ಭ್ರಮೆಯ ಸಮಾಜ

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅತಿಥಿಯಾದ ಮನೋವಿಜ್ಞಾನಿ ಡಾ. ಕ್ರಿಶ್ಚಿಯನ್‌ ಹೌಸರ್‌ ನಡುವೆ ಸೆಪ್ಟೆಂಬರ್‌, 1973ರಲ್ಲಿ, ಸ್ಟಾಕ್‌ಹೋಂನಲ್ಲಿ ನಡೆದ ಸಂವಾದದ ಮುಂದುವರಿದ ಭಾಗ.

ಡಾ. ಹೌಸರ್‌ : “ನಾನು ಚೀನದವ”, “ನಾನು ಆಫ್ರಿಕದವ”, “ನಾನು ಅಮೆರಿಕದವ” ಎಂಬುವ ಉಪಾಧಿಗಳೆಲ್ಲ ಹುಸಿಯಾದರೂ ಅವು ಒಂದು ರೀತಿಯಲ್ಲಿ ಸಮಾಜವನ್ನು ನಡೆಸಿಕೊಂಡು ಹೋಗುತ್ತವೆ.

ಶ್ರೀಲ ಪ್ರಭುಪಾದ : ಹೌದು. ಆದುದರಿಂದ ಈ ಸಮಾಜವನ್ನು ನಾವು ಭ್ರಮಾಧೀನ ಎನ್ನುತ್ತೇವೆ. ಏಕೆಂದರೆ ಅದನ್ನು ಮಾಯೆ, ಭ್ರಮೆಯು ನಡೆಸುತ್ತಿದೆ.

ನಮ್ಮ ಮುಂಜಾನೆಯ ಸಂಚಾರದ ಸಮಯದಲ್ಲಿ ನಾನು ನಿಮಗೆ ಮಾಯೆಯನ್ನು ಕುರಿತು ತೋರಿಸಿದ ಉದಾಹರಣೆಯನ್ನು ನೆನಪು ಮಾಡಿಕೊಳ್ಳಿ. ನಾವು ನೀರಿನ ಕೊಳದಲ್ಲಿ ನೋಡಿದಾಗ, ನಾವು ಸೂರ್ಯನನ್ನು ನೋಡುತ್ತಿದ್ದೇವೆ ಎಂದು ಭಾವಿಸುತ್ತೇವೆ. ಆದರೆ, ವಾಸ್ತವವಾಗಿ ನಾವು ಸೂರ್ಯನ ಪ್ರತಿಬಿಂಬವನ್ನಷ್ಟೆ, ಮಾಯೆಯನ್ನು ನೋಡುತ್ತಿರುತ್ತೇವೆ.

“ಇದು ಮಾಯೆ, ಭ್ರಮೆ” ಎಂದು ನಾನು ನಿಮಗೆ ಹೇಳಿದೆ. ಕೊಳದಲ್ಲಿ ಸೂರ್ಯನಿಲ್ಲ, ಆದರೆ ಅದು ಸೂರ್ಯನಂತೆ ಕಾಣುತ್ತದೆ. ಪಕ್ಕಾ ಸೂರ್ಯನಂತೆಯೇ. ಅದು ಪ್ರಜ್ವಲಿಸುವಂತೆ ಕೂಡ ಕಾಣುತ್ತದೆ. ಯಾರು ಕಡಮೆ ಬುದ್ಧಿವಂತರೋ ಅವರು ಅದನ್ನು ನೋಡಿ “ಓ! ಇಲ್ಲಿ ನೋಡಿ, ಸೂರ್ಯ! ಮತ್ತೊಂದು ಸೂರ್ಯ!” ಎಂದು ಉದ್ಗರಿಸುತ್ತಾರೆ. ಆದುದರಿಂದ ಅವನೊಬ್ಬ ಹುಚ್ಚ. ಕೊಳದಲ್ಲಿ ಸೂರ್ಯನ ಪ್ರತಿಬಿಂಬವನ್ನು ನಿಜವಾದ ಸೂರ್ಯನೆಂದು ಭಾವಿಸುವವನು ಭ್ರಮಾಧೀನ. ಅವನು ಹುಚ್ಚ.

ನಮ್ಮ ಆಧ್ಯಾತ್ಮಿಕ ದೇಹಗಳ ಲೌಕಿಕ ಪ್ರತಿಬಿಂಬವಾದ ಈ ತಾತ್ಕಾಲಿಕ ಲೋಕದಲ್ಲಿ ನಮಗಿರುವ ಈ ದೇಹಗಳತ್ತ ಒಂದು ದೃಷ್ಟಿ ಹರಿಸಿ, “ಓ, ಇಲ್ಲಿದೆ ನನ್ನ ನಿಜವಾದ ಆತ್ಮ!” ಎಂದು ಯೋಚಿಸಿದರೆ ಅವನೊಬ್ಬ ಹುಚ್ಚ. ಅವನು ಭ್ರಮೆಯಲ್ಲಿದ್ದಾನೆ.

ಆದುದರಿಂದ ನೀವೇ ನೋಡುವಂತೆ, ನಮ್ಮ ಕೃಷ್ಣ ಪ್ರಜ್ಞೆ ಆಂದೋಲನವು ನಿಜವಾಗಿಯೂ ಒಂದು ಮನೋವೈದ್ಯಕೀಯ ಆಂದೋಲನ.

ಡಾ. ಹೌಸರ್‌ : ಹೌದು, ಹೌದು. ಒಂದು ರೀತಿಯಲ್ಲಿ. ನಾನು… ಹೌದು.

ಶ್ರೀಲ ಪ್ರಭುಪಾದ : ಹೌದು. ನಾವು ಜನರನ್ನು ಭ್ರಮೆ, ಸ್ವಪ್ನ ಸ್ಥಿತಿಯಿಂದ ಹೊರ ತಂದು, ಆಧ್ಯಾತ್ಮಿಕ ಪ್ರಜ್ಞೆ, ಕೃಷ್ಣ ಪ್ರಜ್ಞೆಯ ಎಚ್ಚರ ಸ್ಥಿತಿಗೆ ತರುತ್ತಿದ್ದೇವೆ.

ಡಾ. ಹೌಸರ್‌ : ಆದರೆ ಈ ಪ್ರಜ್ಞೆಯನ್ನು ಸ್ಥಾಪಿಸುವುದರಿಂದ ನೀವು ಸಾಮಾನ್ಯ ವಿಶ್ಲೇಷಣೆ ಅಥವಾ ಸಮೂಹ ಚಿಕಿತ್ಸೆಯ ತುಂಬ ಕಠಿಣ ಶ್ರಮವನ್ನು ಕೈ ಬಿಡಬಹುದು.

ಶ್ರೀಲ ಪ್ರಭುಪಾದ : ಹೌದು. ಕಠಿಣ ಶ್ರಮ ಇಲ್ಲ.

ಡಾ. ಹೌಸರ್‌ : ಆದರೆ ಈ ಆಧ್ಯಾತ್ಮಿಕ ಒಳನೋಟವನ್ನು ಪಡೆಯಲು ನೀವು ನಿಶ್ಚಿತವಾಗಿಯೂ ಕಠಿಣ ಶ್ರಮ ಪಡಬೇಕು.

ಶ್ರೀಲ ಪ್ರಭುಪಾದ : ಇಲ್ಲ. ಅದು ತುಂಬ ಸುಲಭ. ಬಹಳ ಸುಲಭ. ಉದಾಹರಣೆಗೆ, ನಾವು ಈ ಹರೇ ಕೃಷ್ಣ ಮಹಾಮಂತ್ರ ಜಪವನ್ನು ಶಿಫಾರಸು ಮಾಡುತ್ತೇವೆ. ಯಾರು ಬೇಕಾದರೂ ಜಪಿಸಬಹುದು. ಒಂದು ಮಗು ಕೂಡ ಜಪಿಸಬಹುದು.

ಡಾ. ಹೌಸರ್‌ : ಮನೋವೈದ್ಯಕೀಯದಲ್ಲಿ ನಮಗಿರುವ ಒಳ ದೃಷ್ಟಿಯೇ ಬಹುಶಃ ನಿಮ್ಮ ಧ್ಯೇಯವಾಗಿದ್ದರೂ ನಿಮಗೆ ವಿಶೇಷ ವಿಧಾನಗಳ ಅಗತ್ಯವಿರುವಂತೆ ಕಾಣದೆಂದು ನಾನು ಹೇಳುತ್ತಿದ್ದೆ.

ಶ್ರೀಲ ಪ್ರಭುಪಾದ : ಹೌದು. ಆದರೆ ಪರಂಪರೆಯ ವೈದಿಕ ವಿಧಾನವು ತುಂಬ ಸರಳ. ನಾಲ್ಕು ನಿಷೇಧಿತ ಕ್ರಿಯೆಗಳನ್ನು ತ್ಯಜಿಸಬೇಕು ಎಂದು ನಾವು ನಮ್ಮ ವಿದ್ಯಾರ್ಥಿಗಳಿಗೆ ಹೇಳುತ್ತೇವೆ. ಅವು ಯಾವುವೆಂದರೆ, ಅನೈತಿಕ ಲೈಂಗಿಕ ಕ್ರಿಯೆ, ಜೂಜು, ಮದ್ಯ ಮತ್ತು ಮಾಂಸ ಭಕ್ಷಣೆ. ಈ ನಿಷೇಧಿತ ಕ್ರಿಯೆಗಳಿಂದ ದೂರವಿರಿ ಮತ್ತು ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಮಂತ್ರವನ್ನು ಜಪಿಸಿ. ಭಗವಂತನ ಪವಿತ್ರ ನಾಮಗಳನ್ನು ಜಪಿಸಿ. ಆಗ ನೀವು ವಿವೇಕಿ, ಕೃಷ್ಣ ಪ್ರಜ್ಞಾವಂತರಾಗುವಿರಿ. ಇದು ತುಂಬ ಸುಲಭ.

ಡಾ. ಹೌಸರ್‌ : ಹೌದು. ಇದು ಸುಲಭವಾಗಿರುವಂತೆ ಅನ್ನಿಸುತ್ತಿದೆ. ಅದು ಕಾರ್ಯಸಾಧುವೆಂದು ಭಾವಿಸುವೆ.

ಶ್ರೀಲ ಪ್ರಭುಪಾದ : ಇಲ್ಲಿ, ನಿಮ್ಮ ಸುತ್ತಲೂ ನೀವು ಅದು ಎಷ್ಟು ಚೆನ್ನಾಗಿ ಕಾರ್ಯಗತವಾಗಿದೆ ಎಂಬುದರ ಉದಾಹರಣೆಗಳನ್ನು ನೋಡಿ. ಈ ವಿದ್ಯಾರ್ಥಿಗಳು ಎಷ್ಟು ದೈವಭಕ್ತಿ ಮತ್ತು ವಿವೇಕಿಗಳೆಂಬುವುದನ್ನು ನೋಡಿ. ಇದಕ್ಕೇನು ಕಾರಣ? ಅವರು ದೈವನಿಷ್ಠರಾಗಿ ನಡೆದುಕೊಳ್ಳಲಿ ಮತ್ತು ನಮ್ಮ ಪರವಾಗಿರಲಿ ಎಂದು ನಾನೇನೂ ಅವರಿಗೆ ಲಂಚ ಅಥವಾ ಇನ್ನೇನೋ ನೀಡಿಲ್ಲ. (ನಗು). ಅವರ ಧರ್ಮನಿಷ್ಠ ಮತ್ತು ವಿವೇಕಯುತ ನಡತೆಗೆ ಕಾರಣ ಕಂಡುಕೊಳ್ಳಲು ನೀವು ಅವರೊಂದಿಗೆ ಮಾತನಾಡಬಹುದು.

ಡಾ. ಹೌಸರ್‌ : ಹೌದು, ಅವರೊಂದಿಗೆ ಮಾತನಾಡಿರುವೆ. ಆದ್ದರಿಂದಲೇ ನಾನು ಇಲ್ಲಿ ಇರುವುದು.

ಶ್ರೀಲ ಪ್ರಭುಪಾದ : ಹಾಗಾದರೆ ನಿಮಗೆ ಗೊತ್ತು. ವಿಧಾನವು ತುಂಬ ಸರಳ ಮತ್ತು ಸುಲಭ.

ಡಾ. ಹೌಸರ್‌ : ಹೌದು.

ಶ್ರೀಲ ಪ್ರಭುಪಾದ : ನಾವು ಯಾವುದೇ ಶುಲ್ಕ ವಿಧಿಸುವುದಿಲ್ಲ. ಇದು ಉಚಿತ. ಆದರೆ ನೀವು ಏನೋ ಶುಲ್ಕ ವಿಧಿಸುತ್ತೀರಿ.

ಡಾ. ಹೌಸರ್‌ : ಹೌದು. (ನಗು)

ಶ್ರೀಲ ಪ್ರಭುಪಾದ : ಆದರೆ ನಾವು ಏನೂ ಶುಲ್ಕ ವಿಧಿಸುವುದಿಲ್ಲ. ಇದು ಉಚಿತ. 1965ರಲ್ಲಿ ನಾನು ಅಮೆರಿಕದವರಿಗೆ ಈ ಚಿಕಿತ್ಸೆಯನ್ನು ನೀಡಿದೆ. ಅದು ಈಗ ಇಡೀ ಜಗತ್ತಿನಲ್ಲಿಯೇ ಪರಿಣಾಮಕಾರಿಯಾಗಿದೆ.

ಆದುದರಿಂದ ನೀವು ಈ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ನನಗನಿಸುತ್ತದೆ. ಇದೆಷ್ಟು ಸರಳ ವಿಧಾನ. ಏನೂ ಶುಲ್ಕ ವಿಧಿಸಬೇಡಿ. ಸುಮ್ಮನೆ ಜನರಿಗೆ ಭಗವಂತನ ಪವಿತ್ರ ನಾಮಗಳನ್ನು ಜಪಿಸಲು ಹೇಳಿ ಮತ್ತು ನಾಲ್ಕು ನಿಷೇಧಿತ ಕ್ರಿಯೆಗಳಿಂದ ದೂರವಿರಲು ಅವರಿಗೆ ತಿಳಿಸಿ. ಅವರು ಗುಣಮುಖರಾಗುತ್ತಾರೆ.

ಸರ್ವೋಪಾಧಿ ವಿನಿರ್‌ಮುಕ್ತಂ ತತ್‌ ಪರತ್ವೇನ ನಿರ್ಮಲಂ : ಈ ಸರಳ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸುವ ಮೂಲಕ ನಾವು ನಮ್ಮ ಹೃದಯವನ್ನು ಮುಚ್ಚಿರುವ ಕಲ್ಮಷಗಳಾದ ಆ ಸ್ವಪ್ನದಂತಹ, ಭ್ರಮೆಯ ಉಪಾಧಿಗಳಿಂದ ನಾವು ಮುಕ್ತರಾಗಬಹುದು.

ಆಗ ಹೃಷೀಕೇಣ ಹೃಷೀಕೇಶ ಸೇವನಂ ಭಕ್ತಿರ್‌ ಉಚ್ಯತೇ : ಈ ಭ್ರಮೆಯ ಉಪಾಧಿಗಳು ಹೋದ ಮೇಲೆ ಮತ್ತು ತಾತ್ಕಾಲಿಕವಾದರೂ ನಮ್ಮ ದೇಹಗಳು ಭಗವಂತನಿಗೆ ಸೇರಿದ್ದು, ಚೀನ, ಜರ್ಮನಿ ಅಥವಾ ಇಂಗ್ಲೆಂಡ್‌ಗೆ ಸೇರಿದ್ದಲ್ಲ ಎಂದು ತಿಳಿದ ಕೂಡಲೇ ನಾವು ನಮ್ಮ ದೇಹಗಳನ್ನು ಭಗವಂತನ ಸೇವೆಯಲ್ಲಿ ತೊಡಗಿಸಬಹುದು. ಅದು ಕೃಷ್ಣ ಪ್ರಜ್ಞೆ.

ಡಾ. ಹೌಸರ್‌ : ಆದರೆ ಒಂದು… ರೋಗಿಗಳಲ್ಲಿ ನಾನು ಸಾಮಾನ್ಯವಾಗಿ ಕಾಣುವ ಒಂದು ಸಮಸ್ಯೆ ಎಂದರೆ ಅಭದ್ರತೆ. ತಾವು ಯಾವುದನ್ನಾದರೂ ನಂಬಬಹುದು ಎಂಬ ಭಾವನೆಹೊಂದಲು ಜನರಿಗೆ ಭದ್ರತೆಯ, ವಿಶ್ವಾಸದ ಕೊರತೆ. ಸದಾ ಅಲ್ಲಿ… ಆಗಾಗ್ಗೆ ಅಲ್ಲಿ ಅಸ್ಥಿರತೆ. “ನಾನು ನಂಬಬೇಕೆ? ನಾನು ನಂಬಬಾರದೆ? ನನಗೆ ಸಂದೇಹವಿದೆ.” ನೀವು ಅರ್ಥಮಾಡಿಕೊಳ್ಳಬೇಕು. ಡೋಲಾಯಮಾನ ಸ್ಥಿತಿ.

ಶ್ರೀಲ ಪ್ರಭುಪಾದ : ಇಲ್ಲ. ನೀವು ಅನುಭವಿಸಬಹುದು. ಇದು ನಂಬಿಕೆ ಅಥವಾ ಅಪನಂಬಿಕೆಯ ವಿಷಯವಲ್ಲ. ನಿಮಗೆ ಹಸಿವಾಗಿದೆ ಎಂದುಕೊಳ್ಳಿ. ನಾನು ನಿಮಗೆ ಆಹಾರ ನೀಡುವೆ, “ನೀವು ಈ ತಿನಿಸು ತೆಗೆದುಕೊಳ್ಳಿ, ನಿಮಗೆ ಹಸಿವಾಗಿದೆ” ಎಂದು ಹೇಳುವೆ. ನೀವು ಆಹಾರವನ್ನು ತೆಗೆದುಕೊಂಡಾಗ, ನಿಮಗೆ ಅನುಭವವಾಗುತ್ತದೆ. “ಹೌದು ಈಗ ನನ್ನ ಹಸಿವು ನೀಗಿತು.” ಇದು ನಂಬಿಕೆ ಅಥವಾ ಅಪನಂಬಿಕೆಯ ವಿಷಯವಲ್ಲ. “ನಾನು ಅದನ್ನು ಅನುಭವಿಸುತ್ತೇನೆ. ನನಗೆ ಶಕ್ತಿ ಬರುತ್ತಿದೆ.” ನೀವು ಇದನ್ನು ನೇರವಾಗಿ ಅನುಭವಿಸುವಿರಿ.

ಆದರೆ, ನೀವು ಆಹಾರವನ್ನು ಸೇವಿಸದಿದ್ದರೆ, ಹಸಿವು ನೀಗಿರುವುದರ ಅನುಭವವನ್ನು ಹೇಗೆ ಹೊಂದುವಿರಿ? ನೀವು ತಿನ್ನಬೇಕು. ಹಾಗಾಗಿ ನಾವು ಹೇಳುತ್ತೇವೆ, “ಹರೇ ಕೃಷ್ಣ ಜಪಿಸಿ.” ತತ್‌ಕ್ಷಣ ಸಮಾಧಾನದ ಪರಿಹಾರ ಆರಂಭವಾಗುತ್ತದೆ.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ