ಕೃಷ್ಣ ನಾಮವೇ ಅಮೃತ

ಆಂಗ್ಲ ಮೂಲ: ಬ್ಯಾಕ್‌ ಟು ಗಾಡ್‌ಹೆಡ್‌

ಕೃಷ್ಣ ಅನ್ನೋ ಎರಡಕ್ಷರಗಳು ಎಷ್ಟೊಂದು ಅಮೃತವನ್ನು ಹರಿಸಿವೆಯೋ ನಾ ಅರಿಯೆ. ಆ ಪವಿತ್ರ ಹೆಸರನ್ನು ಪಠಿಸಿದರೆ ಸಾಕು ಅದು ಬಾಯೊಳಗೆ ನರ್ತಿಸಿದಂತಾಗುತ್ತದೆ. ಆಗ ನನಗೆ ಇನ್ನಷ್ಟು ಬಾಯಿಗಳು ಬೇಕೆಂಬ ಬಯಕೆಯಾಗುತ್ತದೆ. ಆ ಹೆಸರು ನಮ್ಮ ಕರ್ಣರಂಧ್ರಗಳನ್ನು ಪ್ರವೇಶಿಸಿದಾಗ ಲಕ್ಷಾಂತರ ಕರ್ಣಗಳು ಬೇಕೆನಿಸುತ್ತದೆ. ಈ ಪವಿತ್ರನಾಮವು ಹೃದಯದಂಗಳದಲ್ಲಿ ಕುಣಿದಾಡುತ್ತ, ಮನಸ್ಸಿನ ಸಕಲ ಚಟುವಟಿಕೆಗಳನ್ನೂ ನಿಯಂತ್ರಿಸುತ್ತದೆ. ಇದರಿಂದಾಗಿ ಎಲ್ಲ ಇಂದ್ರಿಯಗಳೂ ನಿಷ್ಕ್ರಿಯಗೊಳ್ಳುತ್ತವೆ.”

ಮೇಲ್ಕಾಣಿಸಿದ ಈ ಭಕ್ತಿಪೂರ್ಣ ಮಾತುಗಳನ್ನು ಬರೆದವರು ಹದಿನಾರನೇ ಶತಮಾನದ ಭಾರತದ ಮಹಾನ್‌ ವೈಷ್ಣವ ಸಂತರಾದ ಶ್ರೀಲ ರೂಪ ಗೋಸ್ವಾಮಿ. ಅವರು ತಮ್ಮ ಧಾರ್ಮಿಕ ಔನ್ನತ್ಯದ ಹಂತದಲ್ಲಿದ್ದಾಗ ಅವರ ಲೇಖನಿಯಿಂದ ಸರಾಗವಾಗಿ ಹರಿದುಬಂದ `ವಿದಗ್ಧಮಾಧವ’ ಎಂಬ ಗ್ರಂಥದಿಂದ ಉಲ್ಲೇಖಿಸಲಾದ ನುಡಿಮುತ್ತುಗಳಿವು. ಅವರ ಸಹೋದರರಾದ ಶ್ರೀಲ ಸನಾತನ ಗೋಸ್ವಾಮಿಗಳು ಕೂಡ ತಮ್ಮ `ಬೃಹದ್‌ ಭಾಗವತಾಮೃತ’ದಲ್ಲಿ ಪರಮಾನಂದಪಡುತ್ತಾರೆ,    

“ಭಕ್ತರು ಎಲ್ಲ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು, ಧ್ಯಾನವನ್ನು ಮತ್ತು ಪೂಜೆಯನ್ನು ತ್ಯಜಿಸುವಂತೆ ಮಾಡುವ ಶ್ರೀಕೃಷ್ಣನ ಪರಮಾನಂದ ಪವಿತ್ರನಾಮಕ್ಕೆ ಜಯವಾಗಲಿ. ಒಬ್ಬ ಜೀವಾತ್ಮನು ಹೇಗಾದರೂ ಈ ಪವಿತ್ರನಾಮವನ್ನು ಒಮ್ಮೆ ಹೇಳಿದರೂ ಸಾಕು ಅವನಿಗೆ ಮೋಕ್ಷ ದೊರೆಯುತ್ತದೆ. ಕೃಷ್ಣನ ಪವಿತ್ರನಾಮವು ಪರಮೋಚ್ಚ ಅಮೃತ. ಅದೇ ನನ್ನ ಜೀವನ ಮತ್ತು ಏಕೈಕ ನಿಧಿ.”

ಹೀಗೆ ಭಗವಂತನ ನಾಮದ ಧ್ಯಾನಮಗ್ನ ಪಠಣದ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸುವುದು ಹೊಸಬರ ದೃಷ್ಟಿಯಲ್ಲಿ ವಿಚಿತ್ರವಾಗಿ ಕಂಡುಬರಬಹುದು. ಏಕೆಂದರೆ, ಅವರ ಪ್ರಕಾರ, ಹೀಗೆ ಬರೀ ಶಬ್ದಗಳನ್ನು ಅಥವಾ ಭಾಷಿಕ ಸೂತ್ರನಿರೂಪಣೆಗಳನ್ನು ಮತ್ತೆ ಮತ್ತೆ ಸ್ಮರಿಸುವುದರಿಂದ ಅದು ಹೇಗೆ ಪ್ರಜ್ಞೆಯು ರೂಪಾಂತರಗೊಂಡು, ಆತ್ಮಾನಂದವು ಅಭಿವೃದ್ಧಿಗೊಳ್ಳುತ್ತದೆ? ಧರ್ಮದ ಆಧುನಿಕ ಪ್ರಾಪಂಚಿಕ ವಿದ್ಯಾರ್ಥಿಗಳು ಅಲೌಕಿಕ ಗುಣಲಕ್ಷಣಗಳು ಮಾನಸಿಕ ಸ್ಥಿತಿಗತಿಗಳೇ ಹೊರತು ಆಧ್ಯಾತ್ಮಿಕವಲ್ಲ ಎಂದು ಹೇಳುತ್ತಾರೆ. ಆದರೆ ಭಕ್ತಿಭಾವದಲ್ಲಿ ಮುಳುಗಿ ಆ ಪವಿತ್ರನಾಮದ ಅಮೃತವನ್ನು ಸವಿದಂಥವರ ದಿವ್ಯಾನುಭವಗಳನ್ನು ವ್ಯಾಖ್ಯಾನಿಸಲು ಕೇವಲ ಮಾನಸಿಕ ಸಿದ್ಧಾಂತಗಳಿಂದ ಸಾಧ್ಯವಿಲ್ಲ. ಅಲ್ಲದೇ ಈ ಆಚರಣೆಯು ವಿವಿಧ ಆಧ್ಯಾತ್ಮಿಕ ಪರಂಪರೆಗಳ ಮೇಲೆ ಅದರಲ್ಲೂ ಮುಖ್ಯವಾಗಿ ವೈಷ್ಣವ ಪರಂಪರೆಯ ಮೇಲೆ ಬೀರಿದಂತಹ ಪ್ರಭಾವವನ್ನು ಕುರಿತು ಏನನ್ನೂ ವಿವರಿಸಲು ಸಾಧ್ಯವಿಲ್ಲ.

ಭಗವಂತನ ನಾಮದ ಸಾಮೂಹಿಕ ಸಂಕೀರ್ತನೆಯನ್ನು ಆಧರಿಸಿದ ದೊಡ್ಡ ಪ್ರಮಾಣದ ಧಾರ್ಮಿಕ ಪುನರುಜ್ಜೀವನವು ಮಧ್ಯಕಾಲೀನ ಭಾರತದಲ್ಲಿ ತಲೆದೋರಿತು. ಈ ಪ್ರಾರ್ಥನಮಾಲೆಯು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ ಎಂಬ ಮಹಾಮಂತ್ರದ ರೂಪ ಪಡೆಯಿತು. ಹದಿನಾರನೇ ಶತಮಾನದ ಮಹಾನ್‌ ಸಂತರೂ ಕೃಷ್ಣನ ಅವತಾರವೂ ಆದ ಶ್ರೀ ಚೈತನ್ಯರು ಈ ಸಂಕೀರ್ತನೆಯನ್ನು ಜನಪ್ರಿಯಗೊಳಿಸಿದರು. ಅನಂತರ ಅದನ್ನು ಉತ್ತರ ಭಾರತದಾದ್ಯಂತವಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿಯೂ ಹರಡಿದರು. ಅವರ ಜೀವನಚರಿತ್ರೆಗಳನ್ನು ಬರೆದವರ ಪ್ರಕಾರ, ಚೈತನ್ಯರು ಆರು ವರ್ಷಗಳ ಕಾಲ ಪಾದಯಾತ್ರೆ ಮಾಡುತ್ತ ಲಕ್ಷಾಂತರ ಜನರನ್ನು ಈ ಪವಿತ್ರನಾಮದ ಧರ್ಮಕ್ಕೆ ಪರಿವರ್ತನೆ ಮಾಡಿದರಂತೆ. ಮುಂಚೆ ಕೇವಲ ಋಷಿಗಳು, ತಪಸ್ವಿಗಳ ಬಾಯಲ್ಲಿ ಮಾತ್ರ ಆಡುತ್ತಿದ್ದ ಪವಿತ್ರನಾಮವನ್ನು ಬಹಿರಂಗವಾಗಿ ಜನಸಾಮಾನ್ಯರ ನಾಲಗೆ ಮೇಲೆ ಆಡುವಂತೆ ಮಾಡಿದವರು ಶ್ರೀ ಚೈತನ್ಯರು. ಅನಂತರ ಇದನ್ನು ಏಕಾಂತದಲ್ಲಿ ಹೇಳದೇ ಜನರು ಸಂಗೀತ ವಾದ್ಯಗಳೊಂದಿಗೆ, ಆನಂದಪರವಶರಾಗಿ ಬೀದಿ ಬೀದಿಯಲ್ಲಿ ಹಾಡತೊಡಗಿದರು. ಜನಸಾಮಾನ್ಯರಷ್ಟೇ ಅಲ್ಲದೇ ಪಂಡಿತರು ಕೂಡ ಪವಿತ್ರನಾಮ ಬೋಧನೆಗಳಿಂದ ಪ್ರಭಾವಿತರಾಗಿ, ಈ ನವ್ಯ ಆಂದೋಲನದ ಹರಿಕಾರರಾದ ಶ್ರೀ ಚೈತನ್ಯರ ಭಕ್ತಿಪೂರ್ಣ ಆನಂದಪರವಶತೆಗೆ ಶರಣಾಗತರಾದರು. ಈ ಹರಿನಾಮ ಸಂಕೀರ್ತನೆಯು ಬರೀ ಭಾರತದಲ್ಲಷ್ಟೇ ಅಲ್ಲದೇ ಇತ್ತೀಚಿನ ಕಳೆದ ಹಲವು ದಶಕಗಳಿಂದ ಪಾಶ್ಚಾತ್ಯ ದೇಶಗಳ ಪ್ರಮುಖ ನಗರಗಳ ಬೀದಿಗಳಲ್ಲೂ ರಾರಾಜಿಸುತ್ತಿದೆ.

ಈ ಪವಿತ್ರನಾಮ ಜಪವು ಮಾನವ ಪ್ರಜ್ಞೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಈ ಧ್ಯಾನ ಪ್ರಕ್ರಿಯೆಯನ್ನು ಆಚರಿಸುವುದು ಹೇಗೆ? ಅದರ ಪರಿಣಾಮಗಳೇನು? ಎಲ್ಲ ಐತಿಹಾಸಿಕ ಮತ್ತು ಸಾಂಸ್ಕೃತಿಕ ಎಲ್ಲೆಗಳನ್ನೂ ಮೀರಿ ನಿಂತಿರುವ ಅದರ ಜಾಗತಿಕ ಆಕರ್ಷಣೆಗೆ ಕಾರಣವೇನು? – ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂದರೆ ನಾವು ಮೊದಲು ಸಂಕುಚಿತ ಮನೋಭಾವನೆಯನ್ನು ಬಿಟ್ಟುಬಿಡಬೇಕು; ಒಬ್ಬ ನಿಷ್ಠಾವಂತ ತೀರ್ಥಯಾತ್ರಿಯಂತೆ ಗೌರವಪೂರ್ಣ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಆಗ ಈ ರಹಸ್ಯಗಳನ್ನು ಭೇದಿಸುವುದು ಸಾಧ್ಯವಾಗುತ್ತದೆ.

ಪವಿತ್ರನಾಮದ ದಿವ್ಯ ಲಕ್ಷಣಗಳು:

ವೈಷ್ಣವ ಜ್ಞಾನದ ಪ್ರಕಾರ, ಭಗವಂತನ ಹೆಸರು ಅವನಿಂದ ಬೇರೆಯಲ್ಲವಾದ್ದರಿಂದ ಕೃಷ್ಣನ ಪವಿತ್ರನಾಮವು ಸರ್ವಶ್ರೇಷ್ಠ ಅಲೌಕಿಕ ಶಕ್ತಿಯನ್ನು ಹೊಂದಿದೆ. ಲೌಕಿಕ ಜಗತ್ತಿನಲ್ಲಿ ಹೆಸರು ಮತ್ತು ರೂಪ ಬೇರೆ ಬೇರೆಯಾಗಿವೆ. ಭಾಷೆ ಕೇವಲ ಪ್ರಾತಿನಿಧಿಕ ಮತ್ತು ಸಾಂಕೇತಿಕವಾದುದು; ಅದು ತಾನು ಪ್ರತಿನಿಧಿಸಬೇಕಾದ ಸತ್ಯಾಂಶವನ್ನು ಒಳಗೊಂಡಿರುವುದಿಲ್ಲ. ನೀರು ಎಂಬ ಶಬ್ದವನ್ನು ಜಪಿಸುವುದರಿಂದ ನಮ್ಮ ಬಾಯಾರಿಕೆಯೇನು ತಣಿಯುವುದಿಲ್ಲ. ಹಾಗೆಯೇ ನಮಗೆ ಪ್ರಿಯರಾದವರ ಹೆಸರನ್ನು ಕೂಗಿದರೆ ಅವರ ಪೂರ್ಣ ಉಪಸ್ಥಿತಿಯೇನೂ ಉಂಟಾಗುವುದಿಲ್ಲ. ಆದರೆ ಅಲೌಕಿಕ ಜಗತ್ತಿನಲ್ಲಿ, ಸಂಕೇತ ಮತ್ತು ವಾಸ್ತವಿಕತೆ ಒಂದಾಗಿರುತ್ತವೆ. ಕೃಷ್ಣನು ತನ್ನ “ಅವತಾರ” ದೊಳಗೆ ಅಂದರೆ ತನ್ನ ಪವಿತ್ರನಾಮದಲ್ಲಿ ತನ್ನನ್ನು ಪ್ರಕಟಿಸುತ್ತಾನೆ. ಶ್ರೀ ಚೈತನ್ಯರಿಗೆ ಸೇರಿರುವ ಏಕೈಕ ಸಾಹಿತ್ಯಕ ಕೃತಿಯಾದ `ಶಿಕ್ಷಾಷ್ಟಕ’ ವು ಎಂಟು ಶ್ಲೋಕಗಳನ್ನು ಒಳಗೊಂಡಿದೆ. ಇದರಲ್ಲಿ ಚೈತನ್ಯರು ಪ್ರಾರ್ಥಿಸುತ್ತಾರೆ, “ಓ ದೇವ, ನಿನ್ನ ಪವಿತ್ರನಾಮದಲ್ಲಿ ಸಕಲ ಅದೃಷ್ಟವೂ ಅಡಗಿದೆ. ಆದ್ದರಿಂದ ನಿನಗೆ ಕೃಷ್ಣ ಮತ್ತು ಗೋವಿಂದ ಹೀಗೆ ಅನೇಕ ಹೆಸರುಗಳಿದ್ದು, ಅವುಗಳ ಮುಖಾಂತರ ನೀನು ವಿಸ್ತರಣೆಗೊಳ್ಳುವೆ. ನಿನ್ನ ಸಕಲ ಶಕ್ತಿಗಳನ್ನು ನೀನು ಆ ಹೆಸರುಗಳಲ್ಲಿ ವಿನಿಯೋಗಿಸಿರುವೆ.”

ಹದಿನೇಳನೇ ಶತಮಾನದ ಮಹಾನ್‌ ವೈಷ್ಣವ ಕವಿಗಳಾದ ನರೋತ್ತಮ ದಾಸ ಠಾಕುರರು ಹೀಗೆ ಬರೆಯುತ್ತಾರೆ, ಗೋಲೋಕೇರ ಪ್ರೇಮಧನ, ಹರಿನಾಮ ಸಂಕೀರ್ತನ : ಹರಿಯ ಪವಿತ್ರನಾಮದ ದಿವ್ಯಶಬ್ದವು ಉಗಮಿಸುವುದು ಆಧ್ಯಾತ್ಮಿಕ ಜಗತ್ತಿನಿಂದ.

ಪವಿತ್ರನಾಮವು ಭಗವಂತನ ಶಬ್ದಾವತಾರವಾಗಿರುವುದರಿಂದ ಅದು ಸಾಮಾನ್ಯ ಲೌಕಿಕ ಶಬ್ದವಲ್ಲ; ಅದೊಂದು ದಿವ್ಯ, ಅಲೌಕಿಕ ಶಬ್ದವಾಗಿದೆ. ಆದರೆ ಯಾರು ಈ ಪವಿತ್ರನಾಮವನ್ನು ಬೌದ್ಧಿಕವಾಗಿ ಅರಿತುಕೊಳ್ಳಲು ಪ್ರಯತ್ನಿಸುತ್ತಾರೋ ಅವರಿಗೆ ಈ ಪವಿತ್ರನಾಮವು ಸದಾ ರಹಸ್ಯವಾಗಿಯೇ ಉಳಿದುಬಿಡುತ್ತದೆ. ಪವಿತ್ರನಾಮದ ತತ್ತ್ವವನ್ನು ಪಂಡಿತರ ಸಮೂಹದಲ್ಲಿ ಚರ್ಚಿಸುತ್ತಿದ್ದ ಪವಿತ್ರನಾಮದ ಮಹಾನ್‌ ಬೋಧಕರಾದ ಶ್ರೀಲ ಹರಿದಾಸ ಠಾಕುರರು ಹೀಗೆ ಹೇಳಿದರು, “ಕೇವಲ ತರ್ಕ ಮತ್ತು ವಾದಗಳ ಮೂಲಕ ಒಬ್ಬ ವ್ಯಕ್ತಿಯು ಪವಿತ್ರನಾಮದ ವೈಭವಗಳನ್ನು ಅರಿತುಕೊಳ್ಳಲು ಸಾಧ್ಯವಿಲ್ಲ.” ಯಾರು ತಮ್ಮೆಲ್ಲ ಆಡಂಬರ ಮತ್ತು ಜಂಬವನ್ನು ತ್ಯಜಿಸಿ ವಿನಯ, ನಂಬಿಕೆ ಮತ್ತು ಭಕ್ತಿಯೊಂದಿಗೆ ಸಂಕೀರ್ತನ ಪ್ರಕ್ರಿಯೆಯನ್ನು ನೇರವಾಗಿ ಅನುಸರಿಸುತ್ತಿರುತ್ತಾರೋ ಅಂಥವರು ಮಾತ್ರ ಈ ಪವಿತ್ರನಾಮವನ್ನು ಅರಿತುಕೊಳ್ಳಲು ಮತ್ತು ಅನುಭವಿಸಲು ಸಾಧ್ಯವಾಗುತ್ತದೆ.

ಪವಿತ್ರನಾಮ ಜಪಿಸುವ ವಿಧಾನ:

ಪವಿತ್ರನಾಮವು ಅಲೌಕಿಕವಾದುದರಿಂದ ಅದನ್ನು ಅಲೌಕಿಕ ಮೂಲಗಳಿಂದಲೇ ಸ್ವೀಕರಿಸಬೇಕು. ಗುರುಪರಂಪರೆಗೆ ಸೇರಿದ ಭಗವತ್ಸಾಕ್ಷಾತ್ಕಾರ ಹೊಂದಿದ ಆತ್ಮಗಳಾದ ಆಧ್ಯಾತ್ಮಿಕ ಗುರುಗಳ ಪರಂಪರೆಯು ಪವಿತ್ರನಾಮ ಮತ್ತು ಸಕಲ ಆಧ್ಯಾತ್ಮಿಕ ಜ್ಞಾನವನ್ನು ಕಾಪಾಡಿಕೊಂಡು ಮತ್ತು ಹಸ್ತಾಂತರಿಸುತ್ತ ಬಂದಿದೆ. ಈ ಮಂತ್ರವು, ಈ ಪವಿತ್ರನಾಮವು ಅಲೌಕಿಕ ಭಕ್ತಿಯ ಬೀಜವಾಗಿದ್ದು, ಇದನ್ನು ಆಧ್ಯಾತ್ಮಿಕ ಗುರುವು ಆಧ್ಯಾತ್ಮಿಕ ದೀಕ್ಷೆ ನೀಡುವ ಸಮಯದಲ್ಲಿ ತನ್ನ ಶಿಷ್ಯನ ಹೃದಯದಲ್ಲಿ ಬಿತ್ತುತ್ತಾನೆ. ಪೂರ್ಣಸಾಕ್ಷಾತ್ಕಾರ ಹೊಂದಿರುವ ಗುರುವು ಪವಿತ್ರನಾಮವನ್ನು ಭಕ್ತಿಪರವಶತೆಯಲ್ಲಿ ಉಚ್ಚರಿಸಿದರೆ, ಅದನ್ನು ಕೇಳಿದವನಿಗೆ ಫಲ ದೊರಕಿ, ಅವನು ತತ್‌ಕ್ಷಣವೇ ಲಾಭವನ್ನು ಗಳಿಸುತ್ತಾನೆ. ಒಬ್ಬ ಆಧ್ಯಾತ್ಮಿಕ ಗುರುವಿನ ಅಧರಗಳಿಂದ ಪವಿತ್ರನಾಮವನ್ನು ಸ್ವೀಕರಿಸಿದಂತಹ ವಿದ್ಯಾರ್ಥಿಯು ಪ್ರತಿನಿತ್ಯವೂ ಪಠಿಸಲು ಪ್ರಾರಂಭಿಸುತ್ತಾನೆ. ಅವನು ಪವಿತ್ರನಾಮವನ್ನು ಜಾಗರೂಕತೆಯಿಂದ, ಸ್ಪಷ್ಟವಾಗಿ ಮತ್ತು ತನಗೆ ಕೇಳಿಸುವಷ್ಟು ಗಟ್ಟಿಧ್ವನಿಯಲ್ಲಿ ಪಠಿಸಲು ಕಲಿಯುತ್ತಾನೆ. ಪವಿತ್ರನಾಮ ಪಠಿಸುವವನು ತನ್ನ ಪ್ರಜ್ಞೆಯನ್ನು ಮಂತ್ರದ ದಿವ್ಯಶಬ್ದದೊಳಗೆ ಆಳಕ್ಕಿಳಿಸುವ ಮೂಲಕ ತನ್ನ ಮನಸ್ಸು ನಿರುಪಯುಕ್ತ ಅಥವಾ ಗೊತ್ತುಗುರಿಯಿಲ್ಲದ ವಿಚಾರಗಳಿಗೆ ಸಿಕ್ಕು ಚಂಚಲಗೊಳ್ಳದಂತೆ ಜಾಗರೂಕನಾಗಿ ಅದನ್ನು ಸಂರಕ್ಷಿಸಬೇಕು.

ಪವಿತ್ರನಾಮವನ್ನು ಪಠಿಸುವುದು ಚಿಂತನಶೀಲ ಜಾಣ್ಮೆಯಿಂದ ಕೂಡಿದ ಯಾಂತ್ರಿಕ ಪ್ರಕ್ರಿಯೆಯಲ್ಲ. ಅದೊಂದು ಭಕ್ತಿಪೂರ್ಣ ಕಲೆ, ಪ್ರಾರ್ಥನೆಯ ಒಂದು ರೂಪ; ಆದ್ದರಿಂದ ಅದನ್ನು ಭಕ್ತಿ ಮತ್ತು ಗೌರವದಿಂದ ಪಠಿಸಬೇಕು. ಹರೇಕೃಷ್ಣ ಮಂತ್ರವು ರಕ್ಷಣೆ ಮತ್ತು ಮೋಕ್ಷಕ್ಕಾಗಿ ಇರುವ ಪ್ರಾರ್ಥನೆ. ಭಗವಂತನ ದಿವ್ಯ ಉಪಸ್ಥಿತಿಗಾಗಿ ಮತ್ತು ಅವನನ್ನು ಸೇವಿಸಲು ಅವಕಾಶವನ್ನು ಒದಗಿಸಿಕೊಡುವಂತೆ ಮಾಡುವ ಪ್ರಾರ್ಥನೆ ಅದು. ಮಂತ್ರಜಪಿಸುವುದನ್ನು ಅಸಹಾಯಕ ಮಗುವೊಂದು ತನ್ನ ತಾಯಿಗಾಗಿ ಅಳುವುದಕ್ಕೆ ಹೋಲಿಸಲಾಗಿದೆ. ಅದು ಪಶ್ಚಾತ್ತಾಪಕ್ಕೊಳಗಾದ ಹೃದಯದ ಆಳದಿಂದ ಹೊರಹೊಮ್ಮುವ ಪ್ರಾರ್ಥನೆಯಾಗಿದೆ. ಆದ್ದರಿಂದಲೇ ಅದನ್ನು ನಮ್ರತೆಯಿಂದ ಪಠಿಸಲಾಗುತ್ತದೆ. ಒಮ್ಮೆ ಶ್ರೀ ಚೈತನ್ಯರು ತಮ್ಮ ಇಬ್ಬರು ಆಪ್ತ ಅನುಯಾಯಿಗಳ (ಸ್ವರೂಪ ದಾಮೋದರ ಗೋಸ್ವಾಮಿ ಮತ್ತು ರಾಮಾನಂದರಾಯ) ಜೊತೆಯಲ್ಲಿದ್ದಾಗ, ಮಂತ್ರವನ್ನು ನಮ್ರತೆಯ ಭಾವದಲ್ಲಿ ಪಠಿಸುವುದು ಎಷ್ಟೊಂದು ಪ್ರಮುಖವಾದುದೆಂಬುದನ್ನು ಬಣ್ಣಿಸಿದರು. ಅವರು ಹೇಳಿದರು, “ಯಾರು ತನ್ನನ್ನು ಹುಲ್ಲಿನ ಗರಿಕೆಗಿಂತ ಕೆಳಗಿನವನೆಂದು ತಿಳಿದುಕೊಳ್ಳುತ್ತಾನೋ, ಒಂದು ವೃಕ್ಷಕ್ಕಿಂತ ತಾಳ್ಮೆಯುಳ್ಳವನಾಗಿರುತ್ತಾನೋ ಮತ್ತು ತನಗಾಗಿ ಗೌರವ ಬಯಸದೇ ಸದಾ ಇತರರಿಗೆ ಗೌರವ ಸಲ್ಲಿಸಲು ಸಿದ್ಧನಾಗಿರುತ್ತಾನೋ ಅಂಥವನು ಯಾವಾಗಲೂ ತುಂಬ ಸುಲಭವಾಗಿ ಭಗವಂತನ ಪವಿತ್ರನಾಮವನ್ನು ಪಠಿಸಬಹುದಾಗಿದೆ.”

ಎಲ್ಲಿ ಮತ್ತು ಯಾವಾಗ ಮಂತ್ರಪಠಿಸುವುದು ಸೂಕ್ತ? ಪವಿತ್ರನಾಮವನ್ನು ಪಠಿಸಲು ನಿಗದಿತ ವೇಳೆ ಅಥವಾ ಸ್ಥಳದ ನಿರ್ಬಂಧವಿಲ್ಲ. ಭಕ್ತನು ಎಲ್ಲೆಡೆ ಮತ್ತು ಯಾವಾಗಲೂ ಪಠಿಸಬಹುದಾಗಿದೆ. ಕಾಲ ಮತ್ತು ಸ್ಥಳದ ನಿರ್ಬಂಧನೆಗೊಳಗಾಗಲು ಭಗವತ್ಸಾಕ್ಷಾತ್ಕಾರದ ಪ್ರಕ್ರಿಯೆಯು ಸಾಮಾಜಿಕ ಔಪಚಾರಿಕತೆಯಲ್ಲ. ಅದೊಂದು ಶೋಧವಾಗಿದ್ದು, ಒಬ್ಬ ವ್ಯಕ್ತಿಯ ಸಕಲ ಚಟುವಟಿಕೆಗಳುದ್ದಗಲಕ್ಕೂ ಚಾಚಿಕೊಂಡಿರಬೇಕು. ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವಂತೆ, ಮಹಾತ್ಮರು ನಿರಂತರವಾಗಿ ಅವನ ವೈಭವಗಳನ್ನು ಕುರಿತು ಪಠಿಸುತ್ತಾರೆ. ಚೈತನ್ಯ ಮಹಾಪ್ರಭುಗಳು ಕೂಡ ಹೇಳುವುದು ಇದನ್ನೇ. ಇನ್ನು ಶ್ರೀಲ ಹರಿದಾಸ ಠಾಕುರರು ನಿರಂತರ ನಾಮ ಲಾವೋ ಎಂದು ಹೇಳುತ್ತಾರೆ; ಅಂದರೆ “ಪವಿತ್ರನಾಮವನ್ನು ಎಡೆಬಿಡದೇ ಪಠಿಸಿ.”

ಪವಿತ್ರನಾಮದ ಪರಿಣಾಮಗಳನ್ನು ಸಂಪೂರ್ಣವಾಗಿ ಅನುಭವಿಸಬೇಕೆಂದರೆ ಒಬ್ಬ ವ್ಯಕ್ತಿಯು ಅಪಚಾರವೆಸಗದ ಜಪದ ಹಂತವನ್ನು ಗಳಿಸಬೇಕು. ವೈಷ್ಣವ ಗ್ರಂಥಗಳ ಪ್ರಕಾರ, ಪಠಣದ ಅಭಿವೃದ್ಧಿಯಲ್ಲಿ ಮೂರು ಪ್ರಗತಿಪರ ಹಂತಗಳಿವೆ: ಅಪಚಾರದ ಹಂತ (ನಾಮ ಅಪರಾಧ), ಅಪಚಾರವನ್ನು ತಗ್ಗಿಸುವ ಹಂತ (ನಾಮಾಭಾಸ) ಮತ್ತು ಅಪಚಾರವೆಸಗದ ಹಂತ, ಇದು ಪರಿಶುದ್ಧ ಹಂತವೂ ಹೌದು. ಪದ್ಮಪುರಾಣದ ಪ್ರಕಾರ, ಪವಿತ್ರನಾಮದ ವಿರುದ್ಧ ಹತ್ತು ಅಪಚಾರಗಳಿವೆ. ಈ ಅಪಚಾರದ ಪಕ್ಷದಲ್ಲಿ ಉಳಿದುಕೊಳ್ಳುವಂಥವನು ಪಠಣದ ಅಂತಿಮ ಗುರಿಯನ್ನು, ಭಗವತ್‌ ಪ್ರೇಮವನ್ನು ಗಳಿಸುವುದು ಸಾಧ್ಯವಿಲ್ಲ. ಕೃಷ್ಣದಾಸ ಕವಿರಾಜರು ಹೇಳುತ್ತಾರೆ, “ಒಬ್ಬ ವ್ಯಕ್ತಿಯು ಭಗವಂತನ ಮಹೋನ್ನತವಾದ ಪವಿತ್ರನಾಮವನ್ನು ಮತ್ತೆ ಮತ್ತೆ ಪಠಿಸಿದರೂ ಭಗವಂತನೆಡೆಗೆ ಅವನ ಪ್ರೇಮ ಅಭಿವೃದ್ಧಿ ಹೊಂದದಿದ್ದರೆ, ಅವನ ಕಂಗಳು ತುಂಬಿಬರದಿದ್ದರೆ, ಅವನು ಪಠಿಸುವಾಗ ಅಪಚಾರವೆಸಗಿದ್ದಾನೆಯಾದ್ದರಿಂದ ಅವನಲ್ಲಿ ಕೃಷ್ಣನ ಪವಿತ್ರನಾಮದ ಬೀಜವು ಮೊಳಕೆಯೊಡೆದಿಲ್ಲವೆಂಬುದು ಸ್ಪಷ್ಟವಾಗುತ್ತದೆ.” ನಿಜವಾಗಿ ಒಬ್ಬ ವ್ಯಕ್ತಿಯು ತನ್ನ ಪಠಣದಲ್ಲಿ ಅಪಚಾರವೆಸಗದಿದ್ದರೆ ಮಾತ್ರ ಅವನು ಪವಿತ್ರನಾಮ ಪಠಣದೊಂದಿಗೆ ಒಲವನ್ನು ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ. ಬದ್ಧಾತ್ಮನ ಪಾತ್ರದಲ್ಲಿ ಶ್ರೀ ಚೈತನ್ಯರು ಪ್ರಾರ್ಥಿಸುತ್ತಾರೆ, “ಓ ನನ್ನ ದೇವ, ನೀನು ಮುಕ್ತವಾಗಿ ನಿನ್ನ ಪವಿತ್ರನಾಮಗಳನ್ನು ಬೋಧಿಸುವ ಮೂಲಕ ಬದ್ಧಾತ್ಮರಿಗೆ, ಪತಿತಾತ್ಮರಿಗೆ ಕರುಣೆಯನ್ನು ದಯಪಾಲಿಸುವೆಯಾದರೂ, ನಾನು ಎಷ್ಟು ದುರದೃಷ್ಟಶಾಲಿಯಾಗಿದ್ದೇನೆಂದರೆ ಪವಿತ್ರನಾಮ ಪಠಣ ಮಾಡುವಾಗ ನಾನು ಅಪಚಾರವೆಸಗುತ್ತೇನೆ. ಇದರಿಂದಾಗಿ ಜಪದೊಂದಿಗೆ ನಾನು ಒಲವನ್ನು ಗಳಿಸುವುದು ಸಾಧ್ಯವಾಗುತ್ತಿಲ್ಲ.”

ಅಪಚಾರಗಳನ್ನು ಮೀರಿ ನಿಲ್ಲುವುದು ಮತ್ತು ಪರಿಶುದ್ಧ ಪಠಣವನ್ನು ಬೆಳೆಸಿಕೊಳ್ಳುವುದು ಹೇಗೆ ಸಾಧ್ಯ? ಅಧಿಕ ಪಠಣ ಮಾಡುವ ಮೂಲಕ. ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರರು ಶ್ರೀಮದ್ಭಾಗವತಕ್ಕೆ ತಾವು ಬರೆದ ಭಾಷ್ಯದಲ್ಲಿ ಪದ್ಮಪುರಾಣದ ಒಂದು ಶ್ಲೋಕವನ್ನು ಉಲ್ಲೇಖಿಸುತ್ತಾರೆ; ಆ ಶ್ಲೋಕದ ಪ್ರಕಾರ, ಪ್ರಾರಂಭದಲ್ಲಿ ಒಬ್ಬ ವ್ಯಕ್ತಿಯು ಹರೇಕೃಷ್ಣ ಮಂತ್ರವನ್ನು ಅಪಚಾರಗಳೊಂದಿಗೆ ಪಠಿಸಿದರೂ, ಅವನು ಮತ್ತೆ ಮತ್ತೆ ಪಠಿಸುತ್ತ ಹೋದಂತೆ ತನ್ನ ಅಪಚಾರಗಳಿಂದ ಮುಕ್ತನಾಗುತ್ತಾನೆ. ಪವಿತ್ರನಾಮಕ್ಕಿರುವ ಅಪಾರ ಶುದ್ಧೀಕರಣ ಶಕ್ತಿ ಎಂಥದೆಂದರೆ, ಅದನ್ನು ನಿರಂತರವಾಗಿ ಪಠಿಸುತ್ತ ಹೋದರೆ ಆ ವ್ಯಕ್ತಿಯು ಅಪಚಾರಗಳಿಂದ ಮುಕ್ತನಾಗುತ್ತಾನೆ ಮತ್ತು ಪರಿಶುದ್ಧ ಪಠಣದ ದಿವ್ಯವೇದಿಕೆಗೇರುವ ಮೂಲಕ ಪರಿಶುದ್ಧ ಭಗವತ್‌ ಪ್ರೇಮವನ್ನು ಗಳಿಸಬಲ್ಲನು.

ಪವಿತ್ರನಾಮದ ದಿವ್ಯಪ್ರಭಾವಗಳು:

ಈ ಪವಿತ್ರನಾಮವನ್ನು ಯಾರು ಅತ್ಯಂತ ಗೌರವಪೂರ್ಣ ಭಕ್ತಿಯ ಭಾವದಿಂದ ಪಠಿಸುತ್ತಾರೋ ಅಂಥವರ ಮೇಲೆ ಅದು ಅತಿ ಗಾಢವಾದ ಪ್ರಭಾವ ಬೀರುತ್ತದೆ.

* ಪಾಪಪ್ರತಿಕ್ರಿಯೆಗಳಿಂದ ಮುಕ್ತಿ:

ಪವಿತ್ರನಾಮವು ಹಿಂದಿನ ಮತ್ತು ಈಗಿನ ಜನ್ಮದಲ್ಲಿ ಎಸಗಿದಂತಹ ಪಾಪಗಳ ಪ್ರತಿಫಲಗಳನ್ನು ಕಿತ್ತು ಹಾಕುತ್ತದೆ. ಏಕೆಂದರೆ, “ಈ ವ್ಯಕ್ತಿಯು ನನ್ನ ಪವಿತ್ರನಾಮವನ್ನು ಪಠಿಸಿದ್ದಾನೆಯಾದ್ದರಿಂದ ಅವನನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿದೆ” ಎಂದು ಪರಮ ಪುರುಷನು ಯೋಚಿಸುತ್ತಾನೆ. ಹಾಗಾಗಿ ಅವನ ನಾಮವನ್ನು ಪಠಿಸಿದಂತಹ ವ್ಯಕ್ತಿಯು ತನ್ನ ಹೋದ ಜನ್ಮದ ಪಾಪಪ್ರತಿಕ್ರಿಯೆಗಳಿಂದಷ್ಟೇ ಅಲ್ಲದೇ ಈ ಜನ್ಮದ ಪಾಪಗಳಿಂದುಂಟಾದ ದುಷ್ಟರಿಣಾಮಗಳಿಂದಲೂ ಮುಕ್ತನಾಗುತ್ತಾನೆ.

* ಮಾಯೆಯಿಂದ ಮುಕ್ತಿ:

ಒಬ್ಬ ವ್ಯಕ್ತಿಯು ತನ್ನ ಪಾಪಾಸಕ್ತಿಯಿಂದ ಮುಕ್ತನಾಗಬೇಕೆಂದರೆ ಅದಕ್ಕೆ ಪ್ರಚೋದಕವಾಗಿರುವ ಮಾಯೆಯಿಂದ ಅವನು ದೂರವಿರಬೇಕು. ದೇವೋತ್ತಮ ಪರಮ ಪುರುಷನ ಪವಿತ್ರನಾಮವನ್ನು ಪಠಿಸುವ ಮೂಲಕ ಅವನಿಗೆ ಹತ್ತಿರವಾಗಬೇಕು. ಇಂತಹ ದಿವ್ಯ, ಸ್ವಯಂಪ್ರೇರಿತ ಆಕರ್ಷಣೆಯಿಂದಾಗಿ ಅವನ ಹೃದಯದಲ್ಲಿರುವ ಲೌಕಿಕ ಆಸೆಗಳು ನಾಶವಾಗಿ, ಅವನ ಹೃದಯ ಪರಿಶುದ್ಧಗೊಳ್ಳುತ್ತದೆ.

* ಜ್ಞಾನೋದಯ:

ಕೃಷ್ಣನಿಗೂ ಮತ್ತು ಅವನ ಪವಿತ್ರ ನಾಮಕ್ಕೂ ಭೇದವಿಲ್ಲ. ವೇದಗಳೆಲ್ಲ ಜ್ಞಾನದ ಮೂಲವಾಗಿವೆ. ದೇವೋತ್ತಮ ಪರಮ ಪುರುಷನಾದ ಕೃಷ್ಣನೇ ವೈದಿಕ ಜ್ಞಾನದ ತಿರುಳಾಗಿದ್ದಾನೆ. ಆದ್ದರಿಂದಲೇ ಅವನ ಪವಿತ್ರನಾಮವನ್ನು ಪಠಿಸಿದಂತಹ ವ್ಯಕ್ತಿಯು ಸಂಪೂರ್ಣ ಜ್ಞಾನಿಯಾಗುತ್ತಾನೆ.

* ಮುಕ್ತಿ:

ಒಬ್ಬ ವ್ಯಕ್ತಿಯು ಪವಿತ್ರನಾಮವನ್ನು ಪಠಿಸುವ ಮೂಲಕ ಪರಿಶುದ್ಧತೆ ಮತ್ತು ಜ್ಞಾನದ ಹಂತವನ್ನು ತಲಪಿದಾಗ ಅವನು ತನ್ನನ್ನು ಲೌಕಿಕ ಶರೀರದೊಂದಿಗೆ ಮತ್ತು ಲೌಕಿಕ ಜಗತ್ತಿನೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಈ ರೀತಿ ಅವನು ಲೌಕಿಕ ಚಟುವಟಿಕೆಗಳಿಂದ ಮುಕ್ತನಾಗುತ್ತಾನೆ. ಹೀಗೆ ಅವನು ಮತ್ತೆ ಈ ಲೌಕಿಕ ಜಗತ್ತಿನಲ್ಲಿ ಜನಿಸುವ ಆವಶ್ಯಕತೆಯಿಲ್ಲ. ಹರಿದಾಸ ಠಾಕುರರು ಹೇಳುವಂತೆ, “ಭಗವಂತನ ಪವಿತ್ರನಾಮದ ಕಾಂತಿಯ ಅತಿ ಮಸುಕಾದ ಕಿರಣಗಳು ಕೂಡ ಒಬ್ಬ ವ್ಯಕ್ತಿಗೆ ಮುಕ್ತಿಯನ್ನು ದಯಪಾಲಿಸಬಲ್ಲವು.”

* ಭಗವತ್ಪ್ರಜ್ಞೆ:

ಸತತವಾದ ಪವಿತ್ರನಾಮ ಪಠಣದಿಂದ ಭಗವತ್ಪ್ರಜ್ಞೆ ಬೆಳೆಯುತ್ತದೆ; ಅದು ಮಹೋನ್ನತ ಕೃಷ್ಣಭಕ್ತಿಯನ್ನು ಅಭಿವೃದ್ಧಿಗೊಳಿಸುತ್ತದೆ. ಕೇವಲ ಮುಕ್ತಿ ಹೊಂದುವುದರಿಂದ ಆಧ್ಯಾತ್ಮಿಕ ಪರಿಪೂರ್ಣತೆಯುಂಟಾಗದು. ಆ ಆತ್ಮವು ಲೌಕಿಕ ಕಲ್ಮಷದಿಂದ ಮುಕ್ತವಾದ ಅನಂತರ, ತನ್ನ ಮೂಲ ಸ್ಥಾನವಾದ ಭಗವಂತನ ಪ್ರೀತಿಯ ಸೇವಕನ ಸ್ಥಾನಕ್ಕೆ ಮರಳಬೇಕು. ಭಕ್ತಿಮಾರ್ಗದಲ್ಲಿ ಮುಂದುವರಿದಂತೆಲ್ಲ ವ್ಯಕ್ತಿಯು ಪವಿತ್ರನಾಮವನ್ನು ಪಠಿಸುತ್ತ ಭಗವಂತನಿಗೆ ಹತ್ತಿರವಾಗುತ್ತ ಹೋಗುತ್ತಾನೆ. ಪವಿತ್ರನಾಮದ ಪರಿಶುದ್ಧ ಮತ್ತು ಭಕ್ತಿಪೂರ್ಣ ಪಠಣದಿಂದ ಅವನು ಭಗವತ್ಸಾಕ್ಷಾತ್ಕಾರ ಹೊಂದುತ್ತಾನೆ ಮತ್ತು ಭಗವತ್ಪ್ರಜ್ಞೆಯ ಅತ್ಯಂತ ಆಳವಾದ ರಹಸ್ಯಗಳನ್ನು ಭೇದಿಸುತ್ತಾನೆ.

* ಭಗವತ್‌ ಪ್ರೇಮ:

ಭಗವತ್ಪ್ರಜ್ಞೆಯು ಪ್ರೇಮಭಕ್ತಿಯ ಪರಾಕಾಷ್ಠೆಯನ್ನು ತಲಪುತ್ತದೆ. ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಬರೆಯುತ್ತಾರೆ, “ಕೃಷ್ಣನ ಪವಿತ್ರನಾಮವು ಎಷ್ಟು ಆಕರ್ಷಕವಾದುದೆಂದರೆ, ಅದನ್ನು ಪಠಿಸಿದಂಥವರೆಲ್ಲರೂ ಕೃಷ್ಣನ ಪ್ರೇಮದಿಂದ ತುಂಬಿಹೋಗುತ್ತಾರೆ. ಹರೇಕೃಷ್ಣ ಮಂತ್ರವನ್ನು ಪಠಿಸುವುದರಿಂದುಂಟಾಗುವ ಪ್ರಭಾವವಿದು.” ಭಕ್ತನಾದವನು ಭಗವಂತನ ಪವಿತ್ರನಾಮವನ್ನು ಕೇಳಿದರೂ ಸಾಕು, ಅವನು ದಿವ್ಯಾನಂದದಲ್ಲಿ ಲೀನವಾಗಿಬಿಡುತ್ತಾನೆ.

ದಿವ್ಯ ವಿಶೇಷಾನುಗ್ರಹ:

ಪವಿತ್ರನಾಮವು ವೈಯಕ್ತಿಕ ಆಧ್ಯಾತ್ಮಿಕ ಪರಿಪೂರ್ಣತೆಯನ್ನು ಅನುಗ್ರಹಿಸುವುದರಿಂದಷ್ಟೇ ಪ್ರಮುಖವಾದುದೆಂದರ್ಥವಲ್ಲ; ವೈಷ್ಣವ ಸಾಹಿತ್ಯವನ್ನು ಓದಿದರೆ ಪವಿತ್ರನಾಮವು ಐತಿಹಾಸಿಕವಾಗಿ ಮತ್ತು ಜಾಗತಿಕವಾಗಿಯೂ ಎಷ್ಟೊಂದು ಪ್ರಮುಖವಾದುದಾಗಿದೆ ಎಂಬ ಸಂಗತಿಯು ಬೆಳಕಿಗೆ ಬರುತ್ತದೆ. ಪಾರಂಪರಿಕ ಭಾರತೀಯ ಗ್ರಂಥಗಳಲ್ಲಿ ಕಬ್ಬಿಣದ ಲೋಹಯುಗ, ಲೌಕಿಕತೆ, ದುಷ್ಟತನ ಮತ್ತು ಹೊಡೆದಾಟದ ಯುಗವೆಂದು ಬಣ್ಣಿಸಲಾಗಿರುವ ಕಲಿಯುಗದಲ್ಲಿರುವ ಏಕೈಕ ಧರ್ಮವೆಂದರೆ ಹರಿನಾಮ ಅಥವಾ ಪವಿತ್ರನಾಮ ಸಂಕೀರ್ತನೆ. ಕಲಿಯುಗದಲ್ಲಿ ಮಾನವ ಸಮಾಜವು ಮನುಷ್ಯ ಜಾತಿಗಿಂತ ಕೆಳಗಣ ಮಟ್ಟಕ್ಕಿಳಿಯುತ್ತದೆ. ಅಂತಹ ಜಗತ್ತಿನಲ್ಲಿ ಜನರು ತಮ್ಮ ಆತ್ಮವನ್ನು ಕಡೆಗಣಿಸಿ, ತಮ್ಮ ಐಹಿಕ ಶರೀರಗಳೊಂದಿಗೆ ಗುರುತಿಸಿಕೊಳ್ಳುತ್ತಾರೆ ಮತ್ತು ಜಗತ್ತಿನಾದ್ಯಂತ ಲೌಕಿಕ ವಸ್ತುಗಳಿಗಾಗಿ ಮತ್ತು ಸುಖಗಳಿಗಾಗಿ ಹುಚ್ಚೆದ್ದು ಹೋರಾಡುತ್ತಾರೆ. ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ, “ಕಲಿಯುಗದ ಜನರು ಜಗಳಗಂಟರೂ, ಆಲಸಿಗಳೂ, ತಪ್ಪು ಮಾರ್ಗದರ್ಶನ ಹೊಂದಿರುವವರೂ, ಅದೃಷ್ಟಹೀನರೂ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಸದಾ ಅಶಾಂತಿಯುಳ್ಳವರಾಗಿರುತ್ತಾರೆ.”

ಅಂತಹ ಅದೃಷ್ಟಹೀನ ವ್ಯಕ್ತಿಗಳು ಆಧ್ಯಾತ್ಮಿಕ ಅಭಿವೃದ್ಧಿಯ ಬಗ್ಗೆ ಸ್ವಲ್ಪ ಅಥವಾ ಎಳ್ಳಷ್ಟೂ ಆಸಕ್ತಿ ಹೊಂದಿರುವುದಿಲ್ಲ. ಇಂಥವರು ಮರಣಸದೃಶ ನಿದ್ರೆಯಿಂದ ಎಚ್ಚರಗೊಂಡು, ಆಧ್ಯಾತ್ಮಿಕ ಮುಕ್ತಿಯಂತಹ ಅವಕಾಶವನ್ನು ಪಡೆದುಕೊಳ್ಳುವಂತೆ ಮಾಡುವಂತಹ ಒಂದು ಸರಳ ವಿಧಾನದ ಆವಶ್ಯಕತೆಯಿದೆ. ಪವಿತ್ರನಾಮವೇ ಮಹಾನ್‌ ಅನುಗ್ರಹವು. ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಹೇಳುತ್ತಾರೆ, “ಕಲಿಯುಗದಲ್ಲಿ ಕೃಷ್ಣನು ಪವಿತ್ರನಾಮದ ರೂಪದಲ್ಲಿ ಅವತರಿಸಿದ್ದಾನೆ.” ಈ ಪವಿತ್ರನಾಮವು ನಿಜವಾದ ವೈಭವವಾಗಿದೆ, ಈ ಶಾಪಗ್ರಸ್ತ ಯುಗದಲ್ಲಿ ಏಕೈಕ ರಕ್ಷಾಕವಚವಾಗಿದೆ. ಶುಕದೇವ ಗೋಸ್ವಾಮಿಗಳು ಪರೀಕ್ಷಿತ ಮಹಾರಾಜನಿಗೆ ಹೇಳುವುದೂ ಇದನ್ನೇ, “ಕಲಿಯುಗವು ದೋಷಗಳಿಂದ ಕೂಡಿದೆಯಾದರೂ, ಈ ಯುಗದಲ್ಲಿ ಒಂದು ಉತ್ತಮ ಗುಣವಿದೆ. ಅದೇನೆಂದರೆ, ಒಬ್ಬ ವ್ಯಕ್ತಿಯು ಕೇವಲ ಕೃಷ್ಣನ ಪವಿತ್ರನಾಮವನ್ನು ಪಠಿಸುವ ಮೂಲಕ ಲೌಕಿಕ ಸಂಬಂಧಗಳಿಂದ ಮುಕ್ತನಾಗಬಲ್ಲನು ಮತ್ತು ಆಧ್ಯಾತ್ಮಿಕ ರಾಜ್ಯವನ್ನು ಪ್ರವೇಶಿಸಬಲ್ಲನು.” ಕಳೆದ ಯುಗಗಳಲ್ಲಿ ಆಧ್ಯಾತ್ಮಿಕ ಅಭಿವೃದ್ಧಿ ಸಾಧಿಸಲು ಮಾಡಿದಂತಹ ಅನೇಕ ಪ್ರಯತ್ನಗಳೆಲ್ಲವೂ ಈ ಕಲಿಯುಗದಲ್ಲಿ ವಿಫಲಗೊಳ್ಳುತ್ತವೆ. ಇದಕ್ಕೆ ಕಾರಣ ಮನುಷ್ಯನ ವೈಯಕ್ತಿಕವಾದ ಮತ್ತು ಸಾಮೂಹಿಕವಾದ ಪತನ. ಈಗ ಪವಿತ್ರನಾಮ ಪಠಣವು ಆಧ್ಯಾತ್ಮಿಕ ಶಿಸ್ತಿನ ಇತರ ಎಲ್ಲ ರೂಪಗಳನ್ನೂ ಮೀರಿ ನಿಲ್ಲುತ್ತದೆ: ಶ್ರೀಮದ್ಭಾಗವತದಲ್ಲಿ (12.3.52) ಹೇಳಿರುವಂತೆ, “ಸತ್ಯಯುಗದಲ್ಲಿ ವಿಷ್ಣುವಿನ ಧ್ಯಾನ ಮಾಡುವ ಮೂಲಕ, ತ್ರೇತಾಯುಗದಲ್ಲಿ ಯಜ್ಞಗಳನ್ನು ಮಾಡುವ ಮೂಲಕ ಮತ್ತು ದ್ವಾಪರಯುಗದಲ್ಲಿ ಭಗವಂತನ ಪಾದಕಮಲಗಳನ್ನು ಸೇವಿಸುವ ಮೂಲಕ ಪುಣ್ಯವನ್ನು ಗಳಿಸಿದಂತೆಯೇ ಈ ಕಲಿಯುಗದಲ್ಲಿ ಕೇವಲ ಭಗವಂತನ ಪವಿತ್ರನಾಮವನ್ನು ಪಠಿಸುವ ಮೂಲಕ ಪುಣ್ಯ ಗಳಿಸಬಹುದಾಗಿದೆ.” ಈ ಪವಿತ್ರನಾಮ ಪ್ರಯೋಗದ ಸರ್ವೋತ್ಕೃಷ್ಟತೆಯನ್ನು ಬೃಹನ್‌ ನಾರದೀಯ ಪುರಾಣದಲ್ಲಿ ಒತ್ತಿ ಹೇಳಲಾಗಿದೆ, “ಈ ಕಲಿಯುಗದಲ್ಲಿ ಭಗವಂತನ ಪವಿತ್ರನಾಮ, ಪವಿತ್ರನಾಮ, ಪವಿತ್ರನಾಮವನ್ನು ಬಿಟ್ಟರೆ ಆಧ್ಯಾತ್ಮಿಕ ಪ್ರಗತಿ ಹೊಂದಲು ಅನ್ಯ ಮಾರ್ಗವಿಲ್ಲ, ಅನ್ಯ ಮಾರ್ಗವಿಲ್ಲ, ಅನ್ಯ ಮಾರ್ಗವಿಲ್ಲ.” ಹೀಗೆ ಭಗವಂತನ ಪವಿತ್ರನಾಮವನ್ನು ಪಠಿಸುವುದೇ ಈ ಯುಗದ ಯುಗಧರ್ಮವಾಗಿದೆ.

ಉಪಸಂಹಾರ:

ಪವಿತ್ರನಾಮ ಪಠಣವು ಸಹಸ್ರಾರು ವರ್ಷಗಳ ಭಾರತದ ಧಾರ್ಮಿಕ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದೆಯಾದರೂ, ಅದನ್ನು ಯುಗಧರ್ಮವೆಂದು ನಿರ್ದಿಷ್ಟವಾಗಿ ಹರಡಿದವರು ಮತ್ತು ಜನಪ್ರಿಯಗೊಳಿಸಿದವರೆಂದರೆ ಶ್ರೀ ಚೈತನ್ಯರು. ಅವರ ಕಾಂತಿಯುತ ಉಪಸ್ಥಿತಿ ಮತ್ತು ಉತ್ಸಾಹಪೂರಿತ ಭಕ್ತಿಭಾವಗಳು ಲಕ್ಷಾಂತರ ಜನರನ್ನು ನಾಮಧರ್ಮದೆಡೆಗೆ ಸೆಳೆದವು. ಪವಿತ್ರನಾಮದ ಮಹಾನ್‌ ಬೋಧಕರಾದ ಶ್ರೀ ಚೈತನ್ಯರನ್ನು ಕಲಿಯುಗದ ಪ್ರಮುಖ ಅವತಾರವೆಂದು ಗೌರವಿಸಲಾಯಿತು ಮತ್ತು ಪೂಜಿಸಲಾಯಿತು. ಅಷ್ಟೇ ಅಲ್ಲದೇ, ಅವರನ್ನು ಭಗವಂತನ ಅತ್ಯಂತ ಮಹಾನ್‌ ಅವತಾರವೆಂದು ಪೂಜಿಸಲಾಯಿತು; ಏಕೆಂದರೆ ಅವರು ಪರಿಶುದ್ಧ ಕೃಷ್ಣಭಕ್ತಿಯನ್ನು ಎಲ್ಲರಿಗೂ ಮುಕ್ತವಾಗಿ ದಯಪಾಲಿಸಿದರು. `ಕಲಿಸಂತರಣ ಉಪನಿಷದ್‌’ ನಲ್ಲಿ ನಿರ್ದಿಷ್ಟವಾಗಿ ಹೇಳಿರುವಂತೆ, ಶ್ರೀ ಚೈತನ್ಯರು ಜನಪ್ರಿಯಗೊಳಿಸಿದ ಮಹಾಮಂತ್ರವು ಕಲಿಯುಗದ ಶಕ್ತಿಗುಂದಿಸುವ ಸ್ಥಿತಿಗಳಿಂದ ಮುಕ್ತಿ ಹೊಂದಲು ಇರುವ ಏಕೈಕ ಮಾರ್ಗವಾಗಿದೆ: “ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ – ಈ ಹದಿನಾರು ಹೆಸರುಗಳು ಮೂವತ್ತೆರಡು ಉಚ್ಚಾರಾಂಶಗಳಿಂದ ರಚಿತವಾಗಿದ್ದು, ಇವುಗಳಿಂದ ಮಾತ್ರ ಕಲಿಯುಗದ ದುಷ್ಪರಿಣಾಮಗಳನ್ನು ಎದುರಿಸುವುದು ಸಾಧ್ಯ. ಎಲ್ಲ ವೇದಗಳಲ್ಲಿ ಕಂಡುಬರುವ ಅಂಶವೆಂದರೆ, ಈ ಅಜ್ಞಾನದ ಸಾಗರವನ್ನು ದಾಟಲು ಪವಿತ್ರನಾಮ ಪಠಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.” ಈ ಪವಿತ್ರನಾಮವು ಮಾನವರ ಮೇಲೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಸರ್ವಶ್ರೇಷ್ಠ ಲಾಭಗಳನ್ನು ಕರುಣಿಸುತ್ತದೆಯಲ್ಲದೇ, ಕೆಳಮಟ್ಟದ ಜೀವಿಗಳನ್ನು ಕೂಡ ಪರಿಶುದ್ಧಗೊಳಿಸುತ್ತದೆ. ಭಗವಂತನ ಈ ದಿವ್ಯ, ಆಧ್ಯಾತ್ಮಿಕ ಅವತಾರವನ್ನು ಆಲಿಸುವ ಪುಣ್ಯವಿರುವ ಯಾವುದೇ ಜೀವಿಯು ಅಪಾರ ಅಲೌಕಿಕ ಲಾಭ ಗಳಿಸುತ್ತಾನೆ.

ಪವಿತ್ರನಾಮವು ಕೇವಲ ಭಾರತಕ್ಕೆ ಸೀಮಿತವಾಗಿರಬಾರದೆಂಬುದು ಶ್ರೀ ಚೈತನ್ಯರ ಇಚ್ಛೆಯಾಗಿತ್ತು. ಅದು “ಪ್ರತಿ ನಗರ ಮತ್ತು ಪ್ರತಿ ಹಳ್ಳಿ”ಗೆ ತಲಪುವುದು ಎಂದು ಅವರು ಭವಿಷ್ಯ ನುಡಿದಿದ್ದರು. ನಾಲ್ಕು ಶತಮಾನಗಳ ಅನಂತರ ಪವಿತ್ರನಾಮದ ಜಾಗತಿಕತೆಯ ಆಧಾರದ ಮೇಲೆ ಈ ಪ್ರಚಾರಕ ಆದರ್ಶವನ್ನು ತಮ್ಮ ಅವಿರತ ಪ್ರಯತ್ನಗಳಿಂದ ಬಲಗೊಳಿಸಿದವರೆಂದರೆ ಶ್ರೀ ಚೈತನ್ಯರ ಮಹಾನ್‌ ಅನುಯಾಯಿ ಮತ್ತು ಗುರುಪರಂಪರೆಯ ಒಂಬತ್ತನೇ ತಲೆಮಾರಿನ ಪ್ರತಿನಿಧಿಗಳಾದ ಶ್ರೀಲ ಭಕ್ತಿವಿನೋದ ಠಾಕುರರು.

ಅನಂತರ, ಭಕ್ತಿವಿನೋದರ ಪುತ್ರ (ಭಕ್ತಿಸಿದ್ಧಾಂತ ಸರಸ್ವತೀ ಗೋಸ್ವಾಮಿ)ರ ಶಿಷ್ಯರಾದ ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಭಕ್ತಿವಿನೋದರ ಕನಸನ್ನು ನನಸಾಗಿಸಲೆಂದು ಭಾರತವನ್ನು ಬಿಟ್ಟು ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ಅವರು 1966ರಲ್ಲಿ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ (ಇಸ್ಕಾನ್‌) ವನ್ನು ಸ್ಥಾಪಿಸಿದರು. ಮಹಾಮಂತ್ರವನ್ನು ಪರಿಣಾಮಕಾರಿಯಾಗಿ ಹರಡಿದ ಈ ಧಾರ್ಮಿಕ ಸಂಘವು “ಹರೇಕೃಷ್ಣ ಆಂದೋಲನ” ವೆಂದೇ ಜನಪ್ರಿಯವಾಯಿತು. ಪವಿತ್ರನಾಮವನ್ನು ಪಠಿಸುವುದು ಮತ್ತು ಹರಡುವುದು ಈ ಆಂದೋಲನದ ಅಡಿಪಾಯ ಮತ್ತು ಮುಖ್ಯ ಗುರಿಯಾಗಿದೆ. ಸಂಘದ ಸಂಸ್ಥಾಪಕರಾದ ಶ್ರೀಲ ಪ್ರಭುಪಾದರು ಹೀಗೆ ಬರೆಯುತ್ತಾರೆ, “ಕೃಷ್ಣನ ಪವಿತ್ರನಾಮವನ್ನು ಪ್ರತಿಯೊಬ್ಬರೂ ಕೇಳುವಂತೆ ಮಾಡಲು ಶ್ರೀ ಚೈತನ್ಯ ಮಹಾಪ್ರಭುಗಳು ಹರೇಕೃಷ್ಣ ಮಂತ್ರದ ಸಾಮೂಹಿಕ ಸಂಕೀರ್ತನೆಯನ್ನು ಪರಿಚಯಿಸಿದರು. ಏಕೆಂದರೆ, ಕೇವಲ ಪವಿತ್ರನಾಮವನ್ನು ಕೇಳುವುದರಿಂದ ಒಬ್ಬ ವ್ಯಕ್ತಿಯು ಪವಿತ್ರನಾಗುತ್ತಾನೆ. ಹಾಗಾಗಿ ನಮ್ಮ ಕೃಷ್ಣಪ್ರಜ್ಞಾ ಆಂದೋಲನವು ಜಗತ್ತಿನಾದ್ಯಂತ ಮುಖ್ಯವಾಗಿ ಹರೇಕೃಷ್ಣ ಮಂತ್ರವನ್ನು ಜಪಿಸುವುದರಲ್ಲಿ ನಿರತವಾಗಿದೆ.” ಅವರು ಮತ್ತೆ ಹೇಳುತ್ತಾರೆ, “ಹರೇಕೃಷ್ಣ ಮಂತ್ರವನ್ನು ಪ್ರತಿಕ್ಷಣ, ಎಷ್ಟು ಸಾಧ್ಯವೋ ಅಷ್ಟು, ದೇವಾಲಯದ ಹೊರಗೆ ಮತ್ತು ಒಳಗೆ ಜಪಿಸುವ ತತ್ತ್ವದ ಮೇಲೆ ಈ ಕೃಷ್ಣಪ್ರಜ್ಞಾಂದೋಲನವು ನಿಂತಿದೆ.” “ಮುಖ್ಯವಾಗಿ ಜನರು ಹರೇಕೃಷ್ಣ ಮಂತ್ರವನ್ನು ಜಪಿಸಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸುವುದಕ್ಕಾಗಿಯೇ” ಈ ಚಳವಳಿಯಿರುವುದು.

ಕೃಷ್ಣನ ಪವಿತ್ರನಾಮವು ಬಹುಕಾಲ ಭಾರತಕ್ಕಷ್ಟೇ ಸೀಮಿತವಾಗಿದ್ದಿತು. ಅದು ಪಾಶ್ಚಾತ್ಯರ ಕಣ್ಣಿಗೆ ಬಿದ್ದಿರಲಿಲ್ಲ. ಇಂದು ಅದೇ ಪವಿತ್ರನಾಮವು ಪಾಶ್ಚಾತ್ಯ ಸಮಾಜದ ಪ್ರಚಲಿತ ಪ್ರವೃತ್ತಿಯನ್ನು ಪ್ರವೇಶಿಸಿದೆ. ಈ ಮಹಾಮಂತ್ರವು ಪ್ರತಿಯೊಬ್ಬರಿಗೂ ಲಭ್ಯವಿರುವ “ಚಿರಪರಿಚಿತ ಮಂತ್ರ”ವಾಗಿಬಿಟ್ಟಿದೆ. ಈ ಪವಿತ್ರನಾಮವು ಮುಕ್ತವಾಗಿ, ಸಾರ್ವಜನಿಕರಿಗೆ ಲಭ್ಯವಿದ್ದರೂ, ಅದೊಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತು ಕೊಂಡುಕೊಳ್ಳಬಹುದಾದ ಸಾಧಾರಣ ವಸ್ತುವಲ್ಲ. ಅದೊಂದು ಅಡಗಿಸಿಟ್ಟಿರುವ ನಿಧಿಯಾಗಿದೆ. ಅದನ್ನು ಕೇಳುವ ಕಿವಿಗಳನ್ನು ಅಥವಾ ಕಾಣುವ ಕಣ್ಣುಗಳನ್ನು ಒಬ್ಬ ವ್ಯಕ್ತಿಯು ಬೆಳೆಸಿಕೊಳ್ಳಬೇಕು. ಒಂದು ವೇಳೆ ಆ ವ್ಯಕ್ತಿಯು ಪವಿತ್ರನಾಮವನ್ನು ಗೌರವಪೂರ್ವಕವಾಗಿ ಒಪ್ಪಿಕೊಂಡು, ಅದನ್ನು ತನ್ನ ಕಿವಿಗಳ ಮುಖಾಂತರ ಹೃದಯವನ್ನು ತಲಪಲು ಬಿಟ್ಟರೆ, ಅದರಲ್ಲೂ ವಿಶೇಷವಾಗಿ ಅವನು ಆ ಪವಿತ್ರನಾಮವನ್ನು ತನ್ನ ಜೀವನ ಮತ್ತು ಆತ್ಮವೆಂದು ಸ್ವೀಕರಿಸಿದರೆ, ಅವನು ಸಕಲ ಆಧ್ಯಾತ್ಮಿಕ ರಹಸ್ಯಗಳಲ್ಲೇ ಅತ್ಯಂತ ಮಹೋನ್ನತವಾದ, ಪ್ರಮುಖವಾದ, ಆಳವಾದ ಆಧ್ಯಾತ್ಮಿಕ ರಹಸ್ಯವನ್ನು ಪ್ರವೇಶಿಸಬಲ್ಲನು.

“ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ/ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ.”

ಈ ಲೇಖನ ಶೇರ್ ಮಾಡಿ