ಇಬ್ಬರು ತುಂಟ ಬಾಲಕರು

ಕೃಷ್ಣ ಮತ್ತು ಬಲರಾಮರು ಅಂಬೆಗಾಲನ್ನು ಇಡಲು ಪ್ರಾರಂಭಿಸಿದರು. ಅದನ್ನು ಕಂಡ ಅವರ ತಾಯಂದಿರಿಗೆ ಬಹಳ ಸಂತೋಷವಾಯಿತು. ಹಾಗೆ ಅವರು ಚಲಿಸುವಾಗ, ಅವರ ಸೊಂಟ ಮತ್ತು ಕಾಲಂದಿಗೆಗೆ ಕಟ್ಟಿದ್ದ ಗಂಟೆಗಳ ನಾದ ಬಹಳ ಮನಮೋಹಕವಾಗಿರುತ್ತಿತ್ತು. ಅವರಿಬ್ಬರೂ ಕೆಲವೊಮ್ಮೆ ಸಾಮಾನ್ಯ ಮಕ್ಕಳಂತೆ ಇತರರಿಗೆ ಹೆದರಿಕೊಂಡು ಕೂಡಲೇ ರಕ್ಷಣೆಗಾಗಿ ತಾಯಂದಿರ ಬಳಿಗೆ ಓಡಿ ಬರುವರು. ಕೆಲವೊಮ್ಮೆ ಅವರು ವೃಂದಾವನದ ಮಣ್ಣಿನಲ್ಲಿ  ಬಿದ್ದು ಮೈಗೆಲ್ಲ ಜೇಡಿ ಮಣ್ಣು ಮತ್ತು ಕೆಸರನ್ನು ಹತ್ತಿಸಿಕೊಂಡು ತಾಯಂದಿರ ಬಳಿಗೆ ಬರುವರು. ಅವರ ತಾಯಿಯರಾದರೋ ಆ ಮಕ್ಕಳ ಮೈಗೆ ಕೇಸರಿ ಮತ್ತು ಶ್ರೀಗಂಧವನ್ನು ಹಚ್ಚಿರುತ್ತಿದ್ದರು. ಆದರೆ ಮೈಯೆಲ್ಲಾ ಮಣ್ಣು ಮಾಡಿಕೊಂಡು ಬಂದಾಗ ಅದನ್ನು ತೊಳೆದು ಮಕ್ಕಳನ್ನು ತೊಡೆಯ ಮೇಲೆತ್ತಿಕೊಂಡು ಸೀರೆಯ ಅಂಚನ್ನು ಮರೆ ಮಾಡಿ ಹಾಲುಣಿಸುತ್ತಿದ್ದರು. ಮಕ್ಕಳು ಹಾಲನ್ನು ಕುಡಿಯುತ್ತಿರುವಾಗ ಅವರ ಬಾಯಲ್ಲಿ ಮೂಡುತ್ತಿರುವ ಪುಟ್ಟ ಹಲ್ಲುಗಳನ್ನು ಕಂಡು ಅವರಿಗೆ ಹರ್ಷವಾಗುತ್ತಿತ್ತು. ಒಮ್ಮೊಮ್ಮೆ ಈ ಬಾಲಕರು ಗೋ ಶಾಲೆಗೆ ಅಂಬೆಗಾಲಿನಲ್ಲಿ  ಹೋಗಿ ಕರುವಿನ ಬಾಲವನ್ನು ಹಿಡಿದುಕೊಂಡು ನಿಲ್ಲುತ್ತಿದ್ದರು. ಗಲಿಬಿಲಿಗೊಂಡ ಕರುಗಳು ಅಲ್ಲಿಂದಿಲ್ಲಿಗೆ ಓಡಿಹೋಗಿ ಹುಡುಗರನ್ನು ಮಣ್ಣಿನಲ್ಲಿ ಹಾಗೂ ಸಗಣಿಯಲ್ಲಿ ಎಳೆಯುತ್ತಿದ್ದವು. ಈ ದೃಶ್ಯವನ್ನು ನೋಡಲು ಯಶೋದೆ ಮತ್ತು ರೋಹಿಣಿಯರು ತಮ್ಮ ನೆರೆಹೊರೆಯವರನ್ನೆಲ್ಲಾ ಕರೆಯುತ್ತಿದ್ದರು. ಶ್ರೀಕೃಷ್ಣನ ಬಾಲಲೀಲೆಗಳನ್ನು ನೋಡಿದ ಗೋಪಿಯರು ಅಲೌಕಿಕ ಆನಂದದಲ್ಲಿ ಮೈಮರೆಯುತ್ತಿದ್ದರು.

ಶ್ರೀಕೃಷ್ಣ ಮತ್ತು ಬಲರಾಮರು ನಿಂತಲ್ಲಿ  ನಿಲ್ಲುತ್ತಿರಲಿಲ್ಲ. ಹಸುಗಳು, ಎತ್ತುಗಳು, ಕೋತಿಗಳು, ನೀರು, ಬೆಂಕಿ ಮತ್ತು ಪಕ್ಷಿ ಯಾವುದರಿಂದಲೂ ಅಪಾಯವಾಗದಂತೆ ಅವರನ್ನು ತಾಯಂದಿರು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಇನ್ನೂ ಸ್ವಲ್ಪ ಕಾಲ ಕಳೆದ ಮೇಲೆ ಈ ಮಕ್ಕಳಿಬ್ಬರೂ ಎದ್ದು ನಿಂತುಕೊಳ್ಳುವಂತಾದರು ಮತ್ತು ದಟ್ಟಡಿಯಿಡಲು ಆರಂಭಿಸಿದರು. ಕ್ರಮೇಣ ನಡೆಯಲೂ ಪ್ರಾರಂಭಿಸಿದರು. ಇದಾದ ಮೇಲಂತೂ ಅದೇ ವಯಸ್ಸಿನ ಇತರ ಹುಡುಗರೂ ಅವರೊಡನೆ ಸೇರಿಕೊಂಡರು.

ಯಶೋದೆ ಮತ್ತು ರೋಹಿಣಿಯರ ಗೆಳತಿಯರಾದ ಗೋಪಿಯರು ಒಂದು ಕಡೆ ಕೃಷ್ಣ ಬಲರಾಮರ ತುಂಟ ಬಾಲಲೀಲೆಗಳಿಂದ ಒಂದು ರೀತಿಯ ಅಲೌಕಿಕ ಆನಂದವನ್ನು ಪಡೆಯುತ್ತಿದ್ದರು. ಇನ್ನೊಂದು ಕಡೆ ಒಂದು ಜಾಗದಲ್ಲಿ ಇರಲೊಲ್ಲದ ಈ ಬಾಲಕರ ಮೇಲೆ ದೂರು ಕೊಡಲು ತಾಯಿ ಯಶೋದೆಯ ಬಳಿಗೆ ಹೋಗುತ್ತಿದ್ದರು. ಒಮ್ಮೆ ಕೃಷ್ಣನು ತಾಯಿ ಯಶೋದೆಯ ಮುಂದೆ ಕುಳಿತಿದ್ದಾಗ ಗೋಪಿಯರೆಲ್ಲ ಬಂದು ಅವನಿಗೆ ಕೇಳುವಂತೆಯೇ ದೂರು ಹೇಳಲಾರಂಭಿಸಿದರು… “ಪ್ರಿಯ ಯಶೋದೆ, ನಿನ್ನ ತುಂಟ ಕೃಷ್ಣನನ್ನು ಅಂಕೆಯಲ್ಲಿ ಏಕೆ ಇಟ್ಟುಕೊಳ್ಳುವುದಿಲ್ಲ? ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕೃಷ್ಣ ಬಲರಾಮರು ನಮ್ಮ ಮನೆಗಳಿಗೆ ಬರುತ್ತಾರೆ. ಹಸುಗಳ ಹಾಲು ಕರೆಯುವ ಮೊದಲೇ ಕರುಗಳನ್ನು ಬಿಟ್ಟು ಬಿಡುತ್ತಾರೆ. ಕರುಗಳು ಹಾಲನ್ನೆಲ್ಲಾ ಕುಡಿದು ಬಿಡುವುದರಿಂದ ನಮಗೆ ಕರೆಯಲು ಹಾಲು ಇರುವುದೇ ಇಲ್ಲ. ನಾವು ಬರಿಯ ಪಾತ್ರೆಗಳನ್ನು ಹಿಡಿದು ಕೊಂಡು ಹಿಂತಿರುಗಬೇಕಾಗುತ್ತದೆ. ಹೀಗೆಲ್ಲಾ ಮಾಡಬೇಡಿ ಎಂದು ಹೇಳಿದರೆ ಅವರು ಮೋಹಕವಾಗಿ ನಕ್ಕು ಬಿಡುತ್ತಾರೆ ಅಷ್ಟೇ. ಆಗ ನಮಗೇನೂ ಮಾಡಲಾಗುವುದಿಲ್ಲ. ನಾವು ಮೊಸರು ಬೆಣ್ಣೆಗಳನ್ನು ಎಲ್ಲಿಯೇ ಇಡಲಿ ಅದನ್ನು ಕದಿಯುವುದೆಂದರೆ ಅವರಿಗೆ ಬಹಳ ಆನಂದ. ಹಾಗೆ ಕದಿಯುವಾಗ ಸಿಕ್ಕಿಬಿದ್ದರೆ `ನಾವು ಕದಿಯುತ್ತೇವೆ ಎಂದು ಏಕೆ ಆಪಾದನೆ ಹೊರಿಸುವಿರಿ. ನಮ್ಮ ಮನೆಯಲ್ಲಿ ಸಾಕಷ್ಟು ಮೊಸರು ಬೆಣ್ಣೆ ಇಲ್ಲ ಎಂದು ಕೊಂಡಿದ್ದೀರೇನು?’ ಎಂದು ಕೇಳುತ್ತಾರೆ.

ಒಮ್ಮೊಮ್ಮೆ ಹೀಗೆ ಕದ್ದ ಮೊಸರು ಬೆಣ್ಣೆಗಳನ್ನು ಕೋತಿಗಳಿಗೆ ಹಂಚಿ ಬಿಡುತ್ತಾರೆ. ಕೋತಿಗಳೂ ತಿಂದು ಸಾಕಾಗಿ ಹಾಗೇ ಬಿಟ್ಟಾಗ ನಿಮ್ಮ ಹುಡುಗರು `ನಿಮ್ಮ ಮೊಸರು ಬೆಣ್ಣೆಗಳು ಕೆಲಸಕ್ಕೆ ಬಾರದವು. ಅವನ್ನು ಕೋತಿಗಳೂ ಸಹ ಮುಟ್ಟುವುದಿಲ್ಲ!’ ಎಂದು ಛೀ ಪೆಟ್ಟು ಹಾಕುತ್ತಾರೆ. ಮಡಕೆಗಳನ್ನು ಒಡೆದು ಅವನ್ನು ಎಲ್ಲೆಲ್ಲೂ ಬಿಸಾಡುತ್ತಾರೆ. ನಾವು ನಮ್ಮ ಮೊಸರು ಬೆಣ್ಣೆಗಳ ಸಂಗ್ರಹವನ್ನು ಕತ್ತಲಲ್ಲಿಟ್ಟರೆ ನಿಮ್ಮ ಮಕ್ಕಳು ಅವರು ಧರಿಸುವ ಆಭರಣಗಳ ಕಣ್ಣು ಕೋರೈಸುವ ಬೆಳಕಿನಿಂದಾಗಿ ಕತ್ತಲಲ್ಲಿಯೂ ಅವನ್ನು ಕಂಡುಕೊಳ್ಳುತ್ತಾರೆ. ಒಂದು ವೇಳೆ ಅವರಿಗೆ ಬೆಣ್ಣೆ ಮೊಸರು ಸಿಕ್ಕದಿದ್ದರೆ ನಮ್ಮ ಪುಟ್ಟ ಮಕ್ಕಳ ಹತ್ತಿರ ಹೋಗಿ ಅವರ ಮೈಯ್ಯನ್ನು ಚಿವುಟಿ ಅವು ನೋವಿನಿಂದ ಅಳುವಂತೆ ಮಾಡಿ ಹೊರಟು ಹೋಗುತ್ತಾರೆ. ಇನ್ನು ನಮ್ಮ ಮೊಸರು ಬೆಣ್ಣೆಯನ್ನು ಎತ್ತರದ ಚಾವಣಿಯಲ್ಲಿಟ್ಟರೆ ಅದು ಅವರಿಗೆ ನಿಲುಕದಿದ್ದರೂ,ಇರುವ ಮರದ ಪೆಟ್ಟಿಗೆಗಳನ್ನೆಲ್ಲಾ ಜೋಡಿಸಿ ಎಟುಕಿಸಿಕೊಳ್ಳುತ್ತಾರೆ. ಒಂದು ವೇಳೆ ಅದೂ ನಿಲುಕದಿದ್ದರೆ ಮಡಕೆಯಲ್ಲಿ ರಂಧ್ರಮಾಡಿ ಬಿಡುತ್ತಾರೆ. ಆದುದರಿಂದ ನಿಮ್ಮ ಮಕ್ಕಳು ಧರಿಸುವ ಒಡವೆಗಳನ್ನೆಲ್ಲಾ ನೀನು ತೆಗೆದಿಟ್ಟು ಬಿಡುವುದು ಒಳ್ಳೆಯದು ಎಂದು ನಮಗೆ ತೋರುತ್ತದೆ.”

ಇದನ್ನು ಕೇಳಿ ಯಶೋದೆಯು, “ಆಗಬಹುದು. ಕತ್ತಲಲ್ಲಿ ಬಚ್ಚಿಟ್ಟಿರುವ ಬೆಣ್ಣೆಯು ಕೃಷ್ಣನಿಗೆ ಕಾಣದ ಹಾಗೆ ಅವನ ಒಡವೆಗಳನ್ನೆಲ್ಲಾ ತೆಗೆದಿಟ್ಟು ಬಿಡುತ್ತೇನೆ” ಎನ್ನುತ್ತಾಳೆ. ಅದಕ್ಕೆ ಗೋಪಿಯರು “ಬೇಡ ಬೇಡ ಒಡವೆಗಳನ್ನು ತೆಗೆದಿಟ್ಟರೆ ಏನು ಪ್ರಯೋಜನ? ಇವರು ಅದೆಂತಹ ಹುಡುಗರೋ ನಾವು ತಿಳಿಯೆವು. ಏಕೆಂದರೆ ಒಡವೆಗಳಿಲ್ಲದೆಯೂ ಅವರು ಯಾವುದೋ ಒಂದು ಬಗೆಯ ಕಾಂತಿಯನ್ನು ಬೀರುತ್ತಾರೆ. ಅದರಿಂದ ಕತ್ತಲಲ್ಲಿ ಸಹ ಅವರಿಗೆ ಪ್ರತಿಯೊಂದು ವಸ್ತುವೂ ಕಾಣುತ್ತದೆ” ಎನ್ನುವರು. ಆಗ ತಾಯಿ ಯಶೋದೆಯು “ಸರಿ. ಹಾಗಾದರೆ ಇನ್ನು ಮೇಲೆ ಅವರ ಕೈಗೆ ಎಟುಕದಂತೆ ನಿಮ್ಮ ಮೊಸರು ಬೆಣ್ಣೆಗಳನ್ನು ಎಚ್ಚರದಿಂದಿಡಿ” ಎಂದು ತಿಳಿಸುವಳು. ಆದರೂ ಗೋಪಿಯರು ತಮ್ಮ ದೂರನ್ನು ಮುಂದುವರೆಸುತ್ತಾರೆ. “ನಾವು ಹಾಗೆಯೇ ಮಾಡುತ್ತೇವೆ. ಆದರೆ, ಈ ತುಂಟಪೋರರು ಅದ್ಹೇಗೋ ನಮ್ಮ ಮನೆಗಳೊಳಗೆ ಪ್ರವೇಶಿಸಿ ಬೆಣ್ಣೆ ಮೊಸರುಗಳಿಗಾಗಿ ಹುಡುಕುತ್ತಾರೆ ಒಮ್ಮೊಮ್ಮೆ ಅದು ಸಿಗದಿದ್ದಾಗ ಕೋಪಗೊಂಡು ನೆಲದ ಮೇಲೆ ಉಗುಳುತ್ತಾರೆ, ಮೂತ್ರ ಮಾಡಿಬಿಡುತ್ತಾರೆ.

ಇಗೋ ನಿನ್ನ ಮಗನನ್ನು ನೋಡು. ನಾವು ಹೇಳುವುದನ್ನೆಲ್ಲಾ ಏನೂ ತಿಳಿಯದವನ ಹಾಗೆ ಕುಳಿತು ಕೇಳುತ್ತಿದ್ದಾನೆ. ದಿನವೆಲ್ಲ ಮೊಸರು ಬೆಣ್ಣೆಯನ್ನು ಕದಿಯಲು ಯೋಜನೆ ಮಾಡುವುದು ಆಮೇಲೆ ಮನೆಗೆ ಬಂದು ಒಳ್ಳೆಯ ಹುಡುಗರ ಹಾಗೆ ಕುಳಿತು ಬಿಡುವುದು. ನಿನ್ನ ಮಗನ ಮುಖವನ್ನೇ ನೋಡು”. ತಾಯಿ ಯಶೋದೆಗೆ ಗೋಪಿಯರ ಈ ದೂರುಗಳನ್ನೆಲ್ಲಾ ಕೇಳಿದಾಗ ತನ್ನ ಮಗನಿಗೆ ತಕ್ಕ ಶಿಕ್ಷೆ ಮಾಡಬೇಕೆನಿಸುತ್ತದೆ. ಆದರೆ ಕರುಣೆ ಹುಟ್ಟಿಸುವ ಅವನ ಮುಖವನ್ನು ಕಂಡಾಗ ಶಿಕ್ಷಿಸುವ ಯೋಚನೆಯನ್ನು ಬಿಟ್ಟು ಕೃಷ್ಣನ ನೋಡಿ ನಸು ನಕ್ಕು ಬಿಡುತ್ತಾಳೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi