ಅತ್ಯಂತ ವೇಗದಿಂದ ಓಡುವ ಮನಸ್ಸಿನ ಆಸೆಗಳಿಗೆ ಕಡಿವಾಣ ಹಾಕಲು ಒಂದೇ ಒಂದು ಮಾರ್ಗವಿದೆ. ಅದೇ ನಮ್ಮ ಮನವನ್ನು ಕೃಷ್ಣನಲ್ಲಿ ಇಟ್ಟುಕೊಳ್ಳುವುದು. ಭಗವಂತನಲ್ಲಿ ಮನಸ್ಸು ನೆಟ್ಟರೆ ಅದು ಅನ್ಯ ದಿಕ್ಕುಗಳತ್ತ ಓಡುವುದನ್ನು ತಪ್ಪಿಸಬಹುದು. ಲೌಕಿಕ ಆಸೆಗಳಿಂದ ಮುಕ್ತವಾಗಿ ಕೃಷ್ಣನಲ್ಲಿಯೇ ಮನ ನೆಲೆಸಿದರೆ ಮನಸ್ಸಿನ ನಿಯಂತ್ರಣ ಸಾಧ್ಯ.
ಈ ಮನಸ್ಸಿದೆಯಲ್ಲ, ಅದು ಐಹಿಕವಾದುದು. ಏಕೆಂದರೆ ಅದು ಒಳ್ಳೆಯತನದ ಪರಿವರ್ತನೆಯ ಉತ್ಪನ್ನ. ವಿಧವಿಧವಾದ ಲೌಕಿಕ ಆಸೆಗಳಿಂದ ಕಲುಷಿತಗೊಳ್ಳುವ ಮನಸ್ಸು ಕ್ರಮೇಣ ಕೀಳು ಮಟ್ಟಕ್ಕೆ ಇಳಿಯುತ್ತದೆ. ಕಾಮ ಏಷ: ಕ್ರೋಧ ಏಷಃ ರಜೋ ಗುಣ ಸಮುದ್ಭವಃ ಮನಸ್ಸು ಕ್ಷೀಣಿಸಿದಾಗ, ಅದು ಒಳ್ಳೆಯತನದಿಂದ ರಜೋ ಗುಣ ಮಟ್ಟಕ್ಕೆ ಇಳಿದುಬಿಡುತ್ತದೆ. ರಜೋ ಗುಣವೆಂದರೆ ಕೀಳು ಮಟ್ಟದ ಆಸೆಗಳು. ಅದಕ್ಕೆ ಕೊನೆಯೇ ಇಲ್ಲ. ಈ ಆಸೆಗಳು ಸಾಕಾರಗೊಳ್ಳದಿದ್ದರೆ, ಕ್ರೋಧ ಉಂಟಾಗುತ್ತದೆ. ಈ ರೀತಿ ಕಾಮ, ಕ್ರೋಧ, ಲೋಭ, ಮೋಹ, ಮಾತ್ಸರ್ಯ ಪ್ರಾಮುಖ್ಯವೆನಿಸಿಕೊಳ್ಳುತ್ತವೆ. ಈ ಕಾಮ, ಕೋಪ, ದುರಾಸೆ, ಮಾಯೆ ಮತ್ತು ಅಸೂಯೆಗಳಿಗೆ ನಾವು ದಾಸರಾಗಿಬಿಡುತ್ತೇವೆ.
ಮನಸ್ಸು ಹೀಗೆ ಕ್ರಮೇಣ ಕೀಳು ಮಟ್ಟಕ್ಕೆ ಹೋಗುತ್ತದೆಯಲ್ಲ ಅದನ್ನೇ ಮಾಯೆ ಎನ್ನುವರು. ಮನಸ್ಸಿನ ವ್ಯವಹಾರವೇ ಸಂಕಲ್ಪ ಮತ್ತು ವಿಕಲ್ಪ. ಏನನ್ನಾದರೂ ಮಾಡುವುದರ ನಿರ್ಧಾರವೇ ಸಂಕಲ್ಪ. ಏನನ್ನಾದರೂ ತಿರಸ್ಕರಿಸುವುದೇ ವಿಕಲ್ಪ. ಎಲ್ಲರಿಗೂ ಮನಃಶಾಂತಿ ಬೇಕು. ಆದರೆ ಲೌಕಿಕ ಮನಸ್ಸಿನ ಸ್ವಭಾವವೇ ಅಶಾಂತಿ.
ಮನಸ್ಸಿಗೆ ಕಡಿವಾಣ ಹಾಕಲು ಯಾಂತ್ರಿಕ ಪ್ರಯತ್ನವೊಂದಿದೆ. ಅದೇ ಯೋಗ ವಿಧಾನ. ಈ ಯೋಗದಿಂದ ಇಂದ್ರಿಯಗಳನ್ನು ನಿಯಂತ್ರಿಸಿಕೊಳ್ಳುವುದು ನಿಮಗೆ ಸಾಧ್ಯವಾದರೆ ಪುನಃ ನಿಮ್ಮನ್ನು ಆಧ್ಯಾತ್ಮಿಕ ಸ್ಥಾನದಲ್ಲಿ ಇರಿಸಬಹುದು. ಅದೇ ಯೋಗದ ಉದ್ದೇಶ. ಚಂಚಲ ಮನಸ್ಸುಳ್ಳವರಿಗೆ ಯೋಗವನ್ನು ಶಿಫಾರಸು ಮಾಡುವರು.
ಹಾಗೆ ನೋಡಿದರೆ, ಎಲ್ಲರ ಮನಸ್ಸೂ ಚಂಚಲವೇ. ಅದನ್ನು ಶಾಂತ ಸ್ಥಿತಿಗೆ ತರುವುದು ಕಷ್ಟ. ಆಸೆಗಳು ಇರುವವರೆಗೆ, ಮನಸ್ಸನ್ನು ಸಂಪೂರ್ಣ ಶಾಂತಿ ಮತ್ತು ಪ್ರಶಾಂತ ಸ್ಥಿತಿಗೆ ತರುವುದು ಸಾಧ್ಯವಿಲ್ಲ. ಪುಣ್ಯವಂತರೂ ಕೂಡ ನೆಮ್ಮದಿಯಿಂದಿಲ್ಲ ಎಂದು ಕವಿರಾಜ ಗೋಸ್ವಾಮಿಯವರು ಚೈತನ್ಯ ಚರಿತಾಮೃತದಲ್ಲಿ ಬರೆದಿದ್ದಾರೆ. ಪಾಪಿಗಳಿಗಂತೂ ಮನಃಶಾಂತಿ ಇಲ್ಲವೇ ಇಲ್ಲ. ಆದರೆ ಪುಣ್ಯವಂತರಿಗೂ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಸಾಧ್ಯವಿಲ್ಲ. ಪಾಪಿಗಳೋ, ಪುಣ್ಯವಂತರೋ ಲೌಕಿಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಅಪೇಕ್ಷಿಸುವವರು ಕೂಡ ಮನೋ ನಿಯಂತ್ರಣ ಮಾಡಲಾರರು.
ಪುಣ್ಯ ಕಾರ್ಯಗಳಲ್ಲಿ ಆಸಕ್ತರಾಗಿರುವವರನ್ನು ಕರ್ಮಿಗಳೆನ್ನುತ್ತಾರೆ. ಪುಣ್ಯಕಾರ್ಯ ಅಥವಾ ಪಾಪಕಾರ್ಯಗಳೆರಡರಲ್ಲಿಯೂ ಆಸಕ್ತಿ ಇಲ್ಲದವರು ಎಲ್ಲ ಕ್ರಿಯೆಗಳನ್ನೂ ಸ್ಥಗಿತಗೊಳಿಸಲು ಅಪೇಕ್ಷಿಸುತ್ತಾರೆ. ಉದಾಹರಣೆಗೆ, ಬೌದ್ಧ ತತ್ತ್ವವು ನಿರ್ವಾಣದ ಬಗೆಗೆ ಹೇಳುತ್ತದೆ, “ಮನಸ್ಸಿನ ಕ್ರಿಯಾಶೀಲತೆ ಅಥವಾ ಆಸೆಗಳನ್ನು ಸ್ಥಗಿತಗೊಳಿಸಿ.” ಆದರೆ, ಧ್ಯಾನ ಮಾಡಲು ಪ್ರಯತ್ನಿಸಿದರೂ ಅಂತಹ ಸ್ಥಿತಿಯಲ್ಲಿಯೂ ಮನೋ ನಿಗ್ರಹ ಸಾಧ್ಯವಿಲ್ಲ. ಯೋಗಿಗಳಿಗೇ ಮನೋ ನಿಯಂತ್ರಣ ಸಾಧ್ಯವಿಲ್ಲದಿರುವಾಗ ಸಾಮಾನ್ಯರ ಬಗೆಗೆ ಹೇಳುವುದೇನಿದೆ?
ಮನಸ್ಸಿನ ನಿಯಂತ್ರಣ
ಮನಸ್ಸಿನ ನಿಗ್ರಹಕ್ಕೆ ಯೋಗಾಭ್ಯಾಸ ಮಾಡು ಎಂದು ಕೃಷ್ಣನು ಅರ್ಜುನನಿಗೆ ಹೇಳಿದಾಗ ಅವನು ನಿರಾಕರಿಸುತ್ತಾನೆ. “ನನ್ನ ಪ್ರೀತಿಯ ಕೃಷ್ಣ, ಯೋಗಾಭ್ಯಾಸದ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ನೀನು ಸೂಚಿಸುತ್ತಿರುವೆ. ನಾನೊಬ್ಬ ಕೌಟುಂಬಿಕ ವ್ಯಕ್ತಿಯಾಗಿರುವುದರಿಂದ ಅಂತಹ ಸಾಧ್ಯತೆಗಳಿಲ್ಲ. ಅರಸು ಮನೆತನಕ್ಕೆ ಸೇರಿರುವುದರಿಂದ ನಾನೋರ್ವ ರಾಜಕಾರಣಿ. ನಾನು ರಾಜ್ಯದ ಆಡಳಿತವನ್ನೂ ನೋಡಿಕೊಳ್ಳಬೇಕಾಗುತ್ತದೆ. ಅಲ್ಲದೆ. ಕೌಟುಂಬಿಕ ಜೀವನದಲ್ಲಿ ಲೌಕಿಕ ಆಸಕ್ತಿಯೂ ಇದೆ. ಆದುದರಿಂದ ಮನೋ ನಿಗ್ರಹ ಹೇಗೆ ಸಾಧ್ಯ?”
ಅರ್ಜುನ ನೇರವಾಗಿಯೇ ಹೇಳುತ್ತಾನೆ, “ನನ್ನ ಪ್ರೀತಿಯ ಕೃಷ್ಣನೇ, ಮನಸ್ಸು ತುಂಬ ಚಂಚಲವೆಂದು ನನಗನಿಸುತ್ತದೆ, ಅದು ಪ್ರಬಲವಾದುದು. ನನ್ನ ಮನಸ್ಸನ್ನು ನಿಯಂತ್ರಿಸಲು ಅಪೇಕ್ಷಿಸುವೆ. ಆದರೆ ಅದು ನನ್ನ ಹಿಡಿತಕ್ಕೆ ಬರಲೊಲ್ಲದು. ಇದು ನನ್ನ ಸ್ಥಿತಿ. ಮನಸ್ಸನ್ನು ನಿಯಂತ್ರಿಸು ಎಂದು ನೀನು ಹೇಳುತ್ತಿದ್ದರೂ ಅದು ಗಾಳಿಯನ್ನು ನಿಯಂತ್ರಿಸುವುದಕ್ಕಿಂತ ಕಷ್ಟ.” ಅರ್ಜುನ ಮನಸ್ಸನ್ನು ಚಂಡಮಾರುತಕ್ಕೆ ಹೋಲಿಸುತ್ತಾನೆ. ಚಂಡಮಾರುತಕ್ಕೆ ಕಡಿವಾಣ ಸಾಧ್ಯವೇ? ಆದುದರಿಂದ ಅವನು ಮನಸ್ಸನ್ನು ನಿಗ್ರಹಿಸಬೇಕೆಂಬ ಕೃಷ್ಣನ ಸೂಚನೆಯನ್ನು ತಿರಸ್ಕರಿಸುತ್ತಾನೆ. ಆದರೆ ಕೃಷ್ಣನು ಸುಲಭವಾಗಿ ಒಪ್ಪುವುದಿಲ್ಲ. ಅವನು ಅರ್ಜುನನನ್ನು ಉತ್ತೇಜಿಸಲು ಪ್ರಯತ್ನಿಸುತ್ತಾನೆ, “ನಿರಾಶೆ ಬೇಡ. ಏಕೆಂದರೆ ನಿನ್ನ ಮನಸ್ಸು ಸದಾ ನನ್ನಲ್ಲಿಯೇ ಕೇಂದ್ರೀಕೃತವಾಗಿರುತ್ತದೆ.” ಅರ್ಜುನ ಏನೇ ಆಗಿರಬಹುದು, ಆದರೆ ಅವನು ಸದಾ ಕೃಷ್ಣನ ಬಗೆಗೆ ಯೋಚಿಸುತ್ತಾನೆ, ಸದಾ ಕೃಷ್ಣನೊಂದಿಗಿರುತ್ತಾನೆ. ಅವನಿಗೆ ಕೃಷ್ಣನಲ್ಲದೆ ಬೇರೆ ಏನೂ ಗೊತ್ತಿಲ್ಲ. ಅದೇ ಶ್ರೇಷ್ಠ ಯೋಗಿಯ ರೀತಿ. ಇಲ್ಲವಾದರೆ, ಕಾಮ, ಕ್ರೋಧ, ಲೋಭ, ಮೋಹ ಮತ್ತು ಮಾತ್ಸರ್ಯದಿಂದ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಾಧ್ಯವಿಲ್ಲ.
ಮನಸ್ಸು ಚಂಚಲ, ಸದಾ ಏನನ್ನಾದರೂ ಅಪೇಕ್ಷಿಸುತ್ತಿರುತ್ತದೆ. ಆದುದರಿಂದ ಮನೋ ನಿಗ್ರಹಕ್ಕೆ ಅತ್ಯುತ್ತಮ ಮಾರ್ಗವೆಂದರೆ ಕೃಷ್ಣ ಪ್ರಜ್ಞೆಯನ್ನು ಹರಡುವ ಆಸೆ ಹೊಂದುವುದು. “ನಿಮ್ಮ ಆಸೆಯನ್ನು ಕೃಷ್ಣನ ಕೆಲಸದಲ್ಲಿ ತೊಡಗಿಸಿ” ಎಂದು ನರೋತ್ತಮ ದಾಸ ಠಾಕುರ ಅವರು ಹೇಳಿದ್ದಾರೆ.
ಆಸೆಯಿಂದ ಮುಕ್ತರಾಗುವುದು ಸಾಧ್ಯವಿಲ್ಲ. “ಆಸೆಯೇ ಇಲ್ಲದಂತೆ ಬಾಳಿ” ಎಂದು ಕೆಲವರು ಬೋಧಿಸಿದ್ದಾರೆ. ಅದು ಹೇಗೆ ಸಾಧ್ಯ? ಆಸೆ ಪಡದ ಮನುಷ್ಯ ಇರುವುದು ಸಾಧ್ಯವೇ? ಆಸೆ ಅಥವಾ ಅಪೇಕ್ಷೆ ಇಲ್ಲವಾದರೆ ಬದುಕೇ ಇಲ್ಲ. ಜೀವಿಯಾಗಿರುವವರೆಗೂ ಆಸೆ ಇರಲೇ ಬೇಕು. ಪ್ರಸ್ತುತದಲ್ಲಿ ನಾವು ಲೌಕಿಕ ಜಗತ್ತಿನಲ್ಲಿ ಆನಂದವಾಗಿರಲು ಆಶಿಸುತ್ತೇವೆ. ಸಂಪತ್ತು, ವಸ್ತು, ಅಂತಸ್ತು ಮುಂತಾದವುಗಳನ್ನು ಪಡೆಯುವ ಆಸೆ ಹೊಂದಿರುತ್ತೇವೆ. ಆದರೆ ನಿಮ್ಮ ಮನಸ್ಸನ್ನು ಕೃಷ್ಣನ ಸೇವೆಯಲ್ಲಿ ತೊಡಗಿಸಿಕೊಂಡರೆ ಅಂತಹ ಅಸೆಗಳಿಗೆ ಕಡಿವಾಣ ಹಾಕಬಹುದು. ಯಾವ ರೀತಿ ಭಗವಂತನ ಸೇವೆಯಲ್ಲಿ ತೊಡಗಬೇಕು? ಕೃಷ್ಣ ಪ್ರಜ್ಞೆಯನ್ನು ಹರಡುವುದು ಹೇಗೆ, ಜನರಿಗೆ ಕೃಷ್ಣನ ಬಗೆಗೆ ಹೇಗೆ ಮನವರಿಕೆ ಮಾಡಿಕೊಡುವುದು, ಅವರನ್ನು ಕೃಷ್ಣನ ಆಶಯಗಳತ್ತ ಹೇಗೆ ಕರೆದೊಯ್ಯುವುದು ಇವುಗಳನ್ನು ಕುರಿತು ಯೋಚನೆ ಮಾಡುತ್ತ ಹೋದರೆ ನಿಮ್ಮ ಮನಸ್ಸು ಕೃಷ್ಣನಲ್ಲಿ ತಲ್ಲೀನವಾಗಿರುತ್ತದೆ. ಈ ರೀತಿ ನೀವು ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ನೋಡಿ, ನೀವು ಆಸೆಯನ್ನು ಸ್ಥಗಿತಗೊಳಿಸಲಾಗದು. ಆಸೆ ಪಡುವುದೇ ಮನಸ್ಸಿನ ವ್ಯವಹಾರ. ಒಂದು ಆಸೆ ನೆರವೇರದಿದ್ದರೆ ಮತ್ತೊಂದರತ್ತ ಮನಸ್ಸು ಓಡುತ್ತದೆ. ಒಂದೇ ಒಂದು ಕ್ಷಣ ಕೂಡ ನೀವು ನಿಮ್ಮ ಮನಸ್ಸನ್ನು ಖಾಲಿ ಬಿಡಲಾಗದು. ಹಾಗೆ ಮಾಡ ಹೊರಟರೆ ಅದು ಬರೀ ಪ್ರಯಾಸವಾದೀತು. ಆದುದರಿಂದ, ನಿಮ್ಮ ಮನಸ್ಸನ್ನು ನಿರಾಕಾರ ಅಥವಾ ಶೂನ್ಯದಲ್ಲಿ ತೊಡಗಿಸುವುದು ತುಂಬ ಕಷ್ಟದಾಯಕ ಎಂದು ಕೃಷ್ಣ ಹೇಳಿದ್ದಾನೆ.
ಯೋಜನೆ ರೂಪಿಸುತ್ತಾ…
ಆಸೆಗಳ ಆಧಾರದ ಮೇಲೆ ಎಲ್ಲರೂ ಯೋಜನೆ ರೂಪಿಸುತ್ತಾರೆ. ಭಾರತ ಸರಕಾರದಲ್ಲಿ ಯೋಜನಾ ಆಯೋಗವಿದೆ. ಅನೇಕ ವರ್ಷಗಳಿಂದ ಅವರು ಸುಮ್ಮನೆ ಯೋಜನೆಗಳನ್ನು ರೂಪಿಸುತ್ತಾರೆ. ಆದರೆ ಯಾವುದೂ ಯಶಸ್ವಿಯಾಗಿಲ್ಲ. ಉದಾಹರಣೆಗೆ ನಮ್ಮ ಪ್ರಮುಖ ಆಹಾರ ಪದಾರ್ಥ ಅಕ್ಕಿ ಬೆಲೆ ವಿಪರೀತ ಏರಿದೆ.
ಲೌಕಿಕ ಪ್ರಭಾವದಿಂದ ಮುಕ್ತರಾಗಲು ನೀವು ಯೋಜನೆಗಳನ್ನು ಮಾಡಬಹುದು. ಆದರೆ ಐಹಿಕ ಪ್ರಕೃತಿ ಎಷ್ಟು ಪ್ರಬಲವೆಂದರೆ ಅದು ನಿಮ್ಮೆಲ್ಲ ಯೋಜನೆಗಳನ್ನು ಭಗ್ನಗೊಳಿಸುತ್ತದೆ ಮತ್ತು ನೀವು ಅಶಾಂತತೆಯಿಂದ ತೊಳಲಾಡುತ್ತೀರಿ. ನೀವು ಯೋಜಿಸಿ, ಆದರೆ ಪ್ರಕೃತಿಯ ಕಠಿಣ ಕಾನೂನು ಅದನ್ನು ಪರಾಜಿತಗೊಳಿಸುತ್ತದೆ. ಯೋಜನೆ ರೂಪಿಸುತ್ತಲೇ ಹೋಗುತ್ತಾರೆ, ಅದು ಸಾಕಾರಗೊಳ್ಳುವುದಿಲ್ಲ. ಆಗ “ಅಧಿಕಾರದಿಂದ ಕೆಳಗಿಳಿಯಿರಿ” ಎಂದು ಗಟ್ಟಿಯಾಗಿ ಹೇಳುವ ದಿನ ಬರುತ್ತದೆ.
ಒಬ್ಬ ವ್ಯಕ್ತಿ ಎಲ್ಲಿಯವರೆಗೆ ಯೋಜನೆಗಳನ್ನು ಮಾಡುತ್ತಾನೆ? ಸಾಯುವವರೆಗೆ. ಆಗ ಅವನು ಎಲ್ಲವನ್ನು ತನ್ನ ಮಕ್ಕಳಿಗೆ ವಹಿಸುತ್ತಾನೆ. ತಾನು ಇಂತಹ ಯೋಜನೆಯನ್ನು ಫಲಪ್ರದಗೊಳಿಸಲಾಗಲಿಲ್ಲ, ಮಕ್ಕಳು ಅದನ್ನು ಯಶಸ್ವಿಗೊಳಿಸಲಿ ಎಂದು ಆಶಿಸುತ್ತಾನೆ. ಅನಂತರ ಮಕ್ಕಳು ತಮ್ಮ ಅಪ್ಪನಂತೆ ಯೋಜನೆಗಳನ್ನು ಮಾಡುತ್ತಲೇ ಹೋಗುತ್ತಾರೆ. ಆದರೆ ಯಾವುದೂ ಸಾಕಾರಗೊಳ್ಳುವುದಿಲ್ಲ. ಅದು ಶಾಸ್ತ್ರದ ತೀರ್ಪು – ದುರಾಶಯಾ ಯೇ ಬಹಿರ್ ಅರ್ಥ ಮಾನಿನಃ, ಯಶಸ್ಸು ಅಸಾಧ್ಯ. ಆದುದರಿಂದ ಯೋಜನೆಯ ಸ್ವೀಕಾರ ಮತ್ತು ತಿರಸ್ಕಾರ, ಸಂಕಲ್ಪ-ವಿಕಲ್ಪ ನಿರಂತರವಾಗಿ ಸಾಗುತ್ತಿರುತ್ತದೆ. ಯೋಜನೆಗಳು ಮಾತ್ರ ವಿಫಲವಾಗುತ್ತಿರುತ್ತವೆ. ಆದರೆ ಯೋಜನೆಗಳನ್ನು ಮಾಡಲು ನಾವು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ನಿರಂತರವಾಗಿ ದೇಹಾಂತರಗೊಳ್ಳುತ್ತಿರುತ್ತೇವೆ. ಸತ್ತ್ವ, ರಜ, ತಮ ಯೋಜನೆಗಳಿವೆ. ವಿವಿಧ ಯೋಜನೆಗಳು ವಿವಿಧ ರೀತಿಯ ದೇಹಗಳನ್ನು ನೀಡುತ್ತವೆ ಮತ್ತು ವಿವಿಧ ಗ್ರಹಗಳಲ್ಲಿ ನೆಲೆಯನ್ನು ತೋರಿಸುತ್ತವೆ. ಹೀಗೆ ಯೋಜನೆ ಮಾಡುವ ವ್ಯವಹಾರ ನಿರಂತರವಾಗಿ ನಡೆದಿದೆ. ಈ ಅಸೀಮಿತ ಯೋಜನೆ ಮಾಡುವ ವ್ಯವಹಾರವನ್ನು ತಡೆಯುವುದು ಹೇಗೆಂದು ಬುದ್ಧಿವಂತರು ಯೋಚಿಸಬೇಕು. ಅಥಾತೋ ಬ್ರಹ್ಮ ಜಿಜ್ಞಾಸಾ. ಅದೇ ಜೀವನ. ಬ್ರಹ್ಮನ್ ಎಂದರೆ ಅತಿ ದೊಡ್ಡದು. ವ್ಯಕ್ತಿಯು ದೊಡ್ಡ ಯೋಜನೆ ಕುರಿತು ಅರಿಯುವ, ಅನ್ವೇಷಿಸುವ ವಿಚಾರ ಮಾಡಿದರೆ ಅವನ ನಿಜವಾದ ಜೀವನ ಆರಂಭ ಎಂದೇ ಅರ್ಥ.
ಸಾಮಾನ್ಯವಾಗಿ ನಾವು “ಅಕ್ಕಿ ಬೆಲೆ ಏನು?” ಅಥವಾ “ಮುಷ್ಕರದ ಪರಿಸ್ಥಿತಿ ಏನು?” ಎಂದು ಕೇಳುತ್ತಿರುತ್ತೇವೆ. ಪತ್ರಿಕೆಗಳಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಆದರೆ ಬ್ರಹ್ಮ ಜಿಜ್ಞಾಸ, ಬ್ರಹ್ಮನ್ ಕುರಿತ ಜಿಜ್ಞಾಸೆ, ಅರಿಯಲು ನಾವು ಎಲ್ಲಿ ವಿಚಾರಿಸಬೇಕು? ಶೇರು ಮಾರುಕಟ್ಟೆಯಲ್ಲಿ? ಖಂಡಿತ ಅಲ್ಲವೆಂದು ನಿಮಗೂ ಗೊತ್ತು. ತದ್ ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್. ಅದು ವೇದಗಳ ಆದೇಶ : ನೀವು ಗುರುವನ್ನು ಹುಡುಕಿಕೊಳ್ಳಬೇಕು. ಗುರುವಿನ ಅರ್ಹತೆ ಏನು? “ಬ್ರಹ್ಮನ್‌ನಲ್ಲಿ ನಿಷ್ಠೆ.” ಶಿಷ್ಯ ಪರಂಪರೆಯಲ್ಲಿ ಬಂದವನೇ ಗುರು. ಯಾವುದೇ ಐಂದ್ರಜಾಲಿಕದಿಂದ ಅಲ್ಲ.
ಕೃಷ್ಣನೇ ಮೂಲ ಗುರು. ಅವನು ಬ್ರಹ್ಮನ ಗುರು. ಕೃಷ್ಣನಿಗಿಂತ ಶ್ರೇಷ್ಠ ಗುರು ಯಾರಿರುವುದು ಸಾಧ್ಯ? ಅವನು ಬ್ರಹ್ಮನಿಗೆ ಬೋಧಿಸಿದ, ಬ್ರಹ್ಮನು ನಾರದರಿಗೆ ಬೋಧಿಸಿದ ಮತ್ತು ನಾರದರು ವ್ಯಾಸದೇವರಿಗೆ ಬೋಧಿಸಿದರು. ವ್ಯಾಸದೇವರು ನಮಗೆ ವೈದಿಕ ಶಾಸ್ತ್ರದ ಬಗೆಗೆ ಎಷ್ಟೊಂದು ಗ್ರಂಥಗಳನ್ನು ನೀಡಿದ್ದಾರೆ. ಇದನ್ನೇ ಪರಂಪರ (ಶಿಷ್ಯ ಪರಂಪರೆ) ಪದ್ಧತಿ ಎನ್ನುವುದು. ವ್ಯಾಸದೇವ ನಮಗೆ ಸಾಮ, ಯಜುರ್, ಋಗ್ ಮತ್ತು ಅಥರ್ವ ವೇದಗಳನ್ನು ನೀಡಿದ್ದಾರೆ. ಅನಂತರ ಅವರು ಅದನ್ನು 108 ಪುರಾಣಗಳಲ್ಲಿ ವಿವರಿಸಿದ್ದಾರೆ ಮತ್ತು ವೇದಾಂತ ಸೂತ್ರದಲ್ಲಿ ಸಂಕ್ಷಿಪ್ತಗೊಳಿಸಿದ್ದಾರೆ. ಅನಂತರ ಅವರು ಶ್ರೀಮದ್ ಭಾಗವತವನ್ನು ಬರೆಯುವ ಮೂಲಕ ವೇದಾಂತ ಸೂತ್ರವನ್ನು ವಿವರಿಸಿದ್ದಾರೆ. ಭಾಗವತದ ಪ್ರತಿಯೊಂದು ಅಧ್ಯಾಯದಲ್ಲಿಯೂ ನೀವು ವ್ಯಾಸದೇವರ ಹೇಳಿಕೆಯನ್ನು ನೋಡಬಹುದು : ಬ್ರಹ್ಮಸೂತ್ರ ಭಾಷ್ಯ-ಬ್ರಹ್ಮಸೂತ್ರ ಆಥವಾ ವೇದಾಂತ ಸೂತ್ರದ ಠೀಕಾ.
ವೇದಾಂತ ಸೂತ್ರವನ್ನು ಕುರಿತ ವ್ಯಾಖ್ಯಾನವಾದ ಬ್ರಹ್ಮಸೂತ್ರ ಭಾಷ್ಯವು ಶಂಕರಾಚಾರ್ಯರ ಭಾಷ್ಯವಲ್ಲ. ಶಂಕರಾಚಾರ್ಯರ ಭಾಷ್ಯವನ್ನು ಶಾರೀರಕ ಭಾಷ್ಯ ಎಂದು ಕರೆಯುವರು. ಆ ವ್ಯಾಖ್ಯಾನವು ಕೃತಕ. ಬ್ರಹ್ಮ ಸೂತ್ರವನ್ನು ವ್ಯಾಸದೇವ ಬರೆದರು. ಮುಂದೆ, ಭವಿಷ್ಯದಲ್ಲಿ ಅಜ್ಞಾನಿಗಳು ಬ್ರಹ್ಮ ಸೂತ್ರವನ್ನು ತಪ್ಪಾಗಿ ಅರ್ಥೈಸುತ್ತಾರೆಂದು ಅರಿತಿದ್ದ ವ್ಯಾಸದೇವರು ಬ್ರಹ್ಮ ಸೂತ್ರಕ್ಕೆ ತಾವೇ ವ್ಯಾಖ್ಯಾನ ಬರೆದರು. ಅದೇ ಶ್ರೀಮದ್ ಭಾಗವತ. ಭಾಷ್ಯಂ ಬ್ರಹ್ಮ ಸೂತ್ರಾಣಾಂ ವೇದಾರ್ಥ ಪರಿಬ್ರಹ್ಮಿತಂ : “ಬ್ರಹ್ಮ ಸೂತ್ರವನ್ನು ಕುರಿತ ಮೂಲ ವ್ಯಾಖ್ಯಾನವಾದ ಶ್ರೀಮದ್ ಭಾಗವತದಲ್ಲಿ ವೇದಗಳ ಸಂಪೂರ್ಣ ಅರ್ಥವನ್ನು ವಿವರಿಸಲಾಗಿದೆ.”
ಶ್ರೀಮದ್ ಭಾಗವತವು ಬ್ರಹ್ಮ ಸೂತ್ರದ ಪದಗಳಿಂದ ಆರಂಭವಾಗುತ್ತದೆ : ಜೀವಸ್ಯ ತತ್ತ್ವ ಜಿಜ್ಞಾಸ. ಬ್ರಹ್ಮ ಸೂತ್ರವು ಅಥಾತೋ ಬ್ರಹ್ಮ ಜಿಜ್ಞಾಸ ಎಂದು ಹೇಳಿದರೆ, ಭಾಗವತವು ಜೀವಸ್ಯತತ್ತ್ವ ಜಿಜ್ಞಾಸ ಎನ್ನುತ್ತದೆ. ಅಂದರೆ, “ಪರಮ ಸತ್ಯದ ಬಗೆಗೆ ಅನ್ವೇಷಿಸುವುದೇ ಜೀವಿಯ ಏಕೈಕ ವ್ಯವಹಾರ.” ಮತ್ತಿನ್ನಾವ ವ್ಯವಹಾರವೂ ಇಲ್ಲ.
ನಿಜವಾದ ಧರ್ಮ
ನಾವು ಧಾರ್ಮಿಕರಾದರೆ ಆರ್ಥಿಕವಾಗಿ ಕೂಡ ಪ್ರಗತಿ ಹೊಂದುವುದು ಸಾಧ್ಯ ಎಂದು ಸಾಧಾರಣವಾಗಿ ಜನರು ಯೋಚಿಸುತ್ತಾರೆ. ನೀವು ಧರ್ಮವನ್ನು ಅಥವಾ ಧಾರ್ಮಿಕ ತತ್ತ್ವವನ್ನು ಅನುಸರಿಸಿದರೆ, ಆರ್ಥಿಕ ಅಭಿವೃದ್ಧಿಯಾಗುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ನಮಗೆ ಧರ್ಮ ಏನೆಂದೇ ಗೊತ್ತಿಲ್ಲ. ಅದೇ ನಿಜವಾದ ಸಮಸ್ಯೆ. ಅದನ್ನು ನಾವು ಕೃಷ್ಣನಿಂದ, ಗುರುವಿನಿಂದ, ಅರಿಯಬೇಕು – ಅಥಾತೋ ಬ್ರಹ್ಮ ಜಿಜ್ಞಾಸ. ಹಾಗಾದರೆ ಗುರು ಏನು ಹೇಳುತ್ತಾರೆ? ಕೃಷ್ಣ ಏನು ಹೇಳುತ್ತಾನೆ? ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ : “ಎಲ್ಲ ಧರ್ಮಗಳನ್ನೂ ತ್ಯಜಿಸಿ ನನಗೆ ಶರಣಾಗತನಾಗು.” ಅದುವೇ ಧರ್ಮ. ಉಳಿದೆಲ್ಲವೂ ಬರೀ ವಂಚನೆ, ಮೋಸ.
ಭಾಗವತದ ಮೂಲ ವ್ಯಾಖ್ಯಾನಕಾರರಾದ ಶ್ರೀಧರ ಸ್ವಾಮಿಯವರು “ಮೋಕ್ಷವೂ ಕಪಟ, ವಂಚನೆ” ಎನ್ನುತ್ತಾರೆ. “ನಾನು ನನ್ನನ್ನು ಶೂನ್ಯವಾಗಿಸಿಕೊಳ್ಳಬೇಕು. ನಾನು ನನ್ನ ವೈಯಕ್ತಿಕ ಅಸ್ತಿತ್ವವನ್ನು ಅಂತ್ಯಗೊಳಿಸಬೇಕು. ನಾನು ಪರಾತ್ಪರನ ಅಸ್ತಿತ್ವದಲ್ಲಿ ವಿಲೀನವಾಗಬೇಕು” ಎಂದು ಯೋಚಿಸುವುದು ಮೋಕ್ಷ. ಅಂತಹ ಆಲೋಚನೆಯು ಕಪಟ, ವಂಚನೆ ಎಂದು ಶ್ರೀಧರ ಸ್ವಾಮಿ ಹೇಳುತ್ತಾರೆ. ಏಕೆಂದರೆ, ನೀವು ಪರಮಾತ್ಮನಲ್ಲಿ ಒಂದಾಗುವುದು ಸಾಧ್ಯವೇ ಇಲ್ಲ. ಭಗವದ್ಗೀತೆಯಲ್ಲಿ ಹೇಳಿರುವಂತೆ ನೀವು ಪರಾತ್ಪರನ ವಿಭಿನ್ನಾಂಶ. ನೀವು ಅದ್ಹೇಗೆ ಅವನಲ್ಲಿ ಒಂದಾಗುತ್ತೀರಿ? “ಅರ್ಜುನ, ಈ ಸಮರ ಭೂಮಿಯಲ್ಲಿ ನೆರೆದಿರುವ ನಾನು, ನೀನು ಮತ್ತು ರಾಜರು, ಸೈನಿಕರು ಎಲ್ಲರೂ ಹಿಂದೆ, ಈಗ ಮತ್ತು ಮುಂದೆ ಅದೇ ವ್ಯಕ್ತಿಗಳು” ಎಂದು ಕೃಷ್ಣನು ಹೇಳಿದ್ದಾನೆ. ಹಾಗಾದರೆ, ಒಂದಾಗುವಿಕೆ ಎಂಬುವುದೆಲ್ಲಿದೆ? ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ಅದೇ ರೀತಿಯ ಪ್ರತ್ಯೇಕ ಅಸ್ತಿತ್ವವಿದೆ.
ವೈಯಕ್ತಿಕ ಅಸ್ತಿತ್ವವನ್ನು ಕಡಿದುಹಾಕುವುದು ಕಲ್ಪನೆಯಷ್ಟೆ. ಅದನ್ನು ಆಧ್ಯಾತಿಕ ಆತ್ಮಹತ್ಯೆ ಎನ್ನಬಹುದು. ಒಬ್ಬ ವ್ಯಕ್ತಿ ಹತಾಶನಾಗಿ ತನ್ನ ಗಂಟಲು ಕತ್ತರಿಸಿಕೊಂಡರೆ ಅಥವಾ ನೇಣು ಹಾಕಿಕೊಂಡರೆ ಅಥವಾ ವಿಷ ಸೇವಿಸಿದರೆ ಅದು ಅವನ ಕೊನೆ ಎಂದು ಅರ್ಥವೇ? ದೇಹಕ್ಕೆ ಅಂತ್ಯ ಕಾಣಿಸಿದರೆ ಅವನ ಅಸ್ತಿತ್ವಕ್ಕೆ ಕೊನೆ ಹಾಡಿದಂತೆಯೇ? ಅದು ಸಾಧ್ಯವಿಲ್ಲ. ಅವನು ಅಜ್ಞಾನಿ, ಮೂರ್ಖ. “ದೇಹವನ್ನು ಸಂಹರಿಸಿದಾಗ ಆತ್ಮ ಕೊಲ್ಲಲ್ಪಡುವುದಿಲ್ಲ.” ಅವನ ಆತ್ಮಹತ್ಯೆಯ ಪರಿಣಾಮವೆಂದರೆ, ಅವನು ಪ್ರಕೃತಿಯ ನಿಯಮವನ್ನು ಉಲ್ಲಂಘಿಸಿದ್ದರಿಂದ ಅವನು ಭೂತವಾಗುತ್ತಾನೆ. ಆತ್ಮಹತ್ಯೆ ಮಾಡಿಕೊಂಡವರು ಭೂತಗಳಾಗುತ್ತಾರೆ. ಅವನಿಗೆ ಲೌಕಿಕ ದೇಹ ದೊರೆಯದು. ಅವನು ಮನಸ್ಸು ಮತ್ತು ಬುದ್ಧಿಯ ಸೂಕ್ಷ್ಮ ದೇಹಿಯಾಗಿ ಉಳಿಯುತ್ತಾನೆ.
ಆದುದರಿಂದ ಭೂತವು ಎಲ್ಲಿಗೆ ಬೇಕಾದರೂ ಅತಿ ವೇಗದಲ್ಲಿ ಹೋಗಬಹುದು. ಏಕೆಂದರೆ ಅದು ಮನದಲ್ಲಿರುತ್ತದೆ. ಮನಸ್ಸಿನ ವೇಗ ಅತಿ ಹೆಚ್ಚು. ನೀವು ಲೌಕಿಕ ದೇಹದಿಂದ ತುಂಬ ತ್ವರಿತವಾಗಿ ಸಾಗಲಾರಿರಿ. ಭೂತಗಳು ಕ್ಷಣದಲ್ಲಿ ಅದ್ಭುತ ಕಾರ್ಯ ನಿರ್ವಹಿಸಬಲ್ಲವು. ಆದರೆ ದೇಹವಿಲ್ಲದ ಕಾರಣ ಅವು ಸಂತೋಷದಿಂದ ಇಲ್ಲ. ಅವುಗಳಿಗೂ ಆನಂದಪಡಬೇಕೆಂಬ ಆಸೆ ಇದೆ. ಭೂತವು ಲೌಕಿಕವಾದಿ. ಯಾವುದೋ ಐಹಿಕ ಆಸೆಯನ್ನು ತನ್ನ ದೇಹದಲ್ಲಿ ಸಾಕಾರಗೊಳಿಸಿಕೊಳ್ಳುವುದು ಸಾಧ್ಯವಾಗದೆ ಅದು ಆತ್ಮಹತ್ಯೆ ಮಾಡಿಕೊಂಡಿರುತ್ತದೆ. ಆದರೆ ಆ ಆಸೆ ಹಾಗೇ ಉಳಿದಿರುತ್ತದೆ ಮತ್ತು ಅದನ್ನು ಈಡೇರಿಸಿಕೊಳ್ಳುವುದು ಅದಕ್ಕೆ ಸಾಧ್ಯವಿಲ್ಲ. ಅದು ಗೊಂದಲಗೊಳ್ಳುತ್ತದೆ. ಹೀಗಾಗಿ ಭೂತಗಳು ಕೆಲವು ಬಾರಿ ದಾಂಧಲೆ ಎಬ್ಬಿಸುತ್ತವೆ.
ಮನಸ್ಸನ್ನು ಉದ್ಯುಕ್ತವಾಗಿಸುವುದು
ಆಸೆಗಳಿಗೆ ಅಂತ್ಯವಿಲ್ಲ. ಆದುದರಿಂದ ಅತ್ಯುತ್ತಮ ಮಾರ್ಗವೆಂದರೆ ನಿಮ್ಮ ಮನಸ್ಸು ಕೃಷ್ಣನಿಗೆ, ಕೃಷ್ಣ ಪ್ರಜ್ಞೆಗೆ ನಿಷ್ಠೆಯಾಗಿರುವುದು. ಕೃಷ್ಣನನ್ನು ತೃಪ್ತಿ ಪಡಿಸಲು ಯೋಜನೆ ರೂಪಿಸುತ್ತ ಕೃಷ್ಣನಲ್ಲಿ ನಿಮ್ಮ ಮನಸ್ಸನ್ನು ತೊಡಗಿಸಿಕೊಂಡರೆ ನೀವು ಸಂತೋಷದಿಂದಿರುವಿರಿ. ಅದು ಬುದ್ಧಿವಂತಿಕೆ. ಎಲ್ಲರೂ ತನಗೆ ಶರಣಾಗಬೇಕು ಎಂಬುವುದು ಕೃಷ್ಣನ ಇಚ್ಛೆ. ಕೃಷ್ಣನು ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ಎಂದು ಹೇಳಿದಾಗ ಅದು ಅರ್ಜುನನಿಗೆ ಮಾತ್ರ ಹೇಳಿದ್ದಲ್ಲ. ಅದು ಪ್ರತಿಯೊಬ್ಬರನ್ನೂ ಉದ್ದೇಶಿಸಿ ಮಾತನಾಡಿದ್ದು. ಅದು ಕೃಷ್ಣನ ಅಪೇಕ್ಷೆ. ಕೃಷ್ಣನ ಅಪೇಕ್ಷೆ ಪೂರೈಸಬೇಕೆಂದಿದ್ದರೆ, ಕೃಷ್ಣನ ಸೇವೆ ಗೈಯಬೇಕೆಂದಿದ್ದರೆ ಕೃಷ್ಣನಿಗೆ ಶರಣಾಗಿ ಎಂದು ನೀವು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕು. ಅದು ಬೋಧನೆ. ಅದು ಅವನಿಗೆ ಬೇಕಾಗಿದೆ.
ಕೃಷ್ಣನನ್ನು ತೃಪ್ತಿ ಪಡಿಸುವುದು ನಿಮ್ಮ ಕೆಲಸ. ನೀವು ಅದನ್ನೇಕೆ ಮಾಡುವುದಿಲ್ಲ? ಮುಕ್ತಿ, ಸಿದ್ಧಿ, ಮತ್ತು ಭುಕ್ತಿ ಎಂದೆಲ್ಲಾ ಏಕೆ ಆಶಿಸುವಿರಿ?
ಪುಣ್ಯ ಕಾರ್ಯಗಳಲ್ಲಿ ತೊಡಗಿರುವವರು ಸ್ವರ್ಗ ಲೋಕಗಳಿಗೆ ಹೋಗುವರು. ಅದು ಇಂದ್ರಿಯ ತೃಪ್ತಿ. ಸ್ವರ್ಗ ಲೋಕಗಳಲ್ಲಿ ನೀವು ಸಾವಿರಾರು ವರ್ಷಗಳ ಕಾಲ ಜೀವಿಸುವಿರಿ. ಅಲ್ಲಿ ನಿಮಗೆ ಅಪ್ಸರೆಯರ ಒಡನಾಟ ಸಿಗುತ್ತದೆ. ಉತ್ತಮ ಮಟ್ಟದ ಬದುಕು ನಿಮ್ಮದಾಗುತ್ತದೆ. ಇವುಗಳೆಲ್ಲಾ ವೈಯಕ್ತಿಕ ಸೌಲಭ್ಯಗಳು, ಭುಕ್ತಿ. ಸ್ವರ್ಗ ಲೋಕಕ್ಕೆ ಹೋಗುವುದೆಂದರೆ ಈ ಗ್ರಹಕ್ಕಿಂತ ಉನ್ನತ ಮಟ್ಟದ ಜೀವನವನ್ನು ಅನುಭವಿಸುವುದು ಎಂದು ಅರ್ಥ. ಈ ಗ್ರಹವು ಭೂರ್‌ಲೋಕ. ನೀವು ಮೇಲಕ್ಕೆ ಹೋಗುತ್ತ ಹೋಗುತ್ತ ಭುವರ್‌ಲೋಕ, ಸ್ವರ್‌ಲೋಕ, ಜನಲೋಕ, ಮಹರ್‌ಲೋಕ, ತಪೋಲೋಕ, ಬ್ರಹ್ಮಲೋಕ ಹೀಗೆ ಅನೇಕ ಲೋಕ ಅಥವಾ ಗ್ರಹಗಳಿಗೆ ಹೋಗುವಿರಿ. ನೀವು ಒಳ್ಳೆಯತನವನ್ನು ಹೆಚ್ಚಿಸಿಕೊಂಡರೆ ನಿಮಗೆ ಹೆಚ್ಚು ಸೌಲಭ್ಯದ ನೆಲೆ ಲಭ್ಯವಾಗುತ್ತದೆ.
ಸಿದ್ಧಲೋಕಕ್ಕೆ ಹೋದರೆ, ನೀವು ಪರಿಪೂರ್ಣ ಯೋಗಿಯಾಗಿಬಿಡುವಿರಿ. ಯೋಗಿಗಳು ಲೌಕಿಕ ಶಕ್ತಿ ಅಥವಾ ಸಿದ್ಧಿಯನ್ನು ಪಡೆಯಲು ಯತ್ನಿಸುವರು. ಉದಾಹರಣೆಗೆ, ಯಾರಿಗಾದರೂ ಪ್ರಾಪ್ತಿ-ಸಿದ್ಧಿ ಲಭಿಸಿದರೆ, ಅವನು ಇಚ್ಛಿಸುವುದು ತತ್‌ಕ್ಷಣ ಸಾಕಾರಗೊಳ್ಳುತ್ತದೆ. ಅವನು ರಸಗುಲ್ಲ ಸೃಷ್ಟಿಸಿದನೆಂದುಕೊಳ್ಳಿ. ಜನರು ಅವನ ಬಳಿಗೆ ಬಂದು “ಓ, ರಸಗುಲ್ಲ ಸೃಷ್ಟಿಸಿದ್ದಾನೆ. ಇವನು ದೇವರು!” ಎಂದು ಉದ್ಗರಿಸುತ್ತಾರೆ. ಎಂತಹ ಮೂರ್ಖತನ! ಯಾರೋ ಯಾವುದನ್ನೋ ನಮ್ಮ ಕಣ್ಣ ಮುಂದೆ ತಂದರೆ ಅವನು ಭಗವಂತ! ಎಂತಹ ಅವಿವೇಕಿತನ!
ಇಂತಹ ಯೋಗಾಭ್ಯಾಸವು ವಂಚನೆ ಎಂದು ಕೃಷ್ಣ ಹೇಳಿದ್ದಾನೆ. ಉನ್ನತ ದರ್ಜೆಯ ಯೋಗಿ ಯಾರು? ಯಾರು ಸದಾ `ಹರೇ ಕೃಷ್ಣ, ಹರೇ ಕೃಷ್ಣ’ ಎಂದು ಕೃಷ್ಣನ ಬಗೆಗೆ ಚಿಂತಿಸುವರೋ ಅವರೇ ನಿಜವಾದ ಯೋಗಿ ಎಂದು ಶ್ರೀ ಹರಿ ಹೇಳಿದ್ದಾನೆ.
ಭಕ್ತನಿಂದ ಕೇಳಿ
ಕೆಲವು ಅಜ್ಞಾನಿಗಳು ಕಪಟ ಯೋಗಿಗಳಿಂದ ವಂಚಿಸಲ್ಪಡುತ್ತಾರೆ. ಅಂತಹ ಯೋಗಿಗಳಿಗೆ ಲೌಕಿಕ ಸ್ಥಾನಮಾನವೂ ಸಿಗುತ್ತದೆ. ಒಂದಷ್ಟು ಐಹಿಕ ಸ್ಥಾನ ಪಡೆಯಲು ಅನೇಕ ಮಾರ್ಗಗಳಿವೆ. ರಾಜಕಾರಣಿ ಕೂಡ ತನ್ನ ಭಾಷಣದಿಂದ ಸಾವಿರಾರು ಜನರನ್ನು ಆಕರ್ಷಿಸಬಹುದು. ಅಂತಹ ಭಾಷಣ ಕೇಳುವುದರಿಂದ ಏನು ಪ್ರಯೋಜನಾ? ಮೊದಲು ನಾವು ಏನು ಲಾಭ ಎನ್ನುವುದನ್ನು ನೋಡಬೇಕು. ಶ್ರವಣಂ ಕೀರ್ತನಂ ವಿಷ್ಣೋಃ. ನಿಮಗೆ ಉಪನ್ಯಾಸ ಕೇಳುವುದರಲ್ಲಿ ಆಸಕ್ತಿ ಇದ್ದರೆ , ವಿಷ್ಣುವಿನ ಬಗೆಗೆ ಕೇಳಿರಿ, ಅಜ್ಞಾನಿಗಳ ಬಗೆಗೆ ಅಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಭಗವಂತನ ಭಕ್ತನಾದ ವೈಷ್ಣವನ ಉಪನ್ಯಾಸ ಕೇಳಿ. ಆಗ ನಿಮಗೆ ಫಲ ಸಿಗುವುದು. ಅವೈಷ್ಣವೋ ಗುರುರ್ ನ ಸ್ಯಾತ್, ಅಂದರೆ ಅವೈಷ್ಣವರು ಗುರುಗಳಾಗುವುದು ಸಾಧ್ಯವಿಲ್ಲ. ಅದು ಶಾಸ್ತ್ರದ ಆದೇಶ.
ಹಾಗಾದರೆ ಯಾರಿಂದ ಕೇಳಬೇಕು? ಷಟ್ ಕರ್ಮ ನಿಪುಣೋ ವಿಪ್ರೋ ಮಂತ್ರ ತಂತ್ರ ವಿಶಾರದಃ. ಒಬ್ಬ ಬ್ರಾಹ್ಮಣನು ಪಠಣ, ಪಾಠಣ, ಯಜನ, ಯಾಜನ, ದಾನ ಮತ್ತು ಪ್ರತಿಗ್ರಹ ಎಂಬ ಷಟ್ ಕರ್ಮ, ಆರು ಕರ್ತವ್ಯಗಳಲ್ಲಿ ಪರಿಣತನಾಗಿರಬಹುದು. ಪಠಣ ಎಂದರೆ ಬ್ರಾಹ್ಮಣನು ವೈದಿಕ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡ ವಿದ್ವಾಂಸ. ಪಾಠಣ ಎಂದರೆ ಅವನು ವೈದಿಕ ಸಾಹಿತ್ಯವನ್ನು ಇತರರಿಗೂ ಬೋಧಿಸಬೇಕು ಎಂದು ಅರ್ಥ. ಹಿಂದಿನ ಸಂಪ್ರದಾಯದಂತೆ ಬ್ರಾಹ್ಮಣರು ಯಾರ ಬಳಿಯೂ ಉದ್ಯೋಗ ಪಡೆಯಬಾರದು. ಅವರು ಎಲ್ಲಿಯಾದರೂ ಕುಳಿತು ವೈದಿಕ ಸಾಹಿತ್ಯ ಬೋಧಿಸಲು ಶಾಲೆ ಆರಂಭಿಸುತ್ತಿದ್ದರು. ಶಿಷ್ಯರು ಮನೆ ಮನೆಗಳಿಗೆ ಹೋಗಿ ಭಿಕ್ಷೆ ತರುತ್ತಿದ್ದರು. ಅದರಲ್ಲಿ ಅಡುಗೆ ಮಾಡಿ, ಕೃಷ್ಣನಿಗೆ ಅರ್ಪಿಸಿ ಆ ಪ್ರಸಾದವನ್ನು ಎಲ್ಲರೂ ಸೇವಿಸುತ್ತಿದ್ದರು. ಅದೇ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ. ಈಗಿನಂತೆ ಅಪಾರ ಮೊತ್ತದ ದೇಣಿಗೆ ನೀಡಿ ಶಾಲೆ, ಕಾಲೇಜು ಪ್ರವೇಶ ಗಿಟ್ಟಿಸುವುದಲ್ಲ ಮತ್ತು ಅವಿವೇಕದ ಶಿಕ್ಷಣ ಪಡೆಯುವುದಲ್ಲ. ಉತ್ತಮ ದರ್ಜೆಯ ಶಿಕ್ಷಣವೆಂದರೆ, ಯಾವುದೆ ಶುಲ್ಕವಿಲ್ಲದೆ, ಸಾಕ್ಷಾತ್ಕಾರಗೊಂಡ ಆತ್ಮದಿಂದ ಶಿಕ್ಷಣ ಪಡೆಯುವುದು.
ಆದುದರಿಂದ ನಾವು ವೈಷ್ಣವನಾದ ಗುರುವನ್ನು ಹುಡುಕಬೇಕು. ಶಾಸ್ತ್ರ ಹೇಳುತ್ತದೆ ಬ್ರಾಹ್ಮಣನು ಷಟ್ ಕರ್ಮಗಳಲ್ಲಿ ನಿಪುಣನಾಗಿರುವುದಲ್ಲದೆ ಮಂತ್ರ-ತಂತ್ರ ವಿಶಾರದನಾಗಿರಬೇಕು. ಆದರೂ ಅವನು ಅವೈಷ್ಣವನಾಗಿದ್ದರೆ ಅವನು ಗುರುವಾಗಲಾರನು. ಅವೈಷ್ಣವನು ದೇವೋತ್ತಮ ಪರಮ ಪುರುಷ ವಿಷ್ಣುವಿನಲ್ಲಿ ನಂಬಿಕೆ ಇಡುವುದಿಲ್ಲ. ಮತ್ತು ದೇವತೆಗಳಲ್ಲಿ ಶ್ರೇಷ್ಠರಾದ ಶಿವ ಮತ್ತು ಬ್ರಹ್ಮರು ವಿಷ್ಣುವಿಗೆ ಸಮಾನರೆಂದು ನಂಬುತ್ತಾರೆ. ಉದಾಹರಣೆಗೆ, ರಾವಣನು ಶ್ರೇಷ್ಠ ವಿದ್ವಾಂಸ ಮತ್ತು ಬ್ರಾಹ್ಮಣ ಪುತ್ರನಾಗಿದ್ದ. ಅವನು ಆರ್ಥಿಕವಾಗಿಯೂ ಪ್ರಗತಿ ಸಾಧಿಸಿದ್ದ. ಅವೈಷ್ಣವನಾಗಿದ್ದೇ ಅವನ ಏಕೈಕ ಅಪರಾಧವಾಗಿತ್ತು. ಅವನು ಶ್ರೀರಾಮನಿಗೆ ಗೌರವ ಕೊಡಲಿಲ್ಲ. ಆದುದರಿಂದ ಅವನು ರಾಕ್ಷಸ ಮತ್ತು ಅನಾಗರಿಕನಾದ.
ದೇವೋತ್ತಮ ಪರಮ ಪುರುಷ ಶ್ರೀ ವಿಷ್ಣುವಿನ ಭಕ್ತರಲ್ಲದವರು ಗುರುವಾಗುವುದು ಸಾಧ್ಯವಿಲ್ಲ. ವೈಷ್ಣವಃ ಶ್ವಪಚೋ ಗುರುಃ ಶ್ವಪಚ ಎಂದರೆ ನಾಯಿ ಭಕ್ಷಕರು, ಅತಿ ಕೀಳು ದರ್ಜೆಯವರು. ಚಂಡಾಲೋ ಅಪಿ ದ್ವಿಜ ಶ್ರೇಷ್ಠೋ ಹರಿ ಭಕ್ತಿ ಪರಾಯಣಃ. ಅಂತಹವರು ಹೇಗಾದರೂ ವೈಷ್ಣವರಾದರೆ ಅವರು ಗುರುವಾಗಬಹುದು. ಆದರೆ ಪರಿಣತ ಬ್ರಾಹ್ಮಣನು ಅವೈಷ್ಣವನಾಗಿದ್ದರೆ ಅವನು ಗುರುವಾಗುವಂತಿಲ್ಲ.
“ಯಾರು ನನ್ನ ಆಶ್ರಯ ಪಡೆಯುವರೋ ಅವರು ಪಾಪ ಯೋನಿ, ಚಂಡಾಲರಾಗಿದ್ದರೂ ಅವರು ಭಗವದ್ಧಾಮಕ್ಕೆ ಮರಳಲು ಅರ್ಹರು” ಎಂಬ ಕೃಷ್ಣನ ಮಾತನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಒಬ್ಬ ವೈಷ್ಣವನು ಕೆಳ ಮಟ್ಟ ಅಥವಾ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿರುವುದು ಮುಖ್ಯವಲ್ಲ. ಅಂತಹ ಪರಿಗಣನೆಯು ನಾರಕಿ ಬುದ್ಧಿ. ಶ್ರೀ ಸನಾತನ ಗೋಸ್ವಾಮಿ ಅವರ ಬರೆಹ ಈ ಸಂದರ್ಭದಲ್ಲಿ ಗಮನಾರ್ಹ. ಒಬ್ಬ ಅವೈಷ್ಣವ ಅಥವಾ ಮಾಯಾವಾದಿಯು ಭಾಗವತ ಅಥವಾ ಭಗವದ್ಗೀತೆ ಬಗೆಗೆ ಮಾತನಾಡಿದರೆ ಅವನ ಉಪನ್ಯಾಸವನ್ನು ಕೇಳಲೇಬಾರದು. ಅದರಿಂದ ದೂರ ಸರಿಯಬೇಕು, ಏಕೆಂದರೆ ಅದು ತಪ್ಪು ಅರ್ಥವನ್ನು ಕಲ್ಪಿಸುತ್ತದೆ. ಚೈತನ್ಯ ಮಹಾಪ್ರಭುಗಳು ಅದನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು, “ಮಾಯಾವಾದ ನಿರಾಕಾರ- ವಾದಿಯಿಂದ ಭಾಗವತ ಅಥವಾ ಭಗವದ್ಗೀತೆ ಬಗೆಗೆ ಯಾರಾದರೂ ಕೇಳಿದರೆ ಅಂತಹವರು ನಾಶವಾದಂತೆ.” ಆದುದರಿಂದ ವೈಷ್ಣವನನ್ನು ಹುಡುಕಿ, ಅವನ ಬಳಿಗೆ ಹೋಗಿ, ಅವನನ್ನು ಗುರುವಾಗಿ ಸ್ವೀಕರಿಸಬೇಕು. ಅವನಿಂದ ಕಲಿತು ಬದುಕನ್ನು ಫಲಪ್ರದಗೊಳಿಸಿಕೊಳ್ಳಬೇಕು.