ಶ್ರೀ ಕೃಷ್ಣನನ್ನು, ಅವನಮ್ಮ ಯಶೋದಾ, ತುಂಬಾ ತುಂಟತನ ಮಾಡುತ್ತಾನೆಂದು ಮರದ ಒರಳಿಗೆ ಕಟ್ಟಿಹಾಕಿದ್ದಳು. ಆ ಸಮಯದಲ್ಲಿ ಅವನಿಗೆ, ಅರ್ಜುನ ಎಂದು ಕರೆಸಿಕೊಳ್ಳುವ ಎರಡು ದೊಡ್ಡ ಮರಗಳು ಎದುರಿನಲ್ಲಿ ಕಾಣಿಸಿದವು.

ತಮ್ಮ ಹಿಂದಿನ ಜನ್ಮದಲ್ಲಿ ಈ ಎರಡು ಮರಗಳೂ ಮನುಷ್ಯರಾಗಿ, ಕುಬೇರನ ಮಕ್ಕಳಾಗಿ ಹುಟ್ಟಿದ್ದವು. ಅವುಗಳಿಗೆ ನಳಕೂವರ ಮತ್ತು ಮಣಿಗ್ರೀವ ಎಂದು ಹೆಸರಿತ್ತು. ಮುಂದೆ ಶ್ರೀಕೃಷ್ಣನ ದರ್ಶನಭಾಗ್ಯ ಪಡೆಯುವಂತಹ ಅತಿದೊಡ್ಡ ಅನುಗ್ರಹವನ್ನು ಪಡೆಯುವುದಕ್ಕಾಗಿ, ಆ ಜನ್ಮದಲ್ಲಿ ಇವರಿಬ್ಬರಿಗೆ ನಾರದ ಮುನಿ ಒಂದು ಶಾಪವನ್ನು ಕೊಟ್ಟಿದ್ದರು.
ಇವರಿಬ್ಬರೂ ತಮ್ಮ ತಂದೆ ಕುಬೇರನ ಐಶ್ವರ್ಯದಿಂದ ಮೈಮರೆತು, ಒಂದು ಸಲ ದೇವಲೋಕವೊಂದರಲ್ಲಿ ಅಪ್ಸರೆಯರೊಂದಿಗೆ ಮೋಜಿನಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅದೇ ದಾರಿಯಲ್ಲಿ ಹೋಗುತ್ತಿದ್ದ ನಾರದ ಮುನಿಗಳು, ಕುಬೇರನ ಮಕ್ಕಳ ಈ ಕೆಟ್ಟ ನಡವಳಿಕೆಯನ್ನು ನೋಡಿ ಬೇಸರಪಟ್ಟುಕೊಂಡರು.
ದೊಡ್ಡ ಋಷಿಗಳಾದ ನಾರದರು ಎದುರು ಬಂದದ್ದನ್ನು ನೋಡಿ ಆ ಅಪ್ಸರ ಸ್ತ್ರೀಯರು ಮೈಮೇಲೆ ಉಡುಪನ್ನು ಧರಿಸಿದರು. ಆದರೆ ಈ ಇಬ್ಬರು ಕುಬೇರ ಪುತ್ರರು ಕುಡಿದ ಅಮಲಿನಲ್ಲಿ ಇದ್ದುದರಿಂದ ಹಾಗೆ ಮಾಡಲಿಲ್ಲ. ನಾರದಮುನಿಗೆ ತುಂಬಾ ಕೋಪಬಂದಿತು. ಅವರ ನಡವಳಿಕೆ ನೋಡಿ ಕೋಪದಿಂದ ಹೀಗೆ ಶಾಪಕೊಟ್ಟರು: ‘ನಿಮ್ಮಿಬ್ಬರಿಗೂ ಬುದ್ಧಿಯೇ ಇಲ್ಲ.

ಆದ್ದರಿಂದ ಕುಬೇರನ ಮಕ್ಕಳಾಗಿರುವ ಬದಲು ಮರಗಳಾಗಿ ಹೋಗಿ.” ಇದನ್ನು ಕೇಳಿದ ಮೇಲೆ ಮತ್ತೆ ತಮ್ಮ ಎಚ್ಚರದ ಸ್ಥಿತಿಗೆ ಬಂದ ಅವರಿಬ್ಬರೂ ಓಡಿಬಂದು, ತಮ್ಮ ಈ ತಪ್ಪಿಗಾಗಿ ಕ್ಷಮಿಸುವಂತೆ ನಾರದರನ್ನು ಬೇಡಿಕೊಂಡರು. ನಾರದರು ಆಮೇಲೆ ಹೇಳಿದರು; “ನೀವಿಬ್ಬರೂ ಮರಗಳಾಗಿ ನಂದ ಮಹಾರಾಜನ ಅರಮನೆ ಆವರಣದಲ್ಲಿ ನಿಂತಿರುತ್ತೀರಿ. ಸ್ವತಃ ಕೃಷ್ಣನೇ ಆ ಸಮಯದಲ್ಲಿ ನಂದನ ಮಗನಾಗಿ ಹುಟ್ಟುತ್ತಾನೆ. ಅವನು ನಿಮಗೆ ಮೋಕ್ಷಕೊಡುತ್ತಾನೆ.”
ಬಾಲಕೃಷ್ಣನನ್ನು ಮರದ ಒರಳಿಗೆ ಕಟ್ಟಿಹಾಕಿಬಿಟ್ಟಿದ್ದರೂ, ತನ್ನ ಅತಿ ದೊಡ್ಡ ಭಕ್ತರಾದ ನಾರದಮುನಿಗಳ ಭವಿಷ್ಯದ ಮಾತುಗಳನ್ನು ಕಾಪಾಡುವುದಕ್ಕಾಗಿ, ಕೃಷ್ಣ ಆ ಜೋಡಿ ಮರಗಳ ಕಡೆಗೆ ಅಂಬೆಗಾಲಿಟ್ಟುಕೊಂಡು ಮುನ್ನಡೆದ. ಎರಡು ಮರಗಳ ಮಧ್ಯದಲ್ಲಿ ಮುಂದೆ ಹೋಗಲು ಸಾಧ್ಯವಾದರೂ, ಅವನನ್ನು ಕಟ್ಟಿಹಾಕಿದ್ದ ಆ ಮರದ ಒರಳು ಮಾತ್ರ ಎರಡು ಮರಗಳ ನಡುವೆ ಸಿಕ್ಕಿಹಾಕಿಕೊಂಡುಬಿಟ್ಟಿತು.
ಇದರ ಪ್ರಯೋಜನವನ್ನು ಪಡೆದುಕೊಂಡ ಶ್ರೀಕೃಷ್ಣ ದಾರವನ್ನು ಬಲವಾಗಿ ಎಳೆಯುತ್ತ ಮುಂದೆ ನಡೆದ. ಮರದ ಒರಳಿಗೆ ಕಟ್ಟಿದ್ದ ದಾರವನ್ನು ಇವನು ಗಟ್ಟಿಯಾಗಿ ಎಳೆದಕೂಡಲೇ, ಆ ಎರಡು ಮರಗಳು ತಮ್ಮ ರೆಂಬೆಗಳು, ಎಲೆಗಳ ಸಮೇತ ಭಾರಿ ಶಬ್ದಮಾಡಿಕೊಂಡು ಕೆಳಗುರುಳಿದವು. ಕೆಳಗೆ ಬಿದ್ದ ಈ ಮರಗಳಿಂದ, ಪ್ರಜ್ವಲಿಸುತ್ತಿರುವ ಜ್ವಾಲೆಯ ಹಾಗೆ ಹೊಳೆಯುತ್ತಿರುವ ಇಬ್ಬರು ಮಹಾನ್ ವ್ಯಕ್ತಿಗಳು ಹೊರಬಂದರು.

ಪರಿಶುದ್ಧಗೊಂಡ ಈ ಇಬ್ಬರು ವ್ಯಕ್ತಿಗಳೂ ಕೂಡಲೇ ಬಾಲಕೃಷ್ಣನ ಮುಂದೆ ಬಂದು ನಿಂತರು, ಮತ್ತು ಬಾಗಿ ತಮ್ಮ ಗೌರವಗಳನ್ನೂ ಮತ್ತು ಪ್ರಾರ್ಥನೆಗಳನ್ನೂ ಸಲ್ಲಿಸಿದರು.
ಇದಾದ ಮೇಲೆ, ಆ ಉಪದೇವತೆಗಳು ಅನೇಕ ಸಲ ಕೃಷ್ಣನಿಗೆ ಪ್ರದಕ್ಷಿಣೆ ಹಾಕಿದರು ಮತ್ತು ಮತ್ತೆ ಮತ್ತೆ ಅವನಿಗೆ ನಮಸ್ಕಾರ ಮಾಡಿದರು. ಆಮೇಲೆ ಅಲ್ಲಿಂದ ಹೊರಟುಹೋದರು. ಶ್ರೀಕೃಷ್ಣ ಮಾತ್ರ ಹಾಗೆಯೇ ಮರದ ಒರಳಿಗೆ ಕಟ್ಟಿಹಾಕಿದಂತೆಯೇ ಇದ್ದ.
ಈ ಎರಡು ಅರ್ಜುನ ಮರಗಳು ಸಿಡಿಲಿನ ಹಾಗೆ ದೊಡ್ಡ ಶಬ್ದ ಮಾಡಿಕೊಂಡು ಕೆಳಗುರುಳಿದಾಗ, ಗೋಕುಲದ ಎಲ್ಲ ಜನರೂ, ನಂದ ಮಹಾರಾಜನೂ ಕೂಡಲೇ ಆ ಜಾಗಕ್ಕೆ ಓಡಿಬಂದರು. ಅವರೆಲ್ಲರಿಗೂ, ಇವೆರಡು ದೊಡ್ಡ ಮರಗಳು ಇದ್ದಕ್ಕಿದ್ದ ಹಾಗೆಯೇ ಹೇಗೆ ಕೆಳಗುರುಳಿದವು ಎಂದು ನೋಡಿ ಆಶ್ಚರ್ಯವಾಗಿತ್ತು.

ದೊಡ್ಡವರೆಲ್ಲರೂ ಹೀಗೆ ಯೋಚನೆ ಮಾಡುತ್ತಿದ್ದಾಗ, ಅಲ್ಲಿ ಆಟ ಆಡುತ್ತಿದ್ದ ಪುಟ್ಟ ಮಕ್ಕಳು, ಈ ಮರದ ಒರಳು ಎರಡು ಮರಗಳ ಮಧ್ಯೆ ಸಿಕ್ಕಿಹಾಕಿಕೊಂಡದ್ದರಿಂದ ಮರಗಳು ಕೆಳಗುರುಳಿದವು ಎಂದು ಹೇಳಿದರು. ಮಕ್ಕಳ ಈ ಮಾತನ್ನು ಹಿರಿಯರು ನಂಬಲಿಲ್ಲ. ಹಿರಿಯ ಗೋಪಿಯರು ಪುಟ್ಟ ಕೃಷ್ಣನನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡರು.
ಅವನನ್ನು ಅಲ್ಲಿಂದ ಹೊರಗೆ ಮನೆಮುಂದಿನ ಅಂಗಳಕ್ಕೆ ಕರೆದುಕೊಂಡುಹೋಗಿ, ಅವನ ಚಟುವಟಿಕೆಗಳನ್ನೆಲ್ಲ ಹಾಡಿ ಹೊಗಳುತ್ತ ಚಪ್ಪಾಳೆ ತಟ್ಟತೊಡಗಿದರು. ಕೃಷ್ಣನೂ ಸಹ, ಒಂದು ಸಾಮಾನ್ಯ ಮಗುವಿನ ಹಾಗೆ ಕುಣಿಯುತ್ತ ಚಪ್ಪಾಳೆ ಹೊಡೆಯುತ್ತ ನಿಂತುಕೊಂಡ. ಆ ದೇವೋತ್ತಮ ಪರಮಪುರುಷ ಆ ಎಲ್ಲ ಗೋಪಿಯರ ಸಮ್ಮೋಹಕ್ಕೊಳಗಾಗಿ ಅವರೊಂದಿಗೆ ಹಾಡಿದ, ಕುಣಿದ – ಅವರ ಕೈಗೊಂಬೆಯ ಹಾಗೆ.






Leave a Reply