ಹೃದಯದಲ್ಲಿ ಕೃಷ್ಣ

ಸದಾ ಭಗವಂತನ ಸಹವಾಸದಲ್ಲಿರುವುದರಿಂದ ಶುದ್ಧ ಭಕ್ತರು ಯಾವುದೇ ಸ್ಥಳವನ್ನು ಪರಿಶುದ್ಧಗೊಳಿಸಬಲ್ಲರು.

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1974ರ ಜೂನ್‌ 1 ರಂದು ಸ್ವಿಡ್ಜರ್‌ಲೆಂಡ್‌ನ ಜಿನೀವಾದಲ್ಲಿ ಮಾಡಿದ ಉಪನ್ಯಾಸ.

ಭವದ್‌ ವಿಧಾ ಭಾಗವತಾಸ್‌ ತೀರ್ಥ ಭೂತಾಃ ಸ್ವಯಂ ವಿಭೋ ।

ತೀರ್ಥೀ ಕುರ್ವಂತಿ ತೀರ್ಥಾನಿ ಸ್ವಾಂತಃ ಸ್ಥೇನ ಗದಾಭೃತಾ ॥

“ಓ ನನ್ನ ಪ್ರಭುವೆ, ತಮ್ಮಂತಹ ಭಕ್ತರು ನಿಜವಾಗಿ ಪುಣ್ಯಕ್ಷೇತ್ರಗಳ ಮೂರ್ತರೂಪವೇ ದಿಟ. ಏಕೆಂದರೆ ನಿಮ್ಮ ಹೃದಯದಲ್ಲಿ ದೇವೋತ್ತಮ ಪುರುಷನನ್ನು ತಾಳಿರುತ್ತೀರಿ. ತಾವು ಎಲ್ಲ ಸ್ಥಳಗಳನ್ನು ತೀರ್ಥಕ್ಷೇತ್ರಗಳಾಗಿ ಪರಿವರ್ತಿಸುತ್ತೀರಿ.” (ಶ್ರೀಮದ್‌ ಭಾಗವತ 1.13.10)

ತೀರ್ಥ ಎಂದರೆ `ಯಾತ್ರೆಯ ಪವಿತ್ರ ಸ್ಥಳ’. ಪ್ರತಿಯೊಂದು ಧರ್ಮದಲ್ಲಿಯೂ ಪವಿತ್ರ ಕ್ಷೇತ್ರದ ಯಾತ್ರೆ ಕೈಗೊಳ್ಳುವ ಪದ್ಧತಿ ಇದೆ. ಭಾರತದಲ್ಲಿ ಅನೇಕ ಪವಿತ್ರ ಕ್ಷೇತ್ರಗಳಿವೆ – ಗಯಾ, ಪ್ರಯಾಗ, ಮಥುರಾ, ವೃಂದಾವನ, ಹರಿದ್ವಾರ, ರಾಮೇಶ್ವರಂ, ಜಗನ್ನಾಥ ಪುರಿ, ನವದ್ವೀಪ ಮುಂತಾದವು. ಕೆಲವು ತುಂಬ ಪ್ರಮುಖವೆನಿಸಿಕೊಂಡಿವೆ ಮತ್ತು ಅನೇಕವು ಪ್ರಖ್ಯಾತಿಹೊಂದಿಲ್ಲ. ಅದೇ ರೀತಿ ಮುಸ್ಲಿಮರು ಮೆಕ್ಕಾ, ಮದೀನಗಳಿಗೆ ಹೋಗುತ್ತಾರೆ. ಕ್ರಿಶ್ಚಿಯನ್ನರು ಜೆರೂಸಲೆಂಗೆ ಹೋಗುತ್ತಾರೆ.

ಮಾನವ ಸಮಾಜದಲ್ಲಿ ಧಾರ್ಮಿಕ ಪದ್ಧತಿಗಳಿರಬೇಕು. ಇಲ್ಲವಾದರೆ ಅದು ಪ್ರಾಣಿ ಸಮಾಜ. ಪ್ರತಿಯೊಂದು ಧರ್ಮದಲ್ಲಿಯೂ ಪವಿತ್ರ ಸ್ಥಳಗಳಿಗೆ ಯಾತ್ರೆ ಹೋಗಬೇಕೆಂದು ಶಿಫಾರಸು ಮಾಡಲಾಗಿದೆ.

ಪ್ರಥಮ ವರ್ಗದ ಭಕ್ತರು ಸ್ವತಃ ತೀರ್ಥ ಕ್ಷೇತ್ರಗಳು. ಅವರು ಹೋದಲ್ಲೆಲ್ಲ ಆ ಸ್ಥಳವನ್ನು ಯಾತ್ರೆಯ ಪವಿತ್ರ ಸ್ಥಳವನ್ನಾಗಿ ಮಾಡುತ್ತಾರೆ. ಈ ಶ್ಲೋಕದಲ್ಲಿ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಮಹಾರಾಜ ಯುಧಿಷ್ಠಿರನು ಇದನ್ನು ವಿದುರನಿಗೆ ಹೇಳುತ್ತಾನೆ. ವಿದುರನು ಯಾತ್ರೆಯಿಂದ ಆಗಷ್ಟೇ ಹಿಂದಿರುಗಿದ್ದ. ವಿದುರನು ಅರಸು ಮನೆತನಕ್ಕೆ ಸೇರಿದ್ದರೂ ದುರ್ಯೋಧನನು ಕೆಟ್ಟದಾಗಿ ನಡೆದುಕೊಂಡಿದ್ದರಿಂದ ಗೃಹ ತ್ಯಜಿಸಿ ಹೊರಟು ಹೋಗಿದ್ದನು.

ವಿದುರನಿಗೆ ತನ್ನ ಅಣ್ಣ ಧೃತರಾಷ್ಟ್ರನೆಂದರೆ ಅಚ್ಚುಮೆಚ್ಚು. ಆದುದರಿಂದಲೇ ಅವನು ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಧೃತರಾಷ್ಟ್ರನಿಗೆ ಒಳ್ಳೆಯ ಸಲಹೆ ನೀಡುತ್ತಿದ್ದ, “ನನ್ನ ಪ್ರೀತಿಯ ಸೋದರ, ನೀನು ಏಕೆ ಪಾಂಡವರ ವಿರುದ್ಧ ಪಿತೂರಿ ಮಾಡುತ್ತಿರುವೆ?” ಆದರೆ ಧೃತರಾಷ್ಟ್ರನು ತನ್ನ ತಮ್ಮನ ಬುದ್ಧಿವಾದವನ್ನು ಕೇಳುತ್ತಿರಲಿಲ್ಲ.

“ಪಾಂಡವರ ನಾಶದಲ್ಲಿ ಪಾಲ್ಗೊಳ್ಳಬೇಡ ಎಂದು ಚಿಕ್ಕಪ್ಪ ವಿದುರನು ಸದಾ ನನ್ನ ತಂದೆಯ ಮನವೊಲಿಸುತ್ತಿರುತ್ತಾನೆ” ಎಂದು ಧೃತರಾಷ್ಟ್ರನ ಪುತ್ರ ದುರ್ಯೋಧನನು ಯೋಚಿಸಿದ.

ಆದುದರಿಂದ ದುರ್ಯೋಧನನು ವಿದುರನನ್ನು ಟೀಕಿಸಲು ಅವನ ವಿರುದ್ಧ ಕಠಿಣ ಮಾತುಗಳನ್ನಾಡಿದ. ವಿದುರನು ರಾಜನ ಮಗನಾದರೂ ರಾಣಿ ಪುತ್ರನಾಗಿರಲಿಲ್ಲ. ಅವನು ಸೇವಕಿಯ ಪುತ್ರ. ಮೊದಲೆಲ್ಲ ರಾಣಿಯರಿಗೆ ಅನೇಕ ಸೇವಕಿಯರು ಇರುತ್ತಿದ್ದರು. ಕೆಲವು ಬಾರಿ ಅವರು ರಾಜನಿಂದ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಅಂತಹ ಮಕ್ಕಳನ್ನು ದಾಸಿ ಪುತ್ರ ಎಂದು ಕರೆಯುತ್ತಿದ್ದರು. ಆದರೆ ಅವರು ಉತ್ತರಾಧಿಕಾರದಿಂದ ರಾಜನಿಂದ ಏನೂ ಪಡೆಯುವಂತಿರಲಿಲ್ಲ.

ವಿದುರನು ಹಾಗೇ ಹುಟ್ಟಿದ್ದು. ಅವನು ರಾಣಿಗೆ ಹುಟ್ಟಲಿಲ್ಲ. ಆದರೆ ಸೇವಕಿಯಿಂದ ಜನ್ಮ ತಳೆದ. ಆದರೆ ಅವನ ಅಣ್ಣ ಧೃತರಾಷ್ಟ್ರನಿಗೆ ವಿದುರನೆಂದರೆ ತುಂಬ ಇಷ್ಟವಿತ್ತು. ಅವನೇ ವಿದುರನನ್ನು ಬೆಳೆಸಿದ. ಅವನಿಗೆ ಮದುವೆ ಮಾಡಿದ ಮತ್ತು ಸಾಕಷ್ಟು ಆಸ್ತಿ ನೀಡಿದ. ಧೃತರಾಷ್ಟ್ರನು ವಿದುರನ ಬಗೆಗೆ ಕರುಣೆಯಿಂದ ಇದ್ದ. ಆದುದರಿಂದ ವಿದುರನೂ ಅಣ್ಣನಿಗೆ ಕೃತಜ್ಞನಾಗಿದ್ದ. ಅವನಿಗೆ ಒಳ್ಳೆಯ ಸಲಹೆಯನ್ನೂ ಕೊಡುತ್ತಿದ್ದ. ವಿದುರನು ಶ್ರೇಷ್ಠ ಭಕ್ತ.

ಕೌರವರು ಮತ್ತು ಪಾಂಡವರ ಮಧ್ಯೆ ಕೌಟುಂಬಿಕ ವೈಷಮ್ಯದ ಕಾರಣ ವಿದುರನು ಮನೆ ತೊರೆದನು. ಕುರುಕ್ಷೇತ್ರ ಯುದ್ಧದ ಅನಂತರ, ಎಲ್ಲವೂ ಮುಗಿದ ಮೇಲೆ, ಅವನು ವಾಪಸಾದ. ಆಗಲೂ ಅವನಿಗೆ ತನ್ನ ಅಣ್ಣನ ಮೇಲೆ ಪ್ರೀತಿ ಇತ್ತು. ಹೀಗಾಗಿ ಅವನಿಗೆ ಬುದ್ಧಿವಾದ ಹೇಳಿದ, “ನನ್ನ ಪ್ರೀತಿಯ ಸೋದರ, ಯಾರಿಗಾಗಿ ನೀನು ಷಡ್ಯಂತ್ರ ಹೂಡಿದೆಯೋ ಆ ನಿನ್ನ ಮಕ್ಕಳೂ ಸೇರಿದಂತೆ ಎಲ್ಲವೂ ಅಂತ್ಯಗೊಂಡಿವೆ. ನೀನು ನಾಚಿಗೆ ಇಲ್ಲದೆ ಬದುಕಿದ್ದೀಯೆ. ನೀನು ಪಾಂಡವರ ಬಗೆಗೆ ಕೆಟ್ಟದಾಗಿ ನಡೆದುಕೊಂಡೆ. ಅನೇಕ ರೀತಿಯಲ್ಲಿ ಅವರನ್ನು ಕೊಲ್ಲಲು ಬಯಸಿದೆ. ಯುದ್ಧ ನಡೆಯಿತು. ನಿನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಎಲ್ಲರೂ ಸತ್ತಿದ್ದಾರೆ. ಆದರೂ ನೀನು ಇನ್ನೂ ನಿನ್ನ ಸೋದರನ ಮಗನ ಮನೆಯಲ್ಲಿ ಲಜ್ಜಾಸ್ಪದವಾಗಿ ಇರುವೆ. ನಿನಗೆ ನಾಚಿಕೆಯೇ ಇಲ್ಲ.”

ಈ ರೀತಿ ವಿದುರನು ತನ್ನ ಅಣ್ಣನನ್ನು ಟೀಕಿಸಿದನು.

ಆಗ ಧೃತರಾಷ್ಟ್ರನು ಶರಣಾದನು : “ನನ್ನ ಪ್ರೀತಿಯ ಸೋದರನೆ, ನಾನೇನು ಮಾಡಬೇಕೆಂದು ಬಯಸುವೆ?”

ವಿದುರನೆಂದ, “ಈ ಕೂಡಲೇ ನನ್ನೊಂದಿಗೆ ಬಾ. ಇಲ್ಲಿರಬೇಡ.”

ಹೀಗೆ ಧೃತರಾಷ್ಟ್ರನು ಅರಮನೆ ತ್ಯಜಿಸಿದ, ತಪಸ್ಸ್ಯಾಚರಣೆ ಮಾಡಿದ ಮತ್ತು ಮುಕ್ತಿ ಪಡೆದ.

ಇಲ್ಲಿ, ಯುದ್ಧದ ಅನಂತರ ವಿದುರನು ವಾಪಸಾದಾಗ ಅವನ ಸೋದರನ ಪುತ್ರ ಯುಧಿಷ್ಠಿರನು ಅವನನ್ನು ಬರಮಾಡಿಕೊಂಡನು. “ನಮ್ಮ ಚಿಕ್ಕಪ್ಪ ಯಾವಾಗಲೂ ನಮ್ಮ ಪರವಾಗಿಯೇ ಇದ್ದರು. ನಮ್ಮನ್ನು ರಕ್ಷಿಸಿದರು” ಎಂಬುವುದು ಯುಧಿಷ್ಠಿರನಿಗೆ ತಿಳಿದಿತ್ತು. ಅವನು ವಿದುರನನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸಿದನು.

ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ವಿದುರನು ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗಿದ್ದನು. ತನ್ನ ಆಧ್ಯಾತ್ಮಿಕ ಗುರು ಮೈತ್ರೇಯನ ಜೊತೆ ಮಾತನಾಡಿದ್ದನು. ಅವನು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದುದರಿಂದ ಯುಧಿಷ್ಠಿರನು ನುಡಿದ, “ನನ್ನ ಪ್ರೀತಿಯ ಚಿಕ್ಕಪ್ಪ, ನೀನೆಂತಹ ಶ್ರೇಷ್ಠ ಭಕ್ತನೆಂದರೆ ನೀನು ಪವಿತ್ರ ಸ್ಥಳಗಳಿಗೆ ಹೋಗುವ ಅಗತ್ಯವೇ ಇಲ್ಲ. ಏಕೆಂದರೆ, ನೀನು ಎಲ್ಲಿ ವಾಸಿಸುವಿಯೋ ಅದು ಯಾತ್ರಾಸ್ಥಳವಾಗುವುದು.”

ನರೋತ್ತಮ ದಾಸ ಠಾಕುರ ಅವರು ಹಾಡುತ್ತಾರೆ, ತೀರ್ಥ ಯಾತ್ರಾ ಪರಿಶ್ರಮ, ಕೇವಲ ಮನೇರ ಭ್ರಮ : “ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗುವುದು ಕೇವಲ ಮನಸ್ಸಿನ ತೃಪ್ತಿಗಾಗಿ.” ವಾಸ್ತವವಾಗಿ, ವ್ಯಕ್ತಿಯು ಕೃಷ್ಣನ ಪಾದ ಕಮಲಗಳಿಗೆ ಸಂಪೂರ್ಣವಾಗಿ ಶರಣಾಗತನಾದರೆ ಅವನೆಷ್ಟು ಉನ್ನತ ಸ್ಥಾನಕ್ಕೆ ಏರುತ್ತಾನೆಂದರೆ ಅವನು ಎಲ್ಲೆಲ್ಲಿ ಇರುವನೋ ಅವೆಲ್ಲ ಪುಣ್ಯ ಕ್ಷೇತ್ರಗಳಾಗುತ್ತವೆ. ಕೃಷ್ಣನ ಪರಿಶುದ್ಧ ಭಕ್ತರು ಸದಾ ಕೃಷ್ಣನ ಬಗೆಗೇ ಚಿಂತಿಸುತ್ತಾರೆ. ಪ್ರೇಮಾಂಜನಚ್ಛುರಿತ ಭಕ್ತಿ ವಿಲೋಚನೇನ ಸಂತಃ ಸದೈವ ಹೃದಯೇಶು ವಿಲೋಕಯಂತಿ. ಅವರಿಗೆ ಒಂದು ಕ್ಷಣವೂ ಕೃಷ್ಣನನ್ನು ಮರೆಯುವುದು ಸಾಧ್ಯವಿಲ್ಲ. ಅವರು ಕೃಷ್ಣನನ್ನು ಹೊಂದಿದ್ದಾರೆ. ಆದುದರಿಂದ, ಕೃಷ್ಣನು ಭಕ್ತರೊಡನೆ ಇರುವುದರಿಂದ, ಭಕ್ತನು ಎಲ್ಲೆಲ್ಲಿಗೆ ಹೋಗುತ್ತಾನೋ ಅವೆಲ್ಲ ಪುಣ್ಯ ಕೇತ್ರವಾಗುತ್ತದೆ.

ಪುಣ್ಯ ಸ್ಥಳಗಳ ಶುದ್ಧೀಕರಣ

ಸಾಮಾನ್ಯ ಜನರು ಪುಣ್ಯ ಕ್ಷೇತ್ರಗಳಿಗೆ ಯಾತ್ರೆ ಹೋಗುತ್ತಾರೆ ಮತ್ತು ತಮ್ಮ ಪಾಪ ಕರ್ಮಗಳನ್ನು ಅಲ್ಲಿ ಬಿಟ್ಟು ಬರುತ್ತಾರೆ ಎಂದು ಹೇಳಲಾಗುತ್ತದೆ. ಪುಣ್ಯ ಕ್ಷೇತ್ರಗಳಿಗೆ ಹೋಗುವ ಉದ್ದೇಶಗಳಲ್ಲಿ ಅದೂ ಒಂದು. “ನನ್ನ ಜೀವನದಲ್ಲಿ ನಾನು ಏನೇನು ಪಾಪ ಕರ್ಮಗಳನ್ನು ಮಾಡಿರುವೆನೋ ಅವುಗಳನ್ನು ಈಗ ಇಲ್ಲಿ ಬಿಟ್ಟು ಹೋಗುವೆ ಮತ್ತು ನಾನು ಶುದ್ಧಗೊಳ್ಳುವೆ” ಎಂದು ಜನರು ಯೋಚಿಸುತ್ತಾರೆ.

ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಶುದ್ಧವಾಗುವುದು ನಿಜ. ಆದರೆ ತಮ್ಮ ಬದುಕನ್ನು ಹೇಗೆ ಶುದ್ಧವಾಗಿಟ್ಟುಕೊಳ್ಳಬೇಕೆಂಬುದು ಸಾಮಾನ್ಯ ಜನರಿಗೆ ತಿಳಿಯದು. ಅವನು ಮನೆಗೆ ವಾಪಸಾಗುತ್ತಾನೆ ಮತ್ತು ಅದೇ ಪಾಪ ಕರ್ಮಗಳನ್ನು ಮಾಡುತ್ತಾನೆ. ಕ್ರಿಶ್ಚಿಯನ್ನರು ವಾರಕ್ಕೊಮ್ಮೆ ಚರ್ಚ್‌ಗೆ ಹೋಗಬೇಕು ಮತ್ತು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಏಕೆಂದರೆ, ಅವರು ಅದೇ ಪಾಪ ಕರ್ಮಗಳನ್ನು ಮಾಡುತ್ತಲೇ ಇರುತ್ತಾರೆ. ಇದು ಒಳ್ಳೆಯದಲ್ಲ. ಒಮ್ಮೆ ಶುದ್ಧವಾಗಿಬಿಟ್ಟರೆ ನೀವು ಶುದ್ಧವಾಗಿಯೇ ಉಳಿಯಬೇಕು.

ಯಾತ್ರಾ ಸ್ಥಳಗಳು ಸಾಮಾನ್ಯ ಜನರ ಪಾಪ ಕರ್ಮಗಳಿಂದ ತುಂಬಿ ಹೋದಾಗ ಸಂತ ಪುರುಷನು ಅಲ್ಲಿಗೆ ಹೋಗಿ ಆ ಪವಿತ್ರ ಸ್ಥಳವನ್ನು ಶುದ್ಧೀಕರಿಸುವನು. ಭವದ್‌ ವಿದಾ ಭಾಗವತಾಃ. ಭಾಗವತ ಎಂದರೆ “ಭಗವಂತನ ಜೊತೆ ಬಾಂಧವ್ಯ ಉಳ್ಳವನು” ಎಂದು ಅರ್ಥ. ಭಗವಾನ್‌ ಅನ್ನು ಭಾಗವತ ಶಬ್ದದೊಂದಿಗೆ ಕೂಡಿಸಲಾಗಿದೆ. ದೇವೋತ್ತಮನಾದ ಭಗವಾನ್‌ ಜೊತೆಗಿನ ಯಾವುದೇ ಬಾಂಧವ್ಯವನ್ನು ಭಾಗವತ ಎನ್ನುವರು. ಈ ಗ್ರಂಥವನ್ನು (ಶ್ರೀಮದ್‌ ಭಾಗವತ) ಭಾಗವತ ಎಂದು ಕರೆಯುತ್ತಾರೆ. ಏಕೆಂದರೆ ಇದರಲ್ಲಿ ದೇವೋತ್ತಮ ಪರಮ ಪುರುಷನ ಲೀಲೆಗಳನ್ನು ಬಿಟ್ಟರೆ ಇನ್ಯಾವುದರ ಬಗೆಗೂ ಬೇರೇನೂ ಇಲ್ಲ.

ಎರಡು ರೀತಿಯ ಭಾಗವತವಿದೆ : ಭಾಗವತ ಗ್ರಂಥ ಮತ್ತು ವ್ಯಕ್ತಿ ಭಾಗವತ. ಭಾಗವತವನ್ನು ಭಾಗವತರು ಪಠಿಸಬೇಕು. ಆಗ ಅದು ಚೆನ್ನ.

ಭಾಗವತಾಃ ತೀರ್ಥ ಭೂತಃ. ಭಾಗವತರು ಆಗಲೇ ಪರಿಶುದ್ಧ ಪುಣ್ಯ ಕ್ಷೇತ್ರಗಳು. ಮಹದ್‌ ವಿಚಲನಂ ನೃಣಾಂ ಗೃಹಿಣಾಂ ದೀನ ಚೇತಸಾಂ. ಅವರು ಕರುಣಾಮಯಿಗಳಾಗಿ- ರುವುದರಿಂದ ಮಾನವರನ್ನು ಶುದ್ಧೀಕರಿಸಲು ಜಗತ್ತಿನಾದ್ಯಂತ ಯಾತ್ರೆ ಕೈಗೊಳ್ಳುವರು.

ಲೌಕಿಕ ವ್ಯಕ್ತಿಗಳು ಯೋಚಿಸುತ್ತಾರೆ, “ಸುಖಕರವಾಗಿ ಜೀವಿಸುವುದು, ನನ್ನ ಕುಟುಂಬ ಅಥವಾ ಸಮಾಜ ಅಥವಾ ರಾಷ್ಟ್ರಕ್ಕೆ ಎಲ್ಲ ಸೌಲಭ್ಯವನ್ನು ನೀಡುವುದು, ಜೀವನೋಪಾಯಕ್ಕೆ ಗಳಿಸುವುದು ಮತ್ತು ಇಂದ್ರಿಯ ತೃಪ್ತಿಗೆ ಖರ್ಚು ಮಾಡುವುದು ಇವೆಲ್ಲ ನನ್ನ ಕರ್ತವ್ಯ.” ಅದು ಅವರ ತತ್ತ್ವ. ಅವರಿಗೆ ಅದಕ್ಕಿಂತ ಹೆಚ್ಚಿನದೇನೂ ಗೊತ್ತಿಲ್ಲ.

ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಜನರು ಇಂದ್ರಿಯ ತೃಪ್ತಿಗಾಗಿ ಲೌಕಿಕ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರು. ಐಹಿಕ ಜಗತ್ತಿನಲ್ಲಿ ಹೇಗೆ ಸುಖವಾಗಿರಬಹುದೆಂಬುದು ಅವರಿಗೆ ಗೊತ್ತು. ಆದರೆ ಅವರ ಬಳಿ ಆಧ್ಯಾತ್ಮಿಕ ಮಾಹಿತಿ ಇಲ್ಲ. ಅದು ಪಾಶ್ಚಿಮಾತ್ಯ ನಾಗರಿಕತೆಯಲ್ಲಿನ ದೋಷ. ಜನರಿಗೆ ಭಗವಂತನ ಬಗೆಗೆ ಅಸ್ಪಷ್ಟ ಕಲ್ಪನೆ ಇದೆ. ಅಥವಾ ಬಹುಮಟ್ಟಿಗೆ ಕಲ್ಪನೆಯೇ ಇಲ್ಲ. ಆದರೆ ಮಾನವನ ಜೀವನವು ಲೌಕಿಕ ಬದುಕಿನಲ್ಲಿ ತುಂಬ ಸುಖವಾಗಿರಲೆಂದೇ ಇಲ್ಲ. ಇತರ ಅಗತ್ಯವೆಂದರೆ ನಾವು ಭಗವಾನ್‌ನನ್ನು ಅರಿಯಬೇಕು, ನಾವು ಭಾಗವತರಾಗಬೇಕು.

ಜನರು ಕಲಿಯಬೇಕು

ಭಗವಾನ್‌ ಕುರಿತಂತೆ ಜನರಿಗೆ ಹೆಚ್ಚುಕಮ್ಮಿ ಏನೂ ಮಾಹಿತಿ ಇಲ್ಲದಿರುವುದರಿಂದ ಅವರು ಕೃಷ್ಣ ಪ್ರಜ್ಞೆ ಆಂದೋಲನದಿಂದ ಸ್ವಲ್ಪ ಕಲಿಯಬೇಕು. ಆದುದರಿಂದ ನಾವು ಅನೇಕ ಒಳ್ಳೆಯ ಪುಸ್ತಕಗಳನ್ನು ಪ್ರಕಟಿಸಿದ್ದೇವೆ. ಜನರು ಈ ಪುಸ್ತಕಗಳನ್ನು ಓದಬೇಕು ಮತ್ತು ಕೃಷ್ಣ ತತ್ತ್ವ, ಕೃಷ್ಣ ವಿಜ್ಞಾನ, ದೇವ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಯತ್ನಿಸಬೇಕು ಎಂಬುದು ಕೃಷ್ಣನ ಆಸೆ. ಆಗ ಅವರ ಬದುಕು ಪರಿಪೂರ್ಣ. ಇಲ್ಲವಾದರೆ, ಲೌಕಿಕ ಸುಖದ ಈ ಏಕ ಮಾರ್ಗ ನಾಗರಿಕತೆಯು ಅವರಿಗೆ ನೆರವಾಗದು. ನೀವು ನಿಮ್ಮ ನಗರ ಅಥವಾ ಮನೆಯನ್ನು ಚೆನ್ನಾಗಿ, ಸ್ವಚ್ಛವಾಗಿ ಮತ್ತು ಲೌಕಿಕವಾಗಿ ಎಲ್ಲ ಸೌಕರ್ಯಗಳಿರುವಂತೆ ರೂಪಿಸಿದರೂ ನಿಮಗೆ ಅಲ್ಲಿರಲು ಅವಕಾಶವಿರುವುದಿಲ್ಲ. ಆ ದೋಷವನ್ನು ಜನರು ಅರ್ಥಮಾಡಿಕೊಳ್ಳುವುದಿಲ್ಲ. ನೀವು ಈ ದೇಹವನ್ನು ಬಿಟ್ಟ ಮೇಲೆ, ನಿಮಗೆ ಮುಂದೆ ಎಂತಹ ದೇಹ ಸಿಗುವುದೆಂಬ ಬಗ್ಗೆ ಖಚಿತತೆ ಇರುವುದಿಲ್ಲ. ಲೌಕಿಕ ಕಾನೂನಿನಂತೆ ಖಚಿತತೆ ಇರುತ್ತದೆ. ಆದರೆ ಜನರಿಗೆ ಗೊತ್ತಿಲ್ಲ.

ಲೌಕಿಕ ಪ್ರಕೃತಿಯ ಗುಣಗಳೊಂದಿಗಿನ ಈಗಿನ ಸಹವಾಸದಂತೆ ವ್ಯಕ್ತಿಯ ಮುಂದಿನ ದೇಹ ತಯಾರಾಗುತ್ತದೆ. ಲೌಕಿಕ ಪ್ರಕೃತಿಯ ಮೂರು ಗುಣಗಳಿವೆ : ಸತ್ತ್ವ, ರಜಸ್‌ ಮತ್ತು ತಮಸ್‌ ಗುಣ. ಸತ್ತ್ವ ಗುಣದೊಂದಿಗೆ ನೀವು ಸಂಪರ್ಕವಿಟ್ಟುಕೊಂಡರೆ, ನಿಮ್ಮನ್ನು ಉನ್ನತ ಮಟ್ಟದ ಬದುಕಿಗೆ ಬಡ್ತಿ ಮಾಡಲಾಗುವುದು. ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾಃ ಆದುದರಿಂದ, ನೀವು ಲೌಕಿಕ ಬದುಕನ್ನು ಆನಂದಿಸಬಹುದು, ಆದರೆ ನೀವು ಬ್ರಾಹ್ಮಣ ಸಂಸ್ಕೃತಿಯ ಗುಣ ಮಟ್ಟಕ್ಕಾದರೂ ನಿಮ್ಮನ್ನು ನೀವು ಇಟ್ಟುಕೊಳ್ಳಬೇಕು. ಆಗ ನೀವು ನಿಮ್ಮನ್ನು ಕೆಳ ದರ್ಜೆಗೆ ಇಳಿಸಿಕೊಳ್ಳುವುದಿಲ್ಲ ಎಂಬ ಖಚಿತತೆ ಇರುತ್ತದೆ. ನಿಮಗೆ ಉನ್ನತ ಗ್ರಹ ವ್ಯವಸ್ಥೆಯಲ್ಲಿ ಉನ್ನತ ಜೀವನ ಮಟ್ಟ ಲಭಿಸುತ್ತದೆ : ಜನಲೋಕ, ಮಹರ್ಲೋಕ, ತಪೋಲೋಕ, ಸತ್ಯಲೋಕ.

ಆದರೆ ನೀವು ಇರುವಂತೆಯೇ ಇದ್ದರೆ, ನೀವು ಭೂರ್ಲೋಕ ಎಂಬ ಗ್ರಹ ವ್ಯವಸ್ಥೆಯಲ್ಲಿಯೇ ಇರುವಿರಿ. ಇದಕ್ಕೆ ಮೇಲಿನದು ಭುವರ್‌ಲೋಕ, ಅದರ ಮೇಲಿನದು ದೇವಲೋಕ.

ನೀವು ತಾಮಸ ಗುಣದ ಸಹವಾಸದಲ್ಲಿದ್ದರೆ ಅಥವಾ ಮೂರ್ಖತನದಿಂದಿದ್ದರೆ ಆಗ ನೀವು ಪತನಗೊಳ್ಳುವಿರಿ. ಜಘನ್ಯ ಗುಣ ವೃತ್ತಿಸ್ಥಾ ಅಧೋ ಗಚ್ಛಂತಿ ತಾಮಸಾಃ. ತಾಮಸಿಕ ಎಂದರೆ “ಹೇಸಿಗೆ ಅಥವಾ ಜುಗುಪ್ಸೆ”, ಮತ್ತು ಅಂತಹ ಗುಣವು ನಾಲ್ಕು ವಿಷಯಗಳನ್ನು ಹೊಂದಿರುತ್ತದೆ – ಅನೈತಿಕ ಲೈಂಗಿಕ ಕ್ರಿಯೆ, ಮದ್ಯ ಸೇವನೆ, ಮಾಂಸ ಸೇವನೆ ಮತ್ತು ಜೂಜು. ನೀವು ತಾಮಸ ಗುಣದ ಸಹವಾಸದಲ್ಲಿದ್ದರೆ, ಆಗ ನೀವು ಅಧಃ ಆಗುತ್ತೀರಿ. ಅಧಃ ಎಂದರೆ `ಪತನ / ಕೆಳಗಿಳಿಯುವುದು’. ನೀವು ಕೆಳ ಮಟ್ಟದ ಗ್ರಹ ವ್ಯವಸ್ಥೆಗೆ ಪತನಹೊಂದುವಿರಿ.

ಲೌಕಿಕ ಜಗತ್ತಿನಲ್ಲಿ ಸುಖವಾಗಿರಲು ಪ್ರಯತ್ನಿಸುವ ನಿಮ್ಮನ್ನು ನಾವು ಟೀಕಿಸುವುದಿಲ್ಲ. ಅದನ್ನು ಮಾಡಿ. ಆದರೆ ತಾಮಸ ಗುಣದ ಸಹವಾಸ ಮಾಡಬೇಡಿ. ಅದು ಅಪಾಯ. ನೀವು ಗೃಹಸ್ಥ ಅಥವಾ ಬ್ರಹ್ಮಚಾರಿ ಅಥವಾ ಸಂನ್ಯಾಸಿ ಜೀವನ ನಡೆಸುತ್ತಿರಬಹುದು, ಕೊನೆ ಪಕ್ಷ ಸತ್ತ್ವ ಗುಣದೊಂದಿಗಾದರೂ ಇರಿ. ಆಗ ನಿಮ್ಮ ಸ್ಥಾನ ಸರಿಯಾಗಿರುತ್ತದೆ. ಇಲ್ಲವಾದರೆ ಅದು ಅಪಾಯ.

ಆಸಕ್ತಿ ಇಲ್ಲ

ಪಶ್ಚಿಮದ ಜನರು ಅದನ್ನು ಮಾಡುವುದಿಲ್ಲ. ಅವರು ತಮ್ಮನ್ನು ತಾಮಸ ಗುಣದಲ್ಲಿಯೇ ಇಟ್ಟುಕೊಂಡಿರುತ್ತಾರೆ. ಅವರದು ತುಂಬ ಅಪಾಯಕಾರಿಯಾದ ನಾಗರಿಕತೆ. ಕೊನೆ ಪಕ್ಷ ನೀವು, ಯೂರೋಪಿನವರು ಮತ್ತು ಅಮೆರಕದವರು, ಇದನ್ನು ತಿಳಿದಿರಬೇಕು ಮತ್ತು ನೀವು ಈ ಜ್ಞಾನವನ್ನು ಹಂಚಬೇಕು. ಜನರನ್ನು ರಕ್ಷಿಸುವುದು ನಿಮ್ಮ ಕರ್ತವ್ಯ. ಅವರಿಗೆ ಈ ಜ್ಞಾನದ ಅರಿವು ಇಲ್ಲ. ಸತ್ತ್ವ ಗುಣದ ಬಗೆಗೆ ಮಾತು ಮತ್ತು ಪಾಪ ಕರ್ಮಗಳ ಬಗೆಗೆ ಎಚ್ಚರಿಕೆಯ ನುಡಿಗಳಿದ್ದರೆ, ತತ್‌ಕ್ಷಣ ಅವರು ಅಲ್ಲಿಂದ ಹೊರಟು ಹೋಗುತ್ತಾರೆ. ನಿನ್ನೆ ಒಬ್ಬ ವ್ಯಕ್ತಿ ಬಂದಿದ್ದರು. ನಾನು ಪಾಪ ಪುಣ್ಯ ಕರ್ಮಗಳ ಬಗೆಗೆ ಮಾತನಾಡಲು ಆರಂಭಿಸಿದೊಡನೆ ಅವರು “ನನಗೆ ಇನ್ನೊಂದು ಕೆಲಸವಿದೆ” ಎಂದು ತತ್‌ಕ್ಷಣ ಹೊರಟುಹೋದರು.

ಈಗಿನ ಜನರ ಸ್ಥಿತಿ ಅದು. ಉಪದೇಶೋ ಹಿ ಮೂರ್ಖಾನಾಂ ಪ್ರಕೋಪಾಯ ನ ಶಾಂತಯೇ. ನೀವು ಮೂರ್ಖನಿಗೆ ಒಳ್ಳೆಯ ಬೋಧನೆ ನೀಡಿದರೆ ಅವನು ಕೋಪಗೊಳ್ಳುತ್ತಾನೆ. ಅವನು ಅದನ್ನು ಸ್ವೀಕರಿಸುವುದಿಲ್ಲ. ಪಯಃ ಪಾನಂ ಭುಜಂಗಾನಾಂ ಕೇವಲಂ ವಿಷ ವರ್ಧನಂ. ಆ ಪರಿಸ್ಥಿತಿಯನ್ನು ಹಾವಿಗೆ ಹಾಲು ನೀಡುವುದಕ್ಕೆ ಹೋಲಿಸಲಾಗಿದೆ. ಹಾವಿಗೆ ಹಾಲೆಂದರೆ ತುಂಬ ಇಷ್ಟ. ಕೆಲವು ಬಾರಿ ಹಾವಾಡಿಗನು ಹಾಲಿನೊಂದಿಗೆ ಬಾಳೆ ಹಣ್ಣು ಸೇರಿಸಿ ಹಾವಿಗೆ ನೀಡುತ್ತಾನೆ. ಆದರೆ ಫಲ ಏನು? ಅದನ್ನು ಸೇವಿಸಿ ಹಾವು ಶಕ್ತಿಯುತಗೊಂಡ ಕೂಡಲೇ ಅದರ ಹಲ್ಲು ವಿಷದಿಂದ ತುಂಬುತ್ತದೆ. ಹಾವು ಕಚ್ಚಿದಾಗ ವಿಷ ಹೊರಹೊಮ್ಮುತ್ತದೆ ಮತ್ತು ಕಚ್ಚಲ್ಪಟ್ಟ ವ್ಯಕ್ತಿ ಅಥವಾ ಪ್ರಾಣಿ ಸಾಯುತ್ತದೆ.

ನಿಮಗೇನಾದರೂ ರೋಗದ ಸೋಂಕಿದ್ದರೆ ನೀವು ಅನುಭವಿಸಲೇ ಬೇಕು. ಇದು ವಾಸ್ತವಾಂಶ. ಇದು ವೈಜ್ಞಾನಿಕ. ಅದೇ ರೀತಿ, ಒಂದು ನಿರ್ದಿಷ್ಟ ಗುಣದ ಸೋಂಕಿದ್ದರೆ ನೀವು ಅದರಂತೆ ಅನುಭವಿಸಬೇಕು. ನೀವು ತಾಮಸ ಗುಣದಲ್ಲಿದ್ದರೆ ನಿಮಗೆ ಪ್ರಾಣಿ ದೇಹ ಸಿಗುತ್ತದೆ.

ಆದುದರಿಂದ ಪ್ರತಿಯೊಬ್ಬರೂ ಪರಿಶುದ್ಧ ಭಕ್ತರಾಗಬೇಕು, ಪ್ರಥಮ ದರ್ಜೆ ಭಕ್ತರಾಗಬೇಕು. ಈ ಯುಗದಲ್ಲಿ ಅದನ್ನು ಸುಲಭಗೊಳಿಸಲಾಗಿದೆ. ಸುಮ್ಮನೆ ನಾಲ್ಕು ನಿಷೇಧಗಳಿಂದ (ಮಾಂಸ ಸೇವನೆ ಇಲ್ಲ, ಮದ್ಯಪಾನವಿಲ್ಲ, ಅನೈತಿಕ ಲೈಂಗಿಕ ಕ್ರಿಯೆ ಇಲ್ಲ ಮತ್ತು ಜೂಜಾಟವಿಲ್ಲ) ಪರಿಶುದ್ಧರಾಗಿ ಮತ್ತು ಹರೇ ಕೃಷ್ಣ ನಾಮವನ್ನು ಜಪಿಸಿ. ಆಗ ನೀವು ಪ್ರಥಮ ದರ್ಜೆ ಭಕ್ತರಾಗುವಿರಿ. ನೀವು ಎಲ್ಲಿಗೇ ಹೋಗಿ, ಏನೇ ಮಾತನಾಡಿ, ಎಲ್ಲಿಯೇ ಆಸೀನರಾಗಿ, ನೀವು ಆ ಸ್ಥಳವನ್ನು ಪರಿಶುದ್ಧಗೊಳಿಸಬಲ್ಲಿರಿ.

ನಿಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಅಖಂಡವಾಗಿ ಇಟ್ಟುಕೊಂಡಿರಿ. ಹರೇ ಕೃಷ್ಣ ಮಂತ್ರ ಪಠಣವು ಕೃಷ್ಣನು ಸದಾ ನಿಮ್ಮ ಹೃದಯದಲ್ಲಿರುವಂತೆ ಮಾಡುತ್ತದೆ.

ಕೃಷ್ಣ ಪ್ರಜ್ಞೆಯು ದುಬಾರಿ ಅಲ್ಲವೇ ಅಲ್ಲ. ನೀವು ಕೃಷ್ಣನಿಗೆ ಉನ್ನತ ಸಿಂಹಾಸನವನ್ನು ಮಾಡಬೇಕಾಗಿಲ್ಲ. ನೀವು ಕಲ್ಪಿಸಿಕೊಳ್ಳಬಹುದು, “ನನ್ನ ಹೃದಯದಲ್ಲಿ ನಾನು ವಜ್ರದ ಸಿಂಹಾಸನ ಇರಿಸಿರುವೆ. ಮತ್ತು ಕೃಷ್ಣನು ಅದರ ಮೇಲೆ ಕುಳಿತಿದ್ದಾನೆ.” ಅಂತಹ ಆಲೋಚನೆಯನ್ನು ಕೃಷ್ಣನು ಒಪ್ಪುತ್ತಾನೆ. “ನಾನು ವಜ್ರದ ಸಿಂಹಾಸನ ಇಟ್ಟಿದ್ದೇನೆ, ಅತ್ಯಂತ ಅಮೂಲ್ಯವಾದ ಸಿಂಹಾಸನ. ಏಕೆಂದರೆ ಕೃಷ್ಣನು ಬರುತ್ತಿದ್ದಾನೆ. ಅವನು ಅದರ ಮೇಲೆ ಕುಳಿತುಕೊಳ್ಳುವನು.” ಅಂತಹ ಆಲೋಚನೆ ಹುಸಿಯಲ್ಲ. ಅದು ವಾಸ್ತವ. ನೀವು ನಿಮ್ಮ ಹೃದಯದಲ್ಲಿ ಅಂತಹ ಸನ್ನಿವೇಶವನ್ನು ಸೃಷ್ಟಿಸಿ. “ಈಗ ಕೃಷ್ಣನು ಆಸೀನನಾದನು. ನಾನು ಅವನ ಪಾದಗಳನ್ನು ಗಂಗಾ ಜಲದಿಂದ ತೊಳೆಯುವೆ. ಯಮುನಾ ಜಲದಿಂದ ತೊಳೆಯುವೆ. ಈಗ ನಾನು ವೈಭವದ ವಸ್ತ್ರಗಳಿಂದ ಅವನ ಉಡುಪನ್ನು ಬದಲಿಸುವೆ. ಅನಂತರ ಆಭರಣಗಳಿಂದ ಅವನನ್ನು ಅಲಂಕರಿಸುವೆ. ಅನಂತರ ನಾನು ಅವನಿಗೆ ಸೇವಿಸಲು ಏನನ್ನಾದರೂ ನೀಡುವೆ.” ನೀವು ಈ ರೀತಿ ಸುಮ್ಮನೆ ಆಲೋಚಿಸಬಹುದು. ಇದು ಧ್ಯಾನ. ಸ್ವಂತಃ ಸ್ಥೇನ ಗದಾಭೃತಾ ಇದು ಎಷ್ಟು ಚೆನ್ನಾಗಿದೆ. ನೀವು ಎಲ್ಲಿಯಾದರೂ ಕೂರಬಹುದು ಮತ್ತು ಕೃಷ್ಣನು ನಿಮ್ಮ ಹೃದಯದಲ್ಲಿ ಆಸೀನನಾಗಿದ್ದಾನೆ ಎಂದು ಯೋಚಿಸಬಹುದು ಮತ್ತು ನೀವು ಅವನನ್ನು ಎಷ್ಟು ಚೆನ್ನಾಗಿ ಬರಮಾಡಿಕೊಳ್ಳುತ್ತಿದ್ದೀರ. ಇದೆಷ್ಟು ಸುಲಭ.

ನೀವು ಸುಮ್ಮನೆ ಉನ್ನತ ಭಕ್ತಿ ಸೇವೆಯಲ್ಲಿ ಸದಾ ಕೃಷ್ಣನನ್ನು ನಿಮ್ಮ ಹೃದಯದಲ್ಲಿ ಧರಿಸಿ ಮತ್ತು ಹರೇ ಕೃಷ್ಣ ಜಪಿಸಿ ಮತ್ತು ಕೃಷ್ಣನ ಬಗೆಗೆ ಚಿಂತಿಸಿ. ಆಗ ನೀವು ಎಲ್ಲೆಲ್ಲಿಗೆ ಹೋಗುವಿರೋ ಆ ಸ್ಥಳವನ್ನು ಪರಿಶುದ್ಧಗೊಳಿಸುವಿರಿ. ಇದು ವಾಸ್ತವ. ಇದನ್ನು ಭಾಗವತದಲ್ಲಿ ಸ್ಪಷ್ಟಪಡಿಸಲಾಗಿದೆ. ಭಕ್ತರಾಗಿ ನಿಮ್ಮ ಸ್ಥಾನದಲ್ಲಿಯೇ ಉಳಿಯಲು ಪ್ರಯತ್ನಿಸಿ ಮತ್ತು ಕಣ್ಣು ಕೋರೈಸುವ ಲೌಕಿಕ ಕಲ್ಲು ಮತ್ತು ಮರದಿಂದ ಆಕರ್ಷಿತರಾಗುವ ಈ ಮೂರ್ಖರಿಗೆ ಬೋಧಿಸಲು ಪ್ರಯತ್ನಿಸಿ. ಅವರಿಗೆ ಸ್ವಲ್ಪ ಜ್ಞಾನ ಸಿಗಲಿ ಮತ್ತು ನಿಮ್ಮ ದೇಶದ ಜನರಿಗೆ, ನಿಮ್ಮ ಸಮಾಜಕ್ಕೆ, ನಿಮ್ಮ ಕುಟುಂಬಕ್ಕೆ ಪ್ರಯೋಜನ ಉಂಟುಮಾಡಿ.

ಈ ಲೇಖನ ಶೇರ್ ಮಾಡಿ