ಶ್ರೀ ಕೃಷ್ಣನ ಜನನ (ಭಾಗ-2)

ಆಂಗ್ಲಮೂಲ : ಶ್ರೀ ಯದುರಾಜ ದಾಸ

ಅನುವಾದ : ಸುರೇಶ್‌ ಮೂನ

ವಸುದೇವ-ದೇವಕಿಯರ ವಿವಾಹ ಆದ್ದೂರಿಯಾಗಿ ನೆರವೇರಿತು. ಸ್ವತಃ ಕಂಸನೇ ಅವರು ಕುಳಿತಿದ್ದ ರಥವನ್ನು ನಡೆಸಲು ಹೊರಟ. ಆದರೆ ಅಶರೀರವಾಣಿ, ದೇವಕಿಯ ಎಂಟನೇ ಮಗುವೇ ಆತನ ಮೃತ್ಯು ಎಂದು ತಿಳಿಸಿತು. ದುಷ್ಟ ಕಂಸ ನವ ವಧುವಾಗಿದ್ದ ತಂಗಿಯನ್ನು ಹತ್ಯೆ ಮಾಡಲು ಮುಂದಾದ. ವಸುದೇವನ ಕೋರಿಕೆಯಂತೆ, ಮಗು ಹುಟ್ಟಿದ ಕೂಡಲೆ ತನಗೊಪ್ಪಿಸಬೇಕೆಂದು ಮಾತು ಪಡೆದು ನವ ವಧೂವರರನ್ನು ಬಂಧನದಲ್ಲಿಟ್ಟ. ಸಾಲದ್ದಕ್ಕೆ, ತನ್ನ ತಂದೆ ಉಗ್ರಸೇನನನ್ನೂ ಸೆರೆಯಲ್ಲಿಟ್ಟು ಬಿಟ್ಟ! (ಮುಂದೆ ಓದಿ……)

ಬಹುಬೇಗನೆ ಕಂಸನು ತನ್ನ ತಂದೆ, ಸೋದರಿ ಹಾಗೂ ಭಾವ ಇವರೆಲ್ಲರನ್ನೂ ಸೆರೆಯಲ್ಲಿರಿಸಿದನು. ಅಲ್ಲದೆ ಇತರ ಎಲ್ಲ ರಾಕ್ಷಸ ಅರಸರುಗಳೊಡನೆ ಸ್ನೇಹವನ್ನು ಬೆಳೆಸಿದನು. ಹೀಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ ಅನಂತರ ತಾನೇ ಭೂಮಂಡಲದ ಏಕೈಕ ಚಕ್ರವರ್ತಿಯೆಂದು ಘೋಷಿಸಿ, ಕೃಷ್ಣ ಮತ್ತು ಅವನ ಪರಿವಾರದವರು ಜನ್ಮ ತಳೆಯಲಿದ್ದ ಯದುವಂಶದ ಮೇಲೆ ದಾಳಿ ಮಾಡಿದನು. ಎಲ್ಲೆಡೆಯೂ ಭಯವನ್ನುಂಟು ಮಾಡುವುದರ ಮೂಲಕ ತನ್ನ ರಕ್ಷಣೆಯನ್ನು ಮಾಡಿಕೊಳ್ಳುವುದು ಅವನ ಯೋಜನೆಯಾಗಿತ್ತು.

ವಸುದೇವ ದೇವಕಿಯರು ಕೋಟೆಯೊಳಗಿನ ಸೆರೆಮನೆಯೊಳಗೆ ದಪ್ಪವಾದ ಕಬ್ಬಿಣದ ಸರಪಳಿಗಳಿಂದ ಬಂಧಿತರಾಗಿದ್ದರು. ಅವರಿಗೆ ಪ್ರತಿವರ್ಷವೂ ಒಂದೊಂದರಂತೆ ಆರು ಗಂಡು ಮಕ್ಕಳಾದವು. ಅವು ಒಂದೊಂದೂ ತನ್ನ ಶತ್ರುವೆಂದೇ ಬಗೆದ ಕಂಸನು ಒಂದಾದ ಮೇಲೊಂದರಂತೆ ಆ ಮಕ್ಕಳನ್ನು ಕೊಂದುಹಾಕಿದನು. ಅನಂತರ ಕೃಷ್ಣನ ಯೋಜನೆಯಂತೆ ತನ್ನ ವಿಸ್ತರಣೆಯಾದ ಬಲರಾಮನು ದೇವಕಿಯ ಗರ್ಭವನ್ನು ಸೇರಿದನು. ದೇವಕಿಗೂ ಈ ವಿಷಯ ತಿಳಿದಿತ್ತು. ಆದರೆ ದುಃಖ ಮತ್ತು ಸಂತೋಷ ಈ ಎರಡೂ ಭಾವನೆಗಳು ಅವಳನ್ನು ಕಾಡುತ್ತಿದ್ದವು. ತನ್ನ ಗರ್ಭದಲ್ಲಿ ಸಾಕ್ಷಾತ್‌ ವಿಷ್ಣುವಿನ ಸ್ವರೂಪವೇ ಜನ್ಮ ತಾಳಿದೆಯೆಂದು ಸಂತಸಗೊಂಡರೆ ಜನನವಾದೊಡನೆ ಕಂಸನು ಈ ಕೂಸನ್ನು ಕೊಲ್ಲುವನಲ್ಲಾ ಎಂದು ಮನಸ್ಸು ತಳಮಳಗೊಳ್ಳುತ್ತಿತ್ತು.

ಈ ಮಧ್ಯೆ ಶ್ರೀ ಕೃಷ್ಣನು, ದೇವೋತ್ತಮ ಪುರುಷನ ಮುಖ್ಯ ಶಕ್ತಿಯಾದ ಯೋಗ ಮಾಯೆಯನ್ನು ಕರೆಸಿ ಹೀಗೆ ಸೂಚಿಸಿದನು : “ದೇವಕಿಯ ಗರ್ಭದಲ್ಲಿರುವ ಎಳೆಯ ಮಗುವನ್ನು ವಸುದೇವನ ಮತ್ತೋರ್ವ ಪತ್ನಿಯಾದ ರೋಹಿಣಿಯ ಗರ್ಭಕ್ಕೆ ವರ್ಗಾಯಿಸು. ಅನಂತರ ನಾನು ಸರ್ವಶಕ್ತನಾಗಿ ದೇವಕಿಯ ಗರ್ಭವನ್ನು ಪ್ರವೇಶಿಸುವೆ. ಹಾಗೆಯೇ ನೀನು ವೃಂದಾವನದಲ್ಲಿರುವ ಯಶೋದ ನಂದನರ ಪುತ್ರಿಯಾಗಿ ಜನಿಸು…” ಇದರ ಪ್ರಕಾರ ಯೋಗಮಾಯೆಯು ದೇವಕಿಯ ಗರ್ಭದಿಂದ ಬಲರಾಮನನ್ನು ಹೊರ ತೆಗೆದಳು. ಇದನ್ನರಿಯದ ಕಂಸನು ಈ ಬಾರಿ ದೇವಕಿಗೆ ಗರ್ಭಪಾತವಾಯಿತೆಂದು ಕೊಂಡನು. ತನ್ನ ಯೋಜನೆಯಂತೆ ಶ್ರೀಕೃಷ್ಣನು ವಸುದೇವನ ಹೃದಯವನ್ನು ಹೊಕ್ಕು ಅಲ್ಲಿ ನೆಲಸಿದನು. ಕೆಲವು ದಿನಗಳ ನಂತರ ವಸುದೇವನಲ್ಲಿದ್ದ ಆ ದಿವ್ಯ ತೇಜಸ್ಸು ದೇವಕಿಯ ಗರ್ಭವನ್ನು ಪ್ರವೇಶಿಸಿತು. ಇದರಿಂದಾಗಿ ದೇವಕಿಯು ಅತ್ಯಂತ ಸುಂದರಳೂ ಕಾಂತಿಯುಕ್ತಳೂ ಆಗಿದ್ದಳು.

“ಆಕೆ ಈಗ ಖಂಡಿತವಾಗಿಯೂ ಗರ್ಭವತಿಯಾಗಿರುವಳೇ ಮಹಾಪ್ರಭು? ಮುಖ್ಯಮಂತ್ರಿ ಕಂಸನನ್ನು ಕೇಳಿದ.

“ಹೌದು ಆಕೆ ಈಗ ಖಂಡಿತವಾಗಿಯೂ ಗರ್ಭಿಣಿಯೇ ಆಕೆಯನ್ನು ಇತ್ತೀಚೆಗೆ ನೀವು ಕಂಡಿಲ್ಲವೇನು? ಆಕೆ ಈಗ ಅತ್ಯಂತ ತೇಜಸ್ಸಿನಿಂದ ಕೂಡಿದ್ದಾಳೆ. ತನ್ನ ಎಂಟನೆಯ ಮಗುವಿನ ಗರ್ಭ ಧರಿಸಿದ್ದಾಳೆ. ನನ್ನನ್ನು ಕೊಲ್ಲುತ್ತದೆಂದು ಹೇಳುವ ಮಗು ಇದೇನೆ. ಈಗ ದೇವಕಿಯನ್ನೇನು ಮಾಡುವುದು? ಕೃಷ್ಣನು ದೇವತೆಗಳ ಮಹತ್ಕಾರ್ಯವನ್ನ ನೆರವೇರಿಸಲು ಬಂದಿದ್ದಾನೆಂಬುದು ಖಂಡಿತ. ನಾನು ಈಗಲೇ ದೇವಕಿಯನ್ನು ಕೊಂದರೂ ಆ ಮಹತ್ಕಾರ್ಯವನ್ನು ತಡೆಯಲಾಗುವುದಿಲ್ಲ” ಎಂದು ತನ್ನ ಕೈಗಳನ್ನು ಹಿಸುಕುತ್ತಾ ನುಡಿದನು ವಿಚಲಿತನಾಗಿದ್ದ ಕಂಸ.

“ಈಗಲೇ ಆಕೆಯನ್ನು ಕೊಂದು ಬಿಡಬಹುದಲ್ಲ ಮಹಾಪ್ರಭುಗಳೇ” ಮಂತ್ರಿ ನುಡಿದ.

“ಇಲ್ಲ, ಇಲ್ಲ. ನಾನು ಈಗ ದೇವಕಿಯನ್ನು ಕೊಂದರೆ ವಿಷ್ಣುವು ತನ್ನ ಪರಮ ಸಂಕಲ್ಪವನ್ನು ಇನ್ನೂ ತೀವ್ರವಾಗಿ ಕಾರ್ಯಗತಗೊಳಿಸುವನು. ಆಕೆಯನ್ನು ಈ ಸಂದರ್ಭದಲ್ಲಿ ಕೊಲ್ಲುವುದು ಬಹಳ ಹೇಯ ಕಾರ್ಯವಾಗುತ್ತದೆ. ಇದರಿಂದ ನನ್ನ ಹೆಸರಿಗೇ ಕಳಂಕ ಬರುತ್ತದೆ. ದೇವಕಿ ಒಬ್ಬ ಸ್ತ್ರೀ. ನನ್ನ ರಕ್ಷಣೆಯಲ್ಲಿರುವ ಓರ್ವ ಗರ್ಭಿಣಿ. ಹೀಗಿರುವಾಗ ಅವಳನ್ನು ಕೊಂದರೆ ನನ್ನ ಪುಣ್ಯ ಕಾರ್ಯದ ಫಲಗಳು ನನ್ನ ಜೀವಿತಾವಧಿಯಲ್ಲೆ ಎಲ್ಲ ನಾಶವಾಗುತ್ತದೆ ಅಷ್ಟೇ” ಕಂಸ ಯೋಚಿಸುತ್ತಾ ನುಡಿದ.

“ಹೌದು ಮಹಾರಾಜ. ತಮ್ಮ ಆತ್ಮರಕ್ಷಣೆಯ ಕಡೆಗೆ ಗಮನ ಕೊಡಬೇಕು”.

ಅದೇ ಗುಂಗಿನಲ್ಲೇ ಕಂಸ ನುಡಿಯತೊಡಗಿದ. “ಅತ್ಯಂತ ಕ್ರೂರಿಯಾದವನು ಬದುಕಿದ್ದರೂ ಸತ್ತಂತೆ. ಆತನನ್ನು ಯಾರೂ ಇಷ್ಟ ಪಡುವುದಿಲ್ಲ. ಸತ್ತ ಮೇಲೂ ಅವನನ್ನು ಶಪಿಸುತ್ತಾರೆ. ಅಲ್ಲದೆ ಅವನು ನರಕದ ಅತ್ಯಂತ ಕತ್ತಲೆಯ ಭಾಗಕ್ಕೆ ನೂಕಲ್ಪಡುತ್ತಾನೆ.”

ಹೀಗೆ ದೇವಕಿಯನ್ನು ಕೊಲ್ಲುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಯೋಚಿಸಿದನಂತರ ಕಂಸನು ಆಕೆಯನ್ನು ಕೂಡಲೇ ಕೊಲ್ಲದೆ ಎಂಟನೇ ಮಗುವಿನ ಜನನಕ್ಕಾಗಿ ಕಾದು ಅದು ಹುಟ್ಟಿದ ಕೂಡಲೇ ಹಿಂದಿನ ಇತರ ಹಸುಳೆಗಳನ್ನು ಕೊಂದಂತೆ ಅದನ್ನು ಮುಗಿಸಿ ಬಿಡುವುದೆಂದು ನಿರ್ಧರಿಸಿದನು. ಆದರೆ ಹಗಲೂ ರಾತ್ರಿ ಅವನು ಕೃಷ್ಣ ಮತ್ತು ವಿಷ್ಣು ಇವರನ್ನೇ ಕುರಿತು ಯೋಚಿಸತೊಡಗಿದನು. ಒಂದು ಕ್ಷಣವೂ ಅವನ ಮನಸ್ಸಿನಿಂದ ಕೃಷ್ಣನನ್ನು ಹೊರ ಹಾಕಲಾಗಲಿಲ್ಲ. ಈ ಮಧ್ಯೆ ಬ್ರಹ್ಮ ದೇವನೂ, ಶಿವನೂ ನಾರದ ಮಹರ್ಷಿ ಹಾಗೂ ಇತರ ಅನೇಕ ದೇವತೆಗಳೊಡಗೂಡಿ ಕಂಸನ ಸೆರೆಮನೆಯನ್ನು ಅದೃಶ್ಯರಾಗಿ ಪ್ರವೇಶಿಸಿದರು. ಅವರೆಲ್ಲರೂ ದೇವೋತ್ತಮ ಪರಮ ಪುರುಷನನ್ನು ಕುರಿತು ಹೀಗೆ ಪ್ರಾರ್ಥಿಸಿದರು.

“…ನಮ್ಮ ಪ್ರೀತಿಯ ಪ್ರಭುವೇ, ಎರಡು ಕೈಗಳುಳ್ಳ ಕೃಷ್ಣನು ತಮ್ಮಂತೆ ಎಲ್ಲರೊಂದಿಗೆ ನಡೆದಾಡುವುದು ಅವರಿಗೆ ಒಗಟೇ ಆಗುತ್ತದೆ. ಆದರೂ ಭಕ್ತರಿಗೆ ನಿನ್ನ ಅನಂತ ರೂಪವು ನೀಡುವ ಅಲೌಕಿಕ ಆನಂದವು ಹೆಚ್ಚುತ್ತಲೇ ಹೋಗುತ್ತದೆ. ಭಕ್ತರಲ್ಲದವರಿಗೆ ಮಾತ್ರ ನಿನ್ನ ಈ ರೂಪ ಅಪಾಯವೇ. ಪ್ರೀತಿಯ ಪ್ರಭುವೇ, ನೀನು ಬೇರೆ ಬೇರೆ ಅವತಾರಗಳನ್ನೆತ್ತಿ ಆಯಾ ಪರಿಸ್ಥಿತಿಗಳಿಗೆ ತಕ್ಕಂತೆ ಹೆಸರನ್ನೂ ರೂಪವನ್ನು ಹೊಂದುವೆ. ಆದರೆ ಕೃಷ್ಣ ಎಂಬುದೇ ನಿನ್ನ ಮೂಲ ನಾಮವು. ಆ ಹೆಸರೇ ನೀನು ಸದಾ ಆಕರ್ಷಕನೆಂಬುದನ್ನು ಸೂಚಿಸುತ್ತದೆ…” ಹೀಗೆ ಇನ್ನೂ ವಿಧವಿಧವಾಗಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ ದೇವತೆಗಳೆಲ್ಲ ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿದರು. ಇವೆಲ್ಲವನ್ನೂ ಅನುಭವಿಸಿದ ವಸುದೇವ ದೇವಕಿಯರು ಭಗವಂತನ ಸಾನ್ನಿಧ್ಯವನ್ನು ಹೊಂದಿದವರಾಗಿ ವರ್ಣಿಸಲಾರದಷ್ಟು ಆನಂದದಲ್ಲಿ ಮುಳುಗಿದರು.

ಭಗವಂತನು ಭೂಮಿಯ ಮೇಲೆ ಕಾಣಿಸಿಕೊಳ್ಳುವ ಕಾಲವು ಪರಿಪಕ್ವವಾದಾಗ ನಕ್ಷತ್ರ ಪುಂಜಗಳು ಶುಭಕರವಾದವು. ಎಲ್ಲ ನಗರಗಳಲ್ಲಿ, ಹಳ್ಳಿಗಳಲ್ಲಿ, ಹುಲ್ಲು ಗಾವಲುಗಳಲ್ಲಿ ಜನರ ಮನಸ್ಸುಗಳಲ್ಲಿ ಭಾಗ್ಯದ ಸೂಚನೆಗಳೇ ಕಾಣಿಸತೊಡಗಿದವು. ಎಲ್ಲಿ ನೋಡಿದರೂ ಶಾಂತಿ ಹಾಗೂ ಸಮೃದ್ಧಿಯ ಲಕ್ಷಣಗಳೇ ಗೋಚರಿಸುತ್ತಿದ್ದವು. ನದಿಗಳಲ್ಲಿ ತಿಳಿಯಾದ ನೀರು ಹರಿಯುತ್ತಿತ್ತು. ಕೆರೆಗಳು ಸುಂದರವಾದ ಹೂಗಳಿಂದ ಅಲಂಕೃತವಾಗಿದ್ದವು. ಕಾಡುಗಳಲ್ಲಿ ತುಂಬಿದ್ದ ಮನೋಹರವಾದ ಪಕ್ಷಿಗಳು ಇಂಪಾಗಿ ಹಾಡತೊಡಗಿದವು. ನವಿಲುಗಳು ಜೋಡಿಯಾಗಿ ಮನೋಹರವಾಗಿ ನೃತ್ಯ ಮಾಡತೊಡಗಿದವು. ಗಾಳಿಯೂ ಹಿತಕರವಾಗಿ ಬೀಸುತ್ತಿತ್ತಲ್ಲದೆ ವಿವಿಧ ಪುಷ್ಪಗಳ ಸುಗಂಧವನ್ನು ಎಲ್ಲೆಡೆಗೆ ಹರಡುತ್ತಿತ್ತು. ದೇಹದ ಸ್ಪರ್ಶವು ಆನಂದಕರವಾಗಿತ್ತು. ಮೊದಲು ರಾಕ್ಷಸರಾಜರು ಎಲ್ಲ ಯಜ್ಞ ಯಾಗಾದಿಗಳಿಗೆ ತೊಂದರೆ ಕೊಡುತ್ತಿದ್ದರು. ಬ್ರಾಹ್ಮಣರು ಈ ಶುಭಕಾರ್ಯಗಳನ್ನು ತಮ್ಮ ಮನೆಗಳಲ್ಲಿಯೂ ಮಾಡುವಂತಿರಲಿಲ್ಲ. ಆದರೆ ಈಗ ಆ ಎಲ್ಲ ಸಂಕಷ್ಟಗಳೂ ನಿವಾರಣೆಯಾಗಿದ್ದವು. ಅವರೆಲ್ಲ ಶಾಂತಿಯಿಂದ ಅಗ್ನಿಯನ್ನು ಹೊತ್ತಿಸುವುದು ಸಾಧ್ಯವಾಯಿತು. ಯಜ್ಞಗಳನ್ನು ಮಾಡುತ್ತಿದ್ದವರಿಗೆ ಹವಿಸ್ಸುಗಳ ಅರ್ಪಣೆಗೆ ಮನೆಗಳು ಸಂತೋಷಕರವಾಗಿ ಕಂಡವು. ಶ್ರೀ ಕೃಷ್ಣನ ಜನನ ಕಾಲವು ಸಮೀಪಿಸುತ್ತಿದ್ದಂತೆ ದೇವೋತ್ತಮ ಪರಮ ಪುರುಷನು ಅವತರಿಸಲಿದ್ದಾನೆ ಎಂದು ಗಗನದಲ್ಲಿ ಘೋಷಿಸುವ ದಿವ್ಯಧ್ವನಿಗಳ ಕಂಪನವನ್ನು ಕೇಳಿ ಅವರ ಮನಸ್ಸುಗಳು ಉಲ್ಲಾಸಭರಿತವಾದವು.

ಅತ್ತ ಗಂಧರ್ವ ಮತ್ತು ಕಿನ್ನರ ಲೋಕದಲ್ಲಿ ಎಲ್ಲರೂ ಸಂತೋಷದಿಂದ ಹಾಡಲಾರಂಭಿಸಿದರು. ಸ್ವರ್ಗ ಲೋಕದಲ್ಲಿ ದೇವತೆಗಳೂ ಅವರ ಪತ್ನಿಯರೂ ಅಪ್ಸರೆಯರೊಂದಿಗೆ ನರ್ತನ ಮಾಡಲು ಪ್ರಾರಂಭ ಮಾಡಿದರು. ಹಾಗೆಯೇ ಮಹರ್ಷಿಗಳೂ, ದೇವತೆಗಳೂ ಆನಂದದಿಂದ ಪುಷ್ಪವೃಷ್ಟಿಯನ್ನು ಮಾಡಿದರು. ಸಮುದ್ರ ತೀರಗಳಲ್ಲಿ ಸೌಮ್ಯವಾದ ಅಲೆಗಳ ಶಬ್ದಗಳು ಕೇಳಿ ಬಂದವು ಹಾಗೆಯೇ ಆಕಾಶದಲ್ಲಿನ ಗುಡುಗಿನ ಶಬ್ದವೂ ಹಿತಕರವಾಗಿತ್ತು.

ಹೀಗೆ ಸರ್ವರೀತಿಯಲ್ಲೂ ಭೂಮಿಯು ಸಜ್ಜಾದ ಅನಂತರ ದೇವೋತ್ತಮ ಪರಮ ಪುರುಷನಾದ ವಿಷ್ಣುವು ರಾತ್ರಿಯ ಕತ್ತಲಿನಲ್ಲಿ ವಸುದೇವ ದೇವಕಿಯರಿಗೆ ಕಾಣಿಸಿಕೊಂಡನು. ತಮಗೆ ಜನಿಸಿದ ಬೆರಗುಗೊಳಿಸುವ ಈ ಅಸಾಮಾನ್ಯ ಶಿಶುವನ್ನು ವಸುದೇವನು ನೋಡಿದನು. ನಾಲ್ಕು ಕೈಗಳು, ಶಂಖ, ಚಕ್ರ, ಗದೆ, ಪದ್ಮ, ಶ್ರೀವತ್ಸದಿಂದ ಶೋಭಿತ, ಝಗಝಗಿಸುವ ಕೌಸ್ತುಭ ರತ್ನದ ಮಾಲೆ, ಪೀತಾಂಬರಧಾರಿ ಮಗು ಉಜ್ವಲವಾಗಿ ಶೋಭಿಸುತ್ತಿತ್ತು. ವೈಢೂರ್ಯದಿಂದ ಪ್ರಕಾಶಿಸುವ ಕಿರೀಟ, ದೇಹದ ತುಂಬ ಅಮೂಲ್ಯವಾದ ಬಳೆಗಳು ಕರ್ಣಾಭರಣಗಳಿಂದ ಕೂಡಿದ್ದು ಬೆಳಗುತ್ತಿತ್ತು. ತಲೆಯ ತುಂಬ ನವಿರಾದ ಕೂದಲಿದ್ದ ಆ ಮಗುವಿನ ಅಸಾಧಾರಣ ಲಕ್ಷಣಗಳನ್ನು ಕಂಡು ವಸುದೇವನು ಬೆರಗಾದನು.

`ಗಂಡು ಮಗು ಜನಿಸಿದಾಗ ಆ ಸಂದರ್ಭವನ್ನು ಸಂತೋಷದಿಂದ ಆಚರಿಸುವುದು ಪದ್ಧತಿ. ಆದರೆ ಬಂಧನದಲ್ಲಿರುವ ನಾನು ಏನು ತಾನೇ ಮಾಡಬಲ್ಲೆ’ ಎಂದು ಅವನು ಯೋಚಿಸಿದನು. ಕಾರ್ಯರೂಪದಲ್ಲಿ ಏನೂ ಮಾಡಲಾಗದಿದ್ದರಿಂದ ವಸುದೇವನು ತನ್ನ ಮನಸ್ಸಿನಲ್ಲಿಯೇ ಸಾವಿರಾರು ಗೋವುಗಳನ್ನು ಬ್ರಾಹ್ಮಣರಿಗೆ ದಾನ ಮಾಡಿದನು. ಅನಂತರ ಆಗ ತಾನೇ ಜನಿಸಿದ ಮಗುವು ದೇವೋತ್ತಮ ಪರಮ ಪುರುಷನೇ ಎಂದು ಖಚಿತವಾಗಿದ್ದರಿಂದ ಕೈಮುಗಿದು ಪ್ರಣಾಮ ಮಾಡಿ ಹೀಗೆ ಸ್ತುತಿಸಿದನು: “ಓ ನನ್ನ ಪ್ರಭುವೇ, ನೀನು ಯಾರೆಂದು ನಾನು ಅರಿಯಬಲ್ಲೆ. ಸೂರ್ಯನು ಸೂರ್ಯ ಪ್ರಕಾಶಕ್ಕೆ ಮೂಲವಾಗಿರುವಂತೆ ಭೌತಿಕ ಶಕ್ತಿಗೆ ನೀನೇ ಮೂಲ ಆಕರ. ಅನಾಗರಿಕ ಕಂಸನನ್ನೂ ಅವನ ಹಿಂಬಾಲಕರನ್ನೂ ಕೊಲ್ಲಲು ನೀನು ಕಾಣಿಸಿಕೊಂಡಿದ್ದೀಯೆ ಎಂದು ನನಗೆ ತಿಳಿದಿದೆ. ಆದರೆ ಈ ಸುದ್ದಿ ತಿಳಿಯುತ್ತಲೇ ನಿನ್ನನ್ನು ಕೊಲ್ಲಲು ಎಲ್ಲ ಆಯುಧಗಳ ಸಮೇತವಾಗಿ ಅವನು ಕಾಣಿಸಿಕೊಳ್ಳುತ್ತಾನೆ….” ಹೀಗೆ ವಸುದೇವನು ತನ್ನ ಸ್ತುತಿಯನ್ನು ಮುಗಿಸುತ್ತಿದ್ದಂತೆ ಕೃಷ್ಣನ ತಾಯಿಯಾದ ದೇವಕಿಯೂ ಹೀಗೆ ಪ್ರಾರ್ಥಿಸಿದಳು… “ನನ್ನ ಪ್ರಿಯ ಪ್ರಭುವೇ, ಕಂಸನ ಕ್ರೂರ ಹಿಡಿತದಿಂದ ನಮ್ಮನ್ನು ಪಾರು ಮಾಡು. ನೀನು ಜನಿಸಿದ್ದೀಯೆ ಎಂದು ತಿಳಿದೊಡನೆ ನಿನಗೆ ಕೆಡುಕನ್ನು ಮಾಡುತ್ತಾನೆ ಎಂದು ನನಗೆ ಭಯ. ಆದುದರಿಂದ ಈಗ ಸ್ವಲ್ಪ ಕಾಲ ನಮ್ಮ ಭೌತಿಕ ಕಣ್ಣಿಗೆ ನೀನು ಕಾಣಿಸಿಕೊಳ್ಳಬೇಡ.” ದೇವಕಿಯ ಈ ಪ್ರಾರ್ಥನೆಯನ್ನು ಕೇಳಿದ ಕೃಷ್ಣನು ಈ ರೀತಿ ಉತ್ತರಿಸಿದನು…. “ನನ್ನ ಪ್ರೀತಿಯ ಮಾತೆಯೇ, ನೀನು ಮತ್ತು ನಿನ್ನ ಪತಿ ಬಹಳ ಕಠಿಣವಾದ ರೀತಿಯಲ್ಲಿ ತಪಸ್ಸು ಮಾಡಿ, ನನ್ನಿಂದ ವರವನ್ನು ಬಯಸಿದಿರಿ. ಪ್ರತ್ಯಕ್ಷನಾಗಿದ್ದ ನಾನು ನಿಮಗೆ ಇಷ್ಟಬಂದ ವರವನ್ನು ಕೇಳಲು ಹೇಳಿದ್ದೆ. ಆಗ ನೀವು ನಾನು ನಿಮ್ಮ ಮಗನಾಗಿ ಜನಿಸಬೇಕೆಂದು ಬೇಡಿಕೊಂಡಿರಿ. ಅದಕ್ಕೊಪ್ಪಿದ ನಾನು ಮೂರು ಬಾರಿ ನಿಮ್ಮ ಮಗನಾಗಿ ಬರುವುದಾಗಿ ತಿಳಿಸಿದೆ. ಮೊದಲ ಬಾರಿ ವೃಷ್ಟಿ ಮತ್ತು ಸುತಪಾ ಮಗ ವೃಷ್ಠಿಗರ್ಭನಾಗಿ ಜನಿಸಿದೆ. ಎರಡನೆಯ ಬಾರಿ ವಾಮನ ದೇವನಾಗಿ ಅದಿತಿ ಮತ್ತು ಕಶ್ಯಪರ ಮಗನಾಗಿ ಜನಿಸಿದೆ. ಈಗ ಮೂರನೇ ಬಾರಿಗೆ ನಿಮಗೆ ಕೃಷ್ಣನಾಗಿ ಜನಿಸಿದ್ದೇನೆ. ನನ್ನ ಪ್ರೀತಿಯ ಮಾತಾ-ಪಿತೃಗಳೇ, ನೀವು ನನ್ನನ್ನು ಮಗುವಾಗಿ ಅನೇಕ ಬಾರಿ ಪ್ರೀತಿಯಿಂದ ಲಾಲಿಸಿ ಪಾಲಿಸಿದ್ದೀರಿ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಉಪಕಾರವಾಗಿದೆ. ನೀವು ನಿಮ್ಮ ಮಹತ್ಕಾರ್ಯವನ್ನು ಸಂಪೂರ್ಣವಾಗಿ ನೆರವೇರಿಸಿದ್ದೀರಾದ್ದರಿಂದ ಈ ಬಾರಿ ನೀವು ನನಗಾಗಿ ತುಂಬಾ ಆತಂಕ ಪಟ್ಟುಕೊಂಡಿದ್ದೀರಿ ಹಾಗೂ ಕಂಸನಿಗೆ ಹೆದರಿದ್ದೀರಿ. ಆದ್ದರಿಂದ ನನ್ನನ್ನು ಕೂಡಲೇ ಗೋಕುಲಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನನ್ನನ್ನು ಬಿಟ್ಟು ಈಗ ತಾನೇ ಯಶೋದೆಗೆ ಜನಿಸಿರುವ ಮಗಳನ್ನು ಇಲ್ಲಿಗೆ ಕರೆತನ್ನಿ.”

ಹೀಗೆ ತನ್ನ ತಂದೆ ತಾಯಿಯರ ಮುಂದೆ ಹೇಳಿದ ಪ್ರಭುವು ಸಾಮಾನ್ಯ ಶಿಶುವಿನ ರೂಪತಾಳಿ ಸುಮ್ಮನಾದನು.

ಈ ಮಧ್ಯೆ ನಂದ ಮತ್ತು ಯಶೋದೆಗೆ ಒಂದು ಹೆಣ್ಣು ಮಗುವಾಯಿತು. ಅವಳು ಬೇರಾರೂ ಆಗಿರದೆ ಯೋಗಮಾಯೆಯಾದ ಪ್ರಭುವಿನ ಅಂತರ್‌ಶಕ್ತಿ. ಅವಳ ದಿವ್ಯ ಪ್ರಭಾವದಿಂದ ಕಂಸನ ಅರಮನೆಯಲ್ಲಿ ದ್ವಾರಪಾಲಕರೂ ಸೇರಿದಂತೆ ಎಲ್ಲರೂ ಗಾಢವಾದ ನಿದ್ರೆಯಲ್ಲಿ ಮೈಮರೆತರು. ಎಲ್ಲ ಬಾಗಿಲುಗಳ ಅಡ್ಡ ಪಟ್ಟಿ ಮತ್ತು ಸರಪಳಿಗಳನ್ನು ಹಾಕಿದ್ದರೂ ತಾವಾಗಿಯೇ ತೆರೆದುಕೊಂಡವು. ಅಂದು ರಾತ್ರಿ ಕಗ್ಗತ್ತಲಾಗಿದ್ದರೂ ವಸುದೇವನು ಕೃಷ್ಣನನ್ನು ಎತ್ತಿಕೊಂಡು ಹೊರಡುತ್ತಲೇ ಎಲ್ಲವೂ ಸೂರ್ಯನ ಬೆಳಕಿನಲ್ಲಿ ಕಂಡಂತೆ ಸ್ಪಷ್ಟವಾಯಿತು. ಆದರೆ ಅದೇಕಾಲದಲ್ಲಿ ಆಕಾಶವು ಗುಡುಗಿತು. ಭಾರಿ ಮಳೆ ಸುರಿಯಲಾರಂಭಿಸಿತು.

ಈ ಮಳೆಯಲ್ಲಿಯೇ ವಸುದೇವನು ತನ್ನ ಪುತ್ರ ಕೃಷ್ಣನನ್ನು ಕೊಂಡೊಯ್ಯುತ್ತಿರುವಾಗ ಪ್ರಭು ಶೇಷನು ಹಾವಿನ ರೂಪದಲ್ಲಿ ಬಂದು ವಸುದೇವನಿಗೆ ಮಳೆಯಿಂದ ಅಡ್ಡಿಯಾಗದಂತೆ ತನ್ನ ಹೆಡೆಯನ್ನು ಬಿಚ್ಚಿದನು. ವಸುದೇವನು ಯಮುನಾ ನದಿಯ ತೀರಕ್ಕೆ ಬಂದಾಗ ನದಿಯ ಅಲೆಗಳು ಜೋರಾಗಿ ಶಬ್ದ ಮಾಡುತ್ತಾ ದಡಕ್ಕೆ ಬಡಿಯುತ್ತಿರುವುದನ್ನು, ನೊರೆಯಿಂದ ತುಂಬಿಹೋಗಿರುವುದನ್ನು ಕಂಡನು. ಆದರೆ ವಸುದೇವನು ಬಳಿಗೆ ಬರುತ್ತಿದ್ದಂತೆ ತುಂಬಿದ್ದ ನದಿಯು ಶ್ರೀರಾಮನು ಸಾಗರಕ್ಕೆ ಸೇತುವೆ ಕಟ್ಟುವಾಗ ಹಿಂದೂ ಮಹಾಸಾಗರವು ದಾರಿಯನ್ನು ಬಿಟ್ಟಂತೆ ದಾರಿಯನ್ನು ಬಿಟ್ಟಿತು. ಇದರಿಂದಾಗಿ ವಸುದೇವನು ಸುಲಭವಾಗಿ ನದಿಯನ್ನು ದಾಟಿದನು. ಎದುರು ದಡವನ್ನು ಸೇರಿ ಗೋಕುಲದಲ್ಲಿದ್ದ ನಂದ ಮಹಾರಾಜನ ಮನೆಗೆ ಹೋದಾಗ ಎಲ್ಲರೂ ಗಾಢನಿದ್ರೆಯಲ್ಲಿದ್ದರು. ವಸುದೇವನು ನಿಶ್ಯಬ್ದವಾಗಿ ಯಶೋದೆಯ ಮನೆಯನ್ನು ಪ್ರವೇಶಿಸಿ ತನ್ನ ಮಗುವನ್ನು ಅಲ್ಲಿರಿಸಿ ಯಶೋದೆಗೆ ಹುಟ್ಟಿದ ಹೆಣ್ಣು ಮಗುವನ್ನು ಅಲ್ಲಿಂದ ತೆಗೆದುಕೊಂಡು ಹೊರಟನು. ಹಿಂತಿರುಗಿ ಕಂಸನ ಸೆರೆಮನೆಗೆ ಬಂದು ಸದ್ದಿಲ್ಲದೆ ಮಗುವನ್ನು ದೇವಕಿಯ ತೊಡೆಯ ಮೇಲಿರಿಸಿದನು.ಅನಂತರ ಕಂಸನ ಸೈನಿಕರಿಗೆ ಏನೂ ಗೊತ್ತಾಗದಂತಾಗಿರಲೆಂದು ತನ್ನನ್ನು ಸರಪಳಿಗಳಿಂದ ಬಂಧಿಸಿಕೊಂಡನು.

ಅತ್ತ ಯಶೋದೆಗೆ ತಾನು ಮಗುವೊಂದನ್ನು ಹಡೆದೆನೆಂದು ತಿಳಿದಿತ್ತಾದರೂ ಹೆರಿಗೆಯ ಶ್ರಮದಿಂದ ಆಯಾಸವಾಗಿ ಗಾಢವಾದ ನಿದ್ರೆ ಬಂದುಬಿಟ್ಟಿತ್ತು. ಎಚ್ಚರವಾದಾಗ ಅವಳಿಗೆ ತಾನು ಜನ್ಮ ನೀಡಿದ್ದು ಹೆಣ್ಣು ಮಗುವಿಗೋ ಗಂಡು ಮಗುವಿಗೋ ಎಂದು ನೆನಪಿರಲಿಲ್ಲ.

ಆಗ ತಾನೇ ಜನಿಸಿದ ಮಗುವಿನ ಅಳುವಿನ ಶಬ್ದಕೇಳಿ ದ್ವಾರಪಾಲಕರು ಎಚ್ಚೆತ್ತರು. ಈ ವಿಷಯವನ್ನು ತಿಳಿದ ಮುಖ್ಯಮಂತ್ರಿಯು ಕೂಡಲೇ ಕಂಸನ ಬಳಿಗೆ ತೆರಳಿದನು. ನಿದ್ರೆಯಲ್ಲಿದ್ದ ಕಂಸನನ್ನು “ಮಹಾಪ್ರಭು! ಎದ್ದೇಳಿ. ಮಗುವಿನ ಜನನವಾಗಿದೆ ಎದ್ದೇಳಿ” ಎಂದನು. ಇದನ್ನು ಕೇಳಿದ ಕೂಡಲೇ ಕಂಸನು ಜಗ್ಗನೆ ಎದ್ದು ಕುಳಿತನು. “ಹೌದೆ! ಈ ಕೂಡಲೇ ನಾವು ಸೆರೆಮನೆಗೆ ತೆರಳಬೇಕು” ಎನ್ನುತ್ತಾ ಉಡುಪನ್ನು ಧರಿಸಿ ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡನು. ನನ್ನ ಬಾಳಿನ ಕ್ರೂರ ಸಾವು ಈಗ ಹುಟ್ಟಿದೆ ಎಂದು ಉದ್ಗರಿಸಿದನು.

ತನ್ನ ಅಣ್ಣನು ಬಂದ ಕೂಡಲೇ ದೇವಕಿಯು ದೈನ್ಯದಿಂದ ಪ್ರಾರ್ಥಿಸಿಕೊಂಡಳು. “ಅಣ್ಣ, ನೀನು ಬಹಳ ಹೆದರಿದ್ದೀಯ ಎಂಬುದನ್ನು ಬಲ್ಲೆ. ಆದರೆ ಈ ಮಗುವನ್ನು ಕೊಲ್ಲಬೇಡ”. “ಇದೇನಿದು ಹೆಣ್ಣು ಮಗು!” ಕಂಸ ವಿಚಲಿತವಾಗಿ ನುಡಿದ. “ಹೌದು. ಇದು ಕೇವಲ ಒಂದು ಹೆಣ್ಣು ಮಗು” ಎಂದಳು ದೇವಕಿ. ಇದರಿಂದಾದರೂ ತನ್ನ ಅಣ್ಣನು ಮಗುವನ್ನು ಕೊಲ್ಲದಿರಲೆಂದು. “ಮಹಾಪ್ರಭು ಇದರಲ್ಲೇನೋ ಕುತಂತ್ರವಿದೆ. ಹೇಗಾದರೂ ಆಗಲಿ ಇದನ್ನು ಕೊಂದುಬಿಡಿ.” ಜೊತೆಗೆ ಬಂದ ಮಂತ್ರಿ ಒತ್ತಾಯಿಸಿದನು. “ಕಂಸ. ಈ ಮಗುವನ್ನು ನಿನ್ನ ಮಗುವಿಗೆ ಕೊಟ್ಟು ವಿವಾಹ ಮಾಡುತ್ತೇನೆ ಎಂದು ಮಾತು ಕೊಡುತ್ತೇನೆ. ದಯಮಾಡಿ ಕೊಲ್ಲಬೇಡ.” ದೇವಕಿ ಬೇಡಿದಳು.

ಆದರೆ ಕಂಸ ಅವಳ ಪ್ರಾರ್ಥನೆಗೆ ಕಿವಿಗೊಡಲಿಲ್ಲ.

“ಅಣ್ಣ ಕಂಸ! ಅಶರೀರವಾಣಿ ನುಡಿದಿರುವುದು ನಿನಗೆ ಗಂಡು ಮಗುವಿನಿಂದ ಅಪಾಯವಿದೆಯೆಂದು, ಹೆಣ್ಣು ಮಗುವಿನಿಂದಲ್ಲ. ನನಗೆ ಜನಿಸಿದ ಎಲ್ಲ ಮಕ್ಕಳನ್ನು ಕೊಂದಿರುವೆ. ಅದಕ್ಕೂ ನಾನು ನಿನ್ನನ್ನು ದೂಷಿಸುವುದಿಲ್ಲ. ರಾಕ್ಷಸರಾದ ನಿನ್ನ ಸ್ನೇಹಿತರು ನನ್ನ ಮಕ್ಕಳನ್ನು ಕೊಲ್ಲಲು ನಿನಗೆ ಸಲಹೆ ಮಾಡುತ್ತಿದ್ದಾರೆ. ಆದರೆ ಈ ಮಗುವನ್ನು ಮಾತ್ರ ಬಿಟ್ಟು ಬಿಡು. ನನ್ನ ಮಗಳಾಗಿ ಅವಳು ಬದುಕಿಕೊಂಡಿರಲಿ…”

ಆದರೆ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದ ಕಂಸ “ಆ ಮಗುವನ್ನು ಕೊಡಿಲ್ಲಿ” ಎಂದು ಅಬ್ಬರಿಸಿದ. ಆಗತಾನೇ ಜನಿಸಿದ ಆ ಹೆಣ್ಣು ಹಸುಳೆಯನ್ನು ಬಲಾತ್ಕಾರವಾಗಿ ಅವಳಿಂದ ಕಿತ್ತುಕೊಂಡು ನಿರ್ದಯವಾಗಿ ಅದನ್ನು ಕಲ್ಲಿನ ಮೇಲೆ ಅಪ್ಪಳಿಸಲು ಪ್ರಯತ್ನಿಸಿದ. ಆದರೆ ಮಗು ಅವನ ಕೈಯಿಂದ ಜಾರಿತು. ಗಗನಕ್ಕೆ ಹಾರಿ, ಯೋಗ ಮಾಯೆಯಾಗಿದ್ದ ಆ ಮಗು ಸೊಗಸಾದ ಉಡುಪು, ಪುಷ್ಪಮಾಲೆಗಳು ಮತ್ತು ಆಭರಣಗಳಿಂದ ಅಲಂಕೃತಳಾಗಿ ತನ್ನ ಎಂಟು ಕೈಗಳಲ್ಲಿ ಬಿಲ್ಲು, ಈಟಿ, ಬಾಣ, ಗಂಟೆ, ಶಂಖ, ಚಕ್ರ, ಗದೆ ಮತ್ತು ಗುರಾಣಿಗಳನ್ನು ಹಿಡಿದ ದುರ್ಗೆಯ ಸ್ವರೂಪವನ್ನು ಪಡೆಯಿತು. ಆಕಾಶದಿಂದ ದುರ್ಗಾದೇವಿಯು ಕಂಸನಿಗೆ ಹೀಗೆ ಹೇಳಿದಳು:

`ನೀಚ ಕಂಸನೇ!, ನೀನು ನನ್ನನ್ನು ಕೊಲ್ಲಬಲ್ಲೆಯಾ? ನಿನ್ನನ್ನು ಕೊಲ್ಲುವ ಮಗುವು ಮೊದಲೇ ಹುಟ್ಟಿ ಎಲ್ಲೋ ಬೆಳೆಯುತ್ತಿದ್ದಾನೆ. ಮುಗ್ಧಳಾದ ನಿನ್ನ ತಂಗಿಯ ವಿಷಯದಲ್ಲಿ ಹೀಗೆ ಕ್ರೂರಿಯಾಗಿರಬೇಡ.”

ಈ ಮಾತುಗಳನ್ನು ಕೇಳಿದ ಕಂಸನು ಭಯದಿಂದ ತತ್ತರಿಸಿಹೋದನು. ಹೆದರಿಕೆಯಿಂದ ವಿಚಲಿತನಾಗಿ ವಸುದೇವ ದೇವಕಿಯನ್ನು ಕೂಡಲೇ ಬಂಧನದಿಂದ ಬಿಡುಗಡೆ ಮಾಡಿದನು.

ವಸುದೇವ ದೇವಕಿಯನ್ನು ಬಂಧನದಿಂದ ಬಿಡುಗಡೆ ಮಾಡಿ ಬಹಳ ವಿನಯದಿಂದ ಕಂಸನು ಮಾತನಾಡಲಾರಂಭಿಸಿದನು. “ನನ್ನ ಪ್ರೀತಿಯ ಸೋದರಿ ಹಾಗೂ ಭಾವನವರೇ, ನನ್ನ ಸೋದರಳಿಯಂದಿರನ್ನೇ ಕೊಂದು ನಾನು ರಾಕ್ಷಸನಂತೆ ವರ್ತಿಸಿದ್ದೇನೆ. ಈ ನನ್ನ ದುಷ್ಕೃತ್ಯಗಳ ಪರಿಣಾಮ ಏನಾಗುತ್ತದೆಂದು ನನಗೆ ತಿಳಿಯದು. ಬ್ರಾಹ್ಮಣರನ್ನು ಕೊಂದವರು ಹೋಗುವ ನರಕಕ್ಕೆ ನನ್ನನು ತಳ್ಳಬಹುದು. ಆದರೆ ಅಶರೀರವಾಣಿಯು ಹೇಳಿದ ಭವಿಷ್ಯವು ನಿಜವಾಗಲಿಲ್ಲವೆಂಬುದು ನನಗೆ ಆಶ್ಚರ್ಯವುಂಟುಮಾಡಿದೆ. ಸುಳ್ಳು ಹೇಳುವುದು ಮನುಷ್ಯರಲ್ಲಿ ಮಾತ್ರ ಕಂಡುಬರುವ ಗುಣವಲ್ಲ. ಆಕಾಶ ನಿವಾಸಿಗಳೂ ಸುಳ್ಳು ಹೇಳುತ್ತಾರೆಂದು ತೋರುತ್ತದೆ.

“ಈ ಭವಿಷ್ಯ ವಾಣಿಯನ್ನು ನಂಬಿ ನಾನು ಸಾಕಷ್ಟು ಪಾಪ ಕೃತ್ಯಗಳನ್ನು ಮಾಡಿದೆ. ನಿನ್ನ ಮಕ್ಕಳನ್ನು ಕೊಂದೆನೆಂದು ದುಃಖಿಸಬೇಡ. ಏಕೆಂದರೆ ದೇಹ ಅಳಿದರೂ ಆತ್ಮ ಶಾಶ್ವತವಾಗಿರುತ್ತದೆ. ನನ್ನ ಪ್ರೀತಿಯ ತಂಗಿ ಮತ್ತು ಭಾವ, ನಾನು ನಿಮಗೆ ಮಾಡಿದ ಕ್ರೂರ ಅಪರಾಧಗಳನ್ನು ದಯವಿಟ್ಟು ಕ್ಷಮಿಸಿ. ನನ್ನದು ನೀಚ ಸ್ವಭಾವ. ನಿಮ್ಮದು ಉದಾತ್ತ ಸ್ವಭಾವ. ಆದುದರಿಂದ ನನ್ನ ವಿಷಯದಲ್ಲಿ ಕರುಣೆ ತೋರಿ ಕ್ಷಮಿಸಿರಿ.”

ಕಂಸನು ಈ ಮಾತುಗಳನ್ನಾಡುತ್ತಿರುವಾಗ ಅವನ ಕಣ್ಣುಗಳಿಂದ ನೀರು ಹರಿಯುತ್ತಿತ್ತು. ಅವರ ಕಾಲುಗಳಿಗೆರಗಿದನು. ತಾನು ಕೊಲ್ಲಲು ಪ್ರಯತ್ನಿಸಿದ ದುರ್ಗಾದೇವಿಯ ಮಾತುಗಳನ್ನು ನಂಬಿ ಕಂಸನು ಕೂಡಲೇ ಸ್ವತಃ ತಾನೇ ಕಬ್ಬಿಣದ ಸರಣಿಗಳನ್ನು ತೆಗೆದು ಹಾಕಿ ಭಾವ ಮತ್ತು ತಂಗಿಯನ್ನು ಬಿಡುಗಡೆ ಮಾಡಿದನು.

ಹೀಗೆ ಪರಿ ಪರಿಯಾಗಿ ಪಶ್ಚಾತ್ತಾಪ ಪಡುತ್ತಿರುವ ಅಣ್ಣನನ್ನು ಕಂಡ ದೇವಕಿಯ ಹೃದಯ ಕರಗಿತು. ಅವನು ತನ್ನ ಮಕ್ಕಳ ವಿಷಯದಲ್ಲಿ ಎಸಗಿದ್ದ ಕ್ರೂರ ಕೃತ್ಯಗಳನ್ನೆಲ್ಲಾ ಮರೆತುಬಿಟ್ಟಳು. ವಸುದೇವನೂ ಹಿಂದೆ ಆದುದನ್ನೆಲ್ಲಾ ಮರೆತು ತನ್ನ ಭಾವ ಮೈದುನನೊಂದಿಗೆ ಮಂದಹಾಸದಿಂದ ಮಾತನಾಡಿದನು.

“ನನ್ನ ಅದೃಷ್ಟಶಾಲಿಯಾದ ಭಾವ, ಜಡದೇಹ ಮತ್ತು ಆತ್ಮಗಳ ವಿಷಯದಲ್ಲಿ ನೀನು ಹೇಳುವುದು ನಿಜ. ಪ್ರತಿಯೊಬ್ಬ ಜೀವಿಯೂ ತನ್ನ ಜಡದೇಹವೇ ಜೀವಾತ್ಮನೆಂದು ಭಾವಿಸಿ ಅಜ್ಞಾನದಲ್ಲಿ ಹುಟ್ಟುತ್ತಾನೆ ಹಾಗೂ ದೇವೋತ್ತಮ ಪರಮ ಪುರುಷನೊಡನೆ ತನ್ನ ಶಾಶ್ವತ ಬಾಂಧವ್ಯವನ್ನು ಮರೆಯುತ್ತಾನೆ.”

ವಸುದೇವನು ಕಂಸನೊಂದಿಗೆ ಈ ರೀತಿ ಕರುಣೆ ಹಾಗೂ ಕ್ಷಮೆಯ ಭಾವನೆಯಿಂದ ನುಡಿದಾಗ ಕಂಸನಿಗೆ ಅಪರಾಧಭಾವ ಕಡಮೆಯಾಯಿತು. ಅವರ ಅಪ್ಪಣೆ ಪಡೆದು ನಿರ್ಮಲವಾದ ಮನಸ್ಸಿನಿಂದ ತನ್ನ ಅರಮನೆಗೆ ಹಿಂತಿರುಗಿದನು.

(ಮುಂದುವರಿಯುವುದು)

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi