ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ

ಕರ್ನಾಟಕ ಕಲಾತ್ಮಕ ದೇವಾಲಯಗಳಿಗೆ ಸುಪ್ರಸಿದ್ಧ. ಅದರಲ್ಲೂ ಹೊಯ್ಸಳರು ನಿರ್ಮಿಸಿರುವ ದೇವಾಲಯಗಳು ಅತ್ಯಂತ ಕಲಾತ್ಮಕತೆಯಿಂದ ಕೂಡಿವೆ. ಬೇಲೂರು, ಹಳೇಬೀಡುಗಳ ಸುಂದರ ದೇವಾಲಯಗಳನ್ನು ನೋಡಿ ಮನತಣಿಯದಿರುವವರಾದರೂ ಯಾರು? ಆದರೆ ಬೇಲೂರು, ಹಳೇಬೀಡುಗಳ ದೇವಾಲಯಗಳಂತೆಯೇ ಸೊಗಸಾದ, ಕಲಾತ್ಮಕವಾದ, ಆದರೆ ಹೆಚ್ಚಿನ ಜನರ ಅರಿವಿಗೆ ಬಂದಿಲ್ಲದ ಇನ್ನೂ ಅನೇಕ ಹೊಯ್ಸಳ ದೇವಾಲಯಗಳಿವೆ. ಅಂಥವುಗಳಲ್ಲಿ ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯವೂ ಒಂದು.

ತಲಪುವುದು ಹೇಗೆ?

ಈ ದೇವಾಲಯ ಮಂಡ್ಯ ಜಿಲ್ಲೆಯ ಹೊಸಹೊಳಲು ಗ್ರಾಮದಲ್ಲಿದೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿರುವ ಈ ಸ್ಥಳ, ಹಾಸನದಿಂದ ಸುಮಾರು 60 ಕಿ.ಮೀ. ದೂರದಲ್ಲೂ ಮೈಸೂರಿನಿಂದ ಸುಮಾರು 45 ಕಿ.ಮೀ. ದೂರದಲ್ಲಿದೆ. ಸ್ವಂತ ಇಲ್ಲವೇ ಖಾಸಗಿ ವಾಹನದಲ್ಲಿ ಪಯಣಿಸಿದರೆ ಒಳ್ಳೆಯದು.

ತ್ರಿಕೂಟಾಚಲ ದೇವಾಲಯ

ಈ ದೇವಾಲಯವನ್ನು ಹೊಯ್ಸಳ ಸಾಮ್ರಾಜ್ಯದ ವೀರಸೋಮೇಶ್ವರ ರಾಜನು ಕ್ರಿ.ಶ. 1250ರಲ್ಲಿ ನಿರ್ಮಿಸಿದನೆಂದು ತಿಳಿದುಬಂದಿದೆ. ಇದು ಹೊಯ್ಸಳ ವಾಸ್ತುಶಿಲ್ಪದ ಒಂದು ಸುಂದರವಾದ ಕುಶಲವಾದ ರಚನೆಯಾಗಿದ್ದು, ದಾಕ್ಷಿಣಾತ್ಯ (ದ್ರಾವಿಡ) ಮತ್ತು ಔತ್ತರೇಯ (ನಾಗರ) ವೆಂಬ ಎರಡೂ ವಾಸ್ತುಶಿಲ್ಪಗಳ ಸಮ್ಮಿಶ್ರಣವಾದ ವೇಸರ ವಾಸ್ತುಶಿಲ್ಪವುಳ್ಳದ್ದಾಗಿದೆ. ಎಲ್ಲ ಹೊಯ್ಸಳ ದೇವಾಲಯಗಳಂತೆ, ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿತವಾಗಿರುವ ಈ ದೇವಾಲಯವು, ಮೂರು ಗರ್ಭಗುಡಿಗಳುಳ್ಳ ತ್ರಿಕೂಟಾಚಲ ದೇವಾಲಯವಾಗಿದೆ. ಬಳಪದ ಕಲ್ಲಿನಿಂದ ನಿರ್ಮಾಣವಾಗಿರುವ ಈ ದೇವಾಲಯವು ಇತರ ಹೊಯ್ಸಳ ದೇವಾಲಯಗಳಂತೆ, ಹೊರಭಿತ್ತಿಯ ಮೇಲೆ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದೆ. ಯೋಧರು, ಅಶ್ವಗಳು, ಆನೆಗಳು, ಶರಭ, ದರ್ಪಣಸುಂದರಿ, ಶುಕಭಾಷಿಣಿ, ಕಪಿಕುಪಿತೆ ಮೊದಲಾದ ಮದನಿಕೆಯರು, ವಿಷಕನ್ಯೆ, ನಾಟ್ಯಸರಸ್ವತಿ, ವೀಣಾಸರಸ್ವತಿ, ನಾರಾಯಣ, ಆದಿಶಕ್ತಿ, ಬ್ರಹ್ಮ, ಮೊದಲಾದ ಶಿಲಾಕೃತಿಗಳು, ಹಾಗೂ ರಾಮಾಯಣ, ಮಹಾಭಾರತ, ಭಾಗವತ ಕಥೆಗಳ ಸುಂದರ ಕೆತ್ತನೆಗಳು ಮನಸೆಳೆಯುತ್ತವೆ. ಪ್ರಧಾನ ಗರ್ಭಗೃಹಕ್ಕೆ ಸೊಗಸಾದ ದ್ರಾವಿಡ ಶೈಲಿಯ ಶಿಖರ ಹಾಗೂ ಶುಕನಾಸಿಯಿದೆ. ದೇವಾಲಯದ ಒಳಗೆ ಪ್ರಧಾನ ಗರ್ಭಗೃಹಕ್ಕೆ ಮಾತ್ರ ಅಂತರಾಳವಿದೆ. ಮೂರು ಗರ್ಭಗುಡಿಗಳನ್ನು ಒಗ್ಗೂಡಿಸುವ ಒಂದೇ ನವರಂಗವಿದೆ. ಪ್ರಧಾನ ಗರ್ಭಗೃಹದಲ್ಲಿ ಶಂಖಚಕ್ರ-ಗದಾಪದ್ಮಧಾರಿಯಾಗಿ  ಶ್ರೀದೇವಿ, ಭೂದೇವಿಯರೊಂದಿಗಿರುವ ಲಕ್ಷ್ಮೀನಾರಾಯಣನ ಮೂರ್ತಿಯಿದ್ದರೆ, ನವರಂಗದ ಉತ್ತರಕ್ಕಿರುವ ಗರ್ಭಗೃಹದಲ್ಲಿ ಲಕ್ಷ್ಮೀನರಸಿಂಹ ಮೂರ್ತಿಯಿದೆ, ಹಾಗೂ ದಕ್ಷಿಣಕ್ಕಿರುವ ಗರ್ಭಗೃಹದಲ್ಲಿ ವೇಣುಗೋಪಾಲಸ್ವಾಮಿ ಮೂರ್ತಿಯಿದೆ. ಭಗವಂತನ ಮೂರ್ತಿಗಳು ಅತ್ಯಂತ ಸುಂದರವಾಗಿದ್ದು ಭಕ್ತಿಭಾವವನ್ನುಕ್ಕಿಸುತ್ತವೆ.

ದೇವಾಲಯದೊಳಗಿನ ಕಂಬಗಳು ಕಲಾತ್ಮಕವಾದ ವಿನ್ಯಾಸಗಳನ್ನು ಹೊಂದಿದ್ದು ಅತ್ಯಾಕರ್ಷಕವಾಗಿವೆ. ಇವು, 16 ಕೋನಗಳ, 32 ಕೋನಗಳ, ಹಾಗೂ 64 ಕೋನಗಳ ವಿಶಿಷ್ಟ ಕಂಬಗಳಾಗಿವೆ. ಇವು ಬೋದಿಗೆಗಳಲ್ಲಿ ಶಾಂತಲೆ ಹಾಗೂ ಮದನಿಕೆಯರ ಸುಂದರ ಶಿಲ್ಪಗಳನ್ನೂ ಹೊಂದಿವೆ. ಒಂದು ಕಂಬದಲ್ಲಿರುವ, ಎಳನೀರು ಕುಡಿಯುತ್ತಿರುವ ಹೆಬ್ಬೆಟ್ಟು ಗಾತ್ರದ ಆಂಜನೇಯನ ಶಿಲ್ಪ ವಿಶೇಷವಾಗಿ ಗಮನ ಸೆಳೆಯುತ್ತದೆ. `ಹೆಬ್ಬೆಟ್ಟು ಆಂಜನೇಯ’ ಎಂದೇ ಪ್ರಸಿದ್ಧವಾಗಿರುವ ಈ ಶಿಲ್ಪ, ಶಿಲ್ಪಿಯ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ.

ದೇವಾಲಯದೊಳಗಿನ ಇನ್ನೊಂದು ಆಕರ್ಷಣೆಯೆಂದರೆ ಸುಂದರವಾದ ಭುವನೇಶ್ವರಿಗಳು. ಒಂದು ಭುವನೇಶ್ವರಿಯಲ್ಲಿರುವ ಮೊಗ್ಗಿನಲ್ಲಿ ಕೆತ್ತಲಾಗಿರುವ ಕಾಳಿಂಗಮರ್ದನ ಶ್ರೀಕೃಷ್ಣನ ಶಿಲ್ಪವು ಬಹು ಸುಂದರವಾಗಿದ್ದು ವಿಶೇಷವಾಗಿ ಮನಸೆಳೆಯುತ್ತದೆ. ಅಂತೆಯೇ ಭುವನೇಶ್ವರಿಯೊಂದರಲ್ಲಿನ ಹಂಸಪಕ್ಷಿಯ ಕೆತ್ತನೆ ಕೂಡ ಸುಂದರವಾಗಿದೆ. ಅಂತೆಯೇ  ಸುಂದರವಾದ ಚಕ್ರದ ಕೆತ್ತನೆಗಳೂ ಮನಸೆಳೆಯುತ್ತವೆ.

ಹೀಗೆ ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯವು ಒಂದು ಅದ್ಭುತ ಕಲಾಕೃತಿಯಾಗಿದ್ದು ಹೊರಗೂ ಒಳಗೂ ಸುಂದರವಾಗಿದೆ. ಹಾಗಾಗಿ, `ಬೇಲೂರು ದೇವಾಲಯದ  ಒಳಗೆ ನೋಡು, ಹಳೇಬೀಡು ದೇವಾಲಯದ ಹೊರಗೆ ನೋಡು, ಹೊಸಹೊಳಲು ದೇವಾಲಯದ ಒಳಗೂ ಹೊರಗೂ ನೋಡು!’ ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ.

ಈ ಲೇಖನ ಶೇರ್ ಮಾಡಿ