ಪಾಹಿ ಮಾಂ ಪರಮಾತ್ಮಂಸ್ತೇ ಪ್ರೇಷಣೇನಾಸೃಜಂ ಪ್ರಜಾಃ ।
ತಾ ಇಮಾ ಯಭಿತುಂ ಪಾಪಾ ಉಪಾಕ್ರಾಮಂತಿ ಮಾಂ ಪ್ರಭೋ ।।
(ಭಾಗವತ 3.20.26)
ಸಂದರ್ಭ : ಈ ಲೋಕದ ಮೊದಲ ಜೀವಿಯಾದ ಬ್ರಹ್ಮನು ಗರ್ಭೋದಕಶಾಯಿ ವಿಷ್ಣುವಿನ ನಾಭಿಯಿಂದ ಅರಳಿದ ಕಮಲ ಪುಷ್ಪದಿಂದ ಹೊರಬಂದನು. ದೇವೋತ್ತಮ ಪರಮ ಪುರುಷನು ಬ್ರಹ್ಮನ ಹೃದಯವನ್ನು ಪ್ರವೇಶಿಸಿದನು ಮತ್ತು ಬ್ರಹ್ಮಾಂಡವನ್ನು ಅದು ಮೊದಲು ಇದ್ದಂತೆಯೇ ಸೃಷ್ಟಿಸಲು ಬ್ರಹ್ಮನು ತನ್ನ ಬುದ್ಧಿಶಕ್ತಿಯನ್ನು ಧಾರಣೆ ಮಾಡಿದನು. ಅವನು ಐದು ವಿಧದ ತಮೋಗುಣವನ್ನು ಸೃಷ್ಟಿಸಿದನು. ಅವು ಯಾವುವೆಂದರೆ ತಾಮಿಸ್ರ, ಅಂಧ ತಾಮಿಸ್ರ, ತಮಸ್, ಮೋಹ ಮತ್ತು ಮಹಾ ಮೋಹ. ಅನಂತರ ಬ್ರಹ್ಮನು ರಾಕ್ಷಸರು, ಯಕ್ಷರು ಮತ್ತು ದೇವತೆಗಳನ್ನು ಸೃಷ್ಟಿಸಿದನು. ಅದಾದ ಮೇಲೆ ದಾನವರಿಗೆ ಜನ್ಮ ನೀಡಿದನು. ಅವರು ಕಾಮಲೋಲುಪರಾಗಿದ್ದರು. ಕಾಮಕೇಳಿಗಾಗಿ ಅವನ ಮೇಲೆ ಆಕ್ರಮಣ ಮಾಡಿದರು. ಬ್ರಹ್ಮನು ಭಯದಿಂದ ಬೇಗನೆ ಓಡಿಹೋದನು ಮತ್ತು ಭಗವಂತನ ಬಳಿ ಹೋಗಿ ರಕ್ಷಣೆ ಕೋರಿದನು.
ಬ್ರಹ್ಮನು ದೇವೋತ್ತಮ ಪರಮ ಪುರುಷನಲ್ಲಿ ಈ ರೀತಿ ಪ್ರಾರ್ಥಿಸಿದನು :
“ನನ್ನ ಪ್ರಭುವೆ, ನಿನ್ನ ಆದೇಶದಂತೆ ನನ್ನಿಂದ ಸೃಷ್ಟಿಯಾದ ಈ ಪಾಪಿ ದಾನವರಿಂದ ನನ್ನನ್ನು ದಯವಿಟ್ಟು ರಕ್ಷಿಸು. ಲೈಂಗಿಕ ದಾಹದಿಂದ ಕ್ರೋಧ ಸಂತಪ್ತರಾದ ಅವರು ನನ್ನನ್ನು ಘಾಸಿಗೊಳಿಸಲು ಬಂದಿದ್ದಾರೆ.” (ಭಾಗವತ 3.20.26)
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬ್ರಹ್ಮನು ಭಗವಂತನ ಆದೇಶದಂತೆ ಅವರನ್ನು ಸೃಷ್ಟಿಸಿದನು, ಆದರೂ ಅವನು ಅದರ ಪರಿಣಾಮವನ್ನು ಎದುರಿಸಬೇಕಾಯಿತು.
ಏನಾದರೂ ಅಪಾಯವಾದಾಗ, ಅದು ನಮ್ಮದೇ ಕ್ರಿಯೆಯಿಂದ ಅಥವಾ ನಮ್ಮ ಹಿಂದಿನ ಕರ್ಮಗಳಿಂದ ಎಂದು ಯೋಚಿಸುವುದು ಸಾಮಾನ್ಯ ಪ್ರವೃತ್ತಿಯಾಗಿದೆ. ಭುಂಜಾನ ಏವಾತ್ಮ ಕೃತಂ ವಿಪಾಕಂ. ಆದರೆ ಬ್ರಹ್ಮನು ಇಲ್ಲಿ ದೇವೋತ್ತಮನ ಆದೇಶದಂತೆ, ಅವನ ನಿರ್ದೇಶನದಂತೆ ಸೃಷ್ಟಿಯನ್ನು ಆರಂಭಿಸಿದನು. ಆದರೂ ದಾನವರ ಆಕ್ರಮಣದಿಂದ ಅವನು ಕಷ್ಟಕ್ಕೀಡಾದನು.
ಭಗವಂತನಿಗೆ ಅತ್ಯಂತ ಪ್ರಿಯರಾದ ಭಕ್ತರೂ ಕೂಡ ಸಂಕಟಕರ ಪರಿಸ್ಥಿತಿಗೆ ಒಳಗಾಗುವುದನ್ನು ನಾವು ಅನೇಕ ಬಾರಿ ನೋಡಿದ್ದೇವೆ.
ಸ್ವಭಾವತಃ ಪಾಂಡವರು ಗುಣವಂತರು ಮತ್ತು ದೇವೋತ್ತಮ ಶ್ರೀ ಕೃಷ್ಣನನ್ನು ಮಿತ್ರನನ್ನಾಗಿ ಪಡೆದ ಅದೃಷ್ಟವಂತರು. ಭಗವಂತನು ಸ್ವತಃ ಅರ್ಜುನನ ರಥದ ಸಾರಥಿಯಾದ. ಅವನು ಪಾಂಡವರ ಪ್ರತಿನಿಧಿಯಾಗಿ ಕೌರವರ ಆಸ್ಥಾನಕ್ಕೆ ಹೋದ. ಆದರೂ ಪಾಂಡವರು ನಾನಾ ಸಂಕಷ್ಟಗಳಿಗೆ ಗುರಿಯಾಗಬೇಕಾಯಿತು.
ಭೀಮನಿಗೆ ವಿಷ ನೀಡಲಾಯಿತು. ಪಾಂಡವರನ್ನು ಅರಗಿನ ಮನೆಯಲ್ಲಿ ಇಟ್ಟು ಸುಡುವ ಪ್ರಯತ್ನ ಮಾಡಲಾಯಿತು. ದುಷ್ಟ ಕೌರವರ ಆಸ್ಥಾನದಲ್ಲಿ ದ್ರೌಪದಿಯನ್ನು ಅವಮಾನಿಸಲಾಯಿತು. ಜೂಜಿನಲ್ಲಿ ಅವರನ್ನು ಸೋಲಿಸಲಾಯಿತು ಮತ್ತು ಕಾಡಿಗೆ ಅಟ್ಟಲಾಯಿತು. ಅವರು ಹಿಡಿಂಬ ಮತ್ತು ಬಕಾಸುರನಂತಹ ರಾಕ್ಷಸರೊಂದಿಗೆ ಹೋರಾಡಬೇಕಾಯಿತು. ಅವರು ಒಂದು ವರ್ಷ ಅಜ್ಞಾತವಾಸ ಮಾಡಿದರು. ಅನಂತರ ಮಹಾ ಸಮರ – ಕುರುಕ್ಷೇತ್ರ ಯುದ್ಧ ನಡೆಯಿತು.
ಸಮರದ ಅನಂತರವೂ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮನು ಕುರು ವಂಶದ ಏಕೈಕ ಉತ್ತರಾಧಿಕಾರಿ, ಉತ್ತರೆಯ ಗರ್ಭದಲ್ಲಿದ್ದ ಮಗುವನ್ನು ಕೊಲ್ಲಲು ಬ್ರಹ್ಮಾಸ್ತ್ರ ಪ್ರಯೋಗಿಸಿದನು. ಸಾವಿನ ಅಂಚಿನಲ್ಲಿದ್ದ ಭೀಷ್ಮರನ್ನು ನೋಡಲು ಪಾಂಡವರು ಹೋದಾಗ, ಶ್ರೀ ಕೃಷ್ಣನನ್ನು ಮಿತ್ರನನ್ನಾಗಿ ಹೊಂದಿದ್ದರೂ ಅವರು ಪಟ್ಟ ಕಷ್ಟಗಳನ್ನು ನೆನೆದು ಪಿತಾಮಹರು ಕಣ್ಣೀರಿಟ್ಟರು.
ಆದರೆ ಅಂತ್ಯದಲ್ಲಿ ಪಾಂಡು ಪುತ್ರರಿಗೇ ಜಯ ಲಭಿಸಿತು, ಶ್ರೀ ಕೃಷ್ಣನು ಅವರೊಂದಿಗೆ ಇದ್ದನಲ್ಲ. ಜಯಸ್ ತು ಪಾಂಡು ಪುತ್ರಾಣಾಂ ಯೇಷಾಂ ಪಕ್ಷೇ ಜನಾರ್ದನಃ.
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ ವಿಜಯೋ ಭೂತಿರ್ ಧ್ರುವಾ ನೀತಿರ್ ಮತಿರ್ ಮಮ ।।
ಯೋಗೇಶ್ವರನಾದ ಕೃಷ್ಣನು ಎಲ್ಲಿರುವನೋ ಮತ್ತು ಎಲ್ಲಿ ಧನುರ್ಧಾರಿಯಾದ ಅರ್ಜುನನು ಇರುವನೋ ಅಲ್ಲಿ ನಿಶ್ಚಯವಾಗಿಯೂ ಸಿರಿ, ವಿಜಯ, ಅಸಾಧಾರಣ ಶಕ್ತಿ ಮತ್ತು ನೀತಿ ಇವುಗಳು ಇರುತ್ತವೆ.
ಕೃಷ್ಣನ ತಾಯಿ ದೇವಕಿಯು ಕಂಸನ ಸೋದರಿ. ಅವಳ ಎಂಟನೆಯ ಮಗು ಅವನನ್ನು ಕೊಲ್ಲುತ್ತಾನೆಂಬ ವಿಧಿಯ ಹೇಳಿಕೆಯಿಂದ ಹೆದರಿದ್ದ ಕಂಸನು ದೇವಕಿ ಮತ್ತು ವಸುದೇವ ಅವರುಗಳಿಗೆ ಕಿರುಕುಳ ನೀಡಿದನು.
ಪ್ರಹ್ಲಾದನನ್ನು ಕೊಲ್ಲಲು ಅವನ ತಂದೆ ಹಿರಣ್ಯಕಶಿಪು ನಾನಾ ರೀತಿಯಲ್ಲಿ ಪ್ರಯತ್ನಿಸಿದ. ಪ್ರಹ್ಲಾದನನ್ನು ಬೆಂಕಿಯಲ್ಲಿ ಎಸೆಯಲಾಯಿತು. ಬೆಟ್ಟದ ಮೇಲಿನಿಂದ ತಳ್ಳಿದರು. ವಿಷ ನೀಡಿದರು. ವಿಷಪೂರಿತ ಸರ್ಪಗಳಿದ್ದ ಹಳ್ಳದಲ್ಲಿ ಇಟ್ಟರು. ಭಾರಿ ಕಲ್ಲುಗಳ ಕೆಳಗೆ ಜಜ್ಜಲಾಯಿತು. ಆನೆಗಳ ಪಾದಗಳ ಕೆಳಗೆ ಎಸೆಯಲಾಯಿತು. ಪ್ರತಿ ಬಾರಿಯೂ ಭಗವಂತನು ಅವನನ್ನು ರಕ್ಷಿಸಿದ.
ಕೊನೆಗೆ ಹಿರಣ್ಯಕಶಿಪು ಪ್ರಹ್ಲಾದನನ್ನು ಕೊಲ್ಲಲು ತನ್ನ ಖಡ್ಗವನ್ನು ಎತ್ತಿದಾಗ, ಭಗವಂತನು ತನ್ನ ಪ್ರೀತಿಯ ಭಕ್ತನನ್ನು ರಕ್ಷಿಸಲು ಅರ್ಧ ಮಾನವ ಅರ್ಧ ಸಿಂಹದ ರೂಪದಲ್ಲಿ ಪ್ರತ್ಯಕ್ಷನಾಗಿ ರಾಕ್ಷಸನನ್ನು ಕೊಂದನು. ಪ್ರಹ್ಲಾದನು ಸಂಪೂರ್ಣವಾಗಿ ಪಾಪರಹಿತನು. ಆದರೂ ಅವನು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಅವನು ಯಾವಾಗಲೂ ಭಗವಂತನ ಆಶ್ರಯ ಪಡೆದನು ಮತ್ತು ರಕ್ಷಿಸಲ್ಪಟ್ಟನು.
ಭಕ್ತರು ಯಾವಾಗಲೂ ಭಗವಂತನ ರಕ್ಷಣೆಯನ್ನು ಪಡೆಯುವ ಮನಸ್ಥಿತಿಯಲ್ಲಿಯೇ ಇರುತ್ತಾರೆ. ಕಷ್ಟಗಳಿದ್ದಾಗ, ಅವು ಯಾವಾಗಲೂ ಸ್ವಂತ ಪಾಪದ ಕ್ರಿಯೆಗಳಿಂದ ಉಂಟಾಗಿದ್ದಲ್ಲದಿರಬಹುದು, ಭಕ್ತರು ಭಗವಂತನ ಮೇಲೆ ಅವಲಂಬಿತರಾಗುತ್ತಾರೆ. ಲೌಕಿಕ ಲೋಕವೇ ಹೀಗೆ, ಇಲ್ಲಿ ಯಾರನ್ನೂ ಬಿಡುವುದಿಲ್ಲ ಎಂಬುವುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಅವರು ಭಗವಂತನ ರಕ್ಷಣೆ ಪಡೆಯುವ ಭಾಗ್ಯಶಾಲಿಗಳು.
ಕುಂತಿಯ ಪ್ರಾರ್ಥನೆ
ಪಾಂಡವರ ತಾಯಿ ಮಹಾರಾಣಿ ಕುಂತಿಯು ಶ್ರೀ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿದಳು :
ವಿಪದಃ ಸಂತು ತಾಃ ಶಶ್ವತ್ ತತ್ರ ತತ್ರ ಜಗದ್ ಗುರೋ ।
ಭವತೋ ದರ್ಶನಂ ಯತ್ ಸ್ಯಾದ್ ಅಪುನರ್ ಭವ ದರ್ಶನಂ ।।
“ನಿನ್ನನ್ನು ಪದೇ ಪದೇ ನೋಡುವಂತಾಗಲು ಎಲ್ಲ ಸಂಕಷ್ಟಗಳು ಪದೇ ಪದೇ ಬರಲಿ ಎಂದು ನಾನು ಆಶಿಸುವೆ. ನಿನ್ನನ್ನು ನೋಡುವುದೆಂದರೆ ನಾವು ಪುನರ್ ಜನ್ಮಗಳನ್ನು ನೋಡುವುದಿಲ್ಲ ಎಂದು ಅರ್ಥ.” ಭಕ್ತರಿಗೆ ಸಂಕಷ್ಟಗಳೆಂದರೆ ಭಗವಂತನನ್ನು ನೋಡುವ ಮತ್ತು ಅವನ ರಕ್ಷಣೆಯನ್ನು ಆನಂದಿಸುವ ಅವಕಾಶಗಳು.
ಈ ಐಹಿಕ ಲೋಕದಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಅಪಾಯಗಳಿವೆ – ಪದಂ ಪದಂ ಯದ್ ವಿಪದಾಂ ಮತ್ತು ಇದು ಭಕ್ತರಿಗೆ ಸೂಕ್ತ ಸ್ಥಳವಲ್ಲ. ಆದರೆ ಭಗವಂತನ ಧ್ಯೇಯವನ್ನು ಕಾರ್ಯಗತಗೊಳಿಸಲು ಭಕ್ತರು ಈ ಲೌಕಿಕ ಲೋಕಕ್ಕೆ ಬರುತ್ತಾರೆ.
ಶ್ರೀಲ ಪ್ರಭುಪಾದರು ಕೃಷ್ಣ ಪ್ರಜ್ಞೆ ಆಂದೋಲನವನ್ನು ಜಗತ್ತಿನಾದ್ಯಂತ ಹರಡಲು ಈ ಗ್ರಹದಲ್ಲಿ ಅವತರಿಸಿದರು. ಅವರು ಭಾರತೀಯರಿಗೆ ಬೋಧಿಸಲು ಪ್ರಯತ್ನಿಸಿದಾಗ ಯಾರೂ ಕಿವಿಗೊಡಲಿಲ್ಲ. ಅವರು ನ್ಯೂಯಾರ್ಕ್‌ಗೆ ಹೋದರು. ಅಲ್ಲಿನ ಬಹುತೇಕ ಜನರು ತಾಮಸ ಮತ್ತು ರಾಜಸ ಗುಣಗಳಿಗೆ ಒಳಗಾದವರು. ಮತ್ತು ಅವರು ಲೌಕಿಕ ಜೀವನ ಶೈಲಿಯಲ್ಲಿ ಮಗ್ನರಾಗಿರುವವರು. ಆದರೆ ಅವರು ಮುಕ್ತ ಮನಸ್ಸು ಉಳ್ಳವರು ಮತ್ತು ಶ್ರೀಲ ಪ್ರಭುಪಾದರ ಬೋಧನೆಗಳಿಗೆ ಗ್ರಹಣಾಕಾಂಕ್ಷಿಗಳಾಗಿದ್ದರು. ಅವರು ವಿಶ್ವಾದ್ಯಂತ ಯಾತ್ರೆ ಕೈಗೊಂಡು ಎಲ್ಲರಿಗೂ ಬೋಧಿಸಿದರು.
ಶ್ರೀಲ ಪ್ರಭುಪಾದರು ಒಮ್ಮೆ ಮಾತ್ರ ರಷ್ಯಕ್ಕೆ ಹೋಗಿದ್ದರು. ಅಲ್ಲಿ ಅವರು ಸಂವಾದ ನಡೆಸಿದ ಪ್ರೊ. ಕೊಟೋವ್‌ಸ್ಕಿ ಹೆಚ್ಚಿನ ಆಸಕ್ತಿ ತೋರಲಿಲ್ಲ. ಆದರೆ ರಷ್ಯದ ಒಬ್ಬ ಯುವಕ (ಅನಂತ ಶಾಂತಿ ದಾಸ) ಪ್ರಭುಪಾದರ ಶಿಷ್ಯನಾದ ಮತ್ತು ಆಂದೋಲನದ ಧ್ಯೇಯವನ್ನು ಪ್ರಚಾರ ಪಡಿಸಲು ಪ್ರಯತ್ನಿಸಿದನು.
ರಷ್ಯದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಕೃಷ್ಣ ಪ್ರಜ್ಞೆಯ ಸಿದ್ಧಾಂತವನ್ನು ಸ್ವೀಕರಿಸಲು ಮತ್ತು ಭಗವದ್ಗೀತೆಯ ತತ್ತ್ವವನ್ನು ಆಚರಿಸಲು ಪ್ರಯತ್ನಿಸುತ್ತಿದ್ದವರನ್ನು ಹಿಂಸೆಗೆ ಗುರಿಪಡಿಸಲಾಯಿತು. ಆದರೆ ಅವರು ವಿಚಲಿತರಾಗಲಿಲ್ಲ. ತೀವ್ರ ಶಿಕ್ಷೆ ಅನುಭವಿಸುವಲ್ಲಿ ಅವರ ತಪ್ಪೇನೂ ಇರಲಿಲ್ಲ. ಅವರು ತಮ್ಮ ಆಧ್ಯಾತ್ಮಿಕ ಗುರುವಿನ ಆದೇಶದಂತೆ ಧ್ಯೇಯವನ್ನು ಹರಡಲು ಪ್ರಯತ್ನಿಸುತ್ತಿದ್ದರು, ಅಷ್ಟೆ.
ಅತಿ ಶೀಘ್ರದಲ್ಲಿ, ರಷ್ಯದಲ್ಲಿ ಪರಿಸ್ಥಿತಿ ಬದಲಾಯಿತು ಮತ್ತು ಅನುಕೂಲಕರ ವಾತಾವರಣ ಉಂಟಾಯಿತು. ಭಕ್ತರ ಸಂಖ್ಯೆಯೂ ಕ್ಷಿಪ್ರ ಗತಿಯಲ್ಲಿ ಹೆಚ್ಚಾಯಿತು.
ಅಂತಹ ಅನನುಕೂಲ ಪರಿಸ್ಥಿತಿಗೆ ಒಳಗಾದಾಗ ಭಕ್ತರು ಅದನ್ನು ಭಗವಂತನ ಧ್ಯೇಯದಲ್ಲಿ ಸೇವೆ ಸಲ್ಲಿಸುವ ಅವಕಾಶವೆಂದು ಸ್ವೀಕರಿಸಬೇಕು. ಹೌದು, ಭಗವಂತನು ನಮಗೆ ಕೀರ್ತಿ ಪಡೆಯಲು ಅವಕಾಶ ಕಲ್ಪಿಸುತ್ತಿದ್ದಾನೆ.
ಅರ್ಜುನನಿಗೆ ಭಗವಂತನ ಪರವಾಗಿ ಹೋರಾಡುವ ಅವಕಾಶ ಲಭಿಸಿತ್ತು. ಕೃಷ್ಣನು ಅವನಿಗೆ ಹೇಳಿದ : ನಿಮಿತ್ತ ಮಾತ್ರಂ ಭವ : ಹೋರಾಡಲು ಸಿದ್ಧನಾಗು ಮತ್ತು ಕೀರ್ತಿಯನ್ನು ಗಳಿಸು. ನನ್ನ ವ್ಯವಸ್ಥೆಯಿಂದ ನಿನ್ನ ವೈರಿಗಳನ್ನು ಈಗಾಗಲೇ ಸಂಹರಿಸಲಾಗಿದೆ. ಹೋರಾಟದಲ್ಲಿ ನೀನು ಒಂದು ಸಾಧನವಾಗಬಹುದು ಮತ್ತು ಪ್ರತಿಸ್ಪರ್ಧಿ ಇಲ್ಲದಂತಹ ಸಾಮ್ರಾಜ್ಯವನ್ನು ಅನುಭವಿಸು.
ಎಲ್ಲ ಅಪಾಯಗಳಿಂದ ತನ್ನ ಭಕ್ತರನ್ನು ಕಾಪಾಡಲು ದೇವೋತ್ತಮನು ಸದಾ ಸಿದ್ಧನಿರುತ್ತಾನೆ. ಭಕ್ತರು ತಮ್ಮ ಬದುಕಿನಲ್ಲಿ ಕಷ್ಟಗಳನ್ನು ಎದುರಿಸಿದಾಗ ಭಗವಂತನಲ್ಲಿ ಆಶ್ರಯ ಪಡೆದು ಶರಣಾಗುತ್ತಾರೆ.
ಆಸುರೀ ಶಕ್ತಿಗಳು ಇದ್ದೇ ಇವೆ. ಅವರಿಗೆ ಏನು ಮಾಡಬೇಕು, ಮಾಡಬಾರದು ಎಂಬುವುದು ಗೊತ್ತಿಲ್ಲ. ಅವರು ಸದಾ ಮನಬಂದಂತೆ ವರ್ತಿಸುತ್ತಾರೆ ಮತ್ತು ರಜೋ ಗುಣ ಮತ್ತು ತಮೋ ಗುಣದ ಪ್ರಭಾವದಲ್ಲಿ ತಮಗಿಷ್ಟ ಬಂದಂತೆ ಮಾಡುತ್ತಾರೆ. ಅಂತಹ ಅಹಂಕಾರದ ಧೋರಣೆಯಿಂದ ರಾಕ್ಷಸರು ಭಕ್ತರಿಗೆ ತೊಂದರೆ ಕೊಡಲು ಪ್ರಯತ್ನಿಸುತ್ತಾರೆ.
ಆದರೆ ಬೋಧಿಸುವ ಧ್ಯೇಯದಲ್ಲಿರುವ ಭಕ್ತರು ಭಗವಂತನಿಗೆ ಸೇವೆ ಸಲ್ಲಿಸುವ ತಮ್ಮ ದೃಢ ಸಂಕಲ್ಪದಿಂದ ವಿಚಲಿತರಾಗಬಾರದು. ರಾಕ್ಷಸರ ಚಟುವಟಿಕೆಯಿಂದ ಅವರು ನಿರುತ್ಸಾಹಗೊಳ್ಳಬಾರದು. ಅವರು ನರಸಿಂಹ ರೂಪದ ಭಗವಂತನಲ್ಲಿ ಆಶ್ರಯ ಪಡೆದು ರಕ್ಷಣೆ ಕೋರಬೇಕು.
ಕಲಿ ಯುಗದಲ್ಲಿ ಈ ರಾಕ್ಷಸೀ ಶಕ್ತಿಯು ನಮ್ಮೆಲ್ಲರಲ್ಲಿಯೂ ಇದೆ. ರಾಕ್ಷಸ ಪ್ರವೃತ್ತಿ ಮೇಲುಗೈ ಸಾಧಿಸಿದಾಗ ನಾವು ಪಾಪ ಕೃತ್ಯಗಳನ್ನು ಎಸಗುತ್ತೇವೆ. ಆದರೆ ನಾವು ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು.
ಏಕೈಕ ಚಿಕಿತ್ಸೆ ಎಂದರೆ ಹರೇ ಕೃಷ್ಣ ಮಹಾ ಮಂತ್ರವನ್ನು ಜಪಿಸುವುದು. ಮತ್ತು ಭಗವಂತನನ್ನು ಪೂಜಿಸುತ್ತ, ಆಹಾರವನ್ನು ಅರ್ಪಿಸುತ್ತ, ಪ್ರಸಾದವನ್ನು ಸ್ವೀಕರಿಸುತ್ತ, ಧರ್ಮ ಗ್ರಂಥಗಳನ್ನು ಓದುತ್ತ ಮತ್ತು ಪ್ರಭುವಿನ ಸೇವೆ ಮಾಡುತ್ತ ನಾವು ಅಲೌಕಿಕ ಸಂಗದಲ್ಲಿರಬೇಕು. ಆಗ ರಾಕ್ಷಸೀ ಪ್ರವೃತ್ತಿಗಳು ಕ್ರಮೇಣ ದುರ್ಬಲಗೊಳ್ಳುತ್ತವೆ ಮತ್ತು ಕೊನೆಗೆ ಕಣ್ಮರೆಯಾಗುತ್ತವೆ.