ಜಟಾಯುವನ್ನು ನೆನಪಿಸುವ ಲೇಪಾಕ್ಷಿ ದೇವಾಲಯ

ಭಾರತದಾದ್ಯಂತ ಸಂಚರಿಸುತ್ತಿದ್ದರೆ, ರಾಮಾಯಣದ ಘಟನೆಗಳು ನಡೆದವೆಂದು ಹೇಳಲಾಗುವ ಅನೇಕ ಸ್ಥಳಗಳು ನಮಗೆ ಕಾಣಸಿಗುತ್ತವೆ. ಅವುಗಳನ್ನು ಸಂದರ್ಶಿಸಿದಾಗ, ಆ ಘಟನೆಗಳು ನಮಗೆ ನೆನಪಾಗಿ ವಿಸ್ಮಯವುಂಟಾಗುತ್ತದೆ. ಅಂಥ ಒಂದು ಸ್ಥಳವೇ ಆಂಧ್ರಪ್ರದೇಶದ ಲೇಪಾಕ್ಷಿ ದೇವಾಲಯ.

ರಾಮಾಯಣವನ್ನು ನೆನಪಿಸಿಕೊಳ್ಳಿ. ರಾವಣನು ಸೀತಾಪಹರಣ ಮಾಡಿದ ಘಟನೆ. ಆ ದುರುಳ ರಕ್ಕಸನಿಂದ ಸೀತೆಯನ್ನು ಕಾಪಾಡಲು ಯಾರೂ ಇರಲಿಲ್ಲ. ರಾಮ ಲಕ್ಷ್ಮಣರಿಬ್ಬರೂ ಮಾಯಾಜಿಂಕೆಯ ಕಾರಣ ದೂರ ಹೋಗಿದ್ದರಷ್ಟೇ? ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ, ಅಂತೂ ಒಬ್ಬ ಮಹಾತ್ಮ ಅವಳನ್ನು ಕಾಪಾಡಲು ಧಾವಿಸಿ ಬಂದ. ಆದರೆ ಅದು ಮಾನವನೋ ದೈವವೋ ಆಗಿರದೇ ಒಂದು ಪಕ್ಷಿಯಾಗಿತ್ತು. ಶ್ರೀರಾಮನ ಗೆಳೆಯನಾದ ಜಟಾಯು ಎಂಬ ಹದ್ದು ಆಗಿತ್ತು. ಜಟಾಯು ರಾವಣನನ್ನು ತಡೆದು ವೀರಾವೇಶದಿಂದ ಅವನೊಂದಿಗೆ ಕಾದುತ್ತಾ ಅವನ ರಥವನ್ನು ನಾಶಮಾಡಿತು. ಆದರೆ ರಾವಣನು ಅದರ ರೆಕ್ಕೆಗಳನ್ನು ಕತ್ತರಿಸಿ ಅದನ್ನು ಕೆಳಗುರುಳಿಸಿದ. ಹಾಗೆ ಅದನ್ನು ಸೋಲಿಸಿ ಸೀತೆಯನ್ನು ಲಂಕೆಗೊಯ್ದ. ಮುಂದೆ, ಶ್ರೀ ರಾಮನು ಸೀತಾನ್ವೇಷಣೆ ಮಾಡುತ್ತಾ ಇಲ್ಲಿಗೆ ಬಂದಾಗ, ಗಾಯಗೊಂಡು ಬಿದ್ದಿದ್ದ ಜಟಾಯುವನ್ನು ನೋಡಿ ಅದರಿಂದ ನಡೆದ ವಿಷಯವನ್ನು ತಿಳಿದುಕೊಂಡು ಮರುಗಿದ. ಜಟಾಯು, ವಿಷಯವನ್ನರುಹಿ ಮರಣ ಹೊಂದಲು, ಶ್ರೀರಾಮನು ಅದಕ್ಕೆ ಮುಕ್ತಿಯನ್ನು ದಯಪಾಲಿಸಿ, `ಲೇ, ಪಕ್ಷಿ!’ ಎಂದು ಉದ್ಗರಿಸಿ ಅದರ ಅಂತ್ಯಕ್ರಿಯೆ ನಡೆಸಿದ. ಈ ಘಟನೆ ನಡೆದ ಸ್ಥಳವೇ ಇಂದಿನ ಲೇಪಾಕ್ಷಿ ಎನ್ನುತ್ತದೆ ಸ್ಥಳಪುರಾಣ. ಶ್ರೀರಾಮನು `ಲೇ ಪಕ್ಷಿ!’ ಎಂದು ಉದ್ಗರಿಸಿದುದೇ ಮುಂದೆ ಲೇಪಾಕ್ಷಿ ಎಂದಾಯಿತು ಎನ್ನುತ್ತಾರೆ ಸ್ಥಳೀಯರು.

ಎಲ್ಲಿದೆ ಈ ಸ್ಥಳ?

ಲೇಪಾಕ್ಷಿ, ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿ. ಇದು ಅನಂತಪುರ ಜಿಲ್ಲೆಯಲ್ಲಿದೆ, ಹಾಗೂ ಹಿಂದೂಪುರದಿಂದ 14 ಕಿ.ಮೀ. ದೂರದಲ್ಲಿದೆ. ಬೆಂಗಳೂರಿಗೆ ಬಹಳ ಹತ್ತಿರವಾಗಿರುವ ಈ ಸ್ಥಳಕ್ಕೆ ಹಿಂದೂಪುರದಿಂದ ಸುಲಭವಾದ ಬಸ್‌ ಸೌಕರ್ಯವಿದೆ. ಆದರೆ ಸುತ್ತಮುತ್ತಲೂ ಒಳ್ಳೆಯ ಭೋಜನ ಸಿಗದಿರುವ ಕಾರಣ, ಖಾಸಗಿ ವಾಹನದಲ್ಲಿ ಎಲ್ಲಿಯಾದರೂ ನಿಲ್ಲುವ ಸೌಲಭ್ಯವಿರುವಂತೆ ಹೋಗುವುದು ಒಳ್ಳೆಯದು.

ಇಲ್ಲಿರುವ ದೇವಾಲಯ, ವೀರಭದ್ರಸ್ವಾಮಿ ದೇವಾಲಯ. ಬಹಳ ದೊಡ್ಡದೂ ಅದ್ಭುತವೂ ಆಗಿರುವ ಈ ದೇವಾಲಯ ಬಹಳ ಪ್ರಸಿದ್ಧವೂ ಆಗಿದೆ. ಈ ದೇವಾಲಯವನ್ನು 15-16ನೇ ಶತಮಾನದ ಮಧ್ಯಕಾಲದಲ್ಲಿ ವಿಜಯನಗರದ ಅರಸರಾದ ಅಚ್ಯುತರಾಯರ ಕಾಲದಲ್ಲಿ ಪೆನುಗೊಂಡ ಸಂಸ್ಥಾನದ ಕೋಶಾಧಿಕಾರಿಯಾಗಿದ್ದ ವಿರೂಪಣ್ಣನು ನಿರ್ಮಿಸಿದ. ಮೊದಲಿಗೆ ಇಲ್ಲಿ ಆಮೆಯಾಕಾರದ ಕೂರ್ಮಗಿರಿ ಎಂಬ ಬಂಡೆಯಿದ್ದು ಆ ಬಂಡೆಯ ಮೇಲೆಯೇ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಮೊದಲಿಗೆ ಈ ದೇವಾಲಯವು ಏಳು ಪ್ರಾಕಾರಗಳನ್ನುಳ್ಳದ್ದಾಗಿದ್ದು, ಈಗ ಕೇವಲ ಮೂರು ಪ್ರಾಕಾರಗಳನ್ನು ಹೊಂದಿದೆ. ಇತರ ಪ್ರಾಕಾರಗಳು ಕೆಲವು ದಾಳಿಗಳಲ್ಲಿ ನಾಶವಾಗಿರಲು ಸಾಧ್ಯ. ಎರಡನೆಯ ಪ್ರಾಕಾರದಲ್ಲಿ ಒಂದು ಬಂಡೆಯ ಮೇಲೆ ಸುಮಾರು 6 ಅಡಿ ಎತ್ತರದ ಬೃಹತ್‌ ಗಣೇಶನ ಮೂರ್ತಿಯಿದ್ದು ಈ ಮೂರ್ತಿಯ ದರ್ಶನದ ಬಳಿಕವೇ ವೀರಭದ್ರಸ್ವಾಮಿಯ ಪೂಜೆ ಮಾಡಲಾಗುತ್ತದೆ. ಇದರ ಸನಿಹವೇ, ಜೇಡ, ಬೇಡರಕಣ್ಣಪ್ಪ, ಹಾವು, ಆನೆಗಳು ಪೂಜೆ ಮಾಡುತ್ತಿರುವ ಕಾಳಹಸ್ತೀಶ್ವರ ಲಿಂಗದ ಕೆತ್ತನೆಯಿದೆ.

ಈ ದೇವಾಲಯದ ಮುಖ್ಯ ದೇವತೆ ಶ್ರೀ ವೀರಭದ್ರಸ್ವಾಮಿ. ಈ ದೇವರು, ವಿರೂಪಣ್ಣನ ಕುಲದೈವವೂ ಹೌದು. ಗರ್ಭಗುಡಿಯಲ್ಲಿ ಈ ದೇವರೊಂದಿಗೆ ವಿವಿಧ ಸ್ತಂಭಗಳಲ್ಲಿ ವಾಸ್ತುಪುರುಷ, ಪದ್ಮಿನೀ ಸ್ತ್ರೀ, ಗಜಾಸುರ ಸಂಹಾರ ಶಿವ, ನಾಟ್ಯಗಣಪತಿ, ದುರ್ಗಾದೇವಿ, ಮೊದಲಾದ ಶಿಲ್ಪಗಳ ಕೆತ್ತನೆಗಳಿವೆ. ಗರ್ಭಗುಡಿಯ ಮೇಲ್ಭಾಗದಲ್ಲಿ ಸುಮಾರು 24 ಅಡಿ ಉದ್ದದ, 14 ಅಡಿ ಅಗಲದ ವೀರಭದ್ರ ಸ್ವಾಮಿಯ ವರ್ಣಚಿತ್ರವಿದೆ. ಅಮ್ಮನವರಾದ ದುರ್ಗಾದೇವಿಯ ವಿಗ್ರಹವನ್ನು ಒಂದು ಸ್ತಂಭದಲ್ಲಿ ಕೆತ್ತಲಾಗಿದೆ. ಈ ಶಿಲ್ಪವನ್ನು ಕೆತ್ತನೆ ಮಾಡುತ್ತಿದ್ದಾಗ ದೇವಿಯು ಭಕ್ತರ ಮೇಲೆ ಆವಾಹಿತಳಾಗಿ ತಾನು ಈ ಸ್ತಂಭದಲ್ಲೇ ಇರುವಳೆಂದೂ ಅವಳಿಗೆ ಅಲ್ಲಿಯೇ ಪೂಜಾದಿಗಳನ್ನು ನಡೆಸಬೇಕೆಂದು ಹೇಳಿದಳಂತೆ. ಹಾಗಾಗಿ ಇಂದಿಗೂ ದೇವಿಯನ್ನು ಸ್ತಂಭದಲ್ಲೇ ಪೂಜಿಸಲಾಗುತ್ತದೆ.

ದೇವಾಲಯದ ಇತರ ವಿಶೇಷಗಳು

ನಿಜಕ್ಕೂ ಇದೊಂದು ಅದ್ಭುತವಾದ ಅಪರೂಪದ ದೇವಾಲಯ. ಇಲ್ಲಿ ನೋಡಲು ಹಲವಾರು ವಿಶೇಷಗಳಿವೆ. ಚಿತ್ರ, ಶಿಲ್ಪಗಳಿರುವ ಒಂದು ಕಲಾತಾಣವಾಗಿದೆ ಇದು. ನಾಟ್ಯಮಂಟಪದ ಅಂಥ ಒಂದು ವಿಶೇಷ. ಈ ಮಂಟಪವನ್ನು ಎಪ್ಪತ್ತು ಸ್ತಂಭಗಳಿಂದ ನಿರ್ಮಿಸಿದ್ದು, ಮಂಟಪದ ಮಧ್ಯದಲ್ಲಿನ ಹನ್ನೆರಡು ಸ್ತಂಭಗಳ ಮೇಲೆ, ನಾಟ್ಯವಾಡುತ್ತಿರುವ ರಂಭೆ, ಮತ್ತು ಅದನ್ನು ನೋಡುತ್ತಿರುವ ದತ್ತಾತ್ರೇಯ, ಶಿವ, ಪಾರ್ವತಿ, ಸೂರ್ಯ, ತುಂಬುರು, ರಿಠೇಶ್ವರ, ನಂದಿ, ಬ್ರಹ್ಮ, ನಟರಾಜ, ಚಂದ್ರ, ಸನಾತನ, ಮೊದಲಾದ ದೇವತೆಗಳು ಸಂಗೀತವಾದ್ಯಗಳನ್ನು ಹಿಡಿದು ನಿಂತಿರುವ ಶಿಲ್ಪಗಳನ್ನು ಕೆತ್ತಿದ್ದಾರೆ. ರಂಭೆಗೆ ನೇರವಾಗಿ ಎದುರಿಗೆ ಮೂರು ಕಾಲುಗಳುಳ್ಳ, ಕುದುರೆಯ ದಂತಗಳು, ಕುದುರೆಯ ಕಣ್ಣುಗಳುಳ್ಳ, ಜಡೆಯಿರುವ ನಾಟ್ಯಾಚಾರ್ಯನಾದ ಭೃಂಗಿಯನ್ನು ಕೆತ್ತಿದ್ದಾರೆ. ಈ  ಮಂಟಪದ ಈಶಾನ್ಯ ಮೂಲೆಯಲ್ಲಿ ಎಂಟಡಿಯ ಸ್ತಂಭವೊಂದಿದ್ದು, ಅಂತರಿಕ್ಷ ಸ್ತಂಭವೆಂದು ಕರೆಯಲ್ಪಡುವ ಅದು, ನೆಲವನ್ನು ತಾಕದೇ ನಿಂತಿರುವುದು ಒಂದು ಅದ್ಭುತ. ಇದನ್ನು ದೃಢಪಡಿಸಿಕೊಳ್ಳಲು ಎಲ್ಲರೂ ಈ ಸ್ತಂಭದ ಕೆಳಗೆ ಬಟ್ಟೆಯನ್ನು ಹಾಯಿಸಿ ನೋಡುತ್ತಾರೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ, ಹ್ಯಾಮಿಲ್ಟನ್‌ ಎಂಬ ಬ್ರಿಟಿಷ್‌ ಇಂಜಿನಿಯರ್‌, ಈ ಸ್ತಂಭವನ್ನು ಪರೀಕ್ಷಿಸಲು ಅದನ್ನು ಜರುಗಿಸಹೋಗಿ, ಮಂಟಪಕ್ಕೆ ಸ್ವಲ್ಪ ಹಾನಿಯುಂಟು ಮಾಡಿದ್ದಾನೆ. ಇಲ್ಲಿನ ಸ್ತಂಭಗಳ ತುದಿಗಳ ವಿನ್ಯಾಸಗಳನ್ನು ಸೀರೆಗಳಿಗೆ ಹಿಂದಿನಿಂದಲೂ ಬಳಸಲಾಗುತ್ತಿವೆ.

ಈ ಮಂಟಪದ ಇನ್ನೊಂದು ವಿಶೇಷ, ಶಿವನ ಭಿಕ್ಷಾಟನ ಮೂರ್ತಿಯ ಕೆತ್ತನೆ. ಭಿಕ್ಷುಕನ ರೂಪದಲ್ಲಿ ಪಾರ್ವತಿಯನ್ನು ಪರೀಕ್ಷಿಸಲು ಬಂದಿರುವ ಶಿವ, ವಸ್ತ್ರವು ಜಾರಿಹೋಗುತ್ತಿದ್ದರೂ ಏಕಾಗ್ರಚಿತ್ತದಿಂದ ಭಿಕ್ಷೆ ನೀಡುತ್ತಿರುವ ಪಾರ್ವತಿಯರ ಶಿಲ್ಪಗಳು ಅದ್ಭುತವಾಗಿವೆ. ಈ ಮಂಟಪದ ಮೇಲ್ಛಾವಣಿಯಲ್ಲಿ ಪೌರಾಣಿಕ ಮತ್ತು ರಾಜರ ಕಥೆಗಳ ಹಲವಾರು ವರ್ಣಚಿತ್ರಗಳಿದ್ದು, ಅವುಗಳಲ್ಲಿ ಬಾಲಕೃಷ್ಣನ ಒಂದು ಮುದ್ದಾದ ಚಿತ್ರ ಮನೋಹರವಾಗಿದೆ. ಈ ಚಿತ್ರದ ವಿಶೇಷವೆಂದರೆ, ನಾವು ಎತ್ತ ಕಡೆ ತಿರುಗಿದರೂ, ಕೃಷ್ಣನ ಕಣ್ಣುಗಳು ನಮ್ಮತ್ತಲೇ ನೋಡುತ್ತವೆ.

ದೇವಾಲಯದ ಹೊರಗೆ ಒಂದು ಬಂಡೆಯ ಮೇಲೆ, ಏಳು ಹೆಡೆಗಳ ಒಂದು ದೊಡ್ಡ ಸರ್ಪದ ತಲ್ಪದಲ್ಲಿರುವ ಶಿವಲಿಂಗದ ಕೆತ್ತನೆಯಿರುವುದನ್ನು ನೋಡಬಹುದು. ಮುಖ್ಯ ಶಿಲ್ಪಿಗಳು, ತಾಯಿಯು ತಮಗೆ ಅಡುಗೆ ಮಾಡುವುದು ತಡವಾಯಿತೆಂದು ಸಮಯ ಕಳೆಯಲು ಅಲ್ಪಾವಧಿಯಲ್ಲೇ ಈ ವಿಗ್ರಹವನ್ನು ಕೆತ್ತಿದರಂತೆ. ಇದನ್ನು ನೋಡಿದ ಅವರ ತಾಯಿಯ ದೃಷ್ಟಿ ಬಿದ್ದು ಇದು ಸೀಳಿತಂತೆ. ಇಲ್ಲಿಂದ ಮುಂದೆ ಹೋದರೆ, ಅಪೂರ್ಣವಾದ ಪಾರ್ವತಿ ಶಿವ ಅವರ ಒಂದು ಕಲ್ಯಾಣಮಂಟಪವಿದೆ. ಇಲ್ಲಿ ಪಾರ್ವತಿ ಶಿವ ಅವರ ವಿವಾಹ ದೃಶ್ಯಾವಳಿಯನ್ನೂ ಅದನ್ನು ನೋಡಲು ಬಂದಿರುವ ದೇವೇಂದ್ರ, ಅಗ್ನಿ, ವರುಣ, ವಿಶ್ವಾಮಿತ್ರ, ಬೃಹಸ್ಪತಿ, ಬ್ರಹ್ಮ, ವಿಷ್ಣು, ವಾಯು, ಕುಬೇರ, ವಸಿಷ್ಠ ಮೊದಲಾದ ದೇವತೆಗಳನ್ನೂ ಋಷಿಗಳನ್ನೂ ಸುಂದರವಾಗಿ ಕೆತ್ತಿದ್ದಾರೆ. ಆದರೆ ಈ ಮಂಟಪವು ಅಪೂರ್ಣವಾಗಲು ಕಾರಣವೆಂದರೆ, ವಿರೂಪಣ್ಣನ ಕೆಲವು ವಿರೋಧಿಗಳು, ಅವನು ಅನಗತ್ಯವಾಗಿ ಹಣವ್ಯಯ ಮಾಡಿದ್ದಾನೆಂದು ರಾಜನಿಗೆ ದೂರಿತ್ತು ಅವನು ವಿರೂಪಣ್ಣನ ಕಣ್ಣು ಕೀಳಿಸಲು ಆಜ್ಞೆ ಮಾಡಿದ್ದು ಹಾಗೂ ವಿರೂಪಣ್ಣನು ತಾನು ಯಾವ ತಪ್ಪನ್ನೂ ಮಾಡಿಲ್ಲವೆಂದು ತಾನೇ ಕಣ್ಣುಗಳನ್ನು ಕಿತ್ತುಕೊಂಡಿದ್ದು ಅವನು ತನ್ನ ಕಣ್ಣುಗಳನ್ನು ಎಸೆದ ಸ್ಥಳದ ಮೇಲೆ ಈಗಲೂ ಗುರುತಿರುವುದನ್ನು ಇಲ್ಲಿ ತೋರಿಸುತ್ತಾರೆ.

ಇಲ್ಲಿ ಸ್ವಲ್ಪ ಮುಂದೆ, ಸೀತಾದೇವಿಯ ಬಲಹೆಜ್ಜೆಯ ಗುರುತಿದೆ. ಈ ಹೆಜ್ಜೆಯ ಹೆಬ್ಬೆರಳಿನ ಪ್ರದೇಶದಿಂದ ಸದಾ ಸ್ವಲ್ಪ ನೀರು ಬರುತ್ತಿರುತ್ತದೆ. ಈ ಹೆಜ್ಜೆಯ ಗುರುತು ಬಹಳ ದೊಡ್ಡದಾಗಿದೆ. ಸೀತೆಯ ಹೆಜ್ಜೆಯ ಗುರುತೇ ಇಷ್ಟು ದೊಡ್ಡದೇ ಎಂದು ನಾವು ಆಶ್ಚರ್ಯಪಟ್ಟರೆ, ಸೀತೆಯು ತ್ರೇತಾಯುಗದವಳು, ಆಗಿನ ಕಾಲದ ಜನರ ಎತ್ತರ, ಗಾತ್ರಗಳು ಇಂದಿನವರಿಗಿಂತ ತುಂಬ ದೊಡ್ಡದಿದ್ದವು ಎಂದು ಸ್ಥಳೀಯರು ಸಮಾಧಾನ ಹೇಳುತ್ತಾರೆ.

ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ನಂದಿಯ ವಿಗ್ರಹವನ್ನು ಇಲ್ಲಿ ಕಾಣಬಹುದು. ಒಂದೇ ಬಂಡೆಯಲ್ಲಿ ಕೆತ್ತಲಾಗಿರುವ ಈ ನಂದಿ ವಿಗ್ರಹವು ಸುಮಾರು ಗೆಜ್ಜೆ, ಘಂಟೆ, ಆಭರಣಗಳಿಂದ ಅಲಂಕೃತಗೊಂಡು ಬಹಳ ಸುಂದರವಾಗಿದೆ. ವಾಸ್ತವವಾಗಿ ಆಗಲೇ ನೋಡಿದ ಸರ್ಪ ಮತ್ತು ಲಿಂಗದ ಕೆತ್ತನೆಗೆ ನೇರವಾಗಿ ಎದುರಿಗಿದೆ ಈ ನಂದಿಯ ವಿಗ್ರಹ. ಆದರೆ ದಾಳಿಯ ಕಾರಣ ಇದು ಮುಖ್ಯ ದೇವಾಲಯದಿಂದ ಬೇರ್ಪಟ್ಟು ಅರ್ಧ ಕಿ.ಮೀ.ನಷ್ಟು ದೂರದಲ್ಲಿದೆ. ಇದರ ಸುತ್ತಲೂ ಒಂದು ಉಪವನವನ್ನು ರಚಿಸಲಾಗಿದೆ. ಹಿಂದೆ ದೇವಾಲಯವು ಇಲ್ಲಿಯವರೆಗೂ ಇತ್ತು ಎಂದರೆ ಇದು ಎಷ್ಟು ದೊಡ್ಡದಾಗಿತ್ತೆಂದು ನಾವು ಊಹಿಸಿಕೊಳ್ಳಬಹುದು. ಇಲ್ಲಿಂದ ಆ ನಾಗಲಿಂಗ ವಿಗ್ರಹವು ದೂರದಲ್ಲಿ ಪುಟ್ಟದಾಗಿ ಕಾಣುತ್ತದೆ. ದಾಳಿಗಳಿಂದ ಹಾಳಾದ ದೇವಾಲಯದ ಭಾಗಗಳು ಇಲ್ಲಿನ ಸ್ಥಳೀಯರ ಮನೆಗಳ ಭಾಗಗಳಾಗಿವೆ ಎಂದು ಸ್ಥಳೀಯರು ಹೇಳುವುದನ್ನು ಕೇಳಿದರೆ ಆಶ್ಚರ್ಯವಾಗುತ್ತದೆ.

ಹೀಗೆ ಶ್ರೀ ರಾಮಾಯಣದ ಐತಿಹ್ಯವನ್ನು ಹೊಂದಿರುವ, ಅನೇಕ ವಿಶೇಷಗಳ ನಿಧಿಯಾಗಿರುವ ಲೇಪಾಕ್ಷಿ ಶ್ರೀ ವೀರಭದ್ರಸ್ವಾಮಿಯ ದೇವಾಲಯ, ನೋಡಲೇಬೇಕಾದ, ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi