ಆಂಗ್ಲ ಮೂಲ : ಬ್ಯಾಕ್ ಟು ಗಾಡ್‌ಹೆಡ್
ಈ ಭೌತಿಕ ಜಗತ್ತಿನಲ್ಲಿ ಆಧ್ಯಾತ್ಮಿಕ ಅಭಾವದ ಲಕ್ಷಣಗಳು ಎಲ್ಲರಿಗೂ ಒಂದೇ. ಹುಟ್ಟು, ಸಾವು, ರೋಗ, ವೃದ್ಧಾಪ್ಯ. ನಮ್ಮ ದೇಹ ಮನಸ್ಸುಗಳು ನೀಡುವ ಯಾತನೆ, ಇತರ ಜೀವಿಗಳು, ಪ್ರಕೃತಿ ವಿಕೋಪದಿಂದ ಆಗುವ ಯಾತನೆ. ಇದಲ್ಲದೆ ಭ್ರಮೆಗೊಳಗಾಗಿ ತಪ್ಪುಗಳನ್ನು ಮಾಡುತ್ತೇವೆ. ನಮ್ಮ ಇಂದ್ರಿಯಗಳು ಅಪರಿಪೂರ್ಣ ಮತ್ತು ಜ್ಞಾಪಕ ಶಕ್ತಿ ಕಡಮೆ. ವರ್ಣಪಟಲದ ಚಿಕ್ಕ ಭಾಗ ಮಾತ್ರ ನಮಗೆ ಗೋಚರ ಎಂದು ಎಲ್ಲ ವಿಜ್ಞಾನಿಗಳಿಗೂ ಗೊತ್ತು. ಆದ್ದರಿಂದ ಬುದ್ಧಿವಂತ ವ್ಯಕ್ತಿಯು ಮಾನವನ ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ನಾವು ಎಷ್ಟೇ ಪ್ರಯತ್ನಿಸಿದರೂ ಪರಿಪೂರ್ಣರಾಗಲು ಸಾಧ್ಯವಿಲ್ಲವೆಂದು ತಿಳಿಯಬೇಕು. ದೇವರನ್ನು ಮರೆತಿರುವುದರಿಂದಲೇ ಒದಗಿ ಬಂದ ಪರಿಸ್ಥಿತಿ ಇದು.
ಆಧ್ಯಾತ್ಮಿಕ ಅಭಾವ ಎಂದರೆ ದೇವರನ್ನು ನಾವು ಮರೆತಿರುವುದು. ಅತಿ ಪ್ರಾಚೀನ ಸಮಯದಲ್ಲಿ ನಾವು ದೇವರ ಅನುಕರಣೆ ಮಾಡಲು ಬಯಸಿದೆವು. ಕರುಣಾಳು ಪ್ರಭುವು ನಮಗೇನು ಬೇಕೋ ಅದನ್ನು ಕೊಟ್ಟ. ಆದರೆ, ಪರಮನಷ್ಟೇ ಪ್ರಬಲರಾಗುವ ನಮ್ಮ ಅಭಿಲಾಷೆಯು ಮಾಯೆಯಿಂದ ಹೊರಹೊಮ್ಮಿದ್ದರಿಂದ ಅದರ ಫಲವಾದ ಈ ಭೌತಿಕ ಜಗತ್ತು ಮಾಯೆ, ಪರಮ ಪದದ ಛಾಯೆ ಅಷ್ಟೇ. ನಾವು ದೇವರನ್ನು ಮರೆಯಲು ಬಯಸಿದ್ದರಿಂದ ಆ ಮರೆವಿನಲ್ಲಿ ಇರಲು ಅವನು ನಮಗೆ ಈ ಲೋಕವನ್ನು ಕೊಟ್ಟನು. ನಾವು ಪ್ರಭುವಿನ ಸೇವಕರೆಂದು ನೆನಪಿಸಿಕೊಂಡು ಅವನ ಪ್ರೇಮವನ್ನು ಮತ್ತೆ ಗಳಿಸುವ ತನಕ ನಾವು ಇಲ್ಲಿಯೇ ಇರುತ್ತೇವೆ.
ಮರೆವಿನ ಈ ರೋಗದಿಂದ ಚೇತರಿಸಿಕೊಳ್ಳುವುದನ್ನು ಪ್ರಾರಂಭಿಸುವುದು ನಾವು ಪ್ರಕೃತಿಯ ಕಾನೂನುಗಳಿಂದ ಬದ್ಧರಾಗಿದ್ದೇವೆ ಎಂದು ಅರ್ಥಮಾಡಿಕೊಳ್ಳುವ ಮೂಲಕ. ಮಾಯೆಯ ಹತೋಟಿಯಲ್ಲಿ ನಮಗೆ ಸುಖ ದುಃಖಗಳು ತಾವಾಗಿಯೇ ಬರುತ್ತವೆ. ಪ್ರಕೃತಿ ಅಥವಾ ಮಾಯೆ ನಮ್ಮನ್ನು ನಿಯಂತ್ರಿಸುತ್ತದೆ. ಮತ್ತು ಕೃಷ್ಣನು ಮಾಯೆಯನ್ನು ನಿಯಂತ್ರಿಸುತ್ತಾನೆ.
ಕೃಷ್ಣನು ಹೀಗೆ ಹೇಳುತ್ತಾನೆ, ಇಡೀ ವಿಶ್ವ ವ್ಯವಸ್ಥೆಯು ನನ್ನ ಅಧೀನವಾಗಿದೆ. ನನ್ನ ಸಂಕಲ್ಪದಿಂದ ಅದು ಮತ್ತೆ ಮತ್ತೆ ರೂಪತಾಳುತ್ತದೆ ಮತ್ತು ನನ್ನ ಸಂಕಲ್ಪದಿಂದ ಕೊನೆಗೆ ಅದು ನಾಶವಾಗುತ್ತದೆ. ಧನಂಜಯನೆ, ಈ ಎಲ್ಲ ಕಾರ್ಯವು ನನ್ನನ್ನು ಬಂಧಿಸುವುದಿಲ್ಲ. ನಾನು ತಟಸ್ಥನಂತೆ ಕುಳಿತಿದ್ದು ಈ ಎಲ್ಲ ಐಹಿಕ ಚಟುವಟಿಕೆಗಳ ಬಗ್ಗೆ ನಿರ್ಲಿಪ್ತನಾಗಿರುತ್ತೇನೆ. ಕುಂತಿ ಪುತ್ರನೆ, ನನ್ನ ಶಕ್ತಿಗಳಲ್ಲಿ ಒಂದಾದ ಈ ಐಹಿಕ ಪ್ರಕೃತಿಯು ನನ್ನ ನಿರ್ದೇಶನದಲ್ಲಿ ಕೆಲಸ ಮಾಡುತ್ತಾ, ಎಲ್ಲ ಚರಾಚರ ಜೀವಿಗಳನ್ನು ಸೃಷ್ಟಿಸುತ್ತಿದೆ. ಈ ಅಭಿವ್ಯಕ್ತಿಯು ಅದರ ನಿಯಮಕ್ಕೆ ಅನುಗುಣವಾಗಿ ಮತ್ತೆ ಮತ್ತೆ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ. (ಭಗವದ್ಗೀತೆ 9.8-10).
ಚೇತನಾತ್ಮನು ತನ್ನ ಮೂಲ ಸ್ವರೂಪದಲ್ಲಿ ಅಲೌಕಿಕನು. ಆದರೆ ಬಹಿರಂಗ ಶಕ್ತಿಯಿಂದ ಬದ್ಧನಾಗಿ ತಾನು ಕೂಡ ಭೌತಿಕ ಉತ್ಪತ್ತಿ ಎಂದುಕೊಳ್ಳುತ್ತಾನೆ. ಇದರಿಂದ ಆಧ್ಯಾತ್ಮಿಕ ಚೇತನನು ಪ್ರಕೃತಿ ಗುಣಗಳ ಪ್ರಭಾವದಲ್ಲಿ ಎಲ್ಲ ತರಹದ ದುಃಖ ಅನುಭವಿಸುತ್ತಾನೆ. ಇದರ ಅರ್ಥ ಅವನ ಪ್ರಸ್ತುತ ಯೋಚನೆ, ಭಾವನೆ ಮತ್ತು ಸಂಕಲ್ಪಗಳು ಅವನಿಗೆ ಸ್ವಾಭಾವಿಕವಲ್ಲ ಮತ್ತು ಅವನಿಗೆ ನಿಜವಾಗಿ ಸ್ವಾಭಾವಿಕವಾದ ಬೇರೆ ರೀತಿಯ ಯೋಚಿಸುವ, ಭಾವಿಸುವ ಮತ್ತು ನಿರ್ಧರಿಸುವ ಶಕ್ತಿ ಇರುತ್ತದೆ.
ಆದ್ದರಿಂದ ನಿಜವಾಗಿಯೂ ನಮಗೆಲ್ಲರಿಗೂ ಇರುವುದು ಒಂದೇ ಸಮಸ್ಯೆ, ಈ ದೇಹ. ನಮ್ಮ ಸಮಸ್ಯೆ ಎಂದರೆ ನಾವೇ ಈ ದೇಹ ಅಥವಾ ಭೌತಿಕ ವಸ್ತು ಎಂದು ನಾವು ಭಾವಿಸುತ್ತೇವೆ. ಆದರೆ ನಾವು ಈ ದೇಹವಲ್ಲ. ನಾವು ಆಧ್ಯಾತ್ಮಿಕ ಆತ್ಮ ಮತ್ತು ನಮ್ಮ ನಿಜವಾದ ಬಯಕೆ ಎಂದರೆ ಪರಮ ಪ್ರಭುವಿನ ಆಧ್ಯಾತ್ಮಿಕ ಪ್ರೇಮ.
ಕೇವಲ ಊಹೆಯಿಂದ ನಮ್ಮನ್ನು ನಾವು ಮುಕ್ತಿಗೊಳಿಸಲಾಗುವುದಿಲ್ಲ. ಭೌತಿಕ ವಸ್ತುವಿನ ಪ್ರೀತಿ ಅಥವಾ ದೇವರ ಪ್ರೀತಿ ಆಯ್ಕೆ ನಮ್ಮದು. ಕೃಷ್ಣನು ನಾವು ಅವನ ಪ್ರೇಮ ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕಂಡ ಕೂಡಲೇ ನಮಗೆ ಸಹಾಯ ಮಾಡುತ್ತಾನೆ. ನಾವು ಆಧಾತ್ಮಿಕ ಅಭಾವದ ಲಕ್ಷಣಗಳನ್ನು ಬಿಟ್ಟುಬಿಟ್ಟು ದೈವ ಸಾಕ್ಷಾತ್ಕಾರದ ಲಕ್ಷಣಗಳನ್ನು ಗಳಿಸಿಕೊಳ್ಳಬೇಕು.
ಈ ಲಕ್ಷಣಗಳನ್ನು ನಾವು ಪರಮ ಪ್ರಭುವಿನ ಬಗ್ಗೆ – ಅವನ ನಾಮ, ರೂಪ, ಖ್ಯಾತಿ, ಲೀಲೆಗಳನ್ನು ಕುರಿತು ಧ್ಯಾನಿಸುತ್ತಾ ಬೆಳೆಸಿಕೊಳ್ಳಬೇಕು. ಈ ವಿಧಾನವನ್ನು ಭಕ್ತಿ ಎಂದು ಕರೆಯುತ್ತಾರೆ. ಅಂತರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘವು ಈ ವಿಧಾನವನ್ನು ಕಲಿಸಿಕೊಡುತ್ತದೆ. ಶ್ರವಣ, ಕೀರ್ತನ, ಸ್ಮರಣ, ಸೇವೆ – ಹೀಗೆ ಮಾಡುತ್ತ ನಮ್ಮ ಕಲುಷಿತ ಪ್ರಜ್ಞೆಯು ಪರಿಶುದ್ಧವಾಗುತ್ತದೆ. ನಾವು ನಮ್ಮ ಇತರ ಕೆಲಸಗಳನ್ನು ಬಿಟ್ಟುಬಿಡಬೇಕೆಂದಲ್ಲ. ಬದಲಿಗೆ ಸ್ವಲ್ಪ ಶ್ರದ್ಧೆ ಇಟ್ಟುಕೊಂಡು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಮಂತ್ರ ಜಪಿಸಬೇಕು.