ಅತ್ಯುನ್ನತ ಶಿಕ್ಷಣ

ಆಧ್ಯಾತ್ಮಿಕ ಗುರುವನ್ನು ಸ್ವೀಕರಿಸಲು ಸಿದ್ಧನಾಗಿರುವ ವ್ಯಕ್ತಿಯ ಅರ್ಹತೆಯನ್ನು ವೈದಿಕ ಸಾಹಿತ್ಯ ನಿರೂಪಿಸಿದೆ.

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು ಆದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನ್ಯೂಯಾರ್ಕ್‌ನಲ್ಲಿ
1966, ನವೆಂಬರ್‌ 22 ರಂದು ಮಾಡಿದ ಉಪನ್ಯಾಸ.

ರಾಜವಿದ್ಯಾ ರಾಜಗುಹ್ಯಂ ಪವಿತ್ರಮ್‌ ಇದಂ ಉತ್ತಮಮ್‌ ।

ಪ್ರತ್ಯಕ್ಷಾವಗಮಂ ಧರ್ಮ್ಯಂ ಸುಸುಖಂ ಕರ್ತುಂ ಅವ್ಯಯಮ್‌ ॥

ಇದು ರಾಜವಿದ್ಯೆ. ಎಲ್ಲ ರಹಸ್ಯಗಳಲ್ಲಿ ಅತ್ಯಂತ ರಹಸ್ಯವಾದದ್ದು. ಇದು ಅತ್ಯಂತ ಪರಿಶುದ್ಧ ಜ್ಞಾನ. ಸಾಕ್ಷಾತ್ಕಾರದಿಂದ ಆತ್ಮದ ನೇರ ತಿಳಿವಳಿಕೆಯನ್ನು ಕೊಡುವುದರಿಂದ ಇದು ಧರ್ಮದ ಪರಿಪೂರ್ಣತೆ.  ಇದು ಶಾಶ್ವತವಾದದ್ದು ಮತ್ತು ಸಂತೋಷದಿಂದ ಅನುಷ್ಠಾನ ಮಾಡುವಂತಹದು. (ಭಗವದ್ಗೀತೆ 9.2)

ವಿದ್ಯಾ ಎಂದರೆ ಶಿಕ್ಷಣ. ರಾಜಾ ಎಂದರೆ ದೊರೆ. ಹಾಗಾದರೆ, ಶಿಕ್ಷಣದ ರಾಜಾ ಎಂದರೆ ಏನು?

ಲೌಕಿಕ ಜಗತ್ತಿನಲ್ಲಿ ಬದುಕಿನ ವಿವಿಧ ಹಂತಗಳನ್ನು ನಾವು ಅನುಭವಿಸುತ್ತೇವೆ. ಶಿಕ್ಷಣದಲ್ಲಿ, ಕೆಲವರು ಎಂ.ಎ. ಇರಬಹುದು, ಕೆಲವರು ಬಿ.ಎ. ಮಾಡಿರಬಹುದು. ಮತ್ತೂ ಕೆಲವರು ಶಾಲೆಯಲ್ಲಿ ಮೂರು ವರ್ಷ, ಇನ್ನಷ್ಟು ಮಂದಿ ನಾಲ್ಕು ವರ್ಷ ಇದ್ದಿರಬಹುದು. ಶಿಕ್ಷಣದಲ್ಲಿ ವಿಧವಿಧವಾದ ಶ್ರೇಣಿಗಳಿವೆ. ಹಾಗಾದರೆ, ಅತ್ಯುನ್ನತ ಶಿಕ್ಷಣ ಯಾವುದು? ಅತ್ಯುನ್ನತ ಶಿಕ್ಷಣವೆಂದರೆ, ರಾಜ-ವಿದ್ಯೆ, ಅಂದರೆ ಕೃಷ್ಣ ಪ್ರಜ್ಞೆ. ನಾನು ಏನೆಂಬುದನ್ನು ಅರ್ಥಮಾಡಿಕೊಳ್ಳುವುದೇ ನಿಜವಾದ ಜ್ಞಾನ. ಈ ಹಂತಕ್ಕೆ ಬರದಿದ್ದರೆ ನಮಗೆ ಅರಿವು ಇಲ್ಲ ಎಂದೇ ಅರ್ಥ.

ಶ್ರೀ ಚೈತನ್ಯ ಮಹಾಪ್ರಭು ಬೋಧನೆ ಆರಂಭಿಸಿದಾಗ, ಅವರ ಮೊದಲ ಶಿಷ್ಯ ಸನಾತನ ಗೋಸ್ವಾಮಿ. ಆಗ ಸನಾತನ ಗೋಸ್ವಾಮಿ ಅವರು ನವಾಬ್‌ ಹುಸೇನ್‌ ಶಾ ಬಳಿ ಅರ್ಥ ಸಚಿವರಾಗಿದ್ದರು. ಚೈತನ್ಯ ಮಹಾಪ್ರಭುಗಳ ಆಂದೋಲನದಿಂದ ಆಕರ್ಷಿತರಾದ ಸನಾತನ ಅವರು ಸರ್ಕಾರಿ ಸೇವೆಯಿಂದ ನಿವೃತ್ತಿ ಪಡೆದು ಶ್ರೀ ಚೈತನ್ಯರನ್ನು ಒಡಗೂಡಿದರು. ಅವರು ಚೈತನ್ಯರ ಬಳಿಗೆ ಮೊದಲ ಬಾರಿ ಬಂದಾಗ, ಅವರು ಕೇಳಿದ್ದು, `ಶಿಕ್ಷಣ ಎಂದರೇನು?’

ಸನಾತನರು ಅತ್ಯುನ್ನತ ಶಿಕ್ಷಣ ಪಡೆದಿದ್ದರು. ಆ ದಿನಗಳಲ್ಲಿ ಭಾರತದಲ್ಲಿ ಪರ್ಷಿಯನ್‌ ಭಾಷೆಯನ್ನು ಕಲಿಸಲಾಗುತ್ತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಇಂಗ್ಲಿಷ್‌ ಕಲಿಸಿದಂತೆ ಪಠಾಣರ ಆಡಳಿತದಲ್ಲಿ ಪರ್ಷಿಯನ್‌ ಭಾಷೆಯು ರಾಜ್ಯದ ಭಾಷೆಯಾಗಿತ್ತು. ಸನಾತನ ಗೋಸ್ವಾಮಿ ಅವರು ಸಂಸ್ಕೃತದಲ್ಲಿಯೂ ದೊಡ್ಡ ವಿದ್ವಾಂಸರಾಗಿದ್ದರು. ಆದರೂ ಅವರು ಕೇಳಿದರು.  `ಶಿಕ್ಷಣ ಎಂದರೇನು?’

ಅವರು ಹಾಗೆ ಯಾಕೆ ಕೇಳಿದರು? `ಸಾಮಾನ್ಯವಾಗಿ ಜನರು ನನ್ನನ್ನು ತುಂಬಾ ವಿದ್ಯಾವಂತ ಎಂದು ಪರಿಗಣಿಸುತ್ತಾರೆ ಆದರೆ ನಾನೆಂತಹ ಮೂರ್ಖನೆಂದರೆ ನಾನು ಸುಶಿಕ್ಷಿತ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ.’ ಎಂದು ಅವರು ಶ್ರೀ ಚೈತನ್ಯರಿಗೆ ಹೇಳಿದರು.

ಸರಿ, ಮುಂದಿನ ಪ್ರಶ್ನೆ. `ಹಾಗಾದರೆ ನೀವು ವಿದ್ಯಾವಂತನಲ್ಲವೆಂದು ಏಕೆ ಯೋಚಿಸುವಿರಿ? ನೀವು ಸಂಸ್ಕೃತದಲ್ಲಿ ದೊಡ್ಡ ಪಂಡಿತರು, ಪರ್ಷಿಯನ್‌ನಲ್ಲಿ ಕೂಡ ವಿದ್ವಾಂಸರು. ಇಷ್ಟಾದರೂ ನೀವು ಯಾಕೆ ನಿಮ್ಮನ್ನು ವಿದ್ಯಾವಂತನಲ್ಲವೆಂದುಕೊಳ್ಳುತ್ತೀರಿ?’

ಸನಾತನ ಉತ್ತರಿಸಿದರು: `ನಾನು ವಿದ್ಯಾವಂತನಲ್ಲವೆಂದು ನನ್ನ ಭಾವನೆ, ಏಕೆಂದರೆ ನಾನು ಏನೆಂದು ನನಗೆ ಗೊತ್ತಿಲ್ಲ. ಸಂಕಷ್ಟಪಡುವುದು ನನಗೆ ಬೇಕಾಗಿಲ್ಲ. ಆದರೆ ಲೌಕಿಕ ಕಷ್ಟಗಳನ್ನು ನನ್ನ ಮೇಲೆ ಹೇರಲಾಗಿದೆ. ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುವೆ ಎಂಬುವುದು ನನಗೆ ಗೊತ್ತಿಲ್ಲ. ಆದರೂ ಜನರು ನಾನು ವಿದ್ಯಾವಂತನೆಂದು ಭಾವಿಸುತ್ತಾರೆ. ನನ್ನನ್ನು ದೊಡ್ಡ ವಿದ್ವಾಂಸನೆಂದು ಕರೆಯುತ್ತಾರೆ ಮತ್ತು ನಾನು ತೃಪ್ತನಾಗಿರುವೆ. ಆದರೆ ನಾನೆಂತಹ ಮೂರ್ಖನೆಂದರೆ ನನಗೆ ನಾನು ಏನೆಂದೇ ತಿಳಿಯದು.’

ವಾಸ್ತವವಾಗಿ ನಮ್ಮ ಪ್ರಸ್ತುತ ಪರಿಸ್ಥಿತಿಯೂ ಅದೆ ರೀತಿ ಇದೆ. ಶಿಕ್ಷಣದಲ್ಲಿನ ಮುನ್ನಡೆಯಿಂದ ನಾವು ಬಹಳ ಹೆಮ್ಮೆಪಟ್ಟುಕೊಳ್ಳುತ್ತೇವೆ. ಆದರೆ ನೀವು ಅನೇಕ ಮಂದಿಯನ್ನು, `ನೀನು ಏನು?’ ಎಂದು ಕೇಳಿ. ಯಾರಿಗೂ ಉತ್ತರಿಸಲಾಗುವುದಿಲ್ಲ. ನಾನೇ ದೇಹ ಎಂಬ ಭಾವನೆಯಲ್ಲಿಯೇ ಎಲ್ಲರೂ ಇರುತ್ತಾರೆ. ಆದರೆ ವಾಸ್ತವವಾಗಿ ನಾವು ದೇಹವಲ್ಲ. ಇದನ್ನು ನಾವು ಅನೇಕ ಬಾರಿ ಚರ್ಚಿಸಿದ್ದೇವೆ. `ನಾನು ದೇಹವಲ್ಲ’ ಎಂಬುದನ್ನು ಅರ್ಥ ಮಾಡಿಕೊಳ್ಳುವ ಪರೀಕ್ಷೆಯಲ್ಲಿ  ಉತ್ತೀರ್ಣರಾಗುವುದರೊಂದಿಗೆ ನಾವು ನಿಜವಾದ ಜ್ಞಾನದತ್ತ ಬರುತ್ತೇವೆ. ಅದೇ ಆರಂಭ.

ಜ್ಞಾನ ಮತ್ತು ಕ್ರಿಯೆ

ಜ್ಞಾನದ ಬಗೆಗೆ ಅರ್ಜುನನಿಗೆ ತಿಳಿಸಿಕೊಡುವಾಗ ಶ್ರೀಕೃಷ್ಣನು ಹೇಳುತ್ತಾನೆ, `ಇದು ರಾಜ -ವಿದ್ಯೆ’ ಅಂದರೆ, ಸಾಕ್ಷಾತ್ಕಾರ ಮತ್ತು ಅದರಂತೆ ನಡೆದುಕೊಳ್ಳುವುದು. ನಾನು ಏನೆಂಬುದು ನನಗೆ ಗೊತ್ತಿಲ್ಲದಿದ್ದರೆ ನನ್ನ ಪರಿಸ್ಥಿತಿಯ ಬಗೆಗೆ ಅಪಾರ್ಥ ಉಂಟಾಗುತ್ತದೆ. ಅಷ್ಟೇ ಅಲ್ಲ, ನನ್ನ ಎಲ್ಲ ಚಟುವಟಿಕೆಗಳನ್ನೂ ಅಪಾರ್ಥ ಮಾಡಿಕೊಳ್ಳಲಾಗುತ್ತದೆ ಮತ್ತು ಮಾಯೆ ಎನಿಸಿಕೊಳ್ಳುತ್ತದೆ. `ನಾನು ಲೌಕಿಕ ದೇಹವಲ್ಲ’ ಎಂದಷ್ಟೇ ತಿಳಿದುಕೊಂಡರೆ ಸಾಲದು. ನೀವು ಲೌಕಿಕ ಅಲ್ಲ, ನೀವು ಆಧ್ಯಾತ್ಮಿಕ. ಹೀಗಾಗಿ, ನೀವು ಅದರಂತೆ ನಡೆದುಕೊಳ್ಳಬೇಕು. ಆ ಆಧ್ಯಾತ್ಮಿಕ ಕ್ರಿಯೆಯೇ ಕೃಷ್ಣ ಪ್ರಜ್ಞೆ. ಮತ್ತು ಅದನ್ನು ರಾಜ-ವಿದ್ಯೆ ಎನ್ನುತ್ತಾರೆ. ಅದು ಎಲ್ಲ ವಿದ್ಯೆಯ ರಾಜ.

ರಾಜ-ಗುಹ್ಯಂ ಎಂದರೆ `ಅತ್ಯಂತ ರಹಸ್ಯವಾದುದು’ ಎಂದು ಅರ್ಥ. ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸುವುದು ಅಷ್ಟು ಸುಲಭವಲ್ಲ. ಆದರೆ ಕೃಷ್ಣನ ಮತ್ತು ಶ್ರೀ ಚೈತನ್ಯರ ಕೃಪೆಯಿಂದ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಸಂಕೀರ್ತನೆ ಮೂಲಕ ನಮಗೆ ಅದನ್ನು ಸುಲಭವಾಗಿ ತಲಪಿಸಲಾಗುತ್ತದೆ.

ಶ್ರೀ ಚೈತನ್ಯರು ಜೀವಿಗಳನ್ನು ಕುರಿತಂತೆ ವಿಶ್ಲೆ಼ೕಷಣೆ ನೀಡಿದ್ದಾರೆ. ಜಗತ್ತಿನಲ್ಲಿ ಅಸಂಖ್ಯ ಜೀವಿಗಳು ಉಂಟು. ಭೂಮಿಯನ್ನು ಅಗೆಯಿರಿ, ನೀವು ಅಲ್ಲಿ ಜೀವಿಗಳನ್ನು ಕಾಣುವಿರಿ; ವಾಯುವಿನ ಅಧ್ಯಯನ ಮಾಡಿರಿ, ಅಲ್ಲಿಯೂ ನೀವು ಜೀವಿಗಳನ್ನು ನೋಡುವಿರಿ; ನೀರಿನೊಳಗೆ ಹೋಗಿ, ಅದರ ಆಳದಲ್ಲಿ ಕೂಡ ಜೀವಿಗಳು ಇವೆ. ಅಂದರೆ, ಜಗತ್ತಿನ ಎಲ್ಲ ಕಡೆ ವಿವಿಧ ಬಗೆಯ ಜೀವಿಗಳಿರುವುದು ಸ್ಪಷ್ಟವಾಗುತ್ತದೆ.

ಶ್ರೀ ಚೈತನ್ಯರು ಜೀವಿಗಳನ್ನು ಎರಡು ವರ್ಗವಾಗಿ ವಿಭಾಗಿಸುತ್ತಾರೆ: ಕೆಲವು ಚಲಿಸುತ್ತವೆ, ಕೆಲವು ಸ್ಥಿರ. ಮರ, ಕಲ್ಲು, ಗಿಡ, ಹುಲ್ಲು – ಇವೆಲ್ಲ ಚಲಿಸಲಾರವು. ಕಲ್ಲಿಗೆ ಜೀವ ಇದೆ, ಆದರೆ ಅದು ಪ್ರಜ್ಞೆಯನ್ನು ಬೆಳೆಸಿಕೊಂಡಿಲ್ಲ. ಅದು ಮುಚ್ಚಲ್ಪಟ್ಟಿರುತ್ತದೆ. ಅದೇ ರೀತಿ ಮಾನವ ದೇಹದೊಳಗಿನ ವ್ಯಕ್ತಿಯೊಬ್ಬ ತನ್ನ ಸ್ಥಿತಿಯನ್ನು  ಗ್ರಹಿಸಿಕೊಳ್ಳದಿದ್ದರೆ, ಅವನು ಕಲ್ಲಿನಂತೆ.

ಮೀನು, ಮೃಗ, ಪಕ್ಷಿ, ಮಾನವರು, ದೇವತೆಗಳು, ಸ್ವರ್ಗ ವಾಸಿಗಳಂತಹ ಚಲನಶೀಲರಿದ್ದಾರೆ. ಈ ಚಲನಜೀವಿಗಳಲ್ಲಿ ಮಾನವರ ಸಂಖ್ಯೆ ಅಲ್ಪ. 8,400,000 ವಿಧದ ಜೀವಿಗಳುಂಟು. ಅದರಲ್ಲಿ ಮಾನವ ದೇಹದಲ್ಲಿರುವುದು ಕೇವಲ 400,000 ಮಾತ್ರ. ಶ್ರೀ ಚೈತನ್ಯರು ಹೇಳುತ್ತಾರೆ, `ಈ 400,000 ಮಾನವ ವರ್ಗಗಳಲ್ಲಿ ಕೆಲವರು ನಾಗರಿಕರು. ಈ ಅನೇಕ ನಾಗರಿಕ ಮಾನವರಲ್ಲಿ ಕೆಲವರು ಧರ್ಮ ಗ್ರಂಥಗಳ ಭಕ್ತರು’ `ನಾನು ಕ್ರಿಶ್ಚಿಯನ್‌ ಧರ್ಮಕ್ಕೆ ಸೇರಿದವ’ `ನಾನು ಹಿಂದೂ ಧರ್ಮಕ್ಕೆ ಸೇರಿದವ’ `ನಾನು ಮುಸ್ಲಿಮರ ಧರ್ಮಕ್ಕೆ ಸೇರಿದವ’ ಎಂದು ಜನರು ಹೇಳಿಕೊಳ್ಳುತ್ತಾರೆ. ಆದರೆ, ಪ್ರಸ್ತುತ ಕಾಲದಲ್ಲಿ, `ನಾನು ಇಂತಹ ಧರ್ಮಕ್ಕೆ ಸೇರಿದವನು’ ಎಂದು ಹೇಳಿಕೊಳ್ಳುವ ಅನೇಕ ಜನರಿಗೆ ಧರ್ಮ ಗ್ರಂಥಗಳಲ್ಲಿ ನಂಬಿಕೆ ಇಲ್ಲ.

ಮೂರು ವಿಧದ ಧಾರ್ಮಿಕ ಕ್ರಿಯೆ

ಧಾರ್ಮಿಕ ಗ್ರಂಥಗಳಲ್ಲಿ ನಂಬಿಕೆ ಉಳ್ಳವರು ಸಾಮಾನ್ಯವಾಗಿ ದಾನ ಧರ್ಮ ಚಟುವಟಿಕೆಗಳಿಂದ ಆಕರ್ಷಿತರಾಗುತ್ತಾರೆ. ಉದಾಹರಣೆಗೆ, ದಾನ ಮಾಡುವುದು ಒಳ್ಳೆಯದೆಂದು ಅವರು ನಂಬುತ್ತಾರೆ. ಧಾರ್ಮಿಕ, ಪುಣ್ಯ ಕಾರ್ಯಗಳು ಮೂರು ವಿಧ: ಯಜ್ಞ – ದಾನ – ತಪಃ. ಬ್ರಹ್ಮಚರ್ಯ ಮತ್ತು ಸಂನ್ಯಾಸದ ನಿಯಮಗಳಲ್ಲಿ ತಪಃ ಇರುತ್ತದೆ. ತಪಃ ಎಂದರೆ ನೇಮನಿಷ್ಠೆಯ ಕಠಿಣ ವ್ರತವನ್ನು  ಸ್ವಯಂ ಒಪ್ಪಿಕೊಳ್ಳುವುದು. ದಾನ ಎಂದರೆ ಒಬ್ಬರ ಲೌಕಿಕ ಸೊತ್ತನ್ನು ಸ್ವ-ಇಚ್ಛೆಯಿಂದ ನೀಡುವುದು.

ಇತ್ತೀಚಿನ ದಿನಗಳಲ್ಲಿ ನಮಗೆ ಯಜ್ಞದ ಅನುಭವ ಇಲ್ಲ. ಆದರೆ ಮಹಾಭಾರತದಂತಹ ಅದ್ಭುತ ಐತಿಹಾಸಿಕ ಸಾಹಿತ್ಯದಿಂದ ನಮಗೆ ಯಜ್ಞದ ಮಾಹಿತಿ ದೊರೆಯುತ್ತದೆ. ಮೊದಲೆಲ್ಲ ರಾಜ ಮಹಾರಾಜರು ಯಜ್ಞ ಮಾಡುತ್ತಿದ್ದರು. ಆಗ ಅವರು ಕೋಟಿಗಟ್ಟಲೆ ನಗದು, ಅಮೂಲ್ಯವಾದ ವಸ್ತು ಮತ್ತು ಚಿನ್ನ ಬೆಳ್ಳಿ ಹಂಚುತ್ತಿದ್ದರು. ಇಂದಿನ ದಿನಗಳಲ್ಲಿ ಅದು ಸಾಧ್ಯವಿಲ್ಲ. ಆದರೆ ರಾಜರು ಮಾಡುತ್ತಿದ್ದರು. ಈ ರಾಜರು ಪ್ರಜೆಗಳಿಂದ ತೆರಿಗೆ ವಸೂಲು ಮಾಡುತ್ತಿದ್ದರು. ಆದರೆ ಯಜ್ಞ ಮಾಡಿದಾಗ ಪ್ರಜೆಗಳಿಗೆ ಸೊತ್ತನ್ನು ಉದಾರವಾಗಿ ಹಂಚುತ್ತಿದ್ದರು. ಈಗ ಸರ್ಕಾರಗಳು ತೆರಿಗೆ ಮಾತ್ರ ಸಂಗ್ರಹಿಸುತ್ತವೆ. ಆದರೆ ಜನರಿಗೆ ವಿತರಿಸುವುದಿಲ್ಲ. ಆದುದರಿಂದ ನಮಗೆ ಯಜ್ಞದ ಬಗೆಗೆ ತಿಳಿಯದು.

ಯಜ್ಞವು ರಾಜರ ಅಥವಾ ಸರ್ಕಾರಗಳ ಮುಖ್ಯಸ್ಥರ ಕರ್ತವ್ಯ. ದಾನವು ಸಾಮಾನ್ಯ ಗೃಹಸ್ಥರ ಕರ್ತವ್ಯ. ತಪಃವು ಬ್ರಹ್ಮಚಾರಿ, ಸಂನ್ಯಾಸಿ ಮತ್ತು ವಾನಪ್ರಸ್ಥರ (ನಿವೃತ್ತರು) ಕರ್ತವ್ಯ. ಇವು ಧಾರ್ಮಿಕ ಬದುಕಿನ ನಿಯಮಗಳು. ಧರ್ಮಗ್ರಂಥಗಳಲ್ಲಿ ನಂಬಿಕೆ ಉಳ್ಳ ಕೆಲವರು ಈ ನಿಯಮಗಳನ್ನು ಅಳವಡಿಸಿಕೊಳ್ಳುತ್ತಾರೆ. ಆದರೆ, ಸಾಮಾನ್ಯವಾಗಿ, ಜನರು ಕೆಲ ಪಂಥ, ನಂಬಿಕೆಗಳನ್ನು ಅಂಗೀಕರಿಸುತ್ತಾರೆ. ತಾವು ಒಂದು ಧರ್ಮವನ್ನು ಒಪ್ಪಿಕೊಂಡಿರುವುದಾಗಿ ಅವರು ಹೇಳುತ್ತಾರೆ. ಆದರೆ ಏನನ್ನೂ ಮಾಡುವುದಿಲ್ಲ. ಆದರೂ ಅಂತಹ ಕೋಟಿಗಟ್ಟಲೆ ಜನರಲ್ಲಿ ಕೆಲವರು ನಿಜವಾಗಿಯೂ ಧಾರ್ಮಿಕ ಶ್ರದ್ಧೆ ಉಳ್ಳವರಾಗಿರುತ್ತಾರೆ: ಅವರು ಯಜ್ಞ ಮಾಡುತ್ತಾರೆ, ದಾನ ನೀಡುತ್ತಾರೆ.

ಶ್ರೀ ಚೈತನ್ಯರು ಹೇಳುತ್ತಾರೆ: `ದಾನ, ಧರ್ಮ, ದೇಹ ದಂಡನ ಮತ್ತು ಯಜ್ಞದಲ್ಲಿ ನಿರತರಾಗಿರುವ ಕೋಟ್ಯಂತರ ಜನರಲ್ಲಿ ಕೆಲವರಿಗೆ ತಾವು ಏನೆಂಬುದರ ಬಗೆಗೆ ಸ್ಪಷ್ಟ ಗ್ರಹಿಕೆ ಇರುತ್ತದೆ: ನಾನು ಈ ದೇಹವಲ್ಲ.’

`ನಾನು ಈ ದೇಹವಲ್ಲ, ನಾನು ಆಧ್ಯಾತ್ಮಿಕ ಆತ್ಮ’ ಎಂಬ ಸಿದ್ಧಾಂತವನ್ನು ಸುಮ್ಮನೆ ಅರಿತುಕೊಂಡರೆ ಅದು ಪರಿಪೂರ್ಣತೆಯಲ್ಲ. ನೀವು ವಾಸ್ತವವಾಗಿ ಲೌಕಿಕ ಬಂಧನಗಳಿಂದ ಬಿಡಿಸಿಕೊಳ್ಳಬೇಕು. ಅದನ್ನೇ ಮುಕ್ತಿ, ವಿಮೋಚನೆ ಎನ್ನುವುದು. ತಾವು ಏನೆಂದು ತಿಳಿದಿರುವ ಸಾವಿರಾರು ಮಂದಿಯಲ್ಲಿ ಕೆಲವರು ಮಾತ್ರ ನಿಜವಾಗಿಯೂ ಮುಕ್ತರಾಗಿರುತ್ತಾರೆ. ಹಾಗೆ ಮುಕ್ತರಾದ ಸಾವಿರಾರು ಜನರಲ್ಲಿ ಕೆಲವರು ಮಾತ್ರ ಕೃಷ್ಣನನ್ನು ಅರ್ಥ ಮಾಡಿಕೊಳ್ಳಬಲ್ಲರು.

ಮುಕ್ತಿಯ ಲಕ್ಷಣ

ಆದ್ದರಿಂದ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಆದರೆ ಕೃಷ್ಣ ಕರುಣಾಳು. ಈ ಕಲಿಯುಗದಲ್ಲಿ ಸಾಮಾನ್ಯ ವಿಧಾನದಿಂದ ಮುಕ್ತರಾಗುವುದು ಜನರಿಗೆ ಕಷ್ಟ ಎಂದು ಕೃಷ್ಣನಿಗೆ ಗೊತ್ತು. ಏನದು ವಿಧಾನ? ಮೊದಲು ನಾಗರಿಕರಾಗಬೇಕು, ಅನಂತರ ಧಾರ್ಮಿಕ ಮನೋಭಾವ, ಅನಂತರ ದಾನ ಮಾಡಿ ಯಜ್ಞ ಮಾಡಬೇಕು. ಆಮೇಲಷ್ಟೇ ಜ್ಞಾನದ ವೇದಿಕೆಗೆ ಬರುವುದು.  ಅನಂತರ ಮುಕ್ತಿ. ಆದುದರಿಂದಲೇ ಕೃಷ್ಣನು ಶ್ರೀ ಚೈತನ್ಯ ಮಹಾಪ್ರಭುವಾಗಿ ಬಂದದ್ದು ಹಾಗೂ ಕೃಷ್ಣಪ್ರಜ್ಞೆ ಹೊಂದಲು ನಮಗೆ ನೇರವಾದ ವಿಧಾನ ತೋರಿಸಿಕೊಟ್ಟದ್ದು.

ಮುಕ್ತಿ ಹೊಂದಿದ ಮೇಲೆ ನೀವು ಕೃಷ್ಣನನ್ನು ಅರಿಯಬಲ್ಲಿರಿ. ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ: ಬ್ರಹ್ಮ-ಭೂತಃ ಪ್ರಸನ್ನಾತ್ಮ. ಮುಕ್ತಿ ಹೊಂದಿದ ವ್ಯಕ್ತಿಯ ಮೊದಲ ಲಕ್ಷಣವೆಂದರೆ ಅವನು ತುಂಬ ಸಂತೋಷದಿಂದಿರುತ್ತಾನೆ. ಅವನು ಅಪ್ರಸನ್ನನಾಗಿರುವುದನ್ನು ನೀವು ನೋಡಲಾರಿರಿ. ನ ಶೋಚತಿ ನ ಕಾಂಕ್ಷತಿ: ಅವನಿಗೆ ಆತಂಕಗಳಿಲ್ಲ. `ಓ! ಇದು ನನ್ನ ಬಳಿ ಇಲ್ಲ. ಅದನ್ನು ನಾನು ಪಡೆಯಬೇಕು. ಆ ಬಿಲ್‌ ಕಟ್ಟಬೇಕು. ಓ! ಇದನ್ನು ನಾನು ಮಾಡಬೇಕು.’ – ಎಷ್ಟೆಲ್ಲ ಆತಂಕಗಳು. ಆದರೆ ಮುಕ್ತಿ ಹೊಂದಿದವನಿಗೆ ಆತಂಕಗಳಿಲ್ಲ. ಅವನಿಗೆ ಆತಂಕಗಳಿಲ್ಲ ಎಂದರೆ ಅವನು ತುಂಬ ಶ್ರೀಮಂತನೆಂದು ಅರ್ಥವೇ? ಹಾಗೇನೂ ಇಲ್ಲ. ಆದರೆ ಅವನಿಗೆ ಆತಂಕಗಳಿಲ್ಲ.

ಅವನಿಗೆ ದುಃಖವೂ ಇಲ್ಲ. `ನಾನು ಬಡವ’ ಎಂದು ಅವನು ಯೋಚಿಸುವುದೂ ಇಲ್ಲ. ತಾನು ಬಡವನೆಂದು ಅವನು ಯಾಕೆ ಯೋಚಿಸಬೇಕು?  `ನಾನು ಈ ಲೌಕಿಕ ಜಗತ್ತಿನ ಒಂದು ಭಾಗ. ನನ್ನ ಬಳಿ ಈ ಲೌಕಿಕ ಸೊತ್ತು ಇಲ್ಲ’ ಎಂದು ನಾನು ಯೋಚಿಸಿದಾಗ, ಆಗ ನನಗೆ `ನಾನು ಬಡವ’ ಎಂದುಕೊಳ್ಳುತ್ತೇನೆ. ಆದರೆ ಲೌಕಿಕ ಜೀವನ ಸಿದ್ಧಾಂತದಿಂದ ಮುಕ್ತರಾದವರಿಗೆ ತಮ್ಮ ಬಳಿ ಏನಿದೆ ಏನಿಲ್ಲ ಎಂಬುದರ ಬಗೆಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಆದುದರಿಂದ ಅವನು ಪ್ರಸನ್ನಾತ್ಮ, ಅಂದರೆ ಪ್ರಸನ್ನನಾಗಿರುತ್ತಾನೆ.  `ಓ! ನನಗೆ ಕಳೆದುಕೊಳ್ಳುವುದಕ್ಕಾಗಲಿ ಅಥವಾ ಪಡೆದುಕೊಳ್ಳುವುದಕ್ಕಾಗಲಿ ಏನೂ ಇಲ್ಲ. ನಾನು ಇಲ್ಲಿಂದ ಸಂಪೂರ್ಣ ಪ್ರತ್ಯೇಕ’ ಅದೇ ಮುಕ್ತಿ.

ಮುಕ್ತಿಹೊಂದಿದ ವ್ಯಕ್ತಿಯ ಬದುಕಿನ ದೃಷ್ಟಿ ಎಂದರೆ, ಸಮಃ ಸರ್ವೇಷು ಭೂತೇಷು. ಅವನು ಯಾರನ್ನೂ ಬಡವ-ಶ್ರೀಮಂತ ಅಥವಾ ವಿದ್ಯಾವಂತ-ಅವಿದ್ಯಾವಂತ ಎಂದು ನೋಡುವುದಿಲ್ಲ. ಲೌಕಿಕ ಜಗತ್ತಿನಲ್ಲಿ ಅನೇಕ ದ್ವಂದ್ವಗಳಿವೆ. ಆದರೆ ಮುಕ್ತನಾದವನ ದೃಷ್ಟಿಯು ಸಂಪೂರ್ಣವಾಗಿ ಆಧ್ಯಾತ್ಮಿಕ ವೇದಿಕೆಯ ಮೇಲೆ ಇರುತ್ತದೆ. ಪ್ರತಿಯೊಬ್ಬ ಜೀವಿಯೂ ಕೃಷ್ಣನ ಅವಿಭಾಜ್ಯ ಅಂಗವೆಂದು ಅವನು ಭಾವಿಸುತ್ತಾನೆ. ಆದುದರಿಂದ ಅವನು ಎಲ್ಲ ಜೀವಿಗಳನ್ನು ಕೃಷ್ಣ ಪ್ರಜ್ಞೆಗೆ ಮರಳುವಂತೆ ಮಾಡಲು ಪ್ರಯತ್ನಿಸುತ್ತಾನೆ. `ಅವನು ಬ್ರಾಹ್ಮಣ, ಶೂದ್ರ, ಕಾರ್ಮಿಕ, ಭಾರತೀಯ, ಅಮೆರಿಕದವ, ಅಥವಾ ವರ್ಣೀಯ, ಶ್ವೇತ ವರ್ಣದವ, ಅಥವಾ ವಿದ್ಯಾವಂತ, ಅವಿದ್ಯಾವಂತ’ ಎಂದೆಲ್ಲ ಅವನು ಹೋಲಿಸುವುದಿಲ್ಲ. `ಎಲ್ಲರೂ ಕೃಷ್ಣ ಪ್ರಜ್ಞೆಗೆ ಬರಬೇಕು’ ಎನ್ನುವುದೇ ಅವನ ಅಭಿಪ್ರಾಯ. ಅದೇ ಸಮಃ ಸರ್ವೇಷು ಭೂತೇಷು. ಆ ರೀತಿ ಅರ್ಹತೆ ಪಡೆದ ಮೇಲೆ, ಮದ್‌-ಭಕ್ತಿಂ ಲಭತೇ ಪರಾಮ್‌ – ಕೃಷ್ಣ ಹೇಳುತ್ತಾನೆ,  `ಆಗ ಅವನು ನನ್ನ ಪರಿಶುದ್ಧ ಭಕ್ತನಾಗುವ ಅರ್ಹತೆ ಪಡೆಯುತ್ತಾನೆ.’

ನಿಯಂತ್ರಕ ತತ್ತ್ವಗಳ ಅಡಿಯಲ್ಲಿ ಮುಕ್ತಿಯ ವೇದಿಕೆಗೆ ಬರುವ ವಿಧಾನ ಸುಲಭವಲ್ಲ., ಅದರಲ್ಲಿಯೂ ಈ ಯುಗದಲ್ಲಿ. ಈ ಯುಗದ ಜನರನ್ನು ಭಾಗವತವು ಪ್ರಾಯೇಣಾಲ್ಪಾಯುಷಃ `ಅವರ ಬದುಕಿನ ಅವಧಿ ಅಲ್ಪ.’ ಮತ್ತು ಮಂದಃ. ಅಂದರೆ, `ತುಂಬ ನಿಧಾನ.’ ಎಂದು ವರ್ಣಿಸುತ್ತದೆ. ದಿನದ 24 ಗಂಟೆಗಳಲ್ಲಿ, ಜನರು 12 ತಾಸು ಮಲಗುತ್ತಾರೆ. ಉಳಿದ 12 ರಲ್ಲಿ, ಅವರು 10 ತಾಸು ಹಣ ಸಂಪಾದನೆಯಲ್ಲಿ ನಿರತರಾಗಿರುತ್ತಾರೆ. ಅಲ್ಲಿಗೆ, ಉಳಿದದ್ದು 2 ಗಂಟೆ. ಆಧ್ಯಾತ್ಮಿಕ ಗ್ರಹಿಕೆಗೆ ಅವರು ಏನು ಮಾಡಲು ಸಾಧ್ಯ? ಸಮಯವೇ ಇಲ್ಲ.

ಮತ್ತೂ ಭಾಗವತ ಹೇಳುತ್ತದೆ: ಸುಮಂದ-ಮತಯೋ. ಯಾರಿಗಾದರೂ ಆಧ್ಯಾತ್ಮಿಕ ಪ್ರಗತಿ ಸಾಧಿಸಬೇಕೆಂದಿದ್ದರೆ, ಅವರನ್ನು ಬಲೆಗೆ ಬೀಳಿಸಲು ಅನೇಕ ಕಪಟ, ಆಧ್ಯಾತ್ಮಿಕ ಸಂಘಗಳಿವೆ.

ಅನಂತರ ಮಂದ-ಭಾಗ್ಯಃ – `ಅನೇಕ ಮಂದಿ ದುರದೃಷ್ಟವಂತರು.’ ಆಹಾರ, ನಿದ್ರೆ, ರಕ್ಷಣೆ ಮತ್ತು ಲೈಂಗಿಕ ತೃಪ್ತಿಯಂತಹ ಬದುಕಿನ ಪ್ರಾಥಮಿಕ ಅಂಶಗಳಿಗೂ ವ್ಯವಸ್ಥೆ ಇರುವುದಿಲ್ಲ. ಇವು ಪ್ರಾಥಮಿಕ ಅಂಶಗಳಷ್ಟೇ. ಅವು ಪ್ರಾಣಿಗಳ ಬದುಕಿನಲ್ಲಿಯೂ ಇರುತ್ತವೆ. ಆದರೆ ಈ ಯುಗದಲ್ಲಿ, ನೆಲೆ, ಆಹಾರ, ಪತ್ನಿಯಂತಹ ಪ್ರಾಥಮಿಕ ಅಂಶಗಳನ್ನು ಪಡೆದುಕೊಳ್ಳುವುದೂ ಕಷ್ಟ. ಮತ್ತು ಪ್ರತಿಯೊಬ್ಬರೂ `ಯುದ್ಧ ಯಾವಾಗ ಘೋಷಣೆಯಾಗುವುದೋ ನನ್ನನ್ನು ಸಮರಕ್ಕೆ ಕಳುಹಿಸುವರೋ’ ಎಂಬ ಭಯದಲ್ಲಿಯೇ ಇರುತ್ತಾರೆ.

ಅಂತಿಮವಾಗಿ, ಉಪದೃತ – `ಇದೆಲ್ಲಕ್ಕೂ ಪೂರಕವೆಂಬಂತೆ, ಜನರು ಒಂದಲ್ಲ ಒಂದು ರೋಗ ಅಥವಾ ಇನ್ಯಾವುದರಿಂದಲೋ ದುಗುಡಗೊಂಡಿರುತ್ತಾರೆ.’

ಈ ಯುಗದಲ್ಲಿ ಜನರ ಪರಿಸ್ಥಿತಿ ಇದು. ಆದುದರಿಂದ ನಿಯಂತ್ರಕ ವಿಧಾನಗಳ ಮೂಲಕ ಮುಕ್ತಿಯತ್ತ ಬರುವುದು ಅಂತಹ ಜನರಿಗೆ ಅಸಾಧ್ಯವೆಂದು ಕೃಷ್ಣ ಯೋಚಿಸಿದ. ಅವನದು ಅಪರಿಮಿತ ಕರುಣೆ. ಅವನು ಶ್ರೀ ಚೈತನ್ಯರಾಗಿ ಬಂದ, ಬದುಕಿನ ಅತ್ಯುನ್ನತ ಪರಿಪೂರ್ಣತೆಯನ್ನು ವಿತರಿಸಿದ. ಏನದು? ಹರೇ ಕೃಷ್ಣ ಹರೇ ಕೃಷ್ಣ  ಕೃಷ್ಣ  ಕೃಷ್ಣ  ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಎಂಬ ಜಪದ ಮೂಲಕ ಆಧ್ಯಾತ್ಮಿಕ ಭಾವೋತ್ಕರ್ಷತೆಯನ್ನು ಹಂಚಿದ. ಈ ಪಠಣವು ಪ್ರಾಯೋಗಿಕ. ಅದು ನೀವು ಮುಕ್ತರೋ ಅಲ್ಲವೋ ಅಥವಾ ನಿಮ್ಮ ಸ್ಥಾನ ಮತ್ತು ಪರಿಸ್ಥಿತಿಯ ಮೇಲೆ ಅವಲಂಬಿತವಾಗಿಲ್ಲ. ಸುಮ್ಮನೆ ಬನ್ನಿ, ಇದರಲ್ಲಿ ಭಾಗವಹಿಸಿ, ನೀವು ಆಧ್ಯಾತ್ಮಿಕ ಆನಂದಪರವಶತೆಯನ್ನು ಅನುಭವಿಸುವಿರಿ. ಆದುದರಿಂದ ಈ ವಿಧಾನವನ್ನು ಪವಿತ್ರಮ್‌. `ಪರಿಶುದ್ಧ’ ಎನ್ನುತ್ತಾರೆ. ಈ ವಿಧಾನದಲ್ಲಿ ತೊಡಗಿಕೊಂಡವರು ಪರಿಶುದ್ಧರಾಗುತ್ತಾರೆ. ಈ ಶುದ್ಧೀಕರಣ ತತ್‌ಕ್ಷಣ ಶುರುವಾಗುತ್ತದೆ.

ಉತ್ತಮಮ್‌ ಎಂದರೆ `ಅತ್ಯುನ್ನತ’ ಅಥವಾ `ಅಲೌಕಿಕ.’ ಇಂದಿನ ಶ್ಲೋಕದ ವ್ಯಾಖ್ಯಾನವೊಂದನ್ನು ಉಲ್ಲೇಖಿಸಿ ನಾನು ಉತ್ತಮಮ್‌ನ ಅರ್ಥ ವಿವರಿಸಿದೆ. ವ್ಯಾಖ್ಯಾನಕಾರರು ಪದ್ಮ ಪುರಾಣದಿಂದ ಶ್ಲೋಕವೊಂದನ್ನು ಉದ್ಧರಿಸಿ ಉತ್ತಮಮ್‌ ಪದದ ಅರ್ಥಕ್ಕೆ ವಿವರಣೆ ನೀಡಿದ್ದಾರೆ:

ಅಪ್ರಾರಬ್ಧಫಲಂ ಪಾಪಂ ಕೂಟಂ ಬೀಜಂ ಫಲೋನ್ಮುಖಮ್‌ ।

ಕ್ರಮೇಣೈವ ಪ್ರಲೀಯೇತ ವಿಷ್ಣುಭಕ್ತಿರತಾತ್ಮನಾಮ್‌ ॥

ಅಂದರೆ, ಅತ್ಯುನ್ನತ ಅಲೌಕಿಕ ಜ್ಞಾನದಲ್ಲಿ, ಕೃಷ್ಣ ಪ್ರಜ್ಞೆಯಲ್ಲಿ ತೊಡಗಿಕೊಂಡಿದ್ದರೆ ಅಂತಹವರ ಪಾಪಗಳ ಕರ್ಮದ ಬೀಜಗಳು ಕ್ರಮೇಣ ಮಾಯವಾಗಿಬಿಡುತ್ತವೆ. ನಾವು ಭಗವದ್ಗೀತೆಯಲ್ಲಿ ಈ ಉದಾಹರಣೆ ಓದಿದ್ದೇವೆ – ನಾವು ಬೆಂಕಿಗೆ ಏನನ್ನಾದರೂ ಹಾಕಿದರೆ, ಉರಿದು ಬೂದಿಯಾಗುತ್ತದೆ. ಅದೇ ರೀತಿ, ಕೃಷ್ಣ ಪ್ರಜ್ಞೆಯ ಬೆಂಕಿ ಹೊತ್ತಿಕೊಂಡಕೂಡಲೇ ನಮ್ಮ ಹಿಂದಿನ ಬದುಕಿನ ಪಾಪದ ಚಟುವಟಿಕೆಯ ಕರ್ಮಗಳು ನಾಶವಾಗುತ್ತವೆ.

ಧರ್ಮ ಗ್ರಂಥಗಳ ಉದ್ದೇಶ

ಪಾಪ ಕರ್ಮಗಳಿಂದಲೇ ನಾವು ಸಂಕಷ್ಟ ಅನುಭವಿಸುವುದು. ನಮ್ಮ ಅಜ್ಞಾನವೇ ಪಾಪದ ಕರ್ಮಗಳಿಗೆ ಕಾರಣ. ಯಾವುದು ಏನೆಂದು ಅರಿಯದ ವ್ಯಕ್ತಿಗಳು ಪಾಪದ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಮಗುವಿಗೆ ಬೆಂಕಿಯನ್ನು ಸ್ಪರ್ಶಿಸಿದರೆ ಉಂಟಾಗುವ ಅಪಾಯ ಗೊತ್ತಿಲ್ಲ. ಏಕೆಂದರೆ ಅದಕ್ಕೆ ಅದರ ಅರಿವು ಇರುವುದಿಲ್ಲ. ಆದರೆ, ಮಗು ಬೆಂಕಿಯನ್ನು ಮುಟ್ಟಿದ ಕೂಡಲೇ ಅದಕ್ಕೆ ಕೈ ಸುಡುತ್ತದೆ. ಬೆಂಕಿಯು ಮಗುವೆಂದು ಅದಕ್ಕೆ ಏನೂ ರಿಯಾಯಿತಿ ನೀಡುವುದಿಲ್ಲ. ಬೆಂಕಿ ಬೆಂಕಿಯಂತೆ ಇರುತ್ತದೆ. ಅದೇ ರೀತಿ, ನಮಗೆ ಈ ಲೌಕಿಕ ಜಗತ್ತು ಹೇಗೆ ನಡೆಯುತ್ತಿದೆ ಎಂದು ತಿಳಿದಿರುವುದಿಲ್ಲ. ಅಂದರೆ, ಕಾನೂನುಗಳು ಯಾವುವು. ಯಾರು ನಿಯಂತ್ರಕರು, ಹೇಗೆ ನಿಯಂತ್ರಿಸಲಾಗುತ್ತಿದೆ ಇವೆಲ್ಲ ನಮಗೆ ತಿಳಿದಿರುವುದಿಲ್ಲ. ಅಜ್ಞಾನದಿಂದಾಗಿ ನಾವು ಹೇಗೋ ವರ್ತಿಸುತ್ತೇವೆ. ಆದರೆ ಪ್ರಕೃತಿ ಎಷ್ಟು ನಿಷ್ಠುರವೆಂದರೆ, ನಾವು ತಿಳಿದೋ ತಿಳಿಯದೆಯೋ ಮಾಡಿದರೂ ಅದು ನಮ್ಮನ್ನು ಕ್ಷಮಿಸುವುದಿಲ್ಲ.

ಆದುದರಿಂದ ಅಜ್ಞಾನವೇ ಸಂಕಷ್ಟಗಳಿಗೆ ಕಾರಣ. ಹೀಗಾಗಿ, ಸರಿಯಾದ ಅರಿವಿನತ್ತ ಸಾಗುವುದು. ಸರಿಯಾದ ಜ್ಞಾನವೆಂದರೆ, ವಿಷಯಗಳನ್ನು ಅವುಗಳಿರುವಂತೆ ತಿಳಿಯುವುದು – ನಾವು ಏನು, ಜಗತ್ತು ಏನು, ದೇವರೆಂದರೆ ಏನು, ಭಗವಂತನೊಂದಿಗೆ ನಮ್ಮ ಬಾಂಧವ್ಯ ಏನು… ಇವುಗಳನ್ನು ನಾವು ತಿಳಿದುಕೊಳ್ಳಬೇಕು. ಯಾರೂ ಕೂಡ ಸುಮ್ಮನೆ ತಾಂತ್ರಿಕ ತಜ್ಞ ಅಥವಾ ಯಾವುದೇ ವಿಭಾಗದ ಪರಿಣತನಾಗಬಾರದು. ಅದು ಜ್ಞಾನವಲ್ಲ. ನೋಡಿ, ಇದು ಜ್ಞಾನ – ನೀವು ಏನು ಮತ್ತು ನೀವು ಹೇಗೆ ನಡೆಯಬೇಕು ಎಂಬುವುದನ್ನು ಅರಿತುಕೊಳ್ಳಬೇಕು. ಈ ಜ್ಞಾನವನ್ನು ಮಾನವ ರೂಪದ ಜೀವಿಗಳು ಪಡೆಯಬಹುದೇ ವಿನಾ ಪ್ರಾಣಿಗಳಲ್ಲ. ಆದ್ದರಿಂದ, ನಿಮಗೆ ಜ್ಞಾನ ನೀಡಲು, ನಿಮಗೆ ಸೂಕ್ತವಾದ ಮಾರ್ಗ ತೋರಲು ನಾಗರಿಕ ಜಗತ್ತಿನ ಎಲ್ಲ ಭಾಗಗಳಲ್ಲಿ ಅನೇಕ ಧರ್ಮ ಗ್ರಂಥಗಳಿವೆ. ಅವುಗಳನ್ನು ನಿರ್ಲಕ್ಷಿಸಬಾರದು.

ಚೈತನ್ಯ ಮಹಾಪ್ರಭು ಹೇಳುತ್ತಾರೆ, `ಅನಾದಿ ಕಾಲದಿಂದ ಜನರು ಭಗವಂತನೊಂದಿಗಿನ ತಮ್ಮ ಸಂಬಂಧವನ್ನು ಮರೆತುಬಿಟ್ಟಿದ್ದಾರೆ. ಆದುದರಿಂದ ಭಗವಂತನು ಅವರಿಗೆ ಧರ್ಮಗ್ರಂಥಗಳನ್ನು ನೀಡಲು ಅನೇಕ ಪ್ರತಿನಿಧಿಗಳನ್ನು ಕಳುಹಿಸಿದ್ದಾನೆ.’ ಆದ್ದರಿಂದ ನಾವು ಆ ಧರ್ಮ ಗ್ರಂಥಗಳ, ಮುಖ್ಯವಾಗಿ ಭಗವದ್ಗೀತೆಯ, ಲಾಭ ಪಡೆದುಕೊಳ್ಳಬೇಕು. ಭಗವದ್ಗೀತೆಯಲ್ಲಿ ಎಲ್ಲವನ್ನೂ ಚೆನ್ನಾಗಿ ವಿವರಿಸಲಾಗಿದೆ. ನೀವು ನಿಮ್ಮ ವಾದಗಳನ್ನು ಮಂಡಿಸಬಹುದು. ನೀವು ನಿಮ್ಮ ಜ್ಞಾನದಿಂದ, ಬುದ್ಧಿಯಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಎಲ್ಲವೂ ಸ್ಪಷ್ಟವಾಗುತ್ತದೆ.

ಆದ್ದರಿಂದ ನಾವು ಭಗವದ್ಗೀತೆಯ ಲಾಭ ಪಡೆದುಕೊಳ್ಳಬೇಕು. ಈ ಅಲೌಕಿಕ ಕಂಪನ, ಅನುಭವದಿಂದ ನಾವು ಅಧ್ಯಯನ ಆರಂಭಿಸಿದರೆ ಅರ್ಥ ಮಾಡಿಕೊಳ್ಳುವ ನಮ್ಮ ಶಕ್ತಿ ಹೆಚ್ಚುತ್ತದೆ: ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi