ಒಂದಾನೊಂದು ಕಾಲದಲ್ಲಿ ಗೋಪಿ ಎಂಬ ಭಕ್ತ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದುದರಿಂದ ಅವರ ಮನೆಯಲ್ಲಿ ಉಣ್ಣಲು ಸಾಕಷ್ಟು ತಿನಿಸು ಇರುತ್ತಿರಲಿಲ್ಲ. ಇದರಿಂದ ಅವನ ಹೆಂಡತಿಗೆ ಕೋಪ ಬರುತ್ತಿತ್ತು.
ಅದು ಸಹಜವಲ್ಲವೇ? ಅವಳ ಅಕ್ಕಪಕ್ಕದ ಮನೆಯವರು ಚೆನ್ನಾಗಿ ತಿಂದುಂಡು ಖುಷಿಯಾಗಿರುತ್ತಿದ್ದರು. ಆದುದರಿಂದ ಅವಳಿಗೆ ಗೋಪಿಯ ಮೇಲೆ ಸಿಟ್ಟಾಗುತ್ತಿತ್ತು. ಒಂದು ದಿನ ಅವಳ ಸಿಟ್ಟು ನತ್ತಿಗೆ ಏರಿತ್ತು. ಅವಳು ತನ್ನ ಗಂಡನಿಗೆ ಮನೆ ಬಿಟ್ಟು ಹೋಗಲು ತಿಳಿಸಿದಳು. ಹಣ ಸಿಕ್ಕರೆ ಮಾತ್ರ ಮನಗೆ ಬಾ ಎಂದು ಅವಳು ತಾಕೀತು ಮಾಡಿದಾಗ ಅವನಿಗೆ ದಿಕ್ಕೇ ತೋಚದಂತಾಯಿತು.
ಗೋಪಿ ಎಷ್ಟೇ ಅಲೆದಾಡಿದರೂ ಅವನಿಗೆ ಎಲ್ಲೂ ಕೆಲಸ ಸಿಗಲಿಲ್ಲ. ಅವನು ಯಾವತ್ತೂ ಕೆಲಸ ಮಾಡಿರಲಿಲ್ಲವಲ್ಲ! ಈಗ ಯಾರು ತಾನೆ ಅವನಿಗೆ ಕೆಲಸ ಕೊಡುತ್ತಾರೆ? ಹತಾಶ ಮತ್ತು ಆಯಾಸದಿಂದ ಗೋಪಿ ಒಂದು ಮರದ ಕೆಳಗೆ ಕುಳಿತ. ಅಲ್ಲಿ ಅವನು ಒಂದೇ ಸಮನೆ ಶಿವನ ಧ್ಯಾನ ಮಾಡಿದ. ಅವನ ಭಕ್ತಿಗೆ ಮಚ್ಚಿದ ಶಿವ ಪ್ರತ್ಯಕ್ಷನಾದ.
“ಪ್ರಭು, ನನ್ನ ಹೆಂಡತಿಗೆ ತೃಪ್ತಿಯಾಗುವ ಅತ್ಯಂತ ಬೆಲೆ ಉಳ್ಳದ್ದನ್ನು ನನಗೆ ದಯಪಾಲಿಸು” ಎಂದು ಅವನು ಶಿವನಲ್ಲಿ ಕೋರಿದ. ಆಗ ಶಿವ ಅವನಿಗೆ ಸೂಚಿಸಿದ, ”ವೃಂದಾವನಕ್ಕೆ ಹೋಗು. ಅಲ್ಲಿ ಸನಾತನ ಗೋಸ್ವಾಮಿ ಎಂಬ ಸಂತರನ್ನು ಭೇಟಿ ಮಾಡು. ಅವರು ನಿನಗೆ ಅತಿ ಬೆಲೆ ಉಳ್ಳದನ್ನು ಕೂಡುವರು.”

ಗೋಪಿಯ ಸಂತೋಷಕ್ಕೆ ಪಾರವೇ ಇಲ್ಲ. ಅವನು ವೃಂದಾವನಕ್ಕೆ ಓಡುತ್ತಲೇ ಹೋದ. ಏನೂ ಕೆಲಸ ಮಾಡದೆ ಶ್ರೀಮಂತನಾಗಬಹುದು, ಹೆಂಡತಿಯನ್ನು ಖುಷಿ ಪಡಿಸಬಹುದು ಎಂದು ಅವನು ಹಿಗ್ಗಿ ಹೀರೇಕಾಯಿಯಾದ. ಗೋಪಿಯು ಶ್ರೀಲ ಸನಾತನ ಗೋಸ್ವಾಮಿಯವರ ಆಶ್ರಮಕ್ಕೆ ಹೋಗಿ ನಮಸ್ಕಾರ ಮಾಡಿದೆ.
ಗೋಪಿಯು ಅವರ ಬಳಿ ನಿಂತು ನುಡಿದ, “ಮಹಾರಾಜ್, ಅತ್ಯಂತ ಬೆಲೆ ಉಳ್ಳ ವಸ್ತುವಿಗಾಗಿ ನಾನು ನಿಮ್ಮ ಬಳಿಗೆ ಬಂದಿರುವ. ಇದು ಶಿವನ ಆದೇಶ.” ಆಗ ಸನಾತನ ಗೋಸ್ವಾಮಿಯವರು ಉತ್ತರಿಸಿದರು, “ಈ ಆಶ್ರಮದ ಹಿಂಭಾಗಕ್ಕೆ ಹೋಗು. ಅಲ್ಲಿ ಕಸದ ರಾಶಿ ಇದೆ. ಅದರ ಕೆಳಗೆ ನಿನಗೆ ಏನು ಬೇಕೋ ಅದು ಸಿಗುತ್ತದೆ.”
ಗೋಪಿ ತತ್‌ಕ್ಷಣ ಆಶ್ರಮದ ಹಿತ್ತಲಿಗೆ ಓಡಿದ. ಕಸದ ರಾಶಿ ಮಧ್ಯ ಅವನಿಗೆ ಸಿಕ್ಕಿದ್ದು ಒಂದು ಕಲ್ಲು! ಅರೆ, ಈ ಕಲ್ಲು ಅದು ಹೇಗೆ ಮೌಲ್ಯದ್ದಾಗುತ್ತದೆ ಎಂದು ಅವನು ಅಚ್ಚರಿಪಟ್ಟ. ಅವನು ಸನಾತನ ಗೋಸ್ವಾಮಿ ಅವರ ಬಳಿ ಕಲ್ಲಿನ ಬಗೆಗೆ ಕೇಳಿದ, ಅವರೆಂದರು, “ನನ್ನ ಪ್ರೀತಿಯ ಪುತ್ರನೇ, ಇದು ಸಾಮಾನ್ಯ ಕಲ್ಲಲ್ಲ, ಇದಕ್ಕೆ ತುಂಬ ಶಕ್ತಿ ಉಂಟು. ಈ ಕಲ್ಲನ್ನು ನಿನಗೆ ಇಷ್ಟವಾದ ವಸ್ತುವಿಗೆ ಸ್ಪರ್ಶಿಸು. ಅದು ಚಿನ್ನವಾಗುತ್ತದೆ!”
ಗೋಪಿ ಖುಷಿಯಿಂದ ಮನೆಗೆ ಓಡಿದ. ತನ್ನ ಹೆಂಡತಿಗೆ ಸ್ಪರ್ಶ ಮಣಿಯನ್ನು ತೋರಿಸಿದ. ಅವರಿಬ್ಬರೂ ತಮ್ಮ ಮನೆಯಲ್ಲಿನ ವಸ್ತುಗಳಿಗೆ ಆ ಕಲ್ಲಿನ ಸ್ಪರ್ಶ ಮಾಡಿ ಚಿನ್ನವಾಗಿ ಪರಿವರ್ತಿಸಿದರು. ಗೋಪಿಯ ಪತ್ನಿಗೆ ಬಲು ಸಂತೋಷ. ಅವರು ಬಲು ಬೇಗ ಶ್ರೀಮಂತರಾಗಿಬಿಟ್ಟರು. ಅದರೂ ಪತ್ನಿಗೆ ಸಮಾಧಾನ ಆಗಲಿಲ್ಲ. ಅವಳಿಗೆ ಅನುಮಾನ ಉಂಟಾಯಿತು.

“ಎಷ್ಟು ಜನರು ಕಸದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡುತ್ತಾರೆ? ಆ ಸಂನ್ಯಾಸಿ ಇದನ್ನು ಕಸದಲ್ಲಿ ಇಟ್ಟಿದ್ದನೆಂದರೆ, ಅವನಿಗೆ ಇದು ಅಷ್ಟೇನೂ ಬೆಲೆ ಉಳ್ಳದಲ್ಲ ಎಂದು ಅರ್ಥ. ಅಂದರೆ ಅವನ ಬಳಿ ಇದಕ್ಕಿಂತ ಹೆಚ್ಚು ಬೆಲೆ ಉಳ್ಳದ್ದು ಇದೆ ಎಂದಾಯಿತು. ಅತ್ಯಂತ ಬೆಲೆಯ ವಸ್ತುವನ್ನು ಪಡೆದುಕೋ ಎಂದು ಶಿವ ಹೇಳಿದ್ದು, ಆದರೆ ನೀನು ತಂದಿರುವುದು ಈ ಕಲ್ಲನ್ನು!”
ಇಷ್ಟು ಶ್ರೀಮಂತರಾಗಿದ್ದರೂ ಇವಳಿಗೇಕೆ ಸಮಾಧಾನ ಇಲ್ಲ ಎಂದು ಗೋಪಿ ಅಚ್ಚರಿಪಟ್ಟ. ಅವಳ ಕಾಟ ತಾಳಲಾರದೆ ಅವನು ಬೆಲೆ ಬಾಳುವ ವಸ್ತುವಿಗಾಗಿ ಪುನಃ ವೃಂದಾವನಕ್ಕೆ ಹೋಗಿ ಸನಾತನ ಗೋಸ್ವಾಮಿ ಅವರ ಬಳಿ ತನ್ನ ಕಷ್ಟ ಹೇಳಿಕೊಂಡ. ಗೋಸ್ವಾಮಿಗಳೆಂದರು, “ನಿನ್ನ ಹೆಂಡತಿ ಹೇಳಿದ್ದು ಸರಿ, ಈ ಕಲ್ಲು ನಿನಗೆ ಅಪಾರ ಹಣ ತಂದುಕೊಟ್ಟಿರಬಹುದು.
ಆದರೆ ನನಗೆ ಅದು ಬೆಲೆ ಉಳ್ಳದ್ದೇ ಅಲ್ಲ. ಈ ಕಲ್ಲನ್ನು ನದಿಯಲ್ಲಿ ಹಾಕು” ಎಂದು ಹೇಳಿದರು. ಗೋಪಿಗೆ ಅಚ್ಚರಿ ಮತ್ತು ಗೊಂದಲ. ಅವರೆಂದರು. “ನನ್ನ ಬಳಿ ಇರುವ ಅತ್ಯಂತ ಬೆಲೆ ಉಳ್ಳದೆಂದರೆ ಭಗವಂತನ ಪವಿತ್ರ ನಾಮ. ಅದೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. ಇಡೀ ಜಗತ್ತಿನಲ್ಲಿ ಎಲ್ಲ ಸಂಪತ್ತಿಗಿಂತಲೂ ಈ ಮಂತ್ರವೇ ಅತ್ಯಂತ ಬೆಲೆ ಉಳ್ಳದ್ದು.”
ಸನಾತನ ಗೋಸ್ವಾಮಿ ಅವರ ಈ ಬೋಧನೆಯು ಗೋಪಿಯ ಮನಸ್ಸಿನಲ್ಲಿ ನೆಟ್ಟಿತು. ಅವನಲ್ಲಿ ಪೂರ್ಣ ಬದಲಾವಣೆ. ಅವನು ಮಹಾಮಂತ್ರವನ್ನು ಪಠಿಸುತ್ತ ತನ್ನ ಮನೆ ಸೇರಿದ, ಹೆಂಡತಿಗೆ ಎಲ್ಲ ಹೇಳಿದ. ತಾನು ದುರಾಸೆಪಟ್ಟಿದ್ದು ತಪ್ಪೆಂದು ಅವಳಿಗೆ ಅರಿವಾಯಿತು. ಅವಳೂ ಕೂಡ ತನ್ನ ಗಂಡನೊಂದಿಗೆ ಮಹಾಮಂತ್ರ ಜಪಿಸಲಾರಂಭಿಸಿದಳು. ಅನಂತರ ಅವರು ಸುಖ, ಸಂತೋಷ ನೆಮ್ಮದಿಯಿಂದ ಇದ್ದರು.






Leave a Reply