ಈಗ ಜನಸಾಮಾನ್ಯರ ನಡುವೆ ಪ್ರಚಲಿತವಿರುವ ‘ಯೋಗ’ ನಿಜವಾದುದಲ್ಲ. ಈ ಕಾಲದಲ್ಲಿ ಅದನ್ನು ಸಾಧಿಸಲು ಯಾರಿಗೂ ಸಾಧ್ಯವಿಲ್ಲ.
ಇಂಗ್ಲಿಷ್ ಮೂಲ : ಧನುರ್ಧರ ದಾಸ, ಅನುವಾದ : ಚಿರಂಜೀವಿ
ಅರವತ್ತು ಸಾವಿರ ವರ್ಷಗಳ ಕಠಿಣ ಯೋಗಸಾಧನೆಯ ಅನಂತರವೂ ಕೂಡ ವಿಶ್ವಾಮಿತ್ರ ಋಷಿಗೆ ಆತ್ಮಸಾಕ್ಷಾತ್ಕಾರದ ಸಫಲತೆ ಸಾಧ್ಯವಾಗಲಿಲ್ಲ ಎಂದು ವೈದಿಕ ಸಾಹಿತ್ಯಗಳು ನಮಗೆ ತಿಳಿಸುತ್ತದೆ. ಇದರಿಂದ, ಪಾರಮಾರ್ಥಿಕ ಸಾಧನಶೀಲನಿಗೂ ಸಹ ಅಷ್ಟಾಂಗ ಯೋಗದ ದಾರಿಯಲ್ಲಿ ಪರಿಣತಿಗಳಿಸುವುದು ಎಷ್ಟು ಕಷ್ಟ ಎನ್ನುವುದು ಬಹಿರ೦ಗವಾಗುತ್ತದೆ.

ಭಗವದ್ಗೀತೆಯಲ್ಲಿ ರಣರಂಗವನ್ನು ತ್ಯಜಿಸಿ ಧ್ಯಾನಯೋಗದ ಬದುಕನ್ನು ಆರಿಸಿಕೊಳ್ಳುತ್ತೇನೆ ಎನ್ನುವ ಬಯಕೆಯನ್ನು ಅರ್ಜುನ ಮುಂದಿಟ್ಟಾಗ, ಶ್ರೀಕೃಷ್ಣನಿಗೆ ಸಹಜವಾಗಿ ಆತಂಕಗೊಳ್ಳುವಂತಾಯಿತು. ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಅಷ್ಟಾಂಗ ಯೋಗದ ಒಂದು ವಿಶ್ಲೇಷಣೆಯನ್ನು ಮಾಡಿದಾಗ, ಅರ್ಜುನನಿಗೆ ಅದು ಕಬ್ಬಿಣದ ಕಡಲೆಯ ಹಾಗೆ ಕಂಡಿತು. ಹೀಗಾಗಿ ಶ್ರೀಕೃಷ್ಣ ಒಂದು ಕಾರ್ಯಶಕ್ಯ ವಿಧಾನವನ್ನು ಶಿಫಾರಸು ಮಾಡಬೇಕಾಯಿತು.
`ಭಗವದ್ಗೀತೆಯಲ್ಲಿ ವಿವರಿಸಿರುವ ಯೋಗದ ಅನೇಕ ಪದ್ಧತಿಗಳಲ್ಲಿ ಒಂದಾದ ಅಷ್ಟಾಂಗ ಯೋಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಯೋಗ ಎಂದರೇನು ಎನ್ನುವುದನ್ನು ಪ್ರತಿಯೊಬ್ಬರೂ ಮೊದಲು ತಿಳಿದುಕೊಳ್ಳಬೇಕು.
‘ಯೋಗ’ ಎನ್ನುವ ಪದದ ಅರ್ಥ, ‘ಸಂಪರ್ಕ ಕೊ೦ಡಿ’ ಎಂದಾಗುತ್ತದೆ ಮತ್ತು ಪ್ರತಿಯೊಬ್ಬರ ಪ್ರಜ್ಞೆಯನ್ನು ದೇವೋತ್ತಮನೊಂದಿಗೆ ‘ಸಂಪರ್ಕ ಸಾಧನ’ ಮಾಡುವುದಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಪರಮಪುರುಷನೊಡನೆ ನಮ್ಮ ಸಂಬಂದವನ್ನು ಪುನಃ ಜಾಗೃತಗೊಳಿಸಲು ವಿವಿಧ ಯೋಗ ಕ್ರಿಯೆಗಳಿವೆ.
ಆಯಾ ಯೋಗ ಕ್ರಿಯಾನುಸಾರ ಅವುಗಳಿಗೆ ಹೆಸರುಗಳನ್ನು ನೀಡಲಾಗಿದೆ. ಉದಾಹರಣೆಗೆ, ಯಾರೊಬ್ಬರ ಈ ‘ಸಂಪರ್ಕ ಸಾಧನ ಪ್ರಕ್ರಿಯೆ ಪ್ರಮುಖವಾಗಿ ಕರ್ಮದ (ಅಂದರೆ ಕೆಲಸದ) ಮೂಲಕ ಆಗಿದ್ದರೆ ಅದು ‘ಕರ್ಮಯೋಗ’ ಎನಿಸುತ್ತದೆ. ಹಾಗೆಯೇ ಅದು ಪ್ರಮುಖವಾಗಿ ಆಧ್ಯಾತ್ಮಿಕ ವಿಶ್ಲೇಷಣೆಗಳ ಮೂಲಕವಾದರೆ ಅದು ‘ಜ್ಞಾನಯೋಗ’ ಎಂದು ಕರೆಸಿಕೊಳ್ಳುತ್ತದೆ.
ಅಷ್ಟಾಂಗ ಎಂದರೆ “ಎಂಟು ಭಾಗಗಳು” ಮತ್ತು ಅಷ್ಟಾಂಗ ಯೋಗ ಎನ್ನುವುದು, ನಮ್ಮ ಹೃದಯದಲ್ಲಿ ದೇವೋತ್ತಮ ಪುರುಷನ ಆಕೃತಿಯನ್ನು ಕುರಿತು ಧ್ಯಾನ ಮಾಡುವುದರ ಮೂಲಕ ಅವನೊಂದಿಗೆ ‘ಸಂಪರ್ಕ ಸಾಧನ’ ವಾಗುವ ಎಂಟು ಹಂತದ ಪ್ರಕ್ರಿಯೆ. ಒಬ್ಬನ ಬುದ್ಧಿ ಮನಸ್ಸುಗಳನ್ನು ಹತೋಟಿಯಲ್ಲಿ ಇಡುವುದಕ್ಕೆ ಇದು ಒತ್ತು ನೀಡುತ್ತದೆ.
ಐಹಿಕವಾಗಿ ಗೊತ್ತುಪಾಡಿಗೊಳಗಾಗಿರುವ ಮನಸ್ಸು, ಶಬ್ದಗಳು, ರುಚಿಗಳು, ನೋಟಗಳು ಮೊದಲಾದವುಗಳ ಮೂಲಕ ಇಂದ್ರಿಯ ಸುಖಗಳಲ್ಲಿ ಬೆರೆತುಹೋಗಲು ಪ್ರಯತ್ನಿಸುತ್ತಲೇ ಇರುತ್ತದೆ. ಬಹಿರಂಗ ತೊಡಗುವಿಕೆಗಳಿಂದ ತನ್ನ ಮನಸ್ಸನ್ನು ಬಿಡಿಸಿಕೊಂಡು ಆಧ್ಯಾತ್ಮಿಕ ದೃಢನಂಬಿಕೆಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಪ್ರೌಢ ಸಾಧಕಯೋಗಿ ತನ್ನ ಬುದ್ಧಿ ಮನಸ್ಸುಗಳನ್ನು ಪರಮಾತ್ಮನ ಅರಿವಿನ ಜಾಗೃತಿಯ ಉನ್ನತಿಯ ಕಡೆಗೆ ಮುನ್ನಡೆಸುತ್ತಾನೆ.
ಹೀಗೆ ಅಷ್ಟಾಂಗ ಯೋಗ ಆತ್ಮ ಸಾಕ್ಷಾತ್ಕಾರದ ಒಂದು ಕಾರ್ಯಸಾಧ್ಯ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ. ಮತ್ತು ಇದು ಅರ್ಜುಗೆ ಶ್ರೀಕೃಷ್ಣ ಪರಮಾತ್ಮ ಯೋಗಿಯೊಬ್ಬನ ಯೋಗ್ಯತೆಗಳನ್ನು ವಿವರಿಸುವತನಕ, ಖಚಿತವಾಗಿ ತನ್ನೆಲ್ಲ ತಲ್ಲಣಗಳ ಶಕ್ಯ ಪರಿಹಾರದ ಹಾಗೆ ಕಂಡಿತ್ತು.
ಯೋಗವನ್ನು ಅಭ್ಯಾಸ ಮಾಡಲು ಯಾರಾದರೊಬ್ಬರು ಒಂದು ಏಕಾಂತವಾದ ಪ್ರಶಸ್ತ ಪ್ರದೇಶಕ್ಕೆ ಹೋಗಬೇಕು, ಮತ್ತು ಕುಶಹುಲ್ಲನ್ನು ನೆಲೆದ ಮೇಲೆ ಹರಡಿ, ಜಿಂಕೆ ಚರ್ಮವನ್ನು ಅದರ ಮೇಲೆ ಹಾಸಬೇಕು. ಈ ಆಸನವು ಅತಿ ಎತ್ತರವೂ ಇರಬಾರದು, ಅತಿ ತಗ್ಗಿನಲ್ಲೂ ಇರಬಾರದು ಮತ್ತು ಒಂದು ಪವಿತ್ರ ತಾಣದಲ್ಲಿ ಇರಬೇಕು.
ಅನಂತರ ಯೋಗಿ ಅದರ ಮೇಲೆ ಕುಳಿತುಕೊಂಡು ತನ್ನ ಮನಸ್ಸನ್ನು ಒಂದು ಬಿಂದುವಿನಲ್ಲಿ ಕೇಂದ್ರೀಕರಿಸಿ, ಹೃದಯವನ್ನು ಶುದ್ಧವಾಗಿರಿಸಿಕೊಳ್ಳಲು, ತನ್ನ ಮನಸ್ಸು ಇಂದ್ರಿಯಗಳು ಮತ್ತು ಚಟುವಟಿಕೆಗಳನ್ನು ಹತೋಟಿಯಲ್ಲಿ ಇರಿಸಿಕೊಂಡು ಯೋಗವನ್ನು ದೃಢವಾಗಿ ಅಭ್ಯಾಸ ಮಾಡಬೇಕು.

ತನ್ನ ದೇಹ, ಕತ್ತು ಮತ್ತು ತಲೆಯನ್ನು ಒಂದು ನೇರ ಗೆರೆಯಂತೆ ನೆಟ್ಟಗಿರಿಸಿಕೊಂಡು, ಮೂಗಿನ ತುದಿಯನ್ನು ತದೇಕಚಿತ್ತದಿಂದ ಗಮನಿಸಬೇಕು. ‘ಹೀಗೆ, ಒಂದು ಚಡಪಡಿಕೆ ರಹಿತ, ಶಾಂತ, ಭಯರಹಿತ ಮನಸ್ಸಿನಿಂದ ಲೈಂಗಿಕ ಜೀವನದಿಂದ ಮುಕ್ತನಾಗಿ ನನ್ನ ಕುರಿತು ಹೃದಯದಲ್ಲಿ ಧ್ಯಾನವಂತರಾಗಬೇಕು ಮತ್ತು ನನ್ನನ್ನೇ ನಮ್ಮ ಜೀವನದ ಅಂತಿಮ ಗುರಿಯಾಕೊಳ್ಳಬೇಕು. (ಗೀತೆ, 6.11-14)
ಅರ್ಜುನ ರಾಜಮನೆತನದ ಒಬ್ಬ ಮಹಾನ್ ಯೋಧನಾಗಿದ್ದರೂ ಮತ್ತು ದೇವೋತ್ತಮ ಪುರುಷ ಶ್ರೀಕೃಷ್ಣನ ಆತ್ಮೀಯ ಮಿತ್ರನಾಗಿದ್ದರೂ, ತನ್ನ ಸಾಂಸಾರಿಕ ಜೀವನದಲ್ಲಿ ಮತ್ತು ಕೆಲಸ ಕಾರ್ಯಗಳಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದವನಾದ್ದರಿಂದ ಅವನು ಸಾಮಾನ್ಯ ಮಗುಷ್ಯನೊಬ್ಬನನ್ನು ಪ್ರತಿನಿಧಿಸುತ್ತಾನೆ. ಆದ್ದರಿಂದ ಅವನು, ಉಳಿದ ಬದುಕೆಲ್ಲ ಏಕಾಂತದಲ್ಲಿದ್ದು ಯೋಗಾಭ್ಯಾಸದ ಪ್ರಕ್ರಿಯೆಯಲ್ಲಿ ಯಶಸ್ಸು ಕಾಣುವುದರ ಬಗ್ಗೆ ಶ್ರೀಕೃಷ್ಣನ ಮುಂದೆ ಅನುಮಾನಗಳನ್ನು ವ್ಯಕ್ತಪಡಿಸುತ್ತಾನೆ.
ಉಳಿದಂತೆ, ಹೀಗೂ ಒಂದು ವಿವಿಕ್ತತೆ ಸಾಧ್ಯವೆನಿಸಿದರೂ, ಉನ್ನತ ಪರಿತ್ಯಾಗಗಳನ್ನುಳಿದು, ಬೇರೆ ಯಾರು ತಾನೇ, ಅಂತಿಮ ಪರಿಪೂರ್ಣತೆಗೆ ಅಗತ್ಯವಾದ ಇಂತಹದೊಂದು ಕಠಿಣ ತಪಸ್ಸಿಗೆ ಕುಳಿತುಕೊಳ್ಳುವುದನ್ನು ತಾಳಿಕೊಂಡಾರು? ಹೀಗಾಗಿ, ತನ್ನ ಶಕ್ತ್ಯಾನುಶಕ್ತಿಗಳನ್ನು ಪ್ರಾಮಾಣಿಕವಾಗಿ ಅಂದಾಜು ಮಾಡಿಕೊಂಡ ಅರ್ಜುನ, ಈ ಅಷ್ಟಾಂಗ ಯೋಗದ ಪ್ರಕ್ರಿಯೆಯನ್ನು, ತನ್ನ ಜ್ಞಾನೋದಯಕ್ಕೆ ತಕ್ಕದೊಂದು ದಾರಿ ಎನ್ನುವುದನ್ನು ನಿರಾಕರಿಸುತ್ತಾನೆ;
“ಓ ಮಧುಸೂದನ, ಈವರೆಗೆ ನೀನು ವಿವರಿಸಿದ ಈ ಯೋಗದ ಪದ್ಧತಿ ನನಗೆ ಕಾರ್ಯ ಸಾಧ್ಯವಲ್ಲದ ಮತ್ತು ಅನಪೇಕ್ಷಿತವಾದ ವಿಷಯ ಎಂದು ನನಗನ್ನಿಸುತ್ತದೆ – ಏಕೆಂದರೆ, ಮನಸ್ಸು ಅಶಾಂತ ಮತ್ತು ಅಸ್ಥಿರ. ಮನಸ್ಸು ಪ್ರಕ್ಷುಬ್ಧ ಮತ್ತು ಶಕ್ತಿಶಾಲಿಯಾದದ್ದು, ಓ ಕೃಷ್ಣಾ, ಇದನ್ನು ಅಡಗಿಸುವುದು, ಗಾಳಿಯನ್ನು ನಿಯಂತ್ರಿಸುವುದಕ್ಕಿಂತಲೂ ಕಷ್ಟವಾದ ಕೆಲಸ ಎಂದು ನನಗನ್ನಿಸುತ್ತದೆ.” (ಗೀತೆ – 6,33-34)
ಶ್ರೀ ಕೃಷ್ಣ ಈ ಯೋಗ ಪದ್ಧತಿಯನ್ನು ಸುದೀರ್ಘವಾಗಿ ಅರ್ಜುನನಿಗೆ ವಿವರಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರೂ, ಅವನು ಅರ್ಜುನನ ವಿಶ್ಲೇಷಣೆಯನ್ನು ಮೂಲಭೂತವಾಗಿ ಒಪ್ಪಿಕೊಳ್ಳುತ್ತಾನೆ: “ಓ ಕುಂತಿಯ ಧೀರ ಪುತ್ರನೇ, ಅಶಾಂತ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ನಿಸ್ಸಂದೇಹವಾಗಿ ಬಹಳ ಕಷ್ಟ….
” ಆರ್ಜುನನಿಗಿಂತಲೂ ಭಿನ್ನವಾಗಿ, ಅಷ್ಟಾಂಗ ಯೋಗದ ಅಂತಿಮ ಯಶಸ್ಸಿನ ದಾರಿಯನ್ನು ಕ೦ಡಿದ್ದ ಶ್ರೀಕೃಷ್ಣ ಮಾತು ಮುಂದುವರಿಸುತ್ತಾನೆ”…… ಆದರೆ, ಸತತ ಅಭ್ಯಾಸದಿಂದ ಮತ್ತು ಅನಾಸಕ್ತಿಯಿಂದ ಮಾತ್ರ ಇದು ಖಂಡಿತ ಸಾಧ್ಯ.”
ಹೀಗಾಗಿ ಪ್ರಶ್ನೆಯೊಂದು ಏಳುತ್ತದೆ: ಮನಸ್ಸನ್ನು ನಿಯಂತ್ರಿಸುವ ಅಭ್ಯಾಸ ಯಾವುದು? ಖಂಡಿತವಾಗಿಯೂ ಈ ಕಾಲದಲ್ಲಿ ಯಾರಿಗಾದರೂ ಅಷ್ಟಾಂಗ ಯೋಗದ ಕಠಿಣ ನೀತಿ ನಿಯಮಗಳನ್ನು ಪಾಲಿಸುವುದು ಕಷ್ಟ- ಇಂದ್ರಿಯಗಳ ಮತ್ತು ಮನಸ್ಸಿನ ನಿಗ್ರಹ, ಬ್ರಹ್ಮಚರ್ಯೆ, ಏಕಾಂತತೆ ಮೊದಲಾದವನ್ನು ಇದು ಬಯಸುತ್ತದೆ. ಅಷ್ಟಾಂಗ ಯೋಗವನ್ನು ಯಶಸ್ವಿಯಾಗಿ ಹೇಗೆ ಅಭ್ಯಾಸ ಮಾಡಬಹುದು ಎನ್ನುವುದಕ್ಕೆ ಉತ್ತರ – ವೈದಿಕ ವಿಶ್ವಶಾಸ್ತ್ರವನ್ನು ಅರಿಯುವುದರಿಂದ ಸಾಧ್ಯವಾಗುತ್ತದೆ.
ವೈದಿಕ ಸಾಹಿತ್ಯದ ಪ್ರಕಾರ, ನಮ್ಮ ಈ ವಿಶ್ವ 4,300,000 ವರ್ಷಗಳ ಕಾಲಮಾನದಲ್ಲಿ ಸಂಚರಿಸುತ್ತದೆ. ಇದನ್ನು ನಮ್ಮ ಅಗತ್ಯಕ್ಕಾಗಿ ‘ಸಹಸ್ರಮಾನ’ ಎಂದಿಟ್ಟುಕೊಳ್ಳಬಹುದು. ಇವು ಋತುಗಳ ಸಂಚಾರದ ಹಾಗೆ ಬದಲಾಗುತ್ತ, ತಮ್ಮದೇ ಆದ ವಿಶಿಷ್ಟ ವೈಲಕ್ಷಣಗಳನ್ನು ಹೊಂದಿವೆ.
ಆಯಾ ಕಾಲಮಾನದ ಮಾನವರ ಶಕ್ತಿ ಸಾಮರ್ಥ್ಯಗಳಿಗನುಗುಣವಾಗಿ ಒಂದು ನಿರ್ದಿಷ್ಟ ಯೋಗಾಭ್ಯಾಸ ಪದ್ಧತಿಯನ್ನು ಶಿಫಾರಸು ಮಾಡಲಾಗಿದೆ. ಉದಾಹರಣೆಗೆ, ಸತ್ಯಯುಗದಲ್ಲಿ ಜನರು 1,00,000 ವರ್ಷಗಳು ಬದುಕುತ್ತಾರೆ ಮತ್ತು ಒಳ್ಳೆಯತನದ ಉನ್ನತ ಗುಣಗಳನ್ನು ಹೊಂದಿರುತ್ತಾರೆ. ವೇದಗಳು ಇದಕ್ಕಾಗಿ ಹೀಗೆ ಆಜ್ಞಾಪಿಸಿದೆ: ‘ಕೃತೇಯದ್ ಧ್ಯಾಯತೋ ವಿಷ್ಣುಂ’. ಅಂದರೆ, ‘ಸತ್ಯಯುಗದಲ್ಲಿ ವಿಷ್ಣು ಧ್ಯಾನವನ್ನು (ಅಷ್ಟಾಂಗ ಯೋಗ) ಶಿಫಾರಸು ಮಾಡಲಾಗಿದೆ.

ಭಕ್ತಿಯೋಗವನ್ನು ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ್ದು ಸಹಸ್ರಮಾನದ ಕೊನೆಯ ಯುಗ ಮತ್ತು ಅತ್ಯಂತ ನಿಕೃಷ್ಟ ಕಾಲವೆನ್ನಬಹುದಾದ ಕಲಿಯುಗದ ಪ್ರಾರಂಭದಲ್ಲಿ. ಇಂದಿನ ದಿನಗಳಲ್ಲಿ ಬಹುಪಾಲು ಜನರಿಗೆ ಅತಿ ಸರಳ ಆಧ್ಯಾತ್ಮಿಕ ಚಟುವಟಿಕೆಗಳು ಕೂಡಾ ಅಸಾಧ್ಯವೆನಿಸಿಹೋಗಿದೆ.
ಆದ್ದರಿಂದ, ವೇದಗಳು ಹೀಗೆ ಹೇಳುತ್ತವೆ: “ಕಾಲೌ ತದ್‌ಧರಿ- ಕೀರ್ತನಾತ್” “ಕಲಿಯುಗದಲ್ಲಿ, ದೇವೋತ್ತಮದ ಪವಿತ್ರ ನಾಮಗಳನ್ನು ಪಠಿಸುವ ಆಧಾರ ಮೇಲಿರುವ ಭಕ್ತಿಯೋಗವೇ ಸಾಧುವಾದದ್ದು’ ಎಂದು ಶಿಫಾರಸ್ಸು ಮಾಡಲಾಗಿದೆ.
ಭಕ್ತಿಯೋಗವೆನ್ನುವುದು, ಅಷ್ಟಾಂಗ ಯೋಗದ ಕಠಿಣತೆಗಳಿಗೆ ಹೋಲಿಸಿದರೆ, ಒಂದು ಸರಳವಾದ ಆಚರಣೆ ಎಂದಾದರೂ, ಪರಮಾತ್ಮನ ಪವಿತ್ರ ನಾಮಸ್ಮರಣೆಯ ಮೂಲಾಧಾರವೇ ಎನ್ನಿಸಿ ಸಾಮಾನ್ಯವಾದುದೇನಲ್ಲ ಎಂದೆನಿಸಿದೆ – ಯೋಗದ ಪರಿಪೂರ್ಣತೆ ಎಂದೇ ಇದನ್ನು ಪರಿಗಣಿಸಲಾಗಿದೆ.
ಯಾವುದಾದರೂ ಯೋಗ ಪದ್ಧತಿಯ ಪರಿಪೂರ್ಣತೆಯ ಸಿದ್ಧಿ ಎಂದರೆ ನಮ್ಮ ಮನಸ್ಸು ದೇವೋತ್ತಮ ಪುರುಷನಿಂದ ಪ್ರತ್ಯೇಕಗೊಳ್ಳಲು ಸಾಧ್ಯವಾಗದಿರುವುದು. ಈ ಲೀನತ್ವದ ಅಂತಿಮ ಘಟ್ಟವನ್ನೇ ಸಮಾಧಿ ಎನ್ನುವುದು ಮತ್ತು ಈ ಕುರಿತು ಶ್ರೀಕೃಷ್ಣ ಅಷ್ಟಾಂಗ ಯೋಗ ಪದ್ಧತಿಯ ವಿವರಣೆಯನ್ನು ಪೂರೈಸುವ ಸಂದರ್ಭದಲ್ಲಿ ತಿಳಿಸುತ್ತಾನೆ:
“ಒಬ್ಬನಿಜವಾದ ಯೋಗಿ ನನ್ನನ್ನು ಎಲ್ಲ ಜೀವಿಗಳಲ್ಲೂ ಕಾಣುತ್ತಾನೆ, ಮತ್ತು ಎಲ್ಲ ಜೀವಿಗಳನ್ನು ನನ್ನಲ್ಲಿ ಕಾಣುತ್ತಾನೆ, ನಿಶ್ಚಯವಾಗಿಯೂ ಆತ್ಮಸಾಕ್ಷಾತ್ಕಾರ ಹೊಂದಿದ ವ್ಯಕ್ತಿ, ಅದೇ ದೇವೋತ್ತಮ ಪುರುಷನನ್ನು ನನ್ನನ್ನು ಎಲ್ಲೆಲ್ಲೂ ಕಾಣುತ್ತಾನೆ.”
ಒಬ್ಬಭಕ್ತಿಯೋಗಿ ಸಹಜವಾಗಿ ಈ ದರ್ಶನದಲ್ಲಿ ತಲ್ಲೀನನಾಗಿ ಹೋಗುತ್ತಾನೆ. ಏಕೆಂದರೆ, ಭಕ್ತಿಯ ಮೂಲಕ ಅವನು ತನ್ನ ಇಂದ್ರಿಯಗಳನ್ನು ದೇವೋತ್ತಮ ಪುರುಷನ ಸೇವೆಯಲ್ಲಿ ತೀವ್ರವಾಗಿ ತೊಡಗಿಸಿಕೊಳ್ಳುತ್ತಾನೆ. ಇಷ್ಟಲ್ಲದೆ, ಇಂತಹದೊಂದು ಪ್ರೀತಿಭರಿತ ಭಕ್ತಿ ಸೇವೆಯಿಂದ ಅವನ ಮನಸ್ಸು ದೊಡ್ಡ ದೊಡ್ಡ ಮೋಹಜಾಲಗಳ ನಡುವೆಯೂ ನಿರ್ಲಿಪ್ತವಾಗಿ ಉಳಿದುಕೊಂಡು ಪರಮಾತ್ಮನಲ್ಲಿ ನೆಟ್ಟಿರುತ್ತದೆ.
ಪುರಾಣದ ವಿಶ್ವಾಮಿತ್ರ ಮುನಿ ಅಷ್ಟಾಂಗ ಯೋಗದಲ್ಲಿ ಯಶಸ್ಸು ಪಡೆಯಲು ವಿಫಲನಾದ ಅಂಶಕ್ಕೆ ವೈದೃಶ್ಯವೆಂಬಂತೆ, ಮಹಾನ್ ಭಕ್ತರಾದ ಹರಿದಾಸ ಠಾಕುರ ಅವರ ಉದಾಹರಣೆಯನ್ನು ನಾವು ಕಾಣುತ್ತೇವೆ – ದೇವರ ಮಾಯಾ ಚೈತನ್ಯವೇ ಮೂರ್ತೀಕರಿಸಿದಂತೆ ಎದುರಿಗೆ ಬಂದು ನಿಂತ ಒಬ್ಬ ಅನುಪಮ ಲಾವಣ್ಯವತಿ ಹೆಂಗಸಿನ ಪ್ರಲೋಭನವನ್ನು ನಿರೋಧಿಸುವುದರಲ್ಲಿ ಅವರು ಯಶಸ್ವಿಯಾದರು.
ಹರಿದಾಸ ಅವರ ಇಂತಹದೊಂದು ಔನ್ನತ್ಯ, ದೇವರ ಪವಿತ್ರ ನಾಮ ಪಠಿಸುವ ಭಕ್ತಿಯೋಗದ ಪ್ರಕ್ರಿಯೆಯನ್ನು ದೃಷ್ಟಾಂತ ವ೦ಬ೦ತೆ ಕಾಣಿಸುವಂತಹದು. ದೇವರ ಭಕ್ತರ ವ್ಯಕ್ತಿತ್ವದ ಇಂತಹ ಗುಣಗಳು, ಶ್ರೀಕೃಷ್ಣ ಭಗವದ್ಗೀತೆಯ ಆರನೆಯ ಅಧ್ಯಾಯದಲ್ಲಿ ವಿವರಿಸಿರುವ ಅಂತಿಮ ಬೋಧನೆ ಖಚಿತಪಡಿಸುತ್ತದೆ:
“ನನ್ನಲ್ಲಿ ಶಾಶ್ವತವಾಗಿ ಬೆರೆತುಕೊಂಡಿರುವ, ತನ್ನೊಳಗೆ ನನ್ನನ್ನೇ ಚಿಂತಿಸುವ ಮತ್ತು ನನ್ನ ದಿವ್ಯ ಪ್ರೀತಿ ಸೇವೆಯನ್ನು ನಿರಂತರ ಸಲ್ಲಿಸುವ ವಿಷಯಗಳಲ್ಲಿ ಅಪಾರ ನಂಬಿಕೆಯುಳ್ಳವನಾಗಿರುವವನೇ ಯೋಗಿಗಳಲ್ಲಿ ಯೋಗಿ – ಅವನು ಯೋಗದಲ್ಲಿ ನನ್ನೊಂದಿಗೆ ಲೀನವಾಗಿ ಹೋಗುತ್ತಾನೆ, ಇದೇ ಎಲ್ಲಕ್ಕಿಂತಲೂ ಉನ್ನತವಾದದ್ದು ಎಂದೇ ನನ್ನ ಅನಿಸಿಕೆ.”






Leave a Reply