ಬಾಂಗ್ಲಾ ಗಲಭೆ ಮತ್ತು ಕೃಷ್ಣಪ್ರಜ್ಞೆಯ ಪ್ರಚಾರ

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್‌ ಲೆಸ್‌ ಜಾಬ್‌ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ, ಶ್ರೀ ಕೃಷ್ಣನಂತೂ ನಮ್ಮ ಸೇವೆಯನ್ನು ಖಂಡಿತವಾಗಿ ಮೆಚ್ಚಿಕೊಳ್ಳುತ್ತಾನೆ. 

– ಪತಿತಪಾವನ ದಾಸ

ಬೆಂಗಳೂರು, ಡಿಸೆಂಬರ್‌ 1, 2024

ಚಿನ್ಮಯ ಕೃಷ್ಣ ದಾಸ ಇತ್ತೀಚೆಗೆ ಮಾಧ್ಯಮದಲ್ಲಿ ಪರಿಚಿತ ಹೆಸರು. ಬಾಂಗ್ಲಾದೇಶದ ಇಸ್ಕಾನ್‌ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಇವರನ್ನು ಅಲ್ಲಿನ ಸರಕಾರ ಯಾವುದೋ ಒಂದು ಚಿಕ್ಕ ತಪ್ಪಿನ ನೆಪ ಒಡ್ಡಿ ಬಂಧಿಸಿದೆ. ನ್ಯಾಯಾಲಯವೂ ಜಾಮೀನು ನಿರಾಕರಿಸಿದೆ. ಹತ್ತಾರು ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾದ ಸಾಧ್ಯತೆಯನ್ನು ಅವರು ಈಗ ಎದುರಿಸುತ್ತಿದ್ದಾರೆ. ತುಂಬ ಸಮಯದಿಂದ ಕಂಡುಬರುತ್ತಿರುವ ಹಿಂದೂ ವಿರೋಧಿ ಧೋರಣೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದರೂ, ಜಗಮೊಂಡ ಬಾಂಗ್ಲಾ ಜಗ್ಗುತ್ತಿಲ್ಲ. ದೇಗುಲಗಳನ್ನು ಸುಟ್ಟು ಹಾಕುವುದು, ಹಿಂದೂಗಳನ್ನು ಹಾಡಹಗಲೇ ಕೊಂದು ಹಾಕುವುದು, ಹಿಂಸಿಸುವುದು, ಬೆದರಿಸುವುದು, ಈಗ ಸರ್ವೆ ಸಾಮಾನ್ಯ. ಕೆಲ ಮುಸ್ಲಿಮ್‌ ತೀವ್ರಗಾಮಿ ಸಂಘಟನೆಗಳ ಕಪಿಮುಷ್ಟಿಯಲ್ಲಿ ಬಾಂಗ್ಲಾ ಸರ್ಕಾರ ಸಿಕ್ಕಿಬಿದ್ದು, ಅವರ ಕೈಗೊಂಬೆಯಾಗಿರುವುದೇ ಈ ಎಲ್ಲದಕ್ಕೆ ಕಾರಣ. ಇಸ್ಕಾನ್‌ ಬ್ಯಾನ್‌ ಮಾಡದಿದ್ದರೆ, ಭಕ್ತರನ್ನು ಓಡಾಡಿಸಿ ಕೊಚ್ಚಿಹಾಕುವುದಾಗಿ ಉಗ್ರವಾದಿಗಳು ಬೆದರಿಕೆ ನೀಡಿದ್ದಾರೆ. ನಾನು ಇದನ್ನು ಬರೆಯುತ್ತಿದ್ದಂತೆ, ಇನ್ನೂ ಎರಡು ಇಸ್ಕಾನ್‌ ಭಕ್ತರನ್ನು ಬಂಧಿಸಲಾಗಿದೆ, ಮತ್ತು ಇನ್ನೆರಡು ದೇವಸ್ಥಾನಗಳ ಮೇಲೆ ಆಕ್ರಮಣ ನಿನ್ನೆ ನಡೆದಿದೆ (30 ನವೆಂಬರ್‌ 2024) ಎಂದು ಇಂದಿನ ದಿನಪತ್ರಿಕೆಗಳು ವರದಿ ಮಾಡಿವೆ.

ಈ ಕಿರುಕುಳ ಹೊಸದಲ್ಲ

ಆದರೆ ಕೃಷ್ಣ ಭಕ್ತರಿಗೆ ಈ ಸನ್ನಿವೇಶ, ಕಿರುಕುಳ ಹೊಸದೇನಲ್ಲ. ಮೂಲಭೂತವಾದಿ ಮುಸಲ್ಮಾನರಾಗಲಿ, ನಾಸ್ತಿಕರಾಗಲಿ, ಶಾಂಕರ ಮತಾಂಧ ರಾಜರಾಗಲಿ, ಭೌತಿಕವಾದಿ ಇನ್ನಾವ ಜನರೇ ಆಗಲಿ, ಎಲ್ಲರೂ ಭಕ್ತಿ, ಮುಕ್ತಿಪಥಕ್ಕೆ ಕಂಟಕರೇ. ಭಾಗವತದಲ್ಲಿ ವೇನ ಎಂಬ ರಾಜನ ಕತೆ ಬರುತ್ತದೆ. ರಾಜನಾದ ಕೂಡಲೇ ಡಂಗುರ ಸಾರಿಸಿ, ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನಿಲ್ಲಿಸಿಬಿಡುತ್ತಾನೆ. ದೇವರನ್ನಲ್ಲ, ಇನ್ನು ಮುಂದೆ ತನ್ನನ್ನೇ ಎಲ್ಲರೂ ಪೂಜಿಸಬೇಕೆಂಬುದೇ ಅವನ ಆಜ್ಞೆ!

ನ ಯಷ್ಟವ್ಯಂ ನ ದಾತವ್ಯಂ ನ ಹೋತವ್ಯಂ ದ್ವಿಜಾಃ ಕ್ವಚಿತ್‌    |

ಇತಿ ನ್ಯವಾರಯತ್‌ ಧರ್ಮಂ ಭೇರಿ-ಘೋಷೇಣ ಸರ್ವಶಃ    ||4.14.6||

ಭಕ್ತ ಪ್ರಹ್ಲಾದನು ಸ್ವಂತ ಮಗನಾದರೂ, ವಿಷ್ಣುವನ್ನು ಪೂಜಿಸಿದ್ದಕ್ಕಾಗಿ ಅವನಿಗೆ ಶಿಕ್ಷೆ, ಮರಣ ದಂಡನೆ. ವೈಷ್ಣವರಾಗಿದ್ದ ಕಾರಣ ಶ್ರೀಪಾದ ರಾಮಾನುಜರಿಗೆ ರಾಜರಾಜ ಚೋಳನೆಂಬ ದುಷ್ಟ ರಾಜ ಹಿಂಸಿಸಲು ಮುಂದಾಗುತ್ತಾನೆ. ನಾಮಾಚಾರ್ಯ ಹರಿದಾಸರು ಕೃಷ್ಣ ಭಕ್ತರಾದರು ಎಂದ ಮಾತ್ರಕ್ಕೆ ನವಾಬ್ ದೊರೆ ಅವರನ್ನು ಶಿಕ್ಷಿಸುತ್ತಾನೆ. ಮತ್ತು ಇತ್ತೀಚೆಗೆ ಸನಾತನ ಒಂದು ಸಾಂಕ್ರಾಮಿಕ ರೋಗದ ಹಾಗೆ, ಅದನ್ನು ನಿರ್ಮೂಲನೆಗೊಳಿಸಬೇಕು ಎಂಬ ನೆರೆ ರಾಜ್ಯದ ದೊರೆಗಳ ಹೇಳಿಕೆ. ಹೀಗೆ, ಇತಿಹಾಸದ್ದುದ್ದಕ್ಕೂ ಆಕ್ರಾಂತಕಾರರಿಂದ ಸನಾತನ ಧರ್ಮದ ಮೇಲೆ ಆಕ್ರಮಣ ನಡೆದುಬರುತ್ತಲೇ ಇದೆ. 

ಸನಾತನಕ್ಕಾಗಿ ಇಷ್ಟು ರಿಸ್ಕ್‌ ಯಾಕೆ?

ಭಗವದ್ಗೀತೆಯ ಉದ್ದಕ್ಕೂ ಶ್ರೀ ಕೃಷ್ಣ ತನ್ನ ಸನಾತನ ಧಾಮದ ಬಗ್ಗೆ ಹೇಳುತ್ತಾ ಅಲ್ಲಿಗೆ ವಾಪಸ್‌ ಬರಲು ನಮ್ಮನ್ನು ಆಹ್ವಾನಿಸುತ್ತಾನೆ. ದಿಟವಾಗಿ ಅವನು ನಾನಾ ರೂಪಗಳಲ್ಲಿ ಅವತರಿಸಿ ಬರುವ ಕಾರಣವೇ ನಮ್ಮನ್ನು ಮರಳಿ ಮನೆಗೆ, ತನ್ನ ಶಾಶ್ವತ ಲೋಕಕ್ಕೆ ಕರೆಯಲು, ಕೊಂಡೊಯ್ಯಲು. 

ತಾನೇ ಬರುವುದಲ್ಲದೇ, ಕಾಲ ಕಾಲಕ್ಕೆ ತನ್ನ ಆಪ್ತ ಸಹವರ್ತಿ ಆಚಾರ್ಯರುಗಳನ್ನು ಕೂಡ ಕಳಿಸಿಕೊಡುವನು. ಏಕೆಂದರೆ, ಈ ಭೌತಿಕ ಲೋಕ ಒಂದು ಕಾರಾಗೃಹದ ಹಾಗೆ, ಮತ್ತು ಇದನ್ನು ʼದುಃಖಾಲಯʼ ಎಂದು ವರ್ಣಿಸಲಾಗಿದೆ. ಅಂದರೆ ದುಃಖವನ್ನು ಅನುಭವಿಸಬೇಕಾದ ಸ್ಥಳ. ಇಲ್ಲಿ ನಿಜವಾದ, ಶಾಶ್ವತ ಸುಖವಿಲ್ಲ. ಕೃಷ್ಣಲೋಕವೇ, ವೈಕುಂಠವೇ ನಮ್ಮ ನಿಜವಾದ ಮನೆ. ದಾಸಶ್ರೇಷ್ಠರು ಹಾಡಿರುವಂತೆ, “ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ…” ಮತ್ತು ಆ ಶಾಶ್ವತ ಧಾಮಕ್ಕೆ ಹೋದವರು ಮತ್ತೆ ಈ ಮೃತ್ಯುಲೊಕಕ್ಕೆ ಬರವುದಿಲ್ಲ. ಹೀಗೆ, ಶಾಸ್ತ್ರದ ಪ್ರಕಾರ, ಮಾನವ ಜನ್ಮವಿರುವದೇ ಜನ್ಮ ಮೃತ್ಯು ಮುಪ್ಪು ರೋಗದ ಚಕ್ರದಿಂದ ಪಾರಾಗಿ ಪರಮಾತ್ಮನ ದಿವ್ಯ ಲೋಕವನ್ನು ಸೇರುವುದು. ಅಲ್ಲಿ ಅವನ ಸೇವೆಯಲ್ಲಿ ಶಾಶ್ವತ ಆಧ್ಯಾತ್ಮಿಕ ಸುಖ ಕಾಣುವುದು. 

ಮತ್ತು ತನ್ನ ಸಂದೇಶವನ್ನು ಪ್ರಚಾರ ಮಾಡುವ ಮಹತ್ತ್ವದ ಕುರಿತು ಕೊನೆಯ ಅಧ್ಯಾಯದ ಎರಡು ಶ್ಲೋಕಗಳಲ್ಲಿ ಕೃಷ್ಣ ಹೇಳಿರುವನು:

       ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷು ಅಭಿಧಾಸ್ಯತಿ  |

    ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತಿ ಅಸಂಶಯಂ  ||18.68||

      ನ ಚ ತಸ್ಮಾನ್ ಮನುಷ್ಯೇಷು ಕಶ್ಚಿನ್‌ ಮೇ ಪ್ರಿಯ ಕೃತ್ತಮಃ  |

   ಭವಿತಾ ನ ಚ ಮೇ ತಸ್ಮಾದ್‌ ಅನ್ಯಃ ಪ್ರಿಯತರೋ ಭುವಿ   ||18.69||

ಇದರ ತಾತ್ಪರ್ಯ: ಯಾರು ಈ ಗೀತಾ ಜ್ಞಾನವನ್ನು ಬೋಧಿಸುವರೋ, ಅವರು ಕೃಷ್ಣನಿಗೆ ಅತ್ಯಂತ ಪ್ರಿಯರು; ಅವರಿಗಿಂತ ಹೆಚ್ಚು ಪ್ರಿಯರು ಕೃಷ್ಣನಿಗೆ ಇನ್ನಾರೂ ಇರುವುದಿಲ್ಲ. ಮತ್ತು ಗೀತಾ ಜ್ಞಾನ ಹಂಚಿದ ಮಹಾತ್ಮರು ಕೊನೆಗೆ ಕೃಷ್ಣನ ಲೋಕವನ್ನೇ ಸೇರುವರು, ಇದಕ್ಕೆ ಸಂಶಯವಿಲ್ಲ. 

    “ಭಾರತ ಭೂಮಿತೆ ಮನುಷ್ಯ ಜನ್ಮ ಹೈಲ ಯಾರ, 

    ಜನ್ಮ ಸಾರ್ಥಕ ಕರಿ ಕರ ಪರ ಉಪಕಾರ.”

 “ಯಾರೇ ದೇಖ ತಾರೆ ಕಹ ಕೃಷ್ಣ ಉಪದೇಶ, 

  ಅಮಾರ ಆಜ್ಞಯಾ ಗುರು ಹಯ್ಯಾ ತಾರ ಏ ದೇಶ.”

ಇದು ಭಕ್ತಿಪಂಥವನ್ನು ಭಾರತದೆಲ್ಲೆಡೆ ಪಸರಿಸಿದ ಶ್ರೀ ಚೈತನ್ಯರ ವಾಣಿ. ಭಾರತ ಭೂಮಿಯಲ್ಲಿ ಮನುಷ್ಯ ಜನ್ಮ ಪಡೆದ ಎಲ್ಲರೂ ತಮ್ಮ ಜನ್ಮವನ್ನು ಸಾರ್ಥಕಗೊಳಿಸಿ, ಭಕ್ತರಾಗಿ, ಬೇರೆ ಜನರಿಗೂ ಭಕ್ತರಾಗುವುದಕ್ಕೆ ಸಹಾಯ ಮಾಡಿ ಪರ ಉಪಕಾರ ಮಾಡಬೇಕು. ನಿ ಯಾರನ್ನೇ ಕಾಣು, ಅವನಿಗೆ ಕೃಷ್ಣನ ಉಪದೇಶ ಹೇಳು, ಹೀಗೆ ಗುರುವಾಗಿ ಈ ದೇಶವನ್ನು ಉದ್ಧರಿಸು. 

ಹೀಗಾಗಿ ಇಸ್ಕಾನ್‌ ಭಕ್ತರು ಗೀತಾ ಪ್ರಚಾರಕ್ಕಾಗಿ ಗುರುಗಳ, ದೇವರ ಆಜ್ಞೆಯಿಂದ ಬದ್ಧರು. ಸನಾತನ ಧರ್ಮ ಪಾಲನೆ, ಪ್ರಚಾರ ಮಾಡದ ಹೊರತು ನಮಗೆ ಬೇರೆ ವಿಧಿಯಿಲ್ಲ. 

ಹಾವಿಗೆ ಹಾಲೆರೆಯಿತೇ ಇಸ್ಕಾನ್‌ ?

ಸರ್ವ ಯೋನಿಷು ಅಹಂ ಬೀಜ ಪ್ರದಃ ಪಿತಾ ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಸಾರಿದ್ದಾನೆ. ಎಲ್ಲ ಯೋನಿಗಳಲ್ಲಿ ಜನ್ಮ ಪಡೆಯುವ ಜೀವಿಗಳಿಗೆ ಅವನೇ ತಂದೆ ಎಂದು. ತಂದೆ ಒಬ್ಬನೇ ಆದರೆ, ಮಕ್ಕಳೆಲ್ಲ ಸೋದರರಲ್ಲವೇ? ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲರಲ್ಲಿಯೂ ಕೃಷ್ಣ ಭಕ್ತಿಯ, ಸಾಮರಸ್ಯದ ಭಾವ ಬೆಸೆಯುವುದು ಇಸ್ಕಾನ್‌ ಸಾಧನೆ. ಜಗತ್ತಿನ ಎಲ್ಲೆಡೆ, ಕ್ರೈಸ್ತರು, ಮುಸಲ್ಮಾನರು, ಯಹೂದಿಯರು, ಬೌದ್ಧರು, ಜೈನರು, ತಮ್ಮ ದೇಹದ ಧರ್ಮಗಳೊಂದಿಗೆ ಗುರುತಿಸಿಕೊಳ್ಳುವುದನ್ನು ನಿಲ್ಲಿಸಿ, ತಾವು ಶುದ್ಧ ಚೇತನಾತ್ಮ, ಕೃಷ್ಣನ ಅವಿಭಾಜ್ಯ ಅಂಗ ಎಂದು ಸ್ವೀಕರಿಸಿ, ಭಕ್ತಿಯೋಗದ ತತ್ತ್ವಗಳನ್ನು ಪಾಲಿಸುತ್ತಿರುವುದು ಇಸ್ಕಾನ್‌ ಹೆಗ್ಗಳಿಕೆ. ಇದು ಹರಿನಾಮದ, ಕೃಷ್ಣ ಪ್ರಸಾದದ ಮಹತ್ತ್ವ.  ʼವಸುಧೈವ ಕುಟುಂಬಕಂʼ ಎಂಬುದು ಇಸ್ಕಾನ್ ಧ್ಯೇಯ. ‌

ಹೀಗಿರುವಾಗ, ತಮ್ಮದೇ ಸಮುದಾಯದ ಜನ ಸನಾತನ ಧರ್ಮ ಸ್ವೀಕರಿಸುತ್ತಿರುವುದು, ಹಿಂದೂಗಳಾಗುತ್ತಿರುವುದನ್ನು ಸಹಿಸದ ಕೆಲ ಕಿಡಿಗೇಡಿಗಳ ಕುಚೇಷ್ಟೆಯಿಂದ ಮಾತ್ರ ಪರಿಸ್ಥಿತಿ ಬಿಗಡಾಯಿಸಿರುವುದು ದುರದೃಷ್ಟಕರವಷ್ಟೇ. ಇಸ್ಕಾನಿನ ದೋಷವೇನಾದರೂ ಇದ್ದರೆ, ಅದಿಷ್ಟೇ : ಶ್ರೀ ಕೃಷ್ಣನ, ಶ್ರೀ ಚೈತನ್ಯರ ದಯೆಯನ್ನು ಈ ಜನಕ್ಕೂ ತಲಪಿಸಲಾಗದಿರುವುದು. ಆದರೇನು ಮಾಡುವುದು? ಯಾರ ಭಾಗ್ಯ ತೆರೆದಿರುವುದೋ ಅವರು ಮಾತ್ರ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ.

ರಾಜರ್ಷಿಗಳ ಆಡಳಿತ ಬೇಕು

ಋಷಿಗಳ ಗುಣವುಳ್ಳ ಸಂತ ಸದೃಶ ರಾಜರನ್ನು ರಾಜ-ಋಷಿ ಎನ್ನುವರು. 

ಧರ್ಮರಾಜ ಯುಧಿಷ್ಠಿರನನ್ನು ವಿಶ್ವ ಸಾಮ್ರಾಜ್ಯದ ಸಿಂಹಾಸನದ ಮೇಲೆ ಕೂರಿಸಲು ಮಹಾಭಾರತ ಯುದ್ಧವೇ ನಡೆಸಬೇಕಾಯಿತು. ಧಾರ್ಮಿಕ ದೊರೆಯ ಮಹತ್ತ್ವ ಇದು. ಯಥಾ ರಾಜಾ ತಥಾ ಪ್ರಜಾ. ಸರ್ಕಾರ ಧಾರ್ಮಿಕವಾಗಿದ್ದರೆ ರಾಜ್ಯದ ಜನರಲ್ಲಿ‍‍ ಧರ್ಮವನ್ನು ಪೋಷಿಸುತ್ತದೆ. ನಾಸ್ತಿಕವಾಗಿದ್ದರೆ ಧರ್ಮಕಾರ್ಯಗಳನ್ನು ನಿರ್ಬಂಧಿಸುತ್ತದೆ. ಈಗಾಗಲೇ ಹೇಳಿದ ವೇನರಾಜನ ಕತೆ ನೆನಪಿಸಿಕೊಳ್ಳಬಹುದು. 

ಇಸ್ಕಾನ್‌ ಸಂಸ್ಥಾಪಕಾಚಾರ್ಯ ಶ್ರೀಲ ಪ್ರಭುಪಾದರ ಪ್ರಕಾರ ʼಸೆಕ್ಯುಲರ್‌ʼಎಂದರೆ ಧರ್ಮವೇ ಬೇಡ ಎಂದಲ್ಲ. ಸೆಕ್ಯುಲರ್‌ ಎಂದರೆ ಎಲ್ಲ ತರಹದ ಧರ್ಮಗಳಿಗೂ ಗೌರವ ಇರಲಿ ಎಂದು. ಸೆಕ್ಯುಲರ್‌ ರಾಷ್ಟ್ರವಾಗಿದ್ದರೆ ಎಲ್ಲ ಧರ್ಮಗಳಿಗೂ ಅವಕಾಶವಿರಲಿ. ಹಿಂದೂ ರಾಷ್ಟ್ರವಾಗಿದ್ದರೆ ಸನಾತನ ಧರ್ಮವನ್ನು ಪೋಷಿಸಲಿ, ಮುಸ್ಲಿಂ ರಾಷ್ಟ್ರ ಅವರ ಧರ್ಮವನ್ನೇ ಪೋಷಿಸಲಿ. ಆದರೆ ಅಲ್ಪಸಂಖ್ಯಾತರ ಧರ್ಮಗಳ ಮೇಲೆ ಎಲ್ಲಿಯೂ ದಾಳಿ ಬೇಡ. ಸಹಬಾಳ್ವೆ, ಸಾಮರಸ್ಯ, ದೊಡ್ಡ ಮನಸ್ಸು  – ಇವುಗಳಿದ್ದರೆ ಶಾಂತಿಗೆ ಧಕ್ಕೆ ಬಾರದು. ಮತ್ತು ಇದು ಸಾಧ್ಯವಾಗುವುದು ರಾಜರ್ಷಿಗಳ ಆಡಳಿತವಿದ್ದರೆ ಮಾತ್ರ. 

ಕೃಷ್ಣಪ್ರಜ್ಞೆಯ ಪ್ರಚಾರವೇ ತುರ್ತು ಅಗತ್ಯ 

ಕಾರ್ಲ್‌ ಮಾರ್ಕ್ಸ್‌ ಹೇಳಿಕೆಯ “ಧರ್ಮವು ಜನರ ಅಫೀಮು” ಆಗುವ ಬದಲಿಗೆ, ಒಳ್ಳೆಯ ಧಾರ್ಮಿಕ ನಾಯಕರ ನೇತೃತ್ವದಲ್ಲಿ ಸನಾತನ ಧರ್ಮವು ಮನುಕುಲದ ಸರ್ವತೋಮುಖ ಪ್ರಗತಿಗೆ ಕಾರಣವಾಗಬಹುದು. ಪ್ರಜಾಪ್ರಭುತ್ವ ಇರುವುದರಿಂದ ನಮ್ಮ ಸರಕಾರದ ಆಯ್ಕೆ ನಮಗೇ ಇದೆ. ಜನರು ಭಗವದ್ಭಕ್ತರಾದರೆ, ಇದೆಲ್ಲರ ಅರಿವು ಅವರಿಗಿದ್ದರೆ, ಸ್ವಾಭಾವಿಕವಾಗಿ ಸಮರ್ಥ ನಾಯಕ- ಭಕ್ತರೇ ಸರಕಾರದ ಚುಕ್ಕಾಣಿ ಹಿಡಿಯಲು ಆಯ್ಕೆ ಆಗುವರು. 

ಆದ್ದರಿಂದ ಈ ಹೊತ್ತಿನ ತುರ್ತು ಅಗತ್ಯವೆಂದರೆ ಕೃಷ್ಣ ಪ್ರಜ್ಞೆ ಮತ್ತು ಅದರ ಪ್ರಸಾರ. ಶ್ರೀಲ ಪ್ರಭುಪಾದರು ಬರೆದ ಪುಸ್ತಕಗಳು ಕೃಷ್ಣ ಪ್ರಜ್ಞೆಯ ಭಂಡಾರವೇ ಆಗಿವೆ. ಅವುಗಳನ್ನು ಎಲ್ಲರೂ ಓದುವಂತಾಗಲಿ, ಇಸ್ಕಾನ್‌ ಮಂದಿರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವಂತಾಗಲಿ, ತಮ್ಮ ಮನೆಗಳಲ್ಲಿಯೇ ಹರಿನಾಮ ಸಂಕೀರ್ತನೆ, ಜಪ ಮಾಡುವಂತಾಗಲಿ, ಪ್ರಸಾದ ಸೇವಿಸುವಂತಾಗಲಿ. ಎಲ್ಲೆಡೆ ಶಾಂತಿ ಹರಡುವಂತಾಗಲಿ, ಶ್ರೀ ಕೃಷ್ಣ ಎಲ್ಲರ ಮೇಲೆ ಕೃಪೆ ಮಾಡಲಿ ಎಂಬುವುದೇ ನಮ್ಮ ಹಾರೈಕೆ. ಹರೇ ಕೃಷ್ಣ. 

                                     

ಲೇಖನಗಳಲ್ಲಾಗಲಿ, ಬ್ಲಾಗ್‌ ಪೋಸ್ಟ್‌ ಗಳಲ್ಲಾಗಲಿ, ಈ ವೆಬ್ಸೈಟ್‌ ನಲ್ಲಿ ವ್ಯಕ್ತಪಡಿಸಿದ ಎಲ್ಲ ಅಭಿಪ್ರಾಯಗಳು ಮತ್ತು ಆಲೋಚನೆಗಳು ಕೇವಲ ವೈಯ್ಯಕ್ತಿಕವಾಗಿ ಲೇಖಕರದ್ದು, ಮತ್ತು ಅವು ಅಗತ್ಯವಾಗಿ www.bhaktivedantadarshana.com ನ ಅಧಿಕೃತ ನೀತಿ ಅಥವಾ ನಿಲುವನ್ನು ಬಿಂಬಿಸುವುದಿಲ್ಲ.

ಈ ಲೇಖನ ಶೇರ್ ಮಾಡಿ