ಹುಗ್ಗಿಗೊಂದು ಪ್ರಾಸದ ಪದ ಹುಡುಕಿ ಎಂದ ಕೂಡಲೆ ನೆನಪಿಗೆ ಬರುವುದು ಸುಗ್ಗಿ. ಸಂತುಷ್ಟಿಯ ಕಾಲದಲ್ಲಿ ಉಂಡು ತೇಗುವಂಥದ್ದು ಹುಗ್ಗಿ. ಅದಕ್ಕೆಂದೇ ಅದು ಸಂಕ್ರಾಂತಿಯೊಂದಿಗೆ ಬೆಸೆದುಕೊಂಡಿರುವ ಭೋಜ್ಯ. ಹುಗ್ಗಿಯಿಲ್ಲದೆ ಎಂಥಾ ಸಂಕ್ರಾಂತಿ ಅನ್ನುವುದು ಸಂಪ್ರದಾಯ ಇನ್ನೂ ಉಳಿಸಿಕೊಂಡಿರುವವರ ಮಾತು.
ಈಗಿನ ಜಮಾನದವರಿಗೆ ನೋಡಿ ಹುಗ್ಗಿಯ ಗಮಲೇ ಗೊತ್ತಿಲ್ಲ . ಪಟ್ಟಣದ ಸೋಂಕು ಹತ್ತಿಸಿಕೊಂಡಿರುವ ಮಂದಿಗಂತೂ ಹುಗ್ಗಿಯನ್ನೇ ಹೋಲುವ ಪೊಂಗಲ್ ಮಾತ್ರ ಗೊತ್ತು. ಅದಕ್ಕೆಂದೇ ಅವರ ಪಾಲಿಗೆ ಸಂಕ್ರಮಣವೆಂದರೆ ಪೊಂಗಲ್. ಆದರೆ, ಕನ್ನಡನಾಡಿನ ಸಗ್ಗದ ಸಿರಿ ಸುಗ್ಗಿಯ ಹಬ್ಬ ಸಂಕ್ರಾಂತಿಗೆ ಹೊಂದಿಕೊಳ್ಳುವುದು ಹುಗ್ಗಿಯೇ. ಅದಕ್ಕೆಂದೇ ಹುಗ್ಗಿಯನ್ನು ನಿಮ್ಮ ಅಡುಗೆ ಮನೆಗೆ ತಂದಿದ್ದೇವೆ, ಬರಮಾಡಿಕೊಳ್ಳಿ.

ಹುಗ್ಗಿ
ಹುಗ್ಗಿ ಮಾಡುವುದು ತುಂಬಾ ಸಿಂಪಲ್ :
ಹೆಸರು ಬೇಳೆ ಹಾಗೂ ಅಕ್ಕಿ ಹುಗ್ಗಿ ತಯಾರಿಸಲು ಬೇಕಾದ ಪದಾರ್ಥಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುತ್ತವೆ. ಆಮೇಲೆ ಮೆಣಸು, ಲವಂಗ, ಜೀರಿಗೆ, ಏಲಕ್ಕಿ, ಒಣ ಕೊಬ್ಬರಿ, ಅದೆಲ್ಲಾ ಬೇಕು. ಇಷ್ಟೆಲ್ಲಾ ಹೊ೦ದಿಸಿಕೊ೦ಡಿರಾದರೆ ನೇರ ಅಗ್ನಿಕಾರ್ಯಕ್ಕೆ
ಮು೦ದಾಗಬಹುದು.
ಮೊದಲಿಗೆ, ಒಂದು ಪಾವು ಹೆಸರುಬೇಳೆಯನ್ನು ಬೇಯಲು ಕುಕ್ಕರ್ ಗೆ ಸುರಿದು ಬೇಯಲು ಬಿಡಿ. ಅದರ ಪಾಡಿಗದು ಬೇಯುತ್ತಿರುವಾಗ ಮೆಣಸು, ಜೀರಿಗೆ, ಏಲಕ್ಕಿಯನ್ನು ಒಟ್ಟುಗೂಡಿಸಿ ಪುಡಿ ಮಾಡಿಟ್ಟುಕೊಂಡಿರಿ. ಕೊಬ್ಬರಿ ಪುಡಿ ಪ್ರತ್ಯೇಕವಾಗಿ ರೆಡಿ ಮಾಡಿಟ್ಟಿರಿ. ನೆನಪಿರಲಿ, ಕೊಬ್ಬರಿ ಚೆನ್ನಾಗಿ ಒಣಗಿರಬೇಕು. ಪುಡಿ ಕಾರ್ಯ ಮುಗಿಯುವ ಹೊತ್ತಿಗೆ ಹೆಸರುಬೇಳೆ ಬೆಂದಿರುತ್ತೆ. ಬೆಂದ ಹೆಸರುಬೇಳೆಗೆ ಒಂದು ಪಾವಿನಷ್ಟು ಅಕ್ಕಿ ಸೇರಿಸಿ. ಈಗಾಗಲೇ ಸಿದ್ಧಪಡಿಸಿಕೊಂಡ ಮೆಣಸು, ಜೀರಿಗೆ, ಏಲಕ್ಕಿ ಪುಡಿ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಮತ್ತೆ ಕುದಿಯಲು ಬಿಡಿ. ಈ ನಡುವೆ ನಿಂಬೆಹಣ್ಣಿಗೆ ಒಂದೆಳೆ ದಪ್ಪದಷ್ಟು ಹುಣಸೆ ಹಣ್ಣು ನೆನೆಸಿಡಿ. ಅದು ಅನಂತರ ಕೆಲಸಕ್ಕೆ ಬರುತ್ತದೆ. ಇನ್ನೇನು ಕುದಿ ಹದಕ್ಕೆ ಬಂದು ಹುಗ್ಗಿಯ ಗಮಲು ಮೂಗಿಗೆ ಹೊಡೆಯುವಾಗ ಒಣ ಕೊಬ್ಬರಿ ಸೇರಿಸಿಬಿಡಿ. ಅಲ್ಲಿಗೆ ಹುಗ್ಗಿ ರೆಡಿ.
ಆದರೆ, ತಟ್ಟೆಯನ್ನು ಕೈಗೆತ್ತಿಕೊಳ್ಳಲು ಮಾತ್ರ ತುಸು ಕಾಯಬೇಕು. ಬರೇ ಹುಗ್ಗಿ ರುಚಿಯಲ್ಲ. ಅದಕ್ಕೊಂದು ಗೊಜ್ಜಿನ ಸಂಸ್ಕಾರ ಬೇಕು. ಈ ಗೊಜ್ಜಿಗೆ ಗೊಡ್ಡು ಸಾರು ಅನ್ನುವ ಹೆಸರುಂಟು. ಗೊಜ್ಜನ್ನು ಬೆರಸಿಕೊಂಡಾಗ ಮಾತ್ರ ಹುಗ್ಗಿಯ ಸವಿ.

ಗೊಜ್ಜು ತಯಾರಿಸುವುದು ಹತ್ತೇ ನಿಮಿಷದ ಕೆಲಸ :
ಮತ್ತೆ ಜೀರಿಗೆ ಹಾಗೂ ಕೊಬ್ಬರಿ ಪುಡಿಯನ್ನು ರೆಡಿ ಮಾಡಿಟ್ಟುಕೊಳ್ಳಿ. ಶೇಂಗಾ (ಕಡಲೆಬೀಜ) ಪುಡಿಯೂ ಜೊತೆಗಿರಲಿ. ಈ ಮುನ್ನ ನೆನೆಸಿಟ್ಟಿರುವ ಹುಣಸೆಯನ್ನು ಚೆನ್ನಾಗಿ ಹಿಚುಕಿ, ತಿಳಿ ಮಾತ್ರ ಉಳಿಯುವಂತೆ ಜೊಗಟೆಯನ್ನೆಲ್ಲಾ ತೆಗೆಯಿರಿ, ಹುಣಸೆತಿಳಿಗೆ ಸಿದ್ಧಪಡಿಸಿಕೊಂಡಿರುವ ಪುಡಿಗಳನ್ನೆಲ್ಲಾ ಬೆರೆಸಿ. ಉಪ್ಪು ರುಚಿಗೆ ತಕ್ಕಷ್ಟು. ಅಲ್ಲಿಗೆ ದಿಢೀರ್ ಗೊಜ್ಜು ತಯಾರು. ಗೊಜ್ಜು ಮತ್ತಷ್ಟು ರುಚಿಕಟ್ಟಾಗಿರಲು ಒಂದು ಒಗ್ಗರಣೆ ಅಗತ್ಯ. ಕರಿಬೇವು, ಇಂಗು ಬೆರೆತ ಒಗ್ಗರಣೆಗೆ ತುಪ್ಪವೇ ಚೆಂದ.
ಈಗ ಹುಗ್ಗಿ, ಗೊಡ್ಡು ಸಾರು ಎರಡೂ ನಿಮ್ಮ ಮುಂದೆ ತಯಾರು.






Leave a Reply