ಐದು ಸಾವಿರ ವರ್ಷಗಳ ಹಿಂದೆ ಧೃತರಾಷ್ಟ್ರ ಎಂಬ ಅಂಧ ರಾಜನು ತನ್ನ ಉನ್ನತ ಸ್ಥಾನಕ್ಕೆ ಅಗೌರವ ತೋರಿದ ಮತ್ತು ಲಕ್ಷಾಂತರ ಜನರ ಸಾವಿಗೆ ಕಾರಣನಾದ. ಜೀವಿತಾವಧಿಯ ಅಪರಾಧಗಳಿಗೆ ಅವನು ಪರಿಹಾರ ಕಂಡುಕೊಂಡ ಮತ್ತು ವೃದ್ಧಾಪ್ಯದಲ್ಲಿ ಆತ್ಮ ಸಾಕ್ಷಾತ್ಕಾರ ಹೊಂದಿದ ಕಾರಣ ಅವನ ಕಥೆಯು ಇಂದಿಗೂ ವಿಶೇಷ ಪ್ರಾಮುಖ್ಯವನ್ನು ಪಡೆದಿದೆ.
ಧೃತರಾಷ್ಟ್ರನು ಭಾರತದ ರಾಜಧಾನಿ ಹಸ್ತಿನಾಪುರದ ಹಂಗಾಮಿ ರಾಜನಾಗಿದ್ದ. ಅದು ಐದು ಸಾವಿರ ವರ್ಷಗಳ ಹಿಂದೆ ಇಡೀ ಜಗತ್ತಿನಲ್ಲಿ ಹರಡಿತ್ತು. ಹಸ್ತಿನಾಪುರವು ಈಗಿನ ದೆಹಲಿ ಪ್ರದೇಶವಿರುವ, ಯಮುನಾ ನದಿಯ ದಡದಲ್ಲಿ ಇತ್ತು. ಅದರ ಹೆಸರೇ ಸೂಚಿಸುವಂತೆ ಅದು ಅಲಂಕರಿಸಿದ ಆನೆ (ಹಸ್ತಿ ಎಂದರೆ ಆನೆ) ಗಳಿಂದ ತುಂಬಿದ ನಗರವಾಗಿತ್ತು. ಸಾಮಂತರು ವಿಶಾಲವಾದ ರಥಗಳಲ್ಲಿ ಹೊಳೆಯುವ ಆಭರಣಗಳನ್ನು ಮೆಟ್ಟಿದ್ದ ಅಮೃತಶಿಲೆಯ ಅರಮನೆಗಳ ಮುಂದೆ ಹಾದುಹೋಗುತ್ತಿದ್ದರು. ಸುವಾಸನೆಯ ಧೂಪವು ಜಾಲರಿ ಕಿಟಕಿಯಿಂದ ಹೊರಗೆ ಸಾಗುತ್ತಿತ್ತು. ಫಲಭರಿತ ಮತ್ತು ಪುಷ್ಪಗಳಿದ್ದ ಮರಗಳು ಸುವಾಸಿತ ಜಲವನ್ನು ಸಿಂಪಡಿಸಿದ್ದ ವಿಶಾಲವಾದ ರಸ್ತೆ ಬದಿಗಳಲ್ಲಿ ಕಂಗೊಳಿಸುತ್ತಿದ್ದವು. ಎಲ್ಲಿಯೂ ಬಡತನ ಅಥವಾ ಸಂಕಷ್ಟದ ಸೂಚನೆಯೂ ಇರಲಿಲ್ಲ. ಹಸ್ತಿನಾಪುರವು ಸಮೃದ್ಧ ವೈದಿಕ ನಾಗರಿಕತೆಯ ಮಕುಟಮಣಿಯಾಗಿತ್ತು.
ವಿರೋಧಾಭಾಸ
ಆರಂಭದಿಂದಲೂ ರಾಜನಾಗಿ ಧೃತರಾಷ್ಟ್ರನ ಸ್ಥಾನವು ನಿಯಮಬದ್ಧವಾಗಿರಲಿಲ್ಲ. ಅವನು ಅಂಧನಾಗಿದ್ದ ಮತ್ತು ಅಂಧ ವ್ಯಕ್ತಿಯು ರಾಜನಾಗುವಂತಿಲ್ಲ ಎಂದು ವೈದಿಕ ಕಾನೂನುಗಳು ಸಾರಿವೆ. ಹೀಗಾಗಿ ಸಿಂಹಾಸನವು ಅವನ ಸೋದರ ಪಾಂಡುವಿನ ಪಾಲಾಯಿತು. ಆದರೆ ಪಾಂಡುವು ಯುವಕನಾಗಿದ್ದಾಗಲೇ ಇಹಲೋಕ ತ್ಯಜಿಸಿದ್ದರಿಂದ ಆಗ ಇನ್ನೂ ಚಿಕ್ಕವರಾಗಿದ್ದ ಪಾಂಡುವಿನ ಐವರು ಮಕ್ಕಳ ಪರವಾಗಿ ಧೃತರಾಷ್ಟ್ರನು ರಾಜ್ಯವನ್ನು ಆಳತೊಡಗಿದನು. ಶ್ರೇಷ್ಠ ಮತ್ತು ಕೀರ್ತಿವಂತ ರಾಜರ ಕಾಲದಲ್ಲಿ ಧೃತರಾಷ್ಟ್ರನು ಅಪವಾದವಾಗಿದ್ದನು. ತನ್ನ ಹಿರಿಯ ಪುತ್ರ ನಿರ್ದಯಿ ದುರ್ಯೋಧನನ ಅಧಿಕಾರದ ಅಪೇಕ್ಷೆಯಿಂದ ಪ್ರಭಾವಿತನಾದ ಧೃತರಾಷ್ಟ್ರನು ಪಾಂಡು ಪುತ್ರರನ್ನು ನಾಶಪಡಿಸಲು ದುರ್ಯೋಧನನ ಯೋಜಿತ ಮತ್ತು ಉದ್ದೇಶಿತ ಪ್ರಯತ್ನಗಳಿಗೆ ಮೊದಲೇ ಅಂಧವಾಗಿದ್ದ ತನ್ನ ಕಣ್ಣುಗಳನ್ನು ಮುಚ್ಚಿ ಪಾಂಡವರಿಗೆ ಅನ್ಯಾಯ ಮಾಡಲಾರಂಭಿಸಿದನು.

ಶ್ರೇಷ್ಠ ಮನೆತನದ ವಂಶಸ್ಥನಾಗಿ ಧೃತರಾಷ್ಟ್ರನಿಗೆ ಸೂಕ್ತವಾದ ರಾಜ ಪರಂಪರೆ ಮತ್ತು ಹಿನ್ನೆಲೆ ಇತ್ತು. ಆದರೆ ಅವನು ದೈಹಿಕವಾಗಿ ಇದ್ದಷ್ಟೇ ಆಧ್ಯಾತ್ಮಿಕವಾಗಿಯು ಅಂಧನಾಗಿರುವಂತೆ ಕಾಣುತ್ತದೆ. ತಂದೆ ಇಲ್ಲದ ಐವರು ರಾಜಕುಮಾರರನ್ನು ಅವನು ಮೆಚ್ಚಿಕೊಂಡು ಪ್ರೀತಿಸಿದರೂ ಅವನು ಅವರ ಸಾಮ್ರಾಜ್ಯವನ್ನು ಮಾತ್ರವಲ್ಲ ಅವರ ಜೀವವನ್ನೇ ಕಿತ್ತುಕೊಳ್ಳಲು ಯೋಚಿಸಿದನು.
ಆದರೂ ಧೃತರಾಷ್ಟ್ರನು ಕೇವಲ ರಕ್ಷಣಾರಹಿತ ಯುವಕರ ಮೇಲೆ ಶಿಕಾರಿ ಮಾಡುವ ನಿರ್ದಯಿ ದೈತ್ಯನಾಗಿರಲಿಲ್ಲ. ಅವನ ಸ್ವಭಾವದಲ್ಲಿ ವಿರೋಧಾಭಾಸಗಳಿದ್ದವು. ಒಂದು ಕಡೆ ಅವನು ತನ್ನ ಸಂತ ಸೋದರ ವಿದುರನ ಹಿತವಚನಗಳನ್ನು ಮೆಚ್ಚುತ್ತಿದ್ದ. ಮತ್ತೊಂದು ಕಡೆ ಮಗನು ಅಗೌರವಾನ್ವಿತನೆಂದು ಗೊತ್ತಿದ್ದರೂ ಅಂತಹ ಮಗನ ಬಗೆಗಿನ ವಾತ್ಸಲ್ಯದಲ್ಲಿ ತೂಗಾಡುವಷ್ಟು ದುರ್ಬಲನೂ ಆಗಿದ್ದ. ನಮ್ಮಲ್ಲಿ ಅನೇಕರಂತೆ, ಅವನಿಗೆ ಸರಿ ತಪ್ಪುಗಳು ತಿಳಿದಿದ್ದರೂ ಘಟನೆಗಳ ಗತಿಯನ್ನು ತಡೆಯುವ ಶಕ್ತಿ ಇಲ್ಲವೆಂದು ಭಾವಿಸಿದ. ಎಂತಹ ಘಟನೆಗಳು? ಒಳ್ಳೆಯದು ಕೆಟ್ಟದರ ನಡುವೆ ಗಡಿಯಾಚೆ ಸಂಭವಿಸಿದ ವಿನಾಶಕಾರಿ ಸಮರದತ್ತ ಅವನನ್ನು ಎಳೆದುಕೊಂಡು ಹೋದ ಘಟನೆಗಳು.
ದ್ವೇಷ ಮತ್ತು ಕುತಂತ್ರ
ತಮ್ಮ ಐವರು ಸೋದರ ಸಂಬಂಧಿಗಳು ದಿನೇ ದಿನೇ ಶಕ್ತಿಯುತರಾಗಿ, ತೇಜಸ್ವಿಗಳಾಗಿ ರೂಪುಗೊಳ್ಳುತ್ತಿರುವುದನ್ನು ದುರ್ಯೋಧನ ಮತ್ತು ಅವನ ಸೋದರರು (ಕುರು ರಾಜಕುಮಾರರು) ಅಸೂಯೆಯಿಂದ ನೋಡುತ್ತಿದ್ದರು. ದುರ್ಯೋಧನನಿಗೆ ಅವರು ಎಲ್ಲರ ಪ್ರೀತಿಗೆ ಪಾತ್ರರಾಗುತ್ತಿದ್ದು ಅಸಹನಿಯವಾಗಿತ್ತು. ಸಿಂಹಾಸನಕ್ಕೆ ಉತ್ತರಾಧಿಕಾರಿಯಾದ, ಪಾಂಡು ಪುತ್ರರಲ್ಲಿ ಹಿರಿಯನಾದ ಯುಧಿಷ್ಠಿರನು ಯೌವನಕ್ಕೆ ಕಾಲಿಡುತ್ತಿದ್ದಂತೆ ದುರ್ಯೋಧನನು ಅವನನ್ನು, ಅವನ ಸೋದರರನ್ನು ಮತ್ತು ಅವರ ತಾಯಿ ರಾಣಿ ಕುಂತಿಯನ್ನು ಕೊಲ್ಲಲು ನಿರ್ಧರಿಸಿದನು. ಬಾಲಿಶತನದ, ಹುಡುಗರಾದಾಗಿನ ದ್ವೇಷವು ಬದುಕುಳಿಯುವ ಹೋರಾಟವಾಗಿ ಬೆಳೆದುಬಿಟ್ಟಿತ್ತು.
ತನ್ನ ಹಿರಿಯ ಪುತ್ರ ಮತ್ತು ಕುತಂತ್ರದ ಸಚಿವರ ವಿಶ್ವಾಸಘಾತುಕ ಸಲಹೆಗಳನ್ನು ಕೇಳಿದಾಗ ವೃದ್ಧ ದೊರೆಯ ಮನದಲ್ಲಿ ಏನು ಅನುಮಾನ ಮತ್ತು ಅಪರಾಧಿಪ್ರಜ್ಞೆ ಇತ್ತೋ ಏನೋ ಎನ್ನುವುದು ನಮಗೆ ತಿಳಿಯದು. ಆದರೆ ತಾನು ಕಿವಿಯಾರೆ ಕೇಳಿದ್ದನ್ನು ಅವನು ಇಷ್ಟಪಟ್ಟ. ತಾನೇ ಸಿಂಹಾಸನವನ್ನು ವಶಪಡಿಸಿಕೊಳ್ಳಬೇಕೆಂದು ಅವನು ಬಯಸಿದ್ದ. ಆದುದರಿಂದ ಧೃತರಾಷ್ಟ್ರನು ಪಾಂಡವರು ಮತ್ತು ಅವರ ತಾಯಿ ರಾಣಿ ಕುಂತಿಯನ್ನು ಸಮೀಪದ ನಗರ ವಾರಣಾವತಕ್ಕೆ ಭೇಟಿ ನೀಡಲು ತಿಳಿಸಿದ. ಅವರನ್ನು ಅಲ್ಲಿ ಸಂಹರಿಸಲು ಸಂಚುಕೋರರು ಯೋಜಿಸಿದ್ದರು.
ವಿದುರ ಮತ್ತು ಭೀಷ್ಮರಂತಹ ಸಹಾನುಭೂತಿ ಇರುವ ಹಿರಿಯರ ಸಮ್ಮುಖದಲ್ಲಿಯೇ ಮುಗ್ಧರು ಮೊದಲೇ ಹೇಳಲಾಗದಂತಹ ಅಥವಾ ಹೋರಾಟಮಾಡಲಾಗದಂತಹ ಗಂಡಾಂತರದಿಂದ ಸುತ್ತುವರಿಯಲ್ಪಟ್ಟಿದ್ದರು. ಬೆಚ್ಚಿಬೀಳಿಸುವಂತಹ ಧೃತರಾಷ್ಟ್ರನ ವಿಶ್ವಾಸಘಾತುಕದ ವಾಸ್ತವತೆಯನ್ನು ವಿದುರನ ಅರ್ಥಪೂರ್ಣವಾದ ಕೆಲವೇ ಮಾತುಗಳು ಅವರಿಗೆ ಅರುಹಿತು. ಐವರು ಸಾಹಸಿ ಯುವಕರು ತಮ್ಮ ತಾಯಿ ರಾಣಿ ಕುಂತಿಯೊಂದಿಗೆ ಹಸ್ತಿನಾಪುರದಿಂದ ಹೊರಟಾಗ, ರಾಜ ಕುಟುಂಬದ ಇತರರು ಗ್ರಹಿಸಿಕೊಳ್ಳಲಾಗದ ಕೆಲವು ಒಗಟಿನಂತಹ ಗೂಢ ಮಾತುಗಳನ್ನು ವಿದುರನು ನುಡಿದನು. ಅವನ ಮಾತುಗಳು ಯುಧಿಷ್ಠಿರನನ್ನು ಮಾತ್ರ ಉದ್ದೇಶಿಸಲಾಗಿತ್ತು.
ವಿದುರನು ನುಡಿದನು, “ಉಕ್ಕು ಅಥವಾ ಇತರ ಯಾವುದೇ ಲೌಕಿಕ ವಸ್ತುವಿನಿಂದ ಮಾಡಿಲ್ಲದ ಅಸ್ತ್ರವೂ ಶತ್ರುವನ್ನು ಕೊಲ್ಲುವಷ್ಟು ಹರಿತವಾಗಿರುತ್ತದೆ. ಇದನ್ನು ತಿಳಿದವನು ಎಂದಿಗೂ ಗೊಂದಲಗೊಳ್ಳುವುದಿಲ್ಲ. ಬೆಂಕಿಯು ಆತ್ಮವನ್ನು ನಂದಿಸಲಾರದು. ಅದು ಕೇವಲ ಲೌಕಿಕ ದೇಹವನ್ನು ನಾಶಪಡಿಸಬಹುದಷ್ಟೆ.” ವಿದುರನು ಸಾಮಾನ್ಯವಾಗಿ ಆಧ್ಯಾತ್ಮಿಕ ವಿಷಯಗಳ ಬಗೆಗೆ ರಾಜ ಕುಟುಂಬಕ್ಕೆ ಬೋಧಿಸುವುದುಂಟು. ಆದರೆ ಈ ಮಾತುಗಳಿಂದ ಕುಂತಿಯು ಗೊಂದಲಗೊಂಡಳು. ಅನಂತರ ಅವಳು ಯುಧಿಷ್ಠಿರನನ್ನು ಕೇಳಿದಳು, “ವಿದುರನ ಮಾತುಗಳ ಅರ್ಥವೇನು?” ವಿದುರನು ಹೇಳಬಯಸಿದ್ದನ್ನು ವಿವರಿಸಿದ. ವಾರಣಾವತದ ಸುಂದರ ಅರಮನೆಯು ಅವರ ಅಂತಿಮ ಸಂಸ್ಕಾರದ ಅಗ್ನಿಯಾಗುತ್ತದೆ. ಹೊಸ ಅರಮನೆಯ ಗೋಡೆಗಳು ಉರಿಯುವ ವಸ್ತುಗಳಿಂದ ಮತ್ತು ಅರಗಿನಿಂದ ಮಾಡಿರುವುದನ್ನು ಅವರು ಕಂಡುಕೊಂಡರು. ಅವರ ಹೊಸ ಮನೆಯಲ್ಲಿ ಬೆಂಕಿಯು ಗೋಡೆಗಳಲ್ಲಿ ಅಡಗಿರುವ ಅಸ್ತ್ರ.
ಪಾಂಡವರು ಆಶಾಜೀವಿಗಳಾಗಿ ಅರಗಿನ ಮನೆಯಲ್ಲಿ ಒಂದು ವರ್ಷವಿದ್ದರು. ಆಗ, ಒಂದು ರಾತ್ರಿ ವಿದುರನು ಮಾರುವೇಷದಲ್ಲಿ ಬಂದನು. ಆ ಮನೆಯ ಪಾಲಕನು ಅಮಾವಾಸ್ಯೆಯ ಹಿಂದಿನ ರಾತ್ರಿ ಮನೆಗೆ ಬೆಂಕಿ ಹಚ್ಚುವನೆಂದು ವಿದುರನು ಪಾಂಡವರಿಗೆ ಅರುಹಿದನು.
ಗಹನವಾದ ಸಂಚಿನಿಂದ ಪಾರಾಗಲು ಪಾಂಡವರು ಮನೆ ಕೆಳಗಿನ ಸುರಂಗವನ್ನು ಪ್ರವೇಶಿಸಿದರು. ಅರಗಿನ ಮನೆಯು ಸುಟ್ಟು ಬೂದಿಯಾಗುವ ವೇಳೆಗೆ ಅವರು ಅರಣ್ಯದೊಳಗೆ ಓಡಿಹೋಗಿದ್ದರು.
ತನ್ನ ಐವರು ಸೋದರ ಪುತ್ರರು ಮತ್ತು ಅವರ ತಾಯಿ ಸತ್ತಿರುವರೆಂದು ಹೇಳಲಾದ ವಾರ್ತೆಯನ್ನು ಕೇಳಿದ ಕೂಡಲೇ ಧೃತರಾಷ್ಟ್ರನು ಸಂತೋಷದಿಂದ ಅಂತಿಮ ವಿಧಿಗಳನ್ನು ನೆರವೇರಿಸಿದನು. ವಾಸ್ತವಾಂಶವನ್ನು ಅರಿತಿದ್ದ ವಿದುರನು ಅಲ್ಲಿದ್ದ ಮತ್ತೊಬ್ಬ ಸಂತೋಷ ವ್ಯಕ್ತಿ.
ಸ್ವಯಂವರ
ಧೃತರಾಷ್ಟ್ರ ಮತ್ತು ವಿದುರ ಆನಂದಿಸುತ್ತ ಹಾಗೂ ಬಂಧುಗಳು ದುಃಖಿಸುತ್ತಿರುವಾಗ ಪಾಂಡವರು ತಾವು ಈ ದುಸ್ಥಿತಿಗೆ ಹೇಗೆ ಬಂದೆವೆಂದು ಆಶ್ಚರ್ಯಪಡುತ್ತ ಅರಣ್ಯದಲ್ಲಿ ಅಲೆದಾಡುತ್ತಿದ್ದರು. ಭೀಮನು ತನ್ನ ಅತ್ಯಂತ ದೃಢಕಾಯದಿಂದ ತನ್ನ ತಾಯಿ ಮತ್ತು ಸೋದರರನ್ನು ಎಲ್ಲ ರೀತಿಯ ಅಪತ್ತುಗಳಿಂದ ರಕ್ಷಿಸುತ್ತಿದ್ದನು. ಅವರು ಭಿಕ್ಷೆ ಬೇಡುತ್ತಿದ್ದರು ಮತ್ತು ಬ್ರಾಹ್ಮಣರ ವೇಷದಲ್ಲಿದ್ದರು. ಆದರೆ ಬ್ರಾಹ್ಮಣರ ಸರಳ ಉಡುಗೆಯು ಈ ಯೋಧರ ಹೃದಯವನ್ನು ಮುಚ್ಚುವುದು ಸಾಧ್ಯವಿರಲಿಲ್ಲ. ಆದುದರಿಂದ, ದ್ರೌಪದಿ ಸ್ವಯಂವರದ ಬಗೆಗೆ ಕೇಳಿದಾಗ ಪಾಂಡವರು ಈ ಅಪೂರ್ವ ಕಾರ್ಯಕ್ರಮವನ್ನು ವೀಕ್ಷಿಸಲು ನಿರ್ಧರಿಸಿದರು.

ದ್ರೌಪದಿಯು ಪಾಂಡವರಲ್ಲಿ ಅತ್ಯಂತ ಕುಶಲ ಬಿಲ್ಲುಗಾರನಾಗಿದ್ದ ಅರ್ಜುನನನ್ನು ವರಿಸುವ ಅಪೇಕ್ಷೆ ಹೊಂದಿದ್ದಳು. ಆದುದರಿಂದ ಅವಳ ತಂದೆಯು ಅರ್ಜುನನಂತಹ ಶ್ರೇಷ್ಠರಷ್ಟೇ ಸಾಧಿಸಬಹುದಾದ ಅತ್ಯಂತ ಕಠಿಣವಾದ ಪರೀಕ್ಷೆಯನ್ನು ಯೋಜಿಸಿದ್ದರು. ಅರಮನೆಯ ಎತ್ತರದ ಛಾವಣಿಯ ಬಳಿ ನೇತಾಡುತ್ತಿದ್ದ ಮೀನು ಪರೀಕ್ಷಾರ್ಥಿಯ ಗುರಿಯಾಗಿತ್ತು. ಅದರ ಕೆಳಗೆ ಚಕ್ರವೊಂದನ್ನು ತೂಗುಹಾಕಲಾಗಿತ್ತು. ಸ್ವಯಂವರದಲ್ಲಿ ಭಾಗಿಯಾಗುವ ಬಿಲ್ಲುಗಾರನು ಈ ರಕ್ಷಣಾ ಚಕ್ರದ ಅರೆಗಳ (ಕಂಬಿ) ಮೂಲಕ ಮೀನಿನ ಕಣ್ಣನ್ನು ಚುಚ್ಚಬೇಕಾಗಿತ್ತು. ಅದಕ್ಕಿಂತ ಹೆಚ್ಚಾಗಿ, ಅವನು ಅದನ್ನು ತನ್ನ ಗುರಿಯತ್ತ ನೋಡದೆಯೇ ಮಾಡಬೇಕಾಗಿತ್ತು! ನೆಲದ ಮೇಲೆ ಒಂದು ನೀರಿನ ಪಾತ್ರೆಯನ್ನು ಇಡಲಾಗಿತ್ತು. ಅದರಲ್ಲಿ ಚಕ್ರ ಮತ್ತು ಮೀನಿನ ಪ್ರತಿಬಿಂಬವನ್ನು ನೋಡಬಹುದಿತ್ತು. ಸ್ಪರ್ಧಿಯು ತೊಯ್ದಾಡುತ್ತಿದ್ದ ನೀರಿನಲ್ಲಿ ನೋಡುತ್ತ ಗುರಿಯತ್ತ ಬಾಣ ಪ್ರಯೋಗಿಸಬೇಕಾಗಿತ್ತು. ಬಡ ಬ್ರಾಹ್ಮಣನ ವೇಷದಲ್ಲಿದ್ದ ಅರ್ಜುನನು ತನ್ನ ಗುರಿಯನ್ನು ಸಾಧಿಸಿದಾಗ ಎಲ್ಲರೂ ಅಚ್ಚರಿಗೊಂಡರು. ಸ್ಪರ್ಧಿಗಳಾಗಿದ್ದ ಇತರ ರಾಜಕುಮಾರರು ತೀವ್ರ ಪ್ರತಿರೋಧ ತೋರಿದರೂ ಅರ್ಜುನನು ಅವರನ್ನೆಲ್ಲ ಬದಿಗೊತ್ತಿ ಪರಾಜಯಗೊಳಿಸಿದನು ಮತ್ತು ದ್ರೌಪದಿಯ ಕೈ ಹಿಡಿದನು.
ಅರ್ಜುನನು ತನ್ನ ತಾಯಿ ಮತ್ತು ಸೋದರರೊಡನೆ ಇದ್ದ ತನ್ನ ಮನೆಗೆ ನವ ವಧುವನ್ನು ಕರೆದುಕೊಂಡು ಹೋದನು. ತನಗೆ ಲಭಿಸಿರುವ ಬಹುಮಾನವನ್ನು ಬಂದು ನೋಡಲು ಅವನು ಆನಂದದಿಂದ ಕುಂತಿಯನ್ನು ಕರೆದನು. ತನ್ನ ಭಿಕ್ಷೆಯಲ್ಲಿ ಅರ್ಜುನನಿಗೆ ಏನೋ ವಿಶೇಷವಾದುದು ಸಿಕ್ಕಿದೆ ಎಂದು ಭಾವಿಸಿದ ಕುಂತಿಯು ಒಳಗಿನಿಂದಲೇ ಹೇಳಿದಳು, `ನಿನ್ನ ಬಳಿ ಏನಿದೆಯೋ ಅದನ್ನು ನೀನು ನಿನ್ನ ಸೋದರರೊಡನೆ ಹಂಚಿಕೊಳ್ಳಬೇಕು.” ಹೀಗೆ ಅಸಾಮಾನ್ಯವಾದ ರೀತಿಯಲ್ಲಿ ದ್ರೌಪದಿಯು ಒಬ್ಬನಲ್ಲ ಐವರು ರಾಜಕುಮಾರರ ಪತ್ನಿಯಾದಳು.
ಬಿದಿರಿನ ಗುಡಿಸಲಿನಲ್ಲಿ ವಾಸಿಸುವ ಕಠಿಣ ದಿನಗಳು ಕನಸಿನಂತೆ ಕರಗಿಹೋಯಿತು. ಬಾಣವು ಆಶ್ಚರ್ಯಕರ ವೇಗದಲ್ಲಿ ಗುರಿಯತ್ತ ಸಾಗುವುದರೊಂದಿಗೆ ಪಾಂಡವರ ಅದೃಷ್ಟವು ಒಮ್ಮೆಲೆ ಬದಲಾಗಿ ಹೋಯಿತು.
ರಾಜಸೂಯ ಯಾಗ
ಶ್ರೀಮಂತ ಮತ್ತು ಪ್ರಬಲ ರಾಜಕುಮಾರಿ ದ್ರೌಪದಿಯನ್ನು ಅವರು ಹಸ್ತಿನಾಪುರಕ್ಕೆ ಕರೆದುಕೊಂಡು ಹೋದರು. ಅವರು ಸಮೀಪದಲ್ಲಿ ಇಂದ್ರಪ್ರಸ್ಥ ನಗರದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡರು. ಅಲ್ಲಿ ಅವರು ಪ್ರಜ್ವಲಿಸುವ ಅರಮನೆಯನ್ನು ನಿರ್ಮಿಸಿದರು. ಶತ್ರುಗಳನ್ನು ದಿಗ್ಬ್ರಮೆಗೊಳಿಸುವ ನಿಗೂಢ ರಕ್ಷಣಾ ವ್ಯವಸ್ಥೆಯನ್ನು ಅದರಲ್ಲಿ ರೂಪಿಸಿದರು. ಸಾಮ್ರಾಜ್ಯದ ಜನರು ಯುವ ರಾಜಕುಮಾರರನ್ನು ಸಾಹಸಿ ನಾಯಕರಂತೆ ಪೂಜಿಸಿದರು. ಅಪಾರವಾದ ಸಂಪತ್ತನ್ನು ಸಂಗ್ರಹಿಸಿದರು. ಅನೇಕ ಸಾಮಂತ ರಾಜರೂ ಆದರು. ಇದರಿಂದಾಗಿ ಯುಧಿಷ್ಠಿರನು ರಾಜಸೂಯ ಯಾಗವನ್ನು ನೆರವೇರಿಸಲು ನಿರ್ಧರಿಸಿದನು.
ಒಂದು ರೀತಿಯಲ್ಲಿ ಯಾಗವು ಸಮರ ಕರೆಯಾಗಿತ್ತು. ಏಕೆಂದರೆ ಅತ್ಯಂತ ವ್ಯಾಪಕವಾದ ಯಾಗದ ಅಪಾರ ವೆಚ್ಚಕ್ಕೆ ಬೆಂಬಲಿಸಲು ಕಡಮೆ ದರ್ಜೆಯ ರಾಜರು ಮತ್ತು ರಾಜಕುಮಾರರು ತೆರಿಗೆಯನ್ನು ನೀಡುವುದು ಅಗತ್ಯವಾಗಿತ್ತು. ಅದೃಷ್ಟವಶಾತ್, ಅಜಾತಶತ್ರುವಾದ ಯುಧಿಷ್ಠಿರನು ಸಮ್ರಾಟನಾಗುವ ಪರಿಣಾಮದ ಈ ಯಾಗವನ್ನು ನಡೆಸುವ ಅರ್ಹತೆಯನ್ನು ಘೋಷಿಸಿಕೊಳ್ಳುವ ಮುನ್ನ ಜರಾಸಂಧನೆಂಬ ಭಿನ್ನಮತೀಯ ರಾಜನೊಂದಿಗೆ ಮಾತ್ರ ವ್ಯವಹರಿಸಬೇಕಾಗಿತ್ತು.
ಈ ಲೋಕದಲ್ಲಿ ಯುಧಿಷ್ಠಿರನು ಅತ್ಯಂತ ಶಕ್ತಿಶಾಲಿ ರಾಜನಾಗಬೇಕಾದರೆ, ಅವನು ಅದನ್ನು ತನಗಾಗಿ ಘೋಷಿಸಿಕೊಳ್ಳಲು ಬಯಸಿರಲಿಲ್ಲ. ಕೃಷ್ಣನನ್ನು ಬರಮಾಡಿಕೊಂಡು ಸಭೆಯಲ್ಲಿನ ಅತ್ಯಂತ ಶ್ರೇಷ್ಠ ವ್ಯಕ್ತಿಗೆ ಮೀಸಲಾದ ಪೂಜೆಯನ್ನು ಅವನಿಗೆ ಅರ್ಪಿಸಬೇಕೆಂದು ಯುಧಿಷ್ಠಿರನು ಇಚ್ಛಿಸಿದ್ದ.
ಘನತೆ ಗೌರವದ ಸಾಕಾರ ರೂಪವಾದ ಯುಧಿಷ್ಠಿರನು ತನ್ನ ಹಿರಿಯರಾದ ಗುರು ದ್ರೋಣಚಾರ್ಯ, ಭೀಷ್ಮ ಪಿತಾಮಹ, ವಿದುರ ಮತ್ತು ಧೃತರಾಷ್ಟ್ರರನ್ನು ಯಾಗಕ್ಕೆ ಆಹ್ವಾನಿಸಿದ. ಅಂತೆಯೇ ದುರ್ಯೋಧನ ಮತ್ತು ಅವನ ಎಲ್ಲ ಸೋದರರಿಗೂ ಆಮಂತ್ರಣ ನೀಡಿದ. ಜಗತ್ತಿನ ವಿವಿಧ ಭಾಗಗಳಿಂದ ರಾಜ ಮಹಾರಾಜರು ಬಂದರು. ಸಾಮಾನ್ಯ ಜನರೂ ಪಾಲ್ಗೊಂಡರು. ಶ್ರೀ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಪಾಂಡವರು ಆಗ ಬಹಿರಂಗವಾಗಿ ಘೋಷಿಸಿದರು ಮತ್ತು ಅವನಿಗೆ ಅಗ್ರ ಪೂಜೆಯನ್ನು ಸಲ್ಲಿಸಿದರು. ಆದರೆ ವೈಭವದ ಯಾಗವು ಅಲ್ಪ ಪ್ರಮಾಣದ ದುಷ್ಟತನದಿಂದ ಸ್ವಲ್ಪ ಹಾಳಾಯಿತು. ಯುಧಿಷ್ಠಿರನು ತನಗಿಂತ ಹೆಚ್ಚು ಜನಪ್ರಿಯ ಮತ್ತು ಸಂಪದ್ಭರಿತನಾಗಿರುವುದನ್ನು ಕಂಡಾಗ ದುರ್ಯೋಧನನು ಅಸೂಯೆಯಿಂದ ದಹಿಸಿಹೋದನು. ಪಾಂಡವರಿಗೆ ಸಂಬಂಧಿಸಿದಂತೆ ಅವನು ನೋಡಿದ್ದೆಲ್ಲವನ್ನೂ ಅವನ ಅಹಂಕಾರವು ವಿಷವಾಗಿಸಿತು. ಯುಧಿಷ್ಠಿರನ ಹೊಸ ಅರಮನೆಯ ಕಲಾತ್ಮಕ ನಿರ್ಮಣವೂ ಕೂಡ ಅವನ ಕೋಪವನ್ನು ಹೆಚ್ಚಿಸಿತು. ಕೋಟೆಯ ಹೊರಗೆ ಕಂದಕಗಳಿದ್ದ ರಕ್ಷಣಾ ವ್ಯವಸ್ಥೆಯನ್ನು ಯಾವ ರೀತಿ ವಿನ್ಯಾಸಗೊಳಿಸಲಾಗಿತ್ತೆಂದರೆ ಅಲ್ಲಿ ನೀರು ಯಾವುದು ಮತ್ತು ನೆಲ ಯಾವುದೆಂದು ಹೇಳುವುದು ಅಸಾಧ್ಯವಾಗಿತ್ತು. ದುರ್ಯೋಧನನು ನೆಲವೆಂದು ಭಾವಿಸಿ ನೀರಿನ ಬಳಿಗೆ ಹೋಗಿ ಬಿದ್ದನು. ಮಹಿಳೆಯರೆಲ್ಲರೂ ಗಟ್ಟಿಯಾಗಿ ನಕ್ಕರು. ದುರ್ಯೋಧನನು ಅದನ್ನು ತಮಾಷೆಯಾಗಿ ಸ್ವೀಕರಿಸಲಿಲ್ಲ. ಕೋಪದಿಂದ ಅವನ ಕೂದಲು ನಿಮಿರಿತು. ಅವನು ತತ್‌ಕ್ಷಣ ತಲೆ ತಗ್ಗಿಸಿ ಹೊರಟು ಹೋದನು. ಈ ಘಟನೆಯು ಕುರು ವಂಶದ ಎರಡು ಭಾಗಗಳ ಮಧ್ಯೆ ಅನಿವಾರ್ಯವಾಗಿ ವೈರತ್ವವನ್ನು ಹೆಚ್ಚಿಸುವುದೆಂದು ಅರಿತಿದ್ದ ಯುಧಿಷ್ಠಿರನು ಅದಕ್ಕಾಗಿ ವಿಷಾದಿಸಿದನು.
ಜೂಜಾಟ, ಅಪಮಾನ, ವನವಾಸ
ಈ ಘಟನೆ ನಡೆದ ಕೆಲವೇ ದಿನಗಳ ಅನಂತರ ಧೃತರಾಷ್ಟ್ರನು ಜೂಜಾಟಕ್ಕಾಗಿ ಯುಧಿಷ್ಠಿರನಿಗೆ ಆಹ್ವಾನ ಕಳುಹಿಸಿದನು. ಈ ಜೂಜಾಟವನ್ನು ತನ್ನನ್ನು ನಾಶಪಡಿಸುವ ಉದ್ದೇಶದಿಂದಲೇ ವ್ಯವಸ್ಥೆ ಮಾಡಲಾಗಿದೆ ಎಂದು ಅರಿತಿದ್ದ ಯುಧಿಷ್ಠಿರನು ಅಸಂತೋಷದಿಂದಲೇ ಸವಾಲನ್ನು ಸ್ವೀಕರಿಸಿದನು. ರಾಜಕುಮಾರನಾಗಿ ಅವನು ಅದನ್ನು ನಿರಾಕರಿಸುವುದು ಸಾಧ್ಯವಿರಲಿಲ್ಲ. ಯುಧಿಷ್ಠಿರನೊಂದಿಗೆ ಪಗಡೆ ಆಟವಾಡಲು ದುರ್ಯೋಧನನು ಕುಖ್ಯಾತ ಮೋಸಗಾರ ಶಕುನಿಯನ್ನು ಕೇಳಿದನು. ಆಟದ ಆರಂಭದಲ್ಲಿಯೇ ಯುಧಿಷ್ಠಿರನಿಗೆ ಶಕುನಿಯ ಮೋಸದಾಟ ಅರ್ಥವಾಯಿತು. ಆದರೆ ನೈತಿಕತೆಯು ಅವನಿಗೆ ಆಟವನ್ನು ಮುಂದುವರಿಸುವಂತೆ ಮಾಡಿತು. ಶಕುನಿಯು ಅವನ ಸಂಪತ್ತು, ಸಾಮ್ರಾಜ್ಯ ಮತ್ತು ಪತ್ನಿ ದ್ರೌಪದಿಯನ್ನೂ ಗೆದ್ದುಕೊಂಡನು. ಅತ್ಯಂತ ನೋವಿನ ಸಂಗತಿ ಎಂದರೆ ದುರ್ಯೋಧನನ ಸೋದರ ದುಶ್ಯಾಸನನು ಸಭೆಯಲ್ಲಿ ನೆರೆದಿದ್ದ ಯೋಧರ ಮುಂದೆ ದ್ರೌಪದಿಯನ್ನು ವಿವಸ್ತ್ರಗೊಳಿಸಲು ಪ್ರಯತ್ನಿಸಿದ್ದು. ಈ ಕೃತ್ಯವು ಪತಿವ್ರತೆಯಾದ ರಾಣಿ ಮತ್ತು ವೀರರಾದ ಅವಳ ಪತಿಯರಿಗೆ ಎಷ್ಟು ದಿಗ್ಭ್ರಮೆ ಉಂಟುಮಾಡಿರಬಹುದು ಎನ್ನುವುದನ್ನು ನಮಗೆ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಅಸಹಾಯಕಳಾದ ದ್ರೌಪದಿಯು ದೇವೋತ್ತಮ ಶ್ರೀ ಕೃಷ್ಣನನ್ನು ಪ್ರಾರ್ಥಿಸಿಕೊಂಡಳು. ದುಶ್ಶಾಸನನು ಅವಳನ್ನು ಅಪಮಾನಿಸದಿರುವಂತೆ ಕೃಷ್ಣನು ತನ್ನ ದೈವೀ ಶಕ್ತಿಯಿಂದ ಅವಳಿಗೆ ಸೀರೆಯನ್ನು ಪೂರೈಸುತ್ತಲೇ ಇದ್ದನು. ಈ ದೃಶ್ಯವು ಕಾಲ ಕ್ರಮೇಣ ಕುರುಕ್ಷೇತ್ರ ಸಮರವಾಗಿ ಬೆಳೆಯುವ ಬೀಜವಾಯಿತು.

ಜೂಜಾಟದ ಪರಿಣಾಮವಾಗಿ ದುರ್ಯೋಧನನು ಪಾಂಡವರನ್ನು 12 ವರ್ಷಗಳ ಕಾಲ ಕಾಡಿಗೆ ಅಟ್ಟಿದನು. ಯಾರೂ ಕೂಡ ಪತ್ತೆ ಮಾಡದಂತೆ 13ನೆಯ ವರ್ಷವನ್ನು ಕಳೆದರೆ ಅವರಿಗೆ ಅವರ ಸಾಮ್ರಾಜ್ಯವನ್ನು ವಾಪಸು ಕೊಡುವುದಾಗಿ ಅವನು ಆಶ್ವಾಸನೆ ನೀಡಿದನು. ಅವರ ಅಪಾಯಕಾರಿ ಶತ್ರುವಿನಿಂದ ಬಂದ ಆ ಅಸ್ಪಷ್ಟ ಭರವಸೆಯು ಸಿಂಹಾಸನ ಪಡೆಯುವ ಹಕ್ಕಿಗೆ ವಿಶ್ವಸನೀಯ ಆಶ್ವಾಸನೆಯಾಗಿರಲಿಲ್ಲ. ಆದರೆ ಅವರಿಗೆ ಅನ್ಯ ಮಾರ್ಗವಿರಲಿಲ್ಲ. ಆದುದರಿಂದ ಅವರು ಬರಿಗೈಯಲ್ಲಿ ಕಾಡಿನೊಳಗೆ ನಡೆದರು. 12 ವರ್ಷಗಳ ಕಾಲ ದ್ರೌಪದಿಯೊಂದಿಗೆ ಅರಣ್ಯವಾಸಿಗಳಾಗಿದ್ದ ಅವರು 13ನೆಯ ವರ್ಷ ಕೂಡ ಯಾರ ಕಣ್ಣಿಗೂ ಬೀಳದಂತೆ ಜೀವಿಸುವಲ್ಲಿ ಯಶಸ್ವಿಯಾದರು.
ಸಮರ ಕಹಳೆ
ಅನಂತರ ಅವರು ಹಸ್ತಿನಾಪುರಕ್ಕೆ ತೆರಳಿ ತಮ್ಮ ಸಾಮ್ರಾಜ್ಯವನ್ನು ನೀಡುವ ದುರ್ಯೋಧನನ ಭರವಸೆಯನ್ನು ಧೃತರಾಷ್ಟ್ರನಿಗೆ ನೆನಪಿಸಿದರು. ಆದರೆ ಸಾಚಾತನ ಮತ್ತು ಕೀಳು ಕುತಂತ್ರದ ಮಧ್ಯೆ ಹೊಯ್ದಾಡುವ ಗುಣದ ಧೃತರಾಷ್ಟ್ರನು ಅಂತಹ ಆಶ್ವಾಸನೆಯನ್ನು ನಿರಾಕರಿಸುವ ಪ್ರಯತ್ನ ಮಾಡಿದನು. ಕೊನೆಗೆ ಪಾಂಡವರು ಆಡಳಿತ ನಡೆಸಲು ತಲಾ ಒಂದರಂತೆ ಐದು ಗ್ರಾಮಗಳನ್ನಾದರೂ ನೀಡಬೇಕೆಂದು ಕೇಳಿದರು. ವೈದಿಕ ನೀತಿ ಸಂಹಿತೆಯಂತೆ ಯೋಧರು ಉದ್ಯೋಗ ಸ್ವೀಕರಿಸುವಂತಿಲ್ಲ ಅಥವಾ ವ್ಯಾಪಾರ ಮಾಡುವಂತಿಲ್ಲ. ಯಾವುದಾದರೂ ಒಂದು ರೀತಿಯಲ್ಲಿ ಆಳಬೇಕು. ಪಾಂಡವರಿಗೆ ಒಂದು ತುಂಡು ಭೂಮಿಯನ್ನೂ ನೀಡುವುದಿಲ್ಲ ಎಂದು ದುರ್ಯೋಧನನು ಸಾರಿದಾಗ ಧೃತರಾಷ್ಟ್ರನು ಏನೂ ಆಕ್ಷೇಪಣೆ ಮಾಡಲಿಲ್ಲ. ಅಂತಹ ಲಘುವಾದ ಮಾತಿನಿಂದ ದುರ್ಯೋಧನನು ಬಿಕ್ಕಟ್ಟು ಸೃಷ್ಟಿಸಿದನು. ಪಾಂಡವರಿಗೆ ಯಾವುದೇ ಸಾಮ್ರಾಜ್ಯವಿರಲಿಲ್ಲ. ಆದರೆ ಕರ್ತವ್ಯನಿಷ್ಠ ಪಾಂಡವರು ಧೃತರಾಷ್ಟ್ರ ಮತ್ತು ಅವನ ಪುತ್ರರಿಗಿಂತಲೂ ಹೆಚ್ಚು ಪ್ರಬಲರಾಗಬೇಕು ಎನ್ನುವುದು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅಪೇಕ್ಷೆಯಾಗಿತ್ತು. ಆದುದರಿಂದ ಅವರಿಗೆ ಈಗ ಯುದ್ಧವಲ್ಲದೆ ಅನ್ಯ ಮಾರ್ಗವಿರಲಿಲ್ಲ.
ವೈದಿಕ ಮೂಲಗಳ ಪ್ರಕಾರ ನಿರ್ಣಾಯಕವಾದ ಪ್ರಸಿದ್ಧ ಕುರುಕ್ಷೇತ್ರ ಯುದ್ಧವು 18 ದಿನಗಳ ಕಾಲ ನಡೆಯಿತು ಮತ್ತು 64 ಕೋಟಿ ಜೀವಗಳನ್ನು ಆಹುತಿ ಪಡೆಯಿತು. ಒಂದೇ ಕುಟುಂಬದ ಎರಡು ಭಾಗಗಳ ನಡುವಣ ಕುಲವೈರದ ಪರಿಣಾಮವಾಗಿ ಅಂತಹ ನರಮೇಧವು ಅಸಾಧ್ಯವೆಂದು ತೋರಬಹುದು. ಆದರೂ ಇಡೀ ಸೇನೆಯನ್ನೇ ನಾಶ ಪಡಿಸುವ ಅಣ್ವಸ್ತ್ರಗಳ ಬಗೆಗೆ ಪುರಾತನ ದಾಖಲೆಗಳು ವಿವರಿಸುತ್ತವೆ. ಐದು ಸಾವಿರ ವರ್ಷಗಳ ಹಿಂದೆ ನಡೆದಿದ್ದರೂ ಈ ಮಹಾ ಯುದ್ಧದಲ್ಲಿ ಆಧುನಿಕ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವುದಕ್ಕಿಂತ ಹೆಚ್ಚು ಸೂಕ್ಷ್ಮವಾದ ಮತ್ತು ಮಾರಕ ಅಸ್ತ್ರಗಳನ್ನು ಬಳಸಲಾಗಿತ್ತು. ಯೋಧರು ಅಶ್ವಗಳ ರಥಗಳಲ್ಲಿ ಸಾಗಿದರೂ ಅವರು ವಿಶೇಷ ಗುರಿಯನ್ನು ಮುಟ್ಟುವ ಬಾಣಗಳನ್ನು (ಮಂತ್ರಗಳನ್ನು) ಪ್ರಯೋಗಿಸಬಲ್ಲವರಾಗಿದ್ದರು. ಇಂದು ಕಂಡರಿಯದ ವಾಯು, ಜಲ ಮತ್ತು ಅಗ್ನಿ ಅಸ್ತ್ರಗಳಿಂದ ಭಾರಿ ಆನೆಗಳು ಕತ್ತರಿಸಿದ ಮರಗಳಂತೆ ಕೆಳಗುರುಳಿದವು.
ಅಂತಿಮವಾಗಿ, ವಿನಾಶದ ಬಿರುಗಾಳಿಯು ಕಡಮೆಯಾದ ಮೇಲೆ ಧೃತರಾಷ್ಟ್ರನ ಬಳಿ ಉಳಿದದ್ದು ಉರಿಯುತ್ತಿದ್ದ ಪ್ರಜ್ಞೆ ಮತ್ತು ಪತ್ನಿ ಗಾಂಧಾರಿ ಮಾತ್ರ. ಅವರು ತಮ್ಮೆಲ್ಲ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡಿದ್ದರು. ಸಮರದಲ್ಲಿ ಅಸು ನೀಗಿದ ಪ್ರಮುಖ ಯೋಧರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಂಧುಗಳಾಗಿದ್ದವರು. ಆದುದರಿಂದ ಕುಟುಂಬದ ಸದಸ್ಯರು ಒಟ್ಟಾಗಿ ಸಂತಾಪ ವ್ಯಕ್ತಪಡಿಸಿದರು. ಮಹಾರಾಜ ಯುಧಿಷ್ಠಿರನು ಜಯಶೀಲನಾಗಿರುವುದಕ್ಕಿಂತ ಪಶ್ಚಾತ್ತಾಪದಿಂದ ಬೆಂದುಹೋದನು. ಧೃತರಾಷ್ಟ್ರ ಮತ್ತು ಗಾಂಧಾರಿಯರ ಬಗೆಗೆ ತನ್ನ ಕರ್ತವ್ಯದಲ್ಲಿ ತುಂಬ ಜಾಗರೂಕನಾಗಿದ್ದ ಅವನು ರಾಜ ಗೌರವದೊಂದಿಗೆ ಅವರ ಯೋಗಕ್ಷೇಮವನ್ನು ನೋಡಿಕೊಂಡನು.
ಧೃತರಾಷ್ಟ್ರನ ತಪ್ಪುಗಳು ದೊಡ್ಡದ್ದಾಗಿದ್ದರೂ ಯುಧಿಷ್ಠಿರನು ತನ್ನ ತಪ್ಪಿನಿಂದಲೇ ಕುರುಕ್ಷೇತ್ರ ಸಮರ ನಡೆಯಿತೆಂದು ಭಾವಿಸಿದ್ದು ಅವನ ಗುಣ ವೈಶಿಷ್ಟ್ಯವನ್ನು ಸೂಚಿಸುತ್ತದೆ. ಇತ್ತ ಧೃತರಾಷ್ಟ್ರನು ತನ್ನ ನಿರ್ಧಾರದಿಂದಲೇ ಕೆಲವೇ ದಿನಗಳಲ್ಲಿ ಲಕ್ಷಾಂತರ ಜನರು ಸತ್ತರೆಂಬ ವಾಸ್ತವಾಂಶವನ್ನು ತನ್ನ ಮನಸ್ಸಿನಿಂದ ಹೇಗೋ ತ್ಯಜಿಸಿ ಗೌರವಾನ್ವಿತ ರಾಜವಂಶದ ದೊಡ್ಡಪ್ಪನ ಪಾತ್ರದಲ್ಲಿ ನೆಲೆಯಾದ.
ವಿದುರನ ಬುದ್ಧಿವಾದ

ಧೃತರಾಷ್ಟ್ರನು ಗೌರವಾನ್ವಿತ ಬಾಹ್ಯ ಬದುಕನ್ನು ಭದ್ರವಾಗಿ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾಗ, ಅದೃಷ್ಟವಶಾತ್ ಅವನ ಕಿರಿಯ ಸೋದರ ವಿದುರನು ಅನೇಕ ವರ್ಷಗಳ ತೀರ್ಥಯಾತ್ರೆಯ ಅನಂತರ ಅರಮನೆಗೆ ಹಿಂದಿರುಗಿದ. ಧೃತರಾಷ್ಟ್ರನು ಯುಧಿಷ್ಠಿರನ ಅರಮನೆಯಲ್ಲಿ ಆರಾಮವಾಗಿ ಬದುಕುತ್ತ ಮತ್ತು ತನ್ನ ಹಿಂದಿನ ಆಕ್ರಮಣಕಾರಿ ಕೃತ್ಯಗಳನ್ನು ನಿರ್ದಯತೆಯಿಂದ ಮರೆತಿರುವುದನ್ನು ಕಂಡು ವಿದುರನ ಸಂತ ಧೋರಣೆಯು ಉಕ್ಕಿನಂತೆ ಕಠಿಣವಾಯಿತು. ಸಾಧು (ಸಂತ) ಎಂದರೆ “ಯಾರು ಕಡಿದು ಹಾಕುವವರೋ” ಎಂದು ಅರ್ಥ. ತನ್ನ ಸೋದರ ಪುತ್ರನ ಭವ್ಯ ಅರಮನೆಯಲ್ಲಿ ಕುಳಿತು ಧೃತರಾಷ್ಟ್ರನು ಅನುಭವಿಸುತ್ತಿದ್ದ ಹುಸಿ ರಕ್ಷಣಾ ಪ್ರಜ್ಞೆಯನ್ನು ತೊಡೆದು ಹಾಕಲು ವಿದುರನು ಆರಂಭಿಸಿದನು. ಬೇರೇನೂ ಮಾಡಲು ತೋರದ ಕಾರಣ ಧೃತರಾಷ್ಟ್ರನು ತನ್ನ ಸೋದರ ಪುತ್ರನ ಆತಿಥ್ಯವನ್ನು ಸ್ವೀಕರಿಸುತ್ತಿರುವುದನ್ನು ವಿದುರನು ಕಂಡುಕೊಂಡ. ಜೀವನವು ಅಗೋಚರವಾಗಿ ಕಳೆದುಹೋಗುತ್ತಿದ್ದಂತೆ, ಧೃತರಾಷ್ಟ್ರನು ತನ್ನ ವೃದ್ಧಾಪ್ಯವನ್ನು ತನ್ನ ಕುಟುಂಬದಲ್ಲಿ ಉಳಿದಿದ್ದರ ಮಧ್ಯೆ, ಅನಿಯತವಾಗಿ ಕಳೆಯುತ್ತಿದ್ದನು. ವಿದುರನಿಗೆ ಇದು ಬಿಕ್ಕಟ್ಟಿನಂತೆ ಕಂಡಿತು. ಅವನು ಕನಿಕರದಿಂದ ಮಾತನಾಡಿದ, “ನನ್ನ ಪ್ರೀತಿಯ ರಾಜನೇ, ದಯೆಯಿಟ್ಟು ಇಲ್ಲಿಂದ ತತ್‌ಕ್ಷಣ ಹೊರಟು ಬಿಡು. ವಿಳಂಬ ಮಾಡಬೇಡ. ದೇವೋತ್ತಮ ಪರಮ ಪುರುಷನು ಕಾಲನ ರೂಪದಲ್ಲಿ ನಮ್ಮೆಲ್ಲರ ಬಳಿಗೆ ಬರುತ್ತಿದ್ದಾನೆ. ಕಾಲನ ಪ್ರಭಾವದಲ್ಲಿ ನೀನು ನಿನ್ನ ಜನ್ಮವನ್ನು ಶರಣಾಗಿಸಬೇಕು. ಇನ್ನು ಸಂಪತ್ತು, ಗೌರವ, ಮಕ್ಕಳು, ಭೂಮಿ ಮತ್ತು ಗೃಹದಂತಹವುಗಳ ಬಗೆಗೆ ಹೇಳುವುದೇನಿದೆ?” ದೇವೋತ್ತಮ ಪರಮ ಪುರುಷನಲ್ಲಿ ಆಶ್ರಯ ಪಡೆಯಲೆಂದೇ ಮಾನವ ಜೀವನ ಇರುವುದೆಂದು ಧೃತರಾಷ್ಟ್ರನಿಗೆ ತಿಳಿಸುವುದು ವಿದುರನಿಗೆ ಬೇಕಾಗಿತ್ತು. ಆದುದರಿಂದ ಅವನು ಧೃತರಾಷ್ಟ್ರನನ್ನು ಅವನ ಬುದ್ಧಿಗೆ ತರಲು ಪ್ರಯತ್ನಿಸುತ್ತ, ಸಾಣೆಕಲ್ಲನ್ನು ಉಜ್ಜುವಂತೆ ಮಾತನಾಡಿದ, “ನೀನು ಹುಟ್ಟಿನಿಂದಲೂ ಅಂಧ. ಇತ್ತೀಚೆಗೆ ನಿನಗೆ ಕಿವಿ ಕೇಳಿಸುವುದೂ ಕಷ್ಟವಾಗಿದೆ. ನಿನ್ನ ನೆನಪಿನ ಶಕ್ತಿ ಕುಂದುತ್ತಿದೆ. ನಿನ್ನ ಬುದ್ಧಿ ಗೊಂದಲಗೊಂಡಿದೆ. ನಿನ್ನ ಹಲ್ಲುಗಳು ಸಡಿಲವಾಗಿವೆ, ನಿನ್ನ ಪಿತ್ತಜನಕಾಂಗವು ವಿಕಲಗೊಂಡಿದೆ ಮತ್ತು ನೀನು ಲೋಳೆಯನ್ನು ಕೆಮ್ಮುತ್ತಿರುವೆ.” ಪಾಂಡವ ಅರಮನೆಯ ಪರಿಶುದ್ಧ ವಾತಾವರಣಕ್ಕೆ ಅಂಟಿಕೊಂಟಿದ್ದ ವೃದ್ಧ ರಾಜನಿಗೆ ಯಾವುದೇ ಆತಂಕವಿಲ್ಲದಂತೆ ಅಲ್ಲಿಂದ ಹೊರಬರಲು ಉತ್ತೇಜಿಸಿದ. “ಒಬ್ಬ ಉತ್ತಮ ಮನುಷ್ಯನು ಈ ಲೌಕಿಕ ಲೋಕದ ಹುಸಿತನ ಮತ್ತು ಸಂಕಟದ ಬಗೆಗೆ ಎಚ್ಚರಗೊಳ್ಳುತ್ತಾನೆ ಮತ್ತು ಅರಿತುಕೊಳ್ಳುತ್ತಾನೆ. ಹೀಗೆ ಅವನು ತನ್ನ ಮನೆಯನ್ನು ತ್ಯಜಿಸುತ್ತಾನೆ ಮತ್ತು ತನ್ನ ಹೃದಯದೊಳಗೆ ಪೂರ್ಣವಾಗಿ ದೇವೋತ್ತಮ ಪರಮ ಪುರುಷನ ಮೇಲೆ ಅವಲಂಬಿತನಾಗುತ್ತಾನೆ. ಆದುದರಿಂದ, ದಯೆಯಿಟ್ಟು, ನಿನ್ನ ಬಂಧುಗಳಿಗೆ ತಿಳಿಯದಂತೆ ಈ ಕೂಡಲೇ ಉತ್ತರದತ್ತ ಹೊರಟು ಬಿಡು.”
ಸಾಕ್ಷಾತ್ಕಾರದತ್ತ…
ಧೃತರಾಷ್ಟ್ರನಿಗೆ ತನ್ನ ನಿಲವು ತೆಗೆದುಕೊಳ್ಳುವ ಕಾಲ ಬಂದಿತು. ಆಸ್ಥಾನದಲ್ಲಿ ಅವನ ಸ್ಥಾನವು ನೈತಿಕವಾಗಿ ಸಮರ್ಥನೀಯವಲ್ಲ ಎನ್ನುವುದನ್ನು ನಿರಾಕರಿಸುತ್ತ ಅವನು ತನ್ನ ಜೀವನವನ್ನು ವ್ಯರ್ಥಗೊಳಿಸುತ್ತ ಹೋಗುವನಾ? ಅಥವಾ ಅವನು ತನ್ನ ಜೀವನದ ಕೊನೆಯ ದಿನಗಳಲ್ಲಿ ತನ್ನ ಕಳಂಕಿತ ವೌಲ್ಯಗಳನ್ನು ಪರಿಷ್ಕರಿಸುತ್ತಾನಾ? ಒಬ್ಬ ವ್ಯಕ್ತಿಯು ತನ್ನ ಜೀವನದ ಕೊನೆಯ ದಿನಗಳನ್ನು ಆತ್ಮ ಸಾಕ್ಷಾತ್ಕಾರ ಮತ್ತು ಮುಕ್ತಿಯನ್ನು ಪಡೆಯುವ ಏಕೈಕ ಉದ್ದೇಶಕ್ಕಾಗಿ ಇಡಬೇಕೆನ್ನುವುದು ವೈದಿಕ ನಾಗರಿಕತೆಯ ಸಾಮಾನ್ಯ ಆಚರಣೆ. ಆದುದರಿಂದ ವಿದುರನ ಬುದ್ಧಿವಾದವು ಈಗ ಇರಬಹುದಾಗಿದ್ದಕ್ಕಿಂತ ಹೆಚ್ಚು ತೂಕವನ್ನು ಹೊಂದಿತ್ತು.
ವಿದುರನು ಧೃತರಾಷ್ಟ್ರನ ಬಗೆಗೆ ನಿಜವಾಗಿಯೂ ಕರುಣೆ ಹೊಂದಿದ್ದ, ಅವನ ಮಾತುಗಳು ಅನೇಕ ವರ್ಷಗಳಿಂದ ಕತ್ತಲಿನಿಂದ ಕಾಡುತ್ತಿದ್ದ ಅವನ ಬುದ್ಧಿ, ಪ್ರಜ್ಞೆಯನ್ನು ಬೆಳಗಿಸಿತು, ಪ್ರಕಾಶಗೊಳಿಸಿತು. ಧೃತರಾಷ್ಟ್ರನು ವಿದುರ ಹೇಳಿದ್ದರಲ್ಲಿ ನಿಜವನ್ನು ಕಂಡುಕೊಂಡ. ಅಭೂತಪೂರ್ವ ದೃಢ ಸಂಕಲ್ಪವನ್ನು ತೋರುತ್ತ ಅವನು ಯಾವುದೇ ಆಡಂಬರವಿಲ್ಲದೆ ತನ್ನ ಏಕಾಂತ ಪಥದಲ್ಲಿ ಸಾಗಿಬಿಟ್ಟನು. ಅವನು ಹೇಳದಿದ್ದರೂ ಗಾಂಧಾರಿಯು ಪತಿನಿಷ್ಠೆ ತೋರಿ ಅವನನ್ನು ಅನುಸರಿಸಿದಳು.
ಅವರು ಹಿಮಾಲಯದ ಉತ್ತರ ಭಾಗದ ಸಪ್ತಸ್ತೋತ್ರಃ ಎಂಬ ಸ್ಥಳಕ್ಕೆ ಬಂದರು. ಈ ಸ್ಥಳದಲ್ಲಿ ಗಂಗಾ ನದಿಯು ಏಳು ಭಾಗವಾಗುತ್ತದೆ. ಅಲ್ಲಿ ಧೃತರಾಷ್ಟ್ರನು ದಿನಕ್ಕೆ ಮೂರು ಬಾರಿ ಸ್ನಾನ ಮಾಡುತ್ತ, ಯಜ್ಞ ನೆರವೇರಿಸುತ್ತ ಮತ್ತು ಜಲವನ್ನು ಮಾತ್ರ ಕುಡಿಯುತ್ತ ಯೋಗವನ್ನು ಆಚರಿಸಿದನು. ಈ ರೀತಿಯಲ್ಲಿ ಅವನಿಗೆ ತನ್ನ ಮನಸ್ಸಿನ ನಿಗ್ರಹ ಮತ್ತು ಕೌಟುಂಬಿಕ ಜೀವನದ ಯೋಚನೆಗಳಿಂದ ಅದನ್ನು ಮುಕ್ತಗೊಳಿಸುವುದು ಸಾಧ್ಯವಾಯಿತು. ಲೌಕಿಕ ಆಸೆಗಳ ಪೆಟ್ಟಿಗೆಗೆ ಬೀಗ ಹಾಕಿ ಮತ್ತು ಬೀಗದ ಕೈಯನ್ನು ಬಿಸಾಕುವುದು ಅವನಿಗೆ ಸಾಧ್ಯವಾಯಿತು. ಹೀಗೆ ಅವನು ಇತರರ ಜೀವನದೊಂದಿಗೆ ದೇವರಾಟ ಆಡುವುದರಿಂದ ಮುಕ್ತನಾದ.
ಬಹಳ ಹಿಂದೆ, ದೇವೋತ್ತಮ ಕೃಷ್ಣನೊಂದಿಗೆ ಸಹಕರಿಸಲು ನಿರಾಕರಿಸಿದಾಗ, ಧೃತರಾಷ್ಟ್ರನು ತನ್ನ ಆಧ್ಯಾತ್ಮಿಕ ಗುರುತನ್ನು ಮುಚ್ಚುವಂತೆ ಹುಸಿ ಅಹಂಕಾರವನ್ನು ಹೆಚ್ಚಿಸಿಕೊಂಡಿದ್ದ. ಈಗ, ಯೋಗ ವಿಧಾನದಿಂದ ಅವನು ತನ್ನೆಲ್ಲ ಇಂದ್ರಿಯಗಳನ್ನು ಭಗವಂತನಲ್ಲಿ ಕೇಂದ್ರೀಕರಿಸುವುದನ್ನು ಅರಿತುಕೊಂಡನು ಮತ್ತು ತಾನು ದೇವರ ಶಾಶ್ವತ ಸೇವಕ ಎನ್ನುವುದನ್ನು ತಿಳಿದುಕೊಂಡನು. ಹೀಗೆ ಅವನು ತನ್ನ ಸೋದರ ವಿದುರನ ಕೃಪೆಯಿಂದ ಅಧಿಕಾರ ಮತ್ತು ಸಂಪತ್ತಿಗೆ ಹಾತೊರೆಯುವ ಲೌಕಿಕ ಪ್ರವೃತ್ತಿಗಳಿಂದ ಮುಕ್ತನಾದ ಮತ್ತು ತನ್ನ ಆಧ್ಯಾತ್ಮಿಕ ಗುರುತನ್ನು ಪಡೆದುಕೊಂಡ. ವಿದುರನನ್ನು ಕಳುಹಿಸುವ ಮೂಲಕ ಕೃಷ್ಣನು ಧೃತರಾಷ್ಟ್ರನಿಗೆ ಕರುಣೆ ತೋರಿದ ಮತ್ತು ವೃದ್ಧ ರಾಜನು ನಿಜವಾಗಿಯೂ ವಿದುರನ ಬೋಧನೆಯನ್ನು ಅನುಸರಿಸುತ್ತಿದ್ದಾಗ, ಅವನು ಅತ್ಯುನ್ನತ ಪರಿಪೂರ್ಣ ಹಂತವನ್ನು ಪಡೆಯಲು ಭಗವಂತನು ನೇರವಾಗಿ ಸಹಾಯ ಮಾಡಿದ.
ಕೆಲ ಸಮಯದ ಅನಂತರ ಧೃತರಾಷ್ಟ್ರನು ತನ್ನ ಯೋಗಶಕ್ತಿಯಿಂದ ತನ್ನ ದೇಹವನ್ನು ತ್ಯಜಿಸಿದ ಮತ್ತು ಅವನ ದೇಹವು ಸುಟ್ಟು ಬೂದಿಯಾಯಿತು. ಈ ರೀತಿ, ಗೌರವದಿಂದ ಬಾಳಲಾರದ ರಾಜನು ಗೌರವಯುತ ಸಾವನ್ನಪ್ಪಿದ. ಶ್ರೀ ಕೃಷ್ಣನ ಭಕ್ತನ ಕೃಪೆಯಿಂದ ಅವನಿಗೆ ಅವನ ಜೀವನವನ್ನು ಯಶಸ್ಸುಗೊಳಿಸುವುದು ಸಾಧ್ಯವಾಯಿತು.
ಕೃಷ್ಣನು ಎಲ್ಲರಿಗೂ, ಎಲ್ಲೆಲ್ಲಿಯೂ ಕರುಣಾಕರ. ಆದುದರಿಂದ ಪ್ರಸ್ತುತ ಸಮಾಜದ ನಾಯಕರು ಕೂಡ ಅಂಧ ರಾಜನಷ್ಟೇ ಕೃಷ್ಣನ ಕರುಣೆಯ ಲಾಭವನ್ನು ಪಡೆದುಕೊಳ್ಳಬಹುದು. ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಆಧುನಿಕ ವಿದುರರು ಮತ್ತು ಭಗವಂತನ ನಾಮಗಳ ಜಪವು ಆಧುನಿಕ ಯೋಗ ವಿಧಾನವಾಗಿದೆ.






Leave a Reply