ಕರ್ತವ್ಯದಿಂದ ಕರೆಯಲ್ಲಟ್ಟ ರಾಜಕುವರನೊಬ್ಬ, ಕಾಡಿನಲ್ಲಿನ ತನ್ನ ಆಧ್ಯಾತ್ಮಿಕ ಸಾಧನೆಯನ್ನು ಬಿಟ್ಟು, ರಾಜನಾಗಿದ್ದರೂ ನಿಜ ತ್ಯಾಗದ ಉದಾಹರಣೆಯನ್ನು ನೀಡಬಹುದೆಂದು ನಿರೂಪಿಸಲು ಬರುತ್ತಾನೆ.
ಆಂಗ್ಲಮೂಲ : ಬ್ಯಾಕ್ ಟು ಗಾಡ್ ಹೆಡ್
ಭಗವಂತನ ಸೇವೆಗೆಂದು ಈ ಲೋಕದ ವೈಭೋಗವನ್ನು ತ್ಯಾಗ ಮಾಡಿದ ಹಲವು ಶ್ರೀಮಂತ ವ್ಯಕ್ತಿಗಳ ಬಗೆಗೆ ನೀವು ಬಹುಶಃ ಕೇಳಿರಬಹುದು. ಭಾಗವತದ ಐದನೆಯ ಸ್ಕಂಧವು ಮತ್ತೊಂದು ರೀತಿಯ ಕಥೆಯನ್ನು ನಿರೂಪಿಸುತ್ತದೆ. ಒಬ್ಬ ಸಮರ್ಥ ತ್ಯಾಗ ಜೀವಿಯು ದೇವೋತ್ತಮನ ಆದೇಶದಂತೆ ರಾಜನಾಗುವ ಕಥೆಯನ್ನು ಅದು ಹೇಳುತ್ತದೆ. ಅರಮನೆ ಜೀವನದ ಸುಖದ ಬಗೆಗೆ ಅವನು ಸಂಯಮದಿಂದ ಇರುವುದು ಸಾಧ್ಯವೇ? ಅವನು ಆಧ್ಯಾತ್ಮಿಕವಾಗಿ ಉಳಿಯಬಹುದೇ? ತ್ಯಾಗಿ ಅರಸ ಪ್ರಿಯವ್ರತನಿಂದ ಈಗಿನ ಮಾನವನು ಏನನ್ನು ಕಲಿಯಬಹುದು?
ಪ್ರಿಯವ್ರತನು ರಾಜತ್ವ, ಸಂಪತ್ತು ಮತ್ತು ರಾಜ ತಂತ್ರಗಳ ಆಚೆಗೆ ಆಧ್ಯಾತ್ಮಿಕ ಸತ್ಯದಲ್ಲಿ ಆಸಕ್ತನಾಗಿದ್ದ ಕಾರಣ ಅವನು ತನ್ನ ತಮ್ಮ ಉತ್ತಾನಪಾದನು ರಾಜನಾಗಲು ಅವಕಾಶ ಕಲ್ಪಿಸಿದನು. ಆದರೆ ಉತ್ತಾನಪಾದನು ಸಾವಿಗೀಡಾದನು. ಆಗ ಪ್ರಿಯವ್ರತ ಮತ್ತು ಉತ್ತಾನಪಾದರ ತಂದೆ ಸ್ವಾಯಂಭುವ ಮನು ಗಂಧಮಾದನ ಗಿರಿಗೆ ಬಂದನು. ತ್ಯಾಗದ ಬದುಕನ್ನು ತೊರೆದು ರಾಜ್ಯವನ್ನು ಆಳಬೇಕೆಂದು ಪ್ರಿಯವ್ರತನ ಮನವೊಲಿಕೆಗೆ ಪ್ರಯತ್ನಿಸಿದನು.
ತಂದೆ ಮತ್ತು ಮಗ ಭೇಟಿಯಾದಾಗ, ಪ್ರಿಯವ್ರತನ ಗುರು ನಾರದ ಮುನಿಗಳು ಗಮನವಿಟ್ಟು ಕೇಳಿದರು.
ಕರ್ತವ್ಯನಿಷ್ಠತೆ
ಮನು ಮೊದಲು ಮಾತನಾಡಿದನು, “ಸಾಮ್ರಾಜ್ಯವನ್ನು ಆಳು. ಅಧಿಕಾರ ವಹಿಸಿಕೋ. ಇದು ನಿನ್ನ ಕರ್ತವ್ಯ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಅದನ್ನು ಎತ್ತಿಹಿಡಿಯುವ ಜವಾಬ್ದಾರಿ ನಿನ್ನದು. ಇನ್ಯಾರೂ ಅಲ್ಲ, ನೀನು ಮಾತ್ರ ಅದನ್ನು ಮಾಡಬಲ್ಲೆ.” ಕರ್ತವ್ಯನಿಷ್ಠ ಪುತ್ರನಾಗಿ ಪ್ರಿಯವ್ರತನು ತನ್ನ ತಂದೆಯ ಆದೇಶವನ್ನು ಸ್ವೀಕರಿಸಲು ಒಲವು ತೋರಿದನು. ಆದರೂ ಅವನಿಗೆ ಭಯವಿತ್ತು. ಅವನಿಗೆ ಲೌಕಿಕ ಜೀವನದ ಬಗೆಗೆ ತಿಳಿದಿತ್ತು. ವೈಭವ ಮತ್ತು ರೋಮಾಂಚನವಿದ್ದರೂ ಅದು ನಶ್ವರ. ಆದುದರಿಂದ ಅದರಲ್ಲಿ ಏಕೆ ಸಿಲುಕಬೇಕು? ಅದಕ್ಕೆ ಏಕೆ ಅಂಟಿಕೊಳ್ಳಬೇಕು? ಪ್ರಿಯವ್ರತನಿಗೆ ಲೌಕಿಕ ಒಲವಿನ ಅವಿವೇಕತನದ ಅರಿವಿತ್ತು. ಆದರೂ ದಿಗ್ಭ್ರಾಂತಗೊಳಿಸುವ ಮಾಯೆಯ ಶಕ್ತಿಗೆ ಅವನು ಹೆದರಿದ್ದನು.
ಕೃಷ್ಣನ ಪರಿಶುದ್ಧ ಭಕ್ತರಾದ ನಾರದ ಮುನಿಗಳ ಬಳಿ ತರಬೇತಿ ಪಡೆಯುತ್ತಿರುವುದು ತನ್ನ ಅದೃಷ್ಟವೆಂದು ಪ್ರಿಯವ್ರತನು ಭಾವಿಸಿದನು. ಗಂಧಮಾದನ ಗಿರಿಯಲ್ಲಿ ನಾರದರೊಂದಿಗೆ ನೆಮ್ಮದಿಯಿಂದ ನೆಲೆಸಿದ್ದ ಪ್ರಿಯವ್ರತನು ಕೃಷ್ಣಪ್ರಜ್ಞೆಯ ತನ್ನ ಸಂಪತ್ತನ್ನು ಅಗಣ್ಯವಾದ ಮಹಾರಾಜನ ಸ್ಥಾನಕ್ಕೆ ವಿನಿಮಯ ಮಾಡಿಕೊಳ್ಳಬೇಕೆಂಬ ಸೂಚನೆಯನ್ನು ಸ್ವಾಗತಿಸಲಿಲ್ಲ. ಆದುದರಿಂದ ದೃಢ ವೈರಾಗ್ಯದಲ್ಲಿ ಪ್ರತ್ಯೇಕವಾಗಿರುವುದು ಉಚಿತ ಎಂದುಕೊಂಡನು. ಆದುದರಿಂದ ಪ್ರಿಯವ್ರತನು ಅತ್ಯಂತ ನಿಷ್ಠೆಯಿಂದ ಮನುವಿನ ಬಳಿ, “ಅಂತಹ ಬೃಹತ್ ಭೌತಿಕ ಹೊಣೆಯನ್ನು ಒಪ್ಪಿಕೊಳ್ಳುವುದರಿಂದ ನನ್ನ ಆಧ್ಯಾತ್ಮಿಕ ಜೀವನ ಪತನಗೊಳ್ಳುವುದನ್ನು ನಾನು ಮುಂಗಾಣುತ್ತಿದ್ದೇನೆ. ನೀವು ಕೋರುವಂತೆ ನಾನು ಜಗತ್ತಿನ ರಾಜ್ಯಭಾರದ ಹೊಣೆಯನ್ನು ಒಪ್ಪಿಕೊಳ್ಳುವ ಮೂಲಕ ಭಕ್ತಿಸೇವೆಯಿಂದ ವಿಚಲಿತನಾಗಬಹುದೆ” ಎಂಬ ಪ್ರಶ್ನೆಯನ್ನು ಎತ್ತಿದನು.
ನಿರಾಕರಣೆಯನ್ನು ಸೂಚಿಸುವ ಪ್ರಿಯವ್ರತನ ಉತ್ತರವನ್ನು ಕೇಳಿ ಮನುವು ಹತಾಶನಾದನು. ಹಾಗಾದರೆ ರಾಜ್ಯಭಾರ ಮಾಡುವವರಾರು? ಜನರ ರಕ್ಷಣೆಗಾಗಿ ತಾನು ಈ ಇಳಿ ವಯಸ್ಸಿನಲ್ಲಿ ಸಿಂಹಾಸನದಲ್ಲಿ ಆಸೀನನಾಗಬೇಕೆ?
ಮನುವು ದಿಕ್ಕು ತೋಚದಂತೆ ಕುಳಿತುಬಿಟ್ಟನು. ಆಗ ಆಧ್ಯಾತ್ಮಿಕ
ಅಕಾರಯುತನಾದ, ಮತ್ತು ನಾರದ ಮತ್ತು ಮನುವಿನ ಪಿತನಾದ ಬ್ರಹ್ಮನು ಗಂಧಮಾದನ ಗಿರಿಗೆ ಬಂದನು. ಚಕಿತರಾದ ನಾರದ, ಮನು ಮತ್ತು ಪ್ರಿಯವ್ರತ ತತ್‌ಕ್ಷಣ ಎದ್ದು ನಿಂತರು. ಅನಂತರ ಅವರು ಕೈ ಮುಗಿದರು ಮತ್ತು ಬಹು ಗೌರವದೊಂದಿಗೆ ಬ್ರಹ್ಮದೇವನನ್ನು ಸ್ತುತಿಸಲು ಆರಂಭಿಸಿದರು.
ಕೃಷ್ಣ ಸಂದೇಶ
ನಾರದ ಮತ್ತು ಮನುವಿನ ಆತಿಥ್ಯದಿಂದ ಸಂಪ್ರೀತನಾದ ಬ್ರಹ್ಮನು ಅವರತ್ತ ಮೆಚ್ಚುಗೆಯ ದೃಷ್ಟಿ ಬೀರಿದನು. ಅನಂತರ ವೈರಾಗ್ಯದ ರಾಜಕುಮಾರನತ್ತ ತಿರುಗಿ ಕರುಣೆಯಿಂದ ಹೇಳಿದನು, “ನನ್ನ ಪ್ರೀತಿಯ ಪ್ರಿಯವ್ರತ, ಎಚ್ಚರಿಕೆಯಿಂದ ಕೇಳು. ಶ್ರೀ ಕೃಷ್ಣನ ಆದೇಶವನ್ನು ಹೊತ್ತು ನಾನು ಬಂದಿದ್ದೇನೆ. ನಿನ್ನ ಒಳಿತಿಗಾಗಿ ಭಗವಂತನ ಅಪೇಕ್ಷೆಯನ್ನು ನಿನ್ನದೇ ಎನ್ನುವಂತೆ ಸ್ವೀಕರಿಸು. ನೀನು ಮತ್ತು ಇತರ ಎಲ್ಲರೂ ಅವನ ಶಾಶ್ವತ ಸೇವಕರು. ನಾನೂ ಕೂಡ ದೇವೋತ್ತಮನ ಆದೇಶವನ್ನು ಪಾಲಿಸಬೇಕು. ಮನು ಮತ್ತು ನಾರದ ಕೂಡ.”
ನಮ್ಮ ಆಧುನಿಕ ನಾಯಕರಿಗಿಂತ ಬ್ರಹ್ಮನು ಅದೆಷ್ಟು ಭಿನ್ನ! ಭಗವಂತನ ಆದೇಶವನ್ನು ಪಾಲಿಸುವ ಬದಲು ಈಗಿನ ನಾಯಕರು ಗಗನಚುಂಬಿಗಳು, ಮತ್ತು ಬಾಂಬ್‌ಗಳಲ್ಲಿ ಪ್ರಗತಿಯನ್ನು ಅಳೆಯುತ್ತ ಬೀಗುತ್ತಾರೆ. ನಾವು, ಅನುಯಾಯಿಗಳು ಕಣ್ಣುಮುಚ್ಚಿಕೊಂಡು ಶರಣಾಗುತ್ತೇವೆ! ನಮ್ಮ ಹುಚ್ಚು ಹಗಲುಗನಸುಗಳನ್ನು ಹುರಿದುಂಬಿಸುವವರನ್ನು ನೆಚ್ಚಿಕೊಂಡರೆ, ಖಾಲಿತನ ಮತ್ತು ಹತಾಶೆಯಲ್ಲಿ ನಮ್ಮ ಬದುಕು ಅಂತ್ಯಗೊಳ್ಳುತ್ತದೆ. ಬದಲಿಗೆ, ನಾವು ಇಂತಹ ಸ್ಥಿತಿಯಿಂದ ಕಳಚಿಕೊಂಡು ಕೃಷ್ಣನ ಅಕಾರ ಮತ್ತು ಅಪೇಕ್ಷೆಗಳಂತೆ ನಡೆದುಕೊಂಡರೆ, ನಮ್ಮ ಪರಿಪೂರ್ಣತೆಯ ಪಥವು ರೂಪುಗೊಳ್ಳುತ್ತದೆ.
ಬ್ರಹ್ಮನು ಪ್ರಿಯವ್ರತನಿಗೆ ಅಪ್ರಾಯೋಗಿಕವಲ್ಲದ್ದನ್ನು ಏನೂ ಸೂಚಿಸುವುದಿಲ್ಲ. ಅವನು ಪ್ರಿಯವ್ರತನಿಗೆ ಜ್ಞಾನೋದಯವನ್ನು ಮುಂದುವರಿಸುತ್ತಾನೆ,
“ಸ್ಪಷ್ಟ ದೃಷ್ಟಿ ಉಳ್ಳವನೊಂದಿಗೆ ಅಂಧನು ಅತ್ಯುತ್ತಮವಾಗಿ ಪಯಣಿಸುವಂತೆ ಅಥವಾ ನೊಗ ಹೊತ್ತ ಎತ್ತು ಚಾಲಕನಿದ್ದಾಗ ಹೆಚ್ಚು ಸಮರ್ಥವಾಗಿ ಎಳೆಯುವಂತೆ, ಭಗವದ್ಗೀತೆ ಮತ್ತು ಭಾಗವತದಂತಹ ವೈದಿಕ ಧರ್ಮಗ್ರಂಥಗಳಲ್ಲಿ ತಿಳಿಸಿರುವಂತೆ ಮತ್ತು ಪರಿಶುದ್ಧ ಆಧ್ಯಾತ್ಮಿಕ ಗುರುಗಳ ವಾಣಿಯ ಮೂಲಕ ಹೇಳಿರುವಂತೆ ಕೃಷ್ಣನ ಅಪೇಕ್ಷೆಯನ್ನು ಸ್ವೀಕರಿಸುವ ಮೂಲಕ ವ್ಯಕ್ತಿಯು ಜೀವನದಲ್ಲಿ ಅತಿ ಹೆಚ್ಚಿನ ಫಲವನ್ನು ಪಡೆಯುತ್ತಾನೆ.”
ಧರ್ಮಗ್ರಂಥಗಳು ಮತ್ತು ಗುರುಗಳ ಮೂಲಕ ಇಳಿದು ಬರುವ ಕೃಷ್ಣನ
ಅಕಾರದಡಿಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಕುರಿತು ಬ್ರಹ್ಮನ ಉಪದೇಶದ ವಿವೇಕವನ್ನು ಪ್ರಿಯವ್ರತನು ತತ್‌ಕ್ಷಣ ಒಪ್ಪಿಕೊಂಡರೂ, ಅವನು ಗೊಂದಲದ ಸ್ಥಿತಿಯಲ್ಲೇ ಇದ್ದನು. ಅವನು ಯಾರ ಆದೇಶವನ್ನು ಪಾಲಿಸಬೇಕು? ಲೌಕಿಕ ವ್ಯವಹಾರಗಳಿಂದ ದೂರವಾಗಿರಲು ಈ ಮೊದಲು ಸಲಹೆ ನೀಡಿದ್ದ ತನ್ನ ಗುರು ನಾರದರ ಆದೇಶವನ್ನೋ, ಅಥವಾ ರಾಣಿಯರು, ಅರಮನೆಗಳೂ ಸೇರಿದಂತೆ ಇಡೀ ಸಾಮ್ರಾಜ್ಯವನ್ನು ಸ್ವೕಾನ ಮಾಡಿಕೊಳ್ಳಬೇಕು ಎಂದು ಸೂಚಿಸುತ್ತಿರುವ ನಾರದರ ಗುರು ಬ್ರಹ್ಮನ ನುಡಿಗಳನ್ನೋ?
ಆಧ್ಯಾತ್ಮಿಕ ಜೀವನ ಮತ್ತು ಭೌತಿಕ ಲೋಕದೊಂದಿಗಿನ ಕ್ರಿಯೆಯ ನಡುವೆ ಅಂತರ್ಗತವಾಗಿರವಂತೆ ತೋರುವ ವಿರೋಧಗಳ ರಹಸ್ಯವನ್ನು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ (18.66) ಬಿಡಿಸುತ್ತಾನೆ,
ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥
“ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನಗೆ ಶರಣಾಗತನಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ಮುಕ್ತನನ್ನಾಗಿ ಮಾಡುತ್ತೇನೆ, ಹೆದರಿಕೊಳ್ಳಬೇಡ.”
ಒಂದು ಚಟುವಟಿಕೆಯು ಆಧ್ಯಾತ್ಮಿಕವೋ ಅಥವಾ ಲೌಕಿಕವೋ, ಕಲುಷಿತವೋ ಅಥವಾ ಪರಿಶುದ್ಧವೋ, ಬಿಟ್ಟುಬಿಡಲು ಅಥವಾ ಮುಂದುವರಿಕೆಗೆ ಯೋಗ್ಯವೋ ಎನ್ನುವುದರ ಪರೀಕ್ಷೆ ಬಹಳ ಸರಳ. ಆ ಚಟುವಟಿಕೆಯು ಕೃಷ್ಣನ ಅಪೇಕ್ಷೆಗೆ ಅನುಗುಣವಾಗಿದೆಯೇ ಎನ್ನುವುದೇ ಆ ಪರೀಕ್ಷೆಯಾಗಿದೆ. ಅದು ಹಾಗಿದ್ದರೆ, ಆಗ ಆ ಕರ್ಮವು ಆಧ್ಯಾತ್ಮಿಕ, ಪರಿಶುದ್ಧ ಮತ್ತು ವ್ಯಕ್ತಿಯನ್ನು ಪರಿಪೂರ್ಣತೆಗೆ ಸಮೀಪವಾಗಿಸುತ್ತದೆ. ಇಲ್ಲವಾದರೆ, ಆ ಕರ್ಮವು ವೈಭವಯುತವಾಗಿ ಕಂಡರೂ ಅದು ಕಲುಷಿತವಾಗಿರುತ್ತದೆ ಮತ್ತು ಅದು ವ್ಯಕ್ತಿಯನ್ನು ಲೌಕಿಕ ಅಸ್ತಿತ್ವದಲ್ಲಿ ಬಿಗಿಯಾಗಿ ಹೆಣೆದುಬಿಡುತ್ತದೆ.
ಪ್ರಿಯವ್ರತನ ಗೊಂದಲಕ್ಕೆ ಪರಿಹಾರ? ಎರಡೂ ಅಕಾರವನ್ನು ನಿರ್ಲಕ್ಷಿಸದಿರುವುದು. ವೈರಾಗಿಯಾಗಿ ಉಳಿಯಬೇಕೆಂದು ನಾರದ ಮುನಿಗಳು ಪ್ರಿಯವ್ರತನಿಗೆ ಬೋಧಿಸಿದ್ದರು. ಬ್ರಹ್ಮನು ಪ್ರಿಯವ್ರತನಿಗೆ ರಾಜನಾಗಲು ಆದೇಶಿಸಿದನು. ಭೌತಿಕ ಲೋಕದಲ್ಲಿ ರಾಜನಾಗಿ ಆಡಳಿತ ನಡೆಸುತ್ತ ವೈರಾಗ್ಯದಿಂದ ಇರಲು ಆಧ್ಯಾತ್ಮಿಕ ಬುದ್ಧಿ ಅಗತ್ಯ. ಕೃಷ್ಣನ ಸೇವೆಯಲ್ಲಿ ವಸ್ತುವನ್ನು ಉಪಯೋಗಿಸುವ ಸಾಮರ್ಥ್ಯವೇ ಬುದ್ಧಿವಂತಿಕೆ ಎಂದು ಶ್ರೀಲ ರೂಪ ಗೋಸ್ವಾಮಿ ಅವರು ನಿರೂಪಿಸಿದ್ದಾರೆ. ನಾವು ಸತ್ತಾಗ ನಾವು ಎಲ್ಲವನ್ನೂ ಬಿಟ್ಟು ಹೋಗುತ್ತೇವೆ. ನಿಜವಾಗಿಯೂ ಯಾವುದೂ ನಮಗೆ ಸೇರಿದ್ದಲ್ಲ. ಆದುದರಿಂದ ನಿಜವಾದ ವೈರಾಗಿಯು ತಾನು ಹೊಂದಿಲ್ಲದ್ದನ್ನು `ತ್ಯಾಗ’ ಮಾಡುವುದಿಲ್ಲ. ಬದಲಿಗೆ ಎಲ್ಲವನ್ನೂ ವಿಶ್ವದ ಮಾಲೀಕ ಕೃಷ್ಣನ ಸೇವೆಯಲ್ಲಿ ತೊಡಗಿಸುತ್ತಾನೆ.
ಬ್ರಹ್ಮನು ಮಾತು ಮುಂದುವರಿಸಿದ, “ರಾಜನಾಗಿ ನಿನ್ನ ಸ್ಥಾನವನ್ನು ನಿನ್ನ ಸುಖ ಸಂತೋಷಕ್ಕಾಗಿ ಬಳಸಿಕೊಳ್ಳಬೇಡ. ಇಲ್ಲದಿದ್ದರೆ, ನೀನು ಇನ್ನೊಂದು ಲೌಕಿಕ ದೇಹವನ್ನು ಪಡೆದುಕೊಳ್ಳುವೆ ಮತ್ತು ಲೌಕಿಕ ಸಂಕಟಗಳ ಜಾಲದಲ್ಲಿ ಬೀಳುವೆ. ರಾಜನಾಗು, ಆದರೆ ಕೃಷ್ಣನ ಸೇವಕನಾಗಿ. ಅವನನ್ನು ಪ್ರಸನ್ನಗೊಳಿಸಲು ನಿನ್ನ ಮನಸ್ಸನ್ನು ನೆಲೆಗೊಳಿಸು. ಸಾಮ್ರಾಜ್ಯದ ಸಂತೋಷ ಅಥವಾ ಸಂಕಟಗಳಿಂದ ಚಂಚಲಗೊಳ್ಳಬೇಡ. ಅವು ತಮ್ಮದೇ ರೀತಿಯಲ್ಲಿ ಪ್ರಕಟಗೊಳ್ಳುತ್ತವೆ ಮತ್ತು ನಿರ್ಗಮಿಸುತ್ತವೆ. ಆದುದರಿಂದ ಅವು ಬಂದು ಹೋಗುವುದನ್ನು ತಾಳ್ಮೆಯಿಂದ ತಡೆದುಕೊಳ್ಳಬೇಕು. ಸುಖ ಮತ್ತು ಸಂಕಟಗಳೆರಡನ್ನೂ ಹಿಂದಿನ ರಾತ್ರಿಯ ಕನಸೆಂಬಂತೆ ನೋಡು. ಕೃಷ್ಣನ ಸೇವೆಯಲ್ಲಿ ಸ್ಥಿರವಾಗಿ ಉಳಿಯಬೇಕು.
“ಆದರೂ ಮನಸ್ಸು ಮತ್ತು ಇಂದ್ರಿಯಗಳ ಬಗೆಗೆ ಎಚ್ಚರದಿಂದಿರು. ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ನೀನು ಬದುಕನ್ನು ಪೋಲು ಮಾಡಲು ನಿನ್ನನ್ನು ಪ್ರಚೋದಿಸುತ್ತವೆ. ಮತ್ತು ನಿನ್ನ ಗುರಿಯಿಂದ ನಿನ್ನನ್ನು ಬೇರೆ ಕಡೆಗೆ ಎಳೆಯುತ್ತವೆ. ಆದುದರಿಂದ, ರಾಜ ಪದವಿಯ ಬಗೆಗೆ ಹೆದರಬೇಡ, ಅನಿಯಂತ್ರಿತ ಮನಸ್ಸು ಮತ್ತು ಇಂದ್ರಿಯಗಳಂತಹ ನಿಜವಾದ ಶತ್ರುಗಳ ಬಗೆಗೆ ಭಯಪಡು. ಯಾರಾದರೂ ತ್ಯಾಗ ಮಾಡಿ ಒಂದು ನಿರ್ಜನ ಅರಣ್ಯದಿಂದ ಮತ್ತೊಂದಕ್ಕೆ ಪಯಣಿಸಿದರೂ, ಈ ಶತ್ರುಗಳು ಮಾತ್ರ ಭಾರಿ ಅಪಾಯ ಒಡ್ಡುವರು. ಮತ್ತೊಂದು ಕಡೆ, ವಿವಾಹಿತನಾಗಿದ್ದರೂ ಕೂಡ ವ್ಯಕ್ತಿಯು ತನ್ನ ಮನಸ್ಸು ಮತ್ತು ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡರೆ, ರಾಜನೊಬ್ಬನು ತನ್ನ ಬೃಹತ್ ಗೋಡೆಗಳ ಕೋಟೆಯಲ್ಲಿ ಭದ್ರವಾಗಿರುವಷ್ಟೇ ರಕ್ಷಿಸಲ್ಪಟ್ಟಿರುತ್ತಾನೆ. ಪತ್ನಿ ಮತ್ತು ಮಕ್ಕಳೊಂದಿಗಿನ ಬದುಕೂ ಕೂಡ ಸ್ವಯಂ ತೃಪ್ತ, ಬುದ್ಧಿವಂತ ವ್ಯಕ್ತಿಗೆ ಅಪಾಯ ಉಂಟು ಮಾಡುವುದಿಲ್ಲ” ಆಧ್ಯಾತ್ಮಿಕ ಜೀವನದ ನಿಯಮ ಮತ್ತು ನಿರ್ಬಂಧಗಳನ್ನು ಅನುಸರಿಸಿದರೆ ಮತ್ತು ಎಲ್ಲವನ್ನೂ ಕೃಷ್ಣನ ಸೇವೆಯಲ್ಲಿ ಉಪಯೋಗಿಸಿದರೆ ಮನಸ್ಸು ಮತ್ತು ಇಂದ್ರಿಯಗಳ ಹತೋಟಿ ಹಾಗೂ ನಿಜವಾದ ವೈರಾಗ್ಯವು ಸ್ವಯಂ ಈಡೇರುತ್ತದೆ. ಬ್ರಹ್ಮನು ವಿವರಿಸಿದ, “ಆದುದರಿಂದ ವ್ಯಕ್ತಿಯು ತನ್ನ ಪ್ರಜ್ಞೆಯನ್ನು ಭಕ್ತಿಯಿಂದ ಕೃಷ್ಣನ ಚರಣ ಕಮಲಗಳಲ್ಲಿ ನೆಟ್ಟರೆ ಮಾತ್ರ ಅವನಿಗೆ ನಿಜವಾದ ಆಶ್ರಯ ಲಭಿಸುತ್ತದೆ.”
ಕೃಷ್ಣಪ್ರೇಮ ಸಾಧನ
ಆದರೆ ಪ್ರಾಪಂಚಿಕ ಆನಂದಗಳಿಂದ ಸುತ್ತುವರಿಯಲ್ಪಟ್ಟ ರಾಜ ಅಥವಾ ಸಮಕಾಲೀನ ಮಾನವನೂ ಕೂಡ ತನ್ನ ಸ್ವಾರ್ಥ ಮತ್ತು ಇಂದ್ರಿಯ ಅಪೇಕ್ಷೆಗಳನ್ನು ನಿರ್ಲಕ್ಷಿಸಿ ಭಕ್ತಿಯಿಂದ ತನ್ನ ಪ್ರಜ್ಞೆಯನ್ನು ಕೃಷ್ಣನಲ್ಲಿ ನೆಡುವುದು ಸಾಧ್ಯವೇ? ಅವನು ಎಲ್ಲವನ್ನೂ ಕೃಷ್ಣನ ಸೇವೆಯಲ್ಲಿ ಉಪಯೋಗಿಸುವುದು ಸಾಧ್ಯವೇ? ಸಾಧ್ಯ. ಆದರೆ ಹೇಗೆ? ಅವನು ಕೃಷ್ಣನ ನಾಮಗಳನ್ನು ಜಪಿಸುವ ಆಚರಣೆಯನ್ನು ಒಪ್ಪಿಕೊಂಡರೆ ಅದು ಸಾಧ್ಯ. ಕೃಷ್ಣಪ್ರೇಮವು ಸಹಜವಾಗಿ ಅವರ ಹೃದಯಗಳಲ್ಲಿ ಬೆಳೆಯುತ್ತದೆ.
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಮ್ ।
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ ॥
“ಕಲಹ ಮತ್ತು ಕಪಟದ ಈ ಯುಗದಲ್ಲಿ ಭಗವಂತನ ಪವಿತ್ರನಾಮ ಸಂಕೀರ್ತನೆಯೊಂದೇ ಉದ್ಧಾರದ ಮಾರ್ಗ. ಬೇರೆ ಮಾರ್ಗವೇ ಇಲ್ಲ, ಬೇರೆ ಮಾರ್ಗವೇ ಇಲ್ಲ, ಬೇರೆ ಮಾರ್ಗವೇ ಇಲ್ಲ.”
ನೀರನ್ನು ಹಾಕಿದಾಗ ಹೇಗೆ ಗಿಡವು ಬೆಳೆಯುವುದೋ ಹಾಗೆ ನಾವು ಕೃಷ್ಣ ನಾಮವನ್ನು ಹೆಚ್ಚು ಹೆಚ್ಚು ಜಪಿಸಿದಂತೆ ಅವನೊಂದಿಗೆ ನಮ್ಮ ಪ್ರೀತಿಯ ಬಾಂಧವ್ಯವು ವರ್ಧಿಸುತ್ತದೆ. ಈ ರೀತಿ ಅವನಿಗೆ ಸೇವೆ ಸಲ್ಲಿಸಬೇಕೆಂಬ ನಮ್ಮ ಒಲವು ಹೆಚ್ಚುತ್ತದೆ. ವಿಧಿಯಂತೆ ನಾವು ಸಿಂಹಾಸನದ ಮೇಲೆ ಆಸೀನವಾಗಿರಬಹುದು, ಅಥವಾ ಬೈರಾಗಿಯಾಗಿ ಚಾಪೆಯ ಮೇಲೆ ಕುಳಿತಿರಬಹುದು ಅಥವಾ ಆಧುನಿಕ ಮೇಜಿನ ಹಿಂದೆ ಕುಳಿತಿರಬಹುದು. ಹೇಗಾದರೂ ಸರಿ, ಅವನಿಗೆ ಸೇವೆ ಸಲ್ಲಿಸಬೇಕೆಂಬ ಅಪೇಕ್ಷೆ ಹೆಚ್ಚುತ್ತದೆ. “ಕೃಷ್ಣನಿಂದಾಗಿ ನಾನು ಇಲ್ಲಿದ್ದೇನೆ. ಈ ಕೆಲಸದ ಮೂಲಕ ನಾನು ಅವನನ್ನು ಹೇಗೆ ಪ್ರಸನ್ನಗೊಳಿಸಲಿ” ಎಂದು ಯೋಚಿಸುತ್ತ ನಾವು ಹಾಗೆ ಶುದ್ಧ ಪ್ರಜ್ಞೆಯಿಂದ ನಡೆದುಕೊಳ್ಳಬೇಕು.
ಎಲ್ಲರ ಹೃದಯಗಳಲ್ಲಿ ನೆಲೆಸಿರುವ ಕೃಷ್ಣನ ನೆರವಿನಿಂದ ಈ ಶುದ್ಧ ಪ್ರಜ್ಞೆಯು ಎಲ್ಲ ಅಡಚಣೆಗಳನ್ನೂ ಪರಾಜಯಗೊಳಿಸಬಹುದು. ಕೃಷ್ಣನ ಬಗೆಗೆ ಕೇಳಲು ನಾವು ಕಾತರರಾಗಿದ್ದರೆ, ಎಲ್ಲ ಕಡೆ ಅವನ ಅಸ್ತಿತ್ವವನ್ನು ಗುರುತಿಸುವುದು ಹೇಗೆ ಎನ್ನುವುದನ್ನು ನಾವು ಧರ್ಮಗ್ರಂಥಗಳಿಂದ ತಿಳಿದುಕೊಳ್ಳಬಹುದು. ನೀರನ್ನು ಕುಡಿಯುವಾಗ, ಅವನು ನಮ್ಮ ದಾಹವನ್ನು ನಿವಾರಿಸುವ ಸ್ವಾದ ಎಂದು ಸ್ಮರಿಸಿಕೊಳ್ಳುತ್ತೇವೆ. ಹಾರಾಡುತ್ತಿರುವ ಪಕ್ಷಿಗಳ ಸಮೂಹವನ್ನು ನೋಡಿದಾಗ ನಾವು ಕೃಷ್ಣನ ಕಲಾತ್ಮಕ ಪ್ರಜ್ಞೆಯನ್ನು ಮೆಚ್ಚುತ್ತೇವೆ. ನಾವು ಸಾಮರ್ಥ್ಯವನ್ನು ಅವನ ಉಡುಗೊರೆಯಾಗಿ, ವಿವೇಕವನ್ನು ಅವನ ಜ್ಞಾನದ ಒಂದು ಕಣವಾಗಿ ಮತ್ತು ಸಾವನ್ನು ಅವನ ಅನಿವಾರ್ಯ ಪ್ರತಿನಿಧಿಯಾಗಿ ನೋಡುತ್ತೇವೆ. ಈ ಲೋಕದಲ್ಲಿನ ಎಲ್ಲ ವೈಭವಗಳನ್ನು ನಾವು ಕೃಷ್ಣನ ಶಕ್ತಿಯ ಒಂದು ಸಣ್ಣ ಭಾಗವಾಗಿ ಕಾಣುತ್ತೇವೆ ಮತ್ತು ಇಡೀ ಬ್ರಹ್ಮಾಂಡವು ಕೃಷ್ಣನ ಶಕ್ತಿಗಳಿಂದ ಜೀವಂತವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ.
ಕೃಷ್ಣನನ್ನು ಕುರಿತಂತೆ ಕೇಳುತ್ತಿದ್ದಂತೆ ಅವನು ಪರಮ ಪ್ರಬಲ ನಿಯಂತ್ರಕ ಎಂದೂ ಅರಿಯುತ್ತೇವೆ. ತನ್ನ ಎಲ್ಲ ಭಕ್ತರನ್ನು ಆನಂದ ಪಡಿಸುವ, ನಿರ್ವಹಿಸುವ ಮತ್ತು ಅಗತ್ಯಗಳನ್ನು ಪೂರೈಸುವ ಸಂಪೂರ್ಣ ಸಾಮರ್ಥ್ಯ ಅವನಿಗಿದೆ. ಮತ್ತು ನಾವು ಮರೆತಿರುವ ಕೃಷ್ಣನೊಂದಿಗಿನ ನಮ್ಮ ವೈಯಕ್ತಿಕ ಬಾಂಧವ್ಯವನ್ನು ಪ್ರಕಟಪಡಿಸುವ ಹಂಬಲ ಸಹಜವಾಗಿ ಹೆಚ್ಚಾಗುತ್ತದೆ.
ನಮ್ಮ ಹಂಬಲವನ್ನು ಇನ್ನಷ್ಟು ಹೆಚ್ಚಿಸಲು ಕೃಷ್ಣನು ಭಗವದ್ಗೀತೆಯಲ್ಲಿ ಹೇಳುತ್ತಾನೆ, (18.68-69)
ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ।
ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥
ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ ।
ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತರೋ ಭುವಿ ॥
“ಈ ಪರಮ ರಹಸ್ಯವನ್ನು(ಕೃಷ್ಣಪ್ರಜ್ಞೆ) ಭಕ್ತರಿಗೆ ಹೇಳುವವನಿಗೆ ಪರಿಶುದ್ಧ ಭಕ್ತಿಸೇವೆಯನ್ನು ಮಾಡುವ ಅವಕಾಶವು ನಿಶ್ಚಯವಾಗಿಯೂ ದೊರೆಯುವುದು; ಅದರ ಅಂತ್ಯದಲ್ಲಿ ಅವನು ನನ್ನ ಬಳಿಗೆ ಹಿಂದಿರುಗಿ ಬರುತ್ತಾನೆ. ಪ್ರಪಂಚದಲ್ಲಿ ಇವನಿಗಿಂತ ನನಗೆ ಪ್ರಿಯನಾದ ಸೇವಕನಿಲ್ಲ. ಇವನಿಗಿಂತ ಪ್ರಿಯನಾದವನು ಮುಂದೆಯೂ ಇರುವುದಿಲ್ಲ.”
ಶ್ರೀ ಚೈತನ್ಯರ ಪ್ರಾರ್ಥನೆ
ಅದೇ ರೀತಿ ಚೈತನ್ಯ ಮಹಾಪ್ರಭುಗಳು ಪ್ರಾರ್ಥಿಸಿಕೊಂಡರು, “ಭಗವದ್ಗೀತೆ ಮತ್ತು ಭಾಗವತದಲ್ಲಿ ನೀಡಿರುವ ಶ್ರೀ ಕೃಷ್ಣನ ಆದೇಶವನ್ನು ಪಾಲಿಸುವಂತೆ ನೀವು ಭೇಟಿಯಾಗುವವರಿಗೆಲ್ಲ ಬೋಧಿಸಿ. ಈ ರೀತಿಯಲ್ಲಿ, ನಿಮ್ಮ ಪ್ರದೇಶದ ಎಲ್ಲರಿಗೂ ಗುರುವಾಗಿ ಮತ್ತು ಮುಕ್ತಗೊಳಿಸಿ. ಹೀಗೆ ದೈವಾಜ್ಞೆಯನ್ನು ಅನುಸರಿಸಿ ಮತ್ತು ಮನೆಯಲ್ಲಿನ ನಿಮ್ಮ ಬದುಕು ನಿಮ್ಮ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿ ಉಂಟುಮಾಡುವುದಿಲ್ಲ.” ಶ್ರೀ ಚೈತನ್ಯ ಮಹಾಪ್ರಭುಗಳ ಈ ಆದೇಶದಂತೆ ಬೋಧಿಸುವ ನಿಷ್ಠಾವಂತ ವ್ಯಕ್ತಿಯು ಭಗವಂತನ ಅನುಗ್ರಹವನ್ನು ಪಡೆಯುವನು ಮತ್ತು ಲೌಕಿಕ ಒತ್ತಡಗಳಿಂದ ಪ್ರಭಾವಿತನಾಗುವುದಿಲ್ಲ.
ಕೃಷ್ಣನ ಬಗೆಗೆ ಮಾತನಾಡುತ್ತ ನಾವು ಬೋಧಿಸಬಹುದು, ಅಥವಾ ಕೃಷ್ಣಪ್ರಜ್ಞೆಯನ್ನು ಬೋಧಿಸಲು ನಮ್ಮ ಬುದ್ಧಿ, ಹಣ, ಸಾಮರ್ಥ್ಯ ಅಥವಾ ಸಮಯವನ್ನು ವಿನಿಯೋಗಿಸಬಹುದು. ವ್ಯಕ್ತಿಯು ವಿದ್ವಾಂಸ, ವಿಜ್ಞಾನಿ, ತತ್ತ್ವಜ್ಞಾನಿ ಅಥವಾ ಕವಿಯಾಗಿದ್ದರೆ, ಅವನು ಭಗವಂತನ ಶಕ್ತಿಯ ಬಗೆಗೆ ಅಧ್ಯಯನ ನಡೆಸಬಹುದು ಮತ್ತು ಭಗವಂತನ ಪಾರಮ್ಯವನ್ನು ಕೊಂಡಾಡಲು ತನ್ನ ಪಾಂಡಿತ್ಯವನ್ನು ಅಳವಡಿಸಬಹುದು. ವ್ಯಕ್ತಿಯು ಆಡಳಿತಗಾರ ಅಥವಾ ರಾಜಕಾರಣಿಯಾಗಿದ್ದರೆ ಅವನು ವ್ಯವಹಾರ ಕೌಶಲದ ಮೂಲಕ ಭಗವಂತನ ಪಾರಮ್ಯವನ್ನು ಸ್ಥಾಪಿಸಬಹುದು. ವ್ಯಕ್ತಿಯು ವಾಣಿಜ್ಯೋದ್ಯಮಿ, ಕೈಗಾರಿಕೋದ್ಯಮಿ, ಅಥವಾ ರೈತನಾಗಿದ್ದರೆ, ಅವನು ತನ್ನ ಹಣವನ್ನು ಅದು ಕೃಷ್ಣನದು ಮತ್ತು ಅವನ ಸೇವೆಗಾಗಿ ಇದೆಯೆಂದು ಯೋಚಿಸುತ್ತ ಕೃಷ್ಣನ ಧ್ಯೇಯಕ್ಕಾಗಿ ಖರ್ಚು ಮಾಡಬಹುದು.
ಅನಂತರ ಬ್ರಹ್ಮನು ಪ್ರಿಯವ್ರತನಿಗೆ ತನ್ನ ಬೋಧನೆಯನ್ನು ಸಂಕ್ಷಿಪ್ತಗೊಳಿಸಿದನು, “ಕೃಷ್ಣನ ಆದೇಶಗಳನ್ನು ಪಾಲಿಸುತ್ತ ಅವನ ಆಶ್ರಯವನ್ನು ಕಂಡುಕೊಳ್ಳಬೇಕು. ಈ ರೀತಿಯಲ್ಲಿ ನಿನಗೆ ಯಾವಾಗಲೂ ಭಗವಂತನ ರಕ್ಷಣೆ ದೊರೆಯುತ್ತದೆ. ದುಂಬಿಗೆ ಕಮಲದ ದಳಗಳ ಮಧ್ಯದಲ್ಲಿ ಹೇಗೆ ಸೂರ್ಯನ ಶಾಖದಿಂದ ರಕ್ಷಣೆ ದೊರೆಯುವುದೋ ಹಾಗೆ ನಿನಗೆ ದೇವರ ರಕ್ಷಣೆ ಲಭಿಸುತ್ತದೆ.”
ಬ್ರಹ್ಮನಿಗೆ ಕರ್ತವ್ಯನಿಷ್ಠನಾಗಿ ಶರಣಾದಾಗ ಪ್ರಿಯವ್ರತನ ಮುಖದಲ್ಲಿ ಮಂದಹಾಸ ಹರಡಿತು. ಪ್ರಿಯವ್ರತನು ರಾಜನಾಗುತ್ತಾನೆ. ಅವನು ಬ್ರಹ್ಮನ ಆದೇಶವನ್ನು ಸ್ವೀಕರಿಸಿದ.
ಮನು ಮೊದಲು ನೆಮ್ಮದಿ, ಅನಂತರ ಆನಂದ ಮತ್ತು ಕೊನೆಗೆ ಗಾಢವಾದ ಕೃತಜ್ಞತೆಯನ್ನು ಅನುಭವಿಸುತ್ತ ಬ್ರಹ್ಮನನ್ನು ಪೂಜಿಸಿದನು. ನಾರದ ಮತ್ತು ಪ್ರಿಯವ್ರತ ಸಂತೃಪ್ತರಾಗಿ, ಸ್ವಲ್ಪವೂ ಅಸಮಾಧಾನ ಇಲ್ಲದಂತೆ ಬ್ರಹ್ಮನ ನಿರ್ಗಮನವನ್ನು ನೋಡುತ್ತಿದ್ದರು.
ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅಪೇಕ್ಷೆಗೆ ಶರಣಾದ ಪ್ರಿಯವ್ರತನು ಗಂಧಮಾದನ ಗಿರಿಯ ಏಕಾಂತತೆ ಮತ್ತು ಪ್ರಶಾಂತತೆಯನ್ನು ಬಿಟ್ಟು ಹೊರಟನು. ಅವನು ರಾಜ್ಯಭಾರ ಮಾಡಲಾರಂಭಿಸಿದನು. ಧಾರ್ಮಿಕ ತತ್ತ್ವಗಳ ಅನುಸಾರ ರಾಜ್ಯಭಾರ ಮಾಡಿದ ಅವನು ಪ್ರಜೆಗಳನ್ನು ತನ್ನ ಮಕ್ಕಳಂತೆ ರಕ್ಷಿಸಿದ. ಅವನ ದೃಢತೆಯನ್ನು ಅರಿತ ಕಳ್ಳ ಕಾಕರು ಒಡಿಹೋದರು. ಅವನ ಪುಣ್ಯ ಕಾರ್ಯವು ಸಾಕಷ್ಟು ಮಳೆಯನ್ನು ತಂದಿತು ಮತ್ತು ಸಮೃದ್ಧವಾಗಿ ದವಸ ಧಾನ್ಯ ಹಾಗೂ ಹಣ್ಣುಗಳನ್ನು ತಂದುಕೊಟ್ಟಿತು. ಪ್ರಜೆಗಳನ್ನು ಯಾವುದೇ ಅಧಿಕ ತೆರಿಗೆ ಕಾಡಲಿಲ್ಲ.
ಪ್ರಿಯವ್ರತ ಮಹಾರಾಜನು ವಿಶ್ವಕರ್ಮನೆಂಬ ಪ್ರಜಾಪತಿಯ ಪುತ್ರಿ ಬರ್ಹಿಷ್ಮತಿಯನ್ನು ಮದುವೆಯಾದನು. ಸೌಂದರ್ಯ, ಶೀಲ, ಔದಾರ್ಯ ಮತ್ತು ಇತರ ಗುಣಗಳಲ್ಲಿ ತನಗೆ ಸಮಾನರಾದ ಹತ್ತು ಪುತ್ರರನ್ನು ಅವಳಲ್ಲಿ ಪಡೆದನು. ಅವರಿಗೆ ಶುದ್ಧ ಭಕ್ತಿಸೇವೆಯಲ್ಲಿ ತರಬೇತಿ ನೀಡಿದನು. ಬಾಹ್ಯ ಪ್ರಪಂಚಕ್ಕೆ ಅವನು ಬರ್ಹಿಷ್ಮತಿಯ ಸೌಂದರ್ಯದಿಂದ ಆಕರ್ಷಿತನಾದ, ಅಸೀಮಿತ ಸಂಕೀರ್ಣತೆ, ವೈಭವ ಮತ್ತು ಪ್ರಾಬಲ್ಯಗಳಿಂದ ಕೂಡಿದ ರಾಜನಂತೆ ಕಾಣುತ್ತಿದ್ದನು. ಆಂತರಿಕವಾಗಿ ಪ್ರಿಯವ್ರತನು ವೈರಾಗ್ಯದಲ್ಲಿಯೇ ನೆಲೆಯಾಗಿದ್ದನು ಮತ್ತು ಅವನ ಪ್ರಜ್ಞೆಯು ಕೃಷ್ಣನ ಚರಣ ಕಮಲದಲ್ಲಿಯೇ ನೆಟ್ಟಿತ್ತು.
ಅನೇಕ ವರ್ಷಗಳ ರಾಜ್ಯಭಾರದ ಅನಂತರ ರಾಜನು ಸಂಪತ್ತು, ಹೆಂಡತಿ ಮತ್ತು ಮನೆಯ ಬಗೆಗೇ ಯೋಚಿಸುತ್ತ ಸಾಯುವ ಲೌಕಿಕರ ವಿಧಿಯಿಂದ ಪಾರಾಗುವುದರ ಬಗೆಗೆ ನಮಗೆ ಪಾಠ ಕಲಿಸಲು ಪ್ರಲಾಪಿಸಿದನು, “ಅಯ್ಯೋ! ನಾನೆಷ್ಟು ಖಂಡನಾರ್ಹನಾಗಿದ್ದೇನೆ! ನಾನೀಗ ಮುಚ್ಚಿದ ಬಾವಿಯಂತೆಯೇ ಇರುವ ಭೌತಿಕ ಭೋಗದಲ್ಲಿ ಬಿದ್ದಿದ್ದೇನೆ. ನಾನು ನನ್ನ ಹೆಂಡತಿಯ ಕೈಗಳಲ್ಲಿ ಕುಣಿಯುವ ಕೋತಿಯಂತಾಗಿದ್ದೇನೆ, ಆದರೆ ಇದು ಈಗ ಸಾಕು.”
ಹೀಗೆ ಪ್ರಿಯವ್ರತ ಮಹಾರಾಜನು ತನ್ನ ಬದುಕಿನ ಅಂತ್ಯದಲ್ಲಿ ಸಿಂಹಾಸನವನ್ನು ತೊರೆದನು. ಸಾಮ್ರಾಜ್ಯವನ್ನು ತ್ಯಜಿಸಿದನು. ತನ್ನ ಐಹಿಕ ಸಂಪತ್ತೆಲ್ಲವನ್ನೂ ಅವನು ತನ್ನ ವಿಧೇಯ ಪುತ್ರರಲ್ಲಿ ಹಂಚಿದನು. ಲೌಕಿಕ ಆಸೆಗಳಿಂದ ಮುಕ್ತನಾಗಿ, ಕೃಷ್ಣಪ್ರಜ್ಞೆಯಲ್ಲಿ ತಲ್ಲೀನನಾಗಿ ಅವನು ವೈರಾಗ್ಯದ, ಸರಳ, ಪವಿತ್ರ ಜೀವನಕ್ಕೆ ಮರಳಿದನು. ರಾಜನ ಸ್ಥಾನವಿದ್ದರೂ ಅವನು ವೈರಾಗ್ಯದಲ್ಲಿಯೇ ಉಳಿದಿದ್ದನು. ಅವನಿಗೆ ಕರ್ಮದ ಪುರಾತನ ಕಲೆಯು ತಿಳಿದಿತ್ತು ಮತ್ತು ತನ್ನ ಕಾರ್ಯವನ್ನು ಸಂಪೂರ್ಣವಾಗಿ ಕೃಷ್ಣನ ಚರಣ ಕಮಲಕ್ಕೆ ಅರ್ಪಿಸಿದ್ದನು.