ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಕೆಲವು ಶಿಷ್ಯರ ನಡುವೆ ಭುವನೇಶ್ವರದಲ್ಲಿ, ಫೆಬ್ರವರಿ 1977ರಲ್ಲಿ ನಡೆದ ಸಂವಾದ.
ಭಕ್ತ: ಪ್ರಭುಪಾದರೇ, “ಭಗವಂತನ ಸಂದೇಶವನ್ನು ಬೋಧಿಸುವುದು ಕೃತಜ್ಞತೆ ಇಲ್ಲದ ಕೆಲಸ” ಎಂದು ನೀವು ಹೇಳಿರುವಿರಿ.
ಶ್ರೀಲ ಪ್ರಭುಪಾದ : ಹೌದು. ಏಸು ಕ್ರಿಸ್ತನತ್ತ ನೋಡಿ – ಅವನನ್ನು ಶಿಲುಬೆಗೆ ಏರಿಸಲಾಯಿತು. ಅವನ ತಪ್ಪೇನು? ಅವನು ಭಗವತ್ ಪ್ರಜ್ಞೆಯನ್ನು, ಜ್ಞಾನವನ್ನು ಬೋಧಿಸುತ್ತಿದ್ದನಷ್ಟೆ. ಅವನನ್ನು ನಿಜವಾಗಿಯೂ ಕೊಲ್ಲಲಾಗಲಿಲ್ಲ. ಭಗವಂತನ ಶುದ್ಧ ಭಕ್ತರನ್ನು ಯಾರೂ ಕೊಲ್ಲಲಾಗದು.
ಭಕ್ತ: ಆದರೆ ಕೃತಜ್ಞಹೀನರು ಪ್ರಯತ್ನಿಸಿದರು.
ಶ್ರೀಲ ಪ್ರಭುಪಾದ : ಹೌದು. ಎಂತಹ ಶ್ರೇಷ್ಠ ವ್ಯಕ್ತಿ, ದೇವ ಪುತ್ರ. ದೈವ ಪ್ರಜ್ಞೆಯನ್ನು ಅರುಹಲು ಅವನು ಬಯಸಿದ್ದ. ಅದಕ್ಕೆ ಪ್ರತಿಯಾಗಿ ಅವನನ್ನು ಶಿಲುಬೆಗೆ ಏರಿಸಲಾಯಿತು. ಏಸು ಕ್ರಿಸ್ತನನ್ನು ನಾವು ಅಮುಖ್ಯ ಎಂದು ಭಾವಿಸಿಲ್ಲ. ನಾವು ಅವನಿಗೆ ಎಲ್ಲ ರೀತಿಯ ಗೌರವ ಸಲ್ಲಿಸುತ್ತೇವೆ. ಅವನು ಭಗವಂತನ ಶುದ್ಧ ಪ್ರತಿನಿಧಿ. ನಿಜ, ಅವರು ತಮ್ಮ ಬೋಧನೆಯನ್ನು ಕಾಲ, ಸ್ಥಳ, ಮತ್ತು ಪರಿಸ್ಥಿತಿ, ಯುಗ, ಪ್ರದೇಶ ಮತ್ತು ಜನರ ಮನೋಧರ್ಮಕ್ಕೆ ಅನುಗುಣವಾಗಿ ಮಾಡಿದರು. ಏನೇ ಆಗಲಿ, ಅವನು ಭಗವಂತನ ಶುದ್ಧ ಪ್ರತಿನಿಧಿ.
ಭಕ್ತ: ಅವನು ತನ್ನ ಎಲ್ಲ ಬೋಧನೆಯನ್ನು ಕೇವಲ ಮೂರು ವರ್ಷಗಳಲ್ಲಿ ಮಾಡಲು ಸಾಧ್ಯವಾಯಿತು, ಕೂಡ.
ಶ್ರೀಲ ಪ್ರಭುಪಾದ : ಅವನಿಗೆ ಬೋಧಿಸಲು ಅಲ್ಪ ಸಮಯವಿತ್ತು. ಆದರೂ ಅವನು ಮೂರು ವರ್ಷಗಳಲ್ಲಿ ಮಾಡಿದ್ದು ಅದ್ಭುತ.
ಭಕ್ತ: ಹೌದು. ಕಳೆದ ಎರಡು ಸಾವಿರ ವರ್ಷಗಳಿಂದ ಅವನು ವಿಶ್ವದಲ್ಲಿ ಜನಪ್ರಿಯನಾಗಿದ್ದಾನೆ.
ಶ್ರೀಲ ಪ್ರಭುಪಾದ : ಹೌದು, ಇದು ತಮಾಷೆಯಲ್ಲ. ಕ್ರಿಸ್ತನು ಭಗವಂತನ ಪ್ರತಿನಿಧಿಯಾಗಿರದಿದ್ದರೆ, ಅವನು ಹೇಗೆ ಅಷ್ಟು ಜನಪ್ರಿಯನಾಗಿ ಇರುತ್ತಾನೆ? ನಮಗೆ ಅದು ಗೊತ್ತು – ಕ್ರಿಸ್ತನು ಭಗವಂತನನ್ನು ಪ್ರತಿನಿಧಿಸುತ್ತಾನೆ.
ಮೆಲ್ಬೋರ್ನ್‌ನಲ್ಲಿ, ಒಬ್ಬ ಪಾದ್ರಿಯು ನನ್ನನ್ನು, “ಏಸು ಕ್ರಿಸ್ತನ ಬಗೆಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. ನಾನು ಅವರಿಗೆ ಹೇಳಿದೆ, “ಅವನು ನಮ್ಮ ಗುರು.” ಇದನ್ನು ಅವರು ಮೆಚ್ಚಿದರು. ಕ್ರಿಸ್ತನು ಭಗವತ್ ಪ್ರಜ್ಞೆಯನ್ನು ಬೋಧಿಸುತ್ತಿದ್ದಾನೆ. ಆದುದರಿಂದ ಅವನು ನಮ್ಮ ಗುರು, ನಮ್ಮ ಆಧ್ಯಾತ್ಮಿಕ ಗುರು. ಅದು ವಾಸ್ತವ. ಅವನನ್ನು ಬೇರೆ ರೀತಿ ಭಾವಿಸಬೇಡಿ. ಅವನು ನಮ್ಮ ಗುರು.
ಮತ್ತು ಕ್ರಿಸ್ತನ ಹೆಸರು – ಮೂಲತಃ ಅವನನ್ನು `ಜೀಸಸ್ ಆಫ್ ದ ಕ್ರೈಸ್ಟ್’ ಎಂದು ಕರೆಯುತ್ತಿದ್ದರಲ್ಲವೆ?
ಭಕ್ತ: ಹೌದು.
ಶ್ರೀಲ ಪ್ರಭುಪಾದ : ಜೀಸಸ್ ಆಫ್ ದ ಫಾದರ್. ಜೀಸಸ್ ಆಫ್ ದ ಕ್ರೈಸ್ಟ್. ಮತ್ತು ಆ ಫಾದರ್, ಆ ಕ್ರೈಸ್ಟ್ ಕೃಷ್ಣ. ಕ್ರಿಸ್ತ ಎಂಬುವುದು ಕೃಷ್ಣನ ಮತ್ತೊಂದು ಉಚ್ಚಾರ. ಅಲ್ಲದೆ, ಅವನ ಬೋಧನೆಯಿಂದ ಏಸು ಕ್ರಿಸ್ತನು ಭಗವಂತನನ್ನು ಪ್ರತಿನಿಧಿಸುತ್ತಾನೆ ಎಂಬುವುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು.
ಭಕ್ತ: ಹೌದು. ಅವನು ಏನು ಬೋಧಿಸುತ್ತಿದ್ದ, ಅವನು ತನ್ನ ಮೂಲ ಶಿಷ್ಯರಿಗೆ ಏನು ಕೊಡುತ್ತಿದ್ದ – ಅವನು ಅವರಿಗೆ ಇಂತಹ ಉದಾಹರಣೆಗಳನ್ನು ನೀಡಿದ, “ಪಕ್ಷಿಗಳು ತಮ್ಮ ಆಹಾರದ ಬಗೆಗೆ ಚಿಂತಿಸುವುದಿಲ್ಲ. ಆದರೂ ದೇವರು ಅವುಗಳ ಎಲ್ಲ ಬೇಡಿಕೆಗಳನ್ನೂ ಪೂರೈಸುತ್ತಿದ್ದಾನೆ. ಆದುದರಿಂದ ನೀವು ಏಕೆ ನಿಮ್ಮ ಆಹಾರ ಅಥವಾ ಇತರ ಅಗತ್ಯಗಳ ಬಗೆಗೆ ಚಿಂತಿಸುವಿರಿ? ಸುಮ್ಮನೆ ಭಗವಂತನ ಕಾನೂನುಗಳನ್ನು ಅನುಸರಿಸಿ ಮತ್ತು ಹಾಗೇ ಮಾಡುವಂತೆ ಇತರರಿಗೂ ತಿಳಿಸಿ. ದೇವರು ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾನೆ. ಅವನು ನಿಮಗೆ ಒದಗಿಸುವುದಿಲ್ಲವೆ?”
ಶ್ರೀಲ ಪ್ರಭುಪಾದ : ಹೌದು ಅವನು ಹಾಗೆ ಹೇಳಿದ, ಹೌದಲ್ಲವೇ? ಅದು ವಾಸ್ತವಾಂಶ. ಅದು ನಮ್ಮ ಧ್ಯೇಯ : ಸರಳ ಜೀವನ ಮತ್ತು ಉನ್ನತ ಚಿಂತನೆ. ಅಂತಹ ವಾಗಾಡಂಬರದ ಆರ್ಥಿಕ ವ್ಯವಸ್ಥೆಯ ಅಗತ್ಯವಿಲ್ಲ. ಭಗವಂತನ ಸಹಜ ಆರ್ಥಿಕ ವ್ಯವಸ್ಥೆಯ ಮೇಲೆ ಅವಲಂಬಿತರಾಗಿ – ಭೂಮಿಯ ಉತ್ಪನ್ನಗಳು ಮತ್ತು ಹಸುವಿನ ಹಾಲು. ಮತ್ತು ಮುಖ್ಯವಾಗಿ, ನಿಮ್ಮ ಅಮೂಲ್ಯ ಮಾನವ ಜೀವನವನ್ನು ದೈವ ಪ್ರಜ್ಞಾವಂತರಾಗಲು ಬಳಸಿ.
ಭಕ್ತ: ಆದುದರಿಂದ ಭಕ್ತಿಯ ತತ್ತ್ವಗಳನ್ನು ಬೋಧಿಸುತ್ತ ಕ್ರಿಸ್ತನು ಭಗವಂತನ ಶುದ್ಧ ಭಕ್ತನಾಗಿದ್ದ.
ಶ್ರೀಲ ಪ್ರಭುಪಾದ : ಓ, ಹೌದು. ಕ್ರಿಸ್ತನು ಮೀನು ಅಥವಾ ಮಾಂಸವನ್ನೂ ಕೂಡ ಸೇವಿಸಿರಬಹುದೆಂದು ಕೆಲವು ಬಾರಿ ಜನರು ಪ್ರಚಾರ ಮಾಡುತ್ತಾರೆ. ಆದರೆ ಅದು ನಿಜ ಎಂದು ಅಂದುಕೊಂಡರೂ, ಆಗ ಬೇರೆ ಏನೂ ಲಭ್ಯವಿರಲಿಲ್ಲದಿರಬಹುದು. ತನ್ನ ಇಂದ್ರಿಯ ತೃಪ್ತಿಗಾಗಿ ಇಂತಹ ಅಸಹ್ಯಕರ ವಸ್ತುಗಳನ್ನು ಸೇವಿಸಲು ಅವನು ಬಯಸಿದ ಎಂದಲ್ಲ. ಬೇರೆ ಏನೂ ಇಲ್ಲದಿದ್ದರೆ ಏನು ಮಾಡುವುದು?
ಇದು ನಿಮ್ಮ ಅಮೆರಿಕದಂತೆ ಅಲ್ಲ. ಸಮೃದ್ಧವಾಗಿ ಧಾನ್ಯಗಳು, ಬೀಜಗಳು ಮತ್ತು ಹಾಲು ಇದ್ದರೂ ನೀವು ಕಸಾಯಿಖಾನೆಗಳನ್ನು ಇಟ್ಟುಕೊಂಡಿರುವಿರಿ ಮತ್ತು `ಪೌಷ್ಟಿಕಾಂಶ’ ಅಥವಾ `ಕ್ರಿಸ್ತನು ಇದನ್ನು ಸೇವಿಸಿರಬಹುದು’ ಎಂಬ ನೆವದಲ್ಲಿ ಪ್ರತಿ ದಿನ ಅಸಂಖ್ಯ ಬಡ ಪ್ರಾಣಿಗಳನ್ನು ಕೊಲ್ಲುವಿರಿ. ಇದು ಮೂರ್ಖತನ.
ಭಕ್ತ: ಆ ದಿನಗಳಲ್ಲಿ ಸ್ವಚ್ಛವಾದ ನೀರು ಸುಲಭವಾಗಿ ದೊರೆಯುತ್ತಿರಲಿಲ್ಲ. ಆದುದರಿಂದ ಜನರು ಅಗ್ಗದ ವೈನ್ ಅನ್ನು ಸೇವಿಸುತ್ತಿದ್ದರು. ನಿಜವಾಗಿಯೂ ಅದು ಮೃದುವಾಗಿ ಹುದುಗಿಸಿದ ದ್ರಾಕ್ಷಾರಸ. ಆಗ ಸ್ವಚ್ಛ ನೀರಿನ ಕೊರತೆ ಇದ್ದ ಕಾರಣ ಅವರು ಇದನ್ನು ಕುಡಿಯುತ್ತಿದ್ದರು.
ಶ್ರೀಲ ಪ್ರಭುಪಾದ : ಅವರು ಈ ಬೇಡಿಕೆ ಅಥವಾ ಕೋರಿಕೆ ಮಾಡಿದರೆಂದಲ್ಲ, “ಕ್ರಿಸ್ತನು ಸ್ವಲ್ಪ ದ್ರಾಕ್ಷಾರಸವನ್ನು ತೆಗೆದುಕೊಂಡಿದ್ದಿರಬಹುದು. ಆದ ಕಾರಣ ನಾವು ಈಗ ಬಾಟಲುಗಟ್ಟಲೆ ಮದ್ಯ, ಬೀರ್ ಮತ್ತು ಸಾರಾಯಿ ಕುಡಿದು ಮೈಮರೆಯೋಣ.”
ಯಾರು ಭಗವಂತನ ವೈಭವವನ್ನು ಬೋಧಿಸುತ್ತಿದ್ದಾರೋ ಅವರು ಯೋಗ್ಯ ಗುರು ಅಥವಾ ಆಧ್ಯಾತ್ಮಿಕ ಗುರು. ಆದುದರಿಂದ ಈ ಜನರು ಕ್ರಿಸ್ತನನ್ನು ಅಷ್ಟು ಲಘುವಾಗಿ ಹೇಗೆ ಪರಿಗಣಿಸುವರು? ವೇದಗಳು ತದ್ ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್ : “ಯೋಗ್ಯ ಆಧ್ಯಾತ್ಮಿಕ ಗುರು ಮಾತ್ರ ಆಧ್ಯಾತ್ಮಿಕ ಸತ್ಯವನ್ನು ಶ್ರುತಪಡಿಸುವುದು ಸಾಧ್ಯ.” ಕ್ರಿಸ್ತನು ಇಡೀ ಜಗತ್ತಿಗೆ ಆಧ್ಯಾತ್ಮಿಕ ಸತ್ಯವನ್ನು ತಿಳಿಸಿದನು. ಅವನು ಯೋಗ್ಯ ಗುರುವಾಗಿಲ್ಲದಿದ್ದರೆ ಅವನು ಅದನ್ನು ಹೇಗೆ ಮಾಡುವುದು ಸಾಧ್ಯವಿತ್ತು?
ಭಕ್ತ: ಹೌದು. ಹೆಸರಿಗೆ ಮಾತ್ರ ಇರುವ ಅವರ ಅನುಯಾಯಿಗಳಿಗಿಂತ ನಮ್ಮಲ್ಲೇ ಕ್ರಿಸ್ತನ ಬಗೆಗೆ ಒಳ್ಳೆಯ ಮೆಚ್ಚುಗೆ ಇದೆ.
ಶ್ರೀಲ ಪ್ರಭುಪಾದ : ಒಳ್ಳೆಯದು. ಹೌದು.
ಭಕ್ತ: …ಏಕೆಂದರೆ ಅವನನ್ನು ನಾವು “ಭಗವಂತನ ಹರಕೆಯ ಕುರಿ” ಎಂದು ಹೆಗಲು ಕೊಡವಿ ತಳ್ಳಿಹಾಕಲಾಗದು ಮತ್ತು ಪಾಪ ಕರ್ಮ ಮಾಡುತ್ತಾ ಹೋಗಲು ಅವನನ್ನು ನೆವವನ್ನಾಗಿ ಬಳಸಿಕೊಳ್ಳಲಾಗದು ಎಂಬುವುದು ನಮಗೆ ಗೊತ್ತು.
ಶ್ರೀಲ ಪ್ರಭುಪಾದ : ಹೌದು, ಕ್ರಿಸ್ತನು ಭಗವಂತನ ಯೋಗ್ಯ ಪ್ರತಿನಿಧಿಯಾಗಿದ್ದರೆ, ನಿಜವಾದ ಆಧ್ಯಾತ್ಮಿಕ ಗುರುವಾಗಿದ್ದರೆ, ಆಗ ನಾವು ಅವನ ಬೋಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಆದುದರಿಂದ ನನ್ನ ಶಿಷ್ಯರು ಶ್ರೇಷ್ಠ ಕ್ರಿಶ್ಚಿಯನ್ನರು. ನಾವು ಕ್ರಿಸ್ತನನ್ನು ನಮ್ಮ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸುತ್ತೇವೆ. ನಾವು ಅವನ ಬೋಧನೆಗಳನ್ನು ಅನುಸರಿಸುತ್ತೇವೆ.
ಈಗ, ಕ್ರಿಶ್ಚಿಯನ್ನರಿಗೆ ಸುಧಾರಣೆಯಾಗಬೇಕೆಂದಿದ್ದರೆ, ನಾವು ಅವರಿಗೆ ಸಹಾಯ ಮಾಡಬಹುದು. ಬೈಬಲ್ ಆಧಾರದ ಮೇಲೆಯೇ ಅವರು ಸುಧಾರಣೆಗೊಳ್ಳಲು ನಾವು ನೆರವಾಗಬಹುದು. ಅದೇನೂ ಕಷ್ಟವಲ್ಲ. ನನ್ನ ಬಹುತೇಕ ಶಿಷ್ಯರು ಕ್ರಿಶ್ಚಿಯನ್ ಗುಂಪಿನಿಂದ ಬಂದಿದ್ದಾರೆ. ಆದುದರಿಂದ ಕ್ರಿಶ್ಚಿಯನ್ನರು ಸುಧಾರಣೆಗೊಳ್ಳಬಹುದು, ಅವರು ಭಗವಂತನ ಕಾನೂನುಗಳನ್ನು ಅನುಸರಿಸಲು ಹಿಂದಿರುಗಬಹುದು. ಬೈಬಲ್ ಕೂಡ ಭಗವಂತನ ಪವಿತ್ರ ನಾಮಗಳನ್ನು, ವೈಭವವನ್ನು ಜಪಿಸಲು ಶಿಫಾರಸು ಮಾಡುತ್ತದೆ. ಈ ಯುಗವು ಕೀಳುಮಟ್ಟದ್ದಾಗಿದೆ. ಆದುದರಿಂದ ಆಧ್ಯಾತ್ಮಿಕ ಯಶಸ್ಸು ಮತ್ತು ಸುಖಕ್ಕೆ ಅತ್ಯುತ್ತಮ ಮಾರ್ಗವೆಂದರೆ ಭಗವಂತನ ವೈಭವಗಳಲ್ಲಿ ಜೀವನ ನಡೆಸುವುದು.