ಕ್ಯಾರೆಟ್‌ನ ಮಹತ್ವ

ಕ್ಯಾರೆಟ್‌ ಶಾಕಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಬಹಳಷ್ಟು ಜನಕ್ಕೆ ಗೊತ್ತಿಲ್ಲ ಕ್ಯಾರೆಟ್‌ ನೇರಳೆ, ಬಿಳಿ, ಹಳದಿ, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಸಿಗುತ್ತದೆ ಎಂದು. ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‌ಗೆ ಅಗ್ರಸ್ಥಾನ ನೀಡಬಹುದು. ಕೆಲವರು ಹಸಿ ಕ್ಯಾರೆಟ್‌ ಅನ್ನು ತಿನ್ನಲು ಇಷ್ಟಪಟ್ಟರೆ ಇನ್ನೂ ಕೆಲವರು ಬೇಯಿಸಿದ ಕ್ಯಾರೆಟ್‌ ಅನ್ನು ತಿನ್ನಲು ಇಷ್ಟಪಡುತ್ತಾರೆ.

ಕ್ಯಾರೆಟ್‌ಗಳು ರುಚಿಕರ ಮತ್ತು ಅವುಗಳಲ್ಲಿ ಬೀಟಾ ಕ್ಯಾರೊಬಿನ್‌, ವಿಟಮಿನ್‌ `ಎ’ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿರುತ್ತವೆ. ಕ್ಯಾರೆಟ್‌ ಅನ್ನು ಸೇವಿಸುವುದರಿಂದ ಕಣ್ಣುಗಳಿಗೆ, ಜೀರ್ಣಕ್ರಿಯೆಗೆ, ತ್ವಚೆಗೆ ಮತ್ತು ಹಲ್ಲುಗಳಿಗೆ ತುಂಬ ಒಳ್ಳೆಯದು. ಬಹಳಷ್ಟು ಜನ ಕ್ಯಾರೆಟ್‌ ಜ್ಯೂಸ್‌ನ ಆರೋಗ್ಯಕಾರಿ ಅಂಶಗಳು ತ್ವಚೆಗೆ ನೆರವನ್ನು ನೀಡುತ್ತವೆ ಎಂದು ನಂಬುತ್ತಾರೆ. ಕ್ಯಾರೆಟ್‌ನಿಂದ ಮಾಡುವ ತಿನಿಸುಗಳೆಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ಕ್ಯಾರೆಟ್‌ ಉಪ್ಪಿನಕಾಯಿ

ಬೇಕಾಗುವ ಪದಾರ್ಥಗಳು :

ಕ್ಯಾರೆಟ್‌ – 1/2 ಕೆಜಿ

ಕೆಂಪು ಮೆಣಸಿನಕಾಯಿ – 50 ಗ್ರಾಂ

ಧನಿಯಾ – 25 ಗ್ರಾಂ

ಜೀರಿಗೆ – 2 ಚಮಚ

ಮೆಣಸು – 1 ಚಮಚ

ಎಣ್ಣೆ – 3 ಚಮಚ

ಸಾಸಿವೆ – 1 ಚಮಚ

ಇಂಗು – ಸ್ವಲ್ಪ

ಉಪ್ಪು – ರುಚಿಗೆ

ಮಾಡುವ ವಿಧಾನ : ಕ್ಯಾರೆಟ್‌ ಅನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಬಿಸಿಲಿನಲ್ಲಿ ಒಣಗಿಸಿ. ಕೆಂಪು ಮೆಣಸಿನಕಾಯಿ, ಧನಿಯಾ, ಜೀರಿಗೆ, ಮೆಣಸನ್ನು ಹುರಿದು ಕುಟ್ಟಿ ಪುಡಿ ಮಾಡಿ. ಒಂದು ಬಾಣಲೆಗೆ ಎಣ್ಣೆ ಹಾಕಿ. ಕಾದ ಮೇಲೆ ಕುಟ್ಟಿದ ಮಸಾಲೆಯನ್ನು ಹಾಕಿ ಎಣ್ಣೆಯಲ್ಲಿ ಕುದಿಸಿ. ಸ್ವಲ್ಪ ಕುದಿದ ಕೂಡಲೇ ಕಾರೆಟ್‌ ಅನ್ನು ಸೇರಿಸಿ, ಚೆನ್ನಾಗಿ ಮಸಾಲೆ ಕ್ಯಾರೆಟ್‌ಗೆ ಮಿಶ್ರಣವಾಗುವಂತೆ ಮಾಡಿ. ಆರಿದ ಅನಂತರ ಈ ಕ್ಯಾರೆಟ್‌ ಉಪ್ಪಿನಕಾಯಿಯನ್ನು ಒಣಗಿದ ಜಾಡಿಗೆ ತುಂಬಿಸಿ. ಉಪಯೋಗಿಸುವಾಗ ಸಾಸಿವೆ, ಇಂಗು ಒಗ್ಗರಣೆ ಹಾಕಿಕೊಂಡು ಉಪಯೋಗಿಸಿ.

ಕ್ಯಾರೆಟ್‌, ಪಾಲಕ್‌, ಬೇಬಿಕಾರ್ನ್‌ ಗ್ರೇವಿ

ಬೇಕಾಗುವ ಪದಾರ್ಥಗಳು:

ಕ್ಯಾರೆಟ್‌ – 2

ಬೀಟ್‌ರೂಟ್‌ – 3

ಪಾಲಕ್‌ – 2 ಕಟ್ಟು

ಪನ್ನೀರ್‌ – ಸ್ವಲ್ಪ

ಗೋಡಂಬಿ – 15

ತೆಂಗಿನ ತುರಿ – 1/4 ಕಪ್‌

ಗಸಗಸೆ – 1 ಚಮಚ

ಹಸಿ ಮೆಣಸಿನಕಾಯಿ – 3

ಶುಂಠಿ – 1/2 ಇಂಚು

ಕೆಂಪು ಮೆಣಸಿನಕಾಯಿ ಪುಡಿ – 1 ಚಮಚ

ಜೀರಿಗೆ ಪುಡಿ – 1/2 ಚಮಚ

ಅರಿಶಿನ – ಸ್ವಲ್ಪ

ಕೊತ್ತಂಬರಿ ಸೊಪ್ಪು – 1 ಎಸಳು

ಉಪ್ಪು – ರುಚಿಗೆ

ಎಣ್ಣೆ – 3 ಚಮಚ

ಮಾಡುವ ವಿಧಾನ : ಕ್ಯಾರೆಟ್‌ ಅನ್ನು ನೀರಿನಲ್ಲಿ ತೊಳೆದು ಅನಂತರ ತುರಿದಿಡಿ. ಪಾಲಕ್‌ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ ಪನ್ನೀರನ್ನು ತುರಿದುಕೊಳ್ಳಿ. ಬೇಬಿಕಾರ್ನ್‌ ಅನ್ನು ಉದ್ದುದ್ದವಾಗಿ ಸೀಳಿಕೊಂಡು ಸಣ್ಣ ತುಂಡುಗಳಾಗಿ ಕತ್ತರಿಸಿ. ತೆಂಗಿನ ತುರಿ, ಗಸಗಸೆ, ಗೋಡಂಬಿಯನ್ನು ರುಬ್ಬಿಕೊಂಡು ಗಟ್ಟಿಯಾದ ಪೇಸ್ಟ್‌ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಕಾದ ಅನಂತರ ಸಣ್ಣಗೆ ಹೆಚ್ಚಿದ ಶುಂಠಿ, ಹಸಿ ಮೆಣಸಿನಕಾಯಿ, ಕರಿಬೇವು, ಅರಿಶಿನ ಹಾಕಿ. ಅನಂತರ ಬೇಬಿಕಾರ್ನ್‌, ಸೊಪ್ಪು, ಕ್ಯಾರೆಟ್‌ ಅನ್ನು ಹಾಕಿ ಸಣ್ಣ ಉರಿಯಲ್ಲಿ ಬಾಡಿಸಿ. ರುಬ್ಬಿಕೊಂಡ ಗೋಡಂಬಿ ಪೇಸ್ಟ್‌, ಕೆಂಪು ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಬೇಕಾಗುವಷ್ಟು ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಕೊನೆಯದಾಗಿ ತುರಿದ ಪನ್ನೀರ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿದರೆ ಕ್ಯಾರೆಟ್‌ ಪಾಲಕ್‌, ಬೇಬಿಕಾರ್ನ್‌ ಗ್ರೇವಿ ಸವಿಯಲು ಸಿದ್ಧ.

ಕ್ಯಾರೆಟ್‌ ಖೀರು

ಬೇಕಾಗುವ ಪದಾರ್ಥಗಳು:

ಕ್ಯಾರೆಟ್‌ – 250 ಗ್ರಾಂ.

ಹಾಲು – 4 ಕಪ್‌

ಬಾದಾಮಿ – 50 ಗ್ರಾಂ.

ಸಕ್ಕರೆ – 1 ಕಪ್‌

ಮಿಲ್ಕ್‌ಮೇಡ್‌ – 1/2 ಕಪ್‌

ಗೋಡಂಬಿ – 10

ತುಪ್ಪ – 2 ಚಮಚ

ಮಾಡುವ ವಿಧಾನ : ಕ್ಯಾರೆಟ್‌ ಅನ್ನು ತೊಳೆದು ಸಣ್ಣದಾಗಿ ತುರಿದುಕೊಳ್ಳಿ. ಬಾದಾಮಿಯನ್ನು ನೀರಿನಲ್ಲಿ ನೆನೆಸಿ. ಅನಂತರ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಡಿ. ಒಂದು ಪಾತ್ರೆಯಲ್ಲಿ ಸ್ವಲ್ಪ ಹಾಲನ್ನು ಹಾಕಿ ಇದಕ್ಕೆ ಕ್ಯಾರೆಟ್‌ ಅನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಬೆಂದ ಕ್ಯಾರೆಟ್‌ಗೆ ಉಳಿದ ಹಾಲು, ಸಕ್ಕರೆ, ಬಾದಾಮಿ, ಪೇಸ್ಟ್‌ ಅನ್ನು ಹಾಕಿ ಬೇಯಿಸಿ. ಕೊನೆಯದಾಗಿ ಮಿಲ್ಕ್‌ ಮೇಡ್‌, ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಇಳಿಸಿ. ಆರಿದ ಅನಂತರ ಪ್ರಿಡ್ಜ್‌ನಲ್ಲಿಟ್ಟು ತಿನ್ನಲು ಕೊಡುವಾಗ ಕ್ರೀಂನಿಂದ ಅಲಂಕರಿಸಿ.

ಕ್ಯಾರೆಟ್‌ನಿಂದ ಆಗುವ ಉಪಯೋಗಗಳು:

1.  ತ್ವಚೆಗೆ ಮತ್ತು ಹೊಳಪಿಗೆ :

ಕ್ಯಾರೆಟ್‌ ರಸವು ತ್ವಚೆಯ ಹೊಳಪಿಗೆ ಒಳ್ಳೆಯ ಔಷಧಿಯಾಗಿದೆ ಮತ್ತು ಇದು ತ್ವಚೆಯ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಪುರುಷರ ಆರೋಗ್ಯಕ್ಕೆ ಕ್ಯಾರೆಟ್‌ ಒಳ್ಳೆಯದು.

2. ಕಣ್ಣುಗಳಿಗೆ:

ಕ್ಯಾರೆಟ್‌ ಅನ್ನು ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್‌ `ಎ’ ಯು ನಿಮ್ಮ ಕಣ್ಣುಗಳಿಗೆ ಅತ್ಯಗತ್ಯವಾಗಿ ಬೇಕಾಗಿದೆ.

3. ರಕ್ತ:

ಕ್ಯಾರೆಟ್‌ನಲ್ಲಿರುವ ಆಲ್ಕಾಲೈನ್‌ಗಳು ರಕ್ತದಲ್ಲಿರುವ ಆಸಿಡ್‌ಗಳನ್ನು ಸಮತೋಲನದಲ್ಲಿಡುತ್ತದೆ. ಜೊತೆಗೆ ಇವು ರಕ್ತವನ್ನು ಶುದ್ಧಗೊಳಿಸುತ್ತವೆ.

4. ಗಾಯದ ಕಲೆಗೆ:

ನಿಮ್ಮ ತ್ವಚೆಯ ಮೇಲೆ ಗಾಯದ ಕಲೆಗಳು ಇದ್ದಲ್ಲಿ ನೀವು ಆರೋಗ್ಯಕರವಾದ ಕ್ಯಾರೆಟ್‌ ಜ್ಯೂಸನ್ನು ಕುಡಿಯುವುದು ಒಳ್ಳೆಯದು. ಮತ್ತು ಕ್ಯಾರೆಟ್‌ ಸಿಪ್ಪೆಗಳನ್ನು ಗಾಯದ ಕಲೆಗಳ ಮೇಲೆ ಹಚ್ಚುವುದರಿಂದ ಸಹ ಅದರಿಂದ ಮುಕ್ತಿ ಪಡೆಯಬಹುದು.

5. ವಯಸ್ಸಾದಂತೆ ಕಾಣುವುದನ್ನು ತಡೆಯಲು:

ಕ್ಯಾರೆಟ್‌ ನಿಮ್ಮನ್ನು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. ಇದರಲ್ಲಿರುವ ಸಮೃದ್ಧ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ತ್ವಚೆಯನ್ನು ಬಿಗಿಯಾಗಿ ಇರಿಸುತ್ತವೆ.

ಈ ಲೇಖನ ಶೇರ್ ಮಾಡಿ