ಚಳಿಗಾಲಕ್ಕೆ ಆರೋಗ್ಯಕರ ಸೂಪ್‌ಗಳು

ಮಳೆಯಿರಲಿ, ಚಳಿಯಿರಲಿ ಬಿಸಿ ಬಿಸಿಯಾದ ಸೂಪ್‌ ಸೇವಿಸಿದರೆ ಪುಷ್ಟಿಕರವೂ, ರೋಗನಿವಾರಕವೂ ಜೊತೆಗೆ ರುಚಿಕರವಾದ ಆಹಾರ ಪ್ರಕಾರವೂ ಹೌದು. ಸೂಪುಗಳು ಈಚೆಗೆ ಅತ್ಯಂತ ಜನಪ್ರಿಯ, ಮಕ್ಕಳಿಗೆ ಸೂಪೆಂದರೆ ಖುಷಿ. ಊಟದ ಮೊದಲು ಸೇವಿಸುವ ಸೂಪ್‌ಗಳು ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ನಮ್ಮ ಆರೋಗ್ಯ ವೃದ್ಧಿಸುತ್ತದೆ. ಅಲ್ಲದೆ ಇದನ್ನು ಹೆಚ್ಚು ಖರ್ಚಿಲ್ಲದೆ ಮನೆಯಲ್ಲೇ ಸುಲಭವಾಗಿ ಮಾಡಬಹುದು. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಆಲೂ-ಪಾಲಕ್‌ ಸೂಪ್‌

ಬೇಕಾಗುವ ಪದಾರ್ಥಗಳು :

ಪಾಲಕ್‌ – 1 ಕಟ್ಟು

ಹಸಿಮೆಣಸಿನಕಾಯಿ – 1

ಶುಂಠಿ ಹೆಚ್ಚಿದ ಚೂರು – 1/2 ಚಮಚ

ಜೀರಿಗೆ ಪುಡಿ – 1/2 ಚಮಚ

ಕರಿಮೆಣಸಿನಪುಡಿ – 1/4 ಚಮಚ

ಬೆಣ್ಣೆ – 1 ಚಮಚ

ಕರಿದ ಸಣ್ಣ ಆಲೂಗಡ್ಡೆ ಚೂರು – 8

ಉಪ್ಪು – ರುಚಿಗೆ ತಕ್ಕಷ್ಟು

ಫ್ರೆಶ್‌ ಕ್ರೀಮ್‌ – 1 ಚಮಚ

ಸಕ್ಕರೆ – ಸ್ವಲ್ಪ

ಮಾಡುವ ವಿಧಾನ : ಮೊದಲು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಿನಲ್ಲಿ ಬಿಡಿಸಿ ತೊಳೆದಿಟ್ಟ ಪಾಲಕ್‌ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಐದು ನಿಮಿಷ ಬೇಯಿಸಿ. ಶುಂಠಿ ಮತ್ತು ಬೇಯಿಸಿದ ಪಾಲಕ್‌ ಅನ್ನು ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಿಕೊಳ್ಳಿ. ಒಲೆಯ ಮೇಲೆ ಬಾಣಲೆಯಿಟ್ಟು ಬೆಣ್ಣೆ ಹಾಕಿ, ಬಿಸಿಯಾದಾಗ ರುಬ್ಬಿದ ಪಾಲಕ್‌ ಮಿಶ್ರಣ ಮತ್ತು ಸ್ವಲ್ಪ ನೀರು ಹಾಕಿ ಕುದಿಸಿ. ಅನಂತರ ಜೀರಿಗೆಪುಡಿ, ಕರಿಮೆಣಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಕಿ. ಕೊನೆಯಲ್ಲಿ ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ಹಾಕಿ ಇಳಿಸಿ. ಮೇಲೆ ಫ್ರೆಶ್‌ ಕ್ರೀಮ್‌ ಹಾಕಿ ಅಲಂಕರಿಸಿದರೆ ಬಿಸಿಯಾದ ಆಲೂ- ಪಾಲಕ್‌ ಸೂಪ್‌ ಸವಿಯಲು ಸಿದ್ಧ.

ಟೊಮೆಟೊ ಸೂಪ್‌

ಬೇಕಾಗುವ ಪದಾರ್ಥಗಳು :

ಹಣ್ಣಾದ ಟೊಮೆಟೊ – 8

ಕರಿಮೆಣಸಿನ ಪುಡಿ – 1/2 ಚಮಚ

ಸಕ್ಕರೆ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬೆಣ್ಣೆ – 3 ಚಮಚ

ಬ್ರೆಡ್‌ ಸ್ಲೈಸ್‌ – 2

ಫ್ರೆಶ್‌ ಕ್ರೀಮ್‌ – 2 ಚಮಚ

ಮಾಡುವ ವಿಧಾನ : ಮೊದಲು ಟೊಮೆಟೊವನ್ನು ಚೆನ್ನಾಗಿ ತೊಳೆದು ಅದನ್ನು ಐದು ನಿಮಿಷ ನೀರಿನಲ್ಲಿ ಬೇಯಿಸಿ. ಅನಂತರ ಅದನ್ನು ನೀರಿನಿಂದ ತೆಗೆದು ಅದರ ಸಿಪ್ಪೆಯನ್ನು ಬೇರ್ಪಡಿಸಿ. ಇದನ್ನು ಮಿಕ್ಸಿಯಲ್ಲಿ ರುಬ್ಬಿ ಶೋಧಿಸಿ. ಇದಕ್ಕೆ ಕರಿಮೆಣಸಿನ ಪುಡಿ, ಉಪ್ಪು, ಸಕ್ಕರೆ ಹಾಕಿ ಕುದಿಸಿ. ಬ್ರೆಡ್ಡಿನ ಕಂದುಬಣ್ಣದ ಭಾಗ ತೆಗೆದು ಸಣ್ಣದಾಗಿ ತುಂಡುಮಾಡಿ. ಇದನ್ನು ಬೆಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಸೂಪನ್ನು ಬೌಲ್‌ಗಳಿಗೆ ಹಾಕಿ ಇದರ ಮೇಲೆ ಬೆಣ್ಣೆಯಲ್ಲಿ ಕರಿದ ಬ್ರೆಡ್‌ ಮತ್ತು ಫ್ರೆಶ್‌ ಕ್ರೀಮ್‌ ಹಾಕಿ ಬಳಸಿ.

ವೆಜಿಟೆಬಲ್‌ ಸೂಪ್‌

ಬೇಕಾಗುವ ಪದಾರ್ಥಗಳು :

ಚಿಕ್ಕದಾಗಿ ಹೆಚ್ಚಿದ ಕ್ಯಾರೆಟ್‌ – 1/2 ಕಪ್‌

ಚಿಕ್ಕದಾಗಿ ಹೆಚ್ಚಿದ ಬೀನ್ಸ್‌ – 1/2 ಕಪ್‌

ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ

ಹಸಿ ಬಟಾಣಿ – 1/2 ಕಪ್‌

ಟೊಮೆಟೊ ಪ್ಯೂರಿ – 1 ಕಪ್‌

ಶುಂಠಿ ಪೇಸ್ಟ್‌ – 1/2 ಚಮಚ

ಕಾರ್ನ್‌ಪ್ಲೋರ್‌ – 2 ಚಮಚ

ಕರಿಮೆಣಸಿನ ಪುಡಿ – 1/2 ಚಮಚ

ಹಾಲು – 1/2 ಕಪ್‌

ಬೆಣ್ಣೆ – 3 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ತುರಿದ ಚೀಸ್‌ – 2 ಚಮಚ

ಮಾಡುವ ವಿಧಾನ : ಕುಕ್ಕರಿನಲ್ಲಿ ಬೆಣ್ಣೆಯನ್ನು ಕರಗಿಸಿ. ಅದರಲ್ಲಿ ಶುಂಠಿಪೇಸ್ಟ್‌ ಹಾಕಿ ಫ್ರೈ ಮಾಡಿ, ಅನಂತರ ಹೆಚ್ಚಿದ ಕ್ಯಾರೆಟ್‌, ಬೀನ್ಸ್‌, ಹಸಿಬಟಾಣಿ, ಟೊಮೆಟೊ ಪ್ಯೂರಿ ಮತ್ತು ಬೇಕಾಗುವಷ್ಟು ನೀರು ಹಾಕಿ ಒಂದು ಪ್ರೆಶರ್‌ ಬರಿಸಿ. ಆರಿದ ಮೇಲೆ ಅದನ್ನು ಸ್ವಲ್ಪ ಮಸೆದು ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು, ಕರಿಮೆಣಸಿನ ಪುಡಿ ಹಾಕಿ ಕುದಿಸಿ. ಅರ್ಧ ಕಪ್‌ ಹಾಲಿನಲ್ಲಿ ಕಾರ್ನ್‌ಫ್ಲೋರ್‌ ಮಿಕ್ಸ್‌ ಮಾಡಿ ಕುದಿಯುತ್ತಿರುವ ತರಕಾರಿ ಸೂಪ್‌ಗೆ ಸೇರಿಸಿ 5-6 ನಿಮಿಷ ಕುದಿಸಿ. ಅಲಂಕಾರಕ್ಕೆ ಚೀಸ್‌ ತುರಿದು ಹಾಕಿ. ಬಿಸಿ ಬಿಸಿ ಸೂಪ್‌ ಚಳಿಗೆ ಹಿತವಾಗಿರುತ್ತದೆ.

ಪುದೀನಾ ಸೂಪ್‌

ಬೇಕಾಗುವ ಪದಾರ್ಥಗಳು :

ಪುದೀನಾ – 1/2 ಕಟ್ಟು

ಕೊತ್ತಂಬರಿ ಸೊಪ್ಪು – 1/4 ಕಟ್ಟು

ಕರಿಮೆಣಸಿನಪುಡಿ – 1/4 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬೆಣ್ಣೆ – 1 ಚಮಚ

ಫ್ರೆಶ್‌ ಕ್ರೀಮ್‌ – 1 ಚಮಚ

ಮಾಡುವ ವಿಧಾನ : ಪುದೀನಾ, ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಅನಂತರ ಒಂದು ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ರುಬ್ಬಿದ ಪುದೀನಾ ಮಿಶ್ರಣ ಮತ್ತು ಬೇಕಾಗುವಷ್ಟು ನೀರು, ಉಪ್ಪು, ಕರಿಮೆಣಸಿನಪುಡಿ ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಮೇಲೆ ಫ್ರೆಶ್‌ ಕ್ರೀಮ್‌ನಿಂದ ಅಲಂಕರಿಸಿ.

ಮಸಾಲಾ ಸೂಪ್‌

ಬೇಕಾಗುವ ಪದಾರ್ಥಗಳು :

ಹಣ್ಣಾದ ಟೊಮೆಟೊ – 2

ಕೊತ್ತಂಬರಿ ಸೊಪ್ಪು – ಸ್ವಲ್ಪ

ಗರಂ ಮಸಾಲ – 1 ಚಮಚ

ಸಕ್ಕರೆ – 1 ಚಮಚ

ಬೆಣ್ಣೆ – 2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಟೊಮೆಟೊವನ್ನು ತೊಳೆದು ಗರಂ ಮಸಾಲಾ ಜೊತೆ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಣ್ಣೆ ಬಿಸಿಮಾಡಿ ಇದಕ್ಕೆ ರುಬ್ಬಿದ ಮಿಶ್ರಣ ಮತ್ತು ಬೇಕಾದಷ್ಟು ನೀರು, ಉಪ್ಪು, ಸಕ್ಕರೆ ಹಾಕಿ ಕುದಿಸಿ. ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಿಸಿಯಾದ ಮಸಾಲಾ ಸೂಪ್‌ ಸವಿಯಲು ಸಿದ್ಧ.

ಸ್ವೀಟ್‌ ಕಾರ್ನ್‌ ಸೂಪ್‌

ಇದನ್ನು ಫ್ರೆಶ್‌ ಸ್ವೀಟ್‌ ಕಾರ್ನ್‌ ಇಲ್ಲವೇ ಫ್ರೋಜನ್‌ ಸ್ವೀಟ್‌ ಕಾರ್ನ್‌ನಿಂದ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು :

ಸ್ವೀಟ್‌ ಕಾರ್ನ್‌ – 1 ಕಪ್‌

ಸಣ್ಣಗೆ ಹೆಚ್ಚಿದ ಬೀನ್ಸ್‌ – 1/2 ಕಪ್‌

ಸಣ್ಣಗೆ ಹೆಚ್ಚಿದ ಕ್ಯಾರೆಟ್‌ – 1/2 ಕಪ್‌

ಸಕ್ಕರೆ – 1 ಚಮಚ

ಕರಿಮೆಣಸಿನಪುಡಿ – 1/4 ಚಮಚ

ಕಾರ್ನ್‌ಫ್ಲೋರ್‌ – 2 ಚಮಚ

ಟೊಮೆಟೊ ಸಾಸ್‌ – 1 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಹಾಲು (ಬೇಕಿದ್ದರೆ) – 2 ಚಮಚ

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಕುದಿಸಿ. ಇದಕ್ಕೆ ಅರ್ಧ ಕಪ್‌ ಸ್ವೀಟ್‌ ಕಾರ್ನ್‌, ಹೆಚ್ಚಿದ ಬೀನ್ಸ್‌ ಮತ್ತು ಕ್ಯಾರೆಟ್‌, ಉಪ್ಪು, ಸ್ವಲ್ಪ ಸಕ್ಕರೆ ಹಾಕಿ 10-12 ನಿಮಿಷ ಬೇಯಿಸಿ. ಉಳಿದರ್ಧ ಸ್ವೀಟ್‌ ಕಾರ್ನ್‌ನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ, ರುಬ್ಬಿದ ಮಿಶ್ರಣವನ್ನು ಬೆಂದ ತರಕಾರಿಗೆ ಸೇರಿಸಿ. ಕಾರ್ನ್‌ಫ್ಲೋರ್‌ಗೆ ಸ್ವಲ್ಪ ತಣ್ಣಗಿರುವ ನೀರನ್ನು ಸೇರಿಸಿ ಗಂಟಿಲ್ಲದಂತೆ ಕಲಸಿ. ಇದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಸೇರಿಸಿ ತಳ ಹಿಡಿಯದಂತೆ ಕೈಯಾಡಿಸುತ್ತಿರಿ. ಅಗತ್ಯವಿದ್ದಲ್ಲಿ 2 ಚಮಚ ಹಾಲನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಟೊಮೆಟೊ ಸಾಸ್‌ ಸೇರಿಸಿ ಕೈಯಾಡಿಸಿ ಒಲೆಯಿಂದ ಇಳಿಸಿ. ಖಾರಕ್ಕೆ ಬೇಕಾದಷ್ಟು ಕರಿಮೆಣಸಿನಪುಡಿ ಸೇರಿಸಿ. ಬಿಸಿ ಇರುವಾಗಲೇ ಸೇವಿಸಿ. ಬೇಕಿದ್ದಲ್ಲಿ ಎಣ್ಣೆಯಲ್ಲಿ ಕರಿದ ಬ್ರೆಡ್‌ ಚೂರುಗಳನ್ನು ಹಾಕಿ. ಸ್ವೀಟ್‌ ಕಾರ್ನ್‌ ಸೂಪ್‌ಗೆ ಉಪ್ಪು, ಸಿಹಿ, ಖಾರ ಜಾಸ್ತಿ ಇರಬಾರದು.


ಇದು ನಿಮಗೆ ತಿಳಿದಿರಲಿ

  • ಸೂಪ್‌ನಲ್ಲಿ ಕಡಮೆ ಕ್ಯಾಲರಿಯಿದ್ದು, ಪೌಷ್ಟಿಕಾಂಶ ಅಧಿಕವಾಗಿರುತ್ತದೆ. ಸೂಪ್‌ಗಳನ್ನು ಊಟಕ್ಕೆ ಮೊದಲೇ ಸೇವಿಸುವುದರಿಂದ ಹಸಿವು ಹೆಚ್ಚಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
  • ತರಕಾರಿ ಸೂಪ್‌ ತಯಾರಿಸುವಾಗ ತರಕಾರಿಗಳನ್ನು ತುಂಬ ಹೊತ್ತು ಬೇಯಿಸಬಾರದು.
  • ತರಕಾರಿ ಸೂಪ್‌ಗಳಲ್ಲಿ ಫೈಬರ್‌ ಅಂಶ ಅಧಿಕವಾಗಿರುತ್ತದೆ.
  • ಕಾಲಿಫ್ಲವರ್‌ ಸೂಪ್‌ನಲ್ಲಿ ಖನಿಜಾಂಶ ಸಮೃದ್ಧವಾಗಿರುತ್ತದೆ.
  • ಮಕ್ಕಳಿಗೆ ಸೂಪ್‌ ನೀಡುವಾಗ ಕರಿದ ಪನ್ನೀರ್‌ ಚೂರುಗಳು ಇಲ್ಲವೇ ಹುರಿದ ಬಾದಾಮಿ, ಗೋಡಂಬಿ ಅಥವಾ ಕಡಲೇಬೀಜದ ಚೂರುಗಳನ್ನು ಸೇರಿಸಿದರೆ ಮಕ್ಕಳ ಸೂಪ್‌ ಶಕ್ತಿದಾಯಕ, ಹೆಚ್ಚು ರುಚಿಕರ ಮತ್ತು ಕ್ಯಾಲರಿಯುಕ್ತವೂ ಆಗಿರುತ್ತದೆ.
ಈ ಲೇಖನ ಶೇರ್ ಮಾಡಿ