– ದಶಂ
ಗೀತ ಗೋವಿಂದದ ಹೆಸರು ಯಾರು ತಾನೇ ಕೇಳಿಲ್ಲ! ಭಾರತದ ಯಾವುದೇ ನಾಟ್ಯ ಪ್ರಕಾರದ, ಯಾವುದೇ ತಂಡದ ಕಾರ್ಯಕ್ರಮವಿರಲಿ, ಅಲ್ಲಿ ಗೀತ ಗೋವಿಂದದ 2-3 ಅಷ್ಟಪದಿಗಳ ಅಭಿನಯ ಇದ್ದೇ ಇರುತ್ತದೆ.

12ನೇ ಶತಮಾನದಲ್ಲಿ ಇದರ ರಚನೆಯಾಯಿತು. ಇಂದಿಗೂ ಈ ಕೃತಿ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ. ಈ ಕೃತಿಯನ್ನು ರಚಿಸಿದ ಮಹಾ ವ್ಯಕ್ತಿ ಶ್ರೀಲ ಜಯದೇವ ಗೋಸ್ವಾಮಿ.
ಮಕರ ಸಂಕ್ರಾಂತಿಯ ದಿನ, “ಕಿಂದುಬಿಲ್ವ” (ಉತ್ಕಲದ ಉತ್ತರ ಭಾಗದ ವೀರಭೂಮಿ) ಎಂಬ ಊರಿನಲ್ಲಿ ಶ್ರೀಲ ಜಯದೇವ ಗೋಸ್ವಾಮಿಯವರ ಹೆಸರಿನಲ್ಲಿ ಬೃಹತ್ ಉತ್ಸವವೊಂದು ನಡೆಯುತ್ತದೆ. ಅಂದು ಜಯದೇವ ಕವಿಯು ಗೀತ ಗೋವಿಂದವನ್ನು ಸಂಪೂರ್ಣಗೊಳಿಸಿದ ದಿನವೆಂದು ನಂಬಲಾಗಿದೆ.
ಜಯದೇವನು ತನ್ನ ಕಾವ್ಯಗಳಲ್ಲಿ ಹೇಳಿಕೊಂಡಿರುವಂತೆ ಅವನ ತಂದೆ ಭೋಜದೇವ, ತಾಯಿ ರಮಾದೇವಿ, ಉತ್ಕಲ ಪಶ್ಚಿಮ ಬಂಗಾಲ – ಬಿಹಾರ ಸೇರಿದ ವೀರಭೂಮಿ ಪ್ರದೇಶದ ಕಿಂದುಬಿಲ್ವದಲ್ಲಿಯೇ ಅವನ ಜನನ. ಚಿಕ್ಕಂದಿನಿಂದಲೇ ಸಂಸ್ಕೃತ ಭಾಷೆ, ವ್ಯಾಕರಣ, ಛಂದಸ್ಸು, ವೇದ, ಪುರಾಣಗಳ ಶಿಕ್ಷಣ. ಆದರೂ ವೈರಾಗ್ಯದ ಭಕ್ತಿಯ ಅಂತಃಕರಣ, ಊರ ಹೊರಗೆ ಪರ್ಣ ಕುಟಿಯಲ್ಲಿ ವಾಸ. ಬ್ರಹ್ಮಚರ್ಯದ ಸಾಧನೆ. ನಾಮಜಪ, ಸಂಕೀರ್ತನೆಯಲ್ಲಿ ತಲ್ಲೀನ.
ದೇವಶರ್ಮನೆಂಬ ಬ್ರಾಹ್ಮಣ ತಾನೇ ತಾನಾಗಿ ಅಲ್ಲಿಗೊಮ್ಮೆ ಬಂದ. ಸುಂದರನೂ, ಯುವಕನೂ, ಶೀಲವಂತನೂ ಆದ ಜಯದೇವನನ್ನು ಕಂಡು, ತುಂಬ ಸಂತಸಗೊಂಡ. ತನ್ನ ಮಗಳಾದ ಪದ್ಮಾವತಿಯನ್ನು ಮದುವೆ ಮಾಡಿಕೊಂಡು, ತನ್ನನ್ನು ಕನ್ಯಾಸೆರೆಯಿಂದ ಪಾರುಮಾಡು ಎಂದು ಪ್ರಾರ್ಥಿಸಿದ.
ಜಯದೇವ ಈ ಸೂಚನೆಯನ್ನು ನಿರಾಕರಿಸಿದ. ಆದರೆ ಪದ್ಮಾವತಿಯು ತಂದೆಯೊಡನೆ, ಅಲ್ಲೇ ಕೆಲದಿನ ನಿಂತು, ಅವನ ಸೇವೆಯಲ್ಲಿ ತೊಡಗಿದಳು. ಅವಳ ಶ್ರದ್ಧೆ ವಿನಯಗಳಿಗೆ ಜಯದೇವ ಮನಸೋತ. ಜಯದೇವ – ಪದ್ಮಾವತಿ ದಂಪತಿಯಾದರು.
ಪದ್ಮಾವತಿಯು ನಾಟ್ಯ, ಸಂಗೀತ ಕೋವಿದೆಯಾಗಿದ್ದಳು. ಜಯದೇವನ ಸಾಂಗತ್ಯವೀಗ, ಉತ್ತಮ ವಜ್ರಗಳನ್ನು ಬಂಗಾರದ ಹೊದಿಕೆಯಲ್ಲಿ ಅಳವಡಿಸಿದಂತಾಯ್ತು. ಜಯದೇವನಿಗೆ ಪದ್ಮಾವತಿಯ ನಾಟ್ಯ, ಸಂಗೀತಗಳು, ಅವನೊಳಗಿನ ಕವಿಯ ಹೊಮ್ಮುವಿಕೆಗೆ ಪ್ರೇರಕವಾಯಿತು.
ಮೊದಲೇ ಅವನು ಭಾಗವತ ನಿಷ್ಠ ಭಕ್ತನಾಗಿದ್ದ. “ಗೀತ ಗೋವಿಂದ’ ಆತನ ಹೃದಯಾಂತರಾಳದಿಂದ ಹೊರಹೊಮ್ಮಿತು. ಪದ್ಮಾವತಿಯು, ‘ಗೀತ ಗೋವಿಂದ’ ಪದ್ಯಗಳನ್ನು ಗೆಜ್ಜೆ ಕಟ್ಟಿ ಸ್ವತಃ ಅಭಿನಯಿಸುತ್ತಿದ್ದಳು.
ಮೇಲು ನೋಟಕ್ಕೆ ಗೀತ ಗೋವಿಂದ ಶೃಂಗಾರ ಕಾವ್ಯವಾಗಿ ಕಂಡರೂ, ಬರೀ ಕಾಮ ಅಥವಾ ಸಾಮಾನ್ಯ ಪ್ರೇಮದ ನಿರೂಪಣೆ ಕವಿಯ ಉದ್ದೇಶವಾಗಿರಲಿಲ್ಲ. ಜೀವನದ ಇತರ ಸುಖ ಸೌಕರ್ಯಗಳನ್ನೆಲ್ಲ ನಿರಾಕರಿಸಿ ಕೃಷ್ಣನೆಡೆಗೆ ಸಾರುವ ನಾಯಕಿ ರಾಧೆ. ಜಗತ್ತಿಗೆ ಸಂಬಂಧಿಸಿದ್ದನ್ನೆಲ್ಲ ಸ್ವಾಗ ಮಾಡುತ್ತಾ ಭಗವಂತನಾದ ಶ್ರೀಕೃಷ್ಣನಲ್ಲಿ ಸೇರುವ ಬದ್ಧಾತ್ಮವು ಪಡುವ ತವಕವೇ ಹಾಸ್ಯಮಯ ಸಂಕೇತ. ಕವಿ ಜಯದೇವ ತನ್ನ ಇಡೀ ಕಾವ್ಯದಲ್ಲಿ ಈ ಅರ್ಪಣಾ ಭಾವವನ್ನು ಮೆರೆದಿದ್ದಾರೆ.

ಜಯದೇವ ತನ್ನ ‘ಗೀತ ಗೋವಿಂದ’ ವನ್ನು ಅರ್ಪಿಸಿರುವುದು ಹರಿಸ್ಮರಣೆಯ ಅಭಿಲಾಷೆ ಇರುವವರಿಗೆ. ಇದರಲ್ಲಿ ಒಟ್ಟು 24 ಅಷ್ಟಪದಿಗಳಿವೆ. ಇವನ್ನು ಹಾಡುವ ಮತ್ತು ಅಭಿನಯಿಸುವ ಪದ್ಧತಿ ಈಗಲೂ ನಡೆದುಬಂದಿದೆ.
ಬಂಗಾಳದ ರಾಜನಾಗಿದ್ದ ಲಕ್ಷ್ಮಣಸೇನನ ಆಸ್ಥಾನದಲ್ಲಿ ಜಯದೇವ ಮಹಾಕವಿ ಸ್ಥಾನವನ್ನು ಅಲಂಕರಿಸಿದ್ದ. ತನ್ನ ಕೊನೆಯ ದಿನಗಳಲ್ಲಿ ಕಾಶಿ, ವೃಂದಾವನ, ಕಿಂದುಬಿಲ್ವಗಳ ಮಧ್ಯೆ ಸಂಚರಿಸುತ್ತಿದ್ದ. ಕ್ರಿ.ಶ. 1153 ರ ಡಿಸೆಂಬರ್ 28ರಂದು ಹರಿಲೋಕವಾಸಿಯಾದ.
ಇಂದಿಗೂ ವೃಂದಾವನ, ನವದ್ವೀಪ, ಜಗನ್ನಾಥಪುರಿ, ಕಿಂದುಬಿಲ್ವಗಳಲ್ಲಿ ರಾಧಾ ಮಾಧವರ ವಿಲಾಸಗಳನ್ನು ಜನ ಹಾಡಿ ಕುಣಿದು ನೆನೆಯುತ್ತಾರೆ. ಜಯದೇವನಿಗೆ ನಿತ್ಯ ನಮನ ಸಲ್ಲಿಸುತ್ತಾರೆ. ಸಾವಿರಾರು ದೇವಾಲಯಗಳಲ್ಲಿ ‘ಗೀತ ಗೋವಿಂದ’ ಹಾಡುಗಾರಿಕೆ – ನಿತ್ಯ ಸೇವೆಯ ಭಾಗವಾಗಿದೆ.
ಉಡುಪಿಯ ಕೃಷ್ಣ ದೇಗುಲದಲ್ಲಿ ಪುರಂದರರ ಗಾಯನದಂತೆ, ತಿರುಮಲದ ಶ್ರೀನಿವಾಸನ ಸನ್ನಿಧಿಯಲ್ಲಿ ಅಣ್ಣಮಾಚಾರ್ಯರ ಗಾಯನದಂತೆ, ಪುರಿಯ ಜಗನ್ನಾಥಸ್ವಾಮಿಯ ದೇವಾಲಯದಲ್ಲಿ ಜಯದೇವನ ಒಂದೆರಡು ಅಷ್ಟಪದಿಗಳ ಗಾಯನ ನಿತ್ಯವೂ ನಡೆಯುತ್ತದೆ.
ಜಯದೇವನಿಗೆ ಭಗವಂತನ ಸಾಕ್ಷಾತ್ಕಾರವಾಗಿತ್ತು. ಭಗವಂತನು ಗೀತಗೋವಿಂದವನ್ನು ಖದ್ದು ಸ್ವೀಕರಿಸಿದನು. ಒಮ್ಮೆ ರಾಧಾಮಾಧವ ವಿರಹ ಪ್ರಸಂಗ ಚಿತ್ರಿಸುವಾಗ, ಮಾಧವನು ರಾಧೆಗೆ ನಮಸ್ಕರಿಸಿದನು ಎಂದು ಜಯದೇವ ಬರೆದರು. ಯಾಕೋ ಮನಸ್ಸಿಗೆ ಒಗ್ಗದಾಗಿ, ಅದನ್ನು ತೆಗೆದು ಹಾಕಿ, ಹೊರ ನಡೆದನು.
ಮರುದಿನ ನೋಡಿದಾಗ, ಆ ಸಾಲುಗಳು ಮತ್ತೆ ಸೇರ್ಪಡೆಯಾಗಿತ್ತಂತೆ. ಇದು ಭಗವಂತನೇ ಒಪ್ಪಿಸೇರಿಸಿದ್ದೆಂದು ಹೇಳುತ್ತಾರೆ. ಜಯದೇವನ ಆಶ್ರಿತನಾಗಿದ್ದ, ದೊರೆ ಲಕ್ಷ್ಮಣಸೇನನು ಈ ಕಾವ್ಯದ ಹಿರಿಮೆ ಅಳೆಯಲೊಮ್ಮೆ ಭಗವಂತನ ಸನ್ನಿಧಿಯಲ್ಲಿ ಗೀತ ಗೋವಿಂದದ ಎರಡು ಪ್ರತಿ ಇಟ್ಟನಂತೆ.
ಬೆಳಗಾಗುವುದರೊಳಗೆ, ಗೀತಗೋವಿಂದದ ಹಸ್ತ ಪ್ರತಿ ಭಗವಂತನ ಕೈಯಲ್ಲಿತ್ತಂತೆ! ಜಯದೇವ ಭಕ್ತ ಕವಿ, ಧನ್ಯಕವಿ. ಹತ್ತಿರ ಹತ್ತಿರ ಒಂದು ಸಹಸ್ರಮಾನ ಕಳೆಯುತ್ತಿದ್ದರೂ, ಅವನ ಕಾವ್ಯದ ಜನಪ್ರಿಯತೆ ಕಿಂಚಿತ್ತೂ ಕಡಮೆಯಾಗಿಲ್ಲ. ಗೀತ ಗೋವಿಂದದ ಗೇಯಗುಣ, ಅಭಿನಯ ಯೋಗ್ಯತೆ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ತವಕರ ಕಮಲ ವರೇ ಎಲ್ಲ ಪ್ರಕಾರದ ಚಿತ್ರಕಾರರಿಗೂ ಸಹ ಶತಶತಮಾನಗಳಿಂದ ಸ್ಫೂರ್ತಿಯ ನೆಲೆಯಾಗಿದೆ.






Leave a Reply