ನಿಜವಾದ ಭಕ್ತರು ಫಲಾಪೇಕ್ಷೆಯ ಹಿಂಬಾಲಕರಲ್ಲ
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1974ರ ಏಪ್ರಿಲ್ 1 ರಂದು ಮುಂಬಯಿಯಲ್ಲಿ ನೀಡಿದ ಉಪನ್ಯಾಸ.
ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ ।
ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ ಭವತಿ ಕರ್ಮಜಾ ॥
(ಗೀತೆ, 4.12)
“ಈ ಜಗತ್ತಿನಲ್ಲಿ ಜನರು ಫಲಾಪೇಕ್ಷಿತ ಕರ್ಮಗಳಲ್ಲಿ ಸಿದ್ಧಿಯನ್ನು ಬಯಸುತ್ತಾರೆ. ಆದುದರಿಂದ ದೇವತೆಗಳನ್ನು ಪೂಜಿಸುತ್ತಾರೆ. ಈ ಜಗತ್ತಿನಲ್ಲಿ ಫಲಾಪೇಕ್ಷಿತ ಕರ್ಮದಿಂದ ಜನರು ಶೀಘ್ರವಾಗಿ ಸಿದ್ಧಿಯನ್ನು ಪಡೆಯುತ್ತಾರೆ.”
ನಿನ್ನೆ ರಾತ್ರಿ ನಾವು ಇದರ ಹಿಂದಿನ ಶ್ಲೋಕದ ಬಗೆಗೆ ಚರ್ಚಿಸುತ್ತಿದ್ದೆವು.
ಯೇ ಯಥಾ ಮಾಂ ಪ್ರಪದ್ಯನ್ತೇ ತಾಂಸ್ತಥೈವ ಭಜಾಮಿ ಅಹಂ ।
ಮಮ ವರ್ತ್ಮಾನುವರ್ತನ್ತೇ ಮನುಷ್ಯಾಃ ಪಾಥರ್ ಸರ್ವಶಃ ॥
(ಗೀತೆ, 4.11)
“ಯಾರು ನನಗೆ ಹೇಗೆ ಶರಣಾಗತರಾಗುತ್ತಾರೋ ಹಾಗೆ ನಾನು ಅವರಿಗೆ ಅನುಗ್ರಹಿಸುತ್ತೇನೆ. ಪಾಥರ್ನೇ, ಎಲ್ಲರೂ ಎಲ್ಲ ರೀತಿಗಳಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ.”
ಪ್ರತಿಯೊಬ್ಬರೂ ವಿವಿಧ ರೀತಿಗಳಲ್ಲಿ ಪರಮ ಸತ್ಯನಿಗಾಗಿ ಹುಡುಕುತ್ತಿದ್ದಾರೆ. ದೇವೋತ್ತಮ ಪರಮ ಪುರುಷ, ಪರಮ ಸತ್ಯನನ್ನು ಹುಡುಕುವ ಮಾರ್ಗಗಳಲ್ಲಿ ದೇವತೆಗಳನ್ನು ಪೂಜಿಸುವುದೂ ಒಂದು. ಆದುದರಿಂದ ದೇವತೆಗಳನ್ನು ಪೂಜಿಸುವುದನ್ನು ವೇದಗಳಲ್ಲಿ, ಉಪಾಸನಾ ಕಾಂಡದಲ್ಲಿ ಶಿಫಾರಸು ಮಾಡಲಾಗಿದೆ.
ವೇದಗಳನ್ನು ಮೂರು ಖಂಡ ಅಥವಾ ವಿಭಾಗಗಳನ್ನಾಗಿ ಮಾಡಲಾಗಿದೆ : ಫಲಾಪೇಕ್ಷೆ ಉಳ್ಳ ಕರ್ಮಕ್ಕಾಗಿ ಕರ್ಮ ಕಾಂಡ, ಆಧ್ಯಾತ್ಮಿಕ ಊಹೆಗಳಿಗಾಗಿ ಜ್ಞಾನ ಕಾಂಡ ಮತ್ತು ದೇವತೆಗಳ ಪೂಜೆಗಾಗಿ ಉಪಾಸನಾ ಕಾಂಡ. ಆದುದರಿಂದ ವೇದಗಳಿಗೆ ತ್ರಯೀ, ಮೂರು ಎಂಬ ಹೆಸರಿದೆ.
ಶ್ರೀಮದ್ ಭಾಗವತವು ಹೇಳುತ್ತದೆ, ಸ್ತ್ರೀ, ಶೂದ್ರ, ದ್ವಿಜಬಂಧೂನಾಂ ತ್ರಯೀ ನ ಶ್ರುತಿ ಗೋಚರಾ : “ಸ್ತ್ರೀಯರು, ಕಾರ್ಮಿಕ ವರ್ಗ ಮತ್ತು ದ್ವಿಜ ಬಂಧುಗಳಿಗೆ ವೇದವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ.” ದ್ವಿಜ ಬಂಧುಗಳು ಎಂಬುವುದು ಬ್ರಾಹ್ಮಣ, ಕ್ಷತ್ರಿಯ ಅಥವಾ ವೈಶ್ಯರ ಕುಟುಂಬಗಳಲ್ಲಿ ಜನಿಸಿದ, ಆದರೆ ಈ ಉನ್ನತ ವರ್ಗಗಳ ಗುಣಗಳನ್ನು ಹೊಂದಿಲ್ಲದವರನ್ನು ಸೂಚಿಸುತ್ತದೆ.
ಬ್ರಾಹ್ಮಣನ ಗುಣಗಳನ್ನು ಭಗವದ್ಗೀತೆಯಲ್ಲಿ (ಶ್ಲೋಕ 18.42) ಕೊಡಲಾಗಿದೆ,
ಶಮೋ ದಮಸ್ತಪಃ ಶೌಚಂ ಕ್ಷಾಂತಿರ್ ಆರ್ಜವಮ್ ಏವ ಚ ।
ಜ್ಞಾನಂ ವಿಜ್ಞಾನಂ ಆಸ್ತಿಕ್ಯಂ ಬ್ರಹ್ಮ ಕರ್ಮ ಸ್ವಭಾವಜಮ್ ॥
“ಶಾಂತಿಸ್ವಭಾವ, ಆತ್ಮಸಂಯಮ, ತಪಸ್ಸು, ಸಹನೆ, ಪ್ರಾಮಾಣಿಕತೆ, ಜ್ಞಾನ, ವಿವೇಕ ಮತ್ತು ಆಸ್ತಿಕ್ಯ ಈ ಸಹಜಗುಣಗಳಿಂದ ಬ್ರಾಹ್ಮಣರು ಕರ್ಮವನ್ನು ಮಾಡುತ್ತಾರೆ.”
ಕ್ಷತ್ರಿಯರ ಗುಣಗಳನ್ನೂ ನೀಡಲಾಗಿದೆ (ಭಗವದ್ಗೀತೆ 18.43),
ಶೌರ್ಯಂ ತೇಜೋ ಧೃತಿರ್ ದಾಕ್ಷ್ಯಂ ಯುದ್ಧೇ ಚಾಪಿ ಅಪಲಾಯನಮ್ ॥
ದಾನಂ ಈಶ್ವರ ಭಾವಶ್ ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ॥
“ಶೌರ್ಯ, ತೇಜಸ್ಸು, ದೃಢಸಂಕಲ್ಪ, ದಕ್ಷತೆ, ಯುದ್ಧದಲ್ಲಿ ಧೈರ್ಯ, ಔದಾರ್ಯ ಮತ್ತು ನಾಯಕತ್ವ ಇವು ಕ್ಷತ್ರಿಯರ ಕೆಲಸದ ಸಹಜ ಗುಣಗಳು.”
ವೈಶ್ಯರ ಗುಣಗಳನ್ನು ಈ ರೀತಿ ನೀಡಲಾಗಿದೆ (ಗೀತೆ 18.44),
ಕೃಷಿ ಗೋರಕ್ಷ್ಯ ವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ॥
“ಕೃಷಿ, ಗೋರಕ್ಷಣೆ ಮತ್ತು ವಾಣಿಜ್ಯ ಇವು ವೈಶ್ಯರಿಗೆ ಸಹಜವಾದ ಕೆಲಸ.”
ಅಂತಿಮವಾಗಿ ಶೂದ್ರರ ಗುಣಗಳು, (ಭಗವದ್ಗೀತೆ 18.44),
ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ॥
“ಶ್ರಮ ಮತ್ತು ಇತರರ ಸೇವೆ ಇವು ಶೂದ್ರರ ಗುಣಗಳು.”
ಬೇರೆಯವರಿಗೆ ಸೇವೆ ಸಲ್ಲಿಸುವುದರಿಂದ ಶೂದ್ರನು ತೃಪ್ತನಾಗುತ್ತಾನೆ, ಒಳ್ಳೆಯ ಮಾಲೀಕನನ್ನು ಪಡೆದು ನಾಯಿಯು ತೃಪ್ತಿಹೊಂದುವಂತೆ.
ನಿರ್ದಿಷ್ಟ ಉದ್ಯೋಗದಲ್ಲಿ ಯಶಸ್ಸು ಪಡೆಯಲು ಜನರು ಕೆಲವು ಸಂದರ್ಭದಲ್ಲಿ ದೇವತೆಗಳನ್ನು ಆರಾಧಿಸುತ್ತಾರೆ. ಅದನ್ನು ಇಲ್ಲಿ ವಿವರಿಸಲಾಗಿದೆ. ನಮ್ಮಂತೆ ದೇವತೆಗಳೂ ಜೀವಿಗಳು. ಮತ್ತು ಎಲ್ಲ ಜೀವಗಳೂ ಕೃಷ್ಣನ ವಿಭಿನ್ನಾಂಶ. ಮಮೈವಾಂಶೋ ಜೀವ ಲೋಕೇ ಜೀವ ಭೂತಃ ಸನಾತನಃ. ದೇವತೆಗಳು ಮತ್ತು ನಮ್ಮ ನಡುವೆ ವ್ಯತ್ಯಾಸವಿಲ್ಲ. ಆದರೆ ಅವರು ಚಂದ್ರ, ಸೂರ್ಯ, ಇಂದ್ರ, ಬ್ರಹ್ಮ ಇತ್ಯಾದಿ ಸ್ಥಾನಗಳನ್ನು ಪಡೆದು ಹೆಚ್ಚು ಅದೃಷ್ಟವಂತರಾಗಿದ್ದಾರೆ.
ಲೌಕಿಕ ಚಟುವಟಿಕೆಗಳಲ್ಲಿ ಯಶಸ್ಸು ಪಡೆಯಲು ಜನರು ಕೆಲವು ಸಂದರ್ಭಗಳಲ್ಲಿ ದೇವತೆಗಳನ್ನು ಪೂಜಿಸುತ್ತಾರೆ. ದೇವತೆಗಳು ಭಗವಂತನ ವಿಭಿನ್ನಾಂಶವಾಗಿರುವುದರಿಂದ ಅವರನ್ನು ಪೂಜಿಸುವುದೆಂದರೆ ತನ್ನನ್ನು ಆರಾಧಿಸಿದಂತೆಯೇ ಎಂದಾದರೂ ಕೂಡ ಅದು (ದೇವತೆಗಳನ್ನು ಪೂಜಿಸುವುದು) ಅವಿಧಿ ಪೂರ್ವಕಂ ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂದರೆ “ತಪ್ಪು ಮಾರ್ಗದಲ್ಲಿ ಮಾಡಿದ್ದು” ಎಂದು ಅರ್ಥ. ವಿಧಿ ಅಥವಾ “ನಿಯಮ”ವು ದೇವೋತ್ತಮ ಪರಮ ಪುರುಷನನ್ನು ಪೂಜಿಸಲೆಂದು ಇರುವುದು. ದೇವತೆಗಳನ್ನು ಪೂಜಿಸುವುದೆಂದರೆ ದೊಡ್ಡ ಅಧಿಕಾರಿಯ ಕಚೇರಿ ಪ್ರವೇಶಿಸಲು ದ್ವಾರಪಾಲಕನಿಗೆ ಲಂಚ ಕೊಟ್ಟಂತೆ.
ದೇವತೆಗಳನ್ನು ಪೂಜಿಸುವುದರಿಂದ ಅತಿ ಶೀಘ್ರದಲ್ಲಿ ಫಲ ಸಿಗಬಹುದು. ಆದರೆ ಅದು ಅಂತವತ್, “ಸೀಮಿತ.” ಆದರೆ ಭಕ್ತಿಯು ಅಸೀಮಿತ. ಕಡಮೆ ಬುದ್ಧಿವಂತರು ದೇವೋತ್ತಮ ಪರಮ ಪುರುಷನ ಬದಲಿಗೆ ದೇವತೆಗಳನ್ನು ಪೂಜಿಸುತ್ತಾರೆ. ವಿಶೇಷವಾಗಿ ಭಾರತದಲ್ಲಿ ನಾವು ದೇವತೆಗಳ ಅನೇಕ ಭಕ್ತರನ್ನು ಕಾಣಬಹುದು. ಇವರು ನಿಜವಾದ ಭಕ್ತರಲ್ಲ. ಭಕ್ತಿ ಏನಿದ್ದರೂ ದೇವೋತ್ತಮ ಪರಮ ಪುರುಷನೊಂದಿಗಿನ ಸಂಪರ್ಕದಿಂದ ಮಾತ್ರ. ದೇವತೆಗಳನ್ನು ಪೂಜಿಸುವವರು ಭಕ್ತರಲ್ಲ. ಏಕೆಂದರೆ, ಅವರಿಗೆ ದೇವತೆಗಳಿಂದ ಪ್ರತಿಫಲ ಬೇಕಾಗಿರುತ್ತದೆ. ಆದರೆ ಭಕ್ತಿಯು ಹಾಗಲ್ಲ. ಭಕ್ತರು ದೇವೋತ್ತಮ ಪರಮ ಪುರುಷನಿಂದ ಏನೂ ಪ್ರತಿಫಲಾಪೇಕ್ಷೆ ಹೊಂದಿರುವುದಿಲ್ಲ. ಅದೇ ಭಕ್ತಿ ಮತ್ತು ದೇವತಾ ಪೂಜೆಯ ನಡುವಣ ವ್ಯತ್ಯಾಸ.
ಚೈತನ್ಯ ಮಹಾಪ್ರಭುಗಳು ನಮಗೆ ಭಕ್ತಿಯನ್ನು ಬೋಧಿಸುತ್ತಾರೆ. ಅವರು ಹೇಳುತ್ತಾರೆ, ನ ಧನಂ, ನ ಜನಂ, ನ ಸುಂದರೀಂ ಕವಿತಾಂ ವಾ ಜಗದೀಶ ಕಾಮಯೇ : “ನನ್ನ ದೇವರೇ, ಸಂಪತ್ತು, ಶ್ರೀಮಂತಿಕೆ, ಒಳ್ಳೆಯ ಪತ್ನಿ ಅಥವಾ ಬಹು ಜನ ಅನುಯಾಯಿಗಳು ಬೇಕೆಂದು ನಿನ್ನ ಬಳಿ ಕೇಳಲು ಆಶಿಸುವುದಿಲ್ಲ.” ಇವೆಲ್ಲ ಲೌಕಿಕ ಸಂಪತ್ತುಗಳು. ಆದುದರಿಂದ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, “ನನಗೆ ಇವೆಲ್ಲ ಬೇಕಾಗಿಲ್ಲ.” ಮಮ ಜನ್ಮನಿ ಜನ್ಮನೀಶ್ವರೇ ಭವತಾದ್ ಭಕ್ತಿರ್ ಅಹೈತುಕೀ ತ್ವಯೀ : “ಜನ್ಮ ಜನ್ಮಾಂತರಗಳಲ್ಲಿಯೂ ನನ್ನ ಜೀವನದಲ್ಲಿ ನಿನ್ನ ಅವ್ಯಾಜ ಭಕ್ತಿಸೇವೆಯೊಂದೇ ನನಗೆ ಬೇಕಾದದ್ದು.” ಅದೇ ಭಕ್ತನೊಬ್ಬನ ಅಪೇಕ್ಷೆ. ಅವನಿಗೆ ಮುಕ್ತಿ ಬೇಕಾಗಿಲ್ಲ. ಅವನಿಗೆ ಜನ್ಮ ಜನ್ಮಾಂತರಗಳಲ್ಲಿಯೂ ಭಗವಂತನ ಚರಣ ಕಮಲಕ್ಕೆ ಸೇವೆ ಸಲ್ಲಿಸಬೇಕೆಂಬುದೇ ಆಸೆ. ಅದೇ ಅವನ ಕೋರಿಕೆ.
ಕರ್ಮ ಕಾಂಡೀಯ, ಫಲಾಪೇಕ್ಷೆ ಉಳ್ಳ ಕರ್ಮದ ವೇದಿಕೆ ಮೇಲಿರುವವರು ಸಾಮಾನ್ಯವಾಗಿ ದೇವತೆಗಳ ಆರಾಧನೆಯಿಂದ ಆಕರ್ಷಿತರಾಗುತ್ತಾರೆ. ಆದರೆ ಲೌಕಿಕ ಸುಖದಿಂದ ಕಳಚಿಕೊಂಡವರು ಕೃಷ್ಣನಿಗೆ ಅರ್ಪಿಸಿಕೊಳ್ಳುತ್ತಾರೆ. ತಾತ್ಕಾಲಿಕ ಫಲಕ್ಕಾಗಿ ದೇವತೆಗಳನ್ನು ಪೂಜಿಸಬೇಕೋ ಅಥವಾ ಶಾಶ್ವತ ಫಲಕ್ಕಾಗಿ ಕೃಷ್ಣನನ್ನು ಆರಾಧಿಸಬೇಕೋ ಎಂಬುವುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಅದೇ ನಮ್ಮ ಆಯ್ಕೆ. ಆದರೆ ಜನರು ಸಾಮಾನ್ಯವಾಗಿ ತತ್‌ಕ್ಷಣ ಫಲ ನೀಡುವುದನ್ನೇ ಆರಿಸಿಕೊಳ್ಳುತ್ತಾರೆ. (ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ ಭವತಿ). ತತ್‌ಕ್ಷಣದ ಫಲವು ಆರಂಭದಲ್ಲಿ ಸ್ವಾದಿಷ್ಟವಾಗಿರಬಹುದು. ಆದರೆ ಅದು ಅಂತ್ಯದಲ್ಲಿ ಕಹಿಯಾದ ಫಲಿತಾಂಶವನ್ನು ನೀಡುತ್ತದೆ. ಆದರೆ ನಾವು ಅದನ್ನು ಪರಿಗಣಿಸುವುದಿಲ್ಲ.
ತತ್‌ಕ್ಷಣದ ಫಲಿತಾಂಶ ಮತ್ತು ದೂರದ ಫಲಿತಾಂಶಗಳನ್ನು ಸಂಸ್ಕೃತದಲ್ಲಿ ಶ್ರೇಯಸ್ ಮತ್ತು ಪ್ರೇಯಸ್ ಎಂದು ಹೇಳುತ್ತಾರೆ. ಪ್ರೇಯಸ್ ಎಂದರೆ “ತತ್‌ಕ್ಷಣದ ಲಾಭ” ಮತ್ತು ಶ್ರೇಯಸ್ ಎಂದರೆ “ಅಂತಿಮ ಫಲ.” ಅಂತಿಮ ಫಲದಲ್ಲಿ ಆಸಕ್ತಿ ಉಳ್ಳವರು ಭಗವದ್ಧಾಮಕ್ಕೆ ವಾಪಸಾಗುವರು. ಅವರಿಗೆ ದೇವೋತ್ತಮನನ್ನು ಪೂಜಿಸುವುದೇ ಅತ್ಯಂತ ಹೆಚ್ಚಿನ ಫಲಕಾರಿ. ತಾತ್ಕಾಲಿಕ ಲಾಭದಲ್ಲಿ ಆಸಕ್ತಿ ಉಳ್ಳವರು ದೇವತೆಗಳನ್ನು ಪೂಜಿಸುವರು. ಅವರು ದುರ್ಗಾದೇವಿಯನ್ನು ಪ್ರಾರ್ಥಿಸಬಹುದು, ಧನಂ ದೇಹಿ, ರೂಪಂ ದೇಹಿ, ಯಶೋ ದೇಹಿ : “ನನಗೆ ಸಂಪತ್ತು ನೀಡು. ನನಗೆ ಸೌಂದರ್ಯ ನೀಡು. ನಾನು ಪ್ರಸಿದ್ಧನಾಗುವಂತೆ ಮಾಡು.” ಅವರು ಪಡೆಯುವ ಲೌಕಿಕ ಫಲಗಳೆಲ್ಲವೂ ಐಹಿಕ ದೇಹದ ಅಂತ್ಯದೊಂದಿಗೆ ಹೊರಟುಹೋಗುತ್ತವೆ ಎಂಬುವುದನ್ನು ಅವರು ಮರೆಯುತ್ತಾರೆ. ಭಗವದ್ಗೀತೆಯಲ್ಲಿ ಕೃಷ್ಣನು ಹೇಳುತ್ತಾನೆ, ಮೃತ್ಯುಃ ಸರ್ವ ಹರಸ್ ಚಾಹಂ : “ಅಂತ್ಯದಲ್ಲಿ, ನಾನು ಸಾವಾಗಿ ನೀವು ಹೊಂದಿರುವುದನ್ನೆಲ್ಲ ತೆಗೆದುಕೊಂಡು ಹೋಗುವೆ.”
ಆದುದರಿಂದ ತಾತ್ಕಾಲಿಕ ಫಲಕ್ಕೆ ಆಸೆ ಪಡುವುದು ಒಳ್ಳೆಯದಲ್ಲ. ಏಕೆಂದರೆ – ನಿತ್ಯೋ ನಿತ್ಯಾನಾಂ ಚೇತನಸ್ ಚೇತನಾನಾಂ – ನಾವು ಶಾಶ್ವತ ಸುಖ, ಶಾಶ್ವತ ಫಲಕ್ಕಾಗಿ ಆಸೆ ಪಡಬೇಕು. ಅದು ನಮ್ಮ ವ್ಯವಹಾರವಾಗಬೇಕು. ಆದುದರಿಂದ ನಾವು ಕರ್ಮಿಯರು, ಫಲಾಪೇಕ್ಷೆ ಉಳ್ಳವರಾಗಬಾರದು. ನಾವು ಜ್ಞಾನಿಗಳು, ಮಾನಸಿಕ ಊಹಾಪೋಹಕರೂ ಆಗಬಾರದು. ನಾವು ಯೋಗಿಗಳಾಗಬೇಕು. ಎಂತಹ ಯೋಗಿಗಳು? ಭಕ್ತಿ ಯೋಗಿಗಳಾಗಬೇಕು.
ಅನೇಕ ವಿಧವಾದ ಯೋಗಾಚರಣೆಗಳಿವೆ. ಅವುಗಳಲ್ಲಿ ಭಕ್ತಿ ಯೋಗವು ಅತ್ತುತ್ತಮ. ಕೃಷ್ಣನು ಹೇಳುತ್ತಾನೆ, ಭಕ್ತ್ಯಾ ಮಾಂ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ತ್ವತಃ – “ಭಕ್ತಿಯ ಮೂಲಕ ಮಾತ್ರ ನನ್ನನ್ನು ಅರ್ಥಮಾಡಿಕೊಳ್ಳಬಹುದು.” ಭಕ್ತಿ ಯೋಗದಲ್ಲಿ ಇಲ್ಲದಿದ್ದರೆ ಸಂತೋಷದಿಂದ ಇರುವುದು ಸಾಧ್ಯವಿಲ್ಲ ಮತ್ತು ಕೃಷ್ಣನನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅಥವಾ ಕೃಷ್ಣನೊಂದಿಗೆ ಬಾಂಧವ್ಯ ಸಾಧ್ಯವಿಲ್ಲ. ಏವಂ ಪ್ರಸನ್ನ ಮನಸೋ ಭಗವದ್ ಭಕ್ತಿ ಯೋಗತಃ.
ನಾವು ಈ ಪ್ರವಚನವನ್ನು ಮಾನವ ಸಮಾಜದ ಒಳಿತಿಗಾಗಿ ನಡೆಸುತ್ತೇವೆ. ಸತತವಾಗಿ ಕೃಷ್ಣನ ಬಗೆಗೆ ಕೇಳುವುದು, ಕೃಷ್ಣನ ಬಗೆಗೆ ಮಾತನಾಡುವುದು, ಕೃಷ್ಣನನ್ನು ಕುರಿತು ಜಪಿಸುವುದು, ಕೃಷ್ಣನ ಬಗೆಗೆ ಆಸ್ವಾದಿಸುವುದು, ಕೃಷ್ಣನಿಗಾಗಿ ಕೆಲಸ ಮಾಡುವುದು, ಕೃಷ್ಣನಿಗಾಗಿ ಮಲಗುವುದು, ಕೃಷ್ಣನಿಗಾಗಿ ನಡೆಯುವುದು ಇವೆಲ್ಲದಕ್ಕೂ ಅವಕಾಶ ಕಲ್ಪಿಸುವುದೇ ಕೃಷ್ಣ ಪ್ರಜ್ಞೆ ಆಂದೋಲನದ ಉದ್ದೇಶ. ಕೃಷ್ಣನ ಸಂಬಂಧವಾಗಿ ನಾವು ಏನು ಮಾಡಿದರೂ ಅದು ಪುಣ್ಯವಾದುದು. ಪುಣ್ಯ ಶ್ರವಣ ಕೀರ್ತನ. ನಿರ್ಬಂಧಃ. ಕೃಷ್ಣ ಸಂಬಂಧೇ ಯುಕ್ತಂ ವೈರಾಗ್ಯಂ ಉಚ್ಯತೇ ಎಂದು ಶ್ರೀಲ ರೂಪ ಗೋಸ್ವಾಮಿಯವರು ಶಿಫಾರಸು ಮಾಡುತ್ತಾರೆ : “ಎಲ್ಲವನ್ನೂ ಕೃಷ್ಣ ಚಟುವಟಿಕೆಯೊಂದಿಗೆ, ಕೃಷ್ಣ ಪ್ರಜ್ಞೆಯೊಂದಿಗೆ ಜೋಡಿಸಿ. ಆಗ ನಮ್ಮ ಬದುಕು ಯಶಸ್ವಿಯಾಗುತ್ತದೆ.”
ಕೃಷ್ಣನು ನಿಮ್ಮ ಹೃದಯದಲ್ಲಿ ಕುಳಿತಿದ್ದಾನೆ. ನೀವು ಅವನ ಬಗೆಗೆ ತುಂಬ ಪ್ರಾಮಾಣಿಕವಾಗಿ ಇದ್ದೀರೆಂಬುದನ್ನು ನೋಡಿದಾಗ ಅವನು ನಿಮಗೆ ಸಹಾಯ ಮಾಡುತ್ತಾನೆ. ನಮ್ಮ ಹೃದಯದೊಳಗೆ ಅನೇಕ ಕಶ್ಮಲಗಳಿವೆ. ಆದರೆ ಕೃಷ್ಣನ ಬಗೆಗೆ ಕೇಳಲಾರಂಭಿಸಿದಂತೆಯೇ ಆ ಕಶ್ಮಲಗಳೆಲ್ಲ ತೊಳೆದುಹೋಗುತ್ತವೆ. ನಾವು ಈಗ ಭಗವದ್ಗೀತೆಯಲ್ಲಿ, ಕೃಷ್ಣನಿಂದಲೇ ಕೇಳುತ್ತಿದ್ದೇವೆ. ಕೃಷ್ಣನು ತನ್ನ ಬಗೆಗೆ ಮಾತನಾಡುತ್ತಿದ್ದಾನೆ. ಅವನು ಲೌಕಿಕ ಜಗತ್ತಿನ ಪರಿಸ್ಥಿತಿಯ ಬಗೆಗೆ ಮಾತನಾಡುತ್ತಿದ್ದಾನೆ. ಅವನು ಆಧ್ಯಾತ್ಮಿಕ ಲೋಕದ ಬಗೆಗೆ ಮಾತನಾಡುವನು. ಭಗವದ್ಗೀತೆಯಲ್ಲಿ ಎಲ್ಲವೂ ಇದೆ. ಆದುದರಿಂದ, ನೀವು ಕ್ರಮವಾಗಿ ಕೇಳಿದರೆ, ಅದೇ ನಿಮ್ಮ ಬದುಕಿನ ಯಶಸ್ಸಿನ ಆರಂಭ.
ವೇದಗಳನ್ನು ಶ್ರುತಿ, `ಕೇಳುವುದು’ ಎಂದು ಕರೆಯುತ್ತಾರೆ. ವೇದಗಳನ್ನು ಅರ್ಹ ವ್ಯಕ್ತಿಗಳಿಂದಲೇ ಕೇಳಬೇಕು. ಇದು ಶ್ರೀ ಚೈತನ್ಯ ಮಹಾಪ್ರಭುಗಳ ಶಿಫಾರಸು. ಸ್ಥಾನೇ ಸ್ಥಿತಾಃ ಶ್ರುತಿಗತಾಂ ತನು ವಾನ್ ಮನೋಭಿಃ. ಸಾಕ್ಷಾತ್ಕಾರ ಅಥವಾ ಭಗವಂತನ ಸಾಕ್ಷಾತ್ಕಾರದಲ್ಲಿ ಯಶಸ್ಸು ಸಾಧಿಸಲು ಶ್ರೀ ಚೈತನ್ಯರು ಶೀಫಾರಸು ಮಾಡುತ್ತಾರೆ, ಸ್ಥಾನೇ ಸ್ಥಿತಾಃ – “ಗೃಹಸ್ಥರಾಗಿ ಅಥವಾ ಬ್ರಾಹ್ಮಣರಾಗಿ ಸಂನ್ಯಾಸಿಯಾಗಿ ಅಥವಾ ವಾಣಿಜ್ಯೋದ್ಯಮಿ ಅಥವಾ ವೃತ್ತಿ ಪರ ಯಾವುದೇ ಆಗಿರಲಿ, ನಿಮ್ಮ ಸ್ಥಾನದಲ್ಲೇ ಇರಿ.” ಆದರೆ, ಶ್ರುತಿ ಗತಾಂ ತನು ವಾನ್ ಮನೋಭಿಃ – “ಕೃಷ್ಣನ ಬಗೆಗೆ ಕೇಳಲು ಪ್ರಯತ್ನಿಸಿ.” ಶ್ರುತಿ ಗತಾಂ ಎಂದರೆ “ಶ್ರುತ ಗ್ರಹಿಕೆ.” ತನು ವಾನ್ ಮನೋಭಿಃ – “ಮತ್ತು ನಿಮ್ಮ ದೇಹ, ಮಾತು ಮತ್ತು ಮನಸ್ಸನ್ನು ಕೃಷ್ಣ ಸೇವೆಯಲ್ಲಿ ತೊಡಗಿಸಲು ಪ್ರಯತ್ನಿಸಿ.”
ಯೇ ಪ್ರಾಯಶೋ ಅಜಿತ ಜೀತೋ ಅಪಿ ಅಸಿ. ಕೃಷ್ಣನ ಹೆಸರುಗಳಲ್ಲಿ ಅಜಿತ ಕೂಡ ಒಂದು. ಅಂದರೆ, “ಎಂದಿಗೂ ಯಾರೂ ಜಯಿಸಲಾರದವನು.” ಆದರೆ, ಸಾಕ್ಷಾತ್ಕಾರಗೊಂಡಿರುವ ಆತ್ಮದಿಂದ ಯಾರಾದರೂ ಯಾವುದೇ ಊಹಾಪೋಹಗಳಿಲ್ಲದೆ ವಿನಯದಿಂದ ಕೃಷ್ಣನ ಬಗೆಗೆ ಕೇಳಿದರೆ ಎಂದಾದರೊಂದು ದಿನ ಅಜಿತನನ್ನೇ ಜಯಿಸಬಹುದು.
ಕೃಷ್ಣನ ಬಗೆಗೆ ಕೇಳಲು ಎಲ್ಲರಿಗೂ ಅವಕಾಶ ನೀಡುವುದೆ ಕೃಷ್ಣ ಪ್ರಜ್ಞೆಯ ಉದ್ದೇಶ. ಆ ರೀತಿ ಕೇಳುವುದೇ ಮೊದಲ ಪ್ರಕ್ರಿಯೆ – ಶ್ರವಣಂ. ಕೃಷ್ಣನ ಬಗೆಗೆ ಚೆನ್ನಾಗಿ ಕೇಳಿದ ಮೇಲೆ ಕೃಷ್ಣನನ್ನು ಕುರಿತು ಮಾತನಾಡಬಹುದು. ವ್ಯಕ್ತಿಯು ಮಾತನಾಡಬೇಕು. ಕೃಷ್ಣನ ಬಗೆಗೆ ಚೆನ್ನಾಗಿ ಕೇಳಿದವರು ಕೃಷ್ಣನನ್ನು ಕುರಿತು ಮಾತನಾಡದೆ ಇರುವುದು ಸಾಧ್ಯವಿಲ್ಲ. ಅವರು ಮಾತನಾಡಬೇಕು, ಇಲ್ಲವೇ ಬೋಧಿಸಬೇಕು. ಕೇಳಬೇಕು ಮತ್ತು ಬೋಧಿಸಬೇಕು, ಯಾರ ಬಗೆಗೆ? ವಿಷ್ಣು ಅಥವಾ ಕೃಷ್ಣ.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ ಸೇವನಂ ।
ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮ ನಿವೇದನಂ ॥
“ವಿಷ್ಣುವಿನ ಬಗೆಗೆ ಕೇಳುವುದು ಮತ್ತು ಜಪಿಸುವುದು, ಅವನನ್ನು ಸ್ಮರಿಸುವುದು, ಅವನ ಪಾದ ಕಮಲಗಳಿಗೆ ಸೇವೆ ಗೈಯುವುದು, ಅವನನ್ನು ಆರಾಧಿಸುವುದು, ಅವನಿಗೆ ಪ್ರಾರ್ಥನೆ ಸಲ್ಲಿಸುವುದು, ಅವನ ಸೇವಕನಾಗುವುದು, ಅವನ ಮಿತ್ರನಾಗುವುದು ಮತ್ತು ಅವನಿಗೆ ಎಲ್ಲವನ್ನೂ ಅರ್ಪಿಸುವುದು.” ಕೃಷ್ಣ ಪ್ರಜ್ಞೆಯ ಈ ಎಂಟು ಪ್ರಕ್ರಿಯೆಗಳನ್ನು ಕೃಷ್ಣ ಪ್ರಜ್ಞೆ ಆಂದೋಲನದ ಸದಸ್ಯರು ಜಗತ್ತಿನಾದ್ಯಂತ ಹರಡುತ್ತಿದ್ದಾರೆ. ನಾವು, ಇಲ್ಲಿ, ಭಾರತದ ಮುಖ್ಯ ನಗರವಾದ ಮಂಬೈನಲ್ಲಿ ಕೇಂದ್ರವನ್ನು ಆರಂಭಿಸಿದ್ದೇವೆ. ನೀವೆಲ್ಲ ಪ್ರತಿ ದಿನ ಬಂದು ಅಧಿಕೃತ ಧರ್ಮ ಗ್ರಂಥಗಳಾದ ಭಗವದ್ಗೀತೆ, ಶ್ರೀಮದ್ ಭಾಗವತ, ವೇದಾಂತ ಸೂತ್ರ, ರಾಮಾಯಣ, ಮಹಾಭಾರತಗಳ ಆಧಾರಿತ ಕೃಷ್ಣ ಪ್ರಜ್ಞೆಯ ತತ್ತ್ವವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನಾವು ಕಟ್ಟು ಕಥೆ ಹೇಳುವುದಿಲ್ಲ. ಅಥವಾ ತಪ್ಪಾಗಿ ವ್ಯಾಖ್ಯಾನಿಸುತ್ತಿಲ್ಲ. ನಾವು ಭಗವದ್ಗೀತೆಯನ್ನು ಯಾವುದೇ ಸಿದ್ಧಾಂತಚ್ಯುತಿ ಇಲ್ಲದಂತೆ ಯಥಾ ರೂಪದಲ್ಲಿ ಇಡುತ್ತಿದ್ದೇವೆ.
ಈ ಗ್ರಹಿಕೆಯ ವಿಧಾನದ ಅವಕಾಶವನ್ನು ನಾವು ಸದುಪಯೋಗಪಡಿಸಿಕೊಂಡರೆ – ಆಗ ನಾವು ನಮ್ಮ ಹಿಂದಿನ ಎಲ್ಲ ಪಾಪ ಕರ್ಮಗಳಿಂದ ಕ್ರಮೇಣ ಮುಕ್ತರಾಗಬಹುದು. ಹೃದಿ ಅಂತಃ ಸ್ತೋ ಹಿ ಅಭದ್ರಾಣಿ. ಅಭದ್ರಾಣಿ ಎಂದರೆ “ನಮ್ಮ ಹೃದಯದಲ್ಲಿ ಅಶುಭ ವಸ್ತುಗಳು ಶೇಖರಿಸಿರುವುದು” ಎಂದರ್ಥ. ಕೃಷ್ಣ ಕೀರ್ತನೆ ಮಾಡಿದರೆ ನಮ್ಮ ಹೃದಯ ಶುದ್ಧವಾಗುವುದು. ಶ್ರೀ ಚೈತನ್ಯ ಮಹಾಪ್ರಭುಗಳು ಶಿಫಾರಸು ಮಾಡುತ್ತಾರೆ, ಚೇತೋದರ್ಪಣ ಮಾರ್ಜನಂ : ಹೃದಯವು ಒಂದು ಕನ್ನಡಿಯಂತೆ ಮತ್ತು ಅದನ್ನು ಹರೇ ಕೃಷ್ಣ ಮಂತ್ರವನ್ನು ಜಪಿಸುವ ಮೂಲಕ ಸ್ವಚ್ಛಗೊಳಿಸಬಹುದು. ಹೃದಯವು ಶುದ್ಧವಾದ ಕೂಡಲೇ ಕೃಷ್ಣನು ಏನು, ನಾನು ಏನು, ಕೃಷ್ಣನೊಂದಿಗೆ ನನ್ನ ಸಂಬಂಧವೇನು ಮತ್ತು ಕೃಷ್ಣನೊಂದಿಗಿನ ಬಾಂಧವ್ಯದಲ್ಲಿ ನಾನು ಹೇಗೆ ವರ್ತಿಸಬೇಕು ಎಂಬುದೆಲ್ಲವನ್ನೂ ಅರ್ಥಮಾಡಿಕೊಳ್ಳಬಹುದು. ಇವುಗಳ ಗ್ರಹಿಕೆಯೇ ಬದುಕಿನ ಪರಿಪೂರ್ಣತೆ.