ಭಕ್ತಿಯೋಗ ಹೇಗೆ ಕೆಲಸ ಮಾಡುತ್ತದೆ

ಭಗವದ್ಗೀತೆಯಲ್ಲಿ ಕೃಷ್ಣನು ತನ್ನ ಶಿಷ್ಯನಾದ ಅರ್ಜುನನಿಗೆ ಹೀಗೆ ಹೇಳುತ್ತಾನೆ – “ನೀನು ನನ್ನ ಆತ್ಮೀಯ ಮಿತ್ರನಾದ್ದರಿಂದ ನಾನು ನಿನಗೆ ಈ ರಹಸ್ಯಜ್ಞಾನವನ್ನು ತಿಳಿಯಹೇಳುತ್ತಿದ್ದೇನೆ.” ನಾಲ್ಕನೆಯ ಅಧ್ಯಾಯದಲ್ಲಿ ಹೇಳಿರುವಂತೆ, ಅರ್ಜುನನಿಗೆ ಗೀತೋಪದೇಶ ಆದದ್ದು ಒಂದೇ ಒಂದು ಅರ್ಹತೆಯಿಂದ; ಅದೆಂದರೆ ಅವನೊಬ್ಬ ಭಕ್ತ ಎಂಬ ಕಾರಣದಿಂದ. ಭಗವದ್ಗೀತೆಯ ಗೂಢತತ್ತ್ವವು ತುಂಬ ರಹಸ್ಯವಾದುದು ಎಂದು ಶ್ರೀಕೃಷ್ಣನು ಹೇಳುತ್ತಾನೆ. ನಿಷ್ಕಲ್ಮಷ ಭಕ್ತರಾಗದೆ ನೀವು ಆ ರಹಸ್ಯವನ್ನು ಅರಿಯಲಾಗದು. ಭಾರತದಲ್ಲಿ ಗೀತೆಯ ಮೇಲೆ 645 ಬೇರೆ ಬೇರೆ ವ್ಯಾಖ್ಯಾನಗಳಿವೆ. ಒಬ್ಬ ಪ್ರಾಧ್ಯಾಪಕರು ಕೃಷ್ಣನು ವೈದ್ಯನೆಂದೂ ಅರ್ಜುನ ಅವನ ರೋಗಿಯೆಂದೂ ವ್ಯಾಖ್ಯಾನಿಸಿದ್ದಾರೆ. ಅದೇ ರೀತಿ ನಾನಾ ರೀತಿಯ ವ್ಯಾಖ್ಯಾನಗಳಿವೆ. ಪ್ರತಿಯೊಬ್ಬರೂ ತಾವು ಪರಿಪೂರ್ಣರು, ತಾವು ಶಾಸ್ತ್ರವನ್ನು ತಮಗಿಷ್ಟ ಬಂದಂತೆ ವ್ಯಾಖ್ಯಾನಿಸಬಹುದು ಎಂದು ಭಾವಿಸಿದ್ದಾರೆ. ನಮ್ಮ ಮಟ್ಟಿಗೆ ಹೇಳುವುದಾದರೆ, ಗೀತೆಯಲ್ಲೇ ಹೇಳಿರುವ ಉಪದೇಶಗಳಂತೆಯೇ ನಾವು ಭಗವದ್ಗೀತೆಯನ್ನು ಓದಲು ಒಪ್ಪುತ್ತೇವೆ. ಇದನ್ನು ಪರಂಪರೆಯ ಪ್ರಕಾರ, ಅಂದರೆ ಗುರುಶಿಷ್ಯ ಪರಂಪರೆಯ ಪ್ರಕಾರ, ಒಪ್ಪಬೇಕು. ಪರಮ ಪ್ರಭು ಉಪದೇಶಿಸುತ್ತಿರುವುದು ಏಕೆಂದರೆ, “ನೀನು ನನ್ನ ಪ್ರಿಯ ಮಿತ್ರ. ನೀನು ಏಳಿಗೆ ಹೊಂದಿ ಸುಖವಾಗಿರಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದಲೇ ನಾನು ನಿನ್ನೊಂದಿಗೆ ಮಾತನಾಡುತ್ತಿದ್ದೇನೆ.”

ಪ್ರತಿಯೊಬ್ಬರೂ ಸುಖವಾಗಿ ಶಾಂತಿಯಿಂದ, ಸಮೃದ್ಧಿಯಿಂದ ಇರಬೇಕೆಂದು ಕೃಷ್ಣನು ಬಯಸುತ್ತಾನೆ. ಆದರೆ ಅವರಿಗೇ ಅದು ಬೇಕಿಲ್ಲ. ಸೂರ್ಯನ ಬೆಳಕು ಎಲ್ಲರಿಗೂ ಇರುವಂತಹದು. ಆದರೆ ಕತ್ತಲಲ್ಲೇ ಇರಬೇಕೆಂದು ಬಯಸುವವನಿಗೆ ಸೂರ್ಯನು ಏನು ಮಾಡುತ್ತಾನೆ? ಅದೇ ರೀತಿ ಗೀತೆ ಎಲ್ಲರಿಗೂ ಸೇರಿದ್ದು. ನಾನಾ ಬಗೆಯ ಜೀವಜಾತಿಗಳಿವೆ; ಉಚ್ಚ ಮತ್ತು ನೀಚ ಜ್ಞಾನದ ಹಂತಗಳಿವೆ. ಇದು ವಾಸ್ತವ ಸಂಗತಿ. ಆದರೆ ಈ ಜ್ಞಾನ ಇರುವುದು ಎಲ್ಲರಿಗೂ ಎಂದು ಕೃಷ್ಣನು ಹೇಳುತ್ತಾನೆ. ಒಬ್ಬರಿಗೆ ಕೀಳು ಜನ್ಮವೇ ಇರಲಿ, ಯಾವುದೇ ಇರಲಿ, ಅದು ಮುಖ್ಯವಲ್ಲ.  ಭಗವದ್ಗೀತೆಯು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವಂತಹ ದಿವ್ಯಜ್ಞಾನವನ್ನು ಕೊಡುತ್ತದೆ. ಅದಕ್ಕೆ ಪ್ರತಿಯೊಬ್ಬರೂ ನಾಲ್ಕನೆಯ ಅಧ್ಯಾಯದಲ್ಲಿ ಹೇಳಿರುವ ತತ್ತ್ವದ ಪ್ರಕಾರ ನಡೆದುಕೊಳ್ಳಬೇಕು, ಅಷ್ಟೆ. ಅಂದರೆ ಗೀತೆಯು ಪರಂಪರಾಗತವಾಗಿದೆ : “ನಾನು ಮೊದಲು ಈ ಯೋಗಪದ್ಧತಿಯನ್ನು ಸೂರ್ಯದೇವ ವಿವಸ್ವತನಿಗೆ ಉಪದೇಶಿಸಿದೆ; ಅವನು ಅದನ್ನು ಮನುವಿಗೂ, ಮನುವು ಅದನ್ನು ಇಕ್ಷ್ವಾಕುವಿಗೂ ಉಪದೇಶಿಸಿದರು.” ಕೃಷ್ಣನಿಂದ ಶಿಷ್ಯ ಪರಂಪರೆ ಬರುತ್ತಿದೆ. ಆದರೆ “ಕಾಲಕ್ರಮೇಣ ಈ ಪರಂಪರೆ ನಿಂತುಹೋಯಿತು.” ಆದ್ದರಿಂದ ಅರ್ಜುನನನ್ನು ಹೊಸದಾಗಿ ಶಿಷ್ಯನನ್ನಾಗಿ ಮಾಡಿಕೊಳ್ಳಲಾಯಿತು. ಎರಡನೇ ಅಧ್ಯಾಯದಲ್ಲಿ ಅರ್ಜುನನು ಹೀಗೆ ಶರಣಾಗುತ್ತಾನೆ – “ಇದುವರೆಗೆ ನಾವು ಮಿತ್ರರಂತೆ ಮಾತನಾಡುತ್ತಿದ್ದೆವು; ಆದರೆ ಈಗ ನಿನ್ನನ್ನು ನನ್ನ ಗುರುವಾಗಿ ಸ್ವೀಕರಿಸುತ್ತೇನೆ.” ಈ ತತ್ತ್ವವನ್ನು ಯಾರು ಅನುಸರಿಸುತ್ತಾರೋ ಅವರು ಕೃಷ್ಣನನ್ನು ಗುರುವಾಗಿ ಸ್ವೀಕರಿಸುತ್ತಾರೆ. ಶಿಷ್ಯನಾದವನು ಅರ್ಜುನನಂತಿರಬೇಕು. ಕೃಷ್ಣನು ಅರ್ಜುನನ ಗುರುವಾಗಿ ಹೇಳುತ್ತಿದ್ದಾನೆ; ಅರ್ಜುನ ಹೇಳುತ್ತಾನೆ – “ನೀನು ಏನು ಹೇಳುತ್ತೀಯೋ ಅದನ್ನು ನಾನು ಸ್ವೀಕರಿಸುತ್ತೇನೆ.” ಅದೇ ರೀತಿ ಓದಿ; ಹೀಗಲ್ಲ: “ಇದು ನನಗೆ ಇಷ್ಟ, ಆದ್ದರಿಂದ ಒಪ್ಪಿಕೊಳ್ಳುತ್ತೇನೆ; ಇದು ನನಗೆ ಇಷ್ಟವಿಲ್ಲ; ಆದ್ದರಿಂದ ನಾನು ಇದನ್ನು ತಿರಸ್ಕರಿಸುತ್ತೇನೆ.” ಇಂತಹ ಓದಿಕೆ ವ್ಯರ್ಥ, ಅಬದ್ಧ.

ಗುರುವಾದವನು ಕೃಷ್ಣನ ಪ್ರತಿನಿಧಿಯಾಗಿರಬೇಕು, ಭಕ್ತನಾಗಿರಬೇಕು; ಮತ್ತು ಶಿಷ್ಯನು  ಅರ್ಜುನನಂತಿರಬೇಕು.  ಆಗ  ಈ  ಕೃಷ್ಣಪ್ರಜ್ಞಾ  ಅಧ್ಯಯನ ಪರಿಪೂರ್ಣವಾಗುತ್ತದೆ.  ಇಲ್ಲದಿದ್ದರೆ  ಅದರಿಂದ  ಸಮಯ  ಹಾಳು, ಅಷ್ಟೆ. ಶ್ರೀಮದ್ಭಾಗವತದಲ್ಲಿ ಹೀಗೆ ಹೇಳಿದೆ –  “ಯಾರಾದರೂ ಕೃಷ್ಣವಿದ್ಯೆಯನ್ನು ಅರಿಯಬಯಸಿದರೆ, ಅಂತಹವರು ಶುದ್ಧಭಕ್ತರ ಸಹವಾಸ ಮಾಡಬೇಕು. ಶುದ್ಧಭಕ್ತರ ನಡುವೆ ಚರ್ಚೆ ನಡೆದರೆ, ಆಧ್ಯಾತ್ಮಿಕ ಭಾಷೆಯ ಶಕ್ತಿ ತಿಳಿಯುತ್ತದೆ.” ಗೀತೆಯ ವಿದ್ವತ್‌ ಚರ್ಚೆಯು ನಿರರ್ಥಕ. `ಭಗವಂತನಲ್ಲಿ ಅಚಲ ಶ್ರದ್ಧೆಯಿರುವವನಿಗೆ ಮತ್ತು ಭಗವಂತನ ಪ್ರತಿನಿಧಿಯಲ್ಲಿ ಅಂತಹ ನಂಬಿಕೆ ಇರುವವನಿಗೆ ಸಕಲ ವೇದಭಾಷೆಯ ಸಾರವು ತೋರುವುದು’ ಹೀಗೆಂದು ಉಪನಿಷತ್ತಿನಲ್ಲಿ ಹೇಳಲಾಗಿದೆ. ನಮಗೆ ಭಕ್ತರ ಅರ್ಹತೆಯಿರಬೇಕು. ಭಗವಂತನಿಗೆ ಪ್ರೀತಿಪಾತ್ರರಾಗಿ. ನನ್ನ ಗುರು ಹೀಗೆ ಹೇಳುತ್ತಿದ್ದರು – “ಭಗವಂತನನ್ನು ನೋಡಲು ಪ್ರಯತ್ನಿಸಬೇಡಿ. ಬದಲಿಗೆ ಭಗವಂತನು ನಿಮ್ಮನ್ನು ನೋಡುವ ಹಾಗೆ ನಡೆದುಕೊಳ್ಳಿ.” ನಮಗೆ ನಾವೇ ಅರ್ಹತೆ ಸಂಪಾದಿಸಿಕೊಳ್ಳಬೇಕು. ನಿಮ್ಮ ಅರ್ಹತೆಯಿಂದಾಗಿ ಭಗವಂತನೇ ಸ್ವತಃ ಬಂದು ನಿಮ್ಮನ್ನು ನೋಡುತ್ತಾನೆ.

ಭಗವಂತನನ್ನು ಒಬ್ಬನು ತಿಳಿಯಬಲ್ಲನಾದರೆ, ಆಗ ಅವನು ಸಕಲ ಐಹಿಕ ಅಗತ್ಯಗಳಿಂದ ಅತೀತನಾಗಿರುತ್ತಾನೆ. ನಾವು ಯಾವಾಗಲೂ ಪರಿಸ್ಥಿತಿ ಒಂದೇ ಸಮನಾಗಿ ಮುಂದುವರಿಯದಂತಹ ಐಹಿಕ ಜಗತ್ತಿನಲ್ಲಿ ಅತೃಪ್ತರಾಗಿಯೇ ಇರುತ್ತೇವೆ. ಸುಖ ತಾತ್ಕಾಲಿಕ; ತಾತ್ಕಾಲಿಕ ಪಾಡೂ ಸಹ ಬಹಳ ಕಾಲ ಮುಂದುವರಿಯದು. ಶೀತ, ಉಷ್ಣ, ದ್ವಂದ್ವಗಳು ಎಲ್ಲವೂ ಬರುತ್ತವೆ, ಹೋಗುತ್ತವೆ. ಪರಾತ್ಪರ ಸ್ಥಿತಿಗೆ ತಲಪುವುದೇ ಕೃಷ್ಣಪ್ರಜ್ಞೆಯ ಪ್ರಕ್ರಿಯೆ. ಕೃಷ್ಣನು ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ. ನೀವು ಪರಿಶುದ್ಧರಾದರೆ ಅವನು ನಿಮಗೆ ದಾರಿ ತೋರುತ್ತಾನೆ. ಕೊನೆಗೆ ನೀವು ಈ ದೇಹತ್ಯಾಗ ಮಾಡಿ ಆಧ್ಯಾತ್ಮಿಕ ಆಕಾಶವನ್ನು ಸೇರುತ್ತೀರಿ.

ಕೃಷ್ಣನು ಹೇಳುತ್ತಾನೆ – “ಯಾರೊಬ್ಬರೂ ನನ್ನನ್ನು ಅರಿಯರು; ನನ್ನ ಪ್ರಭಾವ, ನನ್ನ ಶಕ್ತಿ, ನನ್ನ ವಿಸ್ತಾರಗಳನ್ನು ಯಾರೂ ಅರಿಯರು. ಮಹರ್ಷಿಗಳಿಗೂ (ಮಹಾ ಚಿಂತನಶೀಲರಿಗೂ) ಗೊತ್ತಿಲ್ಲ. ನಾನು ಎಲ್ಲ ದೇವತೆಗಳ ಮೂಲ, ಋಷಿಗಳ ಮೂಲ.” ನಮಗೆ ಗೊತ್ತಿಲ್ಲದ ಪೂರ್ವಜರು ಅನೇಕರಿದ್ದಾರೆ. ಅಲ್ಲದೆ ಬ್ರಹ್ಮ, ದೇವತೆಗಳು ಇದ್ದಾರೆ. ಇದೆಲ್ಲ ನಮಗೇನು ಗೊತ್ತು? ನಾವು ಭಗವಂತನನ್ನು ಅರಿಯಬಹುದಾದ ನೆಲೆಯನ್ನು ತಲಪಲಾರೆವು. ನಾವು ಸೀಮಿತ (ಶಕ್ತಿಯ) ಇಂದ್ರಿಯಗಳಿಂದ ಜ್ಞಾನವನ್ನು ಸಂಪಾದಿಸುತ್ತೇವೆ; ಮತ್ತು ಇಂದ್ರಿಯಗಳ ಕೇಂದ್ರವಾದ ಮನಸ್ಸಿನಿಂದ ಕೃಷ್ಣನನ್ನು ತಲಪಲಾಗದು. ಅಪರಿಪೂರ್ಣ ಇಂದ್ರಿಯಗಳಿಂದ ಪರಿಪೂರ್ಣ ಜ್ಞಾನವನ್ನು ಪಡೆಯಲಾಗದು. ಮನಸ್ಸಿನಿಂದಾಗಲಿ, ಬುದ್ಧಿಕೌಶಲದಿಂದಾಗಲಿ ಅವನು ನಿಲುಕುವುದಿಲ್ಲ. ಆದರೆ ನೀವು ಇಂದ್ರಿಯಗಳನ್ನು ಭಗವತ್ಸೇವೆಯಲ್ಲಿ ತೊಡಗಿಸಿದರೆ, ಆಗ ಅವನು ನಿಮ್ಮ ಇಂದ್ರಿಯಗಳ ಮೂಲಕ ಪ್ರಕಟವಾಗುವನು.

“ಭಗವಂತನ  ಅರಿವಿನಿಂದ  ಏನಾಗಬೇಕಾಗಿದೆ?  ಅದರಿಂದ  ಏನು ಪ್ರಯೋಜನ? ಅವನು ಅವನ ಸ್ಥಳದಲ್ಲಿರಲಿ, ನಾನು ನನ್ನ ಸ್ಥಳದಲ್ಲಿರುತ್ತೇನೆ ಎಂದು ಜನ ಹೇಳಬಹುದು. ಆದರೆ ಪುಣ್ಯಕಾರ್ಯಗಳಿಂದ ನಮಗೆ ಸೌಂದರ್ಯ, ಜ್ಞಾನ ಮತ್ತು ಒಳ್ಳೆಯ ಜನ್ಮಗಳು ಲಭಿಸುತ್ತವೆ; ಪಾಪಕಾರ್ಯಗಳಿಂದ ನಮಗೆ ಕಷ್ಟ ಪ್ರಾಪ್ತವಾಗುತ್ತದೆಂದು ಶಾಸ್ತ್ರಗಳಲ್ಲಿ ಹೇಳಿದೆ. ಪುಣ್ಯಕಾರ್ಯ ಮಾಡಲಿ, ಪಾಪಕಾರ್ಯ ಮಾಡಲಿ, ಕಷ್ಟವಂತೂ ಇದ್ದೇ ಇರುತ್ತದೆ.  ಆದರೆ  ಇಲ್ಲಿ  ಒಂದು ವ್ಯತ್ಯಾಸ ಮಾಡಲಾಗಿದೆ. ಯಾವನು ಭಗವಂತನನ್ನು ಅರಿಯುತ್ತಾನೋ  ಅವನು ಪಾಪಕರ್ಮಗಳಿಂದೊದಗಬಹುದಾದ  ಫಲಗಳಿಂದ ಮುಕ್ತನಾಗುತ್ತಾನೆ;  ಎಷ್ಟು ಪುಣ್ಯಕಾರ್ಯಮಾಡಿದರೂ ಈ ಪಾಪಫಲವನ್ನು ತೊಲಗಿಸಲಾಗದು. ಭಗವಂತನನ್ನು ತಿರಸ್ಕರಿಸಿದರೆ, ನಾವು ಎಂದೂ ಸುಖವಾಗಿರಲು ಸಾಧ್ಯವಿಲ್ಲ.

ಮಾನವಕುಲದ ಮಾತಿರಲಿ, ನೀವು ನಮಗಿಂತ ಮುಂದುವರಿದ ಮತ್ತು ಬುದ್ಧಿವಂತರಾದ ದೇವತೆಗಳನ್ನೇ ತೆಗೆದುಕೊಂಡರೂ ಅವರಿಗೂ ಕೃಷ್ಣನ ಬಗೆಗೆ ಗೊತ್ತಿಲ್ಲ. ಧ್ರುವನಕ್ಷತ್ರದ ಸಮೀಪವಿರುವ ಸಪ್ತರ್ಷಿಗಳಿಗೂ ಗೊತ್ತಿಲ್ಲ. ಕೃಷ್ಣನು ಹೇಳುತ್ತಾನೆ – “ನಾನು ಮೂಲ ಪುರುಷ, ಎಲ್ಲ ದೇವತೆಗಳಿಗೂ ಮೂಲ ಕಾರಣ.” ಅವನು ಎಲ್ಲದರ ತಂದೆ, ದೇವತೆಗಳ, ಋಷಿಗಳ ಮೂಲ ಕಾರಣನಲ್ಲದೆ, ಜಗತ್ತಿಗೇ ಮೂಲ ಕಾರಣನು. ವಿಶ್ವರೂಪ ಹೇಗಾಯಿತು? ಪ್ರತಿಯೊಂದೂ ಅವನಿಂದ ಹೇಗೆ ಹುಟ್ಟುತ್ತಿದೆಯೆಂಬುದನ್ನು ಶ್ರೀಮದ್ಭಾಗವತ ಹೇಳುತ್ತದೆ. ಅಲ್ಲದೆ ಕೃಷ್ಣನು ಪರಮಾತ್ಮನ ಮೂಲ ಮತ್ತು ನಿರಾಕಾರ ಬ್ರಹ್ಮಜ್ಯೋತಿ ಅವನಲ್ಲಿದೆ. ಎಲ್ಲದಕ್ಕೂ ಎಲ್ಲ ಕಲ್ಪನೆಗೂ “ನಾನೇ ಮೂಲ”. ಪರಮ ಸತ್ಯನನ್ನು ಮೂರು ಹಂತಗಳಲ್ಲಿ ಅರಿಯಬಹುದು. ಅದು ಒಂದು ಅದ್ವೈತ ಸತ್ಯ, ಬ್ರಹ್ಮನ್‌ (ಬ್ರಹ್ಮಜ್ಯೋತಿ), ಅಂತರ್ಯಾಮಿ ಪರಮಾತ್ಮ ಮತ್ತು ಭಗವಾನ್‌ – ಪರಮ ಪುರುಷ – ಎಂಬುದೇ ಭಗವಂತನ ಆ ಮೂರು ಲಕ್ಷಣಗಳು.

ದೇವೋತ್ತಮ ಪರಮ ಪುರುಷನನ್ನು ಅರಿಯುವುದು ಹೇಗೆ? ಪರಮ ಪ್ರಭುವು ನಿಮ್ಮೆದುರು ಬಂದು ತನ್ನನ್ನು ತಾನು ಪ್ರಕಟಪಡಿಸಿಕೊಂಡಾಗ ನೀವು ಅವನನ್ನು ಅರಿಯಬಹುದು.  ಆಗ  ನೀವು  ತಿಳಿಯಬಹುದು.  ನಮ್ಮ ಇಂದ್ರಿಯಗಳು ಅಪರಿಪೂರ್ಣ. ಆದ್ದರಿಂದ ಅವು ಪರಮ ಸತ್ಯನನ್ನು ಅರಿಯಲಾರವು. ನೀವು ಶರಣಾಗತಿಭಾವದಿಂದ ಜಪಿಸಿದರೆ, ಸಾಕ್ಷಾತ್ಕಾರವು ನಾಲಗೆಯಿಂದ ಆರಂಭವಾಗುತ್ತದೆ. ತಿನ್ನುವುದು, ಶಬ್ದೋಚ್ಚಾರ ಮಾಡುವುದು ನಾಲಿಗೆಯ ಕೆಲಸ. ಕೇವಲ ಪ್ರಸಾದವನ್ನು ಸ್ವೀಕರಿಸುವಂತೆ ನಿಮ್ಮ ನಾಲಗೆಯನ್ನು ಹತೋಟಿಯಲ್ಲಿಟ್ಟು, ಭಗವಂತನ ಪವಿತ್ರನಾಮವನ್ನು ಜಪಿಸಿದರೆ, ನಾಲಗೆಯನ್ನು ಭಗವಂತನಿಗೆ ಒಪ್ಪಿಸುವುದರಿಂದ ಇತರ ಎಲ್ಲ ಇಂದ್ರಿಯಗಳನ್ನೂ ನೀವು ನಿಗ್ರಹಿಸಬಹುದು. ನಿಮಗೆ ನಿಮ್ಮ ನಾಲಗೆಯನ್ನೇ ಹತೋಟಿಯಲ್ಲಿಟ್ಟುಕೊಳ್ಳಲಾಗದಿದ್ದರೆ, ನಿಮ್ಮ ಇಂದ್ರಿಯಗಳನ್ನು ನಿಗ್ರಹಿಸಲು ಸಾಧ್ಯವಿಲ್ಲ. ಪ್ರಸಾದದ ರುಚಿನೋಡಿ ಆಧ್ಯಾತ್ಮಿಕವಾಗಿ ಮುಂದುವರಿಯಿರಿ. ನೀವು ನಿಮ್ಮ ಮನೆಯಲ್ಲಿ ಈ ವಿಧಾನವನ್ನು ಅನುಸರಿಸಬಹುದು; ಕೃಷ್ಣನಿಗೆ ಸಸ್ಯಾಹಾರವನ್ನು ನೈವೇದ್ಯಮಾಡಿ ಹರೇಕೃಷ್ಣ ಮಂತ್ರವನ್ನು ಜಪಿಸಿ, ನಮಸ್ಕಾರ ಮಾಡಿ:

ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯ ಚ ।

ಜಗತ್‌ ಹಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ॥

ಪ್ರತಿಯೊಬ್ಬರೂ ಭಗವಂತನಿಗೆ ಅರ್ಪಣ ಮಾಡಿ ಅನಂತರ ಆ ಆಹಾರವನ್ನು ಸ್ನೇಹಿತರೊಂದಿಗೆ ಸೇವಿಸಬಹುದು. ಕೃಷ್ಣನ ಚಿತ್ರದೆದುರು ಜಪಿಸಿ, ಪರಿಶುದ್ಧ ಜೀವನ ನಡೆಸಬೇಕು. ಆಮೇಲೆ ಪರಿಣಾಮವನ್ನು ಸ್ವಲ್ಪ ನೋಡಿ – ಇಡೀ ಜಗತ್ತೇ ಕಳವಳವೇ ಇಲ್ಲದ ವೈಕುಂಠವಾಗುತ್ತದೆ. ನಮ್ಮಲ್ಲಿ ಎಲ್ಲವೂ ಕಳವಳಕಾರಿಯೇ. ಏಕೆಂದರೆ ನಾವು ಈ ಐಹಿಕ ಜೀವನವನ್ನು ಸ್ವೀಕರಿಸಿದ್ದೇವೆ. ಆಧ್ಯಾತ್ಮಿಕ ಜಗತ್ತು ಇದಕ್ಕೆ ವಿರುದ್ಧವಾಗಿರುತ್ತದೆ. ಆದರೆ ಈ ಐಹಿಕ ಕಲ್ಪನೆಯಿಂದ ಹೊರಬರಲು ಯಾರಿಗೂ ಗೊತ್ತಿಲ್ಲ.  ಮದ್ಯಪಾನ ಮಾಡುವುದರಿಂದ ಪ್ರಯೋಜನವಿಲ್ಲ. ಕುಡಿತದ ಅಮಲು ಇಳಿದೊಡನೆ ಅದೇ ಕಳವಳ ಇದ್ದೇ ಇರುತ್ತದೆ. ಬಿಡುಗಡೆ ಹೊಂದಿ, ನಿಮಗೆ ಜ್ಞಾನಾನಂದಮಯವಾದ ಶಾಶ್ವತಜೀವನ ಬೇಕೆಂದರೆ ಕೃಷ್ಣನನ್ನು ಅವಲಂಬಿಸಿ. ಯಾರೂ ಭಗವಂತನನ್ನು ಅರಿಯಲಾರರು. ಆದರೆ ಒಂದು ವಿಧಾನವಿದೆ: ಕೃಷ್ಣಪ್ರಜ್ಞಾ ವಿಧಾನ.

ಯಾರೂ ಆ ಭಗವಂತನನ್ನು ಗೆಲ್ಲಲಾರರು ಇಲ್ಲವೆ ಅವನ ಬಳಿಸಾರರು. ಆದರೆ ಅವನೇ ಗೆಲ್ಲಲ್ಪಡುತ್ತಾನೆ ಎಂದು ಶ್ರೀಮದ್ಭಾಗವತ ಹೇಳುತ್ತದೆ. ಹೇಗೆ? ಜನರು ತಮ್ಮಷ್ಟಕ್ಕೆ ತಾವು ತೆಪ್ಪಗೆ ಇರಲಿ. ಸಂಪುಟಗಟ್ಟಲೆ ಪುಸ್ತಕಗಳನ್ನು ಅಚ್ಚುಹಾಕಿ ಅವುಗಳ ಮೂಲಕ ಅಬದ್ಧವಾದ ಊಹಾಪೋಹ ಮಾಡುವುದನ್ನು ಬಿಡಲಿ. ಸಾವಿರಾರು ಪುಸ್ತಕಗಳನ್ನು ಮುದ್ರಿಸುತ್ತಾರೆ, ಓದುತ್ತಾರೆ, ಆರು ತಿಂಗಳಾದ ಮೇಲೆ ಅವನ್ನು ಬಿಸಾಡುತ್ತಾರೆ. ಆ ರೀತಿ, ಈ ರೀತಿ ಎಂದು ಏನೇನೋ ಕಲ್ಪನೆಗಳು. ಪರಮ ಪ್ರಭುವನ್ನು ನಿಮ್ಮ ಮೊಂಡ ಇಂದ್ರಿಯಗಳಿಂದ ದೊರಕುವ ಮಾಹಿತಿಯಿಂದ ನೀವು ಹೇಗೆ ತಾನೆ ಅರಿಯಲು ಸಾಧ್ಯ? ಸಂಶೋಧನೆಯನ್ನು ಬಿಡಿ, ಬಿಸಾಡಿ; ಸುಮ್ಮನೆ ಶರಣಾಗಿ. ನೀವು ಸೀಮಿತ ಶಕ್ತಿಯುಳ್ಳವರು; ಭೌತ ಪ್ರಕೃತಿಗೂ ಭಗವಂತನಿಗೂ ಅಧೀನರು ಎಂಬುದನ್ನು ಒಪ್ಪಿಕೊಳ್ಳಿ.  ಯಾರೂ  ಭಗವಂತನಿಗೆ  ಸಮಾನರಾಗಲು ಅಥವಾ  ಅವನಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಆದ್ದರಿಂದ ಭಗವಂತನಿಗೆ ತಲೆಬಾಗಿ. ಅಧಿಕೃತ ಮೂಲಗಳಿಂದ ಪರಮ ಪ್ರಭುವಿನ ಮಹಿಮಾತಿಶಯಗಳನ್ನು ಕೇಳಲು ಪ್ರಯತ್ನಿಸಿ. ಅಂತಹ ಅಧಿಕೃತ ಮಾಹಿತಿ ಪರಂಪರೆಯಿಂದ ಬಂದಿದೆ. ನಾವು ಅರ್ಜುನನಂತಹ ಪ್ರಮಾಣ ಪುರುಷನಿಂದ ಅರಿತರೆ, ಅದೇ ನಿಜವಾದ ಪ್ರಮಾಣ. ಭಗವಂತನು ತನ್ನನ್ನು ತಾನು ಪ್ರಕಟಿಸಿಕೊಳ್ಳಲು ಸದಾ ಸಿದ್ಧ. ಅದಕ್ಕೆ ನೀವು ಕೃಷ್ಣ ಪ್ರಜ್ಞರಾಗಬೇಕು, ಅಷ್ಟೆ. ಪರಮ ಆಚಾರ್ಯರು, ನಿಷ್ಠಾವಂತ ಗುರುಗಳು ನಡೆದ ಹಾದಿಯನ್ನು ಅನುಸರಿಸಿ, ಆಗ ಎಲ್ಲವೂ ತಿಳಿಯುತ್ತದೆ. ಅವನು ಅಜೇಯನೂ ಅಜ್ಞೇಯನೂ ಆಗಿದ್ದರೂ ಅವನನ್ನು ನಿಮ್ಮ ಮನೆಯಲ್ಲೇ ಅರಿಯಬಹುದು.

ಈ ವಿಧಾನವನ್ನನುಸರಿಸಿ, ತತ್ತ್ವಗಳನ್ನು ಪಾಲಿಸಿದರೆ ಫಲಶ್ರುತಿ ಏನು? ಅರಿವು ಮೂಡಿದೊಡನೆ, ಪರಮ ಪ್ರಭುವು ಸಕಲ ಕಾರಣಗಳಿಗೂ ಕಾರಣನು; ಆದರೆ ಅವನು ಯಾವುದೇ ಕಾರಣದಿಂದ ಸೃಷ್ಟಿಯಾದವನಲ್ಲ ಎಂಬ ಅಂಶ ತಿಳಿಯುತ್ತದೆ. ಅವನು ಸಕಲ ಲೋಕಗಳ ಒಡೆಯ. ಇದನ್ನು ಕುರುಡಾಗಿ ಒಪ್ಪಿಕೊಳ್ಳಬೇಕಾಗಿಲ್ಲ. ದೇವರು ನಿಮಗೆ  ತರ್ಕಶುದ್ಧಿಯನ್ನೂ  ವಿವೇಚನಾಶಕ್ತಿಯನ್ನೂ  ಕೊಟ್ಟಿದ್ದಾನೆ.  ಆದರೆ ತಪ್ಪು ತಪ್ಪಾಗಿ ವಾದಿಸಬೇಡಿ. ದಿವ್ಯಜ್ಞಾನ ಸಂಪಾದಿಸಬೇಕು ಎಂದರೆ ನೀವು ಶರಣಾಗಲೇಬೇಕು. ಪ್ರಮಾಣ ಪುರುಷನಿಗೆ ಶರಣಾಗಿ, ಸಂಕೇತಗಳಿಂದ ಅವನನ್ನು ತಿಳಿಯಿರಿ.  ದಡ್ಡನಿಗೋ  ಧೂರ್ತನಿಗೋ ಶರಣಾಗಬೇಡಿ.  ಪರಂಪರೆಯಿಂದ ಬಂದವನನ್ನು, ಪರಮ ಸತ್ಯನ ಬಗ್ಗೆ ಚೆನ್ನಾಗಿ ತಿಳಿದವನನ್ನು ಪತ್ತೆ ಮಾಡಿ. ಅಂತಹ ವ್ಯಕ್ತಿ ಪತ್ತೆಯಾದರೆ, ಅವನಿಗೆ ಶರಣಾಗಿ; ಅವನನ್ನು ಸಂತೋಷಪಡಿಸಿ; ಅವನ ಸೇವೆ ಮಾಡಿ; ಅವನ ಬಳಿ ಕೇಳಿ ತಿಳಿದುಕೊಳ್ಳಿ. ಅವನಿಗೆ ಶರಣಾದರೆ ಭಗವಂತನಿಗೆ ಶರಣಾದಂತೆ. ತಿಳಿಯಲೋಸುಗ ಪ್ರಶ್ನೆ ಮಾಡಿ; ಸಮಯ ವ್ಯರ್ಥ ಮಾಡಲು ಅಲ್ಲ.

ಅದಕ್ಕೊಂದು ವಿಧಾನವಿದೆ. ಮದ್ಯಪಾನಾದಿಗಳಲ್ಲಿ ನೀವು ಸಮಯ ಹಾಳು ಮಾಡಿದರೆ  ಅಜೇಯನಾದ  ಆ  ಭಗವಂತನನ್ನು  ನೋಡಲು ಎಂದಿಗೂ ಸಾಧ್ಯವಾಗುವುದಿಲ್ಲ. ತತ್ತ್ವಗಳನ್ನು ಅನುಸರಿಸಿ; ಆಗ ನಿಧಾನವಾಗಿ, ಖಂಡಿತವಾಗಿ, ನಿಸ್ಸಂಶಯವಾಗಿ  ನಿಮಗೆ  ಅರಿವಾಗುತ್ತದೆ  –  “ಹೌದು,  ನಾನು  ಪ್ರಗತಿ ಸಾಧಿಸುತ್ತಿದ್ದೇನೆ” ಎಂದು ಹೇಳುತ್ತೀರಿ. ಇದು ತುಂಬ ಸುಲಭ. ನೀವು ಅದನ್ನು ಮಾಡಿ ಸುಖವಾದ ಮನಃಸ್ಥಿತಿಯಲ್ಲಿರಬಹುದು. ಅಧ್ಯಯನ ಮಾಡಿ, ಗಾಯನದಲ್ಲಿ ಭಾಗವಹಿಸಿ, ಪ್ರಸಾದ ತಿನ್ನಿ.  ಯಾರೂ ನಿಮ್ಮನ್ನು ಈ  ವಿಧಾನದಿಂದ ಮೋಸಮಾಡಲಾರರು. ಆದರೆ ಮೋಸಹೋದರೆ ಪರವಾಗಿಲ್ಲವೆಂದರೆ ಮೋಸಗಾರರ ಬಳಿಯೇ ಹೋಗಿ.

ಅದನ್ನು ಪ್ರಮಾಣಬದ್ಧವಾದ ಮೂಲದಿಂದ ತಿಳಿದು, ನಿಮ್ಮ ಜೀವನದಲ್ಲಿ ಅದನ್ನು ಅನ್ವಯಿಸಿ. ಮರ್ತ್ಯರಲ್ಲಿ ನೀವು ತುಂಬ ಬುದ್ಧಿವಂತರಾಗುತ್ತೀರಿ. ಏಕೆಂದರೆ ನೀವು  ಪಾಪಫಲಗಳಿಂದ ಮುಕ್ತರಾಗಿರುತ್ತೀರಿ.  ನೀವು  ಕೃಷ್ಣನಿಗೋಸ್ಕರ ಕಾರ್ಯಪ್ರವೃತ್ತರಾದರೆ, ನೀವು ಸಕಲ ಪಾಪಗಳಿಂದಲೂ ಮುಕ್ತರಾಗುವಿರಿ. ಆಗ ನಿಮಗೆ ಶುಭಾಶುಭಗಳ ಬಗ್ಗೆ ಕಳವಳವಿರುವುದಿಲ್ಲ. ಏಕೆಂದರೆ ನೀವು ಪರಮ ಮಂಗಳಕರವಾದದ್ದರ ಸಂಪರ್ಕ ಹೊಂದಿರುತ್ತೀರಿ. ಇದು ವಿಧಾನ. ಕೊನೆಗೆ, ನಾವು ಕೃಷ್ಣನ ಸಂಪರ್ಕ ಹೊಂದಬಹುದು. ಜೀವನ ಸಾರ್ಥಕವಾಗುತ್ತದೆ. ಯಾರು ಬೇಕಾದರೂ ಇದನ್ನು ಅನುಸರಿಸಬಹುದು. ಏಕೆಂದರೆ ಇದು ತುಂಬ ಸರಳವಾದ ವಿಧಾನ.

ಇಲ್ಲಿ ಕೃಷ್ಣನೇ ಸ್ವತಃ ಹೇಳಿರುವ ಸುಂದರವಾದ ಒಂದು ಸೂತ್ರವಿದೆ. ಅವನು ಅಜಾತನು, ಕಾರಣರಹಿತನು. ನಾವೆಲ್ಲ ಹುಟ್ಟು ಇರುವವರು. ನಮಗೊಬ್ಬ ಕಾರಣಕರ್ತ ಇದ್ದಾನೆ ಎಂಬ ಅನುಭವ ನಮಗೆಲ್ಲ ಇದೆ. ನಮ್ಮ ತಂದೆಯೇ ನಮಗೆ ಕಾರಣ. ಯಾರಾದರೂ ತಾನೇ ದೇವರು ಎಂದು ಹೇಳಿಕೊಂಡರೆ, ಆಗ ತಾನು ಅಜಾತ, ಕಾರಣರಹಿತ ಎಂದು ಅವನು ಸಾಬೀತು ಮಾಡಬೇಕು. ನಾವು ಹುಟ್ಟು ಇರುವವರು ಎಂಬುದು ನಮ್ಮ ಅನುಭವಕ್ಕೆ ಬಂದಿರುವ ಸಂಗತಿ. ಕೃಷ್ಣನಿಗೆ ಹುಟ್ಟಿಲ್ಲ. ಇದನ್ನು ನಾವು ತಿಳಿದುಕೊಳ್ಳಬೇಕು. ಅವನೇ ಕಾರಣಕರ್ತನು, ಅವನಿಗೆ ಯಾವ ಕಾರಣವೂ ಇಲ್ಲ ಎಂಬ ಅಂಶವನ್ನು ಖಚಿತವಾಗಿ ತಿಳಿದುಕೊಳ್ಳಬೇಕು. ಅವನು ಕಾರಣವಿಲ್ಲದವನಾದ್ದರಿಂದ ಸಕಲ ಸೃಷ್ಟಿಗೂ ಅವನೇ ಕಾರಣನು. ಈ ಸರಳವಾದ ತತ್ತ್ವವನ್ನು ಅರಿಯುವವನು ಭ್ರಮೆಗೆ ಒಳಗಾಗನು.

ನಾವು ಸಾಮಾನ್ಯವಾಗಿ ಭ್ರಮೆಗೆ ಒಳಗಾಗಿರುತ್ತೇವೆ. ನಾವು ಜಮೀನಿನ ಹಕ್ಕನ್ನು, ಸ್ವಾಮ್ಯವನ್ನು ಸ್ಥಾಪಿಸುತ್ತಿದ್ದೇವೆ. ಆದರೆ ನಾನು ಹುಟ್ಟುವುದಕ್ಕೆ ಮುಂಚೆ ಆ ಜಮೀನು ಅಲ್ಲೇ ಇತ್ತು, ಮತ್ತು ನಾನು ಸತ್ತಮೇಲೂ ಅದು ಇರುತ್ತದೆ. ಒಂದು ದೇಹವಾದ ಮೇಲೆ ಇನ್ನೊಂದು ದೇಹದಲ್ಲಿ, ನಾನು ಎಷ್ಟು ಕಾಲ “ಇದು ನನ್ನ ಜಮೀನು! ಇದು ನನ್ನ ಜಮೀನು!” ಎಂದು ಹೇಳಿಕೊಳ್ಳಲು ಸಾಧ್ಯ? ಇದು ಅಬದ್ಧವಲ್ಲವೆ? ಇಂತಹ ಭ್ರಮೆಯಿಂದ  ಹೊರಬರಬೇಕು.  ನಾವು  ಐಹಿಕ  ಜೀವನ  ಕಲ್ಪನೆಯಲ್ಲಿ ಮಾಡುತ್ತಿರುವುದೆಲ್ಲವೂ ಭ್ರಮೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಭ್ರಮೆಯಲ್ಲಿದ್ದೇವೋ ಇಲ್ಲವೋ ಎಂಬುದನ್ನು ಅರಿಯಬೇಕು. ಎಲ್ಲ ಬದ್ಧಾತ್ಮರೂ ಭ್ರಮಿತರೇ. ಭ್ರಮಾರಹಿತನಾಗಿರುವುದನ್ನು ಕಲಿಯುವವನು ಎಲ್ಲ ಬಂಧನಗಳಿಂದ ಮುಕ್ತನಾಗುತ್ತಾನೆ. ಸಕಲ ಬಂಧನಗಳಿಂದ ನಮಗೆ ಮುಕ್ತಿ ಬೇಕಾದರೆ ನಾವು ಭಗವಂತನನ್ನು ಅರಿಯಬೇಕು. ಇದನ್ನು ಅಲ್ಲಗಳೆಯಬಾರದು; ಇದು ನಮ್ಮ ಆದ್ಯಕರ್ತವ್ಯ.

ಲಕ್ಷಾಂತರ ಜೀವಿಗಳಲ್ಲಿ ಎಲ್ಲೋ ಒಬ್ಬನು ಪ್ರಬುದ್ಧನಾಗಿರಬಹುದು. ಸಾಮಾನ್ಯವಾಗಿ  ನಾವೆಲ್ಲ  ಹುಟ್ಟು  ಮೂರ್ಖರು.  ಹುಟ್ಟಿದೊಡನೆ  ನಾನು ತಂದೆತಾಯಿಗಳಿಂದ ಪೋಷಿತನಾಗಿ, ನನ್ನದೇ ಆದ ಭೂಮಿಕಾಣಿ ಮಾಡಿಕೊಳ್ಳಲು ಓದುಬರಹ ಕಲಿಯುತ್ತೇನೆ. ರಾಷ್ಟ್ರೀಯ ಶಿಕ್ಷಣ ಎಂದರೆ ನಿಮ್ಮನ್ನು ಹೆಚ್ಚು ಮೂರ್ಖರನ್ನಾಗಿ ಮಾಡುವುದು  ಎಂದರ್ಥ.  ನಾನು ಮೂರ್ಖನಲ್ಲವೇ? ಜನ್ಮಜನ್ಮದಲ್ಲೂ ನಾನು ನನ್ನ ದೇಹವನ್ನು ಬಟ್ಟೆಯಂತೆ ಬದಲಾಯಿಸುತ್ತಿದ್ದೇನೆ. ನಿಮ್ಮ ಹತ್ತಿರ ಅನೇಕ ಮನಸ್ಸುಗಳಿವೆ, ಅನೇಕ ಉಡುಪುಗಳಿವೆ. ಇದೊಂದನ್ನೇ ಏಕೆ ನೀವು ನನ್ನದು ಎನ್ನುತ್ತೀರಿ? ನೀವೇಕೆ ಇದನ್ನು ಅರಿಯುವುದಿಲ್ಲ – “ಈ ಉಡುಪು ಚೆನ್ನಾಗಿದೆ, ಆದರೆ ಮರು ಗಳಿಗೆಯಲ್ಲಿ ನಾನು ಇನ್ನೊಂದು ವೇಷದಲ್ಲಿರಬಹುದು?” ನೀವು ಪ್ರಕೃತಿಯ ಹಿಡಿತದಲ್ಲಿದ್ದೀರಿ. ನಿಮಗೆ ಯಾವ ಉಡುಪಿರುತ್ತದೆ ಎಂಬುದನ್ನು ನೀವು ಹೇಳಲಾರಿರಿ – “ಓ ಪ್ರಕೃತಿ, ನನ್ನನ್ನು ಅಮೆರಿಕನನ್ನಾಗಿ ಮಾಡು.” ಸಾಧ್ಯವಿಲ್ಲ. ಭೌತ ಪ್ರಕೃತಿ (ಎಲ್ಲವನ್ನೂ) ನಿಯಂತ್ರಿಸುತ್ತದೆ. ನೀವು ಇಲ್ಲಿ ನಾಯಿಯಂತೆ ಬದುಕಿದರೆ, ನಾಯಿಯ ವೇಷ ಧರಿಸಿ. ನೀವು ದೇವರಂತಹ ಜೀವನ ನಡೆಸಿದರೆ ಭಗವಂತನನ್ನು ಪಡೆಯಿರಿ.

ಅನೇಕಾನೇಕ ಮೂರ್ಖರಲ್ಲಿ ಯಾರೋ ಒಬ್ಬನು ಮಾತ್ರ `ನಾನು ನಿಜವಾಗಿ  ಯಾರು’ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ನಾಯಿ? ಅಮೆರಿಕನ್‌? ರಷ್ಯನ್‌? ಈ ರೀತಿ ಪ್ರಶ್ನೆ ಹಾಕಿಕೊಳ್ಳುವುದು ನಡೆಯುತ್ತಲೇ ಇರುತ್ತದೆ. ನೀವು ಇದನ್ನು ವಿಚಾರ ಮಾಡಬೇಕಾದರೆ, ಯಾರನ್ನಾದರೂ ಕೇಳಬೇಕೇ ಹೊರತು ನಿಮ್ಮನ್ನು ನೀವು ಕೇಳಿಕೊಳ್ಳಬಾರದು. ನಿಮಗೆ ಗೊತ್ತಿಲ್ಲದ ಒಂದು ಸ್ಥಳದಲ್ಲಿ ರಸ್ತೆ ದಾಟುವಾಗ ನೀವು ಪೊಲೀಸಿನವನನ್ನೋ ಬೇರೊಬ್ಬನನ್ನೋ ಕೇಳಬೇಕು. “ನಾನು ಯಾರು” ಎನ್ನುವುದನ್ನು ತಿಳಿಯಲು ನೀವು ಒಬ್ಬ ಪ್ರಮಾಣ ಪುರುಷನ ಬಳಿ ಹೋಗಬೇಕು. ಗುರು ಯಾರು? ಕೃಷ್ಣನ ಜ್ಞಾನವಿರುವವನೇ ಗುರು. ಸಾಮಾನ್ಯವಾಗಿ ಯಾರೂ ವಿಚಾರ ಮಾಡುವುದೇ ಇಲ್ಲ. ಆದರೆ ಮಾನವನು ವಿಚಾರ ಮಾಡಿದರೆ, ಅವನು ಪ್ರಗತಿ ಸಾಧಿಸಿ, ಕೃಷ್ಣನೇ ಸಕಲ  ಕಾರಣಗಳಿಗೂ ಮೂಲಕಾರಣನು ಎಂಬ ಅರಿವಿಗೆ ಬರಬಹುದು.

ನಾಲ್ಕು ಬಗೆಯ ಜನರು, ಶಾಸ್ತ್ರವನ್ನು ಪ್ರಮಾಣ ಗ್ರಂಥವನ್ನು ಅನುಸರಿಸುವವರು ಕೃಷ್ಣನ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾರೆ. ಪಾಪಕಾರ್ಯಗಳ ಚಟದಲ್ಲಿರುವವರು ಹೀಗೆ ಕೇಳಿ ತಿಳಿಯಲಾರರು. ಅವರು ಮದ್ಯಪಾನದಲ್ಲಿ ತೊಡಗಿರುತ್ತಾರೆ. ಧರ್ಮ ಪರಾಯಣನೂ ಋಜುಮಾರ್ಗದಲ್ಲಿರುವವನೂ ವಿಚಾರ ಮಾಡಿ ದೇವರ ಬಳಿ ಹೋಗುತ್ತಾನೆ. ಪ್ರಮಾಣ ಗ್ರಂಥಗಳು ಇದಕ್ಕಾಗಿ ಅನುಕೂಲ ಮಾಡಿಕೊಟ್ಟಿವೆ.  ಇದು  ಜನರ  ಸಂತೋಷಕ್ಕಾಗಿಯೇ  ಹೊರತು ಅವರನ್ನು ಶೋಷಿಸುವುದಕ್ಕಲ್ಲ. ಇಸ್ಕಾನ್‌ನ ಉದ್ದೇಶ ಈ ರೀತಿಯಲ್ಲಿ ದೇವತಾಶಾಸ್ತ್ರವನ್ನು ಅರಿಯುವುದು. ನಿಮಗೆ ಸುಖ ಬೇಕು, ಅದು ಇಲ್ಲಿದೆ ನೋಡಿ. ಪಾಪಕಾರ್ಯಗಳಿಂದ ನೀವು ದುಃಖಕ್ಕೆ ಗುರಿಯಾಗಿದ್ದೀರಿ. ಪಾಪವಿಲ್ಲದಿದ್ದರೆ ಕಷ್ಟವೂ ಇಲ್ಲ. ಯಾರು ನಿಸ್ಸಂದಿಗ್ಧವಾಗಿ ಕೃಷ್ಣನನ್ನು ಬಲ್ಲರೋ ಅವರಿಗೆ ಯಾವ ಪಾಪಫಲಗಳೂ ಅಂಟವು. ಕೃಷ್ಣನು “ನನ್ನ ಬಳಿಗೆ ಬನ್ನಿ, ನಾನು ನಿನ್ನ ಪಾಪಗಳಿಂದ ಮುಕ್ತಿ ಕೊಡುತ್ತೇನೆ,” ಎಂದು ಹೇಳಿದ್ದಾನೆ. ಈ ಮಾತನ್ನು ನಂಬದಿರಬೇಡಿ. ಅವನು ನಿಮಗೆ ಆಶ್ರಯ ಕೊಡಬಲ್ಲನು. ಅವನಿಗೆ ಸಕಲ   ಶಕ್ತಿಯೂ   ಇದೆ.   ನಾನು   ಹಾಗೆ   ಮಾತುಕೊಟ್ಟರೆ   ನಾನು ವಚನಭ್ರಷ್ಟನಾಗಬಹುದು; ಏಕೆಂದರೆ ನನ್ನಲ್ಲಿ ಅಂತಹ ಶಕ್ತಿಯಿಲ್ಲ.

ನೀವು ಕೃಷ್ಣಪ್ರಜ್ಞೆ ಬೆಳೆಸಿಕೊಂಡರೆ, ನಿಮಗೂ ಕೃಷ್ಣನಿಗೂ ಇರುವ ಸುಪ್ತ ಸಂಬಂಧ ಜಾಗೃತವಾಗುತ್ತದೆ. ನಿಮಗೂ ಆ ಭಗವಂತನಿಗೂ ಒಂದು ಸಂಬಂಧವಿದೆ. ಅದನ್ನು  ನಂಬದಿರುವ  ಪ್ರಶ್ನೆಯೇ  ಉದ್ಭವಿಸದು.  ಅದು ಶುದ್ಧ ಮೂರ್ಖತನ.  ಸುಪ್ತ ಸಂಬಂಧ ಇದ್ದೇ ಇದೆ. ಕೃಷ್ಣನ ಸೇವೆ ಮಾಡಲು ನಿಮಗೆ ಇಷ್ಟವಿದೆ. ಆದರೆ ಮಾಯೆಯಿಂದ ನಮಗೂ ಕೃಷ್ಣನಿಗೂ ಯಾವ ಸಂಬಂಧವೂ ಇಲ್ಲವೆಂದು ನಾವು ಭಾವಿಸುತ್ತೇವೆ. ನಾವು “ಸ್ವತಂತ್ರರೆಂದು ಎಲ್ಲವನ್ನೂ ಮಾಡಲು ಹೋಗುತ್ತೇವೆ; ಆದ್ದರಿಂದ ನಾವು ಸದಾ ಕಳವಳದಿಂದಿರುತ್ತೇವೆ. ನಾವು ಕೃಷ್ಣನ ಈ ಸುಪ್ತಭಾವನೆಗಳಲ್ಲಿ ತೊಡಗಿದ್ದರೆ, ನಾವು ಕೃಷ್ಣಪ್ರಜ್ಞೆಯಲ್ಲಿರುತ್ತೇವೆ.

“ಭಗವಂತನು ಜನ್ಮ ರಹಿತನು” ಎಂಬುದು ಅವನು ಐಹಿಕ ಜಗತ್ತಿನಿಂದ ಬೇರೆ ಎಂಬುದನ್ನು ಸೂಚಿಸುತ್ತದೆ. ನಮಗೆ ಹುಟ್ಟಿಲ್ಲದ್ದು ಎಂಬುದರ ಬಗ್ಗೆ ಅನುಭವವಿಲ್ಲ. ಈ ಪಟ್ಟಣ ಹುಟ್ಟಿತು ಎಂದು ನಾವು ಹೇಳುತ್ತೇವೆ. ಚರಿತ್ರೆಯು ತಾರೀಖುಗಳಿಂದ ತುಂಬಿದೆ. ಆದರೆ, ಆಧ್ಯಾತ್ಮಿಕ ಗುಣ ಜನ್ಮರಹಿತ. ನಾವು ಒಮ್ಮೆಲೇ ಈ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. ಐಹಿಕ ಪ್ರಕೃತಿಗೆ ಹುಟ್ಟು ಇದೆ. ನೀವು ಇದನ್ನು ಅಥರ್ಮಾಡಿಕೊಳ್ಳಬೇಕು. ಕೃಷ್ಣನು ಜನ್ಮರಹಿತನಾದರೆ ಅವನು ಚಿನ್ಮಯ; ಅವನು ನಮ್ಮಲ್ಲಿ ಒಬ್ಬರಂತಲ್ಲ. ಕೃಷ್ಣನು “ಯಾವನೋ ಒಬ್ಬ ಹುಟ್ಟಿರುವ ಅಸಾಧಾರಣ ವ್ಯಕ್ತಿಯಲ್ಲ” ಅವನು ಅಜನ್ಮನು. ಆದ್ದರಿಂದ ಅವನು ಸಾಧಾರಣ ಮನುಷ್ಯನೆಂದು ಹೇಗೆ ತಾನೆ ತೀರ್ಮಾನಿಸಲಿ? ಗೀತೆಯಲ್ಲಿ ಕೃಷ್ಣನು, “ಮೂರ್ಖರೂ ದುರುಳರೂ ನಾನೊಬ್ಬ ಹುಲುಮಾನವನೆಂದು ಭಾವಿಸುತ್ತಾರೆ” ಎಂದು ಹೇಳುತ್ತಾನೆ. ಅವನು ಈ ಜಗತ್ತಿನಲ್ಲಿರುವ ಎಲ್ಲಕ್ಕಿಂತ ಭಿನ್ನ. ಅವನು ಅನಾದಿ, ಮೂಲರಹಿತನು.

ಕೃಷ್ಣನು ಚಿನ್ಮಯನಾಗಿರಬಹುದು. ಆದರೆ ಇನ್ನೂ ಇತರ ಚಿನ್ಮಯ ಶರೀರಗಳಿವೆ. ನಮ್ಮಲ್ಲಿ ಕೃಷ್ಣನ ಶರೀರದಂತಹ ಚಿನ್ಮಯ ಶರೀರಗಳಿವೆ. ಆದರೆ ಅವೆಲ್ಲ ಹುಟ್ಟಿರುವಂತಹವು. ಅವು ಹುಟ್ಟು ಇರುವಂತಹವು ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಅವು ಬೆಂಕಿಯ ಕಿಡಿಗಳಂತೆ. ಕಿಡಿಗಳು ಬೆಂಕಿಯಿಂದ ಹುಟ್ಟಿದವಲ್ಲ; ಅವು ವಾಸ್ತವವಾಗಿ ಅಲ್ಲಿರುತ್ತವೆ. ನಾವೂ ಹುಟ್ಟಿಲ್ಲ.  ನಾವು ಮೂಲರೂಪದಿಂದ ಹೊರಬರುವ ಕಿಡಿಗಳು. ನಾವು ಹುಟ್ಟಿಲ್ಲದಿದ್ದರೂ ಆ ಕಿಡಿ ಕೃಷ್ಣನಿಂದ ಹೊರಸೂಸುತ್ತದೆ. ಆದ್ದರಿಂದ ನಾವು ಬೇರೆ. ಬೆಂಕಿಯ ಕಿಡಿಗಳೂ ಬೆಂಕಿಯೇ. ಆದರೆ ಅವು ಮೂಲ ಅಗ್ನಿಯಲ್ಲ. ಸ್ವಭಾವತಃ ನಾವೂ ಕೃಷ್ಣನೂ ಒಂದೇ. ಅದು ತಂದೆ ಮಗನ ನಡುವಣ ವ್ಯತ್ಯಾಸವಿದ್ದಂತೆ. ತಂದೆ ಮತ್ತು ಮಗ ಏಕಕಾಲದಲ್ಲಿ ಬೇರೆ ಬೇರೆಯೂ ಒಂದೇಯೂ ಆಗಿರುತ್ತಾರೆ. ಮಗನು ತಂದೆಯ ವಿಸ್ತರಣ. ಆದರೆ ಅವನು ತಾನೇ ತಂದೆ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಅದು ಮೂರ್ಖತನ.

ಕೃಷ್ಣನು ತಾನೇ ಪರಮ ಶ್ರೇಷ್ಠನೆಂದು ಹೇಳುತ್ತಿರುವುದರಿಂದ, ಅವನು ಬೇರೆ ಯಾವುದೇ ವಸ್ತುವಿಗಿಂತ ಭಿನ್ನನು. ನಾನು ನ್ಯೂಯಾರ್ಕ್‌ ಸಂಸ್ಥಾನದ ಒಡೆಯನಾದರೆ ನಾನೇ ನ್ಯೂಯಾರ್ಕ್‌ ಸಂಸ್ಥಾನವಲ್ಲ. ಪ್ರತಿಯೊಂದು ಹಂತದಲ್ಲೂ ಇಬ್ಬಂದಿತನ ಇದೆ. ನಾವೂ ಭಗವಂತನೂ ಪೂರ್ಣವಾಗಿ ಒಂದೇ ಎಂದು ಯಾರೂ ಹೇಳಲು ಸಾಧ್ಯವಿಲ್ಲ.

ನೀವು ಕೃಷ್ಣನ ಮತ್ತು ನಿಮ್ಮ ಸ್ಥಾನವನ್ನು ಒಳ್ಳೆಯ ವಿಶ್ಲೇಷಣಾತ್ಮಕ ರೀತಿಯಲ್ಲಿ  ಅರಿಯಬಲ್ಲವರಾದರೆ,  ನೀವು  ಕೂಡಲೇ  ಪಾಪಫಲಗಳಿಂದ ಮುಕ್ತರಾಗುತ್ತೀರಿ.  ಈ  ವಿಧಾನ ನಿಮಗೆ ಸಹಾಯಕವಾಗುತ್ತದೆ.  ಹರೇಕೃಷ್ಣ ಮಂತ್ರವನ್ನು ಜಪಿಸಿ ನಿಮ್ಮ ಮನಸ್ಸನ್ನು ಪಾವನಗೊಳಿಸಿದರೆ ನೀವು ಕೃಷ್ಣನ ಸಂದೇಶವನ್ನೂ ಪಡೆಯುತ್ತೀರಿ. ಮಾನವನು ಈ ಅರ್ಹತೆಯನ್ನು ಸಂಪಾದಿಸಬೇಕು. ಹಣ ಸಂಪಾದಿಸುವ ಉದ್ದೇಶವಿಲ್ಲದೆ ನೀವು ಜಪ, ಶ್ರವಣ ಮಾಡಿದರೆ ನೀವು ದೇವರನ್ನು ಸೇರುತ್ತೀರಿ. ಆಗ ಎಲ್ಲ ವಿಷಯಗಳೂ ಸ್ಪಷ್ಟವಾಗುತ್ತವೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi