ಶ್ರೀಕೃಷ್ಣನ ಸೇವೆಯಲ್ಲಿ ಮುಕ್ತಿ

ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರಾದ
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಲಾಸ್‌ಏಂಜಲೀಸ್‌ನಲ್ಲಿ
1972ರ ನವೆಂಬರ್‌ನಲ್ಲಿ  ನೀಡಿದ ಉಪನ್ಯಾಸ.

ಅತೋ ವೈ ಕವಯೋ ನಿತ್ಯಂ ಭಕ್ತಿಂ ಪರಮಯಾ ಮುದಾ

ವಾಸುದೇವೇ ಭಗವತಿ ಕುರ್ವಂತ್ಯಾತ್ಮಪ್ರಸಾದನೀಮ್‌

ವಾಸ್ತವವಾಗಿ ಅನಾದಿಕಾಲದಿಂದಲೂ ಎಲ್ಲ ದಿವ್ಯವಾದಿಗಳು ಪರಮ ಪುರುಷ ಶ್ರೀಕೃಷ್ಣನಿಗೆ ಆನಂದಭರಿತರಾಗಿ ಭಕ್ತಿಸೇವೆಯನ್ನು ಸಲ್ಲಿಸುತ್ತಿದ್ದಾರೆ. ಏಕೆಂದರೆ ಅಂತಹ ಭಕ್ತಿಸೇವೆ ಆತ್ಮಕ್ಕೆ ಸಂತೋಷವನ್ನು ಕೊಡುತ್ತದೆ. (ಶ್ರೀಮದ್‌ ಭಾಗವತ: 1.2.22)

ಆತ್ಮ ಎಂದರೆ ಸ್ವಯಂ, ಮನಸ್ಸು ಅಥವಾ ದೇಹ. ನಾವು ಮೂರು ಹಂತಗಳಲ್ಲಿ ಬದುಕುತ್ತಿದ್ದೇವೆ: ದೇಹಾತ್ಮ ಬುದ್ಧಿ, ಮಾನಸಿಕ ಜೀವನ ಹಾಗೂ ಆಧ್ಯಾತ್ಮಿಕ ಸಿದ್ಧಾಂತದ ಬದುಕು. ಯಾರು ಮೌಢ್ಯದಿಂದ ಇರುವರೋ ಅವರು ದೇಹಾತ್ಮ ಬುದ್ಧಿಯಲ್ಲಿ ಚಿಂತಿಸುತ್ತಾರೆ. ಇನ್ನೂ ಸ್ವಲ್ಪ ಮುಂದುವರಿದವರು ಮಾನಸಿಕ ಉದ್ದೇಶದ ಬದುಕನ್ನು ಕುರಿತು ಯೋಚಿಸುತ್ತಾರೆ. ಇನ್ನೂ ಮುಂದುವರಿದ ಪ್ರಗತಿಶೀಲ ಜನರು ಆಧ್ಯಾತ್ಮಿಕ ಬದುಕಿನ ಬಗೆಗೆ ಚಿಂತಿಸುತ್ತಾರೆ.

ಈ ಹಿಂದಿನ ಶ್ಲೋಕದಲ್ಲಿ ಆಧ್ಯಾತ್ಮಿಕ ಉದ್ದೇಶದ ಬದುಕಿನ ಬಗೆಗೆ ವಿವರಿಸಲಾಗಿದೆ. ವದಂತಿ ತತ್‌ ತತ್ತ್ವ – ವಿದಸ್‌ ತತ್ತ್ವಂ. ತತ್ತ್ವಂ ಎಂದರೆ ಸತ್ಯ ಎಂದರ್ಥ. ತತ್ತ್ವ ಎಂದರೆ ಆತ್ಮ , ಭೌತಿಕ ವಸ್ತು ಅಲ್ಲ. ಭೌತವಸ್ತು ಸತ್ಯ ಎಂದಾದರೂ ಅದು ಆಧ್ಯಾತ್ಮಿಕ ಸತ್ಯಕ್ಕೆ ಅಧೀನ. ಆಧ್ಯಾತ್ಮಿಕತೆಯ ಆಧಾರದ ಮೇಲೆ ವಸ್ತು ವಿಷಯದ ಬೆಳವಣಿಗೆ ಉಂಟಾಗುತ್ತದೆ. ನಮ್ಮ ಆಧ್ಯಾತ್ಮಿಕ ಅಸ್ತಿತ್ವದ ಆಧಾರದ ಮೇಲೆ ಹೇಗೆ ದೇಹದ ಬೆಳವಣಿಗೆ ಕಂಡು ಬರುವುದೋ, ಹಾಗೆಯೇ.

ಹಾಗಾಗಿ ನಮ್ಮ ಬದುಕಿನ ಅಂತಿಮ ಗುರಿಯು ಆಧ್ಯಾತ್ಮಿಕ ಅರಿವೇ ಆಗಿದೆ. ಜೀವಸ್ಯ ತತ್ತ್ವಜಿಜ್ಞಾಸಾ ನಾರ್ಥೋ ಯಶ್ಚೇಹ ಕರ್ಮಭಿಃ. ಬದುಕಿನ ಪರಮ ಉದ್ದೇಶ ಸತ್ಯದ ಶೋಧನೆಯೇ ಆಗಿದೆ. ಆದರೆ ಮಾನವನಿಗಿಂತ ಕೀಳಾದ ಪ್ರಾಣಿ, ಪಕ್ಷಿ, ಇತ್ಯಾದಿಗಳಿಗೆ ಪರಮ ಸತ್ಯವನ್ನು ಕುರಿತು ಪ್ರಶ್ನಿಸುವ ಸವಲತ್ತು ಇಲ್ಲ. ಮಾನವರೂಪಕ್ಕೆ ಮಾತ್ರ ಈ ಪರಮಸತ್ಯದ ಶೋಧನೆ ಸಾಧ್ಯ.

ಪರಮಸತ್ಯದ ಬಗೆಗೆ ಕುತೂಹಲ ಉಳ್ಳವರು ಮೂರು ದಿವ್ಯ ವಿಷಯಗಳ ಬಗೆಗೆ ಅರಿವು ಹೊಂದುತ್ತಾರೆ – ಬ್ರಹ್ಮೇತಿ ಪರಮಾತ್ಮೇತಿ ಭಗವಾನ್‌ ಇತಿ ಶಬ್ದ್ಯತೇ – ಸರ್ವವ್ಯಾಪಕ ಬ್ರಹ್ಮನ್‌, ಪರಮಾತ್ಮ, ಹಾಗೂ ದೇವೋತ್ತಮ ಪರಮ ಪುರುಷ ಭಗವಾನ್‌. ಅಂತಿಮವಾಗಿ ಎಲ್ಲರೂ ಭಗವಾನ್‌ ವಾಸುದೇವನ ಹಂತಕ್ಕೆ ಹೋಗಲೇಬೇಕು. ವಾಸುದೇವ  ಸರ್ವಂ  ಇತಿ  ಸ  ಮಹಾತ್ಮ ಸು  ದುರ್ಲಭ. ವಾಸುದೇವನನ್ನು ಅರ್ಥಮಾಡಿಕೊಳ್ಳುವ ಹಂತ ತಲಪುವವರು ಪರಿಪಕ್ವ ಮಹಾತ್ಮರೆನ್ನಿಸಿಕೊಳ್ಳುವರು.

ಇತರ ಅನೇಕ ದಿವ್ಯವಾದಿಗಳಿರಬಹುದು, ಆದರೆ ದೇವೋತ್ತಮ ಪರಮ ಪುರುಷ ವಾಸುದೇವನನ್ನು ಅರ್ಥಮಾಡಿಕೊಳ್ಳುವ, ಗ್ರಹಿಸುವ ಹಂತ ತಲಪಿದವರನ್ನು ಮಹಾತ್ಮ ಎಂದು ಕರೆಯಬಹುದು. ಭಾರತದಲ್ಲಿ ಮಹಾತ್ಮ ಎನ್ನುವುದು ಅತಿ ಸಾಮಾನ್ಯ ಶಬ್ದ. ಯಾವುದೇ ಸಂತ ಪುರುಷರನ್ನು ಮಹಾತ್ಮ ಎಂದು ಕರೆಯಲಾಗುತ್ತದೆ. ಆದರೆ ವೇದಗಳ ವಿವರಣೆಯಂತೆ, ದೇವೋತ್ತಮ ಪರಮ ಪುರುಷ ವಾಸುದೇವನನ್ನು ಅರ್ಥಮಾಡಿಕೊಂಡವರು ಮಹಾತ್ಮರೆನ್ನಿಸಿಕೊಳ್ಳುವರು.

ಇನ್ನೊಂದು ಕಡೆ ಹೀಗೆ ಹೇಳಲಾಗಿದೆ: ಮಹತ್ಸೇವಾಂ ದ್ವಾರಂ ಆಹುರ್‌ ವಿಮುಕ್ತೇಃ ತಮೋದ್ವಾರಂ ಯೋಷಿತಾಂ ಸಂಗಿ-ಸಂಗಮ್‌. ಎರಡು ರೀತಿಯ ಬದುಕುಗಳು ಇವೆ. ಒಂದು ವಿಮೋಚನೆಯದ್ದು, ಮತ್ತೊಂದು ಬಂಧನದ ಜೀವನ. ಉದಾಹರಣೆಗೆ, ದಾರದ ರಾಟೆಯು ಒಂದು ಕಡೆ ತಿರುಗಿಸಿದರೆ ಅದು ದಾರವನ್ನು  ಎಳೆದುಕೊಳ್ಳುತ್ತದೆ. ಮತ್ತೊಂದು ಕಡೆ ತಿರುಗಿಸಿದರೆ ಅದು ದಾರವನ್ನು ಬಿಡುತ್ತದೆ. ಅದೇ ರೀತಿ, ನಾವು ವಿಮೋಚನೆ ಅಥವಾ ಬಂಧನ – ಯಾವ ದಿಕ್ಕಿನತ್ತಲೂ ಸಾಗಬಹುದಾಗಿದೆ.

ಬಂಧನ ಅಥವಾ ವಿಮೋಚನೆ ಕುರಿತಂತೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಚಕಾರವಿಲ್ಲ. ದೇವರು, ಸ್ವಯಂ ಹಾಗೂ ಭಗವಾನ್‌ ವಿಷ್ಣುವಿನ ಜೊತೆಗಿನ ಅವರ ಬಾಂಧವ್ಯ ಕುರಿತಂತೆ ವಿದ್ಯಾರ್ಥಿಗಳು ಗ್ರಹಿಸಿಕೊಳ್ಳುವಂಥದ್ದು ಏನೂ ಶಿಕ್ಷಣ ಪದ್ಧತಿಯಲ್ಲಿ ಇಲ್ಲ. ಆಧುನಿಕ ಶೈಕ್ಷಣಿಕ ತಜ್ಞರಿಗೆ ಇವೆಲ್ಲ ಅಪರಿಚಿತ.

ಆದುದರಿಂದ ವೇದ ಸಾಹಿತ್ಯವು ಅಂಧಾ ಯಥಾಂಧೈ ಉಪನೀಯ ಮಾನಾಸ್‌ ತೇಪೀಶತಂತ್ರ್ಯಾಮ್‌ ಉರುದಾಮ್ನಿ ಬದ್ಧಾಃ. ಉರು ಎಂದರೆ `ಬಹಳ ಪ್ರಬಲ’. ದಾಮ್ನಿ ಎಂದರೆ `ಹಗ್ಗ’ ಎಂದರ್ಥ. ನಿಮ್ಮ ಕೈಕಾಲುಗಳನ್ನು ಬಲವಾಗಿ ಕಟ್ಟಿಹಾಕಿದರೆ, ಹೆಜ್ಜೆ ಇಡುವುದು ನಿಮಗೆ ತುಂಬ ಕಷ್ಟ. ಅದೇ ರೀತಿ, ಪ್ರಕೃತಿ ನಿಯಮದಂತೆ ಪ್ರತಿಯೊಂದು ಜೀವಿಯೂ ಪ್ರಬಲವಾಗಿ ಬದ್ಧವಾಗಿರುತ್ತದೆ – ಈಶ ತಂತ್ರ್ಯಾಮ್‌. ಪರಮದೈವದ ನಿಯಮದಂತೆ ನಾವು ಕಟ್ಟಿಹಾಕಲ್ಪಟ್ಟಿದ್ದೇವೆ. ನಾವು ತಿರುವು ಪಡೆವುದು ಸಾಧ್ಯವಿಲ್ಲ.

ನಾವು ಪ್ರಕೃತಿ ನಿಯಮವನ್ನು ಉಲ್ಲಂಘಿಸಲಾಗದು. ಪ್ರತಿಯೊಬ್ಬರೂ ಇದನ್ನು ಅನುಭವಿಸಬಹುದು. ಈ ನಿಯಮದ ಸ್ವಲ್ಪ ಉಲ್ಲಂಘನೆ, ಸ್ವಲ್ಪ ಭಿನ್ನ ಮಾರ್ಗದಿಂದ ನಾವೇ ಸಂಕಷ್ಟ ಅನುಭವಿಸುವವರು. ಅದು ನಮ್ಮ ದಿನನಿತ್ಯದ ಅನುಭವ. ಉದಾಹರಣೆಗೆ, ನೀವು ಜೀರ್ಣಿಸಿಕೊಳ್ಳುವಷ್ಟು ಮಾತ್ರ ಆಹಾರ ಸೇವಿಸಿ ಎಂದು ಪ್ರಕೃತಿ ನಿಯಮ ಹೇಳುತ್ತದೆ. ನೀವು ಅಧಿಕವಾಗಿ ಸೇವಿಸಿದರೆ, ನಿಯಮದಂತೆ ನೀವು ಅಜೀರ್ಣದಿಂದ ನರಳುತ್ತೀರಿ. ನೋವು ಅನುಭವಿಸದೆ ನೀವು ನಿಯಮ ಉಲ್ಲಂಘಿಸುವುದು ಸಾಧ್ಯವಿಲ್ಲ. ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ ಯಾರೂ ಪ್ರಕೃತಿ ನಿಯಮ ಉಲ್ಲಂಘಿಸುವಂತಿಲ್ಲ.

ಪ್ರಕೃತಿ ನಿಯಮದಿಂದ ಹೇಗೆ ಹೊರಬರುವುದೆಂಬ ಬಗೆಗೆ ನಾವು ಈ ಮೊದಲೇ ಚರ್ಚಿಸಿದ್ದೇವೆ: ಮುಕ್ತಸಂಗಸ್ಯ ಜಾಯತೇ. ಮುಕ್ತ ಸಂಗ ಎಂದರೆ ಪ್ರಕೃತಿಯ ಮೂರು ಗುಣಗಳಿಂದ ಮುಕ್ತಿಹೊಂದಿದವರು ಎಂದೇ ಅರ್ಥ. ಈ ಮೂರರಿಂದ ಮುಕ್ತರಾದ ಮೇಲೆ ವಾಸುದೇವಭಕ್ತಿ ಕುರಿತಂತೆ ಮಾತನಾಡಬಹುದು.

ಮತ್ತೊಂದು ದೃಷ್ಟಿಕೋನದಂತೆ ವಾಸುದೇವನಿಗೆ ಭಕ್ತಿರಸಧಾರೆ ಮೂಲಕ ಯಾರು ಬೇಕಾದರೂ ಲೌಕಿಕದಿಂದ ಮುಕ್ತಿ ಹೊಂದಬಹುದು. ಇದನ್ನು ಶ್ರೀಮದ್‌ಭಾಗವತದಲ್ಲಿ ಒತ್ತಿಹೇಳಲಾಗಿದೆ. ವಾಸುದೇವೇ ಭಗವತಿ ಭಕ್ತಿಯೋಗಃ ಪ್ರಯೋಜಿತಃ । ಜನಯತ್ಯಾಶು ವೈರಾಗ್ಯಂ ಜ್ಞಾನಂ ಚ ಯದಹೈತುಕಮ್‌ : ಒಬ್ಬನು ಸುಮ್ಮನೆ ವಾಸುದೇವ, ಕೃಷ್ಣನಿಗೆ ಹೇಗೆ ಭಕ್ತಿಸೇವೆ ಸಲ್ಲಿಸುವುದು ಎಂದು ಕಲಿತರೆ ಅವನು ಬಹು ಬೇಗ ಭೌತಿಕ ಬಂಧನದಿಂದ ಮುಕ್ತಿಹೊಂದುವನು. ಅವನು ಜ್ಞಾನ, ನಿಜವಾದ ಜ್ಞಾನವನ್ನು ಪಡೆಯುವನು. ಲೌಕಿಕ ಜ್ಞಾನವು ಬಂಧನಕ್ಕೆ ಕಾರಣವಾಗಿದೆ. ಭಕ್ತಿವಿನೋದ ಠಾಕುರರ ಪ್ರಕಾರ ಲೌಕಿಕ ಜ್ಞಾನದ ಪ್ರಗತಿ ಎಂದರೆ ಹೆಚ್ಚು ಬಂಧನದ ಬದುಕು; ಆಧ್ಯಾತ್ಮಿಕ ಜ್ಞಾನದ ಪ್ರಗತಿ ಎಂದರೆ ಹೆಚ್ಚು ಮುಕ್ತಿ. ಹಾಗಾಗಿ ಲೌಕಿಕ ಬಂಧನದಿಂದ ನಮ್ಮನ್ನು ನಾವು ಹೇಗೆ ಮುಕ್ತಗೊಳಿಸುವುದೆಂಬುದೇ ನಮ್ಮ ಸಮಸ್ಯೆ.

ನಾವು ಕಟ್ಟಿ ಹಾಕಲ್ಪಟ್ಟಿದ್ದೇವೆ. ನಾನು ಆಧ್ಯಾತ್ಮಿಕ ಆತ್ಮ , ನೀವೂ ಆಧ್ಯಾತ್ಮಿಕ ಆತ್ಮ. ಆದರೆ ನಾವು ಲೌಕಿಕ ಬಂಧನದಲ್ಲಿ ಸಿಲುಕಿದ್ದೇವೆ. ಈ ಬಂಧನದಲ್ಲಿರುವುದರಿಂದ ನಮಗೆ ಸ್ವಾತಂತ್ರ್ಯವಿಲ್ಲ. ಜನರು ಇದನ್ನು ಅರ್ಥಮಾಡಿಕೊಳ್ಳುವುದಿಲ್ಲ.

ಆಧ್ಯಾತ್ಮಿಕ ಆತ್ಮವನ್ನು ಸರ್ವ-ಗ ಎಂದು ವಿವರಿಸಲಾಗಿದೆ. ಸರ್ವ-ಗ ಎಂದರೆ ಈ ಆಧ್ಯಾತ್ಮಿಕ ಆತ್ಮವು ಎಲ್ಲಿ ಬೇಕಾದರೂ ಸಂಚರಿಸಬಹುದು. ಆದರೆ ಈ ಲೌಕಿಕ ಬಂಧನದಿಂದ ನಾವು ಲೌಕಿಕ ದೇಹಿಗಳಾಗಿರುವುದರಿಂದ ನಮ್ಮನ್ನು ತಡೆಯಲಾಗುತ್ತಿದೆ. ಬೇರೆ ಗ್ರಹಗಳಿಗೂ ನಮಗೆ ಹೋಗಲಾಗದು.

ಆದರೂ, ಯೋಗಿಗಳು, ಯೋಗ ವಿಧಾನಗಳಿಂದ ಲೌಕಿಕ ಬದುಕಿನಿಂದ ಒಂದಷ್ಟು ಮುಕ್ತಿ ಪಡೆದುಕೊಳ್ಳುತ್ತಾರೆ. ಹಾಗಾಗಿ, ತ್ವರಿತವಾಗಿ ಅವರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವುದು ಸಾಧ್ಯ. ಲೌಕಿಕ ಜಗತ್ತಿನಲ್ಲಿರುವ ಯೋಗಿಗಳಿಗೂ ಇದು ಸಾಧ್ಯ. ಅವರು ಈ ಗ್ರಹದಲ್ಲಿ ತ್ವರಿತವಾಗಿ ಸಂಚರಿಸುತ್ತಾರೆ. ಭಾರತದಲ್ಲಿ ಈಗಲೂ ಕೆಲ ಯೋಗಿಗಳಿದ್ದಾರೆ. ಅವರು ಪ್ರತಿದಿನ ಮುಂಜಾನೆ ನಾಲ್ಕು ಪವಿತ್ರ ಸ್ಥಳಗಳಲ್ಲಿ ಸ್ನಾನ ಮಾಡುತ್ತಾರೆ. ಜಗನ್ನಾಥಪುರಿ, ರಾಮೇಶ್ವರಂ, ಹರಿದ್ವಾರ ಮತ್ತು ದ್ವಾರಕೆಯಲ್ಲಿ ಅವರು ಮೀಯುತ್ತಾರೆ. ಒಂದು ಕಡೆಯಿಂದ ಮತ್ತೊಂದೆಡೆಗೆ ಎಷ್ಟು ವೇಗವಾಗಿ ಹೋಗುವುದು ಸಾಧ್ಯ ಎಂಬುದನ್ನು ಅವರು ವಿವರಿಸುತ್ತಾರೆ. ನಾವು ಕೆಲ ಯೋಗಿಗಳನ್ನು ಭೇಟಿ ಮಾಡಿದ್ದೆವು.

ಅವರು ಹಾಗೆ ಮಾಡುವುದು ಹೇಗೆ ಸಾಧ್ಯ ಎಂಬುದನ್ನು ನಾವು ನಮ್ಮದೇ ಅನುಭವದಿಂದ ಅರ್ಥಮಾಡಿಕೊಳ್ಳಬಲ್ಲೆವು. ಸುಮ್ಮನೆ ಮನಸ್ಸನ್ನು ಪರಿಗಣಿಸಿ. ಮನಸ್ಸು ಎಷ್ಟು ವೇಗವಾಗಿ ಸಂಚರಿಸುತ್ತದೆ ಎಂದರೆ ಕೆಲವೇ ಸೆಕೆಂಡ್‌ಗಳಲ್ಲಿ ಅದು ಸಾವಿರಾರು ಮೈಲಿ ಸಂಚರಿಸುತ್ತದೆ. ಆಧ್ಯಾತ್ಮಿಕ ಆತ್ಮ ಇನ್ನೂ ಹೆಚ್ಚು ವೇಗವಾಗಿ ಸಂಚರಿಸಬಲ್ಲದು. ಹಾಗಾಗಿ ಅದರ ವೇಗ ಉತ್ಕೃಷ್ಟದ್ದು. ಭಗವದ್ಗೀತೆಯಲ್ಲಿ ಕೃಷ್ಣ ಹೇಳುತ್ತಾನೆ: ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ ಮಾಮೇತಿ ಸೋಽರ್ಜುನ ಈ ದೇಹ ಪರಿತ್ಯಾಗ ಮಾಡಿದ ಮೇಲೆ ನನ್ನ ಬಳಿಗೆ, ಅಧ್ಯಾತ್ಮ ಜಗತ್ತಿಗೆ ಬರಬಹುದು. ಇವು ವೇದವಾಕ್ಯಗಳು. ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ – ಇದನ್ನು ನೀವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸಾವಿನ ಅನಂತರ ಮತ್ತೊಂದು ದೇಹವನ್ನು ನಾವು ಸ್ವೀಕರಿಸುತ್ತೇವೆ. ನಡೆಯುವಾಗ ಮೊದಲ ಹೆಜ್ಜೆ ದೃಢವಾಗಿದ್ದರೆ ನೀವು ಮತ್ತೊಂದು ಹೆಜ್ಜೆ ಇಡುತ್ತೀರಿ. ಅದೇ ರೀತಿ ಪರಮಾತ್ಮನ ವ್ಯವಸ್ಥೆಯಿಂದ ಮತ್ತೊಂದು ದೇಹ ಸಿದ್ಧವಾದ ತತ್‌ಕ್ಷಣ ನಾವು ಪ್ರಸ್ತುತ ದೇಹ ತ್ಯಜಿಸಿ ಅದನ್ನು ಪ್ರವೇಶ ಮಾಡುತ್ತೇವೆ. ಇದು ನಿಯಮ.

ಹಾಗಾಗಿ ಕೃಷ್ಣ ಹೇಳುತ್ತಾನೆ: ತ್ಯಕ್ತ್ವಾ ದೇಹಂ ಪುನರ್ಜನ್ಮ ನೈತಿ. ಒಂದು ಜೀವವು ಮತ್ತೊಂದು ದೇಹ ಪ್ರವೇಶಿಸದಿದ್ದರೆ, ಅವನೆಲ್ಲಿಗೆ ಹೋಗುತ್ತಾನೆ? `ಅವನು ನನ್ನ ಬಳಿಗೆ ಬರುತ್ತಾನೆ’ ಎನ್ನುತ್ತಾನೆ ಕೃಷ್ಣ. ಈಗ ಆತ್ಮದ ವೇಗವನ್ನು ಕಲ್ಪಿಸಿಕೊಳ್ಳಿ. ಸಾವಿನ ಅನಂತರ ದೇಹದಾಚೆ ಇರುವ ಅವನು ತತ್‌ಕ್ಷಣ ಗೋಲೋಕ ವೃಂದಾವನಕ್ಕೆ ಅಥವಾ ಕೃಷ್ಣ ಎಲ್ಲಿರುತ್ತಾನೋ ಅಲ್ಲಿಗೆ ತೆರಳುತ್ತಾನೆ. ಕೃಷ್ಣನ ನಿತ್ಯಲೀಲೆಗೆ ಸೇರಲು ಸಾಗುತ್ತಾನೆ.

ಕೃಷ್ಣನ ನಿತ್ಯಲೀಲೆ ಕುರಿತಂತೆ ಚೈತನ್ಯ ಚರಿತಾಮೃತದಲ್ಲಿ ವಿವರಿಸಲಾಗಿದೆ. ತನ್ನ ಭೌಮಲೀಲೆಗಾಗಿ ಕೃಷ್ಣ ಒಂದಲ್ಲ ಒಂದು ವಿಶ್ವದಲ್ಲಿ ಉಪಸ್ಥಿತನಾಗಿರುತ್ತಾನೆ. ಇದು ಲೌಕಿಕ ಜಗತ್ತಿನಲ್ಲಿ ಅವನ ನಿತ್ಯಲೀಲೆ. ಶ್ರೀ ಚೈತನ್ಯರು ಸೂರ್ಯನ ಚಲನೆಯ ವಿವರ ನೀಡಿದ್ದಾರೆ. ಸೂರ್ಯನ ಚಲನೆಯಿಂದ ನಾವು ದಿನವನ್ನು 24 ತಾಸಿಗೆ, 60 ನಿಮಿಷಗಳಿಗೆ, 60 ಸೆಕೆಂಡ್‌ಗಳಿಗೆ ವಿಭಾಗಿಸಿದ್ದೇವೆ. ಆದರೂ ದಿನದ ಪ್ರತಿ ವೇಳೆಯೂ ಅಸ್ತಿತ್ವದಲ್ಲಿರುತ್ತದೆ. ಉದಾಹರಣೆಗೆ, ಇಂದು ನಮ್ಮ ಸೂರ್ಯೋದಯ 6.30ಕ್ಕೆ. ಇಲ್ಲಿ ಈ 6.30 ಸಾಗಿಬಿಟ್ಟಿತು. ಆದರೆ ಇನ್ನೆಲ್ಲೋ ಈಗ 6.30. ಅದು ಸಾಗಿದ ಮೇಲೆ ಮತ್ತೆಲ್ಲೋ 6.30 ಆಗಿರುತ್ತದೆ. ಅದೇ ರೀತಿ, ಕೃಷ್ಣ ಒಂದು ಜಗತ್ತಿನಿಂದ ಮತ್ತೊಂದು ಜಗತ್ತಿಗೆ ಸಂಚರಿಸುತ್ತಲೇ ಇರುತ್ತಾನೆ. ನಮ್ಮ ವಿಶ್ವಕ್ಕೆ ಬಂದಾಗ, ನಮಗೆ ಅವನ ದರ್ಶನ ಲಾಭ.

ಶ್ರೀಲ ಸನಾತನ ಗೋಸ್ವಾಮಿ ಹೇಳುತ್ತಾರೆ, ಕೃಷ್ಣನ ಜೊತೆಗೂಡುವ ಸಾಮರ್ಥ್ಯವುಳ್ಳ ಆತ್ಮವು ಈ ಜಗತ್ತಿನೊಳಗೇ ಎಲ್ಲಿ  ಕೃಷ್ಣ  ಭೌಮಲೀಲೆಯಲ್ಲಿ ನಿರತನಾಗಿರುವನೋ ಅಲ್ಲಿಗೇ ತೆರಳುತ್ತದೆ ಎಂದು. ಹೇಗೆ ವ್ಯಕ್ತಿಯೊಬ್ಬನಿಗೆ ಅಪ್ರೆಂಟಿಸ್‌ನಂತೆ ತರಬೇತಿ ನೀಡಿದ ಮೇಲೆ ಅವನಿಗೆ ಆ ಹುದ್ದೆ ನೀಡಲಾಗುತ್ತೋ ಹಾಗೆಯೇ ಕೃಷ್ಣಪ್ರಜ್ಞೆಗೆ ಅರ್ಹನಾದ ಜೀವಿಯು, ತನ್ನ ದೇಹವನ್ನು ತ್ಯಜಿಸಿದ ಕೂಡಲೇ ಕೃಷ್ಣನಿರುವ ಜಗತ್ತಿಗೆ ವರ್ಗಾಯಿಸಲ್ಪಡುತ್ತಾನೆ. ಅಲ್ಲಿ ಪರಿಪೂರ್ಣವಾದ ತರಬೇತಿಯ ಅನಂತರ ಮೂಲ ಕೃಷ್ಣಲೋಕವಾದ ಗೋಲೋಕ ವೃಂದಾವನಕ್ಕೆ ಅವನನ್ನು ಕಳುಹಿಸಲಾಗುತ್ತದೆ.

ಆತ್ಮ ಎಷ್ಟು  ತ್ವರಿತವಾಗಿ ಸಂಚರಿಸುತ್ತದೆ – ಒಂದು ಕ್ಷಣದಲ್ಲಿ ಅದು ಕೃಷ್ಣನಲ್ಲಿಗೆ ಅಥವಾ ಯಾವುದಾದರೂ ಒಂದು ವಿಶ್ವಕ್ಕೆ ಓಡುತ್ತದೆ! ಲಕ್ಷಾಂತರ, ಕೋಟ್ಯಂತರ ವಿಶ್ವಗಳಿವೆ. ನಮಗೆ ನಮ್ಮ ವಿಶ್ವದ ಮಾಹಿತಿ ಮಾತ್ರ ತಿಳಿದುಬರುತ್ತದೆ. ಆದರೆ ವೇದ ಸಾಹಿತ್ಯದಿಂದ ಕೋಟ್ಯಂತರ ವಿಶ್ವಗಳ ಮಾಹಿತಿ ಲಭ್ಯವಾಗುತ್ತದೆ. ನಾವು ಒಂದು ವಿಶ್ವವನ್ನು ನೋಡಬಹುದು. ಆದರೆ ನಮಗೆ ಬ್ರಹ್ಮಸಂಹಿತೆಯಿಂದ ಮಾಹಿತಿ ಸಿಗುತ್ತದೆ: ಯಸ್ಯ ಪ್ರಭಾ ಪ್ರಭವತೋ ಜಗದಂಡ ಕೋಟಿ. ಜಗದಂಡ ಎಂದರೆ ಒಂದು ವಿಶ್ವ. ಕೋಟಿ ಎಂದರೆ ಕೋಟ್ಯಂತರ. ಅಪರಿಮಿತ ವಿಶ್ವಗಳಿವೆ ಎಂದು ಅರ್ಥ. ಪ್ರತಿಯೊಂದು ವಿಶ್ವದಲ್ಲಿಯೂ ಕೋಟ್ಯಂತರ ಗ್ರಹಗಳಿವೆ. ಒಂದಕ್ಕೊಂದು ಭಿನ್ನ. ಇದು ಸೃಷ್ಟಿ.

ಭಗವಂತನ ಸೃಷ್ಟಿ ವ್ಯಾಪ್ತಿಯನ್ನು ಈಗ ಕಲ್ಪಿಸಿಕೊಳ್ಳಿ. ಅವನು ಹೇಗೆ ನಿರಂತರವಾಗಿ ಪ್ರತಿ ವಿಶ್ವವನ್ನು ಪ್ರವೇಶಿಸುತ್ತಾನೆ, ಹೇಗೆ ಅವನ ಲೀಲೆ ಸಾಗುತ್ತಲೇ ಇದೆ ಎಂಬುದನ್ನು ಕಣ್ಣಮುಂದೆ ಕಟ್ಟಿಕೊಳ್ಳಿ. ಒಂದು ವಿಶ್ವದಲ್ಲಿ ಕೃಷ್ಣನ ಜನ್ಮ ಪೂರ್ಣಗೊಂಡ ಮೇಲೆ ತತ್‌ಕ್ಷಣವೇ ಮತ್ತೊಂದು ಜಗತ್ತಿನಲ್ಲಿ ಅವನ ಅವತಾರವಾಗುತ್ತದೆ. ಇದನ್ನೇ ನಿತ್ಯಲೀಲ ಎನ್ನುವುದು. ಹೀಗಾಗಿ ಆತ್ಮಕ್ಕೆ ಅಪರಿಮಿತ ಶಕ್ತಿ ಇದೆ ಹಾಗೂ ಆತ್ಮವು ಕೃಷ್ಣನ ಒಂದು ತುಣುಕು ಅಷ್ಟೆ . ಈಗ ನೀವು ಕೃಷ್ಣನ ಅಗಾಧ ಶಕ್ತಿಯನ್ನು ಕಲ್ಪಿಸಿಕೊಳ್ಳಬಹುದು. ಜೀವಿಗಳಿಗೇ ಎಷ್ಟೊಂದು ಸಾಮರ್ಥ್ಯವಿದೆ. ಹಾಗಾದರೆ, ಕೃಷ್ಣನ ಸಾಮರ್ಥ್ಯವೇನು? ಸಂಪೂರ್ಣ ಆಧ್ಯಾತ್ಮಿಕ ಸಾಮರ್ಥ್ಯವಿರುವ ಕೃಷ್ಣನ ಶಕ್ತಿ ಏನು?

ವಾಸ್ತವವಾಗಿ ನಮಗೆ ಕೃಷ್ಣನ ಅಂಶವಾಗಿ ಸಂತೋಷದಿಂದ ಇರಬೇಕೆಂದರೆ, ನಾವು ಅವನ ಜೊತೆಗೂಡಬೇಕು. ಅದೇ ನಮ್ಮ ಮೌಲ್ಯ. ಈ ಉದಾಹರಣೆಯನ್ನು ನಾನು ಅನೇಕ ಬಾರಿ ನೀಡಿದ್ದೇನೆ. ಯಂತ್ರಕ್ಕೆ ಅಳವಡಿಸಿದಾಗ ಸಣ್ಣ ಸ್ಕ್ರೂಗೆ ಇನ್ನಿಲ್ಲದೆ ಬೆಲೆ ಇರುತ್ತದೆ. ಯಂತ್ರದಿಂದ ಹೊರ ತೆಗೆದರೆ ಅದಕ್ಕೆ ಬೆಲೆಯೇ ಇಲ್ಲ. ಅದೇ ರೀತಿ ನಾವು ಕೃಷ್ಣ , ವಾಸುದೇವನ ವಿಭಿನ್ನಾಂಶ. ಕೃಷ್ಣನ ಜೊತೆಗೂಡಿದಾಗ ನಮ್ಮ ಬೆಲೆ ಅಧಿಕ. ಕೃಷ್ಣಪ್ರಜ್ಞೆಯಲ್ಲಿ ನಮ್ಮೆಲ್ಲ ಚಟುವಟಿಕೆಯನ್ನು ಅಳವಡಿಸಿದರೆ ನಮ್ಮ ಮೌಲ್ಯ ಪರಿಪೂರ್ಣ. ನಾವು ಬೆಲೆಬಾಳುವವರಾಗುತ್ತೇವೆ. ಇಲ್ಲವಾದರೆ, ಪ್ರಗತಿ ಎನ್ನುವುದು ಬರೀ ಕಲ್ಪನೆ /ಮಿಥ್ಯೆಯಾಗುತ್ತದೆ.

ನಮಗೆ ನಿಜವಾಗಿಯೂ ಸಂತೋಷ, ನೆಮ್ಮದಿ ಬೇಕಾದರೆ ನಾವು ಕೃಷ್ಣನ ಜೊತೆಗೂಡಬೇಕು. ನಮಗೆ ಕೃಷ್ಣಬೇಕು. ಅದು ಕೃಷ್ಣನ ಆಸಕ್ತಿಗಲ್ಲ, ನಮ್ಮ ಆಸಕ್ತಿಗಾಗಿ. ನಿಮ್ಮಂಥ ಸಹಸ್ರಾರು ಜೀವಿಗಳನ್ನು ಕೃಷ್ಣ ಸೃಷ್ಟಿಸಬಲ್ಲ. ಅವನಿಗೆ ನಿಮ್ಮ ಸೇವೆಯ ಅಗತ್ಯವಿಲ್ಲ. ಅವನು ಪರಿಪೂರ್ಣ. ನಿಮ್ಮ ತೃಪ್ತಿಗಾಗಿ ನೀವು ಕೃಷ್ಣನಿಗೆ ಪ್ರೇಮ ಭಕ್ತಿಸೇವೆ ಸಲ್ಲಿಸಬೇಕು. ಅದು ಬುದ್ಧಿವಂತಿಕೆ. ಇಲ್ಲವಾದರೆ, ಮೂರ್ಖತನ, ಮೌಢ್ಯ, ಕಲ್ಪನೆ.

ಧನ್ಯವಾದಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi