ಭೂಮಿಯ ಕೊಡುಗೆಯು ಅವಳ ನೆಲವನ್ನು ಆಳುವವರ ಆಧ್ಯಾತ್ಮಿಕ ಗುಣಮಟ್ಟದ ಮೇಲೆ ಅವಲಂಬಿತ
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತಸ್ವಾಮಿ ಪ್ರಭುಪಾದರು ಮಾರ್ಚ್ 13, 1975 ರಂದು ಇರಾನಿನ ತೆಹರಾನಿನಲ್ಲಿ ಮಾಡಿದ ಉಪನ್ಯಾಸ
ನಿಶಮ್ಯ ಭೀಷ್ಮೋಕ್ತಂ ಅಥಾಚ್ಯುತೋಕ್ತಂ
ಪ್ರವೃತ್ತ ವಿಜ್ಞಾನ ವಿಧೂತ ವಿಭ್ರಮಃ ।
ಶಶಾಸ ಗಾಮ್ ಇಂದ್ರ ಇವಾಜಿತಾಶ್ರಯಃ
ಪರಿಧ್ಯುಪಾಂತಾಂ ಅನುಜಾನುವರ್ತಿತಃ ॥
ಕಾಮಂ ವವರ್ಷ ಪರ್ಜನ್ಯಃ ಸರ್ವ ಕಾಮ ದುಘಾ ಮಹೀ ।
ಸಿಷಿಚುಃ ಸ್ಮ ವ್ರಜಾನ್ ಗಾವಃ ಪಯಸೋಧಸ್ವತೀರ್ ಮುದಾ ॥
ಭೀಷ್ಮ ಮತ್ತು ಅಚ್ಯುತನಾದ ಶ್ರೀ ಕೃಷ್ಣನ ಉಪದೇಶದಿಂದ ಜ್ಞಾನೋದಯವಾದ ಬಳಿಕ ಯುಧಿಷ್ಠಿರನು ಪರಿಪೂರ್ಣ ಜ್ಞಾನದ ವಿಷಯದಲ್ಲಿ ನಿರತನಾದ. ಏಕೆಂದರೆ ಅವನ ಸಂದೇಹಗಳೆಲ್ಲಾ ನಿವಾರಣೆಯಾಗಿದ್ದವು. ಈ ರೀತಿ ಅವನು ಭೂಮಿಯನ್ನೂ ಸಮುದ್ರವನ್ನೂ ಆಳಿದನು. ಅವನ ತಮ್ಮಂದಿರು ಅವನನ್ನು ಅನುಸರಿಸಿದರು. ಮಹಾರಾಜ ಯುಧಿಷ್ಠಿರನ ಆಡಳಿತದ ಕಾಲದಲ್ಲಿ ಮೋಡಗಳು ಜನರ ಅಗತ್ಯಕ್ಕೆ ತಕ್ಕಷ್ಟು ಮಳೆ ಸುರಿಸಿದವು. ಭೂಮಿಯು ಮನುಷ್ಯನ ಎಲ್ಲ ಅಗತ್ಯಗಳನ್ನೂ ಸಮೃದ್ಧವಾಗಿ ಉತ್ಪಾದಿಸಿತು. ಕೆಚ್ಚಲು ತುಂಬಿದ ಮತ್ತು ಹರ್ಷ ಚಿತ್ತದ ಹಸುಗಳು ಹುಲ್ಲು ಮೇಯುವ ನೆಲವನ್ನು ಹಾಲಿನಿಂದ ಒದ್ದೆ ಮಾಡುತ್ತಿದ್ದವು. (ಭಾಗವತ 1.10.3-4)
ಕುರುಕ್ಷೇತ್ರ ಸಮರ ಅಂತ್ಯಗೊಂಡ ಮೇಲೆ ರಾಜ್ಯಭಾರ ವಹಿಸಿಕೊಳ್ಳಲು ಯುಧಿಷ್ಠಿರನು ಹಿಂದೇಟು ಹಾಕಿದ. “ನನಗಾಗಿ ಸಮರ ಭೂಮಿಯಲ್ಲಿ ಎಷ್ಟೊಂದು ಜನರು ಹತರಾದರು. ನಾನು ಪಾಪಿ. ನಾನು ಸಿಂಹಾಸನಕ್ಕೆ ಯೋಗ್ಯನಲ್ಲ,” ಎಂದು ಅವನು ಯೋಚಿಸಿದ. ಆದರೆ ಭೀಷ್ಮ, ಕೃಷ್ಣ ಮತ್ತು ವ್ಯಾಸರಂತಹ ಶ್ರೇಷ್ಠರು ಅವನನ್ನು ಸಾಂತ್ವನಗೊಳಿಸಿದರು. “ನಿನ್ನಲ್ಲಿ ತಪ್ಪಿಲ್ಲ. ಅದು ಯುದ್ಧ. ಅದು ಸರಿಯಾಗಿತ್ತು. ಆದುದರಿಂದ ನೀನು ಆಡಳಿತ ನಡೆಸಬಹುದು,” ಎಂದು ಅವರು ಸಮಾಧಾನಪಡಿಸಿದರು.
ಆಗ ಯುಧಿಷ್ಠಿರ ಯೋಚಿಸಿದ, “ನನ್ನದೇನೂ ತಪ್ಪಿಲ್ಲ ಎಂಬ ಅಭಿಪ್ರಾಯವನ್ನು ಈ ಶ್ರೇಷ್ಠರು ನೀಡಿದ್ದಾರೆ.” ಆದುದರಿಂದ ಅವನು ಆಡಳಿತ ನಡೆಸಲು ಒಪ್ಪಿದ.
ಇಲ್ಲಿ ಶಶಾಸ ಗಾಮ್ ಇಂದ್ರ ಇವಾಜಿತಾಶ್ರಯಃ ಎಂದು ಹೇಳಿದೆ. ಅಂದರೆ, ರಾಜ ಇಂದ್ರನು ಸ್ವರ್ಗ ಲೋಕವನ್ನು ಎಷ್ಟು ಪರಿಪೂರ್ಣವಾಗಿ ಆಳುವನೋ ಅಷ್ಟೇ ಪರಿಪೂರ್ಣವಾಗಿ ಯುಧಿಷ್ಠಿರನು ಭೂಮಿಯನ್ನಾಳಿದ. ಅದು ಯುಧಿಷ್ಠಿರನಿಗೆ ಹೇಗೆ ಸಾಧ್ಯವಾಯಿತು? ಅಜಿತಾಶ್ರಯಃ – ಅವನು ಒಬ್ಬ ಪರಿಪೂರ್ಣ ಭಕ್ತನಾಗಿ ಆಳಿದ. ಒಬ್ಬ ರಾಜನು ಕೃಷ್ಣನ ಆಶ್ರಯ ಪಡೆದರೆ ಅವನು ದೇಶ, ವಿಶ್ವವನ್ನು ಆಳಬಹುದು. ಅಜಿತಾಶ್ರಯಃ ಎಂದರೆ “ಕೃಷ್ಣ ಪ್ರಜ್ಞೆ, ಭಗವಂತನ ಪ್ರಜ್ಞೆ” ಎಂದು ಅರ್ಥ. ಶಾಸ್ತ್ರ, ಧರ್ಮ ಗ್ರಂಥಗಳಿಂದ ಬೋಧಿಸಲ್ಪಟ್ಟ ಕೃಷ್ಣ ಪ್ರಜ್ಞೆಯ ವ್ಯಕ್ತಿಯು ಇಡೀ ಜಗತ್ತನ್ನು ಅಥವಾ ವಿಶ್ವದ ಯಾವುದೇ ಭಾಗವನ್ನು ಸ್ವರ್ಗದ ದೊರೆ ಇಂದ್ರನಷ್ಟೇ ಪರಿಪೂರ್ಣವಾಗಿ ಆಳಬಲ್ಲ.
ಜ್ಯೇಷ್ಠ ಪುತ್ರನ ಹಕ್ಕು ಅಥವಾ ಹಿರಿಯ ಪುತ್ರನಿಗೆ ಪಿತ್ರಾರ್ಜಿತ ಅಧಿಕಾರ ಎಂಬ ಆಧುನಿಕ ಇಂಗ್ಲಿಷ್ ಕಾನೂನು ಮಹಾರಾಜ ಯುಧಿಷ್ಠಿರನು ಭೂಮಿ, ಸಮುದ್ರವನ್ನು ಆಳುವ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತು. ಆ ದಿನಗಳಲ್ಲಿ ಯುಧಿಷ್ಠಿರನ ಮೊಮ್ಮಗ ಪರೀಕ್ಷಿತನ ಕಾಲದವರೆಗೂ ಹಸ್ತಿನಾಪುರದ (ಈಗಿನ ನವದೆಹಲಿಯ ಭಾಗ) ರಾಜನು ಸಮುದ್ರವನ್ನೊಳಗೊಂಡ ಇಡೀ ವಿಶ್ವದ ಚಕ್ರವರ್ತಿಯಾಗಿರುತ್ತಿದ್ದನು. ಮಹಾರಾಜ ಯುಧಿಷ್ಠಿರನ ತಮ್ಮಂದಿರು ಮಂತ್ರಿಗಳಾಗಿ, ಸೇನಾ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜನ ಪರಿಪೂರ್ಣ ಧಾರ್ಮಿಕ ಸೋದರರ ಮಧ್ಯೆ ಸಂಪೂರ್ಣ ಸಮನ್ವಯವಿತ್ತು.
ಭೂಮಂಡಲವನ್ನು ಆಳಲು ಭಗವಾನ್ ಶ್ರೀ ಕೃಷ್ಣನ ಪ್ರತಿನಿಧಿಯಾಗಿದ್ದ ಯುಧಿಷ್ಠಿರನು ಆದರ್ಶ ರಾಜನಾಗಿದ್ದನು. ಅವನನ್ನು ಸ್ವರ್ಗ ಲೋಕದ ರಾಜ ಇಂದ್ರನಿಗೆ ಹೋಲಿಸಲಾಗುತ್ತದೆ. ಇಂದ್ರ, ಚಂದ್ರ, ಸೂರ್ಯ, ವರುಣ, ವಾಯುವಿನಂತಹ ದೇವತೆಗಳು ಬ್ರಹ್ಮಾಂಡದ ವಿವಿಧ ಲೋಕಗಳ ಪ್ರಾತಿನಿಧಿಕ ರಾಜರಾಗಿದ್ದಾರೆ. ಅದೇ ರೀತಿ ಯುಧಿಷ್ಠಿರನು ಅವರಲ್ಲಿ ಒಬ್ಬನಾಗಿ ಭೂಲೋಕವನ್ನು ಆಳುತ್ತಿದ್ದನು. ಮಹಾರಾಜ ಯುಧಿಷ್ಠಿರನು ಆಧುನಿಕ ಪ್ರಜಾಪ್ರಭುತ್ವದ ಜ್ಞಾನೋದಯವಾಗದ ರಾಜಕೀಯ ನಾಯಕರಂತೆ ಅಲ್ಲ. ಅವನು ಭೀಷ್ಮ ಮತ್ತು ಶ್ರೀ ಕೃಷ್ಣನಿಂದ ಉಪದೇಶ ಪಡೆದವನಾಗಿದ್ದ. ಆದುದರಿಂದ ಅವನಿಗೆ ಪರಿಪೂರ್ಣ ಜ್ಞಾನವಿತ್ತು.
ಈಗ ಚುನಾಯಿತರಾಗುವ ಆಧುನಿಕ ನಾಯಕರು ಕೈಗೊಂಬೆಗಳಂತೆ ಇರುತ್ತಾರೆ. ಏಕೆಂದರೆ ಅವರಿಗೆ ರಾಜನಿಗಿರುವ ಅಧಿಕಾರವಿರುವುದಿಲ್ಲ. ಮಹಾರಾಜ ಯುಧಿಷ್ಠಿರನಂತೆ ಅವನು ಜ್ಞಾನೋದಯ ಹೊಂದಿದ್ದರೂ ತನ್ನ ಸಾಂವಿಧಾನಿಕ ಸ್ಥಾನದಿಂದಾಗಿ ಅವನಿಗೆ ತನ್ನ ಇಚ್ಛೆಯಂತೆ ನಡೆಯಲಾಗದು. ಆದುದರಿಂದ ಸಿದ್ಧಾಂತಗಳ ಭಿನ್ನಾಭಿಪ್ರಾಯದಿಂದ ಅಥವಾ ಸ್ವಾರ್ಥ ಕಾರಣ ಅನೇಕ ರಾಜ್ಯಗಳು ಕಚ್ಚಾಡುತ್ತಿರುತ್ತವೆ. ಆದರೆ ಯುಧಿಷ್ಠಿರನಂತಹ ರಾಜನಿಗೆ ವೈಯಕ್ತಿಕ ವೈಚಾರಿಕ ಕಲ್ಪನೆಗಳಿರಲಿಲ್ಲ. ಅವನು ಭಗವಂತನ ಮತ್ತು ಅವನ ಪ್ರತಿನಿಧಿಯಾದ ಭೀಷ್ಮನ ಉಪದೇಶವನ್ನು ಪಾಲಿಸುತ್ತಿದ್ದನು.
ವ್ಯಕ್ತಿಯು ಯಾವುದೇ ವೈಯಕ್ತಿಕ ಉದ್ದೇಶವಿಲ್ಲದೆ ಮತ್ತು ಉತ್ಪಾದಿಸಿದ ಸಿದ್ಧಾಂತವಿಲ್ಲದೆ ಪರಮ ಅಧಿಕಾರಹೊಂದಿರುವ ಭಗವಂತನನ್ನು ಅನುಸರಿಸಬೇಕು ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಆ ತತ್ತ್ವಗಳು ದೋಷರಹಿತವೂ ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯಿಸುವಂತಹದ್ದೂ ಆಗಿದ್ದರಿಂದ ಯುಧಿಷ್ಠಿರನಿಗೆ ಸಮುದ್ರವನ್ನೂ ಒಳಗೊಂಡಂತೆ ಇಡೀ ಜಗತ್ತನ್ನು ಆಳುವುದು ಸಾಧ್ಯವಾಯಿತು.
ಅಚ್ಯುತನ ಅಧಿಕಾರವನ್ನು ಅನುಸರಿಸಿದರೆ ಒಂದೇ ಜಗತ್ ರಾಷ್ಟ್ರವೆಂಬ ಕಲ್ಪನೆ ಫಲಪ್ರದವಾಗುತ್ತದೆ. ಅಪೂರ್ಣನಾದ ವ್ಯಕ್ತಿಯೊಬ್ಬ ಎಲ್ಲರಿಗೂ ಒಪ್ಪಿತವಾದ ಸಿದ್ಧಾಂತವನ್ನು ರೂಪಿಸಲಾರ. ಜಗತ್ತಿನ ಎಲ್ಲ ಸ್ಥಳಗಳಿಗೂ ಅನ್ವಯಿಸುವ ಮತ್ತು ಎಲ್ಲರೂ ಅನುಸರಿಸುವಂತಹ ಕಾರ್ಯಕ್ರಮವನ್ನು ಪರಿಪೂರ್ಣ ಮತ್ತು ದೋಷರಹಿತರಷ್ಟೇ ರೂಪಿಸಬಲ್ಲರು. ಆಳುವವನು ವ್ಯಕ್ತಿಯೇ ಹೊರತು ವ್ಯಕ್ತಿರಹಿತ ಸರಕಾರವಲ್ಲ. ವ್ಯಕ್ತಿ ಪರಿಪೂರ್ಣನಾಗಿದ್ದರೆ ಸರಕಾರವೂ ಪರಿಪೂರ್ಣವಾಗಿರುತ್ತದೆ. ವ್ಯಕ್ತಿ ಮೂರ್ಖನಾಗಿದ್ದರೆ ಸರಕಾರವು ಮೂರ್ಖರ ಸ್ವರ್ಗವಾಗುತ್ತದೆ. ಇದು ಪ್ರಕೃತಿ ನಿಯಮ.
ಅಪರಿಪೂರ್ಣ ರಾಜರನ್ನು ಅಥವಾ ಮುಖಂಡರನ್ನು ಕುರಿತು ಅನೇಕ ಕತೆಗಳಿವೆ. ಆದುದರಿಂದ ಕಾರ್ಯಾಂಗದ ಮುಖಂಡನು ಯುಧಿಷ್ಠಿರ ಮಹಾರಾಜನಂತೆ ತರಬೇತಿ ಪಡೆದವನಾಗಿರಬೇಕು ಮತ್ತು ಅವನಿಗೆ ವಿಶ್ವಾದ್ಯಂತ ಆಡಳಿತ ನಡೆಸುವ ನಿರಂಕುಶ
ಅಧಿಕಾರವಿರಬೇಕು. ಯುಧಿಷ್ಠಿರನಂತಹ ಪರಿಪೂರ್ಣ ರಾಜನ ಆಳ್ವಿಕೆಯಲ್ಲಿ ಮಾತ್ರ ಜಗತ್ ರಾಷ್ಟ್ರವೆಂಬ ಕಲ್ಪನೆ ಸಾಕಾರಗೊಳ್ಳುವುದು ಸಾಧ್ಯ. ಆ ದಿನಗಳಲ್ಲಿ ಜಗತ್ತು ಸಂತೋಷಭರಿತವಾಗಿತ್ತು, ಏಕೆಂದರೆ ಯುಧಿಷ್ಠಿರನಂತಹ ರಾಜರಿದ್ದರು.
ಎಲ್ಲವೂ ಭೂಮಿಯಿಂದ
ರಾಜನು ಮಹಾರಾಜ ಯುಧಿಷ್ಠಿರನನ್ನು ಅನುಸರಿಸಲಿ ಮತ್ತು ರಾಜಪ್ರಭುತ್ವವು ಹೇಗೆ ಪರಿಪೂರ್ಣ ಸರಕಾರವನ್ನು ರೂಪಿಸುತ್ತದೆ ಎಂಬುವುದಕ್ಕೆ ಉದಾಹರಣೆ ತೋರಿಸಲಿ. ಶಾಸ್ತ್ರಗಳಲ್ಲಿನ ಉಪದೇಶಗಳನ್ನು ಅನುಸರಿಸುವ ಮೂಲಕ ಅವನು ಅದನ್ನು ಮಾಡಬಹುದು, ಅವನಿಗೆ ಅಧಿಕಾರ ದೊರೆಯುತ್ತದೆ.
ಯುಧಿಷ್ಠಿರನು ಪರಿಪೂರ್ಣ ರಾಜನಾಗಿದ್ದರಿಂದ ಮತ್ತು ಅವನು ಕೃಷ್ಣನ ಪ್ರತಿನಿಧಿಯಾಗಿದ್ದರಿಂದ ಅವನ ಆಡಳಿತದ ಬಗೆಗೆ ಹೀಗೆ ಹೇಳಲಾಗಿದೆ, ಕಾಮಂ ವವರ್ಷ ಪರ್ಜನ್ಯಃ – “ಮಹಾರಾಜ ಯುಧಿಷ್ಠಿರನ ಆಡಳಿತ ಕಾಲದಲ್ಲಿ ಮೋಡಗಳು ಜನರ ಅಗತ್ಯಕ್ಕೆ ತಕ್ಕಷ್ಟು ಮಳೆ ಸುರಿಸಿದವು.”
ಪರ್ಜನ್ಯ ಎಂದರೆ ಮಳೆ. ಬದುಕಿನ ಎಲ್ಲ ಅಗತ್ಯಗಳ ಪೂರೈಕೆಗೆ ಮೂಲವಾದುದು ಮಳೆ. ಆದುದರಿಂದ ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ,
ಅನ್ನಾದ್ ಭವಂತಿ ಭೂತಾನಿ ಪರ್ಜನ್ಯಾದ್ ಅನ್ನ ಸಂಭವಃ ।
ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ ॥
“ಎಲ್ಲ ಜೀವಗಳು ಆಹಾರ ಧಾನ್ಯಗಳಿಂದ ಬದುಕುತ್ತವೆ. ಧಾನ್ಯಗಳನ್ನು ಮಳೆ ಉತ್ಪಾದಿಸುತ್ತದೆ. ಯಜ್ಞದ ಆಚರಣೆಯಿಂದ ಮಳೆಯಾಗುತ್ತದೆ. ಯಜ್ಞವು ನಿಗದಿತ ಕರ್ಮಗಳಿಂದ ಉದ್ಭವಿಸುತ್ತದೆ.”
ಸರಕಾರದ ಆಡಳಿತ ಮುಖಂಡನ ಕರ್ತವ್ಯವೇನು? ಮನುಷ್ಯ ಮತ್ತು ಪ್ರಾಣಿಗಳಿಬ್ಬರೂ ಸಂತೋಷದಿಂದ ಬದುಕುವಂತೆ ಮಾಡುವ ಹೊಣೆ ಅವನದು. ಶಾಸಕ ಪ್ರಮುಖರು ಕೆಲವು ಸಂದರ್ಭಗಳಲ್ಲಿ ಮಾನವನಿಗೆ ಲಾಭದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗಾಗಿ ಏನನ್ನೂ ಮಾಡುವುದಿಲ್ಲ. ಯಾಕೆ ಈ ಅನ್ಯಾಯ? ಪ್ರಾಣಿಗಳೂ ಈ ಭೂಮಿಯ ಮೇಲೆ ಹುಟ್ಟಿವೆ. ಅವೂ ಜೀವಗಳೇ. ಪ್ರಾಣಿಗಳಿಗೆ ಮಾನವನಿಗಿಂತ ಕಡಮೆ ಬುದ್ಧಿಶಕ್ತಿ ಇರಬಹುದು. ಹಾಗೆಂದು ಅವುಗಳನ್ನು ಕೊಲ್ಲಲು ವಧಾಗೃಹಗಳನ್ನು ನಿರ್ಮಿಸಬೇಕೆ? ಇದೆಂತಹ ನ್ಯಾಯ?
ರಾಜನು ತನ್ನ ರಾಜ್ಯಕ್ಕೆ ಬಂದವರಿಗೆ ಆಶ್ರಯ ನೀಡಬೇಕು. ತಾರತಮ್ಯವೇಕೆ? ಯಾರಾದರು ಬಂದು, “ನಿಮ್ಮ ರಾಜ್ಯದಲ್ಲಿ ಇರಬಯಸುವೆ” ಎಂದು ಹೇಳಿದರೆ ಅವನಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. “ಇಲ್ಲ, ನೀವು ಬರಲಾರಿರಿ. ನೀವು ಅಮೆರಿಕದವರು, ನೀವು ಭಾರತೀಯ” ಎಂದೆಲ್ಲಾ ಏಕೆ ಹೇಳಬೇಕು?
ರಾಜನು ವೈದಿಕ ತತ್ತ್ವಗಳನ್ನು ಅನುಸರಿಸಿದರೆ ಅವನು ಆದರ್ಶ ಅರಸನಾಗುತ್ತಾನೆ. ಅವನು ಒಳ್ಳೆಯ ನಾಯಕನೂ ಆಗುತ್ತಾನೆ. ಅವನಿಗೆ ಪ್ರಕೃತಿಯ ಸಹಾಯವೂ ಇರುತ್ತದೆ. ಆದುದರಿಂದ ಯುಧಿಷ್ಠಿರ ಮಹಾರಾಜನ ಕಾಲದಲ್ಲಿ ಸರ್ವ ಕಾಮ ದುಘಾ ಮಹೀ, “ಭೂಮಿಯು ಜನರ ಎಲ್ಲ ಅಗತ್ಯಗಳನ್ನೂ ಸಮೃದ್ಧವಾಗಿ ಉತ್ಪಾದಿಸಿತು.” ಮಹೀ ಎಂದರೆ ಭೂಮಿ. ಭೂಮಿಯಿಂದ ನಿಮಗೆ ನಿಮ್ಮ ಎಲ್ಲ ಅಗತ್ಯಗಳೂ ದೊರೆಯುತ್ತವೆ. ಅವು ಮಳೆಯ ರೂಪದಲ್ಲಿ ಆಕಾಶದಿಂದ ಬೀಳುತ್ತವೆ. ಭೂಮಿಯಿಂದ ವಸ್ತುಗಳು ಹೇಗೆ ಬರುತ್ತವೆಂಬ ವಿಜ್ಞಾನದ ಬಗೆಗೆ ಜನರಿಗೆ ಗೊತ್ತಿಲ್ಲ. ಕೆಲವು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಮತ್ತು ನಕ್ಷತ್ರಗಳ ಪ್ರಭಾವದಿಂದ ಮಳೆ ಬರುತ್ತದೆ ಮತ್ತು ಅನೇಕ ವಸ್ತುಗಳ ಉತ್ಪಾದನೆಯಾಗುತ್ತದೆ – ಅಮೂಲ್ಯ ಹರಳುಗಳು, ಮುತ್ತು – ಈ ವಸ್ತುಗಳು ಹೇಗೆ ಬರುತ್ತವೆಂಬುದು ಜನರಿಗೆ ಗೊತ್ತಿಲ್ಲ.
ರಾಜನು ಪುಣ್ಯ ಕಾರ್ಯ ಮಾಡಿದರೆ ಪ್ರಕೃತಿಯೂ ಅವನಿಗೆ ಸಹಕರಿಸುತ್ತದೆ. ರಾಜ ಅಥವಾ ಸರಕಾರ ಪಾಪ ಕಾರ್ಯದಲ್ಲಿ ತೊಡಗಿದ್ದರೆ ಪ್ರಕೃತಿ ಸಹಾಯ ಮಾಡದು. ಶ್ರೀಮದ್ ಭಾಗವತದ ನಾಲ್ಕನೆಯ ಸ್ಕಂಧದಿಂದ ನಮಗೆ ಈ ಬಗೆಗೆ ಮಾಹಿತಿ ಲಭಿಸುತ್ತದೆ. ಭೂಮಿ ತನ್ನ ಪೂರೈಕೆ ಮಾಡದಿದ್ದಾಗ ಪೃಥು ಮಹಾರಾಜನು ಅವಳಿಗೆ ಶಿಕ್ಷೆ ವಿಧಿಸಲು ಮುಂದಾಗುತ್ತಾನೆ. ಆಗ ಅವಳು ಹೇಳುತ್ತಾಳೆ, “ಇದು ನನ್ನ ಕರ್ತವ್ಯ. ಜನರು ರಾಕ್ಷಸರು, ನಾನು ಪೂರೈಕೆಯನ್ನು ನಿಯಂತ್ರಿಸಲೇಬೇಕು.”
ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಿಬಿಟ್ಟರೆ ತಾವು ಎಲ್ಲವನ್ನೂ ಮಾಡುವುದು ಸಾಧ್ಯ ಎಂದು ನಾಯಕರು ಭಾವಿಸುತ್ತಾರೆ. ತಾವು ಮೂರ್ಖರಾಗಿದ್ದರೂ ಎಲ್ಲರೂ ಸಂತೋಷದಿಂದಿರುತ್ತಾರೆ ಎಂದು ನಾಯಕರು ಯೋಚಿಸುತ್ತಾರೆ. ಆದರೆ ಅವರು ಜಗತ್ತನ್ನು ಸಂತೋಷಪಡಿಸಲಾರರು. ಅವರ ನಡವಳಿಕೆ, ವ್ಯವಹಾರವು ಹೆಚ್ಚು ಕ್ಷೀಣಿಸುತ್ತದೆಯಷ್ಟೆ.
ಯಜ್ಞದಿಂದ ಮಾತ್ರ
“ಕಾರ್ಖಾನೆಯು ಜನರನ್ನು ಆರೋಗ್ಯ ಮತ್ತು ಶಕ್ತಿವಂತರನ್ನಾಗಿ ಮಾಡುತ್ತದೆ” ಎಂದು ಕೃಷ್ಣನು ಎಲ್ಲಿಯೂ ತಿಳಿಸಿಲ್ಲ. ಆದರೆ ಅಜ್ಞಾನಿ ಸರಕಾರವು ಕಾರ್ಖಾನೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ. ಹಾಗಾದರೆ ಜನರು ಅದ್ಹೇಗೆ ಸಂತೋಷದಿಂದಿರಲು ಸಾಧ್ಯ? ಉಗ್ರ ಕರ್ಮ ಅಥವಾ ಕಠಿಣ ಕೆಲಸದಿಂದ ಜನರು ಅಸಮಾಧಾನ, ಅತೃಪ್ತಗೊಂಡಿದ್ದಾರೆ. “ಆರ್ಥಿಕ ಅಭಿವೃದ್ಧಿಗೆ ಕಾರ್ಖಾನೆ ಸ್ಥಾಪಿಸಿ” ಎಂದು ಕೃಷ್ಣನು ಎಲ್ಲಿ ಹೇಳಿದ್ದಾನೆ? ಎಲ್ಲಿಯೂ ಇಲ್ಲ.
ನಿಯತವಾದ ಮಳೆಯಿಂದ ಎಲ್ಲ ಆರ್ಥಿಕ ಚಟುವಟಿಕೆಯು ಸಂಪೂರ್ಣಗೊಳ್ಳುತ್ತದೆ ಎಂದು ಇಲ್ಲಿ ಹೇಳಲಾಗಿದೆ. ಕಾಮಂ ವವರ್ಷ ಪರ್ಜನ್ಯಃ. ಕಾಮಂ ಎಂದರೆ “ಬದುಕಿನ ಎಲ್ಲ ಅಗತ್ಯಗಳು” ಎಂದು ಅರ್ಥ. ಆಧುನಿಕ ವಿಜ್ಞಾನಿಗಳು, ತತ್ತ್ವ ಜ್ಞಾನಿಗಳು ಮತ್ತು ರಾಜಕಾರಣಿಗಳಿಗೆ ಇದು ಗೊತ್ತಿಲ್ಲ. ನಮಗೆ ಎಷ್ಟೊಂದು ವಸ್ತುಗಳು ಸಿಗುತ್ತಿವೆ, ಅವುಗಳ ಪೂರೈಕೆ ಹೇಗೆ? ಇದಕ್ಕೆ ಸ್ಪಷ್ಟವಾಗೇ ಉತ್ತರಿಸಲಾಗಿದೆ, ಕಾಮಂ ವವರ್ಷ ಪರ್ಜನ್ಯಃ, “ಮಳೆಯು ಅಗತ್ಯಗಳನ್ನು ಪೂರೈಸುತ್ತದೆ.” ಹಾಗಾದರೆ ಮಳೆಯು ಹೇಗೆ ನಿಯತ ಅಥವಾ ಕ್ರಮವಾಗಿರುತ್ತದೆ? ಯಜ್ಞಾದ್ ಭವತಿ ಪರ್ಜನ್ಯಃ, “ಯಜ್ಞದಿಂದ.”
ಯಜ್ಞ ಕಾರ್ಯಗಳನ್ನು ಎಲ್ಲಿ ಕಾಣುವುದು? ಜಗಳ ಮತ್ತು ವಂಚನೆಯ ಈ ಕಲಿಯುಗದಲ್ಲಿ ಯಜ್ಞಗಳನ್ನು ಮಾಡುವುದು ತುಂಬ ಕಷ್ಟ. ಹಣ ಇಲ್ಲ, ಅರ್ಹ ಬ್ರಾಹ್ಮಣರೂ ಇಲ್ಲ. ಆದುದರಿಂದ ಶಾಸ್ತ್ರ ಹೇಳುತ್ತದೆ, ಯಜ್ಞೈಃ ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸುಮೇಧಸಃ, “ಕಲಿಯುಗದಲ್ಲಿ ಬುದ್ಧಿವಂತರು ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಯಜ್ಞವನ್ನು ಮಾಡುತ್ತಾರೆ.” ತಲೆಯಲ್ಲಿ ಸಗಣಿಯಲ್ಲ, ಬುದ್ಧಿ ಹೊಂದಿರುವವರು ಈ ವಿಧಾನವನ್ನು ಅನುಸರಿಸುತ್ತಾರೆ.
ಪ್ರತಿಯೊಂದು ಮನೆಯಲ್ಲಿಯೂ ಎಲ್ಲರೂ ಹರೇ ಕೃಷ್ಣ ಮಂತ್ರವನ್ನು ಜಪಿಸಲಿ. ಸುಮ್ಮನೆ ಪಠಿಸಲು ಆರಂಭಿಸಿ, ಏನಾಗುತ್ತದೆಯೋ ನೋಡಿ. ನಾವು ಕೀರ್ತನೆಯನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ, ಆದರೆ ಮೂರ್ಖರು ಅದನ್ನು ಸ್ವೀಕರಿಸುತ್ತಿಲ್ಲ. ಜಗತ್ತಿನ ಎಲ್ಲೆಡೆ ಹರೇ ಕೃಷ್ಣ ಮಂತ್ರವನ್ನು ಜಪಿಸಿದರೆ ಜನರಿಗೆ ನಷ್ಟವೇನೂ ಇಲ್ಲ. ಆದರೂ ಅವರು ಮಾಡುವುದಿಲ್ಲ.
ಕೀರ್ತನೆಯಿಂದ ಎಲ್ಲವೂ ಸಾಧ್ಯ. ಸರ್ವ ಕಾಮ ದುಘಾ ಮಹೀ. ಭೂಮಿಯು ತಾಯಿ ಮತ್ತು ಭೂಮಿಯಿಂದ ಎಲ್ಲವೂ ಲಭ್ಯವಾಗುವಂತೆ ಕೃಷ್ಣನು ವ್ಯವಸ್ಥೆ ಮಾಡಿದ್ದಾನೆ. ಎಲ್ಲವೂ ಬರುತ್ತಿದೆ. ಗುಲಾಬಿ ಬರುತ್ತಿದೆ, ಗಣಿ ಇದೆ, ಚಿನ್ನ ಬರುತ್ತಿದೆ, ಕಲ್ಲಿದ್ದಲು ಬರುತ್ತಿದೆ, ಪೆಟ್ರೋಲ್ ಬರುತ್ತಿದೆ. ಭೂಮಿಯಲ್ಲಿ ಎಲ್ಲವೂ ಇದೆ. ಮಳೆ ಕ್ರಮಬದ್ಧವಾಗಿ ಬಂದರೆ ನಿಮಗೆ ನಿಮ್ಮ ಅಗತ್ಯಗಳೆಲ್ಲವೂ ಸಿಗುತ್ತವೆ. ಮತ್ತು ಯಜ್ಞ ಮಾಡುವುದರಿಂದ ನಿಯತವಾಗಿ ಮಳೆ ಬೀಳುತ್ತದೆ. ಈಗಿನ ಕಾಲದಲ್ಲಿ ಉಳಿದೆಲ್ಲ ರೀತಿಯ ಯಜ್ಞ ಕೈಗೊಳ್ಳುವುದು ಸಾಧ್ಯವಿಲ್ಲ.
ಹರೇರ್ ನಾಮ ಹರೇರ್ ನಾಮ ಹರೇರ್ ನಾಮೈವ ಕೇವಲಂ ।
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ ॥
“ಕಲಿಯುಗದಲ್ಲಿ ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಮೂಲಕ ಜೀವನದ ಗುರಿಯನ್ನು ಹೊಂದಬಹುದು. ಇದಲ್ಲದೆ ಅನ್ಯ ಮಾರ್ಗವಿಲ್ಲ.”
ಆದುದರಿಂದ ಹರೇ ಕೃಷ್ಣ ಜಪವನ್ನು ಆರಂಭಿಸಿ. ಇದರಿಂದ ಜನರಿಗೆ ಆಗುವ ನಷ್ಟವಾದರೂ ಏನು? ಜಪವು ಮನೆಯಿಂದ ಮನೆಗೆ, ಕಚೇರಿಯಿಂದ ಕಚೇರಿಗೆ ಮತ್ತು ಕಾರ್ಖಾನೆಯಿಂದ ಕಾರ್ಖಾನೆಗೆ ಹೋಗುತ್ತಲೇ ಇರಲಿ. ಕಾರ್ಖಾನೆಗಳಿರಲಿ, ಆದರೆ ಕಾರ್ಖಾನೆಯ ಎಲ್ಲರಿಗೂ ಕೃಷ್ಣನ ಪ್ರಸಾದ ಲಭ್ಯವಾಗುವಂತೆ ಮಾಡಿ. ಮುಷ್ಕರಗಳಿರುವುದಿಲ್ಲ. ಕಮ್ಯುನಿಸ್ಟರ ಚಳವಳಿ ಇರುವುದಿಲ್ಲ. ಎಲ್ಲವೂ ಲಭ್ಯ. ಎಲ್ಲವೂ ಸರಿಯಾಗಿರುತ್ತದೆ.
ಕೃಷ್ಣ ಪ್ರಜ್ಞೆ ಆಂದೋಲನವು ಭಾವನಾತ್ಮಕ ಅಂಧಾಭಿಮಾನವಲ್ಲ. ಅದು ಧಾರ್ಮಿಕ ಆಂದೋಲನವೂ ಅಲ್ಲ. ಅದು ಇಡೀ ಜಗತ್ತಿನ ಒಳಿತಿಗಾಗಿ ಇರುವ ವೈಜ್ಞಾನಿಕ ಆಂದೋಲನ. ನಾವು ನಮ್ಮ ಚಾರಿತ್ರ್ಯ, ನಡವಳಿಕೆಯಿಂದ ಇದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಆಗ ಜನರು ಕೃಷ್ಣ ಪ್ರಜ್ಞೆ ಚಳವಳಿಯನ್ನು ಸ್ವೀಕರಿಸುತ್ತಾರೆ.
ಇದೊಂದು ರೀತಿಯ ಧಾರ್ಮಿಕ ಚಳವಳಿ ಎಂದು ಅವರು ಯೋಚಿಸುತ್ತಾರೆ. ಅವರಿಗೆ ಧಾರ್ಮಿಕ ಎಂದರೆ ಅಂಧಾಭಿಮಾನ. ಕೃಷ್ಣ ಪ್ರಜ್ಞೆ ಆಂದೋಲನ ಆ ರೀತಿಯದಲ್ಲ. ಅದು ಬೇರೆ ಧರ್ಮಗಳ ಜೊತೆ ಹೋರಾಡಲಿಲ್ಲ. ಬ್ರಿಟಿಷರು ಹಿಂದೂ-ಮುಸ್ಲಿಮರ ನಡುವೆ ಹೋರಾಟ ಸೃಷ್ಟಿಸಿದರು. ಅದಕ್ಕೆ ಮುನ್ನ ಭಾರತದ ಚರಿತ್ರೆಯಲ್ಲಿ ಧಾರ್ಮಿಕ ಹೋರಾಟ ಇರಲಿಲ್ಲ. ಕುರುಕ್ಷೇತ್ರ ಸಮರವು ರಾಜಕೀಯದ್ದು. “ನೀನು ಹಿಂದು. ನಾನು ಮುಸ್ಲಿಂ. ಆದುದರಿಂದ ನಾವು ಹೋರಾಡಬೇಕು” ಎಂಬ ಆಧಾರದ ಧಾರ್ಮಿಕ ಹೋರಾಟ ಅದಾಗಿರಲಿಲ್ಲ. ಭಾರತದ ಚರಿತ್ರೆಯಲ್ಲಿ ಅಂತಹ ಹೋರಾಟವಿಲ್ಲ.
ಲೌಕಿಕ ವೇದಿಕೆಯಲ್ಲಿ ನಿಮ್ಮ ಮತ್ತು ನನ್ನ ಆಸಕ್ತಿ ಮಧ್ಯೆ ಕೆಲವು ಬಾರಿ ಸಂಘರ್ಷವಾಗಬಹುದು. ಆಗ ಸಮರವೂ ಆಗಬಹುದು. ಆದರೆ ಭಗವಂತನ ಪ್ರಜ್ಞೆಯಲ್ಲಿ ಘರ್ಷಣೆ ಏಕೆ? ಪ್ರತಿಯೊಬ್ಬರೂ ದೈವ ಪ್ರಜ್ಞಾವಂತರಾದರೆ, ಘರ್ಷಣೆ ಪ್ರಶ್ನೆ ಏಕೆ ಮೂಡುತ್ತದೆ?