ಯಾವಾಗಲೋ ಒಂದು ಸಲ, ತನ್ನ ಮನೆಸೇವಕಿ ಬೇರೆಬೇರೆ ಮನೆಯ ಕೆಲಸಗಳಲ್ಲಿ ತೊಡಗಿರುವುದನ್ನು ನೋಡಿದ ಯಶೋದಾ ತಾನೇ ಬೆಣ್ಣೆ ಕಡಿಯುವ ಕೆಲಸಕ್ಕೆ ಇಳಿದಳು. ಶ್ರೀಕೃಷ್ಣನಿಗೆ ತುಂಬಾ ಹಸಿವಾಗಿತ್ತು. ಹಾಗಾಗಿ ಮೊದಲು ತನಗೆ ಎದೆಹಾಲು ಕೊಟ್ಟು, ಆಮೇಲೆ ಬೇಕಾದರೆ ಬೆಣ್ಣೆ ಕಡಿಯಬಹುದು ಎಂಬಂತೆ ಸೂಚನೆ ಮಾಡಿದ್ದ.

ತಾಯಿ ಯಶೋದಾ ಕೂಡಲೇ ಅವನನ್ನು ಎತ್ತಿ ತನ್ನ ತೊಡೆಯಮೇಲೆ ಮಲಗಿಸಿಕೊಂಡು ಎದೆಹಾಲು ಕೊಟ್ಟಳು. ಇದ್ದಕ್ಕಿದ್ದ ಹಾಗೆಯೇ, ಅವಳು ಒಲೆಯಮೇಲೆ ಇಟ್ಟಿದ್ದ ಹಾಲು ಉಕ್ಕತೊಡಗಿತು. ಹಾಲು ಉಕ್ಕಿ ಹರಿಯುವುದನ್ನು ತಡೆಯಲು ತಾಯಿ ಯಶೋದಾ ಕೂಡಲೇ ಮಗುವನ್ನು ಪಕ್ಕಕ್ಕಿರಿಸಿ, ಒಲೆಯ ಕಡೆಗೆ ಹೋದಳು.
ತನ್ನ ತಾಯಿ ಹೀಗೆ ತನ್ನನ್ನು ಬಿಟ್ಟು ಹೋಗಿದ್ದನ್ನು ನೋಡಿ ಕೋಪಗೊಂಡ ಕೃಷ್ಣ, ಒಂದು ಕಲ್ಲಿನ ಚೂರನ್ನು ಕೈಗೆ ತೆಗೆದುಕೊಂಡು ಕೂಡಲೇ ಆ ಬೆಣ್ಣೆಯ ಮಡಕೆಯನ್ನು ಒಡೆದುಹಾಕಿದ. ಅದರಿಂದ ಸುರಿಯುತ್ತಿದ್ದ ಬೆಣ್ಣೆಯನ್ನು ಕೈಗೆ ತೆಗೆದುಕೊಂಡು, ಒಂದು ಮರೆಯಲ್ಲಿ ಬಚ್ಚಿಟ್ಟುಕೊಂಡು ಬೆಣ್ಣೆಯನ್ನು ತಿನ್ನತೊಡಗಿದ.
ಸ್ವಲ್ಪ ಹೊತ್ತಾದ ಮೇಲೆ ತಾಯಿ ಯಶೋದಾ ಬೆಣ್ಣೆ ಕಡಿಯುವ ಜಾಗಕ್ಕೆ ವಾಪಸ್ಸು ಬಂದಳು ಮತ್ತು ಅಲ್ಲಿ ಮಡಕೆ ಒಡೆದುಹೋಗಿರುವುದನ್ನು ನೋಡಿದಳು. ಮಗುವು ಅಲ್ಲೆಲ್ಲೂ ಕಾಣದಿರುವುದನ್ನು ನೋಡಿ, ಇದು ಅವನದೇ ಕೆಲಸ ಎಂದು ನಿರ್ಧರಿಸಿದಳು. ಮನೆಯಲ್ಲ ಹುಡುಕಿದಮೇಲೆ, ಒಂದು ದೊಡ್ಡ ಮರದ ಒರಳಿನಮೇಲೆ ಅವನು ಕುಳಿತಿರುವುದು ಕಾಣಿಸಿತು.

ಕೂಡಲೇ ಅವಳು ಸ್ವಲ್ಪವೂ ಸದ್ದುಮಾಡದೆ ಕೈಯ್ಯಲ್ಲೊಂದು ಕೋಳು ಹಿಡಿದುಕೊಂಡು ಹಿಂದಿನಿಂದ ಅವನನ್ನು ಹಿಡಿಯಲು ಬಂದಳು, ಆದರೆ ಅವನು ಕೂಡಲೇ ಒರಳಿನ ಮೇಲಿಂದ ಕೆಳಗೆ ದುಮುಕಿ ಹೆದರಿಕೆಯಿಂದ ಓಡಿಹೋಗಲು ಪ್ರಾರಂಭಿಸಿದ, ಯಶೋದಾ ಅವನನ್ನು ಹಿಡಿಯಲು ಎಲ್ಲ ಮೂಲೆಗೂ ಓಡಿದಳು, ದೊಡ್ಡದೊಡ್ಡ ತಪಸ್ಸು ಮಾಡಿದ ಋಷಿಗಳು ಹಿಂಬಾಲಿಸಲೂ ಸಾಧ್ಯವಾಗದ ಅವನನ್ನು ಹಿಂಬಾಲಿಸಿ ಓಡಿದಳು.
ಕೊನೆಗೂ ಅವನನ್ನು ಹಿಡಿದಾಗ, ಕೃಷ್ಣ ಆದಾಗಲೇ ಅಳುವ ಸ್ಥಿತಿಗೆ ತುಲುಪಿದ್ದ. ಆಗ ಯಶೋದಾ ತನ್ನ ಕೈಯಲ್ಲಿದ್ದ ಕೋಲನ್ನು ಬಿಸಾಡಿದಳು. ಅವನಿಗೇನಾದರೂ ಒಂದು ಶಿಕ್ಷೆಕೊಡಲು, ಅವನ ಕೈಗಳನ್ನು ಒಂದು ದಾರದಿಂದ ಕಟ್ಟಲು ಯೋಚಿಸಿದಳು. ಆದರೆ ಈ ದೇವೋತ್ತಮ ಪರಮ ಪುರಷನನ್ನು ಕಟ್ಟಿಹಾಕಲು ತನಗೆ ಸಾಧ್ಯವಾಗುವುದಿಲ್ಲ ಎಂದವಳಿಗೆ ಗೊತ್ತಿರಲಿಲ್ಲ.
ಈ ಪುಟ್ಟ ಕೃಷ್ಣ ತನ್ನ ಮಗನೇ ಎಂದು ತಾಯಿ ಯಶೋದಾ ಅಂದುಕೊಂಡಿದ್ದಳು; ಆದರವಳಿಗೆ, ಆ ಮಗುವಿಗೆ ಮಿತಿಗಳೇ ಇಲ್ಲ ಎನ್ನುವುದೇ ತಿಳಿದಿರಲಿಲ್ಲ. ಅವನು ಒಳಗೆ, ಹೊರಗೆ ಅಥವಾ ಪ್ರಾರಂಭ, ಕೊನೆ ಎನ್ನುವುದೇ ಇರಲಿಲ್ಲ. ಅವನು ಮಿತಿಯಿಲ್ಲದವನು ಮತ್ತು ಸರ್ವವ್ಯಾಪಿ. ಖಂಡಿತವಾಗಿಲೂ ಇಡೀ ವಿಶ್ವ ಸೃಷ್ಟಿಸ್ವರೂಪವೆಲ್ಲ ಅವನೇ.

ಹೀಗಿದ್ದರೂ, ಯಶೋದಾ ಯಾವಾಗಲೂ ಕೃಷ್ಣ ತನ್ನ ಮಗನೇ ಎಂದು ಭಾವಿಸಿಕೊಂಡಿದ್ದಳು. ಹೀಗವನು ಎಲ್ಲ ಇಂದ್ರಿಯಗಳ ಹಿಡಿತಕ್ಕೆ ಸಿಗದವನಾಗಿದ್ದರೂ, ಅವಳು ಅವನನ್ನು ಒಂದು ಒರಳಿಗೆ ಕಟ್ಟಿಹಾಕಲು ಪ್ರಯತ್ನಿಸಿದಳು. ಆದರೆ, ಅವನನ್ನು ಕಟ್ಟಿ ಹಾಕಲು ಅವಳು ಪ್ರಯತ್ನಿಸಿದಾಗ, ಅವಳಿಗೆ ತಾನು ಉಪಯೋಗಿಸುತ್ತಿದ್ದ ದಾರ ಸುಮಾರು ಎರಡು ಇಂಚಿನಷ್ಟು ಸಾಲದೇ ಹೋಗುತ್ತಿತ್ತು.
ಮನೆಯಲ್ಲಿದ್ದ ದಾರಗಳನ್ನೆಲ್ಲ ಸೇರಿಸಿ ಅವಳು ಕಟಿಹಾಕಲು ಪ್ರಯತ್ನಿಸಿ ನೋಡಿದಳು- ಆದರೂ ದಾರ ಕಡಮೆ ಬರುತ್ತಿತ್ತು. ಈ ರೀತಿಯಾಗಿ, ಮನೆಯಲ್ಲಿದ್ದ ಎಲ್ಲ ದಾರಗಳನ್ನೂ ಸೇರಿಸಿ ಕಟ್ಟಿ ಹಾಕಲು ಪ್ರಯತ್ನಿಸಿದರೂ, ಕೊನಗೆ ಅದೇ ಎರಡು ಇಂಚು ಕಡಮೆಯಾಗುತ್ತಿತ್ತು. ತಾಯಿ ಯಶೋದಾ ನಗುತ್ತಿದ್ದಳು, ಆದರೆ ಅವಳಿ ಆಶ್ಚರ್ಯವಾಗಿತ್ತು. ಇದು ಹೀಗೆಲ್ಲ ಆಗುತ್ತಿರುವುದಾದರೂ ಹೇಗೆ?
ತನ್ನ ಮಗನನ್ನು ಕಟ್ಟಿಹಾಕಲು ಪ್ರಯತ್ನಿಸುವುದರಲ್ಲಿ, ಅವಳಿಗೆ ಆಯಾಸವಾಗಿ ಹೋಯಿತು. ಬೆವರತೊಡಗಿದ್ದಳು, ಮತ್ತು ತಲೆಗೆ ಮುಡಿದಿದ್ದ ಹೂವೆಲ್ಲ ಉದುರಿಹೋಗಿತ್ತು. ಆಮೇಲೆ ಶ್ರೀಕೃಷ್ಣ ತನ್ನ ತಾಯಿಯ ಈ ಶ್ರಮದ ಪ್ರಯತ್ನವನ್ನೆಲ್ಲ ಮೆಚ್ಚಿಕೊಂಡ, ಮತ್ತೆ ಅವಳ ಮೇಲೆ ಕರುಣೆ ತೋರಿಸಿ, ಆ ದಾರದಿಂದ ತನ್ನನ್ನು ಕಟ್ಟಲು ಸಾಧ್ಯವಾಗುವಂತೆ ಮಾಡಿದ.

ಈ ರೀತಿ ಈ ತುಂಟ ಕೃಷ್ಣನನ್ನು ದಾರದಿಂದ ಸೊಂಟದ ಸುತ್ತಲೂ ಕಟ್ಟಿಹಾಕಿದ್ದರಿಂದ, ಅವನು ದಾಮೋದರ ಎಂದನ್ನಿಸಿಕೊಂಡ. ದಾಮ ಎಂದರೆ “ದಾರ”, ಮತ್ತು ಉದರ ಎಂದರೆ ಹೊಟ್ಟೆ. ವೃಂದಾವನದಲ್ಲಿ ಇಂದಿಗೂ, ಅಲ್ಲಿರುವ ಶ್ರೀ ಕೃಷ್ಣನನ್ನು ಪ್ರತಿದಿನ ಅವನ ಈ ದಾಮೋದರ ರೂಪದಲ್ಲಿ ಆರಾಧಿಸುವುದು ಒಂದು ಪದ್ಧತಿಯಾಗಿದೆ. ಕಾರ್ತಿಕ ಮಾಸ ಅಥವಾ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈ ದಾಮೋದರ ಮಾಸ ಬರುತ್ತದೆ.






Leave a Reply