್ದ ಪ್ರಸಾದವನ್ನು ತಂದು ಅದನ್ನು ಇತರ ಎಲ್ಲರಿಗೂ ಹಂಚಿದನು. ಭಾರತದಲ್ಲಿ ಭಗವದ್ಭಕ್ತರು ಸಾಂಪ್ರದಾಯಿಕವಾಗಿ ಪ್ರಸಾದವನ್ನು ತಮ್ಮ ತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಇದು ಆಧ್ಯಾತ್ಮಿಕ ಗೆಳೆತನವನ್ನು ವ್ಯಕ್ತಪಡಿಸುವ ಒಂದು ವಿಧಾನ. ಗೋವಿಂದನು ಹರಿದಾಸರಿಗೆ ಪ್ರಸಾದ ಕೊಡಲು ಹೋದಾಗ, ಅವರು ಅಂಗಾತ ಮಲಗಿಕೊಂಡು ಮೆತ್ತನೆ ಸ್ವರದಲ್ಲಿ ಭಗವನ್ನಾಮ ಜಪ ಮಾಡುತ್ತಿದ್ದುದನ್ನು ನೋಡಿದ.

“ದಯೆಯಿಟ್ಟು ಎದ್ದು ಪ್ರಸಾದ ಸ್ವೀಕರಿಸಿ” – ಗೋವಿಂದ ಹೇಳಿದ.
ಹರಿದಾಸರು, “ನಾನು ಈ ದಿನ ಉಪವಾಸ ಮಾಡುತ್ತಿರುವೆ. ನನ್ನ ದೇಹವೇನೋ ಕ್ಷೇಮದಿಂದಿದೆ. ಆದರೆ ನನ್ನ ಮನಸ್ಸು ಮತ್ತು ಬುದ್ಧಿ ಸರಿಯಾಗಿಲ್ಲ. ನನಗೆ ಈ ಹೊತ್ತು ಬಡಿದಿರುವ ಕಾಯಿಲೆಯೆಂದರೆ ನಿಗದಿತ ಸುತ್ತುಗಳ ಮಂತ್ರ ಜಪವನ್ನು ಪೂರೈಸಲಿಕ್ಕಾಗುತ್ತಿಲ್ಲವೆಂಬುದು.”
ಮರುದಿನ ಸ್ವಯಂ ಚೈತನ್ಯರೇ ಹರಿದಾಸರನ್ನು ನೋಡಲು ಬಂದರು. ಬಂದವರೇ ಚೈತನ್ಯರು ಹರಿದಾಸರನ್ನು ಕುರಿತು, “ನಿಮಗೆ ವಯಸ್ಸಾಗಿದೆ. ನಾಮಜಪದ ಸಂಖ್ಯೆಯನ್ನು ಕಡಮೆ ಮಾಡಿಕೊಳ್ಳಿ. ಭಗವಾನ್ ಕೃಷ್ಣನ ಮಹಿಮಾತಿಶಯಗಳನ್ನು ಈ ಕತ್ತಲು ತುಂಬಿದ ಐಹಿಕ ಜಗತ್ತಿನಲ್ಲಿ ಹರಡಲು ನೀವು ಈಗಾಗಲೇ ಸಾಕಷ್ಟು ಶ್ರಮಿಸಿದ್ದೀರಿ’ ಎಂದರು.
ಆದರೆ ಹರಿದಾಸರು ಖಿನ್ನರಾಗಿಯೇ ಇದ್ದರು ಅವರ ಮನಸ್ಸಿನಲ್ಲಿ ಬೇರೇನೋ ಇತ್ತು. ಅವರೆಂದರು: “ಪ್ರಿಯ ಪ್ರಭುವೆ, ನನ್ನ ನಿಜವಾದ ಅಹವಾಲನ್ನು ಕೃಪೆಯಿಟ್ಟು ಆಲಿಸಿ. ನೀವು ಇನ್ನು ಸ್ವಲ್ಪ ದಿನದಲ್ಲೇ ಇಹಲೋಕದ ನಿಮ್ಮ ಲೀಲೆಗಳನ್ನು ಮುಗಿಸಿ ನಿಮ್ಮ ಆಧ್ಯಾತ್ಮಿಕ ಧಾಮಕ್ಕೆ ಹಿಂತಿರುಗುತ್ತೀರಿ ಎಂದು ನನ್ನ ಮನಸ್ಸಿಗೆ ತೋರುತ್ತಿದೆ. ಆ ಹೊತ್ತು ಬರುವ ಮುನ್ನ ನನ್ನ ದೇಹವು ನಿಮ್ಮ ಪಾದಗಳಡಿ ಬೀಳುವಂತೆ ಅನುಗ್ರಹಿಸಿ. ನಿಮ್ಮ ಕೊನೆಯ ದಿನಗಳನ್ನು ನಾನು ನೋಡಲಾರೆ.
ಭಗವಾನ್ ಚೈತನ್ಯರು ಗಂಭೀರವಾಗಿಯೇ ಉತ್ತರಿಸಿದರು: “ಕೃಷ್ಣನು ನಿಮಗೆ ಬೇಕಾದ್ದನ್ನು ಅನುಗ್ರಹಿಸುವಷ್ಟು ಕರುಣಾಶಾಲಿ. ನಾನು ಏನು ಸಂತೋಷವನ್ನು ಅನುಭವಿಸುತ್ತಿದ್ದೇನೋ ಅದು ನೀವು ಪುರಿಯಲ್ಲಿ ನನ್ನ ಜೊತೆಯಲ್ಲಿ ಇರುವುದರಿಂದಾಗಿ ಬಂದಿದೆ. ಆದರೆ ನೀವು ನನ್ನನ್ನು ಬಿಟ್ಟು ಹೊರಟು ಹೋಗುವುದು ಎಷ್ಟೋ ಉಚಿತವಲ್ಲ.”

ಆದರೂ ಹರಿದಾಸರು ಹಿಮ್ಮೆಟ್ಟುವ ಹಾಗಿರಲಿಲ್ಲ. ಹರಿದಾಸರು ಪ್ರಭುಗಳ ಪಾದಗಳನ್ನು ಹಿಡಿದುಕೊಂಡು ಅಳುತ್ತಾ ನುಡಿದರು: “ಪ್ರಭುವೆ ನನಗೆ ಭ್ರಮೆ ಕವಿಸಬೇಡಿ. ನನಗಿಂತ ಹೆಚ್ಚು ಉಪಯೋಗಕ್ಕೆ ಬರುವ ಕೋಟಿಗಟ್ಟಲೆ ಭಕ್ತರು ನಿಮಗಿದ್ದಾರೆ. ನನ್ನಂಥ ಒಂದು ಕ್ಷುದ್ರ ಕ್ರಿಮಿ ಸತ್ತರೆ ನಷ್ಟವೇನು? ಅಲ್ಲದೇ, ನೀವು ಸದಾ ನಿಮ್ಮ ಭಕ್ತರ ವಿಷಯಕ್ಕೆ ಪ್ರೀತಿ ತೋರುವವರು. ನಾನೊಬ್ಬ ನಕಲಿ ಭಕ್ತನೇ ಆದರೂ ನನ್ನ ಅಪೇಕ್ಷೆಯನ್ನು ನೀವು ಈಡೇರಿಸುತ್ತೀರೆಂಬ ಆಸೆ ನನಗಿದೆ.”
ಬಳಿಕ ಪ್ರಭು ಚೈತನ್ಯರು ಹರಿದಾಸರನ್ನು ಆಲಿಂಗಿಸಿದರು. ಮತ್ತೆ ಮರುದಿನ ಬರುವುದಾಗಿ ಮಾತುಕೊಟ್ಟ ಚೈತನ್ಯರು ತಮ್ಮ ದಿನಗಟ್ಟಲೆ ಕರ್ಮಗಳನ್ನು ಪೂರೈಸಲು ತೆರಳಿದರು.
ಮರುದಿನ ಚೈತನ್ಯರು ತಮ್ಮ ಸಂಗಾತಿಗಳ ಜೊತೆ ಹರಿದಾಸರ ಬಳಿ ಬಂದರು. ಹರಿದಾಸರು ಅತ್ಯಂತ ನಮ್ರತೆಯಿಂದ ಚೈತನ್ಯರಿಗೆ ಎರಗಿದ್ದು ನಡೆಯಿತು.
“ಪ್ರಿಯ ಹರಿದಾಸರೆ, ಶುಭ ಸಮಾಚಾರ ಏನು?” ಎಂದು ಚೈತನ್ಯರು ಕೇಳಿದರು. ಹರಿದಾಸರು, “ನೀವು ನನ್ನ ಮೇಲೆ ಏನು ಕರುಣೆ ತೋರುತ್ತೀರೋ ಅದೇ ಶುಭ ಸಮಾಚಾರ” ಎಂದು ಹರಿದಾಸರು ಉತ್ತರಿಸಿದರು.
ಈ ಮಾತನ್ನು ಕೇಳಿದ್ದೇ ಭಗವಾನ್ ಚೈತನ್ಯರು ಹರೇಕೃಷ್ಣ ಮಂತ್ರವನ್ನು ಸಾಮೂಹಿಕವಾಗಿ ಸಂಕೀರ್ತಿಸಲು ಪ್ರಾರಂಭಿಸಿದರು ಹಾಗೂ ಅವರ ಭಕ್ತರು ಹರಿದಾಸರನ್ನು ಸುತ್ತುವರಿದು ಸಂಕೀರ್ತನೆಯಲ್ಲಿ ಪಾಲ್ಗೊಂಡರು. ಬಳಿಕ ಚೈತನ್ಯರು ಹರಿದಾಸರನ್ನು ಅವರ ಸಂತನಂತಹ ಗುಣಗಳಿಗಾಗಿ ಶ್ಲಾಘಿಸತೊಡಗಿದರು. ಹರಿದಾಸರನ್ನು ಶ್ಲಾಘಿಸಿದಷ್ಟೂ ಚೈತನ್ಯರ ಸಂತೋಷ ಹೆಚ್ಚಾಗುತ್ತಿತ್ತು. ಭಕ್ತರೆಲ್ಲರೂ ಆಶ್ಚರ್ಯಪಟ್ಟರಷ್ಟೇ ಅಲ್ಲದೆ ಹರಿದಾಸರ ಪಾದಕಮಲಗಳಿಗೆರಗಿದರು.

ಬಳಿಕ ಹರಿದಾಸರು ಚೈತನ್ಯರಿಗೆ ತಮ್ಮ ಬಳಿ ಕುಳ್ಳಿರ ಹೇಳಿದರು. ಹರಿದಾಸರು ಪ್ರಭುವರ್ಯರ ಇಂದುವದನದ ಮೇಲೆ ತಮ್ಮ ದೃಷ್ಟಿ ನೆಟ್ಟು ಪ್ರಭುಗಳ ಪಾದಕಮಲಗಳನ್ನು ತಮ್ಮ ಎದೆಯ ಮೇಲಿರಿಸಿಕೊಂಡರು. ಹರಿದಾಸರು ಕೃಷ್ಣನಾಮ ಜಪಮಾಡುತ್ತಿದ್ದಂತೆ ಅವರ ಕಣ್ಣುಗಳು ನೀರಿನ ಧಾರೆ ಸುರಿಸುತ್ತಿದ್ದವು. ಸ್ವಲ್ಪ ಸಮಯದಲ್ಲಿ ಅವರು ಜೀವ ಬಿಟ್ಟರು. ಅವರ ಆತ್ಮ ಅವರನ್ನು ಬಿಟ್ಟು ತೆರಳಿತು.
ಹೀಗಾಗುತ್ತಿದ್ದ ಆ ಕ್ಷಣದಲ್ಲೇ ಪ್ರತಿಯೊಬ್ಬರೂ ಕೃಷ್ಣನ ಪವಿತ್ರನಾಮಗಳನ್ನು ಜೋರಾಗಿ ಉಚ್ಚರಿಸುತ್ತಿದ್ದರು ಹಾಗೂ ಪ್ರಭು ಚೈತನ್ಯರು ಅಗಲಿದ ತಮ್ಮ ಭಕ್ತನಿಗಾಗಿ ಆಧ್ಯಾತ್ಮಿಕ ಆನಂದೋದ್ರೇಕದಲ್ಲಿ ಮುಳುಗಿದರು. ಅವರು ಹರಿದಾಸರ ಶರೀರವನ್ನೆತ್ತಿ ತಮ್ಮ ತೊಡೆಯಮೇಲೆ ಹೊತ್ತು ಅಂಗಳದಲ್ಲಿ ಆನಂದಾತಿಶಯದ ಪ್ರೇಮದಿಂದ ನರ್ತಿಸಿದರು. ಅವರ ಕೀರ್ತನ ನರ್ತನಾದಿಗಳಲ್ಲಿ ಅವರ ಭಕ್ತರೂ ಪಾಲ್ಗೊಂಡರು.
ಬಳಿಕ ಭಕ್ತರು ಹರಿದಾಸರ ದಿವ್ಯ ಶರೀರವನ್ನು ತಮ್ಮ ಭುಜಗಳ ಮೇಲಿರಿಸಿಕೊಂಡು ಸಮುದ್ರದತ್ತ ತೆರಳಿದರು. ವಾಹಕರು ಹಾಗೂ ಜನ ದಾರಿಯುದ್ದಕ್ಕೂ ಕೃಷ್ಣನಾಮ ಸಂಕೀರ್ತನೆ ಮಾಡುತ್ತಿದ್ದರು. ಭಗವಾನ್ ಚೈತನ್ಯರು ಶವದ ಮುಂದೆ ನರ್ತಿಸಿದರು. ಕಡಲತೀರವನ್ನು ಸೇರಿದಾಗ ಭಗವಾನ್ ಚೈತನ್ಯರು ಹರಿದಾಸರ ಪಾರ್ಥಿವ ಶರೀರಕ್ಕೆ ಕಡಲಲೆಗಳಲ್ಲಿ ಸ್ನಾನ ಮಾಡಿಸಿದ ತರುವಾಯ, “ಇಂದಿನಿಂದ ಈ ಸಮುದ್ರ ತೀರವು ಒಂದು ಮಹಾನ್ ಯಾತ್ರಾಸ್ಥಳ ಎಂದು ಘೋಷಿಸಿದರು.
ಭಕ್ತರು ಸಮುದ್ರತೀರದ ಮರಳಿನಲ್ಲಿ ಒಂದು ದೊಡ್ಡ ಗುಣಿ ತೋಡಿ ಹರಿದಾಸರ ಶರೀರವನ್ನು ಅದರಲ್ಲಿರಿಸಿದರು. ಬಳಿಕ ಭಗವಾನ್ ಚೈತನ್ಯರು ತಮ್ಮ ಬೊಗಸೆಗಳಿಂದ ಮರಳನ್ನು ಎತ್ತಿ ಎತ್ತಿ ಪಾರ್ಥಿವ ಶರೀರವನ್ನು ಮುಚ್ಚುತ್ತಾ ‘ಹರಿಬೋಲ್! ಹರಿಬೋಲ್!” – “ಹರಿನಾಮ ಸಂಕೀರ್ತಿಸಿ” ಎಂದರು.
ಭಕ್ತರು ಸಂಕೀರ್ತನೆಯನ್ನೆತ್ತಿಕೊಂಡು ತಾವು ಬೊಗಸೆಗಳಿಂದ ಗುಣಿಗೆ ಮರಳು ತುಂಬಿದರು. ಬಳಿಕ ಆ ಸ್ಥಳದ ಗುರುತಿಗಾಗಿ ಅದರ ಮೇಲೊಂದು ವೇದಿಕೆ ನಿರ್ಮಿಸಿದರು. ಭಗವಾನ್ ಚೈತನ್ಯರು ಆ ವೇದಿಕೆಯ ಸುತ್ತ ಸಂಕೀರ್ತನ, ನರ್ತನ ಮಾಡಿದರು. ಇಡೀ ಬ್ರಹ್ಮಾಂಡವು ಕೃಷ್ಣನಾಮ ನಾದದಿಂದ ತುಂಬಿಹೋಯಿತು. ಬಳಿಕ ಚೈತನ್ಯರೂ ಅವರ ಶಿಷ್ಯರೂ ಸಮುದ್ರದ ನೀರಿನಲ್ಲಿ ಈಜಿ ಜಲಕ್ರೀಡೆಯಾಡಿದರು.

ಕೊನೆಯಲ್ಲಿ ಚೈತನ್ಯರು ಜಗನ್ನಾಥನ (ಭೂಮಿಯ ಒಡೆಯ-ಕೃಷ್ಣ) ದೇವಸ್ಥಾನಕ್ಕೆ ಗುಡಿಯ ಮುಂದೆ ಪ್ರಸಾದದ ಅಂಗಡಿಗಳನ್ನಿಟ್ಟಿದವರಿಂದ ಪ್ರಸಾದ ಕೊಳ್ಳಲು ಹೋದರು.
”ಹರಿದಾಸರು ನಿಧನರಾದುದರ ಸಂದರ್ಭದಲ್ಲಿ ಒಂದು ಸಂತರ್ಪಣೆ ನಡೆಸಲು ಪ್ರಸಾದ ಯಾಚಿಸಲು ನಾನು ಬಂದಿದ್ದೇನೆ. ನನಗೆ ಭಿಕ್ಷೆ ನೀಡಿ’ ಎಂದು ಚೈತನ್ಯರು ಮನವಿ ಮಾಡಿದರು.
ಪ್ರಭುವರ್ಯರ ಮನವಿಯಿಂದ ಬಹು ಹರ್ಷಿತರಾದ ವರ್ತಕರು ಮುಂದೆ ಬಂದು ಬುಟ್ಟಿಬುಟ್ಟಿಗಟ್ಟಲೆ ಪ್ರಸಾದ ನೀಡಿದರು. ಆದರೆ ಆಗ ತಾನೆ ಅಲ್ಲಿಗೆ ಬಂದ, ಪ್ರಭುವರ್ಯರ ಪ್ರಮುಖ ಶಿಷ್ಯರಲ್ಲೊಬ್ಬರಾದ ಸ್ವರೂಪ ದಾಮೋದರರು ಅಂಗಡಿಕಾರರನ್ನು ತಡೆಯಲಾಗಿ ವರ್ತಕರು ತಮ್ಮ ಅಂಗಡಿಗಳಿಗೆ ಹಿಂತಿರುಗಿದರು. ಬಳಿಕ ಸ್ವರೂಪರು ಹಾಗೂ ಅವರ ಶಿಷ್ಯರು ಅಲ್ಲಿದ್ದ ಎಲ್ಲ ಅಂಗಡಿಗಳಿಗೂ ಹೋಗಿ ಅಲ್ಲಿದ್ದ ಅಷ್ಟೂ ಪ್ರಸಾದವನ್ನು ಸಂಗ್ರಹಿಸಿ ಅದನ್ನು ಹೊರಲು ಆಳುಗಳನ್ನು ಗೊತ್ತುಮಾಡಿಕೊಂಡು ಭಗವಾನ್ ಚೈತನ್ಯರ ಮನೆಗೆ ತೆರಳಿದರು.
ಚೈತನ್ಯರ ಮನೆ ಸೇರಿದ ಭಕ್ತರು ಅಲ್ಲಿ ನೆರೆದಿದ್ದ ಭಕ್ತರನ್ನು ಸಾಲುಗಳಲ್ಲಿ ಕುಳ್ಳಿರಿಸಿದರು. ಸ್ವಯಂ ಚೈತನ್ಯರೇ ಪ್ರಸಾದ ವಿತರಣೆ ಮಾಡಲು ಆರಂಭಿಸಿದರು. ಕಡಮೆ ಪ್ರಮಾಣದಲ್ಲಿ ಪ್ರಸಾದ ಸ್ವೀಕರಿಸುವ ಅಭ್ಯಾಸ ಚೈತನ್ಯರಿಗಿರಲಿಲ್ಲ. ಹಾಗಾಗಿ ಅವರು ಬಡಿಸುವಾಗ ಸಹ ಒಂದೊಂದು ಎಲೆಗೆ ಐದು ಮಂದಿಗಾಗುವಷ್ಟು ಪ್ರಸಾದ ಬಡಿಸಿದರು. ಸ್ವಲ್ಪ ಹೊತ್ತಾದ ಮೇಲೆ ಭಕ್ತರು ಚೈತನ್ಯರಿಗೆ, “ಪ್ರಭು ನೀವು ದಯಮಾಡಿ ಸುಮ್ಮನೆ ಒಂದೆಡೆ ಕೂಡಿ. ನಾವು ಪ್ರಸಾದ ವಿತರಣೆ ಮಾಡುತ್ತೇವೆ” ಎಂದರು.
ಪ್ರಸಾದವನ್ನು ಬಡಿಸಿದ್ದು ಮುಗಿಯಿತು. ಚೈತನ್ಯರು ಉಣ್ಣುವುದನ್ನು ಪ್ರಾರಂಭಿಸಲೆಂದು ಭಕ್ತರೆಲ್ಲ ಕಾದು, ಅವರು ಆರಂಭಿಸಿದ ಮೇಲೆ ತಾವೂ ಆರಂಭಿಸಿದರು. ಸ್ವಲ್ಪ ಹೊತ್ತಿನೊಳಗಾಗಿ ಎಲ್ಲರೂ ಕಂಠಪೂರ್ತಿ ತಿಂದಿದ್ದರು. ಹೇಗೆಂದರೆ ಚೈತನ್ಯರು ಬಡಿಸುವವರಿಗೆ, ‘ಇನ್ನಷ್ಟು ಹಾಕಿ, ಅವರಿಗೆ ಇನ್ನಷ್ಟು ಬಡಿಸಿ’ ಎನ್ನುತ್ತಿದ್ದರು.

ಭಕ್ತರೆಲ್ಲರೂ ಪ್ರಸಾದ ಸ್ವೀಕರಿಸಿದ್ದಾದ ತರುವಾಯ, ಪ್ರಭು ಚೈತನ್ಯರು ಅವರಿಗೆಲ್ಲ ಹೂಮಾಲೆಗಳನ್ನು ಹಾಕಿದರು. ಬಳಿಕ ಪ್ರಭುಗಳು ಸಂತೋಷದಿಂದ ಹೀಗೆ ನುಡಿದರು : “ಹರಿದಾಸ ಠಾಕುರರ ತಿರೋಭಾವದ ಈ ಹಬ್ಬವನ್ನು ನೋಡಿದ, ಇಲ್ಲಿ ಇಂದು ಸಂಕೀರ್ತಿಸಿ ನರ್ತಿಸಿದ, ಹರಿದಾಸರ ಸಮಾಧಿಗೆ ಮರಳು ಸುರಿದ ಹಾಗೂ ಇಲ್ಲಿ ಇಂದು ಪ್ರಸಾದ ಸ್ವೀಕರಿಸಿದ ಯಾರೇ ಆದರೂ ಅತಿ ಶೀಘ್ರದಲ್ಲೇ ಕೃಷ್ಣನ ಕೃಪೆಗೆ ಪಾತ್ರರಾಗುತ್ತಾರೆ.”
ಚೈತನ್ಯರು ಹರಿದಾಸರ ಗುಣಗಾನ ಮಾಡಿದರು. ನನ್ನ ಬಗೆಗೆ ಕೃಪೆದೋರಿ ಕೃಷ್ಣನು ನನಗೆ ಹರಿದಾಸ ಠಾಕುರರಂಥ ಸಂಗಾತಿಯನ್ನು ಒದಗಿಸಿದ. ಆದರೆ ಈಗ ಅವನು ನಮ್ಮಿಬ್ಬರನ್ನೂ ಬೇರೆ ಮಾಡಿದ್ದಾನೆ. ಹರಿದಾಸರು ಈ ಜಗತ್ತನ್ನು ಬಿಟ್ಟು ಹೋಗಲು ಬಯಸಿದಾಗ ನಾನು ಅವರನ್ನು ತಡೆಯಲಾಗಲಿಲ್ಲ. ಅವರು ಮಾತೆತ್ತದೆ ಜೀವ ತೊರೆದು ಹೊರಟು ಹೋದರು, ಮತ್ತು ಈಗ ಅವರಿಲ್ಲದೆ ಈ ಜಗತ್ತು ತನ್ನ ಅತ್ಯಂತ ಅಮೂಲ್ಯ ಆಭರಣವನ್ನು ಕಳೆದುಕೊಂಡಿದೆ.”
ತರುವಾಯ ಚೈತನ್ಯರು ಎಲ್ಲರಿಗೂ ಆಜ್ಞೆ ಮಾಡಿದರು : ಹರಿದಾಸ ಠಾಕುರರಿಗೆ ಮಂಗಳವಾಗಲಿ ಎಂದು ಹೇಳಿ ಕೃಷ್ಣನ ಪವಿತ್ರನಾಮವನ್ನು ಸಂಕೀರ್ತಿಸಿ.” ಹೀಗೆಂದ ಬಳಿಕ ಪ್ರಭುಗಳು ನರ್ತಿಸಲಾರಂಭಿಸಿದರು ಹಾಗೂ ಅಲ್ಲಿದ್ದ ಎಲ್ಲರೂ ಕೀರ್ತನ ನರ್ತನಗಳಲ್ಲಿ ಅವರ ಜೊತೆ ಸೇರಿದರು. ಬಳಿಕ ಚೈತನ್ಯರು ಬ೦ದಿದ್ದ ಎಲ್ಲ ಭಕ್ತರಿಗೂ ಶುಭಕೋರಿ ಬೀಳ್ಕೊಟ್ಟರು. ಸ್ವಯಂ ತಾವು ಸಂತೋಷ ಹಾಗೂ ದುಃಖ ಬೆರೆತ ಮನಃಸ್ಥಿತಿಯಲ್ಲಿ ವಿಶ್ರಮಿಸಲು ತೆರಳಿದರು.
ಭಗವಾನ್ ಚೈತನ್ಯರು ಹಾಗೂ ಅವರ ಸಂಗಾತಿಗಳು ಹರಿದಾಸ ಠಾಕುರರ ತಿರೋಭಾವಕ್ಕೆ ಶೋಕಪಟ್ಟರೇನೋ ಹೌದು. ಆದರೆ ಹರಿದಾಸರು ಆಧ್ಯಾತ್ಮಿಕ ಲೋಕದಲ್ಲಿನ ಕೃಷ್ಣನ ಧಾಮಕ್ಕೆ ಹೋಗಿದ್ದಾದ್ದರಿಂದ ಸಂತೋಷವನ್ನೂ ಅನುಭವಿಸಿದರು.
ಪುರಿಯ ಹತ್ತಿರ, ಸಮುದ್ರ ತೀರದ ತೋಡಿನಲ್ಲಿ ಬೂದು ಬಣ್ಣದ ಪುಟ್ಟ ದೇವಾಲಯವೊಂದಿದೆ. ಅದು ತೋಟಾ ಗೋಪೀನಾಥನ ಆಲಯ. ಈ ದೇಗುಲದಿಂದ ನೀವು ಸಮುದ್ರದ ಕಡೆ ಹೊರಟರೆ ಹಾದಿಯಲ್ಲಿ ನೀವು ಹರಿದಾಸ ಠಾಕುರರ ಸಮಾಧಿಯನ್ನು ಕಾಣಬಹುದು. ಅವರ ಪುಣ್ಯದಿನದ ಸಂಕೇತವಾಗಿ ಭಕ್ತರು ಪ್ರತಿವರ್ಷ ಆ ಸ್ಥಳದಲ್ಲಿ ಹಬ್ಬವನ್ನು ಆಚರಿಸುತ್ತಾರೆ.

ಸಮಾಧಿಯ ಒಂದು ಪಾರ್ಶ್ವದ ಗೋಡೆಗೆ ಹಚ್ಚಿರುವ ಅಮೃತ ಶಿಲೆಯ ಫಲಕವೊಂದರ ಮೇಲೆ ಭಕ್ತಾಗ್ರಣಿ ಭಕ್ತಿ ವಿನೋದ ಠಾಕುರರು (1838-1914) ರಚಿಸಿರುವ ಪದ್ಯವನ್ನು ಕೆತ್ತಲಾಗಿದೆ. ಒಬ್ಬ ಮಹಾನ್ ಭಕ್ತನ, ಒಬ್ಬ ಧೀಮಂತ ವೈಷ್ಣವನ ತಿರೋಭಾವವಾದಂದು ಭಗವಾನ್ ಚೈತನ್ಯರು ಹಾಗೂ ಅವರ ಸಂಗಾತಿಗಳು ಹೇಗೆ ಹರ್ಷಿಸಿದರು ಎಂಬುದನ್ನು ಆ ಪದ್ಯ ಹೇಳುತ್ತದೆ.
ವೈಷ್ಣವಗೆ ಮರಣವುಟೆಂಬ ಮಾತು ಬದಕಲು ವೈಷ್ಣವರು ಸಾಯುವುದು ಬದಕಲು, ಬದುಕಿದ್ದು ಹರಿನಾಮ ಪ್ರಸಾರ ಮಾಡಲು.






Leave a Reply