ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರ ಉಪನ್ಯಾಸ
ಶ್ರೀಭಗವಾನುವಾಚ
ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ ।
ಗತಾಸೂನಗತಾಸೂಂಶ್ಚ ನಾನುಶೋಚನ್ತಿ ಪಣ್ಡಿತಾಃ ॥
ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು – “ನೀನು ವಿದ್ವಾಂಸರಂತೆ ಮಾತುಗಳನ್ನಾಡುತ್ತಿದ್ದೀಯೆ; ಆದರೆ ಶೋಕಕ್ಕೆ ಯೋಗ್ಯರಲ್ಲದವರನ್ನು ಕುರಿತು ಶೋಕಿಸುತ್ತಿದ್ದೀಯೆ. ಪಂಡಿತರು ಸತ್ತವರಿಗಾಗಿ ಆಗಲಿ ಬದುಕಿರುವವರಿಗಾಗಿ ಆಗಲಿ ದುಃಖಪಡುವುದಿಲ್ಲ.”
(ಭಗವದ್ಗೀತೆ, 2.11)
ಇಲ್ಲಿ ಕೃಷ್ಣನನ್ನು ಭಗವಾನ್ ಎಂದು ಗುರುತಿಸಲಾಗಿದೆ. ಭಗವಾನ್ ಶಬ್ದದ ವ್ಯಾಖ್ಯಾನವನ್ನು ನಾನು ನೀಡಿರುವೆ: ಎಲ್ಲ ವೈಭವಗಳಿಂದಲೂ ಪರಿಪೂರ್ಣನಾದವನು – ಸ್ವತ್ತು, ಶಕ್ತಿ, ಕೀರ್ತಿ, ಸೌಂದರ್ಯ, ಜ್ಞಾನ ಮತ್ತು ತ್ಯಾಗ. ಈ ಎಲ್ಲ ವೈಭವ, ಲಕ್ಷಣಗಳೂ ಇರುವ ವ್ಯಕ್ತಿಯನ್ನು ನೀವು ಕಂಡರೆ ಅವನೇ ಭಗವಾನ್. ಈ ಗ್ರಹಿಕೆಯ ಹಿನ್ನೆಲೆಯಲ್ಲಿ, ಸಾಮಾನ್ಯ ಮನುಷ್ಯನನ್ನು ಭಗವಂತನೆಂದು ಒಪ್ಪಿಕೊಳ್ಳುವುದು ತುಂಬ ಕಷ್ಟ. ಕೃಷ್ಣನು ದೇವೋತ್ತಮ ಪರಮ ಪುರುಷನೆಂಬುದು ಅರ್ಜುನನಿಗೆ ಮನವರಿಕೆಯಾಗಿದ್ದನ್ನು ನೀವು ಭಗವದ್ಗೀತೆಯಲ್ಲಿ ನೋಡಬಹುದು. ಆದರೆ ಭವಿಷ್ಯದಲ್ಲಿ ಕೃಷ್ಣನನ್ನು ಕುರಿತು ಬೇರೆಯವರಿಗೆ ಶಂಕೆ ಬರಬಹುದೆಂದು ಅರ್ಜುನ ಮನವಿ ಮಾಡಿಕೊಳ್ಳುತ್ತಾನೆ, `ನಿನ್ನ ವಿಶ್ವರೂಪವನ್ನು ತೋರಿಸುವೆಯಾ?.’ ಕೃಷ್ಣ ಅದಕ್ಕೆ ಒಪ್ಪಿ ತೋರಿಸಿದ. ಹೀಗಾಗಿ, ಈಗ ಬುದ್ಧಿವಂತನೊಬ್ಬನು ದೇವರೆನ್ನಿಸಿಕೊಳ್ಳವವನನ್ನು ಈ ರೀತಿ ಕೇಳಿ ಪರೀಕ್ಷಿಸಬಹುದು, `ನೀನು ದೇವರೆಂಬುದು ಸಾಬೀತಾಗುವಂತೆ ಏನಾದರೂ ತೋರಿಸು.’ ಏನನ್ನೂ ತೋರಿಸದೆ ಯಾರೂ ದೇವರಾಗುವುದು ಸಾಧ್ಯವಿಲ್ಲ.
ದೇವರು ಏನೆಂಬುದು ತಿಳಿಯದಿರುವುದೇ ನಮ್ಮ ತಪ್ಪು. ದೇವರು ನಮ್ಮಂತೆ ಇರಬಹುದೆಂದು ನಾವು ಭಾವಿಸುತ್ತೇವೆ. ಇಲ್ಲ. ಜಗತ್ತಿನ ಆಡಳಿತ ವ್ಯವಹಾರಗಳನ್ನು ನಿಯಂತ್ರಿಸುವ ದೇವರು ನಮ್ಮಂತೆ ಒಬ್ಬನಾಗಿರುವುದು ಸಾಧ್ಯವಿಲ್ಲ. ಅವನು ಪರಮ ಪ್ರಜ್ಞಾವಂತ, ಜ್ಞಾನಿ.
ಆತ್ಮದ ವಲಸೆ
ದೇವರನ್ನು ಅರ್ಥಮಾಡಿಕೊಳ್ಳಲು ಮೊದಲು ನಾವು ನಮ್ಮನ್ನು ಅಥವಾ ನಮ್ಮ ದೇಹದೊಳಗಿನ ಆತ್ಮವನ್ನು ಅರ್ಥಮಾಡಿಕೊಳ್ಳಬೇಕು. ಬದುಕಿನ ಅಸ್ತಿತ್ವವು ಅತಿ ಸೂಕ್ಷ್ಮವಾದುದು. ನಮ್ಮ ಐಹಿಕ ದೇಹವನ್ನು ಭೂಮಿ, ನೀರು, ಬೆಂಕಿ, ವಾಯು ಮತ್ತು ಆಕಾಶದಿಂದ ಮಾಡಲಾಗಿದೆ. ಮತ್ತು ಅದರ ಹಿಂದೆ ಮನಸ್ಸು, ಬುದ್ಧಿ ಮತ್ತು ಅಹಂನ ಸೂಕ್ಷ್ಮ ದೇಹವಿದೆ. ನಾನು ನನ್ನ ಶರೀರವನ್ನು ಬಿಟ್ಟಾಗ, ಸೂಕ್ಷ್ಮ ದೇಹವು ನನ್ನನ್ನು ಮತ್ತೊಂದು ಶರೀರಕ್ಕೆ ಒಯ್ಯುತ್ತದೆ. ಹೀಗಾಗಿ, ದೇಹವು ಜೀವ ರಹಿತವಾದರೂ ಸೂಕ್ಷ್ಮ ದೇಹವು ಹಾಗಾಗುವುದಿಲ್ಲ. ಉದಾಹರಣೆಗೆ, ರಾತ್ರಿಯಲ್ಲಿ ಶರೀರವು ಮಲಗಿದ್ದಾಗ ಸೂಕ್ಷ್ಮ ದೇಹವು ಕಾರ್ಯ ನಿರತವಾಗಿರುತ್ತದೆ, ಆದುದರಿಂದ ನಾವು ಕನಸು ಕಾಣುತ್ತೇವೆ. ಅಂತೆಯೇ ಶರೀರವು ಮರಣಹೊಂದಿದಾಗ ಸೂಕ್ಷ್ಮ ದೇಹವು ನಮ್ಮನ್ನು ಮತ್ತೊಂದು ದೇಹಕ್ಕೆ ಒಯ್ಯುತ್ತದೆ.
ವ್ಯಕ್ತಿಯು ತನ್ನ ದೇಹವನ್ನು ಹೇಗೆ ಬದಲಿಸಿಕೊಳ್ಳುತ್ತಾನೆ ಎಂಬುದನ್ನು ನಾನು `ಭಗವದ್ಗೀತಾ ಯಥಾ ರೂಪ’ ದ ಪ್ರಸ್ತಾವನೆಯಲ್ಲಿ ವಿವರಿಸಿದ್ದೇನೆ. ಸಾಯುತ್ತಿರುವ ವ್ಯಕ್ತಿಯ ಮನ, ಬುದ್ಧಿ ಮತ್ತು ಅಹಂ ಒಂದು ಚಿಂತನೆಯಲ್ಲಿ ಮಗ್ನವಾದಾಗ, ಆ ಚಿಂತನೆಯು ಮುಂದಿನ ಜನ್ಮಕ್ಕಾಗಿ ಅವನನ್ನು ಸೂಕ್ತ ದೇಹಕ್ಕೆ ಕರೆದೊಯ್ಯುತ್ತದೆ. ಗಾಳಿ ಶುದ್ಧ. ಆದರೆ ಅದು ಗುಲಾಬಿ ಗಿಡಗಳ ಮಧ್ಯೆ ಸಾಗುವಾಗ ಅದರ ಸುವಾಸನೆಯನ್ನು ಮತ್ತು ಕಸ ಇರುವ ಸ್ಥಳದ ಬಳಿ ಸಾಗುವಾಗ ದುರ್ವಾಸನೆಯನ್ನು ಒಯ್ಯುತ್ತದೆ. ಅದೇ ರೀತಿ ಮನಸ್ಸು, ಬುದ್ಧಿ ಮತ್ತು ಅಹಂ ನಮ್ಮ ಪ್ರಸ್ತುತ ಚಟುವಟಿಕೆಯ ವಾಸನೆಯನ್ನು ಮುಂದಿನ ಜೀವನಕ್ಕೆ ಒಯ್ಯುತ್ತವೆ. ಅದು ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಆತ್ಮದ ವಲಸೆಯ ವಿಸ್ಮಯ.
ನಮ್ಮ ಪ್ರಸ್ತುತ ಜೀವನದಲ್ಲಿ ನಾವು ನಮ್ಮ ಪ್ರಜ್ಞೆಯನ್ನು ಶುದ್ಧೀಕರಿಸಿಕೊಳ್ಳಬೇಕು, ಆಗ ನಮ್ಮ ಮುಂದಿನ ಜೀವನದಲ್ಲಿ ನಮಗೆ ಅಲೌಕಿಕ `ಪರಿಮಳ’ ಇರುವ ದೇಹ ಲಭ್ಯವಾಗುತ್ತದೆ. ನಮ್ಮ ಈಗಿನ ಜೀವನದಲ್ಲಿ ನಾವು ಭಗವಂತನ ಭಕ್ತಿಯಲ್ಲಿ ತೊಡಗಿಕೊಂಡಿದ್ದರೆ ಮುಂದಿನ ಜನ್ಮದಲ್ಲಿ ನಮಗೆ ಭಗವಂತನ ಸಹವಾಸ ಲಭಿಸುತ್ತದೆ. ಎಲ್ಲವೂ ನಮ್ಮ ಕೈಯಲ್ಲಿದೆ. ಕೆಳ ದರ್ಜೆಯಲ್ಲಿರಬೇಕೆಂದರೆ ಈ ಜೀವನದಿಂದಲೆ ಅದಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು. ಮತ್ತು ಅತ್ಯುನ್ನತ ಪರಿಪೂರ್ಣ ಬದುಕಿಗೆ ಏರಬೇಕೆಂದರೆ – ಭಗವಂತನ ಸಹವರ್ತಿಗಳಲ್ಲಿ ಒಬ್ಬರಾಗಬೇಕೆಂದರೆ – ನಾವು ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಬಹುದು. ಹೇಗೆ?
ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಆಚೆ
ಒಂದು ಉದಾಹರಣೆ ನೀಡುತ್ತೇನೆ. ಜನರು ಚಂದ್ರನಲ್ಲಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಅವರು ಚಂದ್ರನ ಬಗೆಗೆ ಅರಿಯಲು, ಮೊದಲು ಕೇಳಲು ಮುಂದಾಗುತ್ತಾರೆ. ಒಂದು ಸ್ಥಳದ ಬಗ್ಗೆ ಕೇಳದಿದ್ದರೆ ನೀವು ಅಲ್ಲಿಗೆ ಹೋಗಲು ಇಚ್ಛಿಸುವುದಿಲ್ಲ. ನನ್ನ ಮಿತ್ರ ಶ್ರೀ ಕೊಹೇನ್ ಕ್ಯಾಲಿಫೋರ್ನಿಯಾಕ್ಕೆ ತೆರಳಿದ. ನನಗೆ ಆ ಊರಿನ ಬಗೆಗೆ ಏನೂ ತಿಳಿಯದು. ಆದರೆ ಊರಿಗೆ ಹೋದ ಮೇಲೆ ಅಲ್ಲಿನ ಬಗೆಗೆ ವಿವರವಾಗಿ ಬರೆಯುವುದಾಗಿ ಅವನು ನನಗೆ ಹೇಳಿದ. ಆ ವಿವರ ಓದಿದ ಮೇಲೆ ನನಗೆ ಅಲ್ಲಿಗೆ ಹೋಗಬೇಕೆನಿಸಿದರೆ, ಆಗ ನಾನು ಸಿದ್ಧತೆ ನಡೆಸುವೆ -`ನಾನು ಅಲ್ಲಿಗೆ ಹೋಗಬೇಕು’ ಎಂದುಕೊಳ್ಳುವೆ. ಅದೇ ರೀತಿ ನಾನು ಆಧ್ಯಾತ್ಮಿಕ ಜಗತ್ತಿನ ಬಗೆಗೆ ನಿಮಗೆ ವಿವರಿಸಿದರೆ ನೀವು ಅಲ್ಲಿಗೆ ಹೋಗಬೇಕೆಂದು ಯೋಚಿಸಬಹುದು. ಆದುದರಿಂದ ನಾವು ಕೇಳಿಸಿಕೊಳ್ಳಬೇಕು. ದೇವರು ಹೇಗಿದ್ದಾನೆಂಬ ಬಗ್ಗೆ ಕೇಳಿಸಿಕೊಳ್ಳದಿದ್ದರೆ, ಯಾವ ರೀತಿಯ ಸ್ಥಳ ಅವನಿಗಿದೆ, ಅಲ್ಲಿನ ಜೀವನ ವಿಧಾನವೇನು ಇವೆಲ್ಲ ತಿಳಿದುಕೊಳ್ಳದಿದ್ದರೆ ನಾವು ಆಕರ್ಷಿತರಾಗುವುದಿಲ್ಲ.
ಆಧ್ಯಾತ್ಮಿಕ ಲೋಕಕ್ಕೆ ಹೋಗಲು ನಾವು ಈಗ ಜೀವಿಸುತ್ತಿರುವ ಎರಡು ದೇಹ – ಸ್ಥೂಲ ಶರೀರ ಮತ್ತು ಸೂಕ್ಷ್ಮ ದೇಹದಿಂದ ಮುಕ್ತರಾಗಬೇಕು. ವ್ಯಕ್ತಿಯ ಶರೀರವು ಸತ್ತಂತೆ ಕಾಣುತ್ತದೆ ಎಂದುಕೊಳ್ಳಿ. ಸೂಕ್ಷ್ಮ ಶರೀರವು ಅವನನ್ನು ಮತ್ತೊಂದು ದೇಹಕ್ಕೆ ಒಯ್ದಿದೆ ಎಂದು ತಿಳಿಯಬೇಕು. ಸೂಕ್ಷ್ಮ ಶರೀರವು ಜೀವ ಕಳೆದುಕೊಂಡಿಲ್ಲ. ಅಲ್ಲಿನ್ನೂ ಜೀವವಿದೆ. ಆದರೆ ನಿಮಗೆ ಮುಕ್ತಿ ದೊರೆತಾಗ ನೀವು ಸೂಕ್ಷ್ಮ ದೇಹ, ಅಹಂನ ಬದುಕನ್ನೂ ಬಿಡಬೇಕು. ಈ ರೀತಿ ದೇಹವನ್ನು ತ್ಯಜಿಸಲೇ ಬೇಕಾಗಿರುವುದರಿಂದ ಅದಕ್ಕಾಗಿ ಕಣ್ಣೀರಿಡುವುದೇಕೆ? ಆದುದರಿಂದ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, “ವಿದ್ವಾಂಸನು ದೇಹದ ವಿಷಯವಾಗಿ ದುಃಖಿಸುವುದಿಲ್ಲ. ನಿಜವಾದ ಪಂಡಿತನಿಗೆ ದೇಹದ ಬಗೆಗೆ ಕಾಳಜಿ ಇರುವುದಿಲ್ಲ. ಅವನ ಕಾಳಜಿ ಏನಿದ್ದರೂ ಆತ್ಮದ ಚಟುವಟಿಕೆಗಳ ಬಗೆಗೆ ಮಾತ್ರ. ನೀನು ದೈಹಿಕ ಬಾಂಧವ್ಯದಂತೆ ಅನೇಕ ವಿಷಯಗಳನ್ನು ಕುರಿತು ಮಾತನಾಡುತ್ತಿರುವೆ; `ನನ್ನ ಮಿತ್ರರು ಸಾವಿಗೀಡಾದರೆ, ಅವರ ಪತ್ನಿಯರು ವಿಧವೆಯರಾಗುತ್ತಾರೆ…’ ನೀನು ವಿದ್ವಾಂಸನಂತೆ ತೋರ್ಪಡಿಸಿಕೊಳ್ಳುತ್ತಿರುವೆ. ಆದರೆ ನನ್ನೊಂದಿಗಿನ ನಿನ್ನ ಇಡೀ ವಾದವು ದೇಹ ಆಧಾರಿತ, ಮೂರ್ಖತನದ್ದು.”
ದೇಹದೊಂದಿಗೆ ಗುರುತಿಸಿಕೊಳ್ಳುವವರು ವಿದ್ವಾಂಸರಲ್ಲ, ಮೂರ್ಖರು. ಅವನು ಬಿ.ಎ., ಎಂ.ಎ., ಪಿಎಚ್.ಡಿ., ಏನೇ ಇರಬಹುದು, ಆದರೆ ಅವನು ತನ್ನನ್ನು ದೇಹದೊಂದಿಗೆ ಗುರುತಿಸಿಕೊಂಡರೆ ಭಗವದ್ಗೀತೆ ಮತ್ತು ವೈದಿಕ ಸಾಹಿತ್ಯಗಳ ಪ್ರಕಾರ ಅವನು ವಿದ್ವಾಂಸನಲ್ಲ. ಇದು ಆಧ್ಯಾತ್ಮಿಕ ಬದುಕಿನ ಮೊದಲ ಪಾಠ. ಜ್ಞಾನದಲ್ಲಿ ಆಧ್ಯಾತ್ಮಿಕ ಪ್ರಗತಿ ಸಾಧಿಸಬೇಕೆಂದರೆ ನಮಗೆ ಈ ಪ್ರಾಥಮಿಕ ತಿಳಿವಳಿಕೆ ಇರಬೇಕು : `ನಾನು ದೇಹವಲ್ಲ.’ ಇದು ಉನ್ನತ ಗ್ರಹಿಕೆ ಏನೂ ಅಲ್ಲ. ಇದು ಆಧ್ಯಾತ್ಮಿಕ ಬದುಕಿನ ಅಆಇಈ.
ಹಸು ಮತ್ತು ಕತ್ತೆಗಳ ಸಮಾಜ
ಈ ವಿಷಯ ಕುರಿತು ಭಾಗವತದಲ್ಲಿ ಒಂದು ಚೆನ್ನಾದ ಶ್ಲೋಕವಿದೆ.
ಯಸ್ಯಾತ್ಮ ಬುದ್ಧಿಃ ಕುಣಪೇ ತ್ರಿ ಧಾತುಕೇ ।
ಸ್ವೕಃ ಕಲತ್ರಾದಿಶು ಭೌಮ ಇಜ್ಯೕಃ ॥
ಕುಣಪೆ ಎಂದರೆ ಚೀಲ. ತ್ರಿ-ಧಾತುಕೆಯು ದೇಹವನ್ನು ರೂಪಿಸುವ ಮೂರು ವಸ್ತುಗಳನ್ನು ಸೂಚಿಸುತ್ತದೆ. ಆಯುರ್ವೇದ ವೈದ್ಯ ಪದ್ಧತಿಯಂತೆ ಈ ದೇಹವನ್ನು ಮೂರು ಅಂಶಗಳಿಂದ ಮಾಡಲಾಗಿದೆ: ಕಫ, ಪಿತ್ತ, ವಾತ (ಥಂಡಿ ಅಥವಾ ನೀರು, ತಾಪ ಅಥವಾ ಬೆಂಕಿ ಮತ್ತು ವಾಯು). ಆದುದರಿಂದ ದೇಹವನ್ನು ಈ ವಸ್ತುಗಳಿಂದ ಮಾಡಿದ ಚೀಲ ಎನ್ನುತ್ತಾರೆ. ಭಾಗವತ ಹೇಳುತ್ತದೆ, “ನೀರು, ಬೆಂಕಿ ಮತ್ತು ಗಾಳಿಯಿಂದ ಮಾಡಲಾದ ದೇಹದೊಂದಿಗೆ ಯಾರು ಗುರುತಿಸಿಕೊಳ್ಳುವರೋ, ತನ್ನ ದೇಹದ ಉಪ-ಉತ್ಪನ್ನಗಳನ್ನು ತನ್ನದೇ ವಂಶವೆಂದು ಯೋಚಿಸುವರೋ, ದೇಹವು ಬೆಳೆದ ಭೂಮಿಯನ್ನು ಪೂಜಾರ್ಹ ಎಂದು ಭಾವಿಸುವರೋ ಮತ್ತು ಸ್ನಾನ ಮಾಡಲೆಂದು ಮಾತ್ರ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಡುವರೋ ಅವರು ಹಸು ಅಥವಾ ಕತ್ತೆಗಳಿಗಿಂತ ಉತ್ತಮರೇನಲ್ಲ.”
ನನ್ನ ಮಕ್ಕಳು, ನನ್ನ ಪತ್ನಿ, ಬಂಧುಗಳು, ತಂದೆ-ತಾಯಿ, ಸೋದರ-ಸೋದರಿ, ರಾಷ್ಟ್ರ, ಸಮಾಜ – ಈ ಎಲ್ಲವೂ ದೈಹಿಕ ಬಾಂಧವ್ಯಗಳಿಂದ. ನ್ಯೂಯಾರ್ಕ್‌ನ ರಸ್ತೆಗಳಲ್ಲಿ ಸಾವಿರಾರು ಮಹಿಳೆಯರು ಇರುತ್ತಾರೆ, ಅವರಲ್ಲಿ ಯಾರೋ ಒಬ್ಬ ಮಹಿಳೆಯ ಜೊತೆ ನನಗೆ ದೈಹಿಕ ಸಂಬಂಧವಿದೆ ಎಂಬ ಕಾರಣ ಅವಳನ್ನು ನನ್ನ ಪತ್ನಿ ಎಂದು ಮತ್ತು ಅವಳ ಮಕ್ಕಳನ್ನು ನನ್ನ ಮಕ್ಕಳೆಂದು ಕರೆಯುತ್ತೇನೆ. ಆದರೆ ಮೂಲ ತತ್ತ್ವ – `ನಾನು ಈ ದೇಹ’ – ತಪ್ಪು. ಮತ್ತು ನಾನು ದೇಹವಲ್ಲವಾದ ಕಾರಣ, ದೇಹದ ವಿಸ್ತರಣೆಯೂ ನನ್ನದಲ್ಲ. ದೇಹವು ಆತ್ಮ ಮತ್ತು ಈ ದೇಹದ ವಿಸ್ತರಣೆಯು ನನ್ನದು ಎಂಬ ತಪ್ಪು ಕಲ್ಪನೆಯ ಅಡಿಯಲ್ಲಿ ಇಡೀ ಜಗತ್ತು ಸುತ್ತುತ್ತಿದೆ.
ದೇಶ ದೇಶಗಳ ಮಧ್ಯೆ ಹೋರಾಟಕ್ಕೆ ದೇಹವೇ ಕಾರಣ. ಈಗ ಎಲ್ಲರೂ ಭೂಮಿಗಾಗಿ ಹೋರಾಟ ನಡೆಸುತ್ತಿದ್ದಾರೆ. `ನಾವು ಭಾರತೀಯರು’, `ನಾವು ಪಾಕೀಸ್ತಾನಿಯರು’, `ನಾವು ಅಮೆರಿಕನ್ನರು’, `ನಾವು ವಿಯೆಟ್ನಾಮಿಯರು’, `ನಾವು ಜರ್ಮನ್ನರು.’ ನೆಲಕ್ಕಾಗಿ ಹೋರಾಟ ನಡೆಯುತ್ತಿದೆ. ಭೂಮಿಯು ಪೂಜಾರ್ಹವಾಗಿದೆ. ಎಷ್ಟು ಪೂಜಾರ್ಹ ಎಂದರೆ ಜನರು ತಮ್ಮ ಅಮೂಲ್ಯ ಜೀವವನ್ನೇ ಅದಕ್ಕಾಗಿ ತ್ಯಾಗ ಮಾಡುತ್ತಾರೆ. ಭೂಮಿ ಏಕೆ ಅಷ್ಟು ಪ್ರೀತಿಪಾತ್ರವಾಗಿದೆ? ಏಕೆಂದರೆ ಅಲ್ಲಿ ದೇಹವು ಬೆಳೆದಿದೆ. ಮತ್ತೊಮ್ಮೆ ದೇಹ ಬಾಂಧವ್ಯ.
ಕ್ರಿಶ್ಚಿಯನ್ನರ ಜಗತ್ತಿನಲ್ಲಿ ಜೋರ್ಡಾನ್ ನದಿಯ ನೀರನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅದೇ ರೀತಿ ಹಿಂದುಗಳು ಪುಣ್ಯ ಕ್ಷೇತ್ರಗಳಿಗೆ ಹೋದಾಗ ಅಲ್ಲಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ಆದರೆ ಪವಿತ್ರ ಸ್ಥಳಗಳಿಗೆ ಹೋಗುವುದು ಸುಮ್ಮನೆ ಸ್ನಾನ ಮಾಡಲೆಂದಲ್ಲ ಎಂಬುದನ್ನು ಅರಿಯಬೇಕು. ಪವಿತ್ರ ಸ್ಥಳಗಳಿಗೆ ಹೋಗುವ ನಿಜವಾದ ಉದ್ದೇಶವೆಂದರೆ ಅಲ್ಲಿ ಆಧ್ಯಾತ್ಮಿಕ ಜ್ಞಾನದ ಬುದ್ಧಿವಂತ ವಿದ್ವಾಂಸರನ್ನು ಹುಡುಕುವುದು, ಅವರ ಸಹವಾಸ ಮಾಡುವುದು ಮತ್ತು ಅವರಿಂದ ಕಲಿಯುವುದು.
ನನ್ನ ನಿವಾಸವು ವೃಂದಾವನದಲ್ಲಿದೆ. ಅಲ್ಲಿ ಅನೇಕ ಶ್ರೇಷ್ಠ ವಿದ್ವಾಂಸರು ಮತ್ತು ಸಂತ ಪುರುಷರು ವಾಸಿಸುತ್ತಾರೆ. ಅಂತಹ ಪವಿತ್ರ ಸ್ಥಳಗಳಿಗೆ ಪುಣ್ಯ ಸ್ನಾನ ಮಾಡಲೆಂದೇ ಹೋಗಬಾರದು. ಆಧ್ಯಾತ್ಮಿಕವಾಗಿ ಉನ್ನತರಾದವರನ್ನು ಅಲ್ಲಿ ಕಂಡುಕೊಳ್ಳುವ ಬುದ್ಧಿ ಹೊಂದಿರಬೇಕು. ಅಂತಹ ವಿದ್ವಾಂಸರ ಬೋಧನೆಯಿಂದ ಲಾಭಪಡೆದುಕೊಳ್ಳಬೇಕು . ಆದರೆ ಜನರು ಸಂತರನ್ನು ಕಾಣಲು ಅಂತಹ ಸ್ಥಳಗಳಿಗೆ ಹೋಗುವುದಿಲ್ಲ. ಒಂದಷ್ಟು ವಸ್ತುಗಳನ್ನು ಖರೀದಿಸಿ, `ನಾನು ಇಂತಹ ಪವಿತ್ರ ಸ್ಥಳಗಳಿಗೆ ಯಾತ್ರೆ ಹೋಗಿದ್ದೆ’ ಎಂದು ಪ್ರಚಾರ ಮಾಡಿಕೊಳ್ಳಲು ಹೋಗುತ್ತಾರೆ.
ಅಂತಹ ವ್ಯಕ್ತಿಗಳನ್ನು ಹಸು ಅಥವಾ ಕತ್ತೆಗಳೆಂದು ಪರಿಗಣಿಸಲಾಗುವುದೆಂದು ಭಾಗವತ ಹೇಳುತ್ತದೆ. ವಾಸ್ತವವಾಗಿ, ಇಡೀ ಪ್ರಪಂಚವು ಹಸು ಮತ್ತು ಕತ್ತೆಗಳ ನಾಗರಿಕತೆಯಲ್ಲಿ ಸಾಗುತ್ತಿದೆ. ಏಕೆಂದರೆ, ನಮ್ಮ ಇಡೀ ಬದುಕು ನಮ್ಮ ದೇಹದ ಗುರುತಿನ ಮೇಲೆ ಆಧಾರಿತವಾಗಿದೆ. ದೇಹವೇ ಕೇಂದ್ರ ಮತ್ತು ಎಲ್ಲವೂ ಅದರ ವಿಸ್ತರಣೆ.
ಆಧ್ಯಾತ್ಮಿಕ ಜ್ಞಾನದಲ್ಲಿ ಪರಿಪೂರ್ಣತೆ
ಪ್ರೇಕ್ಷಕರಲ್ಲಿ ಒಬ್ಬ ಮಹಿಳೆ : ಪವಿತ್ರ ಕ್ಷೇತ್ರಗಳಾದ ಭಾರತೀಯ ಪ್ರದೇಶಗಳಲ್ಲಿ ಸಂತರ ಸಮಾವೇಶದ ಕಾರಣ ಹೆಚ್ಚಿನ ಆಕರ್ಷಕ ಬಿಂದುವೂ ಇದೆಯಲ್ಲವೇ?
ಶ್ರೀಲ ಪ್ರಭುಪಾದ : ಖಂಡಿತ. ಆದುದರಿಂದ ಆ ಸ್ಥಳವೇ ಆಕರ್ಷಕವಾಗಿದೆ – ವೃಂದಾವನದಂತೆ. ನಾನು ಈಗ ಇಲ್ಲಿ, ನ್ಯೂಯಾರ್ಕ್‌ನಲ್ಲಿ ಕುಳಿತಿರುವೆ. ಇದು ಜಗತ್ತಿನ ಬೃಹತ್ ನಗರ. – ಆದರೆ ನನ್ನ ಹೃದಯವು ವೃಂದಾವನಕ್ಕಾಗಿ ಹಂಬಲಿಸುತ್ತದೆ. ನಾನು ಇಲ್ಲಿ ಸಂತುಷ್ಟನಾಗಿ ಇಲ್ಲ. ನನ್ನ ವೃಂದಾವನಕ್ಕೆ, ಪವಿತ್ರ ಸ್ಥಳಕ್ಕೆ ವಾಪಸಾಗಲು ನನಗೆ ಸಂತೋಷವಾಗುತ್ತದೆ.
`ಹಾಗಾದರೆ, ಇಲ್ಲಿಗೆ ಬಂದಿದ್ದೇಕೆ?’ ಏಕೆಂದರೆ ಇದು ನನ್ನ ಕರ್ತವ್ಯ. ನಾನು ನಿಮಗೆ ಸಂದೇಶ ತಂದಿರುವೆ. ಏಕೆಂದರೆ, `ನೀನೇನು ಕಲಿತಿರುವೆಯೋ ಆ ಜ್ಞಾನವನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಗಿ ಹರಡು’ ಎಂದು ನನ್ನ ಆಧ್ಯಾತ್ಮಿಕ ಗುರು ನನಗೆ ಆದೇಶಿದ್ದಾರೆ. ಆದುದರಿಂದ, ಕಷ್ಟ, ತೊಂದರೆಗಳಿದ್ದರೂ ನಾನು ಕರ್ತವ್ಯದ ಕಾರಣ ಇಲ್ಲಿ ಇದ್ದೇನೆ. ವೃಂದಾವನಕ್ಕೆ ಹೋಗಿ ಕುಳಿತರೆ ನನಗೆ ಹೆಚ್ಚು ಅನುಕೂಲ. ನನಗೆ ಏನೂ ಆತಂಕಗಳಿಲ್ಲ. ಆದರೆ ಈ ವೃದ್ಧಾಪ್ಯದಲ್ಲಿ ನಾನು ಹೊಣೆ ಹೊತ್ತಿದ್ದೇನೆ. ಏಕೆಂದರೆ ನಾನು ಕರ್ತವ್ಯನಿಷ್ಠ. ಹೀಗಾಗಿ ಎಲ್ಲ ಅನನುಕೂಲಗಳ ನಡುವೆಯೂ ನಾನು ನನ್ನ ಕರ್ತವ್ಯವನ್ನು ನಿರ್ವಹಿಸಬೇಕು.
ಜ್ಞಾನದಲ್ಲಿ ಆಧ್ಯಾತ್ಮಿಕ ಉನ್ನತಿಯ ಮೂಲ ತತ್ತ್ವವಾದ `ನಾನೇ ದೇಹ ಅಲ್ಲ’ ಎಂಬುದು ಮೊದಲು ಮನವರಿಕೆಯಾಗಬೇಕು. ಅನಂತರ ಇತರೆ ಆಧ್ಯಾತ್ಮಿಕ ಜ್ಞಾನ ಶುರುವಾಗುತ್ತದೆ. ತನ್ನನ್ನು ತಾನು ಅರ್ಥಮಾಡಿಕೊಳ್ಳದವ ದೇವರನ್ನು ಅರ್ಥಮಾಡಿಕೊಳ್ಳಲಾರ. `ನಾನು ದೇಹವಲ್ಲ’ ಎಂಬ ಜ್ಞಾನವನ್ನು ಸ್ವೀಕರಿಸಬೇಕು, ಕೊನೆಪಕ್ಷ ತಾತ್ತ್ವಿಕವಾಗಿಯಾದರೂ.
ಇಲ್ಲಿ ಭಗವಾನ್ ಉವಾಚ ಎನ್ನಲಾಗಿದೆ. ಇದರರ್ಥ ಕೃಷ್ಣನಿಗೆ ಎಂಥ ಅಗಾಧ ಜ್ಞಾನವಿದೆ ಎಂದರೆ ಅವನ ಬೋಧನೆಗಳಲ್ಲಿ ಕಿಂಚಿತ್ತೂ ತಪ್ಪುಗಳಿರುವುದು ಸಾಧ್ಯವಿಲ್ಲ. ಅವನೇ ಪ್ರಾಮಾಣ್ಯ, ಅವನು ಏನು ಹೇಳುತ್ತಾನೋ ಅದೇ ಸರಿ. ಇದು ಭಗವಾನ್‌ನ ಕಲ್ಪನೆ. ಇಲ್ಲಿ ಕೃಷ್ಣ ಉವಾಚ ಎನ್ನುವುದಿಲ್ಲ. ಏಕೆಂದರೆ ಕೃಷ್ಣನನ್ನು ಕುರಿತು ಶಂಕಿಸುವವರು ಇರಬಹುದು. `ಕೃಷ್ಣ ಐತಿಹಾಸಿಕ ಪುರುಷ. ಅವನ ಬಗೆಗೆ ನೀವು ಯಾಕೆ ಅಷ್ಟು ಕಾಳಜಿ ತೋರಬೇಕು?’ ಆದುದರಿಂದ ಭಗವಾನ್ ಉವಾಚ ಎನ್ನಲಾಗಿದೆ. ಭಗವಂತನಿಗೆ ಎಲ್ಲ ಜ್ಞಾನವೂ ಇದೆ. ಆದುದರಿಂದ ಅವನು ಹೇಳುವುದರಲ್ಲಿ ತಪ್ಪುಗಳಿರುವುದು ಸಾಧ್ಯವಿಲ್ಲ.
ಸಾಮಾನ್ಯರಿಗೆ ನಾಲ್ಕು ಅಪೂರ್ಣತೆ ಇವೆ : ತಪ್ಪು ಮಾಡುವುದು, ಭ್ರಮಾಧೀನ, ಅಪರಿಪೂರ್ಣ ಇಂದ್ರಿಯ ಮತ್ತು ಮೋಸ ಮಾಡುವುದು. ಮೊದಲು ನಾವು ತಪ್ಪು ಮಾಡಬೇಕು. ಖಂಡಿತ ತಪ್ಪು ಮಾಡುತ್ತೇವೆ. ಗಾಂಧಿ ಮೊದಲಾಗಿ ಅನೇಕ ಶ್ರೇಷ್ಠರೂ ಕೂಡ ತಪ್ಪು ಎಸಗಿದ್ದರು.
ಮತ್ತೊಂದು ಅಪೂರ್ಣತೆ ಎಂದರೆ ಭ್ರಮಾಧೀನವಾಗಿರುವುದು. ಒಂದನ್ನು ಮತ್ತೊಂದಕ್ಕೆ ತೆಗೆದುಕೊಂಡು ಹೋಗುವುದೇ ಭ್ರಮೆ, ಕಲ್ಪನೆ, ಮಾಯೆ. ಮರುಭೂಮಿಯಲ್ಲಿ ಮರಳನ್ನು ನೀರೆಂದು ಸ್ವೀಕರಿಸಬಹುದು. ಅದು ಭ್ರಮೆ. ಅನೇಕ ಶ್ರೇಷ್ಠ ವಿಜ್ಞಾನಿಗಳೂ ಭ್ರಮೆಯಲ್ಲಿರುತ್ತಾರೆ.
ಮುಂದಿನ ಮುಖ್ಯವಾದ ಅಪೂರ್ಣತೆ ಎಂದರೆ ಮೋಸ ಮಾಡುವ ಪ್ರವೃತ್ತಿ. ವ್ಯಕ್ತಿ ಅಪೂರ್ಣನಾಗಿರಬಹುದು, ಆದರೆ ಇತರರಿಗೆ ಜ್ಞಾನ ನೀಡಬೇಕೆಂದು ಬಯಸುತ್ತಾನೆ. ಅದು ಮೋಸ. ನೀವು ಕೇಳಬಹುದು, `ನೀವೂ ಜ್ಞಾನ ನೀಡುತ್ತಿರುವಿರಿ?’ ಇಲ್ಲ, ನಾನು ನಿಮಗೆ ಜ್ಞಾನ ನೀಡುತ್ತಿಲ್ಲ. ನಾನು ಭಗವದ್ಗೀತೆಯನ್ನು ಕುರಿತು ಮಾತನಾಡುತ್ತಿದ್ದೇನೆ. ಶ್ರೀಕೃಷ್ಣ ನೀಡಿದ ಜ್ಞಾನವನ್ನು ನಾನು ನಿಮಗೆ ಕೊಡುತ್ತಿದ್ದೇನೆ. ಇದು ನನ್ನ ಜ್ಞಾನವಲ್ಲ.
ಅಂತಿಮವಾಗಿ ಅಪೂರ್ಣ ಇಂದ್ರಿಯಗಳಿವೆ.
ಈ ನಾಲ್ಕೂ ಅಪೂರ್ಣತೆಗೆ ಅತೀತರಾಗಿರುವವರು ದೇವರು. ಅದೇ ದೇವರ ವಿವರಣೆ. ಮತ್ತು ದೇವರಲ್ಲದವರು ಪರಿಪೂರ್ಣ ಹಂತಕ್ಕೆ ಬಂದರೆ ಅವರು ಮುಕ್ತರಾದಂತೆ.