ಹರಿದಾಸ ಪರಂಪರೆಗೆ ಉತ್ತಮ ಕೊಡುಗೆ ನೀಡಿದವರಲ್ಲಿ ಅನನ್ಯರು ಹೆಳವನಕಟ್ಟೆ ಗಿರಿಯಮ್ಮನವರು. ಅವರು ಅನೇಕ ದೇವರ ನಾಮಗಳನ್ನಲ್ಲದೆ, ಏಳು ವಿಶೇಷ ಕೃತಿಗಳನ್ನೂ ರಚಿಸಿದ್ದಾರೆ. ಅವರ ಜೀವನದ ಕುರಿತು ಕಿರು ಮಾಹಿತಿ ಇಲ್ಲಿದೆ.

ಹೆಳವನಕಟ್ಟೆ ಗಿರಿಯಮ್ಮ ಹರಿದಾಸ ಆಂದೋಲನದಲ್ಲಿ ಒಂದು ಪ್ರಮುಖ ಹೆಸರು. ವೈಷ್ಣವ ಸಮುದಾಯದಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ ಅವರ ಹೆಸರು ಮನೆಮಾತಾಗಿದೆ. ಅವರ ಹಾಡುಗಳನ್ನು ಹಾಡುತ್ತಾ ಭಕ್ತಿಭಾವದಲ್ಲಿ ತಲ್ಲೀನರಾಗುವುದು ಸಾಮಾನ್ಯವಾಗಿದೆ. ಗಿರಿಯಮ್ಮ ಸುಮಾರು ಎಪ್ಪತ್ತಕ್ಕೂ ಹೆಚ್ಚು ಸರಳ, ಸುಂದರ ಭಕ್ತಿ ಭಾವವನ್ನು ಹೊಮ್ಮಿಸುವ ಕೀರ್ತನೆಗಳಲ್ಲದೆ, ಏಳು ವಿಶೇಷ ಕಾವ್ಯಗಳನ್ನು ರಚಿಸಿದ್ದು, ಅವುಗಳೆಲ್ಲ ಜನರ ನಾಲಿಗೆಯಲ್ಲಿ ಕಳೆದ ಇನ್ನೂರು ವರ್ಷಗಳಿಂದ ನಲಿದಾಡುತ್ತಿವೆ.
ಗಿರಿಯಮ್ಮನವರು ಹುಟ್ಟಿದ್ದು ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ. ಅವರು ತಿರುಪತಿ ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಹುಟ್ಟಿದ್ದು. ಭೀಮಪ್ಪ ಜೋಯಿಸ್ ಮತ್ತು ತುಂಗಮ್ಮ ಅವರು ಗಿರಿಯಮ್ಮನವರ ತಂದೆ ತಾಯಿ. ತಂದೆ ವೇದ ವಿದ್ವಾಂಸರಾಗಿದ್ದರು. ಗಿರಿಯಮ್ಮ ಸಹಜವಾಗಿ ಬಾಲ್ಯದಿಂದಲೇ ಭಕ್ತಿಭಾವವನ್ನು ಬೆಳೆಸಿಕೊಂಡಿದ್ದರು. ಹೆಳವನಕಟ್ಟೆ ಮಂದಿರದ ದೇವರು ಶ್ರೀ ರಂಗನಾಥ ಸ್ವಾಮಿಯೇ ಅವರ ಆರಾಧ್ಯದೈವನಾಗಿದ್ದ. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಗಿರಿಯಮ್ಮ ತನ್ನ ತಂದೆ ತಾಯಿಯನ್ನು ಕಳೆದುಕೊಂಡರು. ಚಿಕ್ಕಮ್ಮ, ಚಿಕ್ಕಪ್ಪ ಅವರನ್ನು ಪ್ರೀತಿಯಿಂದ ಬೆಳೆಸಿದರು.
ಆ ದಿನಗಳ ಸಂಪ್ರದಾಯದಂತೆ ಗಿರಿಯಮ್ಮ ಅವರ ವಿವಾಹವು 12ನೇ ವಯಸ್ಸಿನಲ್ಲಿಯೇ ತಿಮ್ಮಪ್ಪರಸನೊಂದಿಗೆ ನಡೆಯಿತು. ಆದರೆ ಗಿರಿಯಮ್ಮಗೆ ಸಾಂಸಾರಿಕ ಜೀವನದಲ್ಲಿ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ವಿನಮ್ರದಿಂದ ತನ್ನ ಅತ್ತೆ, ಮಾವನಲ್ಲಿ ಮನವಿಮಾಡಿಕೊಂಡು ತನ್ನ ಗಂಡನಿಗೆ ಎರಡನೆಯ ಮದುವೆಯನ್ನು ಮಾಡಿಸಿದರು. ತನ್ನ ಜೀವನವನ್ನು ಶ್ರೀ ರಂಗನಾಥನ ಸೇವೆಗೆ ಮುಡುಪಾಗಿಟ್ಟರು.
ಹೆಳವನಕಟ್ಟೆ ಹೆಸರು
ಹೆಳವನಕಟ್ಟೆ ಹೆಸರು ಬರಲು ಕಾರಣ – ಕಮಾರಹಳ್ಳಿ ಗ್ರಾಮದಲ್ಲಿ ಒಬ್ಬ ಹೆಳವನು ಭಿಕ್ಷೆಗಾಗಿ ಕೂರುತ್ತಿದ್ದನು. ಅಲ್ಲಿನ ಜನರು ಅವನು ಕೂರುತ್ತಿದ್ದ ಸ್ಥಳದಲ್ಲಿಯೇ ತಮ್ಮ ಗೋವುಗಳನ್ನು ಬಿಟ್ಟು ತಮ್ಮ ಕೆಲಸಗಳಿಗೆ ಹೋಗುತ್ತಿದ್ದರು. ಅವನು ನಿಷ್ಠೆಯಿಂದ ನೋಡಿಕೊಳ್ಳುತ್ತಿದ್ದನು. ಅದನ್ನು ನೋಡಿ ಜನರು ಅವನಿಗೆ ಒಂದು ಗುಡಿಸಲು ಹಾಕಿಕೊಟ್ಟರು ಮತ್ತು ಅವನಿಗೆ ಹಾಲು ಕೊಡುತ್ತಿದ್ದರು. ಅವನ ವಿನಂತಿಯಂತೆ ಗುಡಿಸಲ ಪಕ್ಕದಲ್ಲಿ ಗೋಕಟ್ಟೆ ನಿರ್ಮಾಣ ವಾಯಿತು. ಹೆಳವ ಕಟ್ಟಿಸಿದ ಕಟ್ಟೆಗೆ ಕ್ರಮೇಣ ಹೆಳವನಕಟ್ಟೆ ಎಂದು ಹೆಸರಾಯಿತು. ಅದರ ಪಕ್ಕದಲ್ಲಿ ಒಂದು ಹುತ್ತವಿತ್ತು. ಗೋವುಗಳು ಹುತ್ತದ ಮೇಲೆ ಹಾಲು ಕರೆಯುತ್ತಿದ್ದವು. ಒಂದು ದಿನ ಸ್ವಪ್ನದಲ್ಲಿ ಹೆಳವನಿಗೆ ಈ ಹುತ್ತದಲ್ಲಿ ದೇವರ ವಿಗ್ರಹವಿರುವುದಾಗಿ ಆದೇಶವಾಯಿತು. ಅದರಂತೆ ನೋಡಿದಾಗ ದೇವರ ಮೂರ್ತಿ ದೊರಕಿತು. ಕಾಲಾಂತರದಲ್ಲಿ ದೇವಸ್ಥಾನ ನಿರ್ಮಾಣವಾಯಿತು.

ಗಿರಿಯಮ್ಮ ಇದೇ ಹೆಳವನಕಟ್ಟೆ ರಂಗನಾಥನನ್ನು ನೇಮ ನಿಷ್ಠೆಯಿಂದ ಪೂಜಿಸುತ್ತಿದ್ದಳು. ಮುಂದೆ ಇವಳಿಗೆ ದೈವಕೃಪೆಯಿಂದ ವಾಕ್ ಸಿದ್ಧಿಯಾಯಿತು. ಪರಿಹಾರ ಕೇಳಲು ಜನರು ಬರುತ್ತಿದ್ದರು. ಇವರ ಮೃದುವಾದ ಮಾತು, ಮಮತೆಯ ಧ್ವನಿ ನೊಂದವರಿಗೆ ಅಮೃತಸಿಂಚನವಾಗುತ್ತಿತ್ತು. ನೊಂದ ಜನರು ಮಗು ತಾಯಿಯ ಬಳಿ ಓಡಿ ಬರುವಂತೆ ಇವರ ಬಳಿಗೆ ಓಡಿ ಬರುತ್ತಿದ್ದರು.
ಪವಾಡ
ಅವರು ಹಾಡುತ್ತಾ ನರ್ತಿಸುತ್ತಿದ್ದರಂತೆ ಮತ್ತು ಅವರು ಅನೇಕ ಪವಾಡಗಳನ್ನು ತೋರಿದರೆಂದು ಪ್ರತೀತಿ ಇದೆ.
ಅಂತಹ ಪವಾಡಗಳಲ್ಲಿ ಒಂದು : ಪುಂಗನೂರಿನ ರಾಜನು ತನ್ನ ದೃಷ್ಟಿಯನ್ನು ಕಳೆದುಕೊಂಡನು. ಅವನು ತಿರುಪತಿ ಶ್ರೀ ವೆಂಕಟೇಶ್ವರನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದನು. ರಾಜನ ಭಕ್ತಿಗೆ ಪ್ರಸನ್ನನಾದ ಭಗವಂತನು ರಾಜನ ಕನಸಿನಲ್ಲಿ ಕಾಣಿಸಿಕೊಂಡನು. ಒಂದು ಕಣ್ಣಿಗೆ ತಾನೇ ದೃಷ್ಟಿ ನೀಡುವುದಾಗಿಯೂ ಮತ್ತೊಂದು ಕಣ್ಣಿಗೆ ತನ್ನ ಭಕ್ತೆ ಹೆಳವನಕಟ್ಟೆ ಗಿರಿಯಮ್ಮ ದೃಷ್ಟಿ ನೀಡುವಳು ಎಂದು ಭಗವಂತನು ಹೇಳಿದನು. ಪ್ರಭು ಶ್ರೀನಿವಾಸನ ಆದೇಶದಂತೆ ರಾಜನು ಗಿರಿಯಮ್ಮ ಅವರ ನೆರವು ಕೋರಿದನು. ಅವರು ಅಂಜನವನ್ನು (ಕಾಡಿಗೆ) ಮಾಡಿ ಕಣ್ಣಿಗೆ ಹಚ್ಚುವಂತೆ ರಾಜನಿಗೆ ನೀಡಿದರು. ರಾಜನಿಗೆ ದೃಷ್ಟಿ ಬಂದಿತು!
ಅವರ ಪವಾಡಗಳಲ್ಲಿ ಮತ್ತೊಂದು : ಅವರು ಮುದ್ದಾಡಿದ ಮಕ್ಕಳು ಶಕ್ತಿಯುತವಾಗಿ, ಮತ್ತು ದೀರ್ಘಾಯುಶಿಗಳಾಗಿ ಬೆಳೆಯುತ್ತಿದ್ದರಂತೆ. ಹೀಗಾಗಿ ಜನರು ತಮ್ಮ ಮಕ್ಕಳನ್ನು ಅವರ ತೊಡೆಯ ಮೇಲೆ ಮಲಗಿಸಲು ಹಾತೊರೆಯುತ್ತಿದ್ದರು. ಹೀಗೆ ಅವರ ಕೀರ್ತಿ ಹರಡುತ್ತಿದಂತೆ ಹೆಳವನಕಟ್ಟೆ ರಂಗನಾಥಸ್ವಾಮಿಯ ದರ್ಶನಕ್ಕೆ ಬರುತ್ತಿದ್ದವರು ಅವರ ಭಕ್ತರಾಗತೊಡಗಿದರು. ಗಿರಿಯಮ್ಮನ ಕರುಣೆಯಿಂದ ಅನೇಕ ಜನರಿಗೆ ರೋಗನಿವಾರಣೆ ಮೊದಲಾದ ಪರಿಹಾರ ದೊರೆಯತೊಡಗಿದವು.

ಒಮ್ಮೆ ಮಂತ್ರಾಲಯಮಠದ ಶ್ರೀ ಸುಮತೀಂದ್ರ ತೀರ್ಥ ಅವರು ಗಿರಿಯಮ್ಮ ಅವರನ್ನು ಅನುಗ್ರಹಿಸಿದರು. ಅವರಿಗೆ ಮಂತ್ರಾಕ್ಷತೆ ನೀಡುವಾಗ ಅವರ ಅಂಗೈಯನ್ನು ನೋಡಿ “ಚಕ್ರಪಾಣಿ” ಎಂದು ಉದ್ಗರಿಸಿದರು. ಅವರ ಅಂಗೈಯಲ್ಲಿ ದಿವ್ಯ ಸುದರ್ಶನ ಚಕ್ರದ ಚಿಹ್ನೆ ಇತ್ತು. ಸ್ವಾಮೀಜಿಯವರು ಅವರನ್ನು ಯಶೋದಾ ಎಂದು ಕರೆದರು, ಮತ್ತು ರಂಗನನ್ನು ತೋರಿಸಲು ಕೇಳಿದರು. ಆಗ ಗಿರಿಯಮ್ಮ ರಂಗೋಲಿಯನ್ನು ಹಾಕಿದರು ಮತ್ತು ಶ್ರೀ ಗೋಪಾಲದಾಸರು ಉಡುಗೊರೆಯಾಗಿ ನೀಡಿದ್ದ ವೇಣುಗೋಪಾಲನ ವಿಗ್ರಹವನ್ನು ಅದರ ಮೇಲೆ ಇಟ್ಟರು. ಗಿರಿಯಮ್ಮ ಭಗವಂತನನ್ನು ಸ್ತುತಿಸುತ್ತ ಹಾಡತೊಡಗಿದರು. ಭಗವಂತನು ಅವರ ಮಧುರ ನುಡಿಗೆ ನರ್ತಿಸಲಾರಂಭಿಸಿದನು ಮತ್ತು ಅಭಿವ್ಯಕ್ತಗೊಂಡನು. ಮಗುವನ್ನು ಎತ್ತಿಕೊಂಡ ಗಿರಿಯಮ್ಮ ಅದನ್ನು ಸ್ವಾಮೀಜಿಯವರ ಮುಂದೆ ಮಲಗಿಸಿದರು. ತಮ್ಮ ಮುಂದೆ ಭಗವಂತನನ್ನು ನೋಡಿದ ಸ್ವಾಮೀಜಿಯವರು ಆನಂದಬಾಷ್ಪ ಹರಿಸಿದರು ಎನ್ನಲಾಗಿದೆ.
ಭಕ್ತೆಯರು
ಗಿರಿಯಮ್ಮ ಅವರ ಕಥೆಯು ಸಮಾಜವನ್ನು ಕುರಿತಂತೆ ಸನಾತನ ಧರ್ಮದ ಸಹಿಷ್ಣುತೆ ಮತ್ತು ವಿಶಾಲ ದೃಷ್ಟಿಗೆ ಒಂದು ಸ್ಪಷ್ಟ ಉದಾಹರಣೆಯಾಗಿದೆ. ಸನಾತನ ಧರ್ಮವು ಮಹಿಳಾದ್ವೇಷಿ ಎಂದು ಆಕ್ಷೇಪಿಸುತ್ತಿದ್ದವರಿಗೆ ಗಿರಿಯಮ್ಮ ಅವರ ಕಥೆಯು ನೇರ ಉತ್ತರವಾಗಿದೆ. ಭಗವಂತನ ಪ್ರೇಮ ಮತ್ತು ಮೋಕ್ಷಸಾಧನೆಯು ಪುರುಷರಿಗೇ ಮೀಸಲಲ್ಲ ಎಂದು ಸನಾತನ ಧರ್ಮವು ಒಪ್ಪಿಕೊಳ್ಳುತ್ತದೆ ಎನ್ನುವುದನ್ನು ಅದು ಸಾಬೀತುಪಡಿಸುತ್ತದೆ. ಆದುದರಿಂದಲೇ ಭಾರತದಲ್ಲಿ ಗಿರಿಯಮ್ಮ, ಮೀರಾಬಾಯಿ, ಆಂಡಾಳ್ ಅವರಂತಹ ಅನೇಕ ಭಕ್ತೆಯರನ್ನು ನಾವು ಕಾಣಬಹುದಾಗಿದೆ.
ಕುತೂಹಲದಾಯಕವೆಂದರೆ, ಭಕ್ತರು ಹಂಚಿಕೊಳ್ಳುವ ಸಾಮಾನ್ಯ ಅಂಶಗಳು. ದಾಸಕೂಟದ ಗಿರಿಯಮ್ಮ ಅಥವಾ ಕನಕ ದಾಸ ಇರಬಹುದು, ವ್ಯಾಸಕೂಟದ ಶ್ರೀ ಶ್ರೀಪಾದರಾಜರು, ಶ್ರೀ ರಾಘವೇಂದ್ರ ತೀರ್ಥರು, ಶ್ರೀ ಸತ್ಯಬೋಧ ತೀರ್ಥರು ಇರಬಹುದು. ಅವರು ಮೂರು ಅಂಶಗಳನ್ನು ಹಂಚಿಕೊಂಡಿದ್ದರು. ಅವರು ಶ್ರೀ ಹರಿಗೆ ದೃಢವಾದ ಭಕ್ತಿಯನ್ನು ತೋರಿದರು, ಅವನ ದಿವ್ಯಜ್ಞಾನ ಮತ್ತು ಲೀಲೆಗಳಲ್ಲಿ ನೆಲೆಗೊಂಡಿದ್ದರು ಮತ್ತು ಅವರೆಲ್ಲರೂ ಪ್ರಾಪಂಚಿಕ ವಿಷಯಗಳಿಂದ ವಿಮುಕ್ತರಾಗಿದ್ದರು.
ಗಿರಿಯಮ್ಮನವರ “ಮಳೆಯ ದಯಮಾಡೋ ರಂಗಾ” ಕೀರ್ತನೆಯನ್ನು ನೋಡಿ,
ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ
ಮೊಗೆ ಮೊಗೆದು ಪಾತ್ರೆಯಲಿ ನಾರಿಯರು
ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ
ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ

ಇಲ್ಲಿ ಮಳೆಯಿಲ್ಲದೆ ತೊಂದರೆ, ಹಾಹಾಕಾರಗಳ ಜೊತೆಗೆ ಸ್ತ್ರೀಯರು ಪಡುವ ಕಷ್ಟವನ್ನು ವರ್ಣನೆ ಮಾಡುವ ಪರಿ ನೋಡಿರಿ. ಮಳೆಯಿಲ್ಲದೆ ನೀರಿರದ ಬಾವಿಯಲಿ ಪಾತ್ರೆಗಳಲ್ಲಿ ಮೊಗೆಮೊಗೆದು ನೀರು ತೆಗೆದು ಕೊಡವನ್ನು ತುಂಬಿಸುತ್ತಿದ್ದಾರೆ. ಹೆಳವನಕಟ್ಟೆ ಗಿರಿಯಮ್ಮನ ನಿವೇದನೆಯಿದು.
ಅವರ ಕೃಷ್ಣಕೊರವಂಜಿ”, “ಬ್ರಹ್ಮಕೊರವಂಜಿ”, “ಸೀತಾಕಲ್ಯಾಣ”, “ಚಂದ್ರಹಾಸ ಕಥೆ” ಮತ್ತು “ಶಂಕರ ಗಂಧದ ಹಾಡು” ಮುಂತಾದವು ದಾಸ ಸಾಹಿತ್ಯಕ್ಕೆ ಅನುಪಮ ಕೊಡುಗೆಯಾಗಿದೆ.
ದೇವರ ಸೇವೆ ಮತ್ತು ನೊಂದ ಜನರ ಸೇವೆಯೇ ತನ್ನ ಜೀವಿತದ ಪರಮೋದ್ದೇಶವಾಗಿ ಕಂಡ ಹೆಳವನ ಕಟ್ಟೆ ಗಿರಿಯಮ್ಮನ ಬದುಕು ಮತ್ತು ಸಾಧನೆ ಅವಿಸ್ಮರಣೀಯ.