ಮಾನಿನಿಯ ದೇಹತ್ಯಾಗ

ದಕ್ಷಯಜ್ಞದ ಕಥೆ : ಭಾಗ-1

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು  – ನಿಗಮ ಕಲ್ಪತರೋರ್ ಗಲಿತಂ ಫಲಂ –  ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ. ಬಿ.ಆರ್. ಸುಹಾಸ್‌ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ.

ಮೈತ್ರೇಯರು ಹೇಳುತ್ತಿದ್ದ ಕಥೆಯನ್ನು ಕೇಳಿ ವಿದುರನಿಗೆ ಆಶ್ಚರ್ಯವಾಯಿತು. “ಗುಣವಂತರಲ್ಲಿ ಅತ್ಯಂತ ಶ್ರೇಷ್ಠನೂ, ಸಕಲ ಚರಾಚರಗಳಿಗೂ ಗುರುವೂ, ಶಾಂತ ಸ್ವಭಾವದವನೂ, ಯಾರಲ್ಲಿಯೂ ವೈರವಿಲ್ಲದವನೂ, ಆತ್ಮಾರಾಮನೂ ಆದ ಆ

ಮಹಾದೇವ ಶಿವನನ್ನು ದಕ್ಷನು ಏಕೆ ದ್ವೇಷಿಸಿದನು? ಬಹಳ ವಾತ್ಸಲ್ಯವಿರಿಸಿದ್ದ ತನ್ನ ಮಗಳನ್ನೇಕೆ ಅವನು ಅನಾದರಿಸಿದನು? ಸತೀದೇವಿಯು ಪ್ರಾಣತ್ಯಾಗವನ್ನೇ ಮಾಡುವಂಥ ದುಷ್ಟರ ಕಾರ್ಯಕ್ಕೆ ಪ್ರೇರೇಪಿಸಿದ ದ್ವೇಷವನ್ನೇಕೆ ಆ ಮಾವ, ಅಳಿಯಂದಿರು ಬೆಳೆಸಿಕೊಂಡರು?

ಬ್ರಹ್ಮಜ್ಞಾನಿಗಳೇ, ದಯವಿಟ್ಟು ನನಗೆ ಆ ಎಲ್ಲ ವಿಷಯಗಳನ್ನೂ ಹೇಳಿ,” ವಿದುರನು ಕೇಳಿಕೊಂಡನು. ವಿದುರನ ಪ್ರಶ್ನೆಗಳಿಗೆ ಉತ್ತರವಾಗಿ ಮೈತ್ರೇಯರು ಸತಿಯ ಪ್ರಾಣತ್ಯಾಗಕ್ಕೆ ಕಾರಣರಾದ ಪ್ರಸಂಗವನ್ನು ನಿರೂಪಿಸಿದರು.

ಅದೊಂದು ಮಂಗಳಮಯ ದಿನ. ಪ್ರಜಾಪತಿಗಳೆಲ್ಲರೂ ಸೇರಿ ಒಂದು ಮಹಾ ಯಜ್ಞವನ್ನು ಆರಂಭಿಸಿದ್ದರು. ಅಲ್ಲಿ ಎಲ್ಲಾ ಸುರ ಗಣಗಳ, ಋಷಿವರ್ಯರೂ, ಅಗ್ನಿದೇವತೆಗಳೂ ತಮ್ಮ ಅನುಚರರೊಂದಿಗೆ ನೆರೆದಿದ್ದರು. ಆಗ ಬ್ರಹ್ಮ ಪುತ್ರನಾದ ದಕ್ಷ ಪ್ರಜಾಪತಿಯು ಸೂರ್ಯನಂತೆ ಬೆಳಗುತ್ತಾ ಆ ದಿವ್ಯ ಸಭೆಯನ್ನು ಪ್ರವೇಶಿಸಿದನು. ಅವನ ಮೈಕಾಂತಿಗೆ ಮಾರು ಹೋಗಿ, ಹರಬ್ರಹ್ಮರನ್ನುಳಿದು ಮಿಕ್ಕೆಲ್ಲರೂ ತಮ್ಮ ಆಸನಗಳಿ೦ದೆದ್ದು ಅವನಿಗೆ ಗೌರವ ಸಲ್ಲಿಸಿದರು.

ಸಭಾ ನಾಯಕನಾದ ಬ್ರಹ್ಮದೇವನು ಅವನನ್ನು ಸ್ವಾಗತಿಸಿದನು. ತನ್ನ ತಂದೆಯೂ ಲೋಕ ಗುರುವೂ ಆದ ಅವನಿಗೆ ದಕ್ಷನು ವಂದನೆಯನ್ನು ಸಲ್ಲಿಸಿ ಅವನ ಅಪ್ಪಣೆಯಂತೆ ಉಚಿತಾಸನವನ್ನಲಂಕರಿಸಿದನು. ಆದರೆ ತಾನು ಸಭೆಗೆ ಬಂದಾಗ ಶಿವನು ತನ್ನನ್ನು ಗೌರವಿಸಲಿಲ್ಲವೆಂದು ಅವನ ಮೇಲೆ ಕೋಪಗೊಂಡನು. ಕೂಡಲೇ ತನ್ನ ಆಸನದಿಂದೆದ್ದು ಕೋಪದಿಂದ ಕೆಂಪಾಗಿದ್ದ ತನ್ನ ಕಣ್ಣುಗಳಿಂದ ಶಿವನನ್ನು ಸುಡುವಂತೆ ನೋಡುತ್ತಾ, ಅವನನ್ನು ಕಟುವಾಕ್ಯಗಳಿಂದ ನಿಂದಿಸಿದನು.

“ಎಲೈ ಬ್ರಹ್ಮರ್ಷಿಗಳೇ! ದೇವತೆಗಳೇ! ಅಗ್ನಿದೇವತೆಗಳೇ! ನಾನೀಗ ಹೇಳಲಿರುವುದನ್ನು ಕೇಳಿ! ಸಾಧುಗಳ ವರ್ತನೆಯನ್ನು ಕುರಿತು ಹೇಳುವೆ. ಅಜ್ಞಾನದಿಂದಾಗಲೀ ಮಾತ್ಸರ್ಯದಿಂದಾಗಲೀ ನಾನೀ ಮಾತನ್ನಾಡುತ್ತಿಲ್ಲ. ಈ ಶಿವನು ಲೋಕಪಾಲಕರ ಯಶಸ್ಸನ್ನು ಹಾಳುಗೆಡವಿದ್ದಾನೆ! ನಾಚಿಕೆಯಿಲ್ಲದ ಇವನಿಂದ ಸದ್ವೃತ್ತಿಯನ್ನುಳ್ಳ ಜನರ ಪಥವೇ ಸ್ತಬ್ಧವಾಗಿದೆ! ಅಯ್ಯೋ! ಮೃಗಲೋಚನೆಯಾದ ನನ್ನ ಮುದ್ದು ಕುವರಿಯನ್ನು ಮರ್ಕಟಲೋಚನನಾದ ಈ ಕುರೂಪಿಗೆ ಕೊಟ್ಟೆನಲ್ಲ! ಸಾಧುವಿನಂತೆ ಕಾಣುವ ಇವನು, ಅಗ್ನಿಸಾಕ್ಷಿಯಾಗಿ ಅವಳನ್ನು ವರಿಸಿ ನನ್ನ ಅಧೀನನಾಗಿದ್ದರೂ ಎದ್ದು ನಿಂತು ನನ್ನನ್ನು ಗೌರವಿಸಲಿಲ್ಲ! ವಿನಯಪೂರ್ವಕ ಮಾತುಗಳಿಂದಲೂ ನನ್ನನ್ನು ಸ್ವಾಗತಿಸಲಿಲ್ಲ! ಅಶುಚಿಯೂ, ನೀತಿ ನಿಯಮಗಳನ್ನು ಪಾಲಿಸದವನೂ, ದುರಹಂಕಾರಿಯೂ ಆದ ಇವನಿಗೆ, ಶೂದ್ರನಿಗೆ ಶ್ರುತಿಬೋಧೆ ಮಾಡುವಂತೆ ನನ್ನ ಸುಂದರ ಮಗಳನ್ನು ವಿವಾಹ ಮಾಡಿಕೊಟ್ಟೆ!

ಪಿಶಾಚಿಗಳ ಘೋರ ಆವಾಸಸ್ಥಾನದಲ್ಲಿ ಇವನ ವಾಸ! ಸದಾ ಭೂತ ಪ್ರೇತಗಳಿಂದ ಆವರಿಸಲ್ಪಟ್ಟು ಕೇಶರಾಶಿಯನ್ನು ಹರಡಿಕೊಂಡು, ಒಮ್ಮೊಮ್ಮೆ ನಗುತ್ತಲೂ ಒಮ್ಮೊಮ್ಮೆ ಅಳುತ್ತಲೂ ಹುಚ್ಚನಂತೆ ಅಲೆಯುತ್ತಿರುತ್ತಾನೆ ಇವನು! ಚಿತೆಗಳ ಭಸ್ಮಲೇಪನವೇ ಇವನಿಗೆ ಸ್ನಾನ! ಹೆಣಗಳ ಅಸ್ಥಿಗಳೇ ಇವನಿಗೆ ಭೂಷಣ! ಅಯ್ಯೋ! ಶಿವನೆಂಬ ಹೆಸರಿದ್ದರೂ ಇವನು ಸದಾ ಅಶಿವ, ಅಮಂಗಳಕರವಾಗಿರುತ್ತಾನೆ ! ತಾಮಸಿಗಳಾದ ಪ್ರಮಥರ ನಾಯಕನಾದ ಇವನು ಸ್ವಯಂ ಉನ್ಮತ್ತನೂ ಅಂತಹ ಉನ್ಮತ್ತ ಜನರಿಗೆ ಬಹುಪ್ರಿಯನೂ ಆಗಿದ್ದಾನೆ ! ಸಾಧ್ವಿಯಾದ ನನ್ನ ಮಗಳನ್ನು ಬ್ರಹ್ಮದೇವನ ಪ್ರೇರಣೆಯಿಂದ ಕಲ್ಮಷ ಹೃದಯದ ಈ ಭೂತನಾಥನಿಗೆ ಕೊಟ್ಟುಬಿಟ್ಟೆ!’

ಯಾವ ಹಗೆತನವೂ ಇರದಿದ್ದ ಗಿರೀಶನನ್ನು ಹೀಗೆ ನಿಂದಿಸುತ್ತಾ ದಕ್ಷನು ಜಲಸ್ಪರ್ಶ ಮಾಡಿ ಅವನನ್ನು ಶಪಿಸಿಯೂ ಬಿಟ್ಟನು! “ಯಜ್ಞಯಾಗಾದಿಗಳಲ್ಲಿ ಇಂದ್ರೋಪೇಂದ್ರಾದಿ ದೇವತೆಗಳಿಂದ ಸ್ವೀಕೃತವಾಗುವ ಹವಿರ್ಭಾಗ, ಈ ದೇವಾಧಮನಿಗೆ ದೊರಕದಿರಲಿ!’

ಮಹಾದೇವನನ್ನು ಹೀಗೆ ಶಪಿಸಿ, ಸಭಾಸದರೆಲ್ಲರೂ ಪ್ರಾರ್ಥಿಸುತ್ತಿದ್ದರೂ ಕೇಳದೆ, ದಕ್ಷನು ಕೋಪದಿಂದ ಸಭಾತ್ಯಾಗ ಮಾಡಿ ತನ್ನ ಮನೆಗೆ ಹೊರಟು ಹೋದನು.

ಅಧಿಕಾರಮದದಿ೦ದಲೂ ಕೋಪದಿ೦ದಲೂ ಕುರುಡನಾಗಿದ್ದ ದಕ್ಷನಿಗೆ ತಾನೇನು ಮಾಡುತ್ತಿದ್ದೇನೆ೦ಬ ಅರಿವೇ ಇರಲಿಲ್ಲ. ವಿಶ್ವದ ಸೃಷ್ಟಿ ಸ್ಥಿತಿ, ಲಯಗಳಿಗಾಗಿ ಪರಮ ಪ್ರಭುವು ಸ್ವೀಕರಿಸುವ ಗುಣಾವತಾರಗಳಲ್ಲಿ ಶಿವನು ಒಬ್ಬನು. ಜಗತ್ತಿನ ಕಾರ್ಯಗಳಿಗಾಗಿ ಬ್ರಹ್ಮನಿಂದ ಹುಟ್ಟಿದ್ದರೂ, ದಕ್ಷನಿಗೆ ಅಳಿಯನಾಗಿದ್ದರೂ ಸದಾ ತನ್ನ ಹೃದಯ ಕಮಲದಲ್ಲಿ ವಾಸುದೇವನನ್ನು ಧ್ಯಾನಿಸುವ ಶಿವನು ಆಧ್ಯಾತ್ಮಿಕ ನೆಲೆಯಲ್ಲಿ ಎಲ್ಲರಿಗೂ ಹಿರಿಯನು.

ವೈಷ್ಣವಾಗ್ರೇಸರನಾದ ಅವನು ಮಹಾಮಹಿಮನು, ಎಲ್ಲರಲ್ಲೂ ಪರಮಾತ್ಮನನ್ನೇ ಕಾಣುತ್ತಾ ಎಲ್ಲರನ್ನೂ ಸಮಭಾವದಿಂದ ನೋಡುವ ಅವನು ತನ್ನ ಮಾವನಿಗೆ ವಿಶೇಷ ಗೌರವ ತೋರುವ ಅಗತ್ಯವಿರಲಿಲ್ಲ. ತಮೋಗುಣದ ಅಧಿಕಾರ ಪಡೆದ ಅವನ ರೀತಿ, ನೀತಿಗಳು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಆದರೆ ಗುಣಾತೀತನಾದ ಅವನು ಧ್ಯಾನ, ತಪಸ್ಸುಗಳೆಂಬ ಐಶ್ವರ್ಯವನ್ನು ಪಡೆದವನಾಗಿ ನೀತಿ ನಿಯಮಗಳನ್ನು ಪಾಲಿಸಬೇಕಾಗಿಲ್ಲ. ದೇವತೆಗಳಲ್ಲಿ ಅತ್ಯಂತ ಶ್ರೇಷ್ಠನಾದ ಶಿವನು ಯೋಗಿಗಳಿಗೆ ಪರಮಪೂಜ್ಯನಲ್ಲದೆ, ಅತೀವ ದಯೆಯಿ೦ದ ಭೂತ ಪ್ರೇತಗಳನ್ನೂ ನೀಚರನ್ನೂ ಉದ್ಧರಿಸುತ್ತಾನೆ. ಶಿವನ ಇಂಥ ಸದ್ಗುಣಗಳನ್ನರಿಯದ ದಕ್ಷನು ಅನ್ಯಥಾ ಭಾವಿಸಿ ಅವನನ್ನು ನಿಂದಿಸುವ ಪಾಪಕಾರ್ಯ ಮಾಡಿದನು.

ಶಿವನನ್ನು ದಕ್ಷನು ಶಪಿಸಲು, ಅವನ ಪ್ರಮುಖ ಅನುಚರನಾದ ನಂದೀಶ್ವರನು ರೋಷಾವಿಷ್ಟನಾದನು. ದಕ್ಷನಿಗೂ ಅವನನ್ನು ಅನುಮೋದಿಸಿದ ದ್ವಿಜರಿಗೂ ಅವನು ದಾರುಣವಾದ ಶಾಪವನ್ನು ನೀಡಿದನು, “ಯಾರು ಈ ದಕ್ಷನನ್ನು ಅನುಮೋದಿಸುತ್ತಿರುವರೋ, ಭಗವಾನ್ ಶಿವನನ್ನು ಉಪೇಕ್ಷಿಸುತ್ತಿರುವರೋ, ಅಂತಹ ದ್ವ೦ದ್ವದೃಷ್ಟಿಯುಳ್ಳ ದ್ವಿಜರು ದಿವ್ಯ ಜ್ಞಾನದಿಂದ ವಿಮುಖರಾಗಲಿ! ದೇಹವನ್ನೇ ತಾನೆಂದು ತಿಳಿದು ಸದಾ ಸ್ತ್ರೀ ಕಾಮಿಯಾಗಿರುವ ಪಶುವಿನಂಥ ಈ ದಕ್ಷನು ಟಗರಿನ ಮುಖವನ್ನು ಪಡೆಯಲಿ! ಲೌಕಿಕ ವಿದ್ಯೆಯೆಂಬ ಅವಿದ್ಯೆಯಲ್ಲಿ ನಿರತರಾಗಿ ಸದಾ ಜಡರಾಗಿರುವ ಯಾರು ಶರ್ವನನ್ನು ಅವಮಾನಿಸಿರುವರೋ, ಅವರು ವೇದಗಳು ಹೇಳುವ ಹೂವಿನಂಥ ಮಾತುಗಳಿಗೆ ಮರುಳಾಗಿದ್ದಾರೆ.

ಅಂತಹವರು ಸದಾ ಕಾಮ್ಯ ಕರ್ಮಗಳಿಗೇ ಅಂಟಿಕೊಳ್ಳಲಿ! ಜನನ ಮರಣವೆಂಬ ಸಂಸಾರ ಚಕ್ರದಲ್ಲಿ ಸದಾ ಸುತ್ತುತ್ತಿರಲಿ! ವಿದ್ಯೆ, ತಪಸ್ಸು, ವ್ರತಗಳನ್ನು ಕೇವಲ ದೇಹಧಾರಣೆಗಾಗಿ ಬಳಸಿಕೊಳ್ಳುವ ಈ ವಿಪ್ರರು ಭಕ್ಷ್ಯಾ ಭಕ್ಷ್ಯ ವಿವೇಚನೆಯಿಲ್ಲದೆ ಎಲ್ಲವನ್ನೂ ತಿನ್ನುತ್ತಾರೆ! ಇಂದ್ರಿಯ ತೃಪ್ತಿಗಾಗಿ ಯಾಚಕರಂತೆ ಬೇಡಿ ಜೀವಿಸುತ್ತಾರೆ!”

ನಂದಿಯು ಹೀಗೆ ದ್ವಿಜ ಕುಲವನ್ನೇ ಶಪಿಸಲು, ಭೃಗು ಮಹರ್ಷಿಗಳು ಶಿವಾನುಚರರಿಗೆ ಬ್ರಹ್ಮದಂಡದಂತೆ ಕಠೋರವಾದ ಪ್ರತಿಶಾಪ ನೀಡಿದರು. “ಶಿವಾನುವ್ರತಿಗಳು ಪಾಷಂಡಿಗಳಾಗಲಿ! ಸಚ್ಛಾಸ್ತ್ರಗಳಿಂದ ದೂರವಾಗಲಿ! ಶೌಚ ಹೀನರಾಗಿ, ಮೂಢ ಬುದ್ಧಿಯುಳ್ಳವರಾಗಿ, ಜಟಾಭಸ್ಮಗಳನ್ನೂ ಅಸ್ಥಿಗಳನ್ನೂ ಧರಿಸಿ ಈ ಶಿವಭಕ್ತರು ಮದ್ಯಾದಿಗಳನ್ನು ಸೇವಿಸುತ್ತಾರೆ! ವೇದಗಳನ್ನೂ ವಿಪ್ರರನ್ನೂ ನಿಂದಿಸಿರುವ ಇವರು ನಾಸ್ತಿಕ ಮತವನ್ನು ಆಶ್ರಯಿಸಿದ್ದಾರೆ.

ಲೋಕದಲ್ಲಿ ಮಂಗಳವನ್ನುಂಟುಮಾಡುವ ವೇದಗಳಿಗೆ ಜನಾರ್ಧನನಾದ ಶ್ರೀಹರಿಯೇ ಪ್ರಮಾಣ. ಅ೦ಥ ವೇದಗಳನ್ನು ನಿಂದಿಸುವ ಈ ಹರಾನುಚರರು ಖಂಡಿತ ನಾಸ್ತಿಕರಾಗುತ್ತಾರೆ!”

ಉಭಯರೂ ಹೀಗೆ ಶಾಪ ಪ್ರತಿ ಶಾಪಗಳನ್ನು ನೀಡುವುದರಲ್ಲಿ ತೊಡಗಿದ್ದಾಗ, ಶಿವನು ಸ್ವಲ್ಪ ಖೇದಗೊಂಡು ತನ್ನ ಅನುಚರರೊಂದಿಗೆ ಮೌನವಾಗಿ ಹೊರಟುಹೋದನು.

ಅನ೦ತರ, ಎಲ್ಲಾ ಪ್ರಜಾಪತಿಗಳೂ ಸೇರಿ ಆ ಮಹಾಸತ್ರವನ್ನು ಒಂದು ಸಾವಿರ ವರ್ಷ ಪರ್ಯಂತ ಆಚರಿಸಿದರು. ಯಜ್ಞ ಪುರುಷನಾದ ಶ್ರೀ ಹರಿಯನ್ನು ಈ ರೀತಿ ಆರಾಧಿಸಿ ಅವರೆಲ್ಲರೂ ಅವಭೃಥ ಸ್ನಾನ ಮಾಡಿದರು. ಯಾಗವು ಮುಗಿಯಲು ಎಲ್ಲರೂ ತಮ್ಮ ನಿವಾಸಗಳಿಗೆ ತೆರಳಿದರು..

ಕಾಲವುರುಳಿತು. ದಕ್ಷನು ಶಿವ ದ್ವೇಷವನ್ನು ಮುಂದುವರೆಸಿದನು. ಒಮ್ಮೆ ಬ್ರಹ್ಮದೇವನು ಅವನನ್ನು ಎಲ್ಲಾ ಪ್ರಜಾಪತಿಗಳ ಅಧಿಪತಿಯಾಗಿ ನೇಮಿಸಿದನು. ಇದರಿಂದ ಅವನ ಅಹಂಕಾರ ಇನ್ನೂ ಹೆಚ್ಚಿತು.

ಒಂದು ದಿನ, ಕೈಲಾಸದಲ್ಲಿ ದಕ್ಷನ ಮಗಳೂ ಶಿವನ ಪತ್ನಿಯೂ ಆದ ಸತಿದೇವಿಯು ವಿಹರಿಸುತ್ತಿದ್ದಾಗ, ದೇವಾನುದೇವತೆಗಳೂ ಯಕ್ಷಗಂಧರ್ವರೂ ಕಂಗೊಳಿಸುವ ವಸ್ತ್ರಾಭರಣಗಳಿಂದ ಭೂಷಿತರಾದ ತಮ್ಮ ಸುಂದರ ಪತ್ನಿಯರೊಂದಿಗೆ ವಿಮಾನಾರೂಢರಾಗಿ ಆಕಾಶ ಮಾರ್ಗದಲ್ಲಿ ಎಲ್ಲಿಗೋ ಹೋಗುತ್ತಿದ್ದುದನ್ನು ಅವಳು ಕಂಡು ವಿಸ್ಮಿತಳಾದಳು. ಎಲ್ಲ ದಿಕ್ಕುಗಳಿಂದಲೂ ಹೋಗುತ್ತಿದ್ದ ಅವರು ಮಾತನಾಡಿಕೊಳ್ಳುತ್ತಿದ್ದುದ್ದನ್ನು ಕೇಳಿದಳು.

ತನ್ನ ತಂದೆಯಾದ ದಕ್ಷನು ವಾಜಪೇಯವೆಂಬ ಯಜ್ಞವನ್ನು ಆಚರಿಸಿ, ಈಗ ಬೃಹಸ್ಪತಿಸವವೆಂಬ ಮಹಾಯಾಗವನ್ನು ಮಾಡುತ್ತಿದ್ದನೆಂದು ಅವಳು ಅರಿತಳು. ಆ ಮಹಾಯಜ್ಞಕ್ಕೆ ಬ್ರಹ್ಮರ್ಷಿಗಳು, ದೇವರ್ಷಿಗಳು, ಪಿತೃಗಳು, ದೇವತೆಗಳು, ಯಕ್ಷಗಂಧರ್ವರು, ಮೊದಲಾದವರೆಲ್ಲರಿಗೂ ಆಮಂತ್ರಣ ಹೋಗಿತ್ತು. ಲೋಕದ ವಿವಿಧೆಡೆಗಳಿಂದ ಅವರೆಲ್ಲರೂ ದಕ್ಷಯಜ್ಞದಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಆದರೆ ಸತಿಗೂ ಶಿವನಿಗೂ ಆಮಂತ್ರಣ ಬಂದಿರಲಿಲ್ಲ. ಇದರಿಂದ ಬಹುವಾಗಿ ಕಳವಳಗೊಂಡ ಅವಳು ಪತಿಯೆಡೆಗೆ ಧಾವಿಸಿದಳು.

”ಪ್ರಿಯತಮ ! ನಿಮ್ಮ ಮಾವನವರು ಒ೦ದು ಮಹಾಯಜ್ಞವನ್ನು ಆಚರಿಸುತ್ತಿದ್ದಾರೆ. ಅವರಿ೦ದ ಆಮಂತ್ರಿತರಾದ ಸಕಲ ದೇವತೆಗಳೂ ಅಲ್ಲಿಗೆ ಹೋಗುತ್ತಿರುವುದನ್ನು ಕಂಡೆ. ನೀವು ಇಷ್ಟಪಟ್ಟರೆ ನಾವೂ ಅಲ್ಲಿಗೆ ಹೋಗಬಹುದು”, ಸತಿ ಹೇಳಿದಳು. “ ಅಲ್ಲಿ ನಿಶ್ಚಿತವಾಗಿಯೂ ನನ್ನ ಸಹೋದರಿಯರು ಬ೦ಧು ಬಾಂಧವರೊಡನೆ ಕಲೆತು ಸಂತೋಷ ಪಡಲು ತಮ್ಮ ಗಂಡಂದಿರೊಡನೆ ಬಂದಿರುತ್ತಾರೆ. ಪತಿದೇವ! ನಾನೂ ಸರ್ವಾಲಂಕಾರ ಭೂಷಿತಳಾಗಿ ನಿಮ್ಮೊಂದಿಗೆ ಅಲ್ಲಿಗೆ ಹೋಗಲಿಚ್ಛಿಸುವೆ.

ಹೇ ಮೃಡನೇ ! ನನ್ನ ಸೋದರಿಯರನ್ನೂ ತಾಯಿಯನ್ನೂ ತಾಯಿಯ ಸೋದರಿಯರನ್ನೂ ನೋಡಲು ಬಹುಕಾಲದಿಂದ ನಾನು ಉತ್ಸುಕಳಾಗಿದ್ದೇನೆ! ಇನ್ನೂ ಅನೇಕ ಬಂಧುಗಳು ಅಲ್ಲಿ ಬ೦ದಿರುತ್ತಾರೆ. ಅಲ್ಲದೆ ಮಹರ್ಷಿಗಳು ಏರಿಸುವ ಯಜ್ಞಧ್ವಜವನ್ನೂ ಇನ್ನಿತರ ಯಜ್ಞ ಕಲಾಪಗಳನ್ನೂ ನೋಡಬಹುದು!

ಪರಮೇಶ್ವರ ! ಈ ವಿಶ್ವವು ದೇವೋತ್ತಮ ಪರಮ ಪುರುಷನ ಮಾಯೆಯಿ೦ದಲೋ ತ್ರಿಗುಣಗಳ ಪ್ರತಿಕ್ರಿಯೆಯಿ೦ದಲೋ ಆಗುವ ಆಶ್ಚರ್ಯಕರ ಸೃಷ್ಟಿಯೆಂದು ಹೇಳುತ್ತಾರೆ. ಆದರೆ ಹೆಣ್ಣಾದ ನನಗೆ ಇಂಥ ಗಹನವಾದ ತತ್ತ್ವಗಳು ಅರ್ಥವಾಗುವುದಿಲ್ಲ. ಆದ್ದರಿಂದ ನನ್ನ ತವರನ್ನು ಮತ್ತೊಮ್ಮೆ ನೋಡಬೇಕೆಂದು ದೈನ್ಯತೆಯಿಂದ ನಿಮ್ಮನ್ನು ಬೇಡುತ್ತಿದ್ದೇನೆ.

ಅಲ್ಲಿ ನೋಡು ಪ್ರಿಯ! ಸು೦ದರ ತರುಣಿಯರು‌ ಸುಮಲ೦ಕೃತರಾಗಿ ತಮ್ಮ ಪ್ರಿಯತಮರೊ೦ದಿಗೆ ಸ೦ತೋಷದಿ೦ದ ಹೇಗೆ ಹೋಗುತ್ತಿದ್ದಾರೆ! ಇಡೀ ನಭೋ ಮಂಡಲವೇ ಬಿಳಿಯ ಮತ್ತು ಕಪ್ಪು ವರ್ಣದ ಹಂಸಗಳಿಂದ ಕೂಡಿರುವ ಅವರ ಸುಂದರ ವಿಮಾನಗಳಿಂದ ಬೆಳಗುತ್ತಿದೆ!

ನೀಲಕಂಠನೇ ! ಜನ್ಮರಹಿತನೇ! ತಂದೆಯ ಮನೆಯಲ್ಲಿ ದೊಡ್ಡ ಹಬ್ಬ ನಡೆಯುತ್ತಿದೆಯೆಂದು ಕೇಳಿಯೂ ಯಾವ ಮಗಳಿಗೆ ತಾನೇ ಕಾತುರತೆ ಕಾಡದು? ಅವರು ನಮ್ಮನ್ನು ಕರೆದಿಲ್ಲ ನಿಜ. ಆದರೆ ಮಿತ್ರರ, ಪತಿಯ, ಗುರುವಿನ, ತ೦ದೆಯ ಮನೆಗೆ ಕರೆಯದೆಯೂ ಹೋಗಬಹುದಲ್ಲವೇ? ಪ್ರಭು! ನೀವು ನನ್ನನ್ನು ನಿಮ್ಮ ಅರ್ಧಾಂಗಿಯೆಂದು ಸ್ವೀಕರಿಸಿರುವಿರಲ್ಲವೇ? ಆದ್ದರಿಂದ ನಿಮ್ಮನ್ನು ಬೇಡಿಕೊಳ್ಳುವೆ, ದಯವಿಟ್ಟು ನನ್ನ ಬಯಕೆಯನ್ನು ನೆರವೇರಿಸಿ.”

“ಪ್ರಿಯೆಯ ಮಾತುಗಳನ್ನು ಕೇಳಿ ಶಿವನು ಮುಗುಳ್ಳಕ್ಕನು. ಹಿಂದೆ ನಡೆದ ಮಹಾಸತ್ರದಲ್ಲಿ ಪ್ರಜಾಪತಿಗಳೆಲ್ಲರ ಸಮಕ್ಷಮದಲ್ಲಿ ಅವನನ್ನು ಕುರಿತು ದಕ್ಷನಾಡಿದ ಮರ್ಮಭೇದಕವಾದ ಬಿರುನುಡಿಗಳನ್ನು ಸ್ಮರಿಸಿಕೊಂಡು ಹೇಳಿದನು, ‘ಶುಭಾಂಗಿ! ಆಮಂತ್ರಣವಿಲ್ಲದೆಯೂ ಬಂಧುಗಳ ಮನೆಗೆ ಹೋಗಬಹುದೆಂದು ನೀನು ಹೇಳಿದ ಮಾತು ಉಚಿತವಾದುದೇ ಆಗಿದೆ.

ಆದರೆ ಇದು ದೇಹಾಭಿಮಾನವಿಲ್ಲದೆ ಅಹಂಕಾರರಹಿತರೂ ದೋಷ ದೃಷ್ಟಿ ರಹಿತರೂ ಆದವರಿಗೆ ಅನ್ವಯಿಸುತ್ತದೆ. ವಿದ್ಯೆ, ತಪಸ್ಸು, ಹಣ, ರೂಪ, ಯೌವನ, ಕುಲ ಎಂಬಿವುಗಳು, ಸಜ್ಜನರಲ್ಲಿರಬೇಕಾದ ಆರು ಗುಣಗಳು. ಆದರೆ ಇವುಗಳನ್ನುಳ್ಳ ವ್ಯಕ್ತಿಯು ಅಹಂಕಾರದಿಂದ ಕುರುಡನಾಗಿ ಮಹಾತ್ಮರನ್ನು ಗೌರವಿಸುವುದಿಲ್ಲ. ಆಗಮಿಸಿದ ಅತಿಥಿಗಳನ್ನು ಹುಬ್ಬುಗಂಟಿಕ್ಕಿಕೊಂಡು ಕೋಪದಿಂದ ಕೆಂಪೇರಿದ ಕಣ್ಣುಗಳಿಂದ ನೋಡುವ ವಕ್ರಬುದ್ಧಿಯುಳ್ಳವರ ಮನೆಗೆ, ಅವರು ಸ್ವಜನರೇ ಆಗಿದ್ದರೂ ಹೋಗಬಾರದು.

‘ಪ್ರಿಯೆ! ಶತ್ರುಗಳ ನಿಶ್ಚಿತ ಬಾಣಗಳಿಂದಾಗುವ ನೋವೂ ಬಂಧುಗಳ ದುರುಕ್ತಿಗಳಿಂದಾಗುವ ನೋವಿನಷ್ಟು ತೀವ್ರವಲ್ಲ ಬಂಧುಗಳಾಡುವ ಬಿರುನುಡಿಗಳು ಹಗಲಿರುಳೂ ಮನಸ್ಸನ್ನು ದಹಿಸುತ್ತವೆ. ದಕ್ಷನಿಗೆ ತನ್ನೆಲ್ಲಾ ಕುವರಿಯರಲೂ ನೀನೇ ಬಹಳ ಪ್ರೀತಿಪಾತ್ರದವಳೆಂದು ನಾನು ಬಲ್ಲೆ. ಆದರೂ ನೀನು ನನ್ನನ್ನು ಆಶ್ರಯಿಸಿರುವ ಕಾರಣ, ಅಲ್ಲಿಗೆ ಹೋದರೆ ಅವನು ನಿನ್ನನ್ನು ಸನ್ಮಾನಿಸುವುದಿಲ್ಲ. ಅದರಿಂದ ನಿನಗೆ ಪರಿತಾಪವಾಗಬಹುದು. ಅಹ೦ಕಾರಿಗಳಾದ ಕೆಲವರು, ಪುರುಷೋತ್ತಮನನ್ನು ಧ್ಯಾನಿಸಿ ಸಮೃದ್ಧಿ ಪಡೆದವರನ್ನು ಕಂಡು ಸಹಿಸರು.

ತಾವೂ ಆತ್ಮಸಾಕ್ಷಾತ್ಕಾರದ ಮಟ್ಟಕ್ಕೆ ಏರಲಾರದೆ, ಹೃದಯದಲ್ಲಿ ಮಾತ್ಸರ್ಯ ತುಂಬಿಕೊಂಡು, ಅಸುರರು ಹರಿಯನ್ನು ದ್ವೇಷಿಸುವಂತೆ ಇವರು ಮಹಾತ್ಮರನ್ನು ಸದಾ ದ್ವೇಷಿಸುತ್ತಾರೆ. ಅದರಿಂದ ಕ್ಲೇಶಗಳನ್ನೂ ಅನುಭವಿಸುತ್ತಾರೆ.

‘ಸುಮಧ್ಯಮೆ! ಒಂದು ಸಮಾರಂಭದಲ್ಲಿ ಬಂಧು ಮಿತ್ರರು ಆಸನಗಳಿಂದ ಎದ್ದು ನಿಂತಾಗಲೀ, ಅಭಿವಾದನೆ ಸಲ್ಲಿಸುತ್ತಲಾಗಲೀ ಪರಸ್ಪರರನ್ನು ಗೌರವಿಸುವುದು ಸಹಜ. ಆದರೆ ಪ್ರಾಜ್ಞರು ಹೃದ್ಗತನಾದ ಪರಮಪುರುಷನಿಗೆ ನಮಸ್ಕರಿಸುವರೇ ಹೊರತು ದೇಹವನ್ನೇ ತಾನೆಂದು ತಿಳಿದಿರುವ ವ್ಯಕ್ತಿಗಲ್ಲ. ಎಲ್ಲರ ಹೃದಯಾಂತರಾಳದಲ್ಲಿ ಯಾವುದೇ ಆವರಣವಿಲ್ಲದೆ ಗೋಚರನಾಗುವ ಶುದ್ಧಸತ್ವಮಯನಾದ ವಾಸುದೇವ ಶ್ರೀಕೃಷ್ಣನಿಗೆ ನಾನು ಸದಾ ನಮಸ್ಕರಿಸುತ್ತಲೇ ಇರುತ್ತೇನೆ. ಹಾಗಾಗಿ ಅ೦ದು ನಾನು ದಕ್ಷನಿಗೆ ವಿಶೇಷ ಗೌರವವನ್ನು ತೋರುವ ಅಗತ್ಯವಿರಲಿಲ್ಲ.

ಆದರೆ ಇದನ್ನು ತಿಳಿಯದ ಅವನು ದುರ್ವಾಕ್ಯಗಳಿಂದ ನನ್ನನ್ನು ನಿಂದಿಸಿದ. ಸುಂದರಿ! ಯಾವ ತಪ್ಪನ್ನೂ ಮಾಡದ ನನ್ನನ್ನು ಅವನೂ ಅವನ ಸಹವರ್ತಿಗಳೂ ವಿನಾಕಾರಣ ದ್ವೇಷಿಸುತ್ತಾರೆ. ಆದ್ದರಿಂದ ಅವನು ನಿನ್ನ ತ೦ದೆಯಾದರೂ ನೀನು ಆ ಯೋಗಕ್ಕೆ ಹೋಗಬೇಡ. ನಾನು ಇಷ್ಟು ಹೇಳಿದರೂ ನೀನು ನನ್ನ ಮಾತಿಗೆ ವಿರೋಧವಾಗಿ ಅಲ್ಲಿಗೆ ಹೋದರೆ ನಿನಗೆ ಖಂಡಿತವಾಗಿಯೂ ಮಂಗಳವಾಗದು! ಬಂಧುಗಳಿಂದಾಗುವ ಅವಮಾನ ಸಾವಿಗೆ ಸಮವೆನಿಸುವುದು!”

ಪೂರ್ವಾಪರಗಳನ್ನು ವಿಚಾರಿಸಿ ಹೀಗೆ ಹೇಳಿದ ಶಿವನು ಮೌನ ತಾಳಿದನು. ಸತಿಯ ಮನಸ್ಸು, ಒಂದು ಕಡೆ ಬಂಧು ಬಾಂಧವರನ್ನು ನೋಡಬೇಕೆ೦ಬ ಕಾತುರತೆಯಿಂದಲೂ, ಮತ್ತೊಂದು ಕಡೆ ಶಿವನು ಹೇಳಿದ ಮಾತುಗಳನ್ನು ಸ್ಮರಿಸುತ್ತಲೂ, ಡೋಲಾಯಮಾನ ಪರಿಸ್ಥಿತಿಗೆ ಒಳಗಾಯಿತು. ಗಾಳಿಯ ಹೊಯ್ದಾಟಕ್ಕೆ ತೂಗಾಡುವ ಉಯ್ಯಾಲೆಯಂತೆ, ಅವಳು ಶತಪಥ ಹಾಕಿದಳು. ತನ್ನ ತಂದೆಯ ಮನೆಗೆ ಹೋಗಬಾರದೆಂದು ಶಿವನು ತಡೆಯಲು ಅವಳು ಬಹು ದುಃಖಿತಳಾಗಿ ಕ೦ಬನಿ ಮಿಡಿದಳು. ಶಿವನ ಕಡೆ ಕೋಪದಿಂದ ದುರುಗುಟ್ಟಿ ನೋಡಿದಳು.

ಕಡೆಗೆ, ಪ್ರೀತಿಯಿಂದ ತನ್ನ ಅರ್ಧ ದೇಹವನ್ನೇ ನೀಡಿದ್ದ ಶಿವನನ್ನೇ ವಿರೋಧಿಸಿಯಾದರೂ ಸರಿ, ತನ್ನ ತವರಿಗೆ ಹೋಗಲೇಬೇಕೆಂದು ನಿರ್ಧರಿಸಿ ಶೋಕ, ರೋಷಗಳಿಂದ ನಿಟ್ಟುಸಿರು ಬಿಡುತ್ತಾ ಹೊರಟಳು! ತನ್ನ ಪತಿ ಪರಮೇಶ್ವರನು ಮಹಾ ವೈಷ್ಣವನೂ, ಗುಣಾವತಾರನೂ ಆದ ಶಿವನನ್ನು ಅವಳು ಸಂಪೂರ್ಣ ಹೃದಯದಿಂದ ಪ್ರೇಮಿಸಿದ್ದಳು, ಏಕೆಂದರೆ ಅವನ ಎಲ್ಲಾ ಸದ್ಗುಣಗಳ ಅರಿವು ಅವಳಿಗಿತ್ತು. ತನ್ನ ತ೦ದೆಯು ಇಂತಹ ಮಹಾನ್ ವ್ಯಕ್ತಿಯನ್ನು ಗೌರವಿಸುತ್ತಿಲ್ಲವಲ್ಲ ಎಂಬ ತುಡಿತವು ಅವಳನ್ನು ಕಾಡಿತು. ಅದನ್ನು ತನ್ನ ತಂದೆಗೆ ತಿಳಿ ಹೇಳುವೆನೆಂದು ಮನಸ್ಸಿನಲ್ಲಿ ಅಂದುಕೊಂಡು ಹೊರಟಳು.

ಏಕಾಂಗಿಯಾಗಿ ಹೀಗೆ ಹೊರಟ ದಾಕ್ಷಾಯಿಣಿಯನ್ನು ಮದ, ಮಣಿಮಂತನೇ ಮೊದಲಾದ ಸಹಸ್ರಾರು ಶಿವನ ಅನುಚರರು ನಂದೀಶ್ವರನನ್ನು ಮುಂದಿಟ್ಟುಕೊಂಡು ಹಿಂಬಾಲಿಸಿದರು. ಅವಳನ್ನು ನಂದಿಯ ಮೇಲೆ ಕೂರಿಸಿ, ಅವಳಿಗೆ ಪ್ರಿಯವಾಗಿದ್ದ ಸಾರಿಕಾಪಕ್ಷಿ, ಚೆಂಡು, ಕನ್ನಡಿ, ಕಮಲಪುಷ್ಪ ಹಾರಗಳನ್ನು ನೀಡಿ, ಶ್ವೇತ ಛತ್ರವನ್ನು ಅವಳಿಗಾಗಿ ಎತ್ತಿ ಹಿಡಿದರು. ಶಂಖ, ಕೊಳಲು, ದುಂದುಭಿಗಳನ್ನು ಮೊಳಗಿಸಿ, ಗಾನನೃತ್ಯಗೈಯುತ್ತಾ ರಾಜ ಮರ್ಯಾದೆಯಿಂದ ಅವಳನ್ನು ಯೋಗಶಾಲೆಗೆ ಕರೆದೊಯ್ದರು.

ಯಾಗ ಮಂಟಪವನ್ನು ಪ್ರವೇಶಿಸಿದ ಸತಿಯು, ಯಜ್ಞಕ್ಕಾಗಿ ಎಲ್ಲೆಡೆಯೂ ಸಿದ್ಧವಾಗಿದ್ದ ಬಲಿಗಳನ್ನು ನೋಡಿದಳು. ಮಣ್ಣು ಮರ, ಚಿನ್ನ, ಕಬ್ಬಿಣ ಮೊದಲಾದವುಗಳಿಂದ ಮಾಡಲ್ಪಟ್ಟ ಅನೇಕ ಪಾತ್ರೆಗಳು ಅಲ್ಲಿದ್ದವು. ಎಲ್ಲೆಲ್ಲೂ ಪವಿತ್ರ ದರ್ಭೆ ಮತ್ತು ಕೃಷ್ಣಾಜಿನಗಳು ತುಂಬಿದ್ದವು. ಋಷಿಗಳ ವೇದಘೋಷ ಮೊಳಗುತ್ತಿತ್ತು. ದೇವತೆಗಳೂ, ಬ್ರಹ್ಮರ್ಷಿಗಳೂ ಶೋಭಿಸುತ್ತಿದ್ದರು.

ಆದರೆ ಸತಿಯನ್ನು ಅವಳ ತಾಯಿ ಮತ್ತು ಸೋದರಿಯನ್ನುಳಿದು ದಕ್ಷನ ಭಯದಿಂದ ಕೂಡಿದ್ದ ಮತ್ತಾರೂ ಸ್ವಾಗತಿಸಲಿಲ್ಲ. ದಕ್ಷನೂ ಅವಳನ್ನು ಸ್ವಾಗತಿಸಲಿಲ್ಲ. ಪ್ರೀತಿಯಿ೦ದ ಮಾತನಾಡಿಸಲೂ ಇಲ್ಲ. ಅವಳ ತಾಯಿ ಮತ್ತು ಭಗಿನಿಯರಾದರೋ ಅವಳನ್ನು ಕಂಡು ಆನ೦ದಗೊಂಡರು. ಪ್ರೀತಿ ತುಂಬಿದ ಕಂಗಳಿಂದ ಆನಂದಾಶ್ರುಗಳನ್ನು ಸುರಿಸಿದರು. ಪ್ರೇಮವಿಹ್ವಲರಾದ ಅವರ ಬಾಯಿಂದ ಮಾತೇ ಹೊರಡದಂತಾಯಿತು. ಸತಿಯನ್ನು ಆಲಂಗಿಸಿಕೊಂಡು ಕುಶಲೋಪರಿಗಳನ್ನು ವಿಚಾರಿಸಿದರು.

ಉಚಿತಾಸನವನ್ನೂ ಉಡುಗೊರೆಗಳನ್ನೂ ನೀಡಿದರು. ಆದರೆ ತಂದೆಯಿಂದ ಅನಾಧೃತಳಾದ ಸತಿಯು ಆಸನವನ್ನೂ ಉಡುಗೊರೆಗಳನ್ನೂ ಸ್ವೀಕರಿಸಲಿಲ್ಲ. ಆ ಯಜ್ಞದಲ್ಲಿ ರುದ್ರನಿಗೆ ಹವಿರ್ಭಾಗವನ್ನು ಅರ್ಪಿಸದಿದ್ದುದನ್ನು ಗಮನಿಸಿದಳು. ದಕ್ಷನು ತನ್ನ ಪತಿಯನ್ನು ಯಜ್ಞಕ್ಕೆ ಆಹ್ವಾನಿಸದೆ ಅವನನ್ನು ಈಗಾಗಲೇ ಅವಮಾನಿಸಿದ್ದನು. ಈಗ ಶಿವನಿಗೆ ಹವಿರ್ಭಾಗವನ್ನೂ ಸಲ್ಲಿಸದೆ ತನ್ನನ್ನೂ ಮಾತನಾಡಿಸದೆ ಮತ್ತಷ್ಟು ಅವಮಾನಿಸಿದ್ದನು. ಇದರಿಂದ ಸತಿಗೆ ಲೋಕಗಳನ್ನೇ ಸುಟ್ಟು ಬಿಡುವಷ್ಟು ಕೋಪವಾವರಿಸಿತು.

ಶಿವಗಣಗಳು ದಕ್ಷನ ಈ ವರ್ತನೆಯಿಂದ ಕೆರಳಿ ಅವನನ್ನು ಕೊಲ್ಲಲುದ್ಯುಕ್ತರಾದರು. ಆದರೆ ಸತಿಯು ಅವರನ್ನು ತಡೆದು, ಎಲ್ಲರೂ ಕೇಳುವಂತೆ ದುಃಖ, ಕೋಪಗಳಿಂದ ತನ್ನ ತಂದೆಯನ್ನು ನಿಂದಿಸಿದಳು.

“ಎಲೈ ತ೦ದೆಯೇ!” ಸತಿಯು ಹೇಳಿದಳು, “ಎಲ್ಲರನ್ನೂ ಸಮಭಾವನೆಯಿ೦ದ ನೋಡುವ ಶಿವನಿಗೆ ಪ್ರಿಯರಾಗಲೀ ಆಪ್ರಿಯರಾಗಲೀ ಯಾರೂ ಇಲ್ಲ. ಆದರೆ ದೇಹಧಾರಿಗಳಿಗೆ ಅವನಷ್ಟು ಪ್ರಿಯರೂ ಯಾರೂ ಇಲ್ಲ. ಯಾವ ವೈರಿಯೂ ಇಲ್ಲದ ಅಂಥ ಮಹಾತ್ಮನನ್ನು ನಿನ್ನನ್ನುಳಿದು ಇನ್ನಾರು ತಾನೇ ದ್ವೇಷಿಸುವರು?

“ನಿನ್ನಂಥವರು ಇತರರಲ್ಲಿರುವ ಉತ್ತಮ ಗುಣಗಳಲ್ಲೂ ದೋಷಗಳನ್ನೇ ಹುಡುಕಿ ನಿಂದಿಸುವಿರಿ. ಶಿವನಂತಹ ಸಾಧುಗಳಾದರೂ ಇತರರ ದೋಷಗಳನ್ನು ಪರಿಗಣಿಸುವುದೇ ಇಲ್ಲ! ಅಲ್ಲದೆ, ಇತರರಲ್ಲಿ ಅಲ್ಪವಾದ ಗುಣಗಳಿದ್ದರೂ ಅವನ್ನೇ ಹೆಚ್ಚೆಂದು ಪ್ರಶಂಸಿಸುತ್ತಾರೆ. ಅಂಥ ಮಹಾಪುರುಷನಲ್ಲಿ ನೀನು ತಪ್ಪನ್ನು ಹುಡುಕುತ್ತಿರುವೆ.

“ದೇಹವನ್ನೇ ತಾನೆಂದು ತಿಳಿದಿರುವ ಮೂರ್ಖನು ಈರ್ಷ್ಯಯಿಂದ ಹೀಗೆ ಮಹಾಪುರುಷರನ್ನು ನಿಂದಿಸುವುದು ಆಶ್ಚರ್ಯಕರವೇನೂ ಅಲ್ಲ. ಆದರೆ ಅಂತಹ ಜನರಿಗೆ ಇದೂ ಒಂದು ರೀತಿ ಒಳ್ಳೆಯದೇ! ಏಕೆಂದರೆ, ಮಹಾಜನರ ಪಾದಧೂಳಿಯಿಂದಲೇ ಅವರು ಬೇಗನೆ ತೇಜೋಹೀನರಾಗಿ ಪತಿತರಾಗುತ್ತಾರೆ! ಅಂತಹವರು ಬೇಗ ಕ್ಷೀಣಿಸುವುದೇ ಒಳ್ಳೆಯದು!

”ತಂದೆಯೇ! ‘ಶಿವ’ ಎಂಬ ಎರಡಕ್ಷರಗಳ ನಾಮವನ್ನು ಮಾನವರು ಒಮ್ಮೆ ನುಡಿದರೂ ಅದು ಅವರ ಪಾಪಗಳನ್ನು ಆ ಕ್ಷಣವೇ ನಾಶ ಮಾಡುತ್ತದೆ! ಪವಿತ್ರ ಮೂರ್ತಿಯಾದ ಅವನ ಶಾಸನವನ್ನು ಯಾರೂ ಉಲ್ಲಂಘಿಸುವುದಿಲ್ಲ. ಅಂತಹ ಮಂಗಳಮಯ ದೇವನನ್ನು ನೀನು ವಿನಾ ಕಾರಣ ದ್ವೇಷಿಸುವೆ! ಜನತೆಯ ಅಪೇಕ್ಷೆಗಳನ್ನು ಶಿವನು ಬೇಗನೆ ಪೂರೈಸುತ್ತಾನೆ.

ಅವನ ಚರಣಾರವಿಂದಗಳನ್ನು ಧ್ಯಾನಿಸುವ ಮಹಾತ್ಮರಿಗೆ ಬ್ರಹ್ಮಾನ೦ದವನ್ನೂ ಕರುಣಿಸುತ್ತಾನೆ. ವಿಶ್ವಬಂಧುವಿನಂತಿರುವ ಅವನನ್ನು ನೀನು ದ್ವೇಷಿಸುವೆ!. ‘ಶಿವ’ ನೆಂಬ ಹೆಸರಿನ ಈ “ಅಮಂಗಳ ವ್ಯಕ್ತಿ”ಯ ಬಗ್ಗೆ ಬ್ರಹ್ಮಾದಿಗಳಿಗೆ ತಿಳಿದಿಲ್ಲವೆಂದು ಭಾವಿಸಿದೆಯಾ? ಜಟೆಯನ್ನು ಹರಡಿಕೊ೦ಡು, ಭಸ್ಮವನ್ನೂ ಕಪಾಲಗಳನ್ನೂ ಧರಿಸಿ, ಪಿಶಾಚಿಗಳಿಂದಾವರಿಸಲ್ಪಡುತ್ತಾ ಸ್ಮಶಾನದಲ್ಲಿ ವಾಸಿಸುವ ಈ ವ್ಯಕ್ತಿಯ ಪಾದಧೂಳಿಯನ್ನೂ ನಿರ್ಮಾಲ್ಯವನ್ನೂ ಅವರು ಭಕ್ತಿಯಿಂದ ನಮ್ಮ ಶಿರಸಿನಲ್ಲಿಟ್ಟುಕೊಳ್ಳುತ್ತಾರೆ.!

ತ೦ದೆಯೇ !” ಸತಿಯು ಮುಂದುವರೆಸಿದಳು, “ಹೊಣೆಯಿಲ್ಲದ ವ್ಯಕ್ತಿಯೊಬ್ಬನು ಧರ್ಮಾಧಿ ಪತಿಯೋರ್ವನನ್ನು ನಿಂದಿಸುವುದನ್ನು ಯಾರಾದರೂ ಕೇಳಬೇಕಾಗಿ ಬಂದರೆ, ಆ ಕೂಡಲೇ ಅವನು ತನ್ನ ಕಿವಿಗಳನ್ನು ಮುಚ್ಚಿಕೊಂಡು ಅಲ್ಲಿಂದ ಹೊರಟುಹೋಗಬೇಕು. ಶಿಕ್ಷಿಸುವ ಶಕ್ತಿಯಿದ್ದರೆ ಅಂಥ ನಿಂದಕನ ನಾಲಿಗೆಯನ್ನು ಸೀಳಿ, ಅನಂತರ ತಾನೂ ಪ್ರಾಣವನ್ನು ತ್ಯಜಿಸಬೇಕು! ಪರರ ಧರ್ಮವನ್ನು ಟೀಕಿಸುವುದಕ್ಕಿಂತಲೂ ತನ್ನ ಧರ್ಮವನ್ನು ಆಚರಿಸುವುದುತ್ತಮ. ದೇವತೆಗಳು ಆಕಾಶದಲ್ಲಿ ಸ೦ಚರಿಸಿದರೆ ಮಾನವರು ಭೂಮಿಯಲ್ಲಿ ಸಂಚರಿಸುವುದಿಲ್ಲವೇ?

ಮಹಾಮುನಿಗಳು ಆತ್ಮಜ್ಞಾನದಲ್ಲಿ ರಮಿಸುವವರಾಗಿ, ವೇದ ವಿಹಿತ ನಿಯಮಗಳನ್ನು ಪಾಲಿಸಬೇಕಾಗಿರುವುದಿಲ್ಲ. ವೇದಗಳಲ್ಲಿ ಪ್ರವೃತ್ತಿ ಮಾರ್ಗ ಎಂಬ ಭೋಗಿಗಳು ಆಚರಿಸಬೇಕಾದ ಕರ್ಮಗಳ ರೀತಿಯನ್ನೂ ನಿವೃತ್ತಿ ಮಾರ್ಗ ಎಂಬ ಭೋಗರಹಿತರು ಆಚರಿಸಬೇಕಾದ ಕರ್ಮಗಳ ರೀತಿಯನ್ನೂ ವಿವರಿಸಲಾಗಿದೆ. ಇವೆರಡನ್ನೂ ಒಬ್ಬನಲ್ಲಿಯೇ ಕಾಣಲಾಗದು. ಆದರೆ ಲೋಕೋತ್ತರ ನೆಲೆಯಲ್ಲಿರುವ ಬ್ರಹ್ಮಜ್ಞಾನಿಗೆ ಯಾವ ಕರ್ಮಗಳೂ ಇರುವುದಿಲ್ಲ. ಪಿತನೇ, ಯಜ್ಞ ಯಾಗಾದಿಗಳನ್ನು ಮಾಡಿ ಭೋಗ ಭಾಗ್ಯಗಳನ್ನನುಭವಿಸುವ ನಿಮಗೆ ನಮ್ಮ ಐಶ್ವರ್ಯವನ್ನು ಊಹಿಸಿಕೊಳ್ಳಲೂ ಆಗದು! ಆತ್ಮ ಸಾಕ್ಷಾತ್ಕಾರ ಪಡೆದ ಅವಧೂತರ ಐಶ್ವರ್ಯ ಸದಾ ಅವ್ಯಕ್ತವಾಗಿರುತ್ತದೆ!

‘ಹರನ ವಿಷಯದಲ್ಲಿ ಪಾಪವೆಸಗಿರುವ ನಿನ್ನ ದೇಹದಿಂದ ಉತ್ಪನ್ನವಾಗಿರುವ ಈ ದೇಹವನ್ನು ಇನ್ನೊಂದು ಕ್ಷಣವೂ ಧರಿಸಲಾರೆ! ವಿಷಾಹಾರವನ್ನು ಸೇವಿಸಿದ ಮನುಷ್ಯನಿಗೆ ವಾಂತಿ ಮಾಡಿಸುವುದೇ ಸೂಕ್ತ ಚಿಕಿತ್ಸೆ. ಅಂತೆಯೇ ನಿನ್ನಿಂದ ಜನಿಸಿ ಕಲುಷಿತವಾಗಿರುವ ಈ ಜನ್ಮವನ್ನು ಮುಗಿಸುವುದೇ ನಾನು ಶುದ್ಧಳಾಗಲು ಇರುವ ದಾರಿ! ಅಯ್ಯೋ! ಈ ಕುಜನ್ಮ ಇಂದಿಗೆ ಸಾಕು! ಇದಕ್ಕೆ ಧಿಕ್ಕಾರವಿರಲಿ! ನಿನ್ನಿಂದ ಹುಟ್ಟಿದ ಕಾರಣ ಶಿವನು ನನ್ನನ್ನು ಇನ್ನು ಮುಂದೆ ದಾಕ್ಷಾಯಿಣಿ ಎಂದು ಸಂಬೋಧನೆ ಮಾಡಿದರೆ ಆ ಕೂಡಲೇ ನನ್ನ ಮನಸ್ಸಿಗೆ ಬಹಳ ನೋವಾಗುತ್ತದೆ. ಸಂತೋಷ ಮಾಯವಾಗಿ ದುಃಖವು ಆವರಿಸುತ್ತದೆ. ಆದ್ದರಿಂದ ನಾನೀಗಲೇ ಈ ದೇಹವನ್ನು ತ್ಯಜಿಸಿಬಿಡುವೆ!”

ದಕ್ಷನನ್ನು ಕುರಿತು ಹೀಗೆ ಕೋಪದಿಂದ ನುಡಿದ ಸತೀದೇವಿಯು ಜಲಪ್ರೋಕ್ಷಣೆ ಮಾಡಿಕೊ೦ಡು ಉತ್ತರಾಭಿಮುಖವಾಗಿ ಕುಳಿತಳು. ಪೀತಾಂಬರವನ್ನು ಧರಿಸಿದ್ದ ಅವಳು ಕಣ್ಮುಚ್ಚಿ ಯೋಗವನ್ನಾಶ್ರಯಿಸಿದಳು. ನಿಧಾನವಾಗಿ ಅವಳು ಪ್ರಾಣವಾಯುವನ್ನು ನಾಭಿಚಕ್ರಕ್ಕೇರಿಸಿ ಅಲ್ಲಿಂದ ಹೃದಯ, ಕಂಠ ಮತ್ತು ಭ್ರೂಮಧ್ಯಕ್ಕೇರಿಸಿದಳು. ಲೋಕಕ್ಕೆ ಗುರುವಾದ ತನ್ನ ಪತಿಯ ಚರಣ ಕಮಲಗಳನ್ನೇ ಧ್ಯಾನಿಸುತ್ತಾ ತನ್ನ ದೇಹದಲ್ಲಿ ಅನಿಲಾಗಳನ್ನು ಧರಿಸಿದಳು. ಸಮಾಧಿ ಸ್ಥಳಾದಳು.

ಪರಮ ಪೂಜ್ಯನಾದ ಶಂಕರನು ಬಹು ಪ್ರೀತಿಯಿಂದ ತನ್ನ ಅಂಕದಲ್ಲಿ ಕೂರಿಸಿಕೊಳ್ಳುತ್ತಿದ್ದ ಸತಿಯ ಆ ಸುಂದರ ದೇಹವು ಸರ್ವ ಕಲ್ಮಷಗಳಿಂದಲೂ ಮುಕ್ತಗೊಂಡು ನಿಮಿಷ ಮಾತ್ರದಲ್ಲಿ ದಗ್ಧವಾಗಿ ಹೋಯಿತು! ತಂದೆಯ ಮೇಲಿನ ಕೋಪದಿಂದ ಸತಿಯು ತನ್ನ ದೇಹವನ್ನೇ ತ್ಯಜಿಸಿಬಿಟ್ಟಳು.

ಈ ಅದ್ಭುತವನ್ನು ಕ೦ಡು ಎಲ್ಲರೂ ಹಾಹಾಕಾರ ಮಾಡಿದರು. ಭೂಮ್ಯಾಕಾಶಗಳು ಆ ಕೋಲಾಹಲ ಧ್ವನಿಯಿಂದ ತುಂಬಿ ಹೋಯಿತು.

”ಅಯ್ಯೋ! ಎಂಥ ಅನಾಹುತವಾಗಿ ಹೋಯಿತು! ಮಹಾದೇವನ ಪತ್ನಿ ದಕ್ಷನ ಮೇಲೆ ಕುಪಿತಳಾಗಿ ತನ್ನ ಪ್ರಾಣವನ್ನೇ ತ್ಯಜಿಸಿಬಿಟ್ಟಳಲ್ಲ ! ಈ ದಕ್ಷನ ವರ್ತನೆಯನ್ನು ನೋಡಿ! ಪ್ರಜಾಪತಿಯಾದ ಇವನು ಹೀಗೆ ಮಾಡಬಹುದೇ? ನಿಶ್ಚಯವಾಗಿಯೂ ಮಹಾ ಗೌರವಕ್ಕೆ ಪಾತ್ರಳಾಗಿದ್ದ ಆ ಮಾನಿನಿಯು ಇವನಿಂದ ಅವಮಾನಿತಳಾಗಿ ತನ್ನ ಅಮೂಲ್ಯ ಪ್ರಾಣವನ್ನೇ ತ್ಯಜಿಸಿದಳಲ್ಲ! ಛೇ! ತನ್ನ ಸ್ವಂತ ಮಗಳು ಪ್ರಾಣಾರ್ಪಣೆ ಮಾಡಲು ಸಿದ್ಧಳಾಗುತ್ತಿದ್ದರೂ ದುರುಳನಾದ ಈ ದಕ್ಷನು ಅದನ್ನು ತಡೆಯಲಿಲ್ಲ! ಕಠಿಣ ಮನಸ್ಸಿನ ಇವನೆಂಥ ಬ್ರಾಹ್ಮಣನು? ಶಿವನನ್ನು ದ್ವೇಷಿಸುವ ಇವನು ಖಂಡಿತವಾಗಿಯೂ ಜಗತ್ತಿನಲ್ಲಿ ದೊಡ್ಡ ಅಪಕೀರ್ತಿಗೆ ಗುರಿಯಾಗುತ್ತಾನೆ!”

ಜನರೆಲ್ಲರೂ ಹೀಗೆ ಮಾತನಾಡಿಕೊಳ್ಳುತ್ತಿರಲು, ಶಿವನ ಅನುಚರರು ದಕ್ಷನನ್ನು ಸಂಹರಿಸಲೆಂದು ತಮ್ಮ ಆಯುಧಗಳನ್ನು ಹಿಡಿದು ಎದ್ದರು. ವೇಗವಾಗಿ ಅವರು ಮುನ್ನುಗ್ಗಲು ಕೂಡಲೇ ಭೃಗು ಮುನಿಗಳು ದಕ್ಷಿಣಾಗ್ನಿಯಲ್ಲಿ ಹವಿಸ್ಸನ್ನರ್ಪಿಸಿ ಯಜುರ್ಮಂತ್ರಗಳನ್ನುಚ್ಚರಿಸಿದರು. ಆಗ ಋಭುಗಳೆಂಬ ಸಹಸ್ರಾರು ದೇವತೆಗಳು ಹುಟ್ಟಿಕೊಂಡರು.

ಸೋಮದೇವತೆಯಿಂದ ಶಕ್ತಿ ಪಡೆದಿದ್ದ ಅವರು ಪರಾಕ್ರಮದಿಂದ ಕೂಡಿದ್ದರು. ಅವರು ಅಗ್ನ್ಯಾಯುಧಗಳಿಂದ ಶಿವಾನುಚರರನ್ನು ಪ್ರಹರಿಸತೊಡಗಿದರು. ಬ್ರಹತೇಜಸ್ಸಿನಿಂದ ಉತ್ಪನ್ನರಾಗಿದ್ದ ಅವರನ್ನು ಶಿವಗಣಗಳು ಎದುರಿಸಲಾರದೇ ಹೋದರು. ಅವರು ದಿಕ್ಕು ದಿಕ್ಕುಗಳಿಗೆ ಓಡಿಹೋದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi