ಊರ್ವಶಿಗೆ ಮನಸೋತ ಪುರೂರವ ರಾಜ!

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 14ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಊರ್ವಶಿಗೆ ಮನಸೋತ ಪುರೂರವ ರಾಜ! ಕಥೆಯನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ.

“ಇಂದಿನ ಅಧ್ಯಾಯದಲ್ಲಿ ಶ್ರೀವ್ಯಾಸದೇವರು ಮೋಹಕಾಮಗಳ ಕಥೆ ಹೇಳಿದ್ದಾರೆ. ಭೂಲೋಕದ ಸುಂದರಾಂಗರೊಂದಿಗೆ ಸ್ವರ್ಗಲೋಕದ ಸುರಸುಂದರಿಯರು ಸೇರುವುದು, ಇನ್ನೊಬ್ಬರ ಪತ್ನಿಯ ಅಪಹರಣ, ಗಂಧರ್ವಕನ್ಯೆಯೊಂದಿಗೆ ಬಯಸಿಬಯಸಿ ಸಂಗ-ಹೀಗೆ ಕಾಮನೆಗಳ ಕಥಾಭಾಗ ಈ ಹದಿನಾಲ್ಕನೆಯ ಅಧ್ಯಾಯ.

ಹೀಗಿದ್ದರೂ ಇದು ಸಾಧಾರಣ ವ್ಯಕ್ತಿಗಳ ಕಥೆಯಲ್ಲ- ಚಂದ್ರವಂಶದ ವೀರರ, ಮಹಾಮಹಿಮರ, ಸುಂದರಾಂಗರ ಕಥೆ. ಆದರೆ, ಯಾವ ವ್ಯಕ್ತಿಯಾದರೂ, ಅವನು ದೇವನಾದರೂ ಸರಿ, ದಾನವನಾದರೂ ಸರಿ, ಸ್ತ್ರೀಮೋಹದಿಂದ ತನ್ನ ಕರ್ತವ್ಯಗಳಿಂದ ವಿಮುಖನಾಗುತ್ತಾನೆ, ಸರಿತಪ್ಪುಗಳನ್ನು ಪರಿಗಣಿಸುವುದಿಲ್ಲ ಎಂದೆಲ್ಲ ಹೇಳುವಂತೆ ಇಲ್ಲಿನ ಘಟನೆಗಳು ಎದ್ದು ನಿಲ್ಲುತ್ತವೆ!”

ಆ ಮುಂಜಾವಿನ ಮುಂಬೆಳಕಿನ ಸುಂದರ ಪರಿಸರದಲ್ಲಿ ಪ್ರಧಾನವಾಗಿ ಕುಳಿತು ಸೂತಮುನಿಗಳು ಶ್ರೀಮದ್ಭಾಗವತದ ಕಥೆಯನ್ನು ಮುಂದುವರಿಸಿದರು.

ಇದೇನಿದು, ಸ್ತ್ರೀಮೋಹವೆಂಬುದು ಹೀಗೆ ಪುರುಷಕುಲವನ್ನು ಕಾಡಿದೆ: ಕ್ಷತ್ರಿಯರು ಮಹರ್ಷಿಗಳು, ದೇವದಾನವರು ಮೋಹಕ ಸ್ತ್ರೀ ರೂಪವನ್ನು ಕಂಡಕೂಡಲೇ ಕರಗಿಹೋಗಿದ್ದಾರಲ್ಲ. ತಮ್ಮ ಕರ್ತವ್ಯಗಳನ್ನೂ ಮರೆತು, ಕಾಮನೆಯಿಂದ ಹೊರಬರದಂತಹ ಅಸಹಾಯಕ ವ್ಯಕ್ತಿಗಳಾಗುತ್ತಾರಲ್ಲ? ನಮ್ಮ ಪುರಾಣ ಗ್ರಂಥಗಳಲ್ಲಿ, ಹೀಗೆ ಸ್ತ್ರೀ ಮೋಹ ಸರ್ವನಾಶಕ್ಕೆ ದಾರಿ ಎಂದು ತಿಳಿದಿದ್ದರೂ ಅದರಲ್ಲಿ ತೊಡಗುವ ಪುರುಷರು ಕಾಣಿಸುತ್ತಾರಲ್ಲ? ರಾಮಾಯಣ, ಮಹಾಭಾರತ, ಪುರಾಣಗಳಲ್ಲೂ ಇಂತಹ ಉದಾಹರಣೆಗಳು ಅನೇಕಾನೇಕ ಕಾಣುತ್ತವೆ!”

ಸ್ತ್ರೀಪುರುಷರು ಸೃಷ್ಟಿಯಾಗಿರುವುದೇ ಪರಸ್ಪರ ಮೋಹಗೊಳ್ಳುವುದಕ್ಕಾಗಿ. ಇವೆಲ್ಲ ಮೋಹ ಸಂಬಂಧಗಳ ನಡುವೆ ಮಾನವನ ಬಲಹೀನತೆಗಳ ಪ್ರದರ್ಶನವೂ ಆಗುತ್ತದೆ. ಮಹಾತಪಸ್ವಿಯಾದ ರಾವಣ ಸೀತಾಮಾತೆಯ ಮೇಲೆ ಮೋಹಗೊಳ್ಳುವುದು, ಸುಗ್ರೀವನ ಪತ್ನಿಯನ್ನು ವಾಲಿ ಕದ್ದೊಯ್ಯುವುದು, ಅಹಲ್ಯೆಯ ಮೇಲೆ ಇಂದ್ರ ಮೋಹಗೊಳ್ಳುವುದು, ವಿಶ್ವಾಮಿತ್ರು ಗಂಧರ್ವಕನ್ಯೆಗಾಗಿ ತಮ್ಮ ತಪಶ್ಯಕ್ತಿಯನ್ನು ಕಳೆದುಕೊಂಡದ್ದು, ಮತ್ಸ್ಯಕನ್ಯೆಯ ಮೋಹದಲ್ಲಿ ಮಗನಿಗೆ ರಾಜಪಟ್ಟವನ್ನೇ ಇಲ್ಲದಂತೆ ಮಾಡಿದ್ದು, ಸುರಸುಂದರಿಯ ಮೋಹಕ್ಕೆ ಸಿಲುಕಿ ಮಗನಿಂದಲೇ ಯೌವನವನ್ನು ಕಸಿದುಕೊಂಡ ಮಹನೀಯ – ಹೀಗೆ ಕಾಮನೆಗಳು ಮನುಷ್ಯನೆದುರು ಒಂದು ಮೋಹದ ತೆರೆಯನ್ನೆ ತಂದು ನಿಲ್ಲಿಸಿ, ತಪ್ಪಿನ ಮೇಲೆ ತಪ್ಪು ಮಾಡುವಂತೆ ಪ್ರಚೋದಿಸುತ್ತದೆ.

ಆದರೆ, ನಮ್ಮ ಪುರಾಣಗಳು ಬರೀ ಇಂತಹ ಚಂಚಲ ಪುರುಷರದ್ದೇ ಕಥೆಯಲ್ಲ, ಶ್ರೀರಾಮನಂತಹ ಮಹಾನ್ ಪುರುಷರಿದ್ದಾರೆ, ಭೀಷ್ಮನಂತಹ ಪಿತೃಪರಿಪಾಲಕರು ಕಂಡಿದ್ದಾರೆ, ಪ್ರಹ್ಲಾದ ರಾಜರಂತಹವರು ಬಂದಿದ್ದಾರೆ, ಅಂಬರೀಷ, ಹರಿಶ್ಚಂದ್ರ, ಭಗೀರಥ, ಪರಶುರಾಮ, ಅವರಂತಹ ಮಹಾಪುರುಷರಲ್ಲದೆ, ಅನೇಕ ರಾಜರ್ಷಿಗಳು, ಬ್ರಹ್ಮರ್ಷಿಗಳು ಕಂಡಿದ್ದಾರೆ.

ಮೋಹಕಾಮಗಳಿಗೆ ಬಲಿಯಾಗದ, ಮಾತಿಗೆ, ಧರ್ಮಕ್ಕೆ, ನೀತಿನಿಯಮಗಳಿಗೆ ಕಟ್ಟುಬಿದ್ದವರು ಕಂಡಿದ್ದಾರೆ. ಮುಂದಿನ ತಲೆಮಾರಿನವರಿಗೆ ಒಳಿತು – ಕೆಟ್ಟದುಗಳ ವ್ಯತ್ಯಾಸ ಕಾಣಿಸುವ ಎಲ್ಲ ಆಗುಹೋಗುಗಳನ್ನು ನಮ್ಮ ಆಚಾರ್ಯರು ಪುರಾಣಗಳ ಮೂಲಕ ನಮ್ಮ ಮುಂದಿರಿಸಿದ್ದಾರೆ.

ಮಾಡುವ ಕೆಲಸಗಳ ಫಲಾಫಲಗಳನ್ನು ಅಲ್ಲಲ್ಲಿಯೇ ಕಾಣಿಸಿದ್ದಾರೆ. ಮೋಹಗೊಂಡವರು ನಿರಾಸೆಯ ಅಂತ್ಯ ಕಂಡು ಪರಿತಪಿಸುವುದು, ಪಶ್ಚಾತ್ತಾಪ ಪಡುವುದನ್ನೂ ವರ್ಣಿಸಿದ್ದಾರೆ. ಆದ್ದರಿಂದ ಹಿರಿಯರ ಬದುಕಿನ ಉತ್ತಮಾಂಶಗಳನ್ನು ಹೆಕ್ಕಿ ನಮ್ಮದಾಗಿಸಿಕೊಳ್ಳಲು ಇವೆಲ್ಲ ಕಥೆಗಳು ನಮಗೆ ದಾರಿದೀಪವಾಗಿವೆ!”

ಸೂತ ಮುನಿಗಳು ಅ೦ದಿನ ಕಥಾಭಾಗವನ್ನು ಪ್ರಾರಂಭಿಸಿದರು :

ಅಥಾತಃ ಶ್ರೂಯತಾಂ ರಾಜನ್

ವಂಶಃ ಸೋಮಸ್ಯೆ ಪಾವನಃ |

ಯಸ್ಮಿನ್ನೈಲಾದಯೋ ಭೂಪಾಃ

ಕೀರ್ತ್ಯಂತೇ ಪುಣ್ಯಕೀರ್ತಯಃ ||

ಪರೀಕ್ಷಿತ ರಾಜನಿಗೆ ಭಾಗವತದ ಈ ಅಧ್ಯಾಯವನ್ನು ಹೀಗೆ ಹೇಳುವುದರಿಂದ ಪ್ರಾರಂಭಿಸಿದರು, ಶುಕಮುನಿಗಳು, ಇದರ ಅರ್ಥವೇನೆಂದರೆ – ‘ಹೇ ದೊರೆಯೇ, ಇಲ್ಲಿಯವರೆಗೆ ನೀನು ಸೂರ್ಯದೇವರ ವಂಶದ ವಿವರಣೆಯನ್ನು ಆಲಿಸಿದೆ. ಈಗ ಅತಿಶಯವಾದ ಕೀರ್ತಿ, ಮಹಿಮೆಗಳಿಂದ ಕೂಡಿದ ಚಂದ್ರದೇವನ ವಂಶದ ಪಾವನಕರ ವಿವರಣೆಯನ್ನು ಕೇಳು.

ಈ ವರ್ಣನೆಯಲ್ಲಿ ಯಾರ ಮಹಿಮೆಯನ್ನು ಶ್ರವಣ ಮಾಡುವುದು ಶ್ರೇಯಸ್ಕರವೋ ಅಂತಹ ಪುರೂರವ ರಾಜನ  ವೈಭವಯುತವಾದ ಚರಿತ್ರೆಯನ್ನು ಕೇಳುವಂತಹವನಾಗು! ನಿನಗೆ ಗೊತ್ತಿರುವಂತೆಯೆ, ಭಗವಾನ್ ವಿಷ್ಣುವು ಸಹಸ್ರ ಶೀರ್ಷ ಪುರುಷನೆ೦ದೂ ಪ್ರಖ್ಯಾತನಲ್ಲವೇ? ಅವನ ನಾಭಿಯ ಸರೋವರದಿಂದ ಕಮಲವೊಂದು ಅಂಕುರಿಸಿತು. ಅದರಿಂದ ಬ್ರಹ್ಮನು ಜನಿಸಿದನು.

ಅತ್ರಿಮುನಿ ಎಂಬುವವನು ಬ್ರಹ್ಮದೇವನ ಮಗ. ಈ ಆತ್ರಿಯ ಆನಂದಬಾಷ್ಪಗಳಿಂದ ಸೋಮ ಎನ್ನುವ ಮಗ ಹುಟ್ಟಿದ. ಸೋಮ ಎಂದರೆ ಚಂದ್ರ. ಅವನು ಅತ್ಯಂತ ಆಹ್ಲಾದಕರ ಕಿರಣಪೂರ್ಣನಾಗಿದ್ದನು. ಬ್ರಹ್ಮದೇವನು ಇವನನ್ನು ಬ್ರಾಹ್ಮಣರ, ಔಷಧಿಗಳ ಹಾಗೂ ನಕ್ಷತ್ರಗಳ ನಿರ್ದೇಶಕನನ್ನಾಗಿ ನೇಮಿಸಿದನು!’

ಚಂದ್ರದೇವ ಸೋಮ ಅವನ ಕಾಲದ ಮಹಾನ್ ಬಲಶಾಲಿಗಳಲ್ಲಿ ಒಬ್ಬನೆಂದು ಹೆಸರು ಮಾಡಿದ. ಮೂರು ಲೋಕಗಳನ್ನೂ ಜಯಿಸಿದ. ಅವನಿಗೆ ತನ್ನ ಬಗ್ಗೆ ಆತ್ಮಾಭಿಮಾನ – ನಂಬಿಕೆ ಎಷ್ಟಿತ್ತೆಂದರೆ ‘ತಾನು ಏನನ್ನು ಬೇಕಾದರೂ ಮಾಡಬಲ್ಲೆ ಯಾರನ್ನು ಬೇಕಾದರೂ ಜಯಿಸಬಲ್ಲೆ’ – ಎನ್ನುವುದೊಂದು ಅಹಂಕಾರ ಅವನನ್ನಾವರಿಸಿಕೊಂಡಿತು. ಅವನ ಮನಸಿಗನ್ನಿಸಿದ್ದನ್ನು ಮಾಡಲು ಅವನಿಗೆ ಪ್ರೇರೇಪಿಸಿತು.

ಎಲ್ಲರೂ ತನ್ನ ಶೌರ್ಯಕ್ಕೆ ಬೆದರುತ್ತಾರೆ ಎಂದು ಅನ್ನಿಸಿದ ಕೂಡಲೇ ತಾನಾಗಿಯೇ ಲೋಕಪ್ರಸಿದ್ಧರ ಮೇಲೆ ಯುದ್ಧಕ್ಕೆ ಹೋದ. ದೊಡ್ಡ ದೊಡ್ಡ ಯಾಗಗಳನ್ನು ಒಂದು ಪ್ರತಿಷ್ಠೆ ಎಂಬಂತೆ ಮಾಡತೊಡಗಿದ. ಕೊನೆಗೆ ಮಹಾನ್ ಯಾಗ ಎಂದೆನಿಸಿದ ರಾಜಸೂಯಯಾಗವನ್ನೂ ಆಚರಿಸಿದ.

ಅವನ ಅಹಂಕಾರದ ಮದ, ವಿಜಯೋತ್ಸವ -ಯಾಗೋತ್ಸವಗಳ ಮದ ಎಲ್ಲಿಗೆ ಮುಟ್ಟಿತೆಂದರೆ ಒಂದು ದಿನ ಸೋಮ, ದೇವತೆಗಳ ಗುರುವಾದ ಬೃಹಸ್ಪತ್ಯಾಚಾರ್ಯರ ಪತ್ನಿ ತಾರಾಳನ್ನೇ ಅಪಹರಿಸಿಕೊಂಡು ತಂದುಬಿಟ್ಟ.

ಈ ಅನಿರೀಕ್ಷಿತ ಘಟನೆ ದೇವ-ದಾನವರಲ್ಲಿ ಕ್ಷೋಭೆಯನ್ನುಂಟು ಮಾಡಿತು. ಯಾರು ಹೇಳಿಕಳುಹಿಸಿದರೂ ಸೋಮ ತನ್ನ ಹಿಡಿತದಿಂದ ತಾರಾಳನ್ನು ಸಡಿಲಿಸಲಿಲ್ಲ. ಗುರು ಬೃಹಸ್ಪತಿಗಳು, ‘ಸೋಮದೇವ, ನೀನು ಮಾಡಿರುವ ಕೆಲಸ ನೀತಿ ಸೂಕ್ಷ್ಮ ವಿವೇಚನೆಯನ್ನು ದಾಟಿದೆ. ದೇವತೆಗಳ ಗುರುಸ್ಥಾನದಲ್ಲಿರುವ, ಗುರುಪತ್ನಿಯೇ ಎನಿಸಬಹುದಾದಂತಹ ಹೆಣ್ಣನ್ನು ಅಪಹರಿಸಿ ನೀನು ದೊಡ್ಡ ಪಾಪವೆಸಗಿದ್ದೀಯ.

ಕೂಡಲೇ ತಾರಾಳನ್ನು ತಂದೊಪ್ಪಿಸಿ ಕ್ಷಮೆ ಬೇಡು’ – ಎಂದೆಲ್ಲ ಬುದ್ಧಿ ಹೇಳಿದರು. ಮತ್ತೆ ಮತ್ತೆ ಹೇಳಿದರು. ಅವರಿವರಿಂದ ಹೇಳಿಸಿದರು. ಯಾವುದಕ್ಕೂ ಸೋಮ ಜಗ್ಗಲಿಲ್ಲ. ತಪ್ಪು ಮಾಡಿಬಿಟ್ಟಿದ್ದೇನೆ ಎಂದು ಅವನಿಗರಿವಾಗಿದ್ದರೂ, ಪೊಳ್ಳು ಪ್ರತಿಷ್ಠೆಯ ಕಾರಣದಿಂದ ಅವನು ತಾರಾಳನ್ನು ಹಿಂತಿರುಗಿಸಲಿಲ್ಲ. ಇವೆಲ್ಲ ಗೊಂದಲ ಗೋಜಲುಗಳ ಪರಿಣಾಮವಾಗಿ ದೇವ-ದಾನವರ ನಡುವೆ ಯುದ್ಧ ಪ್ರಾರಂಭವಾಗಿ ಹೋಯಿತು – ಇದಕ್ಕೆ ಕಾರಣವಾದದ್ದು, ಬೃಹಸ್ಪತ್ಯಾಚಾರ್ಯರು ಮತ್ತು ದಾನವರ ಗುರು ಶುಕ್ರಾಚಾರ್ಯರ ನಡುವಿನ ಬಹಳ ಕಾಲದ ವೈರ.

ದಿಢೀರನೆ ಯುದ್ಧ ಪ್ರಾರಂಭವಾಯಿತು. ದೊಡ್ಡದಾಗಿ ಬೆಳೆಯಿತು. ಸೋಮಚಂದ್ರದೇವ ದೇವತೆಗಳಲ್ಲಿ ಒಬ್ಬನೇ ಆಗಿದ್ದರೂ ಶುಕ್ರಾಚಾರ್ಯರ ಬೆಂಬಲದಿಂದ, ಅಸುರರ ಬೆಂಬಲವೂ ದೊರಕಿ, ಇವರೆಲ್ಲರ ಬಲದೊಂದಿಗೆ ಸೋಮ ದೇವತೆಗಳ ಮೇಲೆಯೇ ದಂಡೆತ್ತಿದ್ದ. ಸಕಲ ದೇವತೆಗಳ ದೊರೆ ಇಂದ್ರ ದೊಡ್ಡ ದಂಡಿನೊಂದಿಗೆ ಬೃಹಸ್ಪತಿಯ ಪಕ್ಷ ವಹಿಸಿ ಯುದ್ಧಕ್ಕೆ ನಿಂತ. ಮಹಾಯುದ್ಧವೊಂದು ನಡೆದುಹೋಯಿತು. ದೇವದಾನವರಿಬ್ಬರೂ ಹತರಾದರು.

ಬ್ರಹ್ಮದೇವನಿಗೆ ಇಡೀ ಘಟನಾವಳಿಯ ಪರಿಚಯವಾದಾಗ ಅವನಿಗೆ ಸೋಮನ ಮೇಲೆ ಇನ್ನಿಲ್ಲದ ಕೋಪ ಬಂದಿತು. ಸೋಮದೇವನನ್ನು ಕರೆಸಿ ಉಗ್ರವಾಗಿ ಖಂಡಿಸಿದ. ‘ದೇವತೆಗಳಲ್ಲಿ ಒಬ್ಬನಾಗಿ, ಅದೂ ಚಿಕ್ಕವನಾಗಿ ಗುರುಪತ್ನಿಯನ್ನು ಅಪಹರಿಸಿದ್ದಲ್ಲದೆ, ಸಹದೇವತೆಗಳೊಂದಿಗೆ ಯುದ್ಧಮಾಡಲು ರಾಕ್ಷಸರ ಬೆಂಬಲ ಪಡೆದಿರುವುದು ಅಕ್ಷಮ್ಯ ಅಪರಾಧ, ಕೂಡಲೇ ಯುದ್ಧ ನಿಲ್ಲಿಸು. ತಾರಾಳನ್ನು ಕರೆದುಕೊಂಡು ಬಂದು ದೇವಗುರುಗಳಿಗೆ ಒಪ್ಪಿಸಿ, ಅವರ ಕ್ಷಮೆಯನ್ನೂ, ದೇವತೆಗಳ ಕ್ಷಮೆಯನ್ನೂ ಬೇಡು!’ – ಎಂದು ಅಜ್ಞಾಪಿಸಿದ.

ಸೋಮನಿಗೂ ಯುದ್ಧ ಬೆಳೆಯುವುದೂ, ದೇವದಾನವರ ಮಾರಣಹೋಮು ಆಗುವುದೂ ಬೇಡವಾಗಿತ್ತು. ಕೂಡಲೇ ಅವನು ಬ್ರಹ್ಮದೇವರ ಕ್ಷಮೆಬೇಡಿ, ಯುದ್ಧ ನಿಲ್ಲಿಸಿ, ತಾರಾಳನ್ನು ಕರೆತಂದು ಬೃಹಸ್ಪತಿಗೆ ಒಪ್ಪಿಸಿ, ವಿಷಾದ ವ್ಯಕ್ತಪಡಿಸಿದ.

ಆದರೆ ಎಲ್ಲವೂ ಶಾಂತವಾಗಿ ಮುಕ್ತಾಯವಾಯಿತು ಅಂದುಕೊಳ್ಳುವ ವೇಳೆಗೆ ಒಂದು ಅನುಚಿತ ಅಂಶ ಬೆಳಕಿಗೆ ಬಂದಿತು; ತಾರಾ ಗರ್ಭಿಣಿಯಾಗಿದ್ದಳು.

ಬೃಹಸ್ಪತಿಗೆ ಅವಮಾನವಾದಂತಾಗಿತ್ತು, ರೋಷ ಉಕ್ಕಿಬಂತು. ಅವರು ಪತ್ನಿ ತಾರಾಳ ಮುಖವನ್ನೇ ತೀಕ್ಷ್ಣವಾಗಿ ದಿಟ್ಟಿಸುತ್ತ ಹೇಳಿದರು : ‘ಏ, ಮತಿಹೀನ ಹೆಂಗಸೇ ನನಗೆ ಮೀಸಲಾದ, ನನ್ನ ಸಂತಾನವನ್ನು ಭರಿಸಬೇಕಾದ ನೀನು ಇನ್ನೊಬ್ಬನ ಸಂಸರ್ಗದಿಂದ ಗರ್ಭಧರಿಸಿದ್ದೀಯ. ಈ ಬೇರೊಬ್ಬನ ಮಗುವನ್ನು ಕೂಡಲೇ ಪ್ರಸವಿಸು.

ಇಂತಹ ಕಾರ್ಯಮಾಡಿ ಬಂದದ್ದಕ್ಕಾಗಿ ನಾನು ನಿನ್ನನ್ನು ನಿಂದಿಸುವುದಿಲ್ಲ, ಶಿಕ್ಷಿಸುವುದೂ ಇಲ್ಲ. ನಿನಗೂ ಒಬ್ಬ ಪುತ್ರನ ಅಪೇಕ್ಷೆ ಮನದಾಳದಲ್ಲಿತ್ತು ಎಂದು ನಾನು ಬಲ್ಲೆ ಈ ದುರ್ಮಾರ್ಗದಿಂದ ನೀನಿದನ್ನು ಸಾಧಿಸಿಕೊಂಡಿದ್ದೀಯ!’

ತಾರಾ ಸಂಕೋಚ ಅವಮಾನ-ಹೆದರಿಕೆಗಳಿಂದ ಮುದುಡಿ ಹೋಗಿದ್ದಳು. ಬೃಹಸ್ಪತಿಯನ್ನು ಅವಳೇನು ಬಿಟ್ಟು ಹೋಗಲಿಲ್ಲ. ಅವಳನ್ನು ಅಪಹರಿಸಿ ಪುತ್ರಸಂತಾನ ನೀಡು ಎಂದು ಮೋಹದಿಂದ ಸೋಮನನ್ನೇನೂ ಬೇಡಿಕೊಳ್ಳಲಿಲ್ಲ. ಈ ಅಪಹರಣ ಗರ್ಭಧಾರಣೆ ಅವಳು ಬಯಸಿ ನಡೆದದ್ದೇ? ಹೀಗಾದರೂ ಇವಳಿಗೇಕೆ ಇಂತಹ ಅವಮಾನ, ತುಚ್ಛೀಕರಣ?

ಭಯ-ನಾಚಿಕೆ-ಅವಮಾನಗಳಿಂದ ಕುಗ್ಗಿಹೋಗಿದ್ದ ಅವಳು ಕೂಡಲೇ ಮಗುವೊಂದನ್ನು ಹಡೆದಳು. ಆ ಅಮಾಯಕ ಗಂಡುಮಗು ಬಂಗಾರ ಬಣ್ಣದ ದೇಹಕಾಂತಿಯಿಂದ ಬಲು ಸುಂದರವಾಗಿತ್ತು.

ಆ ಸುಂದರ ಗಂಡುಮಗುವನ್ನು ನೋಡಿದ ಕೂಡಲೇ ಬೃಹಸ್ಪತಿ ಮತ್ತು ಸೋಮ ಇಬ್ಬರೂ ಆ ಮಗು ತನ್ನದು, ತನಗೇ ಬೇಕು ಎಂದು ಮಗುವನ್ನು ಬಯಸಿದರು. ‘ಈ ಮಗು ನನ್ನದು, ನಿನ್ನದಲ್ಲ, ನಿನಗೆ ಕೊಡಲಾಗುವುದಿಲ್ಲ!’ – ಎಂದು ಬೃಹಸ್ಪತಿ ಹೇಳಿದ್ದನ್ನೇ ಸೋಮಚಂದ್ರನೂ ಹೇಳಿದ, ‘ಈ ಮಗು ನನ್ನದು. ಈ ದೇಹಕಾಂತಿ ನನ್ನದು, ಇದು ನನಗೇ ಸಲ್ಲಬೇಕು!’

ಥಟ್ಟನೆ ಬೃಹಸ್ಪತಿಗೂ ಸೋಮನಿಗೂ ನಡುವೆ ವಾಗ್ಯುದ್ಧ ಪ್ರಾರಂಭವಾಯಿತು. ತಾರಾ ಮುದುಡಿಕೊಂಡೇ ನಿಂತಿದ್ದಳು. ಇದರ ಕೊನೆ ಏನಾಗುತ್ತದೆಯೋ ಎಂದು ತಿಳಿದುಕೊಳ್ಳಲು ಅವಳು ಕುತೂಹಲದಿಂದ ಕಾದಳು. ಅಷ್ಟರಲ್ಲಿ ಅಲ್ಲಿ ಉಪಸ್ಥಿತರಿದ್ದ ಮುನಿಗಳು – ದೇವತೆಗಳು ಈ ಮಗು ಯಾರದು ಎಂದು ಹೇಳುವಂತೆ ತಾರಾಳನ್ನು ಬಲವಂತಪಡಿಸಿದರು. ಮತ್ತೆ ಮತ್ತೆ ಕೇಳಿದರು. ತಾರಾ ಸಂಕೋಚ, ಭಯಗಳಿಂದ ಮೂಕಳಾಗಿ ಹೋಗಿದ್ದಳು. ಇವರಿಗೆ ಹೇಗೆ ಉತ್ತರಿಸಬೇಕೆಂದೇ ಅವಳಿಗೆ ತಿಳಿಯಲಿಲ್ಲ.

ಆದರೆ, ಅವಳ ಗರ್ಭದಲ್ಲಿ ಇದ್ದು ಹೊರಬಂದಿದ್ದ ಆ ನವಜಾತ ಶಿಶು ಸುಮ್ಮನಿರಲಿಲ್ಲ. ಕೆಲಕ್ಷಣಗಳ ಹಿಂದೆ ಜನಿಸಿದ್ದ ಆ ಮಗುವಿನ ಮುಖದಮೇಲೂ ಬೇಸರದ, ಕೋಪದ ಗೆರೆಗಳು ಮೂಡಿದ್ದವು.

ಆ ಶಿಶು ಹೇಳಿತು-

‘ನೀನೀಗ ಶೀಲ ಕಳೆದುಕೊಂಡವಳು ಎಂದು ಎಲ್ಲರಿಗೂ ಗೊತ್ತಾಗಿ ಹೋಗಿದೆ. ಇನ್ನೂ ಹೀಗೆ ನಾಚಿಕೆಪಟ್ಟುಕೊಂಡು ನಿಲ್ಲುವುದರಲ್ಲಿ ಯಾವ ಅರ್ಥವೂ ಇಲ್ಲ. ಯಾವ ಉಪಯೋಗವೂ ಇಲ್ಲ, ನಿನ್ನ ತಪ್ಪನ್ನು ಒಪ್ಪಿಕೊಂಡು, ನಿಜವಾದ ಸಂಗತಿಯನ್ನು ನನಗಾದರೂ ಹೇಳು!

ತಾರಾ ಈ ಮಾತು ಕೇಳಿ ಧರೆಗೇ ಇಳಿದುಹೋದಳು. ಯಾರಿಂದ ಏನು ಮಾತು ಕೇಳಿದಾಗಲೂ ಅವಳಿಗೆ ಏನೂ ಅನ್ನಿಸಿರಲಿಲ್ಲ. ಆದರೆ ತನ್ನ ರಕ್ತವನ್ನು ತುಂಬಿಕೊಂಡು ತನ್ನ ದೇಹವನ್ನೇ ಸೀಳಿ ಹೊರಬಂದ ಈ ಕೆಲಕ್ಷಣಗಳ ಜೀವ ತನ್ನ ಮೇಲೆ ಅಧಿಕಾರ ಸ್ಥಾಪಿಸುವುದನ್ನು ಅವಳಿಂದ ಸಹಿಸಲಾಗಲಿಲ್ಲ. ಅವಳಿಗೆ ದುಃಖ ಉಕ್ಕಿ ಬಂದಿತು.

ಬ್ರಹ್ಮದೇವನಿಗೆ ಮನಕರಗಿತು. ಇದೀಗ ಹುಟ್ಟಿದ ಗಂಡು ಜೀವವೂ ಸೇರಿ, ಇಲ್ಲಿನೆಲ್ಲ ಗಂಡುಗಳೂ ಅಸಹಾಯಕ ಹೆಣ್ಣೊಬ್ಬಳನ್ನು ಹೀಗೆ ಕಾಡುವುದು ಸರಿಯಲ್ಲ ಎನಿಸಿತು. ಕೂಡಲೇ ಅವಳನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು, ಸಾಂತ್ವನಗೊಳಿಸಿ, ಮಗುವಿನ ತಂದೆ ಬಗ್ಗೆ ವಿಚಾರಿಸಿದ.

ತಾರಾ ಕೆಲಕ್ಷಣಗಳಲ್ಲಿ ಮೊದಲಿನಂತಾದಳು. ದೇವದಾನವ ಪತ್ನಿಯರಲ್ಲಿ ಯಾವಾಗಲೂ ನಡೆಯುತ್ತಲೇ ಇರುವ ವಿಷಯವೊಂದು ತನ್ನ ಮಟ್ಟಿಗೆ ಹೀಗೆ ಚರ್ಚೆಗೆ ವಸ್ತುವಾದದ್ದು ಅವಳಿಗೆ ಮೋಜೆನಿಸಿತ್ತು. ನೋವೂ ಆಗಿತ್ತು. ಪಿತೃಸಮಾನನಾದ ಬ್ರಹ್ಮದೇವ ಕೇಳಿದಾಗ ಅವಳು ಹೇಳಿದಳು : ‘ಪೂಜ್ಯ ತಂದೆ, ಈ ಮಗುವಿನ ತಂದೆ ಚಂದ್ರದೇವ ಸೋಮ!’

ಆ ಕ್ಷಣದಲ್ಲಿ ಆ ಸುಂದರ ಮಗು ಬೃಹಸ್ಪತಿಯ ಕೈತಪ್ಪಿ, ಸೋಮನ ಪಾಲಾಯಿತು.

ಇಷ್ಟೆಲ್ಲ ಆದರೂ ಕೊನೆಗೆ ಆ ಮಗುವಿನ ನಾಮಕರಣ ಮಾಡಿದ್ದು ಬ್ರಹ್ಮದೇವನೆ, ಬ್ರಹ್ಮ ಆ ಮಗುವಿಗೆ ಬುಧ ಎಂದು ನಾಮಕರಣ ಮಾಡಿ ಹರಸಿದ.

ಭಾಗವತ ಒಂಭತ್ತನೆಯ ಸ್ಕಂಧದ ಪ್ರಾರಂಭದಲ್ಲಿ ಸುದ್ಯುಮ್ನ ಎನ್ನುವ ವೈವಸ್ವತ ರಾಜನ ಪುತ್ರ, ಪುತ್ರಿಯಾಗಿ ಇಳೆ ಎಂಬ ಹೆಸರಿನಿಂದ ಜನಿಸಿದ್ದು, ಅನಂತರ ವೈವಸ್ವತ ಮನುವಿನ ಕಳಕಳಿಯ ಪ್ರಾರ್ಥನೆಯನ್ನು ಮನ್ನಿಸಿ ವಸಿಷ್ಠ ಮಹರ್ಷಿಗಳು ಅವನನ್ನು ಸುದ್ಯುಮ್ನ ಎನ್ನುವ ಗಂಡು ಮಗುವಾಗಿಸಿದ್ದು, ಮುಂದೆ ಬೆಳೆದು ಯುವಕನಾದ ಮೇಲೆ, ಸುದ್ಯುಮ್ನ ಶಿವಪಾರ್ವತಿ ಶಪಿತ ಅರಣ್ಯ ಪ್ರವೇಶಿಸಿ, ಅತ್ಯಂತ ಸುಂದರ ಸ್ತ್ರೀಯಾಗಿ ರೂಪಾಂತರಗೊಂಡದ್ದು – ಮೊದಲಾದ ಕಥಾಭಾಗಗಳ ಶ್ರವಣದ ನೆನಪಿರಬಹುದು.

ಈ ಸುಂದರ ಹೆಣ್ಣನ್ನು ಚಂದ್ರಪುತ್ರ ಬುಧ ಮೋಹಿಸಿದ, ಪುರೂರವನೆಂಬ ಪುತ್ರನನ್ನು ಪಡೆದ ಎಂದು ಹೇಳಿದ್ದೂ ನೆನಪಿರಬಹುದು. ಈ ಹದಿನಾಲ್ಕನೆಯ ಅಧ್ಯಾಯದಲ್ಲಿ ಮತ್ತು ಶ್ರೀಮದ್ಭಾಗವತ ಪುರಾಣದಲ್ಲಿ ಪುರೂರವನ ಹೆಸರು ಬಹಳ ಮುಖ್ಯವಾದದ್ದು. ಅವನ ಮತ್ತು ಗಂಧರ್ವ ಕನ್ಯ ಊರ್ವಶಿಯ ಪ್ರಣಯ ಪ್ರಸಂಗ ಪ್ರಸಿದ್ಧವಾದದ್ದು! ಇನ್ನು ಮುಂದೆ ನಾನು ಈ ಪುರೂರವನ ಕಥೆಯನ್ನು ಹೇಳಿದ್ದೇನೆ!

ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ

ಅಚ್ಯುತನಂಘ್ರಿಗಳನ್ನು ನೆನೆ ಮನವೇ

ನೀ ನೆನೆ ಕಂಡ್ಯಾ ಮನವೆ ||ಪ||

ಅನ್ಯ ಸ್ತ್ರೀಯಂ ನೋಡಬ್ಯಾಡಾ ಹಿಂದೆ

ಮಣ್ಣು ಕೂಡಿರುವವರೆಗೂ ಕೇಳೋ ಮೂಢಾ

-ವಿಜಯವಿಠಲ ದಾಸರು

ಬುಧ ಪುತ್ರನಾದ ಪುರೂರವ ಅತ್ಯಂತ ಸುಂದರ, ಬಲಶಾಲಿ, ಸಂಪನ್ನ ಯುವಕನಾಗಿ ಬೆಳೆದು ಚಂದ್ರವಂಶದ ಸಿಂಹಾಸನವನ್ನೇರಿದ. ಇವನ ವ್ಯಕ್ತಿತ್ವ, ರಾಜ್ಯಭಾರ, ಗುಣಾತಿಶಯಗಳು ಎಲ್ಲ ಲೋಕಗಳ ಜನಮಾತಾದವು. ಎಲ್ಲರೂ ಇವನ ಬಗ್ಗೆಯೇ ಮೆಚ್ಚುಗೆಯಿಂದ ಮಾತನಾಡಿಕೊಳ್ಳುವಷ್ಟು ಇವನ ಕೀರ್ತಿ ಹರಡಿತು. ಅಷ್ಟೇಕೆ ಒಮ್ಮೆ ದೇವಮುನಿಗಳಾದ ನಾರದರೇ ಇಂದ್ರನ ಆಸ್ಥಾನದಲ್ಲಿ ಪುರೂರವನ ಬಗ್ಗೆ ಹೊಗಳಿ ಹಾಡಿದರು:

‘ಪ್ರಿಯ ಇಂದ್ರದೇವರೆ, ಎಲ್ಲ ದೇವತೆಗಳ, ಭೂಲೋಕದಲ್ಲಿ ಚಂದ್ರವಂಶದ ದೊರೆಯಾಗಿ ಆಳುತ್ತಿರುವ ಪುರೂರವನ ಬಗ್ಗೆ ಇಲ್ಲಿ ನಿಮ್ಮೆಲ್ಲರ ಮುಂದೆ ನಾನು ಪ್ರಸ್ತಾಪಿಸಲೇಬೇಕು ಎನ್ನುವಷ್ಟು ಆತುರವಾಗಿದೆ ನನಗೆ. ಈ ಪುರುಷೋತ್ತಮನ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು. ಅವನ ಪುರುಷ ಸೌಂದರ್ಯ ಎಂತಹವರನ್ನೂ ಆಕರ್ಷಿಸುವಂತಹುದು. ಗುಣಸಂಪನ್ನತೆ ಎನ್ನುವುದು ಅವನ ವ್ಯಕ್ತಿತ್ವದಲ್ಲಿ ಅಂತರ್ಗತವಾಗಿ ಹೋಗಿದೆ.

ಅವನ ಔದಾರ್ಯ, ಸದ್ವರ್ತನೆ, ಶ್ರೀಮಂತಿಕೆ ಮತ್ತು ವ್ಯಾಪಕ ಅಧಿಕಾರ ಬಲವನ್ನು ಎಷ್ಟು ಬಣ್ಣಿಸಿದರೂ ಕಡಮೆಯೇ ಆಗುತ್ತದೆ. ಹೀಗೊಬ್ಬ ಪುರುಷೋತ್ತಮನನ್ನು ನಾನು ಇತ್ತೀಚಿನ ಕಾಲದಲ್ಲಿ ಕಂಡಿಲ್ಲ. ಸದ್ಯದಲ್ಲಿ ಯಾರೂ ಕಣ್ಣಿಗೆ ಬೀಳುತ್ತಿಲ್ಲ ಈಚೆಗೆ ನನ್ನ ಭೂಲೋಕ ಪ್ರದಕ್ಷಿಣೆಯಲ್ಲಿ ಇವನನ್ನು ನೋಡಿ ಮಾತನಾಡಿಸಿ ಅವನ ಆತಿಥ್ಯವನ್ನು ಸ್ವೀಕರಿಸಿದ ಸಂತೋಷ ನನ್ನದು. ಅವನನ್ನು ನೋಡಿ ಹಿಂತಿರುಗಿದ ಕೂಡಲೇ ಮನಸ್ಸು ನಿಲ್ಲದೆ ನಿಮಗೆಲ್ಲ ಅವನ ವಿಷಯ ತಿಳಿಸುತ್ತಿದ್ದೇನೆ. ಅವನಲ್ಲಿರುವ ದೈವಿಕ ಗುಣಗಳು ದೇವತೆಗಳಿಗೂ ಮಾದರಿಯಾಗುವಂತಹುದು!’

ಇಂದ್ರನ ಆಸ್ಥಾನದಲ್ಲಿ ಇಂದ್ರನನ್ನೂ ಸೇರಿಸಿ, ಅಲ್ಲಿ ನೆರೆದಿದ್ದ ದೇವತೆಗಳು, ಗಂಧರ್ವರು, ಕಿಂಪುರುಷರು ಮೊದಲಾಗಿ ಉನ್ನತ ಪುರುಷರಿಗೆ ನಾರದರ ಈ ಮಾತುಗಳಿಂದ ಅದೆಷ್ಟು ಸಂತೋಷ, ಕುತೂಹಲಗಳಾದವೊ ಗೊತ್ತಿಲ್ಲ. ಆದರೆ, ಒಬ್ಬ ವ್ಯಕ್ತಿಗೆ ಮಾತ್ರ, ತತ್‌ಕ್ಷಣ ಪುರೂರವನನ್ನು ನೋಡಬೇಕು, ಅವನ ಪುರುಷೋತ್ತಮತನವನ್ನು ಆಕ್ರಮಿಸಿಕೊಳ್ಳಬೇಕು ಎನ್ನುವ ಉತ್ಕಟ ಆಸೆ ಅಂತೂ ಖಂಡಿತ ಆಯಿತು : ಆ ಆ ವ್ಯಕ್ತಿ, ಊರ್ವಶಿ; ದೇವಲೋಕದ ಅಪ್ಸರೆ.

ಊರ್ವಶಿಗೆ ತಡೆಯಲಾಗಲಿಲ್ಲ. ಮಾನಸಿಕವಾಗಿ ಪುರೂರವನ ಬಗ್ಗೆ ಆಕರ್ಷಿತಳಾದಳು, ಅನುರಕ್ತಳಾದಳು.

ಮದನನ ಬಾಣ ಅವಳ ಹೃದಯವನ್ನು ಮೃದುವಾಗಿ ತಾಗಿ ಅವಳು ಪ್ರಣಯದ ಸ್ಪಂದನಗಳಿಂದ ಮೃದುವಾಗಿ ತಲ್ಲಣಿಸುವಂತಾಗಿತ್ತು!

ಊರ್ವಶಿ ಒಂದು ಕ್ಷಣವೂ ತಡಮಾಡಲಿಲ್ಲ!

ಯಾವ ಭಗೀರಥ ಪ್ರಯತ್ನವೂ ಇಲ್ಲದೆ ಊರ್ವಶಿ ಧರೆಗಿಳಿದಳು!

ಪುರುಷ ಶ್ರೇಷ್ಠ ಮನ್ಮಥರೂಪಿ ಪುರೂರವನ ಮುಂದೆ ಬಂದು ನಿಂತಳು. ಅಷ್ಟು ಹತ್ತಿರದಲ್ಲಿ ನಿಂತು ಅವನನ್ನು ನೋಡಿದಾಗ, ಅವನ ಗಂಡುತನದ ನೆರಳು ಅವಳನ್ನು ಸೋಕಿದಾಗ, ಅವಳ ಸಂಯಮದ ಸಾಗರ ಕಟ್ಟೆಯೊಡೆದು ರಭಸದಿಂದ ಮುಂದೆ ಪ್ರವಹಿಸಿತು.

ಊರ್ವಶಿಯನ್ನು ನೋಡಿದಾಗ ಪುರೂರವನಿಗೂ ಮೈಮನಸ್ಸು ರೋಮಾಂಚನಗೊಂಡಿತ್ತು. ಅವಳನ್ನು ನೋಡುತ್ತ ಅವನ ಕಣ್ಣುಗಳು ಆನಂದಾಶ್ಚರ್ಯಗಳಿಂದ ಮಿನುಗಿದವು. ಇದು ಭೂಲೋಕದ ಸೌಂದರ್ಯವಲ್ಲ ಸುರಲೋಕದ ಮಾದಕತೆ ಎಂದನಿಸಿತ್ತು ಅವನಿಗೆ

ಕೂಡಲೇ ಅವನು ಮೃದುವಾಗಿ ವಿಚಾರಿಸಿದ-

‘ಹೇ, ಅಪ್ರತಿಮ ಸುರಸುಂದರಿ, ಸ್ವರ್ಗದ ಕನ್ಯೆ, ನಿನಗೆ ಸುಸ್ವಾಗತ, ನನ್ನ ಹತ್ತಿರ ಉತ್ಸಾಹ ಉಲ್ಲಾಸಗಳಿಂದ ಬಂದು ನಿಂತಿದ್ದೀಯೆ. ನಿನ್ನನ್ನು ಕೂಡಲೇ ನನ್ನವಳಾಗಿಸಿಕೊಳ್ಳಬೇಕು, ಜೀವನ ಪರ್ಯಂತ ನಿನ್ನೊಂದಿಗೆ ಸುಖಸಂತೋಷಗಳನ್ನು ಅನುಭವಿಸಬೇಕು ಎನ್ನಿಸುತ್ತಿದೆ. ಒಂದು ಕ್ಷಣವನ್ನು ವ್ಯರ್ಥಮಾಡಲೂ ಮನಸ್ಸಾಗುತ್ತಿಲ್ಲ. ನಾವಿಬ್ಬರೂ ದಾಂಪತ್ಯ ಸಂಬಂಧದಲ್ಲಿ ಒಂದಾಗಿ ಸಂತಸದಿಂದ ಬಾಳ್ವೆ ನಡೆಸಬಹುದೇ?’

ಊರ್ವಶಿಗೂ ಮೈನವಿರೆದ್ದಿತ್ತು. ಅವನನ್ನು ಆಲಂಗಿಸಿ ಅವನ ಸ್ಪರ್ಶ ಸುಖವನ್ನು ಅನುಭವಿಸಬೇಕು ಎನ್ನುವ ಕಾತುರ ಅವಳನ್ನು ಆಕ್ರಮಿಸಿಕೊಂಡಿತ್ತು. ಅವಳ ಹೃದಯ ತಲ್ಲಣಿಸಿ, ಶರೀರ ಮೃದುವಾಗಿ ಕಂಪಿಸಿತು.

ಊರ್ವಶಿ ಹೇಳಿದಳು –

‘ಭೂಲೋಕ ಸುಂದರಾಂಗ ದೊರೆಯೇ, ಪುರುಷರಲ್ಲಿ ಪುರುಷೋತ್ತಮನೇ, ನಿನ್ನಂತಹವನನ್ನು ನೋಡಿದ ಯಾವ ಸ್ತ್ರೀತಾನೆ ನಿನ್ನ ದೃಷ್ಟಿಯಿಂದ ಆಕರ್ಷಣೆಗೊಳ್ಳದಿರುತ್ತಾಳೆ? ನಿನ್ನ ಸೌಂದರ್ಯ, ಸೌಮ್ಯ ನುಡಿಗಳು ಯಾರನ್ನು ತಾನೇ ಮೋಹದಲ್ಲಿ ಬೀಳಿಸದಿರುತ್ತದೆ? ನಿನ್ನ ವಕ್ಷಸ್ಥಳದಲ್ಲಿ ಆಶ್ರಯ ಪಡೆಯಬೇಕೆಂದು ಯಾವ ಸ್ತ್ರಿಗೆ ಅನ್ನಿಸುವುದಿಲ್ಲ? ನಿನ್ನೊಂದಿಗೆ ಕಾಮಸಂಬಂಧವನ್ನೂ, ದಾಂಪತ್ಯ ಜೀವನವನ್ನೂ ಯಾವ ಲೋಕದ ಸ್ತ್ರೀಯೂ ನಿರಾಕರಿಸಲಾರಳು!’

ಪುರೂರವ ಅವಳನ್ನೆ ನೆಟ್ಟ ದೃಷ್ಟಿಯಲ್ಲಿ ನೋಡಿದ.

ಊರ್ವಶಿ ಮತ್ತೆ ಹೇಳಿದಳು –

‘ಪ್ರಿಯ ದೊರೆ ಪುರೂರವ, ನಾನು ಖಂಡಿತವಾಗಿಯೂ ನಿನ್ನವಳಾಗಲೆಂದೇ ಬಂದಿದ್ದೇನೆ. ನನ್ನೊಂದಿಗೆ ನನ್ನ ಈ ಎರಡು ಕುರಿಮರಿಗಳಿಗೂ ಆಶ್ರಯ ನೀಡು. ನಿನ್ನೊಂದಿಗೆ ನಿರಂತರವಾಗಿ ಸುರತ ಸುಖ ಅನುಭವಿಸುತ್ತೇನೆ. ನೀನು ಶ್ರೇಷ್ಠನೇ ಆಗಿರುವುದರಿಂದ ಖಂಡಿತ ನಿನ್ನನ್ನು ಪತಿಯಾಗಿ ಸ್ವೀಕರಿಸುತ್ತೇನೆ!”

“ನನ್ನದು ಎರಡು ಷರತ್ತುಗಳನ್ನು ನೀನು ಪೂರೈಸುವಿಯಾದರೆ ನಾನು ಎಂದೆಂದಿಗೂ ನಿನ್ನವಳು. ತುಪ್ಪದಿಂದ ಮಾಡಿದ ಖಾದ್ಯವಸ್ತುಗಳು ಮಾತ್ರ ನನ್ನ ಆಹಾರ ಮತ್ತು ನಿನ್ನೊಂದಿಗೆ ದೈಹಿಕ ಸಂಪರ್ಕದಲ್ಲಿದ್ದಾಗ ಮಾತ್ರ ನಿನ್ನನ್ನು ನಗ್ನವಾಗಿ ನೋಡುತ್ತೇನೆ. ಬೇರೆ ಯಾವ ಸಂದರ್ಭದಲ್ಲೂ ನೀನು ನನ್ನ ಮುಂದೆ ನಗ್ನನಾಗಬಾರದು!’

ಆಗಲೇ ಊರ್ವಶಿಯ ರತಿ ಸೌಂದರ್ಯದ ಮುಂದೆ ಕರಗಿಹೋಗಿದ್ದ ತನ್ನ ಕಾಮನೆಗಳ ಪೂರೈಕೆಗೆ ಚಡಪಡಿಸುತ್ತಿದ್ದ ಪುರೂರವ ಕೂಡಲೇ ಹೇಳಿದ : ‘ಸುರಸುಂದರಾಂಗಿ, ನಿನ್ನ ಸೌಂದರ್ಯ, ಹಾವಭಾವಗಳು, ಆಕರ್ಷಣೆಯ ಮುಂದೆ ಯಾವ ನಿಯಮಗಳೂ ದೊಡ್ಡದಲ್ಲ, ಅದೂ ಅಲ್ಲದೆ ಇವೆರಡೂ ಅಂತಹ ಕಠಿಣ ನಿಯಮಗಳೇನೂ ಅಲ್ಲ. ಪಾಲಿಸಲು ಸರಳವನ್ನುವಂತಹುದು. ನಿನ್ನೆಲ್ಲ ಮಾತಿಗೆ ನನ್ನೊಪ್ಪಿಗೆ ಬಾ ನನ್ನವಳಾಗು, ನನ್ನೊಳಗೆ ಬೆರೆತುಹೋಗು!’

ಊರ್ವಶಿ ಅವನವಳಾದಳು. ಭೂಲೋಕದ ಈ ಮಾನವನೊ೦ದಿಗೆ ದೇವತಾಸ್ತ್ರೀಯಾದ ಅವಳು ಸ್ವರ್ಗಸುಖವನ್ನು ಅನುಭವಿಸಿದಳು, ಮುಕ್ತ ಸುಖೀ ಜೀವನ ಅವರದಾಯಿತು. ದೇವತೆಗಳು ವಿಹರಿಸುವಂತಹ ಚೈತ್ರರಥ ಮತ್ತು ನಂದನಕಾನನಗಳಂತಹ ಸ್ವರ್ಗೀಯ ಸ್ಥಳಗಳು ಅವರಿಬ್ಬರ ವಿಹಾರತಾಣಗಳಾದವು.

ರತಿಮನ್ಮಥರು ಭೂಲೋಕದಲ್ಲಿನಲಿದಾಡುವಂತೆ ಕಂಡಿತು. ಊರ್ವಶಿಯ ಶರೀರವು ಕಮಲಪುಷ್ಪದ ಕೇಸರದಂತೆ ಸುಗಂಧಭರಿತವಾಗಿತ್ತು. ಅವಳ ಸುಗಂಧಭರಿತ ಸುಂದರವದನ ಮತ್ತು ಸೌರಭದಿಂದ ಉಲ್ಲಸಿತನಾದ ಪುರೂರವ ಅವಳೊಂದಿಗೆ ಆನಂದಾಶಯದ ಮಧುರ ಕ್ಷಣಗಳನ್ನು ಅನುಭವಿಸಿದನು.

ಆದರೆ, ಒಬ್ಬರ ಲಾಭ, ಇನ್ನೊಬ್ಬರ ನಷ್ಟ ಎನ್ನುವಂತೆ, ಸ್ವರ್ಗದಲ್ಲಿ ಇಂದ್ರನಿಗೆ ಊರ್ವಶಿಯ ಉಪಸ್ಥಿತಿಯಿಲ್ಲದೆ ಏನನ್ನೋ ಕಳೆದುಕೊಂಡಂತಾಗಿತ್ತು. ಊರ್ವಶಿಯಿಲ್ಲದ ಇಂದ್ರ ಸಭೆಗೆ ವೈಭವವೇ ಇಲ್ಲದಂತಾಗಿದೆ. ಹೇಗಾದರೂ ಮಾಡಿ ಕೂಡಲೇ ಅವಳನ್ನು ಕರೆತನ್ನಿ’ – ಎಂದು ಗಂಧರ್ವರಿಗೆ ಆಜ್ಞಾಪಿಸಿದ.

ಗಂಧರ್ವರಿಗೂ ಊರ್ವಶಿಯಿಲ್ಲದ ಸ್ವರ್ಗಲೋಕ ನೀರಸವೆನಿಸಿತ್ತು. ಕೂಡಲೇ ಭೂಲೋಕಕ್ಕೆ ಬಂದರು. ಊರ್ವಶಿಯ ಎರಡು ಕುರಿಮರಿಗಳನ್ನು ಕದ್ದುಕೊಂಡು ಹೋಗಿಬಿಟ್ಟರು – ಇವೆರಡು ಜೀವಗಳ ಮೇಲೆ ಊರ್ವಶಿಗೆ ಎಷ್ಟು ಪ್ರೀತಿ, ಅವಿಲ್ಲದೆ ಅವಳಿಗೆ ಬಾಳೇ ಇಲ್ಲ ಎನ್ನುವುದು ಇವರಿಗೆ ಗೊತ್ತಿತ್ತು.

ತನ್ನ ಮಕ್ಕಳು ಎಂಬಂತಿದ್ದ ಆ ಕುರಿಮರಿಗಳ ಆರ್ತನಾದ ಕೇಳಿ ಊರ್ವಶಿ ಬೆಚ್ಚಿದಳು, ಸಂಕಟಗೊಂಡಳು. “ತನ್ನೆರಡು ಕುರಿಮರಿಗಳನ್ನು ಕಾಪಾಡದ ಈ ಮಹಾಪುರುಷ ಅದೆಂತಹ ವೀರ! ಬೇಕಾದಾಗ ಧೈರ್ಯ ತೋರದ ಹೇಡಿಯಂತೆ ಕಾಣುತ್ತಾನೆ, ಇಂತಹವನಲ್ಲಿ ನನಗೆಲ್ಲಿದೆ ರಕ್ಷಣೆ? ಎಂದುಕೊಂಡು ಪುರೂರವನನ್ನು ಚುಚ್ಚು ಮಾತುಗಳಿಂದ ಚುಚ್ಚಿದಳು.

ಪುರೂರವ ಒಳ್ಳೆಯ ನಿದ್ರೆಯಲ್ಲಿದ್ದ. ಊರ್ವಶಿಯ ಎತ್ತರಿಸಿದ ಚೂಪುದನಿ ಅವನನ್ನು ಭರ್ಜಿಯಂತೆ ಚುಚ್ಚಿದವು. ಎಲ್ಲ ಲೋಕದಲ್ಲೂ ಅಪ್ರತಿಮ ಧೀರ ಎಂದು ಕೀರ್ತಿಶಾಲಿಯಾಗಿರುವ ತನ್ನನ್ನು ಹೀಗೆ ಹೇಡಿ, ಷಂಡ ಎಂದೆಲ್ಲ ಚುಚ್ಚುತ್ತಾಳಲ್ಲ ಎನಿಸಿ, ತಾನಿರುವ ಸ್ಥಿತಿಯನ್ನೂ ಗಮನಿಸದೆ ಹಾಸುಗೆಯಿಂದ ನಗ್ನನಾಗಿಯೇ ಎದ್ದು ಆ ಗಂಧರ್ವರನ್ನು ಅಟ್ಟಿಸಿಕೊಂಡು ಹೋದ. ಆ ರಾತ್ರಿಯ ಅಂಧಕಾರದಲ್ಲಿ ತನ್ನ ಗಂಡ ಎದ್ದು ಕುರಿಗಳಿಗಾಗಿ ಓಡಿಹೋದದ್ದು ಕಂಡು ಅವಳಿಗೆ ಒಂದಿಷ್ಟು ಸಮಾಧಾನವಾಯಿತು.

ಆದರೆ ಆಗಿದ್ದೇನು?

ಗಂಧರ್ವರು ಅರಮನೆಯಲ್ಲೇ ಕುರಿಮರಿಗಳೊಂದಿಗೆ ಇದ್ದರು. ಪುರೂರವ ನಗ್ನನಾಗಿ ಎದ್ದು ಬರುತ್ತಿರುವುದನ್ನು ನೋಡಿ, ಕುರಿಗಳನ್ನು ಅಲ್ಲಿಯೇ ಬಿಟ್ಟು ಇಡೀ ಅರಮನೆಯನ್ನು ತಮ್ಮ ಮನೋಬಲದಿಂದ ದೇದೀಪ್ಯಮಾನಗೊಳಿಸಿದರು. ಎಲ್ಲೆಲ್ಲೂ ಬೆಳಕು ಹರಡಿಕೊಂಡಿತು. ಕುರಿಗಳು ಸಂತಸದ ಕೂಗು ಕೇಳಿ ಓಡಿಬ೦ದ ಊರ್ವಶಿಗೆ ಕಂಡದ್ದೇನು: ನಗ್ನವಾಗಿ ಮುಂದೆ ನಿಂತ ಪುರೂರವ ಕೂಡಲೇ ಅವಳು ತನ್ನ ಕುರಿಗಳೊಂದಿಗೆ ಅಲ್ಲಿಂದ ಮಾಯವಾದಳು.

ಪುರೂರವ ಊರ್ವಶಿಯನ್ನು ಕಾಣದೆ ದಿಕ್ಕೆಟ್ಟ ಅವಳ ಮೋಹದಲ್ಲಿ ಅವನು ಎಷ್ಟು ಮುಳುಗಿಹೋಗಿದ್ದನೆಂದರೆ ಅವಳಿಲ್ಲದೆ ಅವನಿಗೆ ಎಲ್ಲವೂ ಶೂನ್ಯವಾಯಿತು. ಹುಚ್ಚನಂತೆ ಅಲೆಯತೊಡಗಿದ. ಅವಳಿಗಾಗಿ ಎಲ್ಲೆಲ್ಲೂ ಹುಡುಕಾಡಿದ. ಅವಳು ಕಾಣಿಸಲೇ ಇಲ್ಲ!

‘ಊರ್ವಶೀ, ಊರ್ವಶೀ, ಪ್ರಿಯತಮೆ ಊರ್ವಶಿ, ಎಲ್ಲಿಗೆ ಹೋದೆ? ನನ್ನನ್ನು ಮತ್ತೆ ನೋಡಲು ಬರುವುದಿಲ್ಲವೇ?’ – ಎಂದು ಕಿರಿಚಾಡುತ್ತ, ಎಲ್ಲೆಲ್ಲೋ ಅಲೆದಾಡುತ್ತಿದ್ದ. ಅವನ ರಾಜ್ಯವೇ ಅರಾಜಕವಾಗುವಂತಾಯಿತು.

ಅವನ ಕೂಗಾಟದ ಫಲವೊ ಏನೊ ಎಂಬಂತೆ ಇದ್ದಕ್ಕಿದ್ದ ಹಾಗೆಯೇ ಒಂದು ಸಲ ಕುರುಕ್ಷೇತ್ರದ ಸರಸ್ವತೀ ನದಿ ದಂಡೆಯ ಮೇಲೆ ಊರ್ವಶಿ ಕಾಣಿಸಿದಳು – ಯಾರೊಂದಿಗೊ ಮಾತನಾಡುತ್ತಿದ್ದಳು. ಹುಚ್ಚನಂತಾಗಿದ್ದ ಪುರೂರವ ಓಡಿಹೋಗಿ ಅವಳ ಮುಂದೆ ನಿಂತುಕೊಂಡ.

ಒಡಕುದನಿಯಲ್ಲಿ ಪುರೂರವ ಕೂಗಿದ-

‘ಏಯ್ ನಿರ್ದಯಿ ಹೆಂಗಸೇ, ನನ್ನ ಹೆಂಡತಿಯೇ, ನಿಲ್ಲು ನಿಲ್ಲು ಎಲ್ಲಿಗೂ ಮತ್ತೆ ಹೊರಟು ಹೋಗಿಬಿಡಬೇಡ. ನೀನಿಲ್ಲದೆ ನನಗೆ ಬದುಕಿಲ್ಲ, ರಾಜ್ಯಭಾರದ ಆಕರ್ಷಣೆಯಿಲ್ಲ. ನೀನು ನನ್ನೊಂದಿಗೇ ಇರಬೇಕು. ನನ್ನೊಂದಿಗೆ ಮಾತನಾಡಲು ಬಾ, ಹೋಗಬೇಡ! ನಾನೀಗ ಅಷ್ಟು ಆಕರ್ಷಣೀಯವಾಗಿಲ್ಲ. ನಿನ್ನ ಆಲಿಂಗನಕ್ಕೆ ಸೂಕ್ತವಾಗಿಲ್ಲ! ಆದರೂ, ನೀನಿದ್ದರೆ ಎಲ್ಲವೂ ಮೊದಲಿನಂತಾಗುತ್ತದೆ.!”

ಊವರ್ಶಿ ಮಾರ್ದವತೆಯಿಂದ ಹೇಳಿದಳು-

‘ನನ್ನ ಪ್ರಿಯ ದೊರೆ, ನಿನ್ನನ್ನು ನಾನು ಪ್ರೀತಿಸುತ್ತಿಲ್ಲ ಎಂದುಕೊಳ್ಳಬೇಡ. ನಿನ್ನಿಂದ ನೀನೇ ನಾಶವಾಗುವಂತೆ ಮಾಡಿಕೊಳ್ಳಬೇಡ. ತೋಳದಂತೆ ಇಂದ್ರಿಯಗಳು ನಿನ್ನನ್ನು ಆವರಿಸಲು ಆಸ್ಪದಕೊಡಬೇಡ, ಇಂದ್ರಿಯಗಳಿಂದ ನೀನು ನಿಯಂತ್ರಿತವಾಗಬೇಡ. ಆದರೆ ಒಂದು ವಿಷಯವನ್ನು ನೀನು ಖಂಡಿತ ತಿಳಿದುಕೊಳ್ಳಬೇಕು : ಸ್ತ್ರೀ ಹೃದಯವು ತೋಳದ ಹೃದಯವಿದ್ದಂತೆ, ಸ್ತ್ರೀಯೊಂದಿಗೆ ಸಖ್ಯ ಬೆಳೆಸವುದರಿಂದ ಏನು ಉಪಯೋಗವಿಲ್ಲ!’

ನಮಗೆ ಅರ್ಥವಾಗದ ಒಂದು ಅಂತರಂಗದ ಮಾತನ್ನು ಊರ್ವಶಿ ಇಲ್ಲಿ ಹೇಳಿದ್ದಾಳೆ : ಸ್ವತಃ ಸ್ತ್ರೀಯೇ ಆಗಿದ್ದರೂ, ಸ್ತ್ರೀ ಹೃದಯವು ಠಕ್ಕ ನರಿಯ ಹಾಗೆ ಎಂದು ಹೇಳಿದ್ದಾಳೆ. ಪುರುಷನು ಇಂದ್ರಿಯನಿಗ್ರಹ ಮಾಡದಿದ್ದಲ್ಲಿ ಇಂತಹ ಠಕ್ಕ ನರಿಯಂತಹ ಸ್ತ್ರೀಯರಿಗೆ ಬಲಿಪಶುವಾಗುತ್ತಾನೆ ಎನ್ನುವುದನ್ನವಳು ಪರೋಕ್ಷವಾಗಿ ಬುದ್ಧಿವಾದದ ಮಾತೂ ಆಗಿರುತ್ತದೆ!

ಹೀಗೆಲ್ಲ ಕಟುವಾಗಿ ಚಾಟಿ ಏಟು ಕೊಟ್ಟಂತೆ ಪುರೂರವನಿಗೆ ಹೇಳಿದರೂ ಊರ್ವಶಿ ಅವನ ದುಃಖವನ್ನು ನೋಡಿ ಸಹಿಸಲಾರದೆ ಒಂದು ಮಾತು ಕೊಡುತ್ತಾಳೆ :

‘ನನ್ನ ತುಂಬು ಪ್ರೀತಿಯ ದೊರೆಯೆ, ನಿನ್ನನ್ನು ಕಂಡರೆ ನನಗೂ ಮೋಹ ಇದೆ. ನಿನ್ನನ್ನು ಕಳೆದುಕೊಳ್ಳುವುದಕ್ಕೆ ನನಗೂ ಇಷ್ಟವಿಲ್ಲ. ಆದರೆ ನಾನು ದೇವಲೋಕದ ಕೆಲ ನೀತಿ ನಿಯಮಗಳ ಪ್ರಕಾರ ಇನ್ನು ಮುಂದೆ ನಿನ್ನೊಂದಿಗೆ ಭೂಲೋಕದಲ್ಲಿ ನಿರಂತರವಾಗಿ ತಂಗುವಂತಿಲ್ಲ. ಆದರೂ, ನಿನಗೆ ಸುಖ ತಪ್ಪಬಾರದು, ನನ್ನ ಸಂಸರ್ಗ ಕಡಿದುಹೋಗಬಾರದು ಎನ್ನುವುದಕ್ಕಾಗಿ ಪ್ರತಿವರ್ಷಾಂತ್ಯದಲ್ಲಿ ನಿನ್ನ ಪತ್ನಿಯಾಗಿ ನಿನ್ನೊಡನೆ ಇರುತ್ತೇನೆ. ನಿನಗೆ ದಾಂಪತ್ಯ ಸುಖ ನೀಡುತ್ತೇನೆ. ಈ ನಿಮಿತ್ತ ನೀನು ಒಬ್ಬರಾದ ಅನಂತರ ಒಬ್ಬರಂತೆ ಪುತ್ರ ಸಂತಾನವನ್ನು ಪಡೆಯುತ್ತೀಯೆ!

ಹೀಗೆ ಪುರೂರವನ ಮತ್ತು ಊರ್ವಶಿಯ ಪ್ರಣಯ ಸಂಬಂಧ ಮುಂದುವರಿಯಿತು. ವರ್ಷಾಂತ್ಯದಲ್ಲಿ ಅವಳು ಅವನಿಗೆ ದೊರಕುತ್ತಿದ್ದಳು. ಅವಳು ದೂರವಾದಾಗ ವಿರಹವೇದನೆ ಅವನನ್ನು ಆಕ್ರಮಿಸಿಕೊಳ್ಳುತ್ತಿತ್ತು. ಇದನ್ನು ನೋಡಿ, “ನನ್ನ ದೊರೆ, ಗಂಧರ್ವರನ್ನು ಪ್ರಾರ್ಥಿಸಿ ನನ್ನನ್ನು ಕಳುಹಿಸಿಕೊಡಲು ಹೇಳು!” ಎಂದಳು ಊರ್ವಶಿ.

ಪುರೂರವ ಹೀಗೆ ಬಯಸಿ ಗಂಧರ್ವರ ಪ್ರಾರ್ಥನೆ ಮಾಡಿದನು. ಅವರು ಊರ್ವಶಿಯನ್ನು ಕಳುಹಿಸಿಕೊಡಲು ಸಾಧ್ಯವಾಗದ್ದರಿಂದ, ಅವಳನ್ನೇ ಹೋಲುವ ಅಗ್ನಿ ಸ್ಥಾಳಿ ಎನ್ನುವಳೊಬ್ಬಳನ್ನು ಅವನಲ್ಲಿಗೆ ಕಳುಹಿಸಿದರು. ಆದರೆ ಇವಳು ಊರ್ವಶಿ ಅಲ್ಲ ಎನ್ನುವುದು ಪುರೂರವನಿಗೆ ಬಹಳ ಬೇಗ ಗೊತ್ತಾಯಿತು. ಅಗ್ನಿ ಸ್ಥಾಳಿಯನ್ನು ಅರಣ್ಯದಲ್ಲಿ ಬಿಟ್ಟುಬಂದು, ಇಡೀ ರಾತ್ರಿ ಊರ್ವಶಿಗಾಗಿ ಧ್ಯಾನಮಾಡಿದನು.

ಪುರೂರವನ ಧ್ಯಾನ ಸಮಯ ಒಂದು ಪರಿವರ್ತನೆಯ ಕಾಲ. ಆಗಲೇ ತ್ರೇತಾಯುಗಾರಂಭವಾಗಿತ್ತು. ಅಂತೆಯೇ, ಕಾಮ್ಯಕರ್ಮ ಫಲಾಪೇಕ್ಷೆಯ ಯಜ್ಞಗಳ ಆಚರಣೆಯೂ ಸೇರಿದಂತೆ ಮೂರು ವೇದಗಳ ತತ್ವಗಳು ಪುರೂರವನ ಹೃದಯದಲ್ಲಿ ಆವಿರ್ಭವಿಸಿದವು. ಹೀಗಾದ ಕೂಡಲೇ ಅವನು ಅಗ್ನಿಸ್ಥಾಳಿಯನ್ನು ತೊರೆದು ಅರಣ್ಯ ಪ್ರದೇಶಕ್ಕೆ ಹೋದನು.

ಅಲ್ಲಿ ಶಮೀವೃಕ್ಷಗರ್ಭದಲ್ಲಿ ಅಶ್ವತ್ಥವೃಕ್ಷವೊಂದು ಬೆಳೆದಿರುವುದನ್ನು ಕಂಡನು. ಆ ಮರದಿಂದ ಕಡ್ಡಿಯೊಂದನ್ನು ಮುರಿದುಕೊಂಡು ಅದನ್ನು ಎರಡು ಅರಣಿಗಳಾಗಿ (ಯಾಗಾಗ್ನಿಯನ್ನು ಹುಟ್ಟಿಸಲು ಉಪಯೋಗಿಸುವ ಮರದ ಕೊರಡು) ಮಾಡಿ, ಕೆಳಗಿನ ಅರಣಿಯನ್ನು ಊರ್ವಶಿಯೆಂದೂ, ಮೇಲಿನ ಅರಣಿಯನ್ನು ತಾನೆಂದೂ ಭಾವಿಸಿ, ಇವೆರಡರ ಮಧ್ಯದ ಮರವನ್ನು ತಮ್ಮಿಬ್ಬರ ಪುತ್ರನೆಂದೂ ಧ್ಯಾನಿಸಿ ಮಂತ್ರೋಚ್ಛಾರಣೆ ಮಾಡಿದನು. ಆಗ ಅಲ್ಲಿ ಅಗ್ನಿ ಪ್ರಜ್ವಲಿಸಿತು.

ಐಹಿಕ ಭೋಗಗಳಲ್ಲಿ ಸಕಲ ಯಶಸ್ಸುಗಳನ್ನೂ ಸಾಧಿಸಬಹುದಾದ ಅಗ್ನಿ ಅದು. ಅದನ್ನು ಆವಾಹಿಸಿ ಪರಿಶುದ್ಧನಾಗಬಹುದು. ಪುರೂರವ ಹೀಗೆ ಸೃಷ್ಟಿಸಿದ ಅಗ್ನಿಯೇ ಅವನ ಪುತ್ರನೆಂದು ಪರಿಗಣಿಸಲಾಯಿತು. ಆ ಅಗ್ನಿಯ ಮೂಲಕವೇ, ಪುರೂರವ ಊರ್ವಶಿ ಇರುವ ಗಂಧರ್ವಲೋಕಕ್ಕೆ ಹೋಗಲು ಬಯಸಿ, ಯಜ್ಞವನ್ನು ಆಚರಿಸಿದನು.

ತ್ರೇತಾಯುಗದ ಆರಂಭದಲ್ಲಿ ದೊರೆ ಪುರೂರವ ಹೀಗೆ ಆರಂಭಿಸಿದ ಕರ್ಮಕಾಂಡ ಯಜ್ಞದ ಮೂಲಕ ತನ್ನಿಚ್ಛೆಯಂತೆಯೇ ಗಂಧರ್ವಲೋಕಕ್ಕೆ ಹೋಗುವುದು ಸಾಧ್ಯವಾಯಿತು!”

ಗೋಧೂಳಿ ಸಮಯ ಆವರಿಸಿಕೊಳ್ಳುತ್ತಿದ್ದಂತೆಯೇ ಸೂತಮುನಿಗಳ ಅಂದಿನ ಶ್ರೀಮದ್ಭಾಗವತ ಕಥಾಶ್ರವಣ ಕಾರ್ಯಕ್ರಮ ಮಂಗಳ ಕಂಡಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi