ಕೃಷ್ಣನ ಕೊಳಲಿನ ಕರೆ

– ಶಶಿಕಲಾ ಶ್ರೀಧರ್‌

ಭಾರತದ ರಾಷ್ಟ್ರಕವಿ ಶ್ರೀ ರವೀಂದ್ರನಾಥ ಠಾಕುರರು, “Only let me make my mind simple and straight like a flute of reed for thee to fill with thy music” ಎಂದರೆ “ನಮ್ಮ ಮನಸ್ಸು ಭಗವಂತನ ಮುರಳಿಯಂತೆ ಸರಳವಾಗಿರಬೇಕು. ಮಾತ್ರವಲ್ಲ ಅದರಲ್ಲಿ ಭಗವಂತನ ನಾದ ತುಂಬಿರಬೇಕು” ಎನ್ನುತ್ತಾರೆ.

ಇದು ಎಂತಹ ಸುಂದರ ಉಪಮೆ! ಶ್ರೀಕೃಷ್ಣನ ಕೈಯಲ್ಲಿರುವ ಕೊಳಲು ನಾವಾಗಬೇಕು. ಹಾಗಾದರೆ ಈ ಕೊಳಲಿನ ಮಹಿಮೆಯಾದರೂ ಏನು? ಅವನ ಕೈಯನ್ನು ಅಲಂಕರಿಸಲು ನಾವು ಎಂತಹ ಕೊಳಲಾಗಬೇಕು?

ಸಂಗೀತ ಸಾಮ್ರಾಜ್ಯದ ದಿವ್ಯ ವಾದ್ಯಗಳಲ್ಲಿ ವೀಣಾ, ವೇಣು ಮತ್ತು ಮೃದಂಗ ಅತ್ಯಂತ ಪ್ರಾಚೀನವಾದುವು ಹಾಗೂ ಇವು ಭಗವತತ್ತ್ವವನ್ನು ನೇರವಾಗಿ ಸಾರುತ್ತಿರುವುವು ಇವುಗಳಲ್ಲಿ ವೇಣು ಅತ್ಯಂತ ವೈಶಿಷ್ಟ್ಯ ಹೊಂದಿ ಜಗದೊಡೆಯ ಶ್ರೀಕೃಷ್ಣನ ಕರಕಮಲಗಳನ್ನಲಂಕರಿಸಿ ದಿವ್ಯತೆಯನ್ನು ಹೊಂದಿ ಆ ಪರಮ ದೇವೋತ್ತಮನ ಮಧುರವಾದ ಅಧರಸ್ಪರ್ಶದಿಂದ ಅಮರತ್ವ ಪಡೆಯಿತು.

ಇಂತಹ ಪವಿತ್ರವಾದ್ಯ ಕೊಳಲಿನ ಸ್ಥೂಲ ಹಾಗೂ ಸೂಕ್ಷ್ಮ ಪರಿಚಯ ಮಾಡಿಕೊಳ್ಳುವುದೇ ಈ ಲೇಖನದ ಮುಖ್ಯ ಉದ್ದೇಶ.

ಸ್ವರೋತ್ಪತ್ತಿಯಾಗುವ ಸಾಧನಗಳಲ್ಲಿ ಮುಖ್ಯವಾದುವು ಕೊಳಲು, ವೀಣೆ ಮತ್ತು ಮನುಷ್ಯನ ಶಾರೀರ. ಲಲಿತ ಮಧುರ ಹಾಗೂ ಸ್ನಿಗ್ಧ ಈ ಮೂರು ಗುಣಗಳಿಂದ ಕೂಡಿರುವ ಕೊಳಲು ಅತ್ಯಂತ ಪ್ರಶಸ್ತವಾದುದು. ಸಂಗೀತ ರತ್ನಾಕರದಲ್ಲಿ ಬರುವ ಕೊಳಲಿನ ಮಹತ್ವ ಹೀಗಿದೆ:

ವಂಶವೀಣಾ ಶರೀರಾಣಿ ತ್ರಯೋಮಿಸ್ವರ ಹೇತವಃ |

ಲಲಿತೋ ಮಧುರ ಸ್ನಿಗ್ಥಃ ತೇಷು ವಂಶಃ ಪ್ರಶಸ್ಯತೇ ||

ರಾಮಾಯಣ, ಮಹಾಭಾರತ, ಭಾಗವತಾದಿ ಇತರ ಪುರಾಣಗಳಲ್ಲೂ ಪ್ರಾಚೀನವಾದ ದೇಗುಲಗಳ ಶಿಲ್ಪಕಲೆಯಲ್ಲೂ ಭಾರತದ ಪ್ರಾಚೀನ ವಸ್ತು ಸಂಗ್ರಹಾಲಯಗಳಲ್ಲೂ ನಮಗೆ ಮುಖ್ಯವಾಗಿ ತಿಳಿಯುವ ವಿಷಯವೆಂದರೆ, ಅನೇಕ ಪ್ರಾಚೀನ ವಾದ್ಯಗಳು ಅದೇ ಮೂಲ ರೂಪಗಳಲ್ಲಿ ಈಗಲೂ ಬಳಕೆಯಲ್ಲಿವೆ, ಇವುಗಳಲ್ಲಿ ಮುಖ್ಯವಾದುವು ವೀಣಾ, ವೇಣು ಮತ್ತು ಮೃದಂಗ.

ಮೃದಂಗ ಕೈಲಾಸದಲ್ಲಿ ನಂದಿ ಭೃಂಗಿಯರ ಹಸ್ತಗಳನ್ನಲಂಕರಿಸಿದರೆ, ವೀಣೆ ಬ್ರಹ್ಮಲೋಕದಲ್ಲಿ ಸಾಕ್ಷಾತ್ ಶಾರದೆಯ ಕರ ಕಮಲಗಳನ್ನಲಂಕರಿಸಿತು. ಪರಮ ದೇವೋತ್ತಮ ಪುರುಷ ಕೃಷ್ಣ ತನ್ನ ಕೋಮಲ ಕರಗಳಿಂದ ಮುರಳಿಯನ್ನು ಹಿಡಿದು ತನ್ನ ಅಧರಾಮೃತವನ್ನು ಸುರಿಸಿ ಅದನ್ನು ಅಮರವಾಗಿಸಿದ.

ಶಾಸ್ತ್ರೀಯ ಸಂಗೀತದಲ್ಲಿ ಮಾಧುರ್ಯ ಮತ್ತು ಕೋಮಲತ್ವವನ್ನು ಎತ್ತಿ ತೋರಿಸಿ ಹೃದಯದ ಭಾವನೆಗಳನ್ನು ಸುಂದರವಾಗಿ ಪ್ರಕಟಿಸಿ ಶೃಂಗಾರಾದಿ ನವರಸಗಳನ್ನು ಅತ್ಯದ್ಭುತವಾಗಿ ಹೊರಗೆಡಹಲು ಸಾಧ್ಯವಾದ ಅಮರವಾದ್ಯ ಕೊಳಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಮಧುರ ಮೋಹನ ಮುರಳೀ.

ಇಂತಹ ಸುಂದರ ಸುಮಧುರ ಭಾರತೀಯ ವಾದ್ಯದ ಒಂದು ಇತಿಹಾಸ ಪರಂಪರೆಯನ್ನು ಅದರ ಉಪಯೋಗವನ್ನು ಮತ್ತು ಜೀವಿಗಳ ಹೃದಯದ ಮೇಲೆ ಅದು ಬೀರುವ ಪ್ರಭಾವವನ್ನು ಅರಿಯಲು ಪ್ರಯತ್ನಿಸೋಣ.

ಕೊಳಲು ಸಂಗೀತವಾದ್ಯಗಳಲ್ಲೆಲ್ಲಾ ಅತ್ಯಂತ ಸರಳವಾದ ವಾದ್ಯ. ಅದು ಅಗ್ಗವಾಗಿ ತಯಾರು ಮಾಡುವ ವಾದ್ಯವಾದರೂ ಅದರ ಗುಣ ಅತ್ಯಂತ ಮೌಲ್ಯವುಳ್ಳದ್ದು. ಇದು ಬಹಳ ಸೂಕ್ಷ್ಮವಾದ ವಾದ್ಯ. ಬಹಳ ಸೂಕ್ಷ್ಮವಾದ ಅಲಗುಗಳು ಮತ್ತು ರಾಗಗಳ ಅತಿ ಸೂಕ್ಷ್ಮವಾದ ವಿಷಯಗಳನ್ನು ಕೊಳಲಿನಲ್ಲಿ ಹೊರ ಮೂಡಿಸಬಹುದು.

ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೂ, ಒಂದು ಸ್ಥಾಯಿಯಿಂದ ಮತ್ತೊಂದು ಸ್ಥಾಯಿಗೆ ಹಾರುವಿಕೆ ಮತ್ತು ಕಂಪನಗಳು ಕೊಳಲಿನಲ್ಲಿ ಸುಲಭ ಸಾಧ್ಯ. ಧ್ವನಿಯ ಶುದ್ಧತೆ, ಆಕರ್ಷಣೆ ಮತ್ತು ಇಂಪು ಇವುಗಳ ವಿಷಯದಲ್ಲಿ ಕೊಳಲಿಗೆ ಸರಿಯಾಗುವ ಮತ್ತೊಂದು ವಾದ್ಯವಿಲ್ಲ.

ಕೊಳಲಿನ ಉತ್ಪತ್ತಿ : ಇತಿಹಾಸ

ಪ್ರಾಚೀನ ಕಾಲದಲ್ಲಿ ಕಾಡಿನಲ್ಲಿ ವಾಸಿಸುತ್ತಿದ್ದ ಜನರು ಬಿದಿರು ಕಾಡಿನಲ್ಲಿ ಆಗಾಗ ಸುಮಧುರ ಧ್ವನಿಯನ್ನು ಕೇಳುತ್ತಿದ್ದರು. ಈ ಮಧುರ ಧ್ವನಿ ಹೇಗೆ ಉತ್ಪತ್ತಿಯಾಗುತ್ತಿದೆ ಎಂಬುದನ್ನು ಪರಿಶೀಲಿಸಿದಾಗ, ಬಿದಿರುಗಳಲ್ಲಿ ಕ್ರಿಮಿ ಕೀಟಗಳು ಮಾಡಿದ ರಂಧ್ರಗಳ ಮೂಲಕ ಗಾಳಿಯು ಪ್ರವೇಶಿಸಿದಾಗ ಆ ಧ್ವನಿ ಉತ್ಪತ್ತಿಯಾಗುತ್ತಿದೆ ಎಂಬ ವಿಷಯ ತಿಳಿಯಿತು.

ಕಾಲ ಕ್ರಮೇಣ ಅವರು ಅಂತಹ ಬಿದಿರುಗಳಲ್ಲಿ ತಾವೇ ರಂಧ್ರಗಳನ್ನು ಮಾಡಿ ಅದರೊಳಗೆ ತಾವೇ ಬಾಯಿಂದ ಊದಿ ಧ್ವನಿಯನ್ನುಂಟು ಮಾಡುವುದನ್ನು ಕಲಿತರು. ಇದು ಕೊಳಲಿನ ಉತ್ಪತ್ತಿಯ ಬಗ್ಗೆ ಒಂದು ವಿಶ್ಲೇಷಣೆ.

ಪುರಾಣದಲ್ಲಿ ಬರುವ ಮತ್ತೊಂದು ಕಥೆ ಹೀಗಿದೆ

ಕೃಷ್ಣಾವತಾರದ ಪೂರ್ವದಲ್ಲಿ ‘ವೇಣು’ ಎಂಬ ಕನ್ಯೆ ಕಾರಣಾಂತರಗಳಿಂದ ಋಷಿಗಳ ಶಾಪಕ್ಕೆ ಗುರಿಯಾಗಿ ಪ್ರಾಯಶ್ಚಿತ್ತಕ್ಕಾಗಿ ಅಗ್ನಿ ಪ್ರವೇಶ ಮಾಡುವಾಗ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿದಳು. ಅವಳ ಭಕ್ತಿಗೆ ಮೆಚ್ಚಿದ ಪರಮ ಪುರುಷನು ಕೃಷ್ಣಾವತಾರದಲ್ಲಿ ಭಗವಂತನ ಕರಸ್ಪರ್ಶದಿಂದ ಅವಳಿಗೆ ಪಾಪ ಪರಿಹಾರವೆಂದು ಹೇಳುತ್ತಾನೆ.

ಮುಂದೆ ದ್ವಾಪರ ಯುಗದಲ್ಲಿ ಈ ವೇಣು ಗೋಕುಲದಲ್ಲಿ ಕೃಷ್ಣರ ವಾಸಸ್ಥಾನದ ಸಮೀಪದಲ್ಲೇ ಬಿದಿರು ಮೆಳೆಯಾಗಿ ಹುಟ್ಟಿದಳು, ಕೃಷ್ಣನು ತನ್ನ ಗೆಳೆಯರೊಡನೆ ಗೋವುಗಳನ್ನು ಕಾಯಲು ಹೋದಾಗ ಕೃಷ್ಣ ಆ ಗೋಪಾಲರಿಗೆ ಒಂದು ಕೌತುಕವನ್ನು ತೋರಿಸುವುದಾಗಿ ಹೇಳಿ ಆ ಬಿದಿರನ್ನು ಕಡಿದು ತಂದು ಏಳು ರಂಧ್ರಗಳನ್ನು ಮಾಡಿ ‘ವೇಣು’ವಿನ ಪೂರ್ವಕೃತ ಪಾಪಗಳೆಲ್ಲವನ್ನು ಸುಟ್ಟು ಅದನ್ನು ಸುಂದರ ಕೊಳಲಾಗಿ ಮಾರ್ಪಡಿಸಿ, ಸುಮಧುರ ಸ್ವರಗಳನ್ನು ಹೊರಡಿಸುತ್ತಾ ಚರಾಚರ ಪ್ರಾಣಿಗಳೆಲ್ಲವನ್ನು ಆನಂದ ಸಾಗರದಲ್ಲಿ ಮುಳುಗಿಸಿದನೆಂದು ಹೇಳುತ್ತಾರೆ. ಎಲ್ಲ ಪಾಪಗಳಿಂದ ಮುಕ್ತಳಾದ ಆ ಜೀವಿಯು ಅವನಿಗೆ ಅತ್ಯಂತ ಪ್ರಿಯಳಾದ ಕಾರಣ ಆ ವೇಣುವನ್ನು ಸರ್ವಕಾಲವೂ ತನ್ನ ಬಳಿಯೇ ಇರಿಸಿಕೊಂಡಿದ್ದನು.

ಹೀಗೆ ಶ್ರೀಕೃಷ್ಣನು ಈ ವಾದ್ಯವನ್ನು ನುಡಿಸಿ ಇದರ ಮಹತ್ವವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾನೆ. ಹಾಗೂ ತನ್ನ ಭಕ್ತರಿಂದ ವೇಣುಗಾನಲೋಲ, ಮುರಳೀಗಾನ ವಿನೋದ, ಪಿಳ್ಳಂಗೋವಿಯ ಚೆಲ್ವಕೃಷ್ಣ ಕೊಳಲನೂದುವ ಚದುರ, ವಂಶೀನಿನಾದಶ್ಯಿಸೋ, ಮುರಳೀ ಮೋಹನ ಇವೇ ಮುಂತಾದ ಮಧುರ ನಾಮಗಳಿಂದ ಕರೆಯಲ್ಪಟ್ಟು ಪೂಜಿಸಲ್ಪಡುತ್ತಾನೆ.

ವಿಧ ವಿಧವಾದ ಕೊಳಲುಗಳು

ಶಾರ್ಙ್ಗದೇವನ ಸಂಗೀತ ರತ್ನಾಕರದಲ್ಲೂ, ಮತಂಗ ಮುನಿಯ ಬೃಹದ್ದೇಶೀಯಲ್ಲಿಯೂ 15 ವಿಧವಾದ ಕೊಳಲುಗಳನ್ನು ಹೆಸರಿಸಿದೆ. ಅವುಗಳಾವುವೆಂದರೆ ಏಕವೀರ, ಉಮಾಪತಿ, ತ್ರಿಪುರುಷ ಚತುರ್ಮುಖ, ಪಂಚವಸ್ತ್ರ, ಷಣ್ಮುಖ, ಮುನಿ, ವಸು, ನಾಗೇಂದ್ರ, ಮಹಾನಂದ, ರುದ್ರ, ಆದಿತ್ಯ, ಮನು, ಕಲಾನಿಧಿ, ಅಷ್ಟದಶಾಂಗುಲ. ತಮಿಳು ಗ್ರಂಥ ಶಿಲಪ್ಪದಿಕಾರದಲ್ಲಿ, ಕೊನೈ ಕುಳಲ್ ಅಂಬರ್ ಕುಳಲ್ ಮತ್ತು ಮುಳ್ಳೈ ಕುಳಲ್ ಎಂಬುದಾಗಿ ಮೂರು ವಿಧಗಳ ಕೊಳಲನ್ನು ಹೇಳುತ್ತಾರೆ.

ಪಾಶ್ಚಾತ್ಯ ಸಂಗೀತದಲ್ಲಿ ಒಂಬತ್ತು ವಿಧವಾದ ಕೊಳಲುಗಳಿವೆ. ಅವುಗಳ ಹೆಸರುಗಳು ಹೀಗಿವೆ.

(1) Pickdu (2) Transverse (3) Side blow (4) Concert (5) Beek (6) Verticle (7) Croff (8) Direct (9) Fipple

ಕೊಳಲನ್ನು ತಯಾರಿಸುವುದು ಹೇಗೆ?

ಭರತ ಖಂಡದ ಕೊಳಲು ಒಂದು ಉದ್ದವಾದ ಒಂದೇ ಸಮನಾಗಿ ಕೊರೆದಿರುವ ರಂಧ್ರಗಳನ್ನುಳ್ಳ, ಒಂದು ತುದಿಯಲ್ಲಿ ಮುಚ್ಚಲ್ಪಟ್ಟು ಇನ್ನೊಂದು ತುದಿ ತೆರೆದಿರುವ ಒಂದು ಬೊಂಬಿನ ಕೊಳವೆ.

ಕೊಳಲನ್ನು ಬಿದಿರು, ದಂತ, ಗಂಧದ ಮರ, ರಕ್ತ ಚಂದನ, ಕಗ್ಗಲಿ, ಕರೀಮರ, ಬೆಳ್ಳಿ, ಚಿನ್ನ ಮತ್ತು ಕಂಚು ಇವುಗಳಿಂದ ತಯಾರಿಸಬಹುದು. ಆದರೆ ಬಿದಿರಿನಿಂದ ಮಾಡಿದ ಕೊಳಲಿನಲ್ಲಿ ಅತ್ಯುತ್ತಮವಾದ ನಾದ ಹೊರಡುವುದರಿಂದ ಎಲ್ಲರೂ ಬಿದಿರಿನ ಕೊಳಲನ್ನೇ ಉಪಯೋಗಿಸುತ್ತಾರೆ.

ಕೊಳಲನ್ನು ತಯಾರು ಮಾಡಲು ಬೇಕಾದ ಬಿದಿರು ಕೊಳವೆಯು ನೇರವಾಗಿಯೂ ಮಧ್ಯೆ ಗಂಟು, ಡೊಂಕು, ಸೀಳುಗಳು ಇಲ್ಲದೆ, ಜೀರು ದುಂಬಿಗಳಿಂದ ತೂತು ಮಾಡಲ್ಪಡದೆ, ಸಮವಾಗಿರಬೇಕು. ಬಿದಿರು ನೆರಳಿನಲ್ಲಿ ಚೆನ್ನಾಗಿ ಒಣಗಿದ ಮೇಲೆ ಅವುಗಳಲ್ಲಿ ಮುಖ ರಂಧ್ರ ಮತ್ತು ಉಳಿದ ಎಂಟು ತಾರ ರಂಧ್ರಗಳನ್ನು ಮಾಡುತ್ತಾರೆ.

ಈ ಕೊಳವೆಯ ಮುಖರಂಧ್ರದ ಸಮೀಪ ಒಂದು ತುದಿಯನ್ನು ಕಾರ್ಕು, ಮೇಣ, ಮುಂತಾದವುಗಳಿಂದ ಮುಚ್ಚುವ ಬದಲು, ಅದು ಬಿದಿರಿನ ಸಹಜವಾದ ಗಿಣ್ಣಿನಿಂದಲೇ ಕೂಡಿದ್ದರೆ ಇಂತಹ ಕೊಳಲಿನ ಇಂಪು ಮತ್ತೂ ಹೆಚ್ಚುತ್ತದೆ.

ಈ ರೀತಿ ತಯಾರಾದ ಕೊಳಲನ್ನು ಅಡ್ಡವಾಗಿ ಮುಖದ ಅಧರಗಳ ಮೇಲಿಟ್ಟುಕೊಂಡು ಮುಖರಂಧ್ರದ ಮೂಲಕ ಗಾಳಿಯ ಪ್ರವಾಹವು ಒಳಗೆ ಹೋಗುವಂತೆ ಊದುವುದರ ಮೂಲಕ ಕೊಳಲಿನಲ್ಲಿ ಧ್ವನಿ ಬರುತ್ತದೆ. ಅನಂತರ ಏಳು ರಂಧ್ರಗಳನ್ನು ಎಡಗೈನ ತರ್ಜನಿ, ಮಧ್ಯಮ ಮತ್ತು ಅನಾಮಿಕ ಬೆರಳುಗಳು ಮತ್ತು ಬಲಗೈನ ತರ್ಜನಿ, ಮಧ್ಯಮ, ಅನಾಮಿಕ ಮತ್ತು ಕಿರು ಬೆರಳುಗಳಿಂದ ಮುಚ್ಚಿತೆರೆಯುತ್ತಾ ಸ್ವರಗಳನ್ನು ತರಿಸಬೇಕು.

ಇದನ್ನು ಮಂದ್ರ, ಮಧ್ಯ ಮತ್ತು ತಾರಸ್ಥಾಯಿಗಳಲ್ಲಿ ಅಭ್ಯಾಸ ಮಾಡಬೇಕು. ನುಡಿಸುವಾಗ ಬಹಳ ಕಷ್ಟಪಟ್ಟು ಊದಿ ಧ್ವನಿಯನ್ನುಂಟುಮಾಡಬಾರದು ಆದಷ್ಟು ಸೌಖ್ಯವಾಗಿ ಊದಿ ಇಂಪಾದ ನಾದವನ್ನು ಹೊರಡಿಸುವವರು ಉತ್ತಮ ವೈಣಿಕನೆಂದು ಕರೆಯಲ್ಪಡುತ್ತಾನೆ.

ಕೊಳಲಿನ ಸಾಧನೆ-ಅಭ್ಯಾಸ

ಆಧ್ಯಾತ್ಮಿಕ ಸಾಧನೆಯನ್ನು ಹೇಗೆ ದೃಢವಾದ ನಿಶ್ಚಯದಿಂದ ತಾಳ್ಮೆಯಿಂದ ಎಡೆಬಿಡದೆ ನಿತ್ಯ ಕಾಲದಲ್ಲಿ ಮಾಡುತ್ತೇವೆಯೋ ಇದರಂತೆಯೇ ಚೆನ್ನಾಗಿ ಕಲಿಯಬೇಕೆಂಬ ದೃಢ ನಿಶ್ಚಯದಿಂದ ಸಮಾಧಾನದಿಂದ ಶಿಸ್ತುಬದ್ಧಾಗಿ ಕೊಳಲಿನ ಸಾಧನೆ ನಡೆಸಬೇಕು.

ಪ್ರಾರಂಭದಲ್ಲಿ ಸರಿಯಾದ ಒಂದೇ ಸಮನಾದ ನಯವಾದ ಧ್ವನಿ ಬರಲು ಅನೇಕ ದಿನಗಳ ಅಭ್ಯಾಸ ನಡೆಸಬೇಕು. ಇದು ಬರುವಾಗ ಇದರೊಡನೆಯೇ ಬರುವ ಕರ್ಕಶ ಧ್ವನಿಯು ಹೋಗಬೇಕಾದರೆ ತಿಂಗಳು ಗಟ್ಟಲೆ ಅಭ್ಯಾಸ ಮಾಡಬೇಕಾಗುತ್ತದೆ. ಪ್ರತಿದಿನವೂ ಶಿಸ್ತಿನಿಂದ ಕಾಲಕ್ಕೆ ಸರಿಯಾಗಿ ನಿಯಮದಿಂದ ಅಭ್ಯಾಸ ಮಾಡಬೇಕು.

ಕೊಳಲನ್ನು ನುಡಿಸುವವನಿಗೆ ಸಂಗೀತದ ಸ್ವರಜ್ಞಾನ ಹಾಗೂ ತಾಳಜ್ಞಾನವಿರಬೇಕಾದುದು ಬಹು ಮುಖ್ಯ. ಹೇಗೆ ಆಧ್ಯಾತ್ಮಿಕ ಸಾಧನೆ ಮಾಡುವವನಿಗೆ ಶಾಸ್ತ್ರ ಜ್ಞಾನವು ಸಹಾಯಕಾರಿಯಾಗುವುದೋ ಅದರಂತೆಯೇ ಸಂಗೀತ ಶಾಸ್ತ್ರಜ್ಞಾನ ಅರಿತವನಿಗೆ ಅದು ಸಹಾಯಕಾರಿಯಾಗುವುದು.

ಕೊಳಲನ್ನು ನುಡಿಸುವಾಗ ಈ ಕೆಳಗಿನ ಕೆಲ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

1) ಕೊಳಲನ್ನು ನುಡಿಸುವಾಗ ಅಂಗ ವಿಕಾರವನ್ನು ಮಾಡುವ ಕೆಟ್ಟ ಅಭ್ಯಾಸವನ್ನು ಬಿಡಬೇಕು.

2) ನುಡಿಸುವಾಗ ನಿಶ್ಚಲ ಮನಸ್ಸುಳ್ಳವರಾಗಿರಬೇಕು.

3) ಕೊಳಲಿನಲ್ಲಿ ಬರುವ ರಾಗ ಇಂಪಾಗಿಯೂ, ನಯವಾಗಿಯೂ, ಶುದ್ಧವಾಗಿಯೂ ಕಂಪನವಿಲ್ಲದೆಯೂ ತಾಳ ತಪ್ಪದೆಯೂ ಇರಬೇಕು.

4) ಗಮಕಗಳು, ಶ್ರುತಿ ಕೀರ್ತನೆಗಳು, ಸಾಹಿತ್ಯ, ಕೃತಿಗಳ ಅರ್ಥ ಇವುಗಳನ್ನು ಗಮನದಲ್ಲಿಟ್ಟುಕೊಂಡು ನುಡಿಸಿದರೆ ಭಾವ ಪೂರಿತವಾಗಿಯೂ ಕಲಾಪೂರ್ಣವಾಗಿಯೂ ಇರುತ್ತದೆ.

ಇವಿಷ್ಟೂ ಕೊಳಲಿನ ಸ್ಥೂಲ ಪರಿಚಯವಾಯಿತು. ಇನ್ನು ಈ ಸುಷಿರ ವಾದ್ಯ ಆಧ್ಯಾತ್ಮಿಕ ಪ್ರಪಂಚದಲ್ಲಿ ಪಡೆದ ಉತ್ತಮ, ಉನ್ನತ ಸ್ಥಾನದ ಬಗ್ಗೆ ಸ್ಮರಿಸೋಣ. ಭಾಗವತದಲ್ಲೂ, ದಾಸ ಸಾಹಿತ್ಯದಲ್ಲೂ ಆಳ್ವಾರರ ಗೀತೆಯಲ್ಲೂ ಆಚಾರ್ಯರ ಸ್ತೋತ್ರಗಳಲ್ಲೂ ಇದರ ಹಿರಿಮೆ ಗರಿಮೆ ಪಡೆದಿರುವ ಸುಂದರ ಚಿತ್ರಗಳನ್ನು ಮನಃಪಟಲದ ಮೇಲೆ ತಂದುಕೊಳ್ಳುವ ಪ್ರಯತ್ನ ಮಾಡೋಣ.

ಭಾಗವತದಲ್ಲಿ ವೇಣುಗೀತ

(ದಶಮ ಸ್ಕಂಧ ಅಧ್ಯಾಯ 21)

ಅದೊಂದು ಸುಂದರ ಮಧುರ ಸನ್ನಿವೇಶ! ಶ್ರೀಕೃಷ್ಣನು ಬಲರಾಮ ಹಾಗೂ ಇತರ ಗೋಪಾಲರೊಡನೆ ವೃಂದಾವನವನ್ನು ಪ್ರವೇಶಿಸಿ ತನ್ನ ಕೊಳಲನ್ನು ಕರ್ಣಾನ೦ದಕರವಾಗಿ ನುಡಿಸತೊಡಗುತ್ತಾನೆ. ಶ್ರೀಕೃಷ್ಣನ ಸುಮಧುರವಾದ ಈ ವೇಣುಗಾನವು ಭಗವಂತನ ವಿಷಯದಲ್ಲಿ ಭಕ್ತಿ, ಭಾವವನ್ನು ಉಂಟು ಮಾಡುವುದಾಗಿತ್ತು.

ಅವನನ್ನೇ ಸೇರಬೇಕ೦ಬ ಮಹತ್ವಾಕಾಂಕ್ಷೆಯನ್ನು ಹುಟ್ಟಿಸುವುದಾಗಿತ್ತು. ವೃಂದಾವನದಲ್ಲಾಗುತ್ತಿದ್ದ ವೇಣುಗಾನವನ್ನು ಕೇಳಿ ಗೋಪಿಯರ ಹೃದಯವು ಪ್ರೇಮದಿಂದ ತುಂಬಿ ಹೋಯಿತು. ಅವರು ಏಕಾಂತದಲ್ಲಿ ತಮ್ಮ ಸಖಿಯರೊಡನೆ ಶ್ರೀಕೃಷ್ಣನ ರೂಪ, ಗುಣ, ಅವನ ವೇಣುಗಾನದ ಚಿತ್ತಾಪಕಾರಕವಾದ ಮಾಧುರ್ಯ ಇವೇ ಮುಂತಾದುವನ್ನು ವರ್ಣಿಸುತ್ತಿದ್ದಂತೆಯೇ ಅವರಿಗೆ ಕೊಳಲನ್ನು ನುಡಿಸುತ್ತಿದ್ದ ಶ್ರೀಕೃಷ್ಣನ ಚಿತ್ರವು ಎದುರಾಗುತ್ತಿದ್ದಿತು.

ಅವನ ಕೆಂದುಟಿ, ಕುಡಿನೋಟ, ಸುಂದರವಾದ ಹುಬ್ಬುಗಳು, ಅವನ ತಲೆಯ ಮೇಲೆ ಬೆಳಗುತ್ತಿದ್ದ ನವಿಲುಗರಿ, ಗುಂಗುರು ಕೂದಲು, ಅವನ ಮುಗುಳ್ನಗೆ ಇವೆಲ್ಲವೂ ಅವರ ಸ್ಮೃತಿ ಪಥದಲ್ಲಿ ಸುಳಿದು ಆ ಜಗದಾನಂದ ಕಂದನನ್ನು ಸೇರಬೇಕೆಂಬ ಹಂಬಲವು ಹೆಚ್ಚಾಗಿ ವೇಣುಗಾನದ ಮಾಧೈರ್ಯದ ವರ್ಣನೆಯನ್ನು ಮುಂದುವರಿಸಲು ಮುಂದೆ ಅವರಿಂದ ಆಗಲೇ ಇಲ್ಲ.

ಅವರ ಮನಸ್ಸೆಲ್ಲವೂ ಶ್ರೀಕೃಷ್ಣನಲ್ಲಿಯೇ ಸೇರಿ ಹೋಗಿದ್ದಿತು. ಇಂತಹ ಕೃಷ್ಣ ಪ್ರೇಮಿಗಳಾದ ಗೋಪಿಯರು ವ್ರಜದಲ್ಲಿದ್ದೇ ಶ್ರೀಕೃಷ್ಣನ ದಿವ್ಯ ಮಂಗಳ ವಿಗ್ರಹವನ್ನು ತಮ್ಮ ಹೃದಯ ಕಮಲದಲ್ಲಿ ಚಿತ್ರಿಸಿಕೊಂಡರು.

ಇದನ್ನೇ ಲೀಲಾಕುಶ ಕವಿಗಳು ತಮ್ಮ ಶ್ರೀಕೃಷ್ಣ ಕರ್ಣಾಮೃತ ಸ್ತೋತ್ರದಲ್ಲಿ ಸ್ತುತಿಸುತ್ತಾ  

ಕಸ್ತೂರಿ ತಿಲಕಂ ಲಲಾಟ ಫಲಕೇ

ವಕ್ಷಸ್ಥಲೇ ಕೌಸ್ತುಭಂ |

ನಾಸಾಗ್ರೇ ನವಮೌಕ್ತಿಕಂ ಕರತಲೇ

ವೇಣುಂ ಕರೇ ಕಂಕಣಮ್ ||

ಸರ್ವಾಂಗೇ ಹರಿ ಚಂದನಂ ಚ

ಕಲಯನ್ ಕಂತೇ ಚ ಮುಕ್ತಾವಲಿಂ ||

ಗೋಪಸ್ತ್ರೀ ಪರಿವೇಷ್ಟಿತೋ ವಿಜಯತೇ

ಗೋಪಾಲ ಚೂಡಾಮಣಿಃ ||

ಶ್ರೀಕೃಷ್ಣನ ವೇಣುಗಾನವು ನಿಶ್ಚಯವಾಗಿಯೂ ಎಲ್ಲ ಪ್ರಾಣಿಗಳಿಗೂ ಪರಮಾನಂದದಾಯಕವಾಗಿದ್ದಿತು. ಅವನ ಅಧರಾಮೃತವನ್ನು ಪಾನ ಮಾಡುವ ಈ ಕೊಳಲಿನ ಸೌಭಾಗ್ಯ ಬೇರೆ ಯಾರಿಗಿದೆ?

ಸಖಿಯೊಬ್ಬಳು ಮಾಧವನ ಮುರಳಿಯನ್ನು ಹೀಗೆ ವರ್ಣಿಸುತ್ತಾಳೆ. “ಗೋಪಿಯರೇ, ಈ ಕೊಳಲಿನ ಭಾಗ್ಯವನ್ನಾದರೂ ನೋಡಿರಿ. ವೇಣುವು ಪುರುಷಜಾತಿಯದು, ಆದರೂ ಇದು ಹಿಂದಿನ ಜನ್ಮದಲ್ಲಿ ಯಾವ ತಪವನ್ನು ಮಾಡಿದ್ದಿತೋ ತಿಳಿಯದು. ನಮಗೆ ಮಾತ್ರವೇ ಮೀಸಲೆಂದು ಭಾವಿಸಲಾಗಿದ್ದ ಮಾಧವನ ಅಧರಾಮೃತವನ್ನು ನಮಗೆ ಸ್ವಲ್ಪವೂ ಉಳಿಸದೆ ಕುಡಿದು ಬಿಡುತ್ತಿದೆ.

ದಾಮೋದರನ ಅಧರಾಮೃತವನ್ನು ಸೇವಿಸಿ ಪಾವನವಾದ ಈ ವೇಣುವನ್ನು ಬೆಳೆಸಿ ಪೋಷಿಸಿದ ಸರೋವರಗಳು ತಮಗಾಗುತ್ತಿರುವ ಆನಂದವನ್ನು ವಿಕಸಿತವಾದ ಕಮಲ ಪುಷ್ಪಗಳಿಂದ ವ್ಯಕ್ತಪಡಿಸುತ್ತಿದೆ.

ಇನ್ನು ಕೊಳಲಿನ ಉಗಮಸ್ಥಾನವಾದ ಬಿದಿರಿನ ಸಂತೋಷವಂತೂ ಹೇಳತೀರದು. ಆರ್ಯರಾದವರು ತಮ್ಮ ವಂಶದಲ್ಲಿ ಭಗವದ್ಭಕ್ತರು ಹುಟ್ಟಿದರೆ ಆನಂದಿಸುವಂತೆ ಬಿದಿರು ಮೆಳೆಗಳು ತಮ್ಮ ವಂಶಕ್ಕೆ ಸೇರಿದ ವೇಣುವು ಕೃಷ್ಣನ ಅಧರಾಮೃತವನ್ನು ಪಾನ ಮಾಡುತ್ತಿರುವುದನ್ನು ನೋಡಿ ಹಿರಿಹಿಗ್ಗಿ ಜೇನುಹನಿಗಳ ರೂಪದಲ್ಲಿ ಆನಂದಬಾಷ್ಪವನ್ನು ಸುರಿಸುತ್ತಿವೆ.”

ಮತ್ತೊಬ್ಬ ಗೋಪಿ ಹೇಳುತ್ತಾರೆ: “ಶ್ರೀಕೃಷ್ಣನ ಮುಖಾರವಿ೦ದದಿ೦ದ ಹೊರಟ ವೇಣುಗಾನ ಸುಧೆಯನ್ನು ಕೇಳಿದೊಡನೆಯೇ ಗೋವುಗಳು ತಮ್ಮೆರಡು ಕಿವಿಗಳನ್ನು ಮೇಲೆತ್ತಿಕೊಂಡು ಅವುಗಳ ಮೂಲಕ ಗಾನಾಮೃತ ಸುಧೆಯನ್ನು ಹೀರಿಕೊಳ್ಳುತ್ತಿವೆ. ತಮ್ಮ ಕಣ್ಣುಗಳ ಮೂಲಕ ಶ್ಯಾಮಸುಂದರನನ್ನು ಆಲಿಂಗಿಸಿಕೊಂಡು ಆನಂದಬಾಷ್ಪವನ್ನು ಸುರಿಸುತ್ತಿವೆ.

ತಾಯಿ ಬಳಿ ಹಾಲು ಕುಡಿಯುತ್ತಿರುವ ಎಳೆ ಕರುಗಳೂ ಕೃಷ್ಣನ ವೇಣುಗಾನವನ್ನು ಕೇಳಿ ಬಾಯಲ್ಲಿರುವ ಗೊರೆ ಹಾಲನ್ನು ಗಂಟುಕಿಸದೆ ಸ್ತಬವಾಗಿ ನಿಂತುಬಿಡುತ್ತಿದೆ. ಎಂತಹ ಭಾಗ್ಯಶಾಲಿಗಳು! ಇವುಗಳು ಮಾತ್ರವಲ್ಲ ಮರಗಳ ಮೇಲೆ ಕುಳಿತಿರುವ ಪಕ್ಷಿಗಳೂ ಶ್ರೀಕೃಷ್ಣನ ಮುರಳಿಯ ತ್ರಿಭುವನ ಮೋಹಕವಾದ ಮಧುರ ನಾದಕ್ಕೆ ಮನಸೋತಿವೆ.

ಆಹಾ! ಎಂತಹ ಧನ್ಯಜೀವಿಗಳು! ಪಶುಪಕ್ಷಿಗಳು ಮಾತ್ರವಲ್ಲ ಹರಿಯುವ ನದಿಗಳೂ ಮುಕುಂದನ ನಾದ ಮಾಧುರ್ಯಕ್ಕೆ ಸೋತು ಸುಳಿಗಳ ನೆಪದಿಂದ ಶ್ರೀಕೃಷ್ಣನನ್ನು ಸೇರಬೇಕೆನ್ನುವ ತೀವ್ರವಾದ ಆಕಾಂಕ್ಷೆಯನ್ನು ವ್ಯಕ್ತಪಡಿಸುತ್ತಿವೆ. ಪ್ರವಾಹದ ವೇಗವನ್ನು ಕಡಿಮೆ ಮಾಡಿ ತಮ್ಮಲ್ಲಿರುವ ತೆರೆಗಳೆಂಬ ಕರಗಳಿಂದ ಶ್ರೀಕೃಷ್ಣನ ಪಾದಾರವಿಂದಗಳಿಗೆ ಕಮಲದ ಪುಷ್ಪಗಳನ್ನು ಸಮರ್ಪಿಸುತ್ತಾ ಆತನ ಚರಣ ಕಮಲಗಳನ್ನೇ ಆಲಿಂಗನ ಮಾಡಿಕೊಳ್ಳುತ್ತಿವೆ.”

ಮತ್ತೆ ಮುಂದುವರಿಸುತ್ತಾ ”ಭೂಮಿಯ ಮೇಲಿನ ವಸ್ತು ವಿಷಯಗಳು ಮಾತ್ರವಲ್ಲ ಆಕಾಶದ ಮೋಡಗಳೂ ಕೃಷ್ಣನು ಹೃದಯಾನಂದಕರವಾಗಿ ನುಡಿಸುತ್ತಿರುವ ಮುರಳಿಯ ಮಾಧುರ್ಯಕ್ಕೆ ಮನಸೋತು, ಶ್ರೀಕೃಷ್ಣನು ಮೇಘಶ್ಯಾಮನಾದುದರಿಂದ ತಮ್ಮ ಆಪ್ತಮಿತ್ರನೆಂದೇ ಭಾವಿಸುತ್ತಾ ಅವನ ಪರಿವಾರದ ಮೇಲೆ ಹರಡಿಕೊಂಡು ತಂಪನ್ನುಂಟುಮಾಡುತ್ತಿವೆ. ಹಾಗೆಯೇ ಶ್ರೀಕೃಷ್ಣನ ಮೇಲೆ ತಮ್ಮ ತುಂತುರಗಳೆಂಬ ಬಿಳಿಯ ಪುಷ್ಪಗಳನ್ನು ಸುರಿಸುತ್ತಾ ಅವನನ್ನು ಭಕ್ತಿಯಿಂದ ಪೂಜಿಸುತ್ತಿವೆ.”

ಹೀಗೆ ಕೃಷ್ಣನು ಕೊಳಲನ್ನು ನುಡಿಸುವಾಗ ಆನಂದ ತುಂದಿಲನಾಗಿ ತನ್ನ ವೇಣುಗಾನದ ಮೂಲಕ ಇಡೀ ವಿಶ್ವವನ್ನೇ ಆಲಿಂಗಿಸಿಕೊಳುತ್ತಾನೆ. ಯಾವಾಗ ಅವನು ತೊಂಡೇ ಹಣ್ಣಿಗೆ ಸಮಾನವಾದ ಸುಂದರವಾದ ತನ್ನ ಅಧರದ ಮೇಲೆ ಕೊಳಲನ್ನಿಡುವನೋ ಆಗ ಹಲವಾರು ರಾಗಗಳು ತಾವೇ ತಾವಾಗಿ ಹೊರಬರುತ್ತಿರುತ್ತವೆ.

ಈ ವೇಣುಗಾನವನ್ನು ಕೇಳಿ ”ಇಂದ್ರ ರುದ್ರ ಬ್ರಹ್ಮರೇ ಮೊದಲಾದ ದೇವತೆಗಳೂ ವಿದ್ವಾಂಸರೂ ಆನಂದಪಟ್ಟರು. ಅವರಿಗೆ ಆ ವೇಣುಗಾನದ ರಾಗ ಭೇದಗಳಾವುದರ ಕಡೆಗೂ ಗಮನ ಹರಿಯಲಿಲ್ಲ. ಚೇತೋಹಾರಿಯಾದ ವೇಣುಗಾನವನ್ನು ಕೇಳುತ್ತಾ ಕೇವಲ ಆನಂದದಲ್ಲಿ ಮುಳುಗಿ ಹೋದರು.”

ಇವಿಷ್ಟೂ ಭಾಗವತದಲ್ಲಿ ಬರುವ ವೇಣುಗೀತೆಯ ವರ್ಣನೆಯಾಯಿತು. ಇನ್ನು ಈ ಭಾಗವತ ಸಾಗರದ ಅಮೃತ ಸುಧೆಯನ್ನು ತಮ್ಮ ಬೊಗಸೆಗಳಲ್ಲಿ ತುಂಬಿ ತುಂಬಿ ತಂದು, ಬಾಯಾರಿ ಬಸವಳಿದು ಭಕ್ತರಿಗೆ ಎರೆದು ಪೋಷಿಸಿದ ಭಾಗವತ ಶಿರೋಮಣಿಗಳಾದ ಪುರಂದರಾದಿ ದಾಸರ ಕೃತಿಗಳಲ್ಲಿ ಮೆರೆಯುವ ಕೃಷ್ಣನ ಮುರಳೀನಾದವನ್ನು ಆಸ್ವಾದಿಸಲು ಕೀರ್ತನೆಗಳೆಂಬ ಪುಣ್ಯ ತೀರ್ಥದಲ್ಲಿ ಮಿಯೋಣ.

ದಾಸ ಸಾಹಿತ್ಯದಲ್ಲಿ ಮುರಳೀನಾದ

ಪ್ರಥಮವಾಗಿ ಶ್ರೀಪುರಂದರದಾಸರು ಕೃಷ್ಣರನ್ನು ಪೊಂಗೊಳಲನೂದುತಿಹ ಯದು ಕುಲೋತ್ತುಂಗ ಎಂದು ಸಂಬೋಧಿಸುತ್ತಾ ”ಇಂತಹ ರಂಗನು ಕೊಳಲನೂದಲಾಗಿ ಮಂಗಳಮಯವಾಯ್ತು ಧರೆ, ಜಗಂಗಳು ಚೈತನ್ಯ ಮರೆತು ಅಂಗ ಪರವಶವಾದವು.” ಎನ್ನುತ್ತ ಕೃಷ್ಣನ ಕೊಳಲನಾದದ ಪ್ರಭಾವವನ್ನು ವರ್ಣಿಸುತ್ತಾ “ಬೀಸುವ ಗಾಳಿ ಮಂದಗತಿಯಿಂದ ಸಾಗಿತು, ಬಾಡಿದ ಮರ ಫಲಗೊಂಚಲುಗಳನ್ನು ಬಿಟ್ಟಿತು.

ಮಾವು ಚಿಗುರೊಡೆಯಿತು, ತಳದಲ್ಲಿ ಉದಕ ಉಕ್ಕೇರಿ ಬಂದವು, ತುಳುಕಿ ಚೆಲ್ಯಾಡಿ ಬಂದಳು ಯಮುನೆ, ಕಲ್ಲುಗಳೂ ಕರಗಿ ನೀರಾದವು, ಪುಷ್ಪಗಳೆಲ್ಲವೂ ಪರಿಮಳ ತುಂಬಿ ನೀಲಾಂಗನ ಆಂಘ್ರಿಗಳಿಗೆರಗಿದವು. ಎಂಬುದಾಗಿ ಪ್ರಕೃತಿಯು ಸೊಬಗುಗೊಂಡ ಬಗ್ಗೆ ತಿಳಿಸುತ್ತಾರೆ.

ಇನ್ನು ಪಶು ಪಕ್ಷಿಗಳ ಮೇಲೆ ಅದು ಬೀರಿದ ಪ್ರಭಾವವೇನೆಂದರೆ ಜಾಣಹಕ್ಕಿಗಳೂ ಹೇಡಿಕೊಂಡು ಚಿಲಿಪಿಲಿಗುಟ್ಟಲಿಲ್ಲ. ಕೋಗಿಲೆ ಮಾತಾಡದೆ ಮೌನ ತಾಳಿತು. ಖಗ ಮೃಗಗಳೂ ಸಹಜ ವೈರವನ್ನು ಮರೆತು ಓಡಾಟ ನಿಲ್ಲಿಸಿ ಗಾಢ ನಿದ್ರೆಯಲ್ಲಿ ಪರವಶವಾದವು. ಇನ್ನು ಗೋಪಾಂಗನೆಯರೆಲ್ಲರೂ ಮುದ್ದು ಮೋಹನನ ಸಂಗೀತದ ಸದ್ದನಾಲಿಸಿ ಆನಂದವಾರಿಧಿಯಲ್ಲಿ ಬಿದ್ದು ಪರವಶರಾದರು.

ಸಿದ್ಧ ಮುನಿಜನರಾದರೋ ಸಮಾಧಿ ಸ್ಥಿತಿಯಲ್ಲಿಯೇ ಕೃಷ್ಣನೆದುರು ಕುಣಿಕುಣಿದಾಡಿ ಅವನನ್ನು ಓಲೈಸಿಕೊಳ್ಳುತ್ತಾ ಭವಬಂಧನದಿಂದ ಗೆದ್ದರು. ಇವೆಲ್ಲವನ್ನೂ ಆಕಾಶಲೋಕದಿ೦ದ ನೋಡುತ್ತಿದ್ದ ದೇವತೆಗಳಿಗೆಲ್ಲ ಆಶ್ಚರ್ಯವಾಯಿತು. ಮುಕುಂದನ ಈ ಲೀಲಾವಿನೋದವನ್ನು ಕಂಡು ಮೆಚ್ಚಿ ಹೆಚ್ಚಿನ ಕುಸುಮವನ್ನು ಸುರಿದು ಧನ್ಯರಾದರು.

ಕಟ್ಟ ಕಡೆಗೆ ಮಧುಕುಂಜವನದಲ್ಲಿ ತ್ರಿಭಂಗಿಯಲ್ಲಿ ನಿಂತು, ಹೇಮಾಂಬರವನ್ನುಟ್ಟು ಗಂಧ ಕಸ್ತೂರಿತಿಲಕ ಮಕುಟಾಭರಣಗಳಿಂದಲೂ, ವನಮಾಲೆ, ನವಿಲುಗರಿಗಳಿಂದಲೂ ಶೋಭಿತನಾಗಿದ್ದ ಕೃಷ್ಣನ ಕೊಳಲನಾದಕ್ಕೆ ಸಾಮವೇದವೇ ನಮೋ ನಮೋ ಎಂದು ನಮಸ್ಕರಿಸಿತು ಎನ್ನುತ್ತಾರೆ ದಾಸವರೇಣ್ಯರು.

“ದಿವ್ಯ ಪ್ರಬಂಧ” ದಲ್ಲಿ ಆಳ್ವಾರರಿಂದ ಆಸ್ವಾದನೆ

ಭಗವದ್ಭಕ್ತಿಯ ಹಿರಿಮೆಯನ್ನು ಸಾರುವ ಮತ್ತೊಂದು ಬೃಹದ್ಗ್ರಂಥ ತಮಿಳು ಸಂತರಾದ ಆಳ್ವಾರರು ರಚಿಸಿರುವ “ನಾಲಾಯಿರ ದಿವ್ಯ ಪ್ರಬಂಧ” ಈ ಆಳ್ವಾರರಲ್ಲಿ ಮುಖ್ಯರಾದ ವಿಷ್ಣು ಚಿತ್ತರು ‘ನಾವಲಂ’ ದಶಕದಲ್ಲಿ ವೇಣುಗಾನದ ಹಿರಿಮೆಯನ್ನು ಹೇಳುತ್ತಾ ಕೃಷ್ಣನ ಈ ವೇಣುಗಾನದಲ್ಲಿ ಮೈಮರೆಯದವರು ಯಾರೂ ಇಲ್ಲ. ತುಂಬುರು, ನಾರದರು, ಗಂಧರ್ವರು, ಕಿನ್ನರರು ಅಪ್ಸರೆಯರು ತಾವು ಹಾಡುವುದನ್ನೇ ನಿಲ್ಲಿಸಿದರು.

ಹಕ್ಕಿಗಳು ಗುಂಪನ್ನು ಬಿಟ್ಟು ಮೈಮರೆತು ನಿಂತವು. ದನಕರುಗಳು ಕಿವಿಗಳನ್ನು ಅಲುಗಾಡಿಸದೆ ಮೇಯುವುದನ್ನು ಮರೆತು ಸ್ತಬ್ದ ಚಿತ್ರಗಳಂತೆ ನಿಂತು ಬಿಟ್ಟವು. ‘ಶಿತ್ತಿ ಕಂಗಳ ಪೋಲ್ ನಿನ್ನನವೇ’ ಜಿಂಕೆಗಳೂ ಮೈಮರೆತವು” ಎನ್ನುತ್ತಾರೆ. ರಂಗರಾಜಸ್ತವದಲ್ಲಿ “ಆ ವೇಣುಗಾನದಿಂದ ಚರಾಚರಾತ್ಮಕ ವಸ್ತುಗಳು ತನ್ಮಯವಾದವು, ಕಠಿಣ ಪದಾರ್ಥಗಳು ಕರಗಿ ನೀರಾದವು” ಎಂಬ ವರ್ಣನೆ ಬರುತ್ತದೆ. ಕೂರನಾಥರು “ಕೃಷ್ಣನ ವೇಣುಗಾನದಿಂದ ಪೃಥ್ವಿಯೇ ಮೊದಲಾದ ಪ೦ಚಭೂತಗಳ ಗುಣಗಳು ವ್ಯತ್ಯಾಸಗೊಂಡವು.

ಸರ್ಪಗಳು ತೃಪ್ತಿಪಟ್ಟವು. ಆ ಗಾನ ಕೇಳುವ ಭಾಗ್ಯ ಎಷ್ಟು ಜನರಿಗಿದೆ? ಆ ಸಂದರ್ಭದಲ್ಲಿ ಆ ವೇಣು ರಸಿಕನನ್ನು ದರ್ಶನ ಮಾಡಿದವರೇ ಧನ್ಯರು. ಕೃಷ್ಣನ ಆ ಗೋಪವೇಷ ಅದೆಷ್ಟು ಆಕರ್ಷಕವಾಗಿತ್ತು!” ಎಂದು ಕೊಂಡಾಡುತ್ತಾರೆ. ವೇದಾಂತ ದೇಶಿಕರು ತಮ್ಮ “ಗೋಪಾಲ ವಿಂಶತಿ”ಯಲ್ಲಿ ”ಕೃಷ್ಣನ ಅಧರಾಮೃತವನ್ನು ಸವಿಯುವ ಆ ಬಿದಿರು ಕೊಳಲಿನ ಭಾಗ್ಯವೇ ಭಾಗ್ಯ, ವೇಣುಗಾನದಿಂದ ಗೋಕುಲವಾಸಿಗಳು ತಮ್ಮ ಕೆಲಸಗಳನ್ನು ಅಷ್ಟಕ್ಕೇ ಬಿಟ್ಟು ಯಮುನಾ ತೀರಕ್ಕೆ ಧಾವಿಸಿದರು.

ಪಶು ಪ್ರಾಣಿಗಳನ್ನು ವಾಗ್ಮಿಯನ್ನಾಗಿ ಮಾಡುವ ಗಾನವದು. ಕೃಷ್ಣನ ಮನೋಹರವಾದ ಗೋಪವೇಷ ಎಂತಹವರನ್ನಾದರೂ ಹುಚ್ಚು ಹಿಡಿಸುವಂತಹುದು. ಇಂತಹ ಮನಮೋಹಕನನ್ನು ನೋಡುತ್ತಲೇ, ಆ ವೇಣುನಾದವನ್ನು ಕೇಳುತ್ತಲೇ ದೇಹವನ್ನು ಬಿಡಲು ಇಚ್ಛಿಸುವೆನು, ಇದೇ ನನ್ನ ಅಂತಿಮೇಚ್ಛೆ” ಎನ್ನುತ್ತಾರೆ.

‘ಪೆರಿಯ ಪುರಾಣ’ದಲ್ಲಿ ಕೊಳಲುಲಿ

ದಿವ್ಯ ಪ್ರಬಂಧದಂತೆಯೇ ಮತ್ತೊಂದು ಪುಣ್ಯಗ್ರಂಥ ಪೆರಿಯ ಪುರಾಣ. ಇದರಲ್ಲಿ 63 ಶಿವಭಕ್ತರ ಪುಣ್ಯ ಚರಿತ್ರೆಯಿದೆ. ಈ 63 ಭಕ್ತರಲ್ಲಿ ಒಬ್ಬರಾದ ಅನಾಯನಾರ್‌ರವರ ಜೀವನವೂ ಸಾಧನೆಯೂ ಕೊಳಲಿನ ಮಹಿಮೆಗೆ ಜ್ವಲಂತ ಉದಾಹರಣೆ.

ತಿರುಚನಾಪಳ್ಳಿಯ ತಿರುಮಂಗಳಂ ಎಂಬ ಪವಿತ್ರ ಕ್ಷೇತ್ರದಲ್ಲಿ ಸಾಮವೇದೇಶ್ವರ‌ ಎಂಬ ಹೆಸರಿನ ಶಿವನ ಪವಿತ್ರ ಕ್ಷೇತ್ರವಿದೆ. ಈ ಕ್ಷೇತ್ರದಲ್ಲಿ ವಾಸಿಸುತ್ತಿದ್ದ ಅನಾಯನಾರ್ ಒಬ್ಬ ಗೊಲ್ಲ. ಪರಮೇಶ್ವರನಲ್ಲಿ ಪರಮ ಭಕ್ತಿಯುಳ್ಳವರಾಗಿದ್ದರು. ಶಿವನ ಭಸ್ಮ, ಅವನ ಭಕ್ತರು ಎಂದರೆ ಇವನಿಗೆ ಅಪಾರವಾದ ಭಕ್ತಿ ಗೌರವ, ಇವರು ತಮ್ಮ ಶಿವಭಕ್ತಿಯನ್ನು ಪರಮೇಶ್ವರರ ಶಿವ ಪಂಚಾಕ್ಷರಿ ಮಹಾಮಂತ್ರವನ್ನು ಕೊಳಲಿನಲ್ಲಿ ನುಡಿಸುತ್ತಾ ವ್ಯಕ್ತಪಡಿಸುವುದರಲ್ಲಿ ಯಶಸ್ವಿಯಾದರು.

ಇವರು ಮರದಡಿ ನಿಂತು ಪಂಚಾಕ್ಷರೀ ಮಂತ್ರವನ್ನು ಕೊಳಲಿನಲ್ಲಿ ನುಡಿಸುತ್ತಾ ನಿಂತರೆ ಆ ಅದ್ಭುತ ನಾದದಿಂದ ಹಸು ಕರುಗಳೆಲ್ಲ ಪ್ರಭಾವಿತವಾಗಿ ಅವರ ಮುಂದೆ ಬಂದು ನಿಲ್ಲುತ್ತಿದ್ದವು. ಹಾರಾಡುತ್ತಿದ್ದ ಪಕ್ಷಿಗಳೆಲ್ಲಾ ಈ ನಾದಕ್ಕೆ ಮನಸೋತು ಆ ಮರದ ಮೇಲೆ ನಿಶ್ಯಬ್ದವಾಗಿ ಕುಳಿತು ಕೇಳುತ್ತಿದ್ದವು.

ಮಾತ್ರವಲ್ಲ ಸರ್ಪ ಹಾಗೂ ನವಿಲು, ಸಿಂಹ ಹಾಗೂ ಆನೆ ಇವು ತಮ್ಮ ಸಹಜ ವೈರವನ್ನು ಮರೆತು ಒಟ್ಟಿಗೇ ಬಂದು ನಿಲ್ಲುತ್ತಿದ್ದವು. ನದಿಗಳು ಹರಿಯುವುದನ್ನು ಮರೆಯುತ್ತಿದ್ದವು. ಸಮುದ್ರದ ಅಲೆಗಳು ಪ್ರಶಾಂತವಾಗುತ್ತಿದ್ದವು. ಭೂಲೋಕದಲ್ಲಿ ಇಂತಹ ಮೋಡಿಯಾದರೆ, ದೇವಲೋಕದ ವಿದ್ಯಾಧರರು, ಕಿನ್ನರರು, ಎಲ್ಲ ದೇವತೆಯರೂ ತಮ್ಮ ತಮ್ಮ ವಾಹನಗಳ ಮೇಲೆ ಕುಳಿತು ಬಂದು ಕೇಳಿ ಪರವಶರಾಗುತ್ತಿದ್ದರು.

ಹೀಗೆ ಕೊಳಲಿನಲ್ಲಿ ಪಂಚಾಕ್ಷರೀ ಮಂತ್ರದ ಭಕ್ತಿ ಮಾಧುರ್ಯ ಹೆಚ್ಚುತ್ತಿದ್ದಂತೆಯೇ ಅನಾಯನಾರರ ಶಿವಭಕ್ತಿಯೂ ನೂರ್ಮಡಿಯಾಗಿ ಸಾಕ್ಷಾತ್ ಪಾರ್ವತೀ ಪರಮೇಶ್ವರರೇ ದರ್ಶನ ನೀಡಿ ತಮ್ಮೊಡನೆ ಅವರನ್ನು ಕೈಲಾಸಕ್ಕೆ ಕರೆದೊಯ್ದರು.

ಹೀಗೆ ಲೋಕಗಳಿಗೆಲ್ಲಾ ಹುಚ್ಚು ಹಿಡಿಸುತ್ತಾ, ವೇದಗಳನ್ನು ಪ್ರತಿಧ್ವನಿಕೊಡುವಂತೆ ಮಾಡುತ್ತಾ, ಮರಗಿಡಗಳನ್ನು ಸಂತೋಷಪಡಿಸುತ್ತಾ, ಬೆಟ್ಟಗಳನ್ನು ಕರಗಿಸುತ್ತಾ, ಜಿಂಕೆಗಳ ಮೈಮರೆಸುತ್ತಾ, ಗೋವುಗಳನ್ನು ಆನಂದಪಡಿಸುತ್ತಾ, ಗೊಲ್ಲರಿಗೆ ಭ್ರಮೆಯನ್ನುಂಟು ಮಾಡುತ್ತಾ, ಮುನಿಗಳು ಧ್ಯಾನದಲ್ಲಿ ಕಣ್ಣುಗಳನ್ನು ಮುಚ್ಚುವಂತೆ ಮಾಡುತ್ತಾ ಸಪ್ತ ಸ್ವರಗಳನ್ನು ಬರಿಸುತ್ತಾ, ಓಂಕಾರದ ಅರ್ಥವನ್ನು ತಿಳಿಸುತ್ತಿರುವ ಸರ್ವೋತ್ಕೃಷ್ಟವಾದ ಶ್ರೀಕೃಷ್ಣನ ಕೊಳಲಿನ ಕರೆಯ ಸೆಳೆತಕ್ಕೆ ಒಳಗಾಗಿ, ಭವಬಂಧನದಿಂದ ಪಾರಾಗಿ, ಆ ನಾದದೊಡನೆ ಸಾಗಿ ನಾದಯೋಗಿಯೊಡನೆ ಒಂದಾಗೋಣ, ಧನ್ಯರಾಗೋಣ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi