ಕೃಷ್ಣನನ್ನು ಅರಿಯುವುದು ಹೇಗೆ?

ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರು ಆದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಹ್ಯಾಂಬರ್ಗ್‌ನಲ್ಲಿ
ಸೆಪ್ಟೆಂಬರ್‌ 4, 1969ರಲ್ಲಿ ಮಾಡಿದ ಉಪನ್ಯಾಸ.

ವಿಷ್ಣುಶಕ್ತಿ ಪರಾ ಪ್ರೋಕ್ತಾ ಕ್ಷೇತ್ರಜ್ಞಾಖ್ಯಾ ತಥಾ ಪರಾ ।

ಅವಿದ್ಯಾ ಕರ್ಮ ಸಂಜ್ಞಾನ್ಯಾ ತೃತಿಯಾ ಶಕ್ತಿರಿಶ್ಯತೇ ॥

ವಿಷ್ಣು ಪುರಾಣ  6.7.62

`ಶ್ರೀ ವಿಷ್ಣುವಿನ ಶಕ್ತಿಯನ್ನು ಮೂರು ವರ್ಗಗಳಲ್ಲಿ ವಿಂಗಡಿಸಬಹುದು : ಆಧ್ಯಾತ್ಮಿಕ ಶಕ್ತಿ, ಜೀವಿಗಳು  ಮತ್ತು  ಅಜ್ಞಾನ ಅಥವಾ ಮೌಢ್ಯ. ಆಧ್ಯಾತ್ಮಿಕ ಬಲವು ಜ್ಞಾನದಿಂದ ತುಂಬಿರುತ್ತದೆ. ಜೀವಿಗಳು ಆಧ್ಯಾತ್ಮಿಕ ಶಕ್ತಿಗೆ ಸೇರಿದ್ದರೂ ಗೊಂದಲಕ್ಕೆ ಒಳಪಟ್ಟಿರುತ್ತವೆ. ಮೂರನೇ ಶಕ್ತಿಯು ಮೌಢ್ಯದಿಂದ  ತುಂಬಿದ್ದು, ಚಟುವಟಿಕೆಗಳಲ್ಲಿ  ಯಾವಾಗಲೂ ಕಾಣುತ್ತದೆ.’

ಇಲ್ಲಿ ಹೇಳಿರುವುದು, ವಿಷ್ಣು ಶಕ್ತಿ ಪರಾ –  `ದೇವೋತ್ತಮ ಪರಮ ಪುರುಷನ ಶಕ್ತಿಯು ಆಧ್ಯಾತ್ಮಿಕ.’ ಶಕ್ತಿ ಮತ್ತು ಶಕ್ತಿವಂತ ಭಿನ್ನವಲ್ಲ. ಸೂರ್ಯನ ಬೆಳಕು ಸೂರ್ಯನ ಶಕ್ತಿಯಾಗಿದ್ದರೂ ಸೂರ್ಯ ಮತ್ತು ಅವನ ಬೆಳಕಿನ ಗುಣಮಟ್ಟ ಒಂದೇ. ಸೂರ್ಯನ ಬೆಳಕು ಶಾಖ, ಪ್ರಭೆಯಿಂದ ಇರುತ್ತದೆ. ಅದೇ ರೀತಿ ಸೂರ್ಯನಲ್ಲಿ ತಾಪಮಾನ ಅತ್ಯಂತ ಅಧಿಕ. ಆದರೂ ಗುಣಮಟ್ಟ ಒಂದೇ ರೀತಿ.

ದೇವರಿಗೆ ಒಂದು ಶಕ್ತಿ ಇದೆ. ಅದೇ ಆಧ್ಯಾತ್ಮಿಕ ಶಕ್ತಿ. ಅದೇ ಶಕ್ತಿಯನ್ನು  ಬೇರೆ ರೂಪದಲ್ಲಿ ವಿಶದಪಡಿಸಲಾಗಿದೆ : ಕ್ಷೇತ್ರಜ್ಞಾ ಅಥವಾ ತಟಸ್ಥ ಶಕ್ತಿ ಅಥವಾ ನಾವು, ಜೀವಿಗಳು ಪಾತ್ರವಹಿಸುತ್ತಿರುವ ಶಕ್ತಿ.

ಆಧ್ಯಾತ್ಮಿಕ  ಮತ್ತು ತಟಸ್ಥ ಶಕ್ತಿಯಲ್ಲದೆ ಮತ್ತೊಂದು ಶಕ್ತಿ ಇದೆ, ಅದನ್ನು ಅವಿದ್ಯಾ ಎನ್ನತ್ತಾರೆ. ಅವಿದ್ಯಾ ಎಂದರೆ ಮೌಢ್ಯ. ಈ ಲೌಕಿಕ ಜಗತ್ತೂ ಕೂಡ ಕೃಷ್ಣ ಅಥವಾ ದೇವರ ಶಕ್ತಿ, ಆದರೆ ಇಲ್ಲಿ ಮೌಢ್ಯ ತಾಂಡವವಾಡುತ್ತಿದೆ.

ಅಂದರೆ, ಒಂದೇ ಶಕ್ತಿ, ಆಧ್ಯಾತ್ಮಿಕ ಶಕ್ತಿ ಇರುವುದು.  ಕೃಷ್ಣನಂತೆ ಆ ಶಕ್ತಿ ಕೂಡ ಆಧ್ಯಾತ್ಮಿಕ. ಶಕ್ತಿ ಶಕ್ತಿಮತಯೋರ್‌ ಅಭಿನ್ನ. ವೇದ ಭಾಷೆಯಲ್ಲಿ ನಾವು ಅರ್ಥ ಮಾಡಿಕೊಳ್ಳುವುದೇನೆಂದರೆ, ಶಕ್ತಿಮಾನ್‌ ಅಥವಾ ಶಕ್ತಿವಂತ, ಕೃಷ್ಣ ಮತ್ತು ಚೇತನ ಬೇರೆ ಬೇರೆಯಲ್ಲ. ಆದುದರಿಂದ ಈ ಲೌಕಿಕ ಶಕ್ತಿ ಕೂಡ ಕೃಷ್ಣನಿಗಿಂತ ಭಿನ್ನವಲ್ಲ.

ವೇದ ಭಾಷೆಯಲ್ಲೇ ಹೇಳುವುದಾದರೆ : ಸರ್ವಂ ಖಲ್ವಿದಂ ಬ್ರಹ್ಮ – ಎಲ್ಲವೂ ಬ್ರಹ್ಮನ್‌. ಭಗವದ್ಗೀತೆಯಲ್ಲಿ ಕೂಡ ಶ್ರೀಕೃಷ್ಣನು ಹೇಳುತ್ತಾನೆ, ಮಯಾ ತತಂ ಇದಂ ಸರ್ವಂ. ಸರ್ವಂ ಎಂದರೆ ಎಲ್ಲ. ಬ್ರಹ್ಮಾಂಡದ ಅಭಿವ್ಯಕ್ತಿಯನ್ನು `ಇದಂ’ ಉಲ್ಲೇಖಿಸುತ್ತದೆ. ಕೃಷ್ಣ ಹೇಳುತ್ತಾನೆ : ನಾನು ಈ ಬ್ರಹ್ಮಾಂಡವಾಗಿ ಅಭಿವ್ಯಕ್ತನಾಗಿದ್ದೇನೆ `ಇದು ನನ್ನದೇ ನಿರಾಕಾರ ರೂಪದ ಲಕ್ಷಣ.’ ಮಯಾ ತತಂ ಇದಂ ಸರ್ವಂ ಜಗದ್‌ ಅವ್ಯಕ್ತಮೂರ್ತಿನಾ. ಮತ್‌-ಸ್ಥಾನಿ ಸರ್ವ ಭೂತಾನಿ ನಾಹಮ್‌ ತೇಷು ಅವಸ್ಥಿತಃ : ಎಲ್ಲವೂ ನನ್ನ ಮೇಲೆ ಇದೆ ಅಥವಾ ಎಲ್ಲವೂ ನನ್ನ ವಿಸ್ತರಣೆಯೇ ಆಗಿದೆ. ಆದರೆ ನಾನು ಅಲ್ಲಿ ಇಲ್ಲ.’

ಶ್ರೀ ಚೈತನ್ಯರಿಂದ ಆರಂಭ

ಏಕ ಕಾಲಕ್ಕೆ ಒಂದೇ ಮತ್ತು ಭಿನ್ನ ಎಂಬ ಈ ಅಚಿಂತ್ಯ ಭೇದಾಭೇದ ತತ್ತ್ವವು ನಮ್ಮ ತತ್ತ್ವವೇ ಆಗಿದೆ. ಇದು ವೇದಾಂತ ಸೂತ್ರಗಳಲ್ಲಿ ಇದ್ದರೂ ಶ್ರೀ ಚೈತನ್ಯ ಮಹಾಪ್ರಭುಗಳು ಇದನ್ನು ಬೋಧಿಸಿದರು.

ದೇವೋತ್ತಮ ಪರಮ ಪುರುಷನಿಂದ ಎಲ್ಲವೂ ಏಕ ಕಾಲಕ್ಕೆ ಒಂದೇ ಮತ್ತು ಭಿನ್ನ. ತತ್ತ್ವಜ್ಞಾನಿಗಳ ಎರಡು ವರ್ಗವಿದೆ. ಒಂದು ವರ್ಗ ಹೇಳುತ್ತದೆ ದೇವರು ಮತ್ತು ಜೀವಿಗಳು ಭಿನ್ನ. ಮತ್ತೊಂದು ವರ್ಗ ಒಂದೇ ಎನ್ನುತ್ತದೆ. ದೇವೋತ್ತಮ ಪರಮ ಪುರುಷ ಮತ್ತು ಜೀವಿಗಳು ಏಕ ಕಾಲಕ್ಕೆ ಒಂದೇ ಮತ್ತು ಭಿನ್ನ ಎಂಬ ಅಚಿಂತ್ಯ ಭೇದಾಭೇದ ತತ್ತ್ವವು ಈ ವಿವಾದಕ್ಕೆ ಹೊಂದಾಣಿಕೆ ಮಾಡುತ್ತದೆ. ಸೂರ್ಯನ ಬೆಳಕಿನಲ್ಲಿ ಶಾಖ, ಬೆಳಕು ಎಲ್ಲ ಇದೆ. ಸೂರ್ಯನಲ್ಲಿಯೂ ಕೂಡ ಶಾಖ, ಬೆಳಕು ಇದೆ. ಆದರೆ ತಾಪದ ಮಟ್ಟ ಮಾತ್ರ ಭಿನ್ನ. ಸೂರ್ಯನ ಬೆಳಕಿನ ತಾಪವನ್ನು ನೀವು ಸಹಿಸಿಕೊಳ್ಳಬಹುದು. ಆದರೆ ನೀವು ಸೂರ್ಯನಲ್ಲಿಗೆ ಹೋಗಿ ಅಲ್ಲಿನ ತಾಪ ಸಹಿಸಿಕೊಳ್ಳಲಾರಿರಿ. ಸೂರ್ಯನಿಂದ ಲಕ್ಷಾಂತರ ಮೈಲಿ ದೂರಕ್ಕೆ ಗ್ರಹವೊಂದು ಹೋದರೂ ಅದು ಸುಟ್ಟು ಬೂದಿಯಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಅದೇ ರೀತಿ, ದೇವರು ಮತ್ತು ನಾವು, ಕೃಷ್ಣ ಮತ್ತು  ಜೀವಿಗಳು ಗುಣಾತ್ಮಕವಾಗಿ ಒಂದೇ. ಆದರೆ ಪ್ರಮಾಣ, ಮಟ್ಟದಲ್ಲಿ ಭಿನ್ನ.

ವೈಜ್ಞಾನಿಕ ಸಂಶೋಧನೆಯಿಂದ ಈ ಬ್ರಹ್ಮಾಂಡದಲ್ಲಿ ಎಷ್ಟು ಅಣುಗಳಿವೆ ಎಂಬುದನ್ನು ಎಂದಾದರೊಂದು ದಿನ ಲೆಕ್ಕ ಮಾಡುವುದು ಸಾಧ್ಯವಾದೀತು ಎಂದು ಭಾಗವತದಲ್ಲಿ ಹೇಳಲಾಗಿದೆ, ಆದರೆ ದೇವೋತ್ತಮ ಪರಮ ಪುರುಷನು ನಮ್ಮ ಸಾಮಾನ್ಯ ಗ್ರಹಿಕೆಗೆ ನಿಲುಕುವುದು ಸಾಧ್ಯವಿಲ್ಲ. ಅತಃ ಶ್ರೀ ಕೃಷ್ಣ ನಾಮಾದಿ ನ ಭವೇದ್‌ ಗ್ರಾಹ್ಯಂ ಇಂದ್ರಿಯೈಃ – ಕೃಷ್ಣ ಅಥವಾ ದೇವರನ್ನು ನಮ್ಮ ಲೌಕಿಕ ಜ್ಞಾನದಿಂದ ಗ್ರಹಿಸಲಾಗದು. ನಾಮಾದಿ ಎಂದರೆ  `ಅವನ ಹೆಸರಿನಿಂದ ಆರಂಭ’. ಏಕೆಂದರೆ ನಾವು ಅವನ ಹರೇ ಕೃಷ್ಣ ಎಂಬ ಪವಿತ್ರ ನಾಮ ಪಠಿಸುತ್ತ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ಅನಂತರ, ಹರೇ ಕೃಷ್ಣ ಪಠಿಸಿದ ಮೇಲೆ, ನಮ್ಮ ಹೃದಯ ಶುದ್ಧವಾದಾಗ ನಾವು ಅವನ ಸ್ವರೂಪವನ್ನು ಅರ್ಥಮಾಡಿಕೊಳ್ಳಬಹುದು – ಸಚ್ಚಿದಾನಂದ ವಿಗ್ರಹಃ

ಆದುದರಿಂದ ಅವನ ಹೆಸರು ಅಥವಾ ಅವನ ಸ್ವರೂಪ ಅಥವಾ ಅವನ ಗುಣ ಅಥವಾ ಅವನ ಪರಿಕರ ಅಥವಾ ಅವನ ಚಟುವಟಿಕೆಗಳನ್ನು ನಮ್ಮ ಲೌಕಿಕ ಇಂದ್ರಿಯಗಳಿಂದ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಹಾಗಾದರೆ ಅವುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಸೇವೋನ್ಮುಖೇ ಹಿ ಜಿಹ್ವಾದೌ ಸ್ವಯಂ ಏವ ಸ್ಫುರತಿ ಅದಃ. ನಾವು ಯಾವಾಗ ದೇವೋತ್ತಮನಿಗೆ ಪ್ರೀತಿಯಿಂದ ಅಲೌಕಿಕ ಸೇವೆ ಸಲ್ಲಿಸುತ್ತೇವೋ ಆಗ ದೇವನು ತಾನೇ ಗೋಚರವಾಗುತ್ತಾನೆ.  ನಮಗೇ ಅವನನ್ನು ಅರ್ಥಮಾಡಿಕೊಳ್ಳ- ಲಾಗದು. ಆದರೆ ಅವನೇ ಪ್ರಕಟಗೊಳ್ಳುತ್ತಾನೆ.

ನಾಮ, ವೈಭವ ಪಠಣ

ಆದುದರಿಂದ, ಸೇವೋನ್ಮುಖೇ ಹಿ ಜಿಹ್ವಾದೌ. ಜಿಹ್ವಾ ಎಂದರೆ ನಾಲಗೆ. ನಮ್ಮ ಮೊದಲ ಕೆಲಸವೆಂದರೆ ನಮ್ಮ ನಾಲಗೆಯನ್ನು ದೇವೋತ್ತಮನ ಸೇವೆಯಲ್ಲಿ ತೊಡಗಿಸುವುದು. ಹೇಗೆ? ಅವನ ನಾಮ, ವೈಭವ, ಗುಣ, ಸ್ವರೂಪ, ಪರಿಕರ, ಲೀಲೆಗಳನ್ನು ಪಠಿಸುತ್ತ ಹಾಗೂ ವೈಭವೀಕರಿಸುತ್ತ ಸೇವೆಯಲ್ಲಿ ತೊಡಗಿಕೊಳ್ಳಬಹುದು. ಇದು ನಾಲಗೆಯ ಕೆಲಸ. ಸೇವೋನ್ಮುಖೇ ಹಿ ಜಿಹ್ವಾದೌ. ನಾಲಗೆಯನ್ನು ದೇವರ ಸೇವೆಯಲ್ಲಿ ನಿರತವಾಗಿರುವಂತೆ ಮಾಡಿದರೆ ಉಳಿದ ಇಂದ್ರಿಯಗಳು ದೇವರ ಸೇವೆಯಲ್ಲಿ ನಿರತವಾಗುತ್ತವೆ.

ನಮ್ಮ ದೇಹದೊಳಗಿನ ಇಂದ್ರಿಯಗಳಲ್ಲಿ ನಾಲಗೆಯು ಬಹು ಮುಖ್ಯವಾದುದು. ಆದುದರಿಂದ ನಮ್ಮ ಇಂದ್ರಿಯಗಳ ನಿಯಂತ್ರಣಕ್ಕೆ ನಾಲಗೆ ಮೇಲೆ ಹಿಡಿತವಿರಲಿ ಎಂದು ಹೇಳಲಾಗುತ್ತದೆ. ಶ್ರೀ ಭಕ್ತಿ ವಿನೋದ ಠಾಕುರರು ಹಾಡುತ್ತಾರೆ: ತಾರ ಮಧ್ಯೆಜಿಹ್ವಾ ಅತಿ ಲೋಭಮಾಯ್‌ ಸುದುರ್‌ ಮತಿ. ನಮ್ಮ ಪ್ರಸ್ತುತ ನಿರ್ಬಂಧಿತ ಸ್ಥಿತಿ ಹೀಗಿದೆ : ಶರೀರ ಅವಿದ್ಯಾ ಜಾಲ. ಈ ಲೌಕಿಕ ದೇಹದ ಜಾಲದಲ್ಲಿ ನಾವು ಬಂದಿಯಾಗಿದ್ದೇವೆ. ಮೀನೊಂದು ಬಲೆಯಲ್ಲಿ ಸಿಕ್ಕಿಕೊಂಡಂತೆ ನಾವು ಈ ಲೌಕಿಕ ದೇಹದ ಜಾಲದೊಳಗೆ ಸಿಕ್ಕಿಹಾಕಿಕೊಂಡಿದ್ದೇವೆ.

ದೇಹ ಮಾತ್ರ ಅಲ್ಲ, ನಮ್ಮ ಬದುಕಿನ ವಿವಿಧ ಹಂತಗಳಲ್ಲಿ ನಾವು ಜಾಲ, ಬಲೆ ಬದಲಿಸುತ್ತಾ ಇರುತ್ತೇವೆ. 84,00,000 ರೂಪಗಳ ದೈಹಿಕ ಜಾಲಗಳಿವೆ. ಇವು ಅಜ್ಞಾನದ ಜಾಲಗಳು. ಅವಿದ್ಯಾ ಜಾಲ. ಅವಿದ್ಯಾ ಎಂದರೆ ಅಜ್ಞಾನ ಅಥವಾ ಮೌಢ್ಯ. ಶರೀರ ಅವಿದ್ಯಾ ಜಾಲ, ಜಡೇಂದ್ರಿಯ ತಾಹೇಕಾಲ್‌. ಅಪಾಯದ ಇಂದ್ರಿಯಗಳ ಕಾರಣ ಈ ಅಜ್ಞಾನದ ಜಾಲದೊಳಗೆ ನಮ್ಮ ಬಂಧನ ಮುಂದುವರಿದಿದೆ.

ಈ ಅಪಾಯದ ಇಂದ್ರಿಯಗಳಲ್ಲಿ ನಾಲಗೆ ಹೆಚ್ಚು ಅಪಾಯಕಾರಿ ಎಂದು ಭಕ್ತಿ ವಿನೋದ ಠಾಕುರರು ಹೇಳಿದ್ದಾರೆ. ನಾನು ನಾಲಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ  ಅದು ನನಗೆ ಒಂದಾದರೊಂದಂತೆ ಬೇರೆ ಬೇರೆ ದೇಹ ಪಡೆದುಕೊಳ್ಳುವಂತೆ ಮಾಡುತ್ತದೆ. ಮಾಂಸ ಮತ್ತು ರಕ್ತದಿಂದ ನನ್ನ ನಾಲಗೆಯನ್ನು ತೃಪ್ತಿಪಡಿಸಬೇಕೆಂಬ ಇಚ್ಛೆ ನನಗಿದ್ದರೆ, ನನಗೆ ಹುಲಿಯ ದೇಹ ಕೊಟ್ಟು ತಾಜಾ ಮಾಂಸ ಮತ್ತು ರಕ್ತದ ರುಚಿ ನೋಡಲು ಭೌತಿಕ ಪ್ರಕೃತಿಯು ಸೌಲಭ್ಯ ಒದಗಿಸುತ್ತದೆ. ತಿನಿಸಿನಲ್ಲಿ ವಿವೇಚನೆ ತೋರದಿದ್ದರೆ ಭೌತಿಕ ಪ್ರಕೃತಿ ನನಗೆ ಹಂದಿಯ ರೂಪ ನೀಡುತ್ತದೆ. ಆಗ ನಾನು ಮಲವನ್ನೂ ಆಹಾರವೆಂದು ಸ್ವೀಕರಿಸಬೇಕಾಗುತ್ತದೆ.

ನಾವು ನಮ್ಮ ದೇಹದ ಪ್ರಕಾರ ಲೌಕಿಕವಾಗಿ ನೋವು ನಲಿವನ್ನು ಅನುಭವಿಸುತ್ತೇವೆ. ನಾಲಗೆಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ದೇವೋತ್ತಮನನ್ನು ಅರ್ಥಮಾಡಿಕೊಳ್ಳಲು ಆರಂಭಿಸಬಹುದಾದುದರಿಂದ ಮಾನವ ದೇಹವು ನಮಗೆ ಸದವಕಾಶ ಕಲ್ಪಿಸುತ್ತದೆ. ಸೇವೋನ್ಮುಖೇ ಹಿ ಜಿಹ್ವಾದೌ – ದೇವರಿಗೆ ಪ್ರೀತಿಯ ಸೇವೆ ಮಾಡಲು ನಾಲಗೆಯನ್ನು ತೊಡಗಿಸುವುದರಿಂದ ಕೃಷ್ಣ ಪ್ರಜ್ಞೆಯಲ್ಲಿ ಮುನ್ನಡೆ ಸಾಧಿಸಬಹುದು.

ದೇಹವನ್ನು ವಿವಿಧ ರೀತಿಯಲ್ಲಿ ಬದಲಿಸಿಕೊಳ್ಳುತ್ತ ಹುಟ್ಟು ಸಾವಿನ ವೃತ್ತದಲ್ಲಿ ಪಯಣಿಸುವ ಜೀವಕ್ಕೆ ಮಾನವ ಶರೀರ ರೂಪವು ವರವಾಗಿದೆ. ಇಲ್ಲೊಂದು ಸದವಕಾಶವಿದೆ. ನಾವು ನಾಲಗೆಯನ್ನು ಸರಿಯಾಗಿ ಬಳಸಿಕೊಂಡು ಈ ನಿರ್ಬಂಧ ಅಥವಾ ಬಿಗಿಮುಷ್ಟಿಯಿಂದ ಮುಕ್ತರಾಗಬಹುದು.

ಮೂಢರ ಅಪಹಾಸ್ಯ

ನಮ್ಮ ನಾಲಗೆ ಸದಾ ಹರೇ  ಕೃಷ್ಣ ಮಂತ್ರ ಪಠಿಸಲು ತೊಡಗಿರುವಂತೆ ನಾವು ಮಾಡಬೇಕು. ಏಕೆಂದರೆ ಕೃಷ್ಣ ಶಬ್ದ ಮತ್ತು ಕೃಷ್ಣ ಬೇರೆ ಬೇರೆ ಅಲ್ಲ. ಕೃಷ್ಣ ಪರಮ. ಅವನಿಂದ ಯಾವುದೂ ಭಿನ್ನವಲ್ಲ.  ಕೃಷ್ಣ ಮತ್ತು ಕೃಷ್ಣನ ಹೆಸರು ಭಿನ್ನವಲ್ಲ.  ಲೌಕಿಕ ಲೋಕದಲ್ಲಿ ಎಲ್ಲವೂ ಭಿನ್ನ. ನಾನು ಈ ದೇಹದಿಂದ ಭಿನ್ನ. ನಾನು ಈ ದೇಹವಲ್ಲ. ಆದರೆ ಕೃಷ್ಣ ಹಾಗೆ ಅಲ್ಲ. ಕೃಷ್ಣ ಮತ್ತು ಕೃಷ್ಣನ ದೇಹ ಎರಡೂ ಒಂದೇ. ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ:

ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್‌ ।

ಪರಂ ಭಾವಂ ಅಜಾನನ್ತೋ ಮಮ ಭೂತಮಹೇಶ್ವರಮ್‌ ॥

ನಾನು ಮನುಷ್ಯರೂಪದಲ್ಲಿ ಇಳಿದು ಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ಇರುವುದೆಲ್ಲದರ ಪ್ರಭು ನಾನೇ. ನನ್ನ ಈ ದಿವ್ಯಪ್ರಕೃತಿಯು ಅವರಿಗೆ ತಿಳಿಯದು.

ಪರಂ ಭಾವಂ ಅಜಾನಂತೋ: `ನನ್ನ ದಿವ್ಯ ಪ್ರಕೃತಿ ಅವರಿಗೆ ತಿಳಿಯದು. ನನ್ನನ್ನು ಅರಿತುಕೊಳ್ಳದೆ ಅವರು ನನ್ನನ್ನು ಸಾಮಾನ್ಯ ಮನುಷ್ಯನೆಂದು ಪರಿಗಣಿಸುತ್ತಾರೆ.’

ಅವಜಾನನ್ತಿ ಮಾಮ್‌ ಮೂಢಾ.  ಇಲ್ಲಿ ಮೂಢಾ ಶಬ್ದ ಬಳಸಲಾಗಿದೆ. ಮೂಢಾ ಎಂದರೆ  `ಮೂರ್ಖರು, ಅಜ್ಞಾನಿಗಳು’. ಆದರೂ ಈ ಎಚ್ಚರಿಕೆ ನುಡಿಗಳಿದ್ದರೂ, ವಿದ್ವಾಂಸರೆಂದು ಕರೆಸಿಕೊಳ್ಳುವ ಅನೇಕ ಮೂಢರಿದ್ದಾರೆ. `ನೀವು ನನಗೆ ಶರಣಾಗಿ’ ಎಂದು ಕೃಷ್ಣನು ಆದೇಶಿಸಿದರೆ, ಈ ಮೂರ್ಖರು ಟೀಕಿಸುತ್ತಾರೆ : `ಅದು ಕೃಷ್ಣನಿಗಲ್ಲ.  ಆದರೆ ಕೃಷ್ಣನೊಳಗಿರುವ ಚೇತನಕ್ಕೆ’ ಎಂದು ಆ ಅಜ್ಞಾನಿಗಳು ಪ್ರತಿಕ್ರಿಯಿಸುತ್ತಾರೆ. ಅವರು ಅದ್ವೈತಿ, ಏಕತ್ವ ವಾದಿಗಳು. ಏಕತ್ವವನ್ನು ತತ್ತ್ವಶಾಸ್ತ್ರೀಯಗೊಳಿಸುತ್ತಿದ್ದಾರೆ. ಆದರೆ ಕೃಷ್ಣನಲ್ಲಿಗೆ ಬಂದಕೂಡಲೆ ಅವರು ಭಿನ್ನರಾಗುತ್ತಾರೆ : `ಕೃಷ್ಣ ತನ್ನ ದೇಹದಿಂದ ಭಿನ್ನ.’ ಆದರೆ ಕೃಷ್ಣ ತನ್ನ ದೇಹ, ಹೆಸರು ಅಥವಾ ಪ್ರಖ್ಯಾತಿಯಿಂದ ಭಿನ್ನನಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಕೃಷ್ಣನಿಗೆ ಸಂಬಂಧಿಸಿದ್ದೆಲ್ಲವೂ ಕೃಷ್ಣನೇ.

ಕೃಷ್ಣನ ಹೆಸರು ಮತ್ತು ಕೃಷ್ಣ ಬೇರೆಯಲ್ಲ. ಆದುದರಿಂದ ನನ್ನ ನಾಲಗೆ ಕೃಷ್ಣನ ಪವಿತ್ರ ನಾಮವನ್ನು ಸ್ಪರ್ಶಿಸಿದ ಕೂಡಲೇ ಅದು ಕೃಷ್ಣನ ಸಹವಾಸ ಮಾಡುತ್ತದೆ. ಹರೇಕೃಷ್ಣ ಮಂತ್ರವನ್ನು ಈ ರೀತಿ ಸತತ ಪಠಿಸುತ್ತ ಮುಂದುವರಿದರೆ ಈ ಸಂಕೀರ್ತನೆಯಿಂದ ನೀವು ಸುಲಭವಾಗಿ ಶುದ್ಧವಾಗಿಬಿಡುತ್ತೀರಿ.

ನಾಲಗೆಯನ್ನು ಮಂತ್ರ ಪಠನೆಯಲ್ಲಿ ತೊಡಗಿಸಿರಿ. ನಿಮ್ಮ ನಾಲಗೆ ಸ್ವಾದಿಷ್ಟ ತಿನಿಸುಗಳಿಗೆ ಹಾತೊರೆಯುತ್ತದೆ; ಕೃಷ್ಣ ಕರುಣಾಮಯಿ. ಅವನು ಸಹಸ್ರಾರು ಸ್ವಾದಿಷ್ಟ ಖಾದ್ಯಗಳನ್ನು ನೀಡಿದ್ದಾನೆ – ಅವನು ಸೇವಿಸಿ ಉಳಿದ ತಿನಿಸು. ಈ ಉಳಿಕೆಯನ್ನು ನೀವು ಸ್ವೀಕರಿಸಬಹುದು. ಈ ರೀತಿ ನೀವು `ಶ್ರೀಕೃಷ್ಣನಿಗೆ ಅರ್ಪಿತವಾಗದ ಯಾವುದನ್ನೂ ರುಚಿ ನೋಡಲು ನಾಲಗೆಗೆ ಅವಕಾಶ ನೀಡುವುದಿಲ್ಲ. ಮತ್ತು ಸದಾ ಹರೇ ಕೃಷ್ಣ ಮಂತ್ರ ಪಠಿಸುವಂತೆ ನಾಲಗೆಯನ್ನು ತೊಡಗಿಸುತ್ತೇನೆ’ ಎಂದು ದೃಢ ಮನಸ್ಸು ಮಾಡಿ. ಪರಿಪೂರ್ಣತೆ ನಿಮ್ಮ ಹಿಡಿತದಲ್ಲೇ ಇರುತ್ತದೆ.

ಎರಡೇ ಸರಳ ಸೂತ್ರಗಳು: ಹರೇ ಕೃಷ್ಣ ಮಂತ್ರ ಪಠಿಸಿ ಮತ್ತು ಕೃಷ್ಣನಿಗೆ ಅರ್ಪಿಸದೇ ಇರುವುದನ್ನು ಸೇವಿಸಬೇಡಿ. ಇಷ್ಟೇ ಮಾಡಬೇಕಾದುದು. ನಮ್ಮ ಕೃಷ್ಣನ ಪ್ರಸಾದ ಎಷ್ಟು ವೈವಿಧ್ಯಮಯ!  `ವೈವಿಧ್ಯ ಸಂತಸದ ತಾಯಿ.’ ನಿಮ್ಮ ನಾಲಗೆಯಿಂದ ನಿಮಗೆಷ್ಟು ಖುಷಿ ಬೇಕು? ಕೃಷ್ಣ ಪ್ರಸಾದ ಸೇವಿಸುವುದರಿಂದ ನಿಮಗೆ ಅದು ಲಭ್ಯ. ನಿಮ್ಮ ನಾಲಗೆ ಶುದ್ಧವಾದಷ್ಟೂ ನೀವು ಹರೇ ಕೃಷ್ಣ ಮಂತ್ರ ಪಠನೆಯನ್ನು ಆಸ್ವಾದಿಸುತ್ತೀರಿ.

ಆನಂದ ಸಾಗರ

ಆನಂದಾಂಬುಧಿ-ವರ್ಧನಂ. ಸಂಕೀರ್ತನೆಯು ಅಲೌಕಿಕ ಆನಂದ ಸಾಗರವನ್ನು ವಿಶಾಲಗೊಳಿಸುತ್ತದೆ ಎಂದು ಶ್ರೀ ಚೈತನ್ಯ ಮಹಾಪ್ರಭು ಹೇಳಿದ್ದಾರೆ. ಸಾಮಾನ್ಯ ಸಮುದ್ರವು ವಿಸ್ತಾರಗೊಳ್ಳದು. ಅಂತಹ ಅನುಭವ ನಮಗಿಲ್ಲ.  ಆ ರೀತಿ ಸಾಗರ ವಿಸ್ತರಿಸುವ ಸಾಧ್ಯತೆ ಇದ್ದಿದ್ದರೆ ಭೂಮಿ ಎಲ್ಲ ಎಂದೋ ಮುಳುಗಿಹೋಗಿರುತ್ತಿತ್ತು. ಸಮುದ್ರ ಹಿಗ್ಗುವುದಿಲ್ಲ.  ಆದರೆ ಈ ಸಾಗರ – ಅಲೌಕಿಕ ಆನಂದ ಸಾಗರ – ವಿಸ್ತಾರಗೊಳ್ಳುತ್ತಲೇ ಇದೆ.

ನಿಮ್ಮಲ್ಲಿ ಕೆಲವರು ಇದನ್ನು ಅನುಭವಿಸಿರಬಹುದು, ಕೆಲವರಂತೂ ಆಸ್ವಾದಿಸುತ್ತಿರಬಹುದು. `ಒಂದು ನಾಲಗೆಯಲ್ಲಿ ನಾನೇನು ಪಠಿಸಲಿ? ಲಕ್ಷಾಂತರ ನಾಲಗೆಗಳಿದ್ದಿದ್ದರೆ ನಾನು ಸಾಕಷ್ಟು ಪಠಿಸಬಹುದಿತ್ತು. ಎರಡು ಕಿವಿಗಳಿಂದ ಎಷ್ಟು ಕೇಳಲಿ?’  ಎಂದು ಕೃಷ್ಣ ಪ್ರಜ್ಞೆಯ ಶ್ರೇಷ್ಠ ತಜ್ಞ ರೂಪ ಗೋಸ್ವಾಮಿ ಹೇಳುತ್ತಾರೆ. ಹರೇ ಕೃಷ್ಣ ಮಂತ್ರ ಪಠನೆಯನ್ನು ಆಸ್ವಾದಿಸಲು ಲಕ್ಷಾಂತರ ಕಿವಿ, ನಾಲಗೆಗಾಗಿ  ಅವರು ಪರಿತಪಿಸುತ್ತಾರೆ. ಆದುದರಿಂದ ಹೆಚ್ಚು ಕಿವಿ, ನಾಲಗೆಗಳಿದ್ದರೆ ಸಂಕೀರ್ತನೆಯು ಹೆಚ್ಚು ಮಾಧುರ್ಯವಾಗಿರುತ್ತದೆ ಎಂಬುದು ಬೇರೆಯ ಹಂತವೆ.

ಅತಃ ಶ್ರೀ ಕೃಷ್ಣ ನಾಮಾದಿ ನ ಭವೇದ್‌ ಗ್ರಾಹ್ಯಂ ಇಂದ್ರಿಯೈಃ. ನಮ್ಮ ಪ್ರಸ್ತುತದ ಇಂದ್ರಿಯಗಳಿಂದ ನಮಗೆ ಕೃಷ್ಣ ಅಥವಾ ದೇವರು, ಅವನ ಹೆಸರು, ಸ್ವರೂಪ, ಗುಣ ಇವನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ  `ಓ! ಕೃಷ್ಣನು ರಾಧಾ ರಾಣಿ ಮತ್ತು ಗೋಪಿಯರನ್ನು ಆಲಿಂಗಿಸಿಕೊಂಡಿದ್ದಾನೆ’ ಎಂದು ಚಿತ್ರಗಳನ್ನು ನೋಡುತ್ತ ತತ್‌ಕ್ಷಣ ಕೃಷ್ಣನನ್ನು ಅರ್ಥ ಮಾಡಿಕೊಳ್ಳಲು ಹೋದರೆ, ಅದು ನಿಮ್ಮ ತಪ್ಪು ತಿಳಿವಳಿಕೆಯಾದೀತು. ಏಕೆಂದರೆ ನಮ್ಮ ಇಂದ್ರಿಯಗಳು ಶುದ್ಧವಾಗದಿದ್ದರೆ ನಾವು ಕೃಷ್ಣ ಮತ್ತು ರಾಧಾರಾಣಿಯನ್ನು ಸಾಮಾನ್ಯ  ಯುವಕ, ಯುವತಿ ಎಂದೇ ಒಪ್ಪಿಕೊಳ್ಳುತ್ತೇವೆ. ಆದರೆ ವಾಸ್ತವವಾಗಿ ಅವರು ಹಾಗಲ್ಲ. ಅವರ ರೀತಿ-ನೀತಿ ಪರಿಶುದ್ಧ.

ಕೃಷ್ಣನ ಜತೆಗಿನ ಗೋಪಿಯರ ಪ್ರೀತಿಯ ಪ್ರಸಂಗ ಮತ್ತು ಸಾಮಾನ್ಯ, ಭೋಗಾಸಕ್ತ ಜನರ ವ್ಯವಹಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಕೃಷ್ಣದಾಸ ಕವಿರಾಜ ಅವರು ಚೈತನ್ಯ ಚರಿತಾಮೃತದಲ್ಲಿ  ಹೇಳಿದ್ದಾರೆ. ಗೋಪಿಯರ ಕೃಷ್ಣ ಪ್ರೇಮವನ್ನು ಚಿನ್ನಕ್ಕೆ ಹೋಲಿಸಿರುವ ಅವರು, ಈ ವಿಶ್ವದಲ್ಲಿನ ಪ್ರೀತಿ ಪ್ರೇಮವನ್ನು ಕಬ್ಬಿಣಕ್ಕೆ ಹೋಲಿಸಿದ್ದಾರೆ. ಚಿನ್ನ, ಕಬ್ಬಿಣಕ್ಕೆ ಇರುವ ವ್ಯತ್ಯಾಸದಂತೆ ಕೃಷ್ಣ-ಗೋಪಿಯರ ಪ್ರೀತಿ ಮತ್ತು ಸಾಮಾನ್ಯ ಯುವಕ ಯುವತಿಯರ ಭೋಗಾಸಕ್ತಿಗೂ ವ್ಯತ್ಯಾಸವಿದೆ. ಅವು ಎಂದೂ ಸಮವಾಗಲಾರವು.

ನಮ್ಮ ಪ್ರಸ್ತುತದ ಅಶುದ್ಧ, ಕಲುಷಿತ ಇಂದ್ರಿಯಗಳು ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರವು. ಆದುದರಿಂದ ನಾವು ಈ ಸಿದ್ಧಾಂತವನ್ನು ಅನುಸರಿಸಬೇಕು – ಸೇವೋನ್ಮುಖೇ ಹಿ ಜಿಹ್ವಾದೌ.  ಮೊದಲು ಹರೇ ಕೃಷ್ಣ ಪಠಣದಲ್ಲಿ ತೊಡಗಿಸಿಕೊಳ್ಳಿ. `ಹರೇ ಕೃಷ್ಣ’ ರಾಧಾಕೃಷ್ಣರನ್ನು ಸಂಬೋಧಿಸುತ್ತದೆ. ಹರಾ ಎಂದರೆ ರಾಧಾ. ಆದರೆ ಪ್ರಸ್ತುತದ ಇಂದ್ರಿಯಗಳಿಂದ,  ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಸುಮ್ಮನೆ ಪವಿತ್ರ ನಾಮ ಹರೇ ಕೃಷ್ಣ ಪಠಿಸಿ.

ಆತಂಕ ಮುಕ್ತ

ಪಠಿಸುವುದರಿಂದಲೇ ನಿಮ್ಮ ಹೃದಯದ ಕನ್ನಡಿಯ ಮೇಲಿನ ಧೂಳನ್ನು ಶುದ್ಧಗೊಳಿಸಬಹುದು. ಚೇತೋ ದರ್ಪಣ ಮಾರ್ಜನಂ ಭವ ಮಹಾ  ದಾವಾಗ್ನಿ ನಿರ್ವಾಪಣಂ. ಮತ್ತು ಅಲ್ಲಿ ಲೌಕಿಕ ಸ್ಥಿತಿ ಇರುವುದಿಲ್ಲ. ಅದು ಮುಂದಿನ ಹಂತ. ನೀವು ಯಾವುದೇ ಅಪರಾಧವಿಲ್ಲದೆ ಹರೇಕೃಷ್ಣ ಮಂತ್ರವನ್ನು ಪಠಿಸಿದರೆ, ನೀವು ಆ ಕ್ಷಣದಿಂದಲೇ ಎಲ್ಲ ಲೌಕಿಕ ಆತಂಕಗಳಿಂದ ಮುಕ್ತರಾಗುತ್ತೀರಿ. ಅದೇ ಪರೀಕ್ಷೆ. ಮಂತ್ರ ಪಠಣೆಯಲ್ಲಿ ನೀವು ಎಷ್ಟು ಮುಂದುವರಿದಿದ್ದೀರಿ ಎಂಬುದನ್ನು ನೀವು ಲೌಕಿಕ ಆತಂಕಗಳಿಂದ ಎಷ್ಟು ಮುಕ್ತರಾಗಿದ್ದೀರ ಎಂಬುದರಿಂದ ಪರೀಕ್ಷಿಸಲಾಗುವುದು.

ಅನಂತರ ನಿಜವಾದ ಬದುಕು ಆರಂಭ. ಲೌಕಿಕ ಗೊಂದಲಗಳಿಂದ ನೀವು ಎಲ್ಲಿಯವರೆಗೆ ವಿಚಲಿತ ಅಥವಾ ವ್ಯಾಕುಲದಿಂದಿರುವಿರೋ ಅಲ್ಲಿಯವರೆಗೆ ನಿಮ್ಮ ಆಧ್ಯಾತ್ಮಿಕ ಬದುಕು ಆರಂಭವಾಗಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಧರ್ಮಗ್ರಂಥಗಳಲ್ಲೆಲ್ಲ ಇದನ್ನು ಸ್ಪಷ್ಟಪಡಿಸಲಾಗಿದೆ. ಬ್ರಹ್ಮ-ಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ. ಯಾರು ಬ್ರಹ್ಮ ಅರ್ಥ ಗ್ರಹಿಕೆ ಹೊಂದುವರೋ ಅವರು ಸದಾ ಸಂತೋಷದಿಂದ ಇರುತ್ತಾರೆ ಎಂದು ಗೀತೆ ಹೇಳುತ್ತದೆ.

`ಬ್ರಹ್ಮ ಗ್ರಹಿಕೆ’ ಎಂದರೆ `ನಾನು ಈ ದೇಹವಲ್ಲ. ನಾನು ಶುದ್ಧ ಆಧ್ಯಾತ್ಮಿಕ ಆತ್ಮ. ಕೃಷ್ಣನ ಶಾಶ್ವತ ಸೇವಕ.’ `ನಾನು ಈ ದೇಹವಲ್ಲ. ನಾನು ಆಧ್ಯಾತ್ಮಿಕ ಆತ್ಮ’ ಎಂದು ಸುಮ್ಮನೆ ಅರ್ಥ ಮಾಡಿಕೊಂಡು ಬಿಟ್ಟರೆ ಸಾಲದು. ಅಷ್ಟು ಜ್ಞಾನ ಸಾಲದು. ಆದರೂ ಅದು ಒಳ್ಳೆಯದೇ. ಅದು ಭೌತಿಕ ವಸ್ತು ಮತ್ತು ಆಧ್ಯಾತ್ಮಿಕದ ನಡುವಣ ಅಂಚು ಅಷ್ಟೆ. ಆದರೆ ನೀವು ಈ ಲೌಕಿಕ ಅಸ್ತಿತ್ವವನ್ನು ಅಲೌಕಿಕಗೊಳಿಸಬೇಕು, ಮತ್ತು ಆಧ್ಯಾತ್ಮಿಕ ಗ್ರಹಿಕೆಯ ವೇದಿಕೆಗೆ ಬರಬೇಕು. ಆದುದರಿಂದ ಅದಕ್ಕಾಗಿ ನೀವು ಬ್ರಹ್ಮ ಗ್ರಹಿಕೆಯ ಅನಂತರ ಇನ್ನಷ್ಟು ಮುಂದಕ್ಕೆ ಸಾಗಬೇಕು.

ಬ್ರಹ್ಮ ಭೂತಃ ಪ್ರಸನ್ನಾತ್ಮಾ. ನೀವು ನಿಜವಾಗಿಯೂ ಬ್ರಹ್ಮ ಗ್ರಹಿಕೆಯವರಾಗಿದ್ದರೆ ನೀವು ಸದಾ ಸಂತೋಷದಿಂದಿರುವುದೇ ಲಕ್ಷಣ. ಆತಂಕವಿಲ್ಲ. ನಮಗೆ ಆತಂಕ ಏಕೆ ಇರುತ್ತದೆ? ಶ್ರೀಮದ್‌ ಭಾಗವತದಲ್ಲಿ ಎಲ್ಲವನ್ನೂ ಚೆನ್ನಾಗಿ ಚರ್ಚಿಸಲಾಗಿದೆ. ಭಯಂ ದ್ವಿತೀಯಾಭಿ- ನಿವೇಶತಃಸ್ಯಾತ್‌. ನಾವು ಕೃಷ್ಣನನ್ನು ಮರೆತು ಕೃಷ್ಣನಲ್ಲದೆ ಬೇರೇನೋ ಇದೆ ಎಂದು ಯೋಚಿಸಿದರೆ, ಭೀತಿಗೊಳಗಾಗುತ್ತೇವೆ. ಮತ್ತು ಕೃಷ್ಣನಲ್ಲದೆ ಬೇರೇನೂ ಇಲ್ಲ ಎಂದು ಮನವರಿಕೆಯಾದ ಆತ್ಮಗಳಿಗೆ ಭಯವೆಲ್ಲಿಯದು?

ಆದುದರಿಂದ ಪರಿಶುದ್ಧ ಭಕ್ತರಿಗೆ ಅತ್ಯಂತ ಸಂಕಟದ ಸಂದರ್ಭದಲ್ಲಿಯೂ ಗೊಂದಲವುಂಟಾಗುವುದಿಲ್ಲ. ಅವರೇನು ಯೋಚಿಸುವರು? ಅವರು ಯೋಚಿಸುವರು, ತತ್‌ ತೇ ಅನುಕಂಪಾಂ – `ನನ್ನ ದೇವರೇ, ನನ್ನನ್ನು ಈ ಸಂಕಟ ಸ್ಥಿತಿಗೆ ಹಾಕಿರುವುದು ನಿನ್ನ ಕರುಣೆಯೇ ಆಗಿದೆ.’ ಸಂಕಟದ ಸಮಯವನ್ನು ಭಕ್ತರು ಸದಾವಕಾಶ ಎಂದು ಪರಿಗಣಿಸುತ್ತಾರೆ: `ಸತತವಾಗಿ ದೇವರನ್ನು ಸ್ಮರಿಸಲು ನನಗೆ ಒಳ್ಳೆಯ ಅವಕಾಶ ದೊರೆತಿದೆ. ಕೃಷ್ಣ, ನೀನೆಂತಹ ಕರುಣಾಳು, ನನಗೆ ಈ ಸಂಕಟ ನೀಡಿರುವೆ’.

ಕೃಷ್ಣಪ್ರಜ್ಞೆ ನಿರ್ಭಯ

ಆದುದರಿಂದ ಈ ಕೃಷ್ಣಪ್ರಜ್ಞೆ ತುಂಬ ಒಳ್ಳೆಯದು. ಕೃಷ್ಣ ಪ್ರಜ್ಞೆಯಲ್ಲಿರುವವರಿಗೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕೂಡ ಭಯ ಉಂಟಾಗುವುದಿಲ್ಲ ಎಂದು ಭಗವದ್ಗೀತೆ ಹೇಳುತ್ತದೆ. ಕೇವಲ ಐದು ವರ್ಷದ ಪ್ರಹ್ಲಾದ ಮಹಾರಾಜನಂತೆ. ಅವನ ತಂದೆ ಅವನನ್ನು ಎಷ್ಟೇ ಹಿಂಸಿಸಿದರೂ ಅವನು ಭಯಗೊಳ್ಳಲಿಲ್ಲ. ಇದು ಕೃಷ್ಣ ಪ್ರಜ್ಞೆಯ ಸ್ಥಿತಿ. ಅಂತಹ ಹಿಂಸೆಯ ಸಂದರ್ಭದಲ್ಲಿಯೂ ಆ ಬಾಲಕ ಭಯಗೊಳ್ಳಲಿಲ್ಲ.

ಅವನ ತಂದೆ ಅವನಿಗೆ ಸವಾಲೆಸೆದ; “ಪ್ರಹ್ಲಾದ, ನನ್ನನ್ನು ಕಂಡು ಭಯ ಪಡದಿರುವ ನೀನು ಯಾರ ಶಕ್ತಿಯಿಂದ ಇಷ್ಟು ಪ್ರಬಲನಾಗಿದ್ದೀಯಾ?”

ಪ್ರಹ್ಲಾದ ಉತ್ತರಿಸಿದ : “ತಂದೆಯೇ,  ಯಾರ ಶಕ್ತಿಯಿಂದ ನೀನು ಹೀಗೆ ಮಾತನಾಡುತ್ತಿರುವೆ?”

ಆದುದರಿಂದ ಕೃಷ್ಣ ಪ್ರಜ್ಞೆಯಲ್ಲಿ ಇರುವವರು ಅತ್ಯಂತ ಸಂಕಟದ ಸ್ಥಿತಿಯಲ್ಲಿ ಸಿಲುಕಿದರೂ ವಿಚಲಿತರಾಗುವುದಿಲ್ಲ.  ನಾರಾಯಣ ಪರಾ ಸರ್ವೇ. ಅಂತಹ ಅನೇಕ ಶ್ಲೋಕಗಳಿವೆ. ನಾವು ನೂರಾರನ್ನು ಉಲ್ಲೇಖಿಸಬಹುದು. ನಾರಾಯಣ ಪರಾ ಸರ್ವೇ ನ ಕುತಶ್ಚನ ಬಿಭ್ಯತಿ. ಕೃಷ್ಣಪ್ರಜ್ಞೆ ಹೊಂದಿದರೆ ಬದುಕಿನ ಯಾವುದೇ ಸ್ಥಿತಿಯಲ್ಲಿಯೂ ಭಯಪಡಬೇಕಾಗಿಲ್ಲ. ನ ಕುತಶ್ಚನ ಬಿಭ್ಯತಿ, ಸ್ವರ್ಗಾಪವರ್ಗ ನರಕೇಷು ಅಪಿ. ಅವನನ್ನು ನರಕ, ಸ್ವರ್ಗ ಅಥವಾ ಆಧ್ಯಾತ್ಮಿಕ ಜಗತ್ತು ಎಲ್ಲೇ ಹಾಕಲಿ ಅವನು ಸಂತೋಷದಿಂದಲೇ ಇರುತ್ತಾನೆ. ತುಲ್ಯಾರ್ಥ  ದರ್ಶಿನಃ. ಎಲ್ಲವೂ ಒಂದೇ ಎಂದು ಅವನು ಭಾವಿಸುತ್ತಾನೆ: `ನೀವು ನನ್ನನ್ನು ನರಕದಲ್ಲೇ ಹಾಕಿ, ಸ್ವರ್ಗಕ್ಕೇ ಕಳುಹಿಸಿ, ನನಗೆ ಎಲ್ಲವೂ ಒಂದೇ.’

ಏಕೆಂದರೆ ಅವನು ಹರೇ ಕೃಷ್ಣ ಮಂತ್ರ ಪಠಿಸುತ್ತ ಸದಾ ಕೃಷ್ಣನೊಂದಿಗೆ ಇರುತ್ತಾನೆ. ಕೃಷ್ಣನೂ ಅವನೊಂದಿಗೆ ಇರುತ್ತಾನೆ. ಭಯಕ್ಕೆ ಕಾರಣವಾದರೂ ಎಲ್ಲಿದೆ? – `ಓ! ಆ ಜಾಗ ಚೆನ್ನಾಗಿಲ್ಲ, ಈ ಸ್ಥಳ ಚೆನ್ನಾಗಿದೆ’ ಇಲ್ಲ. ಕೃಷ್ಣ ಎಲ್ಲಿರುತ್ತಾನೋ ಆ ಸ್ಥಳ ಚೆನ್ನಾಗಿರುತ್ತದೆ.

ಆದುದರಿಂದ ನಾವು ತುಂಬ ಚೆನ್ನಾಗಿ ನಮ್ಮ ನಾಲಗೆಗೆ ತರಬೇತಿ ನೀಡಿ ಉಪಯೋಗಿಸಬೇಕು. ಕೃಷ್ಣನ ಭಕ್ತಿ ಸೇವೆಯಲ್ಲಿ ನಾಲಗೆಯನ್ನು ತೊಡಗಿಸಿ. ಅದು ತುಂಬ ಒಳ್ಳೆಯ ಸೇವೆ. ನೀವು ಸುಮ್ಮನೆ ಕೃಷ್ಣ ಮಂತ್ರ ಪಠಿಸಿ ಮತ್ತು ಕೃಷ್ಣ ಪ್ರಸಾದ ಸೇವಿಸಿ. ಇದು ಕಷ್ಟದ ಕೆಲಸವೇ? ಆದರೆ ದುರದೃಷ್ಟವಶಾತ್‌ ಎಲ್ಲರೂ ಒಪ್ಪಿಕೊಳ್ಳುವುದಿಲ್ಲ. ಆದುದರಿಂದ ಚೈತನ್ಯ ಮಹಾಪ್ರಭು ಹೇಳುತ್ತಾರೆ, ಏತಾದೃಶಿ ತವ ಕೃಪಾ ಭಗವನ್‌ ಮಮಾಪಿ: `ನನ್ನ ಪ್ರೀತಿಯ ದೇವರೇ, ನೀನು ಅಲೌಕಿಕ ಶಬ್ದದ ಮೂಲಕ ನನ್ನನ್ನು  ಸಮೀಪಿಸಿದೆ, ನೀನೆಷ್ಟು ಒಳ್ಳೆಯವನು.’ ನಾನು ಸ್ವೀಕರಿಸಿದರೆ ಕೃಷ್ಣ ಸದಾ ನನ್ನೊಂದಿಗೆ ಇರುತ್ತಾನೆ. ನಾನು ತಿರಸ್ಕರಿಸಿದರೆ ಅದು ನನ್ನ ಮೂರ್ಖತನ.

ಕೃಷ್ಣನನ್ನು ನಾವು ಅಂಗೀಕರಿಸಿದರೆ ಕೃಷ್ಣ ಎಲ್ಲೆಡೆ ಇರುತ್ತಾನೆ. ನಾವು ಅವನನ್ನು ತಿರಸ್ಕರಿಸಿದ ಕೂಡಲೇ ಅವನು ದೂರವಾಗಿಬಿಡುತ್ತಾನೆ. ನಾವು ಸುಮ್ಮನೆ ಕೃಷ್ಣ ಮಂತ್ರ ಪಠಿಸಿದರೆ ಅಥವಾ ನಮ್ಮ ನಾಲಗೆಯನ್ನು ಅವನ ಸೇವೆಯಲ್ಲಿ ತೊಡಗಿಸಿಕೊಂಡರೆ ಕೃಷ್ಣ ಸುಲಭವಾಗಿ ನಮ್ಮೊಂದಿಗೆ ಇರುತ್ತಾನೆ.  ಚೈತನ್ಯ ಮಹಾಪ್ರಭು ಈ ವಿಧಾನವನ್ನು ಶಿಪಾರಸು ಮಾಡಿ ಪ್ರಸ್ತುತ ಕಾಲದಲ್ಲಿ ಅದನ್ನು ಆರಂಭಿಸಿದರು. ಈ ಪದ್ಧತಿ ಹೊಸದಲ್ಲವಾದರೂ ಅವರು ಅದನ್ನು ವಿಶೇಷವಾಗಿ ಪ್ರಾರಂಭಿಸಿದರು. ಏಕೆಂದರೆ ಪತಿತ ಆತ್ಮಗಳನ್ನು ಮತ್ತೆ ಮೇಲಕ್ಕೆತ್ತುವುದೇ ಅವರ ಆವಿರ್ಭಾವದ ಉದ್ದೇಶ.

ವಂದನೆಗಳು.

ಈ ಲೇಖನ ಶೇರ್ ಮಾಡಿ