ಮಧುಮಂಡಲ

(ಕೃಷ್ಣನ ವಿದ್ಯಾಭ್ಯಾಸ ಸಮಯದಲ್ಲಿ ನಡೆದ ಒಂದು ಘಟನೆಯ ಮೇಲೆ ಆಧಾರಿತವಾದ ಒಂದು ಕಿರುನಾಟಕ).

ರಚನೆ: ಪದ್ಮಿನಿ ಬಾಲು

ಪಾತ್ರ ಪರಿಚಯ:

ಸಾಂದೀಪಿನೀ ಮುನಿಗಳು   ಶ್ರೀ ಕೃಷ್ಣ
ಶಾಂಡಿಲ್ಯ ಮುನಿ  ಬಲರಾಮ
ಋಷಿ ಪತ್ನಿ  ಮಧುಮಂಡಲ
ವಸುದೇವ ಸುದಾಮ
ಸೇವಕರು ಶಿಷ್ಯರು

             

ದೃಶ್ಯ – 1

(ಸಾಂದೀಪಿನೀ ಮುನಿಗಳ ಆಶ್ರಮ. ಗುರುಕುಲದಲ್ಲಿ ಹಲವಾರು ಮಕ್ಕಳ ಗುಂಪುಗಳಿವೆ. ಕೆಲವರು ಅಭ್ಯಾಸದಲ್ಲಿ ತೊಡಗಿದ್ದಾರೆ. ಕೆಲ ಮಕ್ಕಳು ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ಆಟದಲ್ಲಿ ಮಗ್ನರಾಗಿದ್ದಾರೆ. ಎಂಟು ವರ್ಷದ ಬಾಲಕರಿಂದ ಹದಿನಾರು ವರ್ಷದ ಯುವಕರವರೆಗೂ ವಿವಿಧ ವಯಸ್ಸಿನ ವಿದ್ಯಾರ್ಥಿಗಳನ್ನು ಕಾಣಬಹುದು. ಎಲ್ಲರೂ ಪಂಚೆ ಧರಿಸಿ ಧೋತ್ರ ಹೊದ್ದಿದ್ದಾರೆ. ಶಿಖಾ ಮತ್ತು ಯಜ್ಞೋಪವೀತಧಾರಿಗಳು. ಹಣೆಯಲ್ಲಿ ಗೋಪೀ ಚಂದನ).

ಒಂದು ಕಡೆ ಗುರುಪೀಠವಿದೆ. ಅದರ ಮುಂದೆ ವಿದ್ಯಾರ್ಥಿಗಳಿಗಾಗಿ ಚಾಪೆಗಳಿವೆ. ಒಂದೆರಡು ನಿಮಿಷಗಳ ನಂತರ ಸಾಂದೀಪಿನೀ ಮುನಿಗಳು ಆಗಮಿಸಿ ಆಸೀನರಾಗುತ್ತಾರೆ. ಮಧ್ಯ ವಯಸ್ಸನ್ನು ಮೀರಿದ ಶುಭ್ರ ಶ್ವೇತ ವಸ್ತ್ರಧಾರಿಗಳು. ಬಿಳಿಯ ಕೂದಲಿನ ಶಿಖೆ, ಮತ್ತು ಉದ್ದವಾದ ಗಡ್ಡ ಮೀಸೆಗಳು. ಹಣೆಯಲ್ಲಿ ಢಾಳಾಗಿ ಕಾಣಿಸುವ ಗೋಪೀ ಚಂದನ. ಗುರುಗಳ ಪ್ರವೇಶವಾಗುತ್ತಲೇ ಶಿಷ್ಯರೆಲ್ಲ ಕ್ರಮವಾಗಿ ಅವರಿಗೆ ನಮಸ್ಕರಿಸಿ ತಮ್ಮ ಪೀಠದಲ್ಲಿ ಆಸೀನರಾಗಿತ್ತಾರೆ.

(ಎಂಟು ವರ್ಷದ ಬಾಲಕನೊಬ್ಬ ಪ್ರವೇಶಿಸಿ ಬಾಗಿಲ ಬಳಿಯಲ್ಲಿಯೇ ಹೆದರಿದವನಂತೆ ನಿಲ್ಲುತ್ತಾನೆ. ಧೂಳಿ ಧೂಸರವಾದ ಕೂದಲು ಮತ್ತು ದೇಹ. ಅಲ್ಲಲ್ಲಿ ಹರಿದ ಪಂಚೆ, ಧೋತ್ರ ಮತ್ತು ಶಿರವಸ್ತ್ರ ಎದೆಯ ಮೇಲೆ ಯಜ್ಞೋಪವೀತ. ನಿಂತಲ್ಲಿಂದಲೇ ನಮಸ್ಕರಿಸುತ್ತಾನೆ).

ಸಾಂದೀಪಿನೀ: ಬಾ ಮಗೂ, ಒಳಗೆ ಬಾ, ಬಹಳ ದೂರದಿಂದ ನಡೆದು ಬಂದಿರುವನಂತೆ ಕಾಣುತ್ತೀಯೆ. ಬಹು ಬಳಲಿರುವೆ. ವತ್ಸ ಗುಣಶೇಖರ, ಅವನಿಗೆ ಕಾಲು ತೊಳೆಯಲು ನೀರು ಕೊಡು.

ಗುಣಶೇಖರ: ಅಪ್ಪಣೆ ಗುರುವರ್ಯ.

(ಬಾಲಕನೊಡನೆ ಹೋಗಿ ಒಂದೆರಡು ಕ್ಷಣಗಳಲ್ಲಿ ಹಿಂದಿರುಗಿ ಬರುತ್ತಾನೆ. ಬಾಲಕ ಗುರುಗಳ ಮುಂದೆ ಕೈಕಟ್ಟಿ ನಿಲ್ಲುತ್ತಾನೆ)

ಸಾಂದೀಪಿನೀ: ಈಗ ಹೇಳು ಮಗೂ. ಎಲ್ಲಿಂದ ಬಂದೆ? ನಿನ್ನ ಹೆಸರೇನು? ಬಂದ ಕಾರಣವೇನು? ನಿನ್ನ ಗೋತ್ರಸೂತ್ರಗಳ ಪರಿಚಯ ಮಾಡಿಕೊ.

ಬಾಲಕ: ಜನರು ನನ್ನನ್ನು ಸುದಾಮನೆಂದು ಕರೆಯುತ್ತಾರೆ, ಆಚಾರ್ಯ. ನನ್ನ ತಂದೆ ತಾಯಿಗಳಾರೋ ತಿಳಿಯದು. ನನಗೆ ಬುದ್ಧಿ ತಿಳಿಯುವುದಕ್ಕೆ ಮೊದಲೇ ಅವರು ಸ್ವರ್ಗಸ್ಥರಾಗಿದ್ದರು. ಊರಿನ ಜನ ನನಗೆ ಊಟ, ಬಟ್ಟೆ ಕೊಟ್ಟು ಸಾಕಿ ಉಪನಯನ ಮಾಡಿದರು. ದೂರದ ಸೌರಾಷ್ಟ್ರ ನನ್ನ ಊರು.

ಸಾಂದೀಪಿನೀ: ಸೌರಾಷ್ತ್ರದಿಂದ ಇಲ್ಲಿಯವರೆಗೂ ನಡೆದೇ ಬಂದೆಯೇನು?

ಸುದಾಮ: ಹೌದು ಗುರುವೇ.

ಸಾಂದೀಪಿನೀ:  ಬಂದ ಕಾರಣವೇನು?

ಸುದಾಮ: ವಿದ್ಯಾರ್ಜನೆಯೇ ನನ್ನ ಉದ್ದೇಶ. ಅದಕ್ಕಾಗಿಯೇ ತಮ್ಮನ್ನು ಹುಡುಕಿಕೊಂಡು ಬಂದೆ. ದಯವಿಟ್ಟು ನನ್ನನ್ನು ಅನುಗ್ರಿಸಿ, ಗುರುದೇವ.

ಸಾಂದೀಪಿನೀ: (ಸ್ವಗತ) ಆಹಾ, ಇಷ್ಟು ಚಿಕ್ಕ ವಯಸ್ಸಿಗೆ ಎಂತಹ ಒಳ್ಳೆಯ ಸಂಸ್ಕಾರ! (ಪ್ರಕಟ) ಆಗಬಹುದು. ಸುದಾಮ, ಕುಳಿತುಕೊ.

(ಸುದಾಮ ದೀರ್ಘದಂಡ ಪ್ರಣಾಮ ಮಾಡಿ ಕುಳಿತುಕೊಳ್ಳವನು).

(ಶಾಂಡಿಲ್ಯ ಮುನಿಗಳು ತಮ್ಮ ಪುತ್ರನೊಡನೆ ಆಗಮಿಸುವರು. ಅವರನ್ನು ಕಂಡು ಸಾಂದೀಪಿನೀ ಮುನಿಗಳು ಎದ್ದುನಿಲ್ಲುವರು. ಪರಸ್ಪರ ಪ್ರಣಾಮ ವಿಯೋಗವಾಗುವುದು).

ಸಾಂದೀಪಿನೀ: ಶಾಂಡಿಲ್ಯ ಮುನಿಗಳಿಗೆ ಸ್ವಾಗತ. ತಮ್ಮ ಆಗಮನದಿಂದ ಬಡವನ ಕುಟೀರಕ್ಕೆ ಭಾಗ್ಯ ಬಂದಂತಾಯಿತು. ದಯಮಾಡಿ ಆಸನವನ್ನಲಂಕರಿಸಿ. (ಇಬ್ಬರೂ ಕೂಡುವರು).

ಶಾಂಡಿಲ್ಯ:  ಕುಶಲವೇ ಪೂಜ್ಯರೇ? ತಮ್ಮ ಅಗ್ನಿಹೋತ್ರಾದಿ ಕಾರ್ಯಗಳೆಲ್ಲವೂ ಸಾಂಗವಾಗಿ ನೆರವೇರುತ್ತಿರುವುವೇ? ತಮ್ಮ ಗುರುಕುಲವು ಯಾವ ಅಡೆತಡೆಯೂ ಇಲ್ಲದೆ ನಡೆಯುತ್ತಿದೆಯಷ್ಟೆ?

ಸಾಂದೀಪಿನೀ:  ದೈವಾನುಗ್ರಹದಿಂದ ಎಲ್ಲವೂ ಸುಗಮವಾಗಿದೆ. ಮುನಿವರ್ಯರು ಇಷ್ಟು ದೂರ ದಯಮಾಡಿಸಿದ ಕಾರಣವನ್ನು ಕೇಳಬಹುದೆ?

ಶಾಂಡಿಲ್ಯ:  ಸ್ವಾಮೀ, (ನಿಂತಿರುವ ತಮ್ಮ ಮಗನನ್ನು ತೋರಿಸುತ್ತಾ) ಇವನು ನನ್ನ ಪುತ್ರ ಮಧುಮಂಡಲ. ಇವನಿಗೆ ವಿದ್ಯಾದಾನ ಮಾಡುವ ಕೃಪೆದೋರಬೇಕು. ಬಾ ಮಗು, ಆಚಾರ್ಯರಿಗೆ ನಮಸ್ಕರಿಸು.

ಮಧುಮಂಡಲ:  (ಸ್ಥೂಲ ಶರೀರ. ಪಂಚೆಯುಟ್ಟು ಶಲ್ಯ ಹೊದ್ದಿದ್ದಾನೆ. ಹಣೆಯಲ್ಲಿ ಗೋಪೀ ಚಂದನ. ಹೊಸದಾಗಿ ಉಪವೀತವಾದ ಲಕ್ಷಣಗಳನ್ನು ಕಾಣಬಹುದು. ಗುರುವಿಗೆ ಅಭಿವಾದಿಸಿ ನಮಸ್ಕರಿಸಿ ನಿಲ್ಲುತ್ತಾನೆ).

ಸಾಂದೀಪಿನೀ: ತೇಜೋವಾನ್‌‍ಭವ. ಆದರೆ ಮುನಿಗಳೇ, ಸರ್ವ ವೇದವಿದಿತರಾದ ತಾವೇ ತಮ್ಮ ಮಗನ ವಿದ್ಯಾರ್ಜನೆಗಾಗಿ ಮತ್ತೊಬ್ಬ ಗುರುವನ್ನು ಆಶ್ರಯಿಸಬೇಕೇ?

ಶಾಂಡಿಲ್ಯ:  ದಯಮಾಡಿ ಹಾಗೆ ಹೇಳಬೇಡಿ. ತಮ್ಮ ಆಳವಾದ ಜ್ಞಾನದ ಮುಂದೆ ನನ್ನ ಅರಿವು ಸೂರ್ಯನ ಮುಂದೆ ಹಣತೆಯಂತೆ. ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿ.

ಸಾಂದೀಪಿನೀ:  ತಥಾಸ್ತು.

ಶಾಂಡಿಲ್ಯ: ಇನ್ನು ನನಗೆಅಪ್ಪಣೆ ಕೊಡಿ. (ತೆರಳುವರು).

ಸಾಂದೀಪಿನೀ: ಕುಳಿತುಕೊ ಮಧುಮಂಡಲ. (ಮಧುಮಂಡಲ ಶಿಷ್ಯರೊಡನೆ ಕೂಡುವನು).

(ನೇಪಥ್ಯದಲ್ಲಿ ಗಡಿಬಿಡಿ. ರಾಜೋತೀತವಾದ ವೇಶಭೂಷಣಗಳನ್ನು ತೊಟ್ಟು ವಸುದೇವನ ಪ್ರವೇಶ. ಬಲರಾಮ ಕೃಷ್ಣರು ಹಿಂಬಾಲಿಸುತ್ತಾರೆ. ಪೀತಾಂಬರ, ಹಣೆಯಲ್ಲಿ ಗೋಪೀ ಚಂದನ, ನೂತನ ಯಜ್ಞೋಪವೀತ ಎದೆಯಮೇಲೆ ರಾರಾಜಿಸುತ್ತಿದೆ. ಅವರನ್ನು ನೋಡಿದೊಡನೆಯೇ ಬಾಲಕರೆಲ್ಲ ಮೋಡಿಗೊಳಗಾದವರಂತೆ ಎದ್ದು ನಿಲ್ಲುತ್ತಾರೆ. ಸಾಂದೀಪಿನೀ ಮುನಿಗಳು ವಸುದೇವನನ್ನು ಸ್ವಾಗತಿಸುತ್ತಾರೆ).

ಸಾಂದೀಪಿನೀ: ಬಾ ವತ್ಸ, ವಸುದೇವ, ಇಂದಿನ ದಿನ ಎಂತಹ ಸುದಿನ! ಈ ಆಶ್ರಮಕ್ಕೆ ನೀನು ಬಂದಿದ್ದು ಬಹಳ ಆನಂದವಾಯಿತು. ಕುಳಿತುಕೊ. (ತಮ್ಮ ಪಕ್ಕದಲ್ಲಿರುವ ಆಸನವನ್ನು ತೋರುವರು. ವಸುದೇವ ಸಾಂದೀಪಿನೀ ಮುನಿಗಳಿಗೆ ತಲೆಬಾಗಿ ನಮಸ್ಕರಿಸುವನು ಮತ್ತು ಆಸೀನನಾಗುವನು. ಬಲರಾಮ ಕೃಷ್ಣರು ಅವನನ್ನು ಅನುಸರಿಸಿ ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ ಅವನ ಹಿಂದೆ ನಿಲ್ಲುವರು. ಸೇವಕರು ಹರಿವಾಣಗಳನ್ನಿಟ್ಟು ಹಿಂದೆ ಸರಿಯುವರು). ನೀನು,  ನಿನ್ನ ಕುಟುಂಬ, ನಿನ್ನ ಪ್ರಜೆಗಳೆಲ್ಲರೂ ಕುಶಲವೇ? ರಾಜ್ಯ ಸುಭಿಕ್ಷವಾಗಿರುವುದೆ? ಪ್ರಜೆಗಳು ತೃಪ್ತರಾಗಿರುವರೇ? ಬ್ರಾಹ್ಮಣರು ವೇದಾಧ್ಯನದಲ್ಲಿ ನಿರತರಾಗಿರುವರೇನು? ನಿಃಸ್ವಾರ್ಥಿಗಳಾದ ಮಂತ್ರಿ ಪುರೋಹಿತರಿಂದ ಸಲಹೆ ಪಡೆದು ರಾಜ್ಯ ನಡೆಸುತ್ತಿರುವೆಯಾ? ಗೋವೃದ್ಧಿಯಾಗುತ್ತಿರುವುದಷ್ಟೆ?

ವಸುದೇವ:  ಆಚಾರ್ಯ, ತಮ್ಮ ಆಶಿರ್ವಾದದಿಂದ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಕಂಸವಧೆಯಾಗಿ ಮಹಾರಾಜ ಉಗ್ರಸೇನರು ಪುನರಭಿಶಿಕ್ತರಾಗಿ ರಾಜ್ಯಾಡಳಿತ ವಹಿಸಿಕೊಂಡ ಮೇಲೆ ಎಲ್ಲ ಕಡೆಯೂ ಶಾಂತಿ ನೆಲೆಸಿದೆ.

ಸಂದೀಪಿನೀ : ರಾಜಾ, ನಿನ್ನ ಸಂಗಡ ಬಂದಿರುವ ಈ ಸುಕುಮಾರ ಬಾಲಕರಾರು? ಬಂದ ವಿಷಯವನ್ನು ಸಾವಧಾನವಾಗಿ ಶೃತಿ ಪಡಿಸು.

ವಸುದೇವ:  ಋಷಿವರ್ಯ, ಇವರಿಬ್ಬರೂ ನನ್ನ ಮಕ್ಕಳಾದ ಕೃಷ್ಣ ಬಲರಾಮರು. ಉಪವೀತರಾಗಿ ಗುರುಕುಲ ವಾಸ ನಿಮಿತ್ತ ತಮ್ಮಲ್ಲಿಗೆ ಕರೆತಂದಿರುವೆನು. ಇವರಿಬ್ಬರನ್ನೂ ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಿ ಜ್ಞಾನದಾನ ಮಾಡಬೇಕೆಂಬುದೇ ನನ್ನ ಕೋರಿಕೆ.

ಸಾಂದೀಪಿನೀ: (ಸ್ವಗತ) ಆಹಹಹಾ, ಎಂತಹ ಕರ್ಣಾನಂದಕರವಾದ ಮಾತುಗಳು! ವಾಸುದೇವ, ಗುರುಗಳಿಗೆಲ್ಲಾ ಪರಮಗುರುವಾದ ನಿನಗೆ ನಾನು ಗುರುವೇ? ಅಕಿಂಚನನಾದ ನನ್ನ ಮೇಲೆ ನಿನ್ನದೆಷ್ಟು ಅನುಗ್ರಹ! ಲೀಲಾವಿಹಾರೀ, ನಿನ್ನ ಲೀಲಾ ವಿನೋದಗಳಿಗೆ ಎಣಿಕೆಯುಂಟೆ? (ಪ್ರಕಟ) ವಸುದೇವ, ನನ್ನಲ್ಲಿರುವ ವಿದ್ಯೆಯನ್ನೆಲ್ಲಾ ಇವರಿಬ್ಬರಿಗೆ ಧಾರೆಯರೆಯುತ್ತೇನೆ. ಆಗ ನನ್ನ ವಿದ್ಯೆಯೂ ಸಾರ್ಥಕವಾಗುತ್ತದೆ. ನೀನು ನಿಶ್ಚಿಂತನಾಗಿ ನಿನ್ನ ರಾಜ್ಯಕ್ಕೆ ಮರಳಬಹುದು.

ವಸುದೇವ: ಮಕ್ಕಳನ್ನು ತಮ್ಮ ಮಡಿಲಿನಲ್ಲಿ ಹಾಕಿದ ಮೇಲೆ ನನಗಿನ್ನಾವ ಚಿಂತೆ, ಆಚಾರ್ಯ. ನಾನಿನ್ನು ಹೋಗಿ ಬರುತ್ತೇನೆ. (ನಮಸ್ಕರಿಸಿ ಹೊರಡುವನು).

ಸಾಂದೀಪಿನೀ: (ಕೃಷ್ಣ ಬಲರಾಮರನ್ನು ಕುರಿತು) ಕುಳಿತುಕೊಳ್ಳಿ ಮಕ್ಕಳೇ. (ಅವರು ಮಧುಮಂಡಲ ಮತ್ತು ಸುದಾಮರೊಡನೆ ಕೂಡುವರು). ನಾಳೆಯಿಂದ ಪಾಠಪ್ರವಚನಗಳು ಪ್ರಾರಂಭವಾಗುತ್ತವೆ. ಈ ದಿನ ನೀವೆಲ್ಲರೂ ತಂದಿರುವ ಬುತ್ತಿಯನ್ನು ತಿಂದು ವಿಶ್ರಮಿಸಿಕೊಳ್ಳಿ. ಹತ್ತಿರದ ಆಶ್ರಮ ಮತ್ತು ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಮನೆಗೆ ಮರಳಿ ಮರುದಿನ ಬರಬಹುದು. ಆಶ್ರಮದಲ್ಲೇ ತಂಗುವ ವಿದ್ಯಾರ್ಥಿಗಳಿಗೆ ಅಮ್ಮನು ಅಡುಗೆ ಮಾಡಿ ಬಡಿಸುತ್ತಾರೆ. ನಿಮ್ಮ ಹೆತ್ತಮ್ಮನಂತೆಯೇ ಪಾಲಿಸಿ ಪೋಷಿಸುತ್ತಾರೆ. ನೀವೆಲ್ಲರೂ ಅಮ್ಮನಿಗೆ ನೀರು ತರುವುದರಲ್ಲಿ, ಸೌದೆ ಕಡಿದುಕೊಂಡು ಬರುವುದರಲ್ಲಿ, ಅಶ್ರಮವನ್ನು ಶುಚಿಗೊಳಿಸುವುದರಲ್ಲಿ, ಅಗ್ನಿಹೋತ್ರದಲ್ಲಿ, ದರ್ಭೆ ಮತ್ತು ಪೂಜಾದ್ರವ್ಯಗಳನ್ನು ಅಣಿಮಾಡುವುದೇ ಮುಂತಾದ ಕಾರ್ಯದಲ್ಲಿ ಸಹಾಯ ಮಾಡಬೇಕು.

ಮತ್ತೊಂದು ಮಾತನ್ನು ಗಮನವಿಟ್ಟು ಕೇಳಿರಿ. ನೀವೆಲ್ಲರೂ ಗುರುಕುಲದ ನಿಯಮಗಳನ್ನು ಪಾಲಿಸಬೇಕು. ನಿಷ್ಠೆಯಿಂದ ಅಧ್ಯಯನ ಮಾಡಬೇಕು. ಶಿಸ್ತು ಸಂಯಮಗಳನ್ನು ಕಾಯ್ದುಕೊಳ್ಳಬೇಕು. ವನದ ಪ್ರಾಣಿಗಳಿಗಾಗಲಿ ಅಥವಾ ಪಕ್ಷಿಗಳಿಗಾಗಲೀ ಅಥವಾ ಗಿಡಬಳ್ಳಿಗಾಗಲೀ, ನೋವಾಗದಂತೆ ನೋಡಿಕೊಳ್ಳಬೇಕು. ನೋವಾದಲ್ಲಿ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ತಿಳಿಯಿತೇ?

(ತೆರೆ ಬೀಳುವುದು).

ದೃಶ್ಯ – 2

(ದೊಡ್ಡ ಮರದ ನೆರಳಿನಲ್ಲಿ ತಂತಮ್ಮ ಬುತ್ತಿಗಳೊಡನೆ ಕುಳಿತಿದ್ದಾರೆ).

ಕೃಷ್ಣ:  ನಾವೆಲ್ಲರೂ ನಮ್ಮ ಬುತ್ತಿಗಳನ್ನು  ಹಂಚಿಕೊಂಡು ತಿನ್ನೋಣವೇ?

ಕೆಲವರು:  ಹಂಚಿಕೊಂಡು ತಿನ್ನುವುದೆ?

ಬಲರಾಮ: ಹೌದು, ಏಕಾಗಬಾರದು? ಕೃಷ್ಣನು ಹೇಳಿದ್ದು ಸರಿ. ಹಂಚಿಕೊಂಡು ತಿನ್ನುವುದರಲ್ಲಿ ಬರುವ ವಿನೋದವನ್ನು ನೋಡಿ.

ಎಲ್ಲರೂ:  ಹೌದು, ಹೌದು, ಕೃಷ್ಣಾ ನಿನ್ನ ಬುತ್ತಿ ಬಹಳ ದೊಡ್ಡದಾಗಿದೆ. ಏನು ತಂದಿರುವೆ?

ಕೃಷ್ಣ:  ಮೊದಲು ನಿಮ್ಮ ಬುತ್ತಿಯ ಏನಿದೆ ಹೇಳಿ.

ಒಬ್ಬ: ನನ್ನದರಲ್ಲಿ ರಸಾಯನ.

ಮತ್ತೊಬ್ಬ: ನನ್ನಮ್ಮ ಗಟ್ಟಿ ಮೊಸರಿನಲ್ಲಿ ಅನ್ನ ಕಲೆಸಿ ಕೊಟ್ಟಿದ್ದಾಳೆ.

ಮಗದೊಬ್ಬ:  ನಾನಂತು ಕ್ಷೀರಾನ್ನವನ್ನು ತಂದಿದ್ದೇನೆ.

ಕೃಷ್ಣ: ಆಹಾ, ಕೇಳಿದರೇನೇ ಬಾಯಲ್ಲಿ ನೀರು ಬರುತ್ತಿದೆ. ಮಧುಮಂಡಲ ನಿನ್ನ ಬುತ್ತಿಯಲ್ಲೇನಿದೆ.

ಮಧು ಮಂಡಲ: ಉಪ್ಪು ಮಣಸು ಹಾಕಿದ ಗಂಜಿಯೂಟ. ನನ್ನಮ್ಮ ಬಹಳ ರುಚಿಯಾಗಿ ಮಾಡುತ್ತಾಳೆ.

ಕೃಷ್ಣ: (ತಲೆ ತಗ್ಗಿಸಿಕೊಂಡಿರುವ ಸುದಾಮನ ಕಡೆ ತಿರುಗಿ) ಸುದಾಮ, ನೀನು ದೂರದೂರಿನಿಂದ ಬಂದಿರುವೆ. ಆದ್ದರಿಂದಲೇ ನಿನಗೆ ಬುತ್ತಿ ತರಲಾಗಿಲ್ಲ. ಬಾ, ನನ್ನ ಬುತ್ತಿಯಿಂದ ತಿನ್ನವೆಯಂತೆ.

ಮಕ್ಕಳೆಲ್ಲಾ: ನಾವೆಲ್ಲಾ ಹೇಳಿದೆವು. ಈಗ ಹೇಳು ಕೃಷ್ಣಾ, ನಿನ್ನ ಬುತ್ತಿಯಲ್ಲೇನಿದೆ?

(ಎಲ್ಲರೂ ಕೃಷ್ಣನ ಸುತ್ತಾ ನೆರೆಯುವರು. ಕೃಷ್ಣ ಬಲರಾಮರು ಬುತ್ತಿ ಬಿಚ್ಚುವರು).

ಬಲರಾಮ:  ಕೃಷ್ಣಾ ಅಮ್ಮ ಲಾಡು ಕಳಿಸಿದ್ದಾಳೆ.

ಕೆಲವರು: ಲಾಡುವೆ? ನನಗೆ ಬಹಳ ಇಷ್ಟ.

ಒಬ್ಬ ಹುಡುಗ: ಈ ಪಾತ್ರೆಯಲ್ಲಿ ಬೆಣ್ಣೆಯುಂಡೆಗಳಿವೆ, ನೋಡು.

ಮತ್ತೊಬ್ಬ: ಆಹಾ, ಇದರಲ್ಲಿ ಸಿಹಿ ತಿಂಡಿಗಳು.

ಬಲರಾಮ:  ನನಗೆ ಬಹಳ ಹಸಿವು. ಬೇಗ ತಿನ್ನಲು ಮೊದಲು ಮಾಡೋಣ.

(ಮಕ್ಕಳೆಲ್ಲರೂ ಒಬ್ಬರ ಬುತ್ತಿಯಿಂದೊಬ್ಬರು ತಿನ್ನತೊಡಗುತ್ತಾರೆ. “ಚೆನ್ನಾಗಿದೆ”, ಆಹಾ ಸೊಗಸಾಗಿದೆ”, “ನನಗಿಷ್ಟು ಕೊಡು” “ನನಗೆ ಇನ್ನಷ್ಟು ಬೇಕು” ಎಂಬ ಉದ್ಗಾರಗಳು ಬರುತ್ತವೆ).

ಮಧುಮಂಡಲ: ಕೃಷ್ಣಾ, ಆ ಎನ್ನು, ನಾನೇ ನಿನಗೆ ತಿನ್ನಿಸುತ್ತೇನೆ. (ತಿನ್ನಿಸವನು. ಕೃಷ್ಣನು ಸಂತೋಷದಿಂದ ತಿನ್ನತ್ತಾನೆ).

ಕೃಷ್ಣ: ಜಗದೀಶಾ, ನಿನ್ನಲ್ಲೇನಿದೆ, ತೆಗೆದುಕೊಂಡು ಬಾ. (ಅವನು ತನ್ನ ಬುತ್ತಿಯನ್ನು ಹಿಂಜರಿಯುತ್ತಾ ಕೃಷ್ಣನ ಮುಂದೆ ತಂದಿಡುತ್ತಾನೆ. ಕೃಷ್ಣ ಒಂದು ಚೂರು ರೊಟ್ಟಿ ಮತು ಚಟ್ನಿಯನ್ನು ಬಾಯಿಗೆ ಹಾಕಿಕೊಳ್ಳತ್ತಾ) ಆಹಾ, ರಾಗಿ ರೊಟ್ಟಿ, ಚಟ್ನಿ. ಬಹಳ ರುಚಿಯಾಗಿದೆ. ಅಣ್ಣಾ, ನೀನೂ ತಿಂದು ನೋಡು.

ಬಲರಾಮ: (ತಾನೂ ತಿಂದು) ಹೌದು ಕೃಷ್ಣಾ. ನನಗಿನ್ನೊಂದು ಚೂರು ಕೊಡು.

(ಮಕ್ಕಲೆಲ್ಲರೂ ಒಬ್ಬರಿಗೊಬ್ಬರು ತಿನ್ನಿಸುತ್ತಾ  ಒಬ್ಬರ ಬುತ್ತಿಯಿಂದೊಬ್ಬರು ತಿನ್ನತ್ತಾ ಹುಯಿಲೆಬ್ಬಿಸುತ್ತಾರೆ).

ಕೃಷ್ಣ: ಮಧು ಮಂಡಲ, ನೀನೆಂದೆಯಲ್ಲಾ, ನಿನ್ನಮ್ಮ ಬಹಳ ರುಚಿಯಾಗಿ ಅಡುಗೆ ಮಾಡುತ್ತಾರೆಂದು, ನಾಳೆಯ ದಿನ ನನಗೇನಾದರೂ ಮಾಡಿಸಿಕೊಂಡು ಬರುತ್ತೀಯಾ?

ಮಧುಮಂಡಲ: (ಸಂಭ್ರಮದಿಂದ) ಓಹೋ ಅದಕ್ಕೇನು, ನಾಳೆಯ ದಿನ ನಿನಗಾಗಿ ಸಿಹಿ ತಿಂಡಿಯನ್ನು ಮಾಡಿಸಿ ತಂದು ಕೊಡುತ್ತೇನೆ.

ಬಲರಾಮ: ಅಬ್ಬಾ, ಊಟ ಹೆಚ್ಚಾಗಿ ಹೊಟ್ಟೆ ಭಾರವಾಯಿತು. ನನಗಂತೂ ಕಣ್ಣೆಳೆಯುತ್ತಿದೆ. ಎಲ್ಲರೂ ಮರದ ನೆರಳಿನಲ್ಲಿ ಮಲಗೋಣವೇ?

(ತೆರೆ ಬೀಳುವುದು).

ದೃಶ್ಯ – 3

(ಶಾಂಡಿಲ್ಯ ಮುನಿಗಗಳ ಆಶ್ರಮ. ಶಾಂಡಿಲ್ಯ ಮುನಿಗಳ ಪತ್ನಿ ಬಾಗಿಲಲ್ಲಿ ನಿಂತು ಮಗನನ್ನು ಎದುರು ನೋಡುತ್ತಿರುವಳು. ಉಟ್ಟಿರುವ ಸೀರೆ ಅಲ್ಲಲ್ಲಿ ಹರಿದು ಹೋಗಿದೆ. ಬಡತನ ಎದ್ದು ಕಾಣುತ್ತಿದೆ. ಮಧುಮಂಡಲ ಓಡಿ ಬಂದು ಅಮ್ಮನಿಗೆ ತೆಕ್ಕೆ ಬೀಳುತ್ತಾನೆ).

ಋಷಿ ಪತ್ನಿ: ಬಂದೆಯಾ ಮಗೂ. ಗುರುಕುಲದಲ್ಲಿ ಹೊಸ ಗೆಳೆಯರು ಸಿಕ್ಕಿದರೆ? ಆಶ್ರಮದಲ್ಲಿ ಏನೆಲ್ಲಾ ಮಾಡಿದೆ? ಹಸಿವಾಗುತ್ತಿದೆಯೇ? ಬೆಳಗಿನ ಗಂಜಿಯೂಟ ಸ್ವಲ್ಪ ಮಿಕ್ಕಿದೆ. ಕೊಡುತ್ತೇನೆ. ಕೈಕಾಲು ತೊಳೆದು ಬಾ. ಕೊಡುತ್ತೇನೆ.

ಮಧುಮಂಡಲ:  ಬೇಡವಮ್ಮಾ, ಹೊಟ್ಟೆ ಬಿರಿಯುವಷ್ಟು ತಿಂದಾಯಿತು.

ಋಷಿ ಪತ್ನಿ: ಹೌದೇ? ಏನಷ್ಟು ತಿಂದೆ?

ಮಧುಮಂಡಲ: ಅಮ್ಮಾ, ಕೃಷ್ಣನಂತೆ. ಮಧುರೆಯಿಂದ ಬಂದಿರುವನಂತೆ, ತನ್ನಣ್ಣ ಬಲರಾಮನೊಡನೆ. ಹೆಸರಿನಂತೆಯೇ ನೋಡಲು ಎಷ್ಟು ಚೆಂದವಾಗಿದ್ದಾನೆ. ಮೋಡದ ಮೈಬಣ್ಣ, ಮಿಂಚುತ್ತಿರುವ ಕಣ್ಗಳು, ನವಿರಾದ ಶಿಖೆ. ಸದಾ ನಗುತ್ತಿರುವ ತುಟಿಗಳು.

ಋಷಿ ಪತ್ನಿ: ಆಹಾ, ಕೃಷ್ಣನು ಬಂದಿರುವನೇ? ಅವನು ನಿನ್ನ ಸಹಪಾಠಿಯೇ? ಅದಕ್ಕಿಂತಲೂ ಅದೃಷ್ಟ ಬೇಕೆ ಮಗೂ. ನೀನೇ ಧನ್ಯ.

ಮಧುಮಂಡಲ: ಹಾಗಾದರೆ ನಿನಗೆ ಕೃಷ್ಣನು ಗೊತ್ತೇ ಅಮ್ಮ?

ಋಷಿ ಪತ್ನಿ: ಕೃಷ್ಣನನ್ನರಿಯದವರಾರು ಮಗೂ. ಅವನೇ ಕಂಸನನ್ನು ಕೊಂದವನು. ಯಶೋದೆಯ ಮುದ್ದು ಮಗ. ದೇವಕಿಯ ಕಷ್ಟವನ್ನು ಪರಿಹರಿಸಿದವನು. ಗೋಪಿಯರ ಗೆಳೆಯ. ಅವನನ್ನು ನೋಡಿಯೇ ನಿನ್ನ ಹೊಟ್ಟೆ ತುಂಬಿತೇನು? (ನಗುವಳು).

ಮಧುಮಂಡಲ: ಇಲ್ಲಮ್ಮಾ. ಅವನೆಂತಹ ರುಚಿಯಾದ ಬುತ್ತಿಯನ್ನು ತಂದಿದ್ದ ಗೊತ್ತೇನಮ್ಮಾ. ಅದನ್ನು ನಾವೆಲ್ಲರೂ ಹಂಚಿಕೊಂಡು ತಿಂದೆವು. ಅವನೂ ನಮ್ಮ ಬುತ್ತಿಯಿಂದ ತಿಂದ. ನಾಳೆಯ ದಿನ ನಿನ್ನಿಂದ ಸಿಹಿ ತಿನಿಸನ್ನು ಮಾಡಿಸಿಕೊಂಡು ತರುತ್ತೇನೆಂದು ಅವನಿಗೆ ಮಾತು ಕೊಟ್ಟಿದ್ದೇನೆ. ಎಲ್ಲಾದರೂ ಮರೆತೀಯೆ. ನಾನು ಗುರುಕುಲಕ್ಕೆ ಹೊರಡುವ ಮೊದಲೇ ಸಿದ್ಧ ಪಡಿಸಬೇಕು. (ನೆಗೆಯುತ್ತಾ ಓಡುವನು).

ಋಷಿ ಪತ್ನಿ: (ಬೆಚ್ಚಿ ಬಿದ್ದು) ಹಾಂ, ಸಿಹಿ ತಿನಿಸೇ? ಒಪ್ಪತ್ತಿನ ಅನ್ನಕ್ಕೂ ಇಲ್ಲದ ಬಡವಳ ಬಳಿ ಪರಮಾನ್ನವನ್ನು ಬೇಡಿದೆಯಾ, ಮಧುಸೂದನ! ಇದೇನು ದಯೆಯೋ ಅಥವಾ ಪರೀಕ್ಷೆಯೋ ತಂದೆ? (ಚಿಂತಿಸುತ್ತಾ ಕೂಡುವಳು). (ಶಾಂಡಿಲ್ಯಮುನಿಗಳು ಪ್ರವೇಶಿಸಿ ಬರಿದಾದ ಜೋಳಿಗೆಯನ್ನು ನೆಲದ ಮೇಲಿಟ್ಟು ಕೂಡುವರು. ಪತ್ನಿಯನ್ನು ನೋಡಿ)

ಶಾಂಡಿಲ್ಯ ಮುನಿ:  ಏಕೆ ದೇವಿ, ಬಹಳ ಆಳವಾದ ಚಿಂತೆಯಲ್ಲಿ ಮುಳುಗಿರುವಂತಿದೆಯಲ್ಲಾ? ನಾನು ಬಂದಿದ್ದು ಸಹ ನಿಮಗೆ ತಿಳಿಯಲಿಲ್ಲ.

ಋಷಿ ಪತ್ನಿ: (ಕೂಡಲೇ ಎದ್ದು ನಿಲ್ಲುವಳು). ಸ್ವಾಮೀ, ಚಿಂತಿಸದೆ ಏನು ಮಾಡಲಿ? ನಮ್ಮ ಮಧು ನಾಳೆ ಸಿಹಿ ತಿಂಡಿ ಮಾಡಿಸಿ ತಂದುಕೊಡುವೆನೆಂದು ವಾಸುದೇವನಿಗೆ ವಚನವಿತ್ತಿದ್ದಾನೆ. ಅವನಿಗೆಲ್ಲಿ ಪಾಪ, ನಮ್ಮ ಬಡತನದ ಅರಿವು! ಬರ ಬಂದು ನಮ್ಮ ಬದುಕನ್ನೇ ಬರಿದಾಗಿಸಿದೆ. ತಿನ್ನಲು ಮೇವಿಲ್ಲದೆ ಹಸುಗಳ ಕೆಚ್ಚಲಿನ ಹಾಲು ಬತ್ತಿದೆ. ಫಲ ಕೊಡುವ ಮರಗಳು ಒಣಗಿವೆ. ಭೂಮಿಯಲ್ಲಿ ಗಡ್ಡೆ ಗೆಣೆಸು ಕೂಡ ಇಲ್ಲದಾಗಿದೆ. ಗಂಜಿಯೂಟಕ್ಕೆ ಇಟ್ಟಿದ್ದ ಅಕ್ಕಿಯೂ ಇಂದಿಗೆ ಮುಗಿಯಿತು.

ಶಾಂಡಿಲ್ಯ ಮುನಿ: ಹೌದು ದೇವಿ. ನೀವೆನ್ನುವುದು ನಿಜ. ದಾನ ನೀಡುವವರೇ ದರಿದ್ರರಾಗಿರುವರು. ಮಳೆ ಇಲ್ಲದೆ ಹೋಮ ಹವನಗಳನ್ನು ನಡೆಸುವವರೇ ಇಲ್ಲವಾಗಿದ್ದಾರೆ. ಕೃಷ್ಣಾ, ಇದೇನು ನಿನ್ನ ಲೀಲೆ? (ಇಬ್ಬರೂ ದುಃಖಿತರಾಗಿ ಕೂಡುವರು. ರಂಗದ ಮೇಲೆ ನಿಧಾನವಾಗಿ ಕತ್ತಲೆ ಕವಿಯುತ್ತದೆ. ಕೆಲವು ಕ್ಷಣಗಳಲ್ಲಿ ಮಂದವಾಗಿ ನಸುಕು ಮೂಡುವುದು. ಮಧುಮಂಡಲ ಶುಭ್ರಸ್ನಾತನಾಗಿ, ಶಿಖೆ ಮುಡಿದು, ಗೋಪೀ ಚಂದನವನ್ನ ಧರಿಸಿ, ಸಂಧ್ಯಾವಂದನಾದಿಗಳನ್ನು ಮುಗಿಸಿ ಬರುವನು. ಋಷಿಪತ್ನಿಯೂ ನಿತ್ಯಕರ್ಮಗಳಲ್ಲಿ ನಿರತರಾಗಿರುವರು).

ಋಷಿ ಪತ್ನಿ: ಇದೇನು ಕಂದ, ನಸುಕಿನಲ್ಲೇ ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಸಿದ್ಧನಾಗಿರುವೆ?

ಮಧುಮಂಡಲ:  ಇಂದು ನಾನು ಗುರುಕುಲಕ್ಕೆ ಹೋಗಬೇಕಲ್ಲವೇನಮ್ಮಾ. ನಾನು ಹೇಳಿದಂತೆ ಕೃಷ್ಣನಿಗೆ ಸಿಹಿ ಪದಾರ್ಥ ಸಿದ್ಧ ಪಡಿಸಿರುವೆ ತಾನೆ?

ಋಷಿ ಪತ್ನಿ: (ಒಂದು ಮುಚ್ಚಿದ ಪಾತ್ರೆಯನ್ನು ತಂದು ಮಗನ ಕೈಗೆ ಕೊಡುತ್ತಾ) ಇದೋ ಮಧು ಮಂಡಲ, ತೆಗೆದುಕೊ. ನಮ್ಮಮ್ಮ ಕಳಿಸಿರುವಳೆಂದು ಹೇಳಿ ಕೃಷ್ಣನಿಗೆ ಕೊಡು. ಮುಚ್ಚಳ ಮಾತ್ರ ತೆಗೆದು ನೋಡಬೇಡ. ಕೃಷ್ಣನಿಗೆ ನೀಡುವುದನ್ನು ನಾವು ನೋಡಿದರೆ ಅವನಿಗೆ ದೃಷ್ಟಿಯಾದೀತು.

(ತೆರೆ ಬೀಳುತ್ತದೆ).

ದೃಶ್ಯ – 4

(ಸಾಂದೀಪಿನೀ ಮುನಿಗಳ ಆಶ್ರಮದ ವನ. ಕೃಷ್ಣ ಕುಳೀತಿದ್ದಾನೆ. ಮಧುಮಂಡಲ ಪಾತ್ರೆಯನ್ನು ಹಿಡಿದುಕೊಂಡು ಬರುವನು)

ಮಧುಮಂಡಲ: ಕೃಷ್ಣಾ, ಕೃಷ್ಣಾ, ಇದೋ ನೋಡು. ನಿನಗೇನು ತಂದಿದ್ದೇನೆ? ನಾನು ಹೇಳಿರಲಿಲ್ಲವೇ, ನನ್ನಮ್ಮ ಬಹಳ ಒಳ್ಳೆಯವಳು. ನಿನಗಾಗಿ ಏನಾದರೂ ಮಾಡಿಕೊಡುತ್ತಾಳೆಂದು.

ಕೃಷ್ಣ: ಆಹಾ, ಚಿಕ್ಕಮ್ಮ ಏನು ಮಾಡಿ ಕಳಿಸಿದ್ದಾರೆ?

ಮಧುಮಂಡಲ: ನನಗೆ ತಿಳಿಯದಪ್ಪ. ಮುಚ್ಚಳ ತೆಗೆದು ನೋಡಿದರೆ ನಿನಗೆ ದೃಷ್ಟಿತಾಗಿ ಹೊಟ್ಟೆ ನೋವು ಬರುವುದಂತೆ. ನೀನೇ ನೋಡು. (ಪಾತ್ರೆಯನ್ನು ಕೃಷ್ಣನ ಕೈಗೆ ಕೊಡುವನು. ಕೃಷ್ಣ ಮುಚ್ಚಲ ತೆಗೆದು ನೋಡುವನು).

ಕೃಷ್ಣ: (ಮೂಸಿ ನೋಡಿ) ಆಹಾ, ಎಷ್ಟು ಘಮ, ಘಮ. ಇನ್ನೆಷ್ಟು ರುಚಿಯಾಗಿರುವುದೋ ಕಾಣೆ.

ಮಧುಮಂಡಲ: ಹೌದೇ? ತೋರಿಸು, ಏನಿದೆ ನೋಡೋಣ, (ಪಾತ್ರೆಯಲ್ಲಿ ಬಗ್ಗಿ ನೋಡಿ) ಅಯ್ಯೋ ಇದೇನು, ಒಗ್ಗರಿಸಿದ ನೀರು ಮಜ್ಜಗೆ! ಇದು ನೀನು ಕಡಿಯುವಂತಹುದಲ್ಲಾ, ಕೊಟ್ಟುಬಿಡು. (ಅಳುತ್ತಾ) ಇದೇಕೆ ನನ್ನಮ್ಮ ಹೀಗೆ ಮಾಡಿದಳು? ಸಿಹಿಯನ್ನು ಮಾಡಿಕೊಡುತ್ತೇನೆಂದು ಹೇಳಿದಳಲ್ಲಾ? (ಪಾತ್ರೆಯನ್ನು ಕಿತ್ತುಕೊಳ್ಳಲು ಪ್ರಯತ್ನಿಸುವನು. ಸ್ವಲ್ಪ ಹೊತ್ತು ಪಾತ್ರೆಯನ್ನು ಇಬ್ಬರೂ ಎಳೆದಾಡುವರು).

ಕೃಷ್ಣ: ಮಧುಮಂಡಲ, ನನಗೆ ಕೊಡು. ಚಿಕ್ಕಮ್ಮ ಕಳಿಸಿರುವುದು ನನಗೇ ಬೇಕು.

ಮಧುಮಂಡಲ: ಇಲ್ಲ ಕೃಷ್ಣ, ಕೊಡಲಾರೆ. ಇದನ್ನು ನಾನೇ ಕುಡಿದು ಬಿಡುತ್ತೇನೆ.

(ಪಾತ್ರೆಯನ್ನು ಬಲವಂತವಾಗಿ ಕಿತ್ತುಕೊಂಡು ಗಟಗಟನೆ ಕುಡಿಯುವನು. ಅವನ ಕಟಬಾಯಿಯಿಂದ ಮಜ್ಜಿಗೆ ಸೋರುವುದು. ಅದನ್ನು ಕೂಡಲೇ ಕೃಷ್ಣನು ಬೊಗಸೆಯಲ್ಲಿ ಹಿಡಿದು ಕುಡಿಯುವನು).

ಕೃಷ್ಣ:  ಆಹಾ, ಎಷ್ಟು ರುಚಿಯಾಗಿದೆ! ಇಂತಹ ಮಜ್ಜಿಗೆಯನ್ನು ನಾನೆಂದೂ ಕುಡಿದಿರಲಿಲ್ಲ. ಕಳ್ಳ, ಹಾಗೆಂದೇ ನೀನೇ ಎಲ್ಲವನ್ನೂ ಕುಡಿದುಬಿಟ್ಟೆಯಾ?

(ಪ್ರೀತಿಯಿಂದ ಮಧುಮಂಡಲನ ಭುಜಗಳನ್ನು ಹಿಡಿದು ಅವನ ಮುಖವನ್ನು ನೋಡುವನು. ಏನು ಮಾಡಲೂ ತಿಳಿಯದೆ ಮಧುಮಂಡಲ ಕೃಷ್ಣನ ಕಡೆ ನೋಡುತ್ತಿರುವಂತೆಯೇ ಅವನ ಕಣ್ಣುಗಳಲ್ಲಿ ನೀರು ತುಂಬುವುದು).

(ತೆರೆ ಬೀಳುವುದು).

ದೃಶ್ಯ – 5

 (ಶಾಂಡಿಲ್ಯ ಮುನಿಗಳ ಆಶ್ರಮ. ಗಿಡಮರಗಳು ಚಿಗುರಿ ಹೂವು ಹಣ್ಣುಗಳಿಂದ ತುಂಬಿವೆ. ಹಸುಗಳ ಕೆಚ್ಚಲು ಹಾಲಿನಿಂದ ಭಾರವಾಗಿವೆ. ಹಕ್ಕಿಗಳು ಉಲಿಯುತ್ತಿವೆ. ನವಿಲುಗಳು ನರ್ತಿಸುತ್ತಿವೆ. ಋಷಿ ಪತ್ನಿ ಸಾತ್ವಿಕಾಲಂಕಾರ ಭೂಷಿತೆಯಾಗಿ ಪೂಜೆಯಲ್ಲಿ ನಿರತಳಾಗಿದ್ದಾಳೆ. ಶಾಂಡಿಲ್ಯ ಮುನಿಗಳು ಅಂಜಲಿ ಬದ್ಧರಾಗಿ ನಿಂತಿದ್ದಾರೆ).

ಋಷಿ ಪತ್ನಿ : ಕೃಷ್ಣಾ, ದಯಾಮಯಾ, ಗೆಳೆಯನ ಕಟಬಾಯಿಯಿಂದ ಸೋರಿದ ಮಜ್ಜಿಗೆಯನ್ನು ಕುಡಿದು ನಮ್ಮೆಲ್ಲರ ಕಷ್ಟಗಳನ್ನು ನೀಗಿದೆಯಲ್ಲಾ. ಕೊಡುವವನು ನೀನಾದರೆ ತಡೆವವರು ಯಾರು? ಪಡೆವವನು ನೀನಾದರೆ ಕೊಡುವವರಾರು? ಸಹಸ್ರ ಹಸ್ತಗಳಿಂದ ನೀನು ಕೊಟ್ಟಿದ್ದನ್ನು ಬಾಚಿಕೊಳ್ಳಲು ನಮ್ಮೆರಡು ಕೈಗಳು ಸಾಕೇ? ಸ್ವಾಮೀ, “ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ” ಎಂಬಂತೆ ಕರುಣಾಸಾಗರನಾದ ನೀನು ಪ್ರಸನ್ನನಾದರೆ ನಮಗೆ ಏನು ತಾನೇ ಅಲಭ್ಯವು? ನಿತ್ಯಶುದ್ಧನಾದ ನಿನ್ನ ಲೀಲೆಯು ಮಾನುಷವರ್ಣನಾತೀತವಾದುದು.

(ಇಬ್ಬರೂ ನಮಸ್ಕರಿಸುವರು),

(ನೇಪಥ್ಯದಲ್ಲಿ ದಾಸರ ಪದವು ನವಿರಾಗಿ ಕೇಳಿ ಬರುತ್ತಿರುವಂತೆ ನಿಧಾನವಾಗಿ ತೆರೆ ಬೀಳುವುದು).

“ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು”

ಈ ಲೇಖನ ಶೇರ್ ಮಾಡಿ