ಆಕರ: ಬ್ಯಾಕ್ ಟು ಗಾಡ್‌ಹೆಡ್ ಪತ್ರಿಕೆ
ಸೀತೆಯನ್ನು ಜಗದ್ ಮಾತಾ, “ವಿಶ್ವದ ಮಾತೆ” ಎಂದು ಕರೆಯುತ್ತಾರೆ. ಸೀತೆಯನ್ನು ರಕ್ಷಿಸುವ ನೆಪದಲ್ಲಿ ರಾಮನು ರಾವಣನನ್ನು ಸಂಹರಿಸಿದನು ಮತ್ತು ಈ ಲೋಕವನ್ನು ಕಾಪಾಡಿದನು.
ನಮಗೆ ರಾಮರಾಜ್ಯ ಬೇಕೆಂದರೆ, ನಾವು ನಮ್ಮಲ್ಲಿಯೇ ಕೇಳಿಕೊಳ್ಳಬೇಕು,
“ರಾಮನ ಪ್ರೀತಿಯ ಸೇವಕನಾಗಲು ನಾನು ಸಿದ್ಧವಾಗಿರುವೆನಾ?”
ಪಾಶ್ಚಿಮಾತ್ಯ ಜನರು ಅರ್ಥ ಮಾಡಿಕೊಂಡಿರುವಂತೆ, ದಾಖಲಾದ ಇತಿಹಾಸಕ್ಕೂ ತುಂಬ ಮೊದಲು, ರಘುವಂಶದಲ್ಲಿ ರಾಮಚಂದ್ರನ ಅವತಾರವಾಯಿತು.
ಈಗಿನ ಕಾಲದಲ್ಲಿ ಅನೇಕ ಕೆಟ್ಟ ನಾಯಕರು ಇರುವಂತೆ, ಬಹಳ ಹಿಂದೆ ರಾವಣ ಎಂಬ ಅಸುರನಿದ್ದ. ಅವನ ಹೆಸರೇ ಹೇಳುವಂತೆ ಅವನು ಇಡೀ ಲೋಕವು ರೋದಿಸುವಂತೆ ಮಾಡಿದ್ದ. ರಾವಣನು ವಿಶ್ವದ ಸೃಷ್ಟಿಕರ್ತ ಬ್ರಹ್ಮನ ಅನುಗ್ರಹವನ್ನು ಪಡೆದಿದ್ದ. ಯಾವುದೇ ದೇವರಿಂದ ತನ್ನ ಸಂಹಾರವಾಗಬಾರದೆಂಬ ವರವನ್ನು ಪಡೆದಿದ್ದ. ಇನ್ನು ಮಾನವ ಜೀವಿಗಳನ್ನು ತಿರಸ್ಕಾರದಿಂದ ಕಾಣುತ್ತಿದ್ದ ರಾವಣನು ಮಾನವ ಜೀವಿಗಳಿಂದ ಸಾವು ಬೇಡ ಎಂದು ಕೇಳುವುದೇ?
ಕಟ್ಟು ಕಥೆಯಲ್ಲ
ವಿಶ್ವವನ್ನು ನಿರ್ವಹಿಸುವ ಪರಮ ಜೀವಿಗಳ ಕೈಯಿಂದ ತನಗೆ ಸಾವು ಸಂಭವಿಸಬಾರದೆಂದು ರಾವಣನು ಹಿಂದೆ, ಬಹಳ ಹಿಂದೆ ಬ್ರಹ್ಮನಿಂದ ವರವನ್ನು ಪಡೆದನೆಂದು ಕೇಳಿದಾಗ ಅದನ್ನು ಕಟ್ಟು ಕಥೆ ಎಂದು ಭಾವಿಸಬಾರದು. ಉದಾಹರಣೆಗೆ, ಈ ನಗರದ ನಿರ್ವಹಣೆಗೆ ತರಬೇತಿ ಪಡೆದ ಜನರಿದ್ದಾರೆ ಎನ್ನುವುದನ್ನು ಬುದ್ಧಿವಂತನು ಅರ್ಥಮಾಡಿಕೊಳ್ಳುತ್ತಾನೆ. ದೀಪಗಳು ತಂತಾನೇ ಉರಿಯುವುದಿಲ್ಲ, ಸಂಚಾರದ ಸೂಚನಾ ದೀಪಗಳು ಕಾರ್ಯ ನಿರ್ವಹಿಸುವುದಿಲ್ಲ. ಅಲ್ಲಿ ವಿದ್ಯುತ್ ಇರುತ್ತದೆ. ನಲ್ಲಿ ತಿರುಗಿಸಿದರೆ ನೀರು ಬರುತ್ತದೆ, ಒಂದು ವ್ಯವಸ್ಥಿತ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗಳಿಗೆ ತಲಪಿಸಲಾಗುವುದು ಇತ್ಯಾದಿ.
ಇವೆಲ್ಲವೂ ಸ್ವಯಂಚಾಲಿತವಲ್ಲ. ಆದರೆ ಒಂದು ಮಗು ಅಥವಾ ಪ್ರಾಣಿಯ ದೃಷ್ಟಿಯಲ್ಲಿ ಇದು ಸ್ವಯಂ ಚಾಲಿತ. ಅದೇ ರೀತಿ ಈ ಅಗಾಧ ದೀಪ, ಅಗಾಧ ನೀರು ಪೂರೈಕೆ, ಗಾಳಿ ಮುಂತಾದ ವಿಶ್ವದೊಳಗಿನ ಶಕ್ತಿಗಳು ಸ್ವಯಂ ಕಾರ್ಯ ನಿರ್ವಹಿಸುತ್ತಿವೆ ಎನ್ನುವ ಆಧುನಿಕ ದೃಷ್ಟಿಕೋನವು ಉನ್ನತ ಅಥವಾ ವೈಜ್ಞಾನಿಕ ಭಾವನೆಯಲ್ಲ. ಬದಲಿಗೆ ಅದು ಮಗು ಅಥವಾ ಪ್ರಾಣಿಯ ದೃಷ್ಟಿ.
ಹೆಚ್ಚುಕಡಮೆ ಜನರು ಈಗ ಪ್ರಾಣಿಗಳಂತಾಗಿರುವುದನ್ನು ನಾವು ನೋಡುತ್ತಿದ್ದೇವೆ. ಅದನ್ನು ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ :
ಆಹಾರ ನಿದ್ರಾ ಭಯ ಮೈಥುನಂ ಚ
ಸಾಮಾನ್ಯಂ ಏತತ್ ಪಶುಭಿರ್ ನರಾಣಾಂ ।
ಧರ್ಮೋ ಹಿ ತೇಶಾಂ ಅಧಿಕೋ ವಿಶೇಷೋ
ಧರ್ಮೇಣ ಹೀನಾಃ ಪಶುಭಿಃ ಸಮಾನಾಃ ॥
ಇಲ್ಲಿನ ಮೊದಲ ವಾಕ್ಯ ಏನೆಂದರೆ, ತಿನ್ನುವುದು, ಮಲಗುವುದು, ಮೈಥುನ ಮತ್ತು ರಕ್ಷಣೆಯಂತಹ ಮೂಲ ಕರ್ಮಗಳಲ್ಲಿ ಜೀವಿ ಮತ್ತು ಪ್ರಾಣಿಗಳ ನಡುವೆ ವ್ಯತ್ಯಾಸವಿಲ್ಲ. ನಾವು ಉಣ್ಣುತ್ತೇವೆ, ಪ್ರಾಣಿಗಳೂ ತಿನ್ನುತ್ತವೆ. ನಾವು ಮಲಗುತ್ತೇವೆ, ಪ್ರಾಣಿಗಳೂ ಮಲಗುತ್ತವೆ. ಆದರೆ, ಧರ್ಮೋ ಹೀ ತೇಶಾಂ ಅಧಿಕೋ ವಿಶೇಷಃ – ಮಾನವನ ನಿರ್ದಿಷ್ಟ ಪಾರಮ್ಯವು ಧರ್ಮದಲ್ಲಿದೆ. ಭಗವಂತನ ಕಾನೂನನ್ನು ತಿಳಿದುಕೊಳ್ಳುವ ಮತ್ತು ಇಚ್ಛಾಪೂರ್ವಕವಾಗಿ, ಪ್ರಜ್ಞಾಪೂರ್ವಕವಾಗಿ ಪಾಲಿಸುವ ಸಾಮರ್ಥ್ಯ ಜೀವಿಗಿದೆ. ಸಾಮಾನ್ಯವಾಗಿ ಅಂತಹ ಸಾಮರ್ಥ್ಯವು ಕೆಳ ಮಟ್ಟದ ಜೀವ ರೂಪಗಳಲ್ಲಿ ಇರುವುದಿಲ್ಲ. ಆದುದರಿಂದ ಭಗವಂತನ ಕಾನೂನುಗಳಿವೆ ಮತ್ತು ಉನ್ನತ ಆಧ್ಯಾತ್ಮಿಕ ತತ್ತ್ವಗಳಿವೆ ಎನ್ನುವುದನ್ನು ಯಾವುದೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳದ, ಧರ್ಮನಷ್ಟಹೊಂದಿದ ಮಾನವ ಜೀವಿಯು ಪ್ರಾಣಿಗೆ ಸಮ.
ನನಗೆ ನನ್ನ ಹಕ್ಕುಗಳಿವೆ ಎನ್ನುವುದೇ ಈಗಿರುವ ಏಕೈಕ ಧರ್ಮ. ಧರ್ಮದ ಬಗೆಗೆ ಹೆಚ್ಚಿನ ಮಾತುಕತೆ ಇಲ್ಲ. ಮಾತುಕತೆ ಹಕ್ಕುಗಳ ಪರಿಭಾಷೆಯಲ್ಲಿಯೇ ಇರುತ್ತದೆ. ನನ್ನ ದೇಹದ ಸುಖಕ್ಕಾಗಿ ಏನು ಮಾಡಲೂ ನನಗೆ ಹಕ್ಕು ಇದೆ. ನನ್ನ ದೇಹ ನನಗೆ ಸೇರಿದ್ದು, ನನಗೆ ಇಷ್ಟವಾದರೆ ನಾನು ನನ್ನ ಮಗುವನ್ನು ಕೊಲ್ಲಬಹುದು. ನಾನು ಏನನ್ನೂ ಬೇಕಾದರೂ ಮಾಡುವೆ. ಜನರು ಪ್ರಾಣಿಗಳಂತಾಗಿರುವುದರಿಂದ, ಅವರಿಗೆ ಧರ್ಮ ಇಲ್ಲದಿರುವುದರಿಂದ ಪ್ರಕೃತಿಯ ವ್ಯವಸ್ಥೆಯ ಹಿಂದಿರುವ ಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.
ಸರ್ವಮಾನ್ಯ ನಿರ್ವಾಹಕರು
ಲೋಕವನ್ನು ನಿರ್ವಹಿಸುವ ದೇವತೆಗಳು, ಬುದ್ಧಿಜೀವಿಗಳು ಇದ್ದಾರೆ. ಬಹಳ ಹಿಂದೆ ಬ್ರಹ್ಮನು ರಾವಣನಿಗೆ ವರವನ್ನು ನೀಡಿದ. ದೇವತೆಯರಿಂದ ಅವನಿಗೆ ಸಾವಿಲ್ಲ ಎಂಬ ವರ. ಮಾನವ ಜೀವಿಗಳನ್ನು ತಿರಸ್ಕಾರದಿಂದ ಕಾಣುತ್ತಿದ್ದ ರಾವಣನು ಮಾನವರಿಂದ ರಕ್ಷಣೆ ಬೇಕೆಂದು ಕೇಳಲಿಲ್ಲ. ದೇವತೆಯರು ದೇವೋತ್ತಮನ ಬಳಿಗೆ ಹೋಗಿ ಪ್ರಾರ್ಥಿಸಿದರು, “ಪ್ರಭು, ಮಾನವ ಜೀವಿಗಳ ಪಾತ್ರವನ್ನು ನಿರ್ವಹಿಸಲು ಈ ಲೋಕಕ್ಕೆ ಬರಬೇಕೆಂದು ಕೋರುತ್ತೇವೆ. ಏಕೆಂದರೆ ರಾವಣನ ಒಪ್ಪಂದದಲ್ಲಿ ಇರುವ ಲೋಪ ಅದು. ರಾವಣನನ್ನು ಮಾನವ ಜೀವಿಯು ಸಂಹರಿಸಬಹುದು.”
ದೇವತೆಗಳಿಗೆ ರಾವಣ-ಬ್ರಹ್ಮನ ಒಪ್ಪಂದವನ್ನು ಮುರಿಯದೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಬೇಕಾಗಿತ್ತು. ನೀವು ಕಂಪನಿಯ ಮಾಲೀಕತ್ವ ಹೊಂದಿರುತ್ತೀರಿ ಮತ್ತು ಯಾರೊಂದಿಗೋ ಒಪ್ಪಂದಕ್ಕೆ ಸಹಿ ಹಾಕುವಿರಿ. ಆ ಒಪ್ಪಂದವು ಅನುಕೂಲವಾಗಿಲ್ಲದಿದ್ದರೆ ಅಥವಾ ಏನೋ ಹಾನಿ ಉಂಟುಮಾಡುವಂತಿದ್ದರೆ, ಒಪ್ಪಂದದ ನಿಯಮಗಳನ್ನು ಉಲ್ಲಂಘಿಸದೆ ಪರಿಹಾರ ಕಂಡುಕೊಳ್ಳಲು ನೀವು ಬಯಸುತ್ತೀರಿ. ಏಕೆಂದರೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಈ ದೃಷ್ಟಿಯಲ್ಲಿ ದೇವತೆಗಳ ಮನವಿಯು ಗಮನಾರ್ಹ.
ದೇವೋತ್ತಮನಾದ ಭಗವಂತನು ಈ ಲೋಕಕ್ಕೆ ಬರಬಹುದು ಎನ್ನುವುದೂ ವಿಶಿಷ್ಟವಾದುದೇ. ನೀವು ಮಾಲೀಕರಾಗಿ ಯಾವುದೋ ಸಂಸ್ಥೆಯನ್ನು ಸ್ಥಾಪಿಸಿದರೆ, ಮತ್ತು ಅದು ನಿಮ್ಮ ಆಡಳಿತದಲ್ಲಿದ್ದರೆ, ಕಾರ್ಖಾನೆ, ಕಚೇರಿ, ಔಷಧಾಲಯ, ಅಥವಾ ಬೇರೆ ಏನೇ ಆಗಿರಬಹುದು, ಯಾರೂ ನಿಮ್ಮನ್ನು ಅಲ್ಲಿಗೆ ಹೋಗಲು ತಡೆಯಲಾರರು. ನಿಮ್ಮನ್ನು ಯಾರು ತಡೆಯುತ್ತಾರೆ? ಆದುದರಿಂದ, ಕೃಷ್ಣನಿಗೆ ಅಥವಾ ದೇವರಿಗೆ ಈ ಲೋಕಕ್ಕೆ ಬರಬೇಕೆನಿಸಿದರೆ, ಅವನು ಬರುತ್ತಾನೆ.
ನಿಮ್ಮಲ್ಲಿ ಬಹಳ ಜನರಿಗೆ ತಿಳಿದಿರುವಂತೆ, ಭಗವಂತನು ಈ ಲೋಕಕ್ಕೆ ಪರಿಪೂರ್ಣ ರಾಜ ಶ್ರೀರಾಮನಾಗಿ ಬಂದ. ಪಾಪಿ ರಾವಣನು ರಾಮನ ಸತಿ, ಆದರ್ಶ ಮಹಿಳೆ ಸೀತೆಯನ್ನು ಅದು ಹೇಗೋ ಅಪಹರಿಸಿದ. ಸೀತೆಯನ್ನು ಜಗದ್ ಮಾತಾ, “ವಿಶ್ವದ ಮಾತೆ” ಎಂದು ಕರೆಯುತ್ತಾರೆ. ಸೀತೆಯನ್ನು ರಕ್ಷಿಸುವ ನೆಪದಲ್ಲಿ ರಾಮನು ರಾವಣನನ್ನು ಸಂಹರಿಸಿದನು ಮತ್ತು ಈ ಲೋಕವನ್ನು ಕಾಪಾಡಿದನು.
ರಾವಣನ ವ್ಯಕ್ತಿತ್ವದ ಬಗೆಗೆ ಅಧ್ಯಯನ ಮಾಡಿದರೆ ಅನೇಕ ರೀತಿಯಲ್ಲಿ ಅವನು ಮುಂದುವರಿದವನಾಗಿದ್ದನು ಮತ್ತು ಶಿಕ್ಷಿತನಾಗಿದ್ದನು ಎನ್ನುವುದು ನಿಮಗೆ ತಿಳಿಯುತ್ತದೆ. ಅವನ ಸಾಮ್ರಾಜ್ಯ ಶ್ರೀಲಂಕಾವು ಅದೆಷ್ಟು ಸುಶಿಕ್ಷಿತವಾಗಿತ್ತೆನ್ನುವುದನ್ನು ಅರಿಯಬಹುದು. ರಾಮ ಭಕ್ತ ಹನುಮಂತ ಕೂಡ ಲಂಕಾದ ಸಾಂಸ್ಕೃತಿಕ ಮಟ್ಟವನ್ನು ಮೆಚ್ಚಿಕೊಂಡಿದ್ದ. ಅಲ್ಲಿ ಅನೇಕ ರೀತಿಯ ಕಲೆ, ಸಂಸ್ಕೃತಿ ಮತ್ತು ಕಾವ್ಯಗಳಿದ್ದವು. ಅಲ್ಲಿ ಸುಂದರ ಜನರಿದ್ದರು. ಅಲ್ಲಿ ಪ್ರತಿಯೊಂದನ್ನೂ ತುಂಬ ಚೆನ್ನಾಗಿ ವ್ಯವಸ್ಥೆಗೊಳಿಸಲಾಗಿತ್ತು. ಅತ್ಯುನ್ನತ ಆರ್ಥಿಕ ವೃದ್ಧಿ ಅಲ್ಲಿತ್ತು. ವಾಸ್ತುಶಿಲ್ಪವು ಅತ್ಯಾಕರ್ಷಕವಾಗಿತ್ತು. ವಾಸ್ತವವಾಗಿ, ಅದು ಬದುಕಲು ಪ್ರಶಸ್ತವಾದ ಸ್ಥಳವೆಂದು ಪ್ರತಿಯೊಂದು ದೃಷ್ಟಿಯಿಂದಲೂ ಹೇಳಬಹುದಿತ್ತು.
ಶ್ರೀಲ ಪ್ರಭುಪಾದರು ಪದೇ ಪದೇ ಹೇಳಿದಂತೆ ರಾವಣನ ಕಾರ್ಯಕ್ರಮದಲ್ಲಿ ಒಂದೇ ಒಂದು ಲೋಪದೋಷವಿತ್ತು. ರಾವಣನ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಇದ್ದ ದೋಷವೆಂದರೆ ಅವನು ನಾರಾಯಣನಿಲ್ಲದೆ (ರಾಮ) ಲಕ್ಷ್ಮೀ (ಸೀತೆ) ಯೊಂದಿಗೆ ಸುಖಿಸಬೇಕೆಂದು ಬಯಸಿದ. ಲಕ್ಷ್ಮಿಯು ಅದೃಷ್ಟ ದೇವತೆ. ದೇವೋತ್ತಮ ನಾರಾಯಣನು ಅವಳ ಪತಿ.
ಕೃಷ್ಣನು 5000 ವರ್ಷಗಳ ಹಿಂದೆ ಇಲ್ಲಿದ್ದಾಗ, ಅವನು ಗುಜರಾತಿನ ದ್ವಾರಕೆಯಲ್ಲಿದ್ದನು. ಹೀಗಾಗಿ ಆ ಸ್ಥಳವೂ ಅಭಿವೃದ್ಧಿ ಹೊಂದಿತ್ತು. ಶ್ರೀಲಂಕಾ ಮತ್ತು ದ್ವಾರಕಾ ಅಥವಾ ಶ್ರೀಲಂಕಾ ಮತ್ತು ರಾಮನ ಸಾಮ್ರಾಜ್ಯ ಅಯೋಧ್ಯೆಯ ನಡುವಿನ ವ್ಯತ್ಯಾಸವೆಂದರೆ, ದ್ವಾರಕ ಮತ್ತು ಅಯೋಧ್ಯೆಯಲ್ಲಿ ಜನರು ಲಕ್ಷ್ಮಿಯನ್ನು ನಾರಾಯಣನೊಂದಿಗೆ ಸ್ವೀಕರಿಸಿದ್ದರು. ಆದರೆ ರಾವಣನು, “ನಾನು ನಾರಾಯಣನ ಸ್ಥಾನವನ್ನು ಪಡೆಯುವೆ. ನಾನು ಲಕ್ಷ್ಮಿಯನ್ನು ನಾರಾಯಣನಿಲ್ಲದೆ ಪಡೆಯುವೆ.” ಆದುದರಿಂದ, ಅಷ್ಟೆಲ್ಲ ಅಹರ್ತೆಗಳಿದ್ದರೂ ಅವನು ನಾಶವಾದ.
ಆಧುನಿಕ ರಾವಣರು
ಆಧುನಿಕ ಸಮಾಜವು ನಾರಾಯಣನನ್ನು ಬಿಟ್ಟು ಲಕ್ಷ್ಮಿಯನ್ನು ಮಾತ್ರ ಪಡೆಯುವ ರಾವಣನ ಸಿದ್ಧಾಂತವನ್ನು ತೋರಿರುವುದು ಸ್ಪಷ್ಟವಾಗಿದೆ. ಅದನ್ನು ಧರ್ಮ ನಿರಪೇಕ್ಷತೆ ಎನ್ನುವರು ಮತ್ತು ಅದು ಬಹಳ ಆಧುನಿಕ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಲೋಕವು ಹೇಗೆ ವಿಷಪೂರಿತಗೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. “ನಾನು ಲಕ್ಷ್ಮಿಯನ್ನು ಪಡೆಯಬಹುದು” ಎಂಬ ದುಷ್ಟ ಬುದ್ಧಿಯಿಂದ ಜನರ ಮನಸ್ಸು ವಿಷಲೇಪಿತವಾಗಿರುವುದರಿಂದ ಪರಿಸರದ ದೃಷ್ಟಿಯಿಂದ ವಿಶ್ವವು ಮಲಿನಗೊಳ್ಳುತ್ತಿದೆ.
“ನಾರಾಯಣನಿಲ್ಲದೆ ನಾನು ಲಕ್ಷ್ಮಿಯನ್ನು ಪಡೆಯಬಹುದು” ಎಂಬ ಭಾವನೆಯೇ ತಪ್ಪು. ನಾವು ರಾಮಾಯಣದಿಂದ ಏನಾದರೂ ಅರ್ಥಮಾಡಿಕೊಂಡರೆ, ರಾಮನ ವೈಭವದ ಕಥೆಯನ್ನು ಅರ್ಥಮಾಡಿಕೊಂಡರೆ, ನಾವು ಈ ಅಂಶವನ್ನು ಗ್ರಹಿಸಿಕೊಳ್ಳುತ್ತೇವೆ. ನಾವು ನಾರಾಯಣನಿಲ್ಲದೆ ಲಕ್ಷ್ಮಿಯನ್ನು ಯಾವುದೇ ಆಕಾರ ಅಥವಾ ರೂಪದಲ್ಲಿ ಪಡೆಯಲು ಪ್ರಯತ್ನಿಸಬಾರದು.
ಬದಲಿಗೆ ನಾವು ಅಯೋಧ್ಯಾ ವಾಸಿಗಳಂತೆ ಇರಬೇಕು. ಅವರು ರಾವಣನಂತೆ ಆಗಲಿಲ್ಲ. ಶ್ರೀರಾಮನೇ ಎಲ್ಲದಕ್ಕೂ ಮಾಲೀಕ ಎನ್ನುವುದು ಅವರಿಗೆ ತಿಳಿದಿತ್ತು. ವೈದಿಕ ದೃಷ್ಟಿಕೋನದಿಂದ ನೋಡಿದಾಗ ದೇವರೇ ಪರಮ ಮಾಲೀಕ ಎಂಬ ಮೊದಲ ತತ್ತ್ವವನ್ನು ನೀವು ಕಂಡುಕೊಳ್ಳುವಿರಿ. ಎಲ್ಲ ಉಪನಿಷತ್ತುಗಳಲ್ಲಿ ಈಶೋಪನಿಷತ್ತಿಗೆ ವಿಶೇಷ ಸ್ಥಾನವಿದೆ. ಈಶೋಪನಿಷತ್ತಿನ ಮೊದಲ ಹೇಳಿಕೆ ಈಶಾವಾಸ್ಯಂ ಇದಂ ಸರ್ವಂ : “ಈ ಲೋಕದಲ್ಲಿ ಅಸ್ತಿತ್ವದಲ್ಲಿ ಇರುವುದೆಲ್ಲವೂ ಭಗವಂತನ ಸಂಪತ್ತು.”
ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, ಸರ್ವ ಲೋಕ ಮಹೇಶ್ವರಂ : “ನಾನು ಎಲ್ಲ ಲೋಕಗಳ ಮಾಲೀಕ, ಪರಮ ಪ್ರಭು.” ಅವನು ಮತ್ತೂ ಹೇಳುತ್ತಾನೆ, ಅಹಂ ಸರ್ವಸ್ಯ ಪ್ರಭವೋ ಮತ್ತ: ಸರ್ವಂ ಪ್ರವರ್ತತೇ : “ನಾನೇ ಎಲ್ಲದರ ಮೂಲ. ಎಲ್ಲವೂ ನನ್ನಿಂದ ಹೊರಸೂಸುತ್ತದೆ.”
ಗೀತೆಯಲ್ಲಿನ ಪ್ರತಿಯೊಂದು ಪದವೂ ವಿಶಿಷ್ಟವಾದುದು. ಕೃಷ್ಣನು ಹೇಳುತ್ತಾನೆ, ಇತಿ ಮತ್ವಾ ಭಜನ್ತೇ ಮಾಂ : “ಬುದ್ಧಿವಂತರು ನನ್ನನ್ನು ಪೂಜಿಸುತ್ತಾರೆ.” ಇದು ರಾಮಾಯಣದ ನಿಜವಾದ ಅಂಶ. ನಾವು ರಾವಣನ ತಪ್ಪನ್ನು ಅರ್ಥಮಾಡಿಕೊಳ್ಳಬೇಕು. ಅವನು ರಾಮ ಅಥವಾ ನಾರಾಯಣನ ಸ್ಥಾನವನ್ನು ಅರ್ಥಮಾಡಿಕೊಳ್ಳಲಿಲ್ಲ.
ಅಯೋಧ್ಯಾ ವಾಸಿಯಾಗುವುದು
ರಾಮನನ್ನು ನೆನಪು ಮಾಡಿಕೊಳ್ಳಲು ಮತ್ತು ಮಾನವ ಜೀವನದ ನಿಜವಾದ ಕಾರ್ಯಕ್ಕೆ ನಮ್ಮನ್ನು ಪುನರ್ ಅರ್ಪಿಸಿಕೊಳ್ಳಲು ಈ ಸುಸಂದರ್ಭದ ಪ್ರಯೋಜನವನ್ನು ಪಡೆಯೋಣ. ನೀವು ಅಯೋಧ್ಯೆಯನ್ನು ಕುರಿತು ಅಧ್ಯಯನ ಮಾಡಿದರೆ, ಅಲ್ಲಿನ ವಾಸಿಗಳು ದುರ್ಬಲವಾಗಿರಲಿಲ್ಲ ಎನ್ನುವುದು ತಿಳಿಯುತ್ತದೆ. ಅದು ಅತ್ಯಂತ ಸಂಪದ್ಭರಿತ, ವೈಭವದ ನಗರ. ಶ್ರೀರಾಮನ ವಿನಮ್ರ ಸೇವಕನೆಂದು ಭಾವಿಸಿಕೊಳ್ಳುವುದರಿಂದ ವ್ಯಕ್ತಿಯು ನಷ್ಟಹೊಂದುವನೆಂದೇನೂ ಅಲ್ಲ. ನಾವು ಯಾವುದಾದರೂ ರೀತಿಯಲ್ಲಿ ಅಯೋಧ್ಯಾ ವಾಸಿಗಳೊಂದಿಗೆ ಗುರುತಿಸಿಕೊಳ್ಳಬೇಕು. ಜನರು ರಾಮರಾಜ್ಯ, ರಾಮನ ಆಡಳಿತದ ಬಗೆಗೆ ಮಾತನಾಡುತ್ತಾರೆ. ನಾವು ಅವರ ಮನೋಭಾವ, ಅವರು ಹೇಗೆ ಬದುಕಿದ್ದರು ಎನ್ನುವುದನ್ನು ನೋಡಬಹುದು. ನಿಜ, ಈಗ ಭಾರತದಲ್ಲಿ ಇದು ವಿವಾದಾತ್ಮಕ ವಿಷಯ. ಆದರೆ ನಮಗೆ ರಾಮರಾಜ್ಯ ಬೇಕೆಂದರೆ, ಕೊನೆಪಕ್ಷ ನಾವು ಸ್ವತಃ ಆರಂಭಿಸಬೇಕು. ನಾವು ನಮ್ಮಲ್ಲಿಯೇ ಕೇಳಿಕೊಳ್ಳಬೇಕು, “ಅಯೋಧ್ಯಾ ವಾಸಿಯಾಗಲು ನಾನು ಹೇಗೆ ಸಿದ್ಧತೆ ಮಾಡಿಕೊಂಡಿರುವೆ?” ಅಯೋಧ್ಯೆಯ ವಾಸಿಗಳಂತೆ ಇರಲು ನಾನು ಸಿದ್ಧವಾಗಿರುವೆನಾ? ಅಲ್ಲಿನ ಜನರು ಮಾಡಿದಂತೆ ರಾಮನ ಪ್ರೀತಿಯ ಸೇವಕನಾಗಲು ನಾನು ಸಿದ್ಧವಾಗಿರುವೆನಾ?
ರಾಮರಾಜ್ಯವನ್ನು ಪಡೆಯುವ ನಿಜವಾದ ಮಾರ್ಗವೆಂದರೆ ರಾಮನನ್ನು ಪ್ರೀತಿಸುವಂತೆ ಮತ್ತು ಭಗವಂತನ ಪ್ರೀತಿಯ ಸೇವಕನಾಗುವ ಮನೋಭಾವ ಹೊಂದುವಂತೆ ಇತರರಿಗೆ ಮನವರಿಕೆಮಾಡಿಕೊಡುವುದು. ರಾಮನು ಅರಣ್ಯಕ್ಕೆ ಹೊರಟಾಗ, ಅಲ್ಲಿನ ಜನರೆಲ್ಲರೂ ಅವನೊಂದಿಗೆ ಹೋಗಲು ಸಿದ್ಧರಾಗಿದ್ದರು. ಅಯೋಧ್ಯಾ ನಗರವು ಜೀವಂತವಾಗಿರಲು ಅವರು ಅಲ್ಲಿಯೇ ಇರಬೇಕೆಂದು ಅವನು ಅವರಿಗೆ ಮನವರಿಕೆ ಮಾಡಿದ. ತಮಗೆ ಏನಾದರೂ ಸಂಪತ್ತು ದೊರೆತರೆ ಮಾತ್ರ ರಾಮನನ್ನು ಆರಾಧಿಸಲು ಅವರು ಸಿದ್ಧರಾಗಿದ್ದರು ಎನ್ನುವುದಲ್ಲ. ರಾಮನೊಂದಿಗೆ ಇರಲು ಅಥವಾ ರಾಮನನ್ನು ತೃಪ್ತಿಪಡಿಸಲು ಅವರು ಎಲ್ಲವನ್ನೂ ತ್ಯಾಗ ಮಾಡಲೂ ಸಿದ್ಧರಾಗಿದ್ದರು. ಸೀತಾ ಮತ್ತು ರಾಮರ ತೃಪ್ತಿಗಾಗಿ ಅವರು ಏನು ಬೇಕಾದರೂ ಮಾಡುವವರಿದ್ದರು. ಹೆಚ್ಚಿನ ಸಂಖ್ಯೆಯ ಜನರಿಗೆ ಈ ಅರಿವು ಇದ್ದರೆ, ಆಗ ಸ್ವಯಂ ಪ್ರೇರಿತವಾಗಿ, ಸಹಜವಾಗಿ ರಾಮರಾಜ್ಯ ಬರುತ್ತದೆ.