ಚಿತ್ರಲೇಖನ: ಡಾ॥ ಬಿ.ಆರ್. ಸುಹಾಸ್

ಪ್ರಕೃತಿ ಸೌಂದರ್ಯಕ್ಕೂ ಜಲಪಾತಗಳಿಗೂ ಗಿರಿಧಾಮಗಳಿಗೂ ಚಿಕ್ಕಮಗಳೂರು ಪ್ರಸಿದ್ಧವಾಗಿದೆ. ಅಂತೆಯೇ ಇಲ್ಲಿಯೂ ಸುತ್ತಮುತ್ತಲೂ ಹಲವಾರು ಸುಂದರ ದೇವಾಲಯಗಳಿವೆ. ಚಿಕ್ಕಮಗಳೂರಿಗೆ ಸುಮಾರು ಮೂರು ಕಿ.ಮೀ. ದೂರದಲ್ಲಿ ಹಿರೇಮಗಳೂರು ಎಂಬ ಊರು ಇದ್ದು, ಇಲ್ಲಿ ಶ್ರೀ ಕೋದಂಡರಾಮ ದೇವಾಲಯ ನೋಡತಕ್ಕದ್ದಾಗಿದೆ.
ಸೊಗಸಾದ ರಾಜಗೋಪುರ ಮತ್ತು ವಿಶಾಲವಾದ ಪ್ರಾಕಾರ ಮನಸೆಳೆಯುತ್ತವೆ. ಎಲ್ಲೆಲ್ಲಿ ನೋಡಿದರೂ ಕನ್ನಡದ ಫಲಕಗಳು ಎದ್ದು ಕಾಣುತ್ತಾ ಮನಸೆಳೆಯುತ್ತವೆ. ಇಲ್ಲಿನ ಅರ್ಚಕರಾದ ಶ್ರೀ ಹಿರೇಮಗಳೂರು ಕಣ್ಣನ್ರವರು ಇಲ್ಲಿ ಎಲ್ಲವನ್ನೂ ಕನ್ನಡಮಯವಾಗಿಸಿದ್ದಾರೆ. ನುಡಿಮುತ್ತುಗಳ ಹಲವಾರು ಫಲಕಗಳನ್ನು ಹಾಕಿಸಿದ್ದಾರೆ. ಒಳ್ಳೆಯ ವಿದ್ವಾಂಸರಾದ ಅವರು ಜನಪ್ರಿಯವಾದ ದೂರದರ್ಶನ ಕಾರ್ಯಕ್ರಮಗಳಿಂದ ಸುಪ್ರಸಿದ್ಧರಾಗಿದ್ದಾರೆ.

ದೇವಾಲಯದ ಗರ್ಭಗುಡಿ ಮತ್ತು ಶುಕನಾಸಿ, ಹೊಯ್ಸಳ ಶೈಲಿಯಲ್ಲಿದ್ದು, ನವರಂಗ, ಗೋಪುರ ಮೊದಲಾದವು ದ್ರಾವಿಡಶೈಲಿಯಲ್ಲಿವೆ. ಗರ್ಭಗುಡಿಯಲ್ಲಿ ಹನುಮಂತನ ವಿಗ್ರಹವಿರುವ ಪೀಠದ ಮೇಲೆ ಶ್ರೀರಾಮ, ಸೀತೆ, ಮತ್ತು ಲಕ್ಷ್ಮಣರ ವಿಗ್ರಹಗಳಿವೆ. ರಾಮ, ಲಕ್ಷ್ಮಣರು ಬಿಲ್ಲುಬಾಣಗಳನ್ನು ಧರಿಸಿದ್ದಾರೆ. ಹಾಗಾಗಿ ರಾಮನಿಗೆ ಕೋದಂಡರಾಮ ಎಂಬ ಹೆಸರು ಬಂದಿದೆ. ಕೋದಂಡ ಎಂಬುದು ಶ್ರೀರಾಮನ ಬಿಲ್ಲಿನ ಹೆಸರಾಗಿದೆ. ಒಂದು ವಿಶೇಷವೆಂದರೆ, ಇಲ್ಲಿ ಸೀತೆ ರಾಮನ ಬಲಕ್ಕಿದ್ದಾಳೆ. ಸಾಮಾನ್ಯವಾಗಿ ಬೇರೆಲ್ಲ ಕಡೆ, ಸೀತೆ ರಾಮನ ಎಡಕ್ಕಿರುತ್ತಾಳೆ. ದೇವಾಲಯದ ಪ್ರಾಕಾರದಲ್ಲಿ ಯೋಗನರಸಿಂಹ, ವೇದಾಂತ ದೇಶಿಕ, ಕಾಳಿಂಗಮರ್ದನ ಕೃಷ್ಣ, ಸುಗ್ರೀವ, ಶ್ರೀ ರಾಮಾನುಜಾಚಾರ್ಯರು ಮತ್ತು ಇತರ ಆಳ್ವಾರರ ವಿಗ್ರಹಗಳಿರುವ ಪುಟ್ಟ ಗುಡಿಗಳಿವೆ. ನರಸಿಂಹನು ತಪಸ್ಸು ಮಾಡುವ ಭಂಗಿಯಲ್ಲಿರುವುದರಿಂದ ಈ ವಿಗ್ರಹಕ್ಕೆ ಯೋಗನರಸಿಂಹ ಎನ್ನುತ್ತಾರೆ. ಈ ವಿಗ್ರಹ ಬಹಳ ಸುಂದರವಾಗಿದ್ದು, ಇದರ ಪ್ರಭಾವಳಿಯಲ್ಲಿ ದಶಾವತಾರಗಳ ಚಿತ್ರಣವಿದೆ. ಅಂತೆಯೇ ಕಾಳಿಂಗಮರ್ದನ ಶ್ರೀ ಕೃಷ್ಣ ಮೊದಲಾದ ವಿಗ್ರಹಗಳು ಬಹು ಸುಂದರವಾಗಿವೆ.

ಸ್ಥಳಪುರಾಣದ ಪ್ರಕಾರ, ಇದೊಂದು ಸಿದ್ಧಕ್ಷೇತ್ರವಾಗಿದ್ದು, ಇಲ್ಲಿ ಪರಶುರಾಮನೂ ಸೇರಿದಂತೆ ಹಲವು ಸಿದ್ಧರಿದ್ದರಂತೆ. ಭೃಗುವಂಶಜನಾದ ಪರಶುರಾಮನಿಂದ ಇದಕ್ಕೆ ಭಾರ್ಗವಪುರಿ ಎಂದೂ ಹೆಸರಿತ್ತಂತೆ. ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನು ಪರಶುರಾಮನ ಭೇಟಿ ಮಾಡಿದ ಪ್ರಸಂಗವನ್ನು ಕಾಣಬಹುದು. ಇದರ ಸ್ಮರಣಾರ್ಥ, ಇಲ್ಲಿ ಪರಶುರಾಮನು ಶ್ರೀರಾಮನಿಗೆ ಶರಣಾಗಿರುವ ಒಂದು ಸುಂದರ ಕೆತ್ತನೆಯನ್ನು ನಿಲ್ಲಿಸಿರುವುದನ್ನು ಕಾಣಬಹುದಾಗಿದೆ.
ಶ್ರೀ ರಾಮನಿಗೆ ಶರಣಾದ ಪರಶುರಾಮನು ಅವನಿಗೆ ಅವನ ಮದುವೆಯ ದೃಶ್ಯವನ್ನು ತೋರಿಸಲು ಬೇಡಿಕೊಂಡನಂತೆ. ಆಗ ಶ್ರೀರಾಮನು ಸೀತೆ, ಲಕ್ಷ್ಮಣರೊಂದಿಗೆ ನಿಂತನಂತೆ. ಆಗ ಸೀತೆಯನ್ನು ತನ್ನ ಬಲಕ್ಕೂ ಲಕ್ಷ್ಮಣನನ್ನು ತನ್ನ ಎಡಕ್ಕೂ ಇರಿಸಿಕೊಂಡು ನಿಂತ ಭಂಗಿಯಲ್ಲಿಯೇ ದೇವಾಲಯದ ವಿಗ್ರಹಗಳಿವೆಯೆಂದು ಹೇಳುತ್ತಾರೆ. ಜನಮೇಜಯನು ಸರ್ಪಯಾಗ ಮಾಡಿದ ಸ್ಥಳವು ಇದೇ ಎಂದು ಪ್ರತೀತಿ ಇದೆ.

ಹೀಗೆ ಹಿರೇಮಗಳೂರಿನ ಶ್ರೀ ಕೋದಂಡರಾಮ ದೇವಾಲಯ, ಒಂದು ಸ್ವಾರಸ್ಯಕರ ದೇವಾಲಯವಾಗಿದೆ.






Leave a Reply