ಮಂಜಿನ ತೆರೆ ಸರಿಯಿತು

ಭರತನ ಕಥೆ (ಭಾಗ-3)

ಮಹಾರಾಜ! ದೇಹ ಮತ್ತು ತತ್ಸಂಬಂಧಿತವಾದ  ಸುಖದುಃಖಗಳೆಲ್ಲವೂ ಮಾಯಾರಚಿತವಾದುವೆಂದು ಅರಿಯುವವರೆಗೂ ಜೀವಾತ್ಮನು ವಿವಿಧ ಜನ್ಮಗಳಲ್ಲಿ ಅಲೆಯುತ್ತಿರಬೇಕು! ಅನಿಯಂತ್ರಿತವಾದ ಮನಸ್ಸಿನ ಸಂಗದಿಂದ ಜೀವಾತ್ಮನಿಗೆ ಈ ಸ್ಥಿತಿಗಳು ಉಂಟಾಗುತ್ತವೆ. ಆದ್ದರಿಂದ ಮುಕ್ತಿ ಗಳಿಸಬೇಕೆಂದರೆ, ಗುರುವಿನ ಮತ್ತು ಶ್ರೀಹರಿಯ ಚರಣೋಪಾಸನೆಯಿಂದ ಆ ಮನಸ್ಸನ್ನು ಗೆಲ್ಲಬೇಕು. ನೀನೂ ಹಾಗೆ ಮಾಡು.

“ಓ ಮಹಾತ್ಮ!” ರಹೂಗಣನು ಹೇಳಿದ, “ನೀನು ಮಹಾಜ್ಞಾನಿ! ಬ್ರಾಹ್ಮಣನ ರೂಪದಲ್ಲಿರುವ ನೀನು ನಿಜವಾಗಿ ಒಬ್ಬ ಅವಧೂತಯೋಗಿ! ನಿನ್ನ ನಿಜಸ್ವರೂಪ ನಿಗೂಢವಾಗಿದೆ! ಈಗ ನಿನ್ನನ್ನು ಮುಚ್ಚಿದ್ದ ತೆರೆ ಸ್ವಲ್ಪಸ್ವಲ್ಪವೇ ಸರಿಯುತ್ತಿದೆ! ನಿನಗೆ ನನ್ನ ನಮಸ್ಕಾರ! ಜ್ವರರೋಗಪೀಡಿತನಾದವನಿಗೆ ಔಷಧಿಯು ಹೇಗೋ, ಬಿಸಿಲಿನ ಬೇಗೆಯಿಂದ ಬಳಲಿದವನಿಗೆ ಶೀತಲಜಲವು ಹೇಗೋ, ಹಾಗೆಯೇ ಕಲ್ಮಷಗಳಿಂದ ತುಂಬಿರುವ ಈ ದೇಹದಲ್ಲಿ ಅಹಂಕಾರದಿಂದಿರುವ ನನಗೆ ನಿನ್ನ ಮಾತುಗಳು ಅಮೃತದ ಹನಿಗಳಂತಿವೆ! ಆದರೆ ಅವನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟವಾಗುತ್ತಿದೆ! ಮತ್ತೆ ಮತ್ತೆ ಅವೇ ಸಂಶಯಗಳು ತಲೆಯೆತ್ತುತ್ತಿವೆ! ಮಹಾತ್ಮ, ದಯವಿಟ್ಟು ಎಲ್ಲವನ್ನೂ ಇನ್ನೊಮ್ಮೆ ಸ್ವಲ್ಪ ಸರಳವಾಗಿ ವಿವರಿಸುವೆಯಾ?”

“ಮಹಾರಾಜ!” ಜಡಭರತನು ಹೇಳತೊಡಗಿದನು, “ಇಲ್ಲಿ ಈ ಜನರಿರುವರಲ್ಲಾ… ಇವರು ಪೃಥ್ವಿಯ ರೂಪಾಂತರಗಳೇ ಆಗಿದ್ದಾರೆ! ಆದ್ದರಿಂದಲೇ ಈ ದೇಹಗಳು `ಪಾರ್ಥಿವ’ವೆನಿಸುತ್ತವೆ. ಪೃಥ್ವಿಯ ಮಾರ್ಪಾಟುಗಳಿಂದಲೇ ಚಲಿಸುವ ಮತ್ತು ಚಲಿಸದ ವಸ್ತುಗಳಾಗಿವೆ! ಈಗ ಈ ಪೃಥ್ವಿಯ ಮೇಲೆ ಪಾದಗಳು, ಅವುಗಳ ಮೇಲೆ ಮೊಣಕಾಲುಗಳು, ಮಂಡಿಗಳು, ತೊಡೆಗಳು, ಸೊಂಟ, ಎದೆ, ಕುತ್ತಿಗೆ, ಭುಜಗಳು, ಆ ಭುಜಗಳ ಮೇಲೆ ಮರದಿಂದ ಮಾಡಲ್ಪಟ್ಟ ಪಲ್ಲಕ್ಕಿ, ಆ ಪಲ್ಲಕ್ಕಿಯೊಳಗೆ ಸೌವೀರರಾಜನೆಂಬ ಮತ್ತೊಂದು ಪೃಥ್ವಿಯ ರೂಪಾಂತರ; ಅದರಲ್ಲಿ ನೀನು ಇರುವೆ; ನಿನ್ನನ್ನು ನೀನು ರಾಜ ಎಂದು ಭಾವಿಸಿಕೊಂಡಿರುವೆ! ಈ ಜನರು ಪಾಲಕನೆಂದು ಭಾವಿಸಿಕೊಂಡು ಒಳ್ಳೆಯ ಮಾತಾಗಲೀ ಸಂಬಳವಾಗಲೀ ನೀಡದೆ ಇವರಿಂದ ದುಡಿಸಿಕೊಳ್ಳುತ್ತಿರುವೆ! ಇದು ನಿನಗೆ ಶೋಭಿಸದು! ಪಾಪ, ಇವರ ಸ್ಥಿತಿಯೂ ಶೋಚನೀಯವಾಗಿದೆ.

“ರಾಜನೇ, ಸಕಲ ಚರಾಚರಗಳೂ ಈ ಪೃಥ್ವಿಯ ರೂಪಾಂತರಗಳೇ ಆಗಿದ್ದು, ಪೃಥ್ವಿಯಿಂದಲೇ ಉಂಟಾಗಿ ಪೃಥ್ವಿಯಲ್ಲೇ ಲೀನವಾಗುತ್ತವೆ. ಈ ವಿವಿಧ ರೂಪಾಂತರಗಳು ದಪ್ಪ, ಸಣ್ಣ, ದೊಡ್ಡದು, ಚಿಕ್ಕದು, ಎಂದೆಲ್ಲಾ ಬೇರೆ ಬೇರೆಯಾಗಿ, ವಿವಿಧ ಹೆಸರುಗಳಿಂದ ಕರೆಸಿಕೊಳ್ಳುತ್ತವೆ. ಈ ಭೇದಗಳು ದ್ರವ್ಯದೇಶ, ಕಾಲ ಸ್ವಭಾವಗಳ ಸಂಗಮದಿಂದಾಗಿ ಉಂಟಾಗಿ ಪುನಃ ಪ್ರಕೃತಿಯಲ್ಲೇ ಒಂದಾಗುತ್ತವೆ! ಒಂದೇ ಮಣ್ಣಿನಿಂದ ಹಲವು ಮಡಕೆಗಳಾದಂತೆ ಒಂದೇ ಪ್ರಕೃತಿಯಿಂದ ಈ ಅಶಾಶ್ವತ ರೂಪಭೇದಗಳಾಗುತ್ತವೆ. ಆದ್ದರಿಂದ ಭೌತಿಕವಾದ ಈ ರೂಪಭೇದಗಳು ನಿಜವಲ್ಲ. ಹಾಗಾದರೆ ಪರಮಸತ್ಯ ಯಾವುದು? ಯಾವುದು ಶುದ್ಧಜ್ಞಾನಸ್ವರೂಪವೋ, ಏಕವೂ ಅದ್ವಿತೀಯವೂ ಆಗಿರುವುದೋ, ಒಳಹೊರಗುಗಳಿಲ್ಲದೇ ಎಲ್ಲೆಲ್ಲೂ ಇರುವುದೋ, ಪರಮಾರ್ಥವಾದುದೋ ಅದು! ಅದೇ ಪರಬ್ರಹ್ಮ, ಪರಮಾತ್ಮ ಮತ್ತು ಭಗವಂತನಾದ ಶ್ರೀವಾಸುದೇವನೆಂದು ಕರೆಯಲ್ಪಡುವುದು! ಜೀವಾತ್ಮನು ಇವನ ಅಂಶವೇ ಆಗಿರುವನು! ಆದ್ದರಿಂದ ಜೀವದ ಮೂಲ, ಈ ಭಗವಂತನೇ! ಹೀಗೆ ಜೀವನು ಪ್ರಕೃತಿಗಿಂತಲೂ ಪರನಾದ ವಾಸುದೇವನ ಅಂಶ! ಜೀವಾತ್ಮ ಮತ್ತು ಭಗವಂತನ ನಡುವಿನ ಈ ಸಂಬಂಧವನ್ನೇ ಅರಿಯಬೇಕಾದುದು!

“ರಹೂಗಣನೇ, ಪರಮಸತ್ಯದ ಈ ಅರಿವು ಬರಿಯ ಬ್ರಹ್ಮಚರ್ಯೆಯ ಪಾಲನೆಯಿಂದಾಗಲೀ, ಗ್ರಾಹಸ್ಥ್ಯ ಧರ್ಮದಿಂದಾಗಲೀ, ಸಂನ್ಯಾಸಿಯಾಗಿ ದುಷ್ಕರ ತಪಸ್ಸು ಮಾಡುವುದರಿಂದಾಗಲೀ, ವೇದಾಧ್ಯಯನದಿಂದಾಗಲೀ, ಬರುವುದಿಲ್ಲ! ಮಹಾತ್ಮರ, ಅಥವಾ ಭಕ್ತರ ಪಾದಸೇವೆಯಿಂದ ಇದು ದೊರೆಯುತ್ತದೆ; ಅಂಥ ಭಕ್ತರ ಸಂಗವಿಲ್ಲದೇ ಬೇರೇನು ಮಾಡಿದರೂ ಈ ಅರಿವು ಸಿಗದು! ಏಕೆಂದರೆ, ಅಂಥ ಭಕ್ತರ ಸಮೂಹದಲ್ಲಿ ತುಚ್ಛವಾದ ಲೌಕಿಕ ವಿಷಯಗಳ ಚರ್ಚೆ ನಡೆಯದೆ, ಶ್ರೀ ಹರಿಯ ದಿವ್ಯ ಲೀಲೆಗಳ ಚರ್ಚೆ ನಡೆಯುತ್ತದೆ. ಅಂಥ ದಿವ್ಯ ಕಥೆಗಳನ್ನು ಅನುದಿನವೂ ಕೇಳುತ್ತಿದ್ದರೆ ಮನಸ್ಸು ಆ ಭಗವಂತನೆಡೆಗೆ ಸೆಳೆಯಲ್ಪಟ್ಟು ಅವನಲ್ಲಿ ಭಕ್ತಿಯುಂಟಾಗಿ ಈ ಪಾರಮಾರ್ಥಿಕ ಅರಿವು ಉಂಟಾಗುತ್ತದೆ.

“ಮಹಾರಾಜ! ನಾನು ಮುಂಚಿನ ಒಂದು ಜನ್ಮದಲ್ಲಿ ಭರತನೆಂಬ ರಾಜನಾಗಿದ್ದೆ. ಆಗ ಜೀವನಾನುಭವದಿಂದಲೂ ವೇದಗಳ ಅಂತರಾರ್ಥವನ್ನು ಅರಿತುದರಿಂದಲೂ ಸಂಸಾರದಲ್ಲಿ ವಿರಕ್ತಿ ಹೊಂದಿ ಭಗವಂತನ ಧ್ಯಾನ ಮಾಡಲು ಅರಣ್ಯಕ್ಕೆ ಹೋದೆ. ಭಗವತ್ಸೇವೆಯಲ್ಲೇ ನನ್ನ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿದೆ ಕೂಡ! ಆದರೆ ದುರದೃಷ್ಟವಶಾತ್‌, ಒಂದು ಜಿಂಕೆಯಲ್ಲಿ ವ್ಯಾಮೋಹ ತೋರಿ ಮರುಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿಬಿಟ್ಟೆ! ಆದರೆ ಶ್ರೀಕೃಷ್ಣನ ಪೂಜೆಯ ಫಲವಾಗಿ ಆ ಜಿಂಕೆಯ ಜನ್ಮದಲ್ಲಿದ್ದಾಗಲೂ ನನಗೆ ಪೂರ್ವಜನ್ಮದ ಸ್ಮರಣೆಯಿತ್ತು! ಆ ಕಾರಣದಿಂದ ಸದಾ ದೇವೋತ್ತಮ ಪರಮ ಪುರುಷನನ್ನೇ ಚಿಂತಿಸುತ್ತಾ ಆ ಜನ್ಮವನ್ನೂ ಕಳೆದು ಈಗ ಬ್ರಾಹ್ಮಣನಾಗಿ ಹುಟ್ಟಿದ್ದೇನೆ! ರಾಜ, ಆ ಭಗವಂತನ ಕೃಪೆಯಿಂದ ಈ ಹಿಂದಿನ ಎರಡೂ ಜನ್ಮಗಳ ನೆನಪು ನನಗೆ ಈಗಲೂ ಇದೆ. ಜನರ ಸಂಗದಿಂದ ಪುನಃ ನಾನು ಇಂಥ ಅವಸ್ಥೆಗಳಿಗೊಳಗಾಗಬಾರದೆಂದು ಇಂಥ ಸಂಗದಿಂದ ದೂರಾಗಿ ಏಕಾಂಗಿಯಾಗಿ ಸಂಚರಿಸುತ್ತಿದ್ದೇನೆ! ಆದ್ದರಿಂದ ರಾಜನೇ, ದುರ್ಜನ ಸಂಗವನ್ನು ತೊರೆದು ಭಕ್ತರ ಸಂಗವನ್ನು ಮಾಡಬೇಕು; ಅದರಿಂದ, ಅಮೃತಮಯವಾದ ಹರಿಕಥೆಗಳನ್ನು ಕೇಳುತ್ತಾ, ತನ್ಮೂಲಕ ದೊರೆಯುವ ಜ್ಞಾನವೆಂಬ ಖಡ್ಗದಿಂದ ಮೋಹಪಾಶವನ್ನು ಕತ್ತರಿಸಿ ಭಗವಂತನ ಬಳಿಗೆ ಹಿಂದಿರುಗಬಹುದು.”

“ಬ್ರಾಹ್ಮಣೋತ್ತಮ! ಸಾಧುವರ್ಯ!” ರಹೂಗಣನು ಅತ್ಯಾಶ್ಚರ್ಯದಿಂದ ಹೇಳಿದನು, “ನಿನ್ನ ಕಥೆ ಅದ್ಭುತವಾಗಿದೆ! ಒಂದು ಕಾಲದಲ್ಲಿ ಈ ಭೂಮಂಡಲಕ್ಕೇ ಚಕ್ರವರ್ತಿಯಾಗಿದ್ದವನೇ ನೀನು?! ಅಂಥ ನೀನು, ವಿರಕ್ತಿ ಹೊಂದಿ ಎಂಥ ಮಹತ್ತರ ನೆಲೆಗೇರಿರುವೆ! ಪೂರ್ವಜನ್ಮದ ಸ್ಮರಣೆಯನ್ನೂ ಹೊಂದಿರುವೆ ನೀನು ಅಸಾಮಾನ್ಯ! ಇಷ್ಟು ಕಾಲವೂ, ಮಂಜು ಮುಸುಕಿದಂತೆ ಸಂಚರಿಸುತ್ತಿದ್ದೆ! ಈಗ ಆ ತೆರೆ ಸರಿದಿದೆ! ಇದು ನನ್ನ ಅದೃಷ್ಟ! ಆದರೆ ನಿನ್ನ ಮುಂದೆ ತೃಣಸಮಾನನಾದ ನಾನು ನಿನ್ನನ್ನು ನಿಂದಿಸಿ ತಪ್ಪು ಮಾಡಿಬಿಟ್ಟೆ! ದಯವಿಟ್ಟು ನನ್ನನ್ನು ಮನ್ನಿಸು! ನಿನ್ನ ಒಂದೊಂದು ಮಾತೂ ಅಮೃತೋಪಮವಾಗಿದೆ! ದಯವಿಟ್ಟು ಇನ್ನೂ ಹೇಳು!”

ಜಡಭರತನಿಗೆ ರಹೂಗಣನ ಶ್ರದ್ಧೆ, ಆಸಕ್ತಿಗಳನ್ನು ಕಂಡು ಸಂತೋಷವಾಯಿತು. ಅವನು ತನ್ನ ಉಪದೇಶವನ್ನು ಮುಂದುವರಿಸಿದನು, “ರಾಜ! ಈಗ ನಾನು ನಿನಗೊಂದು ಚಿಕ್ಕ ಕಥೆಯನ್ನು ಹೇಳುವೆ.”

“ಜಯಿಸಲು ದುಸ್ಸಾಧ್ಯವಾದ ಮಾಯೆಯಿಂದ ನಿರ್ದೇಶಿತನಾದ ವ್ಯಾಪಾರಿಯೊಬ್ಬನು, ಸತ್ತ್ವ, ರಜಸ್ಸು, ತಮೋಗುಣಗಳಿಂದ ಪ್ರಭಾವಿತನಾಗಿ ಹಣ ಸಂಪಾದಿಸಬೇಕೆಂದು ಸಂಸಾರವೆಂಬ ಅರಣ್ಯವನ್ನು ಪ್ರವೇಶಿಸುತ್ತಾನೆ. ಈ ಕಾಡಿನಲ್ಲಿ ಆರು ಜನ ಕಳ್ಳರು ಅವನ ಮೇಲೆ ಬಿದ್ದು ಅವನ ದುಡ್ಡನ್ನೆಲ್ಲಾ ದೋಚುತ್ತಾರೆ! ಅಂತೆಯೇ, ನರಿಗಳು, ತೋಳಗಳು ಮೊದಲಾದ ಕ್ರೂರ ಮೃಗಗಳು ಕುರಿಮರಿಯನ್ನು ಅದರ ಒಡೆಯನಿಂದ ಸೆಳೆದೊಯ್ಯುವಂತೆ ಇವನನ್ನು ಸೆಳೆದೊಯ್ದು ಹಿಂಸಿಸುತ್ತವೆ! ಈ ಕಾಡಿನಲ್ಲಿ ಹಲವಾರು ದಟ್ಟ ಪೊದೆಗಳೂ ಸುತ್ತಿಕೊಂಡು ಹಬ್ಬಿರುವ ಬಳ್ಳಿಗಳೂ ಇವೆ; ವ್ಯಾಪಾರಿಯು ರಕ್ಷಣೆಗಾಗಿ ಅಲ್ಲಿ ಹೋದರೆ, ಪ್ರಬಲವಾಗಿ ಕಚ್ಚಿ ರಕ್ತಹೀರುವ ಭಯಂಕರ ಸೊಳ್ಳೆಗಳು ಅವನನ್ನು ಸಾಕಷ್ಟು ಪೀಡಿಸುತ್ತವೆ! ಕೆಲವೊಮ್ಮೆ ಆ ವ್ಯಾಪಾರಿಯು ಆಕಾಶದಲ್ಲಿ ಗಂಧರ್ವಪುರಿಯೆಂಬ ಭವ್ಯ ಅರಮನೆಯನ್ನು ಕಾಣುತ್ತಾನೆ! ಕೆಲವೊಮ್ಮೆ, ಉಲ್ಕೆಯಂತಿರುವ ಭೂತವು ಹಠಾತ್ತನೆ ಬಂದು ಅದೃಶ್ಯವಾಗುವುದನ್ನು ಕಾಣುತ್ತಾನೆ! ಅವನು ತನ್ನ ಮನೆ, ಧನ, ಬಂಧು ಬಳಗಗಳ ಮೋಹಕ್ಕೊಳಗಾಗಿ ಈ ಕಾಡಿನಲ್ಲಿ ಅಲ್ಲಿಂದಿಲ್ಲಿಗೆ ಅಲೆಯುತ್ತಿರುತ್ತಾನೆ! ಕೆಲವೊಮ್ಮೆ ಬಿರುಗಾಳಿ ಬೀಸಿ ಧೂಳು ಆವರಿಸುವುದರಿಂದ ಅವನ ಕಂಗಳು ಮುಚ್ಚಲ್ಪಟ್ಟು ಏನನ್ನೂ ಕಾಣದಂತಾಗುತ್ತಾನೆ! ಈ ಕಾಡಿನಲ್ಲಿ ದಿಕ್ಕೆಟ್ಟು ಅಲೆಯುತ್ತಿರುವಾಗ ಅವನು ಕೆಲವೊಮ್ಮೆ ಜೀರುಂಡೆಗಳ, ಕೆಲವೊಮ್ಮೆ ಗೂಬೆಗಳ ಕರ್ಕಶ ಕೂಗುಗಳನ್ನು ಕೇಳಿ ಕಿವಿ ಚುಚ್ಚಿದಂತಾಗಿ ಸಂಕಟ ಪಡುತ್ತಾನೆ. ಕೆಲವೊಮ್ಮೆ ಅವನು ಹಸಿವು ಬಾಯಾರಿಕೆಗಳಿಂದ ಬಾಧಿಸಲ್ಪಟ್ಟು ತಿನ್ನಲು ಏನಾದರೂ, ಹಣ್ಣು ಸಿಗುವುದೋ ಎಂದು ಮರಗಳ ಬಳಿಗೋಡುತ್ತಾನೆ; ಆದರೆ ದುರದೃಷ್ಟವಶಾತ್‌ ಆ ಮರಗಳಲ್ಲಿ ಹಣ್ಣುಗಳಾಗಲೀ, ಹೂವುಗಳಾಗಲೀ ಇರುವುದೇ ಇಲ್ಲ! ಇದ್ದಕ್ಕಿದ್ದಂತೆ ನೀರಿನ ಕೊಳ ಕಂಡಂತಾಗಿ ಅಲ್ಲಿಗೆ ಓಡಿಹೋಗುತ್ತಾನೆ! ಆದರೆ ಅದು ಬರೀ ಮರೀಚಿಕೆಯೆಂದು ತಿಳಿದು ಭ್ರಮನಿರಸನಗೊಂಡಾಗ ತನ್ನ ದುರದೃಷ್ಟವನ್ನು ಹಳಿಯುತ್ತಾನೆ! ಕೆಲವೊಮ್ಮೆ ಸೂರ್ಯನ ತಾಪವನ್ನು ತಾಳಲಾರದೇ ತಗ್ಗಾದ ನದಿಯೊಳಗೆ ಈಜಲು ಧುಮುಕಿ ಮೈಮುರಿದುಕೊಳ್ಳುತ್ತಾನೆ! ಕೆಲವೊಮ್ಮೆ ಬಡತನದಿಂದ, ಆಹಾರವಿಲ್ಲದೇ, ಬಡವರ ಬಳಿಗೇ ಹೋಗಿ ಭಿಕ್ಷೆ ಬೇಡುತ್ತಾನೆ! ಕೆಲವೊಮ್ಮೆ ಕಾಡ್ಗಿಚ್ಚಿನಲ್ಲಿ ಸಿಲುಕಿಕೊಂಡು ನರಳುತ್ತಾನೆ! ಕೆಲವೊಮ್ಮೆ ಪ್ರಾಣಕ್ಕೆ ಪ್ರಿಯವಾದ ಅವನ ಹಣವನ್ನೆಲ್ಲಾ ಯಕ್ಷರು ದೋಚಿ ಅವನನ್ನು ನಿರಾಸೆಗೊಳಿಸುತ್ತಾರೆ! ಇಂಥ ಶೂರರಿಂದ ದೋಚಲ್ಪಟ್ಟು ಅವನು ಅತ್ಯಂತ ದುಃಖಿತನಾಗಿ ಅಳುತ್ತಾ ಕೆಲವೊಮ್ಮೆ ಮೂರ್ಛಿತನಾಗುತ್ತಾನೆ! ಈ ರೀತಿ ದುಃಖದಲ್ಲಿರುವಾಗಲೂ ಒಮ್ಮೊಮ್ಮೆ ಆಕಾಶದಲ್ಲಿರುವ ಗಂಧರ್ವಪುರಿಯನ್ನು ಪ್ರವೇಶಿಸಿ ಕ್ಷಣಕಾಲ ಸುಖಿಸುತ್ತಾನೆ!

“ಆ ವ್ಯಾಪಾರಿಯು ಕೆಲವೊಮ್ಮೆ ಕಲ್ಲುಮುಳ್ಳುಗಳಿಂದ ಕೂಡಿರುವ ಬೆಟ್ಟಗುಡ್ಡಗಳನ್ನು ಹತ್ತಲು ಯತ್ನಿಸುತ್ತಾನೆ! ಆಗ ಆ ಕಲ್ಲುಮುಳ್ಳುಗಳು ಕಾಲಿಗೆ ಚುಚ್ಚಿ ಅವನು ನೋವಿನಿಂದ ಸಂಕಟಪಡುತ್ತಾನೆ. ಕೆಲವೊಮ್ಮೆ ಬೆಂಕಿಯಂಥ ಹಸಿವಿನ ಬಾಧೆಯಿಂದ ಸಂಕಟಪಡುತ್ತಾ ಅದರಿಂದುಂಟಾಗುವ ಕೋಪವನ್ನು ತನ್ನ ಕುಟುಂಬದ ಮೇಲೆ ತೀರಿಸಿಕೊಳ್ಳುತ್ತಾನೆ. ಕೆಲವೊಮ್ಮೆ, ಈ ಕಾಡಿನಲ್ಲಿ ಸಂಚರಿಸುತ್ತಿರುವಾಗ ಒಂದು ದೊಡ್ಡ ಹೆಬ್ಬಾವಿನಿಂದ ನುಂಗಲ್ಪಡುತ್ತಾನೆ ಇಲ್ಲವೇ ಹಿಸುಕಲ್ಪಡುತ್ತಾನೆ! ಆಗ ಅವನು ಜ್ಞಾನಶೂನ್ಯನಾಗಿ ಸತ್ತವನಂತೆ ಬಿದ್ದಿರುತ್ತಾನೆ! ಕೆಲವೊಮ್ಮೆ ಇತರ ವಿಷ ಸರ್ಪಗಳಿಂದ ಕಚ್ಚಲ್ಪಟ್ಟು ಅಂಧನಾಗಿ, ತಿಳಿಯದೇ ಕತ್ತಲ ಬಾವಿಯೊಳಗೆ ಬೀಳುತ್ತಾನೆ! ಕೆಲವೊಮ್ಮೆ, ತುಚ್ಛರಸಗಳನ್ನು ಅನುಭವಿಸಲು ಜೇನುಗೂಡುಗಳನ್ನು ಹುಡುಕಿಕೊಂಡು ಹೋಗುತ್ತಾನೆ; ಆಗ ಅವನು ದುಂಬಿಗಳಿಂದ ಪೀಡಿಸಲ್ಪಡುತ್ತಾನೆ! ಆದರೂ ಬಹಳ ಕಷ್ಟದಿಂದ ಅಂಥ ಜೇನುಗೂಡನ್ನು ಪಡೆದರೂ ಮತ್ತೊಬ್ಬನು ಅದನ್ನು ಅವನಿಂದ ಅಪಹರಿಸುತ್ತಾನೆ! ಕೆಲವೊಮ್ಮೆ ಪ್ರಕೃತಿಯ ವಿಕೋಪಗಳಾದ ಅತಿವೃಷ್ಟಿ ಅತಿ ಚಳಿ, ಅತಿ ಬಿಸಿಲು, ಬಿರುಗಾಳಿ, ಭೂಕಂಪ ಮೊದಲಾದವುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ವಿಫಲನಾದಾಗ ಬಹಳ ದುಃಖಿತನಾಗುತ್ತಾನೆ! ಕೆಲವೊಮ್ಮೆ ತನ್ನ ವ್ಯಾಪಾರದಲ್ಲಿ ಇತರರಿಂದ ವಂಚಿತನಾಗಿ ಅವರೊಂದಿಗೆ ದ್ವೇಷವನ್ನು ಬೆಳೆಸಿಕೊಳ್ಳುತ್ತಾನೆ! ಕೆಲವೊಮ್ಮೆ ಹಣದ ಕೊರತೆಯಾಗಿ ಒಳ್ಳೆಯ ಮನೆ, ಸಂಸಾರ ಸುಖಗಳಿಲ್ಲದಂತಾಗಿ, ಇತರರ ಆಸ್ತಿಯನ್ನು ಕಂಡು ಮಾತ್ಸರ್ಯಕ್ಕೊಳಗಾಗುತ್ತಾನೆ. ಆಗ ಪರರಿಂದ ಹಣವನ್ನು ಯಾಚಿಸುತ್ತಾನೆ ಇಲ್ಲವೇ ಕದಿಯಲು ಹೋಗಿ ಅವಮಾನಕ್ಕೊಳಗಾಗುತ್ತಾನೆ! ಹಣದ ಏರುಪೇರಿನಿಂದ ಬಾಂಧವ್ಯಗಳೇ ಕಡಿದುಹೋಗುತ್ತವೆ! ವೈರತ್ವವೂ ಬೆಳೆಯುತ್ತದೆ! ಹಣವನ್ನು ಸಂಪಾದಿಸಲು ಅವನೂ ಅವನ ಪತ್ನಿಯೂ ಬಹಳ ಕಷ್ಟಪಡುತ್ತಾರೆ! ಹಣದ ಬಾಧೆಯಿಂದ ಕೆಲವೊಮ್ಮೆ ತೀವ್ರ ಸಂಕಟವನ್ನನುಭವಿಸಿ ಬಹಳ ಖಿನ್ನರಾಗುತ್ತಾರೆ!

“ಮಹಾರಾಜ! ಈ ಭವಾಟವಿಯಲ್ಲಿ ತನ್ನವರು ಎಂದು ಹೇಳಿಕೊಳ್ಳುವ ತಂದೆ, ತಾಯಿ, ಬಂಧು ಬಾಂಧವರು ಒಬ್ಬೊಬ್ಬರಾಗಿ ಸಾಯುತ್ತಿದ್ದಂತೆ ಅವರನ್ನು ಮರೆಯುತ್ತಾ ಹೊಸದಾಗಿ ಹುಟ್ಟುವ ಮಕ್ಕಳು, ಮೊಮ್ಮಕ್ಕಳು ಮೊದಲಾದವರಲ್ಲಿ ಮನಸ್ಸಿಡುತ್ತಾ ಇಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಿರುತ್ತಾನೆಯೇ ಹೊರತು ಭಗವಂತನನ್ನು ಸೇರುವ ಮಾರ್ಗವನ್ನು ಹುಡುಕುವುದಿಲ್ಲ. ಇಂಥ ಅನೇಕ ವೀರರು, ಶೂರರು, ರಾಜಮಹಾರಾಜರು `ಇದು ನನ್ನ ನೆಲ, ನನ್ನ ಭೂಮಿ, ನನ್ನ ಜನ, ನನ್ನ ಕುಟುಂಬ’ ಎಂದು ಮುಂತಾಗಿ ಹೇಳಿಕೊಳ್ಳುತ್ತಾ ಇತರರೊಂದಿಗೆ ವೈರತ್ತ್ವವನ್ನು ಬೆಳೆಸಿಕೊಳ್ಳುತ್ತಾ ಕಡೆಗೆ ರಣರಂಗದಲ್ಲಿ ದಿಕ್ಕಿಲ್ಲದವರಂತೆ ಮಲಗಿ ತಮ್ಮ ಜೀವನವನ್ನೇ ಮುಗಿಸಿಕೊಂಡರು! ಆದರೆ ಆಸೆಗಳನ್ನು ನಿಯಂತ್ರಿಸಿ, ವೈರವನ್ನು ತ್ಯಜಿಸಿ, ಕಡೆಗೆ ಸಂನ್ಯಾಸವನ್ನು ಸ್ವೀಕರಿಸಿ ಪರಮಾತ್ಮನ ಕಡೆ ಮನಸ್ಸು ಹರಿಸಲಾಗಲಿಲ್ಲ!

“ರಾಜ, ಕೆಲವೊಮ್ಮೆ ಈ ಭಯಂಕರ ಕಾಡಿನಲ್ಲಿ ಅವನು ಕೋಮಲವಾದ ಲತೆಗಳ ಆಶ್ರಯ ಪಡೆದು ಹಕ್ಕಿಗಳ ಚಿಲಿಪಿಲಿ ಧ್ವನಿಯನ್ನು ಕೇಳಿ ಸಂತಸಗೊಳ್ಳುತ್ತಾನೆ! ಕೆಲವೊಮ್ಮೆ ದೂರದಲ್ಲಿ ಕೇಳಿಬರುವ ಸಿಂಹಗರ್ಜನೆಗೆ ಹೆದರಿ ಬಕಪಕ್ಷಿಗಳ ಮತ್ತು ರಣ ಹದ್ದುಗಳ ಆಶ್ರಯ ಪಡೆಯುತ್ತಾನೆ! ಆದರೆ ಅವುಗಳಿಂದಲೂ ಅವನಿಗೆ ವಂಚನೆಯೇ ಉಂಟಾದಾಗ ಹಂಸಗಳ ಸಹವಾಸ ಮಾಡುತ್ತಾನೆ; ಆದರೆ ಹಂಸಗಳ ಸಹವಾಸ ಅವನಿಗೆ ರುಚಿಸದೇ ಕೋತಿಗಳ ಸಂಗ ಮಾಡುತ್ತಾನೆ! ಆ ಜಾತಿಗೆ ತಕ್ಕ ಕಾರ್ಯಗಳಲ್ಲಿ ರಮಿಸುತ್ತಾ ಅವುಗಳ ಮುಖ ನೋಡಿಕೊಂಡು ತೃಪ್ತಿಪಟ್ಟುಕೊಳ್ಳುತ್ತಾನೆ! ಆ ಕೋತಿಗಳಂತೆ, ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಹೆಂಡಿರು ಮಕ್ಕಳನ್ನೇ ಬಹಳ ನೆಚ್ಚಿಕೊಳ್ಳುತ್ತಾ ಬರಿಯ ಲೈಂಗಿಕ ಸುಖಕ್ಕಾಗಿಯೇ ಬದುಕಿರುವನೆಂಬಂತೆ ಹೆಂಡತಿಯನ್ನು ಬೇಡುತ್ತಾ ಒಮ್ಮೊಮ್ಮೆ ಹೆಂಡತಿಯಿಂದಲೇ ಒದೆಸಿಕೊಳ್ಳುತ್ತಾನೆ! ಆಗ ಎಚ್ಚರತಪ್ಪಿ ಒಮ್ಮೊಮ್ಮೆ ಹಳ್ಳಗಳಲ್ಲೂ ಗುಹೆಗಳಲ್ಲೂ ಬೀಳುತ್ತಾನೆ! ಕೆಳಗೆ ಮದ್ದಾನೆಯಿರುವುದನ್ನು ಕಂಡು ಅದರ ಭಯದಿಂದ ಕೆಳಗೂ ಬೀಳದೇ ಅಲ್ಲೇ ಬೆಳೆದಿರುವ ಬಳ್ಳಿಯೊಂದನ್ನು ಹಿಡಿದು ನೇತಾಡುತ್ತಿರುತ್ತಾನೆ!

“ರಾಜ, ಅಕಸ್ಮಾತ್‌ ಅವನು ಇಂಥ ವಿಷಮ ಪರಿಸ್ಥಿತಿಯಿಂದಲೂ ಉಳಿದರೆ, ಪುನಃ ದಡ್ಡನಂತೆ ಅದೇ ಕಾಡನ್ನೇ ಪ್ರವೇಶಿಸುತ್ತಾನೆ! ಏನು ಮಾಡುವುದು? ಮಾಯೆಯ ಪ್ರಭಾವದಿಂದ ಮೈಮರೆತಿರುವ ಅವನು, ತನ್ನ ನಿಜವಾದ ಗುರಿಯನ್ನು ಅರಿಯುವುದೇ ಇಲ್ಲ!”

“ಮಹಾರಾಜ! ಇದೊಂದು ದೃಷ್ಟಾಂತ ಕಥೆ. ಕಥೆಯ ಅಂತರಾರ್ಥ ಹೀಗಿದೆ : ಈ ಕಾಡೆಂದರೆ ಈ ದುರ್ಗಮವಾದ ಸಂಸಾರ. ಅದನ್ನು ಪ್ರವೇಶಿಸುವ ವ್ಯಾಪಾರಿಯೆಂದರೆ ಜೀವಾತ್ಮ. ವ್ಯಾಪಾರಿಯು ಮರವೇ ಮೊದಲಾದ ವಸ್ತುಗಳನ್ನು ಸಂಗ್ರಹಿಸಿ ಮಾರಲೆಂದು ಕಾಡಿಗೆ ಬರುವಂತೆ  ಜೀವನು ಪ್ರಾಪಂಚಿಕ ಸುಖಕ್ಕಾಗಿ ತನ್ನ ದಿವ್ಯನೆಲೆಯಿಂದ ಈ ಸಂಸಾರಕ್ಕೆ ಬರುತ್ತಾನೆ. ಅರಣ್ಯದೊಳಗೆ ಹೋದಂತೆಲ್ಲಾ ದಾರಿತಪ್ಪುತ್ತಾನೆ; ಸತ್ತ್ವ ರಜಸ್ತಮೋಗುಣಗಳ ಪ್ರಭಾವದಿಂದ ಕೆಲವೊಮ್ಮೆ ಊರ್ಧ್ವಲೋಕಗಳಿಗೂ ಕೆಲವೊಮ್ಮೆ ಅಧೋಲೋಕಗಳಿಗೂ ಹೋಗುತ್ತಾ ಮಾಯೆಯಿಂದ ನಿರ್ದೇಶಿತನಾಗಿ ಈ ಸಂಸಾರದಲ್ಲೇ ಸುತ್ತುತ್ತಾ ಸುಖದುಃಖಗಳನ್ನು ಅನುಭವಿಸುತ್ತಿರುತ್ತಾನೆ! ಇಲ್ಲಿ ಆರು ಕಳ್ಳರೆಂದರೆ, ಇವನ ಪಂಚೇಂದ್ರಿಯಗಳು ಮತ್ತು ಮನಸ್ಸು; ಇದನ್ನು ತೃಪ್ತಿಪಡಿಸಲೋಸುಗ ಇವನು ತಾನು ಗಳಿಸಿದ್ದನ್ನೆಲ್ಲಾ ಖರ್ಚುಮಾಡುವುದರಿಂದ ಅವು ಇವನ ದುಡ್ಡನ್ನು ದೋಚುತ್ತವೆ! ನರಿಗಳು, ತೋಳಗಳು ಮೊದಲಾದ ಕ್ರೂರಮೃಗಗಳು ಇವನ ಹೆಂಡಿರುಮಕ್ಕಳು! ಕುರಿಮರಿಯನ್ನು ಹಿಂಸಿಸುವಂತೆ ಇವನನ್ನು ದುಡ್ಡಿಗಾಗಿ ಪೀಡಿಸುತ್ತಾರೆ! ಒಂದು ಹೊಲದಲ್ಲಿ ಎಲ್ಲ ಕೆಟ್ಟ ಗಿಡಗಳನ್ನು ಬೇರು ಸಹಿತ ಕಿತ್ತು ಹಾಕಿದರೂ ಬೀಜಗಳು ಸುಟ್ಟಿರದಿದ್ದರೆ ಪುನಃ ಮೊಳೆಯುವವಲ್ಲವೇ? ಅಂತೆಯೇ, ವಿಷಯ ಸುಖಗಳನ್ನು ಅನುಭವಿಸುವ ಆಸೆಯು ಪೂರ್ಣವಾಗಿ ಹೋಗುವವರೆಗೂ ಮತ್ತೆ ಮತ್ತೆ ಚಿಗಿತುಕೊಳ್ಳುತ್ತಿರುತ್ತದೆ; ಇದೇ ದಟ್ಟವಾದ ಪೊದೆಗಳು! ಇಲ್ಲಿ ಸೊಳ್ಳೆಗಳು, ತಿಗಣೆಗಳು, ಇಲಿಗಳು, ಇವೆಲ್ಲ
ನೀಚ ಜನರಿಗೆ, ಕಳ್ಳರಿಗೆ ಹೋಲಿಕೆಗಳು! ಗಂಧರ್ವನಗರಿಯೆಂದರೆ, ಆಕಾಶದಲ್ಲಿ ಮೋಡಗಳ ಸಮೂಹದಿಂದ ಕಾಣುವ ಆಕೃತಿಗಳಂತಹ ಕಾಲ್ಪನಿಕ ಭವನ; ಇಲ್ಲಿನ ಭೋಗಭವನಗಳಿಗೆ ಇದನ್ನು ಹೋಲಿಸಿದೆ. ಇವು ಅಶಾಶ್ವತವಾದರೂ ಜನ ಬಹಳ ಸಂತಸದಿಂದ ಇವನ್ನು ಪ್ರವೇಶಿಸಿ ಆಹಾರ, ಪಾನೀಯ, ರತಿಸುಖಗಳಲ್ಲಿ ರಮಿಸುತ್ತಾರೆ! ಕೆಲವೊಮ್ಮೆ, ಹಳದಿ ಬಣ್ಣದ ಆಕರ್ಷಕ ಚಿನ್ನವನ್ನು ಕಂಡು ವಿಸ್ಮಯಗೊಳ್ಳುತ್ತಾರೆ! ಚಿನ್ನ ಅಥವಾ ಹಣ, ಶಾಶ್ವತವಾಗಿರದೇ ಬಂದಂತೆಯೇ ಹೋಗಿಬಿಡುತ್ತದೆ! ಇದನ್ನೇ ಇಲ್ಲಿ ಭೂತ ಅಥವಾ ಪಿಶಾಚಿಯಂಥ ಉಲ್ಕೆಯೆನ್ನಲಾಗಿದೆ! ಕೆಲವೊಮ್ಮೆ ಸೂಕ್ತ ಮನೆಯನ್ನು ನಿರ್ಮಿಸಲು, ಸಾಕಷ್ಟು ಧನ ಸಂಗ್ರಹ ಮಾಡಲು, ತನ್ನ ಕುಟುಂಬವನ್ನು ಸುಖವಾಗಿಡಲು ಅತ್ತಿಂದಿತ್ತ ಅಲೆಯುತ್ತಾನೆ! ಕೆಲವೊಮ್ಮೆ ರಜಸ್ವಲೆಯರ ಕಾಮವೆಂಬ ಧೂಳು ಆವರಿಸಿ ಕುರುಡನಂತಾಗುತ್ತಾನೆ! ತನ್ನನ್ನು ದಿಗ್ದೇವತೆಗಳು ಗಮನಿಸುತ್ತಿರುವರು ಎಂಬುದನ್ನರಿಯದೇ, ಕುರುಡು ಕಾಮಿಯಾಗಿ ಮಾಡಬಾರದ ಕಾರ್ಯಗಳನ್ನು ಮಾಡುತ್ತಾನೆ! ಕೆಲವೊಮ್ಮೆ ಅವನ ಶತ್ರುಗಳೂ ರಾಜ ಸೇವಕರೂ ಅವನನ್ನು ನಿಂದಿಸಿ, ತೆರಿಗೆಗಳನ್ನು ಕಟ್ಟಲು ಕಷ್ಟವಾದಾಗ ಬಯ್ಯುತ್ತಾರೆ! ಇವೇ ಜೀರುಂಡೆ, ಮಿಡತೆ, ಗೂಬೆಗಳ ಕರ್ಕಶ ಕೂಗುಗಳು! ಅವನು ತನ್ನ ಪೂರ್ವಜನ್ಮದ ಪುಣ್ಯಫಲಗಳನ್ನು ಅನುಭವಿಸಿ ಅವು ಮುಗಿದ ಬಳಿಕ, ಧನಹೀನನಾಗಿ ಜೀವನ್ಮೃತರಂತಿರುವ ಜಿಪುಣರ ಬಳಿ ಯಾಚಿಸುವನು! ಇವರ ಬಳಿ ಏನೂ ದೊರೆಯುವುದಿಲ್ಲ! ಇವರಿಗೇ ಆ ಹೂಹಣ್ಣುಗಳಿಲ್ಲದ ಪಾಪವೃಕ್ಷಗಳನ್ನೂ, ಮರಿಚಿಕೆಗಳಿಗೂ ಹೋಲಿಸಲಾಗಿದೆ!  ಕೆಲವೊಮ್ಮೆ ಈ ಸಂಕಟವನ್ನು  ಪರಿಹರಿಸಲು ಅವನು ಕಳ್ಳಸ್ವಾಮಿಗಳ ಮೊರೆ ಹೋಗಿ ಮೋಸ ಹೋಗುತ್ತಾನೆ; ತಗ್ಗಾದ ನದಿಯಲ್ಲಿ ಬಿದ್ದು ಮೈಮುರಿದುಕೊಳ್ಳುವುದೆಂದರೆ ಇದೇ! ಅವನ ಹಣವನ್ನು ದೋಚುವ ಯಕ್ಷರಾಕ್ಷಸರೆಂದರೆ ತೆರಿಗೆ ವಸೂಲು ಮಾಡುವ ರಾಜ-ಸರ್ಕಾರ ಸೇವಕರು! ಇದರಿಂದ ಅವನು ಬಹಳ ಖಿನ್ನನಾಗುತ್ತಾನೆ!

“ಗೃಹಸ್ಥಾಶ್ರಮವನ್ನು ಪಾಲಿಸಲು ಯಜ್ಞಗಳೇ ಮುಂತಾದ ಕರ್ಮಗಳನ್ನು ಕಷ್ಟಪಟ್ಟು ಆಚರಿಸುವುದಕ್ಕೆ ಕಲ್ಲು ಮುಳ್ಳುಗಳಿರುವ ಬೆಟ್ಟಗುಡ್ಡಗಳನ್ನು ಹತ್ತುವುದೆಂದು ಹೇಳಲಾಗಿದೆ. ಇಂಥ ವಿಸ್ತಾರ ಸಮಾರಂಭಗಳನ್ನು ಆಚರಿಸುವುದರಿಂದಾಗುವ ಧನನಷ್ಟ, ಕಷ್ಟಗಳೇ ಕಲ್ಲುಮುಳ್ಳುಗಳ ಚುಚ್ಚುವಿಕೆ ಮತ್ತು ನೋವು! ಕೆಲವೊಮ್ಮೆ ಹಸಿವಿನ ಬಾಧೆಯಿಂದ ಕೋಪವುಂಟಾಗಿ ಆ ಕೋಪವನ್ನು ತನ್ನ ಬಡ ಹೆಂಡಿರು ಮಕ್ಕಳ ಮೇಲೆ ತೋರಿಸುತ್ತಾನೆ!

“ಇಲ್ಲಿ ನಿದ್ರೆಯನ್ನು ಹೆಬ್ಬಾವಿಗೆ ಹೋಲಿಸಿದೆ. ನಿದ್ರೆಯೆಂಬ ಹೆಬ್ಬಾವಿನಿಂದ ನುಂಗಲ್ಪಟ್ಟ ಮನುಷ್ಯನು ಅಂಧಕಾರದಲ್ಲಿ ಮುಳುಗಿ ಸತ್ತಂತಿರುತ್ತಾನೆ! ವಿಷಸರ್ಪಗಳು, ಚೇಳುಗಳು ಇತ್ಯಾದಿಗಳನ್ನು ಶತ್ರುಗಳಿಗೆ ಹೋಲಿಸಲಾಗಿದೆ. ಇವರ ವಂಚನೆಯಿಂದ ಮನುಷ್ಯನು ಎತ್ತರದ ಸ್ಥಿತಿಯಿಂದ ನೀಚಸ್ಥಿತಿಗೆ ಇಳಿಯುತ್ತಾನೆ! ಇದರಿಂದ ಇವನು ಆತಂಕಕ್ಕೊಳಗಾಗಿ ಮತಿಭ್ರಷ್ಟನಂತಾಗುತ್ತಾನೆ! ಇದನ್ನೇ ಕತ್ತಲಬಾವಿಯಲ್ಲಿ ಬೀಳುತ್ತಾನೆ ಎಂದಿರುವುದು! ಕೆಲವೊಮ್ಮೆ ತುಚ್ಛ ಸುಖಕ್ಕೆ ಆಸೆಪಟ್ಟು ಪರನಾರಿ, ಪರಧನಗಳೆಂಬ ಜೇನುಗೂಡುಗಳನ್ನು ಹುಡುಕಿಕೊಂಡು ಹೋದಾಗ ರಾಜಸೇವಕರು ಇಲ್ಲವೇ ಆ ಹೆಣ್ಣು ಹೊನ್ನುಗಳ ಯಜಮಾನರು ಅವನನ್ನು ಹಿಡಿದು ಶಿಕ್ಷಿಸುತ್ತಾರೆ. ಇವರೇ ಆ ಜೇನ್ನೋಣಗಳು. ಆದರೂ ಇವನು ಅವನ್ನು ಹೇಗೋ ಪಡೆದರೆ, ಇತರರು ಅವನ್ನು ಇವನಿಂದ ಕಿತ್ತುಕೊಳ್ಳುತ್ತಾರೆ! ಕೆಲಕಾಲ ಇವನು ತನ್ನ ಬಳಿ ಇರಿಸಿಕೊಂಡರೆ, ದೇವದತ್ತನೆಂಬುವನು ಇವನಿಂದ ಕದಿಯುತ್ತಾನೆ! ಅನಂತರ ವಿಷ್ಣುಮಿತ್ರನೆಂಬುವನು ದೇವದತ್ತನಿಂದ ಕದಿಯುತ್ತಾನೆ!

“ಕೆಲವೊಮ್ಮೆ ಈ ವ್ಯಾಪಾರಿಯ ತನ್ನ ಪ್ರಿಯ ಪತ್ನಿಯ ಬಳ್ಳಿಯಂಥ ಕೋಮಲ ತೋಳುಗಳ ಆಸರೆ ಪಡೆದು ಸಂತೋಷಪಡುತ್ತಾನೆ! ಪಕ್ಷಿಗಳ ಚಿಲಿಪಿಲಿಯಂಥ ಅವಳ ಮಧುರ ಧ್ವನಿಕೇಳಿ ಆನಂದಿಸುತ್ತಾನೆ! ವೃದ್ಧಾಪ್ಯ ಆವರಿಸಿದಂತೆ, ಸಾವೆಂಬ ಸಿಂಹಗರ್ಜನೆಗೆ ಹೆದರಿ ಬಕ, ರಣಹದ್ದುಗಳಂಥ ಪಾಷಂಡಿಗಳ, ನಾಸ್ತಿಕರ, ಕಳ್ಳ ಸ್ವಾಮಿಗಳ ಆಶ್ರಯ ಪಡೆಯುತ್ತಾನೆ. ಅವರಿಂದಲೂ ಶಾಂತಿ ಸಮಾಧಾನ ದೊರೆಯದಾದಾಗ ಅಕಸ್ಮಾತ್ತಾಗಿ ಹಂಸಗಳೆಂಬ ಶುದ್ಧ ಭಕ್ತರ ಸಹವಾಸ ಮಾಡುತ್ತಾನೆ! ಆದರೆ ಇಂದ್ರಿಯನಿಗ್ರಹವೇ ಮೊದಲಾದ ಕಾರ್ಯಗಳು ಕಷ್ಟವಾಗಿ ಅವರ ಸಹವಾಸ ರುಚಿಸುವುದಿಲ್ಲ. ಆಗ ಅವನು ಕೋತಿಗಳೆಂಬ ನೀಚಜನರ ಸಹವಾಸ ಮಾಡುತ್ತಾನೆ! ತಿನ್ನುವುದು, ಕುಡಿಯುವುದು, ಲೈಂಗಿಕ ಸುಖಗಳಲ್ಲಿ ರಮಿಸುವುದು, ಇವೇ ಕಾರ್ಯಗಳಾದ ಈ ಕೋತಿಗಳಂತೆ ಆಗುತ್ತಾನೆ! ಮನೆ, ಹೆಂಡತಿ, ಮಕ್ಕಳೇ ಸರ್ವಸ್ವವೆಂದು ನೆಚ್ಚಿಕೊಳ್ಳುತ್ತಾ ಕೆಲವೊಮ್ಮೆ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತಾ ಅಂದರೆ ಅತಿಯಾದ ವಿಷಯ ಸುಖಗಳಲ್ಲಿ ಮುಳುಗಿ ಕೊನೆಗೆ ರೋಗವೆಂಬ ಹಳ್ಳ ಅಥವಾ ಗುಹೆಗಳಲ್ಲಿ ಬೀಳುತ್ತಾನೆ! ಅಲ್ಲಿ ಸಾವು ಎಂಬ ಮದ್ದಾನೆಯ ಭೀತಿಯಿಂದ ನರಳುತ್ತಾನೆ! ಅಕಸ್ಮಾತ್‌ ಅವನು ಸ್ವಸ್ಥನಾದರೂ ಪುನಃ ಅದೇ ವಿಷಯ ಸುಖಗಳಲ್ಲೇ ಮುಳುಗುತ್ತಾನೆ! ಭಗವಂತನ ಪ್ರಾಪ್ತಿಯೆಂಬ ತನ್ನ ನಿಜವಾದ ಗುರಿಯನ್ನು ಅವನು ಅರಿಯುವುದೇ ಇಲ್ಲ!

“ಮಹಾರಾಜ! ರಹೂಗಣ! ಇದೆಲ್ಲಾ ದುರತಿಕ್ರಮವಾದ ಮಾಯೆಯ ಪ್ರಭಾವ! ನೀನೂ ಈ ಮಾಯೆಗೆ ವಶವಾಗಿ ಈ ಭವಾಟವಿಯಲ್ಲಿ ಭೋಗಾಸಕ್ತನಾಗಿರುವೆ! ಇನ್ನು ಇದು ಸಾಕು! ಈಗ ನೀನು ರಾಜ್ಯವನ್ನೂ ವಿಷಯಸುಖವನ್ನೂ ತ್ಯಜಸಿ ಭಕ್ತಿಯಿಂದ ಹರಿ ಸೇವೆ ಮಾಡು; ಸಕಲ ಜೀವರಾಶಿಗೂ ಮಿತ್ರನಾಗು. ಜ್ಞಾನವೆಂಬ ಖಡ್ಗದಿಂದ ಈ ಮಾಯಾಪಾಶವನ್ನು ಕತ್ತರಿಸಿ ಈ ಸಂಸಾರಸಾಗರವನ್ನು ದಾಟು!”

ಜಡಭರತ ಹೀಗೆ ತನ್ನ ಉಪದೇಶ ನೀಡಿ ಮೌನವಾದ. ಅವನ ಉಪದೇಶದಿಂದ ಆಶ್ಚರ್ಯ, ಸಂತೋಷಗಳಿಗೊಳಗಾಗಿ ರಹೂಗಣನು ಹೇಳಿದ – “ಮಹಾತ್ಮ! ಎಲ್ಲ ಜನ್ಮಗಳಲ್ಲೂ ಈ ಮಾನವ ಜನ್ಮವೇ ಅತ್ಯಂತ ಶ್ರೇಷ್ಠವೆಂದು ಅರಿತೆ! ಪುಣ್ಯಫಲದಿಂದ ಸ್ವರ್ಗದಲ್ಲಿ ದೇವತೆಯಾಗಿ ಹುಟ್ಟುವುದಕ್ಕಿಂತಲೂ ಇದು ಶ್ರೇಷ್ಠ! ಏಕೆಂದರೆ, ಸ್ವರ್ಗದಲ್ಲಿ ಎಲ್ಲ ಭೋಗಭಾಗ್ಯಗಳು ದೊರೆತು, ದೇವೋತ್ತಮ ಪುರುಷನನ್ನು ಸ್ತುತಿಸುವ ಅವಕಾಶವೇ ಆಗುವುದಿಲ್ಲ! ಆದರೆ ಇಲ್ಲಿ, ನಿನ್ನಂಥ ಮಹಾಭಕ್ತರ ದರ್ಶನ, ಸಹವಾಸಗಳು ದೊರೆತು ಆ ಪರಮಪುರುಷನಲ್ಲಿ ಭಕ್ತಿ ಉದಯಿಸಲು ಅವಕಾಶವಾಗುತ್ತದೆ! ನಿನ್ನ ಚರಣಕಮಲರಜದ ಸ್ಪರ್ಶದಿಂದಲೇ ದೊರೆಯುವ ಈ ಹರಿಭಕ್ತಿ ಬ್ರಹ್ಮನಂಥ ದೇವತೆಗಳಿಗೂ ದುರ್ಲಭ! ನಿನ್ನ ಕ್ಷಣಕಾಲದ ಸಹವಾಸದಿಂದಲೇ ನನ್ನ ದರ್ಪ, ಅಹಂಕಾರಗಳೆಲ್ಲಾ ನಾಶವಾದವು! ಮಾಯೆಯ ತೆರೆಯೂ ಸರಿಯಿತು! ನಿನಗೆ ನನ್ನ ನಮಸ್ಕಾರ! ನಿನ್ನಂತಹ ಮಹಾನ್‌ ವ್ಯಕ್ತಿಗಳಿಗೆ, ಅವರು ಬಾಲಕರಿರಲಿ, ಯುವಕರಿರಲಿ, ಅವಧೂತರಿರಲಿ, ಬ್ರಾಹ್ಮಣರಿರಲಿ, ನಿಗೂಢವಾಗಿ ಸಂಚರಿಸುವ ಅವರೆಲ್ಲರಿಗೂ ನಮಸ್ಕಾರ! ಈ ಎಲ್ಲರ ದಯೆಯಿಂದ ನನ್ನಂಥ ರಾಜಕುಲದವರಿಗೆ ಮಂಗಳವಾಗಲಿ!”

ರಹೂಗಣರಾಜನು ಹೀಗೆ ಸ್ತುತಿಸಲು ಜಡಭರತನು ಅವನನ್ನು ಆಶೀರ್ವದಿಸಿ ಹೊರಟುಹೋದನು; ಭೂಮಿಯಲ್ಲಿ ಕೆಲಕಾಲ ಸಂಚರಿಸುತ್ತಾ, ಆ ಜನ್ಮ ಮುಗಿಯಲು ಅವನು ಭಗವದ್ಧಾಮವನ್ನು ಸೇರಿದನು.

ಈ ಲೇಖನ ಶೇರ್ ಮಾಡಿ