ಮತ್ಸ್ಯ ಅವತಾರ

ಒಮ್ಮೆ ಹಯಗ್ರೀವ ಎಂಬ ಅಸುರನನ್ನು ಸಂಹರಿಸಲು, ಮತ್ತು ಇನ್ನೊಮ್ಮೆ ರಾಜ ಸತ್ಯವ್ರತ ಮತ್ತಿತರರನ್ನು ಪ್ರಳಯದಿಂದ ರಕ್ಷಿಸಲು ದೇವೋತ್ತಮ ಪರಮ ಪುರುಷನು ಮತ್ಸ್ಯದ ಅವತಾರ ತಾಳುತ್ತಾನೆ. ಅಂದರೆ ಎರಡು ಬಾರಿ ಮತ್ಸ್ಯಾವತಾರ.

ದೇವೋತ್ತಮ ಪರಮ ಪುರುಷನು ಸಾಧುಗಳ, ಎಂದರೆ ಭಕ್ತರ ರಕ್ಷಣೆಗಾಗಿ, ಮತ್ತು ದುಷ್ಟರ, ಎಂದರೆ ಭಕ್ತರಲ್ಲದವರ ವಿನಾಶಕ್ಕಾಗಿ ಆವಿರ್ಭವಿಸುತ್ತಾನೆ. ಗೋವುಗಳು, ಬ್ರಾಹ್ಮಣರು, ದೇವತೆಗಳು, ಭಕ್ತರು, ಮತ್ತು ವೈದಿಕ ಸಾಹಿತ್ಯ – ಇವುಗಳ ರಕ್ಷಣೆಗಾಗಿ ಅವನು ವಿವಿಧ ಅವತಾರಗಳ ರೂಪಗಳನ್ನು ಸ್ವೀಕರಿಸುತ್ತಾನೆ. ಕೆಲವು ಬಾರಿ ನರಸಿಂಹನಾಗುತ್ತಾನೆ, ಕೆಲವು ಬಾರಿ ವಾಮನನಾಗುತ್ತಾನೆ, ರಾಮನಾಗುತ್ತಾನೆ, ಮತ್ಸ್ಯನಾಗುತ್ತಾನೆ, ಹೀಗೆ. ಅವನು ಭೌತಿಕ ಪ್ರಕೃತಿ ಗುಣದ ವಾತಾವರಣದಲ್ಲಿ ಅವತರಿಸಿದರೂ ಕೂಡ ಅದರಿಂದ ಅಬಾಧಿತನಾಗಿ ಉಳಿಯುತ್ತಾನೆ. ಇದು ಅವನ ಪರಮ ನಿಯಾಮಕ ಶಕ್ತಿಯ ಪ್ರತೀಕವಾಗಿದೆ. ಮಾಯೆಯು ಅವನನ್ನು ಸ್ಪರ್ಶಿಸಲಾರಳು.

ಹಿಂದಿನ ಪ್ರಳಯದ ಕೊನೆಯ ಭಾಗದಲ್ಲಿ ಬ್ರಹ್ಮನಿಂದ ವೈದಿಕ ಜ್ಞಾನವನ್ನು ಅಪಹರಿಸಿದ ಹಯಗ್ರೀವನೆಂಬ ರಾಕ್ಷಸನನ್ನು ದೇವೋತ್ತಮ ಪರಮ ಪುರುಷನು ಸಂಹರಿಸಿದನು ಮತ್ತು ಬ್ರಹ್ಮನು ನಿದ್ರೆಯಿಂದ ಎಚ್ಚೆತ್ತಾಗ ಅವನಿಗೆ ಎಲ್ಲ ವೈದಿಕ ಸಾಹಿತ್ಯಗಳನ್ನೂ ಒಪ್ಪಿಸಿದನು. ಹೀಗೆ ಮತ್ಸ್ಯಾವತಾರವನ್ನು ತಾಳಿ ವೇದಗಳನ್ನು ರಕ್ಷಿಸಿದನು.

ಚಾಕ್ಷುಷ ಮನ್ವಂತರ ಕಾಲದಲ್ಲಿ ಸತ್ಯವ್ರತ ಎನ್ನುವ ಮಹಾ ಪುಣ್ಯ ಪುರುಷನಾದ ರಾಜನಿದ್ದನು. ಅವನು ದೇವೋತ್ತಮ ಪರಮ ಪುರುಷನ ಶ್ರೇಷ್ಠ ಭಕ್ತನಾಗಿದ್ದನು. ಅವನನ್ನು ರಕ್ಷಿಸಲು ಭಗವಂತನು ಎರಡನೆಯ ಬಾರಿಗೆ ಮತ್ಸ್ಯಾವತಾರವನ್ನು ತಾಳಿದನು. ಅದರ ಹಿನ್ನೆಲೆಯ ಈ ದಿವ್ಯ ಕಥೆಯನ್ನು ನೋಡಿ.

ಭಗವಂತನ ಅನುಗ್ರಹವನ್ನು ಸಂಪಾದಿಸಲು ರಾಜ ಸತ್ಯವ್ರತನು ಒಮ್ಮೆ ಕೇವಲ ಜಲಾಹಾರದ ವ್ರತವನ್ನು ಆಚರಿಸತೊಡಗಿದನು. ಒಂದು ದಿನ ಅವನು ಕೃತಮಾಲಾ ನದಿಯ ದಡದಲ್ಲಿ ಈ ವ್ರತವನ್ನು ಆಚರಿಸುತ್ತಿದ್ದಾಗ, ಜಲಾಂಜಲಿಯನ್ನು ಅರ್ಪಿಸುವ ಸಂದರ್ಭದಲ್ಲಿ ಒಂದು ಸಣ್ಣ ಮೀನನ್ನು ತನ್ನ ಕೈಯಲ್ಲಿರುವ ನೀರಿನಲ್ಲಿ ಕಂಡನು. ಆ ಮೀನು ರಾಜನಿಗೆ ತನ್ನನ್ನು ಸುರಕ್ಷಿತವಾದ ಸ್ಥಳದಲ್ಲಿ ಇಟ್ಟು ರಕ್ಷಿಸುವಂತೆ ಕೋರಿತು. ಆ ಮೀನಿಗೆ ಆಶ್ರಯ ಕೊಡಲು ಅವನು ಅದನ್ನು ಒಂದು ಪಾತ್ರೆಯಲ್ಲಿ ಇರಿಸಿದನು. ದೇವೋತ್ತಮ ಪರಮ ಪುರುಷನಾದ ಆ ಮತ್ಸ್ಯವು ತನ್ನ ಶಕ್ತಿಯನ್ನು ರಾಜನಿಗೆ ತೋರಿಸಲು ತನ್ನ ದೇಹವನ್ನು ಹಿಗ್ಗಿಸಿತು. ಅದಕ್ಕೆ ಆ ಪಾತ್ರೆ ಸಾಲದಾಯಿತು. ಅನಂತರ, ಬಾವಿ, ಸರೋವರ ಕೂಡ ಚಿಕ್ಕದಾಯಿತು. ಸಮುದ್ರದಲ್ಲಿ ಇರಿಸಿದನು. ಆದರೆ ಅದೂ ಕೂಡ ಸಾಲದಾಯಿತು! ರಾಜನಿಗೆ ಆ ಮೀನು ಭಗವಂತನೆನ್ನುವುದು ಅರ್ಥವಾಯಿತು.

ಆಗ ಅವನು ಭಗವಂತನಲ್ಲಿ ಮತ್ಸ್ಯಾವತಾರವನ್ನು ಕುರಿತು ವಿವರವಾಗಿ ತಿಳಿಸುವಂತೆ ಪ್ರಾರ್ಥಿಸಿದನು. ರಾಜನ ಬಗೆಗೆ ಸುಪ್ರೀತನಾದ ಭಗವಂತನು ಅವನಿಗೆ ಇನ್ನು ಒಂದು ವಾರದೊಳಗೆ ಜಲ ಪ್ರಳಯ ಉಂಟಾಗುವುದಾಗಿಯೂ ಆಗ ಆ ಮತ್ಸ್ಯಾವತಾರಿಯು ರಾಜ, ಋಷಿಗಳು, ಬಳ್ಳಿಗಳು, ಬೀಜಗಳು, ಜೀವರಾಶಿಗಳು ಎಲ್ಲರನ್ನೂ ಆ ಮೀನಿನ ಕೊಂಬಿಗೆ ಹೊಂದಿಕೊಂಡ ದೋಣಿಯಲ್ಲಿ ರಕ್ಷಿಸುವುದಾಗಿ ಪ್ರಭುವು ತಿಳಿಸಿದನು.

ಭಗವಂತನು ತಿಳಿಸಿದಂತೆ ಸ್ವಲ್ಪ ಕಾಲದಲ್ಲಿಯೇ ಜಲ ಪ್ರಳಯವು ಸಂಭವಿಸಿತು. ಆಗ ಸತ್ಯವ್ರತ ರಾಜನು ತನ್ನ ಬಳಿಗೆ ದೋಣಿಯೊಂದು ಬರುತ್ತಿರುವುದನ್ನು ಕಂಡನು. ಬ್ರಾಹ್ಮಣರು ಮತ್ತು ಸಾಧು ಸತ್ಪುರುಷರೊಂದಿಗೆ ರಾಜನು ಆ ದೋಣಿಯನ್ನು ಏರಿದನು. ದೇವೋತ್ತಮ ಪರಮ ಪುರುಷನು ಈ ಮೊದಲೇ ತಿಳಿಸಿದಂತೆ, ರಾಜನು ಆ ದೋಣಿಯನ್ನು ವಾಸುಕಿ ಸರ್ಪವನ್ನು ಹಗ್ಗವನ್ನಾಗಿ ಮಾಡಿಕೊಂಡು ಮೀನಿನ ಕೊಂಬಿಗೆ ಕಟ್ಟಿ ಹಾಕಿದನು. ಅನಂತರ ಭಗವಂತನಲ್ಲಿ ಪ್ರಾರ್ಥನೆಯನ್ನು ಸಲ್ಲಿಸತೊಡಗಿದನು. ಪರಮ ಪ್ರಭುವು ಎಲ್ಲರ ಹೃದಯದಲ್ಲಿಯೂ ನೆಲೆಸಿದ್ದಾನೆ, ಹಾಗಾಗಿ ಅವನು ಮಹಾರಾಜ ಸತ್ಯವ್ರತ ಮತ್ತು ಸಾಧು ಸತ್ಪರುಷರಿಗೆ ವೈದಿಕ ಜ್ಞಾನವನ್ನು ತನ್ನ ಹೃದಯಾಂತರಾಳದಿಂದ ಬೋಧಿಸಿದನು. ಹೀಗೆ ಮತ್ಸ್ಯಾವತಾರ ತಾಳುವ ದೇವೋತ್ತಮ ಪರಮ ಪುರುಷನು ಮಹಾರಾಜ ಸತ್ಯವ್ರತ ಮತ್ತು ಇತರ ಜೀವಿಗಳನ್ನು ಪ್ರಳಯದಿಂದ ಕಾಪಾಡಿದನು.

ರಾಜ ಸತ್ಯವ್ರತನು ತನ್ನ ಮುಂದಿನ ಜನ್ಮದಲ್ಲಿ ವೈವಸ್ವತ ಮನುವಾಗಿ ಹುಟ್ಟಿದನು. ಸೂರ್ಯದೇವನು ಭಗವದ್ಗೀತೆಯ ಜ್ಞಾನವನ್ನು ತನ್ನ ಮಗನಾದ ಮನುವಿಗೆ ಬೋಧಿಸಿದನು. ವಿವಸ್ವಾನನ ಮಗನಾದ್ದರಿಂದ ಈ ಮನುವು ವೈವಸ್ವತ ಮನುವೆಂದು ಹೆಸರಾಗಿದ್ದಾನೆ. ಸತ್ಯವ್ರತನು ಶ್ರಾದ್ಧದೇವನೆಂದು ಹೆಸರಾದನು. ದೇವೋತ್ತಮ ಪರಮ ಪುರುಷನು ಅವನನ್ನು ಮನುವಾಗಿ ಪ್ರತಿಷ್ಠಾಪಿಸಿದನು.

ದೇವೋತ್ತಮ ಪರಮ ಪುರುಷನು ಅಸೀಮಿತ ಶಕ್ತಿಯನ್ನು ಹೊಂದಿದ್ದಾನೆ. ಆದರೂ ಅವನು ಮತ್ಸ್ಯದ ರೂಪದ ಲೀಲೆಯಲ್ಲಿ ರಾಜನಿಂದ ರಕ್ಷಣೆಯನ್ನು ಕೇಳುತ್ತಾನೆ. ಇದು ಭಗವಂತನ ಅಪೂರ್ವ ವಿಧಾನ. ರಾಜ ಸತ್ಯವ್ರತನಿಗೆ ಆ ಮತ್ಸ್ಯವು ದೇವೋತ್ತಮನೆಂದು ತಿಳಿಯದು. ಆದರೂ ಕರುಣಾಮಯಿಯಾದ ಅವನು ಮೀನಿಗೆ ರಕ್ಷಣೆ ನೀಡಲು ಮುಂದಾಗುತ್ತಾನೆ. ಇದು ಭಗವಂತನೆನ್ನುವ ಅರಿವು ಇಲ್ಲದಂತೆ ಅವನಿಗೆ ಸೇವೆ ಸಲ್ಲಿಸುವ ಅತ್ಯುತ್ತಮ ಉದಾಹರಣೆ.

ಯಾರು ತನ್ನನ್ನು ಬೃಹದಾಕಾರವಾದ ಮತ್ಸ್ಯನಾಗಿ ಅಭಿವ್ಯಕ್ತಿಸಿಕೊಂಡನೋ, ಯಾರು ನಿದ್ರೆಯಿಂದ ಎಚ್ಚೆತ್ತ ಬ್ರಹ್ಮನಿಗೆ ವೈದಿಕ ಸಾಹಿತ್ಯವನ್ನು ಪುನಃ ಕೊಟ್ಟನೋ ಮತ್ತು ಯಾರು ರಾಜ ಸತ್ಯವ್ರತ ಮತ್ತು ಸಾಧು ಸತ್ಪುರುಷರಿಗೆ ವೈದಿಕ ಸಾಹಿತ್ಯದ ಸಾರವನ್ನು ವಿವರಿಸಿದನೋ ಅಂತಹ ದೇವೋತ್ತಮ ಪರಮ ಪುರುಷನಿಗೆ ಪ್ರಣಾಮಗಳನ್ನು ಸಲ್ಲಿಸೋಣ.

ಈ ಲೇಖನ ಶೇರ್ ಮಾಡಿ