ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಆಗಸ್ಟ್ 1973ರಲ್ಲಿ ಲಂಡನ್‌ನ ಭಕ್ತಿವೇದಾಂತ ಮ್ಯಾನರ್‌ನಲ್ಲಿ ನೀಡಿದ ಉಪನ್ಯಾಸ
ಆಗಸ್ಟ್ 1973, ಲಂಡನ್ ಹೊರವಲಯದಲ್ಲಿರುವ ಭಕ್ತಿವೇದಾಂತ ಮ್ಯಾನರ್. ಭಾರತದ ಹೈಕಮೀಷನರ್ ಅವರೂ ಸೇರಿದಂತೆ ಸಾವಿರಾರು ಗಣ್ಯ ಅತಿಥಿಗಳು ಅಲ್ಲಿ ಸೇರಿದ್ದರು. ದೇವೋತ್ತಮ ಪರಮ ಪುರುಷನ ಗೌಪ್ಯ ಪರಿಚಯವನ್ನು ಮಾಡಿಕೊಡಲಿರುವ ಶ್ರೀಲ ಪ್ರಭುಪಾದರ ಉಪನ್ಯಾಸವನ್ನು ಕೇಳಲು ಅವರೆಲ್ಲರೂ ಕಾತರದಿಂದ ಅಲ್ಲಿ ನೆರೆದಿದ್ದರು. ದೇವೋತ್ತಮ ಪರಮ ಪುರುಷನು ಉದ್ದನೆಯ ಶ್ವೇತ ಗಡ್ಡಧಾರಿಯಾದ ವೃದ್ಧನಲ್ಲ, ಅತ್ಯಂತ ಆಕರ್ಷಕ ಮತ್ತು ಶಾಶ್ವತ ಯುವಕ ಎಂದು ಭಾರತದ ಕಾಲಾತೀತ ವೈದಿಕ ಗ್ರಂಥಗಳಲ್ಲಿ ತಿಳಿಯಪಡಿಸಿರುವುದನ್ನು ಅಂದು ಶ್ರೀಲ ಪ್ರಭುಪಾದರು ಹೇಳಿದರು.
ಸನ್ಮಾನ್ಯ ಹೈ ಕಮೀಷನರ್ ಅವರೇ, ಮಹಿಳೆಯರೇ ಮತ್ತು ಮಹನೀಯರೇ, ಶ್ರೀ ಕೃಷ್ಣನು ಆವಿರ್ಭವಿಸಿದ ಈ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಳ್ಳಲು ಬಂದಿರುವ ನಿಮಗೆಲ್ಲ ನನ್ನ ಅಭಿವಂದನೆಗಳು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳುತ್ತಾನೆ,
ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ ।
ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋರ್ಜುನ ।।
“ಅರ್ಜುನನೇ, ಯಾರು ನನ್ನ ಹುಟ್ಟಿನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ಯಥಾರ್ಥವಾಗಿ ತಿಳಿದುಕೊಳ್ಳುವರೋ ಅವರು ದೇಹತ್ಯಾಗ ಮಾಡಿದ ಅನಂತರ ಮತ್ತೆ ಈ ಐಹಿಕ ಜಗತ್ತಿನಲ್ಲಿ ಹುಟ್ಟುವುದಿಲ್ಲ. ಅವರು ನನ್ನ ನಿತ್ಯನಿವಾಸಕ್ಕೆ ಬರುತ್ತಾರೆ.”
in london
ಪದೇ ಪದೇ ಸಂಭವಿಸುವ ಹುಟ್ಟು ಮತ್ತು ಸಾವನ್ನು ನಾವು ತಡೆಯಬಹುದು ಮತ್ತು ಅಮರತ್ವದ ಸ್ಥಿತಿಯುನ್ನು ಪಡೆಯಬಹುದು ಎನ್ನುವುದು ನಿಜ. ಆದರೆ ಶ್ರೇಷ್ಠ ತತ್ತ್ವಜ್ಞಾನಿಗಳು, ಶ್ರೇಷ್ಠ ರಾಜಕಾರಣಿಗಳು ಮತ್ತು ಶ್ರೇಷ್ಠ ವಿಜ್ಞಾನಿಗಳಿರುವ ಆಧುನಿಕ ನಾಗರಿಕತೆಗೆ ಅಮರತ್ವವನ್ನು ಪಡೆಯುವುದು ಸಾಧ್ಯ ಎನ್ನುವುದರ ಕಲ್ಪನೆಯೇ ಇಲ್ಲ. ನಾವೆಲ್ಲರೂ ಅಮರರು, ಸಾವು-ರಹಿತರು. ಭಗವದ್ಗೀತೆಯಲ್ಲಿ ಹೇಳಿದೆ (2.20), ನ ಜಾಯತೇ ಮ್ರಿಯತೇ ವಾ ಕದಾಚಿನ್ ಜೀವಿಗಳಾದ ನಾವು ಎಂದಿಗೂ ಸಾಯುವುದಿಲ್ಲ ಮತ್ತು ಹುಟ್ಟುವುದಿಲ್ಲ. ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ. ನಾವು ಪ್ರತಿಯೊಬ್ಬರೂ ಆದಿ ಮತ್ತು ಅಂತ್ಯ ಇಲ್ಲದ ಪುರಾತನರು ಮತ್ತು ನಿತ್ಯರು. ದೇಹವನ್ನು ಕೊಂದಾಗ ನಾವು ಸಾಯುವುದಿಲ್ಲ. ಆದರೆ ದೇಹವು ಅಂತ್ಯಗೊಂಡಾಗ, ನಾವು ಹೊಸ ದೇಹವನ್ನು ಪಡೆದುಕೊಳ್ಳಬೇಕು.
ದೇಹಿನೋಸ್ಮಿನ್, ಯಥಾ ದೇಹೇ ಕೌಮಾರಂ ಯೌವನಂ ಜರಾ ।
ತಥಾ ದೇಹಾಂತರ ಪ್ರಾಪ್ತಿರ್ ಧೀರಃ ತತ್ರ ನ ಮುಹ್ಯತಿ ।।
“ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೇ ಆತ್ಮವು ಸಾವಿನ ಅನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಗಾಗುವುದಿಲ್ಲ.“ (2.13)
ಪ್ರಸ್ತುತದಲ್ಲಿ, ವಿಶ್ವಾದ್ಯಂತ ಜನರಿಗೆ ಈ ಸರಳ ವಿಷಯವನ್ನು ಕುರಿತಂತೆ ತಿಳುವಳಿಕೆ ಇಲ್ಲ. ಯಾವ ವಿಷಯ? ಯಾವುದೆಂದರೆ, ಕೃಷ್ಣನಂತೆ ನಾವೂ ಕೂಡ ಶಾಶ್ವತ, ಆನಂದಮಯ ಮತ್ತು ಅರಿವು ಉಳ್ಳವರು. ವೈದಿಕ ಸಾಹಿತ್ಯಗಳಲ್ಲಿ ಕೃಷ್ಣನನ್ನು ಹೀಗೆ ವರ್ಣಿಸಲಾಗಿದೆ :
ಈಶ್ವರಃ ಪರಮಃ ಕೃಷ್ಣಃ ಸತ್ ಚಿತ್ ಆನಂದ ವಿಗ್ರಹಃ ।
ಅನಾದಿರ್ ಆದಿರ್ ಗೋವಿಂದಃ ಸರ್ವಕಾರಣ ಕಾರಣಮ್ ।।
“ಗೋವಿಂದನೆಂದು ಕರೆಯುವ ಕೃಷ್ಣನು ದೇವೋತ್ತಮ ಪರಮ ಪುರುಷ. ಅವನು ಸನಾತನ, ಆನಂದ ಮತ್ತು ದಿವ್ಯ ಜ್ಞಾನದ ಸಾಕಾರ ರೂಪ. ಅವನು ಎಲ್ಲದರ ಮೂಲ. ಆದರೆ ಅವನಿಗೆ ಮೂಲವಿಲ್ಲ. ಏಕೆಂದರೆ ಅವನೇ ಸಕಲ ಕಾರಣಗಳ ಮೂಲಕಾರಣ.” (ಬ್ರಹ್ಮ ಸಂಹಿತೆ 5.1)
ನಾನು ಕೃಷ್ಣ ಎಂದು ಹೇಳಿದಾಗ, ಅದರರ್ಥ “ದೇವರು” ಎಂದು. “ದೇವರಿಗೆ ಹೆಸರಿಲ್ಲ” ಎಂದು ಕೆಲವು ಬಾರಿ ಹೇಳಲಾಗುತ್ತದೆ. ಅದು ನಿಜ. ಆದರೆ ಅವನ ಚಟುವಟಿಕೆಗಳಿಗೆ ತಕ್ಕಂತೆ ದೇವರಿಗೆ ಹೆಸರನ್ನು ನೀಡಲಾಗಿದೆ. ಉದಾಹರಣೆಗೆ, ಮಹಾರಾಜ ನಂದ ಮತ್ತು ಯಶೋದಾಮಾಯಿ ಹಾಗೂ ವಸುದೇವ ಮತ್ತು ದೇವಕಿಯರ ಪುತ್ರ ಎನ್ನುವುದನ್ನು ಕೃಷ್ಣನು ಸ್ವೀಕರಿಸಿದ್ದನು. ವಾಸ್ತವವಾಗಿ ಯಾರೂ ಕೂಡ ಕೃಷ್ಣನ ತಂದೆಯಲ್ಲ ಅಥವಾ ತಾಯಿಯಲ್ಲ. ಏಕೆಂದರೆ, ಕೃಷ್ಣನು ಎಲ್ಲರ ಮೂಲ ತಂದೆ. ಆದರೆ ಕೃಷ್ಣನು ಇಲ್ಲಿಗೆ ಬಂದಾಗ, ಅವನು ಅವತರಿಸಿದಾಗ, ಅವನು ಕೆಲವು ಶ್ರೇಷ್ಠ ಭಕ್ತರನ್ನು ತನ್ನ ತಂದೆ, ತಾಯಿ ಎಂದು ಸ್ವೀಕರಿಸುತ್ತಾನೆ.
ಇಷ್ಟಾದರೂ ಕೃಷ್ಣನು ಆದಿ ಪುರುಷ, ಮೂಲ ಪುರುಷ. ಹಾಗಾದರೆ ಕೃಷ್ಣನು ತುಂಬಾ ವಯಸ್ಸಾದವನೇ? ಇಲ್ಲ. ನವ ಯೌವನಂ ಚ. ಸದಾ ಹೊಚ್ಚ ಹೊಸ ಯುವಕ. ಅದು ಕೃಷ್ಣ. ಕೃಷ್ಣನು ಕುರುಕ್ಷೇತ್ರ ಸಮರ ಭೂಮಿಯಲ್ಲಿದ್ದಾಗ, ಅವನು 20 ಅಥವಾ 24 ವರ್ಷದ ಯುವಕನ ಹಾಗೆ ಕಾಣಿಸುತ್ತಿದ್ದ. ಆದರೆ, ಆ ವೇಳೆಗಾಗಲೇ ಅವನಿಗೆ ಮರಿ ಮೊಮ್ಮಕ್ಕಳು ಇದ್ದರು. ಆದುದರಿಂದ ಕೃಷ್ಣನು ಸದಾ ಯೌವನ ತುಂಬಿರುವ ವ್ಯಕ್ತಿ. ಇವೆಲ್ಲವೂ ವೈದಿಕ ಸಾಹಿತ್ಯದ ಹೇಳಿಕೆಗಳು. ಆದರೆ ಎಲ್ಲ ವೇದಗಳೂ ಕೃಷ್ಣನನ್ನು ಅರ್ಥಮಾಡಿಕೊಳ್ಳಲೆಂದೇ ಇದ್ದರೂ ವೈದಿಕ ಸಾಹಿತ್ಯವನ್ನು ನಾವು ಕೇವಲ ಔಪಚಾರಿಕವೆಂದು ಓದಿದರೆ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಭಗವದ್ಗೀತೆಯಲ್ಲಿ (15.15) ಕೃಷ್ಣನು ಹೇಳುತ್ತಾನೆ,
ವೇದೈಶ್ಚ ಸರ್ವೈರ್ ಅಹಂ ಏವ ವೇದ್ಯಃ, “ಎಲ್ಲ ವೇದಗಳಿಂದ ತಿಳಿಯಬೇಕಾದವನು ನಾನು.”
ನೀವು ಕೃಷ್ಣನನ್ನು ಅರ್ಥಮಾಡಿಕೊಳ್ಳದಿದ್ದರೆ ವೇದಗಳ ಅಧ್ಯಯನದಿಂದ ಏನು ಪ್ರಯೋಜನ? ಶಿಕ್ಷಣದ ಅಂತಿಮ ಧ್ಯೇಯ, ಗುರಿ ಎಂದರೆ, ಪರಮಪ್ರಭು, ಪರಮಪಿತೃ, ಪರಮ-ಕಾರಣನನ್ನು ಅರ್ಥಮಾಡಿಕೊಳ್ಳುವುದಾಗಿದೆ. ವೇದಾಂತಸೂತ್ರದಲ್ಲಿ ಹೇಳಿರುವಂತೆ, ಅಥಾತೋ ಬ್ರಹ್ಮ ಜಿಜ್ಞಾಸಾ, “ಮಾನವ ರೂಪದ ಜನ್ಮದಲ್ಲಿ ಈಗ ಪರಮ ಸತ್ಯ, ಬ್ರಹ್ಮನ್ ಕುರಿತು ಚರ್ಚಿಸುವ ಕಾಲ.” ಈ ಬ್ರಹ್ಮನ್ ಏನು? ಜನ್ಮಾದಿ ಅಸ್ಯ ಯತಃ (ಭಾಗವತ 1.1.1). ಪ್ರತಿಯೊಂದೂ ಹೊರಹೊಮ್ಮುವುದು ಬ್ರಹ್ಮನ್ನಿಂದಲೇ. ಆದುದರಿಂದ ವಿಜ್ಞಾನ ಮತ್ತು ತತ್ತ್ವಜ್ಞಾನವೆಂದರೆ ಪ್ರತಿಯೊಂದರ ಅಂತಿಮ ಕಾರಣವನ್ನು ಕಂಡುಹಿಡಿಯುವುದು ಎಂದು ಅರ್ಥ. ಅದನ್ನು ನಾವು ವೈದಿಕ ಸಾಹಿತ್ಯದಿಂದಲೇ ಪಡೆಯುತ್ತಿದ್ದೇವೆ, ಸರ್ವ ಕಾರಣ ಕಾರಣಂ, ಕೃಷ್ಣನೇ ಸರ್ವ ಕಾರಣಗಳಿಗೆ ಕಾರಣ.
ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಉದಾಹರಣಗೆ, ನಾನು ನನ್ನ ತಂದೆಯಿಂದ, ನನ್ನ ತಂದೆ ಅವರ ತಂದೆಯಿಂದ ಕಾರಣರಾದವರು. ಈ ರೀತಿ ನೀವು ಹುಡುಕುತ್ತಾ ಹೋದರೆ, ಅಂತಿಮವಾಗಿ ನೀವು ಕಾರಣವೇ ಇಲ್ಲದ ಕಾರಣನ ಬಳಿಗೆ ಬರುತ್ತೀರ. ಅನಾದಿರ್ ಆದಿರ್ ಗೋವಿಂದಃ. ಕಾರಣವಿಲ್ಲದ ಕಾರಣನೆಂದರೆ ಗೋವಿಂದ – ಕೃಷ್ಣ. ನಾನು ನನ್ನ ಮಗನಿಗೆ ಕಾರಣನಾಗಿರಬಹುದು, ಆದರೆ ಅದೇ ವೇಳೆ ನಾನು ಮತ್ತೊಂದು ಕಾರಣದ ಫಲ (ನನ್ನ ತಂದೆ). ಆದರೆ ಕೃಷ್ಣನೇ ಮೂಲ ಪುರುಷ, ಅವನಿಗೆ ಕಾರಣವಿಲ್ಲ ಎಂದು ವೈದಿಕ ಸಾಹಿತ್ಯಗಳು ಹೇಳುತ್ತವೆ. ಅದು ಕೃಷ್ಣ.
ಆದುದರಿಂದ ಕೃಷ್ಣನು ಹೇಳುತ್ತಾನೆ, “ನನ್ನ ಅವತಾರ ಮತ್ತು ಲೀಲೆಗಳ ಅಲೌಕಿಕ ಲಕ್ಷಣಗಳನ್ನು ಅರಿಯಲು ಪ್ರಯತ್ನಿಸಿ.” ಕೃಷ್ಣನ ಆವಿರ್ಭಾವವು ಅತ್ಯಂತ ಪ್ರಾಮುಖ್ಯವಾದುದು. ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವನು ಏಕೆ ಅವತರಿಸಿದ? ಅವನು ಏಕೆ ಈ ಭೌತಿಕ ಲೋಕಕ್ಕೆ ಬಂದ? ಅವನ ವ್ಯವಹಾರವೇನು? ಅವನ ಚಟುವಟಿಕೆಗಳೇನು? ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ ಏನು ಫಲ? ಫಲವೆಂದರೆ, ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋರ್ಜುನ : ನಮಗೆ ಅಮರತ್ವ ಲಭಿಸುತ್ತದೆ. ಬದುಕಿನ ಧ್ಯೇಯವೆಂದರೆ, ಅಮರತ್ವವನ್ನು ಪಡೆಯುವುದು. ಆದುದರಿಂದ ಕೃಷ್ಣನು ಆವಿರ್ಭವಿಸಿದ ದಿನವಾದ ಇಂದು ನಾವು ಕೃಷ್ಣನ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ಸನ್ಮಾನ್ಯ ರಾಯಭಾರಿಯವರು ಶಾಂತಿಯನ್ನು ಕುರಿತು ಮಾತನಾಡುತ್ತಿದ್ದರು. ಕೃಷ್ಣನು ನುಡಿದ ಭಗವದ್ಗೀತೆಯಲ್ಲಿಯೇ ಶಾಂತಿ ಸೂತ್ರವಿದೆ. ಏನದು?
ಭೋಕ್ತಾರಂ ಯಜ್ಞತಪಸಾಂ ಸರ್ವಲೋಕ ಮಹೇಶ್ವರಂ ।
ಸುಹೃದಂ ಸರ್ವಭೂತಾನಾಂ ಜ್ಞಾತ್ವಾ ಮಾಂ ಶಾಂತಿಮೃಚ್ಛತಿ ।।
“ನನ್ನ ವಿಷಯವಾಗಿ ಸಂಪೂರ್ಣ ಪ್ರಜ್ಞೆಯನ್ನಿಟ್ಟುಕೊಂಡು ಎಲ್ಲ ಯಜ್ಞಗಳ ಮತ್ತು ತಪಸ್ಸುಗಳ ಕಟ್ಟಕಡೆಯ ಭೋಕ್ತೃ ನಾನೇ, ಎಲ್ಲ ಲೋಕಗಳ ಮತ್ತು ದೇವತೆಗಳ ಪರಮ ಪ್ರಭು ನಾನೇ ಮತ್ತು ಎಲ್ಲ ಜೀವಿಗಳ ಉಪಕಾರಿಯೂ, ಹಿತೈಷಿಯೂ ನಾನೇ ಎಂದು ಅರಿತ ಮನುಷ್ಯನು ಐಹಿಕ ದುಃಖಗಳ ಯಾತನೆಯಿಂದ ಮುಕ್ತನಾಗಿ ಶಾಂತಿಯನ್ನು ಪಡೆಯುವನು.” (ಭಗವದ್ಗೀತೆ 5.29)
ರಾಜಕಾರಣಿಗಳು ಮತ್ತು ರಾಜತಾಂತ್ರಿಕರು ವಿಶ್ವದಲ್ಲಿ ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿ ವಿಶ್ವಸಂಸ್ಥೆ ಮತ್ತು ಇತರ ಅನೇಕ ಸಂಸ್ಥೆಗಳಿವೆ. ನಿಜವಾದ ಶಾಂತಿ ಮತ್ತು ನೆಮ್ಮದಿ ಸ್ಥಾಪನೆಗೆ, ಮನುಷ್ಯ ಮನುಷ್ಯರು ಮತ್ತು ರಾಷ್ಟ್ರ ರಾಷ್ಟ್ರಗಳ ಮಧ್ಯೆ ತಪ್ಪು ಅರಿವನ್ನು, ಗ್ರಹಿಕೆಯನ್ನು ಹೋಗಲಾಡಿಸಲು ಅವರು ಕಾರ್ಯೋನ್ಮುಖರಾಗಿದ್ದಾರೆ. ಆದರೆ ಅದು ಆಗುತ್ತಿಲ್ಲ. ದೋಷ, ಲೋಪ ಎಲ್ಲಿದೆ ಎಂದರೆ ಮೂಲ, ಬೇರಿನಲ್ಲಿಯೇ ತಪ್ಪಿದೆ. ಪ್ರತಿಯೊಬ್ಬರೂ “ಇದು ನನ್ನ ದೇಶ”, “ಇದು ನನ್ನ ಕುಟುಂಬ”, “ಇದು ನನ್ನ ಸಮಾಜ”, “ಇದು ನನ್ನ ಆಸ್ತಿ” ಎಂದು ಯೋಚಿಸುತ್ತಿದ್ದಾರೆ. ಇದು “ನನ್ನ” ಭ್ರಮೆ. ವೈದಿಕ ಸಾಹಿತ್ಯದಲ್ಲಿ ಹೇಳಿದೆ, ಜನಸ್ಯ ಮೋಹೋಯಂ ಅಹಂ ಮಮೇತಿ : (ಭಾಗವತ 5.5.8) ಈ “ನಾನು ಮತ್ತು ನಮ್ಮ” ತತ್ತ್ವವು ಮಾಯೆ, ಭ್ರಮೆ.
ಆದುದರಿಂದ ಈ ಮಾಯೆ, ಭ್ರಮೆಯಿಂದ ನಿಮಗೆ ಹೊರಬರಬೇಕೆನ್ನಿಸಿದರೆ, ನೀವು ಕೃಷ್ಣನ ಶಾಂತಿ ಸೂತ್ರವನ್ನು ಒಪ್ಪಿಕೊಳ್ಳಬೇಕು. ಮಾಂ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ ತೇ : (ಭಗವದ್ಗೀತೆ 7.14) ಕೃಷ್ಣನಿಗೆ ಶರಣಾಗತರಾದವರು ಎಲ್ಲ ಭ್ರಮೆ, ಮಾಯೆಯನ್ನು ಮೀರಬಲ್ಲರು. ಭಗವದ್ಗೀತೆಯಲ್ಲಿ ನಮ್ಮ ಮಾರ್ಗದರ್ಶನಕ್ಕಾಗಿ ಎಲ್ಲವೂ ಇದೆ. ಭಗವದ್ಗೀತೆ, ಯಥಾ ರೂಪದಲ್ಲಿನ ತತ್ತ್ವವನ್ನು ನಾವು ಸ್ವೀಕರಿಸಿದರೆ, ಅಲ್ಲಿ ಎಲ್ಲವೂ ಇದೆ. ಅಲ್ಲಿ ಶಾಂತಿ ಇದೆ, ಅಲ್ಲಿ ಅಭ್ಯುದಯವಿದೆ, ಪ್ರಗತಿ ಇದೆ.
ದುರದೃಷ್ಟವಶಾತ್ ನಾವು ಅದನ್ನು ಸ್ವೀಕರಿಸುವುದಿಲ್ಲ ಅಥವಾ ತಪ್ಪಾಗಿ ವ್ಯಾಖ್ಯಾನಿಸುತ್ತೇವೆ. ಇದು ನಮ್ಮ ದುರದೃಷ್ಟ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ (9.34) ಮನ್ ಮನಾ ಭವ ಮದ್ ಭಕ್ತೋ ಮದ್ ಯಾಜೀ ಮಾಂ ನಮಸ್ಕುರು, “ಸದಾ ನನ್ನನ್ನು ಕುರಿತು ಚಿಂತಿಸುವುದರಲ್ಲಿ ಮನಸ್ಸನ್ನು ತೊಡಗಿಸು, ನನ್ನ ಭಕ್ತನಾಗು, ನನಗೆ ನಮಸ್ಕಾರ ಮಾಡು ಮತ್ತು ನನ್ನನ್ನು ಪೂಜಿಸು.” ಇದೇನು ಅಷ್ಟು ಕಷ್ಟವಾದ ಕೆಲಸವೇ? ಇಲ್ಲಿ ಕೃಷ್ಣನ ವಿಗ್ರಹವಿದೆ. ಈ ವಿಗ್ರಹವನ್ನು ಕುರಿತು ಯೋಚಿಸುವುದು ಕಷ್ಟವೇ? ನೀವು ಮಂದಿರಕ್ಕೆ ಬನ್ನಿ, ಭಕ್ತನು ಮಾಡುವಂತೆ ನೀವು ದೇವರಿಗೆ ನಿಮ್ಮ ಗೌರವ ಸಲ್ಲಿಸಿ. ಸಾಧ್ಯವಾದಷ್ಟೂ ದೇವರನ್ನು ಪೂಜಿಸಲು ಪ್ರಯತ್ನಿಸಿ. ಕೃಷ್ಣನಿಗೆ ನಿಮ್ಮ ಆಸ್ತಿ ಬೇಕಾಗಿಲ್ಲ. ಕೃಷ್ಣನು ಅತ್ಯಂತ ಬಡವನ ಪೂಜೆಯನ್ನು ಸ್ವೀಕರಿಸಲೂ ತನ್ನನ್ನು ತೆರೆದುಕೊಂಡಿದ್ದಾನೆ.
ಅವನು ಏನು ಕೇಳುತ್ತಿದ್ದಾನೆ? ಅವನು ಹೇಳುತ್ತಾನೆ, ಪತ್ರಂ, ಪುಷ್ಪಂ, ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ, “ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಯಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸ್ವೀಕರಿಸುತ್ತೇನೆ.” (ಭಗವದ್ಗೀತೆ 9.26)
ಕೃಷ್ಣನಿಗೆ ಹಸಿವಿಲ್ಲ, ಆದರೆ, ನಿಮ್ಮನ್ನು ಭಕ್ತನನ್ನಾಗಿ ಮಾಡುವುದು ಕೃಷ್ಣನ ಉದ್ದೇಶ. ಅದೇ ಮುಖ್ಯವಾದ ವಿಷಯ. ಯೋ ಮೇ ಭಕ್ತ್ಯಾ ಪ್ರಯಚ್ಛತಿ, “ಭಕ್ತಿಯಿಂದ ನನಗೆ ಏನಾದರೂ ಅರ್ಪಿಸಿ.” ಅದೇ ಮುಖ್ಯವಾದ ತತ್ತ್ವ. ಕೃಷ್ಣನಿಗೆ ಏನಾದರೂ ಚಿಕ್ಕದನ್ನು ನೀಡಿ. ಕೃಷ್ಣನು ಹಸಿದಿಲ್ಲ. ಕೃಷ್ಣನು ಎಲ್ಲರಿಗೂ ಆಹಾರವನ್ನು ನೀಡುತ್ತಿದ್ದಾನೆ. ಆದರೆ ಕೃಷ್ಣನಿಗೆ ನಿಮ್ಮ ಭಕ್ತಿ, ಪ್ರೀತಿ ಬೇಕು. ಅವನು ಸ್ವಲ್ಪ ನೀರು ಅಥವಾ ಹಣ್ಣು ಅಥವಾ ಒಂದು ಹೂವನ್ನು ಬೇಡುತ್ತಿದ್ದಾನೆ. ಈ ರೀತಿಯಲ್ಲಿ ಮನ್ ಮನಾ ಭವ ಮದ್ ಭಕ್ತ, ನೀವು ಕೃಷ್ಣನನ್ನು ಕುರಿತು ಯೋಚಿಸಿ ಮತ್ತು ಅವನ ಭಕ್ತನಾಗಿ.
ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಮತ್ತು ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುವುದು ಕಷ್ಟವಲ್ಲ. ಆದರೆ ನಾವು ಅದನ್ನು ಮಾಡುವುದಿಲ್ಲ. ಅದೇ ನಮ್ಮ ರೋಗ. ಇಲ್ಲವಾದರೆ ಅದು ಕಷ್ಟವಾದುದೇ ಅಲ್ಲ. ನಾವು ಕೃಷ್ಣನ ಭಕ್ತರಾದ ಕೂಡಲೇ ನಾವು ಇಡೀ ವಿಶ್ವದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇವೆ.
ನಮ್ಮ ಭಾಗವತ ತತ್ತ್ವ, ನಮ್ಮ ದೈವಪ್ರಜ್ಞೆ ತತ್ತ್ವ ಕೂಡ ಒಂದು ರೀತಿಯಲ್ಲಿ ಆಧ್ಯಾತ್ಮಿಕ ಕಮ್ಯುನಿಸಂ (ಸಮತಾವಾದ). ಏಕೆಂದರೆ, ನಾವು ಕೃಷ್ಣನನ್ನು ಪರಮ ಪಿತ ಎಂದು ಪರಿಗಣಿಸುತ್ತೇವೆ ಮತ್ತು ಎಲ್ಲ ಜೀವಿಗಳನ್ನು ಕೃಷ್ಣನ ಮಕ್ಕಳೆಂದು ಭಾವಿಸುತ್ತೇವೆ. ಕೃಷ್ಣನು ಹೇಳುತ್ತಾನೆ, ಸರ್ವ ಲೋಕ ಮಹೇಶ್ವರಂ (ಭಗವದ್ಗೀತೆ 5.29), ಅವನು ಎಲ್ಲ ಲೋಕಗಳ ಮಾಲೀಕ.
ಆದುದರಿಂದ ಆಕಾಶ, ಭೂಮಿ ಅಥವಾ ಜಲದಲ್ಲಿ ಏನೇನಿದೆಯೋ ಅವುಗಳೆಲ್ಲಾ ಕೃಷ್ಣನ ಆಸ್ತಿ. ನಾವೆಲ್ಲರೂ ಕೃಷ್ಣನ ಮಕ್ಕಳಾಗಿರುವುದರಿಂದ ನಮ್ಮಲ್ಲಿ ಎಲ್ಲರಿಗೂ ನಮ್ಮ ತಂದೆಯ ಆಸ್ತಿಯನ್ನು ಉಪಯೋಗಿಸುವ ಹಕ್ಕು ಇದೆ. ಆದರೆ ನಾವು ಇತರರ (ಆಸ್ತಿ) ಮೇಲೆ ಅತಿಕ್ರಮಿಸಬಾರದು. ಅದೇ ಶಾಂತಿ ಸೂತ್ರ. ಈಶಾವಾಸ್ಯಂ ಇದಂ ಸರ್ವಂ… ಮಾ ಗೃಧಃ ಕಸ್ಯಸ್ವಿದ್ ಧನಂ, “ಈ ಜಗತ್ತಿನಲ್ಲಿರುವ ಪ್ರತಿಯೊಂದು ಚರಾಚರವಸ್ತುವೂ ಭಗವಂತನ ನಿಯಂತ್ರಣದಲ್ಲಿದೆ. ಅವನೇ ಅವುಗಳ ಒಡೆಯ. ಆದ್ದರಿಂದ ಪ್ರತಿಯೊಬ್ಬನೂ ತನಗೆ ಅವಶ್ಯವಾದ ವಸ್ತುಗಳನ್ನು ಮಾತ್ರ ಸ್ವೀಕರಿಸಬೇಕು, ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸ್ವೀಕರಿಸಬಾರದು. ಅದು ಶಿಕ್ಷಾರ್ಹ.” ಅಗತ್ಯಕ್ಕಿಂತ ಹೆಚ್ಚು ಸ್ವೀಕರಿಸಿದರೆ, ಅವನು ಚೋರ.
ಯಜ್ಞಾರ್ಥಾತ್ ಕರ್ಮಣಃ ಅನ್ಯತ್ರ ಲೋಕಃ ಅಯಂ ಕರ್ಮಬಂಧನಃ, “ನಾವು ಏನೇ ಮಾಡಿದರೂ ಅದನ್ನು ಕೃಷ್ಣನ ತೃಪ್ತಿಗಾಗಿ ಮಾಡಬೇಕು. ನಾವು ಕೃಷ್ಣನಿಗಾಗಿ ನಿಯತ ಕರ್ತವ್ಯಗಳನ್ನು, ಎಲ್ಲವನ್ನೂ ಕೃಷ್ಣನಿಗಾಗಿ ಮಾಡಬೇಕು.” (ಭಗವದ್ಗೀತೆ 3.9)
ಅದನ್ನೇ ನಾವು ಇಲ್ಲಿ ಬೋಧಿಸುತ್ತಿರುವುದು. ಈ ಮಂದಿರದಲ್ಲಿ ನಾವೆಲ್ಲರೂ ಸಂತೋಷದಿಂದ ವಾಸಿಸುತ್ತಿದ್ದೇವೆ. ಅಮೆರಿಕನ್ನರು, ಭಾರತೀಯರು, ಆಂಗ್ಲರು, ಕೆನೆಡಿಯನ್ನರು, ಆಫ್ರಿಕನ್ನರು, ಹೀಗೆ ಜಗತ್ತಿನ ಎಲ್ಲ ಭಾಗದ ಜನರು ಇಲ್ಲಿ ಆನಂದಿಂದ ವಾಸಿಸುತ್ತಿದ್ದೇವೆ. ನಿಮಗೆ ಅದು ಗೊತ್ತು. ಅದು ಈ ಮಂದಿರದಲ್ಲಿ ಮಾತ್ರವಲ್ಲ, ಕೃಷ್ಣಪ್ರಜ್ಞೆ ಉಳ್ಳ ಜನರಿರುವ ಜಗತ್ತಿನಾದ್ಯಂತ ಹಾಗೇ ಇದೆ. ಈ ಪಾಠವನ್ನು ಬೋಧಿಸಲು ಕೃಷ್ಣನು ಆವಿರ್ಭವಿಸುತ್ತಾನೆ.
ಕೃಷ್ಣನು ಪರಮ ಪಿತ, ಕೃಷ್ಣನು ಪರಮ ಮಾಲೀಕ, ಕೃಷ್ಣನು ಪರಮ ಭೋಕ್ತೃ ಮತ್ತು ಕೃಷ್ಣನು ಎಲ್ಲರಿಗೂ ಪರಮ ಮಿತ್ರ ಎನ್ನುವ ಈ ತತ್ತ್ವವನ್ನು ನಾವು ಮರೆತರೆ, ನಾವು ಈ ಭೌತಿಕ ಲೋಕಕ್ಕೆ ಬರುತ್ತೇವೆ ಮತ್ತು ಅಸ್ತಿತ್ವಕ್ಕಾಗಿ ಹೋರಾಡುತ್ತೇವೆ ಮತ್ತು ಪರಸ್ಪರ ಕಾದಾಡುತ್ತೇವೆ. ಅದು ಲೌಕಿಕ ಜೀವನ.
ನಮ್ಮ ರಾಜಕಾರಣಿಗಳು, ರಾಜತಾಂತ್ರಿಕರು, ತತ್ತ್ವಜ್ಞಾನಿಗಳ ಮೂಲಕ ನಮಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಅವರು ಎಷ್ಟೊಂದು ಪ್ರಯತ್ನಿಸಿದ್ದಾರೆ, ಆದರೆ ವಾಸ್ತವವಾಗಿ ಅವು ಫಲಪ್ರದವಾಗಿಲ್ಲ. ವಿಶ್ವ ಸಂಸ್ಥೆಯನ್ನೇ ತೆಗೆದುಕೊಳ್ಳಿ. ಎರಡನೆಯ ಮಹಾ ಯುದ್ಧದ ಅನಂತರ ಅದನ್ನು ಸಂಘಟಿಸಲಾಯಿತು. “ಈಗ ನಾವು ಎಲ್ಲವನ್ನೂ ಶಾಂತಿಯುತವಾಗಿ ಇತ್ಯರ್ಥಮಾಡುತ್ತೇವೆ” ಎಂದು ಅವರು ಬಯಸಿದರು. ಆದರೆ ಅಂತಹುದೇನೂ ಇಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ಅಥವಾ ಅಮೆರಿಕ ಮತ್ತು ವಿಯೆಟ್ನಾಂ ಮಧ್ಯೆ ಅಥವಾ ಮತ್ತಿತರರ ನಡುವೆ ಹೋರಾಟ ನಡೆಯುತ್ತಲೇ ಇದೆ. ಲೌಕಿಕ ರಾಜಕೀಯ ಮತ್ತು ರಾಜತಾಂತ್ರಿಕತೆ – ಇದು ವಿಧಾನವಲ್ಲ. ಕೃಷ್ಣಪ್ರಜ್ಞೆಯೇ ವಿಧಾನ.
ನಾವು ಮಾಲೀಕರಲ್ಲ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಕೃಷ್ಣನೇ ನಿಜವಾದ ಮಾಲೀಕ. ಅದು ವಾಸ್ತವಾಂಶ. ಅಮೆರಿಕವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಇನ್ನೂರು ವರ್ಷಗಳ ಹಿಂದೆ ಎಂದುಕೊಳ್ಳಿ, ಯೂರೋಪಿನ ವಲಸಿಗರು ಮಾಲೀಕರಾಗಿರಲಿಲ್ಲ. ಬೇರೆ ಯಾರೋ ಮಾಲೀಕರಾಗಿದ್ದರು. ಅಥವಾ ಖಾಲಿ ಜಾಗವಾಗಿತ್ತು. ಆದರೆ ನಿಜವಾದ ಮಾಲೀಕ ಕೃಷ್ಣ. ಕೃತಕವಾಗಿ ನಾವು “ಇದು ನನ್ನ ಆಸ್ತಿ” ಎಂದು ಹೇಳಿಕೊಳ್ಳುತ್ತೇವೆ. ಇದನ್ನು ಮಾಯೆ, ಭ್ರಮೆ ಎಂದು ಕರೆಯುತ್ತಾರೆ. ಆದುದರಿಂದ ಕೃಷ್ಣನು ಈ ಪಾಠವನ್ನು ಬೋಧಿಸಲು ಆವಿರ್ಭವಿಸುತ್ತಾನೆ. ಕೃಷ್ಣನು ಹೇಳುತ್ತಾನೆ, ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, “ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸ್ವಯಂ ಅವತಾರ ಮಾಡುತ್ತೇನೆ.” (ಭಗವದ್ಗೀತೆ 4.7)
ಹಾಗಾದರೆ, ನಿಜವಾದ ಧರ್ಮ, ನಿಜವಾದ ಧಾರ್ಮಿಕ ಜೀವನ ಯಾವುದು? ಧರ್ಮದ ಅತ್ಯಂತ ಸರಳ ನಿರೂಪಣೆ, ಧರ್ಮಮ್ ತು ಸಾಕ್ಷಾದ್ ಭಾಗವತ ಪ್ರಣೀತಂ, “ನೈಜ ಧರ್ಮತತ್ತ್ವಗಳನ್ನು ದೇವೋತ್ತಮ ಪರಮ ಪುರುಷನು ವಿಧಿಸಿದ್ದಾನೆ.” (ಭಾಗವತ 6.3.19)
ಉದಾಹರಣೆಗೆ, “ನಾಗರಿಕ ಕಾನೂನು ಎಂದರೇನು?” ನಾಗರಿಕ ಕಾನೂನು ಎಂದರೆ ಸರ್ಕಾರವು ನೀಡುವ ಆದೇಶ, ನಿರ್ದೇಶನ. ನೀವು ಮನೆಯಲ್ಲಿ ನಾಗರಿಕ ಕಾನೂನು ಮಾಡುವುದು ಸಾಧ್ಯವಿಲ್ಲ. “ನೀವು ಹೀಗೇ ಮಾಡಬೇಕು” ಎಂದು ಸರ್ಕಾರವು ನಿಮಗೆ ನೀಡುವ ನಿರ್ದೇಶನ ಕಾನೂನು. ಅದೇ ರೀತಿ, ಧಾರ್ಮಿಕ ಜೀವನವೆಂದರೆ, ದೇವರು ನೀಡಿರುವ ನಿರ್ದೇಶನ. ಅದು ಧರ್ಮ. ಬಹಳ ಸರಳ ನಿರೂಪಣೆ. ನೀವು ಯಾವುದೋ ಧರ್ಮವನ್ನು ಸೃಷ್ಟಿಸಿದರೆ ಅಥವಾ ನಾನು ಯಾವುದೋ ಧರ್ಮವನ್ನು ರೂಪಿಸಿದರೆ ಅಥವಾ ಮತ್ತೊಬ್ಬನು ಮತ್ತೊಂದು ಧರ್ಮವನ್ನು ರೂಪಿಸಿದರೆ, ಅವುಗಳೆಲ್ಲ ಧರ್ಮವಲ್ಲ.
ಆದುದರಿಂದ ಕೃಷ್ಣನು ಸರ್ವ ಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ಎಂದು ಹೇಳುತ್ತಾ ಭಗವದ್ಗೀತಗೆ ಮಂಗಳ ಹಾಡುತ್ತಾನೆ. ಅಂದರೆ, “ಎಲ್ಲ ಧಮಗಳನ್ನೂ ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ. ಹೆದರಿಕೊಳ್ಳಬೇಡ.” (ಭಗವದ್ಗೀತೆ 18.66) .
ಕೃಷ್ಣನಿಗೆ ಶರಣಾಗತನಾಗುವುದು ಧರ್ಮ. ಬೇರೆ ಯಾವುದೇ “ಧರ್ಮ”ವು ಧರ್ಮವಲ್ಲ. ಇಲ್ಲವಾದರೆ ಕೃಷ್ಣನೇಕೆ ಸರ್ವ ಧರ್ಮಾನ್ ಪರಿತ್ಯಜ್ಯ, “ಎಲ್ಲವನ್ನೂ ಬಿಡಿ” ಎಂದು ಹೇಳುತ್ತಾನೆ? ಅವನು ಅದಾಗಲೇ ಹೇಳಿದ್ದಾನೆ, “ಪ್ರತಿಯೊಂದು ಯುಗದಲ್ಲಿಯೂ ನಾನು ಧರ್ಮ ತತ್ತ್ವಗಳನ್ನು ಸ್ಥಾಪಿಸಲು ಆವಿರ್ಭವಿಸುತ್ತೇನೆ”. ನಾವು ತಯಾರಿಸಿರುವ ಧಾರ್ಮಿಕ ತತ್ತ್ವಗಳನ್ನು ತ್ಯಜಿಸಬೇಕು ಎಂದು ಕೊನೆಗೆ ಹೇಳುತ್ತಾನೆ. ಈ ಮಾನವ ರೂಪಿತ ತತ್ತ್ವಗಳು ವಾಸ್ತವವಾಗಿ ಧಾರ್ಮಿಕ ತತ್ತ್ವಗಳಲ್ಲ. ನಿಜವಾದ ಧರ್ಮ, ನಿಜವಾದ ಧಾರ್ಮಿಕ ಜೀವನ ಎಂದರೆ ದೇವರು ನೀಡಿರುವುದು ಎಂದು ಅರ್ಥ.
ಅದರೆ ನಮಗೆ ದೇವರು ಏನು ಮತ್ತು ಅವನ ನಿರ್ದೇಶನ ಏನು ಎನ್ನುವುದರ ತಿಳಿವಳಿಕೆ ಇಲ್ಲ. ಅದು ಆಧುನಿಕ ನಾಗರೀಕತೆಯ ನ್ಯೂನತೆ. ಆದರೆ ಆದೇಶವಿದೆ, ದೇವರಿದ್ದಾನೆ . ನಾವು ಮಾತ್ರ ಸ್ವೀಕರಿಸುತ್ತಿಲ್ಲ. ಹಾಗಾದರೆ ಶಾಂತಿಯ ಸಾಧ್ಯತೆ ಎಲ್ಲಿದೆ? ಎಲ್ಲವೂ ಇದೆ, ಸಿದ್ಧಪಡಿಸಿದ್ದು. ಆದರೆ ನಾವು ಸ್ವೀಕರಿಸುವುದಿಲ್ಲ. ಹಾಗಾದರೆ ನಮ್ಮ ರೋಗಕ್ಕೆ ಮದ್ದೆಲ್ಲಿದೆ? ನಾವು ಶಾಂತಿ, ನೆಮ್ಮದಿಯನ್ನು ಅರಸುತ್ತಿದ್ದೇವೆ. ಆದರೆ ನಿಜವಾಗಿಯೂ ನಮಗೆ ನೆಮ್ಮದಿ ನೀಡುವುದನ್ನು ನಾವು ಸ್ವೀಕರಿಸುತ್ತಿಲ್ಲ. ಅದು ನಮ್ಮ ರೋಗ. ಆದುದರಿಂದ ಕೃಷ್ಣಪ್ರಜ್ಞೆ ಆಂದೋಲನವು ಪ್ರತಿಯೊಬ್ಬರ ಹೃದಯದಲ್ಲಿಯೂ ಸುಪ್ತವಾಗಿರುವ ಕೃಷ್ಣಪ್ರಜ್ಞೆಯನ್ನು ಎಚ್ಚರಿಸಲು ಪ್ರಯತ್ನಿಸುತ್ತಿದೆ.
ಇದನ್ನು ಪರಿಗಣಿಸಿ – ನಾಲ್ಕು ಅಥವಾ ಐದು ವರ್ಷಗಳ ಹಿಂದೆ, ಈ ಯೂರೋಪಿಯನ್ನರು ಮತ್ತು ಅಮೆರಿಕನ್ನರು ಕೃಷ್ಣನ ಹೆಸರನ್ನೇ ಕೇಳಿರಲಿಲ್ಲ. ಈಗ ಅವರು ಕೃಷ್ಣಪ್ರಜ್ಞೆಯನ್ನು ಅದು ಹೇಗೆ ಅಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ?
ಕೃಷ್ಣಪ್ರಜ್ಞೆಯು ಈಗಾಗಲೇ ಎಲ್ಲರ ಹೃದಯದಲ್ಲಿಯೂ ಉಂಟು. ಅದನ್ನು ಜಾಗೃತಗೊಳಿಸಬೇಕಷ್ಟೆ. ಈ ಎಚ್ಚರಿಸುವ ವಿಧಾನವನ್ನು ಚೈತನ್ಯ ಚರಿತಾಮೃತದಲ್ಲಿ ವಿವರಿಸಲಾಗಿದೆ (ಮಧ್ಯ 22.107),
ನಿತ್ಯ ಸಿದ್ಧ ಕೃಷ್ಣಪ್ರೇಮ “ಸಾಧ್ಯ” ಕಭು ನಯ ।
ಶ್ರವಣಾದಿ ಶುದ್ಧ ಚಿತ್ತೇ ಕರಯೇ ಉದಯ ।।
“ಜೀವಿಗಳ ಹೃದಯದಲ್ಲಿ ಕೃಷ್ಣನ ಬಗೆಗೆ ಶುದ್ಧಪ್ರೇಮವು ಶಾಶ್ವತವಾಗಿ ಸ್ಥಾಪಿತವಾಗಿದೆ. ಹೃದಯವು ಶ್ರವಣ, ಕೀರ್ತನೆಗಳಿಂದ ಶುದ್ಧವಾದಾಗ, ಈ ಪ್ರೇಮವು ಸಹಜವಾಗಿ ಉದಯಿಸುತ್ತದೆ.”
ಅಂದರೆ ಕೃಷ್ಣಪ್ರೇಮ, ಕೃಷ್ಣಭಕ್ತಿ ಎಲ್ಲರ ಹೃದಯದಲ್ಲಿಯೂ ಇದೆ. ಆದರೆ ನಾವು ಮರೆತಿದ್ದೇವೆ. ಆದುದರಿಂದ ಈ ಕೃಷ್ಣಪ್ರಜ್ಞೆ ಆಂದೋಲನವು, ಕೃಷ್ಣನನ್ನು ಕುರಿತು ಶ್ರವಣ ಮಾಡಲು ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿ, ಸುಪ್ತವಾಗಿರುವ ಕೃಷ್ಣಪ್ರೇಮವನ್ನು ಎಚ್ಚರಿಸುವುದಾಗಿದೆ. ಇದು ವಿಧಾನ.
ಉದಾಹರಣೆಗೆ, ನೀವು ಮಲಗಿದ್ದಾಗ, ನಾನು “ಏಳು, ಎದ್ದೇಳು, ನೀನು ಕೆಲಸಕ್ಕೆ ಹೋಗಬೇಕು” ಎಂದು ಗಟ್ಟಿಯಾಗಿ ಕರೆಯಬೇಕು. ನೀವು ಮಲಗಿದ್ದಾಗ ಬೇರೆ ಯಾವ ಇಂದ್ರಿಯವೂ ಚಟುವಟಿಕೆಯಿಂದ ಇರುವುದಿಲ್ಲ. ಆದರೆ ಕಿವಿ ಮಾತ್ರ ಪ್ರತಿಕ್ರಿಯಿಸುತ್ತದೆ. ಆದುದರಿಂದ ಈ ಯುಗದಲ್ಲಿ, ಜನರು ಏನನ್ನೂ ಕೇಳಿಸಿಕೊಳ್ಳುವುದಿಲ್ಲ ಎನ್ನುವಷ್ಟು ಪತಿತರಾಗಿರುವಾಗ, ನಾವು ಈ ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸಿದರೆ ಅವರು ಕೃಷ್ಣಪ್ರಜ್ಞೆಗೆ ಎಚ್ಚರಗೊಳ್ಳುತ್ತಾರೆ.
ಇದು ಪ್ರಾಯೋಗಿಕವಾದುದು. ಆದುದರಿಂದ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಬೇಕೆನ್ನುವ ನಿಜವಾದ ಕಾಳಜಿ ನಮಗಿದ್ದರೆ, ನಾವು ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಕುರಿತು ತುಂಬಾ ಗಂಭೀರವಾಗಿರಬೇಕು. ಅದು ನನ್ನ ಮನವಿ. ಕೃಷ್ಣಪ್ರಜ್ಞೆ ಆಂದೋಲನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ.
ಈ ಆಂದೋಲನವು ಬದುಕಿನ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆ, ಜಗತ್ತಿನಲ್ಲಿನ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತದೆ. ಸಾಮಾಜಿಕ, ರಾಜಕೀಯ, ತಾತ್ತ್ವಿಕ, ಧಾರ್ಮಿಕ, ಆರ್ಥಿಕ – ಎಲ್ಲವನ್ನೂ ಕೃಷ್ಣಪ್ರಜ್ಞೆಯಿಂದ ಪರಿಹರಿಸಬಹುದು. ಆದುದರಿಂದ ಸನ್ಮಾನ್ಯ ಹೈಕಮೀಷನರ್ ಅವರಂತಹ ನಾಯಕರಲ್ಲಿ ನಾವು ಮನವಿ ಮಾಡಿಕೊಳ್ಳುವುದೇನೆಂದರೆ, ಈ ಕೃಷ್ಣಪ್ರಜ್ಞೆ ಆಂದೋಲನವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇದು ವೈಜ್ಞಾನಿಕ ಮತ್ತು ಅಧಿಕೃತ. ಇದು ಕಟ್ಟುಕತೆಯಲ್ಲ ಅಥವಾ ಭಾವನಾತ್ಮಕ ಆಂದೋಲನವಲ್ಲ. ಇದು ಅತ್ಯಂತ ವೈಜ್ಞಾನಿಕವಾದ ಆಂದೋಲನ. ಆದುದರಿಂದ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಎಂದು ನಾವು ವಿಶ್ವದ ಎಲ್ಲ ದೇಶಗಳ ಎಲ್ಲ ನಾಯಕರನ್ನೂ ಆಹ್ವಾನಿಸುತ್ತಿದ್ದೇವೆ. ನೀವು ಸಮಚಿತ್ತರಾಗಿದ್ದರೆ, ನೀವು ವಿವೇಚನೆ ಉಳ್ಳವರಾಗಿದ್ದರೆ ಕೃಷ್ಣಪ್ರಜ್ಞೆ ಆಂದೋಲನವು ಇಡೀ ಮಾನವ ಸಮಾಜದ ಒಳಿತಿಗಾಗಿನ ಮಹೋನ್ನತ ಆಂದೋಲವೆಂದು ಅರ್ಥಮಾಡಿಕೊಳ್ಳುವಿರಿ. ಯಾರಾದರೂ ಬರಬಹುದು. ಈ ವಿಷಯವನ್ನು ಕುರಿತು ಚರ್ಚಿಸಲು ನಾವು ಸಿದ್ಧ.
ಅಮರತ್ವವನ್ನು ಪಡೆಯುವುದೇ ಮಾನವ ಜನ್ಮದ ಅಂತಿಮ ಗುರಿ. ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ (ಭಗವದ್ಗೀತೆ 4.9). ಇದು ನಮ್ಮ ಧ್ಯೇಯ, ಆದರೆ ನಾವು ಇದನ್ನು ಮರೆತಿದ್ದೇವೆ. ಇನ್ನು ಹುಟ್ಟು ಇಲ್ಲ, ಇನ್ನು ಸಾವು ಇಲ್ಲ ಎನ್ನುವಂತಹ ಪರಿಪೂರ್ಣ ಜೀವನವನ್ನು ಪಡೆಯಬಹುದು ಎನ್ನುವ ಜ್ಞಾನವಿಲ್ಲದೆ ನಾವು ಕೇವಲ ಬೆಕ್ಕು ಮತ್ತು ನಾಯಿಯ ಬದುಕನ್ನು ಬಾಳುತ್ತಿದ್ದೇವೆ. ಅಮೃತತ್ವದ ಸಾಧ್ಯತೆ ಇದೆ ಎನ್ನುವುದನ್ನೂ ಅರ್ಥಮಾಡಿಕೊಂಡಿಲ್ಲ. ಆದರೆ ಅಮರತ್ವವು ಸಾಧ್ಯ.
ಯಾರಿಗೂ ಸಾಯುವುದು ಇಷ್ಟವಿಲ್ಲ. ಯಾರಿಗೂ ವೃದ್ಧರಾಗುವುದು ಇಷ್ಟವಿಲ್ಲ. ಯಾರಿಗೂ ರೋಗಿಗಳಾಗುವುದು ಬೇಕಾಗಿಲ್ಲ. ಅದು ನಮ್ಮ ಸಹಜ ಆಸೆ, ಒಲವು. ಏಕೆ? ಏಕೆಂದರೆ, ಮೂಲತಃ, ನಮ್ಮ ಆಧ್ಯಾತ್ಮಿಕ ರೂಪದಲ್ಲಿ, ಹುಟ್ಟು ಇಲ್ಲ, ಸಾವು ಇಲ್ಲ, ವೃದ್ಧಾಪ್ಯವಿಲ್ಲ ಮತ್ತು ರೋಗವಿಲ್ಲ. ವಿಕಾಸದ ವಿಧಾನದಲ್ಲಿ ಸಾಗುತ್ತಾ, ಆತ್ಮವು, ಜಲಚರ, ಗಿಡ, ಮರ, ಪಕ್ಷಿಗಳ ಮೂಲಕ ಸಾಗಿ ಮನುಷ್ಯ ಶರೀರ ರೂಪಕ್ಕೆ ಬಂದಿದೆ. ಆದುದರಿಂದ ಬದುಕಿನ ಧ್ಯೇಯ ಏನೆನ್ನುವುದು ನಮಗೆ ತಿಳಿದಿರಬೇಕು. ಬದುಕಿನ ಗುರಿ ಎಂದರೆ ಅಮೃತತ್ವ, ಅಮರರಾಗುವುದು.
ಕೃಷ್ಣಪ್ರಜ್ಞೆ ಹೊಂದುವುದರಿಂದ ನೀವು ಅಮರತ್ವ ಪಡೆಯಬಹುದು. ಕೃಷ್ಣನು ಅದನ್ನು ಹೇಳುತ್ತಾನೆ. ಅದು ನಿಜ. ನಾವು ಅರ್ಥಮಾಡಿಕೊಳ್ಳಬೇಕಷ್ಟೆ. ಜನ್ಮ ಕರ್ಮ ಚ ಮೇ ದಿವ್ಯಮೇವಂ ಯೋ ವೇತ್ತಿ ತತ್ತ್ವತಃ (ಭಗವದ್ಗೀತೆ 4.9) . ನೀವು ನಿಜವಾಗಿಯೂ ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಆಗ ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ, ಈ ಶರೀರವನ್ನು ತ್ಯಜಿಸಿದ ಮೇಲೆ, ನೀವು ಇನ್ನು ಲೌಕಿಕ ದೇಹವನ್ನು ಸ್ವೀಕರಿಸಬೇಕಾಗಿಲ್ಲ. ಯಾವುದೇ ಲೌಕಿಕ ಶರೀರವನ್ನು ನೀವು ಸ್ವೀಕರಿಸದಿದ್ದರೆ, ನೀವು ಅಮರರಾದಿರಿ ಎಂದು ಅರ್ಥ. ವಿಷಯ ಏನೆಂದರೆ, ಸ್ವಾಭಾವಿಕವಾಗಿ ನಾವು ಅಮರರು. ಇದನ್ನು ಬೋಧಿಸಲು ಕೃಷ್ಣನು ಇಲ್ಲಿಗೆ ಬರುತ್ತಾನೆ.
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।
ಮನಃಷಷ್ಠಾನೀನಿಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ।।
“ಸ್ವಾಭಾವಿಕವಾಗಿ ನೀವು ಅಮರರು. ಆಧ್ಯಾತ್ಮಿಕ ಆತ್ಮವಾಗಿ ನೀವು ನನ್ನ ಅವಿಭಾಜ್ಯ ಅಂಗಗಳು. ನಾನು ಅಮರ, ನೀವೂ ಕೂಡ ಅಮರರು. ಅನಗತ್ಯವಾಗಿ ನೀವು ಈ ಲೌಕಿಕ ಲೋಕದಲ್ಲಿ ಸುಖವಾಗಿರಲು, ಸಂತೋಷವಾಗಿರಲು ಪ್ರಯತ್ನಿಸುತ್ತಿರುವಿರಿ.”(ಭಗವದ್ಗೀತೆ 15.7)
ಬೆಕ್ಕು, ನಾಯಿ, ದೇವತೆ, ಮರ, ಗಿಡ, ಕೀಟಗಳಾಗಿ ಅನೇಕ ದೇಹಗಳ ಮೂಲಕ ನೀವು ಇಂದ್ರಿಯಾತ್ಮಕ ಬದುಕಿನಲ್ಲಿ ಸುಖ ಕಂಡುಕೊಳ್ಳಲು ಪ್ರಯತ್ನಿಸಿರುವಿರಿ. ಈಗ ನಿಮಗೆ ಉನ್ನತ ಬುದ್ಧಿಯ ಮಾನವ ದೇಹ ಲಭಿಸಿದೆ. ಆದುದರಿಂದ ಇಂದ್ರಿಯ ಸುಖದ ಬದುಕಿಗೆ ಆಕರ್ಷಿತರಾಗಬೇಡಿ. ಕೃಷ್ಣನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅದು ವೈದಿಕಸಾಹಿತ್ಯಗಳ ತೀರ್ಪು.
ನಾಯಂ ದೇಹೋ ದೇಹಭಾಜಾಂ ನೃಲೋಕೇ ಕಷ್ಟಾನ್ ಕಾಮಾನ್ ಅರ್ಹತೆ ವಿಡ್ ಭುಜಾಂ ಯೇ (ಭಾಗವತ 5.5.1)
“ಈ ಜಗತ್ತಿನಲ್ಲಿ ಲೌಕಿಕ ದೇಹ ಪಡೆದ ಜೀವಿಗಳಲ್ಲಿ ಈ ಮಾನವ ದೇಹವನ್ನು ಪಡೆದವನು ಹಂದಿ ನಾಯಿಗಳಿಗೂ ಕೂಡ ಲಭ್ಯವಾದ ಕೇವಲ ಇಂದ್ರಿಯ ತುಷ್ಟಿಗಾಗಿ ಹಗಲಿರಳೂ ಶ್ರಮಿಸಕೂಡದು. ವ್ಯಕ್ತಿಯು ಭಕ್ತಿಸೇವೆಯ ದಿವ್ಯಸ್ಥಾನವನ್ನು ಹೊಂದಲು ವ್ರತ ತಪಸ್ಸುಗಳಲ್ಲಿ ತೊಡಗಬೇಕು. ಅಂತಹ ಕ್ರಿಯೆಗಳಿಂದ ಅವನ ಹೃದಯವು ಶುದ್ಧವಾಗುತ್ತದೆ. ಮತ್ತು ಈ ಸ್ಥಾನಕ್ಕೇರಿದಾಗ ಅವನು ಲೌಕಿಕ ಸುಖಕ್ಕೆ ಅತೀತವಾದ ಮತ್ತು ನಿರಂತರವಾದ, ಶಾಶ್ವತವಾದ ಆನಂದಮಯ ಜೀವನವನ್ನು ಹೊಂದುತ್ತಾನೆ.”
ಆದುದರಿಂದ ನಾಯಿ ಮತ್ತು ಹಂದಿಗಳಂತೆ ಇಂದ್ರಿಯ ಸುಖಕ್ಕಾಗಿ ಶ್ರಮಿಸುವುದು ಮಾನವ ಜನ್ಮಕ್ಕೆ ಸರಿಯಲ್ಲ. ತಪೋ ದಿವ್ಯಂ ಪುತ್ರಕಾ ಯೇನ ಸತ್ವಂ ಶುದ್ಧ್ಯೇ ತ್. ನಾವು ನಮ್ಮ ಅಸ್ತಿತ್ವವನ್ನು ಶುದ್ಧೀಕರಿಸಿಕೊಳ್ಳಬೇಕು. ಅದು ಮಾನವ ಜನ್ಮದ ಧ್ಯೇಯ. ನಾವು ನಮ್ಮ ಅಸ್ತಿತ್ವನ್ನು ಏಕೆ ಶುದ್ಧೀಕರಿಸಿಕೊಳ್ಳಬೇಕು? ಬ್ರಹ್ಮ ಸೌಖ್ಯಂ ತ್ವ ಅನಂತಂ, ಏಕೆಂದರೆ ಆಗ ನಮಗೆ ಆಧ್ಯಾತ್ಮಿಕ ಸಾಕ್ಷಾತ್ಕಾರ, ಅಸೀಮಿತ ಆನಂದ, ಮತ್ತು ಸುಖ ಸಿಗುತ್ತದೆ. ಅದು ನಿಜವಾದ ಆನಂದ, ಸುಖ :
ರಮನ್ತೇ ಯೋಗಿನೋನನ್ತೇ ಸತ್ಯಾನಂದೇ ಚಿದ್ ಆತ್ಮನಿ ।
ಇತಿ ರಾಮ ಪದೇನಾಸೌ ಪರಂ ಬ್ರಹ್ಮಾಭಿಧೀಯತೇ ।।
(ಚೈತನ್ಯ ಚರಿತಾಮೃತ ಮಧ್ಯ 9.29)
“ಪರಮ ಸತ್ಯವನ್ನು ರಾಮನೆಂದು ಕರೆಯುತ್ತಾರೆ. ಕಾರಣ, ಅಲೌಕಿಕರು ಅಧ್ಯಾತ್ಮದ ಅಸ್ತಿತ್ವದಲ್ಲಿ ಅಮಿತ ನಿಜಾನಂದವನ್ನು ಪಡೆಯುತ್ತಾರೆ.”
ಭಾರತದ ಎಲ್ಲ ಶ್ರೇಷ್ಠ ಸಂತರು ಈ ಆಧ್ಯಾತ್ಮಿಕ ಜ್ಞಾನವನ್ನು ಪರಿಪೂರ್ಣವಾಗಿ ಬೆಳೆಸಿಕೊಂಡಿದ್ದಾರೆ. ಮೊದಲೆಲ್ಲಾ, ಆಧ್ಯಾತ್ಮಿಕ ಜೀವನದ ಬಗೆಗೆ ಅರಿಯಲು ಜನರು ಭಾರತಕ್ಕೆ ಹೋಗುತ್ತಿದ್ದರು. ಏಸು ಕ್ರಿಸ್ತರು ಕೂಡ ಅಲ್ಲಿಗೆ ಹೋಗಿದ್ದರು. ಆದರೂ ನಾವು ಅದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿಲ್ಲ. ಈ ಸಾಹಿತ್ಯ ಮತ್ತು ಆದೇಶಗಳು ಕೇವಲ ಭಾರತೀಯರಿಗೆ ಅಥವಾ ಹಿಂದೂಗಳಿಗೆ ಅಥವಾ ಬ್ರಾಹ್ಮಣರಿಗೆ ಮಾತ್ರವಲ್ಲ. ಇಲ್ಲ. ಅದು ಎಲ್ಲರಿಗಾಗಿ, ಏಕೆಂದರೆ ಕೃಷ್ಣ ಹೇಳುತ್ತಾನೆ, ಅಹಂ ಭೀಜ ಪ್ರದಃ ಪಿತಾ, (ಭಗವದ್ಗೀತೆ 14.4), “ನಾನು ಎಲ್ಲರ ತಂದೆ.”
ಆದುದರಿಂದ ಅವನು ನಮ್ಮೆಲ್ಲರನ್ನು ನೆಮ್ಮದಿ ಮತ್ತು ಸುಖವಾಗಿರಿಸಲು ಬಯಸುತ್ತಾನೆ. ಒಬ್ಬ ಸಾಮಾನ್ಯ ತಂದೆಯು ತನ್ನ ಮಗನು ಸುಖ ಸಂತೋಷವಾಗಿರಲೆಂದು ಹೇಗೆ ಬಯಸುವನೋ ಹಾಗೆಯೇ ಕೃಷ್ಣನು ನಾವೆಲ್ಲರೂ ಸುಖ ಸಂತೋಷದಿಂದ ಇರಬೇಕೆಂದು ಆಶಿಸುತ್ತಾನೆ. ಆದುದರಿಂದ ಅವನು ಕೆಲವು ಬಾರಿ ಬರುತ್ತಾನೆ. ಅದು ಕೃಷ್ಣನ ಆವಿರ್ಭಾವದ ಉದ್ದೇಶ.
ವಂದನೆಗಳು.