ನಳಕೂವರ ಮತ್ತು ಮಣಿಗ್ರೀವ

ಒಮ್ಮೆ ಮನೆಯ ಕೆಲಸದವಳು ಬೇರೆ ಕೆಲಸಗಳಲ್ಲಿ ನಿರತಳಾಗಿದ್ದುದನ್ನು ಕಂಡು ತಾಯಿ ಯಶೋದೆಯೇ ಬೆಣ್ಣೆಯನ್ನು ಕಡೆಯುವ ಕೆಲಸಕ್ಕೆ ನಿಂತಳು. ಬೆಣ್ಣೆಯನ್ನು ಕಡೆಯುವಾಗಲೇ ಅವಳು ಕೃಷ್ಣನ ಲೀಲೆಗಳನ್ನು ಕುರಿತು  ಹಾಡುತ್ತ  ತನ್ನ ಮಗನನ್ನು ಕುರಿತು ಯೋಚನೆ ಮಾಡುತ್ತ ಸಂತೋಷವಾಗಿದ್ದಳು.

ಕಡೆಯುತ್ತಿರುವಾಗ ಅವಳ ಸೀರೆಯ ಸೆರಗನ್ನು ಬಿಗಿಯಾಗಿ ಕಟ್ಟಿಕೊಂಡಿದ್ದಳು. ಅವಳ ಕೈಗಳ ಬಳೆಗಳೂ ಕಡಗಗಳೂ ಒಂದನ್ನೊಂದು ತಾಕಿದಾಗ ಜಣಜಣ ಶಬ್ದ ಮಾಡುತ್ತಿದ್ದವು. ಅವಳ ಮುಖದ ಮೇಲೆ ಬೆವರಿನ ಹನಿಗಳಿದ್ದವು. ಅವಳ ಮುಡಿಯ ಮಾಲೆಯ ಹೂವುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಈ ಸುಂದರ ದೃಶ್ಯದಲ್ಲಿ ಮಗುವಾಗಿ ಕೃಷ್ಣನು ಬಂದನು. ಅವನಿಗೆ ಹಸಿವಾಗಿತ್ತು. ಅಲ್ಲದೆ ತನ್ನ ತಾಯಿಯ ಪ್ರೀತಿಯನ್ನು ಹೆಚ್ಚಿಸಲು ಅವಳು ಕಡೆಯುವುದನ್ನು ನಿಲ್ಲಿಸಲು ಬಯಸಿದ. ಮೊದಲು ಅವಳು ತನಗೆ ಎದೆಹಾಲನ್ನು ಕೊಡಬೇಕು, ಅನಂತರ ಬೆಣ್ಣೆಯನ್ನು ಕಡೆಯುವ ಕೆಲಸ ಎಂದು ಸೂಚಿಸಿದ.

ತಾಯಿ ಯಶೋದೆಯು ಅವನನ್ನು ತೊಡೆಯಮೇಲೆ ಮಲಗಿಸಿಕೊಂಡು ತನ್ನ ಸ್ತನಗಳ ಚೂಚುಕಗಳನ್ನು ಅವನ ಬಾಯಿಗಿಟ್ಟಳು. ಕೃಷ್ಣನು ಎದೆಹಾಲನ್ನು ಕುಡಿಯುತ್ತಿದ್ದಾಗ ಅವಳು ತನ್ನ ಮಗುವಿನ ಮುಖದ ಚೆಲುವನ್ನು ಸವಿಯುತ್ತ  ಮುಗುಳ್ನಗೆ ನಗುತ್ತಿದ್ದಳು. ಇದ್ದಕ್ಕಿದ್ದಂತೆ ಒಲೆಯ ಮೇಲಿದ್ದ ಹಾಲು ಉಕ್ಕಿ ಹರಿಯಲು ಪ್ರಾರಂಭವಾಯಿತು. ಅದನ್ನು ತಡೆಯಲು ತಾಯಿ ಯಶೋದೆಯು ಕೃಷ್ಣನನ್ನು ಕೆಳಗೆ ಮಲಗಿಸಿ ಒಲೆಯ ಬಳಿಗೆ ಹೋದಳು. ತಾಯಿಯು ಹೀಗೆ ಬಿಟ್ಟು ಹೋದದ್ದರಿಂದ ಕೃಷ್ಣನಿಗೆ ಕೋಪ ಬಂದಿತು. ಸಿಟ್ಟಿನಿಂದ ಅವನ ಕಣ್ಣುಗಳು, ತುಟಿಗಳು ಕೆಂಪಾದವು. ಅವುಡುಗಚ್ಚಿ ಅವನು ಒಂದು ಕಲ್ಲನ್ನು ತೆಗೆದುಕೊಂಡು ಬೆಣ್ಣೆಯ ಮಡಕೆಯನ್ನು ಒಡೆದನು. ಅದರಿಂದ ಬೆಣ್ಣೆಯನ್ನು  ತೆಗೆದುಕೊಂಡು  ಸುಳ್ಳು  ಕಂಬನಿಗಳನ್ನು  ಸುರಿಸುತ್ತ  ಯಾರೂ  ಇಲ್ಲದ  ಸ್ಥಳದಲ್ಲಿ ಬೆಣ್ಣೆಯನ್ನು ತಿನ್ನಲಾರಂಭಿಸಿದನು.

ಆ ಹೊತ್ತಿಗೆ ತಾಯಿ ಯಶೋದೆಯು ಉಕ್ಕುತ್ತಿದ್ದ ಹಾಲಿನ ಪಾತ್ರೆಯನ್ನು ಸರಿಮಾಡಿ ಬೆಣ್ಣೆಯನ್ನು ಕಡೆಯುತ್ತಿದ್ದ  ಸ್ಥಳಕ್ಕೆ  ಹಿಂದಿರುಗಿದಳು. ಕಡೆಯಲು ಮೊಸರನ್ನಿಟ್ಟಿದ್ದ  ಮಡಕೆಯು ಒಡೆದುಹೋಗಿದ್ದುದನ್ನು ನೋಡಿದಳು. ತನ್ನ ಮಗನು ಕಾಣದಿದ್ದುದರಿಂದ ಮಡಕೆಯನ್ನು  ಒಡೆದದ್ದು  ಅವನ  ಕೆಲಸವೇ  ಎಂದು  ತೀರ್ಮಾನಿಸಿದಳು  “ಮಗು  ಬಹಳ ಬುದ್ಧಿವಂತ, ಮಡಕೆಯನ್ನು ಒಡೆದು ಶಿಕ್ಷೆಯಾಗುವುದೆಂದು ಹೆದರಿ ಸ್ಥಳವನ್ನು ಬಿಟ್ಟುಹೋಗಿದ್ದಾನೆ” ಎಂದು ಯೋಚಿಸುತ್ತಿದ್ದಾಗ ಅವಳಿಗೆ ಮುಗುಳ್ನಗೆ ಬಂದಿತು. ಎಲ್ಲ ಕಡೆಯೂ ಹುಡುಕಿದ ಮೇಲೆ ತಲೆಕೆಳಗಾಗಿದ್ದ ಒಂದು ಮರದ ಒರಳುಕಲ್ಲು ನೋಡಿದಳು. ತನ್ನ ಮಗನು ಅದರ ಮೇಲೆ ಕುಳಿತಿದ್ದುದನ್ನು ನೋಡಿದಳು. ಅವನು ಚಾವಣಿಯಿಂದ ತೂಗುಹಾಕಿದ್ದ ಪಾತ್ರೆಯಿಂದ ಬೆಣ್ಣೆಯನ್ನು ತೆಗೆದು ಕೋತಿಗಳಿಗೆ ಕೊಡುತ್ತಿದ್ದ. ತಾನು ತುಂಟತನ ಮಾಡುತ್ತಿದ್ದೇನೆ ಎಂದು ಗೊತ್ತಿದ್ದುದರಿಂದ ಕೃಷ್ಣನು ಅತ್ತಿತ್ತ ನೋಡುತ್ತಿದ್ದುದನ್ನು ಅವಳು ಕಂಡಳು. ತನ್ನ ಮಗನ ಚರ್ಯೆಯನ್ನು ಕಂಡ ಯಶೋದೆಯು ಸದ್ದಿಲ್ಲದೆ ಹಿಂದಿನಿಂದ ಅವನ ಬಳಿಗೆ ಹೋದಳು. ಆದರೆ ಕೃಷ್ಣನು ಅವಳು ಕೈಯಲ್ಲಿ ಕೋಲನ್ನು ಹಿಡಿದುಕೊಂಡು ಸರಸರನೆ ಬರುತ್ತಿದ್ದುದನ್ನು ನೋಡಿದ. ಕೂಡಲೇ ಅವನು ಇಳಿದು ಭಯದಿಂದ ಓಡಿದ.

ಆದರೆ  ತೆಳು ನಡುವು ಮತ್ತು ಭಾರವಾದ ದೇಹದಿಂದ ತಾಯಿ ಯಶೋದೆಯು ವೇಗವಾಗಿ ಓಡುತ್ತಿದ್ದ ಮಗುವನ್ನು ಸುಲಭವಾಗಿ ಹಿಡಿಯಲು ಸಾಧ್ಯವಾಗಲಿಲ್ಲ. ಆದರೂ ಆದಷ್ಟು ವೇಗವಾಗಿ ಅವನ ಹಿಂದೆ ಓಡಲು ಪ್ರಯತ್ನಿಸಿದಳು. ಅವಳ ಕೂದಲು ಸಡಿಲವಾಗಿ ಮುಡಿದಿದ್ದ ಹೂಗಳೆಲ್ಲ ಕೆಳಕ್ಕೆ ಬಿದ್ದವು. ಅವಳಿಗೆ ಆಯಾಸವಾಗಿದ್ದರೂ ಹೇಗೋ ತನ್ನ ಮಗುವನ್ನು ಹಿಡಿದಳು. ಅವಳ ಕೈಗೆ ಸಿಕ್ಕಿದಾಗ ಕೃಷ್ಣನು ಅಳುವುದರಲ್ಲಿದ್ದ. ಕಪ್ಪು ಕಾಡಿಗೆಯನ್ನು ಹಚ್ಚಿದ್ದ ಕಣ್ಣುಗಳನ್ನು ಉಜ್ಜಿಕೊಂಡ. ತಾಯಿಯು ತನ್ನ ಬಳಿ ನಿಂತಿದ್ದಾಗ ಮಗುವು ಅವಳ ಮುಖವನ್ನು ನೋಡಿದ. ಭಯದಿಂದ ಕಣ್ಣುಗಳನ್ನು ಅತ್ತ ಇತ್ತ ಆಡಿಸಲು ಪ್ರಾರಂಭಿಸಿದ. ಕೃಷ್ಣನು ಅನಗತ್ಯವಾಗಿ ಭಯಪಟ್ಟಿದ್ದಾನೆ ಮತ್ತು ಅವನ ಒಳಿತಿಗಾಗಿಯೇ ಅವನ ಭಯವನ್ನು ನಿವಾರಿಸಬೇಕು ಎಂದು ಯಶೋದೆಗೆ ತಿಳಿಯಿತು.

ತನ್ನ ಮಗುವಿನ ಅತ್ಯಂತ ಪ್ರೀತಿಯ ಹಿತೈಷಿಯಾಗಿ ತಾಯಿ ಯಶೋದೆಯು, “ಮಗುವು ನನ್ನನ್ನು ಕಂಡು ಹೆದರಿಕೊಂಡರೆ ಅವನಿಗೆ ಏನಾಗುವುದೊ ನನಗೆ ತಿಳಿಯದು” ಎಂದು ಯೋಚಿಸಿದಳು. ತಾಯಿ ಯಶೋದೆಯು ತನ್ನ ಕೋಲನ್ನು ಬಿಸುಟಳು. ಅವನಿಗೆ ಶಿಕ್ಷೆ ಮಾಡಲು ಅವನ ಕೈಗಳನ್ನು ಹಗ್ಗದಿಂದ ಕಟ್ಟಿಹಾಕಲು ಯೋಚಿಸಿದಳು.  ದೇವೋತ್ತಮ ಪರಮ ಪುರುಷನ ಕೈಯನ್ನು ಕಟ್ಟುವುದು ಅವಳಿಗೆ ಸಾಧ್ಯವೇ ಇರಲಿಲ್ಲ. ಆದರೆ ಅದು ಅವಳಿಗೆ ತಿಳಿದಿರಲಿಲ್ಲ. ತಾಯಿ ಯಶೋದೆಯು ಕೃಷ್ಣನು ತನ್ನ ಪುಟ್ಟ ಮಗು ಎಂದು ಭಾವಿಸಿದ್ದಳು. ಆದರೆ ಮಗುವಿಗೆ ಯಾವ ಮಿತಿಗಳೂ ಇರಲಿಲ್ಲ ಎನ್ನುವುದು ಅವಳಿಗೆ ತಿಳಿಯಲಿಲ್ಲ. ಆದರೂ ತಾಯಿ ಯಶೋದೆಯು ಕೃಷ್ಣನು ತನ್ನ ಮಗುವೆಂದು ಭಾವಿಸಿದ್ದಳು. ಅವನನ್ನು ಯಾವ ಇಂದ್ರಿಯಗಳೂ ಮುಟ್ಟಲಾರವು. ಆದರೂ ಅವಳು ಅವನನ್ನು ಒರಳಿಗೆ ಕಟ್ಟಿಹಾಕಲು ಪ್ರಯತ್ನಿಸಿದಳು. ಆದರೆ ಅವನನ್ನು ಕಟ್ಟಿಹಾಕಲು ಪ್ರಯತ್ನಿಸಿದಾಗ ತನ್ನ ಕೈಲಿದ್ದ ಹಗ್ಗವು ಎರಡು ಅಂಗುಲಗಳಷ್ಟು ಸಾಲದೆ ಬರುತ್ತದೆ ಎನ್ನುವುದನ್ನು ಕಂಡಳು.

ಮನೆಯಲ್ಲಿದ್ದ ಇನ್ನಷ್ಟು ಹಗ್ಗವನ್ನು ಅದಕ್ಕೆ ಸೇರಿಸಿದಳು. ಆದರೆ ಕಡೆಯಲ್ಲಿ ಅದೇ ಪರಿಣಾಮವಾಯಿತು. ಈ ರೀತಿಯಲ್ಲಿ ಮನೆಯಲ್ಲಿದ್ದ ಹಗ್ಗವನ್ನೆಲ್ಲ ಸೇರಿಸಿದಳು. ಆದರೆ ಕಡೆಯ ಗಂಟು ಹಾಕುವ ವೇಳೆಗೆ ಮತ್ತೆ ಎರಡು ಅಂಗುಲ ಸಾಲದಾಯಿತು ಎನ್ನುವುದನ್ನು ಕಂಡಳು. ತಾಯಿ ಯಶೋದೆಯು ನಸುನಗುತ್ತಿದ್ದರೂ ಅವಳಿಗೆ ಆಶ್ಚರ್ಯವಾಯಿತು. ಇದಾದದ್ದು ಹೇಗೆ? ಮಗುವನ್ನು ಕಟ್ಟಿಹಾಕಲು ಹೆಣಗುತ್ತ ಅವಳಿಗೆ ಆಯಾಸವಾಯಿತು. ಅವಳು ಬೆವರುತ್ತಿದ್ದಳು. ಅವಳ ಮುಡಿಯ ಹಾರ ಕೆಳಕ್ಕೆ ಬಿದ್ದಿತು. ಶ್ರೀಕೃಷ್ಣನು ತನ್ನ ತಾಯಿಯ ಶ್ರಮವನ್ನು ಗ್ರಹಿಸಿದನು. ಅವಳ ವಿಷಯದಲ್ಲಿ ಮರುಕವಾಯಿತು. ಹಗ್ಗಗಳಿಂದ ಕಟ್ಟಿಸಿಕೊಳ್ಳಲು ಅವನು ಒಪ್ಪಿದನು.

ತನ್ನ ಮಗನನ್ನು ಕಟ್ಟಿಹಾಕಿ ತಾಯಿ ಯಶೋದೆಯು ಮನೆಗೆಲಸದಲ್ಲಿ ನಿರತಳಾದಳು. ಒರಳು ಕಲ್ಲಿಗೆ ಕಟ್ಟಿಹಾಕಿದ್ದ ಕೃಷ್ಣನು ಅರ್ಜುನ ವೃಕ್ಷಗಳೆಂಬ ಎರಡು ಮರಗಳನ್ನು ಹತ್ತಿರದಲ್ಲಿಯೇ ಕಂಡನು. ಆನಂದಸಾಗರನಾದ ಶ್ರೀಕೃಷ್ಣನು, “ತಾಯಿ ಯಶೋದೆಯು ಮೊದಲಾಗಿ ನನಗೆ ಸಾಕಷ್ಟು ಹಾಲನ್ನು ಕೊಡದೆ ಹೊರಟುಹೋದಳು. ಆದುದರಿಂದ ನಾನು ಮೊಸರಿನ ಗಡಿಗೆಯನ್ನು ಒಡೆದು ಇದ್ದ ಬೆಣ್ಣೆಯನ್ನು ಕೋತಿಗಳಿಗೆ ದಾನ ಮಾಡಿಬಿಟ್ಟೆ. ಈಗ ಅವಳು ನನ್ನನ್ನು ಒರಳುಕಲ್ಲಿಗೆ ಕಟ್ಟಿಹಾಕಿದ್ದಾಳೆ. ಆದುದರಿಂದ ನಾನು ಮೊದಲಿಗಿಂತ ಹೆಚ್ಚಿನ ಚೇಷ್ಟೆಯನ್ನು ಮಾಡುತ್ತೇನೆ” ಹೀಗೆಂದು ಅವನು ಎತ್ತರವಾಗಿದ್ದ ಆ ಎರಡು ಅರ್ಜುನ ವೃಕ್ಷಗಳನ್ನು ಕೆಳಕ್ಕುರುಳಿಸಲು ಯೋಚಿಸಿದನು.

ಮಗು ಕೃಷ್ಣನನ್ನು ಒರಳುಕಲ್ಲಿಗೆ ಕಟ್ಟಿಹಾಕಿದ್ದರೂ ಅವನು, ಬೆಳೆಯುತ್ತಿದ್ದ ಮರಗಳತ್ತ ನಡೆಯಲು ಪ್ರಾರಂಭಿಸಿದನು. ಅನಂತರ ಆ ಎರಡು ಮರಗಳ ನಡುವೆ ಇದ್ದ ಸ್ಥಳದಲ್ಲಿ ಮುನ್ನಡೆಯಲು ಪ್ರಾರಂಭಿಸಿದ. ಅವನು ಎರಡು ಮರಗಳ ನಡುವೆ ದಾಟಲು ಸಾಧ್ಯವಾಯಿತಾದರೂ ದೊಡ್ಡ ಒರಳು ಕಲ್ಲು ಮರಗಳ ನಡುವೆ ಅಡ್ಡಡ್ಡಲಾಗಿ ಸಿಕ್ಕಿಕೊಂಡಿತು.

ಇದನ್ನು ಬಳಸಿಕೊಂಡು ಶ್ರೀಕೃಷ್ಣನು ಒರಳು ಕಲ್ಲಿಗೆ ಕಟ್ಟಿದ್ದ ಹಗ್ಗವನ್ನು ಎಳೆಯಲು ಪ್ರಾರಂಭಿಸಿದ. ಬಹು ಬಲವಾಗಿ ಅವನು ಎಳೆಯುತ್ತಲೇ ಎರಡು ಮರಗಳು ಕೊಂಬೆಗಳು ಮತ್ತು ಎಲ್ಲ ಭಾಗಗಳ ಸಹಿತವಾಗಿ ದೊಡ್ಡ ಶಬ್ದ ಮಾಡುತ್ತ ನೆಲಕ್ಕೆ ಉರುಳಿದವು. ಮುರಿದು ಬಿದ್ದ ಮರಗಳಿಂದ ಪ್ರಜ್ವಲಿಸುವ ಬೆಂಕಿಯಂತೆ ತೇಜಸ್ವಿಗಳಾಗಿದ್ದ ಇಬ್ಬರು ವ್ಯಕ್ತಿಗಳು ಹೊರಬಂದರು.  ಅವರ  ಇರವಿನಿಂದ  ಎಲ್ಲ  ದಿಕ್ಕುಗಳೂ  ಬೆಳಕಾಗಿ  ಸುಂದರವಾದವು.  ಅವರೇ ನಳಕೂವರ ಮತ್ತು ಮಣಿಗ್ರೀವ ಎಂಬ ದೇವತೆಗಳು. ಅವರು ನಾರದರ ಶಾಪದಿಂದ ಮರವಾಗಿದ್ದರು. ಪರಿಶುದ್ಧತೆಯನ್ನು ಪಡೆದ ಆ ಇಬ್ಬರೂ ಮಗು ಕೃಷ್ಣನ ಬಳಿಗೆ ಬಂದು ತಲೆಬಾಗಿ ತಮ್ಮ ಭಕ್ತಿಯನ್ನು ಪ್ರಾರ್ಥನೆಯನ್ನು  ಸಲ್ಲಿಸಿದರು.

ಈ ಲೇಖನ ಶೇರ್ ಮಾಡಿ