ಬ್ರಹ್ಮನ ಆಯುಸ್ಸು

ಪದ್ಮಪುರಾಣದ ಸೃಷ್ಟಿ ಖಂಡ, ಅಧ್ಯಾಯ 3 ರಿಂದ ಆಯ್ದ ಮಾಹಿತಿ.

ನಮ್ಮ ಲೆಕ್ಕಾಚಾರದಲ್ಲಿ ತುಂಬ ದೊಡ್ಡ ಆಯಸ್ಸನ್ನು ಹೊಂದಿರುವ ಶ್ರೀ ಬ್ರಹ್ಮದೇವನನ್ನು ಪರೋಕ್ಷವಾಗಿ ಶಾಶ್ವತ ಎಂದು ವರ್ಣಿಸಲಾಗುತ್ತದೆ. ಮತ್ತು ಅವನದೇ ಅಳತೆ ಅಥವಾ ಮಾಪನದಲ್ಲಿ ಹೇಳುವುದಾದರೆ ಅವನ ಜೀವಿತಾವಧಿಯು ಒಂದು ನೂರು ವರ್ಷ.

ಆ ನೂರು ವರ್ಷದ ಕಾಲವನ್ನು ಪರ ಎನ್ನುತ್ತಾರೆ; ಅದರ ಅರ್ಧವನ್ನು ಪರಾರ್ಧ ಎಂದು ಹೇಳುತ್ತಾರೆ. 15 ನಿಮೇಷಗಳು (= ಕಣ್ಣು ಮಿಟಿಕಿಸುವಿಕೆ) ಒಂದು ಕಾಷ್ಠಾ ಆಗುತ್ತದೆ.

30 ಕಲಾಗಳು ಒಂದು ಕಾಷ್ಠಾ ಆಗುತ್ತವೆ. (ಕಾಷ್ಠಾವನ್ನು ನಿಮಿಷ ಎಂದೂ ಕರೆಯುತ್ತಾರೆ). ಈ (ಕಾಷ್ಠಾ) ಅವಧಿಯನ್ನು ಮುಹೂರ್ತ ಎಂದೂ ಕರೆಯುತ್ತಾರೆ. 30 ಮುಹೂರ್ತಗಳು ಸೇರಿ ಮಾನವನ ಹಗಲು ಮತ್ತು ರಾತ್ರಿಯಾಗುತ್ತದೆ. (ಎರಡನ್ನೂ ಸೇರಿಸಿ).

30 ಹಗಲು ಮತ್ತು ರಾತ್ರಿಗಳು ಒಂದು ತಿಂಗಳಾಗುತ್ತವೆ, ಅದರಲ್ಲಿ ಎರಡು ಪಕ್ಷಗಳಿರುತ್ತವೆ. ಆರು ತಿಂಗಳು ಸೇರಿ ಒಂದು ಅಯನವಾಗುತ್ತದೆ. ಮತ್ತು ಒಂದು ವರ್ಷದಲ್ಲಿ ಎರಡು ಅಯನಗಳಿರುತ್ತವೆ, ಅವುಗಳೆಂದರೆ ದಕ್ಷಿಣ ಮತ್ತು ಉತ್ತರ.

ದಕ್ಷಿಣಾಯಣವು ದೇವತೆಗಳ ರಾತ್ರಿ ಮತ್ತು ಉತ್ತರಾಯಣವು ಅವರ ಹಗಲು. ಕೃತ, ತ್ರೇತಾ ಮುಂತಾದ ನಾಲ್ಕು ಯುಗಗಳು ಕಟ್ಟು, ಎಂದರೆ ಚತುರ್ಯುಗವು 12,000 ದಿವ್ಯ ವರ್ಷಗಳಿಂದ ರೂಪುಗೊಳ್ಳುತ್ತವೆ.

ಕೃತ ಯುಗದ ಅವಧಿ 4000 ದಿವ್ಯ ವರ್ಷಗಳು. ತ್ರೇತಾ ಯುಗದ ಅವಧಿ 3000 ವರ್ಷಗಳು. ದ್ವಾಪರ 2000, ಮತ್ತು ಕಲಿ 1000 ದಿವ್ಯ ವರ್ಷಗಳು.

ಸಂಧ್ಯಾ ಎಂಬ ಅವಧಿಯು ಪ್ರತಿ ಯುಗದ ಆರಂಭದಲ್ಲಿ ಬರುತ್ತದೆ. ಸಂಧ್ಯಾಂಶ ಎಂಬ ಅವಧಿ ಪ್ರತಿ ಯುಗದ ಅಂತ್ಯದಲ್ಲಿ ಬರುತ್ತದೆ. ಇವೆರಡರ ಅವಧಿ ಒಂದೇ.

ಕೃತ ಯುಗದ ಸಂಧ್ಯಾ – 400 ದಿವ್ಯ ವರ್ಷಗಳು, ಮತ್ತು ಅದರ ಸಂಧ್ಯಾಂಶ – 400 ದಿವ್ಯ ವರ್ಷ.

ತ್ರೇತಾ ಸಂಧ್ಯಾ – 300, ಸಂಧ್ಯಾಂಶ – 300
ದ್ವಾಪರ ಸಂಧ್ಯಾ – 200, ಸಂಧ್ಯಾಂಶ – 200
ಕಲಿ ಸಂಧ್ಯಾ – 100, ಸಂಧ್ಯಾಂಶ – 100

ಸಾವಿರ ಚತುರ್ಯುಗಗಳು ಸೇರಿ, ಬ್ರಹ್ಮನ ಒಂದು ದಿನವೆಂದು ಹೇಳಲಾಗಿದೆ.
ಬ್ರಹ್ಮನ ಒಂದು ದಿನದಲ್ಲಿ 14 ಮನುಗಳಿದ್ದಾರೆ.

ಏಳು ಋಷಿಗಳು, ಇಂದ್ರ, ಮನು ಮತ್ತು ಅವನ ಪುತ್ರರನ್ನು ಏಕ ಕಾಲದಲ್ಲಿ ಸೃಷ್ಟಿಸಲಾಗುತ್ತದೆ ಮತ್ತು ಅದೇ ರೀತಿ ಹಿಂಪಡೆಯಲಾಗುತ್ತದೆ (ಅಂದರೆ ಒಂದೇ ಕಾಲದಲ್ಲಿ).

ಮನು ಮತ್ತು ದೇವತೆಗಳ ಕಾಲವನ್ನು ಮನ್ವಂತರ ಎಂದು ಕರೆಯುತ್ತಾರೆ ಮತ್ತು ಅದು 71 ಒಂದು ಚತುರ್ಯುಗಗಳ ಅವಧಿ.

ಈ ಅವಧಿಯು 8,52,000 ದಿವ್ಯ ವರ್ಷ ಎಂದು ಹೇಳಲಾಗಿದೆ.

ಅಂದರೆ, ಒಂದು ಮನ್ವಂತರದಲ್ಲಿ 30,67,20,000 ಮಾನವ ವರ್ಷಗಳಿರುತ್ತದೆ.
ಈ ಅವಧಿಯ 14 ಪಟ್ಟು ಬ್ರಹ್ಮನ ಒಂದು ದಿನ. ಬ್ರಹ್ಮನ ಒಂದು ದಿನಕ್ಕೆ ಕಲ್ಪ ಎಂದು ಹೆಸರು.

ಈ ದಿನದ ಅಂತ್ಯದಲ್ಲಿ ಬ್ರಹ್ಮನ ಸೃಷ್ಟಿಯ ಮರುಲೀನತೆ, ನೈಮಿತ್ತಿಕವಿರುತ್ತದೆ. ಆ ಸಮಯುದಲ್ಲಿ ಭೂ, ಭುವದಂತಹ ಮೂರೂ ಲೋಕಗಳು ನಾಶವಾಗುತ್ತವೆ. ಮಹರ್ಲೋಕ ನಿವಾಸಿಗಳು ತಾಪವನ್ನು ಸಹಿಸಲಾರದೆ ಜನ ಲೋಕಕ್ಕೆ ಹೋಗುತ್ತಾರೆ. ಮೂರೂ ಲೋಕಗಳು ಜಲಮಯವಾದಾಗ, ಸರ್ಪಶಯ್ಯೆಯಲ್ಲಿ ಮಲಗುತ್ತಾನೆ.

ಅದೇ ಮಾಪನದ (ಹಗಲಿನಂತೆ) ರಾತ್ರಿಯ ಅಂತ್ಯದಲ್ಲಿ ಅವನು ಪುನಃ ಸೃಷ್ಟಿಯನ್ನು ತರುತ್ತಾನೆ.

ಹೀಗೆಯೇ ಬ್ರಹ್ಮನ ಒಂದು ವರ್ಷ ಮತ್ತು ಅದೇ ರೀತಿ ಅವನ ನೂರು ವರ್ಷಗಳು.
ಆ ಶ್ರೇಷ್ಠನ ಜೀವಿತಾವಧಿಯು ದೀರ್ಘವಾದುದು, ಒಂದು ನೂರು ವರ್ಷಗಳು. ಇದರಲ್ಲಿ ಅರ್ಧ ಅವಧಿ ಮಾತ್ರ ಮುಗಿದಿದೆ. ಎಂದರೆ ಪರಾರ್ಧ.

ಪರಾರ್ಧದ ಅಂತ್ಯದಲ್ಲಿ ಪದ್ಮ ಎಂದು ಕರೆಯುವ ಶ್ರೇಷ್ಠ ಕಲ್ಪವಿತ್ತು. ಎರಡನೆಯ ಪರಾರ್ಧದಲ್ಲಿ ವರಾಹ ಎಂದು ಕರೆಯುವ ಪ್ರಸ್ತುತ ಕಲ್ಪವು ಮೊದಲನೆಯದು.

ಬ್ರಹ್ಮನ ಒಂದು ದಿನದಲ್ಲಿ 14 ಮನುಗಳು, ಮತ್ತು ಒಂದು ವರ್ಷದಲ್ಲಿ 5040 ಮನುಗಳು. ಎಂದರೆ, ಬ್ರಹ್ಮನ ಜೀವನದಲ್ಲಿ 5,04,000 ಮನುಗಳು ಬಂದು ಹೋಗುತ್ತಾರೆ.

ಹಾಗಾಗಿ ಬ್ರಹ್ಮನ ಒಟ್ಟು ಆಯಸ್ಸು 5,04,000 x 30,67,20,000 ಮಾನವ ವರ್ಷಗಳು.

ಈ ಲೇಖನ ಶೇರ್ ಮಾಡಿ