ದೇವರೆನ್ನುವುದು ಒಂದು ಕಲ್ಪನೆಯೇ? ಒಂದು ಗುಣವೇ? ಒಂದು ಶ್ವೇತ ಬೆಳಕೆ?ಅಥವಾ ಈ ಕಲ್ಪನೆಗಳು ದೇವೋತ್ತಮನ ಮುಖ್ಯವಾದ ಲಕ್ಷಣಗಳನ್ನು ನಿರ್ಲಕ್ಷಿಸುತ್ತವೆಯೆ?
ಆಂಗ್ಲ ಮೂಲ: ಬ್ಯಾಕ್ ಟು ಗಾಡ್ಹೆಡ್
ಶ್ರೀಲ ಪ್ರಭುಪಾದರು 1966ರಲ್ಲಿ, ನ್ಯೂಯಾರ್ಕ್ ನಗರದಲ್ಲಿ ಹರೇ ಕೃಷ್ಣ ಆಂದೋಲನವನ್ನು ಆರಂಭಿಸುವಾಗ ಅವರ ಕೆಲವು ಮಿತ್ರರು ಅದನ್ನು ಅಂತಾರಾಷ್ಟ್ರೀಯ ದೈವಪ್ರಜ್ಞಾ ಸಂಘ ಎಂದು ಕರೆಯಲು ಸಲಹೆ ಮಾಡಿದರು. ಆದರೆ ದೇವರು ಎನ್ನುವ ಶಬ್ದವು ತುಂಬ ಅಸ್ಪಷ್ಟವಾಗುತ್ತದೆ ಎಂದು ಶ್ರೀಲ ಪ್ರಭುಪಾದರು ಭಾವಿಸಿದರು. ತಮ್ಮ ಆಂದೋಲನಕ್ಕೆ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘವೆಂದು ಹೆಸರಿಸುವಾಗ ತಾವು ದೇವರನ್ನು ಕುರಿತು ಮಾತನಾಡುವಾಗಲೆಲ್ಲ ಅದು ಕೃಷ್ಣ ಎನ್ನುವ ನಿರ್ದಿಷ್ಟ ವ್ಯಕ್ತಿಯನ್ನು ಕುರಿತಂತೆ ಎಂದು ಅವರು ಹೇಳುತ್ತಿದ್ದರು.

ಕೃಷ್ಣನು ದೇವರು ಎನ್ನುವುದನ್ನು ಪಾಶ್ಚಿಮಾತ್ಯರಿಗೆ ಮನವರಿಕೆ ಮಾಡಿಕೊಡಲು ಅವರು ವಿಧವಿಧವಾದ ತಪ್ಪು ಕಲ್ಪನೆಗಳನ್ನು ನಿರಾಕರಿಸಬೇಕಾಗುತ್ತಿತ್ತು ಅಥವಾ ತಳ್ಳಿ ಹಾಕಬೇಕಾಗಿತ್ತು. ಎಂತಹ ಕಲ್ಪನೆಗಳು? ದೇವರಿಲ್ಲ; ನಾವೆಲ್ಲರೂ ದೇವರು; ದೇವರು ನಿರಾಕಾರ, ದೇವರು ಪ್ರೇಮ; ದೇವರು ಸತ್ತಿದ್ದಾನೆ. ಅಥವಾ ದೇವರು ಒಂದು ವ್ಯಕ್ತಿ, ಆದರೆ ಅವನು ಕೃಷ್ಣನಾಗುವುದು ಸಾಧ್ಯವಿಲ್ಲ. ಎಷ್ಟಾಗಲಿ, ಅವನು (ಕೃಷ್ಣನು) ಭಾರತೀಯ ಜಾನಪದ ನಾಯಕ ಅಥವಾ ಹಿಂದೂ ಪೌರಾಣಿಕ ದೇವರಲ್ಲಿ ಒಬ್ಬ. ಹೀಗೆ ಪ್ರಶ್ನಾವಳಿಯನ್ನೇ ಎದುರಿಸಿದರೂ ಭಗವಂತನ ಅಸ್ತಿತ್ವ ಮತ್ತು ಗುರುತನ್ನು ಕುರಿತಂತೆ ಜನರಿಗೆ ಮನವರಿಕೆ ಮಾಡುವ ವೈದಿಕ ಸಾಹಿತ್ಯದ ಶಕ್ತಿ ಬಗೆಗೆ ಶ್ರೀಲ ಪ್ರಭುಪಾದರಿಗೆ ವಿಶ್ವಾಸವಿತ್ತು.
ದೇವರನ್ನು ಅರ್ಥಮಾಡಿಕೊಳ್ಳಲು ತಾತ್ತ್ವಿಕ ಊಹೆಯು ಸಮರ್ಪಕ ಅಥವಾ ಯೋಗ್ಯ ಮಾರ್ಗ ಎನ್ನುವುದನ್ನು ಶ್ರೀಲ ಪ್ರಭುಪಾದರು ತಳ್ಳಿಹಾಕಿದರು. ದೇವರು ನಮ್ಮ ಕಲ್ಪನಾ ಶಕ್ತಿಯನ್ನು ಮೀರಿದವನು. ಆದುದರಿಂದ ನಮಗೆ ದೇವರನ್ನು ಅರಿಯಬೇಕೆನ್ನುವ ಅಪೇಕ್ಷೆ ಇದ್ದರೆ ನಾವು ದೇವರಿಂದಲೇ ಕೇಳಬೇಕು. ಅವನು ತನ್ನನ್ನು ಕುರಿತು ಹೊರಗೆಡಹಿರುವುದು ವಿಶ್ವ ಧರ್ಮಗ್ರಂಥಗಳಲ್ಲಿ ದಾಖಲಾಗಿದೆ. ಭಗವಂತನನ್ನು ಕುರಿತ ಅತ್ಯಂತ ವಿಸ್ತಾರವಾದ ವ್ಯಾಖ್ಯಾನವು ವೈದಿಕ ಸಾಹಿತ್ಯದಲ್ಲಿದೆ. ವೈದಿಕ ಸಾಹಿತ್ಯದ ಶ್ರೇಷ್ಠ ಕೃತಿ ಶ್ರೀಮದ್ ಭಾಗವತಂ.
ಭಗವತ್ ವಿಜ್ಞಾನ
ಭಗವಂತನನ್ನು ಕುರಿತಂತೆ ಮನವರಿಕೆ ಮಾಡಿಕೊಡುವ ಮಾಹಿತಿಯನ್ನು ನೀಡುವ ಅಪೇಕ್ಷೆ ಇದ್ದುದರಿಂದ ಶ್ರೀಲ ಪ್ರಭುಪಾದರು ಅಮೆರಿಕಕ್ಕೆ ಬರುವ ಮೊದಲೇ ಭಾಗವತವನ್ನು ಸಂಸ್ಕೃತದಿಂದ ಇಂಗ್ಲಿಷ್ಗೆ ಅನುವಾದಿಸುವ ಕಾರ್ಯವನ್ನು ಆರಂಭಿಸಿದ್ದರು. ವೈದಿಕ ಸಾಹಿತ್ಯವನ್ನು ಕುರಿತ ಬೃಹತ್ ಗ್ರಂಥ ಭಂಡಾರವು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಗವಂತನಿಗೆ ಸಂಬಂಧಿಸಿದಂತೆ ವಿಧವಿಧವಾದ ವಿಷಯಗಳನ್ನು ನೀಡಿದರೂ ಭಾಗವತವು ವಿಶೇಷವಾಗಿ ಭಗವತ್ ವಿಜ್ಞಾನ ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನವನ್ನು ನೀಡುತ್ತದೆ.
ಭಾಗವತವು ವೈಜ್ಞಾನಿಕವಾಗಿದ್ದು ಅಂಧಶ್ರದ್ಧೆಯನ್ನು ಕೋರುವುದಿಲ್ಲ. ಅದು ಭಗವಂತನನ್ನು ಕುರಿತಂತೆ ಸಮಗ್ರವಾದ ವ್ಯಾಖ್ಯಾನವನ್ನು ಪ್ರಸ್ತುತಪಡಿಸುವುದು ಮಾತ್ರವಲ್ಲ, ಅದರ ಸಾಕ್ಷಾತ್ಕಾರದ ವಿಧಾನವನ್ನೂ ತಿಳಿಸುತ್ತದೆ. ಭಾಗವತದ ಶ್ರದ್ಧಾವಂತ ವಿದ್ಯಾರ್ಥಿಯ ಹೃದಯದಲ್ಲಿ ಭಗವಂತನು ತನ್ನನ್ನು ಪ್ರಕಟಪಡಿಸುತ್ತಾನೆ ಎಂದು ಕರ್ತೃ ಶ್ರೀ ವ್ಯಾಸದೇವ ಅವರು ಎರಡನೆಯ ಶ್ಲೋಕದಲ್ಲಿ ಸಾರಿದ್ದಾರೆ. ಭಾಗವತದಲ್ಲಿ ಸೂಚಿಸಿರುವ ವಿಧಾನದಿಂದ ದೇವರ ಸಾಕ್ಷಾತ್ಕಾರ ಮಾಡಿಕೊಂಡಿರುವ ಶ್ರೇಷ್ಠ ಸಂತರ ಇತಿಹಾಸಗಳನ್ನು ದಾಖಲಿಸಿಕೊಳ್ಳುವ ಮೂಲಕ ವ್ಯಾಸದೇವರು ತಮ್ಮ ಹೇಳಿಕೆಯನ್ನು ಭಾಗವತದ ಉದ್ದಕ್ಕೂ ದೃಢಪಡಿಸಿದ್ದಾರೆ.

ಭಾಗವತವು ಭಗವತ್ ವಿಜ್ಞಾನವನ್ನು ತರ್ಕಬದ್ಧವಾಗಿ, ಕ್ರಮವಾಗಿ ಪ್ರಸ್ತುತಪಡಿಸುತ್ತದೆ. ಶ್ರೀಲ ಪ್ರಭುಪಾದರು ಭಾಗವತಕ್ಕೆ ನೀಡಿರುವ ಪ್ರಸ್ತಾವನೆಯಲ್ಲಿ ದೇವರು ಶಬ್ದವನ್ನು ನಿರೂಪಿಸುವ ಮೂಲಕ ಆರಂಭಿಸುತ್ತಾರೆ,
“ಸಂಸ್ಕೃತ ಪದವಾದ ಈಶ್ವರ (ನಿಯಂತ್ರಕ) ದೇವರು ಎಂಬ ಅರ್ಥವನ್ನು ಸೂಚಿಸುತ್ತದೆ. ಆದರೆ ಪರಮ ಪುರುಷನನ್ನು ಪರಮೇಶ್ವರ ಅಥವಾ ಪರಮ ಈಶ್ವರ ಎಂದೇ ಕರೆಯಲಾಗುತ್ತದೆ. ಪರಮ ಪುರುಷ ಅಥವಾ ಪರಮೇಶ್ವರ ಪರಮ ಪ್ರಜ್ಞೆಯ ವ್ಯಕ್ತಿತ್ವ ಉಳ್ಳವನು, ಅವನು ಅನ್ಯಮೂಲಗಳಿಂದ ಯಾವುದೇ ಶಕ್ತಿಯನ್ನು ಪಡೆಯುವುದಿಲ್ಲವಾದ್ದರಿಂದ ಪರಮ ಸ್ವತಂತ್ರನು.”
ಸಂಕ್ಷೇಪವಾಗಿ ಹೇಳಬೇಕೆಂದರೆ, ದೇವರು ಪರಮ ಪುರುಷ ಮತ್ತು ಪರಮ ನಿಯಂತ್ರಕ ಮತ್ತು ಅವನು ಸಂಪೂರ್ಣ ಸ್ವತಂತ್ರನು. ಭಾಗವತವು ದೇವರನ್ನು ಭಗವಾನ್ ಎಂದೂ ವಿವರಿಸುತ್ತದೆ. ಅಂದರೆ ಸಕಲ ವೈಭವಗಳನ್ನೂ ಉಳ್ಳವನು ಎಂದು ಅರ್ಥ. ಅದರಲ್ಲಿ ಮುಖ್ಯವಾದುದು ಅಸೀಮಿತ ಸೌಂದರ್ಯ. ಆ ಸೌಂದರ್ಯ ಸಾಗರವು ಅಸೀಮಿತ ಜ್ಞಾನ ಮತ್ತು ಆನಂದದಿಂದ ಕೂಡಿದ ಅವನ ಶಾಶ್ವತ, ಅಲೌಕಿಕ ದೇಹ.
ದೇವರು ಶಬ್ದವನ್ನು ಕುರಿತಂತೆ ಭಾಗವತವು ನೀಡಿರುವ ಈ ವಿವರಣೆಯು ಅನೇಕ ತಾತ್ತ್ವಿಕ ಸಮಸ್ಯೆಗಳನ್ನು ಒಮ್ಮೆಲೇ ಪರಿಹರಿಸಿಬಿಡುತ್ತದೆ. ಮುಖ್ಯವಾಗಿ ದೇವರನ್ನು ಕುರಿತ ಅನೇಕ ನಿರಾಕಾರ ಕಲ್ಪನೆಗಳು ತರ್ಕ ಸಮ್ಮತವೇ ಎನ್ನುವುದರ ಮೌಲ್ಯೀಕರಣಕ್ಕೆ ಅವು ನೆರವಾಗುತ್ತವೆ. ಉದಾಹರಣೆಗೆ, ದೇವರೆಂದರೆ ಪರಮ ನಿಯಂತ್ರಕನೆಂದು ಅರ್ಥವಾಗಿರುವುದರಿಂದ ಅವನು ಆಕಾರ (ವ್ಯಕ್ತಿ) ಉಳ್ಳವನಾಗಿರಬೇಕು, ಅವನು ಶ್ವೇತ ಬೆಳಕು ಅಥವಾ ಒಂದು ಗುಣ ಅಥವಾ ಒಂದು ಕಲ್ಪನೆಯಂತೆ ನಿರಾಕಾರನಾಗಿರುವುದು ಸಾಧ್ಯವಿಲ್ಲ.

ಅಂತಿಮವಾಗಿ ಒಬ್ಬ ನಿಯಂತ್ರಕ. ಒಬ್ಬ ವ್ಯಕ್ತಿಯು ನಿಯಂತ್ರಣವನ್ನು ಮಾಡಬೇಕಾಗಿರುವುದರಿಂದ ಒಂದು ನಿರಾಕಾರ ಶಕ್ತಿ, ಒಂದು `ಶ್ವೇತ ಬೆಳಕು’ ಸೃಷ್ಟಿಯನ್ನು ಅಥವಾ ಅದರ ಯಾವುದೇ ಭಾಗವನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ವಾಸ್ತವವಾಗಿ `ಶ್ವೇತ ಬೆಳಕು’ ಭಗವಂತನ ಒಂದು ಅಧೀನ ಅಂಶ. ಅದನ್ನು ಬ್ರಹ್ಮಜ್ಯೋತಿ ಅಥವಾ ನಿರಾಕಾರ ಬ್ರಹ್ಮನ್ ಎಂದು ಕರೆಯುತ್ತಾರೆ. ಅನೇಕ ಜನರು ಬ್ರಹ್ಮನ್ ಅನ್ನು ಭಗವಂತನ ಅತ್ಯುನ್ನತ ವ್ಯಕ್ತ (ರೂಪ) ಎಂದು ಒಪ್ಪಿಕೊಂಡರೂ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ಪರಮ ಸತ್ಯ ಎಂದು ಭಾಗವತವು ಪದೇ ಪದೇ ಸಾರಿದೆ. ಬ್ರಹ್ಮನ್ ಜೊತೆ ವಿಲೀನಗೊಂಡು ತಾವು ಅಂತಿಮ ಮುಕ್ತಿ ಪಡೆದಿರುವುದಾಗಿ ಯೋಚಿಸುವವರು ತಮ್ಮ ಸಾಕ್ಷಾತ್ಕಾರದಲ್ಲಿ ಪ್ರಬುದ್ಧರಾಗಿಲ್ಲ ಮತ್ತು ಅಂತಿಮವಾಗಿ ಅವರು ಪುನಃ ಭೌತಿಕ ಲೋಕಕ್ಕೆ ಪತನಗೊಳ್ಳಬೇಕು ಎಂದೂ ಭಾಗವತವು ಹೇಳಿದೆ. ಪರಮ ನಿಯಂತ್ರಕ ಕೃಷ್ಣನ ಭಕ್ತರು ಮಾತ್ರ ಸಂಪೂರ್ಣ ಮುಕ್ತಿಯನ್ನು ಪಡೆಯುವುದು ಸಾಧ್ಯ.
ಪ್ರೇಮ ಅಥವಾ ಸೌಂದರ್ಯದಂತೆ ದೇವರು ಒಂದು ಗುಣವೆಂದು ನಂಬುವುದೂ ಕೂಡ ನಿರಾಕಾರವಾದ. ಪರಮ ಪುರುಷನಾಗಿ ಕೃಷ್ಣನು ಈ ಗುಣಗಳನ್ನು ಪೂರ್ಣವಾಗಿ ಹೊಂದಿದ್ದಾನೆ. ಆದರೆ ಅಂತಹ ಗುಣಗಳು ದೇವರ ಸಂಪೂರ್ಣ ಅಭಿವ್ಯಕ್ತಿಯಲ್ಲ. ಅವು ಅವನ ವ್ಯಕ್ತಿತ್ವದ ಅಂಶಗಳು.
ದೇವರು ಕೇವಲ ಒಂದು ಕಲ್ಪನೆಯೂ ಅಲ್ಲ. ಅವನು ವಿಶ್ವದ ಕಾರ್ಯಭಾರವನ್ನು ನಿರ್ದೇಶಿಸುವ ಪರಮ ನಿಯಂತ್ರಕ. ಅವನು ಬುದ್ಧಿ, ವಿವೇಚನೆ ಸಂಕಲ್ಪವನ್ನು ಹೊಂದಿರಬೇಕು ಮತ್ತು ಒಬ್ಬ ವ್ಯಕ್ತಿಯು ತಜ್ಞ ವ್ಯವಸ್ಥಾಪಕನಾಗಲು ಅಗತ್ಯವಾದ ಇತರ ಎಲ್ಲ ಗುಣಗಳನ್ನೂ ಹೊಂದಿರಬೇಕು. ಅವನು ಅತ್ಯುತ್ತಮ ವ್ಯವಸ್ಥಾಪಕ. ವಿಶ್ವದ ಸುವ್ಯವಸ್ಥಿತ ಕಾರ್ಯ ನಿರ್ವಹಣೆಯು ದೃಢಪಡಿಸುವಂತೆ ದೇವರು ಪರಮ ಬುದ್ಧಿಜೀವಿ.
ಪರಮ ನಿಯಂತ್ರಕ
ನಿಜ, ನಾಸ್ತಿಕನು ವಿಶ್ವ ನಿಯಂತ್ರಕನ ಅಸ್ತಿತ್ವವನ್ನು ನಿರಾಕರಿಸುತ್ತಾನೆ. ಅವನ ಅಭಿಪ್ರಾಯದ ಪ್ರಕಾರ ಯಾವುದೇ ವ್ಯಕ್ತಿಯ ಮೇಲ್ವಿಚಾರಣೆ ಇಲ್ಲದೆ ಕೆಲವು ಕಾನೂನಿನ ಅಡಿಯಲ್ಲಿ ವಿಶ್ವವು ಕಾರ್ಯ ನಿರ್ವಹಿಸುತ್ತದೆ. ಆದರೆ ವ್ಯಕ್ತಿಗಳು ಕಾನೂನನ್ನು ಮಾಡುತ್ತಾರೆ ಎನ್ನುವ ಸಾಮಾನ್ಯ ಪ್ರಜ್ಞೆಗೆ ಇದು ವಿರುದ್ಧವಾದುದು. ನಮ್ಮ ಅನುಭವದೊಳಗಿನ ಪ್ರತಿಯೊಂದು ಸಂಕೀರ್ಣ ವ್ಯವಸ್ಥೆಯ ಹಿಂದೆ ನಾವು ವ್ಯಕ್ತಿಯನ್ನು ಕಾಣುತ್ತೇವೆ. ಉದಾಹರಣೆಗೆ, ಸಂಚಾರ ಸೂಚನೆಗಳ ಸಂಕೀರ್ಣ ವ್ಯವಸ್ಥೆಯಿಂದಾಗಿ ದೊಡ್ಡ ನಗರಗಳಲ್ಲಿ ಸಾರಿಗೆ ಸುಗಮವಾಗಿ ಸಾಗುತ್ತದೆ. ಸಂಚಾರ ದೀಪಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತವೆ ಎಂದು ಮಗುವು ಭಾವಿಸಬಹುದು, ಆದರೆ ಆ ಸಂಚಾರ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಗರದ ಸರ್ಕಾರವಿದೆ ಎನ್ನುವುದು ವಯಸ್ಕರಿಗೆ ಗೊತ್ತು. ನಗರ ಸರ್ಕಾರವು ಜನರಿಂದ ರಚಿಸಲ್ಪಟ್ಟಿದೆ ಮತ್ತು ಅಂತಿಮವಾಗಿ ಒಬ್ಬನ ನೇತೃತ್ವದಲ್ಲಿ ಇರುತ್ತದೆ. ಎಲ್ಲ ಸಂಕೀರ್ಣ ವ್ಯವಸ್ಥೆಯ ಹಿನ್ನೆಲೆಯೂ ವ್ಯಕ್ತಿಯನ್ನೇ ಸೂಚಿಸುತ್ತದೆ. ವಿಶ್ವದ ವಿಪರೀತ ಸಂಕೀರ್ಣ ಕಾರ್ಯವು ಒಬ್ಬ ವ್ಯಕ್ತಿಯ ನಿಯಂತ್ರಣಕ್ಕೆ ಒಳಪಟ್ಟಿದೆ ಎನ್ನುವುದು ನಮ್ಮ ಅನುಭವ.
ಆ ವ್ಯಕ್ತಿಯು ನಮ್ಮನ್ನೂ ನಿಯಂತ್ರಿಸುತ್ತಿದ್ದಾನೆ. ಪರಮ ನಿಯಂತ್ರಕನ ಅಸ್ತಿತ್ವವನ್ನು ನಿರಾಕರಿಸುವವರು ತಾವು ಅವನ ನಿಯಂತ್ರಣದಿಂದ ಮುಕ್ತರು ಎನ್ನುವುದನ್ನೂ ಸಾಬೀತುಪಡಿಸಲಾರರು. ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯಿಂದಾಗಿ ತಾವು ಅಂತಿಮವಾಗಿ ಪ್ರಕೃತಿಯ ಮೇಲೆ ನಿಯಂತ್ರಣ ಸಾಧಿಸಬಹುದೆಂದು ಅವರು ಭಾವಿಸಬಹುದು. ಆದರೆ ಅಂತಹ ಆಶಯಗಳು ಆಧಾರವಿಲ್ಲದ್ದು. ವೃದ್ಧಾಪ್ಯ, ರೋಗ ಮತ್ತು ಸಾವುಗಳ ಅಭೇದ್ಯ ಶಕ್ತಿಗಳು ಈ ಭೌತಿಕ ಲೋಕಕ್ಕೆ ಸಹಜವಾಗಿವೆ ಮತ್ತು ದೇವೋತ್ತಮ ಪರಮ ಪುರುಷನ ನ್ಯಾಯಾಂಗ ಇಲಾಖೆಯು ಅದನ್ನು ಹಂಚುತ್ತದೆ. ದೇವರನ್ನು ಕುರಿತು ನಿರಾಕರಿಸಿದರೂ ನಾಸ್ತಿಕನು ಅಂತಿಮವಾಗಿ ಸಾವಿನ ಸಮಯದಲ್ಲಿ ಭಗವಂತನ ನಿಯಂತ್ರಣವನ್ನು ಕಾಣುತ್ತಾನೆ.

ಭಗವಂತನ ಅಸ್ತಿತ್ವವನ್ನು ಕುರಿತಂತೆ ಅನೇಕ ತಾತ್ತ್ವಿಕ ವಾದಗಳನ್ನು ಕೇಳಿದರೂ ನಾಸ್ತಿಕರು ದೇವರಿಲ್ಲ ಎನ್ನುವ ತಮ್ಮ ನಂಬಿಕೆಗೇ ಪಟ್ಟುಹಿಡಿಯುತ್ತಾರೆ. ಕೆಲವು ಬಾರಿ ಅವರು `ದೇವರನ್ನು ತೋರಿಸಿ’ ಎಂದು ಒತ್ತಾಯಿಸುತ್ತಾರೆ. ಆದರೆ ಅವರಿಗೆ ದೇವರನ್ನು ಕುರಿತಂತೆ ನೇರವಾದ ಅನುಭವ ಬೇಕಾದರೆ ಅವರು ಆ ಅನುಭವದ ಸೂಕ್ತ ವಿಧಾನದ ಪ್ರಯೋಜನ ಪಡೆಯಬೇಕು. ದೈವೀ ತತ್ತ್ವಗಳಿಗೆ ನಿಷ್ಠರಾಗಿ ದೇವರನ್ನು ಅನುಭವಿಸಿರುವ ಭಗವಂತನ ಭಕ್ತರ ಮೇಲೆ ನಾಸ್ತಿಕರ ಅಜ್ಞಾನ ಮತ್ತು ಆಧಾರರಹಿತ ಹೇಳಿಕೆಗಳು ಏನೂ ಪ್ರಭಾವ ಬೀರುವುದಿಲ್ಲ.
ನಾಸ್ತಿಕರ ಪ್ರಚಾರವಿದ್ದರೂ ಬಹಳ ಜನರು ಈಗಲೂ ದೇವರಲ್ಲಿ `ನಂಬಿಕೆ’ ಉಳ್ಳವರಾಗಿದ್ದಾರೆ. ದುರದೃಷ್ಟವಶಾತ್, ಕೃಷ್ಣನನ್ನು ಕುರಿತು ಅಪೂರ್ಣ ಜ್ಞಾನದಿಂದಾಗಿ ಅವರು ಸಾಮಾನ್ಯವಾಗಿ ಕೃಷ್ಣನನ್ನು ತಿರಸ್ಕರಿಸುತ್ತಾರೆ. ಆದರೆ ಯಾರಾದರೂ ಭಗವಂತನನ್ನು ಕುರಿತು ಅರಿಯಲು ಶ್ರದ್ಧೆಯನ್ನು ಹೊಂದಿದ್ದರೆ, ಅವರು ಕೃಷ್ಣನ ಬಗೆಗೆ ಕೇಳಲು ಕಾತರದಿಂದ ಇರುತ್ತಾರೆ. ಕೃಷ್ಣನಿಗೆ ಒಂದು ಅವಕಾಶ ನೀಡಿ. ಅವನ ಪರಿಚಯಪತ್ರವನ್ನು ಪರಿಶೀಲಿಸಿ.
ದೇವರ ಪರಿಚಯಪತ್ರ
ಕೃಷ್ಣನ ಪರಿಚಯಪತ್ರಗಳು ಅನೇಕ ವೈದಿಕ ಗ್ರಂಥಗಳಲ್ಲಿವೆ. ವಿಶೇಷವಾಗಿ ಭಾಗವತವು ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಸ್ಪಷ್ಟವಾಗಿ ಮತ್ತು ಪದೇ ಪದೇ ಹೇಳಿದೆ. ಭಾಗವತದಲ್ಲಿ ಕ್ರಮಬದ್ಧವಾಗಿ ಪ್ರಸ್ತುತಪಡಿಸಲಾಗಿದ್ದು, ಸಂಪೂರ್ಣ ಭಗವತ್ ವಿಜ್ಞಾನವನ್ನು 2 ಡಜನ್ಗೂ ಹೆಚ್ಚಿನ ಭಾಗಗಳಿರುವ 9 ಸ್ಕಂಧಗಳಲ್ಲಿ ನೀಡಲಾಗಿದೆ. ಇಡೀ 10ನೆಯ ಸ್ಕಂಧವು ವಿಶೇಷವಾಗಿ ಶ್ರೀ ಕೃಷ್ಣನ ಅವತಾರ ಮತ್ತು ಲೀಲೆಗಳನ್ನು ವರ್ಣಿಸಿದೆ. ಹಿಂದಿನ 9 ಸ್ಕಂಧಗಳಲ್ಲಿ ಚರ್ಚಿಸಿರುವ ಭಗವಂತನ ಎಲ್ಲ ಅರ್ಹತೆಗಳೂ ಶ್ರೀ ಕೃಷ್ಣನಲ್ಲಿ ಮಾತ್ರ ಇವೆ ಎಂದು ಭಾಗವತವು ಹೇಳುತ್ತದೆ. ಮಧ್ವಾಚಾರ್ಯ, ರಾಮಾನುಜಾಚಾರ್ಯ, ವಿಷ್ಣುಸ್ವಾಮಿ, ನಿಂಬಾರಕಾಚಾರ್ಯ ಮತ್ತು ಶಂಕರಾಚಾರ್ಯರೇ ಆದಿಯಾಗಿ ವೇದ ಸಾಹಿತ್ಯದ ಎಲ್ಲ ಶ್ರೇಷ್ಠ ಬೋಧಕರು ಕೃಷ್ಣನನ್ನು ದೇವರೆಂದು ಸ್ವೀಕರಿಸಿದ್ದಾರೆ.

ಹಿಂದೂ ಧರ್ಮವು ಅನೇಕ ದೇವರ ಆರಾಧನೆಯನ್ನು ಪ್ರತಿಪಾದಿಸುತ್ತದೆ ಮತ್ತು ಅವರಲ್ಲಿ ಕೃಷ್ಣನೂ ಒಬ್ಬನು ಎನ್ನುವ ತಪ್ಪು ಗ್ರಹಿಕೆಯಿಂದ ಕೆಲವರು ಕೃಷ್ಣನನ್ನು ದೇವರಾಗಿ ತಿರಸ್ಕರಿಸುತ್ತಾರೆ. ಆದರೆ ವೈದಿಕ ಧರ್ಮವು ಬಹುದೇವತಾ ಸಿದ್ಧಾಂತವಲ್ಲ. ನಾವು ವೈದಿಕ ಸಾಹಿತ್ಯವನ್ನು ನಿಕಟವಾಗಿ ಅಧ್ಯಯನ ಮಾಡಿದರೆ, ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಯಾವಾಗಲೂ ಸಾರಿರುವುದನ್ನು ನಾವು ಕಾಣುತ್ತೇವೆ. ಕೃಷ್ಣನು ಎಲ್ಲ ಅವತಾರಗಳ ಮೂಲ ಮತ್ತು ಅವನು ಮಾತ್ರ ದೇವೋತ್ತಮ (ಕೃಷ್ಣಸ್ತು ಭಗವಾನ್ ಸ್ವಯಂ) ಎಂದು ಭಾಗವತವು ಭಗವಂತನ ಅನೇಕ ಅವತಾರಗಳನ್ನು ಪಟ್ಟಿ ಮಾಡಿದ ಮೇಲೆ ತಿಳಿಸಿದೆ. ಬ್ರಹ್ಮ ಸಂಹಿತೆಯು ಹೇಳುತ್ತದೆ (5.1), “ಗೋವಿಂದನೆಂದು ಪ್ರಸಿದ್ಧನಾದ ಕೃಷ್ಣನು ಪರಮ ನಿಯಂತ್ರಕ. ಅವನ ಬಳಿ ಶಾಶ್ವತವಾದ, ಆನಂದಭರಿತವಾದ ಆಧ್ಯಾತ್ಮಿಕ ದೇಹವಿದೆ. ಅವನು ಎಲ್ಲದರ ಮೂಲ. ಅವನು ಎಲ್ಲ ಕಾರಣಗಳ ಕಾರಣನಾಗಿರುವುದರಿಂದ ಅವನಿಗೆ ಬೇರೆ ಯಾವುದೇ ಮೂಲಗಳಿಲ್ಲ.” ಇಲ್ಲಿ ಕೃಷ್ಣನನ್ನು ಮೂಲ ನಿಯಂತ್ರಕ ಎಂದು ವಿವರಿಸಲಾಗಿದೆ. ಅವನ ಸ್ಥಾನವು ಅನನ್ಯ: ಒಬ್ಬನೇ ಒಬ್ಬ ಮೂಲ ನಿಯಂತ್ರಕ ಇರುವುದು ಸಾಧ್ಯ. ಅವನೇ ಭಗವಂತ.
ಆದರೆ ಕೃಷ್ಣನು ಖುದ್ದಾಗಿ ವಿಶ್ವದ ಕಾರ್ಯಗಳ ಮೇಲ್ವಿಚಾರಣೆ ಮಾಡಬೇಕಾಗಿಲ್ಲ. ಅವನ ಬಳಿ ಅಧೀನ ನಿಯಂತ್ರಕರಿದ್ದಾರೆ (ದೇವತೆಗಳು). ಅವನು ಅವರಿಗೆ ವಿಶ್ವದ ವ್ಯವಹಾರಗಳನ್ನು ನಡೆಸಲು ಶಕ್ತಿ ನೀಡಿದ್ದಾನೆ.
ಲೌಕಿಕ ಪ್ರಕೃತಿಯನ್ನು ಅದರಲ್ಲೇನೋ ವೈಯಕ್ತಿಕ ಗುಣಗಳಿವೆ ಎಂಬಂತೆ ಪೂಜಿಸುವ ಪ್ರಾಚೀನ ಪದ್ಧತಿಯನ್ನು ಆಧುನಿಕ ಮಾನವನು ಕುಚೋದ್ಯ ಮಾಡುತ್ತಾನೆ. ಆದರೆ ದೇವತೆಗಳೆಂದು ಕರೆಸಿಕೊಳ್ಳುವ ಸಬಲಗೊಂಡ ವ್ಯಕ್ತಿಗಳು ಎಲ್ಲ ಲೌಕಿಕ ವಿಷಯಗಳನ್ನು ನಿಯಂತ್ರಿಸುತ್ತಾರೆ. ಈ ಪ್ರಬಲ ನಿಯಂತ್ರಕರನ್ನು ನೋಡುವುದು ಸಾಧ್ಯವಿಲ್ಲವೆಂದರೆ ಅವರ ಅಸ್ತಿತ್ವವೇ ಇಲ್ಲವೆಂದಲ್ಲ. ಲೌಕಿಕ ಪ್ರಕೃತಿಯ ಗೋಜಲನ್ನು ಕುರಿತು ಅಧ್ಯಯನ ಮಾಡಿದ ಮೇಲೆ ನಾವು ಅದರ ಅಸ್ತಿತ್ವದ ಬಗೆಗೆ ವಿವೇಚನೆಯಿಂದ ತೀರ್ಮಾನಿಸಬಹುದು. ವೈದಿಕ ಸಾಹಿತ್ಯವು ದೇವತೆಗಳನ್ನು ಕುರಿತು ವಿವರವಾಗಿ ತಿಳಿಸಿದೆ, ಭಗವತ್ ವಿಜ್ಞಾನವನ್ನು ಕುರಿತ ಶ್ರೀಲ ವ್ಯಾಸದೇವರ ತೀಕ್ಷ್ಣ ಮಂಡನೆಯು ಗಾಢ ಮತ್ತು ಪಾಂಡಿತ್ಯಪೂರ್ಣವಾಗಿದೆ. ಅವರು ದೇವತೆಗಳನ್ನು ಪುರಾಣ ಪಾತ್ರಗಳೆಂದು ಅಲ್ಲ, ನಿಜವಾದ ವ್ಯಕ್ತಿಗಳೆಂದು ವಿವರಿಸಿದ್ದಾರೆ.
ವಿಶ್ವ ಆಡಳಿತ ವ್ಯವಸ್ಥೆಯ ಇಲಾಖೆಗಳನ್ನು ದೇವತೆಗಳು ನಿಯಂತ್ರಿಸುತ್ತಾರೆ. ಇಂದ್ರನು ಮಳೆಯನ್ನು, ವಾಯು ಗಾಳಿಯನ್ನು, ವರುಣ ನೀರನ್ನು, ವಿವಸ್ವಾನ್ ಸೂರ್ಯನನ್ನು ನಿಯಂತ್ರಿಸುತ್ತಾರೆ. ಹೀಗೆ ಇನ್ನಷ್ಟು ನಿಯಂತ್ರಣಗಳು.
ನಮ್ಮ ಅಭಿಪ್ರಾಯದಂತೆ ಈ ದೇವತೆಗಳು ತುಂಬ ಪ್ರಬಲರಾದರೂ ಅವರು ಕೃಷ್ಣನಿಗೆ ಅಧೀನರು. ಎಲ್ಲ ಜೀವಿಗಳೂ ಆಧ್ಯಾತ್ಮಿಕರೇ, ಆದರೆ ಅವರು ಎರಡು ಭಿನ್ನ ವರ್ಗಗಳಿಗೆ ಸೇರಿದ್ದಾರೆ. ಒಂದು ವರ್ಗದಲ್ಲಿ ಅಸೀಮಿತ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣ ಮತ್ತು ಅವನ ವೈಯಕ್ತಿಕ ವಿಸ್ತರಣೆಗಳಿವೆ. ಮತ್ತೊಂದು ವರ್ಗದಲ್ಲಿ ಇತರ ಎಲ್ಲ ಜೀವಿಗಳು, ಅತ್ಯಂತ ಸೂಕ್ಷ್ಮವಾದ ಅಸಂಖ್ಯ ಆತ್ಮಗಳು ಇವೆ. ಶ್ರೀ ಕೃಷ್ಣನು ತನ್ನ ಪೂರ್ಣ ಶಕ್ತಿಯನ್ನು ಹೊಂದಿದ ಅಸೀಮಿತ ರೂಪಗಳಲ್ಲಿ ವಿಸ್ತರಣೆಗೊಳ್ಳುವುದು ಸಾಧ್ಯವಾದರೂ ದೇವತೆಗಳಿಗೆ ಅಂತಹ ವಿಸ್ತರಣೆ ಇಲ್ಲ. ಬದಲಿಗೆ ದೇವತೆಗಳು ಜೀವಿಗಳೆಂದು ಕರೆಯುವ ಅತಿ ಸೂಕ್ಷ್ಮ ಜೀವಿಗಳ ವರ್ಗಕ್ಕೆ ಸೇರುತ್ತಾರೆ. ಉದಾಹರಣೆಗೆ, ದೇವತೆಗಳಂತೆ ಜೀವರಿಗೆ ಲೌಕಿಕ ದೇಹಗಳಿರಬಹುದು. ಆದರೆ ಕೃಷ್ಣನ ದೇಹವು ಯಾವಾಗಲೂ ಅಲೌಕಿಕ. ದೇವತೆಗಳ ಭಕ್ತಿ ಮತ್ತು ಸದ್ಗುಣಗಳಿಂದ ಪ್ರಸನ್ನನಾಗುವ ಕೃಷ್ಣನು ತನ್ನ ವಿಶ್ವ ಸರ್ಕಾರದಲ್ಲಿ ಅವರನ್ನು ಜವಾಬ್ದಾರಿಯುತ ಹುದ್ದೆಗಳಲ್ಲಿ ನಿಯೋಜಿಸುತ್ತಾನೆ. ದೇವತೆಗಳು ಎಷ್ಟೇ ಪ್ರಬಲರಾಗಿದ್ದರೂ ಅಂತಿಮವಾಗಿ ಕೃಷ್ಣನೇ ನಿಯಂತ್ರಕ.

ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಪರಮ ಸತ್ಯ ಎಂದು ವೈದಿಕ ಸಾಹಿತ್ಯದ ಉದ್ದಕ್ಕೂ ನೂರಾರು ನೇರ ಹೇಳಿಕೆಗಳಿದ್ದರೂ, ಅಂತಿಮವಾಗಿ ಕೃಷ್ಣನು ವ್ಯಕ್ತಿಯಲ್ಲ ಎಂದು ಕೆಲವರು ಈಗಲೂ ವಾದಿಸುತ್ತಾರೆ. ಕೃಷ್ಣನು ದೇವರು ಎಂದೂ ಅವರು ಹೇಳಬಹುದು. ಆದರೆ ಅವರು ನಿಜವಾಗಿಯೂ ಹೇಳುವುದೇನೆಂದರೆ, ಕೃಷ್ಣನು ನಿರಾಕಾರ ಬ್ರಹ್ಮನ್ನ ಅವತಾರ. ಅವರ ಪ್ರಕಾರ ಬ್ರಹ್ಮನ್ ಅಂತಿಮ ಸತ್ಯ. ಕೃಷ್ಣನು ನಿರಾಕಾರ ಬ್ರಹ್ಮನ್ ಜೊತೆಗೆ ತನ್ನ ಗುರುತನ್ನು ಸಾಕ್ಷಾತ್ಕರಿಸಿಕೊಂಡಿದ್ದಾನೆ, ಆದುದರಿಂದ ಅವನು ಈಗ ದೇವರು ಎಂದು ಈ ಜನರು ವಾದಿಸುತ್ತಾರೆ. ಧ್ಯಾನ ಮತ್ತು ಆಧ್ಯಾತ್ಮಿಕ ಊಹೆಯಿಂದ ನಾವೂ `ದೇವರಾಗಬಹುದು.’ ನಾವೆಲ್ಲರೂ ದೇವರೆ, ನಾವು ಅದನ್ನು ಅರಿತುಕೊಳ್ಳಬೇಕಷ್ಟೆ ಎಂದು ಅವರು ಹೇಳುತ್ತಾರೆ. ಕೃಷ್ಣನು ಭಗವದ್ಗೀತೆಯಲ್ಲಿ ತನಗೆ ಶರಣಾಗಬೇಕೆಂದು ಹೇಳಿದಾಗ, ತನ್ನಲ್ಲಿನ `ಅಜಾತನಿಗೆ’ ಶರಣಾಗುವಂತೆ ಅವನು ನಿಜವಾಗಿ ಹೇಳುತ್ತಿದ್ದಾನೆ ಎನ್ನುವ ಅವರಿಗೆ ಕೃಷ್ಣನಿಗಿಂತ `ಅಜಾತ’ ಹೆಚ್ಚು ಶ್ರೇಷ್ಠ.
ಅಂತಹ ಊಹಾತ್ಮಕ ಅಭಿಪ್ರಾಯಗಳು ಭಗವತ್ ವಿಜ್ಞಾನದ ಅಜ್ಞಾನಕ್ಕೆ ವಂಚನೆ ಮಾಡಿದಂತೆ. ಪರಮ ಪ್ರಭುವಿನ ಒಳಗೂ ಹೊರಗಿನ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಅವನ ದೇಹವು ಸಂಪೂರ್ಣವಾಗಿ ಅಲೌಕಿಕ. ಅವನು ಪರಮಸತ್ಯ, ಎಲ್ಲದರ ಮೂಲ. ಅವನು ಯಾವುದೇ ನಿರಾಕಾರ `ಅಜಾತ’ನಿಗೆ ಅಧೀನನಲ್ಲ. ಕೃಷ್ಣನು ವಿವರಿಸುವಂತೆ, ಬ್ರಹ್ಮಣೋ ಹಿ ಪ್ರತಿಷ್ಠಾಹಮ್, “ನಿರಾಕಾರ ಬ್ರಹ್ಮನ್ಗೆ ನಾನು ಆಧಾರ.”
ದೇವರು ತನ್ನ ಗುರುತನ್ನು ಎಂದಿಗೂ ಮರೆಯುವುದಿಲ್ಲ. ಅವನು ಎಲ್ಲ ಶಕ್ತಿಗಳ ಮೂಲನಾಗಿರುವುದರಿಂದ, ಅವನು ಸಾಮಾನ್ಯ ಜೀವಿಗಳಂತೆ ಮಾಯೆಯ ವ್ಯಾಪ್ತಿಗೆ ಬರುವುದಿಲ್ಲ. ನಾವು ದೇವರಾಗಿದ್ದರೆ ನಾವು ದೇವರ ಮಾಯಾ ಶಕ್ತಿಯಿಂದ ಗೊಂದಲಕ್ಕೆ ಒಳಗಾಗಬೇಕಾಗಿರಲಿಲ್ಲ ಮತ್ತು ದೇವರಾಗಲು ನಾವು ಹೋರಾಡಬೇಕಾಗಿರಲಿಲ್ಲ. ದೇವರು ಯಾವಾಗಲೂ ದೇವರೇ. ಆ ಶಾಶ್ವತ ಸತ್ಯದ ಸಾಕ್ಷಾತ್ಕಾರಕ್ಕೆ ಅವನು ಏನನ್ನೂ ಮಾಡುವ ಅಗತ್ಯವಿಲ್ಲ.

ಕಾಲಾತೀತ
ದೇವರು ಎಲ್ಲ ಕಾಲ ಮತ್ತು ಪ್ರದೇಶಕ್ಕೆ ಅತೀತ. ನಾವು ನಮ್ಮ ಊಹೆಯಿಂದ ಅವನನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಅವನು ತನ್ನನ್ನು ವ್ಯಕ್ತಪಡಿಸಿಕೊಂಡಾಗಲಷ್ಟೆ ನಾವು ಅವನನ್ನು ಅರಿಯುವುದು ಸಾಧ್ಯ. ನಮ್ಮ ಸೌಭಾಗ್ಯವೆಂದರೆ, ಅವನು ವೈದಿಕ ಸಾಹಿತ್ಯದಲ್ಲಿ ತನ್ನನ್ನು ಪ್ರಕಟಗೊಳಿಸಿದ್ದಾನೆ. ವೈದಿಕ ಸಾಹಿತ್ಯವು ಭಗವಂತನ ಅಲೌಕಿಕ ಹೆಸರುಗಳು, ರೂಪಗಳು, ಗುಣಗಳು ಮತ್ತು ಲೀಲೆಗಳ ಪೂರ್ಣ ವಿವರಗಳನ್ನು ನೀಡುತ್ತದೆ. ವೈದಿಕ ಸಾಹಿತ್ಯದ ಮುಕುಟ ಮಣಿಯಾದ ಭಾಗವತವು ವಿಶೇಷವಾಗಿ ಶ್ರೀ ಕೃಷ್ಣನ ವೈಭವಗಳನ್ನು ನಿರೂಪಿಸುತ್ತದೆ. ಭಗವಂತನನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಪ್ರಗತಿ ಸಾಧಿಸಲು ಅಪೇಕ್ಷಿಸುವವರು ಶ್ರೀಲ ಪ್ರಭುಪಾದರು ಶುದ್ಧ ರೂಪದಲ್ಲಿ, ಇಂಗ್ಲಿಷ್ನಲ್ಲಿ ಪ್ರಸ್ತುತಪಡಿಸಿರುವ ಭಾಗವತವನ್ನು ಓದಬೇಕು.






Leave a Reply