ಆಂಗ್ಲಮೂಲ : ಶ್ರೀ ಯದುರಾಜ ದಾಸ
ಅನುವಾದ : ಸುರೇಶ್ ಮೂನ
ಕೃಷ್ಣಕಥೆ ಅಮೃತಧಾರೆಯಂತೆ. ಕುಡಿದಷ್ಟೂ ದಾಹ ತಣಿಯದ ಸಿಹಿ ನೀರಿನಂತೆ, ಯಾವ ಯಾವ ಬಗೆಯಲ್ಲಿ, ಯಾವ ಯಾವ ಭಾಷೆಯಲ್ಲಿ, ಶೈಲಿಯಲ್ಲಿ ಕೃಷ್ಣನ ಕಥೆ ಕೇಳಿದರೂ ತೃಪ್ತಿಯಾಗದು. ಶ್ರೀ ಯದುರಾಜರು ಅತ್ಯಂತ ಸರಳವಾಗಿ, ಸುಂದರವಾಗಿ ಇಂಗ್ಲೀಷಿನಲ್ಲಿ ನಿರೂಪಿಸಿದ ಕೃಷ್ಣಕಥೆಯನ್ನು ಶ್ರೀ ಸುರೇಶ್ ಮೂನಾ ಅವರು ಕನ್ನಡಕ್ಕೆ ಅಷ್ಟೇ ಸಹಜವಾಗಿ ಅನುವಾದಿಸಿ ಕೊಟ್ಟಿದ್ದಾರೆ. ವಸುದೇವ ದೇವಕಿಯರ ವಿವಾಹದೊಂದಿಗೆ ಆರಂಭವಾಗಿ ಮುಂದುವರಿಯುತ್ತ ಕೃಷ್ಣನ ಲೀಲೆಗಳು ಧಾರಾವಾಹಿಯಾಗಿ ಬರಲಿದೆ.
ಶ್ರೀಲ ಪ್ರಭುಪಾದರು ತಮ್ಮ`ಕೃಷ್ಣ’ ಪುಸ್ತಕಕ್ಕೆ ಬರೆದ ಪೀಠಿಕೆಯನ್ನು ಪ್ರವೇಶಿಕೆಯಾಗಿ ನೀಡಲಾಗಿದೆ.
ಪ್ರವೇಶಿಕೆ
ಶ್ರೀ ಕೃಷ್ಣ ಕಥೆಯನ್ನು ಕೇಳುವುದೆಂದರೆ, ಅದು ಜೇನಿಗಿಂತಲೂ ಸವಿಯಾದ ಅನುಭವ. ಯಾವ ಯಾವ ಬಗೆಯಲ್ಲಿ ಕೇಳಿದರೂ ಮನಸ್ಸಿಗೆ ತೃಪ್ತಿ ದೊರೆಯದು. ಕೃಷ್ಣನ ಕುರಿತು ಕೇಳಿದಷ್ಟು ಮತ್ತೆ ಮತ್ತೆ ಕೇಳುತ್ತಲೇ ಇರಬೇಕೆನ್ನುವ ಬಯಕ್ಕೆ ಹೆಚ್ಚುತ್ತಲಿರುತ್ತದೆ.
ಸ್ವತಃ ಭಗವಾನ್ ಶ್ರೀ ಕೃಷ್ಣನೇ ಭಗವದ್ಗೀತೆಯಲ್ಲಿ ತಾನು ದೇವೋತ್ತಮ ಪರಮ ಪುರುಷ ಎಂದು ವಿವರಿಸಿದ್ದಾನೆ. ಮನುಷ್ಯನ ಧಾರ್ಮಿಕ ತತ್ತ್ವಗಳಲ್ಲಿ ಅಸಮಂಜಸತೆಯುಂಟಾದಾಗ ಮತ್ತು ಅಧಾರ್ಮಿಕ ಕೃತ್ಯಗಳು ಹೆಚ್ಚಿದಾಗ ಅವನು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಶ್ರೀಕೃಷ್ಣನು ಅವತರಿಸಿದಾಗ ಈ ಗ್ರಹದಲ್ಲಿ ಅಥವಾ ವಿಶ್ವದಲ್ಲಿ ಪಾಪಕರ್ಮಗಳ ಹೊರೆಯನ್ನು ಕಡಮೆ ಮಾಡುವ ಅಗತ್ಯವಿತ್ತು. ಭೌತಿಕ ಸೃಷ್ಟಿಯ ಆಗುಹೋಗುಗಳು ಕೃಷ್ಣನ ಪರಿಪೂರ್ಣ ಭಾಗವಾದ ಶ್ರೀ ಮಹಾವಿಷ್ಣುವಿನ ಕೈಯಲ್ಲಿವೆ.
ಪ್ರಭುವು ಇಳಿದು ಬಂದಾಗ ಅವತಾರವು ವಿಷ್ಣುವಿನಿಂದ ಹೊರಹೊಮ್ಮುತ್ತದೆ. ಮಹಾವಿಷ್ಣುವು ಭೌತಿಕ ಸೃಷ್ಟಿಯ ಮೂಲಕಾರಣನು. ಅವನಿಂದ ಮೊದಲು ಗರ್ಭೋದಕಶಾಯಿ ವಿಷ್ಣುವು, ಅನಂತರ ಕ್ಷೀರೋದಕಶಾಯಿ ವಿಷ್ಣುವು ವಿಸ್ತರಣೆಗಳಾಗುತ್ತಾರೆ. ಸಾಮಾನ್ಯವಾಗಿ ಈ ಭೌತಿಕ ವಿಶ್ವದಲ್ಲಿ ಕಾಣಿಸಿಕೊಳ್ಳುವ ಎಲ್ಲ ಅವತಾರಗಳು ಕ್ಷೀರೋದಕಶಾಯಿ ವಿಷ್ಣುವಿನ ಪೂರ್ಣ ವಿಸ್ತರಣೆಗಳು. ಆದುದರಿಂದ ಈ ಭೂಮಿಯಲ್ಲಿ ಪಾಪಕರ್ಮಗಳ ಹೊರೆಯನ್ನು ಇಳಿಸುವ ಕಾರ್ಯಗಳು ದೇವೋತ್ತಮ ಪರಮ ಪುರುಷನಾದ ಕೃಷ್ಣನಿಗೆ ಸೇರಿಲ್ಲ. ಕೃಷ್ಣನು ಕಾಣಿಸಿಕೊಂಡಾಗ ಎಲ್ಲ ವಿಷ್ಣು ವಿಸ್ತರಣೆಗಳು ಅವನನ್ನು ಸೇರುತ್ತವೆ. ಕೃಷ್ಣನ ಬೇರೆ ಬೇರೆ ವಿಸ್ತರಣೆಗಳು, ಎಂದರೆ ವಾಸುದೇವನ ಚತುರ್ಥ ಭಾಗಾತ್ಮಕ ವಿಸ್ತರಣೆಯಾದ ನಾರಾಯಣ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ, ಅಲ್ಲದೆ ಮತ್ಸ್ಯಾವತಾರದ ಭಾಗಾಂಶ ವಿಸ್ತರಣೆ, ಯುಗಾವತಾರರು, ಮನ್ವಂತರಾವತಾರರು ಎಲ್ಲರೂ ಸೇರಿ, ದೇವೋತ್ತಮ ಪರಮ ಪುರುಷನಾದ ಕೃಷ್ಣನ ಶರೀರದೊಂದಿಗೆ ಕಾಣಿಸಿಕೊಳ್ಳುತ್ತಾರೆ. ಕೃಷ್ಣನು ಸಂಪೂರ್ಣನು, ಸಮಗ್ರನು. ಎಲ್ಲ ಸಂಪೂರ್ಣ ವಿಸ್ತರಣೆಗಳೂ ಅವತಾರಗಳೂ ಸದಾ ಅವನೊಡನೆ ವಾಸಿಸುತ್ತವೆ.
ಕೃಷ್ಣನು ಕಾಣಿಸಿಕೊಂಡಾಗ ಶ್ರೀವಿಷ್ಣುವೂ ಅವನೊಡನಿದ್ದನು. ಕೃಷ್ಣನು ಕಾಣಿಸಿಕೊಳ್ಳುವುದೇ ತನ್ನ ವೃಂದಾವನದ ಲೀಲೆಗಳನ್ನು ಮೆರೆದು ಭಾಗ್ಯಶಾಲಿಗಳಾದ ಬದ್ಧ ಆತ್ಮಗಳನ್ನು ಆಕರ್ಷಿಸಿ ಮತ್ತೆ ಮನೆಗೆ, ಎಂದರೆ ದೇವೋತ್ತಮನೆಡೆಗೆ ಅವರನ್ನು ಆಹ್ವಾನಿಸುವುದಕ್ಕೆ. ರಾಕ್ಷಸರನ್ನು ಕೊಂದದ್ದು ಅವನ ವೃಂದಾವನದ ಚಟುವಟಿಕೆಗಳ ಕಾಲದಲ್ಲಿಯೇ; ಕೃಷ್ಣನ ವಿಷ್ಣು ಅಂಶವು ರಾಕ್ಷಸರನ್ನು ಸಂಹಾರ ಮಾಡಿತು.
ಭಗವದ್ಗೀತೆಯ ಎಂಟನೆಯ ಅಧ್ಯಾಯದ 20ನೆಯ ಶ್ಲೋಕದಲ್ಲಿ ಹೇಳಲಾಗಿರುವಂತೆ ಇನ್ನೊಂದು ಶಾಶ್ವತ ಪ್ರಕೃತಿಯಿದೆ. ಅದು ಆಧ್ಯಾತ್ಮಿಕ ಗಗನ. ಅದು ಈ ಎಲ್ಲ ವ್ಯಕ್ತ ಮತ್ತು ಅವ್ಯಕ್ತ ಜಡವಸ್ತುವನ್ನು ಮೀರಿದ್ದು ಎಂದು ಹೇಳಿದೆ. ವ್ಯಕ್ತ ಜಗತ್ತನ್ನು ಸೂರ್ಯ, ಚಂದ್ರ ಮೊದಲಾದ ಗ್ರಹಗಳು ಮತ್ತು ನಕ್ಷತ್ರಗಳ ರೂಪದಲ್ಲಿ ಕಾಣಬಹುದು. ಆದರೆ ಇದರಾಚೆ ಅವ್ಯಕ್ತ ಭಾಗವೊಂದಿದೆ. ಈ ದೇಹದಲ್ಲಿ ಅದರ ಬಳಿಗೆ ಹೋಗುವಂತಿಲ್ಲ. ಆ ಅವ್ಯಕ್ತ ಜಡವಸ್ತುವಿನಾಚೆ ಆಧ್ಯಾತ್ಮಿಕ ರಾಜ್ಯವಿದೆ. ಭಗವದ್ಗೀತೆಯಲ್ಲಿ ಆ ರಾಜ್ಯವನ್ನು ಪರಮೋನ್ನತ ಮತ್ತು ಶಾಶ್ವತ ಎಂದು ವರ್ಣಿಸಿದೆ. ಅದಕ್ಕೆ ನಾಶವೆನ್ನುವುದಿಲ್ಲ. ಈ ಭೌತಿಕ ಪ್ರಕೃತಿಯು ಸೃಷ್ಟಿ ಮತ್ತು ನಾಶಗಳಿಗೆ ಮತ್ತೆ ಮತ್ತೆ ಒಳಗಾಗುತ್ತದೆ. ಆದರೆ ಆ ಭಾಗವು, ಆ ಆಧ್ಯಾತ್ಮಿಕ ಪ್ರಕೃತಿಯು ಅದು ಇರುವಂತೆಯೇ ಶಾಶ್ವತವಾಗಿರುತ್ತದೆ.

ದೇವೋತ್ತಮ ಪುರುಷನಾದ ಕೃಷ್ಣನ ನಿವಾಸವನ್ನು ಬ್ರಹ್ಮಸಂಹಿತೆಯಲ್ಲಿ ಚಿಂತಾಮಣಿಯ ಆವಾಸಸ್ಥಾನ ಎಂದು ವರ್ಣಿಸಲಾಗಿದೆ. ಗೋಲೋಕ ವೃಂದಾವನ ಎಂದು ಕರೆಸಿಕೊಳ್ಳುವ ಕೃಷ್ಣನ ನಿವಾಸವು ಸ್ಪರ್ಶಮಣಿಯಿಂದ ನಿರ್ಮಿಸಿದ ಅರಮನೆಗಳಿಂದ ತುಂಬಿಹೋಗಿದೆ. ಅಲ್ಲಿ ಮರಗಳಿಗೆ ಕಲ್ಪವೃಕ್ಷಗಳು ಎಂದು ಹೆಸರು. ಹಸುಗಳನ್ನು ಸುರಭಿ ಎಂದು ಕರೆಯುತ್ತಾರೆ. ಅಲ್ಲಿ ಲಕ್ಷಾಂತರ ಮಂದಿ ಭಾಗ್ಯದೇವತೆಯರು ಪ್ರಭುವಿನ ಸೇವೆ ಮಾಡುತ್ತಾರೆ. ಅವನ ಹೆಸರು ಗೋವಿಂದ, ಅನಾದಿಪ್ರಭು; ಅವನೇ ಎಲ್ಲ ಕಾರಣಗಳ ಕಾರಣನು. ಅಲ್ಲಿ ಪ್ರಭುವು ತನ್ನ ಕೊಳಲನ್ನು ನುಡಿಸುತ್ತಾನೆ. ಅವನ ಕಣ್ಣುಗಳು ಕಮಲದಳಗಳಂತಿವೆ ಮತ್ತು ಅವನ ಶರೀರದ ಬಣ್ಣವು ಸುಂದರ ಮೋಡದ ಬಣ್ಣದಂತಿದೆ. ಅವನ ತಲೆಯ ಮೇಲೆ ನವಿಲುಗರಿ. ಅವನು ಎಷ್ಟು ಆಕರ್ಷಕ ಎಂದರೆ ಕೋಟಿ ಮನ್ಮಥರನ್ನು ಮೀರಿಸುತ್ತಾನೆ. ಆಧ್ಯಾತ್ಮಿಕ ರಾಜ್ಯದಲ್ಲಿ ಅತ್ಯುನ್ನತ ಲೋಕವಾದ ತನ್ನ ನಿವಾಸವನ್ನು ಕುರಿತು ಕೃಷ್ಣನು ಗೀತೆಯಲ್ಲಿ ಸಣ್ಣ ಸೂಚನೆಯನ್ನಷ್ಟೇ ಕೊಡುತ್ತಾನೆ, ಆದರೆ ಶ್ರೀಮದ್ಭಾಗವತದಲ್ಲಿ ಕೃಷ್ಣನು ತನ್ನೆಲ್ಲ ವೈಭವದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ತನ್ನ ಚಟುವಟಿಕೆಗಳನ್ನು ವೃಂದಾವನದಲ್ಲಿ ಅನಂತರ ಮಥುರೆಯಲ್ಲಿ ಅನಂತರ ದ್ವಾರಕೆಯಲ್ಲಿ ತೋರಿಸುತ್ತಾನೆ.

ಕೃಷ್ಣನು ಹುಟ್ಟಿದ್ದು ಯದುವಂಶವೆನ್ನುವ ಕುಟುಂಬದಲ್ಲಿ. ಯದುವಂಶಕ್ಕೆ ಚಂದ್ರಗ್ರಹದ ದೇವತೆ ಸೋಮನೇ ಮೂಲಪುರುಷ. ಕ್ಷತ್ರಿಯ ರಾಜರುಗಳಲ್ಲಿ ಎರಡು ಮುಖ್ಯ ವಂಶಗಳು. ಒಂದು ವಂಶಕ್ಕೆ ಚಂದ್ರಲೋಕದ ರಾಜನು ಮೂಲ ಪುರುಷ, ಇನ್ನೊಂದು ಸೂರ್ಯಗ್ರಹದ ರಾಜನ ಸಂತತಿ. ದೇವೋತ್ತಮ ಪರಮ ಪುರುಷನು ಕಾಣಿಸಿಕೊಂಡಾಗ ಸಾಮಾನ್ಯವಾಗಿ ಅವನು ಕ್ಷತ್ರಿಯ ಕುಟುಂಬದಲ್ಲಿ ಕಾಣಿಸಿಕೊಳ್ಳುತ್ತಾನೆ. ಏಕೆಂದರೆ ಅವನು ಧಾರ್ಮಿಕ ತತ್ತ್ವಗಳನ್ನು ಅಥವಾ ಧಾರ್ಮಿಕ ಬದುಕನ್ನು ಸ್ಥಾಪಿಸಬೇಕು. ವೈದಿಕ ವ್ಯವಸ್ಥೆಯ ಪ್ರಕಾರ ಕ್ಷತ್ರಿಯ ಕುಟುಂಬವು ಮಾನವ ಕುಲದ ರಕ್ಷಕ. ದೇವೋತ್ತಮ ಪರಮ ಪುರುಷನು ಶ್ರೀರಾಮಚಂದ್ರನಾಗಿ ಅವತರಿಸಿದಾಗ ಸೂರ್ಯದೇವನ ಸಂತತಿಗೆ ಸೇರಿದ ರಘುವಂಶದಲ್ಲಿ ಅವತರಿಸಿದನು; ಶ್ರೀಕೃಷ್ಣನಾಗಿ ಅವತರಿಸಿದಾಗ ಯದುವಂಶದಲ್ಲಿ ಹುಟ್ಟಿದನು.
ಕೃಷ್ಣನ ತಂದೆಯು ಯದುವಂಶದ ಶೂರಸೇನ ಎನ್ನುವವನ ಮಗ. ವಾಸ್ತವವಾಗಿ ದೇವೋತ್ತಮ ಪರಮ ಪುರುಷನು ಈ ಭೌತಿಕ ಜಗತ್ತಿನ ಯಾವುದೇ ವಂಶಕ್ಕೆ ಸೇರಿದವನಲ್ಲ. ಆದರೆ ದೇವೋತ್ತಮ ಪರಮ ಪುರುಷನು ಕಾಣಿಸಿಕೊಂಡ ವಂಶವು ಅವನ ಕೃಪೆಯಿಂದ ಪ್ರಸಿದ್ಧವಾಗುತ್ತದೆ. ಉದಾಹರಣೆಗೆ ಮಲಯದಲ್ಲಿ ಗಂಧದ ಮರವಿದೆ. ಮಲಯವನ್ನು ಬಿಟ್ಟೇ ಶ್ರೀಗಂಧಕ್ಕೆ ತನ್ನದೇ ಯೋಗ್ಯತೆಯಿದೆ. ಆದರೆ ಆಕಸ್ಮಿಕವಾಗಿ ಈ ಮರವು ಮುಖ್ಯವಾಗಿ ಮಲಯ ರಾಜ್ಯಗಳಲ್ಲಿ ಬೆಳೆಯುವುದರಿಂದ ಅದಕ್ಕೆ ಮಲಯದ ಶ್ರೀಗಂಧ ಎಂದು ಹೆಸರು ಬಂದಿದೆ. ಹಾಗೆಯೇ ದೇವೋತ್ತಮ ಪರಮ ಪುರುಷ ಕೃಷ್ಣನು ಎಲ್ಲರಿಗೂ ಸೇರಿದವನು; ಸೂರ್ಯನು ಉದಯಿಸಲು ಬೇರೆ ದಿಕ್ಕುಗಳಿದ್ದರೂ ಅದು ಪೂರ್ವ ದಿಕ್ಕಿನಲ್ಲಿ ಹುಟ್ಟುತ್ತದೆ; ಹಾಗೆಯೇ ಪ್ರಭುವು ತಾನು ಕಾಣಿಸಿಕೊಳ್ಳಲು ಒಂದು ಕುಟುಂಬವನ್ನು ಆರಿಸಿಕೊಳ್ಳುತ್ತಾನೆ. ಆ ಕುಟುಂಬಕ್ಕೆ ಕೀರ್ತಿ ಬರುತ್ತದೆ.
ಕೃಷ್ಣನು ಕಾಣಿಸಿಕೊಂಡಾಗ ಅವನ ಎಲ್ಲ ಪೂರ್ಣ ವಿಸ್ತರಣೆಗಳೂ ಅವನೊಂದಿಗೆ ಕಾಣಿಸಿಕೊಳ್ಳುತ್ತವೆ. ಕೃಷ್ಣನು ಬಲರಾಮ (ಬಲದೇವ) ನೊಂದಿಗೆ ಕಾಣಿಸಿಕೊಂಡ. ಅವನನ್ನು ಕೃಷ್ಣನ ಅಣ್ಣ ಎನ್ನುತ್ತಾರೆ. ಬಲರಾಮನು ಚತುರ್ವ್ಯೂಹ ವಿಸ್ತರಣೆಯ ಸಂಕರ್ಷಣನಿಗೆ ಮೂಲ. ಬಲರಾಮನು ಕೃಷ್ಣನ ಪೂರ್ಣ ವಿಸ್ತರಣೆಯೇ. ಕೃಷ್ಣನು ಯದುಕುಲದಲ್ಲಿ ಹೇಗೆ ಕಾಣಿಸಿಕೊಂಡ ಮತ್ತು ತನ್ನ ಅಲೌಕಿಕ ಗುಣಗಳನ್ನು ಮೆರೆದ ಎನ್ನುವುದನ್ನು ತೋರಿಸಿಕೊಡಲು ಈ ಪುಸ್ತಕದಲ್ಲಿ ಪ್ರಯತ್ನಿಸಲಾಗುತ್ತದೆ. ಶ್ರೀಮದ್ಭಾಗವತದಲ್ಲಿ ಅದರಲ್ಲಿಯೂ ಮುಖ್ಯವಾಗಿ ದಶಮ ಸ್ಕಂಧದಲ್ಲಿ ಇದನ್ನು ಬಹು ಸ್ಪಷ್ಟವಾಗಿ ವರ್ಣಿಸಿದೆ.
ಕೃಷ್ಣಕಥೆ ಎಂದರೆ ಕೃಷ್ಣನನ್ನು ಕುರಿತ ವೃತ್ತಾಂತ. ಎರಡು ಕೃಷ್ಣಕಥೆಗಳಿವೆ. ಒಂದು ಕೃಷ್ಣನೇ ಹೇಳಿದ ವೃತ್ತಾಂತ, ಮತ್ತೊಂದು ಕೃಷ್ಣನ ವಿಷಯವಾದ ವೃತ್ತಾಂತ. ಕೃಷ್ಣನೇ ಹೇಳಿದ ವೃತ್ತಾಂತ ಅಥವಾ ವೇದಾಂತ ಅಥವಾ ಪರಮಾತ್ಮ ವಿಜ್ಞಾನವೇ ಭಗವದ್ಗೀತೆ. ಶ್ರೀಮದ್ಭಾಗವತವು ಕೃಷ್ಣನ ಚಟುವಟಿಕೆಗಳ ಮತ್ತು ಅಲೌಕಿಕ ಲೀಲೆಗಳ ವೃತ್ತಾಂತ. ಎರಡೂ ಕೃಷ್ಣಕಥೆಗಳೇ. ಕೃಷ್ಣಕಥೆಯನ್ನು ಪ್ರಪಂಚದಲ್ಲೆಲ್ಲ ಹರಡಬೇಕೆಂದು ಚೈತನ್ಯ ಮಹಾಪ್ರಭುಗಳ ಅಪ್ಪಣೆ. ಏಕೆಂದರೆ ಭೌತಿಕ ಅಸ್ತಿತ್ವದಲ್ಲಿ ಸಿಕ್ಕಿ ನರಳುತ್ತಿರುವ ಬದ್ಧಜೀವಿಗಳು ಕೃಷ್ಣಕಥೆಯಲ್ಲಿ ಆಸಕ್ತಿ ಹೊಂದಿದರೆ ಅವರಿಗೆ ಮುಕ್ತಿಪಥವು ದೊರೆಯುತ್ತದೆ ಮತ್ತು ಹಾದಿ ಸ್ಪಷ್ಟವಾಗುತ್ತದೆ. ಈ ಪುಸ್ತಕವನ್ನು ಓದುಗರಿಗೆ ಒಪ್ಪಿಸುವುದರ ಉದ್ದೇಶ ಮುಖ್ಯವಾಗಿ ಜನರು ಕೃಷ್ಣನನ್ನು ಅಥವಾ ಕೃಷ್ಣಕಥೆಯನ್ನು ಅರ್ಥಮಾಡಿಕೊಳ್ಳುವಂತೆ ಒಲಿಸುವುದು. ಏಕೆಂದರೆ ಆ ಮೂಲಕ ಜನರು ಭವಬಂಧನದಿಂದ ಮುಕ್ತರಾಗಬಹುದು.

ಅತ್ಯಂತ ಪ್ರಾಪಂಚಿಕ ಮನೋಧರ್ಮದ ಜನರಿಗೆ ಸಹ ಈ ಕೃಷ್ಣಕಥೆಯು ಬಹುವಾಗಿ ರುಚಿಸುತ್ತದೆ. ಏಕೆಂದರೆ ಗೋಪಿಯರೊಡನೆ ಕೃಷ್ಣನ ಲೀಲೆಗಳು ಈ ಪ್ರಪಂಚದಲ್ಲಿ ಹುಡುಗಹುಡುಗಿಯರ ಪ್ರೇಮ ಪ್ರಕರಣಗಳಂತೆಯೇ ಇವೆ. ವಾಸ್ತವವಾಗಿ ಮಾನವ ಸಮಾಜದಲ್ಲಿ ಕಾಣುವ ಕಾಮವು ಅಸಹಜವಲ್ಲ. ಏಕೆಂದರೆ ಇದೇ ಕಾಮದ ಭಾವನೆಯು ಮೂಲ ದೇವೋತ್ತಮ ಪರಮ ಪುರುಷನಲ್ಲಿಯೂ ಇದೆ. ಸಂತೋಷ ಶಕ್ತಿಯನ್ನು ರಾಧಾರಾಣಿ ಎಂದು ಕರೆಯುತ್ತಾರೆ. ಕಾಮದ ಆಧಾರದ ಮೇಲೆ ಪ್ರೇಮ ಪ್ರಕರಣಗಳ ಆಕರ್ಷಣೆಯೇ ದೇವೋತ್ತಮ ಪರಮ ಪುರುಷನ ಮೂಲ ಲಕ್ಷಣ. ಪರಮನ ಭಾಗಗಳಾದ ನಮಗೆ, ಬದ್ಧ ಆತ್ಮಗಳಿಗೆ, ಸಹ ಇಂತಹ ಭಾವನೆಗಳಿರುತ್ತವೆ. ಆದರೆ ಅದನ್ನು ಒಂದು ವಕ್ರವಾದ ಬಹು ಸಣ್ಣ ಸ್ಥಿತಿಯಲ್ಲಿ ಅನುಭವಿಸುತ್ತೇವೆ. ಆದುದರಿಂದ ಈ ಭೌತಿಕ ಜಗತ್ತಿನಲ್ಲಿ ಕಾಮ ಜೀವನವನ್ನು ಬಯಸುವವರು ಗೋಪಿಯರೊಡನೆ ಕೃಷ್ಣನ ಲೀಲೆಗಳ ವಿಷಯವನ್ನು ಕೇಳಿದಾಗ ಅದು ಭೌತಿಕವೆಂದು ತೋರಿದರೂ ಅಲೌಕಿಕ ಸಂತೋಷವನ್ನು ಅನುಭವಿಸುತ್ತಾರೆ. ಕ್ರಮೇಣ ಅವರು ಅಧ್ಯಾತ್ಮ ವೇದಿಕೆಗೆ ಏರುತ್ತಾರೆ ಎನ್ನುವುದೇ ಅನುಕೂಲದ ಅಂಶ. ಗೋಪಿಯರೊಡನೆ ಶ್ರೀಕೃಷ್ಣನ ಲೀಲೆಯ ಅಂಶವನ್ನು ಅಕಾರವಾಣಿಯಿಂದ ಮಾತನಾಡಬಲ್ಲವರಿಂದ ನಮ್ರರಾಗಿ ಕೇಳಿದರೆ ಅಂತಹ ಮನುಷ್ಯನು ಪ್ರಭುವಿನ ಅಲೌಕಿಕ ಭಕ್ತಿಪೂರ್ವಕ ಸೇವೆಯ ವೇದಿಕೆಗೆ ಏರುತ್ತಾನೆ ಮತ್ತು ಅವನ ಹೃದಯದಲ್ಲಿರುವ ಕಾಮದ ಭೌತಿಕ ಕಾಯಿಲೆಯು ಸಂಪೂರ್ಣವಾಗಿ ತೊಡೆದುಹೋಗುತ್ತದೆ ಎಂದು ಭಾಗವತದಲ್ಲಿ ಹೇಳಿದೆ. ಎಂದರೆ ಅದು ಭೌತಿಕ ಕಾಮ ಜೀವನಕ್ಕೆ ಪ್ರತಿಕ್ರಿಯೆಯಾಗುತ್ತದೆ.
ಕೃಷ್ಣನು ನಯವಿಲ್ಲದ ಬದ್ಧ ಪ್ರಾಪಂಚಿಕ ಮನೋಧರ್ಮದವನ ಮನಸ್ಸನ್ನೂ ಮುಕ್ತಾತ್ಮನ ಮನಸ್ಸನ್ನೂ ಮತ್ತು ಮುಕ್ತಿಗಾಗಿ ಶ್ರಮಿಸುತ್ತಿರುವವರ ಮನಸ್ಸನ್ನೂ ಆಕರ್ಷಿಸುತ್ತಾನೆ. ಶುಕಮುನಿಗಳಿಂದ ಕೃಷ್ಣನ ವಿಷಯವನ್ನು ಕೇಳಿದ ಪರೀಕ್ಷಿತ್ ಮಹಾರಾಜನು ಹೇಳುವಂತೆ ಕೃಷ್ಣಕಥೆಯು ಪ್ರತಿಯೊಬ್ಬ ಮನುಷ್ಯನಿಗೂ, ಅವನು ಯಾವ ಸ್ಥಿತಿಯಲ್ಲೇ ಇರಲಿ, ಒಂದೇ ರೀತಿ ಅನ್ವಯವಾಗುತ್ತದೆ. ಪ್ರತಿಯೊಬ್ಬನೂ ಅದನ್ನು ಅತ್ಯಂತ ಅಧಿಕವಾಗಿ ಮೆಚ್ಚಿಕೊಳ್ಳುತ್ತಾನೆ. ಆದರೆ ಪ್ರಾಣಿಗಳನ್ನು ಕೊಲ್ಲುವುದು ಮತ್ತು ತಮ್ಮನ್ನೇ ಕೊಂದುಕೊಳ್ಳುವುದು ಇವುಗಳಲ್ಲಿ ತೊಡಗಿದವರನ್ನು ಕೃಷ್ಣಕಥೆಯು ಹೆಚ್ಚಾಗಿ ಆಕರ್ಷಿಸುವುದಿಲ್ಲ ಎಂದು ಪರೀಕ್ಷಿತ್ ಮಹಾರಾಜನು ಎಚ್ಚರಿಕೆ ಕೊಟ್ಟನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಶಾಸ್ತ್ರಗಳ ನಿಯಂತ್ರಕ ತತ್ತ್ವಗಳನ್ನು ಅನುಸರಿಸುವವರು ಯಾವುದೇ ಸ್ಥಿತಿಯಲ್ಲಿರಲಿ ನಿಶ್ಚಯವಾಗಿ ಆಕರ್ಷಿತರಾಗುತ್ತಾರೆ. ಆದರೆ ತಮ್ಮನ್ನೇ ಕೊಂದುಕೊಳ್ಳುತ್ತಿರುವವರು ಆಕರ್ಷಿತರಾಗುವುದಿಲ್ಲ. ಶ್ರೀಮದ್ಭಾಗವತದಲ್ಲಿ ಬಳಸಲಾಗಿರುವ ಪದ ಪಶುಘ್ನ ಎಂದರೆ ಪ್ರಾಣಿಗಳನ್ನು ಕೊಲ್ಲುವುದು ಅಥವಾ ತನ್ನನ್ನೇ ಕೊಂದುಕೊಳ್ಳುವುದು. ಆತ್ಮಸಾಕ್ಷಾತ್ಕಾರವಿಲ್ಲದ ಮತ್ತು ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಆಸಕ್ತಿಯಿಲ್ಲದ ಜನರು ತಮ್ಮನ್ನು ತಾವೇ ಕೊಂದುಕೊಳ್ಳುತ್ತಿದ್ದಾರೆ; ಅವರು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಮಾನವನ ಈ ಜೀವರೂಪದ ಉದ್ದೇಶವೇ ಆತ್ಮಸಾಕ್ಷಾತ್ಕಾರವಾದದ್ದರಿಂದ ತನ್ನ ಚಟುವಟಿಕೆಗಳ ಈ ಮುಖ್ಯಭಾಗವನ್ನು ಅಲಕ್ಷ್ಯಮಾಡುವವನು ಪ್ರಾಣಿಗಳಂತೆ ತನ್ನ ಕಾಲವನ್ನು ವ್ಯಥರ್ಮಾಡುತ್ತಿದ್ದಾನೆ. ಆದುದರಿಂದ ಅವನು ಪಶುಘ್ನ. ಈ ಪದದ ಇನ್ನೊಂದು ಅರ್ಥವು ವಾಸ್ತವವಾಗಿ ಪ್ರಾಣಿಗಳನ್ನು ಕೊಲ್ಲುತ್ತಿರುವವರಿಗೆ ಅನ್ವಯಿಸುತ್ತದೆ. ಇವರು ಪ್ರಾಣಿಗಳನ್ನು ತಿನ್ನುವವರು (ನಾಯಿಗಳನ್ನೂ ಸಹ ತಿನ್ನುವವರು) ಮತ್ತು ಅವರೆಲ್ಲ ಬೇಟೆ, ಕಸಾಯಿಖಾನೆಗಳನ್ನು ನಡೆಸುವುದು ಹೀಗೆ ಹಲವು ರೀತಿಗಳಲ್ಲಿ ಪ್ರಾಣಿಗಳನ್ನು ಕೊಲ್ಲುವುದರಲ್ಲಿ ನಿರತರಾಗಿದ್ದಾರೆ. ಇಂತಹವರಿಗೂ ಕೃಷ್ಣಕಥೆಯಲ್ಲಿ ಆಸಕ್ತಿಯಿರುವುದು ಸಾಧ್ಯವಿಲ್ಲ.
ತನ್ನ ಪೂರ್ವಿಕರು, ಮುಖ್ಯವಾಗಿ ತನ್ನ ತಾತ ಅರ್ಜುನನು ಕುರುಕ್ಷೇತ್ರದ ಮಹಾಸಮರದಲ್ಲಿ ವಿಜಯಿಗಳಾದದ್ದು ಕೃಷ್ಣನಿಂದಲೇ ಎಂದು ಪರೀಕ್ಷಿತ್ ಮಹಾರಾಜನಿಗೆ ತಿಳಿದಿತ್ತು. ಆದುದರಿಂದ ಅವನಿಗೆ ಕೃಷ್ಣಕಥೆಯನ್ನು ಕೇಳುವುದರಲ್ಲಿ ವಿಶೇಷ ಆಸಕ್ತಿ ಇದ್ದಿತು. ಈ ಭೌತಿಕ ಜಗತ್ತನ್ನು ನಾವು ಒಂದು ಕುರುಕ್ಷೇತ್ರ ರಣಭೂಮಿ ಎಂದು ಭಾವಿಸಬಹುದು. ಈ ರಣಭೂಮಿಯಲ್ಲಿ ಪ್ರತಿಯೊಬ್ಬನೂ ಉಳಿವಿಗಾಗಿ ಬಹು ಕಷ್ಟಪಡುತ್ತಿದ್ದಾನೆ. ಹೆಜ್ಜೆ ಹೆಜ್ಜೆಗೂ ಅಪಾಯ. ಪರೀಕ್ಷಿತ್ ಮಹಾರಾಜನ ಅಭಿಪ್ರಾಯದಲ್ಲಿ ಕುರುಕ್ಷೇತ್ರ ರಣಭೂಮಿಯು ಅಪಾಯಕರವಾದ ಪ್ರಾಣಿಗಳಿಂದ ತುಂಬಿಹೋದ ವಿಸ್ತಾರವಾದ ಸಾಗರದಂತಿತ್ತು. ಅವನ ತಾತ ಅರ್ಜುನನು ಭೀಷ್ಮ, ದ್ರೋಣ, ಕರ್ಣ ಮತ್ತಿತರ ಮಹಾ ವೀರರೊಂದಿಗೆ ಯುದ್ಧ ಮಾಡಬೇಕಾಗಿತ್ತು. ಅವರೇನೂ ಸಾಮಾನ್ಯ ಯೋಧರಲ್ಲ. ಇಂತಹ ಯೋಧರನ್ನು ಸಮುದ್ರದಲ್ಲಿನ ತಿಮಿಂಗಿಲಗಳಿಗೆ ಹೋಲಿಸಿದ್ದಾರೆ. ತಿಮಿಂಗಲವು ದೊಡ್ಡ ಮೀನುಗಳನ್ನು ಸುಲಭವಾಗಿ ನುಂಗುತ್ತದೆ. ಕುರುಕ್ಷೇತ್ರದ ರಣಭೂಮಿಯ ಮಹಾಯೋಧರು ಅನೇಕಾನೇಕ ಅರ್ಜುನರನ್ನು ಸುಲಭವಾಗಿ ನುಂಗಬಲ್ಲವರಾಗಿದ್ದರು. ಆದರೆ ಕೃಷ್ಣನ ಕೃಪೆಯಿಂದ ಅರ್ಜುನನು ಅವರೆಲ್ಲರನ್ನೂ ಕೊಲ್ಲಲು ಸಾಧ್ಯವಾಯಿತು. ಗೋಪಾದದ ಗುರುತಿನಲ್ಲಿನ ಒಂದಿಷ್ಟು ನೀರನ್ನು ಏನೂ ಶ್ರಮವಿಲ್ಲದೆ ಸುಲಭವಾಗಿ ದಾಟುವಂತೆ ಅರ್ಜುನನು ಕೃಷ್ಣನ ಕೃಪೆಯಿಂದ ಕುರುಕ್ಷೇತ್ರ ರಣಭೂಮಿಯ ಸಮುದ್ರವನ್ನು ಸುಲಭವಾಗಿ ಹಾರಿದನು.

ಕೃಷ್ಣನ ಚಟುವಟಿಕೆಗಳನ್ನು ಪರೀಕ್ಷಿತ್ ಮಹಾರಾಜನು ಇನ್ನೂ ಹಲವಾರು ಕಾರಣಗಳಿಗಾಗಿ ಮೆಚ್ಚಿಕೊಂಡನು. ಕೃಷ್ಣನು ಅವನ ತಾತನನ್ನು ರಕ್ಷಿಸಿದ್ದು ಮಾತ್ರವಲ್ಲ, ತನ್ನನ್ನೂ ರಕ್ಷಿಸಿದ್ದ. ಕುರುಕ್ಷೇತ್ರ ಮಹಾಯುದ್ಧದ ಕಡೆಯಲ್ಲಿ ಧೃತರಾಷ್ಟ್ರನ ಮಕ್ಕಳು, ಮೊಮ್ಮಕ್ಕಳು, ಪಾಂಡವರ ಮಕ್ಕಳು, ಮೊಮ್ಮಕ್ಕಳು ಹೀಗೆ ಕುರುವಂಶದ ಎಲ್ಲರೂ ಯುದ್ಧಮಾಡುತ್ತ ಸತ್ತರು. ಐದು ಮಂದಿ ಪಾಂಡವ ಸಹೋದರರನ್ನು ಬಿಟ್ಟು ಎಲ್ಲರೂ ಕುರುಕ್ಷೇತ್ರ ರಣಭೂಮಿಯಲ್ಲಿ ಸತ್ತರು. ಆಗ ಪರೀಕ್ಷಿತ್ ಮಹಾರಾಜನು ತಾಯಿಯ ಗರ್ಭದಲ್ಲಿದ್ದನು. ಅರ್ಜುನನ ಮಗನೂ ಪರೀಕ್ಷಿತ್ ಮಹಾರಾಜನ ತಂದೆಯೂ ಆದ ಅಭಿಮನ್ಯುವೂ ಸಹ ಕುರುಕ್ಷೇತ್ರ ರಣರಂಗದಲ್ಲಿ ಸತ್ತನು. ಆದುದರಿಂದ ಪರೀಕ್ಷಿತ್ ಮಹಾರಾಜನು ಮರಣೋತ್ತರ ಶಿಶು. ಅವನು ತಾಯಿಯ ಗರ್ಭದಲ್ಲಿದ್ದಾಗ ಶಿಶುವನ್ನು ಕೊಲ್ಲಬೇಕೆಂದು ಅಶ್ವತ್ಥಾಮನು ಬ್ರಹ್ಮಾಸ್ತ್ರವನ್ನು ಬಿಟ್ಟನು. ಪರೀಕ್ಷಿತ್ ಮಹಾರಾಜನ ತಾಯಿ ಉತ್ತರೆಯು ಕೃಷ್ಣನ ಬಳಿ ಹೋದಾಗ ಕೃಷ್ಣನು ಗರ್ಭಪಾತದ ಅಪಾಯವನ್ನು ಗುರುತಿಸಿ ಪರಮಾತ್ಮನಾಗಿ ಅವಳ ಗರ್ಭವನ್ನು ಪ್ರವೇಶಿಸಿ ಪರೀಕ್ಷಿತ್ ಮಹಾರಾಜನನ್ನು ಕಾಪಾಡಿದನು. ತಾಯಿಯ ಗರ್ಭದಲ್ಲಿಯೇ ಇದ್ದಾಗ ಸ್ವತಃ ವಿಷ್ಣುವೇ ಅವನನ್ನು ರಕ್ಷಿಸಿದ್ದರಿಂದ ಪರೀಕ್ಷಿತ್ ಮಹಾರಾಜನಿಗೆ ವಿಷ್ಣುದಾತ ಎಂದು ಇನ್ನೊಂದು ಹೆಸರು.
ಹೀಗೆ ಬದುಕಿನಲ್ಲಿ ಯಾವುದೇ ಸ್ಥಿತಿಯಲ್ಲಿರಲಿ, ಪ್ರತಿಯೊಬ್ಬರೂ ಕೃಷ್ಣನ ವಿಷಯವಾಗಿ ಮತ್ತು ಅವನ ಚಟುವಟಿಕೆಗಳ ವಿಷಯವಾಗಿ ಕೇಳಲು ಆಸಕ್ತರಾಗಿರಬೇಕು. ಏಕೆಂದರೆ ಅವನು ಪರಮ ಪರಿಪೂರ್ಣ ಸತ್ತ್ವ, ದೇವೋತ್ತಮ ಪುರುಷ, ಅವನು ಸರ್ವಾಂತರ್ಯಾಮಿ. ಆತನು ಎಲ್ಲರ ಹೃದಯಗಳಲ್ಲಿದ್ದಾನೆ, ತನ್ನ ವಿಶ್ವರೂಪದಲ್ಲಿದ್ದಾನೆ. ಆದರೂ ಭಗವದ್ಗೀತೆಯಲ್ಲಿ ವರ್ಣಿಸಿದಂತೆ, ಪ್ರತಿಯೊಬ್ಬರನ್ನೂ, ತನ್ನ ದಿವ್ಯ ನಿವಾಸಕ್ಕೆ, ಮರಳಿ ಭಗವದ್ಧಾಮಕ್ಕೆ ಬನ್ನಿ ಎಂದು ಆಹ್ವಾನಿಸಲು ಅವನು ತಾನು ಇರುವಂತೆಯೇ ಮನುಷ್ಯನ ಸಮಾಜದಲ್ಲಿ ಕಾಣಿಸಿಕೊಳ್ಳುತ್ತಾನೆ. ಕೃಷ್ಣನ ವಿಷಯವನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಆಸಕ್ತಿ ಇರಬೇಕು. ಈ ಪುಸ್ತಕವನ್ನು ಈ ಉದ್ದೇಶದಿಂದ ಜನರ ಮುಂದೆ ಇರಿಸಲಾಗಿದೆ. ಜನರು ಕೃಷ್ಣನ ವಿಷಯವನ್ನು ತಿಳಿದುಕೊಳ್ಳಬೇಕು ಮತ್ತು ಈ ಮನುಷ್ಯ ಜನ್ಮದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಪರೀಕ್ಷಿತ್ ಮಹಾರಾಜನಂತೆ ಕೃಷ್ಣಕಥೆಯನ್ನು ಗಂಭೀರವಾಗಿ ಕೇಳಲು ಮನುಷ್ಯನು ಅದೃಷ್ಟಶಾಲಿಯಾಗಿರಬೇಕು ಎಂದು ಅರ್ಥಮಾಡಿಕೊಳ್ಳಬೇಕು. ಪರೀಕ್ಷಿತ್ ಮಹಾರಾಜನು ಯಾವ ಕ್ಷಣವಾದರೂ ಸಾವು ಬರಬಹುದೆಂದು ನಿರೀಕ್ಷಿಸುತ್ತಿದ್ದುದರಿಂದ ಅವನಿಗೆ ಈ ವಸ್ತುವಿನಲ್ಲಿ ವಿಶೇಷ ಆಸಕ್ತಿಯುಂಟಾಯಿತು. ಪ್ರತಿಯೊಬ್ಬರೂ ಪ್ರತಿ ಗಳಿಗೆಯೂ ಸಾವಿನ ಅರಿವನ್ನು ಇಟ್ಟುಕೊಂಡಿರಬೇಕು. ಈ ಬದುಕು ನಿಶ್ಚಯವಲ್ಲ; ಮನುಷ್ಯನು ಯಾವ ಕ್ಷಣದಲ್ಲಾದರೂ ಸಾಯಬಹುದು. ಅವನು ತರುಣನೇ, ಮುದುಕನೇ ಎನ್ನುವುದು ಸ್ವಲ್ಪವೂ ಮುಖ್ಯವಲ್ಲ. ಆದುದರಿಂದ ಸಾಯುವ ಮೊದಲು ನಾವು ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯನ್ನು ಪಡೆದುಕೊಳ್ಳಬೇಕು.
ಕೃಷ್ಣನ ಲೀಲೆಗಳನ್ನು ಕುರಿತು ಕೇಳುವುದು ಮತ್ತು ಸಂಕೀರ್ತನೆ ಮಾಡುವುದು ಎಷ್ಟು ಪುಣ್ಯಕರ ಎಂದರೆ ಇದರಲ್ಲಿ ಭಾಗವಹಿಸಿದ ಮೂರು ಬಗೆಯ ಜನರೂ ಪರಿಶುದ್ಧರಾಗುತ್ತಾರೆ; ಈ ಮೂವರು ಕೃಷ್ಣನ ಅಲೌಕಿಕ ವಿಷಯಗಳನ್ನು ವಾಚನ ಮಾಡುವವರು, ಇಂತಹ ವಿಷಯಗಳನ್ನು ಕೇಳುವವರು ಮತ್ತು ಕೃಷ್ಣನ ವಿಷಯವಾಗಿ ಪ್ರಶ್ನಿಸುವವರು. ಈ ಲೀಲೆಗಳು ವಿಷ್ಣುವಿನ ಕಾಲು ಬೆರಳಿನಿಂದ ಹರಿಯುವ ಗಂಗಾ ನದಿಯ ನೀರಿನಂತೆ. ಅವು ಮೇಲಿನ, ಮಧ್ಯದ ಮತ್ತು ಕೆಳಗಿನ ಲೋಕಗಳನ್ನು ಪರಿಶುದ್ಧಗೊಳಿಸುತ್ತವೆ.
– ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದ
(`ಕೃಷ್ಣ’ ಪುಸ್ತಕಕ್ಕೆ ಬರೆದ ಪೀಠಿಕೆಯಿಂದ ಆರಿಸಿಕೊಳ್ಳಲಾಗಿದೆ)
ದೇವಕಿಯ ವಿವಾಹ
ಮಹಾರಾಜ ಕಂಸನು ತನ್ನ ಸೋದರಿ ದೇವಕಿಯ ಮುಖದಲ್ಲಿ ಅಭಿವ್ಯಕ್ತವಾದ ಭಾವನೆಯನ್ನು ಗಮನಿಸಿ “ನೀನು ಇದನ್ನು ಇಷ್ಟ ಪಡುವೆಯೆಂದು ನನಗೆ ತಿಳಿದಿತ್ತು” ಎಂದನು. ಮುಗುಳ್ನಗುತ್ತಾ, “ನಿನ್ನ ಮದುವೆಗೆಂದೇ ವಿಶೇಷವಾಗಿ ತಯಾರಾದ ರಥವಿದು. ಇದರಲ್ಲಿ ಅಳವಡಿಸಿರುವ ಬೆಲೆಬಾಳುವ ವಜ್ರಗಳನ್ನೂ, ಹರಳುಗಳನ್ನೂ ನೋಡು. ಈ ಕುದುರೆಗಳು ವಿಶ್ವದಲ್ಲೇ ಶ್ರೇಷ್ಠವಾದವುಗಳು. ಇಂಥ ಉತ್ಕೃಷ್ಟ ರಥವನ್ನೇರಲು ತಡವೇಕೆ, ವಸುದೇವ ನಿನ್ನ ವಧುವನ್ನು ಕಾಯಿಸುವಿಯೇಕೆ, ರಥಾರೂಢನಾಗು.” ಎಂದನು.
ಹೆಮ್ಮೆಯಿಂದ ಮುಗುಳ್ನಗುತ್ತಾ ದೇವಕಿಯು ಆ ವೈಭವದಿಂದ ಕೂಡಿದ ರಥವನ್ನು ತನ್ನ ಪತಿಯೊಂದಿಗೆ ಏರಿ ಕುಳಿತಳು. ಅಲ್ಲಿ ನೆರದಿದ್ದ ಸಾವಿರಾರು ಪ್ರಜೆಗಳು ಪುಷ್ಪಗಳನ್ನು ಪನ್ನೀರನ್ನು ಅವರ ಮೇಲೆ ಹಾಕುವುದರ ಮೂಲಕ ಈ ನವರಾಜದಂಪತಿಗಳನ್ನು ಅಭಿನಂದಿಸಿದರು.
“ಕಂಸ! ಕುದುರೆಯ ಲಗಾಮನ್ನು ನನಗೆ ಕೊಡು. ರಾಜನಾದವನೆಂದೂ ತಾನೇ ರಥವನ್ನು ಓಡಿಸಬಾರದು” ಎಂದು ವಸುದೇವನು ಕಂಸನಿಂದ ಲಗಾಮನ್ನು ತೆಗೆದುಕೊಳ್ಳಲು ಯತ್ನಿಸಿದನು. ಆದರೆ ವಸುದೇವನಿಗೆ ಅದನ್ನು ಕೊಡದೆ ಕಂಸನು ಹೀಗೆಂದನು:
“ಮದುವೆಯಾದ ತಂಗಿಯನ್ನು ಸೋದರನು ತಾನೇ ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟುಬರಬೇಕೆಂಬ ಸಂಪ್ರದಾಯವಿದೆ. ಆದ್ದರಿಂದ ವಸುದೇವ, ರಥವನ್ನೋಡಿಸುವುದು ನನ್ನ ಪಾಲಿಗೆ ಬಂದಿರುವ ಸಂತೋಷದ ಕೆಲಸ. ನೀನು ಪತ್ನಿಯೊಂದಿಗೆ ಪ್ರಸನ್ನನಾಗಿ ರಥದಲ್ಲಿ ಕುಳಿತುಕೋ.” ಹೀಗೆ ನುಡಿದ ಕಂಸನು ತನ್ನ ಬಲಿಷ್ಠವಾದ ಕೈಗಳಿಂದ ಲಗಾಮನ್ನು ಎಳೆದ ಕೂಡಲೇ ಕುದುರೆಗಳು ರಥದೊಂದಿಗೆ ಮುಂದೆ ಸಾಗತೊಡಗಿದವು. ರಥವು ಸಾವಿರಾರು ಸೈನಿಕರು, ಆನೆಗಳು, ಕುದುರೆಗಳು ಮೊದಲಾದ ಪರಿವಾರದೊಂದಿಗೆ ಮಥುರೆಯ ಪ್ರಧಾನ ಬೀದಿಯಲ್ಲಿ ಸಾಗಿತು. ಪರಿವಾರದಲ್ಲಿದ್ದ ಸಂಗೀತಗಾರರು ಮಂಗಳವಾದ್ಯಗಳೊಡನೆ ಸುಶ್ರಾವ್ಯವಾದ ಸಂಗೀತವನ್ನು ಹಾಡಿದರು. ಸಾರಥಿಯಾಗಿ ರಥವನ್ನು ನಡೆಸುತ್ತಿದ್ದ ಕಂಸನು ತನ್ನ ಪ್ರಜೆಗಳ ಜೈಕಾರಕ್ಕೆ ಕೈಬೀಸಿ ಪ್ರತಿಕ್ರಿಯಿಸುತ್ತಾ ಹರ್ಷಚಿತ್ತನಾಗಿದ್ದನು. ವಸುದೇವದೇವಕಿಯರೂ ಪರಸ್ಪರ ಒಬ್ಬರನ್ನೊಬ್ಬರು ನೋಡಿ ಸಂತೋಷಿಸುತ್ತಾ ಪ್ರಜೆಗಳು ವ್ಯಕ್ತಪಡಿಸುತ್ತಿದ್ದ ಪ್ರೀತಿ ವಿಶ್ವಾಸಗಳನ್ನು ಕಂಡು ಪ್ರಸನ್ನರಾಗಿದ್ದರು. ಹೀಗೆ ಎಲ್ಲೆಲ್ಲೂ ಸಂತೋಷದ ವಾತಾವರಣವೇ ಹರಡಿರಬೇಕಾದರೆ ಇದ್ದಕ್ಕಿದ್ದಂತೆ ಆಕಾಶವು ಕಪ್ಪಾಯಿತು. ಒಂದು ರೀತಿಯ ಗುಡುಗುವ ಶಬ್ದದಿಂದ ಕುದುರೆಗಳೂ ಭೀತಿಗೊಂಡವು. ಪ್ರಸನ್ನವದನನಾಗಿದ್ದ ಕಂಸ ಕೂಡಲೇ ಗಂಭೀರನಾದನು. ಆಗ ಒಂದು ಗಡುಸಾದ ಅಶರೀರವಾಣಿ ಕೇಳಿಬಂತು.
“……….ಕಂಸ! ಎಂತಹ ಮೂರ್ಖ ನೀನು! ನಿನ್ನ ಸಹೋದರಿಯ ಎಂಟನೇ ಮಗುವೇ ನಿನ್ನನ್ನು ಸಂಹರಿಸಲಿದೆ ಎಂಬುದನ್ನೂ ನೀನರಿಯೆ…”
ಆಕಾಶದಿಂದ ಈ ಭವಿಷ್ಯವಾಣಿಯನ್ನು ಕೇಳಿದ ಕೂಡಲೇ ಕಂಸನ ಕೋಪ ನೆತ್ತಿಗೇರಿತು. ದಪ್ಪನಾದ ಮೀಸೆಗಳು ಅದುರಲಾರಂಭಿಸಿದವು. ಮುಗ್ಧಳಾಗಿ ಕುಳಿತಿದ್ದ ತಂಗಿಯ ಕೂದಲನ್ನು ತನ್ನ ಕೈಯಲ್ಲಿ ಹಿಡಿದು,

“ನಿನ್ನ ಮಗುವು ನನ್ನನ್ನು ಕೊಲ್ಲುವನೇ? ಇಳಿ ಕೆಳಗೆ” ಎಂದು ಅವಳನ್ನು ಎಳೆದು ತನ್ನ ಕತ್ತಿಯಿಂದ ಅವಳ ಕತ್ತನ್ನು ಕತ್ತರಿಸಲನುವಾದನು. ಪ್ರಜೆಗಳೆಲ್ಲರೂ ದಿಗ್‌ಭ್ರಾಂತರಾಗಿ ನೋಡತೊಡಗಿದರು. ಕೂಡಲೇ ವಸುದೇವನು ಕಂಸನನ್ನು ತಡೆಯಲು ಎದ್ದನು.
“……..ಭಾವ! ನಿನ್ನ ಪ್ರೀತಿಯ ತಂಗಿಯನ್ನು ನಿನ್ನ ಕೈಯಾರೆ ಕೊಲ್ಲುವುದೇ? ಭೋಜ ವಂಶದಲ್ಲೇ ಅತ್ಯಂತ ಪ್ರಸಿದ್ಧ ರಾಜನಾದ ನೀನು ಒಂದು ಹೆಣ್ಣಿನ ವಿವಾಹದಂತಹ ಶುಭ ಸಮಯದಲ್ಲಿ ಅವಳನ್ನು ಸಂಹರಿಸುವುದೇ! ನೀನು ಸಾವಿಗೆ ಅಷ್ಟೊಂದು ಅಂಜುವಿಯೇಕೆ? ನಿನ್ನ ಹುಟ್ಟಿನೊಂದಿಗೇ ಸಾವು ಬಂದಿರುತ್ತೆಂಬುದು ನಿನಗೆ ತಿಳಿಯದೆ? ದಯವಿಟ್ಟು ನಿನ್ನ ಕೋಪವನ್ನು ಶಮನ ಮಾಡಿಕೊಂಡು ಕತ್ತಿಯನ್ನು ಕೆಳಗಿಳಿಸು. ಇದು ನನ್ನ ವಿನಮ್ರ ಪ್ರಾರ್ಥನೆ…”
“ಆದರೆ…. ನಿನ್ನ ಮಗುವೇ ನನ್ನನ್ನು ಕೊಲ್ಲುವುದಲ್ಲಾ” ಎಂದು ಕಂಸ ಗುಡುಗಿದ.
“ಕಂಸ, ಈಗ ಪರಿಸ್ಥಿತಿ ಬಹಳ ಗಂಭೀರವಾಗಿದೆಯೆಂಬುದನ್ನು ನೋಡಲಾರೆಯಾ…” ಕಂಸನ ಕತ್ತಿ ಹಿಡಿದ ಕೈಯನ್ನು ಕೆಳಗಿಳಿಸಲು ಯತ್ನಿಸುತ್ತಾ ವಸುದೇವನು ನುಡಿದ… “ಅವಳನ್ನು ಈಗ ನೀನು ಕೊಂದರೆ ನಿನ್ನ ಕೀರ್ತಿಗೆ ಕಳಂಕ ಬರುವುದಿಲ್ಲವೆ? ವಿವಾಹವಾದ ದಿನದಂದೇ ತನ್ನ ತಂಗಿಯನ್ನು ಕೊಂದರಾಜನೆಂದು ಜನರಾಡಿಕೊಳ್ಳುವುದಿಲ್ಲವೇ?”
ಆದರೆ, ಇದಾವುದೂ ಕೋಪದಿಂದ ಉಗ್ರನಾಗಿದ್ದ ಕಂಸನ ಕಿವಿಗೆ ಬೀಳಲಿಲ್ಲ. ಆ ಕೂಡಲೇ ತನ್ನ ತಂಗಿಯ ಪ್ರಾಣವನ್ನು ತೆಗೆಯಲು ಸಿದ್ಧನಾಗಿದ್ದ.
ವಸುದೇವ ಮತ್ತೊಮ್ಮೆ ಕೂಗಿ ಹೇಳಿದ. “ಕಂಸ! ದಯವಿಟ್ಟು ನನ್ನ ಮಾತನ್ನು ಆಲಿಸು. ಈಗ ಸದ್ಯಕ್ಕಂತೂ ನಮಗಿನ್ನು ಮಕ್ಕಳಿಲ್ಲವಾದ್ದರಿಂದ ನಿನ್ನ ಜೀವಕ್ಕೇನೂ ಅಪಾಯವಿಲ್ಲ. ಅಷ್ಟೇ ಅಲ್ಲ ಇದೋ! ನಿನಗೆ ಮಾತು ಕೊಡುತ್ತಿದ್ದೇನೆ. ನನಗೆ ಗಂಡು ಮಕ್ಕಳು ಹುಟ್ಟಿದಲ್ಲಿ ಅವರೆಲ್ಲರನ್ನೂ ನಿನಗೆ ತಂದು ಒಪ್ಪಿಸುತ್ತೇನೆ. ನಿನಗಿಷ್ಟ ಬಂದಂತೆ ಮಾಡಿಕೋ…”
ಕೋಪದಿಂದ ಏದುಸಿರು ಬಿಡುತ್ತಿದ್ದ ಕಂಸ ಈ ಮಾತನ್ನು ಕೇಳಿ ನಿಧಾನವಾಗಿ ಖಡ್ಗವನ್ನು ಇಳಿಸಿದ. “ಹೌದೆ! ದೇವಕಿಗೆ ಹುಟ್ಟುವ ಪ್ರತಿ ಮಗುವನ್ನು ನನಗೆ ತಂದು ಒಪ್ಪಿಸುವೆಯಾ?” ಎಂದು ಅನುಮಾನದಿಂದಲೇ ವಸುದೇವನನ್ನು ಕೇಳಿದ.
ಕೂಡಲೇ ವಸುದೇವನು “ಹೌದು ಕಂಸ. ಇದು ನನ್ನ ಪ್ರತಿಜ್ಞೆ” ಎಂದನು. ವಸುದೇವನ ಸ್ವಭಾವವನ್ನು ಅರಿತಿದ್ದ ಕಂಸನಿಗೆ ಅವನು ತನ್ನ ಮಾತಿಗೆ ಎಂದೂ ತಪ್ಪುವುದಿಲ್ಲವೆಂದು ತಿಳಿದಿತ್ತು. ಅವನು ಹೇಳಿದ ವಿಚಾರವೂ ಸರಿ ಎನಿಸಿತು. ಸದ್ಯಕ್ಕಂತೂ ತನ್ನ ತಂಗಿಯನ್ನು ಕೊಲ್ಲದೆ ಬಿಡಬಹುದು ಎನಿಸಿತು ಅವನಿಗೆ.
“ಒಳ್ಳೆಯದು. ಹಾಗಿದ್ದಲ್ಲಿ ಈ ರಾಜ ಮೆರವಣಿಗೆ ಮುಂದುವರಿಯಲಿ” ಎಂದ ಕಂಸ ಕುದುರೆಯ ಲಗಾಮನ್ನು ಎಳೆದ. ರಥವು ನಿಧಾನವಾಗಿ ಮುಂದೆ ಸಾಗತೊಡಗಿತು. ಆದರೆ ಅದರಲ್ಲಿ ಕುಳಿತ ನವದಂಪತಿ ಮಾತ್ರ ಮುಗುಳ್ನಗುವುದಾಗಲಿ, ಪ್ರಜೆಗಳ ಕಡೆ ಕೈ ಬೀಸುವುದಾಗಲೀ ಮಾಡುತ್ತಿರಲಿಲ್ಲ. ಅವರಲ್ಲಿ ಗಂಭೀರವಾದ ಮೌನ ನೆಲೆಸಿತ್ತು.
ಮುಂದೆ ದೇವಕಿಗೆ ಮೊದಲ ಗಂಡು ಮಗು ಜನಿಸಿದಾಗ ತನ್ನ ಮಾತಿನಂತೆ ವಸುದೇವನು ಮಗುವನ್ನು ತಂದು ಕಂಸನಿಗೆ ಒಪ್ಪಿಸಿ ನಿಂತ.
ತನ್ನ ತೋಳುಗಳಲ್ಲಿ ಆಡುತ್ತಿದ್ದ ಹಸುಳೆಯನ್ನು ಹಿಡಿದು ನಿಂತಿದ್ದ ವಸುದೇವನನ್ನು ಕಂಡ ಕಂಸ, “ನಿನ್ನ ಮಾತಿನಂತೆ ನೀನು ನಡೆದುಕೊಂಡಿರುವುದನ್ನು ಕಂಡು ನನಗೆ ಸಂತೋಷವಾಗಿದೆ” ಎಂದ. ವಸುದೇವನು ಉತ್ತರಿಸದೆ ಕಂಸನಿಗೆ ನೀಡಲು ಮಗುವನ್ನು ಮುಂದೆ ಚಾಚಿದ. ಕಂಸನು ಒಮ್ಮೆ ಮಗುವನ್ನು ಹಾಗೂ ದುಃಖತಪ್ತ ತಂದೆಯ ಮುಖವನ್ನು ನೋಡಿದ. ಅನಂತರ ಮೃದುವಾದ ಧ್ವನಿಯಲ್ಲಿ ನುಡಿದ : “ನನ್ನ ಪ್ರೀತಿಯ ವಸುದೇವನೆ, ಈ ಮಗುವಿನಿಂದ ನನಗೆ ಅಪಾಯವಿಲ್ಲ. ನನ್ನನ್ನು ಕೊಲ್ಲಲಿರುವುದು ನಿನ್ನ ಎಂಟನೇ ಮಗು. ಆದ್ದರಿಂದ ಈ ಮಗುವನ್ನು ನೀನು ತೆಗೆದುಕೊಂಡು ಹೋಗಬಹುದು.”
ಸಮಾಧಾನದಿಂದ ನಿಟ್ಟಿಸಿರು ಬಿಡುತ್ತ ವಸುದೇವನು ಮನೆಗೆ ಮಗುವಿನೊಂದಿಗೆ ಹಿಂತಿರುಗಿದ. ಆದರೆ ಅವನಿಗೆ ಕಂಸನ ಮಾತಿನಲ್ಲಿ ನಂಬಿಕೆಯಿರಲಿಲ್ಲ.
“ಮಹಾಪ್ರಭು. ನಾರದ ಮಹಾಮುನಿವರ್ಯರು ತಮ್ಮನ್ನು ಭೇಟಿ ಮಾಡಲು ಕೋರಿದ್ದಾರೆ.”
ತನ್ನ ಸೇವಕನೊಬ್ಬನು ಬಂದು ಹೇಳಿದ ಈ ಮಾತನ್ನು ಕೇಳಿದ ಕಂಸನು ಎದ್ದು ನಿಂತು, “ಕೂಡಲೇ ಅವರನ್ನು ಸಕಲ ಮರ್ಯಾದೆಗಳೊಂದಿಗೆ ಕರೆ ತನ್ನಿ” ಎಂದು ಆಜ್ಞಾಪಿಸಿದ. ಅರಮನೆಯ ಮಹಾದ್ವಾರಗಳು ತೆರೆಯುತ್ತಿದ್ದಂತೆ ಒಳ ಪ್ರವೇಶಿಸಿದ ನಾರದರು ತಮ್ಮ ವೀಣೆಯ ಹಿನ್ನೆಲೆಯೊಂದಿಗೆ ಹಾಡಿದ ಭಗವಂತನ ಸಂಕೀರ್ತನೆಯು ಇಡೀ ಸಭಾಂಗಣವನ್ನು ಆವರಿಸಿತು. ಅವರು ಸಭಾಭವನದೊಳಗೆ ನಿಧಾನವಾಗಿ ತೇಲಿಬರುವಂತೆ ಗೋಚರಿಸುತ್ತಿತ್ತು.
“ತಾವು ನನ್ನ ಸಭೆಗೆ ಆಗಮಿಸಿದ್ದು ನನಗೆ ಬಹಳ ಸಂತೋಷವಾಗಿದೆ. ದಯವಿಟ್ಟು ಕುಳಿತುಕೊಳ್ಳಿ” ಎಂದ ಕಂಸ ತನ್ನ ಬಳಿ ಇದ್ದ ದೊಡ್ಡ ಆಸನವನ್ನು ತೋರಿದ. ಅನಂತರ “ತಾವು ಇಲ್ಲಿಗೆ ಬಂದ ಕಾರಣ ತಿಳಿಯಬಹುದೇ? ಎಂದು ಕೇಳಿದ.
“ಕಂಸ, ನಿನಗೊಂದು ಬಹಳ ಗಂಭೀರವಾದ ಸುದ್ದಿಯಿದೆ.” ತಮ್ಮ ವೀಣೆಯನ್ನು ನಿಧಾನವಾಗಿ ಪಕ್ಕಕ್ಕಿಡುತ್ತಾ ನುಡಿದರು ನಾರದ ಮುನಿಗಳು, “ನೀನು ದೇವಕಿಗೆ ಜನಿಸಿದ ಮೊದಲ ಮಗುವನ್ನು ಕೊಲ್ಲಲಿಲ್ಲವೆಂದು ಕೇಳಿದೆ.”
“ಹೌದು. ಅದರಿಂದ ನನಗೇನೂ ಅಪಾಯವಿರಲಿಲ್ಲ. ಅದಕ್ಕೇ ಕೊಲ್ಲಲಿಲ್ಲ….” ಕಂಸ ಉದಾರ ಧ್ವನಿಯಲ್ಲಿ ನುಡಿದ.
“ಕಂಸ, ನಿನ್ನನ್ನು ಸಂಹರಿಸಲಿರುವ ಕೃಷ್ಣ ಪರಮಾತ್ಮನಿಗೆ ನೆರವಾಗಲು ಅನೇಕ ದೇವಾನುದೇವತೆಗಳು ಸ್ವರ್ಗದಿಂದಿಳಿದು ಭೂಮಿಯಲ್ಲಿ ಜನಿಸಿದ್ದಾರೆ. ನಿನಗೆ ತಿಳಿದಿದೆಯೇ”
“ಹೌದೇ?” ಎಂದ ಕಂಸ ಅತ್ಯಾಶ್ಚರ್ಯದಿಂದ.
ಆದ್ದರಿಂದ ದೇವಕಿಯ ಎಂಟನೇ ಮಗುವಷ್ಟೇ ಅಲ್ಲ, ಯಾವುದೇ ಮಗುವೂ ಮುಂದೆ ನಿನ್ನ ಪ್ರಬಲ ಶತ್ರುವಾಗಬಹುದು” ನಾರದರು ಕಂಸನನ್ನು ಎಚ್ಚರಿಸಿದರು.
“ಏನು”! ಕಂಸ ಗುಡುಗಿದ.
“ಕಂಸ, ನೀನು ಹಿಂದಿನ ಜನ್ಮದಲ್ಲಿ ಕಾಲನೇಮಿಯೆಂಬ ಅಸುರನಾಗಿದ್ದೆ. ಮಹಾವಿಷ್ಣುವಿನ ಕೈಯಿಂದ ಸಂಹರಿಸಲ್ಪಟ್ಟೆ. ನೆನಪಿದೆಯೇ?” ನಾರದರು ಕೇಳಿದರು.
ಈಗ ಕಂಸನಿಗೆ ಕೃಷ್ಣನು ಬೇರಾರೂ ಆಗಿರದೆ ಮಹಾವಿಷ್ಣುವಿನ ಅವತಾರವೇ ಎಂದು ತಿಳಿದು ಆತಂಕವಾಯಿತು.
ನಾರದರು ಮುಂದುವರಿಸಿದರು. “ಭೋಜವಂಶದಲ್ಲಿ ಜನಿಸಿದ ನೀನು ನಿನ್ನ ಅಕೃತ್ಯಗಳಿಂದ ಯದುವಂಶದ ವೈರತ್ವವನ್ನು ಗಳಿಸಿದೆ. ಈ ಯದುವಂಶದಲ್ಲೇ, ಸರ್ವ ಕಾರಣನಾದ, ಸಕಲ ಜೀವರಾಶಿಗಳ ಜನಕನಾದ ಶ್ರೀಕೃಷ್ಣನ ಜನನವಾಗಲಿದೆ. ಆದ್ದರಿಂದಲೇ ಓ ಮಹಾರಾಜ, ನಿನ್ನನ್ನು ಎಚ್ಚರಿಸಲು ಬಂದೆ.”
“ಆದರೆ, ನಾರದರೇ, ತಾವೇಕೆ ನನಗೆ ನೆರವಾಗುತ್ತಿದ್ದೀರಿ? ನಿಮ್ಮ ಮಾತಿನಲ್ಲಿ ನಾನು ದೇವಕಿಯ ಎಲ್ಲ ಮಕ್ಕಳನ್ನು ಸಂಹರಿಸಬೇಕೆಂಬ ಇಂಗಿತವಿದೆ. ಒಬ್ಬ ಬ್ರಾಹ್ಮಣ ಸಂತರಾದ ನೀವು ಇದನ್ನು ಇಚ್ಛಿಸುವಿರೇ?” ಎಂದು ವಿಚಲಿತನಾದ ಕಂಸನು ಕೇಳಿದನು.

“ನಿನ್ನ ದುಷ್ಕೃತ್ಯಗಳು ಹೆಚ್ಚಾದಷ್ಟು ಭಗವಂತನು ನಿನ್ನಂತಹ ದುಷ್ಟರನ್ನು ಸಂಹರಿಸಲು ಬೇಗನೇ ಈ ಭೂಮಿಯಲ್ಲಿ ಜನ್ಮ ತಾಳುತ್ತಾನೆ. ಅದಕ್ಕೆ ನಿನಗೆ ಈ ನನ್ನ ಸಹಾಯ. ನಾನಿನ್ನು ಬರುತ್ತೇನೆ. ನಾರಾಯಣ…. ನಾರಾಯಣ….” ಎಂದು ಮುಗುಳ್ನಗುತ್ತಾ ನುಡಿದ ನಾರದ ಮುನಿಗಳು ಅಲ್ಲಿಂದ ಹೊರಟರು.
ಕಂಸನು ಚಿಂತಾಕ್ರಾಂತನಾಗಿ ಕುಳಿತನು. “ಓಹೋ! ಹೀಗೋ! ಈ ದೇವತೆಗಳೆಲ್ಲರೂ ನನ್ನ ಕಣ್ಣಿಗೇ ಮಣ್ಣೆರಚಬಹುದೆಂದು ತಿಳಿದಿದ್ದಾರೋ ಇರಲಿ. ಅದು ಹೇಗಾಗುತ್ತದೋ ನಾನೂ ನೋಡಿಬಿಡುತ್ತೇನೆ” ಎಂದುಕೊಂಡ ಕಂಸ ತನ್ನ ಮುಖ್ಯ ಮಂತ್ರಿಯನ್ನು ಕರೆಸಿದ.
“ಮಂತ್ರಿಗಳೇ, ಇನ್ನೊಂದು ಗಂಟೆಯೊಳಗೆ ನನ್ನ ತಂದೆ ಉಗ್ರಸೇನನು ಸೆರೆಮನೆಯಲ್ಲಿ ಬಂದಿಯಾಗಿರಬೇಕು” ಎಂದು ಆಜ್ಞಾಪಿಸಿದ.
ಇದನ್ನು ಕೂಡಲೇ ನಂಬಲಾರದ ಮಂತ್ರಿಯು “ಚಕ್ರವರ್ತಿಗಳು!” ಎಂದು ಉದ್ಗರಿಸಿದ.
“ಹೌದು! ಅವರ ಸೈನಿಕರು ನನಗೆ ವಿಧೇಯರಾಗಿರುತ್ತಾರೆ. ನನ್ನ ಆಜ್ಞೆಯನ್ನು ಪಾಲಿಸುತ್ತಾರೆ. ಅಲ್ಲದೆ ವಸುದೇವ ದೇವಕಿಯರು ಬಂಧನದಲ್ಲಿರಬೇಕಾದರೆ ಅವರು ನನ್ನ ದಾರಿಗೆ ಅಡ್ಡವಾಗಬಾರದು” ಎಂದ ಕಂಸ.
“ಇದೀಗ ಅರ್ಥವಾಯಿತು ಮಹಾಪ್ರಭುಗಳೇ” ಎಂದ ಮಂತ್ರಿ. “ನಾನಿನ್ನು ಉದಾರತೆಯನ್ನು ತೋರಿಸುತ್ತಾ ಕೂರಲಾರೆ” ಎಂದು ನುಡಿದ ಕಂಸ, ತನ್ನ ಕತ್ತಿಯ ಹಿಡಿಯನ್ನು ಬಲವಾಗಿ ಹಿಡಿಯುತ್ತಾ.
(ಸಶೇಷ)