ಕೃಷ್ಣಪ್ರಜ್ಞೆಯ ದೃಷ್ಟಿಕೋನದಿಂದ, ನಾವು ನಮಗೆ ತಿಳಿದಿರುವುದಕ್ಕಿಂತಲೂ
ಹೆಚ್ಚಾಗಿ ಕನಸು ಕಾಣುತ್ತಿರಬಹುದು.
ಆಂಗ್ಲ ಮೂಲ: ಬ್ಯಾಕ್ ಟು ಗಾಡ್‌ಹೆಡ್
ಕೃಷ್ಣಪ್ರಜ್ಞೆಯ ಧರ್ಮಗ್ರಂಥಗಳ ಪ್ರಕಾರ. ಮೂರು ಪ್ರಜ್ಞಾ ಸ್ಥಿತಿ ಇದೆ:
ಜಾಗೃತ: ನಮಗೆ ಅರಿವಿರುವ ಜೀವನ, ನಮ್ಮ ಎಚ್ಚರದ ಸ್ಥಿತಿ. ಈ ಅವಧಿಯಲ್ಲಿ ನಾವು ನಮ್ಮ ಚಟುವಟಿಕೆಗಳಲ್ಲಿ ತೊಡಗುತ್ತೇವೆ.
ಸ್ವಪ್ನ: ನಾವು ಕನಸು ಕಾಣುವ ನಿದ್ರಾವಸ್ಥೆ. ಈ ಅವಧಿಯಲ್ಲಿ ನಮ್ಮ ಸ್ಥೂಲ ಶರೀರದ ಯಂತ್ರವು ಕೆಲಸ ಮಾಡುತ್ತಿರುತ್ತದೆ ಮತ್ತು ನಮ್ಮ ಸೂಕ್ಷ್ಮ ಶರೀರವು ನಮ್ಮನ್ನು ಆತ್ಮವನ್ನು ಮತ್ತೊಂದು ಜಗತ್ತಿಗೆ ಒಯ್ಯುತ್ತಿರುತ್ತದೆ. ಆದರೆ, ಸ್ಥೂಲ ಶರೀರವು ಮುಂದುವರಿಯಬೇಕಾಗಿರುವುದರಿಂದ, ಸೂಕ್ಷ್ಮ ಶರೀರ (ಮನಸ್ಸು ಮತ್ತು ಬುದ್ಧಿ) ಮತ್ತು ಆತ್ಮವು ನಮ್ಮ ಪ್ರಸ್ತುತ ಸ್ಥೂಲ ಶರೀರಕ್ಕೆ ಹಿಂದಿರುಗುತ್ತದೆ. ಸ್ಥೂಲ ಶರೀರಕ್ಕೆ ಹಿಂದಿರುಗುವಾಗ, ಅನೇಕ ವೇಳೆ ನಾವು ನಮ್ಮ ಕನಸನ್ನು ಮರೆಯುತ್ತೇವೆ.
ಸುಸುಪ್ತಿ: ನಿದ್ರೆಯ ಕನಸು ರಹಿತ ಸ್ಥಿತಿ ಮತ್ತು ಗರ್ಭದಲ್ಲಿ ಆತ್ಮವಿದ್ದು ಅದರ ಸುತ್ತ ಭ್ರೂಣವು ಬೆಳೆಯುತ್ತಿರುವ ಅಪ್ರಜ್ಞಾವಂತ ಸ್ಥಿತಿ. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಅರಿವಳಿಕೆಯನ್ನು ತೆಗೆದುಕೊಂಡಾಗ ಮತ್ತು ಪ್ರಳಯದ ಸಮಯದಲ್ಲಿ ಭೌತಿಕ ಲೋಕವು ಅವ್ಯಕ್ತವಾದಾಗ ಕೂಡ ನಾವು ಸುಸುಪ್ತ ಸ್ಥಿತಿಯನ್ನು ಅನುಭವಿಸುತ್ತೇವೆ.
ಎಚ್ಚರ, ಕನಸು ಮತ್ತು ಗಾಢ ನಿದ್ರೆ – ಪ್ರಜ್ಞೆ ಸ್ಥಿತಿಯ ಇವ್ಯಾವೂ ವಾಸ್ತವಿಕವಲ್ಲ. ಈ ಮೂರೂ ತಾತ್ಕಾಲಿಕವಾದ ಲೌಕಿಕ ಜೀವನದ ವಿವಿಧ ಹಂತಗಳನ್ನು ತೋರಿಸುತ್ತವೆಯಷ್ಟೆ. ಆ ಭಾವನೆಯಲ್ಲಿ ಮೂರೂ ಸ್ಥಿತಿಗಳು ಕನಸುಗಳು. ಏಕೆಂದರೆ, ನಾವು ಪ್ರತಿಯೊಬ್ಬರೂ ಶಾಶ್ವತ ಆತ್ಮಗಳಾಗಿದ್ದು, ತಾತ್ಕಾಲಿಕವಾದ ಲೌಕಿಕ ದೇಹ ಮತ್ತು ಮನಸ್ಸಿನಲ್ಲಿ ನೆಲೆಸಿದ್ದೇವೆ ಎನ್ನುವುದೇ ನಿಜವಾದ ವಾಸ್ತವಾಂಶ. ಶ್ರೀಲ ಪ್ರಭುಪಾದರು ವಿವರಿಸುತ್ತಾರೆ, “ದೀರ್ಘಾವಧಿಯಾಗಿರುವುದರಿಂದ ನೀವು ಈ ಹಗಲು ಕನಸನ್ನು ವಾಸ್ತವ ಎಂದು ಭಾವಿಸುವಿರಿ. ರಾತ್ರಿಯಲ್ಲಿ ನೀವು ಕನಸು ಕಂಡಾಗ ಅದು ಅರ್ಧ ಗಂಟೆ ಮಾತ್ರ. ಈ ಹಗಲು ಕನಸು 12 ಗಂಟೆ ಅಥವಾ ಅದಕ್ಕಿಂತ ಹೆಚ್ಚು. ಅದೇ ವ್ಯತ್ಯಾಸ. ಇದು 12 ತಾಸಿನ ಕನಸು, ಅದು ಅರ್ಧ ಗಂಟೆಯ ಸ್ವಪ್ನ. ಆದರೆ, ನಿಜವಾಗಿ ಅವರೆಡೂ ಕನಸೇ. ಇದು 12 ತಾಸಿನ ಕನಸಾಗಿರುವುದರಿಂದ ನೀವು ಅದನ್ನು ನಿಜ ಎಂದು ಸ್ವೀಕರಿಸುತ್ತಿರುವಿರಿ. ಅದನ್ನು ಮಾಯೆ, ಭ್ರಮೆ ಎನ್ನುತ್ತಾರೆ.” (ಬೆಳಗಿನ ನಡಿಗೆ, ಜನವರಿ 9, 1974, ಲಾಸ್ ಏಂಜಲೀಸ್)
ಬೇರೆ ಮಾತಿನಲ್ಲಿ ಹೇಳುವುದಾದರೆ, ನಮ್ಮ ಲೌಕಿಕ ದೇಹ ಮತ್ತು ಮನಸ್ಸು ತಾತ್ಕಾಲಿಕವಾದರೆ, ದೇಹ ಮತ್ತು ಮನಸ್ಸಿಗೆ ಪ್ರಾಣ ನೀಡುವ ಆತ್ಮವು ಶಾಶ್ವತ. ಹೀಗೆ ನಮ್ಮ ಲೌಕಿಕ ದೇಹ ಮತ್ತು ಮನಸ್ಸು ಸಾಗುತ್ತಿರುವ ಕನಸಿನಂತೆ. ಆಕ್ರಮಣಕಾರನು ಬೆನ್ನಟ್ಟುವುದರಿಂದ ನಾವು ಕನಸಿನಲ್ಲಿ ನೋವು ಅನುಭವಿಸುತ್ತೇವೆ. ಆದರೆ, ವಾಸ್ತವವಾಗಿ ಆಕ್ರಮಣಕಾರ ಇರುವುದಿಲ್ಲ. ನಾವು ಸೂಕ್ಷ್ಮ ರೂಪದಲ್ಲಿ ಯಾವುದೋ ಸ್ಥಿತಿಯನ್ನು ಸೃಷ್ಟಿಸುತ್ತೇವೆ ಮತ್ತು ಪರಿಣಾಮಗಳನ್ನು ಅನುಭವಿಸುತ್ತೇವೆ. ಆದರೆ ಎಚ್ಚರಗೊಂಡಿರುವ ವ್ಯಕ್ತಿಗೆ ಆಕ್ರಮಣಗಾರನಿಲ್ಲ ಎನ್ನುವುದು ತಿಳಿದಿರುತ್ತದೆ. ಕನಸು ಕಾಣುತ್ತಿರುವ ಮತ್ತು ಎಚ್ಚರದಿಂದಿರುವ ವ್ಯಕ್ತಗಳಿಬ್ಬರಿಗೂ ಆಕ್ರಮಣಕಾರ ಎನ್ನುವುದು ಒಂದು ಕಲ್ಪನೆ. ಆದರೆ ಮಲಗಿರುವ ವ್ಯಕ್ತಿಯು ಆ ಕಲ್ಪನೆಯನ್ನು ನಿಜವೆಂದು ಭಾವಿಸುತ್ತಾನೆ. ಎಚ್ಚರದಿಂದ ಇರುವವನು ಚೆನ್ನಾಗಿ ಬಲ್ಲ.
ನಾವು ಕನಸಿನಿಂದ ಎಚ್ಚರಗೊಂಡಾಗ, ಕನಸಿನಲ್ಲಿದ್ದ ನಮ್ಮ ಚಟುವಟಿಕೆಗಳಿಂದ ನಾವು ಪ್ರತ್ಯೇಕಗೊಳ್ಳುತ್ತೇವೆ. ಆ ಚಟುವಟಿಕೆಗಳು ಮಾನಸಿಕ ಕಟ್ಟುಕಥೆಗಳೆಂದು ನಾವು ಅರಿಯುತ್ತೇವೆ. ಅದೇ ರೀತಿ, ಬದುಕಿನ ಲೌಕಿಕ ಭಾವನೆಯಿಂದ ಮುಕ್ತರಾದಾಗ, ಅಂದರೆ ನಾವು ನಮ್ಮ ಆಧ್ಯಾತ್ಮಿಕ ಗುರುತಿಗೆ ಎಚ್ಚರಗೊಂಡಾಗ, ನಾವು ಬದುಕಿನ ಶರೀರ ಭಾವನೆಯಿಂದ ಮುಕ್ತರಾಗುತ್ತೇವೆ. ಆಗ ಸ್ಥೂಲ ಅಥವಾ ಸೂಕ್ಷ್ಮ ಲೌಕಿಕ ದೇಹಗಳೊಂದಿಗೆ ಗುರುತಿಸಿಕೊಳ್ಳುವುದೇ ಇರುವುದಿಲ್ಲ. ನಾವು ನಮ್ಮ ರಾತ್ರಿಯ ಮತ್ತು ಹಗಲಿನ ಕನಸಿನಿಂದ ಬಿಡುಗಡೆ ಹೊಂದುತ್ತೇವೆ. ನಮಗೆ ಲೌಕಿಕ ಜೀವನದ ಸುಖ ಮತ್ತು ದುಃಖಗಳ ಪ್ರಭಾವ ಇರುವುದಿಲ್ಲ.
ಭಾಗವತವು ಹೇಳುತ್ತದೆ, (3.27.25), “ಸ್ವಪ್ನಾವಸ್ಥೆಯಲ್ಲಿ ಪ್ರಜ್ಞೆಯು ಬಹುಮಟ್ಟಿಗೆ ಆವೃತವಾಗಿರುತ್ತದೆ. ಆಗ ವ್ಯಕ್ತಿಯು ಅನೇಕ ಅಶುಭಗಳನ್ನು ಕಾಣುತ್ತಾನೆ. ಅವನು ಎಚ್ಚರಗೊಂಡು ಪೂರ್ಣಪ್ರಜ್ಞೆಯಲ್ಲಿರುವಾಗ ಅವನನ್ನು ಅಂತಹ ಅಶುಭವಸ್ತುಗಳು ದಿಗ್ಭ್ರಮೆಗೊಳಿಸುವುದಿಲ್ಲ.”
ಶ್ರೀಲ ಪ್ರಭುಪಾದರು ಭಾವಾರ್ಥದಲ್ಲಿ ವಿವರಿಸುತ್ತಾರೆ,
ಸ್ವಪ್ನದ ಸ್ಥಿತಿಯಲ್ಲಿ ಪ್ರಜ್ಞೆಯು ಬಹುಮಟ್ಟಿಗೆ ಆವೃತವಾಗಿರುತ್ತದೆ. ಆಗ ದಿಗ್ಭ್ರಮೆ ಮತ್ತು ಆತಂಕಗಳನ್ನು ಉಂಟುಮಾಡುವ ಅನೇಕ ಅಶುಭಗಳನ್ನು ಕಾಣಬಹುದು. ಆದರೆ ಎಚ್ಚೆತ್ತ ಮೇಲೆ ಕನಸಿನಲ್ಲಿ ಸಂಭವಿಸಿದುದನ್ನು ಜ್ಞಾಪಿಸಿಕೊಂಡರೂ, ದಿಗ್ಭ್ರಮೆಯಾಗುವುದಿಲ್ಲ. ಅದೇ ರೀತಿಯಲ್ಲಿ ಆತ್ಮಸಾಕ್ಷಾತ್ಕಾರದ ಸ್ಥಿತಿ ಅಥವಾ ಪರಮ ಪ್ರಭುವಿನೊಂದಿಗೆ ತನ್ನ ನೈಜಸಂಬಂಧದ ಅರಿವು, ಒಬ್ಬನನ್ನು ಪೂರ್ಣತೃಪ್ತನನ್ನಾಗಿ ಮಾಡುತ್ತದೆ ಮತ್ತು ದಿಗ್ಭ್ರಮೆಗಳಿಗೆ ಕಾರಣವಾಗುತ್ತಿರುವ ಮೂರು ಪ್ರಕೃತಿ ಗುಣಗಳು ಬಾಧಿಸುವುದಿಲ್ಲ. ಕಲುಷಿತ ಪ್ರಜ್ಞೆಯಲ್ಲಿ ಪ್ರತಿಯೊಂದನ್ನೂ ತನ್ನ ಸುಖಕ್ಕೆಂದು ವ್ಯಕ್ತಿಯು ತಿಳಿಯುತ್ತಾನೆ; ಆದರೆ ಶುದ್ಧ ಪ್ರಜ್ಞೆಯಲ್ಲಿ ಅಥವಾ ಕೃಷ್ಣಪ್ರಜ್ಞೆಯಲ್ಲಿ ಪ್ರತಿಯೊಂದೂ ಪರಮ ಭೋಕ್ತಾರನ ಸುಖಕ್ಕಾಗಿ ಇರುತ್ತದೆಯೆಂದು ತಿಳಿಯುತ್ತಾನೆ. ಇದು ಕನಸಿನಸ್ಥಿತಿ ಮತ್ತು ಜಾಗೃತಸ್ಥಿತಿಗಳ ನಡುವೆ ಇರುವ ಅಂತರ. ಕಲುಷಿತ ಪ್ರಜ್ಞೆಯ ಸ್ಥಿತಿಯನ್ನು ಸ್ವಪ್ನ ಪ್ರಜ್ಞೆಗೂ ಮತ್ತು ಕೃಷ್ಣಪ್ರಜ್ಞೆಯನ್ನು ಜೀವನದ ಜಾಗೃತ ಹಂತಕ್ಕೆ ಹೋಲಿಸಲಾಗಿದೆ.
ಸ್ವಲ್ಪ ಆತ್ಮಾವಲೋಕನದಿಂದ ನಾವು, ಎಂದರೆ ಆತ್ಮ, ಪ್ರಜ್ಞೆಯ ಮೂರು ಸ್ಥಿತಿಗಳನ್ನು ಅನುಭವಿಸುವ ದೇಹ ಮತ್ತು ಮನಸ್ಸುಗಳಿಗಿಂತ ಭಿನ್ನ ಎನ್ನುವುದನ್ನು ಗ್ರಹಿಸಿಕೊಳ್ಳಬಹುದು: ಜಾಗೃತ ಅಥವಾ ಎಚ್ಚರದ ಸ್ಥಿತಿಯಲ್ಲಿ ನಾವು ನಮ್ಮ ಲೌಕಿಕ ದೇಹದ ಗುಣಲಕ್ಷಣಗಳನ್ನು ಆನಂದಿಸುತ್ತೇವೆ ಅಥವಾ ದುಃಖಿಸುತ್ತೇವೆ. ಅದೇ ರೀತಿ ಸ್ವಪ್ನದಲ್ಲಿ (ಕನಸಿನ ಸ್ಥಿತಿ) ನಾವು ನಮ್ಮ ಮನಸ್ಸಿನೊಳಗೆ ಅದೇ ರೀತಿಯ ಸುಖ ಅಥವಾ ದುಃಖವನ್ನು ಅನುಭವಿಸುತ್ತೇವೆ. ಸುಸುಪ್ತಿಯಲ್ಲಿ (ಕನಸುಗಳಿಲ್ಲದ ಗಾಢವಾದ ನಿದ್ರೆ) ನಮಗೆ ಎಲ್ಲದರ ಬಗೆಗೂ ಅರಿವಿರುವುದಿಲ್ಲ. ಜಾಗೃತ ಸ್ಥಿತಿ, ಕನಸು ಕಾಣುವ ಸ್ಥಿತಿ, ಮತ್ತು ಗಾಢ ನಿದ್ರೆಯನ್ನು ನೆನಪು ಮಾಡಿಕೊಳ್ಳುವಾಗ ಮತ್ತು ಅವಲೋಕಿಸುವಾಗ ನಾವು ಈ ಮೂರು ಸ್ಥಿತಿಗಳನ್ನು ಗಮನಿಸುತ್ತಿರುವುದನ್ನು ಗ್ರಹಿಸುತ್ತೇವೆ. ನಮಗೆ ನೆನಪಾಗುತ್ತದೆ, “ನಾನು ನನ್ನ ಕನಸಿನಲ್ಲಿ ಅನೇಕ ವಿಷಯಗಳನ್ನು ನೋಡಿದೆ. ಅನಂತರ ನನ್ನ ಕನಸು ಅಂತ್ಯಗೊಂಡಿತು ಮತ್ತು ನಾನು ಏನನ್ನೂ ನೋಡಲಿಲ್ಲ. ಈಗ ನಾನು ಏಳುತ್ತಿರುವೆ.” ಆದುದರಿಂದ ಅಂತಿಮವಾಗಿ ನಾವು ಪ್ರಜ್ಞೆಯ ಎಲ್ಲ ಮೂರು ಹಂತಗಳನ್ನು ಅನುಭವಿಸುತ್ತಿರುವ ಒಬ್ಬ ಪ್ರತ್ಯೇಕ, ಅಲೌಕಿಕ ವ್ಯಕ್ತಿ ಅಥವಾ ತತ್ತ್ವದರ್ಶಿ. ಈ ರೀತಿ ನಾವು ನಮ್ಮ ನಿಜವಾದ ಗುರುತು ಲೌಕಿಕ ದೇಹ ಮತ್ತು ಮನಸ್ಸಿನಿಂದ ಪ್ರತ್ಯೇಕ ಎನ್ನುವುದನ್ನು ತಿಳಿದುಕೊಳ್ಳುತ್ತೇವೆ.
ನಾವು ತಾತ್ಕಾಲಿಕ ದೇಹ ಮತ್ತು ಮನಸ್ಸಿನಿಂದ ಪ್ರತ್ಯೇಕ ಮತ್ತು ಅಲೌಕಿಕ ಎನ್ನುವುದನ್ನು ತಾತ್ತ್ವಿಕವಾಗಿ ಒಪ್ಪಿಕೊಂಡರೂ ಸಹ, ಲೌಕಿಕ ದೇಹದೊಳಗೆ ಇದ್ದರೂ ಆ ದೇಹದ ಸುಖ ಮತ್ತು ದುಃಖಗಳಿಂದ ನಾವು ಅತಿ ಕಡಮೆ ಕ್ಷೋಭೆಗೆ ಒಳಗಾಗುತ್ತೇವೆ. ಆಗಷ್ಟೇ ಕನಸಿನಿಂದ ಎಚ್ಚೆತ್ತ ವ್ಯಕ್ತಿಯು ತನ್ನ ಕನಸಿನ ಅನುಭವಗಳನ್ನು ನೋಡುವ ರೀತಿಯಲ್ಲಿಯೇ ನಾವು ಲೌಕಿಕ ಅನುಭವಗಳನ್ನು ನೋಡಲು ಆರಂಭಿಸುತ್ತೇವೆ. ಕೃಷ್ಣನ ಶಾಶ್ವತ ಸೇವಕರೆಂದು ನಮ್ಮನ್ನು ಸರಿಯಾಗಿ ಗುರುತಿಸಿಕೊಳ್ಳುವ ಮೂಲಕ ನಾವು ನಮ್ಮ ಹುಸಿ ಲೌಕಿಕ ಗುರುತಿನಿಂದ ಬಿಡುಗಡೆ ಹೊಂದುತ್ತೇವೆ. ನಾವು ಎಚ್ಚರಗೊಂಡ ಕೂಡಲೇ ತೊಂದರೆಯನ್ನು ಉಂಟು ಮಾಡಿದ್ದ ಕನಸಿನ ಆತಂಕಗಳು ಕಡಮೆಯಾದಂತೆ ನಮ್ಮ ಭ್ರಮೆಯ ಅಸ್ತಿತ್ವದ ಕಷ್ಟಗಳೂ ಕಡಮೆಯಾಗುತ್ತವೆ.
ಕೆಲವು ಬಾರಿ ಕನಸಿನಲ್ಲಿ ನಾವು ಎಚ್ಚರವಾಗಿದ್ದೇವೆ ಎಂದು ಕಲ್ಪಿಸಿಕೊಳ್ಳುತ್ತೇವೆ. ಅದೇ ರೀತಿ ನಾವು ಕೃಷ್ಣನ ಭಾಗ ಮತ್ತು ಕೃಷ್ಣನ ಸೇವಕ ಎನ್ನುವ ನಮ್ಮ ಶಾಶ್ವತ ಗುರುತಿನ ಬಗೆಗೆ ಪ್ರಜ್ಞಾವಂತರಾಗಿದ್ದೇವೆ ಎಂದು ನಾವು ಪರಿಗಣಿಸಿಕೊಳ್ಳಬಹುದು. ಆದರೆ ಭಕ್ತಿಸೇವೆಗೆ ಬದಲಾಗಿ ನಾವು ಲೌಕಿಕ ಬದುಕಿನಲ್ಲಿ ತಲ್ಲೀನರಾಗಿ ಉಳಿದರೆ, ವಾಸ್ತವವಾಗಿ ನಾವು ಇನ್ನೂ ಕನಸು ಕಾಣುತ್ತಿದ್ದೇವೆ ಎಂದು ಹೇಳಬಹುದು. ಕೃಷ್ಣನ ಮಾತಿನಲ್ಲಿ ಹೇಳುವುದಾದರೆ, “ನನ್ನ ಉಪದೇಶದಂತೆ ವ್ಯಕ್ತಿಯು ತನ್ನ ಮನಸ್ಸನ್ನು ನನ್ನಲ್ಲಿ ಸ್ಥಿರಗೊಳಿಸಬೇಕು. ನನ್ನಲ್ಲಿಯೇ ಎಲ್ಲವನ್ನೂ ನೋಡುವುದನ್ನು ಬಿಟ್ಟು ಜೀವನದಲ್ಲಿ ಬಗೆಬಗೆಯ ಮೌಲ್ಯಗಳನ್ನು ಮತ್ತು ಗುರಿಗಳನ್ನು ಕಾಣುತ್ತಾ ಹೋದರೆ, ಆಗ ಅವನು ಜಾಗ್ರತನೆಂಬಂತೆ ಕಂಡುಬಂದರೂ ಸಹ, ಹೇಗೆ ವ್ಯಕ್ತಿಯು ಆಗ ತಾನೇ ಕನಸಿನಿಂದ ಎಚ್ಚತ್ತಂತೆ ಕನಸು ಕಾಣುವನೋ ಹಾಗೆ, ಅಪೂರ್ಣ ಜ್ಞಾನದಿಂದಾಗಿ ವಾಸ್ತವವಾಗಿ ಕನಸು ಕಾಣುತ್ತಿರುತ್ತಾನೆ.” (ಭಾಗವತ 11.13.30)
ಈ ಲೋಕದಲ್ಲಿ ನಮ್ಮ ಸ್ಥಿತಿಯನ್ನು ನೋಡುವ ಮತ್ತೊಂದು ರೀತಿ ಎಂದರೆ, ಕೃಷ್ಣನು ಶಾಶ್ವತ, ನಾವು ಶಾಶ್ವತ ಮತ್ತು ಕೃಷ್ಣನೊಂದಿಗಿನ ನಮ್ಮ ವ್ಯವಹಾರ ಶಾಶ್ವತ; ಕೃಷ್ಣನೊಂದಿಗೆ ನಮ್ಮ ಬಾಂಧವ್ಯ ಮತ್ತು ಪ್ರೀತಿಯ ಸೇವೆಯ ವಿನಿಮಯವು ಶಾಶ್ವತ ಎನ್ನುವುದನ್ನು ಪರಿಗಣಿಸುವುದೇ ಆಗಿದೆ. ಆದರೆ ಅದು ಹೇಗೋ ಆ ಬಾಂಧವ್ಯಕ್ಕೆ ಅಡಚಣೆ ಉಂಟುಮಾಡಲು ನಾವು ಮಾಯೆಗೆ ಅವಕಾಶ ನೀಡಿದ್ದೇವೆ. ಇದನ್ನು ಸ್ವಪ್ನ, ಕನಸಿನಂತಹ ಸ್ಥಿತಿ ಎಂದು ಕರೆಯುತ್ತಾರೆ. ಕನಸು ಭ್ರಮೆಯಾಗಿದ್ದು ವಾಸ್ತವವಲ್ಲ. ಅದೇ ರೀತಿ ಕೃಷ್ಣನೊಂದಿಗಿನ ನಮ್ಮ ಬೇರ್ಪಡಿಕೆಯೂ ಭ್ರಮೆಯೇ.
“ಯಾವುದೇ ಲೌಕಿಕದೊಂದಿಗೆ ನನಗೆ ಸಂಬಂಧವಿಲ್ಲ. ನಾನು ಕೃಷ್ಣನ ಸೇವಕ” ಎನ್ನುವ ವಾಸ್ತವಕ್ಕೆ ಎಚ್ಚೆತ್ತುಕೊಳ್ಳುವುದರಿಂದ ಮಾತ್ರ ನಾವು ನಮ್ಮ ಕೃಷ್ಣಪ್ರಜ್ಞೆಯನ್ನು ಯಾವುದೇ ಕ್ಷಣದಲ್ಲಿ ಪುನರುಜ್ಜೀವಗೊಳಿಸಬಹುದು. ದುಃಸ್ವಪ್ನವು ಅಸಹನೀಯವೆನ್ನಿಸಿದರೆ, ನಾವು ಅದನ್ನು ಭಗ್ನಗೊಳಿಸುತ್ತೇವೆ. ಅದೇ ರೀತಿ ನಾವು ನಮ್ಮ ಲೌಕಿಕ ಸಂಪರ್ಕವನ್ನು ಯಾವುದೇ ಕ್ಷಣದಲ್ಲಿಯಾದರೂ ಕಡಿದುಕೊಳ್ಳಬಹುದು ಮತ್ತು ನಾವು ಕೃಷ್ಣನಿಂದ ಯಾವಾಗಲೂ ಬೇರ್ಪಟ್ಟಿರಲಿಲ್ಲ ಎನ್ನುವ ವಾಸ್ತವಕ್ಕೆ ಎಚ್ಚೆತ್ತುಕೊಳ್ಳಬಹುದು. ನಾವು ಸದಾ ಅವನೊಂದಿಗೆ ಇದ್ದೇವೆ ಎನ್ನುವುದೇ ನಮ್ಮ ಮೂಲ ಮತ್ತು ಶಾಶ್ವತ ನಿಲುವು. ಇದನ್ನು ನಾವು ಮರೆತಾಗ, ಮಾಯೆಯು ಇರುತ್ತದೆ. ಅದು ಹೇಗೆಂದರೆ, ನಾವು ನಿದ್ರಿಸಿದಾಗ, ಕನಸು ಕಾಣುತ್ತೇವೆ.
ಅಲೌಕಿಕ ಕನಸುಗಳು
ಕನಸುಗಳನ್ನು ಗಂಭೀರವಾಗಿ ಪರಿಗಣಿಸಬಾರದೆಂದು ಶ್ರೀಲ ಪ್ರಭುಪಾದರು ತಮ್ಮ ಅನುಯಾಯಿಗಳಿಗೆ ಬೋಧಿಸುತ್ತಿದ್ದರು. “ಅವು ಅಷ್ಟೇನೂ ಗಂಭೀರ ವಿಷಯಗಳಲ್ಲ” ಎಂದು ಅವರು ಪತ್ರವೊಂದರಲ್ಲಿ ತಿಳಿಸಿದ್ದರು. ಅವರು ಮುಂದುವರಿಸುತ್ತ, “ಆದರೆ ನಾವು ಆಗಾಗ್ಗೆ ಕೃಷ್ಣನನ್ನು ಕುರಿತು ಕನಸು ಕಂಡರೆ, ಅದು ಒಳ್ಳೆಯದು. ಆದರೆ ಅಂತಹ ವಿಷಯಗಳನ್ನು ತುಂಬ ಗಂಭೀರವಾಗಿ ಪರಿಗಣಿಸಬೇಡಿ. ಮನಸ್ಸು, ದೇಹ ಮತ್ತು ಮಾತುಗಳು ಕೃಷ್ಣನನ್ನು ಪ್ರಸನ್ನಗೊಳಿಸಲು ಮಗ್ನವಾಗುವ ಮೂಲಕ ಎಲ್ಲ ಸಮಯದಲ್ಲಿಯೂ ಕೃಷ್ಣಪ್ರಜ್ಞಾವಂತರಾಗುವುದು ನಮ್ಮ ಮುಖ್ಯವಾದ ವ್ಯವಹಾರ. ಅಂದರೆ ಜಪ, ಪಠಣ, ಆರತಿಯಲ್ಲಿ ಪಾಲ್ಗೊಳ್ಳುವುದು, ಸಾಮೂಹಿಕ ಸಂಕೀರ್ತನೆಯಲ್ಲಿ ಭಾಗವಹಿಸುವುದು ಮುಂತಾದ ನಿಯಂತ್ರಕ ತತ್ತ್ವ ಮತ್ತು ಭಕ್ತಿ ಸೇವೆಗಳನ್ನು ಅನುಸರಿಸುವುದೇ ಆಗಿದೆ. ಅಲ್ಲದೆ, ಕೃಷ್ಣಸೇವೆಯನ್ನು ಕುರಿತ ಯಾವುದಾದರೂ ಕೆಲಸದಲ್ಲಿ ಪೂರ್ಣಾವಧಿ ತೊಡಗಿಕೊಳ್ಳುವುದು. ಈ ರೀತಿಯಲ್ಲಿ ನೀವು ಕೃಷ್ಣಸೇವೆಯಲ್ಲಿ ಪೂರ್ಣವಾಗಿ ಮಗ್ನರಾಗಿರಬಹುದು.”
ಆಧ್ಯಾತ್ಮಿಕವಾಗಿ ಪ್ರಗತಿ ಸಾಧಿಸಿರುವವರು ಕೃಷ್ಣನನ್ನು ಕುರಿತು ಕನಸು ಕಾಣುವರು ಮತ್ತು ಕೆಲವು ಬಾರಿ ಅವರ ಕನಸಿನಲ್ಲಿ ಭಗವಂತನಿಂದ ಅಥವಾ ಅವನ ಭಕ್ತರಿಂದ ಆದೇಶವನ್ನೂ ಪಡೆಯುವರು.”
ಕೆಲವು ಸಲ ಭಗವಂತನು ತನ್ನ ಮಂದಿರ ಮತ್ತು ಉದ್ಯಾನ ಬಹಳ ಹಳೆಯದಾಗಿದ್ದು ಅವನ್ನು ತಾನು ಚೆನ್ನಾಗಿ ಅನುಭವಿಸಲಾಗುತ್ತಿಲ್ಲ ಎಂದು ಭಕ್ತನ ಕನಸಿನಲ್ಲಿ ಹೇಳುತ್ತಾನೆ. ಅವುಗಳನ್ನು ಸರಿಪಡಿಸಲು ಹೀಗೆ ಭಕ್ತನನ್ನು ಕೋರುತ್ತಾನೆ. ಕೆಲವು ಸಲ ಅವನು ಹೊರಗೆ ಬರಲು ಸಾಧ್ಯವಾಗದವನ ಹಾಗೆ ನೆಲದಡಿಯಲ್ಲಿ ಹುದುಗಿರುತ್ತಾನೆ. ಹೊರತೆಗೆಯಲು ಭಕ್ತನನ್ನು ಕೋರುತ್ತಾನೆ.” (ಭಾಗವತ 6.19.5, ಭಾವಾರ್ಥ)
ಪರಿಶುದ್ಧ ಭಕ್ತರ ಈ ಕನಸುಗಳು ಅಲೌಕಿಕ ವೇದಿಕೆಯ ಮೇಲೆ ಇರುತ್ತವೆ. ಭೌತಿಕ ಲೋಕದಲ್ಲಿ ಇರುವುದರಿಂದ ಭಕ್ತರು ಅವುಗಳನ್ನು ಕನಸುಗಳೆಂದು ಭಾವಿಸುತ್ತಾರೆ. ಈ `ಕನಸು’ಗಳಲ್ಲಿ ಭಗವಂತನು ಪ್ರಗತಿಹೊಂದಿದ ಭಕ್ತನೊಂದಿಗೆ ಮಾತನಾಡುತ್ತಾನೆ ಮತ್ತು ಆ ಪ್ರಗತಿಹೊಂದಿದ ಭಕ್ತನು ಪ್ರಭುವನ್ನು ನೋಡುತ್ತಾನೆ. ಇವು ಲೌಕಿಕ ಕನಸುಗಳಂತೆ ಅಲ್ಲ. ಇವು ವಾಸ್ತವ. ಇವು ಕನಸುಗಳಂತೆ ಕಾಣುವ ವಾಸ್ತವಾಂಶ.
ಶ್ರೀಲ ಪ್ರಭುಪಾದರು ತಾವು ಕಂಡ ಅಂತಹ ಕನಸಿನ ವೈಯಕ್ತಿಕ ಅನುಭವವನ್ನು ಹೇಳಿದರು:
ನಾನು ನನ್ನ ಕುಟುಂಬ ಜೀವನದಲ್ಲಿ, ನನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಇದ್ದಾಗ, ಕೆಲವು ಬಾರಿ ನಾನು ನನ್ನ ಆಧ್ಯಾತ್ಮಿಕ ಗುರುವಿನ ಬಗೆಗೆ ಕನಸು ಕಾಣುತ್ತಿದ್ದೆ. ಅವರು ನನ್ನನ್ನು ಕರೆಯುತ್ತಿದ್ದಂತೆ ಮತ್ತು ನಾನು ಅವರನ್ನು ಹಿಂಬಾಲಿಸುತ್ತಿರುವಂತೆ. ಕನಸು ಅಂತ್ಯಗೊಂಡಮೇಲೆ, ನಾನು ಯೋಚಿಸುತ್ತಿದ್ದೆ, ನಾನು ಸ್ವಲ್ಪ ಗಾಬರಿಗೊಂಡೆ. “ಓ, ನಾನು ಸಂನ್ಯಾಸಿಯಾಗಬೇಕೆಂದು ಗುರು ಮಹಾರಾಜ್ ಬಯಸುತ್ತಿದ್ದಾರೆ. ನಾನು ಹೇಗೆ ಸಂನ್ಯಾಸವನ್ನು ಒಪ್ಪಿಕೊಳ್ಳಲಿ?” ಆ ಸಮಯದಲ್ಲಿ ನಾನು ನನ್ನ ಕುಟುಂಬ ಜೀವನವನ್ನು ತೊರೆದು ಸಂನ್ಯಾಸಿಯಾಗಬೇಕೆಂಬ ಭಾವನೆ ಹೊಂದಿರಲಿಲ್ಲ. ಆ ಸಮಯದಲ್ಲಿ ಅದು ದಿಗಿಲು ಹುಟ್ಟಿಸುವ ವಿಷಯವಾಗಿತ್ತು. ಕೆಲವು ಬಾರಿ ನಾನು, “ಇಲ್ಲ, ನಾನು ಸಂನ್ಯಾಸವನ್ನು ಸ್ವೀಕರಿಸಲಾರೆ” ಎಂದು ಯೋಚಿಸುತ್ತಿದ್ದೆ. ಆದರೆ ನಾನು ಪುನಃ ಅದೇ ಕನಸನ್ನು ಕಂಡೆ. ಈ ರೀತಿಯಲ್ಲಿ ನಾನು ಭಾಗ್ಯವಂತ. ನನ್ನ ಗುರು ಮಹಾರಾಜ್ ನನ್ನನ್ನು ಈ ಭೌತಿಕ ಲೋಕದಿಂದ ಎಳೆದರು. ನಾನು ಏನನ್ನೂ ಕಳೆದುಕೊಂಡಿಲ್ಲ. ಅವರು ನನ್ನ ಬಗೆಗೆ ಅದೆಷ್ಟು ಕರುಣಾಮಯಿಯಾಗಿದ್ದರು. ನಾನು ಗಳಿಸಿದ್ದೇನೆ. ನಾನು ಮೂರು ಮಕ್ಕಳನ್ನು ತ್ಯಜಿಸಿ ಬಂದೆ. ಈಗ ನನಗೆ 300 ಮಕ್ಕಳಿದ್ದಾರೆ. (ಸಿಯಾಟೆಲ್‌ನಲ್ಲಿ 1968)
ಭಗವಂತನ ಕನಸು
ಭಕ್ತನ `ಕನಸು’ ಆಧ್ಯಾತ್ಮಿಕ ವಾಸ್ತವಾಗಿರುವಂತೆ, ಭಗವಂತನ ಕನಸು ನಮಗೆಲ್ಲರಿಗೂ ವಾಸ್ತವಾಂಶ. ಈ ಇಡೀ ಸೃಷ್ಟಿಯು ಕೃಷ್ಣನ ಪೂರ್ಣ ವಿಸ್ತರಣೆಯಾದ ಮಹಾವಿಷ್ಣುವಿನ ಕನಸು.
ಶ್ರೀಲ ಪ್ರಭುಪಾದರು ವಿವರಿಸುತ್ತಾರೆ, “ಸ್ವಪ್ನಮಾಯೆಯಲ್ಲಿ ನಿದ್ರಿಸುವವನು ತನ್ನ ಕಲ್ಪನಾ ವಸ್ತುಗಳಿಂದ ಜನನಿಬಿಡವಾದ ನಗರಗಳನ್ನೊಳಗೊಂಡ ಒಂದು ಪ್ರಕಟ ಜಗತ್ತನ್ನು ಸೃಷ್ಟಿಸುತ್ತಾನೆ. ಕೆಲಮಟ್ಟಿಗೆ ಇದೇ ರೀತಿಯಲ್ಲಿ ಭಗವಂತನು ವಿಶ್ವವನ್ನು ವ್ಯಕ್ತಗೊಳಿಸುತ್ತಾನೆ. ಈ ಸೃಷ್ಟಿಯು ಭಗವಂತನಿಗೆ ಮಾಯೆಯಲ್ಲ (ಮಿಥ್ಯೆಯಲ್ಲ). ಆದರೆ ಇದು ಅವನ ಮಾಯಾ ಶಕ್ತಿಯ ವಶದಲ್ಲಿರುವ ಜೀವಿಗಳಿಗಾಗಿ ಇರುವುದು. ಮಾಯೆಯು ಅವಳ ಅನಿತ್ಯ ಅಸಾರಭೂತ ಅಭಿವ್ಯಕ್ತಿಗಳನ್ನು ನಿಜವೆಂದು ಸ್ವೀಕರಿಸುವಂತೆ ಬದ್ಧಾತ್ಮರನ್ನು ವಿಮೋಹಗೊಳಿಸುವಳು. ಇದೇ ಅವಳು ಭಗವಂತನಿಗೆ ಸಲ್ಲಿಸುವ ಸೇವೆ.” (ಭಾಗವತ 10.86.45, ಭಾವಾರ್ಥ)
ಆದರೆ ಭೌತಿಕ ಲೋಕಗಳನ್ನು ಸೃಷ್ಟಿಸುವ ಭಗವಂತನ ಮೇಲೆ ಅವು ಏನೂ ಪ್ರಭಾವ ಬೀರುವುದಿಲ್ಲ. ಅದೇ ರೀತಿ, ಸಾಕ್ಷಾತ್ಕಾರಗೊಂಡ ವ್ಯಕ್ತಿ ಅಥವಾ ಭಕ್ತನಿಗೆ ಈ ಲೌಕಿಕ ಬ್ರಹ್ಮಾಂಡ ರೂಪವು ತಾತ್ಕಾಲಿಕ, ಮಾಯಾ ಸೃಷ್ಟಿ ಎನ್ನುವುದು ತಿಳಿದಿರುವುದರಿಂದ ಅವರು ಅದರಿಂದ ಮತ್ತು ಅದರೊಂದಿಗಿನ ವಿಷಯಗಳ ಬಗೆಗೆ ಪ್ರಭಾವಿತರಾಗುವುದಿಲ್ಲ. ಭೌತಿಕ ಲೋಕವು ಒಂದು ಮಾಯಾಜಾಲದಂತೆ. ಆದರೆ ಈ ಸೃಷ್ಟಿಯ ಹಿಂದೆ ವಾಸ್ತವವಿದೆ. ಅದೇ ಆಧ್ಯಾತ್ಮಿಕ ಲೋಕ. ಎಲ್ಲವೂ ಮತ್ತು ಎಲ್ಲರೂ ಎಚ್ಚರದಿಂದ ಇರುವ ಮತ್ತು ಮಾಯೆಯಿಂದ ಮುಕ್ತವಾಗಿರುವ ಆ ಆಧ್ಯಾತ್ಮಿಕ ಲೋಕದಲ್ಲಿ ಮಾತ್ರ ಭಕ್ತನು ಆಸಕ್ತಿ ಹೊಂದಿರುತ್ತಾನೆ.