ಜೀವನದ ಉದ್ದೇಶ

ಬಸ್‌ನಲ್ಲೇ ನಡೆಯಿತು ಕೃಷ್ಣಪ್ರಜ್ಞೆಯ ಪ್ರಚಾರ!

ಸುವ್ಯಕ್ತ ನರಸಿಂಹದಾಸ

ಬಸ್ಸನ್ನು ಹತ್ತಿ ಕುಳಿತುಕೊಂಡಾಗ ಮೈಸೂರಿನಿಂದ ಬೆಂಗಳೂರಿಗೆ ಮೂರು ಘಂಟೆಯ ಪ್ರಯಾಣ ಹೇಗೆ ಕಳೆಯುವುದು ಎಂಬ ಆಲೋಚನೆ ನನಗೆ ಬಂದಿತು. ಸ್ವಲ್ಪವೇ ವಸ್ತುಗಳಿರುವಂತಹ ಚೀಲವನ್ನು ನನ್ನ ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ಬಸ್ಸಿನ ಟಿಕೇಟನ್ನು ಹಿಡಿದುಕೊಂಡು ಕೊರಳಲ್ಲಿ ಜಪಮಾಲೆಯ ಚೀಲವನ್ನು ಹಾಕಿಕೊಂಡಿದ್ದೆ.

ಬಸ್ಸನ್ನು ಏರಿ ಸುತ್ತಲೂ ನೋಡಿದೆ. ಹಿಂದಿನ ಸೀಟುಗಳಲ್ಲಿ ಜನ ಹೆಚ್ಚಿಗೆಯಿಲ್ಲದ್ದರಿಂದ ಅಲ್ಲಿಯೇ ಕುಳಿತುಕೊಳ್ಳಲು ನಿರ್ಧರಿಸಿದೆ. ನನ್ನ ಸಾಮಾನುಗಳ ಕೈಚೀಲವನ್ನು ಪಕ್ಕದಲ್ಲಿರಿಸಿಕೊಂಡೆ. ಆಗ ಸಮಯ 11 ಘಂಟೆಯಾಗಿತ್ತು. ಇನ್ನು ಮೂರು ಗಂಟೆ ಕಾಲ ಕಳೆಯಬೇಕಿತ್ತು.

ನಾನು ನನ್ನ ಬಸ್ಸಿನ ಟಿಕೇಟನ್ನು ಅಂಗಿಯ ಜೇಬಿನಲ್ಲಿ ಇಟ್ಟುಕೊಂಡು ಬಲಗೈ ಬೆರಳನ್ನು ಜಪಮಾಲ ಚೀಲದಲ್ಲಿ ಹಾಕಿ ‘ಹರೇಕೃಷ್ಣ ಮಹಾ ಮಂತ್ರ’ವನ್ನು ಜಪಿಸತೊಡಗಿದೆ. ಕೆಲವೇ ಕ್ಷಣಗಳಲ್ಲಿ ಬಸ್ ಹೊರಟಿತು. ಅದೇ ಸಮಯದಲ್ಲಿ ಸಾಧಾರಣವಾಗಿ ಕಾಣುವಂತಹ ಮಧ್ಯವಯಸ್ಸಾದ ವ್ಯಕ್ತಿಯೊಬ್ಬರು ಕಿಟಕಿಯ ಬಳಿ ಕುಳಿತಿದ್ದನ್ನು ಗಮನಿಸಿದೆ.

ನಾನು ಜಪ ಮಂತ್ರವನ್ನು ಹೇಳುತ್ತಿದ್ದೆ. ಬಸ್ಸು ಮೈಸೂರು ನಗರದಿಂದ ಹೊರಟಿತು. ಬೆಂಗಳೂರು ನಗರಕ್ಕೆ ಹೋಲಿಸಿದರೆ ಮೈಸೂರು ಚಿಕ್ಕ ನಗರ. ಜನರು ತಮ್ಮ ವ್ಯವಹಾರಗಳಿಗಾಗಿ ಅಲ್ಲಿಂದ ಇಲ್ಲಿಂದ ಓಡಾಡುತ್ತಿದ್ದರು. ಆದರೂ ಜನಸಂದಣಿ ಕಡಿಮೆಯಿತ್ತು. ಏಕೆಂದರೆ ಅಂದು ಭಾನುವಾರವಾಗಿತ್ತು. ಬಸ್ಸು ಹೊರಟ ಮೇಲೂ ನನ್ನ ಜಪ ಮುಂದುವರಿದಿತ್ತು.

ಅರ್ಧ ಘಂಟೆಯ ನಂತರ ಪಕ್ಕದಲ್ಲಿ ಕುಳಿತುಕೊಂಡಿದ್ದ ಆ ವ್ಯಕ್ತಿಯು ಸ್ವಾಮೀಜಿ ತಾವು ಯಾವ ಊರಿನವರು? ಎಂದು ನನಗೆ ಕೇಳಿದ. ನನಗೆ ಅನುಮಾನವಿತ್ತು, ಅವನಿಗೆ ಆಗಿನಿಂದಲೂ ನನ್ನನ್ನು ಮಾತನಾಡಿಸಬೇಕೆನಿಸಿದ್ದರೂ ಧೈರ್ಯ ಸಾಕಾಗಿರಲಿಲ್ಲ.

‘ನಾನು ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲಿ ಇದ್ದೇನೆ. ನೀವು ಈ ಮೊದಲು ಇಸ್ಕಾನ್ ನೋಡಿರುವಿರಾ?’ ಎಂದು ಕೇಳಿದೆ. ಆ ವ್ಯಕ್ತಿಯು ತನ್ನ ಅದ್ಭುತ ಹೊಳಪು ಕಣ್ಣುಗಳಿಂದ ನೋಡುತ್ತಾ “ಓ, ಆ ಸುಂದರವಾದ ದೇವಾಲಯ ನೋಡಿದ್ದೇನೆ” ಎಂದು ಹೇಳಿದರು.

ಸ್ವಲ್ಪ ಹೊತ್ತಿನ ನಂತರ ಅವನು, ನೀವು ಅಲ್ಲಿಯೇ ಇರುತ್ತೀರೇನು? ಎಂದು ನನಗೆ ಕೇಳಿದೆ. ನನ್ನ ಬದುಕಿನ ಬಗ್ಗೆ ಅವನು ಈ ತರಹದ ಪ್ರಶ್ನೆ ಕೇಳಬಹುದು ಎಂದು ಮೊದಲೇ ಊಹಿಸಿದ್ದೆ. ಆಗ ನಾನು ಹೌದು, ಅಲ್ಲಿ ನಮ್ಮದೊಂದು ಆಶ್ರಮವಿದೆ. ನಾವೆಲ್ಲರೂ ಪೂರ್ಣಾವಧಿಯ ಸೇವಾಕರ್ತರಾಗಿ ದೇವಾಲಯದಲ್ಲಿ ಇರುತ್ತೇವೆ.

ನಿಮಗೇನೂ ಸಂಭಾವನೆ ಸಿಗುವುದಿಲ್ಲವೇ? ಎಂದು ಅವನು ಕೇಳಿದ. ನಾನು ‘ಇಲ್ಲ’ ಎಂದಿದ್ದಕ್ಕೆ ಅವನ ಮುಖದಲ್ಲಿ ಸಂಶಯಾಗ್ರಸ್ತವಾದ ನೋಟ ಎದ್ದು ಕಾಣುತ್ತಿತ್ತು. ನಿಮಗೆ ಸ್ವಲ್ಪ ಹಣವೂ ಸಿಗುವುದಿಲ್ಲವೇ? ಎಂದು ಅಪನಂಬಿಕೆಯಿಂದ ನನಗೆ ಪ್ರಶ್ನಿಸಿದ. ನಾನು ‘ಇಲ್ಲ’ ಎಂದು ದೃಢವಾಗಿ ಹೇಳಿದೆ.

ಆಗ ಅವನ ನೋಟವು ಭಯಭಕ್ತಿಯಿಂದ ತುಂಬಿಕೊಂಡು ತಲೆಯಾಡಿಸುತ್ತಾ ಅದು ನಿಜವಾಗಿಯೂ ಶ್ರೇಷ್ಠವಾದುದು ಎಂದನು. ಆತನಿಗೆ ನಾವು ಹೇಗೆ ಸಂಭಾವನೆ ಪಡೆಯದೇ ನಿಸ್ವಾರ್ಥವಾಗಿ ಸೇವೆ ಮಾಡುತ್ತೇವೆ ? ಈ ರೀತಿಯ ಸೇವೆ ಮಾಡಲು ಪ್ರೇರಣೆಯಾದರೂ ಏನು ? ಎಂಬುದು ಅರ್ಥವಾಗಲಿಲ್ಲ.

ನನ್ನ ಪಕ್ಕದಲ್ಲಿ ಕುಳಿತಿರುವವನನ್ನು ನೋಡಿ ಅವನಿಗೆ ಉಪದೇಶ ಮಾಡಲು ಅವಕಾಶ ಸಿಕ್ಕಿದೆ ಎಂದು ಅದನ್ನು ನಾನು ಉಪಯೋಗಿಸಿಕೊಂಡೆ. ಮಾತನ್ನು ಪ್ರಾರಂಭಿಸಿದೆ.

“ನಿಜವಾಗಿಯೂ ಇಡೀ ಜಗತ್ತಿನ ಜನಗಳ ನಡುವಿನ ಪರಿಸ್ಥಿತಿಯೇ ಇದಾಗಿದೆ. ಎಲ್ಲರೂ ಹಣಗಳಿಸುವ ಉದ್ದೇಶದಿಂದ ತಮ್ಮ ಕರ್ತವ್ಯಗಳನ್ನು ಪಾಲಿಸುವುದಕ್ಕೆ ಮತ್ತು ಸಂತೋಷ ಪಡೆಯಲು ಕಷ್ಟಪಟ್ಟು ದುಡಿಯುತ್ತಿದ್ದಾರೆ. ನಮಗೆ ನಮ್ಮ ತಂದೆ ತಾಯಿಗಳು ಕೂಡ ಕಷ್ಟ ಪಟ್ಟು ದುಡಿಯಬೇಕು, ಒಳ್ಳೆಯ ಉದ್ಯೋಗ ಪಡೆಯಬೇಕು, ಹಣಗಳಿಸಬೇಕು, ಒಳ್ಳೆಯ ಬಾಳ ಸಂಗಾತಿ, ಎರಡು ಮಕ್ಕಳು, ಒಳ್ಳೆಯ ಸ್ನೇಹಿತರು, ಸುಸಜ್ಜಿತವಾದ ಮನೆ ಮತ್ತು ಓಡಾಡಲು ವಾಹನ ಹೊಂದಬೇಕು ಎಂದು ಹೇಳಿ ಕೊಡುತ್ತಾರೆ.

ನಮ್ಮ ಶಿಕ್ಷಕರೂ ಕೂಡ ಇದನ್ನೇ ಬೆಂಬಲಿಸುತ್ತಾರೆ ಮತ್ತು ನಮ್ಮ ಸ್ನೇಹಿತರು ಇದಕ್ಕೆ ಪ್ರೋತ್ಸಾಹಿಸುತ್ತಾರೆ. ಸಮಾಜ ನಮ್ಮಿಂದ ಇದನ್ನೇ ಬಯಸುತ್ತದೆ. ಮಾಧ್ಯಮ ಇದನ್ನೇ ಬಲಪಡಿಸುತ್ತದೆ. ಯಾವಾಗಲೂ ಮತ್ತು ಎಲ್ಲ ಕಡೆಯೂ ನಾವು ಇಂದ್ರಿಯ ಬಯಕೆಗಳನ್ನು ತೃಪ್ತಿಪಡಿಸಿತ್ತು, ಸಂತೋಷ ಹೊಂದಲು ಪ್ರಯತ್ನಿಸುತ್ತೇವೆ. ನಮ್ಮ ಈ ಇಂದ್ರಿಯ ಸಂತೃಪ್ತಿಯ ಸಫಲತೆಯ ಮಾರ್ಗವೆಂದರೆ ಹಣ”.

“ನೀವು ಹೇಳುವ ಪ್ರಕಾರ ಹಣವನ್ನೇ ನಾವು ಸಂಪಾದಿಸಬಾರದೆ?” ಎಂದು ಅವರು ನನ್ನನ್ನು ಪ್ರಶ್ನಿಸಿದರು.

 “ಹಣ ಸಂಪಾದಿಸಬೇಡಿ ಎಂದು ಹೇಳುವುದಲ್ಲ. ಆದರೆ, ಜೀವನದ ಉದ್ದೇಶವೇನೆಂಬುದನ್ನು ಅರಿಯಿರಿ ಎಂಬುದು. ಶ್ರೀಮದ್ಭಾಗವತದ ಕಥಾನಕವೊಂದನ್ನು ಇಲ್ಲಿ ನಿಮಗೆ ಹೇಳಲು ಇಚ್ಛಿಸುತ್ತೇನೆ” ಎಂದು ಹೇಳುತ್ತಾ ಕಥೆಯನ್ನು ಪ್ರಾರಂಭಿಸಿದೆ.

“ನಾರದ ಮುನಿಗಳು ಈ ಜಗತ್ತಿನಲ್ಲಿ ಮನುಷ್ಯನ ಸ್ಥಾನವನ್ನು ನಿರೂಪಿಸಲು ಒಂದು ರೂಪಕ ಕಥೆಯನ್ನು ರಾಜ ಪ್ರಾಚೀನಬರ್ಹಿಶತನಿಗೆ ವಿವರಿಸುತ್ತಾರೆ. ಒಂದಾನೊಂದು ಕಾಲದಲ್ಲಿ ಪುರಂಜನನೆಂಬ ರಾಜನಿದ್ದನು. ರಾಜನಿಗೆ ತನ್ನ ಇಂದ್ರಿಯಗಳನ್ನು ಸಂತೃಪ್ತಿ ಪಡಿಸಲು ಅನಿಯಮಿತವಾದ ಆಸೆಗಳಿದ್ದವು. ಅದನ್ನು ಪಡೆಯಲು ಆತನು ಸೂಕ್ತ ಸ್ಥಳವನ್ನು ಹುಡುಕುತ್ತಾ ಜಗತ್ತಿನ ಪರ್ಯಟಣೆಯಲ್ಲಿ ಹೊರಟನು. ಆದರೆ ಅವನಿಗೆ ಎಲ್ಲಿಯೂ ಆ ತರಹದ ಸ್ಥಳ ಸಿಗದಿರಲು ನಿರಾಸೆಗೊಂಡನು.

ಒಂದು ಸಲ ಅವನು ಆ ರೀತಿಯಾಗಿ ತಿರುಗಾಡುತ್ತಿರುವಾಗ ನವದ್ವಾರಗಳು ಇರುವ ಒಂದು ನಗರಕ್ಕೆ ಬಂದನು. ಆ ನಗರವು ಸುಸಜ್ಜಿತವಾಗಿ ನಿರ್ಮಿಸಲಾಗಿತ್ತು ಮತ್ತು ಅವನು ಬಯಸಿದಂತಹ ಎಲ್ಲ ಅನುಕೂಲತೆಗಳು, ಉದ್ಯಾನವನ ಮತ್ತು ಚಿನ್ನ, ಬೆಳ್ಳಿ, ಲೋಹದಿಂದ ನಿರ್ಮಿತವಾದ ಮನೆಯ ಗೋಡೆಗಳು, ಗುಮ್ಮಟಗಳು ಇದ್ದವು.

ರಾಜನು ನಗರದ ಹೊರವಲಯದ ಒಂದು ಉದ್ಯಾನದಲ್ಲಿ ಶಾಂತಚಿತ್ತನಾಗಿ ವಿಹರಿಸುತ್ತಿರುವಾಗ ಒಬ್ಬಳು ಸುಂದರಳಾದ ಸ್ತ್ರೀಯನ್ನು ಕಂಡನು. ಅವಳಿಗೆ ಹತ್ತು ಜನ ನೌಕರರು, ಆ ನೌಕರರಿಗೆ ನೂರು ಜನ ಹೆಂಡತಿಯರು ಇದ್ದರು. ಆ ಸುಂದರ ಸ್ತ್ರೀಯ ಸಂರಕ್ಷಣೆಗೆ ಐದು ಹೆಡೆಯ ಸರ್ಪವೊಂದು ಇತ್ತು. ಅದು ಅವಳ ರಕ್ಷಣೆಯನ್ನು ಮಾಡುತ್ತಿತ್ತು. ಅವಳು ಒಬ್ಬ ಅನುರೂಪನಾದ ಗಂಡನ ಅನ್ವೇಷಣೆಯಲ್ಲಿದ್ದಳು. ರಾಜ ಪುರಂಜನ ಆ ನಗರವನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡನು.”

”ಪುರಂಜನನು ತನ್ನ ಪತ್ನಿಯಲ್ಲಿ ಮೋಹ ಪರವಶನಾಗಿ ಅನೇಕ ರೀತಿಯಲ್ಲಿ ಸುಖ ಹೊಂದಿ 1,100 ಗಂಡು ಮಕ್ಕಳು ಮತ್ತು 110 ಹೆಣ್ಣು ಮಕ್ಕಳನ್ನು ಪಡೆದನು. ಅವರೆಲ್ಲರಿಗೂ ಮದುವೆ ಮಾಡಿ ಮೊಮ್ಮಕ್ಕಳನ್ನು ಪಡೆದನು. ಈ ರೀತಿಯಾಗಿ ಅವನ ಅರ್ಧ ಜೀವನಕಾಲ ಕಳೆಯಿತು. “ಈ ನಡುವೆ ಚಂಡವೇಗ ಎಂಬ ಹೆಸರಿನ ಗಂಧರ್ವ ರಾಜನು ತನ್ನ 360 ಸೈನಿಕರೊಂದಿಗೆ ಪುರಂಜನನ ನಗರವನ್ನು ಆಕ್ರಮಣ ಮಾಡಿದನು.

ಐದು ಹೆಡೆಯ ಆ ಸರ್ಪವು 100 ವರ್ಷಗಳ ಕಾಲ ಸೈನಿಕರ ಜೊತೆ ಹೋರಾಡಿ ಕೊನೆಯಲ್ಲಿ ತನ್ನಿಂದ ಆಗದು ಎಂದು ಬಿಟ್ಟಿತು. ಅದೇ ಸಮಯದಲ್ಲಿ ವರಾನ್ವೇಷಣೆಯಲ್ಲಿದ್ದ ಕಾಲನ ಮಗಳಾದ ಕಾಲಕನ್ಯಾ ಆಮಂತ್ರಣವಿಲ್ಲದೆ ಅಲ್ಲಿಗೆ ಬಂದಳು. ಅವಳು ಮತ್ತು ಅವಳ ಸಹೋದರ ಯವನರ ರಾಜನಾದ ಭಯಾ ಆ ನಗರವನ್ನು ಪ್ರವೇಶಿಸಿ ಅಲ್ಲಿಯ ನಾಗರಿಕರಿಗೆ ಅನೇಕ ರೀತಿಯಲ್ಲಿ ತೊಂದರೆಯನ್ನು ಕೊಟ್ಟರು.

ಆ ಕಾಲಕನ್ಯೆಯ ಅಲಿಂಗನದಲ್ಲಿ ಪುರಂಜನ ತನ್ನ ಬುದ್ಧಿಮತ್ತೆ ಮತ್ತು ದೈಹಿಕ ಶಕ್ತಿಯನ್ನು ಕಳೆದುಕೊಂಡು ಗಂಧರ್ವ ಮತ್ತು ಯವನರಿಂದ ಆಕ್ರಮಣಗೊಂಡನು. ಅವನ ಮಕ್ಕಳು, ಎಲ್ಲ ಬಂಧುಗಳು, ಸೇವಕರು ಅವನ ವಿರುದ್ಧವಾದರು. ಆಕ್ರಮಣಕಾರರು ಆ ನಗರವನ್ನು ಬೆಂಕಿಯಿಂದ ಧಗಧಗಿಸಿ ಉರಿಸಿದರು ಮತ್ತು ಅವನ ಬಂಧುಗಳು ಆ ಬೆಂಕಿಗೆ ಆಹುತಿಯಾದರು. ಇದರಿಂದ ಪುರಂಜನನಿಗೆ ಅತೀವ ದುಃಖವಾಯಿತು. ಐದು ಹೆಡೆಯ ಸರ್ಪವು ಅತೀವವಾದ ಉಷ್ಣತೆಯಿಂದ ಆ ನಗರವನ್ನು ಬಿಟ್ಟು ಹೊರಡಲು ಶತ್ರುಗಳಿಂದ ತಡೆಯಲ್ಪಟ್ಟು ರೋಧಿಸತೊಡಗಿತು.

ಪುರಂಜನನು ಶತ್ರು ಸೈನಿಕರಿಂದ ಬಂಧಿತನಾದನು ಮತ್ತು ಆ ಸರ್ಪವು ಅವನನ್ನು ಹಿಂಬಾಲಿಸಿತು. ಆ ನಗರವನ್ನು ಅವರು ಬಿಟ್ಟ ನಂತರ ಅದನ್ನು ಕೆಡವಿ ಧೂಳೀಪಟ ಮಾಡಲಾಯಿತು. ರಾಜನು ತನ್ನ ಉತ್ಕರ್ಷಕಾಲದಲ್ಲಿ ಅನೇಕ ಪ್ರಾಣಿಗಳನ್ನು ಕೊಂದಿದ್ದನು. ಯವನ ರಾಜ್ಯದ ಸೈನಿಕರು ರಾಜನನ್ನು ಎಳೆದುಕೊಂಡು ಹೋಗುವಾಗ ಆ ಪ್ರಾಣಿಗಳು ತಮ್ಮ ಕೊಂಬುಗಳಿಂದ ರಾಜನನ್ನು ಚುಚ್ಚುತ್ತಿದ್ದವು ಮತ್ತು ಆ ರಾಜನಿಗೆ ತಡೆದುಕೊಳ್ಳಲಾಗದ ಹಿಂಸೆಯನ್ನು ಕೊಡುತ್ತಿದ್ದವು.

ರಾಜ ಪುರಂಜನನು ತನ್ನ ಹೆಂಡತಿಯನ್ನು ನೆನೆದುಕೊಳ್ಳುತ್ತಾ ಅತೀವವಾದ ಶೋಕದಿಂದ ತನ್ನ ದೇಹವನ್ನು ಬಿಟ್ಟನು.” ”ಕಥೆಯೇನೋ ಚೆನ್ನಾಗಿದೆ. ಆದರೆ, ನನಗೇನೂ ಅರ್ಥವಾಗಲಿಲ್ಲ. ಸ್ವಲ್ಪ ಅದರ ಅರ್ಥವನ್ನು ವಿವರಿಸುವಿರಾ?’ ಎಂದು ಆ ವ್ಯಕ್ತಿ ಕೇಳಿದರು.

ವೃತ್ತಾಂತದಲ್ಲಿ ‘ಪುರಂಜನ’ ಎಂದರೆ ದೇಹಧಾರಿಯಾದ ಮತ್ತು ಐಹಿಕ ದೇಹದಿಂದ ಸುಖ ಹೊಂದಲು ಬಯಸುವ ಆತ್ಮ ನವದ್ವಾರಗಳ ನಗರ ಎಂದರೆ ಮಾನವನ ದೇಹ. ದ್ವಾರಗಳೆಂದರೆ ಮಾನವನ ದೇಹದ ಒಂಭತ್ತು ರಂದ್ರಗಳು, ಮನೆಯ ಮೂರು ತರಹದ ಗುಮ್ಮಟ ಎಂದರೆ ಭೌತಿಕ ಜಗತ್ತಿನ ತ್ರಿಗುಣಗಳು – ಸತ್ವ, ರಾಜಸ, ಮತ್ತು ತಾಮಸ ಗುಣಗಳು.

ಐದು ಹೆಡೆಯ ಸರ್ಪವು ಐದು ರೀತಿಯ ವಾಯುವನ್ನು (ಪ್ರಾಣ, ಅಪಾನ, ಉದಾನ, ವ್ಯಾನ ಮತ್ತು ಸಮಾನ) ಪ್ರತಿನಿಧಿಸುತ್ತದೆ. ಪುರಂಜನನ ಹೆಂಡತಿಯು ಜೀವಿಯ ಬುದ್ಧಿಶಕ್ತಿಯನ್ನು ಪ್ರತಿನಿಧಿಸಿದ್ದಾಳೆ. ಆ ಸ್ತ್ರೀಯ ಹತ್ತು ಸೇವಕರು ಹತ್ತು ಇಂದ್ರಿಯಗಳನ್ನು ಪ್ರತಿನಿಧಿಸುತ್ತಾರೆ ಮತ್ತು ಅವುಗಳಿಗೆ ಇರುವ ಅನಿಯಮಿತವಾದ ಆಸೆಗಳನ್ನು ಆ ಸೇವಕರಿಗೆ ಇರುವ ನೂರಾರು ಹೆಂಡತಿಯರನ್ನು ಪ್ರತಿ ನಿಧಿಸುತ್ತದೆ.

ಗಂಧರ್ವರಾಜ ಚಂಡವೇಗ ಬೇರಾರೂ ಅಲ್ಲ, ಅದು ತಡೆಯಲಾಗದ ಕಾಲ, ಅವನ 360 ಸೈನಿಕರು ವರ್ಷದ 360 ದಿವಸಗಳನ್ನು ಪ್ರತಿನಿಧಿಸುತ್ತವೆ. ಗಂಧರ್ವ ಸೈನಿಕರ ಮತ್ತು ಹಾವಿನ ನಡುವೆ ನಡೆಯುವ ಕದನ ಅಸ್ತಿತ್ವಕ್ಕೆ ಹೋರಾಟವನ್ನು ನಿರೂಪಿಸುತ್ತದೆ. ಕಾಲಕನ್ಯೆ ವೃದ್ಧಾಪ್ಯ ಮತ್ತು ಯವನರ ರಾಜ ಭಯದ ವ್ಯಕ್ತಿತಾರೋಪಣೆಯಾಗಿದೆ.”

“ಆದ್ದರಿಂದ ರಾಜ ಪುರಂಜನ ಒಬ್ಬಸಾಧಾರಣ ಜೀವಿಯಾಗಿ ಮತ್ತು ಆತನ ಪತ್ನಿ ಸಾಧಾರಣ ಜೀವಿಯ ಬುದ್ಧಿಮತ್ತೆಯನ್ನು ಪ್ರತಿನಿಧಿಸುತ್ತಾರೆ. ಬುದ್ಧಿಮತ್ತೆಯ ಜೊತೆ ಸೇರಿಕೊಂಡು ಈ ಸಾಧಾರಣ ಜೀವಿಯು ಭೌತಿಕ ಜಗತ್ತಿನ ಸುಖವನ್ನು ಭೋಗಿಸುತ್ತದೆ. ಜೀವಿಯು ಮನುಷ್ಯನ ರೂಪ ಪಡೆದ ಕ್ಷಣದಿಂದ ಸಂಸಾರದ ಸಂಪ್ರದಾಯ, ರಾಷ್ಟ್ರೀಯ ಭಾವನೆ, ರೂಢಿಗಳ ಬೋನಿನಲ್ಲಿ ಬಂಧಿತನಾಗುತ್ತಾನೆ.

ಆ ದೇಹರೂಪದಲ್ಲಿ ಜೀವಿಯು ತನ್ನ ಇಂದ್ರಿಯ ಸಂತೃಪ್ತಿಗೋಸ್ಕರ ಸಾಧ್ಯವಾಗುವಷ್ಟರ ಮಟ್ಟಿಗೆ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಳ್ಳುತ್ತಾನೆ. ಭೌತಿಕ ಜಗತ್ತಿನ ತ್ರಿಗುಣಗಳಿಂದ ದೂಡಲ್ಪಟ್ಟ ಜೀವಿಯು ಅನೇಕ ಪಾಪಕರ್ಮಗಳನ್ನು ಮಾಡುತ್ತಾನೆ.

 “ಅವನು ಎಷ್ಟೇ ಪ್ರಯತ್ನ ಮಾಡಿದರೂ ವೃದ್ಧಾಪ್ಯವೆಂಬುದು ಅವನ ಬುದ್ಧಿಮತ್ತೆ ಮತ್ತು ಇಂದ್ರಿಯಗಳನ್ನು ದುರ್ಬಲಗೊಳಿಸುತ್ತಾ ಅವನಲ್ಲಿ ಪಾದಾರ್ಪಣೆ ಮಾಡುತ್ತದೆ. ಆಗ ಜೀವಿಯಲ್ಲಿ ಎಷ್ಟೋ ಆಸೆಗಳಿದ್ದರೂ ಕೂಡ ಯೌವನದಲ್ಲಿ ಅನುಭವಿಸಿದ ಇಂದ್ರಿಯ ಸುಖಗಳನ್ನು ಆತ ಮತ್ತೆ ಹೊಂದಲಾರ.

ಸಾವು ಎಂಬುದು ಯಾವಾಗ ಬಾಗಿಲು ತಟ್ಟುತ್ತದೋ ಆಗ ಸಂಸಾರ, ಬಂಧುಗಳು ಮತ್ತು ಆಸ್ತಿಯನ್ನು ಬಿಟ್ಟು ಹೊರಡಬೇಕಾಗುತ್ತದೆ ಮತ್ತು ತನ್ನ ಜೀವನದಲ್ಲಿ ಮಾಡಿದ ಕರ್ಮಗಳ ಅನುಗುಣವಾಗಿ ಇನ್ನೊಂದು ದೇಹ ಪಡೆಯಬೇಕಾಗುತ್ತದೆ. 84 ಲಕ್ಷ ಬೇರೆ ಬೇರೆ ಜೀವಯೋನಿಗಳ ಪೈಕಿ ಒಂದರಲ್ಲಿ ಜನಿಸಬೇಕಾಗುತ್ತದೆ. ಈ ರೀತಿಯಾಗಿ ಜೀವಾತ್ಮವು ಪುರಂಜನನು ಆಸೆಗಳ ಸಂತೃಪ್ತಿಗೋಸ್ಕರ ಜಗತ್ತಿನಲ್ಲಿ ಅಲೆದಾಡುವುದು.

“ಅಬ್ಬಾ ಅದೆಂತಹ ಸುಂದರ ವಿವರಣೆ ಭಾಗವತದಲ್ಲಿ ಇಂತಹ ಗಾಢ ತಾತ್ವಿಕ ಚರ್ಚೆ ದೇಹ ಮತ್ತು ಆತ್ಮದ ಬಗ್ಗೆ ಇದೆ ಎಂದು ನನಗೆ ತಿಳಿದಿರಲಿಲ್ಲ.”

‘ಜನರು ತಮ್ಮ ಇಂದ್ರಿಯ ಆಸೆಗಳನ್ನು ಸಂತೃಪ್ತಿ ಪಡಿಸುವುದರಲ್ಲಿ ಜೀವನದ ಉದ್ದೇಶವಾದ ಮೃತ್ಯುವನ್ನು ತಡೆಯಲಾರರು. ಒಂದು ದೇಹದಿಂದ ಇನ್ನೊಂದು ದೇಹಕ್ಕೆ ಜನ್ಮಾಂತರ ತಡೆಯಲಾರರು. ನಿರರ್ಥಕವಾದ ಇಂದ್ರಿಯ ಸುಖ ಅನುಭವಿಸುವುದನ್ನು ತಡೆಯಬೇಕೆಂಬ ಸತ್ಯವನ್ನೇ ಮರೆಯುತ್ತಾರೆ.

ನಾನು ಮುಂದವರಿಸುತ್ತಾ ಅವರಿಗೆ ಹೇಳಿದೆ – “ನಮ್ಮ ಸುತ್ತ ಮುತ್ತ ಇರುವ ಅನೇಕ ಜನರ ಕರ್ಮಗಳು ವೇದಗಳಲ್ಲಿ ತಿಳಿಸಿರುವಂತೆ ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ.’ ಆಹಾರ ನಿದ್ರಾ ಭಯ ಮೈಥುನಮ್ ಚ, ಸಾಮಾನ್ಯಮ್ ಏತತ್ ಪಶುಭಿರ್ ನರಾಣಾಮ್ | ಧರ್ಮೋ ಹಿ ತೇಷಾಂ ಅಧಿಕೋ ವಿಶೇಷೋ, ಧರ್ಮೆಣ ಹೀನಾ: ಪಶುಭಿಃ ಸಮಾನಃ ||

ನಿದ್ರೆ, ಆಹಾರ, ಮೈಥುನ ಮತ್ತು ರಕ್ಷಣೆ ಇವು ನಾಲ್ಕೂ ಕರ್ಮಗಳು ಮನುಷ್ಯನ ಎಲ್ಲ ಪ್ರಾಪಂಚಿಕ ಕರ್ಮಗಳಲ್ಲಿ ಒಂದಾಗಿರುತ್ತದೆ. ಪ್ರಾಣಿಗಳಲ್ಲಿಯೂ ಕೂಡ ಇದೇ ತರಹದ ಕರ್ಮಗಳಿವೆ. ಹಾಗಾದರೆ ಮನುಷ್ಯ ಮತ್ತು ಪ್ರಾಣಿಗಳ ಮಧ್ಯೆ ಇರುವ ವ್ಯತ್ಯಾಸವೇನು? ಅದು ಧರ್ಮ. ಧರ್ಮ ಒಂದೇ ಮನುಷ್ಯನನ್ನು ಪ್ರಾಣಿಗಳಿಂದ ಬೇರೆಯಾಗಿಸುತ್ತದೆ.”

“ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಈ ರೀತಿಯಾಗಿ ಹೇಳುತ್ತಾನೆ. ‘ಮನುಷ್ಯನು ತನ್ನ ಜೀವಿತ ಕಾಲದಲ್ಲಿ ಯಾವ ರೀತಿ ಬಾಲ್ಯಾವಸ್ಥೆಯಿಂದ ಯೌವನ ಮತ್ತು ವೃದ್ಧಾಪ್ಯ ಹೊಂದುತ್ತಾನೋ, ಅದೇ ರೀತಿ ತನ್ನ ಸಾವಿನ ನಂತರ ಇನ್ನೊಂದು ದೇಹವನ್ನು ಪಡೆಯುತ್ತಾನೆ.

ಯಾವ ರೀತಿ ನಾವು ಹರಿದ ಬಟ್ಟೆಯನ್ನು ತೆಗೆದು ಬಿಸಾಡಿ ಇನ್ನೊಂದು ಬಟ್ಟೆಯನ್ನು ಬದಲಿಸುತ್ತೇವೆಯೋ ಅದೇ ರೀತಿಯಾಗಿ ಜೀರ್ಣವಾದ ದೇಹವು ವಾಸ ಮಾಡಲು ಯೋಗ್ಯವಿಲ್ಲದಾಗ ಆತ್ಮವು ಆ ದೇಹವನ್ನು ತಳಿಸಿ ಮತ್ತೊಂದು ದೇಹವನ್ನು ಬದಲಿಸುತ್ತದೆ. ನಾವು ನಮ್ಮ ಬದುಕಿನಲ್ಲಿ ಕೇವಲ ಅತೃಪ್ತ ಇಂದ್ರಿಯಗಳನ್ನು ತೃಪ್ತಿ ಪಡಿಸುವುದರಲ್ಲಿಯೇ ಮುಳುಗುತ್ತೇವೆ. ಇಂತಹ ಸರಳಾದ ಮಹೋನ್ನತ ತತ್ವವನ್ನು ನಾವು ಅರ್ಥಮಾಡಿಕೊಳ್ಳುವುದಿಲ್ಲ.

ವಾಸ್ತವವಾಗಿ ಇದು ದೇಹದಿಂದಾಚೆಯ ಆತ್ಮದ ಅಸ್ತಿತ್ವವನ್ನು ನಿರೂಪಿಸುತ್ತದೆ. ಹಾಗಾದರೆ ಜೀವಿತ ದೇಹಕ್ಕೂ ಮತ್ತು ನಿರ್ಜಿವ ದೇಹಕ್ಕೂ ಇರುವ ವ್ಯತ್ಯಾಸವಾದರೂ ಏನು? ದೇಹದಲ್ಲಿರುವ ಆತ್ಮವೂ ಎರಡು ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಮೊದಲನೆಯದು ಪ್ರಜ್ಞೆ. ಜೀವಿತ ದೇಹದಲ್ಲಿರುವ ಮನುಷ್ಯನಿಗೆ ಪ್ರಜ್ಞೆಯಿಂದಲೇ ನೋಡಲು, ಆಸ್ವಾದಿಸಲು ಮತ್ತು ಅನುಭವಿಸಲು ಸಾಧ್ಯವಾಗುತ್ತದೆ.

ಪ್ರಜ್ಞೆಯಿಂದಲೇ ನಾವು ಅನುಭವವನ್ನು ಹೊಂದುತ್ತೇವೆ. ಆದರೆ ನಿರ್ಜಿವ ದೇಹಕ್ಕೆ ಮಾತ್ರ ತನ್ನ ಸುತ್ತಲಿರುವ ನಿಸರ್ಗವನ್ನು ಗ್ರಹಿಸಲು ಆಗುವುದಿಲ್ಲ. ಅದಕ್ಕೆ ವಾಸನೆ, ಸ್ವಾದವನ್ನು ಅನುಭವಿಸಲು ಆಗುವುದಿಲ್ಲ, ಏಕೆಂದರೆ ಅದರಲ್ಲಿ ಪ್ರಜ್ಞೆ ಇರುವುದಿಲ್ಲ.

“ಎರಡನೆಯ ಲಕ್ಷಣ ಆತ್ಮದ ಪರಿಣಾಮಗಳು. ನಾವು ನಮ್ಮ ಸುತ್ತ ಮುತ್ತ ಜೀವಿತ ಮನುಷ್ಯನಿಂದ ನಿರ್ಮಿತವಾದ ವಿಮಾನ, ಗಗನ ಚುಂಬಿ ಕಟ್ಟಡ, ವಾಹನ, ಕಾರ್ಖಾನೆಗಳು ಮುಂತಾದವುಗಳನ್ನು ನೋಡುತ್ತೇವೆ. ಇವೆಲ್ಲವೂ ಜೀವಿತ ಮನುಷ್ಯನ ಪರಿಣಾಮಗಳು. ಇವೆರಡೂ ಲಕ್ಷಣಗಳಿಂದ ನಾವು ಆತ್ಮದ ಅಸ್ತಿತ್ವದ ಬಗ್ಗೆ ಅರ್ಥಮಾಡಿಕೊಳ್ಳಬಹುದು.” ಆತ್ಮವನ್ನು ಕಣ್ಣಿನಿಂದ ಕಾಣಲಾಗುವುದಿಲ್ಲ ಆದ್ದರಿಂದ ಅದು ಇದೇ ಎಂದು ಹೇಗೆ ಒಪ್ಪಬಹುದು? ಎಂದು ಅವನು ಪ್ರಶ್ನಿಸಿದ.

ಗ್ರಹಿಸಲಾರದು ಎಂದ ಮಾತ್ರಕ್ಕೆ ಇಲ್ಲ ಎನ್ನಲಾಗುವುದಿಲ್ಲ. ನಾವು ರೇಡಿಯೋ ತರಂಗಗಳನ್ನು ಎಲೆಕ್ಟ್ರಾನುಗಳನ್ನು ಮತ್ತು ಇನ್ನು ಎಷ್ಟೋ ವಸ್ತುಗಳನ್ನು ಗ್ರಹಿಸಲಾರೆವು. ಆದರೆ, ಅವುಗಳು ಉಂಟು ಮಾಡುವ ಪರಿಣಾಮಗಳಿಂದ ಅರಿತುಕೊಳ್ಳಬಹುದು. ಹಾಗೆಯೇ ಪ್ರಜ್ಞೆ ಹಾಗೂ ಕಾರ್ಯ ಪ್ರವೃತ್ತಿಯ ಲಕ್ಷಣಗಳಿಂದ ಆತ್ಮವನ್ನು ಗ್ರಹಿಸಬಹುದು.

ಒಂದು ವೇಳೆ ನಾವು ಜೀವಿಗಳ ಸ್ವರೂಪದ ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುವುದೇನೆಂದರೆ ಎಲ್ಲರೂ ಮತ್ತೊಬ್ಬರ ಸೇವೆಯನ್ನು ಮಾಡುತ್ತಿದ್ದಾರೆ. ದೇಶದ ರಾಷ್ಟ್ರಪತಿಯು ಕೂಡ ನಾಗರಿಕರ ಸೇವೆ ಮಾಡುತ್ತಿದ್ದಾರೆ. ಇಲ್ಲಿ ಯಾರೂ ಸೇವೆಯ ಭಾವನೆಯಿಂದ ಮುಕ್ತರಾಗಿಲ್ಲ. ಇದು ಆತ್ಮದಿಂದ ಬೇರ್ಪಡಿಸಲಾಗದಂತಹ ಲಕ್ಷಣ. ಆದರೂ ನಾವು ನಮ್ಮ ಸೇವೆಯಲ್ಲಿ ಸಂತೃಪ್ತಿಯನ್ನು ಕಾಣುವುದಿಲ್ಲ. ಉದಾಹರಣೆಗೆ ಒಬ್ಬ ಮನುಷ್ಯನು ತನ್ನ ಯಜಮಾನನನ್ನು ಪೂರ್ಣ ಸಂತೋಷಗೊಳಿಸಲಾಗದೆ ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗಕ್ಕೆ ಹಾರುತ್ತಿರುತ್ತಾನೆ.

ಒಬ್ಬ ಮನುಷ್ಯನು ತನ್ನ ಕುಟುಂಬದವರಿಗೆ ಎಷ್ಟೇ ಸೇವೆ ಮಾಡುತ್ತಿದ್ದರೂ ಕೂಡ ತನ್ನ ಪರಸ್ಪರ ಸಂಬಂಧದಲ್ಲಿ ಅಸಂತೃಪ್ತನಾಗುತ್ತಾನೆ. ಇದಕ್ಕೆ ಕಾರಣ ಅವನ ಸೇವಾ ಮನೋಭಾವವು ತಪ್ಪು ವಸ್ತುವಿನ ಮೇಲೆ ಕೇಂದ್ರಿತವಾಗಿದೆ. ನಾವು ನಮ್ಮ ಮೂಲ ಸ್ವರೂಪ ಸ್ಥಿತಿಯಲ್ಲಿ ಶ್ರೀಕೃಷ್ಣನ ಸೇವಕರಾಗಿದ್ದೇವೆ. ನಾವು ಅನೇಕ ವಿಶ್ವಾಸರ್ಹವಲ್ಲದ ಜನರಿಗೆ ಸೇವೆ ಮಾಡಿ ಅಸಂತೃಪ್ತರಾಗಿಯೇ ಇರುತ್ತೇವೆ. ಆದ್ದರಿಂದ ಬದುಕಿನಲ್ಲಿ ಸಂಪೂರ್ಣ ತೃಪ್ತಿಯನ್ನು ಪಡೆಯಲು ನಾವು ಕೃಷ್ಣನ ಸೇವೆ ಮಾಡಬೇಕು.

“ನಾವು ಇನ್ನೊಬ್ಬರಿಗೆ ಸೇವೆ ಮಾಡಿ ಹೇಗೆ ಸಂತೃಪ್ತರಾಗುತ್ತೇವೆ? ನಮ್ಮ ಅನುಭವದ ಪ್ರಕಾರ ಎಷ್ಟೋ ಸಲ ಬೇರೆಯವರ ಸಂತೋಷ ನಮಗೆ ಸಂತೋಷವಾಗಿರುವುದಿಲ್ಲ. ಇದಕ್ಕೆ ವೇದಗಳಲ್ಲಿ ಎರಡು ಉದಾಹರಣೆಗಳಿವೆ. ಮೊದಲ ಉದಾಹರಣೆ ಹೇಳುವುದಾದರೆ ಮರದ ಬೇರಿಗೆ ನೀರು ಹಾಕುವುದರಿಂದ ಆ ಮರದ ಎಲೆ ರೆಂಬೆಗಳು ಮತ್ತು ಹಣ್ಣುಗಳಿಗೆ ಅದು ನೀರು ಉಣಿಸುತ್ತದೆ. ಎರಡನೆಯ ಉದಾಹರಣೆ ಹೊಟ್ಟೆಗೆ ಆಹಾರ ಕೊಡುವುದರಿಂದ ಅದು ದೇಹದ ಬೇರೆ ಬೇರೆ ಭಾಗಗಳಿಗೆ ಶಕ್ತಿಯನ್ನು ಕೊಡುವುದು.

ಎರಡೂ ಉದಾಹರಣೆಗಳಲ್ಲಿ ಹೊಟ್ಟೆಗೆ ಮತ್ತು ಬೇರಿಗೆ ಸೇವೆ ಮಾಡಿದರೆ ಬೇರೆಲ್ಲಾ ಭಾಗಗಳು ತೃಪ್ತವಾಗುತ್ತವೆ. ಅದೇ ರೀತಿಯಾಗಿ ಶ್ರೀಕೃಷ್ಣನು ಹೇಳುತ್ತಾನೆ. ನಾವು ವಿಭಿನ್ನಾಂಶರು. ಸಂಪೂರ್ಣನಾದ ಕೃಷ್ಣನನ್ನೇ ಸೇವೆ ಮಾಡುವುದರಿಂದ ನಾವು ಕೂಡ ಸಂತೃಪ್ತರಾಗುತ್ತೇವೆ. ಈ ಕಾಲದಲ್ಲಿ ಕೃಷ್ಣನ ಸೇವೆ ಮಾಡುವುದು ತುಂಬಾ ಸರಳ.

ಅರಣ್ಯಕ್ಕೆ ಹೋಗಿ ಧ್ಯಾನ ಅಥವಾ ತಪಸ್ಸು ಮಾಡುವ ಅವಶ್ಯಕತೆ ಇಲ್ಲ ನೀವು ಮಾಡಬೇಕಾಗಿರುವುದು ಇಷ್ಟೆ “ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ” ಈ ಮಹಾ ಮಂತ್ರವನ್ನು ಜಪಿಸುವುದು. ನೀವು ಮತ್ತು ನಿಮ್ಮ ಕುಟುಂಬದವರು ಚಿಕ್ಕವರು, ದೊಡ್ಡವರು ಸೇರಿಕೊಂಡು ಈ ಸರಳವಾದ ಕ್ರಮವನ್ನು ಅನುಸರಿಸಬಹುದು”.

ಇದನ್ನು ಕೇಳುತ್ತಿರುವ ಸದ್ಗೃಹಸ್ಥರು ಮೂಕವಿಸ್ಮಿತನಾದರು. ಆಗ ನಾನು ಅವರಿಗೆ ಮೈಸೂರಿನಲ್ಲಿರುವ ಇಸ್ಕಾನ್ ದೇವಾಲಯ ನೋಡಿರುವಿರಾ? ಎಂದು ಕೇಳಲು ಅವರು ಇಲ್ಲವೆಂದರು. ಅದಕ್ಕೆ ನಾನು ಅವರಿಗೆ ಅಲ್ಲಿಯ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕೊಟ್ಟು ಅವರಿಗೆ ಪ್ರತಿ ಭಾನುವಾರ ದೇವಾಲಯಕ್ಕೆ ಭೇಟಿ ಮಾಡಿ ‘ಹರೇ ಕೃಷ್ಣ ಮಂತ್ರವನ್ನು ಪ್ರತಿದಿನ ಜಪಿಸಿರಿ ಇದರಿಂದ ನೀವು ನಿಮ್ಮ ಮೂಲ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುತ್ತೀರಿ ಎಂದು ಕೋರಿಕೊಂಡೆ.

ಅವರು ಸಂತೋಷದಿಂದ ಮೈಸೂರು ಇಸ್ಕಾನ್‌ ದೇವಾಲಯಕ್ಕೆ ಭೇಟಿ ಮಾಡುತ್ತೇನೆ ಮತ್ತು ಹರೇ ಕೃಷ್ಣ ಮಂತ್ರ ಜಪಿಸುತ್ತೇನೆ ಎಂದು ಒಪ್ಪಿಕೊಂಡರು.

ನಾವು ಬೆಂಗಳೂರಿಗೆ ಹತ್ತಿರವಾಗುತ್ತಿದ್ದೆವು. ಬಸ್ ತುಂಬ ನಿಧಾನವಾಗಿ ಹೋಗುತ್ತಿತ್ತು. ಒಬ್ಬ ಭಕ್ತ ದ್ವಾರಕದಿಂದ ತಂದುಕೊಟ್ಟಿರುವ ಪ್ರಸಾದವನ್ನು ಅವರಿಗೆ ಕೊಟ್ಟೆನು. ಅವರು ಸಂತೋಷದಿಂದ ಸ್ವೀಕರಿಸಿದರು. ಬಸ್ ಬಸ್‌ ಸ್ಟ್ಯಾಂಡಿಗೆ ಬಂದಿತು. ನಾನು ಮತ್ತೊಮ್ಮೆ ಅವರಿಗೆ ದೇವಸ್ಥಾನಕ್ಕೆ ಭೇಟಿಕೊಡಿ ಎಂದು ಕೇಳಿಕೊಂಡೆನು. ಒಟ್ಟಿನಲ್ಲಿ ಕೃಷ್ಣನ ಬಗ್ಗೆ ಪ್ರಸಾರ ಮಾಡಿದ್ದಕ್ಕೆ, ಜೀವನದ ನಿಜವಾದ ಉದ್ದೇಶವನ್ನು ತಿಳಿಸಿದ್ದಕ್ಕೆ ನನ್ನಲ್ಲಿ ಸಂತೃಪ್ತ ಭಾವನೆ ಮೂಡಿತ್ತು. ದೇವಸ್ಥಾನಕ್ಕೆ ಹಿಂತಿರುಗಲು ಆಟೋ ಹುಡುಕಿ ಅದನ್ನು ಹತ್ತಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi