ಶ್ರೀ ಕೃಷ್ಣ ಜನ್ಮದ ಕಥೆ

ಐದು ಸಾವಿರ ವರ್ಷಗಳ ಹಿಂದೆ ಬ್ರಹ್ಮಾಂಡವು ಕತ್ತಲಿನಲ್ಲಿ ಮುಳುಗಿತ್ತು.  ದುಷ್ಟ ರಾಜರು ದುರಾಸೆ ಮತ್ತು ಕ್ರೂರತನದಿಂದ ರಾಜ್ಯವಾಳುತ್ತಿದ್ದರು. ನ್ಯಾಯ ಎನ್ನುವುದೇ ಮರೆತುಹೋಗಿತ್ತು.  ಮುಗ್ಧ ಜನರ ನೋವಿನ ಕೂಗು ನಾಡಿನಾದ್ಯಾಂತ ಮರುಧ್ವನಿಸುತ್ತಿತ್ತು.

ಭೂತಾಯಿಗೆ ಸಾಕು ಸಾಕಾಯಿತು. ಇನ್ನು ತಡೆದುಕೊಳ್ಳುವುದು ಸಾಧ್ಯವಾಗದಾಯಿತು. ರಾಕ್ಷಸೀ ರಾಜರ ಅಸಂಖ್ಯ ದೌಜರ್ನ್ಯಗಳಿಂದ ಭೂಭಾರ ಹೆಚ್ಚಾಯಿತು. ಅದನ್ನು ಇಳಿಸುವುದೆಂತು? ಭೂತಾಯಿ ಗೋವಿನ ರೂಪ ಪಡೆದುಕೊಂಡಳು. ಕಣ್ಣೀರಿಡುತ್ತಾ ಅವಳು ಸೃಷ್ಟಿಕರ್ತ‌ ಬ್ರಹ್ಮನ ಬಳಿಗೆ ಬಂದಳು. ಸಂಕಷ್ಟಗಳ ನಿವಾರಣೆಗೆ ಪರಿಹಾರ ಕೋರಿದಳು.

ಭೂ ಮಾತೆಯ ಸಂಕಷ್ಟ ಮತ್ತು ನೋವನ್ನು ಕಂಡು ಮರುಗಿದ ಬ್ರಹ್ಮನು ಕೂಡಲೇ ಎಲ್ಲ ದೇವತೆಗಳನ್ನು ಒಗ್ಗೂಡಿಸಿದನು. ಅವರೆಲ್ಲರೂ ಒಟ್ಟಾಗಿ ವಿಷ್ಣು ಶಾಶ್ವತವಾಗಿ ವಾಸಿಸುವ ಕ್ಷೀರ ಸಾಗರದ ಬಳಿಗೆ ಬಂದರು. ದೇವತೆಯರು ಸಾಗರದ ತೀರದಲ್ಲಿ ಕೈಜೋಡಿಸಿ ನಿಂತು ದೇವೋತ್ತಮ ಪರಮ ಪುರುಷ ವಿಷ್ಣುವಿಗೆ ಹೃತ್ಪೂರ್ವಕ‌ ಪ್ರಾರ್ಥನೆ ಸಲ್ಲಿಸಿದರು.

ಆದರೆ ಬ್ರಹ್ಮನು ತೀವ್ರವಾದ ಧ್ಯಾನದಲ್ಲಿ ನಿರತನಾಗುವವರೆಗೂ ಪ್ರತಿಕ್ರಿಯೆ ಬರಲಿಲ್ಲ. ಅನಂತರ ದಿವ್ಯ ವಾಣಿ ಮೊಳಗಿತು. ವಿಷ್ಣುವಿನ ಸಂದೇಶ ಸಾರಿತು,

“ಚಿಂತಿಸಬೇಡಿ. ನಾನು ಅತಿ ಶೀಘ್ರವಾಗಿ ಭೂಮಿಯಲ್ಲಿ ಅವತರಿಸುತ್ತೇನೆ. ಅದಕ್ಕೆ ಮುನ್ನ ಎಲ್ಲ ದೇವತೆಗಳೂ ಅಲ್ಲಿ ಜನ್ಮ ತಾಳಬೇಕು. ಭಕ್ತರನ್ನು ಸಂರಕ್ಷಿಸಲು ದಾನವರನ್ನು ನಾಶ ಪಡಿಸಲು ಮತ್ತು ಧರ್ಮವನ್ನು ‌ ಪುನರ್‌ ಸ್ಥಾಪಿಸಲು ನಾನು ನನ್ನ ಮೂಲ ರೂಪದಲ್ಲಿ ಅಲ್ಲಿಗೆ ಬರುವೆ.” 

ಈ ಮಾತುಗಳನ್ನು ಕೇಳಿ ಭೂಮಿದೇವಿ ಮತ್ತು ದೇವತೆಗಳು ಸಮಾಧಾನಗೊಂಡರು.

ಆಗಷ್ಟೇ ವಸುದೇವ, ದೇವಕಿಯರ ವಿವಾಹವಾಗಿತ್ತು. ಭವ್ಯವಾದ ರಥದಲ್ಲಿ ವಸುದೇವನು ತನ್ನ ಸತಿ ದೇವಕಿಯೊಂದಿಗೆ ತನ್ನ ಊರಿಗೆ ತೆರಳುತ್ತಿದ್ದನು. ದೇವಕಿಯ ಸೋದರ ಕಂಸನು ತನ್ನ ತಂಗಿಗೆ ಸಂತೋಷವನ್ನುಂಟು ಮಾಡಲು ಸ್ವಇಚ್ಛೆಯಿಂದ ರಥದ ಸಾರಥಿಯಾಗಿದ್ದನು.

ಆಗ, ದಿಢೀರನೆ ಗಗನದಿಂದ ಅಲೌಕಿಕ ಸಂದೇಶವೊಂದು ಪ್ರತಿಧ್ವನಿಸಿತು :

“ಕಂಸ! ನಿನ್ನ ಸೋದರಿ ದೇವಕಿಯ ಎಂಟನೆಯ ಮಗು ನಿನ್ನ ಮೃತ್ಯುವಿಗೆ ಕಾರಣವಾಗುತ್ತದೆ.”

ಕಂಸನು ಅತ್ಯಂತ ಕ್ರೂರಿಯಾದ ರಾಜನಾಗಿದ್ದನು. ಈ ಭವಿಷ್ಯವಾಣಿಯನ್ನು ಕೇಳಿ ಅವನು ಭಯದಿಂದ ನಡುಗಿದನು. ಕೋಪೋದ್ರಿಕ್ತನಾಗಿ ಅವನು ದೇವಕಿಯ ಕೂದಲನ್ನು ಹಿಡಿದುಕೊಂಡು ತನ್ನ ಕತ್ತಿಯಿಂದ ಅವಳನ್ನು ಕೊಲ್ಲಲು ಮುಂದಾದ.

ವಸುದೇವನು ತಾಳ್ಮೆಯಿಂದ ಮನವೊಲಿಕೆಯ ಮಾತುಗಳಿಂದ ಕಂಸನನ್ನು ಸಮಾಧಾನಪಡಿಸಿದನು. ತಮಗೆ ಹುಟ್ಟುವ ಪ್ರತಿಯೊಂದು ಮಗುವನ್ನೂ ಅವನಿಗೆ ಒಪ್ಪಿಸುವ ಭರವಸೆಯನ್ನೂ ನೀಡಿದನು. ವಸುದೇವನ ಮಾತಿನಲ್ಲಿ ವಿಶ್ವಾಸವಿಟ್ಟು ಕಂಸನು ತನ್ನ ತಂಗಿಯ ಪ್ರಾಣವನ್ನು ಉಳಿಸಿದನು.

ಇಷ್ಟಾದರೂ,  ಭಯಭೀತನಾದ ಕಂಸನು ದೇವಕಿ ಮತ್ತು ವಸುದೇವರನ್ನು ಸೆರೆಮನೆಯಲ್ಲಿಟ್ಟನು.

ಸೆರೆಮನೆಯಲ್ಲಿದ್ದ ವಸುದೇವ ಮತ್ತು ದೇವಕಿ ವರ್ಷದಿಂದ ವರ್ಷಕ್ಕೆ ಗಂಡು ಮಗುವಿಗೆ ಜನ್ಮ ನೀಡುತ್ತಾ ಹೋದರು. ಕಂಸನು ಆ ಮಕ್ಕಳನ್ನು ಕೊಲ್ಲುತ್ತಾ ಹೋದನು. ಇನ್ನು ಎಂಟನೆಯ ಮಗುವಿನ ಸರದಿ.

ದೇವಕಿ ತನ್ನ ಎಂಟನೆಯ ಮಗುವಿನ ನಿರೀಕ್ಷೆಯಲ್ಲಿದ್ದಾಗ ವಿಚಿತ್ರವಾದ ನಿಶ್ಶಬ್ದತೆ ಮತ್ತು ಪ್ರಶಾಂತತೆ ಮಥುರೆಯನ್ನು ಆವರಿಸಿಕೊಂಡಿತು. ಮಧ್ಯರಾತ್ರಿಯ ವೇಳೆಗೆ ಪ್ರಕಾಶಮಾನವಾದ ಬೆಳಕು ಸೆರೆಮನೆಯಲ್ಲಿ ಹರಡಿತು. ಶ್ರೀ ವಿಷ್ಣುವು ಚತುರ್ಭುಜನಾಗಿ ದೇವಕಿ ಮತ್ತು ವಸುದೇವರ ಮುಂದೆ ಪ್ರತ್ಯಕ್ಷನಾದನು. ಅವನ ಕರಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಕಮಲ ಪುಷ್ಪಗಳಿದ್ದವು.

ಭಗವಂತನು ನುಡಿದನು, “ಭಕ್ತರನ್ನು ರಕ್ಷಿಸಲು ಮತ್ತು ದುಷ್ಟರನ್ನು ನಾಶಪಡಿಸಲು ನಾನು ನೀಡಿದ್ದ ವಚನದಂತೆ ಬಂದಿರುವೆ. ಈಗ ನನ್ನನ್ನು ಗೋಕುಲಕ್ಕೆ ಕರೆದುಕೊಂಡು ಹೋಗಿ ಮತ್ತು ಅಲ್ಲಿ ನಂದ ಮತ್ತು ಯಶೋದೆಯ ಸಂರಕ್ಷಣೆಯಲ್ಲಿ ಬಿಡಿ.”

ಇಷ್ಟು ಹೇಳಿ ವಿಷ್ಣುವು ಸುಂದರ ಮಗುವಿನ ರೂಪದಲ್ಲಿ ಕಾಣಿಸಿಕೊಂಡನು. ಅದೇ ಕ್ಷಣದಲ್ಲಿ ಸೆರೆಮನೆಯ ಬಾಗಿಲುಗಳು ತೆರೆದುಕೊಂಡವು ಮತ್ತು ಕಾವಲುಗಾರರೆಲ್ಲ ನಿದ್ರೆಗೆ ಜಾರಿದರು.

ವಸುದೇವನು ಈ ದಿವ್ಯ ಮಗುವನ್ನು ಬುಟ್ಟಿಯಲ್ಲಿಟ್ಟು ಉಕ್ಕಿ ಹರಿಯುತ್ತಿದ್ದ ಯುಮುನಾ ನದಿಯತ್ತ ಧಾವಿಸಿದನು. ನದಿಯು ಇಬ್ಭಾಗವಾಗಿ ಸುರಕ್ಷಿತ ದಾರಿಯನ್ನು ಮಾಡಿಕೊಟ್ಟಿತು. ದಿವ್ಯ ಸರ್ಪ‌ ಶೇಷನಾಗನು ತನ್ನ ಹೆಡೆಯನ್ನು ಹರಡಿ ಮಗುವಿಗೆ ಮಳೆಯಿಂದ ರಕ್ಷಣೆ ನೀಡಿದನು.

ಇತ್ತ ಗೋಕುಲದಲ್ಲಿ ಯಶೋದೆಯು ಆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ವಸುದೇವನು ಮಕ್ಕಳನ್ನು ವಿನಿಮಯ ಮಾಡಿಕೊಂಡನು. ಯಶೋದೆಯ ಮಗುವನ್ನು ಸೆರೆಮಾನೆಗೆ ತಂದು ದೇವಕಿಯ ಪಕ್ಕ ಮಲಗಿಸಿದನು.

ಕಂಸನು ಆ ಹೆಣ್ಣು ಮಗವನ್ನು ಕೊಲ್ಲಲು  ಪ್ರಯತ್ನಿಸಿದಾಗ, ಅದು ಅವನ ಕೈಯಿಂದ ಜಾರಿ ಆಕಾಶಕ್ಕೆ  ಹಾರಿತು. ತಾನು ದುರ್ಗಾ ಎಂದು ಪ್ರಕಟಿಸಿ, ಎಚ್ಚರಿಸಿದಳು,

“ನಿನ್ನನ್ನು ಕೊಲ್ಲುವವನು ಈಗಾಗಲೇ ಬೇರೆ ಎಲ್ಲೋ ಹುಟ್ಟಿದ್ದಾನೆ. ನಿನ್ನ ತಂಗಿಯನ್ನು ಹಿಂಸಿಸಬೇಡ.”

ಅನೇಕ ಹೋರಾಟಗಳು ಅವನ ಆವಿರ್ಭಾವ‌ ಮತ್ತು ಲೀಲೆಗಳನ್ನು ಸುತ್ತುವರಿದಿದ್ದರೂ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಯಾವಾಗಲೂ ಅಲೌಕಿಕನು. ಯಾವುದೇ ಐಹಿಕವಾದವು ಅವನನ್ನು ಸ್ಪರ್ಶಿಸುವುದಿಲ್ಲ ಮತ್ತು ಅವನು ತನ್ನ ದಿವ್ಯ ಧ್ಯೇಯವನ್ನು ಪರಿಪೂರ್ಣವಾಗಿ ನಿರ್ವಹಿಸುವನು.

ದಿವ್ಯವಾಣಿಯು ಭವಿಷ್ಯ ನುಡಿದಂತೆ, ಮುಂದೆ ಕೃಷ್ಣನು  ಕಂಸನನ್ನು ಮಾತ್ರವಲ್ಲ, ಇತರ ಅಸುರರನ್ನೂ ಸಂಹರಿಸಿದನು. ಕತ್ತಲೆಯಲ್ಲಿ ಮುಳುಗಿದ್ದ ಜಗತ್ತಿಗೆ ಬೆಳಕನ್ನು ಅನುಗ್ರಹಿಸಿದನು.

ಭಗವದ್ಗೀತೆಯಲ್ಲಿ ಕೃಷ್ಣನು ಹೇಳುವಂತೆ (4.8), “ಸಜ್ಜನರನ್ನು ರಕ್ಷಿಸಲು, ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮದ‌ ತತ್ತ್ವಗಳನ್ನು ಮತ್ತೆ ಸ್ಥಾಪಿಸುವುದಕ್ಕಾಗಿ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ.”

ವಚನವಿತ್ತಂತೆ ಅವನು ಭೂಮಿಯ ಮೇಲೆ ಅವತರಿಸಿದನು. ಇಲ್ಲಿದಷ್ಟು ಕಾಲವೂ ಅವನು ಸಜ್ಜರನ್ನು ರಕ್ಷಿಸುವ ಮತ್ತು ಸದಾಚಾರವನ್ನು ಪುನರ್‌ ಸ್ಥಾಪಿಸುವ ಲೀಲೆಗಳಲ್ಲಿ ತೊಡಗಿದ್ದನು.

ಕೃಷ್ಣನು ಜನರಿಗೆ ಬದುಕುವ ಧರ್ಮದ ಮಾರ್ಗವನ್ನು‌ ತೋರಿದನು. ಯಾರನ್ನಾದರೂ ಹೋರಾಟದ ಕತ್ತಲಿನಿಂದ ಆನಂದ ಮತ್ತು ನೆಮ್ಮದಿಯ ಬೆಳಕಿನತ್ತ ಕರೆದೊಯ್ಯುವ ಮಾರ್ಗವದು.

ಕುರುಕ್ಷೇತ್ರ ಸಮರ ಭೂಮಿಯಲ್ಲಿ ಕೃಷ್ಣನು ಕಾಲಾತೀತ ಜ್ಞಾನವಾದ ಭಗವದ್ಗೀತೆಯನ್ನು ಬೋಧಿಸಿದನು. ಅರ್ಜುನ‌ ಮತ್ತು ಇತರ ಮಾನವ ಸಮುದಾಯಕ್ಕೆ ಭಯ, ಗೊಂದಲ ಮತ್ತು ಸಂಕಷ್ಟವನ್ನು ಶ್ರದ್ಧೆ, ಕರ್ತವ್ಯ‌ ಮತ್ತು ಪ್ರೀತಿಯ ಭಕ್ತಿಯ ಮೂಲಕ ಎದುರಿಸಿ ಗೆಲ್ಲಬಹುದೆನ್ನವುದನ್ನು ಸಾರಿದನು.

ಅವನ ಬೋಧನೆಯನ್ನು ಅನುಸರಿಸುವ ಮೂಲಕ ನಾವು ಧೈರ್ಯ‌, ಉದ್ದೇಶ ಮತ್ತು ನಿರ್ಲಿಪ್ತತತೆಯಿಂದ ಬದುಕಲು  ಕಲಿಯುತ್ತೇವೆ. ಅಂತಿಮವಾಗಿ ನಮ್ಮ ಬದುಕಿನ ಧ್ಯೇಯವನ್ನು ಅರಿಯುತ್ತೇವೆ. ಈ ದಿವ್ಯ ಸಂದೇಶವು ಸಾವಿರಾರು ವರ್ಷಗಳ ಹಿಂದೆ ಇದ್ದಷ್ಟೇ ಇಂದಿಗೂ ಪ್ರಸ್ತುತವಾಗಿದೆ. ಅದು ಅಸಂಖ್ಯ ಜನರಿಗೆ ಧರ್ಮದ ಮಾರ್ಗದಲ್ಲಿ ನಡೆಯುಲು‌ ಸ್ಪೂರ್ತಿ‌ ನೀಡುತ್ತಿದೆ. ಸದ್ಗುಣ, ಜವಾಬ್ದಾರಿಯ ಮತ್ತು ಭಕ್ತಿಯ ಬದುಕಿನ ಜೀವನ ಸಾಗಿಸಿ ನಿಜವಾದ ಆಧ್ಯಾತ್ಮಿಕ ಸಾರ್ಥಕತೆಗೆ ಆ ಮಾರ್ಗವು ನಮಗೆ ಪ್ರೇರಣೆ ನೀಡುತ್ತದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi