ಕಾಲನ ಪ್ರಭಾವಗಳು

– ಆಕರ: ಶ್ರೀ ಮಧುಪಂಡಿತ ದಾಸರ ಆಂಗ್ಲ ಉಪನ್ಯಾಸ, ಅಧ್ಯಕ್ಷರು ಇಸ್ಕಾನ್‌, ಬೆಂಗಳೂರು. ಸಂಗ್ರಹಾನುವಾದ: ಚೇತನಾ ತೀರ್ಥಹಳ್ಳಿ

ತೇ ತು ತೂರ್ಣಮುಪವ್ರಜ್ಯ ದೇವಕ್ಯಾ ಗರ್ಭಜನ್ಮತತ್ |

ಆಚಖ್ಯುರ್ಭೋಜರಾಜಾಯ ಯದುದ್ವಿಗ್ನಃ ಪ್ರತೀಕ್ಷತೇ ||2||

ತಲ್ಪಾತ್ ತೂರ್ಣಮುತ್ಥಾಯ ಕಾಲೋಽಯಮಿತಿ ವಿಹ್ವಲಃ |

ಸೂತೀಗೃಹಮಗಾತ್ ತೂರ್ಣ೦ ಪ್ರಸ್ಖಲನ್ ಮುಕ್ತಮೂರ್ಧಜಃ ||3||

ಒಳಕೋಣೆಯಿಂದ ಮಗುವಿನ ಅಳುದನಿ ಕೇಳುತ್ತಲೇ ಕಾವಲುಗಾರರು ಎಚ್ಚರಗೊಂಡರು. ಅವರು ಈ ಘಳಿಗೆಗಾಗಿಯೇ ಕಾಯುತ್ತಿದ್ದರಾದರೂ ತಡರಾತ್ರಿಯಾಗುತ್ತ ಬಂದಿದ್ದುದರಿಂದ ಅವರಿಗೆ ಜೋಂಪು ಹತ್ತಿತ್ತು. ಅವರು ಕೂಡಲೇ ಆತುರಾತುರವಾಗಿ ಕಂಸನ ಬಳಿ ಧಾವಿಸಿದರು. ಎಂಟನೆ ಮಗುವಿನ ಜನನದ ಸುದ್ದಿಯನ್ನು ತಿಳಿಸಿದರು.

ಕಂಸನಾದರೋ, ಗಾಢ ನಿದ್ರೆಯಲ್ಲಿ ಮೈಮರೆತಿದ್ದ. ಅಪರಾತ್ರಿಯಲ್ಲಿ ಬರಸಿಡಿಲಿನಂತೆ ಬಂದೆರಗಿತ್ತು ಮಗುವಿನ ಜನನದ ಸುದ್ದಿ. ಅದರಲ್ಲೂ ದೇವಕಿಯ ಎಂಟನೆ ಮಗು! ತನ್ನನ್ನು ಕೊಲ್ಲಲಿರುವ ಮಗು!! ಅವನ ತಲೆ ಗಿರ್ರೆಂದಿತು. “ಇದು ನನ್ನನ್ನು ಆಹುತಿ ತೆಗೆದುಕೊಳ್ಳಲೆಂದೇ ಹುಟ್ಟಿ ಬಂದಿರುವ ಕಾಲನಲ್ಲವೆ” ಅವನು ಚಿಂತಿಸಿದ. ತಡ ಮಾಡಲಿಲ್ಲ. ಮರು ಘಳಿಗೆಯಲ್ಲಿ ಆತ ದೇವಕಿ-ವಸುದೇವರನ್ನು ಬಂಧಿಯಾಗಿರಿಸಿದ್ದ ನಿವಾಸದೆದುರು ನಿಂತಿದ್ದ.

‘ಕಾಲ’….. ಪ್ರಭುಪಾದರು ಕಾಲನನ್ನು ಭಗವಂತನ ಅವ್ಯಕ್ತ ರೂಪ ಎಂದು ವಿವರಿಸಿದ್ದಾರೆ. ಕಾಲ, ಭಗವಂತನ ಶಕ್ತಿ. ಸಮಸ್ತ ಜೀವರಾಶಿಯನ್ನು ಒಂದು ಕ್ಷಣದಿಂದ ಮತ್ತೊಂದು ಕ್ಷಣಕ್ಕೆ ಸೆಳೆಯುತ್ತಿರುವ ಶಕ್ತಿ. ಇದು ಸದಾ ಚಲನಶೀಲವಾದುದು.

ಪರಮಾತ್ಮನು ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿರುವನು. ಆದರೆ ನಾವು ಅವನತ್ತ ನೋಡುತ್ತಿಲ್ಲ. ಪರಮಾತ್ಮನ ಅವ್ಯಕ್ತರೂಪವಾದ ಕಾಲವು ನಮ್ಮನ್ನು ಆತನ ಸಮೀಪ ನೂಕುತ್ತಿರುವುದು. ಪ್ರಭುಪಾದರು ಹೇಳುವಂತೆ, ಕಾಲನ ಏಕೈಕ ಉದ್ದೇಶ – ಸಂಹಾರ. ಆತನು ಈ ಭೌತಿಕ ಪ್ರಪಂಚದ ಪ್ರತಿಯೊಂದು ವಸ್ತುವಿನ ಮೇಲೂ ತನ್ನ ಪ್ರಭುತ್ವ ಸಾಧಿಸಿರುವನು.

ಈ ಎಲ್ಲ ವಸ್ತುಗಳನ್ನೂ, ಜೀವಿಗಳನ್ನೂ ನಾಶಗೊಳಿಸುತ್ತ ಸಾಗುವುದೇ ಅವನ ಕೆಲಸ. ವ್ಯಕ್ತಿಯ ಚಟುವಟಿಕೆಗಳಿಗೆ ಸರಿಯಾಗಿ ಕರ್ಮಗಳಿಗೆ ಸರಿಯಾಗಿ ಭಗವಂತನು ಪ್ರತಿ ಕ್ಷಣವನ್ನು ನಿಗದಿ ಪಡಿಸಿರುತ್ತಾನೆ. ಅದರಂತೆ ಕಾಲವು ತನ್ನ ಕರ್ತವ್ಯವನ್ನು ನೆರವೇರಿಸುತ್ತ ಮುಂದುವರಿಯುತ್ತಾನೆ.

ಗುಲಾಬಿಯ ಬಳಿ ನಿಂತಾಗ ಅದರ ಸುಗಂಧ ಅನುಭವಕ್ಕೆ ಬರುವಂತೆ, ನಮ್ಮ ಹೃದಯದಲ್ಲಿ ನೆಲೆಸಿರುವ ಪರಮಾತ್ಮನಿಗೆ ನಮ್ಮ ಬಯಕೆಗಳು ಅನುಭವಕ್ಕೆ ಬರುತ್ತವೆ. ಅವನು ನಮ್ಮ ಕರ್ಮಾನುಸಾರ ಅವನ್ನು ಈಡೇರಿಸಿಕೊಡುತ್ತಾನೆ. ಕರ್ಮದ ಆಧಾರದ ಮೇಲೆ, ಕಾಲ ಮತ್ತು ಪರಮಾತ್ಮ ಇಬ್ಬರೂ ಸೇರಿ ಪ್ರತಿಯೊಂದು ಜೀವಿಗೆ ಅದರ ಬಯಕೆಯನ್ನು ಒದಗಿಸಿಕೊಡುತ್ತಾರೆ ಅಥವಾ ನಿರಾಕರಿಸುತ್ತಾರೆ.

ಹೀಗೆ, ಈ ಭೌತಿಕ ಜಗತ್ತಿನ ಪ್ರತಿಯೊಂದು ಜೀವಿಯೂ ನಿರಂತರವಾಗಿ ಕಾಲನ ಅಧೀನದಲ್ಲಿರುತ್ತದೆ, ಮತ್ತು ಹೀಗೆ ಅದರ ಅಧೀನದಲ್ಲಿದ್ದುಕೊಂಡೇ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತದೆ. ಕಾಲನು ನೀಡಿರುವ ಸೀಮಿತ ಅವಕಾಶದಲ್ಲಿಯೇ ಅದು ತನ್ನ ಪಾಲಿನ ಕೆಲಸವನ್ನು ಮಾಡಲು ಉದ್ಯುಕ್ತವಾಗಿರುತ್ತದೆ.

ಉದಾಹರಣೆಗೆ, ನಾವೀಗ ಒಂದು ಶರೀರದಲ್ಲಿ ಗಂಡು ಶರೀರದಲ್ಲಿ ಇರುವೆವೆಂದಾದರೆ, ಗಂಡು ಶರೀರದ ಎಲ್ಲ ಸೀಮಿತತೆಗಳೂ ನಮ್ಮ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಈ ನಿರ್ಬಂಧಗಳ ನಡುವೆಯೇ ಆ ದೇಹದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ನಡೆಯುವ ಬದಲಾವಣೆಗಳ ಮೇಲೆ ಕಾಲನ ಪ್ರಬಲ ಪ್ರಭಾವವಿರುತ್ತದೆ. ಈ ದೇಹ ಇಂದು ಆರೋಗ್ಯಪೂರ್ಣವಾಗಿ ತೋರಬಹುದು. ಮರುದಿನ ಸಂಪೂರ್ಣ ಅಸ್ವಸ್ಥವಾಗಬಹುದು. ಒಂದು ದಿನ ಅದು ತೀರಿಹೋಗಬಹುದು. ಇವೆಲ್ಲವನ್ನೂ ನಿರ್ಧರಿಸುವವನು ಕಾಲ.

ಕಾಲನ ಈ ಚಟುವಟಿಕೆಯ ಸಮಯದಲ್ಲಿ, ಹೃದಯದಲ್ಲಿ ಕುಳಿತ ಪರಮಾತ್ಮನು ಎಲ್ಲವನ್ನೂ ಅನುಭವಿಸುತ್ತಿರುವನು. ಅವನು ಈ ಎಲ್ಲ ಪ್ರಕ್ರಿಯೆಗಳಿಗೆ ಸಂದರ್ಭ ಸೂಕ್ತವಾಗಿದೆಯೇ ಎಂದು ಗಮನಿಸುತ್ತಿರುವನು. ಜೀವಿಯ ಮನಸ್ಸಿನಲ್ಲಿ ಇರಬಹುದಾದ ಕಾಮನೆಗಳನ್ನು ಗಣಿಸುತ್ತಿರುವನು. ಕಾಲನ ಪ್ರಭಾವವು ಸೂಕ್ತ ಸಮಯದಲ್ಲಿ ಸೂಕ್ತ ರೀತಿಯಲ್ಲಿ ನಡೆಯುತ್ತಿದ್ದರೂ, ಜೀವಿಯ ಮನಸ್ಸಿನಲ್ಲಿ ಹಿಂದಿನ ಬಯಕೆಗಳೇನಾದರೂ ಉಳಿದುಹೋಗಿದೆಯೇ ಎಂದು ಪರಿಶೀಲಿಸಿ, ಅದನ್ನು ಮತ್ತೆ ನೆನಪಿಸಿ, ಅದು ನೆರವೇರುವಂತಹ ಸಂದರ್ಭ ಕಲ್ಪಿಸಿಕೊಡುವನು.

ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲಿ ಬಯಕೆಯ ಬೀಜಗಳಿರುವವು. ಕಾಲವು ಪಕ್ವಗೊಂಡಾಗ ಅವು ಮೊಳೆತು ಬೆಳೆಯುವವು. ಕರ್ಮವಶದಿಂದ ಆ ದೇಹದಲ್ಲಿರುವ ಕಾಲಮಾನದಲ್ಲಿ ಬಯಕೆಯು ಪರಿಪೂರ್ಣವಾಗದೆ ಹೋದರೆ, ಪರಮಾತ್ಮನು ಮತ್ತೊಂದು ದೇಹವನ್ನೂ ಅವಕಾಶವನ್ನೂ ಒದಗಿಸಿಕೊಡುವನು.

ಕಾಲನು ಜೀವರಾಶಿಗಳನ್ನು ಭೌತಿಕ ಜಗತ್ತಿನಿಂದಾಚೆ ತಳ್ಳುವ ಸಮಯದಲ್ಲೇ ನಮ್ಮ ಹೃದಯದಲ್ಲಿರುವ ಆಶೆಯ ಬೀಜಗಳು ಮೊಳೆತು ಚಿಗುರುವವು.  ಆದ್ದರಿಂದ ಪ್ರತಿಯೊಬ್ಬವ್ಯಕ್ತಿಯೂ ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ, ಚಿಂತನೆಯಲ್ಲಿ ಮಗ್ನನಾಗಿರುವನು. ನಾವು ಏಕಕಾಲಕ್ಕೆ ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವೆವು.

ಇಂದಿನ ನಮ್ಮ ಚಿಂತನೆ ನಾಳೆಯೂ ಮುಂದುವರಿಯುವುದೆಂದು ಖಚಿತವಿಲ್ಲ. ಅಥವಾ ಮರುದಿನ ನಮಗೆ ಯಾವ ಚಿಂತನೆ ಮೂಡುವುದೆಂಬುದೂ ತಿಳಿಯುವುದಿಲ್ಲ. ಅದನ್ನು ನಿರ್ಧರಿಸುವವನು ಕಾಲ. ಆ ಅಧಿಕಾರ ಅವನಿಗೆ ಮಾತ್ರ ನೀಡಲಾಗಿದೆ.

ಆದರೆ, ಯಾರು ಭಕ್ತರೋ, ಯಾರು ಶರಣಾಗತರೋ, ಅವರಿಗಾಗಿ ಬೇರೆಯೇ ನಿಯಮವಿದೆ, ಭಕ್ತರಿಗಾಗಿ ಭಗವಂತನು ‘ಉಪದೃಷ್ಟ’ ನಾಗಿ, ‘ಅನುಮಂತ’ ನಾಗಿ ವರ್ತಿಸುತ್ತಾನೆ. ಅವನು ಅವರ ಮುಂದಾಳುವಾಗಿಯೂ ಮಾರ್ಗದರ್ಶಕನಾಗಿಯೂ ಇರುತ್ತಾನೆ. ಈ ಕಾರಣದಿಂದ ಅವರಿಗೆ ಸ್ಮೃತಿ, ಜ್ಞಾನಗಳು ದೊರಕುತ್ತವೆ. ಆ ಜ್ಞಾನದ ಪ್ರಭಾವದಿಂದ, ಅದರಂತೆ ನಡೆದುಕೊಳ್ಳುವ ಒಲವು ಅವರಿಗೆ ಕೃಷ್ಣನ ಸಾರಥ್ಯದಿಂದ ದೊರೆಯುತ್ತದೆ.

ಹಲವು ಚಿಂತನೆಗಳು, ಹಲವು ಶಕ್ತಿಗಳೊಡನೆ ವ್ಯವಹರಿಸುವ ಸಂದರ್ಭಗಳನ್ನು ತಂದಿಡುವವನು ಕಾಲನು. ಇದನ್ನು ಹೃದಯದಲ್ಲಿ ಅರಿತುಕೊಳ್ಳಬೇಕೆಂದರೆ, ವ್ಯಕ್ತಿಯು ತನ್ನ ಇ೦ದ್ರಿಯಗಳ ಮೇಲೆ ಸಂಪೂರ್ಣ ಹತೋಟಿಯುಳ್ಳವನಾಗಿರಬೇಕು. ಏಕೆಂದರೆ, ಈ ಘಳಿಗೆಯಲ್ಲಿ ವ್ಯಗ್ರವಾಗದೆ ಇರುವುದೆಂದು ಯಾರೂ ಖಚಿತತೆ ನೀಡಲಾರರು.

ಅಲ್ಲಿ ಕಾಲಿನ ಕೈವಾಡವಿರುತ್ತದೆ. ಸದಾ ಚಲನಶೀಲನಾಗಿರುವ ಕಾಲನು ಸಂದರ್ಭಗಳನ್ನು ಬದಲಿಸುತ್ತಲೇ ಇರುತ್ತಾನೆ. ಆದ್ದರಿಂದ ನಾವು ಇಂದ್ರಿಯಗಳನ್ನು, ಮನಸ್ಸನ್ನು ನಂಬಿಕೊಂಡು ನೆಮ್ಮದಿಯಿಂದ ಇರುವುದಾಗದು.

ಕಾಲನ ವೇಗ ಪ್ರಚಂಡವಾದುದು. ಅವನ ವೇಗದ ಪ್ರಭಾವಕ್ಕೆ ಭಕ್ತರಲ್ಲದವರು ಬಹಳ ಬೇಗ ಸಿಲುಕಿ, ಕೊಚ್ಚಿಕೊಂಡು ಹೋಗುತ್ತಾರೆ. ಹೀಗಾಗಿಯೇ ಭಕ್ತರಲ್ಲದವರು ಸದಾ ಒಂದಿಲ್ಲೊಂದು ಬಯಕೆಯ ಸುಳಿಯಲ್ಲಿ ಸಿಕ್ಕು ಹೆಣಗುತ್ತಿರುತ್ತಾರೆ. ತಾತ್ಕಾಲಿಕ ಜಯಾಪಜಯಗಳ ಮರ್ಜಿಗೆ ಬಿದ್ದು ಸುಖದುಃಖಗಳ ಅನುಭವ ತನ್ನದಾಗಿಸಿಕೊಳ್ಳುತ್ತಾನೆ.

ಆದರೆ ಭಕ್ತನ ಸ್ಥಿತಿ ಬೇರೆಯೇ ಇದೆ. ಅವನು ಭಗವಂತನ ಪ್ರಾತಿನಿಧಿತ್ವವನ್ನು ಚೆನ್ನಾಗಿ ಬಲ್ಲ. ಅವನು ಭಗವಂತನ ನಿರ್ದೇಶನಗಳನ್ನು ಅರಿತಿರುವನು. ಭಕ್ತನ ಮೇಲೆ ಕೃಷ್ಣನ ಬಲವು ಸದಾ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸುವುದು. ಅವನ ಮೇಲೆ ಆಧ್ಯಾತ್ಮಿಕ ಗುರುವಿನ ಕರುಣೆಯೂ ಇರುವುದು. ಆದ್ದರಿಂದ, ಭಕ್ತನು ಅಷ್ಟು ಸುಲಭವಾಗಿ ಕಾಲನ ಹಿಡಿತಕ್ಕೆ ಒಳಗಾಗಲಾರ. ಆದರೆ ಅವನು, ಕಾಲವನ್ನು ಹೇಗೆ, ಕಾಲದ ಬಲವನ್ನು ಹೇಗೆ ಶ್ರೀಕೃಷ್ಣನ ಸೇವೆಗೆ ಅನುಕೂಲಕರವಾಗಿ ಪರಿವರ್ತಿಸಬೇಕೆಂಬುದನ್ನು ಅರಿಯುತ್ತ ಹೋಗುತ್ತಾನೆ.

ಕಾಲನ ವೇಗವನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದನ್ನು ಕೃಷ್ಣನ ಸೇವೆಯಲ್ಲಿ ಪರಿವರ್ತಿಸುವುದು ಹೇಗೆ? ಇರುವ ಪ್ರತಿಯೊಂದು ಕ್ಷಣವನ್ನೂ ಮುಂದೆ ಬರುವ ಪ್ರತಿಕ್ಷಣವನ್ನೂ ಕೃಷ್ಣನಿಗೆ ಅರ್ಪಿಸುವುದು ಹೇಗೆ? ಕಾಲನು ನೀಡುವ ಒಳಿತು ಕೆಡುಕುಗಳೆಲ್ಲವನ್ನೂ ಕೃಷ್ಣನ ಪದತಲದಲ್ಲಿ ಹೇಗೆ ನಿವೇದಿಸುವುದು? ಹೇಗೆ ಅವೆಲ್ಲವನ್ನೂ ಶ್ರೀಕೃಷ್ಣನ ಸೇವೆಯಲ್ಲಿ ಬಳಸಿಕೊಳ್ಳುವುದು? ಇದನ್ನು ತಿಳಿಸುವುದೇ ಕೃಷ್ಣಪ್ರಜ್ಞೆ.

ಶ್ರೀಲ ಪ್ರಭುಪಾದರು ಹೇಳುವಂತೆ, ‘ಕೃಷ್ಣಪ್ರಜ್ಞೆಯು ಕಾಲನೊಂದಿಗೆ ವ್ಯವಹರಿಸುವ ಕಲೆ’ ಯಾಗಿದೆ. ಇದು ಕೃಷ್ಣನಿಗೆ ಸೇವೆ ಸಲ್ಲಿಸುವ ಸಲುವಾಗಿ ಕಾಲನೊಂದಿಗೆ ವ್ಯವಹರಿಸುವ ಕಲೆ. ಯಾರೂ ಕಾಲನಿಗೆ ಎದುರಾಗಿ ನಿಲ್ಲಲು ಸಾಧ್ಯವಿಲ್ಲ. ಆದರೆ ಸರ್ವಕಾರಣ ಕಾರಣನಾದ ಕೃಷ್ಣ, ಕಾಲನನ್ನು ನಿಯಂತ್ರಿಸುವನು.

ಆದ್ದರಿಂದ ನಾವು ಕೃಷ್ಣನ ಮೊರೆ ಹೋಗಬೇಕು. ಯಾರು ಆಧ್ಯಾತ್ಮಿಕ ಗುರುವಿನ ಆಶ್ರಯ ಪಡೆಯುತ್ತಾರೋ, ಗುರು ಮತ್ತು ಕೃಷ್ಣನ ಕರುಣೆಯಿಂದ ಅವರು ಎಲ್ಲ ವಿಧದ ರಕ್ಷಣೆ ಪಡೆಯುವರು. ಇದನ್ನು “ಆಧ್ಯಾತ್ಮಿಕ ಜೀವನ’ ಎಂದು ಕರೆಯಲಾಗಿದೆ. ಅಂತಹವರ ಲೌಕಿಕ ಜೀವನ ಮುಗಿದು ಹೋಗಿರುತ್ತದೆ.

ಆದ್ದರಿಂದ ಕಾಲನ ಪ್ರಭಾವವು ಭಕ್ತರ ಮೇಲೆ, ಸಾಮಾನ್ಯರ ಮೇಲಾಗುವ ಬಗೆಯಲ್ಲಿ ಆಗುವುದಿಲ್ಲ. ಯಾರು ಗುರುವಿನ ನಿರ್ದೇಶನದಂತೆ ನಡೆಯುತ್ತಾನೋ, ಅವನು ಆಧ್ಯಾತ್ಮಿಕ ಜ್ಞಾನವನ್ನು ಹೊಂದಿರುತ್ತಾನೆ. ಯಾರು ಆಧ್ಯಾತ್ಮಿಕ ಗುರುವನ್ನು ಶ್ರದ್ಧಾಪೂರ್ವಕವಾಗಿ ಸೇವಿಸುತ್ತಾನೋ, ಅವನು ಪ್ರತಿಯೊಂದನ್ನು ಕೃಷ್ಣನಿಗೆ ಅರ್ಪಿಸುವ ಸಾಮರ್ಥ್ಯ ಹೊಂದಿರುತ್ತಾನೆ.

ಕಾಲನೊ೦ದಿಗೆ ಬರುವ ಒಳಿತು- ಕೆಡುಕುಗಳೇನೇ ಇರಲಿ, ಭಕ್ತನು ಭಗವಂತನ ಸೇವೆಯ ಆನಂದವನ್ನು ಪಡೆಯಲು ತರಬೇತಿ ಹೊ೦ದಿರುತ್ತಾನೆ. ದೇವೋತ್ತಮ ಪರಮಪುರುಷನಿಗೆ ಸೇವೆ ಸಲ್ಲಿಸುವುದು, ಆತನನ್ನು ತೃಪ್ತಿ ಪಡಿಸುವುದು ಅಥವಾ ಭಗವಂತನನ್ನು ಅತೃಪ್ತಿಗೆಡೆಮಾಡದಿರುವುದು. ಹೃದಯದೊಳಗಿರುವ ಪರಮಾತ್ಮನು, ಭಕ್ತನಾದವನು ತಾನು ನಿರೀಕ್ಷಿಸಿದ ಮಟ್ಟಕ್ಕೆ ಏರದೆ ಹೋದಲ್ಲಿ ಬಹಳ ನಿರಾಶೆಗೊಳ್ಳುತ್ತಾನೆ. ಈ ಭಕ್ತನೇಕೆ ನನ್ನ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ? ಎಂದು ಕಾಳಜಿ ತೋರುತ್ತಾನೆ.

ಪರಮಾತ್ಮನಿಗೆ ಪ್ರತಿಯೊಂದು ಜೀವಿಯ ಮೇಲೂ ಪ್ರೇಮವಿದೆ. ಅಸುರರು ಭಗವಂತನನ್ನು ಕಡೆಗಣಿಸುವುದು ಮಾತ್ರವಲ್ಲ ತಮ್ಮದೇ ಆದ ವಿದ್ರೋಹಕ ಜೀವನವನ್ನು ರೂಢಿಸಿಕೊಂಡು ಭಗವಂತನಿಗೆ ನೋವುಂಟು ಮಾಡುತ್ತಾರೆ. ಪ್ರೇಮ ಎಂದರೆ ಕೇವಲ ಪ್ರೇಮ ಮಾತ್ರವಲ್ಲ. ಅದು ನೋವನ್ನೂ ನೀಡುತ್ತದೆ.

ಭಗವಂತನಿಗೆ ಪ್ರೇಮವಿರುವುದರಿಂದಲೇ ಆತ ತನ್ನ ಮಕ್ಕಳ ಉದ್ಧಟತನದಿಂದ ನೊಂದುಕೊಳ್ಳುತ್ತಾನೆ. ನಾವು ಹಾಗೆ, ಅಸುರರಂತೆ ನಡೆದುಕೊಂಡರೆ ಭಗವಂತನಿಗೆ ಖಂಡಿತಾ ನಷ್ಟವಿಲ್ಲ. ಅವನ ನಿರಾಶೆಗೆ ಕಾರಣವೇ ಬೇರೆ. ಅವನಿಗೆ ನಾವೇಕೆ ಮಾಯೆಯ ಜಾಲದಲ್ಲಿ ಸಿಲುಕಿ ಬೀಳುತ್ತಿದ್ದೇವೆಂಬ ನೋವು. ನಾವೇಕೆ ಅವನನ್ನು ಅನುಸರಿಸುತ್ತಿಲ್ಲವೆಂಬ ನೋವು.

ಭಗವಂತನನ್ನು ಅನುಸರಿಸದೆ, ಆತ ನೀಡುವ ಅಭಯದಿಂದ ವಂಚಿತರಾಗುವುದು ನಾವೇ ಆದರೂ, ನಮ್ಮನ್ನು ಪ್ರೇಮಿಸುವ ಭಗವಂತನಿಗೆ ಅದರ ನೋವು ! ಆದ್ದರಿಂದ ನಾವು ಭಗವಂತನನ್ನು ತೃಪ್ತಿಗೊಳಿಸಲು ಸಾಧ್ಯವಿಲ್ಲವಾದರೂ ಅವನನ್ನು ನಿರಾಶೆಗೊಳಿಸಬಾರದು. ನೋಯಿಸಬಾರದು. ಅದು ಮೊದಲ ಹೆಜ್ಜೆ. ಧೂರ್ತತನವನ್ನು ಬಿಡಬೇಕು. ಧನಾತ್ಮಕವಾದುದನ್ನು ಮಾಡಲಾಗದಿದ್ದರೆ ಕೊನೆಯ ಪಕ್ಷ ಋಣಾತ್ಮಕವಾದ ದುಷ್ಟಕಾರ್ಯಗಳನ್ನು ಮಾಡದೆ ಇರಬೇಕು.

ಜೀವಿಯು, ತಾನು ಭಗವಂತನನ್ನು ತೃಪ್ತಿಪಡಿಸಬೇಕು ಎಂದು ದೃಢವಾಗಿ ಆಲೋಚಿಸಿದರೆ, ಸ್ವತಃ ಭಗವಂತನೇ ಆತನಿಗೆ ಬುದ್ಧಿಯ ರೂಪದಲ್ಲಿ ಮಾರ್ಗದರ್ಶನ ಮಾಡುತ್ತಾನೆ. ಆದರೆ, ಕೆಲವೊಮ್ಮೆ ಕಾಲನ ಪ್ರಭಾವದಿಂದಾಗಿ ಅವನು ಬುದ್ಧಿಯು ಕೊಡಲ್ಪಟ್ಟರೂ ಅದನ್ನು ಬಳಸದೆ ಉಳಿದು ಬಿಡುತ್ತಾನೆ. ಸಂಚಿತ ಕರ್ಮಗಳು, ಕಾಲನ ಪ್ರಭಾವ ಇವೆಲ್ಲವೂ ವ್ಯಕ್ತಿಯನ್ನು ಆ ನಿಟ್ಟಿನಲ್ಲಿ ಪ್ರೇರೇಪಿಸುತ್ತವೆ, ಅವನು, ತಾನು ಬುದ್ಧಿಯ ದನಿಯನ್ನು ಕೇಳದಿರಲು ನಿರ್ಧರಿಸಿರುತ್ತಾನೆ.

ಬುದ್ಧಿಯು ಕೊಡಲ್ಪಟ್ಟರೂ, ಅದನ್ನು ಅನುಸರಿಸಲು ‘ಬಲʼ ಬೇಕಾಗುತ್ತದೆ. ಬಲವನ್ನು ಗಳಿಸುವುದು ಹೇಗೆ? ಅದನ್ನು ಎಲ್ಲಿಂದ ಪಡೆಯಲು ಸಾಧ್ಯ? ಎಲ್ಲಕ್ಕೂ ಮೂಲವಾಗಿರುವ ಭಗವಂತನಿಂದ ಮಾತ್ರ ನಾವು ಅದನ್ನು ಪಡೆಯಲು ಸಾಧ್ಯ. ಗುರುವಿನ ಆದೇಶದಂತೆ, ಗುರುವಿನ ನಿರ್ದೇಶನಗಳನ್ನು ಅನುಸರಿಸಿ ನಡೆದರೆ ಮಾತ್ರ ಬಲ ಬುದ್ಧಿಯಂತೆ ನಡೆಯುವ ಪ್ರಬಲ ಇಚ್ಛಾಶಕ್ತಿ ಮೂಡುತ್ತದೆ. ಆದ್ದರಿಂದ ನಾವು, ದುರ್ವೃತ್ತಿಗಳಲ್ಲಿ ಅಥವಾ ಮೋಜಿನಲ್ಲಿ ಸಮಯವನ್ನು ಹಾಳುಮಾಡದೆ, ಗುರುವಿನ ಸತ್ಸಂಗದಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಆದರೆ ನಮಗೆ ಅದಕ್ಕಾಗಿ ಸಮಯವೇ ಇರುವುದಿಲ್ಲ! ಅದು ತಪ್ಪು. ನಾವು ಒಂದು ಗಂಟೆ ಕುಳಿತು ಪ್ರಭುಪಾದರ ಪುಸ್ತಕವನ್ನೋದಿದರೂ ಸಾಕು. ಅದು ನಮಗೆ ವಿಶೇಷ ಬಲ ನೀಡುತ್ತದೆ. ಕಾಲ, ಬಲವನ್ನು ತಂದು ಕೊಡುತ್ತದೆ.

ಈ ಆಧ್ಯಾತ್ಮಿಕ ಜಗತ್ತಿನಲ್ಲಿ ನಾವು ಒಬ್ಬಂಟಿಯಲ್ಲ. ನಮ್ಮ ಆಚಾರ್ಯ ಶ್ರೀಲ ಪ್ರಭುಪಾದರ ನಿರ್ದೇಶನಗಳು ನಮ್ಮೊಂದಿಗಿವೆ. ಸ್ವತಃ ಪರಮಾತ್ಮನೇ ನಮ್ಮ ಹೃದಯದಲ್ಲಿದ್ದು ನಮ್ಮನ್ನು ಪ್ರೇರೇಪಿಸುತ್ತಿರುತ್ತಾನೆ. ಇದು ಭಗವಂತ ಮತ್ತು ಜೀವಿಯ ವಿಶೇಷ ಸಂಬಂಧ. ಅವನು ನಮ್ಮನ್ನು ಜನನ ಮರಣಗಳ ಯಾತನೆಯಿಂದ ಮುಕ್ತಗೊಳಿಸುವನು. ನಮ್ಮ ಭಕ್ತಿ ತೀವ್ರವಾಗಿದ್ದರೆ, ಭಗವಂತನು ನಮಗಾಗಿ ಕಾಲನನ್ನೂ ಮಣಿಸುವನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi