ಆಹಾರ ಸಮಸ್ಯೆ ನೀಗುವುದು ಹೇಗೆ?

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ವಿಶ್ವ ಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಜಿನೀವಾದಲ್ಲಿ ಜೂನ್‌ 6, 1974 ರಲ್ಲಿ ನೀಡಿದ ಉಪನ್ಯಾಸದ ಅನಂತರ ಅಲ್ಲಿನ ಸದಸ್ಯರ ಜೊತೆ ನಡೆದ ಸಂವಾದ.

ವಿಶ್ವ ಆರೋಗ್ಯ ಸಂಸ್ಥೆ ಸದಸ್ಯ : ಶ್ರೀಲ ಪ್ರಭುಪಾದರೆ, ವಿಶ್ವಾದ್ಯಂತ ಇರುವ ಆಹಾರ ಕೊರತೆ ಸಮಸ್ಯೆಯನ್ನು ಪರಿಹರಿಸುವ ಉಪಾಯಗಳೇನಾದರೂ ನಿಮ್ಮ ಬಳಿ ಇದೆಯೇ?

ಶ್ರೀಲ ಪ್ರಭುಪಾದರು : ಹೌದು, ಇದೆ. ನನ್ನ ಸಲಹೆ ಏನೆಂದರೆ, ಜನರು ಖಾಲಿ ಇರುವ ಭೂಮಿಯನ್ನೆಲ್ಲ ಸಾಗುವಳಿಗೆ ಬಳಸಿಕೊಳ್ಳಬೇಕು. ಎಷ್ಟೊಂದು ಭೂಮಿ ಉಪಯೋಗಿಸದೆ ಹಾಗೇ ಉಳಿದಿರುವುದನ್ನು ನಾನೇ ನೋಡಿರುವೆ. ಉದಾಹರಣೆಗೆ, ಆಸ್ಟ್ರೇಲಿಯ ಮತ್ತು ಅಮೆರಿಕದಲ್ಲಿಯೂ ಕೂಡ ಅಪಾರವಾಗಿ ಭೂಮಿ ಬಳಕೆಯಾಗದೆ ಇದೆ. ಜನರು ಅದರ ಪ್ರಯೋಜನ ಪಡೆಯುತ್ತಿಲ್ಲ.

ಅವರಿಗೆ ದೊರೆಯುವ ಉತ್ಪನ್ನದಲ್ಲಿ ಕೆಲವು ಬಾರಿ ಅವರು ಅದರಲ್ಲಿ ಟನ್‌ಗಟ್ಟಲೆ ಆಹಾರ ಪದಾರ್ಥವನ್ನು ಸಮುದ್ರದಲ್ಲಿ ಹಾಕುತ್ತಾರೆ. ಪದಾರ್ಥಗಳ ಏರಿದ ಬೆಲೆಯನ್ನು ಹಾಗೇ ಉಳಿಸುವುದು ಅವರ ಉದ್ದೇಶ. ಮತ್ತು ಇಲ್ಲಿ, ಜಿನೀವಾದಲ್ಲಿ, ಹೆಚ್ಚುವರಿ ಹಾಲು ಉತ್ಪಾದನೆಯಾದಾಗ, ಹಾಲು ಉತ್ಪಾದನೆಯನ್ನು ಕಡಮೆ ಮಾಡಲೆಂದೇ 20 ಸಾವಿರ ಹಸುಗಳನ್ನು ಕೊಲ್ಲಲು ಕೆಲವರು ಇಚ್ಛಿಸಿದ್ದರೆಂದು ಕೇಳಿದ್ದೇನೆ.

ಜನರ ಮಿದುಳಿನಲ್ಲಿ ನಡೆಯುತ್ತಿರುವುದು, ಇದು. ವಾಸ್ತವವಾಗಿ, ಅವರಿಗೆ ಮಿದುಳೇ ಇಲ್ಲ. ಆದುದರಿಂದ ಅವರಿಗೆ ಸ್ವಲ್ಪ ಮಿದುಳು, ಬುದ್ಧಿ ಬೇಕಾಗಿದ್ದರೆ ಅವರು ಈ ಅಧಿಕೃತ ವೈದಿಕ ಸಾಹಿತ್ಯಗಳನ್ನು ಓದಬೇಕು ಮತ್ತು ಅವರು ಆಧ್ಯಾತ್ಮಿಕ ಮಾರ್ಗದರ್ಶನ ಪಡೆಯಬೇಕು. ಆ ಮಾರ್ಗದರ್ಶನವು ತುಂಬ ಸರಳ : ಭೂಮಿಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಜಗತ್ತಿಗೆ ಅಗತ್ಯವಾದ ಆಹಾರವನ್ನೆಲ್ಲ ಬೆಳೆಯಿರಿ.

ಆದರೆ ಈಗ ಜನರು ತಮ್ಮ ಭೂಮಿಯನ್ನು ಬಳಸಿಕೊಳ್ಳುವುದಿಲ್ಲ. ಬದಲಿಗೆ, ಅವರು ತಮ್ಮ ಗ್ರಾಮ ಮತ್ತು ಕೃಷಿ ಭೂಮಿಯನ್ನು ಬಿಟ್ಟು `ನಟ್ಟು ಬೋಲ್ಟ್‌’ ಅನ್ನು ಉತ್ಪಾದಿಸಲು ಪಟ್ಟಣಗಳತ್ತ ಆಕರ್ಷಿತರಾಗುತ್ತಿದ್ದಾರೆ. ಒಳ್ಳೆಯದು, ಈಗ ನಟ್ಟು ಮತ್ತು ಬೋಲ್ಟ್‌ ಅನ್ನೇ ತಿನ್ನಿ.

ಪ್ರಕೃತಿಯನ್ನು ಪುನರುಜ್ಜೀವಗೊಳಿಸುವುದೇ ಮಹಾತ್ಮ ಗಾಂಧೀಜಿಯವರ ಮೂಲ ಕಾರ್ಯಕ್ರಮವಾಗಿತ್ತು. ದೇವರಿತ್ತ ಜೀವನ ಮಾರ್ಗ. ಸರಳ ಗ್ರಾಮಗಳು ಮತ್ತು ಕೃಷಿ ಭೂಮಿಗಳು. ಇದು ಭಾರತದ, ಇಡೀ ಜಗತ್ತಿನ ಆಹಾರ ಸಮಸ್ಯೆಯನ್ನು ನೀಗುವುದು. ಆದರೆ ನೆಹರು ಎಲ್ಲವನ್ನೂ ತಲೆಕೆಳಗು ಮಾಡಿಬಿಟ್ಟರು. ಅವರು ಕೈಗಾರಿಕೋದ್ಯಮಕ್ಕೆ ಒತ್ತು ನೀಡಿದರು.

ಗಾಂಧೀಜಿಯವರ ಕಾರ್ಯಕ್ರಮ ತುಂಬ ಚೆನ್ನಾಗಿತ್ತು : ಸಣ್ಣ ಸಣ್ಣ ಕೃಷಿ ಗ್ರಾಮವಾಗಿ ನಿಮ್ಮನ್ನು ನೀವು ಸಂಘಟಿಸಿಕೊಳ್ಳಿ. ಮತ್ತು ನಿಮ್ಮ ಆಹಾರವನ್ನು ನೀವೇ ಬೆಳೆದುಕೊಳ್ಳಿ. ನಗರ ಮತ್ತು ಕಾರ್ಖಾನೆಗಳಿಂದ ಮುಕ್ತವಾಗಿ ಬದುಕಿರಿ. ಈ ರೀತಿ ನೀವು ಕೇವಲ ಮೂರು ತಿಂಗಳು ದುಡಿಯಬಹುದು ಮತ್ತು ಇಡೀ ವರ್ಷಕ್ಕೆ ಆಗುವಷ್ಟು ಉತ್ಪನ್ನವನ್ನು ಪಡೆಯಬಹುದು.

ಇಡೀ ವರ್ಷದ ಉತ್ಪನ್ನಕ್ಕೆ ಮೂರು ತಿಂಗಳು ಕೆಲಸ. ಮತ್ತು ಉಳಿದ ಸಮಯವನ್ನು ನೀವು ಹರೇ ಕೃಷ್ಣ ಜಪಿಸಲು ಬಳಸಿಕೊಳ್ಳಬಹುದು. ಭಗವಂತನ ವೈಭವವನ್ನು ಕೊಂಡಾಡುತ್ತ ಹಾಡಿ ಮತ್ತು ನಿಮ್ಮ ಮೂಲ ಭಗವತ್‌ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಇದು ನಮ್ಮ ಕೃಷ್ಣ ಪ್ರಜ್ಞೆ ಆಂದೋಲನ. ಆಧ್ಯಾತ್ಮಿಕವಾಗಿ ಮುನ್ನಡೆಯಿರಿ – ಮಾನವ ಜೀವಿಯಾಗಿ.

ಇಲ್ಲವಾದರೆ, ನೀವು ನಡೆಸುತ್ತಿರುವ ಜೀವನವು ಅಪಾಯದ್ದು. ತಥಾ ದೇಹಾಂತರ ಪ್ರಾಪ್ತಿರ್‌ ಧೀರಸ್‌ ತತ್ರ ನ ಮುಹ್ಯತಿ : ನಾವು ಎಷ್ಟೇ ದೊಡ್ಡ ಯೋಜನೆ ಮಾಡಿದರೂ ಒಂದು ದಿನ ನಾವು ಈ ಯೋಜನೆಯನ್ನು ಬಿಡಬೇಕು. ಏಕೆಂದರೆ, ಎಂದೋ ಒಂದು ದಿನ ನಾವು ಈ ದೇಹವನ್ನು ಬಿಡಬೇಕು. ಮುಂದಿನ ಬಾರಿ ಯಾವ ರೀತಿಯ ದೇಹ ದೊರೆಯುತ್ತದೆಂಬ ಬಗೆಗೆ ಯಾವ ಭರವಸೆಯೂ ಇಲ್ಲ. ಈ ಜನ್ಮದಲ್ಲಿ ನಾನು ದೊಡ್ಡ ಗಗನಚುಂಬಿಯನ್ನು ನಿರ್ಮಿಸಿದೆನೆಂದುಕೊಳ್ಳಿ. ಮುಂದಿನ ಜನ್ಮದಲ್ಲಿ ಅದೇ ಗಗನಚುಂಬಿ ಕಟ್ಟಡದಲ್ಲಿ ಬೆಕ್ಕು ಅಥವಾ ನಾಯಿ ದೇಹದಲ್ಲಿ ಬದುಕಬೇಕಾಗಬಹುದು. ಏಕೆಂದರೆ, ನಾನು ಬೆಕ್ಕು ಅಥವಾ ನಾಯಿಯ ಸ್ವಾರ್ಥ, ದೇಹ ಕೇಂದ್ರೀಕೃತ ಪ್ರಜ್ಞೆಯನ್ನು ಬೆಳೆಸಿಕೊಂಡಿರುತ್ತೇನೆ. ಆ ಸಂದರ್ಭದಲ್ಲಿ ನನ್ನ ಗಗನಚುಂಬಿ ಹಕ್ಕನ್ನು ಯಾರು ತಾನೆ ಲಕ್ಷಿಸುವರು?

ಇವುಗಳೆಲ್ಲ ವಾಸ್ತವಾಂಶಗಳು. ಏಕೆಂದರೆ ಯಾರೂ ಕೂಡ ಪ್ರಕೃತಿ ನಿಯಮಗಳನ್ನು ಬದಲಿಸುವುದು ಸಾಧ್ಯವಿಲ್ಲ. ಪ್ರಕೃತಿ ಕಾನೂನು ಸೋಂಕು ರೋಗದಂತೆ – ಅದಕ್ಕೆ ತೆರೆದುಕೊಳ್ಳಿ, ಅದು ನಿಮ್ಮನ್ನು ಹಿಡಿದುಕೊಳ್ಳುತ್ತದೆ. ಕಾರಣಂ ಗುಣ ಸಂಗೋ ಅಸ್ಯ ಸದ್‌ ಅಸದ್‌ ಯೋನಿ ಜನ್ಮಸು : ತನ್ನ ಹಿಂದಿನ ಕರ್ಮಗಳು ಮತ್ತು ಪ್ರಕೃತಿಯ ತೀವ್ರ ಪ್ರತಿಕ್ರಿಯೆಗಳಿಂದಾಗಿ ವ್ಯಕ್ತಿಯು ಒಳ್ಳೆಯ ಅಥವಾ ಕೆಟ್ಟದನ್ನು ಅನುಭವಿಸುತ್ತಾನೆ. (ಭಗವದ್ಗೀತೆ 13.22) ಇದು ಪ್ರಕೃತಿಯ ನಿಯಮ.

ಆದರೆ ಈಗ ಎಷ್ಟೋ ಜನರು ಸಾವಿನ ಅನಂತರ ಬದುಕಿದೆ ಎಂದು ನಂಬುವುದೇ ಇಲ್ಲ. ಮಾಸ್ಕೋದಲ್ಲಿ ಖ್ಯಾತ ಪ್ರಾಧ್ಯಾಪಕ ಕೊಟೋವ್‌ಸ್ಕಿ ನನಗೆ ಹೇಳಿದರು : “ಸ್ವಾಮೀಜಿ, ಸಾವಿನ ಅನಂತರ ಏನೂ ಇಲ್ಲ.” ನೋಡಿದಿರಾ? ಅವರು ದೊಡ್ಡ ಪ್ರಾಧ್ಯಾಪಕರು. ಆದರೂ ಅವರಿಗೆ ಆತ್ಮದ ಬಗೆಗೆ ಏನೂ ಅರಿವು ಇಲ್ಲ. ಇಂತಹ ಮೂರ್ಖತನವು ನಡೆದೇ ಇದೆ.

ಆದುದರಿಂದ, ಇಂತಹ ದೈವರಹಿತ ನಾಗರಿಕತೆ ಮುಂದುವರಿಯುತ್ತಿದ್ದಂತೆ ಪ್ರಕೃತಿಯ ನಿಯಮದಂತೆ ಹೆಚ್ಚು ಹೆಚ್ಚು ಸಮಸ್ಯೆಗಳಿರುತ್ತವೆ. ಶ್ರೀಮದ್‌ ಭಾಗವತದ ಭವಿಷ್ಯ ನುಡಿಯಂತೆ, ಅನಾವೃಷ್ಟಿ, ಮಳೆ ಕಡಮೆಯಾಗುತ್ತದೆ. ಇದರ ಪರಿಣಾಮವಾಗಿ, ದುರ್ಭಿಕ್ಷ, ಕಡಮೆ ಆಹಾರ – ಈ ಸಮಸ್ಯೆಗಳು ಈಗಾಗಲೇ ಆರಂಭವಾಗಿವೆ.

ಬರಕ್ಕಾಗಿ ಜನರಿಗೆ ಪರಿಹಾರ ನೀಡುವ ನೆಪದಲ್ಲಿ ಸರಕಾರವು ಅಧಿಕ ತೆರಿಗೆ ಹೇರುತ್ತದೆ. ತತ್‌ ಪರಿಣಾಮವಾಗಿ, ಆಚ್ಚಿನ್ನ ದಾರ ದ್ರವಿಣಾ ಯಾಸ್ಯಂತಿ ಗಿರಿ ಕಾನನಂ : ಜನರೆಷ್ಟು ಅಶಾಂತಗೊಳ್ಳುತ್ತಾರೆಂದರೆ, ಅವರು ತಮ್ಮ ಮನೆ ಮತ್ತು ಸೌಕರ್ಯಗಳನ್ನು ಬಿಟ್ಟು ಅರಣ್ಯಕ್ಕೆ ಹೋಗುತ್ತಾರೆ. ಮಳೆ ಕೊರತೆ, ಆಹಾರ ಕೊರತೆ ಮತ್ತು ಸರಕಾರದ ಅಧಿಕ ತೆರಿಗೆಗಳಿಂದ ಅವರು ಶೋಷಿತರಾಗುತ್ತಾರೆ.

ಇಂತಹ ದುಸ್ಥಿತಿಯಲ್ಲಿ, ಯಾರಿಗೆ ತಾನೆ ತಮ್ಮ ತಲೆ (ಮಿದುಳು) ಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಸಾಧ್ಯ? ಅವನು ಹುಚ್ಚನಾಗುತ್ತಾನೆ. ಧರ್ಮ ಗ್ರಂಥಗಳ ಬೋಧನೆಯನ್ನು ನಾವು ಸ್ವೀಕರಿಸದಿದ್ದರೆ ಈ ಎಲ್ಲ ದುರಂತಗಳು ನಮ್ಮ ಮೇಲೆ ಬೀಳುವುದು ಖಚಿತ. ಆದುದರಿಂದ ನಾವು ಈ ಕೂಡಲೇ ಭಗವದ್ಗೀತೆಯ ಈ ಬೋಧನೆಯನ್ನು ಹೃದಯಪೂರ್ವಕವಾಗಿ ಸ್ವೀಕರಿಸಬೇಕು :

ಅನ್ನಾದ್‌ ಭವಂತಿ ಭೂತಾನಿ ಪರ್ಜನ್ಯಾದ್‌ ಅನ್ನ ಸಂಭವಃ ।
ಯಜ್ಞಾದ್‌ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ ॥

“ಎಲ್ಲ ಜೀವಿಗಳು ಆಹಾರ ಧಾನ್ಯಗಳಿಂದ ಬದುಕುತ್ತವೆ. ಧಾನ್ಯಗಳನ್ನು ಮಳೆ ಉತ್ಪತ್ತಿ ಮಾಡುತ್ತದೆ. ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ. ಯಜ್ಞವು ನಿಯತ ಕರ್ಮಗಳಿಂದ ಉದ್ಭವಿಸುತ್ತದೆ.” (ಭಗವದ್ಗೀತೆ 3.14)

ಆದುದರಿಂದಲೇ ನಾವು ಭಗವಂತನ ನಾಮ ಪಠಣದ ಈ ಆಂದೋಲನವನ್ನು ಆರಂಭಿಸಿದ್ದೇವೆ. ಇದೊಂದು ಯಜ್ಞ. ಈ ಗೊಂದಲದ ಯುಗದಲ್ಲಿ, ದುರದೃಷ್ಟದ ಯುಗದಲ್ಲಿ ಈ ಯಜ್ಞ ಮಾತ್ರ ಸಾಧ್ಯ. ಇದೇ ಪರಿಹಾರ, ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಆದರೆ ಜನರು ಈ ಪರಿಹಾರವನ್ನು ಪಡೆಯುವುದಿಲ್ಲ. ಅವರ ಬಳಿ ಅವರದೇ ಪರಿಹಾರ ಇದೆ.

ಈ ಲೇಖನ ಶೇರ್ ಮಾಡಿ